Friday, September 7, 2018

ನಗರದ ಹಸಿರು ಮನಸಿಗರಿಗೆ ‘ರೆಡಿ ಟು ಪ್ಲಾಂಟ್’




 
           ಕಂಪ್ಯೂಟರ್ ಹತ್ತಿರ ಅಲಂಕಾರಕ್ಕಾಗಿ ಹೂ ಕುಂಡ ಬೇಕಾಗಿತ್ತು. ಅಂಗಡಿಗೆ ಹೋಗುತ್ತೇವೆ. ತಾಜಾ ಹೂವನ್ನು ಹೋಲುವ ಪ್ಲಾಸ್ಟಿಕ್ ಹೂಗಳಿರುವ ಕುಂಡವನ್ನು ತರುತ್ತೇವೆ. ಒಂದಷ್ಟು ಸಮಯದ ಬಳಿಕ ಬಣ್ಣ ಮಾಸುತ್ತದೆ. ಕುಂಡ ಮೂಲೆ ಸೇರುತ್ತದೆ.
           ಇಲ್ನೋಡಿ, ಪ್ಲಾಸ್ಟಿಕ್ ಹೂವನ್ನು ತಾಜಾ ಹೂವೆಂದು ಯಾಕೆ ಭ್ರಮಿಸಬೇಕು? ತಾಜಾ ಹೂವಿನ ಕುಂಡ ಕಂಪ್ಯೂಟರ್ ಹತ್ತಿರ ಇರಲೆಂದೇ ‘ರೆಡಿ ಪ್ಲಾಂಟ್’ ರೆಡಿಯಾಗಿದೆ! ಪ್ಲಾಸ್ಟಿಕ್ ರಹಿತ. ಪರಿಸ್ನೇಹಿ.
           ಉ.ಕ.ಜಿಲ್ಲೆ ಶಿರಸಿಯ ‘ಇನ್ನೋಸೆಂಟರ್’ಸಂಸ್ಥೆಯು ಮುಖ್ಯವಾಗಿ ನಗರದ ಹೂ ಮನಸ್ಸಿಗರಿಗಾಗಿ ರೆಡಿ ಪ್ಲಾಂಟ್ ಸಿದ್ಧಪಡಿಸಿದೆ. ಮಣ್ಣಿಲ್ಲ, ಜಾಗವಿಲ್ಲ, ಗಿಡ ಎಲ್ಲಿಂದ ತರಲಿ... ಈ ಸಮಸ್ಯೆಯೇ ಇಲ್ಲ. ಪುಟ್ಟ ಕುಂಡದೊಳಗೆ ಗೊಬ್ಬರದ ಮಿಶ್ರಣವಿದೆ. ಕುಂಡದ ಹೊರಗೆ ಹೂವಿನ ಬೀಜಗಳ ಪ್ಯಾಕೆಟ್ ಇದೆ.
           ನೀವು ಮಾಡಬೇಕಾದುದಿಷ್ಟೇ. ಕುಂಡದೊಳಗೆ ಬೀಜ ಹಾಕಿ ನೀರು ಉಣಿಸಿದರಾಯಿತು. ಒಳಗಿರುವ ಪೋಷಕಾಂಶ ಭರಿತ ಮಣ್ಣಿನಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ. ಸ್ವಲ್ಪ ನಿಗಾ ವಹಿಸಿದರೆ ಸಾಕು. ನೋಡಿ, ಕುಂಡದಲ್ಲಿ ತಾಜಾ ಹೂವಿನ ನಗು. ಕೃಷಿಯ ಅನುಭವ ಇಲ್ಲದವರಿಗೆ ಈ ವ್ಯವಸ್ಥೆ ಖುಷ್. ಹೂ ಯಾಕೆ, ತರಕಾರಿ ಬೀಜವನ್ನೂ ಊರಬಹುದು.
         “ಈಗಾಗಲೇ ಕೃಷಿಯಲ್ಲಿ ಬಳಸುತ್ತಿರುವ ಗೊಬ್ಬರವನ್ನು ರೈತರ ತೋಟ, ಗದ್ದೆಗಳ ತ್ಯಾಜ್ಯದಿಂದ ಮಾಡಲಾಗಿದ್ದು, ಜೊತೆಗೆ ಎರೆಗೊಬ್ಬರ, ತೆಂಗಿನ ನಾರಿನ ಪುಡಿ ಹಾಗೂ ಮರದ ಪುಡಿಯನ್ನು ಸಮ್ಮಿಶ್ರಮಾಡಿ ಬಳಸಿದ್ದೇವೆ,” ಎನ್ನುತ್ತಾರೆ ರೆಡಿ ಪ್ಲಾಂಟ್ ಇದರ ಮುಖ್ಯಸ್ಥ ಶಶಿ ಹೆಗಡೆ.
         ಮನೆಯೊಳಗೆ ಹತ್ತಾರು ಕುಂಡಗಳಿದ್ದರೆ ಬಗೆಬಗೆಯ ಹೂಗಳ ಅಂದವನ್ನು ಸವಿಯಬಹುದು. ಮನೆಯ ಬಾಲ್ಕನಿ, ಕಿಟಕಿಗಳ ಅಂದವನ್ನು ಹೆಚ್ಚಿಸಬಹುದು. ಕಚೇರಿಯ ಮೇಜಿನ ಮೇಲೆ ಅಲಂಕಾರಕ್ಕಾಗಿ ಇಡಬಹುದು. ನಂನಮ್ಮ ಮನಸ್ಸಿನ ಸೌಂದರ್ಯದಂತೆ ವಿನ್ಯಾಸ ಮಾಡಬಹುದು.
          “ಕುಂಡದೊಳಗಿನ ಮಣ್ಣು ಪರೀಕ್ಷೆಗೆ ಒಳಪಟ್ಟಿದೆ. ಪ್ರತಿ ಮಿಶ್ರಣದ ಪೋಷಕಾಂಶಗಳ ಹಾಗೂ ಪಿ.ಎಚ್.ಮೌಲ್ಯ ದೃಢೀಕರಿಲ್ಪಟ್ಟಿದೆ. ಬೇರೆ ಬೇರೆ ಬೆಳಕಿನ ಪರಿಸರಗಳಲ್ಲಿ ಮೊಳಕೆಯ ಪ್ರಮಾಣವನ್ನು ಪರೀಕ್ಷಿಸಿಯೇ ಬೀಜಗಳನ್ನು ಪೂರೈಸುತ್ತಿದ್ದೇವೆ. ಇದರೊಳಗಿನ ಮಣ್ಣಿನ ಫಲವತ್ತತೆಯು ಹದಿನೆಂಟು ತಿಂಗಳ ತಾಳಿಕೆ ಹೊಂದಿರುತ್ತದೆ.,” ಎನ್ನುತ್ತಾರೆ.
           ಕುಂಡವನ್ನು ಉಡುಗೊರೆ, ಸಭೆ ಸಮಾರಂಭಗಳಲ್ಲಿ ಸ್ಮರಣಿಕೆಯಾಗಿ ನೀಡಲು ಸೂಕ್ತವಾಗಿದೆ. ಹೆಚ್ಚು ಶ್ರಮವಿಲ್ಲದೆ ಮನೆಯ ಜಗಲಿಯ ಸುತ್ತ, ಅಂಗಳ ಸುತ್ತ ಕುಂಡಗಳನ್ನಿಟ್ಟು ಹೂ ಬೆಳೆಸಬಹುದು. ಬೇಕಾದರೆ ತರಕಾರಿ ಕೂಡಾ!
ಕುಂಡದ ಅಳತೆ 12 ಘಿ 12, ಎತ್ತರ ಹದಿಮೂರು ಸೆಂಟಿಮೀಟರ್. ಬೆಲೆ ಒಂದು ನೂರ ಅರುವತ್ತು ರೂಪಾಯಿ.                        
      'ಇನ್ನೋಸೆಂಟರ್’ನಲ್ಲಿ ಶಶಿಯವರು ಚೀಫ್ ಎಕ್ಸ್‍ಕ್ಯೂಟಿವ್ ಆದರೆ, ಹರ್ಷ ಮಾರುಕಟ್ಟೆ ಪರಿಣತ. ಇವರಿಬ್ಬರ ಯೋಚನೆ, ಯೋಜನೆಯಂತೆ ದೊಡ್ಡ ಗಾತ್ರದ ಕುಂಡಗಳು ನಿಕಟಭವಿಷ್ಯದಲ್ಲಿ ವಿನ್ಯಾಸ ಪಡೆಯುತ್ತವೆ.  (9739903856)


ಕಾನಕಲ್ಲಟೆ ಸವಿದಿದ್ದೀರಾ?



            ”ಈ ವರುಷ ಅನ್ಯಾನ್ಯ ಮೇಳಗಳ ಮಳಿಗೆಗಳಲ್ಲಿ ಒಂದು ಕ್ವಿಂಟಾಲ್ ಕಾನಕಲ್ಲಟೆ ಮಾರಿಹೋಗಿದೆ.” ಎನ್ನುವ ಖುಷಿಯನ್ನು ಹಂಚಿಕೊಂಡರು ರವಿಶಂಕರ್ ಸುಣ್ಣಂಗುಳಿ. ಇವರು ಕಾಸರಗೋಡು ಜಿಲ್ಲೆಯ ಮೀಯಪದವಿನ ಕೃಷಿಕರು. ಹಲಸು ಪ್ರಿಯರು.
       ಏನಿದು ಕಾನಕಲ್ಲಟೆ? ಇದೊಂದು ಕಾಡು ತರಕಾರಿ. ಸಸ್ಯಶಾಸ್ತ್ರೀಯ ಹೆಸರು Cayratia mollissima. ಕಾನುಕಲ್ಲಟೆ, ಕಾನುಕಲ್ಲಂಟೆ, ಕಲ್ಲಾಟೆ.. ಮೊದಲಾದ ಹೆಸರುಗಳಿವೆ. ಕಾಡಿನಿಂದಲೇ ಆಯ್ದು ತಂದು ಖಾದ್ಯಗಳನ್ನು ಮಾಡುವುದು ಪಾರಂಪರಿಕ.
       ಇದು ಗುಡ್ಡದಲ್ಲಿ ಹುಲುಸಾಗಿ ಬೆಳೆಯುವ ಬಳ್ಳಿ ಜಾತಿಯ ತರಕಾರಿ. ಆರೈಕೆ ಮಾಡಿ ಬೆಳೆಸುವವರು ವಿರಳ. “ನಾನು ಕಾನಕಲ್ಲಟೆಯ ಕೃಷಿ ಮಾಡಿದೆ”ಎಂದರೆ ಖಂಡಿತವಾಗಿ ‘ತಲೆ ಕೆಟ್ಟಿದೆ ಎಂದಾರು! ಎನ್ನುತ್ತಾ ಕಣ್ಣುಮಿಟುಕಿಸಿದರು ರವಿಶಂಕರ್. ಇವರು ಪ್ರತ್ಯೇಕವಾಗಿ ನಿಗಾ ವಹಿಸಿ, ಆರೈಕೆ ಮಾಡಿ ಇತರ ತರಕಾರಿಗಳಂತೆ ಬೆಳೆಸಿದ್ದಾರೆ.
        ‘ತೊಂಡೆಕಯಿ, ಪಡುವಲ ತರಕಾರಿಯ ಕೃಷಿಯಂತೆ ಇದು ಯಾಕಾಗದು?” ರವಿಶಂಕರ್ ಯೋಚನೆ. ಗುಡ್ಡದಲ್ಲಿ ಸುಲಭವಾಗಿ ಸಿಕ್ಕಿದ ಆರೇಳು ಬಳ್ಳಿಗಳನ್ನು ತುಂದು, ಚಿಕ್ಕ ತುಂಡು ಮಾಡಿ ಪ್ಲಾಸ್ಟಿಕ್ ತೊಟ್ಟೆಯಲ್ಲಿಟ್ಟು ಸಲಹಿದರು. ಆರೈಕೆ ಮಾಡಿದರು. ಏರುಮಡಿಯಲ್ಲಿ ನಾಟಿ. ಕೋಳಿಗೊಬ್ಬರ, ಎರೆಗೊಬ್ಬರ, ಸುಡುಮಣ್ಣು ಉಣಿಸಿದರು. 
       ಬಳ್ಳಿಗಳು ಹಬ್ಬಲು ಚಪ್ಪರ ವ್ಯವಸ್ಥೆ. ಬಳ್ಳಿ ಬೆಳವಣಿಗೆಯಾಗುತ್ತಾ ಹೋದಂತೆ ಹೂ ಬಿಡುತ್ತಿರುತ್ತದೆ. ಈ ವರುಷ ಮೇ ತಿಂಗಳಲ್ಲಿ ಗೊಂಚಲು ಕಾಯಿಗಳು. ಜೂನ್ ಮೊದಲ ವಾರದಿಂದಲೇ ಕೊಯಿಲು. “ಕಾಡಿನಲ್ಲಿ ಮರಕ್ಕೆ ಹಬ್ಬುವ ಕಾರಣ ಕಾನಕಲ್ಲಟೆಗೆ ಬೆಳವಣಿಗೆ ತೀರಾ ಕಡಿಮೆ. ಚಪ್ಪರದಲ್ಲಿ ಕ್ಷಿಪ್ರವಾಗಿ ಹರಡಿ ಹೂ ಬಿಡುತ್ತವೆ.” ಎನ್ನುತ್ತಾರೆ.
       ರವಿಶಂಕರ್ ಇತರ ಕೃಷಿಗಳ ಮಧ್ಯೆ ಸಮಯ ಹೊಂದಿಸಿಕೊಂಡು ನಿಗಾ ವಹಿಸುತ್ತಾರಷ್ಟೇ. ಆರು ಬಳ್ಳಿಗಳು ಏನಿಲ್ಲವೆಂದರೂ ಇನ್ನೂರೈವತ್ತು ಮುನ್ನೂರು ಚದರ ಅಡಿಯಲ್ಲಿ ಹರಡಿವೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಬೇಡಿಕೆ ಹೆಚ್ಚು. ಕೊಂಕಣಸ್ಥರು, ಕರ್ಹಾಡರಿಗೆ ಪ್ರಿಯ. ಕಿಲೋಗೆ ಎಂಭತ್ತು ರೂಪಾಯಿಯಂತೆ ಮಾರಿದ್ದಾರೆ. ಕೆಲವೊಂದು ಅಂಗಡಿಗಳಿಗೆ ಮಾರಾಟಕ್ಕಾಗಿ ಪ್ರಾಯೋಗಿಕವಾಗಿ ನೀಡಿದ್ದಾರೆ. 
       “ಇದು ನನಗೆ ಹೊಸ ಕೃಷಿ. ಪೂರ್ತಿ ಮರ್ಮ ಗೊತ್ತಾಗಿಲ್ಲ. ಮಾರುಕಟ್ಟೆಯೂ ಅಷ್ಟೇ. ಮಂಗಳೂರಿನಂತಹ ನಗರದಲ್ಲಿ ಯತ್ನಿಸಬೇಕು,” ಎನ್ನುತ್ತಾರೆ. ಪಾರಂಪರಿಕ ಆಹಾರಗಳ ಅರಿವಿದ್ದರಿಗೆ ಕಾನಕಲ್ಲಟೆ ಗೊತ್ತು. ಹೊಸ ತಲೆಮಾರಿಗೆ ಅಷ್ಟೊಂದು ಪರಿಚಯವಿಲ್ಲ. ಅಂಗಡಿಯವರಿಗೂ ಕಾನಕಲ್ಲಟೆಯ ಪರಿಚಯ ಅಷ್ಟಕ್ಕಷ್ಟೇ. ಹಾಗಾಗಿ ಸುಲಭದಲ್ಲಿ ಮಾರುವುದು ಶ್ರಮದಾಯಕ.
       ಕಾನಕಲ್ಲಟೆಯ ಮೆಣಸುಕಾಯಿ, ಮಜ್ಜಿಗೆಹುಳಿ, ಸಾಂಬಾರು, ಹಲಸಿನ ಬೀಜ ಸೇರಿಸಿದ ಪಲ್ಯ ಮತ್ತು ಹಣ್ಣಿನ ಸಾಸಿವೆ ರುಚಿ. ಕಾನಕಲ್ಲಟೆಯನ್ನು ಒಂದು ಹಬೆಯಲ್ಲಿ ಬೇಯಿಸಿ ಪೂರ್ಣವಾಗಿ ಬೀಜವನ್ನು ಬೇರ್ಪಡಿಸುವುದು ಮುಖ್ಯ. ಬಳಸುವವರು ಏತಡ್ಕದ ಡಾ.ಮೋಹನ್ ಕುಮಾರ್ ವೈ.ಎಸ್. ಅವರ ಎಚ್ಚರವನ್ನು ಗಮನಿಸಬೇಕು - “ಕಾನಕಲ್ಲಟೆಯ ಬೀಜವು ತುಂಬಾ ಅಪಾಯಕಾರಿ. ಅಲರ್ಜಿ ಉಳ್ಳವರಲ್ಲಿ ಗಂಭೀರ ಪರಿಣಾಮವಾದೀತು. ಗಂಟಲು ಕೆರೆತ ಆರಂಭವಾಗಿ ಉಸಿರು ಕಟ್ಟುವ ಹಂತಕ್ಕೂ ಹೋಗಬಹುದು. ಇದು ನನ್ನ ಸ್ವಂತ ಅನುಭವ. ಆದುದರಿಂದ ಬೇಯಿಸುವಾಗ ಒಂದೇ ಒಂದು ಬೀಜ ಉಳಿಯಕೂಡದು.”     
       ಕೆಲವರು ಅಲ್ಲಿಲ್ಲಿ ಮನೆ ಮಟ್ಟಕ್ಕೆ ಬೆಳೆಯುತ್ತಿದ್ದಾರೆ. ಮಂಗಳೂರಿನ ಸಾವಯವ ಸಂತೆಗೆ ಕೆಲವೊಮ್ಮೆ ಬರುವುದಿದೆ. ರುಚಿ ತಿಳಿದವರು ಖಾಯಂ ಗ್ರಾಹಕರಾಗಿದ್ದಾರೆ. (ರವಿಶಂಕರ್ : 09446676029)