Friday, September 7, 2018

ಇದು ಕಾಫಿಯಲ್ಲ, ಹಲಸಿನ ಬೀಜದ ‘ಜಾಫಿ’



           2018 ಜುಲೈ ಮೊದಲ ವಾರ ಪುತ್ತೂರಿನಲ್ಲಿ ಹಲಸು ಹಬ್ಬ. ಹಲಸು ಆಂದೋಳನವು ಮೊಳಕೆಯೊಡದ ಊರಲ್ಲೇ ಮೊದಲ ಬಾರಿಗೆ ಹಬ್ಬ ಸಂಪನ್ನವಾಗಿರುವುದು ಹರ್ಷ. ಹಾಗಾಗಿ ಮುಗಿಬಿದ್ದ ಹಲಸು ಪ್ರಿಯರು ನೂರಾರು ಅಲ್ಲ, ಸಾವಿರಾರು!
                ಹಬ್ಬದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಶಿವಣ್ಣರ ಚಿಕ್ಕ ಮಳಿಗೆಯ ಸುತ್ತ ಜನಸಂದಣಿ. ಹಲಸಿನ ಬೀಜದ ಕಾಫಿ, ಅಲ್ಲಲ್ಲ, ‘ಜಾಫಿ’ಪೇಯವನ್ನು ಹಂಚುವುದರಲ್ಲಿ ಶಿವಣ್ಣ ಬ್ಯುಸಿ. ಅನೇಕರ ಉದ್ಗಾರ ಒಂದೇ, ‘ಕಾಫಿ ಕೇಳಿದ್ದೇವೆ, ಸವಿದಿದ್ದೇವೆ, ಜಾಫಿ ಇದೇ ಮೊದಲು.”
           ಪಿಲಿಪೈನ್ಸ್‍ನಲ್ಲಿ ಜಾಫಿ ಮಾಡಿ ಬಳಸುತ್ತಾರೆಂದು ಶಿವಣ್ಣರಿಗೆ ಗೊತ್ತಿತ್ತು. ನಮಗೂ ಯಾಕೆ ಸಾಧ್ಯವಿಲ್ಲ? ವಿಚಾರ ತಲೆಗೆ ಹೊಕ್ಕಿತ್ತು. ‘ಮಾಡಿ-ಬೇಡಿ’ಗಳ ಅವಿರತ ಶ್ರಮ. ಸಿದ್ಧ ಫಾರ್ಮುಲಾ ಗೊತ್ತಿರಲಿಲ್ಲ. ಮೂರ್ನಾಲ್ಕು ವರುಷಗಳಲ್ಲಿ ಪಾಕ ಕೈವಶ. ಸ್ವತಃ ಬಳಕೆ. ಸ್ನೇಹಿತರಿಗೂ ಪೇಯ ಕುಡಿಸಿದರು. ಉತ್ತಮ ಹಿಮ್ಮಾಹಿತಿ.
         ಒಮ್ಮೆ ಸವಿದವರು ಮತ್ತೊಮ್ಮೆ ಸವಿದು, ಜಾಫಿಯ ಪ್ಯಾಕೆಟನ್ನು ಮನೆಗೊಯ್ಯುವಷ್ಟು ಕಾಡುತ್ತದೆ. ಹಲಸಿನ ಬೀಜದಿಂದ ತಯಾರಿಸಿದ ಪೌಷ್ಠಿಕಾಂಶಭರಿತ ಪೇಯ. ಹಾಲಿನೊಂದಿಗೆ ಜಾಫಿ ಪುಡಿಯನ್ನು ಮಿಕ್ಸ್ ಮಾಡಿಕೊಂಡು ಬೇಕಾದಷ್ಟು ಸಕ್ಕರೆಯನ್ನು ಕದಡಿಕೊಂಡರೆ ‘ಜಾಫಿ’ರೆಡಿ. ಬಿಸಿಬಿಸಿ ಪೇಯದ ಹೀರುವಿಕೆಯಿಂದ ಇಮ್ಮಡಿ ಉತ್ಸಾಹ!    
         ಹಲಸಿನ ಹಣ್ಣಿನ ಬೀಜಗಳನ್ನು ಒಣಗಿಸಿದ ಬಳಿಕ ಪುಡಿ ಮಾಡುವುದು ಜಾಫಿ ತಯಾರಿಯ ಮುಖ್ಯ ಕೆಲಸ. ಬೀಜಗಳು ಬಿಸಿಲಿನಲ್ಲಿ ಒಣಗಿದರೆ ರುಚಿ ಹೆಚ್ಚು. ಡ್ರೈಯರ್‍ನಲ್ಲೂ ಓಕೆ. ಕಟ್ಟಿಗೆ ಡ್ರೈಯರಿನಲ್ಲಿ ಕೆಲವೊಮ್ಮೆ ತಾಪ ಹೆಚ್ಚಾಗಿ ಬೀಜಗಳು ಕಪ್ಪಾಗುತ್ತವೆ. ಇಂತಹವನ್ನು ಪುಡಿ ಮಾಡಿದರೆ ರುಚಿ ಕೆಟ್ಟುಹೋಗುತ್ತದೆ. ಬಣ್ಣವೂ ಮಾಸುತ್ತದೆ.
         ಹಲಸಿನ ಮೇಳಗಳಲ್ಲಿ ಶಿವಣ್ಣರ ಜಾಫಿಯನ್ನು ಹುಡುಕಿ ಬರುವ ಗ್ರಾಹಕರು ರೂಪುಗೊಂಡಿದ್ದಾರೆ. “ಬೇಕಾದಾಗ ಕುಡಿಯಬಹುದಾದ ಪೇಯವಿದು. ನಾನು ನಿರಂತರ ಬಳಸುತ್ತಿದ್ದೇನೆ. ಅದರ ರುಚಿಗೆ ಬಾಯಿ ಹೊಂದಿಕೊಂಡಿದೆ,” ಎನ್ನುತ್ತಾ, “ಮಲಬದ್ಧತೆ ಇರುವವರು ಜಾಫಿಯ ಪೇಯವನ್ನು ನಿರಂತರ ಸೇವಿಸಿದರೆ ಪರಿಣಾಮಕಾರಿ,” ಎನ್ನುತ್ತಾರೆ.
         ಬಳಸಿದವರಿಂದ ಧನಾತ್ಮಕ ಪ್ರತಿಕ್ರಿಯೆ. ಜಾಫಿಯೊಂದಿಗೆ ಚಿಕೋರಿಯನ್ನೂ ಸೇರಿಸಿದರೆ ರುಚಿ ವರ್ಧಿಸಬಹುದೆನ್ನುವುದು ಕೆಲವರ ಅನುಭವ. ‘ಚಿಕೋರಿ ಸೇರಿಸಿದರೆ ಹಲಸಿನ ಬೀಜದ ರುಚಿ ಸಿಗಲಾರದು’ ಎನ್ನುವ ಆತಂಕ ಶಿವಣ್ಣರದು. ನೂರು ಗ್ರಾಮ್‍ನ ಪ್ಯಾಕೆಟಿಗೆ ಅರುವತ್ತು ರೂಪಾಯಿ, ಇನ್ನೂರು ಗ್ರಾಮಿನದ್ದಕ್ಕೆ ಒಂದುನೂರ ಹದಿನೈದು ಮತ್ತು ಆರ್ಧ ಕಿಲೋಗೆ ಇನ್ನೂರ ಎಪ್ಪತ್ತೈದು ರೂಪಾಯಿ ದರ.
           ಮಾರಾಟ ಮಳಿಗೆಗಳಲ್ಲಿ ಜಾಫಿ ಅಲಭ್ಯ. ಆನ್ ಲೈನ್ ಮತ್ತು ನೇರ ಖರೀದಿ. ಮಾರುಕಟ್ಟೆಗೆ ಉತ್ಪನ್ನವನ್ನು ಇಳಿಸಿದರೆ ಅನಿವಾರ್ಯವಾಗಿ ದರವನ್ನೂ ಏರಿಸಬೇಕಾಗುತ್ತದೆ. ವ್ಯಾಪಾರಿಗಳ ಕಮಿಶನ್, ಸಾಗಾಟ.. ಹೀಗೆ ಖರ್ಚೂ ಏರುತ್ತದೆ. ಕಳೆದ ವರುಷ ಐನೂರು ಕಿಲೋ ಉತ್ಪನ್ನ ತಯಾರಿಸಿದ್ದರು. ಆಕರ್ಷಕ ಪ್ಯಾಕೆಟ್.
           ಕಾಫಿಯಲ್ಲಿ ಕೆಫಿನ್, ಚಹದಲ್ಲಿ ಟ್ಯಾನಿನ್ ಇದೆ. ಒಂದು ಮಾಹಿತಿಯಂತೆ -  ನೂರು ಗ್ರಾಮ್ ಹಲಸಿನ ಬೀಜದಲ್ಲಿ ಸುಮಾರಿ 98 ಕ್ಯಾಲೊರಿ, 0.4 ಗ್ರಾಮ್ ಕೊಬ್ಬು, 6.6 ಗ್ರಾಮ್ ಪ್ರೊಟೀನ್, 38.4 ಗ್ರಾಮ್ ಕಾರ್ಬೋಹೈಡ್ರೇಟ್, 1.5 ಗ್ರಾಮ್ ನಾರು ಇದೆ. ಎಂಟರಿಂದ ಹತ್ತು ಗ್ರಾಮ್ ಅಸ್ಕಾರ್ಬಿಕ್ ಆಮ್ಲ (ಸಿ ಜೀವಾತು) ಮತ್ತು ವಿಟಮಿನ್ ಬಿ1 ಮತ್ತು ಬಿ 12 ಒಳ್ಳೆಯ ಪ್ರಮಾಣದಲ್ಲಿದೆಯಂತೆ. ಹೀಗಾಗಿ ಜಾಫಿ ಪೌಷ್ಠಿಕಾಂಶ ಭರಿತ.
           ಮೇಳಗಳಲ್ಲಿ ಜಾಫಿಯನ್ನು ರುಚಿ ತೋರಿಸಿ ಗ್ರಾಹಕರ ಒಲವನ್ನು ಪಡೆಯುವುದು ಶಿವಣ್ಣರ ಜಾಣ್ಮೆ. ಜಾಫಿಯನ್ನು ಸವಿದ ಮಂಗಳೂರಿನ ಡಾ.ಮನೋಹರ ಉಪಾಧ್ಯ ಅವರ ಅನುಭವ – “ಚಹ ಕುಡಿದ ನಂತರ ದೇಹದ ಹೆಚ್ಚಿನ ನೀರಿನಂಶ ಹೋಗುವ ಪ್ರಕ್ರಿಯೆಗೆ ಜiuಡಿeಣiಛಿ eಜಿಜಿeಛಿಣ ಅನ್ನುತ್ತಾರೆ. ಜಾಫಿ ಕುಡಿದ ನಂತರ ದೇಹವು ಬೆವರುವುದನ್ನು ಗಮನಿಸಿದ್ದೇನೆ. ಇದೊಂದು ಧನಾತ್ಮಕ ಗುಣ. ಹಲಸಿನ ಬೀಜದಲ್ಲಿ ದೇಹದ ಸಕ್ಕರೆ ಅಂಶವನ್ನು ನಿಯಂತ್ರಿಸುವ ವಿಲ್ಡಾಗ್ಲಿಪ್ಟಿನ್ ) ಎಂಬ ಔಷಧೀಯ ಗುಣವಿದೆ.”
          ಶಿವಣ್ಣರಿಂದ ಯಾವುದೋ ಮಾಹಿತಿ ಬೇಕಾಗಿತ್ತು. ಛತ್ತೀಸಗಢದ ಹಲಸಿನ ಕಾರ್ಯಾಗಾರವನ್ನು ನಿರ್ವಹಿಸುತ್ತಿದ್ದರು. ಇನ್ನೊಂದು ಸಂದರ್ಭದಲ್ಲಿ ಮಾತನಾಡಿಸಬೇಕಾತ್ತು. ‘ಸರ್, ಇಂದೋರಿನಲ್ಲಿದೆ’ ಎನ್ನಬೇಕೇ? ದೇಶಾದ್ಯಂತ ಶಿವಣ್ಣ ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡುತ್ತಾರೆ. ಹಲಸಿನ ಆಂದೋಳನವನ್ನು ಎಲ್ಲೆಡೆ ಹಬ್ಬಿಸುತ್ತಿದ್ದಾರೆ. ವ್ಯರ್ಥವಾಗುವ ಹಲಸಿಗೆ ಮಾನವನ್ನು ಕೊಡುವತ್ತ ಯತ್ನಿಸುತ್ತಿದ್ದಾರೆ. ತನ್ನ ಹಲಸಿನ ಬೀಜದ ಜಾಫಿ ಪೇಯವನ್ನು ಛತ್ತೀಸಗಢ, ಇಂದೋರ್, ದೆಹಲಿ, ಮುಂಬಯಿ, ಮಹಾರಾಷ್ಟ್ರಗಳಲ್ಲಿ ಪರಿಚಯಿಸಿದ್ದಾರೆ. ಗೋವಾದಲ್ಲಂತೂ ಅನೇಕರು ಜಾಫಿಗೆ ‘ಎಡಿಕ್ಟ್’ ಆಗಿಬಿಟ್ಟಿದ್ದಾರೆ!
         ಹಲಸಿಗೆ ಸಂಬಂಧಿಸಿದ ಸೆಮಿನಾರ್, ಗೋಷ್ಠಿಗಳು, ಮೇಳಗಳು ಎಲ್ಲಿದ್ದರೂ ತಮ್ಮ ತಂಡದೊಂದಿಗೆ ಅಥವಾ ವೈಯಕ್ತಿಕವಾಗಿ ಶಿವಣ್ಣ ಭಾಗಿ. ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ, ಶಿಬಿರಾರ್ಥಿಯಾಗಿಯೂ ಭಾಗವಹಿಸುತ್ತಲೇ ಇರುತ್ತಾರೆ. ಸಂದರ್ಭ ಸಿಕ್ಕಾಗಲೆಲ್ಲಾ ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟು ಪ್ರಚಾರ ಮಾಡುತ್ತಾರೆ. ಕೃಷಿಕರ ಫೋನ್ ನಂಬ್ರಗಳನ್ನು ದಾಖಲಿಸಿಟ್ಟು ಸದಾ ಸಂಪರ್ಕದಲ್ಲಿರುತ್ತಾರೆ. ಹಲಸಿಗೆ ಸಂಬಂಧಿಸಿದ ಕೆಲಸಗಳಿಗೆ ಶಿವಣ್ಣರಿಗೆ ವಿಶ್ರಾಂತಿಯಿಲ್ಲ. ಉತ್ಪಾದನೆ ಮತ್ತು ಮಾರುಕಟ್ಟೆಗಾಗಿ ಸಖರಾಯಪಟ್ಟಣದಲ್ಲಿ ‘ಅಂಕುರ ಆಹಾರ ಸಂಸ್ಕರಣ ಸಂಘ’ ಹುಟ್ಟುಹಾಕಿದ್ದಾರೆ. (ಶಿವಣ್ಣ - 9481409660) ಇನ್ನೇನು, ಮಳಿಗೆಗಳಲ್ಲಿ ಜಾಫಿಯ ‘ಕೋಲ್ಡ್ ಕಾಫಿ’ ಪರಿಚಯಿಸಲಿದ್ದಾರೆ.

Monday, July 16, 2018

ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಹಲಸಿನ ಹಬ್ಬ





              ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಾಯದ 'ನಟರಾಜ ವೇದಿಕೆ'ಯಲ್ಲಿ 2018 ಜುಲೈ 11ರಂದು ಹಲಸಿನ ಹಬ್ಬ. ಪುತ್ತೂರಿನಲ್ಲಿ ಪ್ರಥಮವಾಗಿ ನಡೆದ ಹಬ್ಬದಲ್ಲಿ ಎಂಟು ಸಾವಿರಕ್ಕೂ ಮಿಕ್ಕಿ ಹಲಸು ಪ್ರೇಮಿಗಳು ಭಾಗವಹಿಸಿದ್ದರು. ಹಲಸಿನ ಸವಿಯನ್ನು ಉಂಡರು. ಹಲಸಿನ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡರು. ದಿನಪೂರತಿ ನಡೆದ ಹಬ್ಬದಲ್ಲಿ ದೂರದೂರಿನಿಂ ಹಲಸುಪ್ರೇಮಿಗಳು ಆಗಮಿಸಿರುವುದು ವಿಶೇಷ.
          ಕರ್ನಾಟಕದ ಕೇರಳಗಳಲ್ಲಿ ಕಳೆದ ಹತ್ತು ವರುಷಗಳಲ್ಲಿ ಏನಿಲ್ಲವೆಂದರೂ ಇನ್ನೂರಕ್ಕೂ ಮಿಕ್ಕಿ ಉತ್ಪನ್ನಗಳು ಸಿದ್ಧವಾಗಿ ಗ್ರಾಹಕರ ಉದರ ಸೇರುತ್ತಿವೆ, ದೊಡ್ಡ ಪ್ರಮಾಣದಲ್ಲಿ ಹೊರ ರಾಜ್ಯಗಳಿಗೂ ಸೇರುತ್ತಿವೆ. ಮೇಳಗಳು, ಕಾರ್ಯಾಗಾರಗಳು, ತರಬೇತಿ ಶಿಬಿರಗಳು ಖಾಸಗಿಯಾಗಿ ಸದ್ದಿಲ್ಲದೆ  ನಡೆಯುತ್ತಿವೆ. ಕೇರಳದಲ್ಲಿ ಮೂರು ಡಜನ್ನಿನಷ್ಟು ಮೌಲ್ಯವರ್ಧಿತ ಘಟಕಗಳು ಕಾರ್ಯಾಚರಿಸುತ್ತಿವೆ. ಚಿಪ್ಸ್, ಬೆರಟ್ಟಿಯಂತಹ ಸಾಂಪ್ರದಾಯಿಕ ಉತ್ಪನ್ನಗಳ ತಯಾರಿಯಲ್ಲದೆ ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸುವ ಪ್ರಯೋಗಶೀಲತೆ ಹಬ್ಬುತ್ತಿದೆ. 
          ಇಷ್ಟೆಲ್ಲಾ ಹಲಸಿನ ವಿಚಾರಗಳನ್ನು ಹೇಳಬೇಕಾದರೆ ಅದಕ್ಕೆ ಆಂದೋಳನ ರೂಪ ನೀಡಿರುವುದು ಪುತ್ತೂರಿನ 'ಅಡಿಕೆ ಪತ್ರಿಕೆ' ಕೃಷಿ ಪತ್ರಿಕೆ. ಕಳೆದ ಹನ್ನೆರಡು ವರುಷಗಳಿಂದ ದೇಶ-ವಿದೇಶಗಳ ಹಲಸಿನ ಮೌಲ್ಯವರದಹಿತ ಉತ್ಪನ್ನಗಳ ಯಶೋಗಾಥೆಗಳನ್ನು ಪ್ರಕಟಿಸಿದೆ. ಪತ್ರಿಕೆಯು ಆಂದೋಳನವನ್ನು ಹುಟ್ಟು ಹಾಕಿದ ನೆಲದಲ್ಲೇ ಹಲಸಿನ ಹಬ್ಬ ನಡೆದಿರುವುದು ಮಹತ್ವದ ವಿಚಾರ.
          ಪುತ್ತೂರಿನ ನವಚೇತನ ಸ್ನೇಹ ಸಂಗಮವು ಹಲಸಿನ ಹಬ್ಬವವನ್ನು ಅನ್ಯಾನ್ಯ ಸಂಸ್ಥೆಗಳ ಪ್ರೋತ್ಸಾಹದಿಂದ ನಡೆಸಿದೆ. ಹಲಸು ಹಬ್ಬದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಎನ್.ಸುಧಾಕರ ಶೆಟ್ಟಿ ವಹಿಸಿದ್ದರು. ಹಿರಿಯ ಪತ್ರಕರ್ತ, ಹಲಸಿನ ಅಂತಾರಾಷ್ಟ್ರಿಯ ರಾಯಭಾರಿ ಶ್ರೀ ಪಡ್ರೆಯವರು ಹಲಸು ಕತ್ತರಿಸುವ ಮೂಲಕ ಹಬ್ಬವನ್ನು ಉದ್ಘಾಟಿಸಿದರು.