Wednesday, June 30, 2021

ಸಂಕಟ ಕಾಲದಲ್ಲೂ ಮಾಸದ ಮಂದಹಾಸ

 ಅಡಿಕೆ ಮರ ಏರಲು  ಅಲ್ಪಸ್ವಲ್ಪ ಅಭ್ಯಾಸ ಇತ್ತಷ್ಟೇ. ವಿಟ್ಲ (ದ.ಕ.) ಸಿ.ಪಿ.ಸಿ.ಆರ್.ಐ. ಆವರಣದಲ್ಲಿ ಜರುಗಿದ ಶಿಬಿರದಲ್ಲಿ ಮರವೇರುವ ಕೌಶಲ್ಯಗಳನ್ನು ಕಲಿತೆ. ಒಂದೂವರೆ ವರುಷವಾಯಿತು, ಈಗ ಸ್ವತಂತ್ರವಾಗಿ ಅಡಿಕೆ ಮರಕ್ಕೆ ಬೋರ್ಡೋ ಸಿಂಪಡಣೆ, ಅಡಿಕೆ ಕೊಯಿಲು ಮಾಡುತ್ತಿದ್ದೇನೆ. ತೃಪ್ತಿಕರ ಆದಾಯವು ಕೈ ಸೇರುತ್ತಿದೆ.

ಕಾಸರಗೋಡು ಜಿಲ್ಲೆಯ ಬದಿಯಡ್ಕದ ಸುರೇಶರ ಮನತುಂಬಿದ ಮಾತುಗಳು. ಇವರು ಕ್ಯಾಂಪ್ಕೋ ಆಯೋಜಿಸಿದ್ದ ಅಡಿಕೆ ಕೌಶಲ್ಯ ಪಡೆಯ ಮೊದಲ ಶಿಬಿರದ ಶಿಬಿರಾರ್ಥಿ.  ವಿಟ್ಲದ ಸಿ.ಪಿ.ಸಿಆರ್.ಐ. ಆವರಣದಲ್ಲಿ ಕಳೆದ ವರ್ಷ ಶಿಬಿರ ಜರುಗಿತ್ತು. ಶಿಬಿರಾರ್ಥಿಗಳೆಲ್ಲಾ ಬಹುತೇಕ ಇಪ್ಪತ್ತೈದರ ಒಳಗಿನ ಯುವಕರು. ಕಲಿಯುವ ಉತ್ಸಾಹದಿಂದ ಬಂದವರು ಮರಳುವಾಗ ಅಡಿಕೆ ಮರ ಏರುವ ವಿವಿಧ ಕೌಶಲಗಳನ್ನು ಕಲಿತು  ತೆರಳಿದ್ದರು.

“ಇವರಲ್ಲಿ ಶೇ.90ರಷ್ಟು ಮಂದಿ ರಂಗಕ್ಕಿಳಿದಿದ್ದಾರೆ. ತಮ್ಮ ಬದುಕಿನ ಭದ್ರತೆಯನ್ನು ತಾವೇ ಕಂಡುಕೊಳ್ಳುವ ಯತ್ನದಲ್ಲಿದ್ದಾರೆ. ಕೆಲವರು ಯಶಸ್ವಿಯಾಗಿದ್ದಾರೆ. ಸಮಾಜದಲ್ಲಿ ಗೌರವ ಸಿಗುತ್ತಾ ಇದೆ. ವಿಷ ಸಿಂಪಡಣೆಗಳ ದುಷ್ಪರಿಣಾಮಗಳನ್ನು ಅರಿತಿದ್ದಾರೆ. ನಂತರ ಜರುಗಿದ ಶಿಬಿರಗಳ ಅಭ್ಯರ್ಥಿಗಳಲ್ಲಿ ಕೆಲವರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಎನ್ನುವ ಖುಷಿಯನ್ನು ಹಂಚಿಕೊಳ್ಳುತ್ತಾರೆ” ಶಂ.ನಾ ಖಂಡಿಗೆ. ಇವರು ಕ್ಯಾಂಪ್ಕೋ ಉಪಾಧ್ಯಕ್ಷರು.

ಕಾಲಿಗೆ ತಳೆ ಕಟ್ಟಿ ಅಡಿಕೆ ಮರ ಏರುವಲ್ಲಿಂದ ಕೊಯ್ಲು ತನಕದ ಪ್ರಾಕ್ಟಿಕಲ್ ಶಿಕ್ಷಣವು ಶಿಬಿರದ ಸಿಲೆಬಸ್ ಆಗಿತ್ತು. ಮರದಲ್ಲಿ ಕುಳಿತು ಔಷಧ ಸಿಂಪಡಿಸಲು, ಕೊಯಿಲು ಮಾಡುವಾಗ ಬಳಸುವ ಕೊಟ್ಟೆಮಣೆ ಬಳಕೆ, ಅದಕ್ಕೆ ರಕ್ಷಣಾತ್ಮಕವಾಗಿ ಹಗ್ಗ ಹಾಕುವ ವಿಧಾನ, ಕೊಟ್ಟೆಮಣೆಯೊಂದಿಗೆ ಮರ ಏರುವ ಮತ್ತು ಇಳಿಯುವ ಜಾಣ್ಮೆ, ಅಡಿಕೆ ಕೊಯ್ಲಿನ ಕೊಕ್ಕೆಗೆ (ಬಿದಿರಿನ ಗಳ) ಸಿಕ್ಕಿಸುವ ಹಲ್ಲಿನ ತಯಾರಿ, ಕೊಕ್ಕೆ ಹಿಡಿಯವ ಶೈಲಿ, ಹಣ್ಣಡಿಗೆ ಕೊಯ್ಯುವಾಗ ಯಾವ ವಿನ್ಯಾಸದಲ್ಲಿ ಕೊಕ್ಕೆ ಇರಬೇಕೆನ್ನುವ ಪಾಠ.. ಇವೇ ಮೊದಲಾದ ವೃತ್ತಿಸೂಕ್ಷ್ಮಗಳನ್ನು ಅನುಭವಿಗಳು ಕಲಿಸಿಕೊಟ್ಟಿದ್ದರು.

ಅಡಿಕೆ ಮರವೇರಿ ನಿರ್ವಹಿಸುವ ಕೆಲಸಗಳ ಜ್ಞಾನಗಳು ಹಿರಿಯರಲ್ಲಿದ್ದುವು. ಅವರೊಂದಿಗೆ ಕೆಲಸ ಮಾಡುತ್ತಾ ಕಿರಿಯರು ಕಲಿತುಕೊಳ್ಳುತ್ತಿದ್ದರು. ಕೃಷಿ ಮತ್ತು ಕೃಷಿ ಬದುಕಿನ ಪಲ್ಲಟಗಳ ಬೀಸುಗಾಳಿಯು ಯುವಕರನ್ನು ಕೃಷಿಯಿಂದ ಹಿಮ್ಮೆಟ್ಟಿಸಿತು. ಹಿರಿಯ ವಿಶೇಷಜ್ಞರು ಇಳಿವಯಸ್ಸಿಗೆ ಜಾರಿದರು. ಹೀಗಾಗಿ ಅಲಿಖಿತ ಜ್ಞಾನಗಳು ಕಿರಿಯರಿಗೆ ವರ್ಗಾವಣೆ ಆಗದೆ ಅದು ಸಮಸ್ಯೆಗಳ ರೂಪದಲ್ಲಿ ಬದುಕನ್ನು ಆವರಿಸುತ್ತಾ ಬಂತು. ಈಗ ಅಂತಹ ಸಮಸ್ಯೆಗಳಿಗೆ ಇಳಿಲೆಕ್ಕ. ಕ್ಯಾಂಪ್ಕೋ ಇಂತಹ ಕಲಿಕೆಗೆ ಲಿಖಿತ ಸಿಲೆಬಸ್ ರೂಪಿಸಿದೆ.

ಯುವಕರ ಬದುಕಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಿದರೆ ಅವರು ಯಾಕೆ ನಗರ ಸೇರುತ್ತಾರೆ? ಹಳ್ಳಿಯಲ್ಲೇ ಉಳಿಯುವ ನಿರ್ಧಾರ  ಮಾಡಿದ, ಹಿರಿಯರ ಕಾಯಕವನ್ನು ಮುಂದುವರಿಸುವ ಮನಸಿಗರಿಗೆ ಶಿಬಿರವು ಕೈತಾಂಗು ಆಗಿದೆ. ಈಗ ಅಡಿಕೆಯ ಕೌಶಲ ಕೆಲಸಗಳ ಸಣ್ಣ ಸಣ್ಣ ಗುಂಪುಗಳು ರೂಪುಗೊಂಡಿವೆ.

“ಸೊಸೈಟಿಗಳ ವ್ಯಾಪ್ತಿಯಲ್ಲಿ ಶಿಬಿರಗಳು ಸಂಪನ್ನಗೊಂಡು ಯುವಕರು ನಗುನಗುತ್ತಾ ಮರಳಿ ತೋಟ ಸೇರುವಂತಾದರೆ ಅಡಿಕೆ ಕೃಷಿ ರಂಗದ ದೊಡ್ಡ ಸಮಸ್ಯೆಗೆ ಪರಿಹಾರ ಸಿಕ್ಕಂತೆ” ಹಿಂದೊಮ್ಮೆ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿಯವರು ಮಾತಿಗೆ ಸಿಕ್ಕಾಗ, ಸಹಕಾರಿ ಸಂಘಗಳ ಜೀವವಿರುವುದು ಅಡಿಕೆ ತೋಟದಲ್ಲಿ. ಎಂದಿರುವುದು ತುಂಬಾ ಅರ್ಥಪೂರ್ಣ. ಈ ಎಲ್ಲಾ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ಸಂಸ್ಥೆಯು ಅಡಿಕೆ ರಂಗದ ದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರದ ಮಾದರಿಯ ಒಂದೆಳೆಯನ್ನು ಪ್ರಾಕ್ಟಿಕಲ್ ಆಗಿ ತೋರಿಸಿಕೊಟ್ಟಿದೆ.

ಎಲ್ಲವೂ ಹೌದು.. ಕೃಷಿ ಬದುಕಿನ ಸುಭಗತೆಗೆ ಕೊರೊನಾ ಲಾಕ್ಡೌನ್ ಮಾಡಿತ್ತು. ಇಂತಹ ಸಂಕಟದ ಸಮಯದಲ್ಲೂ ನಮ್ಮ ಅಡಿಕೆ ಕೌಶಲ್ಯ ಪಡೆಯ ಯುವಕರ ಮುಖದ ಮಂದಹಾಸ ಮಾಸಿಲ್ಲ. ಈಗಲೂ ಕೈತುಂಬಾ ಕೆಲಸ


 

Tuesday, June 29, 2021

ಕೊರೊನಾ ಸಂಕಟದಲ್ಲೊಂದು ‘ಮೊಬೈಲ್ ದಾನ’ ಪರಿಕಲ್ಪನೆ



 

ಇಲ್ಲಿದೆ..... ಮುಸ್ಸಂಜೆಯ ಹೊಂಗಿರಣ ಪುಸ್ತಕದ ಮೊದಲ ಲೇಖನ – ನಾಗೇಂದ್ರ ಸಾಗರ್ ಅವರ ಪರಿಕಲ್ಪನೆಯಲ್ಲಿ ಯಶಕಂಡ ಮೊಬೈಲ್ ದಾನ ಪರಿಕಲ್ಪನೆ.   

 

ನಾಗೇಂದ್ರ ಸಾಗರ್ ಕೃಷಿಕರು. ಸಾಗರ ಸನಿಹದ ವರದಾಮೂಲ-ಚಿಪ್ಲಿಯವರು. ಸ್ವ-ಶ್ರಮದ  ಬದುಕು. ಅವರ ಸಹಾಯಕ ಉದಯ. ಇವರ ಮಗಳು ನಿಶಾ ಈಗ ಎಸ್.ಎಸ್.ಎಲ್.ಸಿ. ಯಾ ಮೆಟ್ರಿಕ್. ಕೊರೊನಾದಿಂದಾಗಿ ಶಾಲೆಗಳು ಆರಂಭಗೊಂಡಿಲ್ಲ. ನೇರ ಪಾಠದ ಬದಲಿಗೆ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಅದು ಸ್ಮಾರ್ಟ್ ಫೋನ್ ಹೊಂದಿದವರಿಗೆ ಅನುಕೂಲ. ನಿಶಾಳಲ್ಲಿ ಮೊಬೈಲ್  ಇಲ್ಲದೆ ಪಾಠಗಳಿಂದ ವಂಚಿತಳಾಗಿದ್ದಳು. 

ಮಗುವಿನ ಮನಸ್ಸರಿತ ನಾಗೇಂದ್ರರು ರೇಖಾಳಿಗೆ ತನ್ನ ಹೆಚ್ಚುವರಿ ಮೊಬೈಲನ್ನು ನೀಡಿದರು. ಅದು 3ಜಿ ಸೆಟ್ ಆಗಿತ್ತು. ಅದು ಉಪಯೋಗಕ್ಕೆ ಬರಲಿಲ್ಲ. ನಾಗೇಂದ್ರರು ಈ ವಿಚಾರವನ್ನು ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದರು. ಸ್ನೇಹಿತರೊಬ್ಬರು ತಕ್ಷಣ ಸ್ಪಂದಿಸಿ ಮೊಬೈಲು ಕಳುಹಿಸಿಕೊಟ್ಟರು. ಇದು ನಿಶಾಳಿಗೆ ಆನ್ಲೈನ್ ತರಗತಿ ಕಲಿಕೆಗೆ ನೆರವಾಯಿತು. ನಿಶಾ ಖುಷ್. ಈ ಖುಷಿಯು ನಾಗೇಂದ್ರರ ಮನದೊಳಗೆ ನೂತನ ಆಭಿಯಾನದ ಬೀಜವೊಂದನ್ನು ಹುಟ್ಟು ಹಾಕಿತು. ಇವಳಂತೆ ಸ್ಮಾರ್ಟ್ ಫೋನ್ ಹೊಂದಿರದೆ ಆನ್ಲೈನ್ ಪಾಠಗಳಿಂದ ದೂರವಾಗಿರುವ ಮಕ್ಕಳ ಮನಸ್ಸಿನ ಕೊರಗು ಕಾಡಲಾರಂಭಿಸಿತು. 

ಬಹುತೇಕರು ಒಂದೋ ಎರಡೋ ಸ್ಮಾರ್ಟ್ ಫೋನ್ ಹೊಂದಿರುತ್ತಾರೆ. ಹೆಂಡತಿಗೊಂದು, ಮಗಳಿಗೊಂದು, ಮಗನಿಗೊಂದು ಮೊಬೈಲ್. ಬೇಕಾದರೆ ಇನ್ನೊಂದೆರಡು ಹೆಚ್ಚುವರಿ. ಐದಾರು ತಿಂಗಳಲ್ಲಿ  ಮತ್ತೆ ಹೊಸ ಮೊಬೈಲ್ ಬುಕ್ ಆಗಿರುತ್ತದೆ. ಹಳೆಯದು ಉತ್ತಮ ಸ್ಥಿತಿಯಲ್ಲಿದ್ದರೂ ಬದಿಗೆ ಸರಿಯುತ್ತದೆ. ಹೀಗೆ ಸರಿದ, ಸರಿಯುತ್ತಿರುವ ಮೊಬೈಲುಗಳನ್ನು ಸಂಗ್ರಹಿಸಿ, ಮೊಬೈಲ್ ಇಲ್ಲದ ವಿದ್ಯಾರ್ಥಿಗಳಿಗೆ ಹಂಚಿದರೆ ಅನುಕೂಲ. ಈ ಯೋಚನೆಗೆ ಜಾಲತಾಣಿಗರು ಸ್ಪಂದಿಸಿದರು. ಯೋಜನೆಗೆ  ಮಾಧ್ಯಮ ಬೆಳಕು ಬಿತ್ತು.

ಮಕ್ಕಳ ಸಮಸ್ಯೆಗೆ ಸ್ಪಂದಿಸಿದ ಸಹೃದಯಿಗಳಿಂದ ಆಶ್ವಾಸನೆಗಳು ಬಂದುವು. ಈಗಾಗಲೇ ಆತ್ಮೀಯರು, ಸ್ನೇಹಿತರಿಂದ ಪಡೆದ  ನೂರಕ್ಕೂ ಮಿಕ್ಕಿ ಮೊಬೈಲುಗಳು ವಿದ್ಯಾರ್ಥಿಗಳ ಕೈಸೇರಿವೆ. ಕೆಲವರು ಹೊಸತನ್ನು ನೀಡಲು ಮುಂದಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕೊರಗು ದೂರವಾಗಿದೆ. ಎಂಬ ಖುಷಿಯನ್ನು ಹಂಚಿಕೊಂಡರು ನಾಗೇಂದ್ರ.

ಸಾಗರ ತಾಲೂಕಿನಲ್ಲಿ ಮೂವತ್ತೆಂಟು ಸರಕಾರಿ ಮತ್ತು ಅನುದಾನಿತ ಶಾಲೆಗಳಿವೆ. ಅಭಿಯಾನದ ಸವಲತ್ತು  ಗ್ರಾಮೀಣರಿಗೆ ಮತ್ತು ಗ್ರಾಮೀಣ ಪ್ರದೇಶದಿಂದ ನಗರ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಅವಶ್ಯ. ಅದರಲ್ಲೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮೊದಲಾದ್ಯತೆ. ಕೃಷಿಕರ ಮಕ್ಕಳಲ್ಲಿ  ಮೊಬೈಲ್ ಇಲ್ಲದವರೂ ಇದ್ದಾರೆ. ಅವರಿಗೆ ಮೊಬೈಲ್ ಇಲ್ಲ ಎನ್ನಲು ಮುಜುಗರ. ಅಂತಹವರು ಯಾರೆಂದು ಮೇಲ್ನೋಟಕ್ಕೆ ಗೊತ್ತಾಗುತ್ತಿಲ್ಲ. ಶಾಲೆಯ ಮುಖ್ಯೋಪಾಧ್ಯಾಯರಲ್ಲಿ ಪ್ರತಿ ಮಗುವಿನ ಡಾಟಾ ಇದ್ದೇ ಇರುತ್ತದೆ. ಅವರ ನೆರವಿನಿಂದ ಸಂಬಂಧಪಟ್ಟವರನ್ನು ಸಂಪರ್ಕಿಸಿದ್ದರು, ನಾಗೇಂದ್ರ ಸಾಗರ್.

ದಾನಿಗಳಿಂದ ಮೊಬೈಲು ಪಡೆದ ತಕ್ಷಣ ಅವುಗಳ ಕ್ಷಮತೆಯ ಪರೀಕ್ಷೆ. ಬ್ಯಾಟರಿ ಕೆಟ್ಟರೆ ಹೊಸ ಬ್ಯಾಟರಿ ಅಳವಡಿಕೆ.  ಜತೆಗೆ ಚಾರ್ಜರ್ ಇಲ್ಲದಿದ್ದರೆ ಹೊಸತನ್ನು ಒದಗಿಸುವುದು - ಈ ಎಲ್ಲಾ ಕೆಲಸಗಳನ್ನು ನಾಗೇಂದ್ರ ಕುಟುಂಬ (ಮಡದಿ ವಾಣಿ, ಮಗಳು ಶ್ರಾವ್ಯ) ನಿರ್ವಹಿಸಿದೆ. ಕೆಲವು ಹಳ್ಳಿಗಳಲ್ಲಿ ನೆಟ್ ವರ್ಕ್ ಇರುವುದಿಲ್ಲ. ಅಂತಹ ಪ್ರದೇಶದ ಮಕ್ಕಳು ನೆಟ್ ವರ್ಕ್ ಇರುವಲ್ಲಿ ಒಂದಾಗಿ ಆನ್ಲೈನ್ ತರಗತಿಗೆ ಹಾಜರಾಗುತ್ತಾರೆ. ಈಗಾಗಲೇ ಶಿಕ್ಷಣ ಇಲಾಖೆಯು ವಠಾರ ತರಬೇತಿ ಪ್ರಕ್ರಿಯೆಯನ್ನು ಅನುಷ್ಠಾನಿಸಿತ್ತು. ಈ ಶಾಲೆಗೂ ಈಗ ಕೊರೊನಾ ಭಯ!

 ‘ಶಾಲೆಗೆ ನಿಯಮಿತವಾಗಿ ಬರುವ ಮತ್ತು ಕಲಿಕಾ ಬದ್ಧತೆ ಹೊಂದಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಗುರುತಿಸಿ ಅಂತಹವರಿಗೆ ಮೊದಲು ಮೊಬೈಲ್ ಲಭ್ಯವಾಗುವಂತೆ ನೋಡಿಕೊಳ್ಳುತ್ತೇನೆ. ಮೊಬೈಲ್ ಅಲ್ಲದೆ ಕಂಪ್ಯೂಟರ್, ಲ್ಯಾಪ್ಟಾಪ್, ಟಿವಿ.. ಗಳನ್ನು ಕೂಡಾ (ಹೊಸದು, ಬಳಸಿದ್ದು) ನೀಡಲು ಮುಂದೆ ಬಂದಿರುವುದು ಉತ್ತೇಜಿತ ಬೆಳವಣಿಗೆ. ವೈಯಕ್ತಿಕ ನೆಲೆಯ ಈ ಅಭಿಯಾನಕ್ಕೆ ಶಿಕ್ಷಣಾಧಿಕಾರಿಗಳು ಗುಣಾತ್ಮಕವಾಗಿ ಸ್ಪಂದಿಸಿದ್ದಾರೆ.” ಎನ್ನುತ್ತಾರೆ.

ಸಾಹಿತ್ಯ, ಸಾಂಸ್ಕೃತಿಕ, ಕೃಷಿ ಚಟುವಟಕೆಗಳನ್ನು ನಡೆಸುತ್ತಿರುವ ತನ್ನ ಶ್ರಾವಣ ಚಾವಡಿ ಸಂಸ್ಥೆಯಡಿ ಈ ಅಭಿಯಾನವನ್ನು ನಾಗೇಂದ್ರ ನಡೆಸುತ್ತಿದ್ದಾರೆ.  ಈ ಅಭಿಯಾನದ ಬಗ್ಗೆ ತಿಳಿದ ಸಾಗರದ ಹೊರಗಿನ,  ಶಿವಮೊಗ್ಗ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ವಿದ್ಯಾರ್ಥಿ ಪೋಷಕರ ಕಿವಿಗೂ ತಲುಪಿದೆ. ‘ನಮಗೂ ಕೊಡಿಸಿ’ ಎನ್ನುತ್ತಿದ್ದಾರಂತೆ. ಏನಿದ್ದರೂ ಸಾಗರ ತಾಲೂಕಿಗೆ ಮೊದಲ ಪ್ರಾಶಸ್ತ್ಯ. ಮಿಕ್ಕೆಡೆಯದ್ದು ಬಳಿಕ. ಕೆಲವರು ನಗದು ಕೊಡುತ್ತೇನೆಂದು ಮುಂದೆ ಬಂದಿದ್ದಾರೆ. ನಾಗೇಂದ್ರರು ಅಂತಹ ಕೊಡುಗೆಯನ್ನು ನಯವಾಗಿ ತಿರಸ್ಕರಿಸಿ, ‘ನೀವೇ ಮೊಬೈಲು ಖರೀದಿಸಿ ಕೊಟ್ಟುಬಿಡಿ’ ಎಂದು ವಿನಂತಿಸಿದ್ದಾರೆ. ಕಾರಣ, ನಗದು ಅಂದಾಗ ಹಲವಾರು ಊಹಾಪೋಹಗಳು ರಿಂಗಣಿಸುವ ಅಪಾಯದ ಎಚ್ಚರ ಇವರಲ್ಲಿದೆ.

ಕೌಶಲ್ಯ ಆಧಾರಿತ ಸ್ಮಾರ್ಟ್ ಕ್ಲಾಸ್

          ದಾನಿಯೊಬ್ಬರು ಲ್ಯಾಪ್ಟಾಪ್, ಸ್ಕ್ರೀನ್, ಸಿಪಿಯು.. ಮೊದಲಾದವುಗಳನ್ನು ನೀಡಿ ‘ಸ್ಮಾರ್ಟ್ ಕ್ಲಾಸ್ ಮಾಡಿ’ ಎಂದರು. ಈ ತರಗತಿಗಳು ಕೌಶಲ್ಯ ಆಧಾರಿತವಾಗಿರಬೇಕೆನ್ನುವುದು ನಾಗೇಂದ್ರರ ಆಶಯ.

          ಕೌಶಲ್ಯ ಆಧಾರಿತ ಅಂದರೆ? ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಸಕಾರಾತ್ಮಕ ಚಿಂತನೆ ಹಾಗೂ ಕೃಷಿಯ ನೇರ ಕಲಿಕೆ. ಈಗಾಗಲೇ ಕೃಷಿಯಲ್ಲಿ ಸಾಧನೆ ಮಾಡಿರುವವರ ಬದುಕನ್ನು ತೋರಿಸುವುದರಿಂದ ವಿಶ್ವಾಸ ವೃದ್ಧಿಯಾಗುತ್ತದೆ. ಇದರಿಂದಾಗಿ ಪಠ್ಯೇತರವಾಗಿ ವಿದ್ಯಾರ್ಥಿ ಬೌದ್ಧಿಕವಾಗಿ ಗಟ್ಟಿಯಾಗುತ್ತಾನೆ. ಮುಂದೆ ಆತ ಉದ್ಯೋಗಕ್ಕಾಗಿ ನಗರ ಸೇರಿದರೂ ಈ ಕಲಿಕೆಗಳು ಆತನಲ್ಲಿ ಆತ್ಮವಿಶ್ವಾಸವನ್ನು ಸದಾ ಜಾಗೃತವಾಗಿಸುವಲ್ಲಿ ನೆರವಾಗುತ್ತದೆ.

          ಗ್ರಾಮೀಣ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಹೇಳುವಂತಹ ಪ್ರಭುತ್ವ ಹೊಂದಿರುವುದಿಲ್ಲ. ಸ್ಮಾರ್ಟ್ ಕ್ಲಾಸ್ ಮೂಲಕ ಆಂಗ್ಲ ಭಾಷೆಯನ್ನು ಕಲಿಸುವ, ಗಣಿತವನ್ನು ಕಲಿಸುವ ವ್ಯವಸ್ಥೆಗಳಿಂದ ನಗರದ ವಿದ್ಯಾರ್ಥಿಗಳಿಗೆ ಸಮದಂಡಿಯಾಗಿ ಬೆಳೆಯಲು ಪೂರಕವಾಗಲಿದೆ. ಬದುಕಿಗೆ ಪೂರಕವಾದ ಸಂಗತಿಗಳನ್ನು ಕಲಿಯಲು ಅವಕಾಶ. ಈಗಾಗಲೇ ಎರಡು ಶಾಲೆಗಳು ಸ್ಮಾರ್ಟ್  ತರಗತಿಗೆ ಆಹ್ವಾನ ನೀಡಿದೆ.

Monday, June 28, 2021

ಆ ದಿನಗಳು ಮತ್ತೆ ಬಾರದಿರಲಿ


 ಇಲ್ಲಿದೆ..... ಮುಸ್ಸಂಜೆಯ ಹೊಂಗಿರಣ ಪುಸ್ತಕ ರೂಪುಗೊಂಡ ಹಿನ್ನೆಲೆ – ಲೇಖಕ ಆಶಯ.

ಕೋವಿಡ್ 19 ಕೊರೊನಾ ವೈರಾಣು ನಿಯಂತ್ರಣಕ್ಕಾಗಿ 2020 ಮಾರ್ಚ್ 24ರಂದು ದೇಶ ಲಾಕ್ಡೌನಿಗೆ ಒಳಗಾಯಿತು. ವ್ಯವಹಾರಗಳು ಸ್ತಬ್ಧವಾದುವು. ಬದುಕು ಮೌನಕ್ಕೆ ಜಾರಿದುವು. ಎಂದೂ ನೋಡದ ಕರಾಳ ದಿನಮಾನಗಳು. ಮೇ ಬಳಿಕ ಹಂತಹಂತವಾಗಿ ಅನ್ಲಾಕ್ ಆದೇಶಗಳು ಬಂದುವು. ನಿಧಾನಕ್ಕೆ ಬದುಕು ತೆರೆದುಕೊಳ್ಳುತ್ತಾ ಬಂತು.

ಲಾಕ್ಡೌನಿನ ಆರಂಭದ ದಿವಸಗಳು. ತಾಜಾ ಸುದ್ದಿಗಳನ್ನು ಬಿತ್ತರಿಸಲು ವಾಹಿನಿಗಳ ಪೈಪೋಟಿ. ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ಗಳ ಭರಾಟೆಗಳು. ಆಗಲೇ ದಿನಪತ್ರಿಕೆಗಳು ಆನ್ಲೈನ್ನತ್ತ ವಾಲಿದ್ದುವು. ಕೆಲವು ಪ್ರಕಟಣೆ ನಿಲ್ಲಿಸಿದುವು. ಹಾಗಾಗಿ ವಾಹಿನಿಗಳ ಹೊರತು ಬೇರೆ ಆಯ್ಕೆಗಳಿದ್ದಿರಲಿಲ್ಲ. ವಾಟ್ಸಾಪ್, ಫೇಸ್ಬುಕ್ನಂತಹ ನವಮಾಧ್ಯಮಗಳಲ್ಲಿ ಹರಿದು ಬರುವ ಸುದ್ದಿಗಳ ತಾಜಾತನಗಳನ್ನು ಅಳೆಯುವುದೇ ತಲೆನೋವಾಯಿತು.

ಮುಂಜಾನೆ ಟಿವಿ ಚಾಲೂ ಮಾಡಿದರೆ ಸಾವುನೋವುಗಳ ವರದಿಗಳು. ಲಾಠಿ ಏಟುಗಳು. ದೂಷಣೆಗಳ ಮಾಲೆಗಳು. ಕಿಟ್ ವಿತರಣೆಯ ಗೊಂದಲಗಳು. ಲಾಕ್ ಡೌನ್ ಆದೇಶಗಳನ್ನು ಮುರಿಯುವ ಒಂದಷ್ಟು ಮನಸ್ಸುಗಳು. ರಾಜಕೀಯ ಮೇಲಾಟಗಳ ಚಿತ್ರಣಗಳು. ಅಂತೂ ಸುಮಾರು ಎರಡು ಮೂರು ತಿಂಗಳ ಋಣಾತ್ಮಕ ವಿಚಾರಗಳು ಮತಿಯನ್ನು ಕೆಡಿಸಿದ್ದುವು.

ಬದುಕಿನಲ್ಲಿ ಧನಾತ್ಮಕ ಚಿಂತನೆಯನ್ನು ಪಾಸಿಟಿವ್ ಎಂದರೆ, ಋಣಾತ್ಮಕ ಯೋಚನೆಯನ್ನು ನೆಗೆಟಿವ್ ಎನ್ನುತ್ತೇವೆ. ಕೊರೊನಾ ಪರ್ವದಲ್ಲಿ ಪಾಸಿಟಿವ್ ಅಂದರೆ ಸೋಂಕಿತ, ನೆಗೆಟಿವ್ ಅಂದರೆ ಸೋಂಕುರಹಿತ ಎನ್ನುವ ಅರ್ಥ. ಬದುಕಿನ ಪಾಸಿಟಿವ್ ಅರ್ಥಕ್ಕೂ, ಕೊರೋನಾ ತಂದಿತ್ತ ಅರ್ಥಕ್ಕೂ ವಿಭಿನ್ನ ಅರ್ಥಗಳು. ಶಬ್ದಾರ್ಥವನ್ನೇ ಬದಲಿಸಿದ ಕೊರೊನಾ ಸುದ್ದಿಗಳಿಂದ ದೂರವಿರುವುದೇ ಸವಾಲಾಗಿತ್ತು. 

ಸರಿ, ವಾಹಿನಿಗಳು ಬಳಸಿದ ಪದಗಳತ್ತ ಒಮ್ಮೆ ಹೊರಳೋಣ. ಮಂಗಳೂರಿನಲ್ಲಿ ಒಂದು ಕೊರೊನಾ ವೈರಸ್ ದಾಖಲಾದ ದಿವಸ. ವಾಹಿನಿಯೊಂದು ಕರಾವಳಿ ವಿಲವಿಲ ಎಂದು ವರದಿ ಮಾಡಿತ್ತು. ವಿಲವಿಲ ಎನ್ನುವ ಪದದ ಅರ್ಥ ವ್ಯಾಪ್ತಿ ಏನು? ಒಂದು ಕೇಸ್ ದಾಖಲಾದ ತಕ್ಷಣ ಕರಾವಳಿ ವಿಲವಿಲ ಒದ್ದಾಡಿತೇ? ಬೆಚ್ಚಿ ಬೀಳಿಸಿದ, ಕಂಗಾಲು, ಅಟ್ಟಹಾಸ, ಮಹಾಮಾರಿ, ರಣಭಯಂಕರ, ಹೆಮ್ಮಾರಿ, ಶಾಕಿನಿ-ಡಾಕಿನಿ, ಗುರುವಾರದ ಗಂಡಾಂತರ, ಶನಿವಾರದ ಶನಿ... ಹೀಗೆ ದಿನಕ್ಕೊಂದು ಪ್ರಾಸಬದ್ಧ ಶೀರ್ಶಿಕೆಯ ವಿಶೇಷ ಕಾರ್ಯಕ್ರಮಗಳು.

          ಲಾಕ್ಡೌನ್ ಇರುತ್ತಾ ಮದ್ಯದಂಗಡಿಗಳನ್ನು ತೆರೆಯಲು ಸರಕಾರ ಆದೇಶಿಸಿತು. ಆ ಸಮಯದಲ್ಲಿ ಬಳಕೆಯಾದ ಭಾಷೆಗಳನ್ನು ಗಮನಿಸಿ. ತೀರ್ಥ, ಎಣ್ಣೆ ಹೊಡೆಯೋದು, ವಾನಪ್ರಸ್ಥ, ಪರಮಾತ್ಮ ಒಳಗೆ ಹೋಗುತ್ತಿದ್ದಂತೆ ಸರಿಗಮ ಸ್ಟಾಟರ್್, ಎಣ್ಣೆದಾನವೇ ಶ್ರೇಷ್ಠ ಅಂದರೆ ಬೀರ್ಬಲ್ಲರ್, ಗಂಟಲಿಗೆ ಅಮೃತಪಾನ, ಸುರಗಂಗೆಗಾಗಿ ಸಾಲುಗಟ್ಟಿದ ಮಹಾ ತಪಸ್ವಿಗಳು.. ಇವೆಲ್ಲಾ ಮದ್ಯಪಾನಿಗಳನ್ನು ಲಕ್ಷಿಸಿ ಹೊಸೆದ ಪದಪುಂಜಗಳು.

          ಎಲ್ಲವನ್ನೂ ಮತೀಯ, ಜಾತೀಯ ಕಣ್ಣಿನಿಂದ ನೋಡುವ ವರ್ತಮಾನದಲ್ಲಿ ವಾಹಿನಿಗಳ ಶೀರ್ಸಿಕೆಗಳಲ್ಲಿ ಮತೀಯ ಭಾವನೆಗಳಿಲ್ಲವೇ? ನಂಬಿದ ಭಾವನೆಗಳನ್ನು ಅಗೌರವದಿಂದ ಕಂಡಂತಾಗಲಿಲ್ಲವೇ? ತೀರ್ಥ, ವಾನಪ್ರಸ್ಥ, ಪರಮಾತ್ಮ, ಅಮೃತಪಾನ, ಸುರಗಂಗೆ, ಮಹಾತಪಸ್ವಿಗಳು ಈ ಪದಗಳಿಗೂ ಪುರಾಣಗಳಿಗೂ ಸಂಬಂಧವಿಲ್ವಾ. ಬಾಯಿಗೆ ಬಂದಂತೆ ಪದಗಳನ್ನು ಪೋಣಿಸಿ ವಿಷಯವನ್ನು ಗಂಭೀರತನಕ್ಕೆ ಒಯ್ಯುವ ಸಾಹಸವನ್ನು ನೋಡಿ ನಿಜಕ್ಕೂ ರೋಸಿ ಹೋಗಿತ್ತು. ಹಾಗಿದ್ದರೆ ನಿಜಾರ್ಥದ ಪಾಸಿಟಿವ್ ಯಾವುದು?

          ವಾಹಿನಿಗಳು, ನವಮಾಧ್ಯಮಗಳು, ನಿತ್ಯದ ಮಾತುಕತೆಗಳು, ದೂರವಾಣಿ ಸಂಭಾಷಣೆಗಳಲ್ಲಿ ಋಣಾತ್ಮಕ ವಿಚಾರಗಳು ರಾಚುತ್ತಿದ್ದುವು. ಬದುಕಿನ, ಬದುಕುವ ಅವಕಾಶಗಳನ್ನು ಕೊರೊನಾ ಕಸಿದಿದೆ. ಬದುಕು ಮುಗಿದೋಯ್ತು.. ಮುಂತಾದ ಮಾತುಕತೆಗಳಿಗೆ ಕಿವಿಯಾಗಿದ್ದೆ. ಇದಕ್ಕೆ ಅಂತ್ಯ ಯಾವಾಗ? ಕೊರೊನಾ ವೈರಾಣು ತೊಲಗಿದಾಗ ಮಾತ್ರ. ಅದು ಸಾಧ್ಯವೇ? ಹಾಗಿದ್ದರೆ ಬದುಕಿನಲ್ಲಿ ಧನಾತ್ಮಕ ವಿಚಾರಗಳಿಗೆ ಬೆಳಕು ಹಾಕಬೇಡವೇ? ಹಾಕುವವರು ಯಾರು? ಆ ಬೆಳಕಿನಲ್ಲಿ ಧನಾತ್ಮಕ ವಿಚಾರಗಳನ್ನು ನೋಡುವ ಕಣ್ಣು, ಕೇಳುವ ಕಿವಿಗಳು ಇವೆಯೇ?

          ಹೀಗೆ ವಿಚಾರಗಳು ರಿಂಗಣಿಸುತ್ತಿದ್ದಾಗ ಕ್ಯಾಲೆಂಡರ್ ಹಾಳೆಗಳಲ್ಲಿ ಸೆಪ್ಟೆಂಬರ್, ಅಕ್ಟೋಬರ್ ಪುಟ ಒಳಸೇರಿತು. ಆಗಲೇ ಕೆಲವೊಂದು ಪಾಸಿಟಿವ್ ಘಟನೆಗಳನ್ನು ನೋಟ್ಸ್ ಮಾಡಿಕೊಂಡಿದ್ದೆ. ನೆಗೆಟಿವ್ ಚಿಂತನೆಯನ್ನು ಪೂರ್ತಿಯಾಗಿ ಕೈಬಿಟ್ಟು ಕೊರೊನಾ ಮಧ್ಯೆ ಪಾಸಿಟಿವ್ ಅಂಶಗಳನ್ನು ದಾಖಲಿಸಿದರೆ ಅದೊಂದು ಸ್ಫೂರ್ತಿಯ ಕ್ಯಾಪ್ಸೂಲಾಗಲಿ ಎನ್ನುವ ಉದ್ದೇಶದಿಂದ ವಿಷಯವನ್ನು ಹೊಸೆಯಲು ಆರಂಭಿಸಿದೆ. 

          ಒಂದು ಲೇಖನ ಮುಗಿಯುವಷ್ಟರ ಹೊತ್ತಿಗೆ ಮತ್ತೊಂದರ ಸುಳಿವು ಪತ್ರಿಕೆಗಳಲ್ಲಿ  ಕಣ್ಣಿಗೆ ಬೀಳುತ್ತಿತ್ತು. ಅವೆಲ್ಲಾ ಒಂದು ಪ್ಯಾರಾದ ಸುದ್ದಿಯಾಗಿದ್ದುವು. ಅವುಗಳ ಜಾಡನ್ನರಸಿ, ಸಂಪರ್ಕ ಸಂಖ್ಯೆ ಪಡೆದು, ಸಂಬಂಧಿತ ವ್ಯಕ್ತಿಗಳನ್ನು ಮಾತನಾಡಿಸಿದಾಗ ಅಬ್ಬಾ.. ಎಷ್ಟೊಂದು ಸಮುದಾಯ ಮಟ್ಟದ ಕೆಲಸಗಳು ಸದ್ದಿಲ್ಲದೆ ಆಗಿಹೋಗಿವೆ! ಜತೆಗೆ ಬದುಕು ಬದಲಾಯಿಸಿಕೊಂಡವರ ಕತೆಗಳು.

          ಕನ್ನಾಡಿನಾದ್ಯಂತ ಕತ್ತು ಹಾಯಿಸುತ್ತಾ ಹೋದರೆ ಇಂತಹ ನೂರಾರು ಅಲ್ಲ, ಸಾವಿರಾರು ಘಟನೆಗಳು ಸಿಗಬಹುದು. ಸಮುದಾಯ ಮಟ್ಟದಲ್ಲಿ, ವೈಯಕ್ತಿಕ ನೆಲೆಯಲ್ಲಿ ಬದುಕು ಬದಲಾಯಿಸಿಕೊಂಡವರಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಜಾತಿ, ಮತ, ಅಂತಸ್ತುಗಳನ್ನು ಬದಿಗಿಟ್ಟು ಸೇವಾ ಭಾವದಿಂದ ದುಡಿದಿರುವುದು ಗುರುತರವಾದುದು. ಮುಂದಿನ ದಿವಸಗಳಲ್ಲಿ ಅದನ್ನೇ ಒಂದು ಪ್ರತ್ಯೇಕ ಪುಸ್ತಕವಾಗಿ ಹೊರ ತರುವ ಯೋಚನೆಯಿದೆ.

           ಸಮುದಾಯ ಮಟ್ಟದಲ್ಲಿ ಆಗಿರುವ ಕೆಲವು ಪ್ರಾತಿನಿಧಿಕ ಗಾಥೆಗಳು ಇಲ್ಲಿವೆ. ವೈಯಕ್ತಿಕವಾಗಿ ಬದುಕು ಕಟ್ಟಿಕೊಂಡವರ ವಿಚಾರಗಳಿವೆ. ಯಕ್ಷಗಾನದಂತಹ ಮಾಧ್ಯಮಗಳು ತನ್ನ ಎಂದಿನ ಹೂರಣದಿಂದ ಹೊರಳಿ ಕೊರೊನಾ ಜಾಗೃತಿಯನ್ನು ಕಥಾನಕವಾಗಿ ಹೊಸೆದು ಪ್ರದರ್ಶನಗಳಾಗಿವೆ, ತಾಳಮದ್ದಳೆಗಳು ಜರುಗಿವೆ. ಅಂತೆಯೇ ಅನ್ಯ ಪ್ರಾಕಾರಗಳು, ಉದ್ಯಮಗಳು ಪಲ್ಲಟಗೊಂಡಿವೆ. ಎಲ್ಲವನ್ನೂ ದಾಖಲಿಸುವುದು ಮಿತಿಯಲ್ಲಿ ಕಷ್ಟಸಾಧ್ಯ. ಇಲ್ಲಿ ಬಿಟ್ಟುಹೋದ ಅಂಶಗಳು ಅಗಣಿತ. ಅದು ಉದ್ದೇಶಪೂರ್ವಕವಲ್ಲ.

          ಪುಸ್ತಕದ ಹೆಸರು ಮುಸ್ಸಂಜೆಯ ಹೊಂಗಿರಣ. ನನ್ನ ಅಕ್ಷರ ಗುರು ಶ್ರೀ ಪಡ್ರೆಯವರು ಹೆಸರು ಸೂಚಿಸಿ ಬೆನ್ನು ತಟ್ಟಿದ್ದಾರೆ. ಕೊರೊನಾ ಕೃಪೆಯ ವರಗಳತ್ತ ಇಣುಕು ನೋಟಕ್ಕೆ ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕಲ್ಮಡ್ಕ ಮುನ್ನುಡಿ ಬರೆದು ಹರಸಿದ್ದಾರೆ. ವೈಯಕ್ತಿಕ ಬದುಕಿನ ಹಿತಾಕಾಂಕ್ಷಿ ಡಾ.ಮನೋಹರ ಉಪಾಧ್ಯರು ಬೆನ್ನುಡಿಯ ಸೇಸೆಯನ್ನಿಕ್ಕಿದ್ದಾರೆ. ಕಲಾವಿದ, ಪರಿಸರ ಹೋರಾಟಗಾರ ದಿನೇಶ ಹೊಳ್ಳರು ಅರ್ಥಪೂರ್ಣ ಮುಖಚಿತ್ರವನ್ನು ರಚಿಸಿದ್ದಾರೆ.

ಪುಸ್ತಕದ ಹೂರಣ ತಯಾರಿ ಹಂತದಲ್ಲಿ - ತೋವಿನಕೆರೆಯ ಪದ್ಮರಾಜು ಹೆಚ್.ಜೆ., ಗಣಪತಿ ಶರ್ಮ ಪಳ್ಳತ್ತಡ್ಕ, ಸವಣೂರಿನ ವಿವೇಕ ಆಳ್ವ, ಶಂ.ನಾ.ಖಂಡಿಗೆ ಪೆರ್ಲ, ಜಯ ಮಣಿಯಂಪಾರೆ, ಪ್ರಕಾಶ್ ಕುಮಾರ್ ಕೊಡೆಂಕಿರಿ - ಇವರೆಲ್ಲರ ಸಹಕಾರಕ್ಕೆ ಕೃತಜ್ಞ.  

          ಪುಸ್ತಕದ ಪ್ರಕಟಣೆಯ ಹೊಣೆಯನ್ನು ನಿಡುಗಾಲದ ಅಕ್ಷರ ಮಿತ್ರ, ಕೃಷಿಕ ಮಹೇಶ್ ಪುಚ್ಚಪ್ಪಾಡಿ ವಹಿಸಿಕೊಂಡಿದ್ದಾರೆ. ತನ್ನ ದಿ ರೂರಲ್ ಮಿರರ್ ಡಾಟ್ ಕಾಮ್ ಮೂಲಕ ಪ್ರಕಾಶಿಸಿದ್ದಾರೆ. ಇವರಿಗೆಲ್ಲಾ ಋಣಿ. ಇಲ್ಲಿರುವುದೆಲ್ಲಾ ಬದುಕಿನ ಪಾಸಿಟಿವ್.

- ನಾ. ಕಾರಂತ ಪೆರಾಜೆ

ಇದು ಅಂತಿಮವಲ್ಲ, ಆರಂಭ

 

ಇಲ್ಲಿದೆ..... ಮುಸ್ಸಂಜೆಯ ಹೊಂಗಿರಣ ಪುಸ್ತಕವನ್ನು ಪ್ರಕಾಶಿಸಿದವರು ರೂರಲ್ ಮಿರರ್ ಪ್ರಕಾಶನ – ಪ್ರಕಾಶಕ ಮಹೇಶ್ ಪುಚ್ಚಪ್ಪಾಡಿ ಮಾತು....

          ಅದು ಪಾಸಿಟಿವ್ ದಿನಗಳು. ಅಂದು ಪಾಸಿಟಿವ್ ಎನ್ನುವ ಶಬ್ದವೇ  ನೆಗೆಟಿವ್ ಆಗಿತ್ತು. ಈಗ ಅದೆಲ್ಲಾ ಮರೆತುಹೋಗುವ, ಮರೆತು ಹೋಗಲೇಬೇಕಾದ ಸಮಯ ಬಂದಿದೆ. ಹಾಗೆಂದು ಆ ಸಂಕಷ್ಟದ ದಿನಗಳು ಕಣ್ಣಮುಂದೆ ಬಂದಾಗ ದಾಖಲಿಸಬೇಕಾದ ಹಲವು ಸಂಗತಿಗಳು ಕಂಡುಬಂದವು.

          ಅನೇಕ ಸಂದರ್ಭದಲ್ಲಿ ವಾಸ್ತವ ಸಂಗತಿಗಳು ದೈನಂದಿನ ಬದುಕಿನಲ್ಲಿ ಮರೆಯಾಗುತ್ತವೆ. ಅದಕ್ಕೆ ಕಾರಣಗಳು ಹಲವು. ಒಂದು ಮಾಧ್ಯಮವಾಗಿ ಇಂತಹ ಸಂಗತಿಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕಾಗಿದೆ.  ಕೊರೊನಾ ಸಂದರ್ಭದ ಪಾಸಿಟಿವ್ ಬದಲಾವಣೆಗಳು ಮರೆವಿಗೆ ಜಾರಬಾರದು.  ಅದಕ್ಕಾಗಿಯೇ ಮುಸ್ಸಂಜೆಯ ಹೊಂಗಿರಣದ ಪ್ರಕಾಶನಕ್ಕೆ ಮುಂದಾಗಿದ್ದೇವೆ.

          ಕೊರೊನಾ ಸಮಯದಲ್ಲಿ ಎಲ್ಲೆಡೆ ಭಯದ ವಾತಾವರಣ. ಎಲ್ಲೋ ದೂರದಲ್ಲಿ ಕೊರೊನಾ ಪಾಸಿಟಿವ್ ಕೇಳಿಬಂದರೆ ಹಳ್ಳಿಗಳಲ್ಲಿ ನಡುಕ ಆರಂಭವಾಗುತ್ತಿತ್ತು.  ಒಂದು ಪಾಸಿಟಿವ್ ಸುದ್ದಿ ತಿಳಿದರೆ ಸಾಕು ಭಯದಿಂದ ಮುಗಿಬಿದ್ದು ಓದುತ್ತಿದ್ದರು. ಭಯದ ನಡುವೆಯೇ ಬದುಕು ಸಾಗುತ್ತಿತ್ತು.

          ದೇಶದ ಆರ್ಥಿಕ ಸ್ಥಿತಿಯಿಂದ ತೊಡಗಿ ಹಳ್ಳಿಗಳಲ್ಲೂ ಆರ್ಥಿಕ, ಸಾಮಾಜಿಕ ಸ್ಥಿತಿ ಬದಲಾವಣೆ ಆರಂಭವಾದವು. ಇದು ಹಳ್ಳಿಗಳನ್ನು ಮತ್ತೆ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವು.  ಸಣ್ಣ ಸಣ್ಣ ಬದಲಾವಣೆಗಳು ಹಳ್ಳಿಗಳಿಗೆ ಬೆಳಕಾದುವು. ಯುವಕರು ಇಲ್ಲವಾಗಿದ್ದ ಹಳ್ಳಿಗಳು ಮುಸ್ಸಂಜೆಯ ಹೊತ್ತಿನಲ್ಲಿದ್ದವು. ಇದೇ ಹೊತ್ತಿಗೆ ಸಣ್ಣ ಸಣ್ಣ ಬದಲಾವಣೆಯ ಹೊಂಗಿರಣ ಕಂಡುಬಂದಿತ್ತು. ಇದನ್ನು ದಾಖಲಿಸುತ್ತಾ ಹೋದಾಗ ಅದೊಂದು ದಾಖಲೆಯ ರೂಪಕ್ಕೆ ಬಂದಿತು. ಇದೇ ಅಂತಿಮವಲ್ಲ. ಮುಂದೆ ಅವಕಾಶ ಸಿಕ್ಕಾಗ ಮತ್ತೆ ದಾಖಲಿಸುವ ಪ್ರಯತ್ನ ಮಾಡುತ್ತೇವೆ.

          ಇದೀಗ ರೂರಲ್ ಮಿರರ್ನ ಚೊಚ್ಚಲ ಕೃತಿಯನ್ನು ನಿಮ್ಮ ಮುಂದೆ ಪಾಸಿಟಿವ್ ರೂಪದಲ್ಲಿ ಇರಿಸುತ್ತಿದ್ದೇವೆ. ಲೇಖಕ ನಾ. ಕಾರಂತ ಪೆರಾಜೆಯವರ ಶ್ರಮವನ್ನು ಗೌರವಿಸುತ್ತಾ, ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.

 - ಮಹೇಶ್ ಪುಚ್ಚಪ್ಪಾಡಿ

‘ಪಾಸಿಟಿವ್ ಪ್ಲಸ್’


 ಇಲ್ಲಿದೆ..... ಮುಸ್ಸಂಜೆಯ ಹೊಂಗಿರಣ ಪುಸ್ತಕಕ್ಕೆ ಬೆನ್ನುಡಿ ಮೂಲಕ ಬೆನ್ನು ತಟ್ಟಿದವರು...... ಮಂಗಳೂರಿನ ಪಶುವೈದ್ಯ ಹಾಗೂ ಸುಮನಸಿಗ ಡಾ.ಪಿ.ಮನೋಹರ ಉಪಾಧ್ಯ

‘ಪಾಸಿಟಿವ್ ಪ್ಲಸ್’

ಮಾಲತಿ ಮುಕುಂದ ವೈಗೂರರಿಗೆ ಜೊತೆಗೆ ನಿಂತ ಇಡೀ ಮನೆಯು 12 ಬಗೆ ಮೌಲ್ಯವರ್ಧನೆ ಮಾಡಿ  ಮಾವಿನಹಣ್ಣನ್ನು ಗೆಲ್ಲಿಸಿದ್ದಲ್ಲದೆ ಕುಟುಂಬ ಜೀವನದ ಮೌಲ್ಯವನ್ನು ಎತ್ತಿ ಹಿಡಿಯಿತು

ಊರವರ ಕಿಸೆ ಮುಟ್ಟದೆ ಚಿಕ್ಕೇನಹಳ್ಳಿಗೆ ಡಿಜಿಟಲ್ ಸ್ಪರ್ಷ ಕೊಟ್ಟು ಮಕ್ಕಳ ಓದಿಗೆ ಸ್ಪೂರ್ತಿ ತುಂಬಿದ  ಸ್ವಯಂ ಸೇವಾ ಸಂಸ್ಥೆಯ ಕೆಲಸ ಹೇಗೆಂದರೆ '' ಎಲ್ಲದಕ್ಕೂ ಸರಕಾರಕ್ಕೆ ಕಾಯಬೇಡಿ ''. 

ಊರಿನ ಮತ್ಸರ, ತಾತ್ಸಾರದ ವಾತಾವರಣದ ಮಧ್ಯೆ ಅಪ್ಪನು ಮಗ ರವಿಯನ್ನು ತಬ್ಬಿದ ಪರಿ ಸಮಗ್ರ ಭಾರತಕ್ಕೊಂದು  ಪುನರ್ನೋಟ

ವಾಟ್ಸಾಪ್ನಲ್ಲಿ ಹತ್ತಿರ ಬಂದು 3 ಲಕ್ಷಕ್ಕೂ ಮಿಕ್ಕಿ ಹಣ ಸಂಗ್ರಹಿಸಿ ಧ್ವನಿ ಇಲ್ಲದವರನ್ನು ತಲೆಎತ್ತುವಂತೆ ಮಾಡಿದ   92 ಎಸ್ಸೆಸ್ಸೆಲ್ಸಿ ಸಹಪಾಠಿಗಳ ಸ್ನೇಹಕ್ಕೆ ಎಷ್ಟು ಬೆಲೆ ಕಟ್ಟಬಹುದು

ಬಿಸಿ ಮನೆಯೂಟದ ಬುತ್ತಿಯನ್ನು ಗ್ರಾಹಕರ ಕಛೇರಿಯ ಬಾಗಿಲಿಗೆ ತರುವ ಆದರ್ಶರ ಕೆಲಸ ಮುಂಬಯಿಯ ಸಾವಿರಾರು ಡಬ್ಬಾವಾಲರನ್ನು ಒಮ್ಮೆಲೆ ಒಟ್ಟಿಗೆ ನಿಲ್ಲಿಸಿ ಫೋಟೋ ತೆಗೆಸಿದಂತಾಯ್ತು

'' ನಾನು ವ್ಯಾಪಾರಕ್ಕಾಗಿ ಪ್ರೆಸ್ ಓಪನ್ ಮಾಡಿಲ್ಲ ''  ರಾಜೇಶ್ ಪವರ್ ಪ್ರೆಸ್ಸಿನ ರಘುನಾಥರಾಯರ ಮಾತು ನಾನೇ ಆಡಿದ ಹಾಗಾಯ್ತು .  

ಆರತಿ ಪಟ್ರಮೆಯವರ ಮಾತಿನ ಮಂಟಪ , ಬಾಬಣ್ಣ  ಉಣ್ಣಿಯಪ್ಪ ಆದದ್ದು, ಕೊಡೆಂಕಿರಿಯವರ ಅಡಿಕೆ ಚಿಗುರಿದ್ದು, ATV ಹೊಸ ಠೀವಿ , ಕುಂಟಿಕಾನರ ಜೀನಸು ವ್ಯಾಪಾರ, ಮೇಸ್ತ್ರಿಯವರಿಗೆ ಗಿಡಮೂಲಿಕೆ ಅಂಟಿದ್ದು, ನರಗುಂದದ ಕಸ್ತೂರಿಯಮ್ಮ ಮಾಂಗಲ್ಯ ಅಡವಿಟ್ಟದ್ದು, ರಮೇಶನ ಹಳ್ಳಿಗೆ ಮುಖಮಾಡಿದ್ದು , ....... ಹೀಗೆ ಅನೇಕ ಜೀವನ್ಮುಖಿ ಪ್ರಸಂಗಗಳು ಓದುಗನಿಗೆ ಹೊಸ ಅನುಭವಗಳು

ರೈತರಿಗೆ ನೇರ ಗ್ರಾಹಕರನ್ನು ತಲುಪಲು ಅವಕಾಶ ಮಾಡಿಕೊಟ್ಟ  ಪಾನಿ ಫೌಂಡೇಷನ್ ಡಾ. ಅವಿನಾಶ್ ಪೋಲ್ ಎಂಬ ದಂತವೈದ್ಯನು  ತರಕಾರಿ ಮಾರಾಟದಲ್ಲೂ ಕೈಯಾಡಿಸಿದ್ದು ಪುಸ್ತಕಕ್ಕೆ ವಿಶೇಷ ಬೋನಸ್

ಅಡಿಕೆ ಪತ್ರಿಕೆ ಗರಡಿಯಲ್ಲಿರುವ ನಾ. ಕಾರಂತರ ಬರಹಗಳೇ ಹಾಗೆ . ಮೈನವಿರೇಳಿಸುವ ಸಣ್ಣ ವಿಚಾರವೊಂದು ಇಡೀ ಲೇಖನವನ್ನು ಆವರಿಸಿ ಬಿಡುವುದು. ಕೇಳಿದ, ಕಂಡ, ಅನುಭವಿಸಿದ , ದಾಖಲಿಸಿದ ವಿಷಯಗಳೆಲ್ಲ ಮಿತ್ರ ನಾ.ಕಾರಂತರಿಗೆ  ಕೊರೋನಾ ರೋಗವು  '' ಪಾಸಿಟಿವ್ ''  ಆಗುವುದಾದರೆ ಓದುಗರಿಗೆ ಎಂದಿಗೂ ಅದು '' ಪಾಸಿಟಿವ್ ಪ್ಲಸ್ ''. 

ಕಾಲಗರ್ಭದಲ್ಲಿ ಚದುರಿಹೋಗಬಹುದಾದ ವಿಷಯಗಳನ್ನೆಲ್ಲ ಒಟ್ಟಿಗೆ ಸೇರಿಸಿ ''ಮುಸ್ಸಂಜೆಯ ಹೊಂಗಿರಣ'' ವಾಗಿಸಿದ  ನಾ.ಕಾರಂತರಿಗೆ ಮತ್ತು ಪುಸ್ತಕದ ಎಲ್ಲ ಪಾತ್ರಧಾರಿಗಳಿಗೆ ಮತ್ತೊಮ್ಮೆ ಧನ್ಯವಾದಗಳು.  

- ಡಾ . ಪಿ. ಮನೋಹರ ಉಪಾಧ್ಯ