Tuesday, February 14, 2012

ಅಡುಗೆ ಮನೆಯತ್ತ ಸಾಂಪ್ರದಾಯಿಕ ನಡಿಗೆ

ಆಹಾರಗಳ ಮೂಲಕ ಅವ್ಯಕ್ತವಾಗಿ ಊಟದ ತಟ್ಟೆಗೆ ವಿಷ ಬೀಳುತ್ತಿದೆ! ವಿಷಮುಕ್ತ ಆಹಾರಗಳ ಸೇವನೆಯ ಅನಿವಾರ್ಯಗಳ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಪವರ್ ಪಾಯಿಂಟ್ ಮೂಲಕ ಅರಿವನ್ನು ಮೂಡಿಸುವ ತರಗತಿಗಳನ್ನು ಮಾಡುತ್ತಿದ್ದಾಗ ಬಹುತೇಕ ವಿದ್ಯಾರ್ಥಿಗಳಲ್ಲಿ ಮೂಡಿದ ಪ್ರಶ್ನೆ - 'ಹಾಗಿದ್ದರೆ ನಾವು ಏನನ್ನು ಸೇವಿಸಬೇಕು?

ಮನೆಯ ಹಿತ್ತಿಲಿನಲ್ಲಿ, ಸುತ್ತಮುತ್ತಲಿನ ಪರಿಸರದಲ್ಲಿ ಆಹಾರವಾಗಿ ಹೊಟ್ಟೆ ಸೇರಬಹುದಾದ ಎಷ್ಟು ವಸ್ತುಗಳಿಲ್ಲ? ಬಾಳೆಕಾಯಿ, ಕುಂಡಿಗೆ, ಬಾಳೆದಿಂಡು, ಚಿಗುರುಗಳು, ಗೆಡ್ಡೆಗಳು, ಕಾಯಿಗಳು.. ಇವೆಲ್ಲಾ ಊಟದ ಬಟ್ಟಲಿನಿಂದ ದೂರಸರಿದಿವೆ. 'ಸಾರು ಅಂದರೆ ಟೊಮೆಟೋ ಸಾರು, ಸಾಂಬಾರು ಅಂದರೆ ಆಲೂಗೆಡ್ಡೆಯದು, ಪಲ್ಯ ಕ್ಯಾಬೇಜಿನದು'.. ಇಂತಹ ಮೆನುಗಳು ಅಡುಗೆ ಮನೆಗಳಲ್ಲಿ ಸ್ಥಾಪಿತವಾಗಿವೆ.

ತರಕಾರಿ ಅಂಗಡಿಯೊಂದರಲ್ಲಿದ್ದೆ. ಮಗುವಿನೊಂದಿಗೆ ದಂಪತಿ ಖರೀದಿಗೆ ಬಂದಿದ್ದರು. ಶಾಲೆಯೊಂದರ ಪವರ್ಪಾಯಿಂಟ್ ತರಗತಿಯಲ್ಲಿ ಆ ಮಗುವನ್ನು ನೋಡಿದ ನೆನಪು. 'ಸೊಪ್ಪು, ಗೆಡ್ಡೆ ತರಕಾರಿ ಆರೋಗ್ಯಕ್ಕೆ ಒಳ್ಳೆಯದಂತೆ. ಅದನ್ನೇ ತೆಕ್ಕೋ ಅಮ್ಮ..' ಎಂದು ಮಗು ಒತ್ತಾಯಿಸುತ್ತಿತ್ತು. 'ಕರ್ಮ, ಯಾರೋ ಶಾಲೆಗೆ ಬಂದು ನಿನ್ನ ತಲೆ ಹಾಳು ಮಾಡಿರಬೇಕು' ಎಂದು ಬಯ್ಯುತ್ತಲೇ ಮಗುವಿನ ಆಯ್ಕೆಯನ್ನು ಸ್ವೀಕರಿಸಿದರೆನ್ನಿ. ಅಮ್ಮನನ್ನು ಮನಸಾ ಅಭಿನಂದಿಸಿದೆ.

ಮಗು ಆ ತರಕಾರಿಗಳನ್ನೇ ಯಾಕೆ ಆಯ್ಕೆ ಮಾಡಿತು? ಪವರ್ಪಾಯಿಂಟ್ ತರಗತಿಯಲ್ಲಿ ವಿವರಿಸಿದ ಸೊಪ್ಪು, ಗೆಡ್ಡೆ ತರಕಾರಿಗಳ ಆರೋಗ್ಯದಾಯಕ ವಿಚಾರಗಳು ಮಗುವಿನ ಮನಸ್ಸಿಗೆ ಹೊಕ್ಕಿದೆ ಎಂಬುದಕ್ಕೆ ನಿದರ್ಶನ. ಹಾಗೆಂತ ಬೀನ್ಸ್, ಬದನೆ, ಬೆಂಡೆ.. ತರಕಾರಿಗಳು ಅನಾರೋಗ್ಯಕರ ಎಂದರ್ಥವಲ್ಲ. ನಮ್ಮ ನಡುವೆಯೇ ಕೀಟನಾಶಕ ಸಿಂಪಡಿಸದೆ ತಾಜಾ ತರಕಾರಿಗಳನ್ನು ಬೆಳೆಯುವವರು, ಬೆಳೆದು ತಿನ್ನುವವರು ಎಷ್ಟು ಮಂದಿ ಇಲ್ಲ. ವಿಷರಹಿತ ಆಹಾರಗಳನ್ನು ಸ್ವೀಕರಿಸಿದಷ್ಟೂ ಆಸ್ಪತ್ರೆಯಿಂದ ದೂರವಿರಬಹುದು! ತರಕಾರಿ ಮಾತ್ರವಲ್ಲ, ಉದರದೊಳಗೆ ಸೇರುವ ಎಲ್ಲಾ ಪದಾರ್ಥಗಳಲ್ಲೂ 'ಬುದ್ಧಿಪೂರ್ವಕ'ವಾಗಿ ಬೆರೆಸಿದ ಕಲಬೆರಕೆಗಳನ್ನು ಮನತುಂಬಿ ಮನೆ ತುಂಬಿಸಿದ್ದೇವೆ. ಒಪ್ಪಿಕೊಂಡು 'ಅಸಹಾಯಕ'ರು ಎನ್ನುತ್ತಾ ವ್ಯವಸ್ಥೆಯನ್ನು ಅಪ್ಪಿಕೊಂಡಿದ್ದೇವೆ.

ಈಚೆಗೆ ಮಾನ್ಯ ಪ್ರಧಾನಿಗಳು ಮಕ್ಕಳ ಪೌಷ್ಟಿಕ ಆಹಾರದ ಕುರಿತು ಹೇಳಿಕೆ ನೀಡಿದ್ದರಲ್ಲಾ.. ಅಲ್ಲಿಂದ ಶುರುವಾಯಿತು ನೋಡಿ, ಪೌಷ್ಟಿಕ ಆಹಾರಗಳ ಸುತ್ತ ಮಾತುಕತೆ-ಚರ್ಚೆ. ಗ್ರಾಮ್ ಲೆಕ್ಕಾಚಾರದಲ್ಲಿ ಮಗುವಿಗೆ ಆಹಾರವನ್ನು ನೀಡಿದ ಮಾತ್ರಕ್ಕೆ ಪೌಷ್ಟಿಕತೆ ಬಾರದು. ನಿತ್ಯ ಬದುಕಿನ ಆಹಾರದಲ್ಲೂ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಬೇಕು, 'ಎಚ್ಚರ'.

ಒಂದೆಡೆ ಶಾಲೆಗಳಲ್ಲಿ ನೀಡುತ್ತಿರುವ ಪವರ್ಪಾಯಿಂಟ್ ತರಗತಿ, ಮತ್ತೊಂದೆಡೆ ಅಪೌಷ್ಟಿಕ ಆಹಾರದ ಸುದ್ದಿ. ಈ ಮಧ್ಯೆ ಬಂಟ್ವಾಳ ತಾಲೂಕಿನ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪ್ರಣೀತವಾದ 'ಆಹಾರ ಸನದು' (ಆಹಾರ ನಿರೂಪ). ಆಹಾರದ ಕುರಿತು ವಿದ್ಯಾರ್ಥಿಗಳಿಗೆ ಅರಿವನ್ನು ಬಿಂಬಿಸಬೇಕೆನ್ನುವ ನನ್ನ ಆಲೋಚನೆಗೆ ಇನ್ನಷ್ಟು ಗರಿಗಳು ಮೂಡಿದುವು.

ಏನಿದು ಆಹಾರ ಸನದು? ಶಾಲಾ ಮಕ್ಕಳ ಆರೋಗ್ಯಕ್ಕಾಗಿ ಸಮತೋಲನ ಆಹಾರವನ್ನು ಒದಗಿಸುವ ಬದ್ಧತೆ. ಸೂಚಿತ ತರಕಾರಿಗಳಲ್ಲಿ ಕೆಲವನ್ನಾದರೂ ಶಾಲೆಯಲ್ಲಿ ನೀಡುವುದಲ್ಲದೆ, ಮನೆಯಲ್ಲೂ ಬಳಸುವ ಮತ್ತು ಬೆಳೆಯುವತ್ತ ಒತ್ತು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಸುಧಾಕರ್ ಅವರ ಮೆದುಳಮರಿಯಿದು. ತನ್ನ ವ್ಯಾಪ್ತಿಯ ಸರಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ನಿರೂಪವನ್ನು ಒದಗಿಸಿ, ಅನುಷ್ಠಾನದ ವರದಿ ಕೊಡುವಂತೆ ವಿನಂತಿಸಿದ್ದಾರೆ.

ಸನದಿನಲ್ಲಿರುವ ತರಕಾರಿಗಳು: ಒಂದೆಲಗ (ತಿಮರೆ), ನುಗ್ಗೆ ಸೊಪ್ಪು, ವಿಟಮಿನ್ಸೊಪ್ಪು, ನೆಲಬಸಳೆ, ಪಪ್ಪಾಯಿ, ಕೆಸುವಿನ ದಂಟು, ಕುಂಬಳಕಾಯಿ, ಬಾಳೆದಿಂಡು, ಕುಂಡಿಗೆ (ಪೂಂಬೆ, ಬಾಳೆಹೂ), ಚಕ್ತೆ ಸೊಪ್ಪು (ಸಜಂಕ್), ಬೇವಿನಸೊಪ್ಪು ಮತ್ತು ಹಲಸಿನ ಬೀಜ.

ಇವುಗಳ ಗುಣಗಳು: ಒಂದೆಲಗದಿಂದ ಬುದ್ಧಿಶಕ್ತಿವರ್ಧನೆ; ನುಗ್ಗೆ ಸೊಪ್ಪಿನಲ್ಲಿ ಹರಿತ್ತು-ಕಬ್ಬಿಣದ ಸತ್ವ ಮತ್ತು ಹಿಮೋಗ್ಲೋಬಿನ್ ಹೆಚ್ಚಳ, ವಿಟಮಿನ್ಸೊಪ್ಪು ಸೇವನೆಯಿಂದ ಶರೀರದ ಎಲ್ಲಾ ಘಟಕಗಳ ಸದೃಢತೆ, ನೆಲಬಸಳೆಯು ಪುಷ್ಟಿಗೆ, ಹಣ್ಣು ಪಪ್ಪಾಯಿಯಿಂದ ಮಲಬದ್ಧತೆ ದೂರ, ರಕ್ತಶುದ್ಧಿಗೆ ಕುಂಬಳಕಾಯಿ, ಬಾಳೆದಿಂಡಿನಲ್ಲಿ ನಾರಿನಂಶವಿರುವುದರಿಂದ ಕರುಳು ಶುದ್ಧಿಗೆ ಸಲೀಸು, ಶರೀರದ ಕ್ರಿಮಿದೋಷಗಳನ್ನು ಚಕ್ತೆಸೊಪ್ಪು ಹೋಗಲಾಡಿಸುತ್ತದೆ. ಜೀರ್ಣಕ್ರಿಯೆ ವೃದ್ಧಿಗೆ ಬೇವಿನಸೊಪ್ಪು. ಕೆಸುವಿನ ದಂಟು ಮತ್ತು ಹಲಸಿನ ಬೀಜ ಸೇರಿಸಿದ ಪದಾರ್ಥ ಊಟಕ್ಕೆ ಒಳ್ಳೆಯ ಕಾಂಬಿನೇಶನ್.

'ಇವೆಲ್ಲವನ್ನೂ ಹಿತವಾಗಿ, ಮಿತವಾಗಿ ಬಳಸಿದರೆ ಮಾತ್ರ ಆರೋಗ್ಯ. ಎಲ್ಲವನ್ನೂ ಎಲ್ಲಾ ದಿವಸ ಬಳಸಬಾರದು' ಎಂದು ಎಚ್ಚರಿಸುತ್ತಾರೆ ಹಿರಿಯ ಮೂಲಿಕಾ ತಜ್ಞೆ ಪಾಣಾಜೆಯ ಜಯಲಕ್ಷ್ಮೀ ವಿ. ದೈತೋಟ.

ಪ್ರತೀ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳಿಂದ ಸನದಿನ ಆಶಯವನ್ನು ಅನುಷ್ಠಾಸುವ ಪ್ರತಿಜ್ಞಾ ಸ್ವೀಕಾರದ ಮೂಲಕ ಚಾಲನೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಬಳಕೆ. ಮನೆಗಳಲ್ಲಿ ಜಾಗೃತಿ. ತಾಲೂಕಿನ ಕೆಲವು ಶಾಲೆಗಳು ಸನದನ್ನು ಅದ್ದೂರಿಯಾಗಿಯೇ ರಂಗಕ್ಕಿಳಿಸಿವೆ! ಜನಪ್ರತಿನಿಧಿಗಳು, ಆಡಳಿತ ಮಂಡಳಿಯ ಉತ್ಸುಕತೆ ಎದ್ದು ಕಾಣುತ್ತದೆ. ಈ ಉತ್ಸಾಹವು ಅನುಷ್ಠಾನದಲ್ಲೂ ಕಂಡರೆ ಯಶಸ್ಸು.

'ಕಳೆದ ವರುಷ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಇಲಾಖೆಯ ವತಿಯಿಂದ ಆಹಾರ ಪೌಷ್ಟಿಕತೆಯ ಪ್ರಾಮುಖ್ಯತೆಯನ್ನು ತಿಳಿಸಲಾಗಿತ್ತು. ಅದರಂತೆ ಡ್ರಾಯಿಂಗ್, ಚರ್ಚೆ, ಪ್ರಬಂಧಗಳನ್ನು ಶಾಲೆಗಳಲ್ಲಿ ನಡೆಸಲಾಗಿತ್ತು. ಅದರ ಮುಂದುವರಿದ ಭಾಗವೇ ಸನದು' ಎನ್ನುತ್ತಾರೆ ಸುಧಾಕರ್.

ಈಗಾಗಲೇ ಕೆಲವು ಶಾಲೆಗಳಲ್ಲಿ ಸನದಿನಂತೆ ತರಕಾರಿಗಳನ್ನು ಮಕ್ಕಳಿಗೆ ಉಣಿಸಲಾಗುತ್ತದೆ. ಉದಾ: ಅಳಿಕೆ ಸನಿಹದ ಮುಳಿಯ ಶಾಲೆ. ಇಲ್ಲಿನ ಅಧ್ಯಾಪಕ ಮುಳಿಯ ವೆಂಕಟಕೃಷ್ಣ ಶರ್ಮರ ತೋಟದ ತರಕಾರಿಗಳು ವರ್ಷಪೂರ್ತಿ ಬಿಸಿಯೂಟದೊಂದಿಗೆ ಮಕ್ಕಳ ಉದರ ಸೇರುತ್ತಿದೆ. ಅಂಗಡಿಯಿಂದ ತರಕಾರಿ ತಾರದೆ ಎರಡು ವರುಷಗಳೇ ಸಂದವು! ಹಲಸಿನ ಋತುವಿನಲ್ಲಿ ಹಲಸಿನ ಖಾದ್ಯ, ಹಣ್ಣು ಸೇವನೆ, ತರಕಾರಿಗಳು, ಬಾಳೆಯ ಎಲ್ಲಾ ಭಾಗಗಳು, ಗೆಡ್ಡೆಗಳು, ಸೊಪ್ಪುಗಳು.. ಎಲ್ಲವೂ 'ಫ್ಯೂರ್' ಸಾವಯವ. ತನ್ನ ತೋಟದಲ್ಲಿ ಶಾಲೆಗಾಗಿಯೇ ತರಕಾರಿ ಬೆಳೆಯಲು ಒಂದಷ್ಟು ಜಾಗ ಮೀಸಲು. ಇದು ನೂರ ಇಪ್ಪತ್ತೈದು ಮಕ್ಕಳ ಭಾಗ್ಯ, ಏನಂತೀರಿ?

'ನಾನು ತರಕಾರಿ ಕಟ್ಟಿನೊಂದಿಗೆ ಸ್ಕೂಟರಿನಲ್ಲಿ ಶಾಲೆಯಂಗಳದಲ್ಲಿ ಇಳಿದರೆ ಸಾಕು. ಇಂದಿನ ಬಿಸಿಯೂಟಕ್ಕೆ ಯಾವ ತರಕಾರಿ ಅಂತ ಮಕ್ಕಳು ಇಣುಕಿ ನೋಡುತ್ತಾರೆ' ಎನ್ನುತ್ತಾರೆ ಶರ್ಮ. ಮಕ್ಕಳಲ್ಲೂ ಆಸಕ್ತಿ ಕುದುರಿದೆ. ಹಲಸಿನ ಹಣ್ಣನ್ನು ತಂದರಂತೂ ಮಕ್ಕಳ ಬಾಯಿಲ್ಲಿ ಸವಿನೀರು!

ಈಚೆಗೆ ಸನದಿನ ಆರಂಭವನ್ನು ಮುಳಿಯ ಶಾಲೆ ವಿಶಿಷ್ಟವಾಗಿ ಆಚರಿಸಿತು. ಸೂಚಿತ ತರಕಾರಿಗಳನ್ನು ವಿದ್ಯಾರ್ಥಿಗಳೇ ಸಂಗ್ರಹಿಸಿ ಪ್ರದರ್ಶನಕ್ಕಿಟ್ಟಿದ್ದರು. ವರ್ಷವಿಡೀ ತಿಂದು ಸವಿದಿದ್ದ ಮಕ್ಕಳಿಗೆ ಇವನ್ನೆಲ್ಲಾ ಆಯಲು ಕಷ್ಟವಾಗಲೇ ಇಲ್ಲ. ಇಂತಹ ವಾತಾವರಣ ಎಲ್ಲಾ ಶಾಲೆಗಳಲ್ಲಿ ಬಂದುಬಿಟ್ಟರೆ ಸನದಿನ ಅನುಷ್ಠಾನ ಸುಲಭಸಾಧ್ಯ.

ಇಂದು ಶಿಕ್ಷಣದಲ್ಲಿ ಕೃಷಿ ದೂರ. ಸಾಂಸ್ಕೃತಿಕ ಪರಿಕಲ್ಪನೆಗಳು ಇಲ್ಲ. ವಾಹಿನಿಗಳ ರಸಪ್ರಶ್ನೆಗಳಲ್ಲಿ ಬರುವ ಕೃಷಿ ಸಂಬಂಧಿ ಮತ್ತು ಗಿಡ, ಹೂಗಳನ್ನು ಗುರುತಿಸುವ ಪ್ರಶ್ನೆಗಳಲ್ಲಿ ವಿದ್ಯಾರ್ಥಿಗಳು ಗೆಲ್ಲುವುದು ಕಡಿಮೆ. ಆದರೆ ಅಲ್ಲೋ ಇಲ್ಲೋ ಅಧ್ಯಾಪಕರ ಆಸಕ್ತಿಯಂತೆ ವಿದ್ಯಾರ್ಥಿಗಳಿಗೆ ಭತ್ತ, ತರಕಾರಿ ಪಾಠಗಳಾಗುತ್ತಿವೆ. ಪ್ರೌಢ ಶಾಲಾ ಹಂತದ ವರೆಗಾದರೂ ಒಂದು ಅವಧಿ ಕೃಷಿ ಕಲಿಕೆಗೆ ಬೇಕು. ಅದೂ ಥಿಯರಿಗಿಂತ, ಪ್ರಾಕ್ಟಿಕಲ್ಲಿಗೆ ಹೆಚ್ಚು ಒತ್ತು.

ಅಧಿಕಾರಿಗಳ ಸೂಚನೆಯನ್ನು ಶಾಲೆಗಳು ಪಾಲಿಸಿವೆ. ಅದು ಜನಗಣತಿ ದಾಖಲಾತಿಯಂತೆ ಆಗಬಾರದಲ್ವಾ! ಫಾರಂ ಫಿಲ್ ಮಾಡಿದಲ್ಲಿಗೆ ಮುಗಿಯಬಾರದು. ಇಲ್ಲಿ 'ಅನುಷ್ಠಾನ' ಮುಖ್ಯವಾಗುತ್ತದೆ. ಆರೋಗ್ಯದಾಯಕ ಆಹಾರದ ಗಾಢತೆಯ ಬಗ್ಗೆ ಅಧ್ಯಾಪಕರಿಗೆ ಪ್ರತ್ಯೇಕವಾದ ತರಬೇತಿ ಬೇಕಾಗಬಹುದು. ಈಗಾಗಲೇ ಕಾರ್ಯಾಗಾರ, ತರಬೇತಿ, ಸಭೆಗಳ ಭಾರದಿಂದ ಮಾನಸಿಕವಾಗಿ ಕುಗ್ಗಿದ ಅಧ್ಯಾಪಕರಿಗೆ 'ಸನದು' ಭಾರವಾಗದಂತೆ ಪ್ರತ್ಯೇಕ ವ್ಯವಸ್ಥೆ ಬೇಕಾಗಬಹುದು.

'ಬರುವ ಶಿಕ್ಷಣ ವರ್ಷದಿಂದ ಬಿಸಿಯೂಟಕ್ಕೆ ಒಂದು ಚಮಚವಾದರೂ ತಿಮರೆಯ ಚಟ್ನಿ ಮಕ್ಕಳಿಗೆ ಸಿಗಲೇಬೇಕು,' ಸುಧಾಕರ್ ಕನಸು. ಮಕ್ಕಳ ಆರೋಗ್ಯದತ್ತ ಕಾಳಜಿಯುಳ್ಳ, ಕಾಳಜಿಯನ್ನು ಅನುಷ್ಠಾನಗೊಳಿಸುವ ಸುಧಾಕರ್ ಅವರಂತಹ ಶಿಕ್ಷಣಾಧಿಕಾರಿಗಳು ಎಲ್ಲಾ ತಾಲೂಕಿನಲ್ಲೂ ರೂಪುಗೊಳ್ಳಲಿ.

Monday, February 6, 2012

ನಲಿವಿನ ಸುಳಿವಿಲ್ಲದ 'ಸುಗ್ಗಿ ಹಬ್ಬ'

ಮಕರ ಸಂಕ್ರಮಣದಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದೆ. ಈ ಭಾಗದಲ್ಲಿ 'ಸಂಕ್ರಾಂತಿ ಹಬ್ಬ' (ಸುಗ್ಗಿ ಹಬ್ಬ) ವಿಶೇಷ. ಹೊಲದಿಂದ ಕಟಾವ್ ಆಗಿ ಸಂಸ್ಕರಣೆಗೊಂಡ ಧಾನ್ಯಗಳು ಜಗಲಿ ಏರಿರುತ್ತವೆ. ಹಬ್ಬದ ಹೊತ್ತಿಗೆ ಯಾವುದೆಲ್ಲಾ ಕಾಳುಗಳು ಲಭ್ಯವಾಗುತ್ತವೋ ಅವೆಲ್ಲದರ ಬಳಕೆ. ಹೊಸ ಬೆಳೆಯ ಸ್ವಾಗತಕ್ಕೆ ಮನೆ-ಮನ ಸಜ್ಜು. ಊರಿಗೆ ಊರೇ ಬೆಸೆದುಕೊಳ್ಳುತ್ತವೆ.

ಯಾಕೋ ಗೊತ್ತಿಲ್ಲ, ನಾನು ಭೇಟಿ ನೀಡಿದ ಮೂರ್ನಾಲ್ಕು ಹಳ್ಳಿಗಳಲ್ಲಿ 'ಎಳ್ಳು-ಬೆಲ್ಲ'ದ 'ಹಳೆ ನೆನಪು'ಗಳ ಮಾತುಕತೆ ನಡೆಯುತ್ತಿದ್ದುವು. ಹಬ್ಬದ ವಾತಾವರಣ ಅಷ್ಟಕ್ಕಷ್ಟೇ. 'ಹಬ್ಬದ ಸಂಭ್ರಮ ಕಡಿಮೆಯಾಗಿದೆ. ಸಾಮುದಾಯಿಕ ಭಾವನೆ ಇಲ್ಲ. ಗುಂಪು ಸೇರಿ ಹಬ್ಬ ಮಾಡುವುದಕ್ಕಿಂತ ಖಾಸಗಿಯಾಗಿ ಆಚರಿಸುವುದತ್ತ ಜನರ ಒಲವು,' ಎಂದರು ಅಮ್ಮನಘಟ್ಟದ ಕೃಷಿಕ ಶಂಕರಪ್ಪನವರು.

ಎಳ್ಳು, ಬೆಲ್ಲ, ಕೊಬ್ಬರಿ, ಅವರೆಕಾಳು, ಶೇಂಗಾ ಮಿಶ್ರಿತ ಪಾಕದೊಂದಿಗೆ ಬಾಳೆಹಣ್ಣು, ಕಬ್ಬಿನ ತುಂಡನ್ನು ಜತೆಗಿಟ್ಟು ಅತಿಥಿಗಳಿಗೆ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ವಾಡಿಕೆ. ಇದನ್ನು ಸಿದ್ಧಪಡಿಸಲು ಹದಿನೈದು ದಿವಸ ಹಿಂದಿನಿಂದಲೇ ತಯಾರಿ. ಹೆಣ್ಮಕ್ಕಳ ಪಾಲುಗಾರಿಕೆ ಹೆಚ್ಚು. ಒಂದರ್ಥದಲ್ಲಿ 'ಹೆಣ್ಮಕ್ಕಳ ಹಬ್ಬ'ವಿದು. ಉತ್ತಮವಾದ ಕೊಬ್ಬರಿಯನ್ನು ಆಯ್ದು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿಟ್ಟುಕೊಳ್ಳುವುದು, ಬಿಳಿ ಎಳ್ಳನ್ನು ಶುಚಿಗೊಳಿಸುವುದು, ಉತ್ತಮ ಶೇಂಗಾ ಆಯ್ದುಕೊಳ್ಳುವುದು.. ಹೀಗೆ ಮನೆಮನೆಗಳಲ್ಲಿ ಸಂತಸ, ಸಂಭ್ರಮದ ಸಿದ್ಧತೆ.

ಸಂಕ್ರಾಂತಿ ದನಗಳ ಹಬ್ಬವೂ ಹೌದು. ಮನೆಯೊಡೆಯನ ಹೊಟ್ಟೆಪಾಡಿಗಾಗಿ ವರ್ಷವಿಡೀ ಅವನೊಂದಿಗೆ ದುಡಿದುದರ ಫಲವಾಗಿ ಧಾನ್ಯಗಳು ಮನೆ ಸೇರುತ್ತವೆ. ಹಾಗಾಗಿ ಅವುಗಳಿಗೆ ಕೃತಜ್ಞತೆ ಹೇಳುವ ಹಬ್ಬ. ಬೆಳಿಗ್ಗೆ ದನಗಳಿಗೆ ಸ್ನಾನ ಮಾಡಿಸಲು ಹೊಂತಕಾರಿಗಳ ದಂಡು ಸಜ್ಜಾಗುತ್ತದೆ. ಕೊಂಬುಗಳಿಗೆ ಎಣ್ಣೆ ಪಾಲಿಶ್. ಕಾಲಿಗೆ-ಕೊರಳಿಗೆ ಹೂಮಾಲೆ, ಅಲಂಕಾರ. ಧರಿಸಲು ಗೌನು. ಗಾಡಿಗಳಿಗೆ ಚಿತ್ತಾರ, ತೋರಣ. ಇದಕ್ಕಾಗಿ ತಾಮುಂದು, ನಾಮುಂದು ಎನ್ನುವ ಪೈಪೋಟಿ. ದನಗಳಿಗೆ ತಿನಿಸು (ಎಡೆ) ನೀಡಿದ ಬಳಿಕ ಮನೆ ಮಂದಿಯ ಸಿಹಿಭೋಜನ. ಹಬ್ಬದ ಈ ವರ್ಣನೆಯೀಗ ಬರೆದು ಓದುವುದಕ್ಕೆ ಖುಷಿ! ಕಾರಣ, ಎಳ್ಳು-ಬೆಲ್ಲವನ್ನು ತಟ್ಟೆಯಲ್ಲಿಟ್ಟು 'ತೆಕ್ಕೊಳ್ರಿ.. ಹಬ್ಬದ ಶುಭಾಶಯಗಳು' ಎಂಬ ವಿನಿಮಯಕ್ಕೆ ಮಾತ್ರ ಸೀಮಿತ. ಹಿಂದಿರುವ ಭಾವನೆಗಳು, ಶೃದ್ಧೆಗಳಿಗೆ ಮಸುಕು ಹಿಡಿದಿದೆ.
ಬಣ್ಣ ಬಣ್ಣದ ಹೊಸ ಬಟ್ಟೆಯುಟ್ಟು ಹಬ್ಬವನ್ನು ಆಚರಿಸುವ ಹೆಣ್ಮಕ್ಕಳ ಸಂಖ್ಯೆ ಹಳ್ಳಿಗಳಲ್ಲಿ ಕಡಿಮೆಯಾಗುತ್ತಿವೆ.
'ಹಳ್ಳಿ ಬಿಟ್ಟು ಹತ್ತಿರದ ಪಟ್ಟಣಗಳಿಗೆ ಹೆಣ್ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹೋಗವ್ರೆ. ಅಲ್ಲೇ ಸೆಟ್ಲ್ ಆಗವ್ರೆ. ಹಾಂಗಾಗಿ ಹಬ್ಬ ಮಾಡವ್ರು ಇಲ್ಲ' ಎಂಬ ಸತ್ಯವನ್ನು ಹೇಳುತ್ತಾರೆ ತೋವಿನಕೆರೆಯ ಪದ್ಮರಾಜು. ಹಳ್ಳಿ ಮನೆಗಳಲ್ಲಿ ತಂದೆ, ತಾಯಿ, ಅಜ್ಜ, ಅಜ್ಜಿ ಮಾತ್ರ ವಾಸವಿದ್ದು, ಮಿಕ್ಕುಳಿದವರು 'ಬೇರೆ ಬೇರೆ' ಕಾರಣಕ್ಕೆ ನಗರದ ಬಸ್ಸನ್ನು ಏರಿದ್ದಾರೆ, ಏರುತ್ತಿದ್ದಾರೆ. ಒಮ್ಮೆ ನಗರ ಸೇರಿದರೆ ಮುಗಿಯಿತು, ಮತ್ತೆಂದಿಗೂ ಅವರಿಗೆ ಹಳ್ಳಿ ಮಾರ್ಗ ದುರ್ಗಮ!. ಇದನ್ನು 'ಸಹಜ' ಅಂತ ಸ್ವೀಕರಿಸಬೇಕಾದ ಕಾಲಘಟ್ಟವಿದು.

ಎಳ್ಳು ಬೆಲ್ಲವನ್ನು ಮನೆಯಲ್ಲೇ ಮಾಡಿದರೆ ಅದಕ್ಕೆ ರುಚಿ-ಶುಚಿ ಜಾಸ್ತಿ. ನಮ್ಮದೇ ಬೆವರಿನ ಫಲವಲ್ವಾ, ಜತೆಗೆ ಹೆಮ್ಮೆ, ಅಭಿಮಾನವೂ ಅಧಿಕ. ನಗರದಲ್ಲಿ ರೆಡಿಮೇಡ್ ಆಗಿ ಅವೆಲ್ಲಾ ಸಿಗುತ್ತದೆ. ಬೇಕಾದರೆ ಇನ್ನೂ ಬಣ್ಣ ಬಣ್ಣದ ಒಳಸುರಿಗಳಲ್ಲಿ! ಅದರೊಂದಿಗೆ ಸಿಗುವ ಸಕ್ಕರೆ ಅಚ್ಚಿನ ಸಾಚಾತನಕ್ಕೆ ಈಚೆಗೆ ಪತ್ರಿಕೆಯೊಂದು ಬೆಳಕು ಚೆಲ್ಲಿತ್ತು. 'ಇಲ್ಲಾರಿ, ಅಕ್ಕ ಪಕ್ಕದ ಮನೆಯವರಿಗೆ ಕೊಡಲು ಬೇಕಲ್ವಾ, ಹಾಂಗಾಗಿ ಸಕ್ಕರೆ ಅಚ್ಚನ್ನು ತಂದುಬಿಟ್ವಿ' ಎನ್ನುವ ಅಮ್ಮಂದಿರು ಜಾಸ್ತಿ.

'ಮಗುವಿಗೆ ದನದ ಹಾಲು ನೀಡಲಿಕ್ಕಾದರೂ ಮನೆಮನೆಗಳಲ್ಲಿ ನಾಟಿ ಹಸುವನ್ನು ಸಾಕಲೇಬೇಕ್ರಿ. ಆದರೆ ದುರಾದೃಷ್ಟ ನೋಡಿ, ಹಾಲಿಗಾಗಿ ಪಾತ್ರೆ ಹಿಡಿದು ಬೆಳಿಗ್ಗೆ ಮನೆ ಮುಂದೆ ನಿಲ್ಲೋ ಪರಿಸ್ಥಿತಿ ಬಹುತೇಕ ಮಂದಿಯದು' ಹಳ್ಳಿ ಸಂಭ್ರಮದ ಇಳಿ ಲೆಕ್ಕವನ್ನು ಊಹಿಸಲು ಶಂಕರಪ್ಪನವರ ಈ ಮಾತು ಸಾಕು.

ಹಾಲಿಗಾಗಿ ಮಿಶ್ರತಳಿ ದನಗಳ ಸಾಕಣೆ ಹೆಚ್ಚುತ್ತಿದೆ. ಹೂಟೆಗಾಗಿ ಬಳಸುತ್ತಿದ್ದ ನಾಟಿ ಹಸುಗಳು ಅಜ್ಞಾತವಾಗುತ್ತಿವೆ. ಹಾಲು ನೀಡುವ ಹಸುಗಳ ಸಂಖ್ಯೆ ಕ್ಷೀಣಿಸುತ್ತಿವೆ. ಸಂಕ್ರಾಂತಿಯ ಪೂಜೆ, ಅಲಂಕಾರಗಳು ನಾಟಿ ಹಸುಗಳಿಗೆ ವಿನಾ, ದೈತ್ಯ ಸಂಕರ ತಳಿಗಳಿಗೆ ಅಲ್ಲವಲ್ಲ. ಹಬ್ಬದಲ್ಲಿ ಯಾವುದು ಪ್ರಧಾನವೋ, ಅದೇ ಮಾಯವಾಗಿದೆ. ದನಗಳು ಇವೆಯೆನ್ನಿ. ಅವುಗಳ ಸ್ನಾನಕ್ಕೆ ನೀರಿಲ್ಲ. ಕೆರೆಗಳು, ನಾಲೆಗಳು, ಕೊಳವೆಬಾವಿಗಳು ದಿನೇ ದಿನೇ ಬತ್ತುತ್ತಿವೆ.

ಹಿಂದೆಲ್ಲಾ ಧಾನ್ಯಗಳದು ಏಕಬೆಳೆ. ಈಗ ಹಾಗಲ್ಲ, ಹೆಚ್ಚಿನೆಡೆ ನಾಲೆ, ಕೊಳವೆಬಾವಿ, ಕೆರೆಯ ನೀರು ಸದಾ ಲಭ್ಯ. ವರ್ಷದ ಯಾವ ಋತುವಿನಲ್ಲಾದರೂ ಬೆಳೆ ತೆಗೆಯಬಹುದು. ಕೃಷಿ ಕ್ರಮ ಬದಲಾದುದರಿಂದ ಅದರ ಪರಿಣಾಮ ಹಬ್ಬಗಳ ಮೇಲೂ ಆಗದೆ ಇದ್ದೀತೇ?

ಟಿವಿ ಕೂಡಾ ಹಳ್ಳಿಯ 'ನಿಜ ನೆಮ್ಮದಿ'ಯನ್ನು ಕಸಿದಿದೆ. ಸೀರಿಯಲ್ಗಳಿಗೆ ನಾವು ಹೊಂದಿಕೊಂಡಿದ್ದೇವೆ. ಅದನ್ನು ನೋಡಿದ ಬಳಿಕವೇ ಹಬ್ಬವೋ, ಜಾತ್ರೆಯೋ. ಹಾಗಾಗಿ ಈ ಭಾಗದಲ್ಲಿ ಸಂಜೆ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಜನವೇ ಬರುವುದಿಲ್ಲ ಎನ್ನುತ್ತಾರೆ ದೊಡ್ಡಬಳ್ಳಾಪುರದ ನಟರಾಜ್.

ಸಂಕ್ರಾಂತಿಯಂದು ಸಂಜೆ ಹೊತ್ತು ಕಿಚ್ಚಿನ ಮೇಲೆ ದನಗಳನ್ನು ಹಾರಿಸುವುದು ಸಂಪ್ರದಾಯ. ಅವುಗಳ ಮೇಲಿರುವ ಉಣ್ಣಿ, ಕ್ರಿಮಿಗಳು ನಾಶವಾಗಲಿ ಎಂಬುದು ವೈಜ್ಞಾನಿಕ ಕಾರಣವಾದರೆ, ಅವುಗಳಿಗೆ ದೃಷ್ಟಿ ಬೀಳದಿರಲಿ - ಇದು ಎರಡನೇ ಕಾರಣ. ದನಗಳನ್ನು ಕಿಚ್ಚಿನ ಮೇಲೆ ಹಾಯಿಸುವ ಫೋಟೋ ತೆಗೆಯಲೆಂದು ಊರಿಡೀ ಸುತ್ತಾಡಿದ ನಟರಾಜ್ಗೆ ನಿರಾಶೆ. 'ಈ ಆಚರಣೆಯನ್ನೇ ಬಿಟ್ಟುಬಿಟ್ಟಿದ್ದಾರೆ ಸಾರ್' ಎನ್ನುತ್ತಾರೆ.

ಎರಡು ದಿವಸ ಹಳ್ಳಿ ಸುತ್ತಾಡಿದ ನನಗೆ ಹೊಸ ಬಟ್ಟೆಯುಟ್ಟು ಎಳ್ಳುಬೆಲ್ಲದೊಂದಿಗೆ ನೆರೆ ಮನೆಗೆ ಹೋಗುತ್ತಿದ್ದ ಬಾಲಪೋರಿಯೊಬ್ಬಳು ಮಾತ್ರ ಪ್ರತ್ಯಕ್ಷಳಾದಷ್ಟೇ. ಮತ್ತೆಲ್ಲಾ ರಾಜಧಾನಿಯ ಗಬ್ಬು ರಾಜಕೀಯದ ಸುದ್ದಿ-ವಿಮರ್ಶೆ. ಕೆಲವು ಹಳ್ಳಿಗಳಲ್ಲಿ ಹಬ್ಬಗಳೂ ಈಗಲೂ ಜೀವಂತ. ಎಲ್ಲೆಲ್ಲಿ ಶ್ರಮಿಕ ವರ್ಗದವರ ಸಂಖ್ಯೆ ಹೆಚ್ಚಿದೆಯೋ ಅಲ್ಲೆಲ್ಲಾ ಸಂಕ್ರಾಂತಿ ಬರೋಬ್ಬರಿ.

'ನಮ್ಮೂರಲ್ಲಿ ನಾಟಿ ತಳಿಗಳು ಇನ್ನೂ ಉಳಿದುಕೊಂಡಿವೆ. ಕಾರಣ, ಇಲ್ಲಿ ಬೀಜದ ಹೋರಿಗಳನ್ನು ಸಾಕುವವರಿದ್ದಾರೆ. ನಾಟಿ ಹಸುವಿಗೆ ಕೃತಕ ಗರ್ಭಧಾರಣೆ ಮಾಡಿದರೆ ಅದರಲ್ಲಿ ಹುಟ್ಟುವ ಕರುಗಳು ಯಾವ ತಳಿಯವು ಎನ್ನುವ ಹಾಗಿಲ್ಲ. ಹಾಗಾಗಿ ಇಲ್ಲಿ ಸಾಂಪ್ರದಾಯಿಕ ಕ್ರಮದಲ್ಲೇ ಗರ್ಭಧಾರಣೆ ಮಾಡಿಸಲಾಗುತ್ತದೆ' ಎಂಬ ಹೊಸ ಸುಳಿವನ್ನು ಕನಕಪುರದ ಸನಿಹದ ಹಾರೋಹಳ್ಳಿ ಗಣಪತಿ ಭಟ್ ನೀಡುತ್ತಾರೆ. ನಾಟಿ ತಳಿಗಳನ್ನು ಉಳಿಸುವ ಹಳ್ಳಿ ಜಾಣ್ಮೆ ನಿಜಕ್ಕೂ ಕಾಲದ ಅನಿವಾರ್ಯತೆ. ಎಲ್ಲೆಲ್ಲಿ ನಾಟಿ ಹಸುಗಳ ಸಂಖ್ಯೆ ಹೆಚ್ಚಿವೆಯೋ ಅಲ್ಲೆಲ್ಲಾ ಸುಗ್ಗಿ ಹಬ್ಬದ ಸಂಭ್ರಮವೂ ಹೆಚ್ಚು.

ಹಳ್ಳಿಗಳೂ ಬದಲಾಗುತ್ತಿದೆ. ಮೊಬೈಲ್ ಟವರ್ಗಳು ಮೇಲೇಳುತ್ತಲೇ ಇವೆ. ಯುವಕರನ್ನು ಮೋಹಿಸುವ ಮೊಬೈಲ್ ಕಂಪೆನಿಗಳ ಜಾಹೀರಾತು ಹಳ್ಳಿಯ ಚಹಾ ಅಂಗಡಿಯನ್ನು ಅಲಂಕರಿಸಿವೆ. ಅಗತ್ಯವಿದೆಯೋ ಇಲ್ಲವೋ ಎರಡೋ ಮೂರೋ ಮೊಬೈಲ್ಗಳು ಕೈಯಲ್ಲಿ ತಿರುಗಿಸುತ್ತಾ ಇರುವುದನ್ನು ಪ್ರತಿಷ್ಠೆ ಅಂತ ಸ್ವೀಕರಿಸಿದ್ದೇವೆ. ತಪ್ಪಲ್ಲ ಬಿಡಿ! ಮೊಬೈಲ್ ಅವರದೇ, ಅದಕ್ಕೆ ನೀಡಿದ ಹಣವೂ ಅವರದೇ. ಆದರೆ ಕೃಷಿಯ ಖುಷಿ ಬದುಕನ್ನು ಕಸಿಯುವಷ್ಟೂ ಆಧುನಿಕ ಸೌಲಭ್ಯಗಳು ನುಗ್ಗಿಬಿಟ್ಟರೆ ಹಳ್ಳಿಗಳ ಭವಿಷ್ಯ ಕರಾಳ. ಎಲ್ಲ ಹಳ್ಳಿಗಳೂ ಇದಕ್ಕಿಂತ ಹೊರತಿಲ್ಲ.

ಸಂಕ್ರಾಂತಿ ಯಾಕೆ, ಎಲ್ಲಾ ಹಬ್ಬಗಳಲ್ಲೂ ನಲಿವಿನ ಸುಳಿವಿಲ್ಲ. ಸಂತಸದ ವಿನಿಮಯವಿಲ್ಲ. ಭಾವನೆಗಳು ಎಂದೋ ಹೊರಟುಹೋಗಿವೆ. ಎಲ್ಲವೂ ವ್ಯವಹಾರ. 'ಕಾಸು ಕೊಟ್ಟರೆ ಆಯಿತು, ಎಲ್ಲವೂ ಸಿಗುತ್ತದೆ' ಎಂಬ ನಂಬುಗೆಯ ಅಡಿಗಟ್ಟಿನ ಮೇಲೆ ಬದುಕನ್ನು ಕಟ್ಟುತ್ತಿದ್ದೇವೆ. ಇಂತಹ ಸ್ಥಿತಿಯಿರುವಾಗ ಸಂಕ್ರಾಂತಿ, ಯುಗಾದಿ, ದೀಪಾವಳಿ ಹಬ್ಬಗಳು ಕ್ಯಾಲೆಂಡರಿನಲ್ಲಿ ಸದ್ದಿಲ್ಲದೆ ಮಲಗಿ ಎದ್ದೇಳುತ್ತಿರುತ್ತವೆ.

Friday, January 20, 2012

ಟೊಮೆಟೊ ಹೊಲದಲ್ಲಿ ವಿಷದ ಪಾಠ

ದಶಂಬರ ಕೊನೆಗೆ ರಾಜಧಾನಿಯ ಹೊರವಲಯದ ಯುವ ಕೃಷಿಕ ಶಿವಮಣಿಯವರಲ್ಲಿಗೆ ಭೇಟಿ ನೀಡಿದ್ದೆ. ಆಗಷ್ಟೇ ಒಂದೆರಡು ಕೊಯಿಲು ಮುಗಿದಿತ್ತು. ಮಾರುಕಟ್ಟೆಯಲ್ಲಿ ಒಳ್ಳೆ ದರ ಇಲ್ಲವೆಂಬ ಆತಂಕ ಒಂದೆಡೆ, ಔಷಧ (ವಿಷ) ಸಿಂಪಡಿಸಿದಷ್ಟೂ ಕೀಟಗಳ ಹಾವಳಿ ಜಾಸ್ತಿ ಎಂಬ ಚಿಂತೆ ಮತ್ತೊಂದೆಡೆ.

ಉತ್ತಮ ಗಾತ್ರದ ಟೊಮೆಟೋ ಕಾಯಿಗಳು ಬಳ್ಳಿಯಲ್ಲಿ ತೊನೆಯುತ್ತಿದ್ದುವು. ನಸುಕೆಂಪು ಬಣ್ಣಕ್ಕೆ ತಿರುಗಿ ಕಟಾವಿಗೆ ಹಸಿರುನಿಶಾನೆ ತೋರಿಸುತ್ತಿದ್ದುವು. 'ನಾಡಿದ್ದು ಕೊಯ್ದು ಮಾರುಕಟ್ಟೆಗೆ ಒಯ್ಬೇಕು ಸಾರ್. ಎಲ್ಲಾದರೂ ಹುಳ ಹುಪ್ಪಟೆ ಬಂದುಬಿಟ್ರೆ..! ಕಾಯಿ ಹಾಳಾಗುತ್ತೆ. ಮಾರ್ಕೆಟಲ್ಲಿ ರಿಜೆಕ್ಟ್ ಆಗುತ್ತೆ. ಮುಂಜಾಗ್ರತೆಗಾಗಿ ಔಷಧ ಹೊಡಿತಾ ಇದ್ದೀವಿ' ಎನ್ನುತ್ತಾ ಆ ಯುವಕ ತನ್ನ ಟೊಮೆಟೋ ತೋಟಕ್ಕೆ ಸ್ವಾಗತಿಸಿದರು.

ಹೌದಲ್ಲಾ.. ಘಾಟು ವಾಸನೆ! ನಾಲ್ಕೈದು ಬಟ್ಟೆಯ ಮಾಸ್ಕ್ ಧರಿಸಿ ಔಷಧ (ವಿಷ) ಸಿಂಪಡಿಸುತ್ತಿದ್ದರು. ಸಂಜೆ ಆರೂವರೆಯಾದರೂ ಒಂದೇ ಒಂದು ಸೊಳ್ಳೆ ನೋಡಲು ಸಿಕ್ಕಿಲ್ಲ, ಕಡಿದಿಲ್ಲ! ಟೊಮೆಟೊ ಸಾಲುಗಳ ಮಧ್ಯೆ ತಿರುಗಾಡುತ್ತಿದ್ದಾಗ ನೀರವ/ನೀರಸ ಅನುಭವ. ಸಿಂಪಡಣೆಯ ಮಂಜುಹನಿಗಳಿಂದಾಗಿ ಸರಣಿಕೆಮ್ಮು! 'ತೊಂದ್ರೆಯಿಲ್ಲ ಸಾರ್, ಸ್ವಲ್ಪ ಹೊತ್ತಲ್ಲಿ ಸರಿ ಹೋಗುತ್ತೆ' ಎನ್ನುತ್ತಾ, 'ಎಷ್ಟು ಔಷಧ ಹೊಡೆದರೂ ಪ್ರಯೋಜನವಿಲ್ಲ ಸಾರ್, ಕೀಟ ಬಾಧೆ ಇದ್ದೇ ಇದೆ' ಎಂಬ ನಿರಾಶೆ ಅವರಲ್ಲಿತ್ತು.

ಟೊಮೆಟೊ ಸಾಲುಗಳ ಮಧ್ಯೆ ಎಲ್ಲೆಂದರಲ್ಲಿ ವಿಷದ ಕ್ಯಾನ್ಗಳು, ಸ್ಯಾಚೆಟ್, ಪ್ಲಾಸ್ಟಿಕ್ ಪೊಟ್ಟಣಗಳು ಸಿಂಪಡಣೆಗೆ ಸಾಕ್ಷಿಗಳಾಗಿ ಬಿದ್ದಿದ್ದವು. ಬಳ್ಳಿಗಳಿಗೆ ಆಧಾರವಾಗಿ ಊರಿದ್ದ ಕಂಬಗಳಿಗೆ ಬಳಸಿದ ವಿಷಗಳ ಪ್ಲಾಸ್ಟಿಕ್ ಪ್ಯಾಕೆಟ್ಗಳ ಟೊಪ್ಪಿಗೆ! 'ಇಷ್ಟೇ ಅಲ್ಲ ಸಾರ್, ಮೂಟೆಗಟ್ಟಲೆ ಇದೆ. ಗುಜರಿಯವರು ಒಯ್ಯುತ್ತಾರೆ' ಎಂದು ಬಳಸಿ ಎಸೆದ ವಿಷದ ಪ್ಲಾಸ್ಟಿಕ್ ತ್ಯಾಜ್ಯಗಳತ್ತ ಬೆರಳು ತೋರಿದರು.
ನಾಟಿಯಿಂದ ಕೊಯ್ಲು ತನಕ ಎಂಟರಿಂದ ಹತ್ತು ಸಲ ಸಿಂಪಡಣೆ ಬೇಕಂತೆ. ಮುಂಜಾಗ್ರತೆಗಾಗಿ ಇನ್ನೆರಡು ಸಲ ಬೋನಸ್! ಏನಿಲ್ಲವೆಂದರೂ ತನ್ನ ಒಂದೂವರೆಯೆಕ್ರೆ ಟೊಮೆಟೋ ಬೆಳೆಗೆ ಇಪ್ಪತ್ತು ಸಾವಿರಕ್ಕೂ ಮಿಕ್ಕಿ ಸಿಂಪಡಣೆಗೆ ವೆಚ್ಚವಾಗುತ್ತದೆ!

'ಅಲ್ಲಣ್ಣಾ, ಇಷ್ಟೆಲ್ಲ ಖರ್ಚು ಮಾಡಿ ಬೆಳೆ ತೆಗೆದರೂ ನಿಮ್ಗೆ ಗಿಟ್ಟುತ್ತಾ?' ಪ್ರಶ್ನಿಸಿದೆ. 'ಆರೇಳು ವರುಷದಿಂದ ಟೊಮೆಟೊ ಕೃಷಿ ಮಾಡ್ತಾ ಇದ್ದೀವಿ. ಅದಕ್ಕಿಂತ ಹಿಂದೆ ರಾಗಿ ಬೆಳಿತಿದ್ವಿ. ಯಾಕೋ ಸಾರ್ ಟೊಮೆಟೊ ಸಹಜವಾಗಿ ಬೆಳೆಯುವುದಿಲ್ಲ. ಕೀಟ, ಬೆಂಕಿರೋಗ ಬರುತ್ತೆ. ಔಷ್ದ ಸ್ಪ್ರೇ ಮಾಡದೆ ಸಾಧ್ಯವಿಲ್ಲ. ಔಷ್ದ ಅಂಗಡಿಯವರು ಸಿಂಪಡಣೆಯ ಪ್ರಮಾಣ ಹೇಳ್ತಾರೆ. ಆದರೆ ಅಷ್ಟು ಸಿಂಪಡಿಸಿದರೆ ಕೀಟಗಳಿಗೆ ಕ್ಯಾರೇ ಇಲ್ಲ! ಹಾಗಾಗಿ ನಮ್ದೇ ಪ್ರಮಾಣ.. ಹೇಳುತ್ತಾ ಹೋದರು.

ಸಾಮಾನ್ಯವಾಗಿ ಇಲ್ಲಿ ವಿಷ ಸಿಂಪಡಿಸದೆ ಕೃಷಿ ಮಾಡಲು ಸಾಧ್ಯವೇ ಇಲ್ಲ ಎಂಬಂತಹ ನಂಬುಗೆ. ಇದಕ್ಕೆ ಕರಾವಳಿಯೂ ಹೊರತಲ್ಲ ಬಿಡಿ. ಆದರೆ ಸಿಂಪಡಣೆ ಎಷ್ಟು ಅನಿವಾರ್ಯ? ಪ್ರಮಾಣ ಎಷ್ಟು? ಕೀಟಗಳು ನಿಯಂತ್ರಣವಾಗುವುದಿಲ್ಲ ಅಂತಾದ್ರೆ ಸಿಂಪಡಿಸುವ ಔಷಧ ಯಾ ವಿಷದ ಸಾಚಾತನ ಎಷ್ಟು? ಮೊದಲಾದ ಸಾಮಾನ್ಯ ಜ್ಞಾನದ ಕೊರತೆ ಎದ್ದುಕಾಣುತ್ತದೆ.

ತಮ್ಮದೇ ಪ್ರಮಾಣದ ಡೋಸೇಜ್ನ್ನು ಫಿಕ್ಸ್ ಮಾಡಿಕೊಂಡು ಸಿಂಪಡಣೆ ಮಾಡುತ್ತಾರೆ. ಕೇವಲ ಟೊಮೆಟೋ ಪಡೆಯುವ ಒಂದೇ ಉದ್ದೇಶಕ್ಕಾಗಿ. ಆರೋಗ್ಯದ ಕುರಿತು ಯಾವುದೇ ಕಾಳಜಿಯಿಲ್ಲದಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತದೆ. 'ಏನೂ ಆಗೊಲ್ಲ ಸಾರ್, ನಾವು ಬದುಕಿಲ್ವಾ' ಎಂಬ ಆತ್ಮವಿಶ್ವಾಸ.

ವಿಷದ ಡಬ್ಬಗಳನ್ನು, ಪೊಟ್ಟಣಗಳನ್ನು ಕಸ ತುಂಬಿಸಿದಂತೆ ತುಂಬಿಸಿಟ್ಟು 'ಗುಜರಿಯವರಿಗೆ ಮಾರ್ತೇವೆ' ಅನ್ನುವಾಗಲೇ ಅವರನ್ನಾವರಿಸಿದ 'ವಿಷದ ಗಾಢತೆ'ಯ ಶೂನ್ಯತೆ ತಿಳಿದುಬಿಡುತ್ತದೆ. 'ಫೋನ್ನಲ್ಲಿ ಆರ್ಡರ್ ಮಾಡಿದರೆ ಸಾಕು, ಒಂದು ಗಂಟೆಯೊಳಗೆ ಅಂಗಡಿಯವರು ಹೊಲಕ್ಕೆ ಸಪ್ಲೈ ಕೊಡ್ತಾರೆ. ಹಣ ಮತ್ತೆ ಕೊಟ್ಟರಾಯಿತು' ಎನ್ನುವಾಗ ಈ ತರುಣನ ಮುಖ ಅರಳುತ್ತದೆ. ಯಾಕೆಂದರೆ ವಿಷ ಸಪ್ಲೈ ಮಾಡುವ ನಮ್ಮ ವ್ಯವಸ್ಥೆ ಅಷ್ಟು ಸಾಚಾ!

ನಿಮ್ಮ ಅಡುಗೆ ಮನೆಯಲ್ಲಿ ಅಕ್ಕಿ ಮುಗಿದಿದೆ. ದವಸ ಧಾನ್ಯ ಖಾಲಿಯಾಗಿದೆ. ಅಂಗಡಿಯವರಿಗೆ ಫೋನ್ ಮಾಡಿ. ಅವರಲ್ಲಿ ಮನೆ ಬಾಗಿಲಿಗೆ ಅಕ್ಕಿ ಮೂಟೆಯನ್ನು, ಧಾನ್ಯಗಳನ್ನು ತಲುಪಿಸುವ ವ್ಯವಸ್ಥೆ ಇದೆಯೇ? ಇಲ್ಲ, ಇಲ್ಲವೇ ಇಲ್ಲ. ಇದ್ದಿದ್ದರೆ.. ನಾವೇ ಭಾಗ್ಯಶಾಲಿಗಳು.

'ಹತ್ತು ವರುಷದ ಹಿಂದೆ ಈ ಜಾಗದಲ್ಲಿ ಮನೆ ಕಟ್ಟಿಕೊಳ್ಳುವ ಹೊತ್ತಿಗೆ ಮನೆತುಂಬಾ ಗುಬ್ಬಚ್ಚಿಗಳಿದ್ದುವು. ಮರಗಳಲ್ಲಿ ಹಕ್ಕಿಗಳು ಗೂಡು ಕಟ್ಟುತ್ತಿದ್ದುವು. ಈಗವು ನೋಡೋಕೆ ಸಿಕ್ತಾ ಇಲ್ಲ, ಗುಬ್ಬಚ್ಚಿ ಬಿಡಿ, ಕಾಗೆನೂ ಇಲ್ಲ' ಎಂದು ಶಿವಮಣಿಯ ಅಮ್ಮ ಜ್ಞಾಪಿಸಿಕೊಂಡರು. ಹೌದು. ಗುಬ್ಬಚ್ಚಿಗಳು ಕಾಣೆಯಾಗಿವೆ, ಜೇಡಗಳು ಅಜ್ಞಾತವಾಗುತ್ತಿವೆ. ತಿಥಿಯ ದಿವಸ ಮನೆ ಮುಂದೆ ವಕ್ಕರಿಸುತ್ತಿದ್ದ ಕಾಗೆಗಳೂ ನಾಪತ್ತೆ! ಕಾರಣ, ಬೆಳೆಗಳಿಗೆ ಎರಚುವ ವಿಷಗಳು.
ರಾಸಾಯನಿಕ ಗೊಬ್ಬರ-ವಿಷಗಳ ಅರಿವನ್ನು ನೀಡದ ಆಡಳಿತ ವ್ಯವಸ್ಥೆ, ಗಾಢತೆಯನ್ನು ವಿವರಿಸದ ವಿಷದ ಅಂಗಡಿಗಳು. ಅಗತ್ಯಗಳ ಮಾಹಿತಿಗಳನ್ನು ನೀಡದ ಇಲಾಖೆ.. ಇವುಗಳ ಮಧ್ಯೆ ಹಿಪ್ಪೆಯಾಗುವುದು ಶಿವಮಣಿಯಂತಹ ಕೃಷಿಕರು. 'ಪ್ರತೀ ಸಲ ಸಿಂಪಡಿಸುವಾಗಲೂ ಡೋಸೇಜ್ ಹೆಚ್ಚು ಮಾಡಲೇ ಬೇಕು' ಎಂಬುದನ್ನು ಅವರಿಗೆ ಅನುಭವ ಕಲಿಸಿಕೊಟ್ಟಿರುತ್ತದೆ.

ಇವರ ಟೊಮೆಟೊ ತೋಟದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ಬಾಬಣ್ಣ ಅವರ ಟೊಮೆಟೊ ಕೃಷಿ. ಪೂರ್ತಿ ವಿಷ ರಹಿತ! ಐದಾರು ವರುಷದಿಂದ ಯಾವುದೇ ಔಷಧ/ವಿಷವನ್ನು ಸಿಂಪಡಿಸದೆ ಬಾಬು ಉತ್ತಮ ಗಾತ್ರದ, ರುಚಿಯ ಟೊಮೆಟೊವನ್ನು ಪಡೆಯುತ್ತಿದ್ದಾರೆ.

'ಹೌದು ಸಾರ್, ಅವರ ಕೃಷಿ ಚೆನ್ನಾಗಿದೆ. ಶ್ರಮಪಟ್ಟು ದುಡಿಯುತ್ತಾರೆ' ಬಾಬಣ್ಣ ಅವರನ್ನು ಶಿವಮಣಿ ಅಭಿನಂದಿಸುವಾಗ ನನ್ನೊಳಗೆ ದ್ವಂದ್ವ! ಅರೆ, ಅಂಗೈಯಲ್ಲೇ ಅಮೃತವಿದೆ, ಆದರೂ ವಿಷವನ್ನು ಸ್ವೀಕರಿಸುವ ಮನಸ್ಥಿತಿ. ಇವರ ಕೃಷಿಯನ್ನು ನೋಡಿಯೂ ನೋಡದಂತಿರುವ ಕಣ್ಣುಗಳು. ಗ್ರಹಿಸದ ಮನಸ್ಸುಗಳು. 'ಅವರಂತೆ ಕೃಷಿ ಮಾಡಲು ಧೈರ್ಯ ಬಂದಿಲ್ಲ ಸಾರ್' ಸತ್ಯವನ್ನು ಹೇಳುತ್ತಾರೆ.

ಟೊಮೆಟೊಗೆ ಬರುವ ಕೀಟ, ಹುಳಗಳನ್ನು ಬಾಬಣ್ಣ ವಿವಿಧ ಸೊಪ್ಪುಗಳಿಂದ ತಯಾರಿಸಿದ ಬಯೋಡೈಜಸ್ಟರ್ ದ್ರಾವಣ ಸಿಂಪಡಿಸುವ ಮೂಲಕ ನಿಯಂತ್ರಿಸುತ್ತಿದ್ದಾರೆ. ಭೂಮಿಗೆ ರಾಸಾಯನಿಕ ಗೊಬ್ಬರವನ್ನು ಸುರಿದಿಲ್ಲ. ಕುರಿಹಿಕ್ಕೆ, ಕೊಟ್ಟಿಗೆ ಗೊಬ್ಬರ ನೀಡಿದ್ದಾರೆ. ಇವರ ಟೊಮೆಟೋ ಮಾತ್ರವಲ್ಲ, ಬೆಂಡೆ, ಬಾಳೆ, ಅವರೆ, ರಾಗಿ.. ಮೊದಲಾದ ಕೃಷಿಗಳು ಕೃಷಿಕರಲ್ಲಿ ಆಶ್ಚರ್ಯ ಮೂಡಿಸಿದ್ದರೂ, ಯಾರೂ ಆ ದಾರಿಯಲ್ಲಿ ಸಾಗುವುದು ಬಿಡಿ, ನೋಡುವುದೂ ಇಲ್ಲ.

ಇವರು ತರಕಾರಿಗಳನ್ನು ಸೈಕಲ್ನಲ್ಲಿಟ್ಟು ಮನೆಮನೆಗೆ ಒಯ್ಯುತ್ತಾರೆ. ನೋಡಲು ತಾಜಾ ಇರುವುದರಿಂದ ಬಹುಬೇಗ ಬುಟ್ಟಿ ಖಾಲಿ. ಸೈಕಲ್ನಲ್ಲಿ 'ಇದು ಸಾವಯವ ತರಕಾರಿ' ಅಂತ ಬೋರ್ಡೋ ಹಾಕಬಹುದಲ್ವಾ ಅಂತ ಒಣ ಸಲಹೆ ನೀಡಿದೆ. 'ನಾನೇ ಓದ್ಬೇಕಷ್ಟೇ' ಎಂದು ನಕ್ಕರು.

'ಇಲ್ಲಿ ಸಾವಯವ ಅನ್ನುವ ಕಲ್ಪನೆಯೇ ದೂರ ಸಾರ್, ತರಕಾರಿಗಳು ನೋಡಲು ಚೆಂದವಾಗಿರಬೇಕು. ತಾಜಾ ಆಗಿರಬೇಕು. ಅವುಗಳು ವಿಷದಲ್ಲಿ ಮಿಂದವುಗಳೋ, ಅಲ್ಲವೋ ಎಂಬುದು ಜನರಿಗೆ ಬೇಕಾಗಿಲ್ಲ. ಅವುಗಳ ಪರಿಣಾಮದತ್ತ ಲಕ್ಷ್ಯವಿಲ್ಲ. ರೋಗ ಬಂದರೆ ಆಸ್ಪತ್ರೆ ಇದೆಯಲ್ವಾ' ಎನ್ನುತ್ತಾರೆ ಜತೆಗಿದ್ದ ಕೃಷಿ ಪತ್ರಕರ್ತ ಗಣಪತಿ ಭಟ್ ಹಾರೋಹಳ್ಳಿ.

ಕೃಷಿಕರಲ್ಲಿ ಅರಿವಿನ ಕೊರತೆಯಿದೆ, ನಿಜ. ಆದರೆ ಗ್ರಾಹಕರಲ್ಲೂ ಕೂಡಾ ವಿಷರಹಿತವಾದ ಆಹಾರವನ್ನು ಸ್ವೀಕರಿಸುವ ಪ್ರಜ್ಞೆ ಮೂಡಬೇಕಾದುದು ಕಾಲದ ಅನಿವಾರ್ಯತೆ. ವಿಷರಹಿತವಾಗಿ ಬೆಳೆದ ತರಕಾರಿಗೆ ಗ್ರಾಹಕ ಬೇಡಿಕೆ ಮುಂದಿಟ್ಟಾಗ ಕೃಷಿಕ ಬೆಳೆಯಲು ಅನಿವಾರ್ಯವಾಗಿ ಪ್ರಯತ್ನ ಮಾಡದೇ ಇದ್ದಾನೇ? ಅವನು ಯಶಸ್ವಿಯಾಗುತ್ತಾನೋ ಇಲ್ಲವೋ ಎಂಬುದು ಬೇರೆ ಮಾತು.
ಸುತ್ತೆಲ್ಲಾ ವಿಷ ಸಿಂಪಡಣೆಯ ಕೃಷಿಯಿದ್ದರೂ, ಅವರ ಮಧ್ಯೆ ವಿಷರಹಿತವಾಗಿ ಟೊಮೆಟೊದಂತಹ ಬೆಳೆಯನ್ನು ಮಾಡಬಹುದು ಎಂದು ತೋರಿಸಿದ ಬಾಬಣ್ಣ ಅವರ ದಾರಿ ಇತರರೂ ತುಳಿಯದೇ ಇದ್ದಾರೆ?

ಎಲ್ಲಿಯವರೆಗೆ ವಿಷ ರಹಿತ ಆಹಾರದ ಬೇಡಿಕೆಗೆ ಗ್ರಾಹಕ ಜಾಗೃತನಾಗಿರುವುದಿಲ್ಲವೋ ಅಲ್ಲಿಯ ತನಕ ವಿವಿಧ ಬಣ್ಣಗಳಲ್ಲಿ, ರೂಪಗಳಲ್ಲಿ ಧಾಂಗುಡಿಯಿಡುತ್ತಿರುವ ವಿಷ ತಯಾರಿಕ ಕಂಪೆನಿಗಳು ರೈತರ ಹೊಲದಲ್ಲಿ ಬಿಡಾರ ಮಾಡುತ್ತಿರುತ್ತವೆ! (ಇಲ್ಲಿ ಕೃಷಿಕರಿಬ್ಬರ ಹೆಸರು ಮಾತ್ರ ಬದಲಾಯಿಸಿದೆ)

ನನಗಂತೂ ಟೊಮೆಟೊ ಹೊಲದಲ್ಲಿಷ್ಟೂ ಹೊತ್ತು ಹೊಸ ಹೊಸ ಪಾಠಗಳ ಅನುಭವ. 'ಸಾರ್. ದೊಡ್ಡ ಸೈಜಿನದು ಕೊಯಿದು ಕೊಡ್ತೇನೆ. ಮನೆಗೆ ಒಯ್ಯಿರಿ ಸಾರ್. ಸಾಂಬಾರು ಮಾಡಿ' ಎಂದು ಶಿವಮಣಿ ಟೊಮೆಟೊ ಪ್ಯಾಕೆಟ್ ನೀಡಿದಾಗ ನಿಜಕ್ಕೂ ಕೈ ನಡುಗಿತು!

Saturday, December 31, 2011

ಭವಿಷ್ಯದ ಆಪತ್ತುಗಳಿಗೆ ವರ್ತಮಾನದ ಬೆಳಕಿಂಡಿ

ಅಂದು ಅಡಿಕೆ ಕೊಯ್ಲು ದಿನ. ಕಷ್ಟಪಟ್ಟು 'ಹುಡುಕಿ ತಂದ' ನಾಲ್ಕೈದು ಮಂದಿ ಅಡಿಕೆ ಕೊಯ್ಯುವವರು ಮರ ಏರಿದ್ದಾರೆ. ಉಳಿದ ಸಹಾಯಕರು ಗೊನೆ ಕೀಳುತ್ತಿದ್ದಾರೆ. ಬಿದ್ದ ಅಡಿಕೆ ಗೊನೆಯನ್ನು ಹೆಕ್ಕಿ ಕೈಗಾಡಿಗಳಿಗೆ ತುಂಬಿ, ಅಂಗಳಕ್ಕೆ ಸಾಗಾಟ. ಅಲ್ಲಿ ಗೊನೆಯಿಂದ ಅಡಿಕೆಯನ್ನು ಕಿತ್ತು ಗೋಣಿಗಳಿಗೆ ತುಂಬುವ ಕೆಲಸ ನಡೆಯುತ್ತಿದೆ. ಮತ್ತೊಂದೆಡೆ ಗೋಣಿಗಳು ಲಾರಿಗೆ ಲೋಡ್ ಆಗಿ 'ಅಡಿಕೆ ಮಿಲ್' ಸೇರುತ್ತಿವೆ.

ದೊಡ್ಡ ಶಾಖ ಪೆಟ್ಟಿಗೆಯ (ಡ್ರೈಯರ್) ಬಾಯೊಳಗೆ ಅಡಿಕೆ ತೂರುತ್ತಿದ್ದಾರೆ. ಮತ್ತೊಂದೆಡೆ ಈಗಾಗಲೇ ನಾಲ್ಕೈದು ದಿವಸದ ಹಿಂದೆ ತೂರಿದ ಅಡಿಕೆಯನ್ನು ಹೊರ ತೆಗೆಯುತ್ತಿದ್ದಾರೆ. ಅದನ್ನು ಅಡಿಕೆ ಸುಲಿ ಯಂತ್ರದ ಹಾಪರ್ಗೆ ಹಾಕುತ್ತಿದ್ದಾರೆ. ಸುಲಿದ ಅಡಿಕೆ ಮತ್ತು ಸಿಪ್ಪೆ ಬೇರೆ ಬೇರೆಯಾಗಿ ಸಂಗ್ರಹವಾಗುತ್ತಿದೆ. ಸುಲಿದ ಅಡಿಕೆ ಜೀಪ್ಗೆ ಲೋಡ್ ಆಗುತ್ತಿದೆ. ಚಾಲಕನ ಆಸನದಲ್ಲಿ ಕುಳಿತ ಯಜಮಾನನ ಮುಖದಲ್ಲಿ ನಗು. ಸುಲಿದ ಅಡಿಕೆಯ ಗೋಣಿಗಳು ಜಗಲಿಯಲ್ಲಿ ಪೇರಿಸಲ್ಪಡುತ್ತಿವೆ. 'ಹೋ.. ಇಂದು ಕಿಲೋಗೆ ನೂರೈವತ್ತು ಅಲ್ವಾ. ಒಂದು ವಾರ ಕಾಯೋಣ, ಇನ್ನೂರಾಗಬಹುದು' ಎನ್ನುತ್ತಾ ವೀಳ್ಯತಟ್ಟೆಯನ್ನು ಎಳೆದುಕೊಳ್ಳುತ್ತಾನೆ ಆ ಯಜಮಾನ.

ಸದ್ಯಕ್ಕೆ ಮೇಲಿನದು ಒಂದು ಸುಂದರ ಕಲ್ಪನೆ ಮಾತ್ರ. ಅಡಿಕೆ ಕೃಷಿರಂಗದಲ್ಲಿ ಇಂತಹ ಒಂದಷ್ಟು 'ಶ್ರಮ ಉಳಿಸುವ ವ್ಯವಸ್ಥೆ ಬಂದರೆ ಅದೆಷ್ಟು ಅನುಕೂಲ. ಏನಂತೀರಿ? ಮಿಲ್ನಲ್ಲಿ ಬೇಕಾದಾಗ ಭತ್ತವನ್ನು ಅಕ್ಕಿ ಮಾಡಬಹುದು. ಕಿರುಧಾನ್ಯಗಳನ್ನು ಸಂಸ್ಕರಿಸಬಹುದು. ಧಾನ್ಯಗಳನ್ನು ಪುಡಿಗಟ್ಟಬಹುದು. ಅಡಿಕೆಗೂ 'ಮಿಲ್' ಇರುತ್ತಿದ್ದರೆ? ಸಂಸ್ಕರಣೆ ಎಷ್ಟು ಸುಲಭವಲ್ವಾ. ಅಡಿಕೆ ಒಣಗಿಸಲು ಅಂಗಳ ಸಿದ್ಧವಾಗಬೇಕಾಗಿಲ್ಲ, ಐವತ್ತು ದಿನ ಅಡಿಕೆಗೆ ಬಿಸಿಲು ಸ್ನಾನದ ಆವಶ್ಯತೆಯಿರಲಿಲ್ಲ..

ಇಂತಹ ಒಂದು ವ್ಯವಸ್ಥೆಯ ಅಗತ್ಯವನ್ನು ಕೃಷಿಕ ಮಂಚಿ ಶ್ರೀನಿವಾಸ ಆಚಾರ್, ಈಚೆಗೆ ಮಂಗಳೂರಿನಲ್ಲಿ ಕ್ಯಾಂಪ್ಕೋ ಆಯೋಜಿಸಿದ 'ಅಡಿಕೆ ಕೃಷಿ ಯಾಂತ್ರೀಕರಣ' ಕಾರ್ಯಾಗಾರದಲ್ಲಿ ಮುಂದಿಟ್ಟಾಗ ಎಲ್ಲರೂ ತಲೆತೂಗಿದವರೇ!

ಬದುಕಿನ ಒಂದು ಹಂತದಲ್ಲಿ ಕೃಷಿಯು ಸಮಸ್ಯೆಯಾಗಿಲ್ಲ. ಬದಲಾದ ಕಾಲಘಟ್ಟದಲ್ಲಿ 'ಕೃಷಿಯೇ ಒಂದು ಸಮಸ್ಯೆ' ಅಂತ ನಮ್ಮ ಮಾತುಕತೆಗಳಲ್ಲಿ, ಸಭೆಗಳಲ್ಲಿ ಬಿಂಬಿಸಲಾಗುತ್ತಿದೆ. ವಾಸ್ತವ ಹೌದಾದರೂ ಸಮಸ್ಯೆಗೆ 'ಸಮಸ್ಯೆಯ ವೈಭವೀಕರಣ' ಪರಿಹಾರವಲ್ಲ. ಪರ್ಯಾಯವಾಗಿ ಯೋಚಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜರುಗಿದ ಕಾರ್ಯಾಗಾರ ಹೊಸ ಹೊಳಹುಗಳನ್ನು ತೆರೆದಿಟ್ಟಿತು.

ಇಂದೆಲ್ಲಾ ಸಣ್ಣ ಕುಟುಂಬ. ದೊಡ್ಡ ಮನೆಗಳಿದ್ದರೂ ಒಳಗಿರುವವರು ಇಬ್ಬರೋ, ಮೂವರೋ. ಮನೆಯಿಂದ ಪಂಪುಮನೆಗೆ ಕಿಲೋಮೀಟರ್ ದೂರ. ಕೈಕೊಡುವ ವಿದ್ಯುತ್ನಿಂದಾಗಿ ಆಗಾಗ್ಗೆ ಪುಂಪು ಮನೆಗೆ ಓಡುವ ಯೋಗ! ಇದನ್ನು ಸಮಸ್ಯೆ ಅಂತ ಸ್ವೀಕರಿಸುವ ಬದಲು ಮನೆಯಿಂದಲೇ ಮೊಬೈಲ್ ಮೂಲಕ ಪಂಪನ್ನು ಚಾಲೂ ಮಾಡುವ, ನಿಲ್ಲಿಸುವ ವ್ಯವಸ್ಥೆ ಇರುತ್ತಿದ್ದರೆ? ಈಗಾಗಲೇ ಪ್ರಾಯೋಗಿಕವಾಗಿ ಮೊಬೈನಿಂದ ಚಾಲೂ ಮಾಡುವ ವ್ಯವಸ್ಥೆಗಳಿದ್ದರೂ ಕೃಷಿಕರಿಗಿನ್ನೂ ತಲುಪಬೇಕಷ್ಟೇ.
ವಿದ್ಯುತ್ ಇದೆ, ಕೆರೆಯಲ್ಲಿ ಬೇಕಾದಷ್ಟು ನೀರಿದೆ. ಪಂಪ್ ಆನ್ ಮಾಡಿದರೆ ಆಯಿತು. ದಿನವಿಡೀ ತೋಟ ಒದ್ದೆಯಾಗುತ್ತಿದೆ. ಯಜಮಾನನಿಗೆ ಖುಷಿಯೋ ಖುಷಿ. ಆದರೆ ದಿನವಿಡೀ ಪಂಪ್ ಆನ್ ಮಾಡಿ ನೀರು ಹಾಯಿಸುವುದು ಅಡಿಕೆ, ತೆಂಗು ಕೃಷಿಗೆ ಅನಿವಾರ್ಯವೇ? ಯಾವುದಕ್ಕೆ ಎಷ್ಟೆಷ್ಟು ಪ್ರಮಾಣದಲ್ಲಿ ನೀರು ಬೇಕು ಎಂಬ ಲೆಕ್ಕಾಚಾರ ಬೇಕಾಗಿದೆ.

ಅಡಿಕೆಗೆ ಬಾಧಿಸುವ ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣವನ್ನು ಹೇಗೆ ತಯಾರಿಸುವುದು? ಎಷ್ಟು ದಿವಸದ ಅಂತರದಲ್ಲಿ ಸಿಂಪಡಣೆ ಮಾಡುವುದು? ಖಚಿತವಾದ ಮಾಹಿತಿ ಅಲಭ್ಯ. ಅವರವರ ಅನುಭವದಂತೆ ಈ ಕೆಲಸ ನಿರಂತರ ನಡೆಯುತ್ತಲೇ ಇದೆ. ಬೋರ್ಡೋ ದ್ರಾವಣಕ್ಕೆ ಬಳಸುವ ಮೈಲುತುತ್ತು ಎಷ್ಟು ಸಾಚಾ? 'ಮೈಲುತುತ್ತಿಗೆ ಇರುವೆ ಮುತ್ತಿದ್ದಿದೆ,' ಡಾ.ಡಿ.ಸಿ.ಚೌಟರು ಮಾತಿನ ಮಧ್ಯೆ ಹೇಳಿದರು.

' ದಿನವಿಡೀ ಮರ ಏರಿ ಗೊನೆ ಕೊಯ್ಯುವ, ಮದ್ದು ಸಿಂಪಡಿಸುವವರು ಕೆಲವೆಡೆ ಐದು-ಆರು ಎಂಟು ನೂರು ರೂಪಾಯಿ ಸಂಬಳ ಕೇಳಿದ್ದೂ ಇದೆ ’ - ಚೌಟರೆಂದಾಗ ಎಲ್ಲರ ಹುಬ್ಬು ಮೇಲೇರಿತು. 'ಈಗಿನ ಕಾಲಮಾನದಲ್ಲಿ ಈ ವೇತನ ಸರಿ. ಅವರಿಗೆ ಆರೋಗ್ಯ ಭದ್ರತೆ, ಭವಿಷ್ಯ ಭದ್ರತೆ, ಕುಟುಂಬ ಭದ್ರತೆಯಿದೆಯೇ' ಎಂದು ಪ್ರಶ್ನಿಸಿದರು. ಇಂತಹ ವಿಶೇಷಜ್ಞರನ್ನು 'ತಾಂತ್ರಿಕ ತಜ್ಞ'ರೆಂದು ನಾವು ಯಾಕೆ ಸ್ವೀಕರಿಸಬಾರದು. ವಿಶ್ವವಿದ್ಯಾಲಯಗಳಲ್ಲಿ ಕಲಿತು ಕೆಲವು ತಂತ್ರಜ್ಞರಾಗುತ್ತಾರೆ. ಇವರಿಗೆ ಅನುಭವವೇ 'ತಂತ್ರಜ್ಞ' ಪದವಿ.

ಅಡಿಕೆ ಒಣಗಿಸಲು ಬಿಸಿಲು ಮನೆಗೆ ಈಚೆಗೆ ಬೇಡಿಕೆ ಹೆಚ್ಚು. ಇಲಾಖೆಯ ಸಹಾಯಧನ 'ಪ್ರಸಾದ'ವೂ ಸಿಗುತ್ತಿದೆ. ಎರಡು ಎಕ್ರೆ ತೋಟವಿರುವ ಕೃಷಿಕರೂ ಬಿಸಿಲು ಮನೆಯನ್ನು ಹೊಂದುವಂತಾಗಬೇಕು.

'ಕಳೆಕೀಳುವ, ಅಡಿಕೆ ಸುಲಿಯುವ ಯಂತ್ರ, ಪಂಪುಗಳು.. ಹಾಳಾದರೆ ಫೋನ್ ಮಾಡಿದರೆ ಸಾಕು, ಮನೆಬಾಗಿಲಿಗೆ ಬಂದು ರಿಪೇರಿ ಮಾಡಿ ಕೊಡುವ ಸಂಚಾರಿ ಕ್ಲಿನಿಕ್ ಬೇಕಾಗಿದೆ' ಎಂದವರು ಕೃಷಿ ಪತ್ರಕರ್ತ ಪಡಾರು ರಾಮಕೃಷ್ಣ ಶಾಸ್ತ್ರಿ. ಅವರವರ ಅನುಕೂಲಕ್ಕೆ ತಕ್ಕಂತೆ ಯಂತ್ರವನ್ನು ಬಳಸುವ ಕೃಷಿಕರಿಗೆ ರೀಪೇರಿ ಸಮಸ್ಯೆ ತಲೆನೋವು. ದೂರದ ಪೇಟೆಗೆ ಒಯ್ಯುವುದರಿಂದ ಖರ್ಚು ಹೆಚ್ಚು. ಸಮಯ ಹಾಳು. ಇಂತಹ ಸಂಚಾರಿ ಕ್ಲಿನಿಕ್ ಅಗತ್ಯ.

ವಿದೇಶದಲ್ಲಿ ದ್ರಾಕ್ಷಿ, ಮಾವು, ಕಿತ್ತಳೆ ಹಣ್ಣುಗಳನ್ನು ಕೊಯ್ಯುವ ಸಲಕರಣೆಗಳಿವೆ. ಚಿಕ್ಕಪುಟ್ಟ ಸಲಕರಣೆಗಳು ನಮ್ಮಲ್ಲಿದ್ದರೂ ಅವುಗಳ ಕಾರ್ಯಕ್ಷಮತೆ ಹೆಚ್ಚಿಸಬೇಕಾಗಿದೆ. ಚಹಾದ ಚಿಗುರೆಲೆ ಕೀಳಲು, ಕಾಫಿಯ ಹಣ್ಣುಗಳನ್ನು ಕೊಯ್ಯಲು ಇರುವಂತಹ ವಿದೇಶಿ ಯಂತ್ರಗಳ ಮಾದರಿಯಲ್ಲಿ ಕಾಳುಮೆಣಸನ್ನು ಕೊಯ್ಯುವ ಸಲಕರಣೆಯನ್ನು ರೂಪಿಸುವುದು ಅಗತ್ಯ.

'ಕೃಷಿಯಲ್ಲಿ ಅಂತರ್ಸಾಗಾಟಕ್ಕೆ ಒತ್ತುಕೊಡಬೇಕಾದ ಅಗತ್ಯವಿದೆ' ಎಂದವರು ಹಿರಿಯ ಪತ್ರಕರ್ತ ಶ್ರೀ ಪಡ್ರೆ. ಫಿಲಿಪೈನ್ಸ್ನಲ್ಲಿ ದ್ವಿಚಕ್ರಗಾಡಿಗಳಿಗೆ ಪ್ರತ್ಯೇಕವಾದ ಫಿಟ್ಟಿಂಗ್ ಮಾಡಿ ಅವನ್ನು ಗಾಡಿಯಂತೆ ಬಳಸುತ್ತಾರೆ. ಅಲ್ಲಿಂದ ಪ್ರಭಾವಿತರಾದ ಶಿರಸಿಯ ಕೃಷಿಕರು ತಮ್ಮೂರಿನ ದ್ವಿಚಕ್ರ ವಾಹನವನ್ನು ಗಾಡಿಯನ್ನಾಗಿ ಪರಿವರ್ತಿಸಿದ್ದಾರೆ. ಇದಕ್ಕೆ 'ಟುಕ್ಟುಕ್' ಅಂದು ಹೆಸರು. ಇಂತಹ ಏಳೆಂಟು ಟುಕ್ಟುಕ್ಗಳು ತಯಾರಾಗಿ ಕೆಲಸ ಮಾಡುತ್ತಿದ್ದರೂ ಕೃಷಿಕರಿಂದ ಉತ್ತಮ ಸ್ವೀಕೃತಿ ಬರಲಿಲ್ಲ. ಇದರ ವಿನ್ಯಾಸದಲ್ಲಿ ಸುಧಾರಣೆಯಾಗಬೇಕು.

ಕೇರಳದಲ್ಲಿ ತೆಂಗಿನ ಮರವೇರುವ ತರಬೇತಿ ಆಕರ್ಷಕವಾಗುತ್ತಿದೆ. ಮಹಿಳೆಯರೂ ಆಸಕ್ತರಾಗುತ್ತಿದ್ದಾರೆ. ನಮ್ಮಲ್ಲೂ 'ಮ್ಯಾನ್ ಪವರ್ ಡೆವಲಪ್ಮೆಂಟ್' ಮಾಡುವ ಕುರಿತು ಯೋಚನೆ ಅಗತ್ಯ. 'ನಮ್ಮ ನಡುವೆ ಇರುವ ಅಂತರ್ಸಾಗಾಟ ವಾಹನಗಳನ್ನು ಒಂದೇ ಸೂರಿನಡಿ ತರಬೇಕಾಗಿದೆ' ಎಂದರು ಶ್ರೀ ಪಡ್ರೆ.

ಕೆಂಪಡಿಕೆಯನ್ನು ಒಣಗಿಸುವ, ಅದಕ್ಕೆ ಬಣ್ಣ ಹಾಕುವ ವಿಧಾನದಲ್ಲಿ ಏಕತಾನತೆ ಬೇಕು. 'ಅಡಿಕೆಯನ್ನು ಒಣಗಿಸಲು ಸ್ಟೀಲ್ ಹಂಡೆಯೇ ಆಗಬೇಕಾ, ತಾಮ್ರದ ಹಂಡೆ ನಡೆಯುತ್ತದಾ' ಈ ವಿಚಾರದಲ್ಲಿ ಗೊಂದಲವಿದೆ. ಅದಕ್ಕೆ ಏಕಸೂತ್ರತೆ ಬೇಕು.
ಕಾರ್ಯಾಗಾರದಲ್ಲಿ ಮರ ಏರುವ ರೊಬೋಟ್, ರಿಮೋಟ್ ಕಂಟ್ರೋಲ್ ಟಿಲ್ಲರ್, ಅಡಿಕೆ ಸುಲಿ ಉಪಕರಣ, ಶ್ರಮ ಹಗುರ ಮಾಡುವ ಕೃಷಿ ಆವಿಷ್ಕಾರ'ಗಳ ಕುರಿತು ತಜ್ಞ ಕೃಷಿಕರಿಂದ, ತಂತ್ರಜ್ಞರಿಂದ ಪವರ್ಪಾಯಿಂಟ್ ಪ್ರಸ್ತುತಿ. ಶ್ರಮ ಹಗುರ ಮಾಡುವ ಉಪಕರಣಗಳು, ಯಂತ್ರಗಳು ಕಾಲದ ಅವಶ್ಯಕತೆ.

ಕೃಷಿಯ ಬಹುಪಾಲು 'ಬೇಕು'ಗಳನ್ನು ಮುಂದಿಟ್ಟಿದ್ದೀರಿ. ಆದರೆ ಹೈನುಗಾರಿಕೆ ವಿಚಾರಗಳನ್ನು ಯಾರೂ ಟಚ್ ಮಾಡಿಲ್ಲವಲ್ಲಾ.. ಸೋಲಾರ್ ಕುರಿತು ಮಾತನಾಡಿಲ್ಲವಲ್ಲಾ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ವಿಶ್ಲೇಷಿಸುತ್ತಾ, 'ಒಂದು ದಿವಸದಲ್ಲಿ ಕೃಷಿಯ ಎಲ್ಲಾ ಸಮಸ್ಯೆಗಳನ್ನು ಬಿಡಿಸುವುದು ಕಷ್ಟಸಾಧ್ಯವಲ್ವಾ' ಎಂಬ ಸಮಾಧಾನದ ಉತ್ತರವನ್ನೂ ನೀಡಿದರು.

'ಅಡಿಕೆ ಸುಲಿ ಯಂತ್ರಗಳು ರೈತನಿಗೆ ಬೇಕಾದ ಹಾಗೆ ವಿನ್ಯಾಸವಾಗಿಲ್ಲ. ಆ ದಿಸೆಯಲ್ಲಿ ಪ್ರಯತ್ನವಾಗಬೇಕು. ಸಣ್ಣ ರೈತರಿಗೂ ಯಂತ್ರ ಸಿಗುವಂತಿರಬೇಕು' - ಕ್ಯಾಂಪ್ಕೋ ಅಧ್ಯಕ್ಷರು ಸಮಸ್ಯೆಗಳ ಪಟ್ಟಿಗೆ ಇನ್ನೊಂದನ್ನು ಸೇರಿಸಿದರು. ಮರ ಏರುವ ವ್ಯವಸ್ಥೆ, ನೆಲದಿಂದಲೇ ಸಿಂಪಡಣೆ, ಗಾಳಿಯಂತ್ರದ ಮೂಲಕ ವಿದ್ಯುತ್ನಲ್ಲಿ ಸ್ವಾವಲಂಬನೆ, ಅಡಿಕೆಯ ಪರ್ಯಾಯ ಉಪಯೋಗಗಳು, ಹಾಲು ಕರೆಯುವ ಯಂತ್ರಗಳ ಸರಳೀಕರಣ, ಕೃಷಿಯ ವಿವಿಧ ವಿಚಾರಗಳಿಗೆ ಪ್ರತ್ಯಪ್ರತ್ಯೇಕ ವಿಚಾರ ಸಂಕಿರಣಗಳ ಅಗತ್ಯವನ್ನು ಹೇಳುತ್ತಾ, 'ಮುಂದಿನ ಮಾರ್ಚ್ ತಿಂಗಳಲ್ಲಿ ನಡೆಯುವ ಎರಡನೇ ಅಡಿಕೆ ಯಂತ್ರ ಮೇಳ'ದ ಸುಳಿವಿತ್ತರು ಕ್ಯಾಂಪ್ಕೋ ಅಧ್ಯಕ್ಷರು.

ಜರುಗಿದ ಕಾರ್ಯಾಗಾರಕ್ಕೆ (15-12-2011) ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಹೆಗಲೆಣೆ. ಕಾರ್ಮಿಕರ ಅಭಾವದಿಂದಾಗಿ ಭವಿಷ್ಯದಲ್ಲಿ ಎರಗಬಹುದಾದ ಆಪತ್ತುಗಳಿಗೆ ವರ್ತಮಾನದಲ್ಲಿ ಹುಟ್ಟಿದ ಜಾಗೃತಿ ಕೃಷಿ ರಂಗಕ್ಕೊಂದು ಆಶಾದಾಯಕ ಬೆಳಕಿಂಡಿ. ಕಾರ್ಯಾಗಾರದಲ್ಲಿ ಕೃಷಿಕರಿಂದ ಪ್ರಸ್ತುತವಾದ ವಿಚಾರಗಳ ಅನುಷ್ಠಾನಕ್ಕೆ ಹೆಗಲು ನೀಡಲಿದೆ, ನಮ್ಮ 'ಕ್ಯಾಂಪ್ಕೋ'.

ಟೆನ್ಶನ್ ಫ್ರೀ ಮದುವೆ!

ಒಂದು ಕಾಲಘಟ್ಟದಲ್ಲಿ ಐವತ್ತಕ್ಕೂ ಮಿಕ್ಕಿ ಸದಸ್ಯರು ಓಡಾಡಿಕೊಂಡಿದ್ದ ಹಿರಿಮನೆಯದು. ಏನಿಲ್ಲವೆಂದರೂ ಐವತ್ತೆಕರೆ ಕೃಷಿ ಭೂಮಿ. ಅದರಲ್ಲಿ ಮೂವತ್ತರಷ್ಟು ಅಡಿಕೆ. ನಿತ್ಯ ಹತ್ತಿಪ್ಪತ್ತು ಮಂದಿ ಅತಿಥಿಗಳಿಗೆ ಅನ್ನ ದಾಸೋಹ. ಹತ್ತಿರದ ಸರಕಾರಿ ಶಾಲೆಯಲ್ಲಿ ಶಿಕ್ಷಣ. ಹಳ್ಳಿ ಬದುಕು.

ಕಾಲ ಸರಿಯಿತು. ಶಿಕ್ಷಣಕ್ಕಾಗಿ ನಗರ ಸೇರಿದವರು ಮತ್ತೆ ಹಳ್ಳಿಯತ್ತ ನೋಡಿಲ್ಲ. ಈಗ ಆ ಮನೆಯಲ್ಲಿರುವುದು ಇಬ್ಬರೇ. ಯಜಮಾನರಿಗೆ ಅರುವತ್ತು ದಾಟಿತು. ಯಜಮಾನ್ತಿಗೆ ನಲವತ್ತೋ, ಐವತ್ತೋ ಅಷ್ಟೇ. ಒಬ್ಬನೇ ಮಗ. ಮತ್ತೊಬ್ಬಳು ಮಗಳು.
ಅಳಿಯನೊಂದಿಗೆ ಮಗಳು ಮುಂಬಯಿ ಸೇರಿ ಅದೆಷ್ಟೋ ವರುಷವಾಗಿತ್ತು. ಮಗ ಬೆಂಗಳೂರಿನಲ್ಲಿ ಲಕ್ಷ ಎಣಿಸುವ ಹುದ್ದೆಯಲ್ಲಿದ್ದಾನೆ. ಅಪ್ಪನ-ಅಮ್ಮನ ಮೇಲಿನ ಭಕ್ತಿ, ಕಲಿತ ಊರೆಂಬ ಅಭಿಮಾನದಿಂದ 2-3 ತಿಂಗಳಿಗೊಮ್ಮೆ ತಂಪು ಕಾರಲ್ಲಿ ಭರ್ರನೆ ಬಂದು ಇದ್ದು ಹೋಗುವವನು.

ಮಗನಿಗೆ ವಯಸ್ಸಾಯಿತು. ಮದುವೆಯಾಗಿಲ್ಲ ಎಂಬ ಚಿಂತೆ. ಮದುವೆಯಾಗುವುದಿದ್ದರೂ ಹಳ್ಳಿ ಮನೆಯಲ್ಲಾಗಬೇಕೆಂಬ ಪಟ್ಟು. ಮಗನ ಸಮ್ಮತಿ. ಹುಡುಗಿಯ ಆಯ್ಕೆಯ ಹೊಣೆಯನ್ನು ಮಗನಿಗೆ ವಹಿಸಿಕೊಟ್ಟಿದ್ದರು. ಯೋಗ ಕೂಡಿ ಬಂತು. ಮದುವೆಯ ದಿವಸ ನಿಶ್ಚಯವಾಯಿತು.

'ಹಳ್ಳಿ ಮನೆಯಲ್ಲೇ ಮದುವೆ. ಯಾವ ಸಿದ್ದತೆಯನ್ನೂ ಮಾಡಬೇಡಿ. ನಾನೇ ಊರಿಗೆ ಬಂದು ಮಾಡುತ್ತೇನೆ' ಎಂದಿದ್ದ ಮಗ. ಮದುವೆಗಿನ್ನು ಮೂರೇ ದಿವಸ. ಏನು ಮಾಡೋಣ. ಯಜಮಾನ್ರಿಗೆ ಕೈಕೈ ಹಿಸುಕುವುದೊಂದೇ ದಾರಿ. ಸರಿ, ಮದುವೆಗೆ ಎರಡು ದಿವಸದ ಮುನ್ನ ಮದುಮಗ ಹಾಜರ್.

'ಎರಡು ದಿವಸದಲ್ಲಿ ಏನು ಮಾಡೋಣ. ಯಾವ ಕೆಲಸವೂ ಆಗಿಲ್ಲ', ಅಪ್ಪನ ಒತ್ತಡ ನೋಡಿ 'ನೀವು ಆರಾಮ ಇರಿ. ನೋಡ್ತಾ ಇರಿ, ಏನೇನು ಮಾಡ್ತೇನೆ ಅಂತ' ಅಪ್ಪನಿಗೆ ಸಮಾಧಾನ.

ನಾಳೆಯೇ ಮದುವೆ. ಮದುಮಗ ನಿರಾಳ. ಅವರಪ್ಪನಿಗೆ ಗಡಿಬಿಡಿ. ಅಮ್ಮನಿಗೆ ಅಂಜಿಕೆ. ಮಧ್ಯಾಹ್ನದ ಹೊತ್ತು. 'ಕ್ಷಿಪ್ರಮಾಂಗಲ್ಯ' ಎಂಬ ಫಲಕ ಅಂಟಿಸಿಕೊಂಡ ಲಾರಿಯೊಂದು ಮನೆ ಮುಂದೆ ನಿಂತಿತು. ಅದರಿಂದ ಶಾಮಿಯಾನ, ಚಯರ್, ಮದುವೆ ಮಂಟಪ, ಅಡುಗೆಗೆ ಬೇಕಾದ ಎಲ್ಲವೂ ಅನ್ಲೋಡ್ ಆದುವು.

ನೋಡು ನೋಡುತ್ತಿದ್ದಂತೆ ಮನೆ ಮುಂದೆ ಚಪ್ಪರ ಎದ್ದಿತು. ಅಡುಗೆ ಮನೆ ಸಿದ್ಧವಾಯಿತು. ಮದುವೆ ಮಂಟಪ ಅಲಂಕೃತವಾಗುತ್ತಾ ಇತ್ತು. ವಿದ್ಯುತ್ ಝಗಮಗ ಉರಿಯಲು ಆರಂಭವಾಯಿತು. 'ನಾಳೆ ಹನ್ನೊಂದು ಗಂಟೆಗೆ ಧಾರಾಮುಹೂರ್ತ. ಬೆಳಿಗ್ಗೆಯೇ ಬಂದುಬಿಡ್ತೇನೆ' ಎಂಬ ಅಭಯ ವಾಕ್ಯ 'ಕ್ಷಿಪ್ರ ಮಾಂಗಲ್ಯ'ದ ದನಿಯದು. 'ಸಮಯಕ್ಕೆ ಬಂದುಬಿಡಿ, ಇನ್ನೂರು ಜನರನ್ನು ಕರೆತನ್ನಿ. ಹತ್ತಿಪ್ಪತ್ತು ಮಂದಿ 'ಪಾಂಡಿತ್ಯ'ವುಳ್ಳ ಪುರೋಹಿತರೂ ಇರಲಿ. ಮಂತ್ರ ಘೋಷ ಬೇಕಲ್ವಾ.. ಫೋಟೋ, ವೀಡಿಯೋ ಎಲ್ಲಾ ನಿಮ್ಮದೆ' ಅಂತ ಮದುಮಗ ಲಿಸ್ಟ್ ನೀಡಿದ. ಮನೆಯ ಪಡಸಾಲೆಯಲ್ಲಿ ವೀಳ್ಯ ಮೆಲ್ಲುತ್ತಾ ಕ್ಷಿಪ್ರ ವ್ಯವಸ್ಥೆಯನ್ನು ವೀಕ್ಷಿಸುತ್ತಿರುವ ಯಜಮಾನರಿಗೆ ದಂಗು. ಮಗನ ಕರಾಮತ್ತು ನೋಡಿ ಮನದಲ್ಲೇ ಖುಷಿ!

ಮದುವೆ ದಿನ. ಬೆಳ್ಳಂಬೆಳಿಗ್ಗೆ 'ಕ್ಷಿಪ್ರ ಮಾಂಗಲ್ಯ'ದ ಬಸ್ ಆಗಮಿಸಿತು. ಇಪ್ಪತ್ತು ಮಂದಿ ಪುರೋಹಿತರು. ಇಪ್ಪತ್ತೈದು ಮಂದಿ ಸಾಲಂಕೃತ ಮಹಿಳೆಯರು. ಜತೆಗೆ ಗಟ್ಟಿಮೇಳದ ಗಟ್ಟಿ ಸೆಟ್. 'ಹನ್ನೊಂದು ಗಂಟೆಗೆ ಇನ್ನೂರು ಮಂದಿ ರೆಡಿ' ಎನ್ನುತ್ತಾ ಮಾಂಗಲ್ಯ ಹೊರಟು ಹೋಯಿತು.

ಮೊದಲೇ ನಿಶ್ಚಯವಾದಂತೆ ಸಮಯಕ್ಕೆ ಸರಿಯಾಗಿ 'ವಧುವಿನ ದಿಬ್ಬಣ' ಆಗಮನ. (ವರನ ದಿಬ್ಬಣ ವಧುವಿನ ಮನೆಗೆ ಹೋಗುವುದು ಸಂಪ್ರದಾಯ) ಸ್ವಾಗತ, ಉಪಾಹಾರ. ಎಲ್ಲವೂ 'ಮಾಂಗಲ್ಯ'ದ ವ್ಯವಸ್ಥೆ. ಧಾರಾಮುಹೂರ್ತವೂ ಆಯಿತು. ಮಧ್ಯಾಹ್ನ ಭರ್ಜರಿ ಭೋಜನ. ತೆರಳುವವರ ಕೈಗೆ ಒಂದೊಂದು ಸಿಹಿ ತಿಂಡಿಗಳ ಪೊಟ್ಟಣ. ಮದುಮಗನಿಗೆ ಲಕ್ಷ ಸಂಪಾದನೆಯಲ್ವಾ!

ಸಂಜೆಯಾಗುತ್ತಿದ್ದಂತೆ ಮದುಮಗನಿಗೆ ಟೆನ್ಶನ್. 'ಅಪ್ಪಾ, ನಾಳೆನೇ ಡ್ಯೂಟಿಗೆ ಸೇರಬೇಕು. ಇಂದು ರಾತ್ರಿ ಹೋಗುತ್ತಿದ್ದೇವೆ' ಎನ್ನಬೇಕೆ. ರಾಯರಿಗೆ ಆಕಾಶವೇ ಕಳಚಿದ ಅನುಭವ. ಏನು ಮಾಡೋಣ. ಮಾತನಾಡುವಂತಿಲ್ಲ. ಸಂಜೆ 'ಕ್ಷಿಪ್ರ ಮಾಂಗಲ್ಯ'ದ ಯಜಮಾನ ಬಂದು ಲೆಕ್ಕ ಚುಕ್ತಾ ಮಡುತ್ತಿದ್ದಂತೆ, ಮುನ್ನಾ ದಿನ ಹೇಗೆ ಮದುವೆ ಮನೆ ತೆರೆದುಕೊಂಡಿತ್ತೋ, ಅಷ್ಟೇ ವೇಗವಾಗಿ ಪ್ಯಾಕ್ಅಪ್ ಆಗಿ ಲಾರಿಗೆ ಲೋಡ್ ಆಗಿತ್ತು. ಸಂಜೆ ಹೊತ್ತಿಗೆ ಮಗ, ಸೊಸೆ ಮತ್ತು ಉಳಿದ ಮಂದಿ ಕಾರಲ್ಲಿ ಹೊರಟು ಹೋದ ಮೇಲೆ, ಮೇಲೆದ್ದ ಧೂಳಿನಲ್ಲಿ ಮದುಮಗನ ಅಪ್ಪ ತನ್ನ ಭವಿಷ್ಯವನ್ನು ಬರೆಯತೊಡಗಿದರು.

ಇದೊಂದು ಕಲ್ಪಿತ ಘಟನೆ. 'ಸಂಬಂಧಗಳು ಅರ್ಥಶೂನ್ಯ, ಕಾಂಚಾಣವೇ ಮುಖ್ಯ' ಎನ್ನುವ ಒಂದಷ್ಟು ಮಂದಿಗೆ ತುಂಬಾ ಸಹಕಾರಿಯಾಗಬಹುದಾದ ಯೋಜನೆ. ಆರ್ಡರ್ ಮಾಡಿದರೆ ಸಾಕು, 'ಮದುಮಗಳು-ಅಪ್ಪ-ಅಮ್ಮ' ಹೊರತುಪಡಿಸಿ, ಮಿಕ್ಕೆಲ್ಲವನ್ನೂ ಕಾಲಬುಡಕ್ಕೆ 'ತಂದೆಸೆಯುವ' ವ್ಯವಸ್ಥೆ ಭವಿಷ್ಯದ ಅನಿವಾರ್ಯತೆಯಾಗಬಹುದೋ ಏನೋ?

ಆಮಂತ್ರಣ ಪತ್ರವನ್ನು ಹಂಚುವ ಕಿರಿಕಿರಿಯಿಲ್ಲ. ಹಾಲ್ ಬುಕ್ ಮಾಡಬೇಕಾಗಿಲ್ಲ. ಸೂಪಜ್ಞರನ್ನು ಸಂಪರ್ಕಿಸಬೇಕಿಲ್ಲ. ಮೊದಲೇ ನೆಂಟರನ್ನು ದೂರಮಾಡಿದ ಬಳಿಕ ಅವರ ಬಾಧೆಯಿಲ್ಲ. 'ಹಳ್ಳಿಯಲ್ಲೇ ಸಮಾರಂಭ ನಡೆಯಬೇಕು' ಎಂಬ ಆಶೆಯೂ ಈಡೇರಿದ ಹಾಗಾಯಿತು. ಒಟ್ಟಿನಲ್ಲಿ ಟೆನ್ಶನ್ ಫ್ರೀ.. ಫ್ರೀ..!

ಹಳ್ಳಿಯಲ್ಲೇ ಅಪ್ಪಾಮ್ಮ ಇಬ್ಬರನ್ನೇ ಬಿಟ್ಟು ಹೆಂಡತಿಯೊಂದಿಗೆ ನಗರ ಸೇರಿದ ಮಗನಿಗೆ ಕ್ರಮೇಣ ಹಳ್ಳಿ ಒಂದು ಮ್ಯೂಸಿಯಂ ಆಗಿ ಕಾಣುತ್ತದೆ! ನಗರ ಬೋರ್ ಆದಾಗ ಬಂದುಳಿಯಲು ತಾಣವಷ್ಟೇ. ಯಾವುದೇ ಭಾವನೆಗಳಿಲ್ಲ. ಸಂಬಂಧಗಳ ಸೋಂಕಿಲ್ಲ. ಹಳ್ಳಿ ಮನೆಯಲ್ಲಿ ಮುದುಡುವ ಎರಡು ಜೀವಗಳು ನೆನಪಿನಿಂದ ಮರೆಯಾಗುವಷ್ಟು ಕೆಲಸದ ಧಾವಂತ!

ಒಂದು ದಿವಸವಾದರೂ ಅಪ್ಪಾಮ್ಮನನ್ನು ನಗರಕ್ಕೆ ಕರೆದುಕೊಂಡು ಹೋಗದ ಮಕ್ಕಳು ಎಷ್ಟು ಮಂದಿ ಬೇಕು? 'ಹಳ್ಳಿ ಮನೆಯನ್ನು ಮಾರಿ, ಅದರಲ್ಲಿ ಸಿಕ್ಕಿದ ಹಣ ನಂಗೆ ಕೊಡು. ಬೆಂಗಳೂರಲ್ಲಿ ಸೈಟ್ ತೆಕ್ಕೊಳ್ಳಬೇಕು' ಎನ್ನುವ ಮಗನ ಬೇಡಿಕೆ ಮುಂದೆ ಅಪ್ಪ ಕಂಗಾಲು!

ಹಳ್ಳಿಗಳಿಂದು 'ಮಾರಾಟಕ್ಕಿವೆ' ಎಂಬ ಬೋರ್ಡ್ ತಗಲಿಸಿಕೊಂಡಿವೆ. ಒಂದರ್ಥದಲ್ಲಿ ಅವೆಲ್ಲಾ ವೃದ್ಧಾಶ್ರಮಗಳಾಗಿವೆ. ಅವನ್ನು ಖರೀದಿಸಲು 'ತಾಮುಂದು ನಾಮುಂದು' ಎನ್ನುವ ಬ್ರೋಕರ್ಗಳು ಮುತ್ತುತ್ತಿರುತ್ತಾರೆ. ಕಣ್ಣೆದುರಲ್ಲೇ ಹುಟ್ಟಿದ ಮನೆ ಬುಲ್ಡೋಜರ್ಗೆ ಬಲಿಯಾದಾಗ ಮುಂದಿನ ದಾರಿ ಮಸುಕು.. ಮಸುಕು.. 'ಎಲ್ಲವನ್ನೂ ಮಾರಿ ನಗರಕ್ಕೆ ಬಾ' ಎಂದ ಮಗನ ಮೊಬೈಲ್ ಸಿಮ್ ಬದಲಾಗಿರುತ್ತದೆ!

Thursday, December 29, 2011

ಇಡ್ಲಿ ಮಾತ್ರ ಕೊಡ್ತೀರಿ ..ಸಾಂಬಾರು ಬೇಡವೇ ? - ಶ್ರೀ ಸುಭಾಶ್ ಪಾಳೇಕರ್



ದಶಂಬರ ೨೭-೩೦ರ ತನಕ ಕಾಸರಗೋಡಿನಲ್ಲಿ ಶೂನ್ಯ ಬಂಡವಾಳ ತರಬೇತಿ ಶಿಬಿರ. ಶ್ರೀ ಸುಭಾಶ್ ಪಾಳೇಕ ಸಾರಥ್ಯ. ಉತ್ತರ ಭಾರತದ ಇಬ್ಬರು ಕೃಷಿಕರ ಸಾಥ್.

ಈ ಸಂದರ್ಭದಲ್ಲಿ ಪೆರ್ಲ ಸಮೀಪದ ವಿಶ್ವದ ಏಕೈಕ 'ಕಾಸರಗೋಡು ಗೋ ತಳಿ ಸಂವರ್ಧನಾ ಕೇಂದ್ರ’ವಾದ ಬಜಕೂಡ್ಲು ಅಮೃತಧಾರ ಗೋ ಶಾಲೆಗೆ ಪಾಳೇಕರ್ ಭೇಟಿ ಇತ್ತರು. ಅನಂತರ ಅಡಿಕೆ ಹಾಗೂ ಮಿಶ್ರ ಬೆಳೆಯಲ್ಲಿ ಶ್ರೀ ಸುಭಾಶ್ ಪಾಳೇಕರ್ ಪದ್ಧತಿ ಅಳವಡಿಸಿ ಯಶಸ್ಸು ಗಳಿಸಿದ ಕೃಷಿಕರಾದ ಶ್ರೀ ಸರ್ಪಮಲೆ ಜಯರಾಂ ಗೋಪಾಲರ ಕೃಷಿ ಕ್ಷೇತ್ರ ಸಂದರ್ಶನ ಮಾಡಿದರು. ಈ ಸಂದರ್ಭದಲ್ಲಿ ನಡೆದ ಕಿರು ಮಾತುಕತೆ.

* ಅಡಿಕೆ ಕೃಷಿಯಲ್ಲಿ ಹಾಗೂ ಉಪಬೆಳೆಗಳಲ್ಲಿ ನಿಮ್ಮ ಪದ್ದತಿಯನ್ನು ಹೇಗೆ ಅಳವಡಿಸಲು ಸಾಧ್ಯ ?
ಪಾಳೇಕರ್ : ''ಕೃಷಿಯಲ್ಲಿ ಉತ್ಪತ್ತಿ ನೀಡುವುದು ಮರಗಳಲ್ಲ -ಮಣ್ಣು .ಆಯಾಯ ಪ್ರದ್ವ್ಶದ ಮಣ್ಣಿನಲ್ಲಿ ಇಂಗಾಲ [carbon] ಮತ್ತು ಸಾರಜನಕದ ಪ್ರಮಾಣ ಹದಗೆಟ್ಟಾಗ ಫಸಲು ಇಳಿಮುಖ ವಾಗುತ್ತದೆ .ಕೇವಲ ಇಡ್ಲಿ ಮಾತ್ರ ನೀಡಿ ಸಾಂಬಾರು ನೀಡದಿದ್ದರೆ ಹೇಗೆ? ಮಣ್ಣಿನಲ್ಲಿ ಈ ಕೆಲಸವನ್ನು ಸೂಕ್ಷ್ಮ ಜೀವಾಣುಗಳು ಮಾಡುತ್ತವೆ .ಇಲ್ಲಿನ ಭೂ ಪ್ರಕೃತಿಯ ಏರು ಪೆರು, ಅತೀವ ಮಳೆ ಸಾರಜನಕವನ್ನು ಇರಗೊಡುದಿಲ್ಲ .ಹ್ಯುಮಾಸ್ ಅಂಶವೇ ಇಲ್ಲ .ತತ್ವಶ ಶೂನ್ಯ ಬಂಡವಾಳ ಪದ್ಧತಿ ಅಳವಡಿಸಿದರೆ ಅದ್ಭುತ ಪಲಿತಾಂಶ ಬಂದೇ ಬರುತ್ತದೆ''

* ಐದು ದಿನಗಳ ಸುಧೀರ್ಘ ತರಬೇತಿಗಿಂತ ಕಿರು ಅವದಿಯ ತರಬೇತಿ ಸಾಲದೇ ?
''ನೋಡಿ ,ಅರ್ಧಂಬರ್ದ ಜ್ಞಾನದಿಂದ ಏನನ್ನು ಸಾಧಿಸಲಾಗುವುದಿಲ್ಲ. ಇವತ್ತು ಮೆಕಾನಿಕಲ್ ಎಂಜಿನಯಾರ್ಗೆ ನಟ್ಟು-ಬೋಲ್ಟು ಕೆಟ್ಟು ಹೋದರೆ ಪುನಹ ಜೋಡಿಸಲು ತಿಳಿಯದು ..ನಮ್ಮ ಶಿಕ್ಷಣ ವ್ಯವಸ್ತೆಯಲ್ಲಿ ಎಲ್ಲ ವಿಷಯಗಳ ಬಗ್ಗೆ ಅಲ್ಪ ಜ್ಞಾನ ನೀಡುತ್ತವೆ .ಪರಿಪೂರ್ಣತೆ ಇಲ್ಲದಿದ್ದರೆ ಅಳವಡಿಸುವಾಗ ಗೊಂದಲ ಉಂಟಾಗುತ್ತದೆ '.

ಡಾ .ವೈ ವಿ .ಕೃಷ್ಣಮೂರ್ತಿ ,ಬದಿಯಡ್ಕ ಹಾಗೂ ಸುಬ್ರಮಣ್ಯ ಪ್ರಸಾದ್ ನೆಕ್ಕರೆಕಳೆಯ ಇವರು ಕ್ಕ್ಷೇತ್ರ ಸಂದರ್ಶನ ಸಂಯೋಜಿಸಿದ್ದರು .

ಸಂದರ್ಶನ / ಚಿತ್ರ : ಚಂದ್ರಶೇಖರ್ ಏತಡ್ಕ


Tuesday, December 27, 2011

'ಕೃಷಿ ವಿಜ್ಞಾನಿಗಳೆ ಕಾಲುಭಾಗ ಸಮಯ ರೈತರೊಂದಿಗೆ ಕಳೆಯಿರಿ'





'ನಮ್ಮ ರೈತರ ಹೊಲಗಳಲ್ಲಿ ಅತ್ಯಪೂರ್ವ ತಂತ್ರಜ್ಞಾನ, ತಳಿಗಳು ಅಡಗಿವೆ. ಕೃಷಿ ವಿಜ್ಞಾನಿಗಳೇ ರೈತರಿಗೆ ಆಧ್ಯತೆ ನೀಡಿ. ನಿಮ್ಮ ಕಾಲುಭಾಗ ಸಮಯವನ್ನು ಅವರೊಂದಿಗೆ, ಹೊಲಗಳಲ್ಲಿ ಕಳೆಯಿರಿ,' ಎಂದು ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಮಹಾನಿರ್ದೇಶಕರಾದ ಡಾ. ಅಯ್ಯಪ್ಪನ್ ಕರೆನಿಡಿದರು. ಪುತ್ತೂರಿನ, ಗೇರು ಸಂಶೋಧನಾ ನಿರ್ದೇಶನಾಲಯದ (Directorate of Cashew Research, Puttur) ಬೆಳ್ಳಿಹಬ್ಬದ (೨೩, ೨೪ ದಶಂಬರ ೨೦೧೧) ಸಮಾರೋಪ ಭಾಷಣ ಮಾಡುತ್ತಿದ್ದರು.

ಹರಿಯಾಣದಲ್ಲಿ ರೈತರೊಬ್ಬರ ಹೊಲದಲ್ಲಿ ಪ್ರತಿ ಎಕರೆಗೆ 12 ಕ್ವಿಂಟಲ್ ಇಳುವರಿ ಕೊಡುವ ಕೆಂಪು ಕಡಲೆಯ ದೇಸೀ ತಳಿಯೊಂದನ್ನು ಕಂಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದರಲ್ಲದೇ, 'ರೈತ ಹಕ್ಕು ಸಂರಕ್ಷಣಾ ಕಾಯ್ದೆ' ಅಂತಹ ತಳಿಗಳ ಹಕ್ಕನ್ನು ರೈತರೇ ಪಡೆದುಕೊಳ್ಳಲು ಸಹಕಾರಿಯಾಗುವುದು ಎಂದರು. ಇಂತಹ ಉನ್ನತ ತಂತ್ರಜ್ಞಾನ, ತಳಿಗಳ ಪ್ರಾಯೋಗಿಕ ಜ್ಞಾನವಿರುವ ರೈತರನ್ನು 'ಅತಿಥಿ ಪ್ರಾಧ್ಯಾಪಕ'ರೆಂದು ಪರಿಗಣಿಸಿ, ಗೌರವಿಸಿ ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನಾ ಸಂಸ್ಥೆಗಳು ಅವರ ಜ್ಞಾನವನ್ನು ಸದುಪಯೋಗಿಸಿಕೊಳ್ಳಬೇಕೆಂದು ಹೇಳಿದರು.

ಗೇರು ಉತ್ಪಾದಕತೆ ಹೆಚ್ಚಿಸಲು ಸಾಂದ್ರ ಬೇಸಾಯ ಪದ್ಧತಿ ಹಾಗೂ ಅದಕ್ಕೆ ಬಳಕೆಯಾಗಬಲ್ಲ ಕುಬ್ಜ ತಳಿಗಳ ಕುರಿತು, ಹಾಗೂ ಕಾಂಡಕೊರಕ ಹುಳಗಳ ನಿಯಂತ್ರಣಕ್ಕೆ ಭವಿಷ್ಯದ ಸಂಶೋಧನೆ ಸಹಾಯಕವಾಗಲಿ. ಗೇರು ಬೆಳೆಯನ್ನು 'ಜೀವಂತ ಬೇಲಿ'ಯಾಗಿ, ಪರಿಸರ ಸ್ನೇಹಿ ಬೆಳೆಯಾಗಿ, 'ಗಾಳಿತಡೆ' ಬೆಳೆಯಾಗಿ ಮತ್ತು ಮೌಲ್ಯವರ್ಧನೆಯಲ್ಲಿ ಸಂಸ್ಕರಣಾ ಉದ್ದಿಮೆಗಳ ಸಹಕಾರ ಪಡೆಯುವಂತಹ ವಿವಿಧ ಸಾಧ್ಯತೆಗಳ ಅಧ್ಯಯನವಾಗಬೇಕು. 2017ನೆ ಇಸವಿಯ ವೇಳೆಗೆ ದೇಶದ ಗೇರು ಉತ್ಪಾದನೆಯನ್ನು ಇಂದಿನ 6.5 ಲಕ್ಷ ಟನ್ನಿಂದ 10 ಲಕ್ಷ ಟನ್ನಿಗೇರಿಸುವ ನಿರ್ಧಿಷ್ಟ ಗುರಿಯನ್ನು ಹೊಂದೋಣ ಎಂದು ಅವರು ಹೇಳಿದರು.
ನಿರ್ದೇಶನಾಲಯದ ವರ್ತಮಾನದ ಬೆಳವಣಿಗೆಗಳ ಕುರಿತು ಅಯ್ಯಪ್ಪನ್ ಅವರು ಸಂತಸ ವ್ಯಕ್ತಪಡಿಸಿದರು. ಎರಡು ದಿನಗಳ ಕಾಲ ನಡೆದ ವಿವಿಧ ಗೋಷ್ಠಿಗಳಲ್ಲಿ ಮಂಡಿಸಿದ ಗೇರು ಅಭಿವೃದ್ಧಿ ಕುರಿತಾದ ವಿಚಾರಗಳ, ಅಲ್ಲಿ ಮೂಡಿಬಂದ ಸಲಹೆಗಳ ಸಂಕ್ಷಿಪ್ತ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಪರಿಷತ್ತಿನ ಉಪಮಹಾನಿರ್ದೇಶಕರಾದ ಡಾ ಎಚ್ ಪಿ ಸಿಂಗ್, ಗೇರು ಸಂಶೋಧನೆಯ ಸ್ಥಿಗತಿ ಹಾಗೂ ಭವಿಷ್ಯದ ಯೋಜನೆಗಳನ್ನು ವಿವರಿಸಿದರು.

(ವರದಿ : ಪ್ರಕಾಶ್ ಭಟ್ ಕರ್ಕಿ)