Monday, August 17, 2020

ಎರಡೂ ಕೈಯಲ್ಲಿ ಅಡಿಕೆ ಸುಲಿತ!

  

ರಾಜೇಶರು ತಮ್ಮ ಅಡಿಕೆ ಸುಲಿ ಸಾಧನದ ವೀಡಿಯೋವನ್ನು ವಾಟ್ಸಾಪಿನಲ್ಲಿ ಹರಿಯ ಬಿಟ್ಟಿದ್ದರು.  ಏಕಕಾಲಕ್ಕೆ ಎರಡು ಕೈಯಲ್ಲಿ ಸುಲಿಯಬಹುದಾದ ಸಾಧನವು ಅನೇಕರ ಗಮನ ಸೆಳೆದಿತ್ತು. ಗಾತ್ರದಲ್ಲಿ ಚಿಕ್ಕದಾದ ಸಾಧನಗಳು ಹಿಂದೆ ಬಂದಿದ್ದರೂ ಇಂತಹುದು ಹೊಸತು.

ರೋಗದ ಅಡಿಕೆಯನ್ನು ಸುಲಿಯಲು ಯಾರೂ ಒಪ್ಪುವುದಿಲ್ಲ. ಸಕಾಲಕ್ಕೆ ಸುಲಿತವಾಗದೆ ತೊಂದರೆಯಾಗುತ್ತಿತ್ತು. ಅದಕ್ಕೊಂದು ಪರ್ಯಾಯ ಹಾದಿ ಬೇಕಿತ್ತು. ‘ನನಗಾಗಿ ಮಾಡಿಕೊಂಡೆ.’ ಎನ್ನುತ್ತಾರೆ. ಇವರು ಕಡಬ ಬಳಿಯ ಬರೆಮೇಲಿನವರು. 

ಒಂದು ಕಬ್ಬಿಣದ ಚೌಕಟ್ಟಿನ ಮೇಲೆ ಎಡ-ಬಲಗಳಲ್ಲಿ V’  ಆಕಾರದ ಕತ್ತಿಯ ಅಲಗು. ಅದರ ತುದಿಗೆ ಅಡಿಕೆಯನ್ನಿಟ್ಟು ಪೆಡಲ್ ತುಳಿದರೆ ಕತ್ತಿ ತೆರೆದುಕೊಂಡು ಅಡಿಕೆ ಇಬ್ಬಾಗವಾಗುತ್ತದೆ. ಪೆಡಲ್ ಬಿಟ್ಟರೆ ಕತ್ತಿಗಳು ಪರಸ್ಪರ ಒಂದಾಗುತ್ತವೆ. ಸುಲಿದುಕೊಂಡ ಅಡಿಕೆ ಕೆಳಗಿರುವ ಬುಟ್ಟಿ ಸೇರುತ್ತದೆ. V’  ಕತ್ತಿಯ  ವಿನ್ಯಾಸವು ಈಗಾಗಲೇ ಪ್ರಚಲಿತವಿರುವ ತೆಂಗು ಸುಲಿತದ ಸಾಧನವನ್ನು ಹೋಲುತ್ತದೆ. ಅಲಗು ಮುಚ್ಚುವ, ತೆರೆಯುವ ಕೆಲಸವು ಸ್ಪ್ರಿಂಗ್ ಆಕ್ಷನ್ನಲ್ಲಿ ಆಗುತ್ತದೆ.

ಆರಾಮವಾಗಿ ಕುಳಿತು ಸುಲಿತವನ್ನು ಮಾಡಬಹುದು. ಎರಡು ಕೈ ಬಳಸಿಕೊಂಡರೂ  ತ್ರಾಸವಾಗುವುದಿಲ್ಲ. ಸುಸ್ತಾಗುವುದಿಲ್ಲ. ಸಾಂಪ್ರದಾಯಿಕ ಅಡಿಕೆ ಕತ್ತಿಯಲ್ಲಿ ಅಭ್ಯಾಸಿಗಳು ಯತ್ನಿಸಿದಾಗ ಕೈಗೆ ಏಟಾಗುವುದು ಸಹಜ. ಇದರಲ್ಲಿ ಹಾಗಿಲ್ಲ. ಎಲ್ಲಾ ವಯೋಮಾನದವರು ಸುಲಿತ ಮಾಡುವಷ್ಟು ಸುಲಭ. ಇವರು ರೋಗದ ಅಡಿಕೆ ಮತ್ತು ಸ್ವಲ್ಪ ಕೊಯ್ಲಿನ ಅಡಿಕೆಯನ್ನು ಸುಲಿಯುವುದು ಇದರ ಮೂಲಕವೇ.

“ಗಂಟೆಗೆ ಸುಮಾರು ಎಂಟರಿಂದ ಹತ್ತು ಕಿಲೋ ಸುಲಿಯಬಹುದು. ಸಿಪ್ಪೆ ಗೋಟು ಇದ್ದರೆ ನಿಧಾನವಾಗಬಹುದು. ಸುಮಾರು ಮೂರೂವರೆಯಿಂದ  ನಾಲ್ಕು ಸಾವಿರ ರೂಪಾಯಿಯಲ್ಲಿ ಸಾಧನ ತಯಾರಿಸಬಹುದು,” ಎನ್ನುತ್ತಾರೆ ರಾಜೇಶ್. ಸ್ಥಳೀಯವಾಗಿ ಸಿಗುವ ಕಚ್ಚಾವಸ್ತುಗಳನ್ನೇ ಬಳಸಿದ್ದಾರೆ.            

ಏಕಚಕ್ರದ ಕೈಗಾಡಿ : ಸಾಮಾನ್ಯವಾಗಿ ಇಪ್ಪತ್ತೋ ಇಪ್ಪತ್ತೈದು ಕಿಲೋ ಭಾರವನ್ನು ಕೈಯಲ್ಲೇ ಎತ್ತಿ ಇಡಲು, ಆಚೀಚೆ ಸಾಗಿಸಲು ಒಬ್ಬನಿಗೆ ಕಷ್ಟವಾಗದು. ಅದಕ್ಕಿಂತ ಹೆಚ್ಚಿನದನ್ನು ಎತ್ತುವುದು ಶ್ರಮದ ಕೆಲಸ. ಸಕಾಲಕ್ಕೆ ಸಹಾಯಕರು ಅಲಭ್ಯರಾದಾಗ ಹೊರೆ ಕೆಲಸಗಳು ಬಾಕಿಯಾಗುತ್ತದೆ. ಇದಕ್ಕಾಗಿ ರೂಪುಗೊಂಡಿತು, ಏಕ ಚಕ್ರದ ಗಾಡಿ.

ಗಾಡಿಯು ಐವತ್ತರಿಂದ ಆರುವತ್ತು ಕಿಲೋ ತಾಳಿಕೊಳ್ಳುತ್ತದೆ. ಆಗಲೇ ತಮ್ಮಲ್ಲಿ ಬಳಸುತ್ತಿದ್ದ  ಏಕಚಕ್ರದ ಗಾಡಿಯ ವಿನ್ಯಾಸ ಬದಲಿಸಿದರು. ಗಾಡಿಯ ಹ್ಯಾಂಡಲನ್ನು ಮುಂದಕ್ಕೆ ನೂರ ಎಂಭತ್ತು ಡಿಗ್ರಿ ಕೊನದಲ್ಲಿ ಎತ್ತಿದಾಗ ಅದರ ಮುಂದಿನ ಭಾಗದ ಅಟಾಚ್ಮೆಂಟ್ ನೆಲಕ್ಕೆ ಚಾಚಿಕೊಳ್ಳುತ್ತದೆ. ಇದರ ಮೇಲೆ ಚೀಲವನ್ನು ಎತ್ತಿ ಅಥವಾ ಉರುಳಿಸಿದರಾಯಿತು. ಚಕ್ರದ ಹಿಂದೆ ಒಂದು ಫ್ರೇಮ್ ಇದೆ. ಅದನ್ನು ಕಾಲಿನಿಂದ ಒತ್ತಿ ಹಿಡಿದರೆ ಬ್ರೇಕಿನಂತೆ ಕೆಲಸ ಮಾಡುತ್ತದೆ. ಕೈಗಾಡಿಯ ಹ್ಯಾಂಡಲನ್ನು ಸ್ವಲ್ಪ ಹಿಂದೆ ಎಳೆದಾಗ ಅಟಾಚ್ಮೆಂಟಿನಲ್ಲಿದ್ದ ಚೀಲ ಗಾಡಿಯ ಮಧ್ಯ ಸೇರುತ್ತದೆ.

 ಮೊದಲು ಅಡಿಕೆ, ಗೊಬ್ಬರ, ತೆಂಗಿನಕಾಯಿ, ಕಟ್ಟಿಗೆಗಳನ್ನು ಎತ್ತಿ ಗಾಡಿಗೆ ಇಡಲು ತ್ರಾಸವಾಗುತ್ತಿತ್ತು. ಈಗ ಸುಲಭವಾಗುತ್ತಿದೆ. ಒಬ್ಬನಿಗೆ ತೋಟದಿಂದ ಅಂಗಳಕ್ಕೆ ಸಾಗಾಟ ಸುಲಲಿತವಾಗುತ್ತದೆ. ರಿಕ್ಷಾ ಚಕ್ರವನ್ನು ಬಳಸಿದ್ದರಿಂದ ತೋಟದೊಳಗಿನ ಏರು ತಗ್ಗಿನಲ್ಲೂ ಕಷ್ಟವಾಗುವುದಿಲ್ಲ. ಎನ್ನುತ್ತಾರೆ. ಇದು ಕೂಡಾ ಸ್ಥಳೀಯ ಕಚ್ಚಾ ವಸ್ತುಗಳಿಂದಲೇ ತಯಾರಿಸಿದ್ದು.

ಕೃಷಿಯಲ್ಲಿ ಶ್ರಮ ಹಗುರ ಮಾಡುವ ಉಪಕರಣ ತಯಾರಿ ರಾಜೇಶರ ದೂರದೃಷ್ಟಿ. ಅವರ ಒಣ ಅಡಿಕೆ ಬಾಚು ಸಹಾಯಿಯು ಕೃಷಿಕರ ಸ್ವೀಕೃತಿ ಪಡೆದಿದೆ. ಈಗಿರುವ ತಮ್ಮ ಚಿಕ್ಕ ವರ್ಕ್ ಶಾಪನ್ನು ಅಭಿವೃದ್ಧಿ ಪಡಿಸುವ ಯೋಚನೆಯಿದೆ. ನಂತರ ಕೃಷಿಕರ ಬೇಡಿಕೆಯನ್ನು ಪೂರೈಸಬಹುದು.

ರಾಜೇಶ್ .ಕೆ.

81054 00493 (ಸಂಜೆ ಗಂ. 5 - 7)

yuvarak82@gmail.com

Tuesday, July 28, 2020

ನಾಂದ್ರೋಡು – ಇನ್ನು ನೆನಪು ಮಾತ್ರ


ಪ್ರಗತಿಪರ ಕೃಷಿಕ, ಹೊಸ ಯಂತ್ರಗಳ ಆವಿಷ್ಕಾರ, ಅಂಗಳದಲ್ಲಿ ಭತ್ತದ ಕೃಷಿ, ಅಕ್ಕಿ ಮಾಡುವ ಯಂತ್ರ, ನೇಜಿ ನೆಡುವ ಯಂತ್ರ, ಅಕ್ಕಿ ಶುಚಿ ಗೊಳಿಸುವ ಯಂತ್ರ,... ಹೀಗೆ ಅನೇಕ ಆವಿಷ್ಕಾರ ಮಾಡಿದ ಏತಡ್ಕದ ನಾಂದ್ರೋಡು ಮಹಾಲಿಂಗೇಶ್ವರ ಭಟ್ಟರು (86) ನಿಧನರಾದರು. ಕಾಲು ಶತಮಾನದ ಹಿಂದೆ ಹೊಳೆಯನ್ನು ದಾಟಲು ತೊಟ್ಟಿಲು ನಿರ್ಮಿಸಿ ಸುಲಭ ವಿಧಾನ ಮಾಡಿದ್ದರು. ಕಟ್ಟವನ್ನು ಮರದಲ್ಲಿ ನವೀನ ರೀತಿಯಲ್ಲಿ ನಿರ್ಮಿಸಿ ಕೃಷಿಕರಿಗೆ ಮಾರ್ಗದರ್ಶನ ಮಾಡಿದ್ದರು. ಅಂಗಳದಲ್ಲಿ ಸುವಾಸನೆ ಭರಿತ ಬಾಸ್ಮತಿ ಭತ್ತ ಬೆಳೆದವರು. ಪುತ್ತೂರಿನಲ್ಲಿ ಕಳೆದ ವರುಷ ಜರುಗಿದ ಯಂತ್ರಮೇಳದಲ್ಲಿ ಭಾಗವಹಿಸಿದಾಗ ‘ರೇಡಿಯೋ ಪಾಂಚಜನ್ಯ’ಕ್ಕೆ ಅವರನ್ನು ಸಂದರ್ಶನ ಮಾಡಿದ್ದೆ. ಅವರೊಬ್ಬ ‘ಭತ್ತದ ಬ್ಯಾಂಕ್’ ಆಗಿದ್ದರು. ಅಗಲಿದ ನಾಂದ್ರೋಡು ಅವರಿಗೆ ಭಾಷ್ಪಾಂಜಲಿ.
(ಚಿತ್ರ : ವೇಣು ಕಳೆಯತ್ತೋಡಿ)

Saturday, July 11, 2020

ಎಂ.ಎಸ್.ರಘುನಾಥ ರಾವ್ ಅವರ ವೃತ್ತಿ ಬದುಕಿನ ಕಥನ 'ಅಕ್ಷರಯಾನ' ಲೋಕಾರ್ಪಣೆ

ಜೀವನ ಪಾಠಕ್ಕಿಂತ ಮಿಗಿಲಾದ ಪಾಠ ಬೇರೊಂದಿಲ್ಲ. ಓರ್ವನ ಅನುಭವ ಇನ್ನೊಬ್ಬನಿಗೆ ಕೈದೀವಿಗೆಯಾಗುತ್ತದೆ. ಶ್ರಮದ ಮೂಲಕ ಬದುಕನ್ನು ಕಟ್ಟುವುದು ಹೇಳಿದಷ್ಟು ಸುಲಭವಲ್ಲ. ರೀತಿ ಬೆಳೆದ ರಘುನಾಥ ರಾಯರು ವೃತ್ತಿ ಬದ್ಧತೆಯಿಂದ ಮುದ್ರಣ ಕ್ಷೇತ್ರಕ್ಕೆ ಗೌರವ ತಂದಿದ್ದಾರೆ. ರಾಜೇಶ್ ಪವರ್ ಪ್ರೆಸ್ ಪುತ್ತೂರಿನ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆಎಂದು ಸವಣೂರಿನ ವಿದ್ಯಾರಶ್ಮೀ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಹೇಳಿದರು

ದರ್ಭೆಯ ರಾಜೇಶ್ ಪವರ್ ಪ್ರೆಸ್ಸಿನಲ್ಲಿ ಜರುಗಿದ ಸರಳ ಸಮಾರಂಭದಲ್ಲಿ (10-7-2020) ಎಂ.ಎಸ್.ರಘುನಾಥ ರಾಯರ ವೃತ್ತಿ ಬದುಕಿನ ಅನುಭವ ಗಾಥೆ 'ಅಕ್ಷರಯಾನ' ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ, “ಹಿರಿಯರು ಬದುಕಿ ತೋರಿಸಿದ ಜೀವನದ ದರ್ಶನಗಳು ಯುವಕರಿಗೆ ಸ್ಫೂರ್ತಿಯ ದೀವಿಗೆಯಾಗುತ್ತದೆ. ಅಕ್ಷರಯಾನವು ಕಾಲದ ದಾಖಲಾತಿಯಾಗುವುದರಲ್ಲಿ ಸಂಶಯವಿಲ್ಲ.” ಎಂದರು.

ಅಕ್ಷರಯಾನದ ಸಂಪಾದಕ ಹಾಗೂ ಪತ್ರಕರ್ತ, ಲೇಖಕ ನಾ. ಕಾರಂತ ಪೆರಾಜೆಯವರು ಕೃತಿಯನ್ನು ಪರಿಚಯಿಸುತ್ತಾ, “ಮುದ್ರಣ ಕ್ಷೇತ್ರದಲ್ಲಿ ಇಂತಹ ಅನುಭವ ಕಥನ ಅಪರೂಪಎಂದರು. ಹಿರಿಯ ಸಾಹಿತಿ ಗೋಪಾಲಕೃಷ್ಣ ಶಗ್ರಿತ್ತಾಯರು ರಘುನಾಥ ರಾಯರ ಒಟ್ಟೂ ಬದುಕನ್ನು ಹಾಡಿನ ಮೂಲಕ ಪ್ರಸ್ತುತಪಡಿಸಿ ಅಭಿನಂದಿಸಿದರು. ಕಲಾವಿದ ಪ್ರಸನ್ನ ರೈ ಸವಣೂರು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ, ವಿವೇಕಾನಂದ ಶಿಶುಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ ಕುಂಬಳೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಆರಂಭದಲ್ಲಿ ರಘುನಾಥ ರಾಯರು ಸ್ವಾಗತಿಸಿದರು. ನಾರಾಯಣ ನಿರ್ವಹಿಸಿ, ವಂದಿಸಿದರು. ಶ್ಯಾಮಲಾ ರಘುನಾಥ ರಾವ್, ರಾಜೇಶ್, ಸ್ವಪ್ನಾ, ಕು.ಅನಘಾ, ಕು.ಅನನ್ಯಾ.. ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಪ್ರೆಸ್ಸಿನ ಲೆಕ್ಕಪತ್ರಗಳ ಉಸ್ತುವಾರಿಯಾಗಿರುವ ಲೋನಾ ಪಿಂಟೋ ಸಹಿತ ಸಿಬ್ಬಂದಿಗಳು ಸಮಾರಂಭಕ್ಕೆ ಸಾಕ್ಷಿಯಾದರು.




Friday, January 3, 2020

ಜೀವಧಾನ್ಯಕ್ಕೆ ಜೀವ!..... ನಾಳೆ


ಜನವರಿ 4 (ನಾಳೆ) ಮತ್ತು 5ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ‘ಸಾವಯವ ಹಬ್ಬ’. 
ಪುತ್ತೂರಿನ ನವಚೇತನ ಸ್ನೇಹ ಸಂಗಮ ಮತ್ತು ಜೇಸಿಐ ಪುತ್ತೂರು ಇವರ ಸಾರಥ್ಯ.
ಉದ್ಘಾಟನೆಯ ಸಂದರ್ಭದಲ್ಲಿ ನನ್ನ ‘ಜೀವಧಾನ್ಯ’ ಪುಸ್ತಕದ ಕಟ್ಟು ಬಿಚ್ಚುವ ಮುಹೂರ್ತ. 
ಹಿರಿಯ ಕಲಾವಿದರಾದ ಶ್ರೀ ಮೋನಪ್ಪರು ಸುಂದರವಾಗಿ ಮುಖಚಿತ್ರ ರಚಿಸಿದ್ದಾರೆ. 
120 ಪುಟಗಳ ಪುಸ್ತಕ. ಭತ್ತದ ಕೃಷಿಯ ಇಳಿಲೆಕ್ಕ, ತಳಿ ಸಂರಕ್ಷಕರು, ಮೂವತ್ತು ವಿಧದ ಭತ್ತದ ತಳಿಗಳು, 
ಅನ್ನದ ಬಿಸಿಯುಸಿರು... ಹೂರಣ.   
ಬಹುತೇಕ ಉದಯವಾಣಿಯಲ್ಲಿ ಪ್ರಕಟವಾದ ಬರಹಗಳು ಹಾಗೂ ಅಂಕಣಗಳು.