Monday, September 17, 2012

ಬದುಕಿದ್ದಾಗ ಎಷ್ಟು ಹೊಗಳಿದ್ದೇವೆ..?

           ಹದಿಮೂರು ವರುಷದ ಹಿಂದೆ ದೈವಾಧೀನರಾದ ಯಕ್ಷಗಾನ ಭಾಗವತರೊಬ್ಬರ ಸಂಸ್ಮರಣಾ ಸಮಾರಂಭದಲ್ಲಿ (೧೫-೯-೨೦೧೨) ಭಾಗವಹಿಸಿದ್ದೆ. ಹಳ್ಳಿಯ ದೇವಸ್ಥಾನವೊಂದರಲ್ಲಿ ಕಾರ್ಯಕ್ರಮ. ದೇವರ ದರ್ಶನಕ್ಕೆ ಆಗಮಿಸಿದ ಭಕ್ತ ಸಭೆ. ಜತೆಗೆ ಕಲಾಭಿಮಾನಿಗಳೂ, ಭಾಗವತರ ಅಭಿಮಾನಿಗಳು ಕೂಡ.
          ಅಚ್ಚುಕಟ್ಟಿನ ಶಿಸ್ತಿನ ವ್ಯವಸ್ಥೆ. ಯಾರನ್ನು ನೆನಪು ಮಾಡಿಕೊಳ್ಳಬೇಕೋ ಅವರ ಸಾಧನೆ, ಕೊಡುಗೆಗಳ ಸುತ್ತ ಸುತ್ತಿದ ನೆನಪುಗಳು ಒಟ್ಟಂದಕ್ಕೆ ಪೂರಕವಾಯಿತು. ಸಮಾಜದ ಮಧ್ಯೆ ಬಾಳಿದ ಕಲಾವಿದನನ್ನು ಆ ಸಮಾಜವೇ ಪ್ರತೀವರುಷ ನೆನಪಿಸುವುದೆಂದರೆ, ಮರಣಿಸಿದ ವ್ಯಕ್ತಿಯ ವೈಯಕ್ತಿಕ ಛಾಪಿನ ಆಳವನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
             ಕಾರ್ಯಕ್ರಮ ಮುಗಿಸಿ ಮರಳಲು ವ್ಯಾನಿನಲ್ಲಿ ಕುಳಿತಿದ್ದೆ. ಎಲ್ಲರೂ ಸಮಾರಂಭದ ಕುರಿತು ತಮ್ಮ ವಿವೇಚನೆಗೆ ತೋರಿದಂತೆ ಮಾತನಾಡುತ್ತಿದ್ದರು. ಮರಣಿಸಿದ ಭಾಗವತರನ್ನು ನೆನಪಿಸಿಕೊಳ್ಳುತ್ತಿದ್ದರು. ಅವರ ಭಾಗವತಿಕೆಯಲ್ಲಿ ಜರುಗಿದ ಪ್ರದರ್ಶನವನ್ನು ಮೆಲುಕು ಹಾಕುತ್ತಿದ್ದರು. ವೇದಿಕೆಯಲ್ಲಿನ ಅತಿಥಿಗಳ ಮಾತಿನ ಒಂದೆರಡು ವಾಕ್ಯಗಳನ್ನು ನೆನಪಿಟ್ಟುಕೊಂಡು ಪರಸ್ಪರ ಹಂಚಿಕೊಳ್ಳುತ್ತಿದ್ದರು.
             ಇವರ ಮಧ್ಯೆ ಕುಳಿತಿದ್ದ ವಯೋವೃದ್ಧೆಯೋರ್ವರು, 'ಭಾಗವತರನ್ನು ಎಲ್ಲರೂ ಹೊಗಳಿದರು. ಹೊಗಳಬೇಕಾದ್ದೇ. ಅಷ್ಟು ಅರ್ಹತೆ ಅವರಲ್ಲುಂಟು. ಅವರು ನಮ್ಮ ಊರಿಗೆ ಗೌರವ ತಂದಿದ್ದಾರೆ. ಮಾನವನ್ನು ನೀಡಿದ್ದಾರೆ. ಆದರೆ ಅವರು ಬದುಕಿರುವಾಗ ಎಷ್ಟು ಮಂದಿ ಹೊಗಳಿದ್ದೇವೆ' ಎಂದು ಚಾಟಿ ಬೀಸಿದರು. ಹೊಸ ಹೊಳಹನ್ನು ನೀಡಿದ ಆ ಹಿರಿಯ ಮಾತೆಗೆ ಮನಸಾ ವಂದಿಸಿದೆ.
              ಹೌದಲ್ಲಾ, ವ್ಯಕ್ತಿ ಬದುಕಿದ್ದಾಗ ಅವರ ಕಲಾವಂತಿಕೆಯ ಪ್ರಖರಕ್ಕೆ ಮುಖಕೊಡಲಾಗದ ಅಸಹಾಯಕತೆಯಲ್ಲಿ ಆತನ ಕುರಿತು ಯಥೇಷ್ಟವಾಗಿ ಕರುಬುತ್ತೇವೆ. ಅವರ ಪ್ರತಿಭೆಯನ್ನು ತನ್ನ ವಿಕಾರ ಚಿತ್ತದ ಪಾತ್ರೆಯಲ್ಲಿಟ್ಟು ಅಳತೆ ಮಾಡುತ್ತೇವೆ. ರಂಗದಲ್ಲಿ ಹಾಡುವಾಗ, ಕುಣಿಯುವಾಗ, ಅರ್ಥ ಹೇಳುವಾಗ ಖುಷಿಪಡುತ್ತೇವೆ. ನಾವೊಬ್ಬರೇ ಖುಷಿ ಪಟ್ಟರೆ ಸಾಲದು. ಖುಷಿ ಪಡಿಸಿದ ಆ ಕಲಾವಿದನೂ ಖುಷಿಯಾಗಬೇಡ್ವೇ. ಇದಕ್ಕಾಗಿ 'ಒಂದು ಒಳ್ಳೆಯ ಮಾತನ್ನು' ಹೇಳಿದರೆ ಆತನಿಗೆ ಎಷ್ಟೊಂದು ಸಂತೋಷವಾಗಿರುತ್ತಿತ್ತು?
            ಸಂಮಾನ ಮಾಡುವಾಗ ಹೊಗಳುತ್ತೇವೆ. ಹೊಗಳಿಕೆಯ ಮಹಾಪೂರದಲ್ಲಿ ಅಟ್ಟಕ್ಕೇರಿಸುತ್ತೇವೆ. ಪುರಸ್ಕಾರ ನೀಡುವಾಗ ಗುಣವರ್ಣನೆ ಮಾಡುತ್ತೇವೆ. ಪ್ರಶಸ್ತಿ ಕೊಡುವಾಗ ಗುಣಕ್ಕೆ ಇನ್ನಷ್ಟು ಮಸಾಲೆ ಸೇರಿಸಿ ಎತ್ತರಕ್ಕೇರಿಸುತ್ತೇವೆ. ಯಾವ ವ್ಯಕ್ತಿಯನ್ನು ರಂಗದಲ್ಲಿ ಇಂದ್ರ-ಚಂದ್ರನೆಂದು ಹೊಗಳಿದನೋ, ಆತ ವೇದಿಕೆ ಇಳಿದ ಬಳಿಕದ ಸ್ಥಿತಿ ನೋಡಬೇಕು? ಎಲ್ಲವೂ ಗಂಟಲ ಮೇಲಿನ ಮಾತು.
          ಬದುಕಿರುವಾಗ ಒಳ್ಳೆಯ ಮಾತಿನ ಸೊಲ್ಲಿಲ್ಲ. ಬೆನ್ನು ತಟ್ಟುವ ಕ್ರಿಯೆಯಿಲ್ಲ. ಅವಕಾಶ ಸಿಕ್ಕಾಗೆಲ್ಲಾ ಕಾಲೆಳೆಯುತ್ತಾ ಜಾತಿ-ಅಂತಸ್ತುಗಳ ಭೂತವನ್ನು ಹೊಕ್ಕಿಸಿ, ತಾನು ಮರೆಯಲ್ಲಿ ನಿಂತು ಸಂತೋಷ ಪಡುತಾರೆ. ದೂರದ ಊರಿನಲ್ಲಿ ಗೌರವ ಪ್ರಾಪ್ತಿಯಾದಾಗ ಹೊಸ ಬಣ್ಣ ಕೊಟ್ಟು ವಿಷಬೀಜವನ್ನು ಬಿತ್ತಿ ಬಿಡುತ್ತಾರೆ. ಆತ ಹಾಕಿದ ವಿಷ ವರ್ತುಲದಲ್ಲಿ 'ತಾನೇ ಸುತ್ತಿಕೊಳ್ಳುತ್ತೇನೆ' ಎಂಬ ವಿವೇಚನೆ ಇದ್ದರೂ ಹಗುರ ಮಾತುಗಳಿಂದ ಕ್ಷಣಕ್ಕೆ ಬೀಗುತ್ತೇವೆ.
            ವ್ಯಾನಿನಲ್ಲಿ ಕೇಳಿಸಿಕೊಂಡ ಆ ಮಾತೆಯ ಮಾತುಗಳನ್ನು ನೆನಪಿಸಿಕೊಂಡಾಗ ಜರುಗಿದ ಹಲವಾರು ಕೀರ್ತಿಶೇಷರ 'ಸಂಸ್ಮರಣಾ ಸಮಾರಂಭ'ಗಳ ನೆನಪು ಪದರ ಬಿಚ್ಚಿತು. ಇಲ್ಲದ ಗುಣಕ್ಕೆ ಬಣ್ಣ ಹಚ್ಚಿ ವೈಭವೀಕರಿಸುವ ಪರಿ. ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾನೋ, ಅದಕ್ಕಿಂತ ಹೊರತಾದ ವಿಚಾರಗಳ ಸುತ್ತಾಟ. 'ಇವರಿಗೆ ನಿಜವಾಗಿಯೂ ಪ್ರಶಸ್ತಿ ಬರಬೇಕಿತ್ತು' ಎನ್ನುವ ಒಣ ಕರೆಗಳು. 'ಇವರನ್ನು ಸಮಾಜ ಮಾನಿಸಲಿಲ್ಲ' ಎಂಬ ಅಪವಾದಗಳು. 'ಇನ್ನಾದರೂ ಸರಕಾರ ಇತ್ತ ಗಮನ ನೀಡಲಿ' ಎಂಬ 'ಘೋರ' ಕರೆ! ಮಾತನಾಡುವವನಿಗೂ ಗೊತ್ತಿದೆ, 'ತಾನು ಯಾರನ್ನು ನೆನಪಿಸುತ್ತಿದ್ದೇನೋ, ಆ ವ್ಯಕ್ತಿ ಪ್ರಸ್ತುತ ಬದುಕಿಲ್ಲ'!
               ಬದುಕಿದ್ದಾಗ.. ? ಒಳ್ಳೆಯ ಮಾತು ಬಿಡಿ, ಔಪಚಾರಿಕವಾದ ಮಾತನ್ನು ಆಡಿದ್ದಿದೆಯೇ? ಆತನ ಕಷ್ಟಗಳಿಗೆ ನೆರವಾಗುವುದು ಬೇಡ, ಮಾತಿನ ಸ್ಪಂದನವಾದರೂ ನೀಡಿದ್ದಿದೆಯೇ? ವೇದಿಕೆಗಳಲ್ಲಿ 'ಉತ್ತಮ ಕಲಾವಿದ' ಎಂದು ಹಾಡುವ ನಾವು, ನಮ್ಮ ಉತ್ತಮಿಕೆಯನ್ನು ಎಷ್ಟು ತೋರಿದ್ದೇವೆ? ಆ ಕಲಾವಿದನ ಅಭಿವ್ಯಕ್ತಿಯನ್ನೋ,  ಹಾಡನ್ನು ಎಷ್ಟು ನೋಡಿದ್ದೇವೆ, ಆಲಿಸಿದ್ದೇವೆ? ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಕೊಳ್ಳುತ್ತವಲ್ಲಾ.
                  ಡಾ. ಶೇಣಿಯವರು ದೈವಾಧೀನರಾದಾಗ ಕರಾವಳಿಯುದ್ದಕ್ಕೂ ಸಂಸ್ಮರಣೆಗಳು ನಡೆದುವು. 'ಅವರು ಎಂತಹ ವಾಚ್ ಕಟ್ಟುತ್ತಿದ್ದರು? ಯಾವ ವಿಧದ ಸೆಂಟ್ ಹಾಕಿಕೊಳ್ಳುತ್ತಿದ್ದರು? ಅವರ ವೀಳ್ಯ ತಟ್ಟೆಯ ಗುಣಾಗಾನ. ಅವರು ಧರಿಸುತ್ತಿದ್ದ ಉಡುಪು, ಕೈಯ ಉಂಗುರ..' ಹೀಗೆ ಶೇ. 90ರಷ್ಟು ವಿಚಾರಗಳು ವೈಭವ ಪಡೆದಿದ್ದುವು. ಅವರ ಕಲಾಗಾರಿಕೆ, ಮಾತಿನ ಲೋಕ, ಪಾತ್ರಗಳ ಮರುಸೃಷ್ಟಿ, ಖಳ ಪಾತ್ರಗಳ ಚಿತ್ರಣ.. ಇವೆಲ್ಲವೂ ಅಲ್ಲೋ ಇಲ್ಲೋ ನುಸುಳುತ್ತಿದ್ದುವು. ಹಾಗೆಂತೆ ಕೆಲವೆಡೆ ಉತ್ತಮವಾಗಿಯೂ ಸಂಸ್ಮರಣೆ ನಡೆದುದನ್ನು ಮರೆಯುವಂತಿಲ್ಲ.
                ಸಂಸ್ಮರಣಾ ಕಾರ್ಯಕ್ರಮಗಳು ಹೀಗೇಕಾಗುತ್ತಿವೆ? 'ತಮಗೊಂದು ಕಾರ್ಯಕ್ರಮ ಆಯಿತಲ್ಲಾ' ಎನ್ನುವ ಹಿನ್ನೆಲೆಯ ಆಯೋಜನೆ. ಯಾರನ್ನು ಸ್ಮರಿಸುತ್ತೇವೆಯೋ ಅವರ ಕುರಿತು ಒಂದಕ್ಷರ ಗೊತ್ತಿಲ್ಲದ 'ಸಂಪನ್ಮೂಲ ವ್ಯಕ್ತಿ'(!)ಯಲ್ಲಿ ಸಂಪನ್ಮೂಲದ ಕೊರತೆ. ಇವರನ್ನು ವೇದಿಕೆಯಲ್ಲಿ ಕೂರಿಸಿ ಮಾತು ಹೊರಡಿಸುವ ಸಾಹಸ. 'ಯಾಕಾಗಿ ಸ್ಮರಣೆಯನ್ನು ಮಾಡುತ್ತೇವೆ. ನಮಗೂ ಮರಣಿಸಿದ ವ್ಯಕ್ತಿಗೂ ವೈಯಕ್ತಿಕವಾದ, ಸಾಮಾಜಿಕವಾದ ಸಂಪರ್ಕಗಳಿವೆಯೋ'? 
               ಕಲಾವಿದ ಬದುಕಿದ್ದಾಗ, ಆತನ ಅಭಿವ್ಯಕ್ತಿಯನ್ನು ಒಮ್ಮೆಯೂ ನೋಡದ-ಕೇಳದ ಮಂದಿ ಬಳಿಕ ಮಾಡುವ ಸಂಸ್ಮರಣೆ ಇದೆಯಲ್ಲಾ, ಅದು ಅರ್ಥಶೂನ್ಯ. 'ಈ ಸಮಾರಂಭ ಮರಣಿಸಿದ ವ್ಯಕ್ತಿಗೆ ನೀಡುವ ಗೌರವ' ಎನ್ನುತ್ತಾ ವಂದನಾರ್ಪಣೆ ಮಾಡುತ್ತೇವೆ. ನಿಜ ಜೀವನದಲ್ಲಿ ಗೌರವ ನೀಡದ ನಾವು, ಮರಣಿಸಿದ ಬಳಿಕ ಗೌರವ ನೀಡುತ್ತೇವೆ!
               ಕಲಾವಿದ ಸಮಾಜದ ಕಣ್ಣು. ಅದನ್ನು ಕಾಪಾಡಬೇಕಾದುದು ಸಮಾಜ. ಪ್ರಸ್ತುತ ಕಾಲಮಾನದಲ್ಲಿ ಇವೆಲ್ಲವೂ ಆರ್ಥ ಕಳೆದುಕೊಳ್ಳುತ್ತಿದೆ. ಅದರ ಮೇಲೆ ಅನರ್ಥವನ್ನು ಹೇರುತ್ತೇವೆ. ಗೌರವ, ಮಾನ, ಸಂಮಾನಗಳೆಲ್ಲಾ ಶುಷ್ಕವಾಗುತ್ತಿವೆ. ಹೀಗಿರುತ್ತಾ 'ಬದುಕಿರುವಾಗ ಎಷ್ಟು ಹೊಗಳಿದ್ದೇವೆ' ಎಂಬ ಆ ಮಾತೆಯ ಮಾತಿನಲ್ಲಿ ಎಷ್ಟೊಂದು ಸತ್ಯವಿದೆಯಲ್ವಾ.

ಬದುಕಿನ ಹಳಿಯಲ್ಲಿ ಹೆದ್ದಾರಿಯ ಸವಾರಿ

            ಶೀರ್ಷಿಕೆ ಓದುವಾಗಲೇ 'ಈತ ಅಭಿವೃದ್ಧಿಯ ವಿರೋಧಿ' ಎಂಬ ಹಣೆಪಟ್ಟಿ ಸುಲಭವಾಗಿ ನೀವು ಕಟ್ಟಿಬಿಡ್ತೀರಿ. ಬರೆಹ ಪೂರ್ತಿ ಓದಿದ ಬಳಿಕ ನಿರ್ಧಾರಕ್ಕೆ ಬನ್ನಿ. ಬದುಕಿನ ವೇಗವೀಗ ದುಪ್ಪಟ್ಟು. ಎಲ್ಲವೂ ತಕ್ಷಣ ಆಗಬೇಕೆನ್ನುವ ಧಾವಂತ. ವಾಹಿನಿಗಳ ಬ್ರೇಕಿಂಗ್ ನ್ಯೂಸಿನ ಹಾಗೆ.
          ಓರ್ವ ವ್ಯಕ್ತಿಯನ್ನು ಗ್ರಹಿಸಿಕೊಂಡರೆ ಸಾಕು, 'ಓ, ಅವನಾ.. ಅವನ ಬಗ್ಗೆ ಎಲ್ಲವೂ ಗೊತ್ತಿದೆ' ಎಂಬ ತಕ್ಷಣದ ತೀರ್ಮಾನ. ಕಲಾವಿದನ ಅಭಿವ್ಯಕ್ತಿಯನ್ನು ಒಂದಿಬ್ಬರು ಹೊಗಳಿದರೆನ್ನಿ, ಇಂತಹುದಕ್ಕೆ ಪ್ರತಿಕ್ರಿಯೆ ಹೇಳಲೆಂದೇ ರೂಪುಪಡೆದಿರುವ ವ್ಯಕ್ತಿ ಏನಂತಾನೆ?  'ಛೇ.. ನೀವು ಆ ವ್ಯಕ್ತಿಯನ್ನು ಹೊಗಳುವುದಾ.. ಅವನ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ..' ಎಂದು ತೀರ್ಪು ಪ್ರಕಟಿಸಿಬಿಡುತ್ತಾರೆ. ಒಬ್ಬನಿಗೆ 'ಸರಿದಾರಿ'ಯಲ್ಲೇ ಪ್ರಶಸ್ತಿ ಬಂತೆನ್ನಿ, 'ಅವನಿಗಾ ಮಾರಾಯ್ರೆ.. ಎಷ್ಟು ಕೊಟ್ಟಿದ್ದಾನೋ ಏನೋ.. ಅವನ ಬಗ್ಗೆ ಎಲ್ಲವೂ ಗೊತ್ತಿದೆ..', ಎಂದು ನಾಲ್ಕು ಮಂದಿಯ ಮಧ್ಯೆ ಸುಭಗರಾಗುವವರು ಎಷ್ಟು ಮಂದಿ ಬೇಕು? ಈ 'ಎಲ್ಲವೂ ಗೊತ್ತಿದೆ' ಅಂತಾರಲ್ಲಾ, ನಿಜವಾಗಿಯೂ 'ಅವರಿಗೆ ಏನೂ ಗೊತ್ತಿರುವುದಿಲ್ಲ' ಅಂತ ನಮಗೆ ಗೊತ್ತಿರುವುದಿಲ್ಲ!
          ಋಣಾತ್ಮಕ ಪ್ರಿಯರಾದ ಇಂತಹವರ ಮಧ್ಯೆ ಜೀವಿಸುತ್ತಾ ಕೆಲವೊಮ್ಮೆ ನಾವು ಅವರಂತೆಯೇ ಆಗದಿರುವುದೇ ಬದುಕಿನ ಜಾಣ್ಮೆ. ಹಾಗಾಗಿ ತಕ್ಷಣದ ನಿರ್ಧಾರದ ಬದಲು, ವಿಷಯದ ಆéಳಕ್ಕೆ ಹೋಗಿ ಮತಿಯನ್ನು ಮಸೆದರೆ ಮಾತ್ರ ಬೌದ್ಧಿಕವಾದ ಅಭಿವೃದ್ಧಿ. ಈ ಹಿನ್ನೆಲೆಯಿಂದ ನೋಡಿದರೆ ಶೀರ್ಷಿಕೆ ಅಪ್ರಿಯವಾಗಲಾರದು.
          ದೇಶಾದ್ಯಂತ 'ಅಭಿವೃದ್ಧಿಯ ಅಲೆ' ಏಳುತ್ತಿದೆ! ಹಗರಣಗಳ ಅಭಿವೃದ್ಧಿ ಒಂದೆಡೆ, ಹೆದ್ದಾರಿಗಳ ಅಭಿವೃದ್ಧಿ ಮತ್ತೊಂದೆಡೆ. ಈಗಿನ ವಾಹನ ದಟ್ಟಣೆಗದು ಅನಿವಾರ್ಯ. ಹೆಜ್ಜೆಗೊಂದು ಮಣ್ಣುಮಾಂದಿ (ಜೆಸಿಬಿ) ಯಂತ್ರಗಳ ಸದ್ದು; ಜಲ್ಲಿ, ತಾರು, ಕಾಂಕ್ರಿಟ್.. ಹೀಗೆ ಹಲವು ಕೆಲಸಗಳಿಗೆ ಯಂತ್ರಗಳ ಬಳಕೆ. ಇವೆಲ್ಲಾ ಇಲ್ಲದಿರುತ್ತಿದ್ದರೆ ಅಭಿವೃದ್ಧಿಗೆ ವಾಯುವೇಗ ಬರುತ್ತಿರಲಿಲ್ಲ ಎಂಬುದು ಸತ್ಯ.
          ಹಿಂದಿನ ವಾರ ರಾಜಧಾನಿಗೆ ಸ್ನೇಹಿತ ಶ್ರೀರಾಮ ಪಾತಾಳರ ಆಲ್ಟೋ ಕಾರಲ್ಲಿ ಪ್ರಯಾಣಿಸುತ್ತಿದ್ದೆ. ಹಾಸನದಿಂದ ಒಂದಷ್ಟು ಕಿಲೋಮೀಟರ್ ಕ್ರಮಿಸಿದ ಬಳಿಕ ಸುಂಕ ಸಹಿತ ಚತುಷ್ಪಥ ರಸ್ತೆಯ ಪ್ರಯಾಣಾನುಭವ. ಶ್ರೀರಾಮ ಹೇಳುತ್ತಾರೆ, 'ಎಕ್ಸಿಲೇಟರ್ ಒತ್ತಿದಷ್ಟೂ ವೇಗವಾಗುವ ವಾಹನದ ವೇಗಸುಖ ಇದೆಯಲ್ಲಾ, ಅದನ್ನು ಹೇಗೆ ಹೇಳಲಿ ಮಾರಾಯ್ರೆ..'!  ಕಾರಿನೊಳಗೆ ಕುಳಿತವರಿಗೆ ಕುಲುಕಾಟವಿಲ್ಲ, ವೇಗದ ಅನುಭವವಿಲ್ಲ. ಕಿಲೋಮೀಟರ್ ತೋರಿಸುವ ಉಪಕರಣ ಮಾತ್ರ ಕ್ಷಿಪ್ರವಾಗಿ ತನ್ನ ಅಂಕಿಗಳನ್ನು ಬದಲಿಸುತ್ತಾ ಹೋಗುತ್ತದಷ್ಟೇ. ಸುಮಾರು ನೂರು ಕಿಲೋಮೀಟರ್ ದೂರ ಪ್ರಯಾಸವಿಲ್ಲದ ಪ್ರಯಾಣ.
          ಒಂಭತ್ತು ವರುಷದ ಹಿಂದೆ ಇದೇ ದಾರಿಯಲ್ಲಿ ಕಾರಿನಲ್ಲೊಮ್ಮೆ ಪ್ರಯಾಣಿಸಿದ್ದೆ. ದಾರಿಯುದ್ದಕ್ಕೂ ಹಲವು ಪಟ್ಟಣಗಳು. ಸುತ್ತಮುತ್ತ ಕೃಷಿ ಕಾರ್ಯಗಳು. ಹೂ, ಹಲಸು, ಹಣ್ಣುಗಳನ್ನು ಮಾರುತ್ತಿದ್ದ ಮಕ್ಕಳು. ಬೀಡಾ ಬೀಡಿ ಗೂಡಂಗಡಿಗಳು. ಚಿಕ್ಕ ಚಹದಂಗಡಿಗಳು. ತರಕಾರಿ ಮಾರುಕಟ್ಟೆಗಳು. ಶೆಡ್ನೊಳಗೆ ನಿತ್ಯ ಬ್ಯುಸಿಯಾಗಿರುತ್ತಿದ್ದ ಫಿಟ್ಟರ್ಗಳು, ರಸ್ತೆಗಂಟಿಕೊಂಡೇ ಹಳ್ಳಿಗಳಿಗೆ ಸಂಪರ್ಕ ನೀಡುವ ಕಚ್ಚಾ ರಸ್ತೆಗಳು.. ಹೀಗೆ ಬದುಕನ್ನು ರೂಪಿಸುವ ಹಲವು ಉಪಾಧಿಗಳನ್ನು ನೋಡಿದ ದೃಶ್ಯಗಳು ಮಾಸಿಲ್ಲ.
          ಮೊನ್ನಿನ ಪ್ರಯಾಣದಲ್ಲಿ ಮಾತ್ರ ಇವೆಲ್ಲಾ ಮಾಯ! ಚಿಕ್ಕಪುಟ್ಟ ಪಟ್ಟಣಗಳನ್ನು ಸೀಳಿ ಹೊಗುವ ಹೆದ್ದಾರಿಗಳು ಕೃಷಿ ಭೂಮಿಗಳನ್ನು ತೆಕ್ಕೆಗೆ ಸೇರಿಸಿಕೊಂಡಿವೆ. ರಸ್ತೆ ಬದಿ ಚಿಕ್ಕಪುಟ್ಟ ವ್ಯಾಪಾರಗಳನ್ನು ಮಾಡಿ ನಾಲ್ಕು ಕಾಸು ಸಂಪಾದಿಸಿಕೊಂಡಿದ್ದ ಎಷ್ಟೋ ಮಂದಿ ಬಹುಶಃ ಉದ್ಯೋಗವನ್ನೇ ಬದಲಿಸಿಕೊಂಡಿರಬೇಕು. ತನ್ನ ಅಂಗಳದಲ್ಲಿ ಬೆಳೆದ ತರಕಾರಿಯನ್ನು ರಸ್ತೆಯಂಚಿನಲ್ಲಿಟ್ಟು ಮಾರುತ್ತಿದ್ದ ಅಮ್ಮಂದಿರು ಎಲ್ಲಿಗೆ ಹೋದರೋ? ನೆಲಮಟ್ಟದಿಂದ ಹತ್ತಿಪ್ಪತ್ತು ಅಡಿ ಎತ್ತರಕ್ಕೆ ಏರಿಸಿಕೊಂಡ ರಸ್ತೆಗಳು ಪಟ್ಟಣವನ್ನು ಸೀಳಿದ್ದು ಮಾತ್ರವಲ್ಲ, ಬದುಕನ್ನು ಸೀಳಿರುವುದು ಹೊರ ಪ್ರಪಂಚಕ್ಕೆ ಸುದ್ದಿಯಾಗದು.
          ಒಮ್ಮೆ ಹೆದ್ದಾರಿ ಪ್ರವೇಶಿಸಿದರೆ ಆಯಿತು, ಹೊರ ಪ್ರಪಂಚ ಶೂನ್ಯವಾಗುತ್ತದೆ. ಐದಾರು ಕಿಲೋಮೀಟರಿಗೆ ಅಲ್ಲಲ್ಲಿ ಹಳ್ಳಿಯನ್ನು ಸಂಪರ್ಕಿಸಲು ಕಿರು ವ್ಯವಸ್ಥೆಯಿದೆ. ಒಂದೆರಡು ಫರ್ಲಾಂಗ್ ದೂರವನ್ನು ಮೂರ್ನಾಲ್ಕು ಕಿಲೋಮೀಟರ್ ಸುತ್ತುವಂತೆ ಮಾಡಿ, ಬದುಕನ್ನೇ ಸುರುಳಿಸಿದ ಕತೆಯು ಅಭಿವೃದ್ಧಿಯ ವೇಗದ ಸದ್ದಿಗೆ ಕೇಳಿಸದು.  'ಹೆದ್ದಾರಿ ಇರೋದು ಮನುಷ್ಯರಿಗೆ ನಡೆದಾಡಲು ಅಲ್ಲ, ಅದು ವಾಹನಗಳಿಗೆ..,' ಪುಟ್ಟಕ್ಕನ ಹೈವೇ ಸಿನಿಮಾದಲ್ಲಿ ಬರುವ ಮಾತು ನೆನಪಾಯಿತು.
          ರಸ್ತೆಯಿಂದ ಕೆಳಮಟ್ಟದಲ್ಲಿರುವ ಶಾಲೆಯ ಮಕ್ಕಳು ರಸ್ತೆಯಲ್ಲಿ ಭರ್ರನೆ ಸಾಗುವ ವಾಹನವನ್ನು ನೋಡಿ ಆನಂದಿಸುವ ಹಲವಾರು ಶಾಲೆಗಳನ್ನು ಗಮನಿಸಿದೆ. ಬಹುಶಃ ಆ ಮಕ್ಕಳನ್ನು ಒಯ್ಯುವ ವಾಹನಗಳು ಹತ್ತಾರು ಕಿಲೋಮೀಟರ್ ಸುತ್ತುಬಳಸಿ ಹೆದ್ದಾರಿ ಪ್ರವೇಶಿಸಬೇಕಷ್ಟೇ.
          ಬದುಕಿನಿಂದ, ಜನರಿಂದ, ಪಟ್ಟಣದಿಂದ ದೂರವಾಗಿ ಸಾಗುವ ಹೆದ್ದಾರಿಯ ಕೆಲಸಗಳು ಭರದಿಂದ ನಡೆಯುತ್ತಿದೆ. 'ಸಾರ್, ಎಲ್ಲಾ ಕೆಲಸಗಳು ಪೂರ್ತಿಯಾದರೆ ಪುತ್ತೂರಿನಿಂದ ಬೆಂಗಳೂರು ತಲುಪಲು ಐದು ಗಂಟೆಯೂ ಬೇಡ,' ಶ್ರೀರಾಮ ಪಾತಾಳರು ವಿನೋದಕ್ಕಾಡಿದರು. ಈ ಮಾತಿನ ಹಿಂದೆ ಅವಿತ 'ಜೀವಭಯ' ಕಾರನ್ನು ಸುತ್ತಿ ಮಿಂಚಿ ಮರೆಯಾಯಿತು!
          ಹಳ್ಳಿಯ ಸೌಂದರ್ಯ, ಬದುಕು, ವೈವಿಧ್ಯದ ಜನಜೀವನಗಳು 'ಅನಿವಾರ್ಯ'ವಾಗಿ ಹೆದ್ದಾರಿಯ 'ಅಭಿವೃದ್ಧಿ'ಗೆ ತಮ್ಮನ್ನು ಸಮರ್ಪಿಸಿಕೊಂಡಿವೆ. ಇವನ್ನು ಮತ್ತೆಂದೂ ನೋಡಲು ಸಾಧ್ಯವಿಲ್ಲ. ಪುನಃ ಸ್ಥಾಪಿಸುತ್ತೇವೆ ಎಂದರೂ ಸಾಧ್ಯವಾಗದ ಮಾತು. ಒಮ್ಮೆ ವಿಚಲಿತವಾದ ಬದುಕು ಹಳಿಗೆ ಬಾರದು. ಹಳ್ಳಿಗಳಲ್ಲಿ ಹೊಟ್ಟೆಪಾಡಿಗಾಗಿ ಅಂಗಡಿಯನ್ನೋ, ಹೋಟೆಲನ್ನೋ ನಡೆಸುತ್ತಿದ್ದವ ಬೇರೆ ಉದ್ಯೋಗಕ್ಕಾಗಿ ನಗರವನ್ನು ಅವಲಂಬಿಸಬೇಕು. ಆತ ನಗರಕ್ಕೆ ಹೋಗಲು ಹೆದ್ದಾರಿ ಕೈಬೀಸಿ ಕರೆಯುತ್ತಿದೆ.
          ವರುಷಗಳು ಉರುಳುತ್ತಿವೆ. ಅಳಿದುಳಿದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದು ತ್ರಾಸವಾದಾಗ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ. ಪುಡಿಗಾಸಿಗೆ ಭೂಮಿಯನ್ನು ಮಾರಿ ಹಳ್ಳಿಗರು ನಗರ ಸೇರುತ್ತಾರೆ. ಕೆಲವರು ಸೇರಿದ್ದಾರೆ. ನಗರದ ಬದುಕು ಹೈರಾಣವಾದಾಗ ಪುನಃ ಹಳ್ಳಿಗೆ ಬರೋಣವೋ, ಹಳ್ಳಿಯಲ್ಲಿ ಜಾಗವಿಲ್ಲ! ತಾನಿದ್ದ ಭೂಮಿ ಇನ್ನೊಬ್ಬರ ವಶವಾಗಿದೆ. ತನ್ನಲ್ಲಿದ್ದ ಹಣದಲ್ಲಿ ಜಾಗ ಖರೀದಿಸಬಯಸಿದರೆ, ದರ ಮಾತ್ರ ಕೋಟಿಗಳ ಲೆಕ್ಕದಲ್ಲಿ ಹರಿದಾಡುತ್ತಿರುತ್ತದೆ. ಇತ್ತ ನಗರವೂ ಸಲ್ಲ, ಅತ್ತ ಹಳ್ಳಿಯೂ ಸಲ್ಲ. ಬದುಕು ಹೈರಾಣ. ಆಗ ಒತ್ತಡ, ಸಕ್ಕರೆ ಕಾಯಿಲೆ, ವಿವಿಧ ಅಸೌಖ್ಯಗಳು ಅಟ್ಟಿಸಿಕೊಂಡು ಬರುತ್ತವೆ. ದುಡಿದ ಹಣದ ಮುಕ್ಕಾಲು ಪಾಲು ಮೆಡಿಕಲ್ ಶಾಪಿಗೋ, ಆಸ್ಪತ್ರೆಗೋ ವ್ಯಯವಾಗುತ್ತದೆ.
             ಬದುಕನ್ನು ಆಪೋಶನಗೈದ 'ಈ ಅಭಿವೃದ್ಧಿಯು ವೇಗದ ಬದುಕು ಅನಿವಾರ್ಯ'! ಎಂದು ಒಪ್ಪಿಕೊಳ್ಳೋಣ.  ರಸ್ತೆಯನ್ನಾದರೂ ಪುನಃ ನಿರ್ಮಿಸಬಹುದು. ಕೋಟಿಯಲ್ಲ, ಮಿಲಿಯ ರೂಪಾಯಿ ವ್ಯಯಿಸಿ ಹೆದ್ದಾರಿಯನ್ನು ಇನ್ನೊಮ್ಮೆ ರೂಪಿಸಬಹುದು. ಆದರೆ ಕಳೆದುಹೋದ ಬದುಕನ್ನು ಪಡೆಯುವುದಾದರೂ ಹೇಗೆ? ಸಂದು ಹೋದ ಸಂಸ್ಕೃತಿಯನ್ನು ಮರಳಿ ರೂಪಿಸುವುದಾದರೂ ಹೇಗೆ? ಈ ಚಿಂತನೆ ಶುರುವಾಗುವಾಗ ಅಷ್ಟಪಥದ ಯೋಜನಾ ಆದೇಶಕ್ಕೆ ದೊರೆಗಳ ಸಹಿಯಾಗಿರುತ್ತದೆ. ಇದೇ ಮಣ್ಣುಮಾಂದಿ ಯಂತ್ರವು ಈಗಿರುವ ಚತುಷ್ಪಥವನ್ನು ಪುಡಿಗೈಯಲು ಸಜ್ಜಾಗಿರುತ್ತದೆ!

Monday, August 20, 2012

ಗುಡ್ಡ ಹಸಿರಾದಾಗ ಮೇಲೆದ್ದ ಬಾಗೀರಥಿ

       ಇಪ್ಪತ್ತು ವರುಷಗಳಿಂದ ಭಣಭಣವಾಗಿದ್ದ ಕೊಳವೆಬಾವಿಗಳು ಮರುಜೀವ ಪಡೆದಿದೆ. ಮೂರ್ನಾಲ್ಕು  ಕಿಲೋಮೀಟರ್ ವ್ಯಾಪ್ತಿಯ ಸುಮಾರು ಹದಿನೈದಕ್ಕೂ ಮಿಕ್ಕಿ ಕೊಳವೆಬಾವಿಗಳಲ್ಲಿ ಮತ್ತೆ ನೀರು ಒಸರಿದೆ.  ಜನವರಿಯಲ್ಲಿ ಬತ್ತುತ್ತಿದ್ದ ಕೆರೆ-ಬಾವಿಗಳಲ್ಲಿ ಈಗ ಮೇ ತನಕ ನೀರಿರುತ್ತದೆ ಎಂದು ಸಂತಸವನ್ನು ಹಂಚಿಕೊಳ್ಳುತ್ತಾರೆ ಸೀಗೆಹಳ್ಳಿಯ ಕೃಷಿಕ ಶ್ರೀನಿವಾಸ ಮೂರ್ತಿ.

ದೊಡ್ಡಬಳ್ಳಾಪುರ ಜಿಲ್ಲೆಯ ಚೆನ್ನಗಿರಿ ಬೆಟ್ಟ ಅರ್ಕಾವತಿ ನದಿಯ ಮೂಲ. ಇದರ ತಪ್ಪಲಲ್ಲಿದೆ - ಚೆನ್ನಪುರ, ಚಿಕ್ಕರಾಯಪ್ಪನಹಳ್ಳಿ, ದೊಡ್ಡರಾಯಪ್ಪನಹಳ್ಳಿ, ಶೀಗೆಹಳ್ಳಿ, ಸಾಧೂಮಠ ಹಳ್ಳಿಗಳು. ಭತ್ತ, ರೇಷ್ಮೆ, ದ್ರಾಕ್ಷಿ, ಸಪೋಟ, ಸೀಬೆ, ಮಾವು, ತರಕಾರಿಗಳು.. ಹೀಗೆ ಎಲ್ಲರದೂ ಕೃಷಿ ಬದುಕು.

          ಶ್ರೀನಿವಾಸ ಮೂರ್ತಿಯವರ ಸಂತಸದ ಹಿಂದಿರುವುದು ಸಂತೋಷವಲ್ಲ, ವಿಷಾದ. ಹನ್ನೆರಡು ವರುಷದ ಹಿಂದೆ ತಮ್ಮೂರನ್ನು ಹೈರಾಣ ಮಾಡಿದ್ದ ಕಲ್ಲು ಗಣಿಗಾರಿಕೆ ದಂಧೆಯ ಕತೆ. ಹಳ್ಳಿಗರು ಏಕಮನಸ್ಸಿನಿಂದ ಒಟ್ಟಾಗಿ ಊರಿಗೆ ಬಂದ ಮಾರಿಯನ್ನು ಓಡಿಸಿದ ಕತೆ.

          ಒಂದು ಮುಂಜಾನೆ ಚೆನ್ನಗಿರಿ ಬೆಟ್ಟದಲ್ಲಿ ಸ್ಫೋಟ! ಮಲಗಿದ್ದ ಹಳ್ಳಿ ಮುಸುಕೆಳೆಯುವ ಮೊದಲೇ ಕಂಪಿಸಿತು. ಎರಡು ವಾರದ ಸ್ಫೋಟದ ಸದ್ದು ಹಳ್ಳಿಗೆ ಮೃತ್ಯು ದರ್ಶನ ಮಾಡಿಸಿತ್ತು. ಹಣ ಮತ್ತು ರಾಜಕೀಯ ಶಕ್ತಿಯ 'ಕಾಣದ' ಮೇಲಾಟಗಳು ಬದುಕನ್ನು ಹಿಂಡಿ ಹಿಪ್ಪೆ ಮಾಡಿತ್ತು. ಸರಕಾರವು ಚೆನ್ನಗಿರಿಯನ್ನು 'ಅರ್ಕಾವತಿ ಜಲಾನಯನ ಸಂರಕ್ಷಿತ ಅರಣ್ಯ ಪ್ರದೇಶ'ವೆಂದು ಘೋಷಿಸಿ, ಇಲ್ಲಿ ಸ್ಫೋಟಕ, ಗಣಿಗಾರಿಕೆ ಕೂಡದು ಎಂದು ಆದೇಶಿಸಿತ್ತು. ಕಾನೂನಿನ ಕವಚವಿದ್ದರೂ ಗಣಿಗಾರಿಕೆ ಹಳ್ಳಿಗೆ ನುಗ್ಗಿತು.  

ಜನರು ಮುಗ್ಧರು. ಅಮಾಯಕರು. ಬಹುತೇಕ ಅನಕ್ಷರಸ್ಥರು. ಗಣಿಧಣಿಗಳಿಗೆ ಬೆಟ್ಟಕ್ಕೆ ನುಸುಳಲು ಇಷ್ಟು ಸಾಕಾಗಿತ್ತು. ಅಮಾಯಕರಂತೆ ಬಂದರು. ಸರ್ವೇ ಮಾಡಿದರು. ಜನರ ಮನೋಧರ್ಮವನ್ನು ಅರಿತರು. ಜನರೊಂದಿಗೆ ಬೆರೆತರು. ವಿಶ್ವಸಿಗನಂತೆ ನಡೆದುಕೊಂಡರು. 'ಹೆಚ್ಚು ವೇತನ ನೀಡ್ತೇವೆ' ಎಂದರು. ರಾಜಕೀಯ ಮುಖಂಡರನ್ನು ಮುಷ್ಠಿಯೊಳಗಿಟ್ಟುಕೊಂಡರು. ಗಣಿಗಾರಿಕೆ ಚಾಲೂ ಆಗಲು ಬೇಕಾದ ನೀಲನಕ್ಷೆ ತಯಾರಿ. ಜತೆಗೆ ಹಳ್ಳಿಯನ್ನು ಬೆಟ್ಟಕ್ಕೆ ಬೆಸೆಯುವ ಅಗಲ ರಸ್ತೆಯ ನಿರ್ಮಾಣವೂ ಶುರುವಾಗಿತ್ತು.

'ಊರಲ್ಲೇ ಕೆಲಸ ಸಿಗುತ್ತೆ, ಕೈತುಂಬಾ ಕಾಸು ಸಿಗುತ್ತೆ. ಸಂಜೆ ಹೇಗೂ ಗಮ್ಮತ್ತು ಮಾಡ್ತಾರೆ' ಎಂದು ಬೀಗುತ್ತಿದ್ದ ಶ್ರಮಿಕರ ಗುಂಪು ಗಣಿಯವರ ದೊಡ್ಡ ಸಂಪತ್ತಾಯಿತು. ಇವರ ಮೂಲಕ ಇತರ ಅಮಾಯಕರ ವಶೀಲಿ. ಹಳ್ಳಿಯ ಮನಸ್ಸುಗಳನ್ನು ಒಡೆದು, ಗುಡ್ಡದ ಸಂಪತ್ತನ್ನು ನಗರಕ್ಕೆ ಸೇರಿಸುವ ಕಾರ್ಯಹೂರಣಗಳು ಸಿದ್ಧವಾಗುತ್ತಿದ್ದಂತೆ ಸ್ಫೋಟದ ಮಾಲೆ ಶುರು.
ಈ ಸದ್ದಿಗೆ ಮನೆಗಳ ಗೋಡೆಗಳು ಬಿರುಕುಬಿಟ್ಟವು. ಹಾರುಬೂದಿ ಹಳ್ಳಿಯನ್ನೇ ವ್ಯಾಪಿಸಿದುವು. ಕೃಷಿ ಕೈಕೊಟ್ಟಿತು. ಕೊಳವೆ ಬಾವಿಗಳು ಮುಷ್ಕರ ಹೂಡಿದುವು. ಅಂತರ್ಜಲ ಮಟ್ಟ ಕುಸಿತದ ಅನುಭವ. ಎಲ್ಲರ ಕತೆಯೂ ಒಂದೇ ರೀತಿ.

 ಹಳ್ಳಿಯ ಬದುಕಿನ ಚಿತ್ರಗಳು ಮಾಧ್ಯಮಗಳಲ್ಲಿ ಬಿತ್ತರ. ಸುದ್ದಿಗಳು ನಾಡಿನ ದೊರೆಗಳ ಕದ ತಟ್ಟಿತು. ಆದರೆ ಮನ ತಟ್ಟಲಿಲ್ಲ.  ಪರಿಸ್ಥಿತಿ ಅರಿವಾಗುವಾಗ ಸಮಯ ಮೀರಿತ್ತು. ಬದುಕನ್ನು ಗಣಿಧಣಿಗಳಿಗೆ ಒತ್ತೆಯಿಟ್ಟಾಗಿತ್ತು. ಕಾಂಚಾಣ ಸದ್ದಿನ ಪುಂಗಿಗೆ ಶ್ರಮಿಕರ ಸಣ್ಣ ಗುಂಪು ಹೆಡೆಯೆತ್ತುತ್ತಿತ್ತು. ಭುಸುಗುಟ್ಟುತ್ತಿರಲಿಲ್ಲ! ಮುಂದೇನು ದಾರಿ? ಆಸಕ್ತರು ಸೇರಿದರು, ಚರ್ಚಿಸಿದರು. ಮನೆಮನೆ ಭೇಟಿ. ಯುವಕರೊಂದಿಗೆ ಮಾತುಕತೆ. ರಾಜಕೀಯ ರಹಿತವಾದ ಹೋರಾಟಕ್ಕೆ ಅಣಿಯಾದರು. ಹಳ್ಳಿ ಉಳಿಸುವ, ಬೆಟ್ಟವನ್ನು ಸಂರಕ್ಷಿಸುವ ಯೋಜನೆ ಸಿದ್ಧವಾಯಿತು. ಹೋರಾಟ ಸಮಿತಿ ರೂಪೀಕರಣವಾಯಿತು. ರೈತ ಸಂಘ, 'ಸ್ವರಾಜ್' ಸಂಸ್ಥೆ, ಸಮಾನ ಮನಸ್ಸಿನ ಸಂಸ್ಥೆಗಳು ಹೆಗಲು ನೀಡಿದುವು.

ಮೊದಲು ಕಾನೂನಿನಡಿ ಹೋರಾಟ. ಮನವಿ, ಅರ್ಜಿಗಳನ್ನು ನೀಡಲು ಕಚೇರಿಗಳ ಅಲೆದಾಟ. ಸಚಿವರು, ಅಧಿಕಾರಿಗಳ ಭೇಟಿ. ಜನನಾಯಕರಲ್ಲಿ ಮಾತುಕತೆ. ಎಲ್ಲವೂ 'ನಿರೀಕ್ಷಿತ' ನಿಷ್ಫಲ. ಮುಂದಿನ ದಾರಿ - ಗಾಂಧಿಗಿರಿ ಹೋರಾಟ. ಮುಖ್ಯವಾಗಿ ಮಹಿಳೆಯರು ಹೋರಾಟದ ಮುಂಚೂಣಿಯಲ್ಲಿದ್ದರು. ಹಳ್ಳಿ ಎದ್ದು ನಿಂತಾಗ ಗಣಿಯವರು ಬೆವರೊರೆಸಿಕೊಂಡರು. ಸಬೂಬು ಹೇಳಿ ಹಳ್ಳಿಗರ ಮೇಲೆ ಗೂಬೆ ಕೂರಿಸುವ ಪ್ರಯತ್ನವೂ ಮುಂದುವರಿದಿತ್ತು. ಆದರೆ ಪೋಲಿಸ್, ಅರಣ್ಯ ಇಲಾಖೆ ಮತ್ತು ಪ್ರಾಮಾಣಿಕ ಸರಕಾರಿ, ಜನನಾಯಕರು ಚೆನ್ನಗಿರಿಗೆ ದನಿಯಾದರು. 

ಹಳ್ಳಿಯನ್ನು ಗುಡ್ಡಕ್ಕೆ ಸಂಪರ್ಕಿಸುತ್ತಿದ್ದ ಅಗಲ ರಸ್ತೆಯಿದೆಯಲ್ಲಾ, ಅದನ್ನು ಮೊದಲು ಬಂದ್ ಮಾಡಿದರು. ರಸ್ತೆಯುದ್ದಕ್ಕೂ ಮಣ್ಣುಮಾಂದಿ (ಜೆಸಿಬಿ) ಯಂತ್ರದಿಂದ ಹೊಂಡ ತೆಗೆದರು. ನೇರಳೆ, ಬೇವು, ಹಲಸು, ಹುಣಸೆ, ಹೊಂಗೆ, ಮಾವು.. ಹೀಗೆ ಸುಮಾರು ಸಾವಿರಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟರು. ಬೀಜಗಳನ್ನು ಗುಡ್ಡದಲ್ಲಿ ಎರಚಿದರು. ಯಾವಾಗ ಸಂಪರ್ಕ ಬಂದ್ ಆದುವೋ, ಅಲ್ಲಿಗೆ ಗಣಿಧೂಳು ಕಡಿಮೆಯಾಯಿತು. ಯಂತ್ರದ ಸದ್ದು ನಿಂತಿತು. ಜನಶಕ್ತಿಯ ಮುಂದೆ ಕಾಣದ ಮುಖಗಳು ಮರೆಯಾದುವು. ಆ ದಿನ ಜೂನ್ 11, 2006 - ಹಳ್ಳಿಗರ ಗಾಂಧಿಗಿರಿ ಹೋರಾಟಕ್ಕೆ ಜಯ ಸಿಕ್ಕಿದ ದಿವಸ. ಚೆನ್ನಗಿರಿ ಉತ್ಸವದ ಮೂಲಕ ಸಂಭ್ರಮಾಚರಣೆ.    
    
ಗಿಡಗಳನ್ನು ನೆಡುವತ್ತ ಎಷ್ಟು ಆಸಕ್ತಿ ಇತ್ತೋ, ಅದಕ್ಕೆ ನೀರು, ಗೊಬ್ಬರ ಹಾಕಿ ಸಾಕಿ ಸಲಹುವತ್ತಲೂ ಪೈಪೋಟಿ. ಕಲ್ಲು ಅಗೆದು ಬೋಳಾಗಿದ್ದ ಗುಡ್ಡಕ್ಕೆ ಪುನಃ ಹಸಿರು ಹೊದೆಸುವ ಕೆಲಸ. ಅದಕ್ಕಾಗಿ ನರ್ಸರಿಗಳ ಹುಟ್ಟು. ಗಿಡಗಳ ತಯಾರಿ.
ಚೆನ್ನಗಿರಿ ಬೆಟ್ಟ ಉಳಿಸುವ ಹೋರಾಟದಲ್ಲಿ ಜತೆಗಿದ್ದ 'ಸ್ವರಾಜ್' ಸಂಸ್ಥೆಯು 2009ರಿಂದ ಸರಕಾರದ ಆಯೋಜನೆಯಲ್ಲಿ 'ಜಲಾನಯನ ಅಭಿವೃದ್ಧಿ'  ಕೆಲಸಗಳನ್ನು ಶುರು ಮಾಡಿತು. ಸ್ಥಳೀಯ ಶ್ರೀ ಚನ್ನರಾಯಸ್ವಾಮಿ ಜಲಾನಯನ ಅಭಿವೃದ್ಧಿ ಸಮಿತಿ ಸಾಥ್ ನೀಡಿತು. ಕೆರೆಗಳ ಹೂಳು ತೆಗೆಯುವುದು, ಹಳ್ಳಿಗಳಿಗೆ ನೀರು ಸರಬರಾಜು ಕೆಲಸಗಳು ಜತೆಜತೆಗೆ ನಡೆಯುತ್ತಿದ್ದುವು. ಜಲಾನಯನ ಕೆಲಸದಡಿಯಲ್ಲಿ ಹದಿನೈದು ಸಾವಿರಕ್ಕೂ ಮಿಕ್ಕಿ ಕಾಡು ಗಿಡಗಳನ್ನು ನೆಡಲಾಗಿದೆ. ಕೆರೆಗಳ ಹೂಳು ತೆಗೆಯುವುದು, ನಾಲಾ ಬಂಡ್ಗಳ ಜೀರ್ಣೋದ್ಧಾರ, ಜಲಮರುಪೂರಣ.. ಕೆಲಸಗಳು ಸದ್ದಿಲ್ಲದೆ ನಡೆಯಿತು.

ರಾಸಾಯನಿಕ ಸಿಂಪಡಣೆಗಳಿಂದ ತೋಯ್ದ ನೆಲವನ್ನು ಪುನಃ ಫಲವತ್ತತೆ ಮಾಡುವ ಕೆಲಸಕ್ಕೆ 'ಸ್ವರಾಜ್' ಮುಂದಾಯಿತು. ಇಪ್ಪತ್ತೈದಕ್ಕೂ ಮಿಕ್ಕಿ ಕೃಷಿಕರು ಹೊರಬಂದು ಸಾವಯವ ಕೃಷಿಗೆ ಬದಲಾದರು. ಎಂಭತ್ತು ರೈತರು ಹೊಲಗಳಿಗೆ ಬದುಗಳನ್ನು ಹಾಕಿಸಿಕೊಂಡರು. ಬದುವಿನಂಚಿನಲ್ಲಿ ತರಕಾರಿ ಕೃಷಿ. ಈ ಎಲ್ಲಾ  ಕೆಲಸಗಳಿಂದಾಗಿ ಕೊಳವೆ ಬಾವಿಗಳು ಮರುಜೀವ ಪಡೆಯುತ್ತಿವೆ. ಬತ್ತಿದ ಬಾವಿಗಳು ತುಂಬುತ್ತಿವೆ. 'ಕಳೆದೆರಡು ವರುಷದಲ್ಲಿ ಸುಮಾರು ಇಪ್ಪತ್ತು ಎಕರೆಯಷ್ಟು ಕೃಷಿ ವಿಸ್ತಾರವಾಗಿದೆ. ಈಗ ಮೇಲ್ಮಣ್ಣು ಕೊಚ್ಚಿ ಹೋಗುತ್ತಿಲ್ಲ. ಇಳುವರಿಯಲ್ಲಿ ಹೆಚ್ಚಳವಾದುದನ್ನು ಗಮನಿಸಿದ್ದೇವೆ' ಎನ್ನುತ್ತಾರೆ ಸ್ವರಾಜ್ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದ ಲೋಹಿತ್. ಜತೆಗೆ ಸರಕಾರದ ವಿವಿಧ ಯೋಜನೆಗಳೂ ಅಭಿವೃದ್ಧಿಗೆ ನೆರವಾಗಿವೆ.

'ಆರು ವರುಷದ ಹಿಂದೆ ಇಳಿಲೆಕ್ಕವಾಗಿದ್ದ ಬದುಕಿನಲ್ಲಿ ವಿಶ್ವಾಸ ಬಂದಿದೆ. ಗಣಿಗಾರಿಕೆಯ ಅಬ್ಬರಕ್ಕೆ ರೋಸಿ ಹೋಗಿ ಹಳ್ಳಿಯನ್ನೇ ತೊರೆದು ಹೋಗೋಣ ಎಂದು ನಿರ್ಧರಿಸಿದ್ದೆವು. ಗಾಂಧೀಜಿಯವರು ಹಾಕಿಕೊಟ್ಟ ಅಹಿಂಸಾ ಮಾರ್ಗದ ದಾರಿಯಲ್ಲೇ ಚೆನ್ನಗಿರಿ ಹೋರಾಟವೂ ನಡೆದಿರುವುದು ನಮ್ಮ ಬದುಕಿನ ಮಹತ್ವದ ದಿನಗಳು' ಎಂದು ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಕೃಷಿಕ ಮುನಿರಾಜ್.

ಗಣಿಗಾರಿಕೆಯ ಹೋರಾಟ ಅಂತಿಮ ನಡೆಯಲ್ಲಿದ್ದಾಗ ಚೆನ್ನಗಿರಿ ಬೆಟ್ಟಕ್ಕೆ ಭೇಟಿ ನೀಡಿದ್ದೆ. ಮೊನ್ನೆ  ಫೆಬ್ರವರಿಯಲ್ಲಿ ಮತ್ತೊಮ್ಮೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ರಸ್ತೆಯುದ್ದಕ್ಕೂ ನೆಟ್ಟ ಗಿಡಗಳು ಅರೈಕೆಯಿಂದಾಗಿ ಚೆನ್ನಾಗಿ ಬೆಳೆದು ನಿಂತಿದೆ. ಗಣಿಯ ಅಟ್ಟಹಾಸಕ್ಕೆ ನಲುಗಿದ್ದ ಬೆಟ್ಟದಲ್ಲಿ ಹಸಿರು ಚಿಗುರುತ್ತಿದೆ.

ಬೆಟ್ಟದಲ್ಲಿ ಹಸಿರು ಹೊದಿಕೆ ಜೀವಪಡೆಯುತ್ತಿದ್ದಂತೆ; ಇತ್ತ ಹಳ್ಳಿಗಳ ಬಾವಿಗಳಲ್ಲಿ, ಕೊಳವೆ ಬಾವಿಗಳಲ್ಲಿ ನೀರಿನೊಸರಿಗೆ ಜೀವ ಬಂದಿದೆ. 'ನಾವು ಉಳಿಸಿದ ಹಳ್ಳಿ' ಎನ್ನುವ ಅಭಿಮಾನ ಅಲ್ಲಿ ಮೂಡಿವೆ. ಹಳ್ಳಿಯ ಒಗ್ಗಟ್ಟಿನ ಮುಂದೆ ನೋಟಿನ ಕಂತೆಗಳು ಮೌಲ್ಯ ಕಳೆದುಕೊಂಡಿವೆ.

ಗಣಿಗಾರಿಕೆಯಿಂದ ನಲುಗಿದ ಚೆನ್ನಗಿರಿ ಬೆಟ್ಟಕ್ಕೆ ಮುಕ್ತಿ ಸಿಕ್ಕಿತು. ಜತೆಗೆ ಒಂದಷ್ಟು ಸದ್ದು ಮಾಡಿತು. ಆದರೆ ಗಣಿ ಧೂಳಿನಿಂದ ಮುಚ್ಚಿಹೋಗಿರುವ ಎಷ್ಟೋ ಹಳ್ಳಿಗಳು ಇಲ್ವಾ. ಅದಕ್ಕೆ ಸದ್ದಾಗುವವರು ಯಾರು?

Wednesday, August 8, 2012

ಹಸಿದ ಧರಣಿಗೆ ಬೇಕು, ಹಸಿರು ಹೊದಿಕೆ


ತುಮಕೂರು ಜಿಲ್ಲೆಯ ತೋವಿನಕೆರೆ ಬಸ್ ನಿಲ್ದಾಣ. ಶತಮಾನ ಆಯುಸ್ಸಿನ ನಾಲ್ಕೈದು ಮರಗಳು. ಬಾನಿಗೆ ಸೂರು ಹೊಸೆದಷ್ಟು ನೆರಳು. ಅದರಡಿ ಬಸ್ಸುಗಳ ನಿಲುಗಡೆ. ಅಂಗಡಿಗಳ ವ್ಯಾಪಾರ - ಗೂಡಂಗಡಿಯಿಂದ ಸಿಮೆಂಟ್ ಗೋಡೌನ್ ತನಕ. ನಿರಂತರ ವ್ಯವಹಾರ. ಮರದ ಕಟ್ಟೆಯಲ್ಲಿ ಸಮಯ ಕೊಲ್ಲುವ ಮಂದಿ! ಹಗಲಿಡೀ ಬ್ಯುಸಿ.

ಮರದ ಮೇಲೆ 'ಪೂರ್ವಿಕರ' ಬಿಡಾರ. ಗುಬ್ಬಚ್ಚಿ, ಗಿಳಿಗಳ ವಾಸ. ಚಿಲಿಪಿಲಿಯ ನಿನಾದ.  ಮುಂಜಾನೆ ಏಳಲು ನೈಸರ್ಗಿಕ ಅಲಾರಂ. ಮಾನವ ವ್ಯವಹಾರಕ್ಕೂ, ತಮಗೂ ಸಂಬಂಧವಿಲ್ಲವೆನ್ನುವ ನಿರ್ಲಿಪ್ತ ಭಾವ. ಇದು ಒಂದೆರಡು ದಿವಸಗಳದ್ದಲ್ಲ, ಹಲವು ವರುಷಗಳ ಬದುಕು.

ತೋವಿನಕೆರೆಯಲ್ಲೂ ರಸ್ತೆ ಅಗಲೀಕರಣದ ಯೋಜನೆಗೆ ಹಸಿರು ನಿಶಾನೆ. ರಸ್ತೆಯಂಚಿನಲ್ಲಿದ್ದ ಮರಗಳ ಬಲಿ. ಪೇಟೆ ಮಧ್ಯದಲ್ಲಿದ್ದ ಐದಾರು ಮರಗಳೂ ಗರಗಸಕ್ಕೆ ಕೊರಳೊಡ್ಡಿ 'ನಾಡಿನ ಅಭಿವೃದ್ಧಿ'ಗಾಗಿ ದೇಹತ್ಯಾಗಕ್ಕೆ ಮುಂದಾಗಿದ್ದುವು. ಹಕ್ಕಿ ಪಿಕ್ಕೆಗಳಿಗೆ ಮಾತು ಬಾರದು. ಮಾತು ಬರುವ ನರನಿಗೆ ಮಾತು ಮೂಕವಾಗುವ ಹೊತ್ತು. ನಂತರದ ಸ್ಥಿತಿಯನ್ನು ಅಲ್ಲಿನ ಪತ್ರಕರ್ತರೋರ್ವರು ಬಣ್ಣಿಸುವುದು ಹೀಗೆ -

'ಯಾವಾಗ ಮರಗಳು ಉರುಳಿದುವೋ ತಾಪತ್ರಯಗಳ ಮಹಾಪೂರ. ಆಶ್ರಯಕ್ಕಾಗಿ ವಾನರ ಸೇನೆ ಮನೆಯೊಳಗೆ ನುಗ್ಗಿದುವು. ಆಹಾರಕ್ಕಾಗಿ ಅಡುಗೆ ಮನೆ ಜಾಲಾಡಿದುವು. ರಾತ್ರಿಯೂ ಉಪಟಳ. ನಿದ್ದೆಯಿಲ್ಲದ ರಾತ್ರಿಗಳು. ಗುಬ್ಬಚ್ಚಿ, ಗಿಳಿಗಳು ಒಂದೆರಡು ದಿವಸ ಹಾರಾಡಿ 'ತಪ್ಪಿಗೆ ಶಿಕ್ಷೆ ಅನುಭವಿಸಿ' ಎಂದು ಶಪಿಸಿ ತಮ್ಮ ಪಾಡಿಗೆ ಎಲ್ಲಿಗೋ ಹೋದುವು. ನಿತ್ಯ ತಂಪಿನ ಅನುಭವದ ಪೇಟೆಯಲ್ಲಿ ಬಿಸಿಲ ಧಗೆ. ಅಂಗಡಿಯ ಸೂರಿನಡಿಯಲ್ಲಿ ಬೆವರೊರೆಸಿಕೊಳ್ಳಬೇಕಾದ ಸ್ಥಿತಿ.  ಅಗಲೀಕರಣದ ಲೆಕ್ಕಾಚಾರದೊಳಗೆ ಬರುವ ಮರಗಳ ಬಲಿ ಅನಿವಾರ್ಯ. ಆದರೆ ಅದರಾಚೆಗಿನ ನೂರಾರು ಮರಗಳಿಗೂ ಸಾವು ಬಂತಲ್ಲಾ! ಅದನ್ನಾದರೂ ಉಳಿಸಬಹುದಿತ್ತು.'

ತೋವಿನಕೆರೆಯಂತಹ ನೂರಾರು ಕತೆಗಳು ಕನ್ನಾಡಿನ ಉದ್ದಕ್ಕೂ ಗೋಚರ. ಗರಗಸದ ದನಿಗೆ ಕಣ್ಣೀರ ಕತೆಗಳು ಮೌನವಾಗಿರುತ್ತವೆ. ಸರಕಾರಿ ಆದೇಶದ ಮುಂದೆ ಜನದನಿಗೆ ಎಲ್ಲಿಯ ಮಾನ. ಸೊಲ್ಲೆತ್ತಿದರೆ 'ಅಭಿವೃದ್ಧಿ ವಿರೋಧಿ'ಗಳೆಂಬ ಹಣೆಪಟ್ಟಿ. ಅಗಲೀಕರಣದ ಪ್ರಕ್ರಿಯೆಗೆ ತೊಂದರೆ ಕೊಡದ ಮರಗಳು ಯಾವ ಪಾಪ ಮಾಡಿವೆ? ಕೋಟಿ ಕೋಟಿ ವ್ಯವಹಾರದ ಕಾಮಗಾರಿಯಲ್ಲಿ ಅಗಲೀಕರಣದ ಪಾತ್ರವೆಷ್ಟೋ? ಪ್ರಶ್ನಿಸುವಂತಿಲ್ಲ. ಮೊದಲ ಮಳೆಯಲ್ಲೇ ಹೊಂಡ ಬೀಳುವ, ಕೊಚ್ಚಿಹೋಗುವ ಹೊಸ ರಸ್ತೆಗಳ ಪಾಡಿಗೆ ಪ್ರಯಾಣಿಕ ಮಾತ್ರ ಸಾಕ್ಷಿ.

ಮಡಿಕೇರಿಯ ಇಂಜಿನಿಯರ್ ಶಿವಕುಮಾರ್ ಕೊಡಗಿನ ರಸ್ತೆಯಂಚಿನ ಮರಗಳಿಗೆ ದನಿಯಾಗುತ್ತಾರೆ: ಮಡಿಕೇರಿಯಿಂದ ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ ರಸ್ತೆಯಂಚಿನಲ್ಲಿ ರಾಜರ ಕಾಲದಲ್ಲೇ ನೆಟ್ಟು ಪೋಶಿಸಿದ ಹಲಸಿನ ಮರಗಳು ರುಚಿರುಚಿಯ ಹಣ್ಣನ್ನು ನೀಡುತ್ತಿದ್ದುವು. ಹಣ್ಣುಪ್ರಿಯರು ಕೊಯಿದು ಒಯ್ಯುತ್ತಿದ್ದರು. ಕೆಲವರಿಗೆ ಮರದ ನೆರಳಲ್ಲೇ ಕುಳಿತು ಹಣ್ಣುಗಳನ್ನು ತಿನ್ನುವ ಆನಂದ. ಪ್ರಾಣಿ, ಪಕ್ಷಿಗಳಿಗೆ ಸಮೃದ್ಧ ಆಹಾರ. ರಸ್ತೆಯುದ್ದಕ್ಕೂ ನೆರಳಿನ ಮಾಲೆ. ಈಗೆಲ್ಲವೂ ಭಣಭಣ.

ಸಾಲುಮರಗಳನ್ನು ನೆಟ್ಟು ಪೋಶಿಸುವುದು ಸಾಮಾಜಿಕ ಜವಾಬ್ದಾರಿ. ನೆಟ್ಟ ಗಿಡಗಳೆಲ್ಲವೂ ಫಲ ನೀಡುವ ಹಲಸು, ಮಾವುಗಳು. ಗಿಡ ನೆಡುವ ಹೊತ್ತಲ್ಲಿ 'ಪ್ರಪಂಚ ಇಷ್ಟೊಂದು ಬದಲಾಗಿಬಿಡುತ್ತದೆ' ಎಂಬ ಕಲ್ಪನೆ ಇರಲು ಸಾಧ್ಯವಿಲ್ಲ, ಬಿಡಿ. ಅಂದಿನ ಮರಗಳೆಲ್ಲಾ ಉರುಳಿವೆ. ಇನ್ನಷ್ಟು ಉರುಳುವಿಕೆಗೆ ದಿನಗಣನೆ ಉಳಿದಿವೆ. ಗರಗಸ ಹಿಡಿದ ಕೈಗಳಿಗೆ ದೊರೆಗಳ ಶ್ರೀರಕ್ಷೆ. ಮಾತೆತ್ತಿದರೆ ಶಿಕ್ಷೆಯ ಗುಮ್ಮ. ಗುತ್ತಿಗೆದಾರನಿಗೆ ಅವಸರ.

ಒಂದು ಮರ ಕಡಿದರೆ ಅದರ ಮೂರು ಪಟ್ಟು ಗಿಡಗಳನ್ನು ನೆಡುವ ಸರಕಾರಿ ಯೋಜನೆ ಹೆಜ್ಜೆಯೂರುತ್ತಿದೆ. ಅಗಲೀಕರಣವಾದ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿದರೆ ಭವಿಷ್ಯದಲ್ಲಿ ಹಳೆಯ ಇತಿಹಾಸವೇ ಮರುಕಳಿಸಬಹುದೇನೋ! ಇಂದು ಅರುವತ್ತಡಿ ಅಗಲ, ಮುಂದೆ ನೂರಡಿ ಅಗಲವಾಗಬೇಕಾದರೆ? ಯೋಚಿಸಬೇಕಾದ ವಿಚಾರ. ಮತ್ತೆ ಪುನಃ ಗರಗಸದ ಸದ್ದು. ಅದನ್ನು ಕೇಳುವ ಜನಸಮೂಹ ಬದಲಾಗಿರುತ್ತದಷ್ಟೇ.

          ಮಾರ್ಗದ ಇಕ್ಕೆಲಗಳಲ್ಲಿ ನೆಡುವ ಗಿಡಗಳು 'ಬದುಕುಳಿದರೆ' ಬೆಳೆಯುತ್ತವೆ. ವಿದ್ಯುತ್ ಲೈನಿಗೆ ಸ್ಪರ್ಶಿಸುತ್ತಾ ಏರುತ್ತವೆ. ಕೊನೆಗೊಮ್ಮೆ ವಿದ್ಯುತ್ ಇಲಾಖೆಯ ಕೊಡಲಿಗೆ ಆಹುತಿ. ಒಂದು ಇಲಾಖೆಯು ಗಿಡಗಳನ್ನು ಬೆಳೆಯುವತ್ತ ಆಸ್ಥೆ ವಹಿಸಿದರೆ, ಮತ್ತೊಂದರಿಂದ ಕತ್ತರಿ ಪ್ರಯೋಗ. ಪರಸ್ಪರ ಮಾತುಕತೆಯಿಂದ ಗೊಂದಲವನ್ನು ಪರಿಹರಿಸಿಕೊಳ್ಳಬಹುದು. ಆದರೆ ಆಡಳಿತ ಯಂತ್ರದೊಳಗಿನ ಕಾಣದ ಕೈಗಳಿಗೆ ಬೇಕಾಗಿಲ್ಲ. ಮತ್ತದೇ ಟೆಂಡರ್, ಕಾಮಗಾರಿ, ಕೋಟಿಗಳ ಲೆಕ್ಕ. ಪರ್ಸಂಟೇಜ್ ಮಾತುಕತೆ.

          'ಕೊಡಗಿನಲ್ಲಿ ಈ ವರುಷ ಬಿದಿರು ಹೂಬಿಟ್ಟಿವೆ. ಇಲಾಖೆಗಳು ಬಿದಿರನ್ನು ನೆಡುವ ಕೆಲಸಗಳನ್ನೂ ಜತೆಜತೆಗೆ ಮಾಡುತ್ತಿವೆ. ಜನವಸತಿ ಪ್ರದೇಶದಲ್ಲಿ ನೆಡುವ ಬದಲು ಕಾಡಿನಲ್ಲಿ ಬಿದಿರು ಗಿಡಗಳನ್ನು ನೆಡಬೇಕಾದುದು ಅಗತ್ಯ. ಅವು ಬೆಳೆದಾಗ ಆನೆಗಳು ನಾಡಿಗೆ ಬಾರದಂತೆ ತಡೆಯಬಹುದು' ವಾಸ್ತವದತ್ತ ಬೆರಳು ತೋರುತ್ತಾರೆ ಶಿವಕುಮಾರ್. ಕೆಲಸಗಳು ಕಾಟಾಚಾರವಾದಾಗ ಪ್ರಮಾದಗಳು ಮರುಕಳಿಸುತ್ತಲೇ ಇರುತ್ತವೆ. ಜನವಸತಿ ಇರುವಲ್ಲಿ ಬಿದಿರು ಗಿಡಗಳನ್ನು ನೆಟ್ಟರೆ ಪರಿಣಾಮ ಊಹಿಸಿ. ದೊಡ್ಡ ದನಿಯಿಂದ ಪ್ರಮಾದತ್ತ ಬೆರಳು ತೋರಿದರೆ, ಅನುಷ್ಠಾನದ ದಾಖಲೆಗಳು ಮುಂದೆದ್ದು ಬರುತ್ತವೆ.

          ಜುಲೈ ಬಂತೆಂದರೆ ಗಿಡಗಳಿಗೆ ಬೇಡಿಕೆ. ವನಮಹೋತ್ಸವದ ಸಂಭ್ರಮ. ಒಂದು ಕಾಲಘಟ್ಟದಲ್ಲಿ ಅಕೇಶಿಯಾ, ನೀಲಗಿರಿಯನ್ನು ರತ್ನಗಂಬಳಿ ಹಾಸಿ ಸ್ವಾಗತಿಸಿದ್ದೇವೆ. ನೆಲದ ತೇವಾಂಶ ಹೀರಿ, ಮಣ್ಣಿನ ಫಲವತ್ತತೆಯನ್ನು ನಾಶ ಮಾಡುತ್ತವೆ ಎಂದು ಅರಿವಾಗಲು ವರುಷಗಳೇ ಬೇಕಾದುವು. 'ಕನ್ನಾಡಿನಲ್ಲಿ ಇಪ್ಪತ್ತು ಲಕ್ಷ ಎಕರೆ ಪ್ರದೇಶದಲ್ಲಿ ನೀಲಗಿರಿ, ಅಕೇಶಿಯಾ ಸಂಸಾರಗಳಿವೆ! ಒಂದುವರೆ ಸಾವಿರಕ್ಕೂ ಮಿಕ್ಕಿ ನೀಲಗಿರಿ ತೋಪುಗಳಿವೆ' ಎನ್ನುವುದು ಲೆಕ್ಕಾಚಾರ. 'ಮೂರು ವರುಷದಲ್ಲಿ ಅವನ್ನೆಲ್ಲಾ ಬೇರು ಸಹಿತ ಕೀಳುತ್ತೇವೆ' ಸಚಿವರೊಬ್ಬರ ಧೀರವಾಕ್ಯ.

          ಸರಿ, ಬೇರು ಸಹಿತ ಕಿತ್ತಾಯಿತು. ಸಮೂಲ ನಾಶವಾಯಿತು ಎಂದಿಟ್ಟುಕೊಳ್ಳಿ. ಮುಂದಿನ ನಡೆ?  ಕಾಡು ಮರಗಳ ಅಭಿವೃದ್ಧಿ. 'ಹಣ್ಣಿನ ಗಿಡಗಳಿಗೆ ಹೆಚ್ಚು ಒತ್ತು' ಎನ್ನುವುದು ಹೇಳಿಕೆ. ಕಾಡು ಗಿಡಗಳೊಂದಿಗೆ ಪ್ರಾಣಿಗಳಿಗೆ, ಪಕ್ಷಿಗಳಿಗೆ ಉಪಯೋಗವಾಗುವಂತಹ ಹಣ್ಣಿನ ಗಿಡಗಳನ್ನು ಅಭಿವೃದ್ಧಿ ಪಡಿಸುವುದು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಆದ್ಯತೆಯ ಕೆಲಸವಾಗಬೇಕು. ನವಿಲಿನಿಂದ ಆನೆಯವರೆಗಿನ ವಿವಿಧ ಪ್ರಾಣಿ-ಪಕ್ಷಿಗಳಿಗೆ ಬೇಕಾದ ಆಹಾರಗಳು ಕಾಡಲ್ಲೇ ಸಿಗುವಂತಹ ದೂರದೃಷ್ಟಿ ಕೆಲಸಗಳು ಕಾಲದ ಆವಶ್ಯಕತೆ. ನಂನಮ್ಮ ಸರಹದ್ದಿನಲ್ಲಿ ಎಂತೆಂತಹ ಗಿಡಗಳು ಬೇಕು ಎನ್ನುವುದು ಪಟ್ಟಿಯಾಗಿಬಿಟ್ಟರೆ ಇಲಾಖೆಯಿಂದ ಪಡೆಯಲು ಕಷ್ಟವಾಗದು. ಈ ಕೆಲಸಕ್ಕೆ ಮೊದಲು ಬೇಕಾಗಿದೆ, ಮನಸ್ಸಿನ ಟ್ಯೂನ್.

          ಮಾರ್ಗದ ಇಕ್ಕೆಡೆಗಳಲ್ಲಿ ಗಿಡ ನೆಡಲು ತೋರುವಷ್ಟೇ ಆಸಕ್ತಿ ಕಾಡನ್ನೂ ಅಭಿವೃದ್ಧಿಪಡಿಸುವತ್ತ ಬೆಳೆಯಬೇಕು. ಅಲ್ಲಿ ಗಿಡ ನೆಡುವಾಗ ಫೋಟೋಗ್ರಾಫರ್ ಇಲ್ಲದಿರಬಹುದು! ಬಹುಪರಾಕ್ ಹೇಳುವ ಮಂದಿ ಬಾರದಿರಬಹುದು! ಮಾಧ್ಯಮಗಳಲ್ಲಿ ಬೆಳಕಾಗದಿರಬಹುದು. ಉರುಹೊಡೆದ ಢಾಳು ಭಾಷಣಕ್ಕೆ ಅವಕಾಶ ಇಲ್ಲದಿರಬಹುದು! ಉಜ್ವಲ ನಾಳೆಗಳಿಗೆ, ಭವಿಷ್ಯದ ಏಳಿಗೆಗೆ 'ಕೋಟಿಗಳು' ಪ್ರಯೋಜನಕ್ಕೆ ಬಾರವು. ಮುಗಿಲೆತ್ತರಕ್ಕೆ ಏರಿದ ಮರಗಳು ಮನುಕುಲದ ಬದುಕಿನ ಉಸಿರಾಗುತ್ತದೆ. ಗರಗಸದ ಸದ್ದಿಗೆ ಮಿಡಿವ ಹೃದಯ, ನಾಳೆ ಆಮ್ಲಜನಕಕ್ಕಾಗಿ ಪರದಾಡುವ ಕ್ಷಣವನ್ನು ಊಹಿಸಿಕೊಂಡರೆ  ಮಾತು ಸ್ತಬ್ಧವಾಗುತ್ತದೆ. ಹೃದಯದ ಬಡಿತ ಹೆಚ್ಚುತ್ತದೆ.

          ಎಲ್ಲವೂ ಸರಕಾರವನ್ನು ನೆಚ್ಚಿಕೊಳ್ಳುವಂತಿಲ್ಲ. ಅವರಿಗೂ ಮಿತಿಗಳಿವೆ. ನಾಗರಿಕರಾದ ನಾವ್ಯಾಕೆ ಮುಸುಕೆಳೆದು ಗೊರಕೆ ಹೊಡೆಯುತ್ತೇವೆ? ಹಿತ್ತಿಲಿನಲ್ಲಿ, ತೋಟದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು, ಪೋಶಿಸುವ ಮನಸ್ಸು ಏಕೆ ಬರುತ್ತಿಲ್ಲ? ನಮ್ಮ ನಡುವೆ ಇರುವ ಹಿಡಿಯಷ್ಟು ಮನಸ್ಸುಗಳ ಸದ್ದಿಲ್ಲದ ಪ್ರಯತ್ನದ ಫಲವಾಗಿಯೇ ಇಂದು ಪ್ರಕೃತಿ ಉಸಿರಾಡುತ್ತಿದೆ.

ಮಳೆ ಬಂದಿಲ್ಲ ಎಂದಾಗ ಮೋಡಬಿತ್ತನೆ ಮಾಡಲು ಮುಂದಾಗುವ ಕೈಗಳು ಯಾಕೆ ಒಂದು ಗಿಡವನ್ನು ನೆಡಲು ಯೋಚಿಸುತ್ತಿಲ್ಲ? ರಸ್ತೆ ಅಗಲೀಕರಣಕ್ಕಾಗಿ ಮರ ಕಡಿಯುವ ಆದೇಶಕ್ಕೆ ಸಹಿ ಗೀಚುವ  ಕೈಗಳು ಮರವನ್ನೆಂದೂ ಮುಟ್ಟಿರಲಾರದು, ತಟ್ಟಿರಲಾರದು. ಅವರಿಗೆಲ್ಲಿನ ಕಾಡಿನ ಸ್ಪಂದನ, ಹಸುರಿನ ಸ್ಪರ್ಶ?

Friday, July 20, 2012

'ಮನೆಗೊಂದು ಚೀಲ - ಪ್ಲಾಸ್ಟಿಕ್ಕಿನಿಂದ ದೂರ'


"ಪ್ಲಾಸ್ಟಿಕ್ ಬ್ಯಾಗಿನಲ್ಲಿ ತರಕಾರಿ ಕೊಡೋದಿಲ್ಲ. ಮಣ್ಣಿನಲ್ಲಿ ಕರಗಬಹುದಾದ, ಆರೊಗ್ಯಕ್ಕೆ ಹಾನಿಯಾಗದ (ಬಯೋಡಿಗ್ರೇಡಬಲ್) ಬ್ಯಾಗ್ ಕೊಡ್ತೀನಿ. ಮೂರು ರೂಪಾಯಿ ಚಾರ್ಜ್. ಮುಂದಿನ ಸಾರಿ ಬರುವಾಗ ಕೈಚೀಲ ತಂದರೆ ಮಾತ್ರ ನನ್ನ ಅಂಗಡಿಯಲ್ಲಿ ತರಕಾರಿ ಸಿಗುತ್ತೆ, ಎನ್ನುತ್ತಾ ಪ್ಲಾಸ್ಟಿಕ್ ದುಷ್ಪರಿಣಾಮದ ವಿವರಗಳುಳ್ಳ ಕರಪತ್ರ ನೀಡುತ್ತಾರೆ, ಶೃಂಗೇರಿಯ ಸಾಮಾಜಿಕ ಕಾರ್ಯಕರ್ತ ಮತ್ತು ತರಕಾರಿ ವ್ಯಾಪಾರಿ ನಾಗೇಶ್ ಕಾಮತ್.

          ಒಂಭತ್ತು ವರುಷಗಳಿಂದ ಕಾಮತರು 'ಪ್ಲಾಸ್ಟಿಕ್ ಘೋರ'ತೆಯತ್ತ ದನಿ ಎತ್ತುತ್ತಲೇ ಬಂದಿದ್ದಾರೆ. ಪರಿಣಾಮ, ಶೃಂಗೇರಿ ನಗರದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳು ನೋಡಲು ಅಪರೂಪ. ತರಕಾರಿಯೋ, ದಿನಸಿಯೋ ಒಯ್ಯಲು ಕೈಚೀಲ ತರುತ್ತಾರೆ. ಒಂದು ಸಾಬೂನು ಖರೀದಿಸಿ, 'ಕ್ಯಾರಿ ಬ್ಯಾಗ್ನಲ್ಲಿ ಹಾಕಿ ಕೊಡಿ' ಎನ್ನುವವರು ಸಿಗುವುದಿಲ್ಲ!

ನಾಗೇಶರು ವಾಕಿಂಗ್ಗೆ, ಶೃಂಗೇರಿ ಬೆಟ್ಟಕ್ಕೆ, ಹೊಳೆ ಸನಿಹದ ಪಾರ್ಕಿಗೆ ಹೋದಾಗಲೆಲ್ಲಾ ಬಿದ್ದಿರುವ ಪ್ಲಾಸ್ಟಿಕ್ಗಳನ್ನು ಹೆಕ್ಕುವುದು ಬದುಕಿನಂಗ. ರೋಟರಿ ಕ್ಲಬ್ನಲ್ಲಿ ಸಕ್ರಿಯ. ಒಂದು ಅವಧಿಯಲ್ಲಿ ಅಧ್ಯಕ್ಷರೂ ಆಗಿದ್ದರು. ಆರಂಭದಲ್ಲಿ ಕ್ಲಬ್ಬಿನ ಸಭೆಗಳಲ್ಲಿ, ಅಂಗಸಂಸ್ಥೆಗಳಲ್ಲಿ, ಶಾಲೆಗಳಲ್ಲಿ ಪ್ಲಾಸ್ಟಿಕ್ ತೊಂದರೆಗಳ ಅರಿವು ಮೂಡಿಸುವ ಕೆಲಸ. ವರ್ಷವರ್ಷವೂ ಪುನರಾವರ್ತನೆ. ಪರಿಣಾಮ ಶೂನ್ಯ. 'ಇವೆಲ್ಲಾ ಥಿಯರಿಗಳಾಯಿತು. ಜನರು ಕೇಳಿ ಮರೆಯುತ್ತಾರಷ್ಟೇ. ಅವರಿಗೆ ಪ್ರಾಕ್ಟಿಕಲ್ ಬೇಕು. ಪ್ಲಾಸ್ಟಿಕ್ಕಿಗೆ ಪರ್ಯಾಯವಾಗಿ ಮಾದರಿಗಳನ್ನು ಕೊಡಬೇಕಿತ್ತು. ಅದು ಕಷ್ಟವಾಯಿತು' ಎನ್ನುತ್ತಾರೆ.

          2009-10ರಲ್ಲಿ ಶೃಂಗೇರಿ ಪಟ್ಟಣ ಪಂಚಾಯತಿನ ಅಧ್ಯಕ್ಷರಾದರು. ಪ್ಲಾಸ್ಟಿಕ್ ಆಂದೋಳನ ಹೊಸ ಹಾದಿ ಹಿಡಿಯಿತು. ಥಿಯರಿಗಳು ಮನಸ್ಸಿನಲ್ಲಿದ್ದರೂ ಅದಕ್ಕೆ ರೂಪು ಕೊಡುವ ಕೆಲಸ ವೇಗ ಪಡೆಯಿತು. ತಾಲೂಕಿನ ಒಂಭತ್ತು ಪಂಚಾಯತ್ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಬಯೋಡಿಗ್ರೇಡಬಲ್ ಬ್ಯಾಗನ್ನು ಉಚಿತವಾಗಿ ನೀಡಿದರೆ ಹೇಗೆ - ಎಂಬ ಯೋಚನೆ. ಯೋಜನೆ ಸಿದ್ಧವಾಯಿತು.

          ಪಂಚಾಯತ್ಗಳಲ್ಲಿ ಸಭೆ. ಯೋಜನೆಯ ಪ್ರಸ್ತುತಿ. ಉಚಿತವಾಗಿ ಚೀಲಗಳ ವಿತರಣೆ. 'ಇನ್ನು ಮುಂದೆ ಪ್ಲಾಸ್ಟಿಕ್ ಬ್ಯಾಗ್ಗಳನ್ನು ಬಳಸಬೇಡಿ' ಎಂಬ ಸಂದೇಶ. ಜತೆಗೆ ಪ್ಲಾಸ್ಟಿಕ್ ದುಷ್ಪರಿಣಾಮಗಳ ಮಾಹಿತಿಪತ್ರ. ಬಹುತೇಕ ಮನೆಯವರು ಯೋಜನೆಯನ್ನು ಸ್ವೀಕರಿಸಿದರು, ಅನುಷ್ಠಾನ ಮಾಡಿದರು. ಅಂಗಡಿಗೆ, ಸಂತೆಗೆ ಬರುವಾಗಲೆಲ್ಲಾ ಪಂಚಾಯತ್ ನೀಡಿದ ಚೀಲಗಳು, ಬಟ್ಟೆಚೀಲಗಳನ್ನು ತರಲಾರಂಭಿಸಿದರು. ನಾಗೇಶ ಕಾಮತರ ಆರೇಳು ವರುಷದ ಪ್ಲಾಸ್ಟಿಕ್ ವಿರೋಧಿ ಆಂದೋಳನ ಭಾಗಶಃ ಯಶಕಂಡಿತು.

ಒಂದು ಬ್ಯಾಗಿಗೆ ಹನ್ನೆರಡು ರೂಪಾಯಿ ವೆಚ್ಚ. ಪಂಚಾಯತ್ಗಳು ಅರ್ಧದಷ್ಟಾದರೂ ಭರಿಸಬೇಕೆಂದು ಮನವಿ ಮಾಡಿದರೂ ಸ್ಪಂದಿಸಿದವರು ವಿರಳ. ಚೀಲದ ಒಂದು ಬದಿಯಲ್ಲಿ 'ಮನೆಗೊಂದು ಚೀಲ, ಪ್ಲಾಸ್ಟಿಕ್ಕಿನಿಂದ ದೂರ' ಎಂಬ ಘೋಷಣೆ. ಮತ್ತೊಂದು ಬದಿಯಲ್ಲಿ ಆಯಾಯ ಪಂಚಾಯತಿನ ವಿಳಾಸ. 'ಒಂಭತ್ತು ಪಂಚಾಯತ್ಗಳಲ್ಲಿ ಏಳಕ್ಕೆ ಚೀಲ ವಿತರಣೆ ಪೂರ್ಣವಾಗಿದೆ. ಇನ್ನೆರಡು ಪಂಚಾಯತ್ಗೆ ಶೀಘ್ರ ವಿತರಿಸುತ್ತೇವೆ' ಎನ್ನುತ್ತಾರೆ ಕಾಮತ್.

ಈಚೆಗೆ ಪ್ರವಾಸಿಗರು ಬರುವಲ್ಲಿ, ದೇವಾಲಯಗಳಲ್ಲಿ ಕಡ್ಡಾಯವಾಗಿ ನಲವತ್ತು ಮೈಕ್ರಾನ್ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಸರ್ಕಾರದ ಆದೇಶ ನೀಡಿತು. ಕಾಮತರ ಹೋರಾಟಕ್ಕೆ ಇನ್ನಷ್ಟು ಪುಷ್ಠಿ. ಶೃಂಗೇರಿ ಶಾರದಾಂಬಿಕೆ ದೇವಾಲಯದಲ್ಲೂ ಪ್ಲಾಸ್ಟಿಕ್ಕಿಗೆ ವಿದಾಯ. ಬಯೋಡಿಗ್ರೇಡಬಲ್ ಚೀಲಗಳ ಬಳಕೆ. ಈ ಎಲ್ಲಾ ಅಭಿಯಾನಕ್ಕೆ ಶ್ರೀ ಶ್ರೀ ಶೃಂಗೇರಿ ಜಗದ್ಗುರುಗಳ ಬೆಂಬಲ. ಈಗ ಶೃಂಗೇರಿ ದೇವಾಲಯದ ಆವರಣಕ್ಕೆ ಪ್ಲಾಸ್ಟಿಕ್ ಚೀಲ ಹಿಡಕ್ಕೊಂಡು ಹೊಕ್ಕರೆ ಪಹರೆಯವರಿಂದ ನೀವು ತಪ್ಪಿಸಲಾರಿರಿ!

'ಭಕ್ತಾದಿಗಳು ಆನೆಗೆ, ಮೀನಿಗೆ ಸಮರ್ಪಿಸಲು ಹುರಿಯಕ್ಕಿ (ಮಂಡಕ್ಕಿ) ಖರೀದಿಸುತ್ತಾರೆ. ಅದು ಪ್ಲಾಸ್ಟಿಕ್ ಪೊಟ್ಟಣದಲ್ಲಿರುತ್ತಿತ್ತು. ಆನೆಯು ಪೊಟ್ಟಣ ಸಹಿತವಾಗಿ ಹುರಿಯಕ್ಕಿಯನ್ನು ಎಳೆದು ನುಂಗುವ ಸಾಧ್ಯತೆಗಳೇ ಹೆಚ್ಚು. ಇದರಿಂದಾಗಿ ಆನೆಗೆ ಅಪಾಯವೂ ಆಗಿತ್ತು. ಮೀನಿಗೆ ಮಂಡಕ್ಕಿ ಸಮರ್ಪಿಸಿದ ಬಳಿಕ ಪ್ಲಾಸ್ಟಿಕ್ಕನ್ನು ಅಲ್ಲೇ ಬಿಸಾಡುತ್ತಿದ್ದರು,' ಕೃಷಿಕ, ಉದ್ಯಮಿ ಅನಂತಯ್ಯನವರು ಮಾತಿನ ಮಧ್ಯೆ ನೆನಪಿಸಿದರು.

ಸರ್ಕಾರಿ ಆದೇಶವಲ್ವಾ. ಅಂಗಡಿ, ತರಕಾರಿ ಸಂತೆಗಳಿಗೆ ಅಧಿಕಾರಿಗಳಿಂದ ಲಗ್ಗೆ, ತಪಾಸಣೆ. ಸಾತ್ವಿಕವಾದ ವ್ಯವಹಾರ. ಅದಕ್ಕೂ ಬಗ್ಗದಿದ್ದಾಗ ಶುಲ್ಕ ಹೇರಿಕೆ. ಕೆಲವೆಡೆ ವಸ್ತುಗಳನ್ನು ಮುಟ್ಟುಗೋಲು ಮಾಡಿದ್ದೂ ಇದೆ. ಈ ಭಯದಿಂದಾಗಿ ಬಹುತೇಕರು ಬಯೋಡಿಗ್ರೇಡಬಲ್ ಚೀಲಗಳನ್ನು ಬಳಸುತ್ತಾರೆ. ಕಾಮತರು ವರ್ತಕ ಸಂಘದ ಕಾರ್ಯದರ್ಶಿಗಳಾದ್ದರಿಂದ ವರ್ತಕರ ಬಳಗ 'ಪ್ಲಾಸ್ಟಿಕ್ ಬಳಕೆಯಿಲ್ಲ' ಎಂಬ ಸ್ಟಿಕ್ಕರ್ಗಳನ್ನು ಅಂಗಡಿಗಳಲ್ಲಿ ಅಂಟಿಸುವ ಮೂಲಕ ಬೆಂಬಲ ನೀಡಿದ್ದಾರೆ. ಅನುಷ್ಠಾನ ಮಾಡಿದ್ದಾರೆ.

'ಪ್ಲಾಸ್ಟಿಕ್ ವಿರೋಧಿ' ಕಾರ್ಯಗಳನ್ನು ಒಪ್ಪದೇ ಇದ್ದವರೂ ಇದ್ದಾರೆ. 'ಹಾಲು, ಎಣ್ಣೆ, ಸಿದ್ಧವಸ್ತುಗಳು ಪ್ಲಾಸ್ಟಿಕ್ಕಿನಲ್ಲಿ ಬರುವುದಿಲ್ವಾ. ಅದನ್ನು ಮೊದಲು ನಿಷೇಧಿಸಿ, ನಂತರ ನಮಗೆ ಹೇಳಿ' ಎನ್ನುವ ಅಡ್ಡ ಮಾತುಗಳು; 'ನಮಗೆ ಕೈಚೀಲ ಅಭ್ಯಾಸವಿಲ್ಲ, ಅದನ್ನು ಇನ್ನು ಅಭ್ಯಾಸ ಮಾಡಲು ಸಾಧ್ಯವಿಲ್ಲ ಮಾರಾಯ್ರೆ. ಪ್ಲಾಸ್ಟಿಕ್ ಸೇಫ್ ಅಲ್ವಾ, ಮಳೆಗೆ ಒದ್ದೆಯಾಗುವುದಿಲ್ಲ' ಎನ್ನುವ ಮಂದಿ. ಸರಕಾರಿ ಆದೇಶ ಮತ್ತು ಆಂದೋಳನದ ವೇಗಕ್ಕೆ ಇವೆಲ್ಲಾ ಗಣನೆಗೆ ಬಂದಿಲ್ಲ.

'ಶೃಂಗೇರಿ ಪಟ್ಟಣ ಶೇ.80ರಷ್ಟು ಪ್ಲಾಸ್ಟಿಕ್ ಮುಕ್ತವಾಗಿದೆ. ಇನ್ನಷ್ಟು ಕೆಲಸ ಬಾಕಿಯುಳಿದಿವೆ. ಜನರು ಸ್ವಯಂ ಆಗಿ ಭವಿಷ್ಯದತ್ತ ನೋಟ ಹರಿಸಿದರೆ ನೂರಕ್ಕೆ ನೂರರಷ್ಟು ಸಾಧಿಸಬಹುದು. ಎಲ್ಲವೂ ಕಾನೂನಿನಿಂದ, ಅರಿವನ್ನು ಮೂಡಿಸುವುದರಿಂದ ಆಗುವುದಿಲ್ಲ' ಎನ್ನುತ್ತಾರೆ ಕಾಮತ್. ಇವರು ಬಯೋಡಿಗ್ರೇಡಬಲ್ ಚೀಲಕ್ಕೆ ಹೆಚ್ಚು ಒತ್ತು ಕೊಡುವುದರಿಂದ ಅವರ ವಿರುದ್ಧ ಅಪಪ್ರಚಾರವೂ ನಡೆದಿತ್ತು.

 'ಅವರು ಚೀಲದ ಫ್ಯಾಕ್ಟರಿ ಮಾಡ್ತಾರೆ. ಅದಕ್ಕಾಗಿ ಪ್ಲಾಸ್ಟಿಕ್ ವಿರೋಧಿ ನಾಟಕವಾಡ್ತಾ ಇದ್ದಾರೆ' ಎಂಬ ಆರೋಪ! ಆಂದೋಳನದ ಫಲಶೃತಿಗಳು ಬರಲಾರಂಭಿಸಿದಾಗ ಆರೋಪ ಸುಳ್ಳೆಂದು ಜನರಿಗೆ ಮನವರಿಕೆಯಾಯಿತು. 'ಪತನಸುಖಿ'ಗಳು ಎಲ್ಲಾ ಕಾಲದಲ್ಲಿ ಧುತ್ತೆಂದು ಹುಟ್ಟಿಕೊಳ್ಳುತ್ತಾ ಇರುತ್ತಾರಲ್ವಾ.

ಹಳ್ಳಿಗಳಲ್ಲಿ ಹೇಳುವಂತಹ ಅರಿವು ಮೂಡಿಲ್ಲ. ಅಷ್ಟು ಸುಲಭವೂ ಅಲ್ಲ. 'ಪ್ರತೀ ಮನೆಯವರು ಅವರವರ ಮನೆಯ ಕಸವನ್ನು ಒಂದೆಡೆ ಪೇರಿಸಿಟ್ಟುಕೊಳ್ಳಬೇಕು. ಪಂಚಾಯತ್ ಯಾ ಇತರ ಸಂಘಸಂಸ್ಥೆಗಳು ಅಲ್ಲಿಂದ ಸಂಗ್ರಹಿಸಿ ತ್ಯಾಜ್ಯ ವಿಲೆವಾರಿ ಘಟಕಕ್ಕೆ ರವಾನಿಸುವುದು' -  ಮುಂದಿರುವ ಯೋಜನೆಗಳು.

'ಹಾಲಿನ ಪ್ಲಾಸ್ಟಿಕ್, ಇತರ ಬ್ಯಾಗ್ಗಳನ್ನು ಚೆನ್ನಾಗಿ ತೊಳೆದು ತನ್ನಿ. ಅದಕ್ಕೆ ಚಿಕ್ಕ ಮೊತ್ತ ಕೊಡ್ತೇನೆ' ಎಂದು ಕಾಮತರು ವಿನಂತಿಸಿದ್ದರಂತೆ. ಅದಕ್ಕೂ ಸ್ಪಂದನ ಅಷ್ಟಕ್ಕಷ್ಟೇ. ಸಾಮಾಜಿಕ ಕಾರ್ಯಕರ್ತರಾಗಿದ್ದ ಕಾಮತರು 'ತನ್ನ ಬದುಕಿನಲ್ಲಿ ಪ್ಲಾಸ್ಟಿಕ್ಕಿಗೆ ಸ್ಥಾನವಿಲ್ಲ' ಎಂಬ ಪ್ರತಿಜ್ಞೆ ಮಾಡಿದ್ದರಿಂದ ಪ್ಲಾಸ್ಟಿಕ್ ವಿರುದ್ಧದ ಜಾಗೃತಿಗೆ ಬೀಸುಹೆಜ್ಜೆ ಬಂತು. ಈಗಿನ ಶೃಂಗೇರಿ ಪಟ್ಟಣ ಪಂಚಾಯತ್ ಅಧ್ಯಕ್ಷ ಪರಾಶರರು ಪ್ಲಾಸ್ಟಿಕ್ ಅಂದೋಳನವನ್ನು ಮುಂದುವರಿಸುತ್ತಿದ್ದಾರೆ.

'ಚೀಲ ವಿತರಣೆಯಿಂದ ಪ್ಲಾಸ್ಟಿಕ್ ಮುಕ್ತ ಎನ್ನಲು ಸಾಧ್ಯವೇ?' ಎಂಬ ಪ್ರಶ್ನೆ ಮುಂದೆ ಬರುತ್ತದೆ. ಚೀಲ ನೀಡಿಕೆ ಕೇವಲ ಸಂದೇಶವಷ್ಟೇ. ಅದನ್ನು ಅನುಷ್ಠಾನ ಮಾಡಬೇಕೆಂಬುದಕ್ಕೆ ಉಪಾಧಿ. ಕಾನೂನು ಉಂಟಲ್ವಾ, ಪಾಲನೆ ಮಾಡುತ್ತಿದ್ದಾರೆ. ಎಲ್ಲಾ ಸಂಸ್ಥೆಗಳು, ವ್ಯಕ್ತಿಗಳು ಕಾಮತರಿಗೆ ಬೆಂಬಲ, ಪ್ರೋತ್ಸಾಹ ನೀಡಿವೆ. ಇಷ್ಟಿದ್ದರೂ ಚೀಲಗಳ ತಯಾರಿ ಮತ್ತು ಓಡಾಟ ವೆಚ್ಚಗಳಿಗೆ ಸಂಪನ್ಮೂಲಗಳನ್ನು ಅಪೇಕ್ಷಿಸದೆ 'ಅರ್ಧಕ್ಕರ್ಧ' ಕಿಸೆಯಿಂದ ಭರಿಸಿದ್ದೇ ಕೆಲವು ಲಕ್ಷ ರೂಪಾಯಿಗಳಾಗಬಹುದು. ಅದನ್ನವರು ಹೇಳುತ್ತಿಲ್ಲ. ಅವರಿಗದು ಇಷ್ಟವೂ ಇಲ್ಲ. ಈ ವಿಚಾರಗಳು ಆಪ್ತರಿಗೆ, ಸಮಾನಾಸಕ್ತರಿಗೆ ಮಾತ್ರ ಗೊತ್ತು. ಅವರೆಂದು ಸುದ್ದಿ ಮಾಡಿಲ್ಲ, ಸದ್ದು ಮಾಡಿಲ್ಲ ಎಂದು ಆಪ್ತವಾಗಿ ಗುಟ್ಟಲ್ಲಿ ಹೇಳುತ್ತಾರೆ, ಅನಂತಯ್ಯನವರು. 

ಶೃಂಗೇರಿಯಲ್ಲಿ ಪ್ಲಾಸ್ಟಿಕ್ಗೆ ಪರ್ಯಾಯ ದಾರಿಗಳನ್ನು ಕಂಡುಕೊಳ್ಳಲಾಗಿದೆ. ನಮ್ಮಿಂದಲೂ ಸಾಧ್ಯವಲ್ವಾ. ಸರಕಾರದಲ್ಲಿ ಫಂಡ್ ಇದೆ. ಸಾಮಾಜಿಕ ಸಂಸ್ಥೆಗಳಲ್ಲೂ ಸಂಪನ್ಮೂಲಗಳಿಗೆ ತೊಂದರೆಯಿಲ್ಲ. ವೇದಿಕೆಗಳಲ್ಲಿ ಪ್ಲಾಸ್ಟಿಕ್ ದುಷ್ಟರಿಣಾಮಗಳ ಕುರಿತು ಮಾತನಾಡುತ್ತೇವೆ. ಏರು ಸ್ವರದಲ್ಲಿ ಉಗ್ರವಾಗಿ ಖಂಡಿಸುತ್ತೇವೆ. ಎಲ್ಲಿಯವರೆಗೆ ಮನಸ್ಸು ಪ್ಲಾಸ್ಟಿಕ್ನ ದುಷ್ಪರಿಣಾಮ, ಭವಿಷ್ಯದ ಆರೋಗ್ಯದ ಬದುಕಿನತ್ತ ವಾಲುವುದಿಲ್ಲವೋ; ಅಲ್ಲಿಯವರೆಗೆ ನಾಗೇಶ ಕಾಮತರಂತಹ ಸಮಾಜಮುಖಿ ವ್ಯಕ್ತಿತ್ವದ ವ್ಯಕ್ತಿಗಳ ಕೆಲಸಗಳೂ ಕಾಣುವುದಿಲ್ಲ.

Tuesday, July 17, 2012

ದೇವರನಾಡಿನ ದೇವಳವೊಂದರಲ್ಲಿ ಹಲಸಿನ ಹಣ್ಣಿಗೆ ಸ್ಥಾನ-ಮಾನ!





ಅದು ಹಳ್ಳಿ ದೇವಸ್ಥಾನ. ದೇವರಿಗಂದು ಹಲಸಿನ ಹಬ್ಬ! ಹಲಸಿನ ಹಣ್ಣಿನಿಂದ ಸಿದ್ಧಪಡಿಸಿದ  ಖಾದ್ಯ 'ಅಪ್ಪ'ದ ನೈವೇದ್ಯ. ಪೂಜೆಯ ಬಳಿಕ ಅಪ್ಪ ಪ್ರಸಾದ ವಿತರಣೆ. ಕಾಸರಗೋಡು (ಕೇರಳ) ಜಿಲ್ಲೆಯ ಏತಡ್ಕದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ 'ಅಪ್ಪದ ಸೇವೆ'ಗೆ (ಹಲಸಿನ ಹಬ್ಬ) ಆರ್ಧ ಶತಮಾನಕ್ಕೂ ಮೀರಿದ ಇತಿಹಾಸ.

'ಅಪ್ಪ' ಎಂದರೇನು? ಇದೊಂದು ಸಿಹಿ ಖಾದ್ಯ. ಪ್ರಚಲಿತವಿರುವ ಸಿಹಿಖಾದ್ಯ 'ಮುಳುಕ'ದ ಸಹೋದರ. ಅಕ್ಕಿಹುಡಿ, ತೆಂಗಿನತುರಿ, ಬೆಲ್ಲದ ಮಿಶ್ರಣ.  ರುಚಿಗೆ ಏಲಕ್ಕಿ. ಚೂರುಚೂರಾಗಿ ಕೊಚ್ಚಿದ ಹಲಸಿನ ಸೊಳೆಗಳನ್ನು ಬೆರೆಸಿ, ಈ ಪಾಕವನ್ನು ತುಪ್ಪದಲ್ಲಿ ಕರಿದರೆ 'ಅಪ್ಪ' ರೆಡಿ. ಅಕ್ಕಿ ಹುಡಿಯ ಬದಲು ಬೆಳ್ತಿಗೆ ಅಕ್ಕಿಯನ್ನು ಬಳಸಿ ರುಬ್ಬಿದರೂ ಓಕೆ. ಅಪ್ಪವನ್ನು ತಯಾರಿಸಲೆಂದೇ ಗುಳಿಯಿರುವ ಚಿಕ್ಕ ಬಾಣಲೆ(ಉರುಳಿ)ಯಿದೆ. ಇದಕ್ಕೆ ತುಪ್ಪವನ್ನು ಸುರುವಿ, ಕುದಿಯುತ್ತಿರುವಾಗ ಸೌಟಿನಲ್ಲಿ ಗುಳಿ ತುಂಬುವಂತೆ ಪಾಕವನ್ನು ಸುರಿಯುತ್ತಾರೆ. ಕೇರಳ, ದಕ್ಷಿಣ ಕನ್ನಡದ ಬಹುತೇಕ ದೇವಸ್ಥಾನದಲ್ಲಿ 'ಅಪ್ಪ' ಮಾಡುವ ರೀತಿ ಇದಾದರೂ, ಏತಡ್ಕದಲ್ಲಿ ಮಾತ್ರ ವರುಷಕ್ಕೊಮ್ಮೆ ಹಲಸಿನ ಹಣ್ಣಿಗೆ ಮಾನ! 

ಜೂನ್ 15ರಿಂದ ಜುಲೈ 15ರೊಳಗೆ ಅನುಕೂಲಕರ ದಿವಸದಂದು ಹಬ್ಬ ನಡೆಯುತ್ತದೆ. ಹಲಸಿನ ಹಣ್ಣು ಲಭ್ಯವಾಗುವ ಸಮಯವಿದು. ಒಂದು ಕಾಲಘಟ್ಟದಲ್ಲಿ ಆಹಾರ ಭದ್ರತೆಯನ್ನು ನೀಡಿದ ಹಲಸಿಗೆ ಕೃತಜ್ಞತೆ ಸಲ್ಲಿಸಲು ಹಬ್ಬದ ವ್ಯವಸ್ಥೆ ಬಂದಿದೆಯೋ ಏನೋ? 'ಕಳೆದ ಎರಡು ವರುಷದಿಂದ ಬಾಯ್ಮಾತಿನ ಮತ್ತು ಮಾಧ್ಯಮ ಮೂಲಕ ಪ್ರಚಾರ ಪಡೆದಿರುವುದರಿಂದ ಈ ಬಾರಿ ಭಕ್ತರ ಸಂಖ್ಯೆ ಆಧಿಕ' ಎನ್ನುತ್ತಾರೆ, ದೇವಳದ ಮುಖ್ಯಸ್ಥ ಡಾ.ವೈ.ಸುಬ್ರಾಯ ಭಟ್. ಐದಾರು ಅಪ್ಪವನ್ನೊಳಗೊಂಡ ಪ್ಯಾಕೆಟಿಗೆ ಮೂವತ್ತು ರೂಪಾಯಿ.

'ದೇವಸ್ಥಾನಕ್ಕೆ ಬರುವಾಗ ಎಲ್ಲರೂ ಒಂದೊಂದು ಹಲಸಿನ ಹಣ್ಣನ್ನು ತರಬೇಕು' ಎಂಬ ಅಲಿಖಿತ ನಂಬುಗೆ ಇದ್ದರೂ, ಪ್ರಚಲಿತ ಸಮಸ್ಯೆಯಿಂದಾಗಿ ಆಗುತ್ತಿಲ್ಲ. ಮರವನ್ನು ಏರಿ ಹಣ್ಣನ್ನು ಕೊಯ್ಯುವ ಜಾಣ್ಮೆಯ ಕುಶಲಿಗರ ಸಂಖ್ಯೆ ಕಡಿಮೆಯಾಗುತ್ತದೆ. ಮರದಲ್ಲಿ ಹಣ್ಣು ಗೋಚರವಾದರೂ ಕೊಯ್ಯಲು ಅಸಹಾಯಕತೆ.  ಹಣ್ಣು ಲಭ್ಯವಾದರೂ ಸಾಗಾಟ ಸಮಸ್ಯೆ. ಈ ಹಿನ್ನೆಲೆಯಲ್ಲಿ ಮುಂದಿನ ವರುಷದಿಂದ ಹಲಸಿನ ಹಣ್ಣನ್ನು ತರುವ ಬದಲು, ಮನೆಯಲ್ಲೇ ಶುಚಿಯಾಗಿ ಸೊಳೆಯನ್ನು ಆಯ್ದು ತರುವಂತೆ ವಿನಂತಿಸಿದರೆ ಹೇಗೆ? ಎಂಬ ಚಿಂತನೆ ನಡೆಯುತ್ತಿದೆ.

'ಈ ರೀತಿ ಮಾಡಿದರೆ ಅಪ್ಪದ ಜತೆಯಲ್ಲಿ ಎಲ್ಲರಿಗೂ ಹಲಸಿನ ಸೊಳೆಯನ್ನು ಹಂಚಬಹುದು. ಇದರಿಂದಾಗಿ ಉತ್ತಮ ರುಚಿ. ಸ್ವಾದವಿರುವ ತಳಿಯನ್ನು ಆಯ್ಕೆ ಮಾಡಿ, ಅದನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ,' ದೇವಳಕ್ಕೆ ತೀರಾ ಹತ್ತಿರ ಸಂಬಂಧವಿರುವ ಚಂದ್ರಶೇಖರ ಏತಡ್ಕರ ದೂರದೃಷ್ಟಿ.

ಬೇರೆ ಬೇರೆ ಕಾರಣಗಳಿಂದಾಗಿ ಹಿತ್ತಿಲಿನಲ್ಲಿ ಕೊಳೆಯುವ ಹಲಸಿನ ಬಳಕೆ, ಸಂರಕ್ಷಣೆಯ ಅರಿವು ಮೂಡುತ್ತಿದೆ. ಏತಡ್ಕ ಸದಾಶಿವ ದೇವಾಲಯದ 'ಹಲಸಿನ ಹಬ್ಬ'ವು ಹಲಸನ್ನು ಉಳಿಸುವ, ಬಳಸುವ ಸಂದೇಶವನ್ನು ನೀಡುತ್ತದೆ. ಹಬ್ಬದಿಂದಾಗಿ ಊರಿನಲ್ಲಿ ಹಲಸಿನ ಕುರಿತು ಮರುಚಿಂತನೆ ನಡೆಯುತ್ತಿದೆ. ಕಳೆದ ಕಾಲದ ಕಥನದ ಮರುಓದು ಆರಂಭವಾಗುತ್ತದೆ.

ಪೊಳಲಿಯಲ್ಲಿ ಕಲ್ಲಂಗಡಿಗೆ ಸ್ಥಾನ. ಏತಡ್ಕದಲ್ಲಿ ಹಲಸಿನ ಹಣ್ಣಿಗೆ ಮಾನ. ಹೀಗೆ ಒಂದೊಂದು ಹಣ್ಣಿಗೆ ಧಾರ್ಮಿಕ ನಂಟು ಅಂಟಿಸಲ್ಪಟ್ಟರೆ ನಶಿಸುತ್ತಿರುವ ಹಣ್ಣುಗಳಿಗೆ ಉಳಿಗಾಲ. ನಾಡಹಣ್ಣುಗಳ ಜತೆಗೆ ಕಾಡುಹಣ್ಣುಗಳನ್ನು ಉಳಿಸುವುದು ಕಾಲದ ಆವಶ್ಯಕತೆ.

ಚಿತ್ರ, ಮಾಹಿತಿ : ಚಂದ್ರಶೇಖರ ಏತಡ್ಕ

ಹಸಿರ ಪಾಠಕ್ಕೆ ಕಾಯುತ್ತಿವೆ, ಹಸಿದ ಮನಸ್ಸುಗಳು

ಜುಲೈ ಹಸಿರಿನ ತಿಂಗಳು. ಮಳೆಯ ಚುಮುಚುಮು. ಬೇಸಿಗೆಯ ಬೇಗೆಗೆ ಮುರುಟಿದ ಸಸ್ಯ ಸಂಪತ್ತುಗಳಿಗೆ ಮರುಜೀವ. ಸುಪ್ತವಾಗಿ ಮಲಗಿದ್ದ ಬೀಜಗಳಿಗೆ ಮೊಳಕೆಯ ಅವಸರ. ಮನೆಯೊಳಗೆ ಗಿಡಗಳ ಮಾತು. ಮನದೊಳಗೆ ಹಸಿರಿನ ತುಮುಲ. ಹೊಸ ಗಿಡಗಳ ಸ್ವಾಗತಕ್ಕೆ ಹಿತ್ತಿಲು ಸಿದ್ಧವಾಗುತ್ತದೆ. ಆಯವ್ಯಯ ರೂಪುಗೊಳ್ಳುತ್ತದೆ.

ಜುಲೈ ತಿಂಗಳು ವನಮಹೋತ್ಸವ ಪರ್ವ. ಮಹಾಭಾರತದಲ್ಲಾದರೆ ಒಂದು ಪರ್ವದ ಬಳಿಕ ಇನ್ನೊಂದು. ಇಲ್ಲಿ ಮಾತ್ರ ಒಂದೇ ಪರ್ವ! ಇಲಾಖೆಗಳಲ್ಲಿ ಗಿಡಗಳ ಹಂಚೋಣ ಭರಾಟೆ. ಕಾಡುಮರಗಳು ನಾಡೊಳಗೆ ನುಸುಳುವ ಧಾವಂತ. ಅಕೇಶಿಯಾ, ಸಾಗುವಾನಿ, ಮಾಗುವಾನಿಗಳ ದಂಡು. ಸರತಿಯಲ್ಲಿ ಮಾವು, ಹಲಸುಗಳು. ಅವುಗಳ ಬೆನ್ನಿಗೆ ದಾಸವಾಳ, ಗುಲಾಬಿಗಳು.

ಶಾಲೆಗಳಲ್ಲಿ ಹಸಿರಿನ ಪಾಠ. ವನಮಹೋತ್ಸವದ ಕಾರ್ಯಹೂರಣಗಳ ಅನಾವರಣ. ಗಣಿತ, ವಿಜ್ಞಾನದೊಳಗೆ ಹುದುಗಿದ್ದ ಮನಸ್ಸುಗಳನ್ನು ಹಸಿರು ಅಪ್ಪಿಕೊಳ್ಳುವತ್ತ ಒತ್ತಡ. ಒಪ್ಪಿಸುವ ಪ್ರಯತ್ನಗಳಿಗೆ ಆದೇಶದ ಕುಮ್ಮಕ್ಕು! ಶಾಲಾವರಣ ಪೂರ್ತಿ ನುಣುಪಾಗಿರುವುದರಿಂದ ನಾಲ್ಕು ಗೋಡೆಗಳ ಮಧ್ಯೆ ಪರಿಸರದ ಪಾಠ, ಸ್ಪರ್ಧೆಗಳು, ಬಹುಮಾನಗಳು, ಪುರಸ್ಕಾರಗಳು. ಅಬ್ಬಬ್ಬಾ.. ಒಂದೇ ದಿನದಲ್ಲಿ ಧುಮ್ಮಿಕ್ಕುವ ಹಸಿರ ಪ್ರೀತಿ!

ವಾಹಿನಿಯೊಂದರಲ್ಲಿ ರಸಪ್ರಶ್ನೆ ಕಾರ್ಯಕ್ರಮ. ಸೂಟು, ಬೂಟು, ಕತ್ತುಪಟ್ಟಿ ಧರಿಸಿದ 'ಶಿಸ್ತಿನ' ವಿದ್ಯಾರ್ಥಿಗಳು. ನಿರ್ವಾಹಕರು ತುಳಸಿಯ ಕುಡಿಯೊಂದನ್ನು ತೋರಿಸುತ್ತಾ, 'ಇದು ಯಾವ ಗಿಡದ ಕುಡಿ' ಎಂದರು. ನಾಲ್ಕು ಆಯ್ಕೆಗಳಿದ್ದುವು. ಮುಖಮುಖ ನೋಡಿಕೊಂಡರೂ ಹೊಳೆಯದ ಉತ್ತರ. ಮನೆಯ ಮುಂದಿರುವ ತುಳಸಿಯನ್ನು (ಇದ್ದರೆ?) ಗುರುತಿಸಲಾಗದ ಅಸಹಾಯಕತೆ. ನಿರ್ವಾಹಕರೇ ಉತ್ತರ ಹೇಳಿದಾಗ ವಿದ್ಯಾರ್ಥಿಗಳು ಸುಸ್ತು. ಈ ಹಿನ್ನೆಲೆಯಲ್ಲಿ ದಾರಿತಪ್ಪುತ್ತಿರುವ ಶೈಕ್ಷಣಿಕ ಹೂರಣಗಳ ಬಗ್ಗೆ ಮಾತನಾಡುವಾಗ 'ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲದಿರುವುದು ಬೌದ್ಧಿಕ ಮಟ್ಟಕ್ಕೆ ಮಾನದಂಡವಲ್ಲ' ಎಂಬ ಅಡ್ಡಮಾತುಗಳ ಸಮರ್ಥನೆ.

ರಸಪ್ರಶ್ನೆಗಳಲ್ಲಿ ಹಳ್ಳಿ, ಪುರಾಣ, ಪರಿಸರದ ವಿಚಾರಗಳು ಬಂದಾಗ ವಿದ್ಯಾರ್ಥಿಗಳ ಹಣೆಯಲ್ಲಿ ಯಾಕೆ ಬೆವರಿಳಿಯುತ್ತದೆ? 'ತನಗೆ ಗೊತ್ತಿಲ್ಲ, ಹಿರಿಯರು ಹೇಳಿಲ್ಲ, ಪಠ್ಯದಲ್ಲಿ ಇಲ್ಲವೇ ಇಲ್ಲ'! ನಮ್ಮನ್ನು ಬೌದ್ಧಿಕವಾಗಿ ಎತ್ತರಿಸುತ್ತವೆ, ಬದುಕನ್ನು ಅಪ್ಡೇಡ್ ಮಾಡುತ್ತದೆ ಎಂದು ನಂಬಿರುವ 'ವಾಹಿನಿ'ಗಳಲ್ಲಿ ಕೊಲೆ, ದರೋಡೆ, ಎತ್ತಂಗಡಿ, ವಿಚ್ಛೇದನ, ಕೊಳಕು ರಾಜಕೀಯಗಳ ನೇರ ಪಾಠ! 'ಪಠ್ಯದಲ್ಲಿ ಇದ್ದ ಮಾತ್ರಕ್ಕೆ ಹಸಿರು ಪ್ರೀತಿ ಬರುತ್ತದಾ' ಎನ್ನುತ್ತಾ ಮಕ್ಕಳೆದುರೇ ವಿಚಾರಗಳನ್ನು ಹೊಸಕಿಹಾಕುತ್ತೇವೆ.

ಪರಿಸರ, ವೇದಿಕೆಯ ಸರಕಲ್ಲ

ಶಾಲೆಗಳಲ್ಲಿ ಪರಿಸರ ಸಂಘಗಳಿವೆ, ಪರಿಸರ ಕ್ಲಬ್ಗಳಿವೆ. ಉದ್ಘಾಟನೆಯೊಂದಿಗೆ ಸಮಾರೋಪದ ಬೀಜವೂ ನುಸುಳಿರುತ್ತದೆ. ಶಾಲಾರಂಭದಲ್ಲಿ ಮರುಜೀವಗೊಂಡು ಅಲ್ಲಿಂದಿಲ್ಲಿಂದ ಹೆಕ್ಕಿ ಪೋಣಿಸಿದ ವಿಚಾರಗಳನ್ನು ಪ್ರಬಂಧದ ಮೂಲಕವೋ, ಭಾಷಣಗಳ ಮೂಲಕವೋ ಪ್ರಸ್ತುತ ಪಡಿಸಿದರೆ ಮುಗಿಯಿತು. ಪತ್ರಿಕೆಗಳಲ್ಲಿ ವರದಿ ಪ್ರಕಟವಾದಲ್ಲಿಗೆ ಪರಿಸರಾಕ್ಷರ ಅನಾವರಣ! ಎಷ್ಟು ಕ್ಲಬ್ಗಳು, ಸಂಘಗಳು ಮಣ್ಣನ್ನು ಕೈಗೆ ಮೆತ್ತಿಸಿಕೊಂಡಿವೆ. ಇಲ್ಲವೆಂದಲ್ಲ, ಅಪರೂಪಕ್ಕೆ ಬೆರಳೆಣಿಕೆಯ ಶಾಲೆಗಳು ಸದ್ದಿಲ್ಲದೆ ಕೆಲಸ ಮಾಡುತ್ತಿವೆ.

 ವಾರಕ್ಕೊಂದು ಅವಧಿಯಲ್ಲಾದರೂ ಪರಿಸರದ ನೇರ ಪಾಠ ಸಿಗುತ್ತಿದ್ದರೆ ತುಳಸಿಯನ್ನು ಗುರುತಿಸಲಾಗದ 'ಬೌದ್ಧಿಕ ದಾರಿದ್ರ್ಯ' ಎದುರಾಗದು. ವಿದ್ಯಾರ್ಥಿಗಳ ಪಾಲಿಗೆ ಪರಿಸರ, ಹಸಿರಿನ ಕುರಿತಾದ ವಿಚಾರಗಳು ವೇದಿಕೆಯ ಸರಕು. ಸ್ಪರ್ಧೆಗಳಿಗೆ ಉರುಹೊಡೆವ ಉಪಾಧಿ. ಗಿಡಗಳನ್ನು ಗುರುತಿಸುವ, ಕೃಷಿಯ ಕನಿಷ್ಠ ಜ್ಞಾನವನ್ನು ನೀಡುವ, ಹಣ್ಣುಗಳು-ಕಾಯಿಗಳನ್ನು ನೋಡುವ-ತಿನ್ನುವ ಪರಿಪಾಠ ಶಾಲಾವಧಿಯಲ್ಲಿ ರೂಪುಗೊಂಡರೆ 'ಪ್ರೌಢ'ರಾದಾಗ ಒದ್ದಾಡಬೇಕಾಗಿಲ್ಲ.

ಈಚೆಗೆ ದೈತೋಟದ ಜಯಕ್ಕನಲ್ಲಿಗೆ ಹೋಗಿದ್ದೆ. ಅವರು ಹಟ್ಟಿಯಲ್ಲಿ ಹಾಲು ಹಿಂಡುತ್ತಿದ್ದರು. ಅಷ್ಟರಲ್ಲಿ ರಾಜಧಾನಿಯಿಂದ ದಂಪತಿ ಕುಟುಂಬ ಆಗಮಿಸಿತ್ತು. ಅದರಲ್ಲೊಬ್ಬ ಹತ್ತರ ವಿದ್ಯಾರ್ಥಿ, ಮತ್ತೊಬ್ಬನಿಗೆ ಪದವೀಧರನಾಗಲು ಇನ್ನೊಂದೇ ವರ್ಷ. 'ನಾನು ಹಟ್ಟಿಯಲ್ಲಿದ್ದೇನೆ. ಕುಳಿತುಕೊಳ್ಳಿ' ಜಯಕ್ಕ ಉವಾಚ. 'ನೋಡಮ್ಮ, ಅವರು ಪ್ರಾಣಿಯೊಂದಿಗಿದ್ದಾರೆ. ಅವರಿಗೆ ಭಯವಾಗುವುದಿಲ್ವಾ' ಎನ್ನಬೇಕೆ. ಜಯಕ್ಕ ಹಟ್ಟಿಯಿಂದ ಹಾಲಿನೊಂದಿಗೆ ಹೊರಬಂದರು. 'ಹಸು ಹಾಲು ಕೊಡುತ್ತಾ' ಎಂದ ಇನ್ನೊಬ್ಬ! ಜಯಕ್ಕ ದಂಗು. ಪ್ಯಾಕೆಟ್ ಹಾಲು ಕುಡಿದು ಬೆಳೆದ ಮಕ್ಕಳಿಗೆ 'ಹಸು ಹಾಲು ಕೊಡುತ್ತದೆ' ಎಂದು ಅಮ್ಮ ಹೇಳಿಲ್ಲ. ಅಮ್ಮನಿಗೆ ಗೊತ್ತಿದ್ದರೆ ಓಕೆ, ಇಲ್ಲದಿದ್ದರೆ?

'ಪಠ್ಯಪುಸ್ತಕ ಹೀಗಿರಬೇಕು' ಎಂದು ದಿನಕ್ಕೊಂದು ಹೇಳಿಕೆಯಡಿ ಬೊಬ್ಬಿಡುವ 'ಅಕ್ಷರ ಪ್ರೇಮಿ'ಗಳಿಗೆ ಪರಿಸರ ಕಾಣುತ್ತಿಲ. ಅವರ ಪಾಲಿಗೆ ಹಸಿರು ಮಸುಕು. 'ಹಸಿರಿನ ಪಾಠ ಪಠ್ಯದಲ್ಲಿ ಸೇರಲೇ ಬೇಕು' ಎಂದು ಒತ್ತಾಯಿಸುವ, ಒತ್ತಾಯಿಸಿದ ಮನಸ್ಸುಗಳು ನಿಷ್ಕ್ರಿಯವಾಗಿವೆ? ಎಲ್ಲದಕ್ಕೂ ರಾಜಕಾರಣವನ್ನು ತುರುಕಿ, ಗೊಂದಲವಾದಾಗ ಸಂತೋಷಪಡುವ 'ಪತನಸುಖಿ'ಗಳ ಸಾಮ್ರಾಜ್ಯದಲ್ಲಿ ಅಕ್ಷರಗಳಿಗೆ, ಹಸಿರಿಗೆ ಎಲ್ಲಿದೆ ಸ್ಥಾನ-ಮಾನ? ಅಕ್ಷರಸ್ಥರಾಗಿದ್ದೂ ಅನಕ್ಷರಸ್ಥರಂತೆ ವರ್ತಿಸುವ ನಾಡಿನ ದೊರೆಗಳಿಂದ ಏನನ್ನು ನಿರೀಕ್ಷಿಸಬಹುದು? ವಿದ್ಯಾರ್ಥಿಗಳಲ್ಲಿ ಭವಿಷ್ಯದ ಕನಸುಗಳನ್ನು ಬೆಳೆಸುವ ಕಾಯಕ ಅವರಿಗೆ ಬೇಕಾಗಿಲ್ಲ. ನೆನಪಿಡಿ. ಹಸುವಿನ ಪರಿಚಯವಿಲ್ಲದ, ಹಸು ನೀಡುವ ಹಾಲಿನ ಗುರುತಿಲ್ಲದ, ತುಳಸಿ ಗೊತ್ತಿಲ್ಲದ ಅನೇಕ ಹಸಿರು ಮನಸ್ಸುಗಳು ಹಸುರ ಪಾಠಕ್ಕೆ ಕಾಯುತ್ತಿವೆ.

ಹುಡುಕಾಟದ ಹುಡುಗಾಟ!

ಇನ್ನು ಇಲಾಖೆಗಳತ್ತ ಮುಖಮಾಡಿದರೆ ರೋಚಕ ಅನುಭವ. ಜುಲೈ ಹತ್ತಿರವಾದಾಗ ಗಿಡಗಳ ಹುಟುಕಾಟ. ಹತ್ತಿಪ್ಪತ್ತು ಗಿಡಗಳನ್ನು ನೀಡಿ 'ಕೃಷಿಕ ವಲಯಕ್ಕೆ ದೊಡ್ಡ ಕೊಡುಗೆ ನೀಡಿದ್ದೇವೆ' ಎಂದು ಭಾಷಣ ಬಿಗಿಯುವವರ ಹಸಿರು ಬಿಗಿತದ 'ಶುಚಿಮುಖ' ಶುಚಿತ್ವವಾಗುವುದು ಹೇಗೆ? ಕೃಷಿಕನು ಸದ್ದಿಲ್ಲದೆ ತನ್ನ ಜ್ಞಾನದ ನಿಲುಕಿನಲ್ಲಿ ಗುಡ್ಡದೆಲ್ಲೆಡೆ ಗಿಡಗಳನ್ನು ನೆಟ್ಟು ಪೋಶಿಸುತ್ತಾನೆ. ಅದರ ಫಲವನ್ನು ಹೆಂಡತಿ, ಮಕ್ಕಳ ಜತೆ ಸವಿಯುತ್ತಾ ಆನಂದವನ್ನು ಅನುಭವಿಸುತ್ತಿರುವಾಗ 'ವೇದಿಕೆಯ ಭಾಷಣ'ಗಳು ಢಾಳಾಗಿ ಕಾಣುತ್ತದೆ.

ಕಳೆದ ವರುಷ ವನಮಹೋತ್ಸವದಂದು ನೆಟ್ಟ ಹೊಂಡಕ್ಕೆ ಪುನಃ ಈ ವರುಷ ಗಿಡ ನೆಡುವ ದೌರ್ಭಾಗ್ಯ! ಅದೇ ಜಾಗದಲ್ಲಿ ಈ ವರುಷವೂ ಫೋಟೋ ಕ್ಲಿಕ್ಕಿಸಬೇಕಾದ ಸ್ಥಿತಿ. ಗಿಡ ನೆಡುವ ವ್ಯಕ್ತಿ ಮತ್ತು ಗಿಡಗಳು ಮಾತ್ರ ಬದಲಾಗಿರುತ್ತದೆ. ಅಧಿಕಾರಿಗಳು, ನೆಲ, ಹೊಂಡ ಎಲ್ಲವೂ ಹಳೆಯದೆ. ಮರುದಿವಸ ಪತ್ರಿಕೆಗಳಲ್ಲಿ ಫೋಟೋ ಬಂದರೆ ಆಯಿತು, ನಿಸರ್ಗ ಹಸಿರುಡುಗೆ ತೊಟ್ಟು ನಗುತ್ತಿರುತ್ತದೆ! ನೆಟ್ಟ ಗಿಡದ ಪಾಲನೆ, ಪೋಷಣೆಗಳು ಕಡತದೊಳಗೆ ಬೆಚ್ಚಗೆ ಮಲಗಿರುತ್ತದೆ. ಅಪರೂಪಕ್ಕೆಂಬಂತೆ ನೆಟ್ಟ ಗಿಡಗಳನ್ನು ಪೋಶಿಸುವ, ಜೋಪಾನವಾಗಿಡುವ, 'ಗಿಡಗಳನ್ನು ನೆಡಿ' ಎಂಬ ಅರಿವನ್ನು ಮೂಡಿಸುವ ಮನಸ್ಸುಗಳು ಇಲಾಖೆಯಲ್ಲಿರುವುದರಿಂದ ಇಷ್ಟಾದರೂ 'ಹಸುರು' ನಳನಳಿಸುತ್ತಿವೆ.

ಜುಲೈ ತಿಂಗಳಲ್ಲಿ ನರ್ಸರಿಗಳು (ಗಿಡಗಳ ಅಂಗಡಿ) ಬಾಗಿಲು ತೆಗೆಯುತ್ತವೆ. ದೂರದೂರಿನಿಂದ ಗಿಡಗಳನ್ನು ತರಿಸುತ್ತವೆ. ಗಿಡಗಳ ಜಾತಕವನ್ನು ಪಟಪಟನೆ ಉದುರಿಸುವ ಯಜಮಾನನ ಕೈಗೆ ನೂರೋ ಇನ್ನೂರೋ ತೆತ್ತು ಗಿಡಗಳನ್ನು ತರುತ್ತೇವೆ. ನೆಡುತ್ತೇವೆ. ಮರೆತುಬಿಡುತ್ತೇವೆ. ಮುಂದಿನ ಜುಲೈ ಬಂದಾಗ ಮತ್ತೆ ನರ್ಸರಿ ನೆನಪಾಗುತ್ತದೆ. ಮತ್ತದೇ ಹುಡುಕಾಟದ ಹುಡುಗಾಟ!

ಗಿಡಗಳನ್ನು ನೆಡುವ ಪ್ರಕ್ರಿಯೆ ಮನೆಯಿಂದ ಆರಂಭವಾಗಬೇಕು. ಅದಕ್ಕಾಗಿ ಮನ ಸಜ್ಜಾಗಬೇಕು. ಪಕ್ಕದ ಮನೆಯವನ ಮುಂದೆ ಸುಭಗನಾಗುವುದಕ್ಕೆ ನಾಲ್ಕಾರು ಗಿಡಗಳನ್ನು ತಂದು ನೆಟ್ಟಲ್ಲಿಗೆ ಹಸಿರು ಪ್ರೀತಿ ಅನಾವರಣವಾಗದು. ನೆಡುವ ಒಂದೊಂದು ಗಿಡದ ಮುಂದೆ 'ನಾಳೆಗಳು' ಕಣ್ಣೆದುರಿಗೆ ಬಂದು ಬದುಕಿಗದು ಪಾಠವಾಗದಿದ್ದರೆ ಮುಂದಿನ ವರುಷ ಮತ್ತೆ ಜುಲೈ ಬಂದು ಬಿಡುತ್ತದೆ. ತಂದ ಬೀಜಗಳು ಕಿಟಕಿಯ ಸಂದಿನಿಂದ ಭೂಮಿಗೆ ಬೀಳಲಿ.

ಈಚೆಗೆ ಕರಾವಳಿಗೆ ಬಂದ ಸಾಲುಮರದ ತಿಮ್ಮಕ್ಕ 'ಗಿಡಗಳನ್ನು ಮಕ್ಕಳಂತೆ ಪೋಷಿಸಿ' ಎಂದು ಹೇಳಿದ ಕಿವಿಮಾತಿನಲ್ಲಿ ಪಾಠವಿಲ್ವಾ. ಯಾವುದೇ ಅಪೇಕ್ಷೆಯಿಲ್ಲದೆ ಸಾಲುಮರಗಳನ್ನು ನೆಟ್ಟು ಬೆಳೆಸಿದ ತಿಮ್ಮಕ್ಕ ಪ್ರಶಸ್ತಿಗಾಗಿ ಹಪಹಪಿಸಲಿಲ್ಲ. ತನಗೊಂದು ಸೈಟ್ ಕೊಡಿ ಎಂದು ದುಂಬಾಲು ಬಿದ್ದಿಲ್ಲ. 'ತನ್ನೂರಿಗೊಂದು ಹೆರಿಗೆ ಆಸ್ಪತ್ರೆ ಮಾಡಿಸಿಕೊಡಿ' ಎಂದಿರುವುದು ಗ್ರೇಟ್ ಅಲ್ವಾ. ಇಂತಹ ಮನಸ್ಸುಗಳು ರೂಪುಗೊಳ್ಳಬೇಕಾದುದು ಭವಿಷ್ಯ ಭಾರತದ ಪ್ರಥಮಾವಶ್ಯಕತೆ.

ಕೃಷಿಕ ಗೊರಗೋಡಿ ಶ್ಯಾಮ ಭಟ್ ಸಮಾರಂಭವೊಂದರಲ್ಲಿ ಸಿಕ್ಕಿ ಹೇಳಿದ್ದೇನು ಗೊತ್ತೇ, 'ನನ್ನಲ್ಲಿಗೆ ಬರುವ ಚಾರಣಿಗರ ಕೈಗೆ ಒಂದಷ್ಟು ಬೀಜಗಳನ್ನು ಕೊಡುತ್ತೇನೆ. ಇದನ್ನು ಕಾಡಿನಲ್ಲಿ ರಾಚಿಬಿಡಿ ಎಂದು ವಿನಂತಿಸುತ್ತೇನೆ'. ಕಣ್ಣಿಗೆ ಫಕ್ಕನೆ ಕಾಣದ, ಸದ್ದು ಮಾಡದ ಇಂತಹ ಚಿಕ್ಕ ಚಿಕ್ಕ ಪ್ರಯತ್ನಗಳು ಪರಿಸರವನ್ನು ಉಳಿಸಲು ಸಹಕಾರಿ. ಇದೇ ಪ್ರಕೃತಿಗೆ ಕೊಡುವ ಕಾಣ್ಕೆ. ಹಸಿದ ಹಸಿರು ಮನಸ್ಸುಗಳಿಗೆ ಇಂತಹ ಪಾಠಗಳು ಬೇಕಾಗಿವೆ.