Saturday, July 13, 2019

ಜವಾಬ್ದಾರಿಗಳಿಗೇಕೆ ಜಾಣ ಕುರುಡು?


ಮೂರುವರೆ ದಶಕದ ಹಿಂದಿನ ಕರಾವಳಿಯ ಒಂದು ಚಿತ್ರದತ್ತ ಮಗ್ಗುಲು ಬದಲಿಸೋಣ. 1983 ಕಡು ಸುಡು ಬೇಸಿಗೆ. ತಡವಾಗಿ ಆರಂಭವಾದ ಮಳೆಗಾಲ. ಪಶ್ಚಿಮ ಕರಾವಳಿಗೆ ದೊಡ್ಡ ಹೊಡೆತ. ಬಾವಿಗಳೆಲ್ಲಾ ಒಣಗಿದ್ದುವು. ಕುಡಿಯುವ ನೀರಿಗೆ ಹಾಹಾಕಾರ. ತೋಟಗಳೆಲ್ಲಾ ಉಸಿರೆಳೆದುಕೊಳ್ಳುತ್ತಿದ್ದುವು. ಇಷ್ಟೊಂದು ಕೊಳವೆಬಾವಿಗಳ ಭರಾಟೆ ಎದ್ದಿರಲಿಲ್ಲ. ಮಣ್ಣುಮಾಂದಿ ಯಂತ್ರದ (ಜೆಸಿಬಿ) ಹಾರಾಟವಿದ್ದಿರಲಿಲ್ಲ. ಅಂತರ್ಜಲದ ಮಟ್ಟ ಸ್ವಲ್ಪ ಕುಸಿದಿತ್ತೇ ವಿನಾ ಪಾತಾಳಕ್ಕೆ ಸೇರಿರಲಿಲ್ಲ.  ಜನರಲ್ಲಿ ನೆಲ, ನೀರಿನ ಕುರಿತು ಕನಿಷ್ಠ ಅರಿವಿದ್ದು ಬರವನ್ನು ನಿಭಾಯಿಸಿದ್ದರು. ಜವಾಬ್ದಾರಿಗಳ ಎಚ್ಚರವಿತ್ತು

ಎರಡು ವರುಷದ ಹಿಂದಿನ ಚಿತ್ರದ ಹೊರಳು ನೋಟವನ್ನು ನೋಡೋಣ. ಆಗಿನ ಬರಕ್ಕಿಂತ ಭೀಕರವಾಗಿ  ಕರಾವಳಿ ತತ್ತರಿಸಿತ್ತು. ಕುಡಿನೀರಿಗೂ ಆತಂಕವಿತ್ತು. ಕರಾವಳಿಯನ್ನು ಮಾತ್ರ ಯಾಕೆ ಉಲ್ಲೇಖಿಸುತ್ತೇನೆಂದರೆ, ಇಲ್ಲಿನೀರಿನ ಬರ ಕಲ್ಪನೆಯೇ ಇಲ್ಲ! ನೀರಿಂಗಿಸುವ, ಜಲಮರುಪೂರಣ, ಮಳೆಕೊಯ್ಲು.. ವಿಚಾರಗಳನ್ನು ಮಾತನಾಡಿದಾಗ ಗೇಲಿ ಮಾಡುತ್ತಾ ಹಣೆಯ ನೆರಿಗೆಗಳನ್ನು ತೋರಿದವರೆಷ್ಟೋ! ‘ಕರಾವಳಿಯಲ್ಲೂ ನೀರಿಂಗಿಸುವ ವ್ಯವಸ್ಥೆ ಬೇಕಾಎಂದು ಕಟುಶಬ್ದಗಳಲ್ಲಿ ದನಿಯೇರಿಸಿದವರ ನೆನಪಿದೆ

ವರುಷದ ಹಿಂದೆ ಕೊಳವೆ ಬಾವಿಗಳ ವಿಫಲ ಕತೆಗಳಿಗೆ ಕಿವಿಯಾಗಿದ್ದೇವೆ. ನೀರಿನ ಅವಶ್ಯ ಹೆಚ್ಚಾಗುತ್ತಿದೆ. ಬದುಕು ಒತ್ತಡವಾಗಿದೆ. ಬಹುಶಃ ರಾಜಸ್ಥಾನದಲ್ಲೂ ಇಷ್ಟೊಂದು ಟೆನ್ಶನ್ ಇರಲಾರದೇನೋ. ಯಾಕೆ ಹೇಳಿ? ನೀರಿನ ಬವಣೆಯನ್ನು ಅನುಭವಿಸಿದ ಕಾರಣ ಅಲ್ಲಿ ನೀರನ್ನು ತುಪ್ಪದಂತೆ ಬಳಸುತ್ತಾರೆ! ನಮಗೀಗ ತೀರ್ಥದಂತೆ ಬಳಸುವ ದಿನಗಳು ಬಂದಿವೆ. ಮೊದಲು ಹಿರಿಯರು ಮಾಡಿಟ್ಟ ಪರಿಸರ ವ್ಯವಸ್ಥೆಗಳು ಚೆನ್ನಾಗಿದ್ದ ಸಮಯದಲ್ಲಿ ಬರ ಎನ್ನುವ ಶಬ್ದವೇ ಕೇಳಿದ್ದಿಲ್ಲ. ಸರಿ, ಇಷ್ಟೆಲ್ಲಾ ಕಷ್ಟ ಯಾಕೆ ಬಂತು? ಭೂ ಒಡಲಿಂದ ನೀರನ್ನು ಮೊಗೆದು ಸ್ವೇಚ್ಛೆಯಿಂದ ಬಳಸಿದೆವು.  ವ್ಯವಸ್ಥಿತವಾಗಿ ಕಾಡು ನಾಶ ಮಾಡಿದೆವು, ಮಾಡಿಸಿದೆವು, ಕಿಸೆ ತುಂಬಿಸಿಕೊಂಡೆವು. ಎಲ್ಲೆಲ್ಲಾ ಪ್ರಕೃತಿಯೇ ನೀರನ್ನಿಳಿಸಿಕೊಳ್ಳುತ್ತದೋ ಅಲ್ಲೆಲ್ಲ ಅಗೆ ಯಂತ್ರಗಳು ನುಗ್ಗಿ ನೀರಿನ ಮನೆಯನ್ನು ಧ್ವಂಸ ಮಾಡಿದಾಗ ಸೋಂಟಕ್ಕೆ ಕೈಯಿಟ್ಟು ನಕ್ಕೆವು, ಇತರರನ್ನು ನಗಿಸಿದೆವು

ಇಷ್ಟೆಲ್ಲಾ ಋಣಾತ್ಮಕವಾಗಿ ಮಾತನಾಡುತ್ತಿದ್ದಾಗ, ಬರದ ನಡುವೆಯೂ ಬರವನ್ನು ಆಹ್ವಾನಿಸದ ಮಂದಿ ಎಷ್ಟಿಲ್ಲ? ಭೂಮಿಗೆ ನೀರನ್ನು ಕುಡಿಸಿ ಬದುಕಿನಲ್ಲಿ ನಗುವವರತ್ತ ಚಿತ್ತ ಹರಿಸಬೇಕಾಗಿದೆ. ಏನಿಲ್ಲವೆಂದರೂ ಒಂದೊಂದು ತಾಲೂಕಿನಲ್ಲಿ ನಾಲ್ಕೈದು ಮಂದಿಯಾದರೂ ಜಲಮರುಪೂರಣ ಮಾಡಿಕೊಂಡು ನೆಮ್ಮದಿಯಾಗಿದ್ದವರು ಇದ್ದಾರೆ. ಅವರೆಂದೂ ಸದ್ದು ಮಾಡುವುದಿಲ್ಲ. ಇಂತಹ ಯಶೋಗಾಥೆಗಳಿಗೆ ಬೆಳಕು ಹಾಕುವ, ಅವರೊಂದಿಗೆ ಮಾತುಕತೆ ಮಾಡುವ, ಮಾದರಿಗಳ ಪರಿಣಾಮಗಳತ್ತ ನೋಡುವ ಮನಃಸ್ಥಿತಿ ನಿರ್ಮಾಣವಾಗಬೇಕು

ಪಂಚಾಯತ್ಗಳು, ಯುವಕ ಸಂಘಗಳು, ಹಳೆವಿದ್ಯಾರ್ಥಿ ಸಂಘ, ಭಜನಾ ಸಂಘ, ಕಲಾ ಸಂಘಗಳು ಭೂಒಡಲಿಗೆ ನೀರಿಂಗಿಸುವ ಪ್ರಕ್ರಿಯೆಯನ್ನು ಮುಖ್ಯ ಅಜೆಂಡಾವಾಗಿ ಇಟ್ಟುಕೊಳ್ಳಬೇಕು. ‘ನನ್ನ ಭೂಮಿಗೆ ನೀರು ಇಂಗಿಸಿದರೆ ನನಗೆ ಪ್ರಯೋಜನವಾದೀತೇ?’ ಇಂತಹ ಪ್ರಶ್ನೆಗಳನ್ನು ಸಾಕಷ್ಟು ಬಾರಿ ಕೇಳಿದ್ದೇನೆ. ಇಲ್ಲಿನಾನುಎನ್ನುವುದರ ಬದಲುನಾವುಎಂದಾದರೆ ನೀರಿನ ಬರವನ್ನು ಓಡಿಸಬಹುದು. ಸಾಮೂಹಿಕ ಜನಜಾಗೃತಿಯಾಗಬೇಕು

ಗುಡ್ಡದ ನೀರು ಹರಿದುಹೋಗದೆ ಅಲ್ಲಲ್ಲೇ ಇಂಗುವಂತಾದರೆ ಅದರ ಸುತ್ತುಮುತ್ತಲಿನ ಕೆಳ ಪ್ರದೇಶಗಳಲ್ಲಿ ಸಹಜವಾಗಿ ಅಂತರ್ಜಲ, ನೀರಿನ ಒರತೆ ವೃದ್ಧಿಯಾಗುತ್ತದೆ. ಗುಡ್ಡದಲ್ಲಿ ಬಿದ್ದ ನೀರನ್ನು ಹರಿದುಹೋಗದಂತೆ ಮಾಡುವುದು ಮೊದಲಾದ್ಯತೆಯ ಕೆಲಸವಾಗಬೇಕು. ಮೊದಲು ಪ್ರಕೃತಿಯೇ ಕೆಲಸ ಮಾಡುತ್ತಿತ್ತು. ಗುಡ್ಡದಲ್ಲಿ ನೀರು ಇಂಗದೆ ಆಚೀಚಿಗೆನ ತೋಡು, ನದಿಗಳು ಹೇಗೆ ಹರಿದಾವು? ನದಿಯಲ್ಲಿ ಬೇಸಿಗೆಯಲ್ಲೂ ನೀರಿದೆ ಎಂದಾದರೆ ಅಂತರ್ಜಲ, ಒರತೆಯಿದೆ ಎಂದರ್ಥ. ಗುಡ್ಡದ ನೆತ್ತಿಯಲ್ಲಿ ನೀರಿಂಗಿದರೆ ಅದುವೇ ಕೆಳಗಿನವರಿಗೆ ನೀರಿನ ಸೆಲೆ. ಸೆಲೆಯನ್ನು ಕೊಳವೆ ಬಾವಿ ಕೊರೆದು ಮುಚ್ಚಿದ್ದೇವೆ. ಮದಕ, ಕಟ್ಟ ಮೊದಲಾದ ಪರಂಪರಿಕ ಜಲ ಸಂರಕ್ಷಣ ವಿಧಾನಗಳಿಗೆ ಮರುಜನ್ಮ ನೀಡಲೇಬೇಕು

ಮಾಡುವವರಾರು? ನೀರಿಂಗಿಸಿ ಯಶಕಂಡ ಮಾದರಿಗಳು ಎಲ್ಲೆಲ್ಲಿ ಇವೆಯೋ ಅಲ್ಲಿಗೆ ಭೇಟಿ ನೀಡೋಣ. ನಮ್ಮ ನೆಲದಲ್ಲೂ ಅನುಷ್ಠಾನಿಸೋಣ. ಮುಂದೆ ಬರುವ ಮಳೆಯ ನೀರನ್ನು ಹರಿಯಕೊಡದೆ ಭೂಮಿಯಲ್ಲಿ ಇಂಗಿಸುವ ಪ್ರತಿಜ್ಞೆ ಮಾಡೋಣ. ನೀರಿನ ಯೋಧರನ್ನು ಸಿದ್ಧಗೊಳಿಸುವ ಕೆಲಸ ಮಾಡೋಣ. ನೀರಿನ ಬರವನ್ನು ಮುಂದಿನ ವರುಷ ಬಾರದಂತೆ ತಡೆಯೋಣ. ಇದಕ್ಕೆಲ್ಲಾ ವಿಧಾನಸೌಧದತ್ತ ದೀನನೋಟ ಬೀರಬೇಕಾದ್ದಿಲ್ಲ! ಹಕ್ಕುಗಳ ಬಗ್ಗೆ ಬೊಬ್ಬಿಡುತ್ತೇವೆ. ‘ಜವಾಬ್ದಾರಿಗಳಿಗೆ ಯಾಕೆ ಜಾಣ ಕುರುಡು

ಊರು ಸೂರು / 6-1-2019

ಹಸಿರು ಮನಸಿನ ನೆರವಿಗ


ಪುತ್ತೂರಿನಲ್ಲೊಂದುಸಮೃದ್ಧಿ ಗಿಡಗೆಳೆತನ ಸಂಘವಿದೆ! ಸಸ್ಯಾಸಕ್ತ ಹಸಿರು ಮನಸಿನ ಸದಸ್ಯರು. ಬೀಜ ಸಸ್ಯಗಳ ವಿನಿಮಯ. ಮಾಹಿತಿಗಳ ಹಸಿವಿನ ತಣಿಕೆ. ಹೊಸ ತಳಿಗಳ ಹುಡುಕಾಟ. ಅಪ್ಡೇಟ್ ಆಗುವಂತಹ ಕೃಷಿ ಸುದ್ದಿಗಳು. ಹೀಗೆ ಕೃಷಿ ಬದುಕಿಗೆ ಪೂರಕವಾದ ಸಂಗತಿಗಳು

ಸಮೃದ್ಧಿಗೆ ಇಪ್ಪತ್ತೈದು ವರುಷ! 2018 ನವೆಂಬರ್ 25ರಂದು ಶಾಂತಿಗೋಡು ಖಂಡಿಗದ ಗೋಪಾಲಕೃಷ್ಣ ಭಟ್ಟರ ಮನೆಯಂಗಳದಲ್ಲಿ ಆಚರಣೆ. ಕಾಲು ಶತಮಾನ ಸಮೃದ್ಧಿಯ ನೆರಳನ್ನು ನೋಡುತ್ತಿದ್ದ ನನಗೆ ಅಂದು ಖುಷಿ ಮತ್ತು ವಿಷಾದದ ಹೊತ್ತು. ಕಣ್ಣೆದುರೇ ಹುಟ್ಟಿದ ಕೂಸು ಜವ್ವನಿಗನಾಗಿ ತಲೆಎತ್ತಿ ನಿಂತ ಖುಷಿ ಒಂದೆಡೆ. ವೈಯಕ್ತಿಕವಾದ ಆಯುಸ್ಸಿನ ಕ್ಷೀಣತೆಯ ವಿಷಾದ ಇನ್ನೊಂದೆಡೆ!

ಸಮೃದ್ಧಿ ಇಲ್ಲದೆ ಇರುತ್ತಿದ್ದರೆ ಕರಾವಳಿಯು ಎಷ್ಟೋ ತಳಿಗಳನ್ನು ಮಿಸ್ ಮಾಡಿಕೊಳ್ಳುತ್ತಿತ್ತು.” ಇದು ಸಮೃದ್ಧಿಯ ಸ್ಥಾಪಕಾಧ್ಯಕ್ಷ ಸೇಡಿಯಾಪು ಜನಾರ್ದನ ಭಟ್ಟರ ಮೆಲುಕು. “ಹಸಿರುಪ್ರಿಯ ಸುಮನಸಿಗರಲ್ಲಿ ತಳಿಗಳ ಆಸಕ್ತಿಯನ್ನು ಮೂಡಿಸಿದ್ದು ಸಮೃದ್ಧಿ,” .ಪಿ.ಸದಾಶಿವರು ಖುಷಿಯನ್ನು ಹಂಚಿಕೊಂಡರೆ, ಪೆಲತ್ತಡ್ಕ ಶಿವಸುಬ್ರಹ್ಮಣ್ಯಕೃಷಿಯನ್ನು ನೋಡುವ ನನ್ನ ನೋಟವನ್ನು ಸಮೃದ್ಧಿ ಬದಲಾಯಿಸಿತು.” ಎಂದರು. ಇವೆಲ್ಲಾ ಮನದ ಮಾತು. ಗಂಟಲ ಮೇಲಿನವುಗಳಲ್ಲ. ಸಂಸ್ಥೆಯೊಂದನ್ನು ಹುಟ್ಟು ಹಾಕಿ, ತಾವು ಅದರೊಂದಿಗೆ ಅದರ ಭಾಗವಾದಾಗ ಮಾತ್ರ ಇಂತಹ ಮಾತುಗಳನ್ನು ಕೇಳಬಹುದಷ್ಟೇ

ತೊಂಭತ್ತರ ಕಾಲಘಟ್ಟ. ಅಡಿಕೆಯ ಸಮೃದ್ಧತೆ. ಬೆಲೆಯೂ ಏರುಗತಿ. ತೋಟಗಳ ವಿಸ್ತಾರ. ಬದುಕಿನೊಂದಿಗೆ ಅಂಟಿಕೊಂಡಿದ್ದ ಹಣ್ಣು, ಗಿಡಗಳ ಸಹಜಾಸಕ್ತಿಗೆ ಮಸುಕು. ಮಧ್ಯೆ ತರಕಾರಿ, ಹಣ್ಣು, ಹೂ, ಸಸ್ಯಗಳ ಆಸಕ್ತಿಯ ಕೃಷಿಕರು ಅಲ್ಲಿಲ್ಲಿ ಮಾತನಾಡುತ್ತಿದ್ದರಷ್ಟೇ. ಅವರೊಳಗೆ ಸಂವಹನದ ಕೊಂಡಿ ಬೆಸೆದಿರಲಿಲ್ಲ. ಇವರೆಲ್ಲರನ್ನೂ ಅಡಿಕೆ ಪತ್ರಿಕೆಯು ಒಂದೇ ಸೂರಿನಡಿ ತಂದಿತ್ತು. ಮೂಡುಬಿದಿರೆಯ ಹಣ್ಣು ಕೃಷಿಕ ಡಾ.ಎಲ್.ಸಿ.ಸೋನ್ಸ್ ಸಮೃದ್ಧಿಯನ್ನು ಉದ್ಘಾಟಿಸಿದ್ದರು. ಸಮೃದ್ಧಿಯು ಶ್ರೀ ಪಡ್ರೆಯವರ ಮೆದುಳ ಮರಿ.  

ಅಪೂರ್ವ ತಳಿಗಳ ವಿನಿಮಯವಾಗಿದೆ, ಜ್ಞಾನಗಳ ಹಂಚಿಕೆಯಾಗಿವೆ. ಒಂದು ಕಾಲಘಟ್ಟವನ್ನು ನೆನಪಿಸಿಕೊಳ್ಳಬೇಕು. ಬನಾರಸ್ ನೆಲ್ಲಿಕಾಯಿ ಆಗಷ್ಟೇ ಬಾಯ್ಮಾತಾಗಿತ್ತು. ಅದರ ಗಾತ್ರಕ್ಕೆ ಹಲವರು ಆಸಕ್ತರಾಗಿದ್ದರು. ಮಾತಿಗೆ ಸಿಕ್ಕಾಗಲೆಲ್ಲಾ ಅಡಿಕೆಯೊಂದಿಗೆ ಬನಾರಸ್ ನೆಲ್ಲಿಯದೇ ಗುಂಗು. ಆಗ ಸಮೃದ್ಧಿಯ ಕಾರ್ಯದರ್ಶಿ ಕೈಂತಜೆ ಶ್ರೀಧರ ಭಟ್ಟರು. ಅವರು ತಮಗಾಗಿ ಉತ್ತರಪ್ರದೇಶದ ಫೈಜಾಬಾದಿನಿಂದ ಎರಡು ಬನಾರಸ್ ನೆಲ್ಲಿ ಗಿಡಗಳನ್ನು ತಂದಿದ್ದರು. ಸಮೃದ್ಧಿ ಸದಸ್ಯರ ಒಲವಿಗೆ ಮಾರುಹೋಗಿ ಪುನಃ ಫೈಜಾಬಾದ್ ರೈಲನ್ನು ಏರಿದುದು ಈಗ ಇತಿಹಾಸ. ಇಂತಹ ಹಲವು ಸಾಹಸದ ಕತೆಗಳು ಸಮೃದ್ಧಿ ಬತ್ತಳಿಕೆಯಲ್ಲಿವೆ

                 ಪ್ಲಾಂಟ್ ಫ್ರೆಂಡ್ಶಿಪ್ಗೆ ಗೌರವ ತಂದ ಗುತ್ತಿಗಾರು ಸನಿಹದ ಕಾಂತಿಲ ವೆಂಕಟ್ರಮಣ ಜೋಷಿ (ದಿ.) - ಸಮೃದ್ಧಿಯ ಸ್ಥಾಪನಾ ಅಡಿಗಟ್ಟಿನ ಸ್ಥಂಭ. ಸಂಸ್ಥೆಯ ಹುಟ್ಟಿನಿಂದಲೇ ಜತೆಗಿದ್ದು ಸಸ್ಯಾಸಕ್ತಿಯನ್ನು ಹುಟ್ಟಿಸಿದವರು. ತಲೆತುಂಬಾ ಬೀಜ, ಸಸ್ಯಗಳ ಮಾಹಿತಿ ಜ್ಞಾನಗಳು. ಅದನ್ನು ಹಂಚುವುದರಲ್ಲಿ ಆನಂದ. ಅವರೊಮ್ಮೆ ಹೇಳಿದ್ದರು, “ಇಂಥ ಹವ್ಯಾಸ ಇಟ್ಟುಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಿದ್ದೆ ಮಾಡಲು ಮಾತ್ರೆ ತೆಗೆದುಕೊಳ್ಳುವ ಪ್ರಮೇಯವಿಲ್ಲ.”

 ಒಂದು ಮಾವಿನ ಮರದಲ್ಲಿ ಹತ್ತಾರು ತಳಿಗಳು, ಒಂದು ಹಲಸಿನ ಮರದಲ್ಲಿ ಮೂರ್ನಾಲ್ಕು ತಳಿಗಳ ಹಣ್ಣುಗಳು-ಸಮೃದ್ಧಿಯ ಆರಂಭದ ಕಾಲಘಟ್ಟದಲ್ಲಿ ಸುದ್ದಿಯು ಸದ್ದು ಮಾಡಿತ್ತು. ಇದಕ್ಕಾಗಿಯೇ ಕಸಿ ಕಟ್ಟುವ ತರಬೇತಿಯ ಆಯೋಜನೆ ಮಾಡಲಾಗಿತ್ತು. ಪುತ್ತೂರಿನ ಗೇರು ಸಂಶೋಧನಾ ಕೇಂದ್ರದ ವಿಜ್ಞಾನಿಗಳಿಂದ ಮಾಹಿತಿ. ತಂತಮ್ಮ ತೋಟದ ಮರವೇರಿಟಾಪ್ವರ್ಕಿಂಗ್ಕಸಿ ವಿಧಾನದ ಪ್ರಯೋಗವನ್ನು ಮಾಡಿದವರೆಷ್ಟೋ ಮಂದಿ! ಮಾಪಲತೋಟ ಸುಬ್ರಾಯ ಭಟ್, ಶ್ಯಾಮಸುಂದರ ಗೇರುಕಟ್ಟೆ, ಕುಂಬಾಡಿ ವೆಂಕಟ್ರಮಣ ಭಟ್ (ದಿ.).. ಅನುಭವಿಗಳ ಜ್ಞಾನವು ಒಂದೇ ಗಿಡದಲ್ಲಿ ಹಲವು ತಳಿಗಳ ಹಣ್ಣುಗಳನ್ನು ನೀಡುತ್ತಿವೆ!

                ಮಂತುಹುಳಿ, ಅಮ್ಚಿಕಾಯಿ, ಹನುಮಫಲ, ಭೀಮಫಲ, ಮುಳ್ಳುಸೀತಾಫಲ, ಹಾವು ಬದನೆ, ಬಂಟ ಕೇಪುಳು, ರುದ್ರಾಕ್ಷಿ, ಮೊಟ್ಟೆಮುಳ್ಳು, ಕರಿಯಾಲ ಹರಿವೆ, ಸಿಹಿದಾರೆಹುಳಿ.. ಹೀಗೆ ಸಮೃದ್ಧಿ ವ್ಯಾಪ್ತಿಯ ಪಟ್ಟಿ ಚಿಕ್ಕದಲ್ಲ. ಬಂಗ್ಲಾ ಬಸಳೆ, ಸೆಲೋಶಿಯಾ ಅಜೆಂಟಿಯಾ ಎಲೆ ತರಕಾರಿ ಗಿಡ, ಸನ್ಸೆಟ್ ಸೋಲೋ ಪಪ್ಪಾಯಿಗಳು ಕಡಲನ್ನು ಹಾರಿ ಬಂದಿವೆ. ಹೀಗೆ ಬಂದವುಗಳಲ್ಲಿ ಅರ್ಧದಷ್ಟು ಮಾತ್ರ ಉಳಿದಿರಬಹುದಷ್ಟೇ. ಸಮೃದ್ಧಿಗೆ ಬಂದು ಹೋದ ಹಲವು ತಳಿಗಳು ಅಜ್ಞಾತವಾಗಿವೆ.
ಹಸಿರು ಪ್ರಿಯರ ಹೃದಯಕ್ಕಂಟಿದ ಸಮೃದ್ಧಿಯು ಹಸಿರು ಮನಸಿನ ನೆರವಿಗ. ಬೀಜ, ಸಸ್ಯಗಳ ಆಸಕ್ತಿಯು ಬದುಕಿನ ಸುಭಗತೆಯ ಉಪಾಧಿ

ಊರು ಸೂರು /2-12-2018