Tuesday, June 24, 2014

ಕಸಿ ತಜ್ಞ, ಕೃಷಿಕ ವಿಜ್ಞಾನಿ ನಾರಾಯಣ ಕೆದಿಲಾಯರಿಗೆ ಗೌರವ

               ಕಸಿಯಲ್ಲಿ ವಿಶೇಷ ಸಾಧನೆ ಮಾಡಿದ ಕಸಿ ತಜ್ಞ ನಾರಾಯಣ ಕೆದಿಲಾಯ ಆಲಂಕಾರು (92) ಅವರಿಗೆ ಪುಣಚದಲ್ಲಿ ಜೂನ್ ೨೨ರಂದು ಜರುಗಿದ 'ಹಲಸು ಹಬ್ಬ'ದ ಗೌರವ ಸಲ್ಲಿಸಲಾಯಿತು. ವಯೋಸಹಜವಾದ ನಿಶ್ಶಕ್ತಿಯಿಂದಾಗಿ ಹಬ್ಬಕ್ಕೆ ಕೆದಿಲಾಯರು ಬರಲಾಗದ್ದರಿಂದ ಅವರ ಮನೆಯಲ್ಲಿ ಗೌರವಿಸಲಾಯಿತು.
               ಪತ್ರಕರ್ತ, ಅಂಕಣಕಾರ ನಾ. ಕಾರಂತ ಪೆರಾಜೆಯರಿಂದ ಕೆದಿಲಾಯರಿಗೆ ನುಡಿ ಗೌರವ ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ, ಮಲ್ಯ ಶಂಕರನಾರಾಯಣ ಭಟ್, ಉಬರು ರಾಜಗೋಪಾಲ ಭಟ್, ಕಡಂಬಿಲ ಕೃಷ್ಣ ಪ್ರಸಾದರು ಶಾಲು, ಹಣ್ಣುಹಂಪಲು, ಪೇಟ ಮತ್ತು ಗುಣಕಥನ ಫಲಕ ನೀಡಿ ಗೌರವಿಸಿದರು.
              ’ಕೃಷಿಕನಿಗೆ ಉದಾಸೀನ ಇರಬಾರದು. ಅದೇ ದಾರಿದ್ರ್ಯ. ಕೃಷಿಕ ಸಾಲ ಮಾಡದೆ ಬದುಕುವ ಜಾಣ್ಮೆಯನ್ನು ಕರಗತ ಮಾಡಿಕೊಂಡರೆ ಅದಕ್ಕಿಂತ ದೊಡ್ಡ ಶ್ರೀಮಂತಿಕೆ ಬೇರೆ ಇಲ್ಲ” ಎಂದು ಕೆದಿಲಾಯರು ತಮ್ಮ ಬದುಕಿನ ಯಶದ ಖುಷಿಯನ್ನು ಹಂಚಿಕೊಂಡರು. ಅವರ ಚಿರಂಜೀವಿಗಳಾದ ಕೃಷ್ಣ ಕೆದಿಲಾಯ, ಶ್ರೀಹರಿ ಕೆದಿಲಾಯ ಮತ್ತು ಮನೆಯವರು ಉಪಸ್ಥಿತರಿದ್ದರು

Monday, June 23, 2014

ಪುಣಚ 'ಹಲಸು ಹಬ್ಬ' : ದಿನವಿಡೀ ಬಿಡುವಿರದ ಕಲಾಪ-ಹಲಸಿನತ್ತ ಹೊಸಬರ ಚಿತ್ತ




 ಕ್ಯಾಂಪ್ಕೋದ ಮಾಜಿ ಅಧ್ಯಕ್ಷ, ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ಎಸ್.ಆರ್.ರಂಗಮೂರ್ತಿಯವರು ದೀಪಜ್ವಲನದ ಮೂಲಕ ಹಬ್ಬವನ್ನು ಉದ್ಘಾಟಿಸಿದರು. ಚಿತ್ರದಲ್ಲಿ (ಎಡದಿಂದ ಬಲಕ್ಕೆ) ದೇವಿಪ್ರಸಾದ್ ಕಲ್ಲಜೆ, ಡಾ.ಶ್ಯಾಮಲಮ್ಮ, ಗೇಬ್ರಿಯಲ್ ಪಿ.ಎಸ್.ವೇಗಸ್, ಮುಳಿಯ ವೆಂಕಟಕೃಷ್ಣ ಶರ್ಮ, ಮುಳಿಯ ಶ್ಯಾಮ ಭಟ್, ಮಲ್ಯ ಶಂಕರನಾರಾಯಣ ಭಟ್, ಕೃಷ್ಣಪ್ರಕಾಶ್ ಕೊಪ್ಪರತೊಟ್ಟು..
            ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ'ಪಡ್ರೆಯವರಿಂದ 'ಹಲಸಿನ ವಿಶ್ವದರ್ಶನ' ಸ್ಲೈಡ್ ಶೋ ಪ್ರಸ್ತುತಿ.

   ಪಾಕತಜ್ಞೆಯರಾದ ನಳಿನಿ ಮಾಲಂಕೋಡಿ ಮತ್ತು ಶಿಲ್ಪಾ ಕಜೆ ಇವರಿಂದ ಹಲಸಿನ ಬಗೆಬಗೆಯ ಖಾದ್ಯ ತಯಾರಿ ಪ್ರಾತ್ಯಕ್ಷಿಕೆ.

 ಪುತ್ತೂರು ಫಾರ್ಮರ್ ಫಸ್ಟ್ ಕಾರ್ಯದರ್ಶಿ, ಅಧ್ಯಾಪಕ, ಕಲಾವಿದ ಶಂಕರ್ ಸಾರಡ್ಕ ಇವರ ಅಧ್ಯಕ್ಷತೆಯಲ್ಲಿ 'ಹಲಸಿನ ಮೌಲ್ಯವರ್ಧನೆ-ಮಾರುಕಟ್ಟೆ ಮಾತುಕತೆ' ಕಲಾಪ. ಶ್ರೀ ಕ್ಷೇತ್ರ ಧರ್ಮಸ್ಥಳ 'ಸಿರಿ' ಗ್ರಾಮಾಭಿವೃದ್ಧಿ ಸಂಸ್ಥೆಯ ನಿರ್ದೇಶಕಿ ಮನೋರಮಾ ಭಟ್ ಅವರಿಂದ ಕಲಾಪ ನಿರ್ವಹಣೆ. ಚಿತ್ರದಲ್ಲಿ (ಎಡದಿಂದ ಬಲಕ್ಕೆ) ಶಿರಂಕಲ್ಲು ನಾರಾಯಣ ಭಟ್, ಉಮಾ ವಿಜಯಕುಮಾರ್ ಕೊಪ್ಪ, ಸಾಣೂರು ಶಂಕರ ಪ್ರಭು, ಮನೋರಮಾ ಭಟ್, ಮೌನೀಶ ಮಲ್ಯ, ಕೃಷ್ಣ ನಾಯಕ್ ಬಿ.ಸಿ.ರೋಡು, ಮಹೇಶ್ ಬಿ.ಕೌಡಂಗೆ.

                      ಹಲಸು ಹಬ್ಬದ ಸಮಾರೋಪ : ಲೇಖಕ, ಕೃಷಿಕ ಅಡ್ಡೂರು ಕೃಷ್ಣ ರಾವ್ ಇವರಿಂದ ಸಮಾರೋಪ ಭಾಷಣ.
 ಮಂಗಳೂರು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಯೋಗೇಶ್ ಹೆಚ್.ಆರ್. ಆಧ್ಯಕ್ಷೀಯ ಭಾಷಣ ಮಾಡುತ್ತಿರುವುದು. (ಮೇಲಿನ ಚಿತ್ರ); ಕೆಳಗಿನ ಚಿತ್ರದಲ್ಲಿ ಉಬರು ರಾಜಗೋಪಾಲ ಭಟ್, ಡಾ.ಅಶ್ವಿನಿ ಕೃಷ್ಣಮೂರ್ತಿ, ಅಡ್ಡೂರು, ಯೋಗೇಶ್, ಸಂಜೀವ ನಾಯಕ್ - ಕಾಣಬಹುದು.

                               'ಜ್ಯಾಕ್ ಮಂಚೂರಿಯನ್' ಮಳಿಗೆಯಲ್ಲಿ ರಶ್! ವೆಂಕಟ್ರಮಣ ಪುಣಚ ಇವರ ಪಾಕ ವಿಶೇಷ.
'ಮಂಚೂರಿ' ಎಷ್ಟೊಂದು ರುಚಿ.. ಎಷ್ಟಾದರೂ ಹಲಸು ನಿರ್ವಿಷ ಅಲ್ವಾ.. ಹಾಗಾಗಿ ಇನ್ನೊಂದೆರಡು ಪ್ಲೇಟ್ ಇರಲಿ.. ಏನಂತೀರಿ?
ಮತ್ತೊಂದೆಡೆ ಐಟಿ ಉದ್ಯೋಗಿ, ಕೃಷಿಕ ಮಂಚಿಯ ವಸಂತ ಕಜೆಯವರ ಹಲಸಿನ ಹಣ್ಣಿನ ಐಸ್ ಕ್ರೀಮಿನ ಮಳಿಗೆ. 
ಸರ್ವ್ ಮಾಡ್ತಾ ಮಾಡ್ತಾ ವಸಂತಣ್ಣ ಸುಸ್ತೋ ಸುಸ್ತು!
                'ಫನಸಾರೋಹಣ'ದ ಮೂಲಕ ಹಲಸಿನ ಹಬ್ಬಕ್ಕೆ ಚಾಲನೆ. ಸ್ವರ್ಣೋದ್ಯಮಿ, ಕೃಷಿಕ ಮುಳಿಯ ಶ್ಯಾಮ ಭಟ್ಟರಿಂದ.
         
           ಬಂಟ್ವಾಳ ತಾಲೂಕಿನ ಪುಣಚ ಶ್ರೀ ಮಹಿಷಿಮರ್ದಿನಿ ದೇವಾಲಯದ 'ಶ್ರೀ ದೇವಿ ಭವನ'ದಲ್ಲಿ 2014 ಜೂನ್ 22ರಂದು ಹಲಸಿನ ಹಬ್ಬ. (Jack Fest, Punacha)  ಸಾವಿರಾರು ಹಲಸು ಪ್ರಿಯರ ಉಪಸ್ಥಿತಿ. ದಿನಪೂರ್ತಿ ಜರುಗಿದ ಕಾರ್ಯಕ್ರಮ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಪುಣಚ ವ್ಯವಸಾಯ ಸೇವಾ ಸಹಕಾರಿ ಸಂಘ (ರಿ), ಪುಣಚ ಶ್ರೀ ಮಹಿಷಮರ್ದಿನಿ ಸೇವಾ ಸಂಘದ ಸಾರಥ್ಯದಲ್ಲಿ ಹಲಸಿನ ಹಬ್ಬವು ಸಂಪನ್ನವಾಯಿತು. ಖಾಸಗಿ ವ್ಯವಸ್ಥೆಯಲ್ಲಿ ಯಶಸ್ವಿ ಹಬ್ಬವೆಂಬ ನೆಗಳ್ತೆ ಪಡೆಯಿತು.
          ಉದ್ಘಾಟನೆ : ಅಧ್ಯಕ್ಷತೆಯನ್ನು ಮಂಗಳೂರಿನ ನಿವೃತ್ತ ಅರಣ್ಯಾಧಿಕಾರಿ ಗೇಬ್ರಿಯಲ್ ಪಿ.ಎಸ್.ವೇಗಸ್ ವಹಿಸಿ, ಹಲಸಿನ ಕೃಷಿಯ ಒಳನೋಟವನ್ನು ತೆರೆದಿಟ್ಟರು, "ಹಲಸಿನ ಜನಪ್ರಿಯತೆಗಾಗಿ ಮೂರು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಮೊದಲನೆಯದು ಉತ್ತಮ ತಳಿಗಳ ಆಯ್ಕೆ. ಹಪ್ಪಳ, ಚಿಪ್ಸ್, ಐಸ್ಕ್ರೀಂ.. ಹೀಗೆ ವಿವಿಧ ಐಟಂಗಳಿಗೆ ಒಂದೊಂದು ತಳಿಗಳ ಅಭಿವೃದ್ಧಿ. ಎರಡನೆಯದು ಮೌಲ್ಯವರ್ಧನೆಗಾಗಿ ಉದ್ಯಮಗಳ ಆರಂಭ ಮೂರನೇಯದು ಮಾರುಕಟ್ಟೆ ಸೃಷ್ಟಿ," ಎಂದರು.
             ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ದೀಪಜ್ವಲದ ಮೂಲಕ ಹಲಸಿನ ಹಬ್ಬವನ್ನು ಉದ್ಘಾಟಿಸುತ್ತಾ, "ಹಲಸು ನಿರ್ಲಕ್ಷಿತ ಹಣ್ಣು ಎನ್ನುವ ಹಣೆಪಟ್ಟಿ ದೂರವಾಗುತ್ತಿದೆ. ಆದರೆ ಬದಲಾಗುತ್ತಿರುವ ಜೀವನ ಪದ್ಧತಿ, ಕೃಷಿ ದೃಷ್ಟಿಕೋನಗಳಿಂದಾಗಿ ಅದನ್ನು ಉಳಿಸುವತ್ತ ಗಮನ ಹರಿಸಬೇಕಾಗಿದೆ. ಹಲಸಿಗೆ ಬೆಲೆ ಬರುವ ದಿನಗಳು ತೀರಾ ಹತ್ತಿರದಲ್ಲಿವೆ," ಎಂದರು.
             ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಿಕೆ ಡಾ.ಶ್ಯಾಮಲಮ್ಮ ಹಬ್ಬದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. "ಹಲಸಿನ ಮೌಲ್ಯವರ್ಧನೆಯನ್ನು ಮಾಡುವ ಆಸಕ್ತಿ ಕನ್ನಾಡಿನಾದ್ಯಂತ ಕಾಣುತ್ತಿದ್ದೇನೆ. ಹಲಸಿನ ಕಸಿ ಗಿಡಗಳತ್ತ ಜನರು ಆಕರ್ಶಿತರಾಗುತ್ತಿದ್ದಾರೆ. ಹಲಸಿನ ವೈವಿಧ್ಯತೆಯು ತಳಿ ಅಭಿವೃದ್ಧಿ ಮೂಲಕ ಕಾಣುತ್ತಿದೆ. ಹಲಸಿನ ಸೀಸನ್ನಿನಲ್ಲಿ ಪಲ್ಪಿಂಗ್ ಮಾಡಿದರೆ ವರುಷಪೂರ್ತಿ ಹಲಸಿನ ಸವಿಯನ್ನು ಸವಿಯಬಹುದು. ಇಂತಹ ಮೌಲ್ಯವರ್ಧಿತ ಉತ್ಪನ್ನಗಳಿಗೆ ಸದಾ ಮಾರುಕಟ್ಟೆಯಿದೆ, ಎಂದು ಕನ್ನಾಡಿನ ಹಲಸಿನ ಕೆಲಸಗಳತ್ತ ನೋಟ ಹರಿಸಿದರು.
             ಸಮಾರಂಭಕ್ಕೆ ಮುನ್ನ ಪುತ್ತೂರಿನ ಸ್ವರ್ಣೋದ್ಯಮಿ, ಕೃಷಿಕ ಮುಳಿಯ ಶ್ಯಾಮ ಭಟ್ಟರು 'ಫನಸಾರೋಹಣ'ಗೆಐದು ಹಬ್ಬಕ್ಕೆ ಶುಭ ಚಾಲನೆ ನೀಡಿದ್ದರು. ಪುಣಚ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ  ಅಧ್ಯಕ್ಷ ದೇವಿಪ್ರಸಾದ್ ಕಲ್ಲಜೆ ಮುಖ್ಯಅತಿಥಿಗಳಾಗಿ ಹಬ್ಬದ ಸಂಘಟನೆಯ ಆಶಯವನ್ನು ಹೇಳಿದರು.
               ವಿದ್ಯಾರ್ಥಿಗಳಾದ ಕು.ಆಶಾ ಸಿ.ಹೆಚ್. ಮತ್ತು ಶ್ರೀಗೌರಿ ಪಿ.ಜಿ. ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಕೃಷಿಕ ಕೃಷ್ಣಪ್ರಸಾದ್ ಕೊಪ್ಪರತ್ತೊಟ್ಟು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಅಶೋಕ ಅಜಕ್ಕಳ ವಂದಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಸ್ಮರಣಿಕೆ ನೀಡಿ ಅತಿಥಿಗಳನ್ನು ಗೌರವಿಸಿದರು. ಜಯಂತ ನಾಯಕ್ ಪೊಸವಳಿಕೆ, ನಾರಾಯಣ ಭಟ್ ಕುಪ್ಳುಚಾರು, ಶ್ರೀಧರ ಶೆಟ್ಟಿ ದೇವರಗುಂಡಿ, ಮಲ್ಯ ಶಂಕರ ಭಟ್, ಗಿರೀಶ ತೋಟದಮೂಲೆ ಅತಿಥಿಗಳಿಗೆ ಫಲ-ಪುಷ್ಪ ನೀಡಿದರು.
ಹಲಸು ವಿಶ್ವದರ್ಶನ : ಉದ್ಘಾಟನೆಯ ಬಳಿಕ ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಂದ 'ಹಲಸು ವಿಶ್ವದರ್ಶನ' ಸ್ಲೈಡ್ಶೋ ಪ್ರಸ್ತುತಿ ಜರುಗಿತು. ಇಂಡೋನೇಶ್ಯಾ, ಶ್ರೀಲಂಕಾ, ಫಿಲಿಪೈನ್ಸ್, ಮೆಕ್ಸಿಕೋ ದೇಶಗಳ ಹಲಸಿನ ಮೌಲ್ಯವರ್ಧಿತ ಸ್ಥಿತಿಗಳನ್ನು ವಿವರಿಸಿದರು. ಹಲಸು ಸ್ನೇಹಿ ಕೂಟದ ಕಡಂಬಿಲ ಕೃಷ್ಣಪ್ರಸಾದ್ ಸ್ವಾಗತಿಸಿ, ವಂದಿಸಿ, ನಿರ್ವಹಿಸಿದರು. ಗಣಪತಿ ಭಟ್ ನೀರ್ಕಜೆ ಸ್ಮರಣಿಕೆ ನೀಡಿದರು.
ಹಲಸಿನ ಖಾದ್ಯ ಪ್ರಾತ್ಯಕ್ಷಿಕೆ : ಅಡುಗೆ ವಿಶೇಷಜ್ಞೆಯರಾದ ಶ್ರೀಮತಿ ನಳಿನಿ ಮಾಯಿಲಂಕೋಡಿ, ಶ್ರೀಮತಿ ಶಿಲ್ಪಾ ವಸಂತ ಕಜೆ ಇವರಿಂದ ಹಲಸಿನ ಖಾದ್ಯಗಳ ಪ್ರಾತ್ಯಕ್ಷಿಕೆ ಜರುಗಿತು. ಹಲಸು ಪರೋಟ, ಚಾಕೊಲೇಟ್, ಹಲಸವಲಕ್ಕಿ, ಹಲಸಿನ ಬೀಜದ ನುಚ್ಚಿನುಂಡೆ, ಜಾಕಬಾಟ್, ಹಲಹಪ್ಪಳ ಚಾಟ್..ಖಾದ್ಯಗಳು ಹಲಸು ಪ್ರಿಯರ ಮನಗೆದ್ದಿತು. ಶ್ರೀಮತಿ ನಯನ ಅಶೋಕ್ ಸ್ಮರಣಿಕೆ ನೀಡಿದರು.
ಸಮಾರೋಪ ಸಮಾರಂಭ : "ಒಂದು ಕಾಲಘಟ್ಟದಲ್ಲಿ ಆಹಾರ ಭದ್ರತೆಯನ್ನು ನೀಡಿದ ಹಲಸಿನ ಮೌಲ್ಯವರ್ಧನೆಗೆ ಕಾಲ ಪಕ್ವವಾಗಿದೆ. ಹಲಸು ಹಬ್ಬಗಳಿಂದ ಜನರಲ್ಲಿ ಮತ್ತೊಮ್ಮೆ ಕಳೆದ ಕಾಲದ ಬದುಕನ್ನು ನೆನಪಿಸಲು ಸಹಕಾರಿಯಾಗಿದೆ. ಹಳ್ಳಿಯ ಉತ್ಪನ್ನ ಹಳ್ಳಿಯಲ್ಲೇ ಬಿಕರಿಯಾದಾಗ ಮಾತ್ರ ಕೃಷಿಕರಿಗೆ ಲಾಭದಾಯಕ. ಹಾಗಾಗಿ ಪೇಟೆಯ ಪ್ರಭಾವದಿಂದ ಜೀವನ ಶೈಲಿ ಬದಲಾಗುತ್ತಿರುವ ಹಳ್ಳಿಯಲ್ಲಿ ಇಂತಹ ಉತ್ಸವಗಳಿಂದ ಯುವಕರಲ್ಲಿ ಕೃಷಿ ಪ್ರೀತಿ, ಪಾರಂಪರಿಕ ಆಹಾರ ಪ್ರೀತಿಯನ್ನು ಉಳಿಸಲು ಬೆಳೆಸಲು ಸಹಕಾರಿಯಾಗುತ್ತದೆ. ಸರಕಾರದ ಯೋಜನೆಗಳನ್ನು ಬಳಸಿಕೊಂಡು ಹಳ್ಳಿ ಉದ್ಯಮವನ್ನು ಸದೃಡಗೊಳಿಸಲು ಸಾಧ್ಯ,"  ಎಂದು ಮಂಗಳೂರು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೇಶ್ ಹೆಚ್.ಆರ್.ಹೇಳಿದರು.
                 ಹಲಸಿನ ಹಬ್ಬದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೋಗೇಶ್, 'ಇದೇ ವರುಷದ ಜುಲೈ ಒಳಗೆ ಮಂಗಳೂರಿನಲ್ಲಿ ಹಲಸಿನ ಮೇಳ ಮಾಡಲು ಇಲ್ಲಿನ ಹಬ್ಬ ಪ್ರೇರಣೆ ನೀಡಿದೆ ಎಂದರು. ಮಂಗಳೂರು ಕಾರ್ಪೋರೇಶನ್ ಬ್ಯಾಂಕಿನ ಅಧಿಕಾರಿ, ಪತ್ರಕರ್ತ ಶ್ರೀ ಅಡ್ಡೂರು ಕೃಷ್ಣರಾಯರು ಸಮಾರೋಪ ಭಾಷಣ ಮಾಡುತ್ತಾ, "ಯಾವುದೇ ಉತ್ಪನ್ನಗಳನ್ನು ನೇರ ಮಾರಾಟ ಮಾಡುವುದಕ್ಕಿಂತ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಮಾಡಿದಾಗ ಲಾಭ ಹೆಚ್ಚು. ಮಧ್ಯವರ್ತಿಗಳಿಲ್ಲದೆ ಸ್ವತಃ ಕೃಷಿಕರೇ ಮಾರುಕಟ್ಟೆ ಮಾಡಲು ಉತ್ಸುಕರಾಗಬೇಕು. ಕೃಷಿಕರು ಕೃಷಿಯಲ್ಲಿ ಉಳಿಯಲು ಇಂತಹ ಕೆಣಿಗಳನ್ನು ಅಳವಡಿಸಿಕೊಳ್ಳಬೇಕಾದುದು ಕಾಲದ ಅನಿವಾರ್ಯ," ಎಂದರು.
                    ಸಮಾರಂಭದಲ್ಲಿ ಬಂಟ್ವಾಳ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವ ನಾಯಕ್, ಅಡ್ಯನಡ್ಕ ವಾರಣಾಶಿ ಸಂಶೋಧನಾ ಪ್ರತಿಷ್ಠಾನದ ಡಾ.ಅಶ್ವಿನಿ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಹಲಸಿನ ಹಬ್ಬದ ಅಗತ್ಯವನ್ನು ಸೋದಾಹರಣೆಗಳ ಮೂಲಕ ಪ್ರಸ್ತುತಪಡಿಸಿದರು. ಹಲಸಿನ ಹಣ್ಣಿನ ಸೊಳೆ ತಿನ್ನುವ ಸ್ಪರ್ಧೆ, ಹೆಚ್ಚು ತೂಕದ ಹಲಸು, ತಳಿ ಆಯ್ಕೆ, ಖಾದ್ಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ವೇದಿಕೆಯಲ್ಲಿ ಹಲಸು ಸ್ನೇಹಿ ಕೂಟದ ಉಬರು ರಾಜಗೋಪಾಲ ಭಟ್, ಮುಳಿಯ ವೆಂಕಟಕೃಷ್ಣ ಶರ್ಮ ಉಪಸ್ಥಿತರಿದ್ದರು.
                ಸಮಾರೋಪಕ್ಕೆ ಮುನ್ನ 'ಹಲಸಿನ ಮೌಲ್ಯವರ್ಧನೆ-ಮಾರುಕಟ್ಟೆ : ಮಾತುಕತೆ' ಎನ್ನುವ ಪ್ರಾಕ್ಟಿಕಲ್ ವಿಚಾರದ ಕುರಿತು ವಿಚಾರಸಂಕಿರಣ ಜರುಗಿತು. ಪತ್ರಕರ್ತ, ಅಧ್ಯಾಪಕ, ಪುತ್ತೂರು ಫಾರ್ಮರ್ ಫಸ್ಟ್ ಟ್ರಸ್ಟಿನ ಕಾರ್ಯದರ್ಶಿ ಶಂಕರ ಸಾರಡ್ಕ ಅಧ್ಯಕ್ಷತೆ ವಹಿಸಿದ್ದರು. ಹಲಸನ್ನು ತಮ್ಮ ಮಿತಿಯಲ್ಲಿ ಮೌಲ್ಯವರ್ಧನೆ ಮಾಡಿ, ತಮ್ಮದೇ ಮಾರುಕಟ್ಟೆ ಸೃಷ್ಟಿಸಿಕೊಂಡಿರುವ ಮೌನೀಶ್ ಮಲ್ಯ ಬಿ.ಸಿ.ರೋಡು, ಉಮಾ ವಿಜಯಕುಮಾರ್ ಕೊಪ್ಪ, ಶಂಕರ ಪ್ರಭು ಸಾಣೂರು, ಕೃಷ್ಣ ನಾಯಕ್ ಬಿ.ಸಿ.ರೋಡು, ಮಹೇಶ್ ಬಿ.ಕೌಡಂಗೆ.. ಇವರಿಂದ ತಮ್ಮ ಉದ್ದಿಮೆಯ ಕಷ್ಟ-ಸುಖಗಳ ಪ್ರಸ್ತುತಿ. ಶ್ರೀ ಕ್ಷೇತ್ರ ಧರ್ಮಸ್ಥಳ 'ಸಿರಿ' ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮನೋರಮಾ ಭಟ್ ಸಂವಾದ ನಡೆಸಿಕೊಟ್ಟರು. ವೇದಿಕೆಯಲ್ಲಿ ಶಿರಂಕಲ್ಲು ನಾರಾಯಣ ಭಟ್ ಉಪಸ್ಥಿತಿ.
               ಕೃಷಿಕ ವರ್ಮುುಡಿ ಶಿವಪ್ರಸಾದ್, ಶಿರಂಕಲ್ಲು ನಾರಾಯಣ ಭಟ್ಟರು ಅತಿಥಿಗಳಿಗೆ ಫಲ-ಪುಷ್ಪ ನೀಡಿ ಸ್ವಾಗತಿಸಿದರೆ, ಮಲ್ಯ ಶಂಕರನಾರಾಯಣ ಭಟ್ ಸ್ಮರಣಿಕೆ ನೀಡಿ ಗೌರವಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಮುಳಿಯ ವೆಂಕಟಕೃಷ್ಣ ಶರ್ಮರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕೃಷ್ಣಪ್ರಸಾದ್ ಕೊಪ್ಪರತೊಟ್ಟು ವಂದಿಸಿದರು. ಮಲ್ಯ ಸುಮಾ ಶಂಕರ್, ನಯನ ಆಶೋಕ್ ಅಜಕ್ಕಳ, ಕಡಂಬಿಲ ಕೃಷ್ಣಪ್ರಸಾದ್, ಬೈಂಕ್ರೋಡು ವೆಂಕಟಕೃಷ್ಣ, ಬೈಂಕ್ರೋಡು ಗಿರೀಶ ವಿವಿಧ ಜವಾಬ್ದಾರಿಗಳನ್ನು ನೆರವೇರಿಸಿದರು.
    ಹಬ್ಬದ ವಿಶೇಷ : ಸಾವಿರಕ್ಕೂ ಮಿಕ್ಕಿ ಆಗಮಿಸಿದ ಹಲಸು ಪ್ರಿಯರಿಗೆ ಪುಷ್ಕಳ ಹಲಸು ಭೋಜನವಿತ್ತು. ಹಲಸಿನ ವಿವಿಧ ಮಳಿಗೆಗಳಿದ್ದುವು. ವಿಟ್ಲದ ವಿಶಾಲ್ ಐಸ್ಕ್ರೀಂ ಇವರ ಹಲಸಿನ ಮತ್ತು ಬೊಂಡದ ಐಸ್ಕ್ರೀಂ, ಮಂಚಿಯ ವಸಂತ ಕಜೆಯವರು ಹಬ್ಬಕ್ಕಾಗಿಯೇ ತಯಾರಿಸಿದ ಹಲಸಿನ ಐಸ್ಕ್ರೀಂ ಮಳಿಗೆಗಳು ಹಲಸು ಪ್ರಿಯರನ್ನು ಆಕರ್ಷಸಿದುವು. ವಾರಣಾಶಿ ಸಂಶೋಧನಾ ಪ್ರತಿಷ್ಠಾನ ಮತ್ತು ನವೋದಯ ನರ್ಸರಿಯ ಜ್ಯಾಕ್ ಅನಿಲ್ ಅವರ ಹಲಸಿನ ಗಿಡಗಳ ಮಾರಾಟ ಮಳಿಗೆಗಳತ್ತ ಜನರ ಚಿತ್ತ. ಗಿಡಗಳನ್ನು ಖರೀದಿಸಿ ನೆಡುವತ್ತ ಆಸಕ್ತಿ.
           ಜ್ಯಾಕ್ ಮಂಚೂರಿಯನ್ ಮಳಿಗೆಯಲ್ಲಿ ರಶ್! ಯುವಕರನ್ನು ಹೆಚ್ಚು ಸೆಳೆದ ಮಳಿಗೆ. ಹಲಸಿನ ಉಪ್ಪುಸೊಳೆ, ಕುಮಂದ್ರ, ಚಿಪ್ಸ್, ಗಟ್ಟಿ.. ಉತ್ಪನ್ನಗಳಿಗೆ ಬೇಡಿಕೆ. ಹಲಸು ಸ್ನೇಹಿ ಕೂಟವು ಹಬ್ಬಕ್ಕಾಗಿಯೇ ಹಲಸಿನ ಹಲ್ವವನ್ನು ತಯಾರಿಸಿ ಮಾರಾಟಕ್ಕಿಟ್ಟಿತ್ತು. ಸಂಜೆಯೊಳಗೆ ಎಲ್ಲಾ ಉತ್ಪನ್ನಗಳು ಖಾಲಿ ಖಾಲಿ! ವಿವಿಧ ಹಲಸಿನ ತಳಿಗಳ ಪ್ರದರ್ಶನಗಳಿದ್ದುವು. ಹಲಸಿನ ಹಬ್ಬದಲ್ಲಿ ಬಿ.ಸಿ.ರೋಡಿನ ಕಲಾವಿದ ಮೌನೀಶ್ ಮೌಲ್ಯರ ಕೈಚಳಕದಲ್ಲಿ ರೂಪುಗೊಂಡ ಹಲಸಿನ ಪ್ರತಿಕೃತಿ 'ಸ್ಮರಣಿಕೆ'ಯು ಆಕರ್ಷಣೀಯವಾಗಿತ್ತು.
            ಹೆಗಲೆಣೆ : ಹಬ್ಬಕ್ಕೆ ಅಡ್ಯನಡ್ಕದ ವಾರಣಾಶಿ ಹಲಸು ಬೆಳೆಗಾರರ ಸಂಘ, ಕೇಪು-ಉಬರು ಹಲಸು ಸ್ನೇಹಿ ಕೂಟ, ಅಡಿಕೆ ಪತ್ರಿಕೆ, ಪೆರ್ಲದ ಅಕ್ಷಯ ಕೃಷಿ ಕೂಟ' - ವಿವಿಧ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಮಲ್ಯ ಶಂಕರ ಭಟ್, ಕೃಷ್ಣಪ್ರಸಾದ್ ಕೊಪ್ಪರತೊಟ್ಟು ಇವರ ದೊಡ್ಡ ಟೀಮ್ ಮತ್ತು ಪುಣಚದ ಹಲಸು ಪ್ರಿಯರು ಹಲಸಿನ ಹಬ್ಬದ ಯಶಸ್ಸಿನ ಹಿಂದೆ ದುಡಿದಿದ್ದಾರೆ.


ಹಲಸಿನ ಹಣ್ಣು (ಸೊಳೆ, ತೊಳೆ) ತಿನ್ನುವ ಸ್ಪರ್ಧೆ

- ಪುಣಚ (ದ.ಕ.)ದಲ್ಲಿ ಜೂನ್ 22ರಂದು ಜರುಗಿದ ಹಲಸು ಹಬ್ಬದಲ್ಲಿ ಹಲಸಿನ ಹಣ್ಣು (ಸೊಳೆ, ತೊಳೆ) ತಿನ್ನುವ ಸ್ಪರ್ಧೆ.
- ಮೂರು ನಿಮಿಷದಲ್ಲಿ 700 ಗ್ರಾಮ್ ಸೊಳೆಯನ್ನು ಉದರಕ್ಕಿಳಿಸಿದವರು - ಶ್ರೀ ತಿಮ್ಮಪ್ಪ ನಾಯಕ್ ಮತ್ತು ಶ್ರೀ ಮಾಣಿ ಜಗನ್ನಿವಾಸ ಗೌಡ = ಇವರಿಬ್ಬರಿಗೆ ಪ್ರಥಮ ಪುರಸ್ಕಾರ.
- ಮೂರು ನಿಮಿಷದಲ್ಲಿ 650 ಗ್ರಾಮ್ ಸೊಳೆಯನ್ನು ಉದರಕ್ಕಿಳಿಸಿದವರು - ಶ್ರೀಗಳಾದ ಎಸ್.ನಾರಾಯಣ ಭಟ್, ಉದಯಕೃಷ್ಣ ಟಿ., ಕೆ.ರಾಧಾಕೃಷ್ಣ ಭಟ್ = ಮೂವರಿಗೆ ದ್ವಿತೀಯ ಪುರಸ್ಕಾರ.

Friday, June 20, 2014

UAS to show-case Jackfruit Products



          The University of Agricultural Sciences, GKVK Bangalore will be hosting half  a day event on June 24th to showcase some of the very promising value-added products of jackfruit developed and standardized by the University.
          The event titled ‘Research-Industry Interface Meet on Jackfruit Value Added Products’,  is aimed at drawing the attention of food processing industry to take up mass production of these novel products.
          Products like RTC (Ready-to-Cook) Tender Jackfruit, Ice-cream, Peda, Squash, Jack seed powder, RTS (Ready-to-Serve) drink, Jackfruit biscuit and Jackfruit muffin will be exhibited and also served for taste to the participating food industry representatives.
          These products are being popularized jointly by UAS, Bangalore and Department of Bio-Technology (DBT), Govt. of India through the multi-institutional project titled ‘A value chain on jackfruit and its products’.
          The meet will be held at “NORTH BLOCK CONFERENCE HALL” of GKVK, BANGALORE and will start at 10 AM. Food Industry representatives from all over the country interested in jackfruit products are welcome. No Registration Fee is charged.  The number of participants is restricted to 50 on ‘first come first serve’ basis.   
          Interested industry representatives may register before June 23rd, 2014, through phone or mail by giving their names, company name and contact details to 9901848985 (Suresha, K.B) or e-mail: re.uas.blore@gmail.com

ಹಲಸು ರೂಪಿಸಿದ ಹುಲುಸು ಬದುಕು



            ಕಾರ್ಕಳ ಸನಿಹದ ಸಾಣೂರು ಶಂಕರ ಪ್ರಭು ಹಲಸಿನ ಋತುವಿನಲ್ಲಿ ಮಾತಿಗೆ ಸಿಗರು! ರಾತ್ರಿ ಹತ್ತರ ನಂತರವಷ್ಟೇ ಮಾತು-ಕತೆ. ಕೈತುಂಬಾ ಅಹೋರಾತ್ರಿ ಕೆಲಸ. ಹಲಸಿನ ಕಾಯಿ, ಹಣ್ಣು, ಬೀಜಗಳು ವಿವಿಧ ರೂಪದಲ್ಲಿ ಮೌಲ್ಯವರ್ಧನೆ ಮಾಡುತ್ತಾರೆ. ಸೊಳೆ, ಹಪ್ಪಳ, ಚಿಪ್ಸ್, ಹಲ್ವದೊಂದಿಗೆ 'ಕುಮಂದ್ರ'ಕ್ಕೆ ಉತ್ತಮ ಬೇಡಿಕೆ. ಏನಿದು ಕುಮಂದ್ರ? ಕರಾವಳಿಯಲ್ಲಿ ಹೆಚ್ಚು ಮನೆಮಾತಾಗಿರುವ ಹಲಸಿನ ಮಾಂಬಳವನ್ನು ಸಾರಸ್ವತರು 'ಕುಮಂದ್ರ, ಸಾಟ್' ಎನ್ನುತ್ತಾರೆ.
             ಹಲಸಿನ ಹಣ್ಣಿನ (ತುಳುವ, ಅಂಬಲಿ) ಸೊಳೆಯನ್ನು ಮಿಕ್ಸಿಯಲ್ಲಿ ರುಬ್ಬುವುದು ಮೊದಲ ಕೆಲಸ. ತೆಳುವಾದ ಕಾಟನ್ ಬಟ್ಟೆಯನ್ನು ಚಾಪೆ ಅಥವಾ ಪೇಪರ್ ಶೀಟ್ ಮೇಲೆ ಹಾಸಿ, ಅದರ ಮೇಲೆ ರುಬ್ಬಿದ ಪಾಕವನ್ನು ಅರ್ಧ ಇಂಚು ದಪ್ಪ ಬರುವಷ್ಟು ಎರೆಯುತ್ತಾರೆ. ಇದು ಮೊದಲ ಪದರ. ನಂತರದ ದಿನಗಳಲ್ಲಿ ಎರೆದ ಐದಾರು ಪದರ ಒಣಗಿದರೆ ಕುಮಂದ್ರವಾಗುತ್ತದೆ.
             ಒಮ್ಮೆ ಹೀಗಾಯಿತು - ಹಲಸಿನ ಹಣ್ಣಿನ ಒಂದು ಲೇಯರ್ ಹಾಕಿದ್ದರು. ಅಷ್ಟರಲ್ಲಿ ಆಪ್ತರೊಬ್ಬರು ರಾಶಿರಾಶಿ ಕಾಡುಮಾವಿನ ಹಣ್ಣನ್ನು ತಂದರು. ಇದರ ರಸ ಹಿಂಡಿ ಎರಡನೇ ಪದರವಾಗಿ ಎರೆದರು. ಮೂರನೇ ಪದರಕ್ಕಾಗುವಾಗ ಸ್ನೇಹಿತರಿಂದ ಅನಾನಸು ಜಗಲಿ ಏರಿತು! ಅನಾನಸು ಮತ್ತು ಹಲಸಿನ ಹಣ್ಣನ್ನು ಜತೆಯಾಗಿ ರುಬ್ಬಿ ಮೂರನೇ ಪದರವಾಗಿ ಎರೆದರು. ನೋಡಿ, 'ತ್ರಿ ಇನ್ ವನ್' ಕುಮಂದ್ರ ರೆಡಿ! ಹಿಮ್ಮಾಹಿತಿಗಾಗಿ ರುಚಿ ನೋಡಲು ಹಲವರಿಗೆ ನೀಡಿದರು. ಹಲಸನ್ನು ಮೀರಿಸುವ ರುಚಿ! ಅನಿವಾರ್ಯವಾಗಿ ಆಗಿಹೋದ ಹೊಸ ಪಾಕವಿದು. ನಾಲ್ಕು ವರುಷವಾಯಿತು, ಶಂಕರ ಪ್ರಭುಗಳ ತ್ರಿ ಇನ್ ವನ್ ಕುಮಂದ್ರಕ್ಕೆ ಈಗ ಬಹುಬೇಡಿಕೆ.
            'ಕಾಡುಮಾವಿನಲ್ಲಿ ಹುಳಿಯ ಅಂಶ ಇರುವುದರಿಂದ ಹಲಸಿನೊಂದಿಗೆ ಹೊಂದಿಕೊಳ್ಳುತ್ತದೆ. ಉತ್ತಮ ರುಚಿಯೂ ಕೂಡಾ,' ಎನ್ನುತ್ತಾರೆ ನಂದಿನಿ ಪ್ರಭು. ಹೈಬ್ರಿಡ್ ಮಾವಿನ ಹಣ್ಣು ಕಾಡು ಮಾವಿನಷ್ಟು ರಸ ಬಿಟ್ಟುಕೊಡುವುದಿಲ್ಲ. ಏನಿಲ್ಲವೆಂದರೂ ಹತ್ತು ದಿವಸದ ಬಿಸಿಲ ಸ್ನಾನ ಬೇಕೇ ಬೇಕು. ಕಾಡುಮಾವಿನ ಹಣ್ಣಿಗೆ ಅದರದ್ದೇ ಆದ ರುಚಿ, ಸ್ವಾದವಿದೆ. ಮಾವಿನಹಣ್ಣಿನಿಂದಲೇ ತಯಾರಿಸುವ ಮಾಂಬಳ ಈಗ ಅಪರೂಪ. ಗ್ರಾಮೀಣ ಪ್ರದೇಶದಲ್ಲಿ ಅಲ್ಲೋ ಎಲ್ಲೋ ಮನೆಮಟ್ಟಕ್ಕಷ್ಟೇ ತಯಾರಿಸುತ್ತಾರೆ. 
ಸಿದ್ಧಗೊಂಡ ಕುಮಂದ್ರವನ್ನು ಕಟ್ ಮಾಡಿ ಚಾಪೆಯಂತೆ ಸುರುಳಿ ಮಾಡಿಡುತ್ತಾರೆ. ಹೀಗೆ ಕಟ್ ಮಾಡುವಾಗ ಆಚೀಚೆ ಬದಿಗಳಲ್ಲಿ ಉಳಿದುದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಸಂಗ್ರಹಿಸಿಡುತ್ತಾರೆ. ಇದು ಹಪ್ಪಳ, ಚಿಪ್ಸ್ಗಾಗಿ ಬಂದವರಿಗೆ ರುಚಿ ಹಿಡಿಸಲು. ರುಚಿ ನೋಡಿದವರು ಇದನ್ನೂ ಬಿಡರು. ಒಂದೆರಡು ಕಿಲೋ ಒಯ್ಯುತ್ತಾರೆ. ಇದು ಪ್ರಭುಗಳ ಮಾರಾಟ ಜಾಣ್ಮೆ.              
            ಒಂದು ಕಿಲೋ ತ್ರಿ-ಇನ್-ವನ್ ಕುಮಂದ್ರಕ್ಕೆ ಮುನ್ನೂರ ಐವತ್ತು ರೂಪಾಯಿ. ಹಲಸಿನದ್ದಕ್ಕೆ ಮುನ್ನೂರು ರೂಪಾಯಿ. ಸುಮಾರು ಎಂಟರಿಂದ ಒಂಭತ್ತು ತಿಂಗಳು ತಾಳಿಕೊಳ್ಳುತ್ತದೆ. ಎಪ್ರಿಲ್ನಿಂದ ಜೂನ್ ತನಕ ಹಣ್ಣು ಸಿಕ್ಕಾಗಲೆಲ್ಲಾ ಕುಮಂದ್ರ ತಯಾರಿ.  ಸರಕಾರಿ ಸ್ವಾಮ್ಯದ ಹಲಸಿನ ತೋಪನ್ನು ವಹಿಸಿಕೊಂಡಿದ್ದೇವೆ. ಸುಮಾರು ನಲವತ್ತು ಮರಗಳಿವೆ. ಸ್ನೇಹಿತರ, ಆಪ್ತರ ಬಳಿಯೂ ಹಣ್ಣನ್ನು ಪಡೆಯುತ್ತೇವೆ. ಹಣ್ಣಿನ ಲಭ್ಯತೆಯಂತೆ ಕುಮಂದ್ರ, ಹಲ್ವ ತಯಾರಿ. ಜತೆಜತೆಗೆ ಹಪ್ಪಳ. ಚಿಪ್ಸ್, ಹಣ್ಣಿನ ಸೊಳೆಯ ಗ್ರಾಹಕರಿಗೂ ಸಕಾಲಕ್ಕೆ ಪೂರೈಸಬೇಕಲ್ಲಾ..', ಎನ್ನುತ್ತಾರೆ ಪ್ರಭು.
            ಇವರ ಅಡುಗೆ ಮನೆಗೆ ರಜೆಯಿಲ್ಲ. ಸಮಯ ನಾಚುವಷ್ಟು ಕೈತುಂಬಾ ಕೆಲಸ. ಹಲಸಿನ ಋತುವಿನಲ್ಲಿ ಮಾತಿಗೆ ವಿರಾಮ. ಅನಾವಶ್ಯಕವಾಗಿ ಸಮಾರಂಭಗಳಿಗೆ ಹೋಗರು. ಚಿಪ್ಸ್, ಹಪ್ಪಳ, ಕಾಯಿಸೊಳೆ..ಗಳಿಗೆ ನಿರಂತರ ಬೇಡಿಕೆ. ಕಾರ್ಕಳದಲ್ಲಿ ಕಾಯಿಸೊಳೆಯನ್ನೇ ಸೀಮಿತವಾಗಿ ಖರೀದಿಸುವ ಗ್ರಾಹಕ ವರ್ಗವಿದೆ. ಸಾಮಾನ್ಯವಾಗಿ ಮಳೆ ಬಿದ್ದ ಮೇಲೆಯಷ್ಟೇ ಹಲಸು ಹಣ್ಣಾಗುತ್ತದೆ. ಹಾಗಾಗಿ ಬಿಸಿಲಿನಲ್ಲಿ ಒಣಗುವ ಹಪ್ಪಳ, ಕುಮಂದ್ರ ಮಾಡಲು ತ್ರಾಸ. ಅದಕ್ಕಾಗಿ ಡ್ರೈಯರನ್ನು ಹೊಂದುವ ಯೋಚನೆ ಪ್ರಭುಗಳಿಗಿದೆ. ಹಲಸಿನ ಬೀಜ ವ್ಯರ್ಥವಾಗುವುದಿಲ್ಲ. ಬೀಜವನ್ನು ಉಪ್ಪುಹಾಕಿ ಬೇಯಿಸಿ ಒಣಗಿಸುತ್ತಾರೆ. ಸಿಪ್ಪೆ ತೆಗೆದ ಬೀಜಕ್ಕೆ (ಸಾಂತಾಣಿ) ನಲವತ್ತು ರೂಪಾಯಿ. ತೆಗೆಯದ್ದಕ್ಕೆ ಮೂವತ್ತು ರೂಪಾಯಿ ಬೆಲೆ.
            ಹಲಸಿನ ಹಣ್ಣಿನಿಂದ ಮಾಡಿದ 'ಗಟ್ಟಿ'ಗೆ ಆರ್ಡರ್ ಮಾಡಿ ಒಂದು ಗಂಟೆಯಲ್ಲಿ ಸಿದ್ಧ. 'ಗಟ್ಟಿ ತಿಂದವರಿಗೆ ಚಿಪ್ಸ್, ಹಲ್ವ, ಕುಮಂದ್ರದ ಟೇಸ್ಟ್ ಹಿಡಿಸಿದರೆ ಅರ್ಧ, ಒಂದು ಕಿಲೋ ಖರೀದಿಸಿ ಒಯ್ಯುತ್ತಾರೆ. ಹಾಗಾಗಿ ಅಂದಂದು ಮಾಡಿದ ಉತ್ಪನ್ನ ಅಂದಂದೇ ಖಾಲಿ', ಶಂಕರ ಪ್ರಭು-ನಂದಿನಿ ದಂಪತಿಗಳ ಖುಷಿ. ನಾವು ಯಾವುದೇ ಕೆಲಸ ಮಾಡಲಿ, ಅದು ಹಣಕ್ಕೆ ಕನ್ವರ್ಟ್ ಆಗಲೇ ಬೇಕು - ಪ್ರಭುಗಳ ವೃತ್ತಿಕುಶಲತೆಯ ಅನುಭವ.
           ಹಲಸಿನ ಋತು ಕಳೆದ ಬಳಿಕ ಜಾತ್ರೆ, ಕೃಷಿಮೇಳಗಳಲ್ಲಿ ಪ್ರಭುಗಳ ತಂಪು ಪಾನೀಯ ಮಳಿಗೆ ಸಿದ್ಧವಾಗುತ್ತದೆ. ಬೆವರಿನ ಶ್ರಮದಿಂದ ಕಟ್ಟುವ ಬದುಕಿನಲ್ಲಿ ಸ್ವಾವಲಂಬಿತನವಿದೆ. ಇನ್ನೊಬ್ಬರ ಮುಂದೆ ಕೈಚಾಚದ ಸ್ವಾಭಿಮಾನವಿದೆ. ಗುಣಮಟ್ಟದ ಉತ್ಪನ್ನಗಳಿಂದ ಖಾಯಂ ಗ್ರಾಹಕವರ್ಗವನ್ನು ಸೃಷ್ಟಿಸಿಕೊಂಡ ಶಂಕರ ಪ್ರಭುಗಳನ್ನು ಮಾತನಾಡಿಸಿದರೆ ಅನುಭವದ ಹಲಸು ಎಸಳುಗಳು ರಾಚುತ್ತವೆ.
 (77604 34292)


Thursday, June 19, 2014

ಮರದಡಿಯಿಂದ ಪಂಚತಾರಾ ಹೋಟೆಲಿಗೇರಿದ 'ಫನಸ್'


            ಹಲಸಿನ ಮೇಳಕ್ಕೆ ಮೊದಲ ಶ್ರೀಕಾರ ಬರೆದ ರಾಜ್ಯ ಕೇರಳ. ಹಲಸಿಗೆ ಪಂಚತಾರಾ ಟಚ್ ಕೊಟ್ಟುದೂ ಕೇರಳವೇ. ಬಿಳಿ ಕಾಲರಿನ ಮಂದಿಗೆ ಹಲಸು ಉಣಿಸಿ ಅದಕ್ಕೊಂದು ಗೌರವದ ಸ್ಥಾನ ತರಲೋಸುಗ ನಾಲ್ಕು  ದಿವಸಗಳ 'ಜೇನು ಬಕ್ಕೆ ಮೇಳ' ಮೇ ತಿಂಗಳಾಂತ್ಯದಲ್ಲಿ ಎರ್ನಾಕುಲಂನಲ್ಲಿ  ಜರುಗಿತು. ಪ್ರಾಯಃ ದೇಶದಲ್ಲೇ ಅಪೂರ್ವ.
            ಖಾದ್ಯಗಳ ಮಳಿಗೆ ಮುಖ್ಯ ಆಕರ್ಷಣೆ. ಸುಮಾರು ಅರುವತ್ತು ವಿಧದ ಹಲಸಿನ ಖಾದ್ಯಗಳು ಅನ್ನದ ಬಟ್ಟಲು ಸೇರಿದೆ. ಭೋಜನಕ್ಕೆ (ಚಕ್ಕ ಸದ್ಯ) ಎಪ್ಪತ್ತೈದು ರೂಪಾಯಿ ಶುಲ್ಕ. ಮೀನು, ಮಾಂಸದೊಂದಿಗೆ ಹೊಂದಿಕೊಳ್ಳುವ ಖಾದ್ಯಗಳಿಗೆ ಬೇಡಿಕೆ. ಸ್ಥಳದಲ್ಲೇ ಬಿಸಿ ಬಿಸಿಯಾಗಿ ತಯಾರಿಸಿದವುಗಳಿಗೆ  ಜನರೊಲವು. ಮೊದಲ ದಿನದ ವ್ಯವಹಾರ ಆರು ಲಕ್ಷ ರೂಪಾಯಿ!
           ಹತ್ತು ಜಿಲ್ಲೆಗಳ 'ಕುಟುಂಬಶ್ರೀ' ಸದಸ್ಯರ ಅವಿರತ ಬೆವರ ಶ್ರಮ ಮೇಳದ ಹಿಂದಿದೆ. ಗ್ರಾಮೀಣ ಮಹಿಳೆಯರ ಅದಾಯವರ್ಧನೆ ಹಿಂದಿನ ಆಶಯ. "ಕೇರಳದಿಂದ ಚಿಲ್ಲರೆ ದರಕ್ಕೆ ಹಲಸನ್ನು ಕೊಂಡು ಬೇರೆ ರಾಜ್ಯಗಳಿಗೆ ಒಯ್ಯುತ್ತಾರೆ. ಅದರ ಬದಲು ಇಲ್ಲೇ ಆಹಾರವಾಗಿ ಪರಿವರ್ತನೆ ಮಾಡಿದರೆ ಅದಾಯವೂ ಸಿಕ್ಕಂತಾಗುತ್ತದೆ. ಜತೆಗೆ ಆಹಾರ ಸುರಕ್ಷೆಯೂ ಕೂಡಾ. ನಗರವಾಸಿಗಳಿಗೆ 'ರೆಡಿ ಟು ಈಟ್' ರೂಪದಲ್ಲಿ ನೀಡಿ ಹಲಸಿನ ರುಚಿಯನ್ನು ಪುನಃ ಹಿಡಿಸಬಹುದು ಎನ್ನುವ ಅನುಭವ ಈ ಮೇಳದಿಂದಾಯಿತು" ಎನ್ನುತ್ತಾರೆ ಕುಟುಂಬಶ್ರೀ ವರಿಷ್ಠರು.
             ಮೇಳಕ್ಕೆ ಬಂದವರಲ್ಲಿ ಪ್ರತಿಷ್ಠಿತರೇ ಅಧಿಕ. ಸೂಪಜ್ಞರಿಗೆ ಬೆವರೊರೆಸಿ ಕೊಳ್ಳಲಾಗದಷ್ಟು ಒತ್ತಡ. ಒಂದು ಐಟಂ ರೆಡಿಯಾದರೆ ಕ್ಷಣಾರ್ಧದಲ್ಲೇ ಖಾಲಿ. ಮತ್ತು ಪುನಃ ಬೇಡಿಕೆ. ಎಲ್ಲಾ ಐಟಂಗಳು ಎರ್ನಾಕುಲಂ ಹಲಸು ಪ್ರಿಯರ ಮನ ಗೆದ್ದಿದೆ. ಈ ವರುಷದ ಯಶದ ಹಿನ್ನೆಲೆಯಲ್ಲಿ ಮುಂದಿನ ವರುಷ ಮೇಳಕ್ಕೆ ವ್ಯಾಪಕತೆ ತರಲು ಯೋಚಿಸುತ್ತಿದ್ದಾರೆ, ಕುಟುಂಬಶ್ರೀಯ ನಿದರ್ೇಶಕಿ ವಲ್ಸಲಾ ಕುಮಾರಿ.
               ಮಹಾರಾಷ್ಟ್ರದ ದಾಪೋಲಿಯ ಬಾಳಾಸಾಹೇಬ್ ಕೊಂಕಣ್ ಕೃಷಿ ವಿದ್ಯಾಪೀಠದಲ್ಲೂ ಮೇ ಮೊದಲ ವಾರದಲ್ಲಿ ಚಾರಿತ್ರಿಕ ಮೊದಲ ಹಲಸು ಸಮ್ಮೇಳನ. ದೇಶಮಟ್ಟದಲ್ಲಿ ಹಲಸಿನ ಪಲ್ಪಿಂಗ್, ಎಳೆಗುಜ್ಜೆ ಕ್ಯಾನಿಂಗ್, ಪೆಕ್ಟಿನ್, ಅಡುಗೆಗೆ ಸಿದ್ಧ ಉತ್ಪನ್ನಗಳ ತಯಾರಿಯಲ್ಲಿ ಇವರದು ದೊಡ್ಡ ಹೆಜ್ಜೆ. ಮೇಳಕ್ಕಾಗಿಯೇ ವಿದ್ಯಾಪೀಠವು ಹಲಸಿನ ಬೀಜ ಹುಡಿ, ಒಣ ಹಣ್ಣು, ಹಣ್ಣಿನ ಬಾಸುಂದಿ, ಪುಡ್ಡಿಂಗ್, ರಸಗುಲ್ಲಾಗಳನ್ನು ಸಿದ್ಧಮಾಡಿದ್ದರು.  ಹಲಸಿನ ಮೌಲ್ಯವರ್ಧನೆಯು ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿದ್ದರೂ ಪರಸ್ಪರ ಸಂವಹನ ಕೊರತೆಯಿದೆ. ಮೇಳವು ಸ್ವಲ್ಪ ಮಟ್ಟಿಗೆ ಈ ಸಮಸ್ಯೆಯನ್ನು ನೀಗಿಸಿದೆ. ಮೂರು ರಾಜ್ಯಗಳಿಂದ ಮೇಳಕ್ಕೆ ಪ್ರತಿನಿಧಿಗಳು ಆಗಮಿಸಿದ್ದರು.
            ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು ನಾಲ್ಕು ವರುಷದ ಹಿಂದೆ ಹಲಸಿನ ಅಕಾಡೆಮಿಕ್ ರೂಪದಲ್ಲಿ ಸಮ್ಮೇಳನ ನಡೆಸಿತ್ತು. ಈಗ ಮತ್ತೆ ಎರಡನೇ ಯತ್ನ. ಕೇರಳ, ಆಂಧ್ರ ರಾಜ್ಯಗಳಿಂದ ಪ್ರತಿನಿಧಿಗಳು ಆಗಮಿಸಿದ್ದರು. ಗಿಡ ನೆಡುವ ಆಸಕ್ತಿ ಬಹುತೇಕರಲ್ಲಿದ್ದರೂ, ಯಾವ ಗಿಡ ನೆಡಬೇಕೆನ್ನುವ ಮಾಹಿತಿಗಾಗಿ ಚಡಪಡಿಕೆಯಿತ್ತು. ಈ ಸಮ್ಮೇಳನಕ್ಕೆ 'ಅಂತಾರಾಷ್ಟ್ರೀಯ' ಟಚ್ ಇದ್ದುದರಿಂದ ಪ್ರಚಾರ ಜೋರಾಗಿತ್ತು. ಪ್ರದರ್ಶನಗಳು ಆವಶ್ಯಕತೆಯನ್ನು ಪೂರೈಸುವಲ್ಲಿ ಎಡವಿತು. ಎರಡನೇ ದಿನಕ್ಕಾಗುವಾಗ ಹಲಸಿನ ಹಣ್ಣಿನ ಪೂರೈಕೆ ಸಾಕಾಗಲಿಲ್ಲ. ಬಹುತೇಕರಿಗೆ ನಿರಾಶೆ.
             ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ನಾರಾಯಣ ಗೌಡರ ಸಾರಥ್ಯದಲ್ಲಿ ಹಲಸಿನ ಕೆಲಸಗಳು ನಡೆದಿದೆ. ತೂಬುಗೆರೆ ಹಲಸು ಬೆಳೆಗಾರರ ಸಂಘ ಆರಂಭವಾಗಿದೆ. ಹಲಸು ಬೆಳೆಗಾರರ ನಡುವೆ ಪರಸ್ಪರ ಕೊಂಡಿ ಏರ್ಪಟ್ಟಿದೆ. ಲಾಲ್ಬಾಗಿನಲ್ಲಿ ಹಲಸನ್ನು ಉತ್ತಮ ದರಕ್ಕೆ ಮಾರಲು ಕೃಷಿಕರಿಗೆ ಧೈರ್ಯ ಬಂದಿದೆ. ಬಿದ್ದು ಹಾಳಾಗುತ್ತಿದ್ದ, ಉಚಿತವಾಗಿ ಅದರಲ್ಲೂ ಒತ್ತಾಯಕ್ಕೆ ನೀಡಿ ಕೈತೊಳೆದುಕೊಳ್ಳುತ್ತಿದ್ದ ದಿನಗಳಿಗಿನ್ನು ಇಳಿಲೆಕ್ಕ! ಅದೀಗ ಗಳಿಕೆಯ ಉತ್ಪನ್ನವಾಗಿದೆ. ಉಪಕುಲಪತಿಗಳ ಹಿಂದೆ ಅವರ ಆಶಯವನ್ನು ಅರ್ಥಮಾಡಿಕೊಂಡ ಸಣ್ಣ ಅಧಿಕಾರಿ ಬಳಗದ ಶ್ರಮ ಗುರುತರ.
           ಬೆಂಗಳೂರು ವಿವಿಯ ಹಲಸು ಸಮ್ಮೇಳನಕ್ಕೆ ವಿಯೆಟ್ನಾಮಿನ ಸದರ್ನ್  ಫ್ರುಟ್ ರೀಸರ್ಚ್ ಇನ್ಸ್ಟಿಟ್ಯೂಟಿನ ಉಪಕೇಂದ್ರವಾದ ಸೌತ್ ಈಸ್ಟ್ ಫ್ರುಟ್ ಸಂಶೋಧನಾ ಕೇಂದ್ರದ ಉಪನಿರ್ದೇಶಕ ಮಾಯ್ ವಾನ್ ಟ್ರಾಯ್ ಆಗಮಿಸಿದ್ದರು. ವರುಷದ ಬಹುತೇಕ ತಿಂಗಳುಗಳಲ್ಲಿ ಹಲಸು ಲಭ್ಯವಾಗುವ ತುಮಕೂರು ಜಿಲ್ಲೆ ಸೆಳೆದಿತ್ತು. ಅದರಲ್ಲೂ ಅಕಾಲದಲ್ಲಿ ಹಣ್ಣು ಸಿಗುವ ತೋವಿನಕೆರೆ ಗ್ರಾಮಕ್ಕೆ ಭೇಟಿ. ವಿಯೆಟ್ನಾಮಿನ ಅತಿಥಿಗೆ ಪತ್ರಕರ್ತ ಪದ್ಮರಾಜು ಹಲಸಿನ ಖಾದ್ಯಗಳ ವ್ಯವಸ್ಥೆಯನ್ನು ದಿಢೀರಾಗಿ ಮಾಡಿದ್ದರು.
           ಮಾಯ್ ತೋವಿನಕೆರೆಯನ್ನು ಸುತ್ತಿದರು. ರೈತರೊಂದಿಗೆ ಮಾತುಕತೆ ಮಾಡಿದರು. ಹಣ್ಣನ್ನು, ಖಾದ್ಯವನ್ನು ಸವಿದರು. ಇಲ್ಲಿನ ಹಲಸಿನ ವೈವಿಧ್ಯ ನೋಡಿ ಆಶ್ಚರ್ಯವಾಯಿತು. ರುಚಿಯೂ ಗಾಢವಾಗಿ ಆವರಿಸಿತು. ಈ ರುಚಿ ಬೇರೆ ಯಾವ ದೇಶದ ಹಲಸಿಗೂ ಬಾರದು. ಜಗತ್ತಿನಲ್ಲಿ ಹೆಚ್ಚು ಹಲಸು ಉತ್ಪಾದಿಸುವ ದೇಶಗಳ ಪೈಕಿ ಭಾರತವು ಎರಡನೇ ಸ್ಥಾನ. ಇಲ್ಲಿ ಪಾರಂಪರಿಕ ಖಾದ್ಯಗಳನ್ನು ಮಾಡುವುದು ವಿಶೇಷ, ಎನ್ನುವ ಮೆಚ್ಚುಗೆ. ತೋವಿನಕೆರೆಗೆ ಮಾಯ್ ಭೇಟಿ ಕೃಷಿಕರನ್ನು ಉತ್ತೇಜಿಸಿದೆ. ತಮ್ಮೂರಿನ ಹಣ್ಣಿನ ಮಹತ್ವವನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳದ ಮಂದಿಯ ಕಣ್ಣು ತೆರೆಸಿದೆ. ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಬಹುದೆನ್ನುವ ವಿಶ್ವಾಸ ಮಹಿಳಾ ಗುಂಪುಗಳಿಗೆ ಬಂದಿದೆ ಎನ್ನುತ್ತಾರೆ ಪದ್ಮರಾಜು.
           ಕೇರಳದಲ್ಲಿ ಹಲಸಿನ ಹಣ್ಣಿನಿಂದ 'ಬೆರಟಿ' (ಚಕ್ಕ ವರಟ್ಟಿ) ಎನ್ನುವ ಹೆಚ್ಚು ದಿವಸ ತಾಳಿಕೊಳ್ಳುವ, ಅಕಾಲದಲ್ಲಿ ಹಲಸಿನ ಖಾದ್ಯ ತಯಾರಿಸಬಹುದಾದ ಉತ್ಪನ್ನ ತಯಾರಿಸುತ್ತಾರೆ. ಸಿ.ವಿ.ಥಾಮಸ್ - ಇದಕ್ಕೊಂದು ಉದ್ಯಮ ರೂಪ ನೀಡಿದ್ದಾರೆ. ಬೆಂಗಳೂರಿನ ಸಮ್ಮೇಳನಕ್ಕೆ ಥಾಮಸ್ ತಮ್ಮ ಉತ್ಪನ್ನದೊಂದಿಗೆ ಆಗಮಿಸಿದ್ದರು. ಉತ್ಪನ್ನಗಳನ್ನು ಕೊಂಡು ಪ್ರೋತ್ಸಾಹಿಸಿದವರೇ ಅಧಿಕ.  ಕೇರಳಕ್ಕಿಂತ ಇಲ್ಲಿ ವರಟ್ಟಿಗೆ ಮಾರಾಟಾವಕಾಶ ಜಾಸ್ತಿಯಿದೆ' ಎಂದು ನಗುತ್ತಾ ಖುಷಿ ಹಂಚಿಕೊಂಡರು.
             ಕಳೆದ ವರುಷ ಕೇರಳದ ಜೇಮ್ಸ್ ಜೋಸೆಫ್ ಅವರ ಒಂಟಿ  ಯತ್ನದಿಂದಾಗಿ ಹಲಸು ಪಂಚತಾರಾ ಹೋಟೆಲಿನ ಊಟದ ಮೇಜನ್ನೇರಿದುದು ಸದ್ದಾಗಲೇ ಇಲ್ಲ. ಹೋಟೆಲಿನ ಅಡುಗೆ ತಜ್ಞರಿಗೆ ತನ್ನ ಹಲಸಿನ ತಜ್ಞತೆಯನ್ನು ಮಿಳಿತಗೊಳಿಸುವ ಪ್ರಯೋಗ ಯಶಸ್ಸಾಗಿದೆ. ಇವರ ರೆಡಿ ಟು ಕುಕ್ ಉತ್ಪನ್ನಗಳಿಗೆ ಹೋಟೆಲಿನ ಚೆಫ್ಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ. ಸಿಜಿಎಚ್ ಅರ್ತ್ ಹೋಟೆಲ್ ಗ್ರೂಪಿನ ಕಾರ್ಪೋರೆಟ್ ಚೆಫ್ ಜೋಸ್ ವರ್ಕ್ ಹೇಳುತ್ತಾರೆ, "ಅಕ್ಟೋಬರದಿಂದ ಮಾರ್ಚ್ ವರೆಗೆ ನಮ್ಮಲ್ಲಿಗೆ ಬರುವ ವಿದೇಶಿ ಪ್ರವಾಸಿಗಳು ಬರುವ ಸೀಸನ್ನಿನಲ್ಲಿ ಹಲಸಿನ ರೆಸಿಪಿ ಖಾಯಮ್ಮಾಗಿ ಮಾಡುವ ನಿರ್ಧಾರ ಮಾಡಿದ್ದೇವೆ,"
           2013ರ ಜುಲೈ ತಿಂಗಳಲ್ಲಿ ಮೀಯಪದವಿನ ಡಾ.ಡಿ.ಸಿ.ಚೌಟರ ನಿರ್ದೇಶನದಲ್ಲಿ ಮಂಗಳೂರಿನ ಸರೋಶ್ ಇನ್ಸ್ಟಿಟ್ಯೂಟ್ ಆಪ್ ಹೋಟೆಲ್ ಅಡ್ಮಿನಿಸ್ಟ್ರೇಶನ್ನಲ್ಲಿ ಒಂದು ದಿವಸ ಹಲಸಿನ ಅಡುಗೆ. ಅಡುಗೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳ ಮುಂದೆ ಡೆಮೋ. ಹಲಸಿನ ಪಿಝ್ಜಾ, ಶ್ರೀಖಂಡ್, ಮೂಸ್, ಕಾಕ್ಟೈಲ್, ಮೋಕ್ಟೈಲ್, ಫ್ಲಾಂಬೆ.. ತಯಾರಿ. ಚೆಫ್ಗಳಿಗೆ ಹಲಸಿನ ರುಚಿ ತೋರಿಸುವ ಪ್ರಕ್ರಿಯೆ ದೇಶಕ್ಕೇ ಪ್ರಥಮ.
             ದೂರದ ಮಾತೇಕೆ? ಕರಾವಳಿಯ ಬಂಟ್ವಾಳ (ದ.ಕ.) ತಾಲೂಕಿನ ಅಳಿಕೆ ಸುತ್ತಮುತ್ತ ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಉತ್ಕೃಷ್ಟವಾದ ಐವತ್ತಕ್ಕೂ ಮಿಕ್ಕಿ ಹಲಸಿನ ತಳಿಗಳು ಅಭಿವೃದ್ಧಿಯಾಗುತ್ತಿವೆ. ರೈತರೇ ರುಚಿ ನೋಡಿ ಆಯ್ಕೆ ಮಾಡಿದಂತಹುದು. ಹಿಂದಿನ ವರುಷ ಮೂವತ್ತು ಟನ್ ಹಲಸು ಮುಂಬಯಿಯ ಐಸ್ಕ್ರೀಮ್ ಘಟಕಕ್ಕೆ ಮಾರಾಟವಾಗಿದೆ. ಅಡ್ಯನಡ್ಕದಲ್ಲಿ ಹಲಸು ಬೆಳೆಗಾರರ ಸಂಘ ರೂಪುಗೊಂಡಿದೆ. 'ಹಲಸು ಸ್ನೇಹಿ ಕೂಟ' ಸಕ್ರಿಯವಾಗಿದೆ.
           ಒಟ್ಟಿನಲ್ಲಿ ದೇಶ-ವಿದೇಶಗಳಲ್ಲಿ ಹಲಸು (ಫನಸ್) ಡೈನಿಂಗ್ ಟೇಬಲ್ ಏರಿ ಕುಳಿತಿದೆ. ಒಂದೆಡೆ ಹಲಸನ್ನು ಅಪ್ಪಟವಾಗಿ ಪ್ರೀತಿಸುವ ಮಂದಿ. ಮತ್ತೊಂದೆಡೆ ಹೆಸರೆತ್ತಿದರೆ ಸಾಕು ಮೈಮೇಲೆ ಆವೇಶವಾದಂತೆ ದೂರ ಸರಿಯುವವರು. ಈ ಎರಡು ವರ್ಗದವರಿಗೂ ಹಲಸಿನ ಮೇಣ ಅಂಟಿದೆ! ಸೊಳೆಯನ್ನು ಬೇರ್ಪಡಿಸಿ, ಪ್ಯಾಕೆಟ್ ಮಾಡಿ ನೀಡಿದರೆ ಬೆಲೆ ತೆತ್ತು ಖರೀದಿಸುವ ಮಂದಿ ಹಳ್ಳಿಯಲ್ಲೂ ಇದ್ದಾರೆ. ರೆಡಿ ಟು ಕುಕ್ ರೂಪದಲ್ಲಿ ಅಂದಂದೇ ಒದಗಿಸಲು ಸಾಧ್ಯವಾದರೆ ಮಿತ ಪ್ರಮಾಣದಲ್ಲಿ ಪೇಟೆ ಯಾಕೆ, ಗ್ರಾಮೀಣ ಪ್ರದೇಶದಲ್ಲೂ ಮಾರಿ ಹೋಗುತ್ತದೆ.
          ಹಲಸಿನ ಮೇಳಗಳ ಮಾಲೆ ಮತ್ತೆ ಆರಂಭವಾಗಿದೆ. ಮೊನ್ನೆ ಜೂನ್ 14-15ರಂದು ಶಿರಸಿಯ ಕದಂಬ ಸಂಸ್ಥೆಯು ಮೇಳವನ್ನು ಆಯೋಜಿಸಿತ್ತು.  ಜೂನ್ 22ರಂದು ಪುಣಚ(ದ.ಕ.)ದಲ್ಲಿ ಹಲಸಿನ ಹಬ್ಬ. ಗೃಹ ಉದ್ದಿಮೆಯ ಕಷ್ಟ-ಸುಖಗಳ ಮಾತುಕತೆ. ಇದೇ ತಿಂಗಳ 28-29ರಂದು ಕಾರ್ಕಳದಲ್ಲಿ ಮೇಳ. ಬರುತ್ತೀರಲ್ಲಾ.

(ಉದಯವಾಣಿ/19-6-2014/ನೆಲದ ನಾಡಿ ಅಂಕಣದಲ್ಲಿ ಪ್ರಕಟ)


Thursday, June 5, 2014

ಚೀನಿಕಾಯಲ್ಲಿ ಕಲಾವಿದನ ಮೋಡಿ







                   ಕೇರಳದ ಎರ್ನಾಕುಲಂನಲ್ಲೊಂದು ಶುಭ ಸಮಾರಂಭ. ಅದ್ದೂರಿ ವ್ಯವಸ್ಥೆ. ಸಾಲಂಕೃತ ವೇದಿಕೆ. ಕರ್ಣಾನಂದದ ವಾದ್ಯ ಗೋಷ್ಠಿ. ನಾಲಗೆಗೆ ಮೋಸ ಮಾಡದ ಖಾದ್ಯಗಳು.
                      ಸಭಾಭವನದ ಪ್ರವೇಶ ದ್ವಾರದಲ್ಲಿ ಹಣ್ಣು, ತರಕಾರಿಗಳ ಪ್ರದರ್ಶನವಿತ್ತು. ಇದರಲ್ಲೇನು ವಿಶೇಷ? ಪ್ರಶ್ನೆ ರಾಚಿದರೆ ಆಶ್ಚರ್ಯವಿಲ್ಲ. ಚೀನಿಕಾಯಿ (ಸಿಹಿಗುಂಬಳ) ಎಲ್ಲರಿಗೂ ಗೊತ್ತಿರುವ ತರಕಾರಿ. ನೋಡಿ, ಅದನ್ನು ಕಲಾತ್ಮಕವಾಗಿ ಚಿತ್ರಿಸಿದ ಕಲಾವಿದನ ಮೋಡಿ.
                    ಶಿವ, ಮತ್ಸ್ಯ, ಪಕ್ಷಿ, ಗಿಳಿಗಳನ್ನು ಚೀನಿಕಾಯಿಯಲ್ಲಿ ಕೊರೆದಿದ್ದಾರೆ. ಸೌತೆಕಾಯಿ ನವಿಲಾಗಿದೆ. ಪಪ್ಪಾಯಿ, ಕಲ್ಲಂಗಡಿ ಹಣ್ಣುಗಳು ವಿವಿಧ ಆಕಾರ ತಾಳಿವೆ. ಇತರ ಹಣ್ಣುಗಳನ್ನು ಕಲಾತ್ಮಕವಾಗಿ ಜೋಡಿಸಿದ್ದಾರೆ. ಎರ್ನಾಕುಲಂನ ಅನುಪ್ ಕೊಳಂಚೇರಿ ಕಲಾವಿದರ ಕೈಚಳಕ. ಬಹುತೇಕ ಸಮಾರಂಭಗಳ ಅಲಂಕಾರಗಳಲ್ಲಿ ಅನೂಪ್ ಅವರ ಮಾದರಿಗಳೂ ಎರ್ನಾಕುಲಂನಲ್ಲಿ ಖ್ಯಾತಿ.
                 ಕಣ್ಮನ ಸೆಳೆಯುವ ಪ್ರದರ್ಶನವನ್ನು ನೋಡುವ ಎಷ್ಟು ಹಸಿರು ಮನಸ್ಸಿಗಳಿದ್ದುವು? ಮಕ್ಕಳನ್ನು ಸೆಳೆದರೆ ಸಾಲದು. ಮಕ್ಕಳೊಂದಿಗೆ ಹಿರಿಯರೂ ಪ್ರದರ್ಶನ ನೋಡಿದಾಗ ಮಕ್ಕಳಿಗದು ಪಠ್ಯದ ಅನುಭವ ಕೊಡುತ್ತದೆ. ನಾನು ನೋಡಿದಂತೆ ಅಂದಿನ ಅನೂಪ್ ಮಾದರಿಗಳನ್ನು ನೋಡುವ ಕಣ್ಣುಗಳಿದ್ದುದು ವಿರಳ. ನೋಡಿಯೂ ನೋಡದಂತಿರುವ, ಮಕ್ಕಳು ಹಠ ಹಿಡಿದಾಗ ಗದರಿಸಿ ಎತ್ತೊಯ್ಯುವ ಹೆತ್ತವರನ್ನು ನೋಡಿ ಕಣ್ದಣಿಯಿತು!
                 ನೋಡಿ ಆಗಬೇಕಾದುದೇನು ಅಲ್ವಾ?! ಕಾಂಚಾಣವು ಬದುಕನ್ನು ನಿಯಂತ್ರಿಸುತ್ತಿರುವಾಗ ಬುದ್ಧಿಗೆ ಗ್ರಾಹ್ಯವಾದ ವಿಚಾರಗಳು ಮಸುಕಾಗುತ್ತವೆ. ಜನರು ನೋಡುತ್ತಾರೆ, ಮರೆಯುತ್ತಾರೆ. ಕಲೆಯನ್ನು ನೋಡುವ, ಗುರುತಿಸುವ ದೃಷ್ಟಿಕೋನ ಕಡಿಮೆಯಾಗುತ್ತಿದೆ, ಎಂಬ ವಿಷಾದ ಅನೂಪರದು. ಇಂತಹುದಕ್ಕೆಲ್ಲಾ ಬದುಕಿನ ಜಂಜಾಟವನ್ನು ಆರೋಪಿಸಿ ಬಿಡುತ್ತೇವೆ. ನಮಗೆ ಆಸಕ್ತಿ ಇಲ್ಲದಿದ್ದರೂ ಮಕ್ಕಳಿಗಾದರೂ ಇಂತಹ ಆಸಕ್ತಿಗಳನ್ನು ರೂಢಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮಾವು, ದ್ರಾಕ್ಷಿಗಳನ್ನು ಮಕ್ಕಳು ಪುಸ್ತಕದ ಚಿತ್ರಗಳನ್ನು ನೋಡಿ ಖುಷಿ ಪಡಬೇಕಷ್ಟೇ.
                ಅದ್ದೂರಿ ಸಮಾರಂಭಗಳಲ್ಲಿ ಇಂತಹ ಪ್ರದರ್ಶನಗಳು ನಮ್ಮೂರಲ್ಲೂ ಸಹಜ. ಆದರೆ ಇದನ್ನು ನೋಡುವ ಕಣ್ಣುಗಳು, ಆಸ್ವಾದಿಸುವ ಮನಸ್ಸುಗಳು ಬೇಕಾಗಿವೆ. ಮಧ್ಯಾಹ್ನ ಒಂದು ಗಂಟೆಗೆ ಬೆವರೊರೆಸಿಕೊಳ್ಳುತ್ತಾ ಸಭಾಭವನ ಹೊಕ್ಕಿ, ಅಷ್ಟಿಷ್ಟು ಖಾದ್ಯವನ್ನು ಹೊಟ್ಟೆಗಿಳಿಸಿ, ಅತಿಥೇಯರ ಕೈ ಕುಲುಕಿದಲ್ಲಿಗೆ ಭಾವನೆ-ಸಂಬಂಧಗಳ ಓಘ ಮುಗಿದಿರುತ್ತದೆ. ಬದುಕಿನಲ್ಲಿ ರಸಗ್ರಹಣ, ರಸಾನುಭವಗಳು ಶುಷ್ಕವಾಗುತ್ತಿರುವಾಗ 'ಸಿಹಿ ಯಾವುದು, ಕಹಿ ಯಾವುದು' ಎನ್ನುವುದನ್ನು ಹುಡುಕುವ ಕಾಲಘಟ್ಟದಲ್ಲಿದ್ದೇವೆ.
                 ಬದುಕಿನ ಸುಭಗತೆಯ ಅನಾವರಣಕ್ಕೆ ಕಲಾಸ್ವಾದನೆಯೂ ಮುಖ್ಯವಾಗುತ್ತದೆ.