Thursday, February 2, 2023

ತೋವಿನಕೆರೆಯ ಮಾಧ್ಯಮ ಮಿತ್ರ


  

ಹೆಚ್.ಜೆ.ಪದ್ಮರಾಜು - ತುಮಕೂರು ಸನಿಹದ ತೋವಿನಕೆರೆಯವರು. ನ್ಯೂಸ್ ಏಜೆಂಟ್, ಪತ್ರಕರ್ತ, ಕೃಷಿಕ. ಎಲ್ಲಕ್ಕೂ ಹೆಚ್ಚಾಗಿ 'ಮಾಧ್ಯಮ ಮಿತ್ರ'. ತೋವಿನಕೆರೆ ಸುತ್ತಮುತ್ತ ನಡೆಯುವ ಬಹುತೇಕ ಕಾರ್ಯಕ್ರಮಗಳ ಹಿಂದೆ ಪದ್ಮರಾಜು - ಪದ್ಮಣ್ಣ - ಇದ್ದೇ ಇರುತ್ತಾರೆ.

ಮುಖ್ಯ ಅತಿಥಿಗಳನ್ನು ಗೊತ್ತು ಮಾಡುವಲ್ಲಿಂದ ಶಾಮಿಯಾನ ಹಾಕುವ ತನಕದ ನೇಪಥ್ಯ ಕೆಲಸಗಳಿಗೆ ಇವರೇ ಸೂತ್ರಧಾರಿ. ಮಾಧ್ಯಮದ ಮಂದಿಯನ್ನು ಆಹ್ವಾನಿಸಿ, ಅದರ ವರದಿ ಪತ್ರಿಕೆಯಲ್ಲಿ ಬೆಳಕು ಕಂಡಾಗಲೇ ವಿಶ್ರಾಂತಿ. ಹಾಗಾಗಿ ಊರಿನಲ್ಲಿ ಪದ್ಮಣ್ಣ ಇಲ್ಲದೆ ಕಾರ್ಯಕ್ರಮಗಳಿಲ್ಲ!

ಮಾಧ್ಯಮಗಳಲ್ಲಿ ಬರುವ ಕುತೂಹಲದ ಮಾಹಿತಿಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ.  ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗಾಗಿ ಪದ್ಮಣ್ಣನ ಫೋನ್ ಬಂದರೆ, ಏನಾದರೊಂದು ಹೊಸ ಸುದ್ದಿ ಇದ್ದೇ ಇರುತ್ತದೆ. ಎಲ್ಲಾ ವಾಹಿನಿಗಳ ಪ್ರತಿನಿಧಿಗಳೊಂದಿಗೆ ನಿಕಟ ಸಂಪರ್ಕ.

ತೋವಿನಕೆರೆ ಸುತ್ತುಮುತ್ತಲಿನ ಪ್ರದೇಶದ ಸುಮಾರು ಎಪ್ಪತ್ತಕ್ಕೂ ಮಿಕ್ಕಿ ಕೃಷಿ-ಗ್ರಾಮೀಣ ಯಶೋಗಾಥೆಗಳು ಬೇರೆ ಬೇರೆ ವಾಹಿನಿಗಳಲ್ಲಿ ಪ್ರಸಾರವಾಗಿರುವುದರ ಹಿಂದೆ ಪದ್ಮಣ್ಣನ ಕಾಣದ ಕೈಯಿದೆ. ಪ್ರಸಾರವಾಗುವ ದಿನಾಂಕಗಳನ್ನು ತಿಳಿದುಕೊಂಡು ಆತ್ಮೀಯರಿಗೆ ರವಾನಿಸುತ್ತಾರೆ. ಬಿತ್ತರದ ಬಳಿಕ, 'ಕಾರ್ಯಕ್ರಮ ನೋಡಿದ್ರಾ, ಹೇಗಿತ್ತು ಸಾರ್, ಹೇಗಾಗ್ಬೇಕಿತ್ತು' ಎಂಬ ಫೀಡ್ಬ್ಯಾಕ್ ಕೇಳುತ್ತಾರೆ. 

ಪತ್ರಿಕಾವೃತ್ತಿ, ಕೃಷಿಗೆ ಮೊದಲ ಪ್ರಾಶಸ್ತ್ಯ. ಸಮಯ ಹೊಂದಿಸಿಕೊಂಡು ಇತರ ಸಾಮಾಜಿಕ ಕೆಲಸ. ಇದಕ್ಕೆಲ್ಲಾ ಕೈಯಿಂದಲೇ ವೆಚ್ಚ ಮಾಡುತ್ತಾರೆ. 'ಅವನಿಗೇನೋ ಆದಾಯ ಇದೆ. ಇಲ್ದಿದ್ರೆ ಯಾಕೆ ಆ ಕೆಲಸ  ಮಾಡ್ತಾನೆ' ಎನ್ನುವ ಟೀಕೆ. 'ಜನ ಎಲ್ಲಿಯ ವರೆಗೆ ದುಡ್ಡಿಗೆ ಮಹತ್ವ ಕೊಡ್ತಾರೋ; ಅಲ್ಲಿಯವರೆಗೆ ಶ್ರಮ, ಸರ್ವೀಸಿಗೆ ಬೆಲೆಯಿಲ್ಲ ಸಾರ್' ಎಂದು ನೊಂದುಕೊಳ್ಳುತ್ತಾರೆ.

ತೋವಿನಕೆರೆಯ ಮಹಿಳಾ ಸ್ವ-ಸಹಾಯ ಸಂಘಗಳ ರಚನೆಯಲ್ಲಿ ಪದ್ಮಣ್ಣನ ಪಾತ್ರ ಗುರುತರ. ಸ್ತ್ರೀ-ಶಕ್ತಿ ಸಂಘಗಳ ಸಮಾವೇಶ, ಮೌಲ್ಯವರ್ಧಿತ ಉತ್ಪನ್ನ ತರಬೇತಿ, ಸಾವಯವ ತೋಟ ಭೇಟಿ,  ಕೃಷಿಕರಿಗೆ ಸಂಮಾನ, ವಿಶ್ವಪರಿಸರ ದಿನಾಚರಣೆ- ಎಲ್ಲಾ ಕಾರ್ಯಕ್ರಮಗಳ ಸಂಪನ್ನತೆಯ ಹಿಂದಿನ ಶಕ್ತಿ. ತೆಂಗು, ಅಡಿಕೆ, ವೆನಿಲ್ಲಾ ಮೊದಲಾದ ಕೃಷಿಗಳ ಬಗ್ಗೆ ಇವರ ತೋಟವೇ ಡೆಮೋ ಸೆಂಟರ್.

ಪದ್ಮಣ್ಣನ ಜೋಳಿಗೆಯಲ್ಲಿ ವಿವಿಧ ಕೃಷಿ ಪತ್ರಿಕೆ ಗಳಿರುತ್ತವೆ. ಚಂದಾ ದಾಖಲಿಸುವುದು ಆಸಕ್ತಿಯ ವಿಚಾರ. ಕಳೆದ ಎರಡೂವರೆ ದಶಕಗಳಿಗೂ ಮಿಕ್ಕಿ ಅಡಿಕೆ ಪತ್ರಿಕೆಯ ಹೆಮ್ಮೆಯ ಏಜೆಂಟರು.  

 29-1-2023ರಂದು ಜರುಗಿದ ಅಡಿಕೆ ಪತ್ರಿಕೆಯ 35 ಸಂಭ್ರಮದಲ್ಲಿ ನಮ್ಮ 'ಪದ್ಮಣ್ಣ'ನಿಗೆ ಗೌರವ.  

Tuesday, January 17, 2023

ಹಿರಿಯ ಸಹಕಾರಿ ಎಲ್.ಟಿ.ತಿಮ್ಮಪ್ಪ ಹೆಗಡೆ ವಿಧಿವಶ

2023, ಜನವರಿ 1. ಸ್ನೇಹಿತ ನಾಗೇಂದ್ರ ಸಾಗರ್ ಜತೆ ತಿಮ್ಮಪ್ಪ ಹೆಗಡೆಯವರ ಮನೆಗೆ ಹೋಗಿದ್ದೆ. ಮೊದಲೇ ತಿಳಿಸಿದ್ದರಿಂದ ಅವರ ಚಿರಂಜೀವಿ ತಿಮ್ಮಪ್ಪ ಹೆಗಡೆಯವರು (ತಂದೆ, ಮಗ ಇಬ್ಬರ ಹೆಸರೂ ಒಂದೇ) ತಂದೆಯವರನ್ನು ವೀಲ್ಚಯರಿನಲ್ಲಿ ಕೂರಿಸಿದ್ದರು.

ಹೆಗಡೆಯವರು ತುಂಬಾ ಕೃಶರಾಗಿದ್ದರು. ವಯೋಸಹಜವಾದ ಅಸ್ವಸ್ಥತೆ. ಜತೆಗೆ ಕೈಕೊಡುವ ಮರೆವು. ಪರಿಚಯ ಮಾಡಿಕೊಂಡೆ. ಅಡಿಕೆ ಪತ್ರಿಕೆ ತುಂಬಾ ವರ್ಷವಾಯಿತಲ್ಲಾ ಎಂದಷ್ಟೇ ಮಾತು. ಕ್ಯಾಂಪ್ಕೋ ಸಂಸ್ಥೆಯನ್ನು ಉಲ್ಲೇಖಿಸಿದೆ. ಐವತ್ತು ವರುಷ ಆಯಿತಲ್ಲಾ.. ಅದೆಲ್ಲಾ ಕಳೆದು ಹೋದ ವಿಚಾರ ಎಂದಷ್ಟೇ ಉಸುರಿದ್ದರು. ಮತ್ತೆ ಮೌನ. ಅವರ ಮಗನೂ ಯತ್ನಿಸಿದ್ದರು, “ಇಂದ್ಯಾಕೋ ಅಪ್ಪ ಮಾತನಾಡ್ತಾ ಇಲ್ಲ. ನೆನಪಿನ ಅಕ್ಷರಗಳು ಮಾಸಿವೆ ಸರ್.” ಎಂದರು. ಸುಮಾರು ಅರ್ಧ ಗಂಟೆ ಪರಸ್ಪರ ಮುಖಮುಖ ನೋಡಿಕೊಂಡೆವು.

ಅವರ ಕಣ್ಣಾಲಿಗಳ ಹೊಳಪಿನೊಳಗಿಂದ ನನ್ನ ನೆನಪಿನ ಬಾಗಿಲು ತೆರೆಯಿತು : 1982ನೇ ಇಸವಿ. ಆಗಷ್ಟೇ ಎಸ್.ಎಸ್.ಎಲ್.ಸಿ.ಫೈಲ್ ಆಗಿ ‘ಫೈಲ್ ಅಂಕ ಪಟ್ಟಿ’ ಕೈಯಲ್ಲಿತ್ತು. ಮುಂದಿನ ಹಾದಿ, ಕಲಿಕೆಯತ್ತ ಬೆರಳು ತೋರುವ ನಿರ್ದೇಶಕರಿದ್ದಿರಲಿಲ್ಲ. ‘ಹೊಟ್ಟೆಪಾಡಿ’ಗಾಗಿ ಮಂಗಳೂರು ನಗರ ಸೇರಿದ್ದೆ. ಆಗ ವಾರಣಾಶಿ ಸುಬ್ರಾಯ ಭಟ್ಟರು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರು. ವಕೀಲರಾದ .ಪಿ.ಗೌರೀಶಂಕರ್ ಕಾರ್ಯದರ್ಶಿ. ನಾನು ಕ್ಲರ್ಕ್ ಆಗಿ ಸೇರಿಕೊಂಡೆ. ನಾನಲ್ಲಿ ಸೇರಿಕೊಳ್ಳುವಲ್ಲಿ ಎಡಂಬಳೆ ಗೋಪಾಲ ಭಟ್ಟರು ಹಾಗೂ ನನ್ನ ಚಿಕ್ಕಪ್ಪ ಪರಮೇಶ್ವರ ಕಾರಂತರ ಸಹಕಾರ ಮರೆಯುವಂತಿಲ್ಲ.

ಆಗ ಕ್ಯಾಂಪ್ಕೋ, ಅಡಿಕೆ ಬೆಳೆಗಾರರ ಸಂಘ, ಅಡಿಕೆ ಕೃಷಿ.. ಇದ್ಯಾವುದರ ಪರಿಚಯ ಇಲ್ಲದ ವಯಸ್ಸು. ಬೆಳೆಗಾರರ ಸಂಘದ ಸಭೆ ಆಗುವಾಗಲೆಲ್ಲಾ ಪ್ರೊಸೀಡಿಂಗ್ಸ್ ಪುಸ್ತಕ, ಪೈಲ್ ಅತ್ತಿತ್ತ ಒಯ್ಯುತ್ತಿದ್ದಾಗ ಮಂಚಿ ನಾರಾಯಣ ಆಚಾರ್, ಸಾಯ ಕೃಷ್ಣ ಭಟ್,  ಬಿ.ಆರ್. ಕಾಮತ್, ಎಲ್.ಟಿ.ತಿಮ್ಮಪ್ಪ ಹೆಗಡೆ.. ಮೊದಲಾದವರ ವ್ಯಕ್ತಿತ್ವ ಆಗಲೇ ಸೆಳೆದಿತ್ತು. ಅವರ ವ್ಯಕ್ತಿತ್ಚದ ಪರಿಚಯ ಇದ್ದಿರಲಿಲ್ಲ. ಮುಂದೆ ಕ್ಯಾಂಪ್ಕೋ ಸಂಸ್ಥೆಯು ಪುತ್ತೂರಿನಲ್ಲಿ ಚಾಕೋಲೇಟ್ ಫ್ಯಾಕ್ಟರಿಯ ಶಂಕುಸ್ಥಾಪನೆ, ಉದ್ಘಾಟನೆ.. ಸಂದರ್ಭದಲ್ಲೆಲ್ಲಾ ಹೆಗಡೆಯವರನ್ನು ಹತ್ತಿರದಿಂದ ನೋಡಿದ್ದೆ.

ಅವರ ನಿಲುವು, ಮಾತಿನ ವರಸೆ, ಅದಕ್ಕೆ ಸುಬ್ರಾಯ ಭಟ್ಟರ ಸ್ಪಂದನ.. ಇವೆಲ್ಲಾ ಆಗಿ ಹೋದ ವಿದ್ಯಮಾನಗಳು. “ಏನ್ರಿ.. ಪ್ರೈವೇಟ್ ಆಗಿ ಪಿ.ಯು.ಸಿ., ಡಿಗ್ರಿ ಮಾಡ್ರಿ. ಇಂಗ್ಲಿಷ್ ಕಲೀರಿ. ಇಲ್ಲಾಂದ್ರೆ ನನ್ನಂತೆ ಆಗ್ತೀರಿಎಂದು ವಿನೋದಕ್ಕೆ ಆಡಿದ್ರು. ಹೆಗಡೆಯವರು ಕಾಲಕ್ಕೆ ತನಗೆ ಭಾಷಾ ಸಮಸ್ಯೆಯಿದ್ದುದರಿಂದ ಕ್ಯಾಂಪ್ಕೋ ಅಧ್ಯಕ್ಷ ಸ್ಥಾನಕ್ಕೆ ಒಪ್ಪಲಿಲ್ಲ. ಎನ್ನುವ ಮಾತನ್ನು ಅವರ ಒಡನಾಡಿ ಹರನಾಥ ರಾವ್ ಮಾತಿನ ಮಧ್ಯೆ ಹೇಳಿದ ಮಾತು ನೆನಪಾಯಿತು. ತಿಮ್ಮಪ್ಪ ಹೆಗಡೆಯವರನ್ನು ಕಾಣುವ ಮುಂಚಿತವಾಗಿ ಹರನಾಥ ರಾವ್ ಅವರಲ್ಲಿಗೆ ಭೇಟಿ ನೀಡಿದ್ದೆ.

ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಹುಟ್ಟಿಗೆ ಕಾರಣವಾದ ಮತ್ತು ಕಾರಣರಾದ ವಿಚಾರಗಳೆಲ್ಲಾ ಹರನಾಥ ರಾಯರಿಂದ ತಿಳಿಯಿತು. ವಿಚಾರಗಳು ಎಲ್.ಟಿ.ತಿಮ್ಮಪ್ಪ ಹೆಗಡೆಯವರ ನೆನಪಿನ ಪುಟಗಳು 'ನಾನು' (ನಿರೂಪಣೆ : ಮಾ.ವೆಂ..ಪ್ರಸಾದ್) ಕೃತಿಯಲ್ಲೂ ಉಲ್ಲೇಖಿತವಾಗಿದ್ದುವು. ಕ್ಯಾಂಪ್ಕೋ ಸ್ಥಾಪನೆಯ ಕಾಲಘಟ್ಟದಲ್ಲಿ ವಾರಣಾಶಿಯವರೊಂದಿಗೆ ಎಲ್.ಟಿ.ತಿಮ್ಮಪ್ಪ ಹೆಗಡೆಯವರದೂ ಗುರುತರ ಕಾಯಕ. ನಾನ್ಯಾಕೆ ಕ್ಯಾಂಪ್ಕೋ ಅಧ್ಯಕ್ಷನಾಗಲಿಲ್ಲ ಎನ್ನುವುದನ್ನು ಅವರ 'ನಾನು' ಪುಸ್ತಕ ಸ್ಪಷ್ಟವಾಗಿ ತಿಳಿಸಿದೆ.

“..ಸಂಸ್ಥೆಯಲ್ಲಿ ಆರು ವರುಷಗಳಿಗಿಂತ ಹೆಚ್ಚು ಕಾಲ ಅಧ್ಯಕ್ಷನಾಗುವಂತಿಲ್ಲ. ಸುಬ್ರಾಯ ಭಟ್ಟರಿಗೆ ನಾನೇ (ಎಲ್.ಟಿ.) ಅಧ್ಯಕ್ಷನಾಗಬೇಕೆಂಬ ಹೆಬ್ಬಯಕೆಯಿತ್ತು. ಮಂಗಳೂರಿಗೆ ಬಂದಾಗ ನನಗೇನೂ ಸಮಸ್ಯೆಯೂ ಆಗಬಾರದು ಎಂದು ಗೆಸ್ಟ್ ಹೌಸ್ ವ್ಯವಸ್ಥೆ ಮಾಡುತ್ತಿದ್ದರು. ಭಾಷಾ ಸಮಸ್ಯೆಯಿಂದ ನಾನು ಹಿಂಜರಿದೆ. ದಿನಗಳಲ್ಲಿ ಬಹುರಾಜ್ಯಗಳಲ್ಲಿ ವಹಿವಾಟು ನಡೆಸುತ್ತಿದ್ದ ಕ್ಯಾಂಪ್ಕೋದ ವ್ಯವಹಾರಕ್ಕೆ ಇಂಗ್ಲಿಷ್ ಅತಿ ಮುಖ್ಯವಾಗಿತ್ತು. ಅದರ ವಾರ್ಷಿಕ ವರದಿ ಪ್ರಕಟವಾಗುತ್ತಿದ್ದುದೇ ಆಂಗ್ಲ ಭಾಷೆಯಲ್ಲಿ. ದಿನಗಳಲ್ಲಿ ವಿಧಾನ ಮಂಡಲದ ಎಲ್ಲಾ ಲಿಖಿತ ಸಾಮಗ್ರಿಗಳು ಇಂಗ್ಲಿಷಿನಲ್ಲಿರುತ್ತಿತ್ತು. ನಾನು ಅವೆಲ್ಲವನ್ನೂ ಅಧ್ಯಯನ ಮಾಡದೆ ವಿಧಾನಸಭೆಯ (ಎಂ.ಎಲ್.. ಆಗಿದ್ದಾಗ) ಅಧಿವೇಶನಕ್ಕೆ ಇಳಿಯುತ್ತಿರಲಿಲ್ಲ. ಕ್ಯಾಂಪ್ಕೋ ಅಧ್ಯಕ್ಷತೆ ವಹಿಸಿಕೊಂಡರೂ ಇದೇ ಸಮಸ್ಯೆ ಎದುರಾಗುತ್ತಿತ್ತು. ಇವೆಲ್ಲಕ್ಕಿಂತ ಮುಖ್ಯವಾಗಿ ಎಲ್ಲಾ ಚಟುವಟಿಕೆಗಳು ಬೇಡುತ್ತಿದ್ದ ಸಮಯ, ತಾಳ್ಮೆ, ಅಧ್ಯಯನ ಅವಶ್ಯಕತೆ ನನಗೆ ದುಬಾರಿಯಾಗುವಂತಿತ್ತು. ಪರಿಣಾಮ, ನಾನು ಕ್ಯಾಂಪ್ಕೋ ಅಧ್ಯಕ್ಷತೆಯನ್ನು ಸ್ಪಷ್ಟವಾಗಿ ನಿರಾಕರಿಸಿದೆ. ನನ್ನ ನಿರಾಕರಣೆಯ ನಂತರ ರಾಮ ಭಟ್ಟರು ಕ್ಯಾಂಪ್ಕೋದ ಅಧ್ಯಕ್ಷರಾದರು...”

ಇವೆಲ್ಲಾ ಒಂದು ಸಹಕಾರಿ ಸಂಭ್ರಮದ ದಿನಮಾನಗಳು. ಬಹುಶಃ ಮೊನ್ನೆ ಜನವರಿ 1ರಂದು ಭೇಟಿಯಾದಾಗ, ಅವರನ್ನು ನೆನಪುಗಳು ಸತಾಯಿಸದೇ ಇರುತ್ತಿದ್ದರೆ, ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದರೋ ಏನೋ. ನಲವತ್ತು ವರುಷದ ಹಿಂದೆ ಮನದೊಳಗೆ ಅಚ್ಚೊತ್ತಿದ್ದ ಹೆಗಡೆಯವರ ಚಿತ್ರಕ್ಕೂ, ಮೊನ್ನೆ ನೋಡಿದ ಚಿತ್ರಕ್ಕೂ ಅಜಗಜಾಂತರ ವ್ಯತ್ಯಾಸ. 'ಇವರೇನೇ ಅವರು' ಎನ್ನುತ್ತಿತ್ತು ಮನಸ್ಸು. ಜತೆಗಿದ್ದ ನಾಗೇಂದ್ರರು ಪಿಸುಗುಟ್ಟಿದರು, 'ಅವರಿಗೆ ತ್ರಾಸ ಮಾಡುವುದು ಬೇಡ. ಅವರ ವಿಶ್ರಾಂತಿ ಪಡೆಯಲಿ. ನಾವು ಹೋಗೋಣ ಆಗದೇ' ಎಂದಾಗ  'ನಾನು' ಪುಸ್ತಕವನ್ನು ಕೈಗಿತ್ತು ಬೀಳ್ಕೊಂಡರು ತಿಮ್ಮಪ್ಪ ಹೆಗಡೆಯವರು.

ಅವರನ್ನು ಭೇಟಿಯಾದ ಹದಿನೇಳನೇ ದಿನಕ್ಕೆ ಸರಿಯಾಗಿ ಎಲ್.ಟಿ.ಯವರು ವಿಧಿವಶರಾದರು. ನನಗೆ ಅವರ ಬದುಕಿನ ಪಥಗಳ ನೇರ ಪರಿಚಯ ಇಲ್ಲ. ಆದರೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದಡಿಯಲ್ಲಿ ಇವರನ್ನೆಲ್ಲಾ ಒಂದಷ್ಟು ಕಾಲ ನೋಡುವ ಭಾಗ್ಯ ಸಿಕ್ಕಿತ್ತು. ಕ್ಯಾಂಪ್ಕೋದ 50 ಹಜ್ಜೆಯಲ್ಲಿ 94 ಎಲ್.ಟಿ.ಯವರನ್ನು ನೋಡುವ ಅವಕಾಶವೂ ಪ್ರಾಪ್ತವಾಯಿತು. ದೂರವಾದ ಎಲ್.ಟಿ.ಯವರಿಗೆ ಅಕ್ಷರ ನಮನಗಳು.

ಅಂದು ಅಡಿಕೆ ಬೆಳೆಗಾರರ ಸಂಘ ಸೇರುವಾಗ ನನ್ನ ವಯಸ್ಸು 18. ಈಗ 58. ನಲವತ್ತು ವರುಷದ ಯಾನ. 1991ರಿಂದ ಅನ್ನ ನೀಡಿದ್ದು ಅಡಿಕೆ ಪತ್ರಿಕೆ. ಬದುಕು ಇಳಿಲೆಕ್ಕಕ್ಕೆ ಜಾರುವ ಹೊತ್ತಲ್ಲೂ ಸಂಘದ ನಂಟು. ಹಿರಿಯರು ಕಟ್ಟಿದ ಸಂಸ್ಥೆಯೆನ್ನುವ ಗೌರವಕ್ಕಾಗಿ... ಬದುಕಿಗೆ ಇಷ್ಟು ನಂಟಿದ್ದರೆ ಸಾಕಲ್ವಾ... ಆದರೆ ಸಂಸ್ಥೆಗಾಗಿ ನಾನೇನೂ ಮಾಡಿಲ್ಲ. ಅದು 'ಸಹಿಸುವ ಶಕ್ತಿ' ನೀಡಿದ್ದರಿಂದ ‘ಸಹನೆದೌರ್ಬಲ್ಯವಾಯಿತು! ಮುಂದೆ....?

(ಎಡಬದಿಯ ಚಿತ್ರ ಕೃಪೆ : ಜಾಲತಾಣ)