Wednesday, March 23, 2011

`ಸ್ವಾವಲಂಬಿ ಬದುಕು'

ಪಡೀಲು ಶಂಕರ ಭಟ್ - ಯಶಸ್ವೀ ಕೃಷಿಕ. ಏಳು ದಶಕದ ಕೃಷಿ ಅನುಭವ. ಯಾವುದೇ ಸಮಸ್ಯೆ-ಸವಾಲುಗಳಿಗೆ ಗೊಣಗಾಟವಿಲ್ಲದ ಸ್ವ-ದಾರಿ. ಅನುಭವದ ಜಾಣ್ಮೆ. ಮಾದರಿ ಬದುಕು. ತುಂಬು ಜೀವನಾಸಕ್ತಿ. ಕೊಡುಗೈ ದಾನಿ. ಯಕ್ಷಗಾನ ಪ್ರೇಮಿ.

ಶಂಕರ ಭಟ್ಟರ ವ್ಯಕ್ತಿತ್ವವನ್ನು ಅಕ್ಷರದಲ್ಲಿ ಹಿಡಿದಿಡಲು ಕಷ್ಟ. ಅದು ತುಂಬಿದ ಕೊಡ. ಮಾತು, ಕೆಲಸಗಳಲ್ಲಿ ಜಾಳಿಲ್ಲ. ಅಪ್ಪಟ ಪೈರು. 'ಅವರು ಮುಟ್ಟಿದ್ದೆಲ್ಲಾ ಚಿನ್ನ' ಎಂದು ಹತ್ತಿರದಿಂದ ಬಲ್ಲವರ ಮಾತು.

ಕೃಷಿಯಲ್ಲಿ ಸಾಕಷ್ಟು ಪಲ್ಲಟಗಳಾಗಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಹೇಗೆ? ಐದಾರು ವರುಷದ ಹಿಂದೆ ಅವರೊಮ್ಮೆ ಸಿಕ್ಕಾಗ ಪ್ರಶ್ನೆಸಿದ್ದೆ. 'ಪಲ್ಲಟಗಳು ಕೃಷಿಯಲ್ಲಿ ಯಾಕೆ, ನಮ್ಮ ಬದುಕಿನಲ್ಲೂ ಆಗುವುದಿಲ್ವಾ. ಬಂದುದನ್ನು ಬಂದ ಹಾಗೆ ಸ್ವೀಕರಿಸುವುದು ಮಾನವ ಧರ್ಮ. ಸ್ವೀಕರಿಸಿದ ಬಳಿದ ಅದನ್ನು ನಿಭಾಯಿಸುವುದು ಇದೆಯಲ್ಲಾ, ಅದು ಅನುಭವದಿಂದಲೇ ಬರಬೇಕು.' ಎಂದಿದ್ದರು.

ಶಂಕರ ಭಟ್ಟರು ಗತಿಸಿ ಮಾರ್ಚ್ 17ಕ್ಕೆ ಒಂದು ವರುಷ. ಅವರು ಜೀವತದಲ್ಲಿರುವಾಗಲೇ ತಮ್ಮ ಕುಟುಂಬ ವಿವರಗಳನ್ನೊಳಗೊಂಡ 'ನೆನಪಿನ ಬುತ್ತಿ' ಎಂಬ ಕೃತಿಯನ್ನು ಪ್ರಕಟಿಸಿದ್ದರು. ಅವರನ್ನು ಹತ್ತಿರದಿಂದ ಬಲ್ಲ ಅನೇಕ ಆಢ್ಯರು ಬರೆದ ಲೇಖನಗಳಿವೆ. ಬರೆಹಗಳಲ್ಲಿ ಭಟ್ಟರ ಕೃಷಿ ಸಾಧನೆಗಳಿವೆ. ಮನೆಯ ಯಜಮಾನನೊಬ್ಬನ ಯಶಸ್ವೀ ಬದುಕಿನ ಗಾಥೆಗಳಿವೆ. ವಂಶ ವಿವರಗಳಿವೆ.

ವರ್ಷಾಂತಿಕದ ಆಮಂತ್ರಣ ಬಂದಾಗ, 'ನೆನಪಿನ ಬುತ್ತಿ' ಪುಸ್ತಕವನ್ನು ತಿರುವು ಹಾಕಿದೆ. ಅದರಲ್ಲಿ ಕೃಷಿಯ ಕುರಿತಾಗಿ ಉಲ್ಲೇಖವಿರುವ ಬರೆಹಗಳಿಂದಾಯ್ದ (ಮುಖ್ಯವಾಗಿ ಪ್ರೊ.ವಿ.ಬಿ.ಅರ್ತಿಕಜೆ ಮತ್ತು ಡಾ.ಯದುಕುಮಾರ್ ಅವರ ಬರೆಹ) ಒಂದಷ್ಟು ವಿಚಾರಗಳು ಮೆದುಳಿಗೆ ಮೇವನ್ನು ನೀಡುತ್ತದೆ.

ಹೈನುಗಾರಿಕೆ ಅವಲಂಬನಾ ಕೆಲಸವಲ್ಲ. ಮನೆಯವರೇ ಸ್ವತಃ ಮಾಡುವಂತಾದ್ದು. ಜಾನುವಾರುಗಳ ಬಗ್ಗೆ ಪ್ರೀತಿ ಬೇಕು. ನಮ್ಮ ತೋಟಕ್ಕೆ ನಮ್ಮದೇ ಸ್ಲರಿ-ಗೊಬ್ಬರ. ಗೋಬರ್ ಗ್ಯಾಸ್ನಿಂದ ಕಟ್ಟಿಗೆ ಉಳಿತಾಯ. ಮನೆಗೆ ಬೇಕಾದಷ್ಟು ಹಾಲು. ನಾಟಿ ಹಸುವಾದರೆ ಸಾಕಣೆ ಖರ್ಚು ಕಡಿಮೆ, ಹಾಲೂ ಕಡಿಮೆ! ಗೋಮೂತ್ರದಿಂದ ಆರ್ಕವನ್ನು ಮಾಡಬಹುದು. ಸಂಕರತಳಿಗಳಾದರೆ ಹಾಲಿನ ಪ್ರಮಾಣ ಹೆಚ್ಚು. ಖರ್ಚೂ ಹೆಚ್ಚು. ಆರೋಗ್ಯ ಕಡಿಮೆ.

ಕೂಲಿ ಕೆಲಸದವರ ಅಭಾವ, ಹೆಚ್ಚಿದ ಮಜೂರಿ, ಪಶುಆಹಾರದ ದರದಲ್ಲಿ ಏರಿಕೆ. ಇದರಿಂದಾಗಿ ಆರ್ಥಿಕವಾಗಿ ಹೈನುಗಾರಿಕೆಯನ್ನು ಸಮತೋಲನಗೊಳಿಸಲು ತ್ರಾಸ. ಇದು ಕೃಷಿಗೆ ಪೂರಕವಾದ್ದರಿಂದ ದೂರಗಾಮಿ ಪರಿಣಾಮದಲ್ಲಿ ಲಾಭದಾಯಕ. 'ಹೇಳುವುದೊಂದು, ತೋರಿಸುವುದೊಂದು, ತರುವುದೊಂದು ಎಂಬಂತಹ ಸಾವಯವ, ರಸಗೊಬ್ಬರಗಳಿಗಿಂತ ನಮ್ಮಲ್ಲಿ ತಯಾರಾದ ಗೊಬ್ಬರ ಅಥವಾ ಸ್ಲರಿ ಎಷ್ಟೋ ಉತ್ತಮ. ಹಾಗಾಗಿ ಹೈನುಗಾರಿಕೆ ಇಂದಿಗೂ ಸೂಕ್ತ
ಕೃಷಿಯಲ್ಲಿ ಲಾಭ ಪಡೆಯಲು ತುಂಬ ಕಷ್ಟವಿದೆ. ಆದರೆ ಸುಖಮಯ ಜೀವನಕ್ಕೆ ತೊಂದರೆಯಾಗದು.

ಈಗ ಎಲ್ಲೆಲ್ಲೂ ಅಡಿಕೆ, ತೆಂಗು, ರಬ್ಬರ್, ಗೇರು ಕೃಷಿಗಳಿಂದಾಗಿ ಕೃಷಿ ವಿಸ್ತರಣೆಯಾಯಿತು. ಕೃಷಿ ಕಾರ್ಮಿಕರ ಕುಟುಂಬ ಸದಸ್ಯರ ಸಂಖ್ಯೆ ಕೂಡಾ ಹೆಚ್ಚಾಯಿತು. ಉಳ್ಳವರು ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಪೇಟೆ-ಪಟ್ಟಣಗಳಲ್ಲಿ ಸೆಟ್ಲ್ ಆದರು. ಊರು ಬೆಳೆದಂತೆ ಕಟ್ಟಡ, ಮನೆಗಳು, ಸೇತುವೆಗಳು, ರಸ್ತೆಗಳು ಮೊದಲಾದ ಮೂಲಭೂತ ಸೌಕರ್ಯಗಳು ಹೆಚ್ಚಾದುವು. ಕಾರ್ಮಿಕರ ಇದಕ್ಕೆ ಹಂಚಿ ಹೋದರು. ಕೆಲಸದವರು ಸಾಕಷ್ಟು ಮಂದಿ ಇದ್ದಾಗ ಸಣ್ಣಪುಟ್ಟ ಕೆಲಸಗಳಿಗೂ ಅವರನ್ನೇ ಅವಲಂಬಿಸಿ ಸ್ವತಃ ಕೆಲಸ ಮಾಡುವುದನ್ನು ನಿಲ್ಲಿಸಿದೆವು. ಒಂದರ್ಥದಲ್ಲಿ ಸೋಮಾರಿಗಳಾದೆವು. ನಮ್ಮ ಮಕ್ಕಳನ್ನು ಕೃಷಿಯಿಂದ ಬಿಡಿಸಿ ಉದ್ಯೋಗಕ್ಕೆ ಕಳುಹಿಸಿದೆವು. ಈಗ ಕಷ್ಟ ಅನುಭವಿಸುತ್ತಿದ್ದೇವೆ.

ಈಗ ಹಲವು ರೀತಿಯ ಯಂತ್ರೋಪಕರಣಗಳು ಬಂದಿವೆ. ಬರುತ್ತಲೇ ಇವೆ. ಗೊಬ್ಬರದ ಬದಲು ಸ್ಲರಿ, ರಸಾವರಿ ವ್ಯವಸ್ಥೆ ಮಾಡಿ, ತೋಟದೊಳಗೆ ಗಾಡಿ ಅಥವಾ ರಿಕ್ಷಾ, ಜೀಪು ವಾಹನಗಳು ಹೋಗುವಂತೆ ಮಾಡಿದರೆ ಕಾರ್ಮಿಕರ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಹಗುರ ಮಾಡಬಹುದು. ಕಳೆ ತೆಗೆಯಲು, ಔಷಧಿ ಸಿಂಪಡಣೆಗೆ ಸಹಾಯಕವಾಗುವ ಪಂಪು, ಅಡಿಕೆ ಸುಲಿಯುವ ಯಂತ್ರಗಳು ಬಂದಿವೆ. ಬೆಲೆ ಇಳಿತದಿಂದ, ಕೆಲಸಗಾರರ ಕೊರತೆಯಿಂದ ಕಂಗೆಡದೆ, ಧೈರ್ಯವಾಗಿ ತನ್ನಿಂದಾದಷ್ಟು ಕೆಲಸವನ್ನು ಮಾಡುತ್ತಾ ಬಂದರೆ ಅತೀವ ಲಾಭದಾಯಕವಲ್ಲದಿದ್ದರೂ ಸ್ವಾವಲಂಬಿಯಾಗಿ ಬದುಕಬಹುದು.

ಶಂಕರ ಭಟ್ಟರ ಕೃಷಿ ಲೆಕ್ಕಾಚಾರ ಪಕ್ಕಾ. ಅಡಿಕೆ ಕೃಷಿಯಲ್ಲಿ ಕೊಯ್ಲೋತ್ತರ ಸಂಸ್ಕರಣೆ ಅಚ್ಚುಕಟ್ಟು. ಅಡಿಕೆ ಸುಲಿದ ನಂತರ ಗ್ರೇಡ್ ಮಾಡುವುದರಲ್ಲಿ ಸ್ವ-ವಿಧಾನ. ಇವರ ಕೈಯಲ್ಲಿ ಒಮ್ಮೆ ಗ್ರೇಡ್ ಆದ ಅಡಿಕೆ ಹೆಚ್ಚಿನ ಧಾರಣೆ ಖಚಿತ. ಇದರಿಂದಾಗಿ ಇವರ ಮನೆಗೆ ವ್ಯಾಪಾರಿಗಳು ಬಂದು ಅಡಿಕೆ ಖರೀದಿ ಮಾಡುತ್ತಿದ್ದರು.

ಕೃಷಿ ಜೀವನದಲ್ಲಿ ಆರ್ಥಿಕತೆಯ ನಿಭಾವಣೆ, ಕೃಷಿಗೆ ಆಧುನೀಕರಣದ ಸ್ಪರ್ಶ, ಕೃಷಿಭೂಮಿಯನ್ನು ಖರೀದಿಸುವಾಗ ಎಚ್ಚರವಹಿಸಬೇಕಾದ ಅಂಶಗಳು, ಯವ್ಯಾವ ಸಮಯದಲ್ಲಿ ಕೃಷಿಗೆ ಪೂರಕವಾದ ವಸ್ತುಗಳಗಳನ್ನು ಖರೀದಿಸಬೇಕು.. ಮುಂತಾದ ವಿಚಾರದಲ್ಲಿ ಶಂಕರ ಭಟ್ಟರಲ್ಲಿ ನಿಖರ ನಿಲುವಿತ್ತು.

ಇವರಿಗೆ ದುಡಿತವೆಂದರೆ ಪ್ರೀತಿ. ಭತ್ತದ ಕೃಷಿ ಸಹಿತ ಬಹುತೇಕ ಎಲ್ಲಾ ಬೆಳೆಗಳನ್ನು ಬೆಳೆದ ಅನುಭವಿ. ಮಾರುಕಟ್ಟೆ ವಿಚಾರದಲ್ಲೂ ಇದಮಿತ್ಥಂ ಎಂಬ ತಿಳುವಳಿಕೆ.

ಅಡಿಕೆ ತೋಟದಲ್ಲಿ ದಿನಾ ಬಿದ್ದ ಅಡಿಕೆಯನ್ನು ಹೆಕ್ಕುವುದು ದೊಡ್ಡ ಕೆಲಸ. ದೊಡ್ಡ ತೋಟವಾದರೆ ಹೆಕ್ಕಿ ಪೂರೈಸುವಂತಹುದಲ್ಲ. ಅದಕ್ಕಾಗಿ ಇವರು ಶಾಲೆಗೆ ಹೋಗುವ ಮಕ್ಕಳನ್ನು ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು ಅಡಿಕೆ ಹೆಕ್ಕಲು ಹುರಿದುಂಬಿಸುತ್ತಿದ್ದರು. ಮಕ್ಕಳಿಗೆ ಪುಸ್ತಕ-ಬಟ್ಟೆಗಳಿಗೆ ಕಾಸೂ ಆಯಿತು, ಸಂಪಾದನೆಯೂ ಆಯಿತು. ಮಾನವ ಸಂಪನ್ಮೂಲದ ಬಳಕೆಯ ಚಿಕ್ಕ ಮಾದರಿ.

ಹೀಗೆ ಕೃಷಿಯಲ್ಲಿ ಚಿಕ್ಕ ಚಿಕ್ಕ ವಿಚಾರಗಳಿಗೂ ಮಹತ್ತಿದೆ. ಬದುಕಿನಲ್ಲಿ ಮಹತ್ತನ್ನು ಸಾಧಿಸಿ ತೋರಿಸಿದ ಕೀರ್ತಿಶೇಷ ಶಂಕರ ಭಟ್ಟರಿಗೆ ಇದು ಅಕ್ಷರ ನಮನ.

Tuesday, March 22, 2011

ರೈತನಿಗಿಲ್ಲಿ ಮೊದಲ ಮಣೆ

'ಭಾರತದಲ್ಲಿ ಹದಿಮೂರು ಟನ್ ಗೇರುಬೀಜಕ್ಕೆ ಬೇಡಿಕೆಯಿದೆ. ಆರೇಳು ಟನ್ ಮಾತ್ರ ಉತ್ಪಾದನೆಯಾಗುತ್ತಿದ್ದು, ಮಿಕ್ಕುಳಿದುದನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ಗೇರುಬೀಜಕ್ಕೆ ಎಂದೂ ಬೇಡಿಕೆ ಕಡಿಮೆಯಾಗದು' ಎಂದವರು ಪುತ್ತೂರಿನ ಗೇರು ಸಂಶೋಧನಾ ಕೇಂದ್ರದ ಮುಖ್ಯಸ್ಥ ಎಂ.ಜಿ.ಭಟ್.

ಉಳಿದ ಕೃಷಿಗೆ ಹೋಲಿಸಿದರೆ ಗೇರು ಕೃಷಿ ಹೆಚ್ಚು ಶ್ರಮ ಬೇಡದ ಕೆಲಸ. ವರುಷ ಆರೇಳು ತಿಂಗಳುಗಳ ಶ್ರಮ. ಮಾರುಕಟ್ಟೆಯಲ್ಲಿ ಗೇರುಬೀಜದ ಪ್ರಸಕ್ತ ದರ ಕಿಲೋಗೆ ಎಂಭತ್ತು ರೂಪಾಯಿ.
ನಮ್ಮ ಕೃಷಿಕರಲ್ಲಿ ಅನೇಕರಿಗೆ ಇಳಿಜಾರಾದ ಗುಡ್ಡ ಭೂಮಿಯಿದೆ. ಅವೆಲ್ಲಾ ರಬ್ಬರ್ ಕೃಷಿಗಾಗಿ ನುಣುಪಾಗಿದೆ. ಬೆಲೆಯ ಮೋಹಕ್ಕೆ ಒಳಗಾಗಿ ಹೊಸ ಹೊಸ ಬೆಳೆಯತ್ತ ವಾಲುವುದು ಸಹಜ. ಆದರೆ ಭವಿಷ್ಯ? 'ರಬ್ಬರಿಗಿಂತ ಗೇರು ಎಷ್ಟೋ ವಾಸಿ. ಲಾಭದಾಯಕವೂ ಕೂಡಾ' ಎಂದು ದನಿಸೇರಿಸಿದರು ಕೃಷಿಕ ದೇರಣ್ಣ ರೈ.

'ಹಲವಾರು ಮಂದಿ ಗೇರು ಯಾಕೆ ಹಾಕ್ತಿಯಾ? ರಬ್ಬರ್ ಹಾಕು ಅಂತ ಒತ್ತಾಯಿಸಿದರು. ಗೇರು ಕೃಷಿಯ ಬಗ್ಗೆ ವಿಶ್ವಾಸವಿದ್ದರೂ, ರಬ್ಬರ್ ಕೂಡಾ ಜತೆಗಿರಲಿ. ಲಾಭ ನಷ್ಟದ ಲೆಕ್ಕವನ್ನು ಪ್ರತ್ಯಕ್ಷ ನೋಡಿದ ಹಾಗಾಯಿತು. ಹಾಗಾಗಿ ಒಂದು ಪ್ಲಾಟ್ನಲ್ಲಿ ರಬ್ಬರ್ ಮತ್ತು ಇನ್ನೊಂದರಲ್ಲಿ ಗೇರು ಕೃಷಿ ಮಾಡಿದ್ದೇನೆ' ಎಂದರು. ರೈಗಳು ಎರಡೂ ಬೆಳೆಯ ಲೆಕ್ಕ ಪತ್ರಗಳನ್ನು ದಾಖಲಿಸುತ್ತಾರೆ.
ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯವು ಮಾರ್ಚ್ ಒಂದರಂದು ಗೇರು ದಿನೋತ್ಸವ ಆಚರಿಸಿತು. ಇದು ಹದಿನಾಲ್ಕನೇ ದಿನೋತ್ಸವ. ಗೇರು ಕೃಷಿಕರನ್ನು ಆಹ್ವಾನಿಸಿ, ಯಶಸ್ವೀ ಗೇರು ಕೃಷಿಕರ ತೋಟಗಳಿಗೆ ಕರೆದುಕೊಂಡು ಹೋಗಿ, ಅಲ್ಲಿನ ಕೃಷಿ ಪದ್ಧತಿಗಳನ್ನು ತೋರಿಸುವುದು ವಿಶೇಷ. ಇದರಿಂದಾಗಿ ಕೃಷಿ ಪದ್ಧತಿಗಳ ವೈವಿಧ್ಯತೆಯನ್ನು ಪ್ರತ್ಯಕ್ಷ ನೋಡಿದಂತಾಗುತ್ತದೆ. ತಾವೆಲ್ಲಿ ಎಡವುತ್ತೇವೆ ಎಂಬುದರ ಕುರಿತಾಗಿ ಪರಾಮರ್ಶೆಯೂ ಜತೆಜತೆಗೆ ನಡೆಯುತ್ತಿದೆ.

ಮೊದಲು ಎರಡು ತಂಡಗಳಲ್ಲಿ ಕೇಂದ್ರದ ಗೇರು ತಾಕುಗಳ ವೀಕ್ಷಣೆ. ವಿಜ್ಞಾನಿಗಳಿಂದ ವಿವರಣೆ. ಕೃಷಿಕರ ಪ್ರಶ್ನೆಗಳಿಗೆ ನಗುಮುಖದ ಉತ್ತರ. ಕೆಲವೊಂದು ಸಲ ಪ್ರಶ್ನೆಗಳಿಗೆ ರೈತರಿಂದ ಅಲ್ಲಲ್ಲೇ ಉತ್ತರ-ಸಮಾಧಾನ.

ಇದೇ ಕೇಂದ್ರದಲ್ಲಿ ವಿಜ್ಞಾನಿಯಾಗಿ ನಿವೃತ್ತರಾಗಿ, ಈಗ ಕೃಷಿಕರಾಗಿರುವ ಯದುಕುಮಾರ್ ಅವರ ತೋಟಕ್ಕೆ ಈ ಸಲ ಭೇಟಿ. ಮುನ್ನೂರಕ್ಕೂ ಮಿಕ್ಕಿ ಕೃಷಿಕರ ಭಾಗಿ. ವಿಆರ್ಐ-3, ವೆಂಗುರ್ಲ-4, ಉಲ್ಲಾಳ-3 ಮತ್ತು ಭಾಸ್ಕರ ಗೇರು ತಳಿಗಳನ್ನು ಯದುಕುಮಾರ್ ಹೊಂದಿದ್ದರು. ಎಲ್ಲವೂ ಆರಂಭಿಕ ಬೆಳವಣಿಗೆ. ಆರೋಗ್ಯಕರ ಇಳುವರಿ. ಕೃಷಿಯ ಏಳು-ಬೀಳುಗಳು, 'ಮಾಡಿ-ಬೇಡಿ'ಗಳನ್ನು ತಮ್ಮ ಅನುಭವಮೂಸೆಯಿಂದ ವಿವರಿಸಿದರು.

'ಗೇರು ಬೆಳೆಯುವ ರೈತರಲ್ಲಿಗೆ ಹೋದಾಗ ವೆರೈಟಿಗಳ ಪರಿಚಯವಾಗುತ್ತದೆ. ಬೆಳೆಕ್ರಮ ಅರಿವಾಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ತಳಿಗಳ ಕುರಿತಾದ ಆಯ್ಕೆಯಲ್ಲಿ ರೈತರು ಮೋಸ ಹೋಗುವುದೇ ಹೆಚ್ಚು. ಅದರ ಪರಿಚಯ ಮೊದಲೇ ಇರಬೇಕು' - ಯದುಕುಮಾರರ ಕಿವಿಮಾತು.
ಮಧ್ಯಾಹ್ನದ ಹೊತ್ತಿಗೆ ಸಭಾ ಕಲಾಪ. ಅತಿಥಿ ವಿಜ್ಞಾನಿಗಳಿಂದ ಅನುಭವ ವಿನಿಮಯ. ಕೊನೆಗೆ ಪ್ರಶ್ನೋತ್ತರ. ಕರ್ನಾಟಕ ಗೇರು ನಿಗಮದ ಅಧಿಕಾರಿ ವಿಜಯಲಾಲ್ ಮೀನಾ ಈ ಸಲದ ಅತಿಥಿ. 'ಎಷ್ಟೋ ಕಡೆ ಬೆಳೆದು ನಿಂತ ಗೇರು ಮರಗಳನ್ನು ಕಡಿದು ರಬ್ಬರ್ ಗಿಡಗಳನ್ನು ನೆಡುವುದನ್ನು ನೋಡಿದ್ದೇನೆ. ಇದು ಒಳ್ಳೆಯದಲ್ಲ. ಕೃಷಿಯಲ್ಲಿ ತಕ್ಷಣದ ಬದಲಾವಣೆ ಪ್ರಯೋಜನ ಬಾರದು. ಗೇರಿನ ಈ ವರೆಗಿನ ಇತಿಹಾಸದಲ್ಲಿ ಬೆಲೆ ಕುಸಿತದಿಂದ ಯಾವ ರೈತರಿಗೂ ತೊಂದರೆಯಾಗಿಲ್ಲ' ಎಂದರು.

ಗೇರು ಬೀಜಕ್ಕೇನೋ ಮಾರುಕಟ್ಟೆಯಿದೆ. ಆದರೆ ಗೇರು ಹಣ್ಣನ್ನು ಮೌಲ್ಯವರ್ಧನೆ ಮಾಡಲು ಸಾಧ್ಯವಿಲ್ಲವೇ? ರೈತರೊಬ್ಬರ ಪ್ರಶ್ನೆ. ಇದಕ್ಕೆ ಆಡಳಿತಾತ್ಮಕವಾದ ಉತ್ತರವೇನೋ ದೊರೆಯಿತು. 'ಇದರಿಂದ ತಯಾರಿಸುವ ಸ್ಕ್ವಾಷ್ಗೆ ಡಿಮಾಂಡ್ ಇಲ್ಲ' ವರಿಷ್ಠರಿಂದ ಉತ್ತರ. 'ಕೇರಳದಲ್ಲಿ ಇದೆಯಲ್ಲಾ' ರೈತರಿಂದ ಪ್ರತ್ಯುತ್ತರ.

ಈ ಸಂವಾದದ ಹಿನ್ನೆಲೆಯಲ್ಲಿ ಕೇರಳದ 'ಕ್ಯಾಶ್ಯೂ ಕೋಲಾ' ಮಾಡುವ ಘಟಕವೊಂದರ ಸೂಕ್ಷ್ಮ ಪರಿಚಯ ನಿಮಗೆ ಹೇಳಲೇ ಬೇಕು - ಕೇರಳದ ಕಣ್ಣೂರು ಜಿಲ್ಲೆಯ ವಾಣಿಯಂಪಾರದ ಕೃಷಿಕ ಟೋಮಿಚ್ಚನ್. ಇವರಿಗೆ ಟೋಮ್ಕೋ ಉದ್ಯಮದ ಮೂಲಕ ಗೇರು ಹಣ್ಣಿನ ಪೇಯ ತಯಾರಿ ವೃತ್ತಿ. ಇವರ ಲಘುಪೇಯ ಮತ್ತು ಸಿರಪ್ಗಳು ಕಣ್ಣೂರಿನ ಮುಖ್ಯ ಕೇಂದ್ರಗಳಲ್ಲಿ, ಮಾರ್ಜಿನ್ ಶಾಪ್, ಹಣ್ಣು ತರಕಾರಿ ಅಂಗಡಿ, ಬೇಕರಿ, ಹಾಲಿನ ಬೂತ್ಗಳಲ್ಲಿ ಪೇಯ ಸಿಗುತ್ತಿದ್ದು ಆಶಾದಾಯಕ ಗ್ರಾಹಕ ಒಲವು ಪಡೆಯುತ್ತಿದೆ.

ಗೇರು ಹಣ್ಣಿನಲ್ಲಿರುವ ಗಂಟಲು ಕೆರೆಯುವ ಗುಣ ಟೋಮ್ಕೋದಲಿಲ್ಲ. ಪೇಯದ ಬಾಟಲಿಂಗ್ ತುಂಬ ಆಕರ್ಷಕ. ಬಾಟ್ಲಿಯ ಆಕಾರ ತಲೆಕೆಳಗಾದ ಗೇರುಹಣ್ಣಿನಂತಿದೆ. ಮುಚ್ಚಳ ಬೀಜದಂತೆ. ಮುಚ್ಚಳದ ಆಕಾರ, ಬಣ್ಣ ಗೇರು ಬೀಜದಂತೆ. 250 ಎಂ.ಎಲ್.ಪೇಯಕ್ಕೆ ಹದಿನೇಳು ರೂಪಾಯಿ, ಐನೂರಕ್ಕೆ ಮೂವತ್ತು ರೂಪಾಯಿ. ಸಿರಪ್ಗೆ ಐದಾರು ಪಾಲು ನೀರು ಯಾ ಸೋಡ ಸೇರಿಸಿ ಕುಡಿಯಬಹುದು. ಇದು ಗೇರು ಹಣ್ಣಿನ ಸಾಧ್ಯತೆ. ನಮ್ಮಲ್ಲಿ ಇದಿನ್ನೂ ಪ್ರಯೋಗ ಹಂತದಲ್ಲಿದೆಯಷ್ಟೇ. ಕೇರಳಿಗರು ಇಂತಹ ಮೌಲ್ಯವರ್ಧನೆಯಲ್ಲಿ ಯಾವಾಗಲೂ ಮುಂದು.

ಗೇರು ಸಂಶೋಧನಾಲಯಕ್ಕೀಗ ರಜತ ಸಂಭ್ರಮ. ಗೇರು ದಿನೋತ್ಸವ ರಜತದ ಮೊದಲ ಕಲಾಪ. ನಮ್ಮ ಹೆಚ್ಚಿನ ಸಂಶೋಧನಾಲಯಗಳಿಗೆ ರೈತರೆಂದರೆ ಯಾಕೋ ಅಲರ್ಜಿ.. ಆದರೆ ಗೇರು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಗಳೆಂದರೆ ರೈತರಿಗೆ ಪ್ರೀತಿ. ಅವರಿಗೆ ಸದಾ ತೆರೆದ ಬಾಗಿಲು. ರೈತರ ತೋಟಕ್ಕೆ ಸ್ವತಃ ವಿಜ್ಞಾನಿಗಳೇ ಭೇಟಿ ಕೊಡುವುದು ವಿಶೇಷ. ಹಾಗಾಗಿ ಇಲ್ಲಿಂದ ಯಾವುದೇ ಸಮಾರಂಭದ ಕರೆ ಹೋದಾಗಲೂ ಕೃಷಿಕರಿಂದ ಸಭಾಭವನ ತುಂಬಿರುತ್ತದೆ.

Friday, March 11, 2011

ಮರೆಯಾಗುತ್ತಿದೆ 'ಸ್ಥಳೀಯತೆ'

ಈಚೆಗೆ ಹುಬ್ಬಳ್ಳಿಗೆ ಹೋಗಿದ್ದಾಗ ಮಾಧ್ಯಮ ಪರಿಚಿತರೋರ್ವರ ಮನೆಗೆ ಭೇಟಿ ಕೊಟ್ಟಿದ್ದೆ. ಮನೆಯ ಎಲ್ಲಾ ಸದಸ್ಯರು ಅಪರಿಚಿತರು. ಅವರು ಹಳ್ಳಿಯಿಂದ ಉದ್ಯೋಗ ನಿಮಿತ್ತ ನಗರಕ್ಕೆ ಬಂದು ಏಳೆಂಟು ವರುಷವಾಗಿತ್ತು. ಮಕ್ಕಳೆಲ್ಲಾ ನಗರದಲ್ಲೇ ಓದಿದವರು. 'ಅರ್ಧಕಾಲಿನ ಪ್ಯಾಂಟ್' ನಿತ್ಯ ಉಡುಪು. ಮನೆಗೆ ಆಹ್ವಾನಿಸಿದ ಯಜಮಾನ ತನ್ನ ಮಡದಿ ಮತ್ತು ಇಬ್ಬರು ಮಕ್ಕಳ ಪರಿಚಯ ಮಾಡಿಸಿದರು. ಯಾಂತ್ರಿಕ ನಗುವಿನೊಂದಿಗೆ ನಮಸ್ಕಾರ ವಿನಿಮಯ.

ಒಂದರ್ಧ ನಿಮಿಷದಲ್ಲಿ ತನಗೆ ಸಂಬಂಧಪಟ್ಟ ವಿಚಾರವಲ್ಲವಿದು ಎನ್ನುತ್ತಾ ಮನೆಯೊಡತಿ ಎದ್ದು ಹೋದರೆ, ಮಕ್ಕಳು ತಂತಮ್ಮ ಕೋಣೆ ಸೇರಿದರು.
'ನೀರು ಬೇಕಿತ್ತಲ್ಲಾ' ಅಂದಾಗ ಯಜಮಾನರೇ ಹೋಗಿ ತಂಪು ಪೆಟ್ಟಿಗೆಯಿಂದ ಬಾಟಲ್ ತಂದಿಟ್ಟರು. ಮನೆಯೊಡತಿ ಧಾರಾವಾಹಿಯೊಳಗೆ ಮುಳುಗೇಳುತ್ತಿದ್ದರು. ಉದ್ದೇಶಪೂರ್ವಕವಾಗಿಯೇ ಮಕ್ಕಳ ಕೋಣೆಗೆ ಹೋಗಿ ಮಾತನಾಡಿದರೆ 'ಒಂದು ಮಾರ್ಕಿನ ಪ್ರಶ್ನೆಯ ಉತ್ತರ'ದಂತೆ 'ಹೌದು, ಇಲ್ಲ' ಎಂದಷ್ಟೇ ಉತ್ತರ. ಅವರನ್ನು ಮಾತನಾಡಿಸುವ ಕುರಿತಾದ ಬತ್ತಳಿಕೆಯ ಎಲ್ಲಾ ಅಸ್ತ್ರಗಳೂ ಮುಗಿಯಿತು!

'ಬನ್ನಿ ಹತ್ತಿರದಲ್ಲೇ ಕ್ಯಾಂಟಿನ್ ಇದೆ. ಚಹಾ ಕುಡಿಯೋಣ' ಅನ್ನುತ್ತಾ ಮನೆಯ ಯಜಮಾನ ಕೈಹಿಡಿದು ಒತ್ತಾಯಿಸಿದರು. ಇದೆಲ್ಲಾ ನನಗೆ ವಿಚಿತ್ರವಾಗಿ ಕಂಡಿತು. ಮನೆ ಅಂದಾಗ 'ಚಾ, ಕಾಫಿ, ಉಪಾಹಾರ, ಊಟ, ಮಾತುಕತೆ' ಇದ್ದೇ ಇರಬೇಕಲ್ಲಾ. ಇಲ್ಲಿ ಯಾಕೆ ತದ್ವಿರುದ್ಧ! ಹಾಂ.. 'ಪೇಟೆ ಮನೆ ಅಲ್ವಾ' ಸಮಾಧಾನ ಪಟ್ಟುಕೊಂಡೆ.

ಪರಸ್ಪರ ಮಾತುಕತೆಯಿಲ್ಲ. ಉಪಚಾರ ಇಲ್ಲ. ಸಂವಹನ ಇಲ್ಲ. 'ಗಂಡ, ಹೆಂಡತಿ, ಮಕ್ಕಳು' ಎಂಬ ಪದಗಳು ವ್ಯಕ್ತಿಗಳನ್ನು ಗುರುತಿಸಲು ಮಾತ್ರ. ಬಹುಶಃ ಪೇಟೆ ಮನೆಯಲ್ಲಿ 'ಅಂತಸ್ತು ಕಾಪಾಡಿಕೊಳ್ಳುವುದು' ಎಂಬ ಸ್ವಯಂರೂಢ ಪ್ರಕ್ರಿಯೆಯಿರಬಹುದೋ ಏನೋ?

ಪುತ್ತೂರಿನ ಅನುರಾಗ ವಠಾರದಲ್ಲಿ ಜರುಗಿದ ಸಾಹಿತ್ಯ ಸಂಸ್ಕೃತಿ ಸಲ್ಲಾಪದ ಸಮಾರೋಪ ಉಪನ್ಯಾಸದಲ್ಲಿ ಕುಮಟಾದ ಪ್ರಾಧ್ಯಾಪಕ ಡಾ.ಶ್ರೀಧರ್ ಬಳೆಗಾರ್ ಹೇಳಿದ ವಿಚಾರಗಳು ನನ್ನ ಈ ನೆನಪನ್ನು ಕೆದಕಿದುವು. ಬದುಕಿನಲ್ಲಿ ಮಾತು 'ಕತೆ'ಯಾಗಿ ಬಂದಾಗ ಸ್ಪಷ್ಟವಾದ ಸಂವಹನ. ಎಷ್ಟೋ ಕತೆಗಳು, ಕಾದಂಬರಿಗಳು ಇಂತಹ ಮಾತುಕತೆಗಳಿಂದ ರೂಪಿತವಾದಂತಹುಗಳು. ಜೀವನದಲ್ಲಿ ಮಾತುಕತೆಯೇ 'ಹೌದು-ಇಲ್ಲ'ಗಳಿಗೆ ಸೀಮಿತವಾದರೆ ಎಂತಹ ಕತೆಯನ್ನು ಕಟ್ಟಬಹುದು? ಎಂತಹ ಬದುಕನ್ನು ರೂಪಿಸಬಹುದು?

ಒಂದೆಡೆ ಮಾತುಕತೆಗಳು ಮೌನವಾಗಿವೆ. ಇನ್ನೊಂದೆಡೆ 'ಸ್ಥಳೀಯತೆ'ಗಳು ಕಣ್ಣೆದುರೇ ಕುಸಿಯುತ್ತಿವೆ. ಡಾ.ಶ್ರೀಧರ್ ಅವರು ಸ್ಥಳೀಯತೆ ನಾಶದತ್ತ ಬೀರಿದ ಬೆಳಕಿನ ಒಂದೆಳೆ ಇಲ್ಲಿದೆ:

ಸ್ಥಳೀಯತೆ ಎಂದರೇನು? 'ಯಾವುದನ್ನು ಈ ಆಧುನಿಕ ಜಗತ್ತಿನಲ್ಲಿ ಮೌಲ್ಯ ಅಂತ ಅದನ್ನು ಪಡೆಯುವುದಕ್ಕೆ ಓಡುತ್ತಾ ಇದ್ದೇವೋ, ಆ 'ವೇಗ ಇಲ್ಲದಂತಹ' ನಿಧಾನವಾದ ನೆಮ್ಮದಿಯ ಪ್ರಕ್ರಿಯೆ. ಒಂದಷ್ಟು ಸಂಯಮದಿಂದ ನಿತ್ಯ ಅನುಭವಿಸುವ ವಿಧಾನ. ನಡವಳಿಕೆಯಲ್ಲಿ ಕೃತ್ರಿಮತೆ ಇಲ್ಲದೆ ಕನಿಷ್ಠವಾಗಿ ಇರುವುದು. ಕಷ್ಟವನ್ನು ಸಹಿಸುವಂತಾದ್ದು..'

ಇಂತಹ ಸ್ಥಳೀಯತೆಯನ್ನು ಅಣಕಿಸುವಂತೆ ಪ್ರಸ್ತುತ ಬದುಕಿನ ವೇಗ ಗಣನೆಗೆ ಸಿಕ್ಕದು. ಈ ವೇಗ, ಆವೇಶ, ಒತ್ತಡಗಳೇ 'ಮೌಲ್ಯ ಅಂತ ಗಣಿಸ'ಲ್ಪಡುತ್ತವೆ. ಅದಕ್ಕೆ ಪೂರಕವಾದ ಒಳಸುರಿಗಳನ್ನು ನಗರದ 'ವ್ಯವಸ್ಥೆ'ಗಳು ಪೂರೈಸುತ್ತವೆ. ಮನೆಯೊಳಗೆ ನಡೆಯುವ ಬಹುತೇಕ ವಿಚಾರಗಳನ್ನು ಮಧ್ಯವರ್ತಿಗಳು, ವ್ಯಾಪಾರಿಗಳ ಮೂಲಕ ಪಡೆಯುವ ವ್ಯವಸ್ಥೆಯಿದೆ.

ನಗರದಲ್ಲಿ ಮಧ್ಯಾಹ್ನದ ಹೊತ್ತಿಗೆ ಅತಿಥಿಗಳು ಬಂದಾಗ ಮನೆಯೊಡತಿಗೆ ಚಡಪಡಿಕೆಯಾಗುವುದಿಲ್ಲ. ಟೆನ್ಶನ್ ಆಗುವುದಿಲ್ಲ. ಒಂದು ಕಿಲೋ ಅನ್ನ, ಅರ್ಧ ಲೀಟರ್ ಸಾಂಬಾರ್ ಸಿಗುವ ಅಂಗಡಿಗಳು ಕೈಯಳತೆಯಲ್ಲಿವೆ. ಒಂದು ಫೋನ್ ರಿಂಗ್ ಕೊಟ್ಟರೆ ಸಾಕು, ಹತ್ತೇ ನಿಮಿಷದಲ್ಲಿ ಮನೆಯಂಗಳದಲ್ಲಿ ಹಾರ್ನ್ ಕೇಳುತ್ತದೆ.

ಇತ್ತೀಚೆಗಿನ ವರುಷಗಳಲ್ಲಿ ಕುಟುಂಬ ಸಹಿತ ಉದ್ಯೋಗಕ್ಕಾಗಿ ನಿರಂತರ ವಲಸೆ ಹೋಗುವ ಒಂದಷ್ಟು ಮಂದಿಗಳನ್ನು ಬಸ್ಗಳಲ್ಲಿ ಕಾಣಬಹುದು. ಇವರೆಲ್ಲಾ ನಗರದಲ್ಲಿ ಯಾರದ್ದೋ ಮನೆಯಲ್ಲಿದ್ದುಕೊಂಡು, ಕೆಲಸ ಮಾಡುತ್ತಾ ಇರುತ್ತಾರೆ. ಯಾರದ್ದೋ ಕಟ್ಟಡ ಕಾಮಗಾರಿಯ ಮೂಲಕ ನಗರದ 'ಅಭಿವೃದ್ಧಿ'ಗೆ ಹೆಗಲು ಕೊಡುತ್ತಾರೆ. ಈ ಮಂದಿ ತಮ್ಮ ಹಳ್ಳಿಯ ಬದುಕು, ಪರಿಸರ, ನೆಲ, ತಾನು ನಂಬಿದ ದೈವ, ನೆರೆಕರೆ' ಇವರನ್ನೆಲ್ಲಾ ಬಿಟ್ಟು 'ಅಭಿವೃದ್ಧಿ ಎಂಬ ಹಾರ್ಡ್ ವೇರ್' ಕಟ್ಟುವ ಕೆಲಸದಲ್ಲಿ ನಿರತರಾಗಿರುತ್ತಾರೆ.

ಇನ್ನೊಂದಿಷ್ಟು ಮಂದಿ ಹಳ್ಳಿ ಮನೆಯಿಂದ ಗಂಟುಮೂಟೆ ಕಟ್ಟಿ (ಸೂಟ್ಕೇಸ್ಗಳಲ್ಲಿ) ವೋಲ್ವೋ ಬಸ್ನಲ್ಲಿ ಕುಳಿತಿದ್ದಾರೆ. ಬಸ್ಸಿನ ಹೊರಗಡೆ ಅವರನ್ನು ಬೀಳ್ಕೊಡಲು ಬಂದ ಕುಟುಂಬಸ್ತ್ಥರು ನೆರೆದಿರುತ್ತಾರೆ. ಅವರೆಲ್ಲಾ ನಗರದಲ್ಲಿ 'ಸಾಪ್ಟ್ವೇರ್'ನ್ನು ಅಭಿವೃದ್ಧಿಪಡಿಸಲು ಹೊರಟಿದ್ದಾರೆ.

ಈ ಎರಡೂ ವರ್ಗದ ಜನರನ್ನು ನಗರಕ್ಕೆ ಪ್ರದಾನ ಮಾಡುವುದು ನಮ್ಮ ಹಳ್ಳಿಗಳು. ಕೃಷಿ ಪ್ರಯೋಜನವಿಲ್ಲ, ಹಳ್ಳಿಯ ಬದುಕಿನಲ್ಲಿ ನೆಮ್ಮದಿಯಿಲ್ಲ, ಯಾವುದೇ ವ್ಯವಸ್ಥೆಗಳಿಲ್ಲ ಎನ್ನುತ್ತಾ ಇವರನ್ನು ನಾವೇ ಹಳ್ಳಿಯಿಂದ ದಬ್ಬುತ್ತಿದ್ದೇವೆ. ಅಲ್ಲಲ್ಲಾ.. ಬೀಳ್ಕೊಡುತ್ತಿದ್ದೇವೆ. ಹತ್ತು ಹಲವು ಕನಸುಗಳನ್ನು ಕಟ್ಟಿಕೊಳ್ಳುತ್ತ ನಗರ ಸೇರಿದ ಜೀವಗಳು ಅಲ್ಲಿನ ಉಸಿರುಗಟ್ಟಿಸುವ ವಾತಾವರಣವನ್ನೇ 'ವ್ಯವಸ್ಥೆ' ಅಂತ ಸ್ವೀಕರಿಸಿಕೊಂಡು, ಅದರಲ್ಲಿ ಮೌಲ್ಯವನ್ನು ಕಾಣುತ್ತಾ, ತಾನು ಹುಟ್ಟಿ ಬೆಳೆದ ಹಳ್ಳಿಯನ್ನು ಹಳಿಯುತ್ತಾ ದಿವಸಗಳನ್ನು ಕೊಲ್ಲುತ್ತಾ ಇರುತ್ತಾರೆ!

ಈ ರೀತಿಯ ನಗರದ ವ್ಯವಸ್ಥೆಯನ್ನು ಅಭಿವೃದ್ಧಿ ಎನ್ನುತ್ತಾ ಮಾಧ್ಯಮಗಳು, ರಾಜಕಾರಣಿಗಳು, ಶಿಕ್ಷಣ ವ್ಯವಸ್ಥೆಗಳು ಸದಾ ನೀರೆರೆಯುತ್ತವೆ. ಹಳ್ಳಿ ಮರೆತ ಮಂದಿ ನಗರದಲ್ಲಿ 'ಸೆಟ್ಲ್' ಆಗುತ್ತಾರೆ. ಅವರ ಕುಟುಂಬ ಬೆಳೆಯುತ್ತದೆ. ಆ ಮನೆಯ ಮಂದಿಗೆ 'ಮಾತುಕತೆ' ದೂರವಾಗುತ್ತದೆ. ಹಳ್ಳಿ ಅಸಹ್ಯವಾಗುತ್ತದೆ.

ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ನಲ್ಲಿರುವ 'ಪ್ರಜ್ಞಾವಂತ' ತರಕಾರಿ ವ್ಯಾಪಾರಿ ಡೇವಿಡ್, 'ನಗರಕ್ಕೆ ಹಳ್ಳಿಯಿಂದ ಸಂಪನ್ಮೂಲಗಳು ಹರಿಯುತ್ತದೆ. ನಗದಾಗುತ್ತದೆ. ಅಲ್ಲೇ ಅದು ಟರ್ನ್ ಓವರ್ ಆಗುತ್ತಾ ಇರುತ್ತದೆ. ಅದು ನಗದಾಗಿ ಹಳ್ಳಿಯತ್ತ ಹರಿದು ಬರುತ್ತಿದ್ದರೆ ಇಂದು ಹಳ್ಳಿಗಳ ಸಂಕಷ್ಟ ಇಷ್ಟೊಂದು ಭೀಕರ ಇರುತ್ತಿರಲಿಲ್ಲ' ಎಂದು ಮಾತಿನ ಮಧ್ಯೆ ಹೇಳಿದರು. 'ಸ್ಥಳೀಯತೆ' ಯಾಕೆ ನಾಶವಾಗುತ್ತಿದೆ ಎಂಬುದಕ್ಕೆ ಉತ್ತರದ ಚಿಕ್ಕ ಎಳೆ ಇದರಲ್ಲಿದೆಯಲ್ವಾ.

Wednesday, February 23, 2011

ಸಿರಿಧಾನ್ಯ ಬಳಕೆಯ ಪಾಕವಿಧಾನಗಳಿಗೆ ಬಹುಮಾನ

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಸಿರಿಧಾನ್ಯ ಬಳಕೆಯ ಪಾಕವಿಧಾನಗಳಿಗೆ ಬಹುಮಾನ ನೀಡಲು ಉದ್ದೇಶಿಸಿದೆ. ಸಾವಿ, ರಾಗಿ, ನವಣೆ, ಸಜ್ಜೆ, ಉದಲು, ಕೊರ್ಲೆ, ಬರಗ ಮುಂತಾದ ಸಿರಿಧಾನ್ಯಗಳಿಂದ ತಯಾರಿಸುವ ಸಾಂಪ್ರದಾಯಿಕ ಮತು ಹೊಸ ಅಡುಗೆಗಳನ್ನು ದಾಖಲಿಸುವ ಮತ್ತು ಅವನ್ನು ಪ್ರಚುರಪಡಿಸುವ ಉದ್ದೇಶದೊಂದಿದೆ ಭಾರತೀಯ ಸಿರಿ ಧಾನ್ಯಗಳ ಜಾಲ (ಮಿಲೆಟ್ ನೆಟ್ವರ್ಕ್ ಆಫ್ ಇಂಡಿಯಾ, 'ಮಿನಿ')ದ ಸಹಯೋಗದೊಂದಿಗೆ ಈ ಬಹುಮಾನ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದುವರೆಗೆ ಒರಟುಧಾನ್ಯಗಳೆಂದು ಕಡೆಗಣಿಸಲ್ಪಟ್ಟಿರುವ, ಆದರೆ ಅಪಾರ ಪೌಷ್ಟಿಕಾಂಶಗಳ ಆಗರವಾಗಿರುವ ಮತ್ತು ಆಹಾರ ಭದ್ರತೆಗೆ ಪೂರಕವಾಗಿರುವ ಈ ಆಹಾರಧಾನ್ಯಗಳನ್ನು ಮತ್ತೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಪಾಕವಿಧಾನ ದಾಖಲಾತಿ, ಪ್ರಚಾರವೂ ಸೇರಿದೆ.

ಆಸಕ್ತರು ಸಿರಿಧಾನ್ಯಗಳಿಂದ ತಯಾರಿಸುವ ಅಥವಾ ಅವುಗಳ ಬಳಕೆಯನ್ನೊಳಗೊಂಡ ಯಾವುದೇ ಬಗೆಯ ಅಡುಗೆಯ ಬಗ್ಗೆ ವಿವರ ಕಳಿಸುವಂತೆ ಕೋರಿಕೆ. ಅಂತಹ ಅಡುಗೆಗಳು ಸಾಂಪ್ರದಾಯಿಕವಾಗಿರಬಹುದು ಅಥವಾ ಹೊಸ ಅಡುಗೆಯಾಗಿರಬಹುದು. ಸಾಂಪ್ರದಾಯಿಕ ವಿಶೇಷ ಅಡುಗೆಗಳಿಗೆ ಆದ್ಯತೆ. ಪ್ರವೇಶಗಳನ್ನು ಕಳುಹಿಸುವಾಗ ಅಡುಗೆಗೆ ಬೇಕಾಗುವ ಸಾಮಗ್ರಿಗಳು, ಪಾಕ ವಿಧಾನ, ಆರೋಗ್ಯದ ದೃಷ್ಟಿಯಲ್ಲಿ (ರುಚಿ, ಶಕ್ತಿ, ಸತ್ವ, ಋತುಮಾನಕ್ಕನುಗುಣವಾಗಿ ಸೇವನೆ, ತಾಳಿಕೆ) ಅದರ ಮಹತ್ವ, ರಾಜ್ಯದ ಯಾವ ಭಾಗದಲ್ಲಿ ಈ ಅಡುಗೆ ಜನಪ್ರಿಯ ಇತ್ಯಾದಿ ವಿವರಗಳನ್ನು ನಮೂದಿಸಬೇಕು.

ಜತೆಗೆ ಪ್ರವೇಶ ಕಳುಹಿಸುವವರ ಪುಟ್ಟ ಪರಿಚಯ (ಹೆಸರು, ಉದ್ಯೋಗ, ವಿಳಾಸ ಹಾಗೂ ಸಿರಿಧಾನ್ಯಗಳ ಕುರಿತು ಆಸಕ್ತಿಯ ಕಾರಣ) ಬರೆದಿರಬೇಕು. ಆಯ್ದ ಹತ್ತು ಪಾಕವಿಧಾನಗಳಿಗೆ ಬಹುಮಾನ ನೀಡಲಾಗುವುದು. ಎಲ್ಲ ಉತ್ತಮ ಪಾಕವಿಧಾನಗಳ ವಿವರವನ್ನು ಸಿರಿಧಾನ್ಯ ಕುರಿತ ಪುಸ್ತಕದಲ್ಲಿ ಪ್ರಕಟಿಸಲಾಗುವುದು.

ಪ್ರವೇಶ ತಲುಪಲು ಕೊನೆಯ ದಿನಾಂಕ: ಮಾರ್ಚ್ 20, 2011.

ಕಳುಹಿಸಬೇಕಾದ ವಿಳಾಸ:
ಕೃಷಿ ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, ನಾಲ್ಕನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ - 580008.

Wednesday, February 16, 2011

ಸೈಕಲ್ ಜಾಥಾದ ಮೂಲಕ ಎಂಡೋ ಜಾಗೃತಿ


ಕೇರಳದಲ್ಲಿ ಎಂಡೋಸಲ್ಪಾನ್ ವಿಷದ ವಿರುದ್ಧದ ಜನದನಿ ಸರಕಾರದ ನಿದ್ದೆಗೆಡಿಸಿದೆ. ಇತ್ತ ಕರ್ನಾಟಕದಲ್ಲೂ ನಿಷೇಧದ ಸುದ್ದಿ. ಎಂಡೋ ವಿರುದ್ಧ ಸುದ್ದಿಯಾಗದ ಸುದ್ದಿಗಳು ಹಲವು. ಅವೆಲ್ಲಾ ಮಾನವೀಯ ಮಿಡಿತದಿಂದಲೋ, ಸಾಮಾಜಿಕ ಜವಾಬ್ದಾರಿಯಿಂದಲೋ ಆಗುವಂತಾದ್ದು.
ಈಚೆಗೆ ಕೊಲ್ಲಂನ ಅಮೇಶ್, ಶಮ್ನಾದ್ ಇಬ್ಬರು ಯುವಕರು ಕಾಸರಗೋಡು ಜಿಲ್ಲೆಯ ವಾಣಿನಗರಕ್ಕೆ ಸೈಕಲ್ನಲ್ಲಿ ಬಂದಿಳಿದರು. ಇವರೇನೂ ಚಾರಣಕ್ಕೆ ಬಂದವರಲ್ಲ, ಪ್ರವಾಸ ಹಚ್ಚಿಕೊಂಡವರಲ್ಲ. ಇವರದು 'ಎಂಡೋ ವಿರುದ್ಧದ ಜನಜಾಗೃತಿ'.

ಸೈಕಲಿನ ಮುಂಭಾಗದಲ್ಲಿ 'ಬ್ಯಾನ್ ಎಂಡೋಸಲ್ಫಾನ್-ಸೇವ್ ವಿಕ್ಟಿಮ್ಸ್', ಹಿಂಭಾಗದಲ್ಲಿ 'ಕೊಲ್ಲಂ ಟು ಕಾಸರಗೋಡು' ಶೀರ್ಷಿಕೆ ಹೊತ್ತ ಎರಡು ಫಲಕಗಳು. ಎಂಡೋ ಘೋರತೆಯನ್ನು ಶಾಲಾ ಮಕ್ಕಳಿಗೆ ತಿಳಿಹೇಳುವುದು ಮುಖ್ಯ ಉದ್ದೇಶವಾದರೂ ಸಂದರ್ಭ ಬಂದಾಗಲೆಲ್ಲಾ ಸಾರ್ವಜನಿಕರಲ್ಲೂ ಬಿಂಬಿಸಿದ್ದಾರೆ.

2011 ಜನವರಿ 13ರಂದು ಕೊಲ್ಲಂನಿಂದ ಇವರ ಜಾಥಾ ಶುರು. ಸುಮಾರು ಒಂದು ಸಾವಿರ ಕಿಲೋಮೀಟರ್ ಪ್ರಯಾಣ. 32ಕ್ಕೂ ಮಿಕ್ಕಿ ಶಾಲೆಗಳ ಭೇಟಿ. ದಾನಿಗಳು ನೀಡಿದ ಅಲ್ಪ ಸಹಾಯದಿಂದ ಖರ್ಚು ನಿಭಾವಣೆ. ಪಟ್ಟನಂತಿಟ್ಟ, ಆಲಪ್ಪುಳ, ಎರ್ನಾಕುಳಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮೂಲಕ ಸಾಗಿ ಬಂದ ಜಾಥಾ ವಾಣಿನಗರದಲ್ಲಿ ಸಮಾಪನ.

ಕಣ್ಣೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಇವರೊಡನೆ 'ನೀವು ಕಣ್ಣೂರಿನ ಎಲ್ಲಾ ಶಾಲೆಗಳಿಗೂ ಹೋಗಿ ಜಾಗೃತಿ ಮೂಡಿಸುತ್ತೀರಾ?' ಎಂದು ಕೇಳಿದರಂತೆ. 'ಬಹುಶಃ ಆಗುವುದಿಲ್ಲ' ಎಂದು ಉತ್ತರಿಸಿದಾಗ 'ಪರವಾಗಿಲ್ಲ, ಆ ಕೆಲಸ ನಾವು ಮಾಡ್ತೀವಿ' ಎಂದರಂತೆ ಆ ಎಳೆಯರು!
ಕೊಲ್ಲಂನವರಾದ ಅಮೇಶ್ ಇಲೆಕ್ಟ್ರಾನಿಕ್ ವಿಭಾಗದಲ್ಲಿ ಡಿಪ್ಲೊಮಾ ಪಡೆದ ಹವ್ಯಾಸಿ ಛಾಯಾಚಿತ್ರಕಾರ. ಶಮ್ನಾದ್ ದ್ವಿತೀಯ ವರ್ಷದ ಫಿಸಿಕ್ಸ್ ವಿದ್ಯಾರ್ಥಿ. ಅಲ್ಪಸ್ವಲ್ಪ ಹಣ ಕೂಡಿಸಿ ಎರಡು ಹಳೆಯ ಸೈಕಲನ್ನು ಜಾಥಾಕ್ಕೆ ಬಳಸಿದ ಇವರು, ವಾಣಿನಗರದಲ್ಲಿ ಜಾಥಾ ಕೊನೆಗಳಿಸಿದರು. ಬಳಿಕ ಸೈಕಲನ್ನು ವಾಣಿನಗರ ಮತ್ತು ಸ್ವರ್ಗದ ಎರಡು ಶಾಲೆಗಳಿಗೆ ಕೊಟ್ಟರು. ಜಾಥಾದ ಮಧ್ಯೆ ಸಂಗ್ರಹವಾದ ಹಣದಲ್ಲಿ ಖರ್ಚಾಗಿ ಮಿಕ್ಕಿದ ಮೊತ್ತವನ್ನು ಎಂಡೋ ಸಂತ್ರಸ್ತರಿಗೆ
ನೀಡಿದ್ದಾರೆ.

ಪಾಲಕ್ಕಾಡ್ನ ಮುದಲಮ್ಮಾಡದಲ್ಲಿ ಸುಮಾರು ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದ ಮಾವಿನ ತೋಟಕ್ಕೆ ಎಂಡೋಸಲ್ಫ್ಪಾನ್ ಸಿಂಪಡಿಸಿದ ಪರಿಣಾಮವಾಗಿ ಅನೇಕ ಮಂದಿ ಸಂತ್ರಸ್ತರಾಗಿದ್ದಾರೆ. ಈ ದುರಂತವನ್ನು ಪ್ರಪಂಚಕ್ಕೆ ತೆರೆದಿಡುವ ಉದ್ದೇಶದಿಂದ ಸಾಕ್ಷ್ಯಚಿತ್ರವೊಂದರ ತಯಾರಿಯಲ್ಲಿದ್ದಾರೆ.

'ಕೀಟನಾಶಕ ಕಂಪೆನಿಗಳು ಎಂಡೋ ದುರಂತವನ್ನು ಮರೆಮಾಚುತ್ತಿರುವ ಹುನ್ನಾರಗಳ ಮಧ್ಯೆ ಈ ಯುವಕರ ಸಾಹಸ ಯುವಜನತೆಗೆ ಸ್ಪೂರ್ತಿ' ಎಂದು ಪ್ರಶಂಸಿದ್ದಾರೆ ಹಿರಿಯ ಪತ್ರಕರ್ತ 'ಶ್ರೀ' ಪಡ್ರೆ ಮತ್ತು ಡಾ.ವೈ.ಎಸ್.ಮೋಹನ್ ಕುಮಾರ್.

Monday, February 14, 2011

ಆತ್ಮವಿಶ್ವಾಸ ತುಂಬುವ 'ಕೃಷಿಮೇಳ'



ಒಂದು ಕಾಲಘಟ್ಟದ ಕೃಷಿಯ ಬದುಕನ್ನು ನೆನಪಿಸೋಣ. ಅಡಿಕೆಯ ದರ ಮೂರಂಕೆ ಏರಿತು. ಗದ್ದೆಗಳ ಮೇಲೆ ತೋಟ ಎದ್ದುವು. ದುಪ್ಪಟ್ಟು ವಿಸ್ತಾರವಾದುವು. ಊರಲ್ಲೆಲ್ಲಾ ಹೊಸ ಹೊಸ ಮಹೇಂದ್ರ ಜೀಪುಗಳು ಓಡಾಡುತ್ತಿದ್ದಾಗ ಕಿಟಕಿಯಿಂದ ಇಣುಕಿ ಬೆರಗಾಗುತ್ತಿದ್ದ ದಿನಗಳು ನೆನಪಾಗುತ್ತವೆ.

ಎರಡಂಕಿಗೆ ದರ ಇಳಿದಾಗ 'ಕೃಷಿಯೇ ಪ್ರಯೋಜನವಿಲ್ಲ' ಎಂದೆವು. 'ಈ ದರದಲ್ಲಿ ಬದುಕಲು ಸಾಧ್ಯವಿಲ್ಲ' ಎಂಬ ವಿಷಾದ. ಸಮಾರಂಭವಿರಲಿ, ಶುಭ ಕಾರ್ಯಕ್ರಮವಿರಲಿ - 'ಪ್ರಯೋಜನವಿಲ್ಲ. ಇನ್ನು ಕೃಷಿ ಸಾಧ್ಯವಿಲ್ಲ' ಎಂಬ ಸಂಭಾಷಣೆ. 'ಓ..ಇಂಥವರು ಎಲ್ಲವನ್ನೂ ಮಾರಿ ರಾಜಧಾನಿಯ ಬಸ್ ಹತ್ತಿ ಆಯಿತಂತೆ'..ಇಂತಹ ಸುದ್ದಿಯನ್ನು ಹೊತ್ತು ತರುವ ಒಂದಷ್ಟು ಸುದ್ದಿವಾಹಕರು.
ಸರಿ, ವೆನಿಲ್ಲಾ ತೋಟಕ್ಕೆ ನುಗ್ಗಿತು. ನಿಜಾರ್ಥದಲ್ಲಿ 'ಚಿನ್ನದ ಬೆಳೆ'! 'ಬಾಳು ಬಂಗಾರ' ಎಂಬ ಕ್ಲೀಷೆಯ ಶೀರ್ಷಿಕೆ ಸತ್ಯವಾದ ಕಾಲ. ಬಳ್ಳಿ, ಬೀನ್ಸ್, ಒಣಬೀನ್ಸ್.. ಹೀಗೆ ಮೊಗೆಮೊಗೆದು ಕಾಂಚಾಣವನ್ನು ಮನೆತುಂಬಿಸಿಕೊಂಡೆವು. ವೆನಿಲ್ಲಾ ಕೃಷಿಯೇ ವೈಭವ ಪಡೆಯಿತು. ಬದುಕಿನ ಸ್ಟೈಲ್ ವೆನಿಲ್ಲಾದ ದರದ ಮೇಲೆ ನಿಶ್ಚಯವಾಗತೊಡಗಿತು. ಆಗಲೇ ಅಡಿಕೆಯ ದರ ಕೈಕೊಟ್ಟ ಪರಿಣಾಮದಿಂದ ಒಂದಷ್ಟು ಹೈರಾಣವಾಗಿದ್ದ ಕೃಷಿಕ ಕುಟುಂಬವನ್ನು ವೆನಿಲ್ಲಾ ಆಧರಿಸಿತು. ಕೋವಿ ಹಿಡಿದು ವೆನಿಲ್ಲಾ ತೋಟವನ್ನು ಕಾಯುವಷ್ಟರ ಮಟ್ಟಿಗೆ ದರ ಏರುತ್ತಾ ಹೋಯಿತು.

ಯಾಕೆ ಲಕ್ಷ್ಮಿ ಮುನಿದಳೋ ಏನೋ! ವೆನಿಲ್ಲಾ ದರವೂ ಕುಸಿಯಿತು. ಅದರ ಇಳುವರಿಯನ್ನು, ದರವನ್ನು ನಂಬಿದ್ದ ಕೃಷಿಕನಿಗೆ ಆಘಾತ. ವೆನಿಲ್ಲಾದ ಏರುದರವನ್ನು ಅವಲಂಬಿಸಿ ಕುಟುಂಬ ಬಜೆಟ್ ರೂಪಿಸಿಕೊಂಡ ಬದುಕಿಗೆ ಬ್ರೇಕ್! ನಾಲ್ಕಂಕೆಯಲ್ಲಿದ್ದ ದರ ಮೂರಂಕೆಗೆ ಇಳಿಯಿತು. ಈ ಮಧ್ಯೆ ಅಡಿಕೆ ಕೃಷಿಯತ್ತ ಅನಾದರ. ಇತ್ತ ವೆನಿಲ್ಲಾವೂ ಜಾರಿತು, ಅಡಿಕೆಯೂ ಕೊಟ್ಟಿತು. ನಂತರ ಹೇಗೋ ಚೇತರಿಸಿದರೆನ್ನಿ.

ಈಗ ಕಾರ್ಮಿಕ ಸಮಸ್ಯೆ. ಕೃಷಿ ಕೆಲಸಗಳಿಗೆ ಜನ ಸಿಗುತ್ತಿಲ್ಲ. ಕೃಷಿ ಸ್ಪೆಷಲಿಸ್ಟ್ಗಳೆಲ್ಲಾ ವೃದ್ಧರಾದರು. ಅವರ ಮಕ್ಕಳಿಗೆ ಕೃಷಿ ಬೇಡ. ನಗರದ ಮೋಹ. ಹೀಗಾಗಿ ಸ್ಪೆಷಲಿಸ್ಟ್ಗಳ ಮಕ್ಕಳು ಸ್ಪೆಷಲಿಸ್ಟ್ ಆಗಲಿಲ್ಲ! ಕೃಷಿ ಕೆಲಸಗಳಿಗೆ ಹಿಂಬೀಳಿಕೆ. ಒಂದು ವೇಳೆ ಕೆಲಸಕ್ಕೆ ಜನ ಸಿಕ್ಕರೂ ದುಬಾರಿ ಸಂಬಳ. ಹೀಗೆ ಒಂದಲ್ಲ ಒಂದು ಸಮಸ್ಯೆಗಳ ಮೂಟೆ ಕೃಷಿಕನ ತಲೆಯಿಂದ ಇಳಿಯುವುದೇ ಇಲ್ಲ. ನಾಲ್ಕು ಮಂದಿ ಜತೆ ಸೇರಿದಾಗಲೆಲ್ಲ 'ಒತ್ತಡ ಬದುಕಿನ' ಪೋಸ್ಟ್ಮಾರ್ಟಂ!
ಕೇವಲ ಕೃಷಿ ಮಾತ್ರವಲ್ಲ, ದೇಶಾದ್ಯಂತ ಬೇರೆ ಬೇರೆ ಕ್ಷೇತ್ರಗಳಲ್ಲಿ ಇಂತಹ 'ಒತ್ತಡ'ದ ಬದುಕನ್ನು ಕಾಣಬಹುದು. 'ಬಂದುದನ್ನು ಬಂದ ಹಾಗೆ ಸ್ವೀಕರಿಸಬೇಕು' ಎನ್ನುವುದು ಒಂದು. 'ಕೊರಗುತ್ತಾ ಕೂರುವುದು, ನೆಗೆಟಿವ್ ಮಾತನಾಡುತ್ತಾ ಇರುವುದು' ಇನ್ನೊಂದು.
ಒತ್ತಡಗಳ ಮಧ್ಯೆ ಇದ್ದುದರಲ್ಲಿ ಮುಗುಳ್ನಗು ಮೂಡಿಸುವ ಕೃಷಿಕರೂ ಇಲ್ವಾ. ಅವರಲ್ಲೆಂದೂ ಋಣಾತ್ಮಕವಾದ ಮಾತುಕತೆ, ಚಿಂತನೆಗಳು ಬರುವುದೇ ಇಲ್ಲ. ಬಂದರೂ ಅದು ಮೌನ. 'ಹಾಗೆ ಮಾತನಾಡಿ ಏನೂ ಪ್ರಯೋಜನ? ಪರ್ಯಾಯ ದಾರಿಗಳನ್ನು ನಾವೇ ಕಂಡುಕೊಳ್ಳಬೇಕು' ಎನ್ನುತ್ತಾರೆ ಕೃಷಿಕ ಎಡ್ವರ್ಡ್ ರೆಬೆಲ್ಲೋ.

'ಬೋರ್ಡೋ ಸಿಂಪಡಿಸಲು ಕೆಲಸದವರು ಬರುತ್ತೇನೆಂದು ಹೇಳಿದ್ರು. ಹೇಳಿದ ಸಮಯಕ್ಕೆ ಬರಲೇ ಇಲ್ಲ. ಎಷ್ಟು ದಿನ ಕಾಯುವುದು? ಅವಳು (ಪತ್ನಿ) ಪಂಪು ನಿರ್ವಹಿಸಿದರೆ, ನಾನು ಗೊತ್ತಿದ್ದೋ-ಗೊತ್ತಿಲ್ಲದೆಯೋ ಬೋರ್ಡೋ ಸಿಂಪಡಿಸಿದೆ. ಕ್ರಮೇಣ ರೂಢಿಯಾಯಿತು' ಪತ್ರಕರ್ತ ರಮೇಶ್ ಕೈಂತಜೆ ಹೇಳಿದ ನೆನಪು. ಇರಲಿ. ಇಂತಹ ಒತ್ತಡದ ಸಮಯದಲ್ಲಿ ಮಾನಸಿಕವಾಗಿ 'ಟಾನಿಕ್' ಸಿಕ್ಕರೆ ಚೇತರಿಸಲು ಸಹಕಾರಿ. ಅದ್ಯಾವ ಟಾನಿಕ್?
ಕನ್ನಾಡಿನಲ್ಲಿ ಸರಕಾರಿ ಆಶ್ರಿತವಾಗಿ ಬೆಂಗಳೂರು ಮತ್ತು ಧಾರವಾಡ ಕೃಷಿ ವಿವಿ ವತಿಯಿಂದ ಕೃಷಿ ಮೇಳ ನಡೆಯುತ್ತಿದೆ. ಆದರೆ ಖಾಸಗಿಯಾಗಿ ಜನರ ಸಹಭಾಗಿತ್ವದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ಕೃಷಿ ಮೇಳ' ಈ ಎರಡೂ ಮೇಳಗಳನ್ನು ಮೀರಿಸುತ್ತದೆ. ಉಡುಪಿ ಜಿಲ್ಲೆಯ ಕಾರ್ಕಳ ಸನಿಹದ ಬಜಗೋಳಿಯಲ್ಲಿ ಫೆಬ್ರವರಿ 4, 5, ಮತ್ತು 6, 2011ರಂದು 31ನೇ 'ಕೃಷಿ ಮೇಳ' ನಡೆದಿತ್ತು.
'ಕೃಷಿ ಮೇಳವೆಂಬುದು ಕೃಷಿಹಬ್ಬದ ವಾತಾವರಣವನ್ನು ಮೂಡಿಸುತ್ತದೆ. ರೈತರಲ್ಲಿ ಆತ್ಮವಿಶ್ವಾಸವನ್ನು ತುಂಬಿಸಲು ಕೃಷಿಮೇಳಗಳ ಕೊಡುಗೆ ದೊಡ್ಡದು' - ಮೇಳದ ಗೋಷ್ಠಿಯೊಂದರ ಮೂಡಿಬಂದ ಅಭಿಪ್ರಾಯ. ಹೌದು. ಕೃಷಿ ರಂಗದ ಒತ್ತಡಕ್ಕೆ ಕಾರಣ, ಆತ್ಮವಿಶ್ವಾಸದ ಕೊರತೆ. ಅದನ್ನು ಮತ್ತೊಮ್ಮೆ ತುಂಬಿಸಲು ನೆರವಾಗುತ್ತದೆ - ಕೃಷಿಮೇಳಗಳು.
ಕೃಷಿ ಜೀವನ ನಮ್ಮಲ್ಲಿ ಪಾರಂಪರಿಕವಾದುದು. ಅದರೊಂದಿಗೆ ಭಾವನಾತ್ಮಕ ಸಂಬಂಧವೂ ಇದೆ, ಇತ್ತು. ಆದರೆ ಕಾಲದ ಆರ್ಭಟ ಅವನ್ನೆಲ್ಲಾ ನುಂಗಿ ನೊಣೆದಿದೆ. ಅದನ್ನು ಮತ್ತೊಮ್ಮೆ ಹಳಿಗೆ ತರುವ ಕೆಲಸವಾಗಬೇಕು.

'ಸರಿ, ಕೃಷಿಮೇಳಗಳಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವೇ?' ಮಾತಿನ ಮಧ್ಯೆ ಎಷ್ಟೋ ಸಲ ಇಂತಹ ಪ್ರಶ್ನೆಗಳನ್ನು ಆಲಿಸಿದ್ದೆ. ಫಕ್ಕನೆ ನೋಡಿದಾಗ 'ಹೌದಲ್ಲ' ಅಂತ ಅನ್ನಿಸಿದರೂ ತಪ್ಪಲ್ಲ.
ಇದಕ್ಕೆ ಉತ್ತರ - ಬಜಗೋಳಿ ಕೃಷಿ ಮೇಳದಲ್ಲಿ ಪರಮ ಪೂಜ್ಯ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾತುಗಳು - 'ಕೃಷಿಕರಲ್ಲಿ ಸ್ವಾಭಿಮಾನ ಮೂಡಿಸುವುದು ಮತ್ತು ಮಾಹಿತಿ ನೀಡುವುದು ಕೃಷಿ ಮೇಳದ ಉದ್ದೇಶ. ಕೃಷಿಕರು ಪ್ರಗತಿಯ ಪಾಲುದಾರರಾಗಬೇಕು. ಕೃಷಿಯಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸುವಂತಾದರೆ ರೈತನೇ ಕೇಂದ್ರ ಬಿಂದು. ಭೂಮಿಯೇ ಘಟಕ.'

'ಗ್ರಾಮಾಭಿವೃದ್ಧಿ ಯೋಜನೆಯು ಇಂದು ಕೃಷಿಕರ ಬಾಗಿಲು ತಟ್ಟಿದೆ. ಹಳ್ಳಿಗಳಲ್ಲಿನ ಯುವಕ, ಯುವತಿಯರು ನಗರ ಜೀವನಕ್ಕೆ ಹಾತೊರೆಯುವ ಪ್ರವೃತ್ತಿ ಕಡಿಮೆಯಾಗಿದೆ. ಸ್ವಾವಲಂಬಿ ಬದುಕಿಗೆ ಹತ್ತಿರವಾಗುತ್ತಿದ್ದಾರೆ. ಲಾಭದಾಯಕ ಕೃಷಿ ಮಾಡಲು ಸಾಧ್ಯವಿದೆ ಎಂಬುದನ್ನು ಯೋಜನೆ ತೋರಿಸಿಕೊಟ್ಟಿದೆ.'

'ಗುರುಹಿರಿಯ ಬಗ್ಗೆ ಶೃದ್ಧೆ ಇರಬೇಕು. ದೇವರಲ್ಲಿ ಭಕ್ತಿ ಇರಬೇಕು. ಜೀವನದಲ್ಲಿ ನಂಬಿಕೆ-ವಿಶ್ವಾಸವಿರಬೇಕು' - ನಮ್ಮ ಹಿರಿಯರು ನೀಡಿದ ಉಪದೇಶ. 'ಇವಕ್ಕೆಲ್ಲಾ ಅರ್ಥವಿಲ್ಲ' ಎನ್ನುತ್ತ 'ಬುದ್ದಿವಂತರೆಂದು ಹೇಳಿಕೊಳ್ಳುವ' ನಾವು ಬದಿಗೆ ತಳ್ಳಿದ್ದೇವೆ. ಗ್ರಾಮಾಭಿವೃದ್ಧಿ ಯೋಜನೆಯು 'ಶೃದ್ಧೆ, ಭಕ್ತಿ, ನಂಬುಗೆ ಮತ್ತು ವಿಶ್ವಾಸ'ವನ್ನು ಪುನರ್ರೂಪಿಸುವ ಕೆಲಸ ಮಾಡುತ್ತಿದೆ.
ಇದು ಬದುಕಿನ ವಿಚಾರ. ಇದನ್ನೇ ಕೃಷಿಗೆ ಸಮೀಕರಿಸಿದರೆ - ಕೃಷಿಯಲ್ಲಿ ಶೃದ್ದೆ, ದೈವದಲ್ಲಿ ಭಕ್ತಿ, ಪರಸ್ಪರರಲ್ಲಿ ನಂಬುಗೆ ಮತ್ತು ಕೈಗೊಂಡ ಕಾರ್ಯದಲ್ಲಿ ವಿಶ್ವಾಸ.

Sunday, February 6, 2011

ಕೃಷಿಮೇಳ ಬಜಗೋಳಿ








ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಧರ್ಮಸ್ಥಳ ಇದರ 31ನೇ ಕೃಷಿ ಮೇಳವು ಉಡುಪಿ ಜಿಲ್ಲೆಯ ಬಜಗೋಳಿಯಲ್ಲಿ ಫೆ.4, 5 ಮತ್ತು 6ರಂದು ಜರುಗಿತು. ಪೂಜ್ಯ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆ. ಲಕ್ಷಾಂತರ ರೈತರ ಪಾಲುಗಾರಿಕೆ. ಚೊಕ್ಕ, ಶಿಸ್ತಿನ ವ್ಯವಸ್ಥೆ. ಸಮಾರೋಪ ಸಮಾರಂಭಕ್ಕೆ 'ನಮ್ಮ' ಮುಖ್ಯಮಂತ್ರಿ ಯಡ್ಯೂರಪ್ಪನವರ ಉಪಸ್ಥಿತಿ.

ರಾಷ್ಟ್ರೀಯ ಆಹಾರ ಭದ್ರತೆಗೆ ದಾರಿ - ಭತ್ತ ಬೇಸಾಯದ ಶ್ರೀ ಪದ್ಧತಿ, ಗ್ರಾಮಾಭಿವೃದ್ಧಿ ಯೋಜನೆಯ ಯಶಸ್ವೀ ಮಾದರಿಗಳು, ಶ್ರೀಮತಿ ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮಹಿಳಾ ವಿಚಾರಗೋಷ್ಠಿ, ಸಾವಯವ ಕೃಷಿ ಮತ್ತು ಲಾಭದಾಯಕ ಹೈನುಗಾರಿಕೆ, ತೋಟಗಾರಿಕೆಯಲ್ಲಿ ಮಿಶ್ರ ಬೆಳೆ ಪದ್ಧತಿ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಿಶನ್, ಸರಕಾರಿ ಅಧಿಕಾರಿಗಳೊಂದಿಗೆ ಸಂವಾದ, ಕೃಷಿ ಮತ್ತು ಮಾಧ್ಯಮ, ಘನತ್ಯಾಜ್ಯ ನಿರ್ವಹಣೆ ನಮ್ಮೆಲ್ಲರ ಹೊಣೆ, ಕೃಷಿ ಮತ್ತು ಯುವಜನತೆ:ಆಧುನಿಕ ಕೃಷಿಗೆ ಶಾಪವೇ? - ವಿಚಾರಗಳ ಕುರಿತು ಮೂರೂ ದಿನಗಳಲ್ಲಿ ಗೋಷ್ಠಿಗಳು ನಡೆದುವು.

ನಾಲ್ಕುನೂರಕ್ಕೂ ಮಿಕ್ಕಿ ಮಳಿಗೆಗಳಿದ್ದುವು. ಸಭಾಮಂಟಪದ ಸುತ್ತ ಅಡಿಕೆಮನೆ, ತರಕಾರಿಮನೆ, ತರಕಾರಿಗಳ ಪ್ರತಿಕೃತಿ, ಕುಲುಮೆ ಮನೆ, ಭತ್ತಕುಟ್ಟುವ ಕುಟೀರ, ನಾರಿನ ಹಗ್ಗದಿಂದ ರೂಪಿಸಿದ ಕೋಟಿಚೆನ್ನಯರ ಮತ್ತು ಪರಶುರಾಮ ಮೂರ್ತಿಗಳು, ಆಲೆಮನೆ, ಜಾನುವಾರು ಪ್ರದರ್ಶನ, ಕುಕ್ಕುಟ ಪ್ರದರ್ಶನ ಹೆಚ್ಚು ಗಮನ ಸೆಳೆಯಿತು.