Thursday, May 10, 2012

ಕಾಡುಹಣ್ಣುಗಳ ಕಾಡುವ ನೆನಪು



ಅಳಿಕೆ-ಮುಳಿಯದಲ್ಲಿ ಈಚೆಗೆ 'ಹಣ್ಣು ತನ್ನಿ, ತಿನ್ನೋಣ ಬನ್ನಿ' ಎಂಬ ಹಲಸಿನ ತಳಿ ಆಯ್ಕೆ ಪ್ರಕ್ರಿಯೆ ಸಮಾರಂಭ. ಹದಿನೈದಕ್ಕೂ ಮಿಕ್ಕಿ ಅಪರೂಪದ್ದಾದ ಕಾಡು ಹಣ್ಣುಗಳ ಪ್ರದರ್ಶನ. ನಾಣಿಲು ಹಣ್ಣಗಳನ್ನು ಅಂಗೈಯಲ್ಲಿರಿಸಿಕೊಂಡ ಮುಚ್ಚಿರಪದವಿನ ಇಸ್ಮಾಯಿಲ್, 'ನಾಣಿಲು ಹಣ್ಣು, ಹೂ ತಿಂದರೆ ಕಣ್ಣಿನ ದೃಷ್ಟಿಗೆ ಒಳ್ಳೆಯದು, ನೇರಳೆ ಹಣ್ಣನ್ನು ತಿಂದರೆ ಹೊಟ್ಟೆಗೆ ಒಳ್ಳೆಯದು ಎಂದು ಹಿರಿಯರು ಸೂಚಿಸುತ್ತಿದ್ದರು. ಅದರಂತೆ ಬೆಳೆದು ಬಂದಿದ್ದೇವೆ,' ಬಾಲ್ಯವನ್ನು ಜ್ಞಾಪಿಸಿಕೊಂಡರು.

ಕಾಡು ಹಣ್ಣುಗಳ ಹಿಂದೆ ರೋಚಕವಾದ ಬಾಲ್ಯವಿದೆ, ಕಾಲದ ಕಥನವಿದೆ. ಕಾಡುವ ನೆನಪಿದೆ. ಸವಿದ ಒಬ್ಬೊಬ್ಬರಲ್ಲಿ ಒಂದೊಂದು ಅನುಭವಗಳು. ಒಂದು ಕಾಲಘಟ್ಟದಲ್ಲಿ ಮಾವು, ಹಲಸು ಬಿಟ್ಟರೆ ಮಿಕ್ಕಂತೆ ನಾಲಗೆಯ ರುಚಿಗಳನ್ನು ಕಾಡು ಹಣ್ಣುಗಳು ನೀಗಿಸುತ್ತಿದ್ದುವು. ವಿಷರಹಿತವಾದ, ನೈಸರ್ಗಿಕವಾದ ಹಣ್ಣುಗಳು ಆರೋಗ್ಯಕ್ಕೂ ದೊಡ್ಡ ಕಾಣ್ಕೆ ನೀಡಿತ್ತು.

ಇಸ್ಮಾಯಿಲ್ ಅನುಭವ ಇದೆಯಲ್ಲಾ, ಹಣ್ಣುಗಳನ್ನು ತಿಂದು ಬಾಲ್ಯ ಕಳೆದಿದ್ದ ಬಹುತೇಕ ಎಲ್ಲರದ್ದೂ ಇದೇ ಅನುಭವ. ಇದಕ್ಕೆಲ್ಲಾ ಲಿಖಿತವಾದ ವೈಜ್ಞಾನಿಕ ದಾಖಲೆಗಳಿಲ್ಲ. ಜೀವಿತವೇ ದಾಖಲೆ. ಶಾಲಾರಂಭದಿಂದ ಶೈಕ್ಷಣಿಕ ಅವಧಿ ಮುಗಿಯುವ ತನಕ ಕಾಡು ಹಣ್ಣುಗಳ ಅರಸುವಿಕೆ ಮತ್ತು ಸೇವನೆ ಪಠ್ಯಕ್ಕಂಟಿಕೊಂಡೇ ಸಾಗುವ ಬದುಕು. ಜೂನ್ ತಿಂಗಳಲ್ಲಿ ಕುಂಟಾಲ ಹಣ್ಣಿನ (ಕುಂಟು ನೇರಳೆ) ಋತು. ಮುಂದಿನ ಮೇಯಲ್ಲಿ 'ನಾಯಿ ನೇರಳೆ' ಹಣ್ಣು. ಇವುಗಳ ಮಧ್ಯದ ಋತುಗಳಲ್ಲಿ ವಿವಿಧ ವೈವಿಧ್ಯ ಹಣ್ಣುಗಳು.

ಮುಳ್ಳು ಅಂಕೋಲೆ ಹಣ್ಣು, ಮುಳ್ಳಿನೆಡೆಯಿಂದ ಇಣುಕುವ 'ಬೆಲ್ಲಮುಳ್ಳು', ಹುಳಿಮಜ್ಜಿಗೆ ಕಾಯಿ, ಕೇಪುಳ ಹಣ್ಣು, ಕಡು ಕೇಸರಿ ವರ್ಣದ 'ಮಣ್ಣಮಡಿಕೆ ಹಣ್ಣು', ಜೇಡರ ಬಲೆಯ ಒಳಗಿರುವಂತೆ ಕಾಣುವ 'ಜೇಡರ ಹಣ್ಣು', ನೆಲ್ಲಿಕಾಯಿ, ಹುಣಸೆ, ಅಂಬಟೆ, ನಾಣಿಲು, ಚೂರಿ ಮುಳ್ಳಿನ ಹಣ್ಣು, ಅಬ್ಳುಕ, ಪೇರಳೆ, ಹೆಬ್ಬಲಸು, ಪುನರ್ಪುಳಿ, ರಂಜೆ, ಕೊಟ್ಟೆಮುಳ್ಳು, ಶಾಂತಿಕಾಯಿ..ಗಳ ಸಿಹಿ-ಹುಳಿ ರುಚಿಗಳನ್ನು ಸವಿದ ನಾಲಗೆಗಳ ಭಾಗ್ಯ. ಮಲೆನಾಡಿಗರಿಗೆ ಮೊಗೆದು ತಿನ್ನುವಷ್ಟು ಹಣ್ಣುಗಳ ಸಂಪತ್ತಿದೆ.
ಹಣ್ಣುಗಳ ಬೇಟೆ
ಹುಣಸೆ ಹಣ್ಣಿನ ಬೀಜವನ್ನು ಹುರಿದು (ತುಳುವಿನಲ್ಲಿ 'ಪುಳಿಂಕೊಟೆ') ಕಂಪಾಸ್ಬಾಕ್ಸ್ನಲ್ಲಿ ಕಾಪಿಟ್ಟುಕೊಳ್ಳದ ವಿದ್ಯಾರ್ಥಿಗಳೇ ಇಲ್ಲ. ಕ್ಲಾಸ್ ಆಗುತ್ತಿರುವಾಗಲೇ ಬಾಯಿಯೊಳಗೆ ಮಗುಮ್ಮನೆ ಕುಳಿತ ಹುಣಸೆ ಬೀಜ ನಿಶ್ಶಬ್ದದಲ್ಲಿ 'ಕುಟುಂ' ಶಬ್ದ ಮಾಡುತ್ತದೆ. ಅಧ್ಯಾಪಕರಿಂದ ತಲೆಗೆ 'ಕುಟ್ಟಿ' ಹೊಡೆಸಿಕೊಂಡು, ನಗೆಪಾಟಲಿಗೆ ಈಡಾದ ಶಾಲಾ ದಿನಗಳು ಮೆದುಳಿನ ಮೆಮೊರಿಯಲ್ಲಿ ಸೇವ್ ಆಗಿರುತ್ತದೆ. ಪುಸ್ತಕ, ಸ್ಲೇಟಿನ ಮಧ್ಯೆ ಅಪ್ಪಚ್ಚಿಯಾದ ಹಣ್ಣುಗಳ ರಸಗಳಿಂದಾಗಿ ಚೀಲದೊಂದಿಗೆ ಪುಸ್ತಕವೂ ಒದ್ದೆ. ಸಹಪಾಠಿಗಳಿಂದ, ಹೆತ್ತವರಿಂದ ನಿತ್ಯ ಬಯ್ಗಳು.
ರಸ್ತೆಗಳು ಇಲ್ಲ. ಶಾಲೆ ಒಂದೆಡೆ, ಮನೆ ಇನ್ನೊಂದೆಡೆ. ಮೈಲುಗಟ್ಟಲೆ ಕಾಡು ದಾರಿಯ ಕಾಲ್ನಡಿಗೆ. ಹತ್ತು ಗಂಟೆಗೆ ಶಾಲಾರಂಭ. ಎಂಟು ಗಂಟೆಗೆ ಬುತ್ತಿ ಕಟ್ಟಿಸಿಕೊಂಡು ಹೆಗಲಿಗೆ ಚೀಲ ಸಿಕ್ಕಿಸಿ ಹೊರಟರೆ ಸಾಕು, ದಾರಿಯುದ್ದಕ್ಕೂ ಕಾಡು ಹಣ್ಣುಗಳ ಬೇಟೆ. ಕುಂಟಾಲ ಮತ್ತು ನೇರಳೆ ಹೊರತು ಪಡಿಸಿ, ಮಿಕ್ಕೆಲ್ಲಾ ಹಣ್ಣುಗಳನ್ನು ತಿಂದ ಸುಳಿವು ಕೂಡಾ ಅಧ್ಯಾಪಕರಿಗೆ ಸಿಗದು.
ಸಂಜೆ ನಾಲ್ಕು ಗಂಟೆಗೆ ಶಾಲೆ ಬಿಟ್ಟರೆ, ಮನೆ ತಲಪುವಾಗ ಆರು ದಾಟಿರುತ್ತದೆ. ಅಪ್ಪಾಮ್ಮನಲ್ಲಿ ಸುಳ್ಳು ಹೇಳಿದರೂ ಅಂಗಿಯಲ್ಲಿರುವ 'ಬೇಟೆಯ ಕುರುಹು' ನಿಜಬಣ್ಣ ಬಯಲು ಮಾಡುತ್ತದೆ. ಸಾಹಸಕ್ಕೆ ಸಾಕ್ಷಿಯಾಗುತ್ತದೆ. ಸೈಕಲ್ ಕಲಿಯಲು ಇನ್ನೊಬ್ಬರ ಅವಲಂಬನೆ ಬೇಕು. ಆದರೆ ಮರಹತ್ತಲು? ಬೇಡ, ಹಣ್ಣಿನ ನೆವದಿಂದ ಮರಗಳೇ ಮರ ಹತ್ತಿಸುವ ಟ್ರೈನಿಂಗ್ ಕೊಡುತ್ತವೆ.
ಶರೀರಕ್ಕೆ ಬೇಕಾದ ವಿಟಮಿನ್ಗಳು ಹಣ್ಣಿನ ಸಹವಾಸದಲ್ಲಿ ಲಭ್ಯ. 'ಎ', 'ಬಿ'.. ಮಿಟಮಿನ್ ಅಂತ ಹೆಸರಿಸಲು ಬಾರದಿರಬಹುದು. ಆದರೆ ಸಣ್ಣಪುಟ್ಟ ದೇಹದ ಆರೋಗ್ಯದ ವ್ಯತ್ಯಾಸಗಳಿಗೆ ಇಂತಹುದೇ ಹಣ್ಣು ತಿನ್ನಬೇಕು ಎಂಬುದು ಹಿರಿಯರಿಗೆ ಗೊತ್ತಿತ್ತು. ಉದಾ: ಬಾಯಿಹುಣ್ಣು ಬಂದಾಗ 'ಕೊಟ್ಟೆಮುಳ್ಳು ಹಣ್ಣು' ತಿನ್ನಲೇ ಬೇಕು ಅಂತ ಅಮ್ಮ ಹೇಳುತ್ತಿದ್ದುರು.
ಬೆಳಿಗ್ಗೆ ಶಾಲೆ ತಲುಪುವಾಗ ಹೊಟ್ಟೆ ತುಂಬಿರುತ್ತದೆ. ಮಧ್ಯಾಹ್ನದ ಬುತ್ತಿ ಮರಳಿ ಮನೆಗೆ ಬರುತ್ತದೆ. ಸಂಜೆ ಪುನಃ ಹಣ್ಣುಗಳ ಬೇಟೆ, ಸೇವನೆ. ಮಕ್ಕಳೊಳಗೆ ಕೊಡುಕೊಳ್ಳುವ ವ್ಯವಹಾರವನ್ನು ಹಣ್ಣುಗಳು ಕಲಿಸುತ್ತವೆ! ಒಂದು ತುಂಡು ಬಳಪದ ಕಡ್ಡಿ ನೀಡಿದರೆ, ಪ್ರತಿಫಲವಾಗಿ ಐದು ಹುರಿದ ಹುಣಸೆ ಬೀಜ ಅಥವಾ ಅಬ್ಳುಕದ ಹಣ್ಣು.. ಹೀಗೆ.
ಕಾಣದಂತೆ ಮಾಯವಾಯಿತು
ಹಳ್ಳಿಗೆ ರಸ್ತೆಗಳು ಬಂದಿವೆ. ಕಾಡು ದಾರಿ ಮಾಯವಾಗಿದೆ. ಸೇಬು, ದ್ರಾಕ್ಷಿ, ದಾಳಿಂಬೆಗಳು.. ಹಳ್ಳಿಯ ಚಹದಂಗಡಿಯಲ್ಲೂ ಮಾರಾಟಕ್ಕೆ ಸಿಗುತ್ತದೆ. ರಸ್ತೆ ನಿರ್ಮಾಣಕ್ಕೆ ಕಾಡುಗಳು ನಾಶವಾಗಿವೆ. ಹಣ್ಣುಗಳ ಸಹವಾಸದಲ್ಲಿ ಬದುಕಿದ ವಿದ್ಯಾರ್ಥಿಗಳು ಪ್ರೌಢರಾಗಿದ್ದು ಕೆಲವರು ನಗರ ಸೇರಿದ್ದಾರೆ. ಅವರಿಗೆ ಮದುವೆಯಾಗಿದೆ. ಅವರ ಮಕ್ಕಳನ್ನು ಅಳಿದುಳಿದ ಕಾಡು ಹಣ್ಣಿನ ಮರಗಳು ಕೈಬೀಸಿ ಕರೆಯುತ್ತಿವೆ, 'ಉತ್ಕೃಷ್ಟವಾದ ಹಣ್ಣುಗಳಿವೆ, ತಿನ್ನಿ' ಅಂತ ಕೂಗುತ್ತಿವೆ. ಹಣ ಕೊಟ್ಟರೆ ಸಾಕು, ಕಿಲೋಗಟ್ಟಲೆ ಕೊಳ್ಳಬಹುದಾದ ರಂಗುರಂಗಿನ ಹಣ್ಣುಗಳ ಮಧ್ಯೆ ಹಣ್ಣಿನ ಕೂಗು ಕೇಳಿಸುವುದಿಲ್ಲ.
ಈಗಂತೂ ರಬ್ಬರ್ ಕೃಷಿಯ ಧಾವಂತ. ಗುಡ್ಡಗಳು ನುಣುಪಾಗಿವೆ. ಇತರ ಮರಗಳೊಂದಿಗೆ ಹಣ್ಣು ನೀಡುವ ಮರಗಳೂ ನೆಲಕ್ಕೊರಗಿವೆ. ಇವುಗಳನ್ನೇ ತಿಂದು ಬದುಕುವ ಕಾಡು ಪ್ರಾಣಿಗಳು ನಾಡಿಗೆ ಬಂದಿವೆ. 'ಛೇ.. ಮಂಗಗಳು, ಹಂದಿಗಳು ಎಲ್ಲಾ ಹಾಳು ಮಾಡುತ್ತವಲ್ಲಾ..' ಅಂತ ಮರುಗುವ ನಮಗೆ ಕಾಡು ಕಡಿಯಲು ಅಧಿಕಾರವಿದೆ. ಒಂದು ಗಿಡವನ್ನಾದರೂ ನೆಟ್ಟು ಪೋಶಿಸಲು ಮನಸ್ಸು ಇದೆಯಾ?
ಒಂದು ಕಾಲಘಟ್ಟದಲ್ಲಿ ಅನಿವಾರ್ಯವೆಂದಿದ್ದ 'ಕಾಡು ಹಣ್ಣು'ಗಳ ಹಿಂದೆ ಬದುಕು ಕಟ್ಟುವ ಕಾಯಕವಿತ್ತು. ಈಗ ಅನಿವಾರ್ಯವಿಲ್ಲ. ಕಾರಣ, ಆಧುನಿಕವಾದ ಜೀವನ ಶೈಲಿ. ಆರೋಗ್ಯಕ್ಕೆ ಹಾಳು ಅಂತ ಗೊತ್ತಿದ್ದೂ ತಿನ್ನಬೇಕಾದ ಸ್ಥಿತಿ. ಜತೆಗೆ ಅಂತಸ್ತು ಕಾಪಾಡುವ ಭರ. ಪ್ರದರ್ಶನಗಳಲ್ಲಿ ಹಳ್ಳಿ ಹಣ್ಣುಗಳನ್ನು ಪ್ರದರ್ಶನಕ್ಕಿಟ್ಟರೆ ಅದರತ್ತ ತಿರಸ್ಕಾರ ಮನೋಭಾವದ ಮುಖಗಳ ಹತ್ತಿರದ ಪರಿಚಯವಿದೆ.
ಹಿಂದೆ ರಸ್ತೆಗಳಿಲ್ಲದ್ದರಿಂದ ಕಾಲ್ನಡಿಗೆ. ಈಗ ಹಾಗಲ್ಲ, ಒಂಭತ್ತು ಗಂಟೆಗೆ ಸರಿಯಾಗಿ ರಿಕ್ಷಾದ ಮಾಮ ಮನೆ ಮುಂದೆ ಹಾರ್ನ್ ಮಾಡುತ್ತಾನೆ. ಶೂ, ಟೈ, ಇಸ್ತ್ರಿ ಹಾಕಿದ ಅಂಗಿ, ಚೀಲದೊಂದಿಗೆ ರಿಕ್ಷಾದೊಳಗೆ ಬಿದ್ದರೆ ಆಯಿತು, ರೆಪ್ಪೆ ಮುಚ್ಚಿ ಬಿಡುವುದರೊಳಗೆ ಶಾಲಾ ಆವರಣದೊಳಗೆ ಹೆಜ್ಜೆಯಿಡಬಹುದು. ಇಂತಹ ವಿದ್ಯಾರ್ಥಿಗಳಿಗೆ ಸೇಬು, ದ್ರಾಕ್ಷಿಗಳ ಹೊರತಾದ ಬೇರೊಂದು ಪ್ರಪಂಚದ ಪರಿಚಯವಿರುವುದಿಲ್ಲ. ಮಗನಿಗೆ ಹೇಳಲು ಹಳ್ಳಿ ಮೂಲದ ಅಪ್ಪನಿಗೆ ಪುರುಸೊತ್ತಿಲ್ಲ. ಒಂದು ವೇಳೆ ಅಲ್ಲೋ ಇಲ್ಲೋ ಹಣ್ಣುಗಳು ಕಾಣಸಿಕ್ಕರೆ 'ಅದು ತಿನ್ನಲು ಆಗುತ್ತದೆ' ಎಂದು ಹೇಳುವವರಿಲ್ಲ.
ವಿವಿಧ ರಾಸಾಯನಿಕಗಳಿಂದ ಮಿಂದೆದ್ದು ನಗುನಗುತ್ತಾ ಕುಣಿಯುತ್ತಿರುವ ಹಣ್ಣುಗಳ 'ಗುಣಮಟ್ಟ'ವನ್ನೇ ಶ್ರೇಷ್ಠ ಎನ್ನುವ ಕಾಲಮಾನದಲ್ಲಿ ಬದುಕುತ್ತಿದ್ದೇವೆ. ಮಕ್ಕಳಿಗೆ ಕಾಡು ಹಣ್ಣುಗಳ ಕತೆಗಳನ್ನು ಅಪ್ಪ ಹೇಳಿದರೆ ಆಕಳಿಕೆ ಬರುತ್ತದೆ. ಕೈಯಲ್ಲಿರುವ ರಿಮೋಟ್ ಸದ್ದು ಮಾಡುತ್ತದೆ, ಮೊಬೈಲ್ನ ರಿಂಗ್ಟೋನ್ಗಳು ರಿಂಗಿಸುತ್ತವೆ! ಹುಡುಕಿ ತಂದ ಹಣ್ಣುಗಳನ್ನು ಮಕ್ಕಳ ಕೈಗಿತ್ತರೆ 'ಇಸ್ಸೀ' ಅನ್ನುತ್ತಾ ಎಸೆಯುವ ಮನಸ್ಸುಗಳನ್ನು ಬದಲಾದ ಜೀವನ ಶೈಲಿಯು ನುಂಗಿ ನೊಣೆದಿದೆ.
ಬೇಸಿಗೆ ರಜೆ ಬಂದಾಗ ನಗರದಲ್ಲಿ 'ಬದುಕು ಬದಲಾಯಿಸುವ' ತರಬೇತಿಗಳ ಜಾಹೀರಾತು ಫ್ಲೆಕ್ಸಿಗಳು ದಿಢೀರ್ ಕಾಣಸಿಗುತ್ತವೆ. ಶಿಬಿರಗಳು ಮೈಲಿಗೊಂದು ರೂಪುಗೊಳ್ಳುತ್ತವೆ. ಎಂದಾದರೂ ನಗರದ ಮಕ್ಕಳಿಗೆ ಹಳ್ಳಿಗಳನ್ನು ತೋರಿಸುವ ಕೆಲಸಗಳನ್ನು ಶಿಬಿರಗಳು ಮಾಡಿದ್ದಿವೆಯೇ? ಶಿರಸಿಯ ಪ್ರಕೃತಿ ಸಂಸ್ಥೆಯು ಎರಡು ವರುಷದ ಹಿಂದೆ ನಗರದ ಮಕ್ಕಳನ್ನು ಹಳ್ಳಿಗೆ ಕರೆದೊಯ್ದು; ಹಳ್ಳಿಯ ಬದುಕು, ಹಣ್ಣುಗಳು, ಸಸ್ಯಗಳ ಪರಿಚಯ, ಜೇನುಕುಟುಂಬ, ಈಜುಗಾರಿಕೆ, ಚಾರಣ.. ಹೀಗೆ ನೈಸರ್ಗಿಕ ಬದುಕನ್ನು ಕಟ್ಟಿಕೊಟ್ಟು ಯಶಸ್ಸಾಗಿದೆ. ಮಿಕ್ಕೆಲ್ಲಾ ಶಿಬಿರಗಳು ಯಾಕೆ 'ಮಸಿ ಚಿತ್ರ, ಮುಖವಾಡ'ಗಳ ಸುತ್ತ ಸುತ್ತುತ್ತಿರುತ್ತವೆ?
ಕಾಡುಗಳೇ ನಾಶವಾಗುತ್ತಿರುವಾಗ 'ಕಾಡುಹಣ್ಣು'ಗಳ ಸಂಭ್ರಮವೆಲ್ಲಿ? ಇದನ್ನು ಅನುಭವಿಸುವ ಮಕ್ಕಳೇ ಇಲ್ಲದಿರುವಾಗ ಮರಗಳಿಗೂ ಬದುಕು ಸಾಕಾಗಿದೆ! ಹಾಗಾಗಿಯೇ ನೋಡಿ, 'ನಾಡಿನ ಅಭಿವೃದ್ಧಿ'ಗಾಗಿ ತಮ್ಮ ಕೊರಳನ್ನು ಕೊಡಲಿಗೆ ಅರ್ಪಿಸುತ್ತಿವೆ! ಕಾಡುಗಳು ದೂರ ಸಾಗುತ್ತಿವೆ. ಅವು ದೂರ ಹೋದಷ್ಟೂ ಭವಿಷ್ಯದ ಸಂಕಷ್ಟದ ಸರಮಾಲೆಗೆ ಸಾಕ್ಷಿಗಳಾಗುತ್ತಿದ್ದೇವೆ.

Saturday, May 5, 2012

ಮಾವಿನ ಊಟ-ತಳಿ ಹುಡುಕಾಟ

ಈಗ ಕಾಡು ಮಾವಿನ ಋತು. ಕರಾವಳಿ, ಮಲೆನಾಡುಗಳ ಊಟದ ಬಟ್ಟಲಿಗೆ ಕಾಡು ಮಾವಿನ ಖಾದ್ಯ ಬೀಳದಿದ್ದರೆ ಊಟ ಪರಿಪೂರ್ಣವಾಗದು. ಒಂದು ಕಾಲಘಟ್ಟದಲ್ಲಿ ಹಲಸು ಮತ್ತು ಮಾವು ಬದುಕಿಗೆ ಆಸರೆಯಾಗಿತ್ತು. ಬರಬರುತ್ತಾ ಆಧುನಿಕ ಆಹಾರಗಳು ಪ್ರವೇಶವಾದುವು. ಪಾರಂಪರಿಕ ಆಹಾರಗಳು ನೇಪಥ್ಯಕ್ಕೆ ಸರಿದುವು. ಕಾಡು ನಾಶದಿಂದಾಗಿ ಕಾಡುಮಾವಿನ ಸಂತತಿ ಕ್ಷೀಣಿಸುತ್ತಾ ಬಂದುವು.

ಈ ಹಿನ್ನೆಲೆಯಲ್ಲಿ ಮಾವಿಗೆ ಮಾತು ಕೊಡುವ ಕಾರ್ಯಕ್ರಮವೊಂದು ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಉಬರು ರಾಜಗೋಪಾಲ ಭಟ್ಟರ ಮನೆಯಲ್ಲಿ 'ಮಾವಿನ ಊಟ-ತಳಿ ಹುಡುಕಾಟ' ಎಂಬ ವಿಶಿಷ್ಟ ಕಾರ್ಯಕ್ರಮವೊಂದು (ಮೇ 5) ಜರುಗಿತು. ಅಚ್ಚು ಹಾಕಿದ ಆಮಂತ್ರಣ ಪತ್ರವಿಲ್ಲ. ಪತ್ರಿಕೆಗಳಲ್ಲಿ ಜಾಹೀರಾತಿಲ್ಲ. ದೂರವಾಣಿ, ಬಾಯ್ಮಾತು.. ಹೀಗೆ ಆಗಮಿಸಿದ ಇನ್ನೂರೈವತ್ತು ಮಂದಿ ಮಾವು ಪ್ರಿಯರ ಉಪಸ್ಥಿತಿ ಸಮಾರಂಭದ ಯಶಸ್ಸಿನ ಕೀಲಿಕೈ. 'ಹಲಸು ಸ್ನೇಹಿ ಕೂಟ'ದ ಆಯೋಜನೆ.

ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್ ದೀಪಜ್ವಲಿಸುವ ಮೂಲಕ ಸಮಾರಂಭಕ್ಕೆ ಚಾಲನೆ. ವಾರಣಾಶಿ ಸಂಶೋಧನಾ ಪ್ರತಿಷ್ಠಾನದ ಡಾ.ಅಶ್ವಿನಿ ಕೃಷ್ಣಮೂರ್ತಿಯವರ ಅಧ್ಯಕ್ಷತೆ. ಪತ್ರಕರ್ತ ನಾ. ಕಾರಂತ ಪೆರಾಜೆಯವರ ಗೌ.ಸಂಪದಕತ್ವದಲ್ಲಿ ಹೊರತಂದಿರುವ ವಾರ್ತಾಪತ್ರವನ್ನು ಹಿರಿಯ ಕೃಷಿಕ ಡಾ.ಕೆ.ಎಸ್.ಕಾಮತ್ ಅನಾವರಣಗೊಳಿಸಿದರು.

ನಂತರ ಜರುಗಿದ ಮಾವಿನ ಮಾತುಕತೆಯಲ್ಲಿ ಡಾ. ಕೆ.ಎಸ್.ಕಾಮತ್, ಮಾಪಲತೋಟ ಸುಬ್ರಾಯ ಭಟ್, ಗೊರಗೋಡಿ ಶ್ಯಾಮ ಭಟ್ - ಮಾವಿನ ಅನುಭವಗಳನ್ನು ಪ್ರಸ್ತುತಪಡಿಸಿದರು. ಪ್ರೇಕ್ಷಕರಿಂದ ನಿರಂತರ ಪ್ರಶ್ನೆಗಳ ಮಾಲೆ. ಎಲ್ಲದಕ್ಕೂ ಅನುಭವಾಧಾರಿತವಾದ ಸಮರ್ಪಕ ಉತ್ತರ. ಕೃಷಿ ತಜ್ಞರಾದ ಗುರುರಾಜ ಬಾಳ್ತಿಲ್ಲಾಯ ಮತ್ತು ಕೃಷ್ಣ ಕೆದಿಲಾಯರಿಂದ ಮಾವಿನ ಕಸಿ ಕಟ್ಟುವ ಪ್ರಾತ್ಯಕ್ಷಿಕೆ. ಸರವು ಗಣಪತಿ ಭಟ್ಟರಿಂದ ಉಪ್ಪಿನಕಾಯಿ ತಯಾರಿಯಲ್ಲಿನ ವಿಚಾರಗಳ ಪ್ರಸ್ತುತಿ.

ತಳಿ ಸಂರಕ್ಷಕರಾದ ಡಾ.ಕೆ.ಎಸ್.ಕಾಮತ್ ಮತ್ತು ಮಾಪಲತೋಟ ಸುಬ್ರಾಯ ಭಟ್ಟರನ್ನು ಅಪರಾಹ್ನದ ಕಲಾಪದಲ್ಲಿ ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರು ಗೌರವಿಸಿದರು. ಕೆ.ಎಸ್.ಕಾಮತರ ಕುರಿತು ಕೃಷಿಕ ವಸಂತ ಕಜೆ ಮತ್ತು ಮಾಪಲತೋಟದವರ ಕುರಿತು ಜಿ.ಶ್ಯಾಮ ಭಟ್ ಅಭಿನಂದನಾ ನುಡಿಗಳನ್ನಾಡಿದರು. ಕೊನೆಯಲ್ಲಿ ಹಲಸು ಆಂದೋಳನದ ರೂವಾರಿ ಶ್ರೀ ಪಡ್ರೆಯವರಿಂದ ಪವರ್ ಪಾಯಿಂಟ್ ಮೂಲಕ 'ಶ್ರೀಲಂಕಾ ಪ್ರವಾಸ ಕಥನ'. ಶ್ರೀಲಂಕಾದ ಹಲಸಿನ ಮೌಲ್ಯವರ್ಧನೆಗಳ ಮಾಹಿತಿ.

ಬೈಂಕ್ರೋಡು ವೆಂಕಟಕೃಷ್ಣ ಮತ್ತು ಬೈಂಕ್ರೋಡು ಗಿರೀಶ್ ಸಾರಥ್ಯದಲ್ಲಿ ಹಲಸಿನ ತಳಿ ಆಯ್ಕೆ ಪ್ರಕ್ರಿಯೆ. ಮಿಡಿ ಮತ್ತು ಹಣ್ಣುಗಳ ವಿಭಾಗದಲ್ಲಿ ರುಚಿ ನೋಡಿ ತಳಿ ಆಯ್ಕೆ. ಆಯ್ದ ಮಾನದಂಡ.

ಆಯ್ಕೆಯಾದ ತಳಿಗಳು: ( ಆವರಣದಲ್ಲಿ ತಳಿಯ ಹೆಸರನ್ನು ಗಮನಿಸಿ) ಹಣ್ಣಿನ ವಿಭಾಗ: ಅನಿಲ್ ಕುಮಾರ್ ಐತನಡ್ಕ (ಜೀರಿಗೆ ತಳಿ), ಪಡಾರು ರಾಮಕೃಷ್ಣ ಶಾಸ್ತ್ರಿ (ಬರಿಮಾರುತೋಡು), ಕೇಶವ ಭಟ್ ಕಾಸರಗೋಡು (ಮಲಪ್ಪುರಂ 1), ಶಿರಂಕಲ್ಲು ಆರ್. ಎನ್. ಭಟ್ (ಚೆಂಡೆ ರೆಡ್), ಮುಂಡತ್ತಜೆ ಸದಾಶಿವ ಭಟ್ (ಬೊಳ್ಳೆ) ಮತ್ತು ಸುಬ್ರಾಯ ಭಟ್ ಮೀಯಂದೂರು (ಮೀಯಂದೂರು-2).

 ಮಿಡಿ ವಿಭಾಗ: ಅನಿಲ್ ಕುಮಾರ್ ಐತನಡ್ಕ (ಬಾಕುಡ), ಅಜಕ್ಕಳ ನಾರಾಯಣ ಭಟ್ (ತುಳಸಿಮೂಲೆ ಅಜಕ್ಕಳ), ಮಲ್ಯ ಶಂಕರನಾರಾಯಣ ಭಟ್ (ಆನಂದ ರೈ, ಜರಿಮೂಲೆ, ಕೆರೆಬದಿ) ಮುಳಿಯ ವೆಂಕಟಕೃಷ್ಣ ಶರ್ಮ (ನಡುಮನೆ ಜೀರಿಗೆ) ಗಿರೀಶ ಬೈಂಕ್ರೋಡು (ದಾಮೋದರ), ಡಾ.ಅಶ್ವಿನಿ ಕೃಷ್ಣಮೂರ್ತಿ (ಪಾರ್ತಿಮೂಲೆ)

ಪ್ರದರ್ಶನ : ಸೋನ್ಸ್ ಫಾರ್ಮಿನ ಫಲಗಳು, ಎಡ್ವರ್ಡ್ ರೆಬೆಲ್ಲೋ ತೋಟದ ಫಲಗಳು, ಮಾಪಲತೋಟದ ಹಣ್ಣುಗಳು, ಪಡನಕಾಡ್ ಅಗ್ರಿ ಕಾಲೇಜಿನ ಮಾವಿನ ತಳಿಗಳು ಅಲ್ಲದೆ ಹಲವಾರು ಮಂದಿ ಕೃಷಿಕರು ಪ್ರದರ್ಶನಕ್ಕೆ ಮಾವು, ಹಲಸು, ಕಾಡುಹಣ್ಣುಗಳನ್ನು ತಂದಿದ್ದರು.

ಆರಂಭದಲ್ಲಿ ಕು:ಪೂಜಾಪಾರ್ವತಿ, ಕು.ಪಲ್ಲವಿ ಉಬರು ಇವರಿಂದ ಪ್ರಾರ್ಥನೆ. ಹಲಸು ಸ್ನೇಹಿ ಕೂಟದ ರೂವಾರಿ ಮುಳಿಯ ವೆಂಕಟಕೃಷ್ಣ ಶರ್ಮರಿಂದ ಸ್ವಾಗತ. ಬೆಂಗಳೂರು ಗಣಪತಿ ಭಟ್ಟರಿಂದ ಉಬರು ಮನೆಯ ಪರಿಚಯ, ಉಪನ್ಯಾಸಕ ವದ್ವ ವೆಂಕಟ್ರಮಣ ಭಟ್ಟರಿಂದ ಪ್ರಸ್ತಾವನೆ.

ಮಧ್ಯಾಹ್ನ ಪುಷ್ಕಳ ಮಾವಿನ ಭೋಜನ. ಕೃಷಿಕ ಶಿರಂಕಲ್ಲು ನಾರಾಯಣ ಭಟ್ಟರ ಉಸ್ತುವಾರಿಕೆ. ಮಲ್ಯ ಶಂಕರನಾರಾಯಣ ಭಟ್ ಮತ್ತು ವದ್ವ ವೆಂಕಟ್ರಮಣ ಭಟ್ಟರು ಪ್ರದರ್ಶನ ಉಸ್ತುವಾರಿಕೆ ವಹಿಸಿದ್ದರು. ಜಿಲ್ಲೆಯ ಎಲ್ಲಾ ಮಾಧ್ಯಮ ಬಂಧುಗಳು ಹಳ್ಳಿ ಮೂಲೆಯ ಚಿಕ್ಕ ಸಮಾರಂಭಕ್ಕೆ ಆಗಮಿಸಿರುವುದು ಒಟ್ಟೂ ಸಮಾರಂಭದ ಹೈಲೈಟ್.

Thursday, April 26, 2012

'ಅನ್ನ ಮಾಡೋದು ಹೇಗೆ?'!



ರಾಜಧಾನಿಯಲ್ಲಿ ಎಪ್ರಿಲ್ ಮೊದಲ ವಾರದಲ್ಲಿ 'ಸಹಜ ಸಮೃದ್ಧ'ದ (ಸಸ) ಸಾರಥ್ಯದಲ್ಲಿ ಅಕ್ಕಿ ಮೇಳ. ಹತ್ತಾರು ತಳಿಗಳ ಸಂಗ್ರಹ. ಮಳಿಗೆಯೊಂದರಲ್ಲಿ ಅಮ್ಮಂದಿರು ಅಕ್ಕಿ ಖರೀದಿ ಮಾಡುತ್ತಾ, 'ಇದರ ಅನ್ನ ಮಾಡುವುದು ಹೇಗೆ? ಹೇಳಿ ಕೊಡ್ರಿ, ಬರ್ಕೊಳ್ತೇವೆ' ಎಂದು ಶಾಂತಾರಾಮರಿಗೆ ದುಂಬಾಲು ಬಿದ್ದರು. ಅಮ್ಮಂದಿರಿಗೂ ಅನ್ನ ಮಾಡಲು ಹೇಳಿ ಕೊಡ್ಬೇಕಾ? 'ಅನ್ನ ಏನ್ ಸಾರ್, ಪಾಯಸ ಮಾಡುವ ಕ್ರಮವನ್ನು ಹೇಳಿಕೊಡ್ಬೇಕು. ಅದಕ್ಕಾಗಿಯೇ ಯಾವ್ಯಾವ ತಳಿಗಳ ಅಕ್ಕಿಯ ಅನ್ನವನ್ನು ಹೇಗೆ ಮಾಡ್ಬೇಕು ಅಂತ ಕರಪತ್ರವನ್ನೇ ಮುದ್ರಿಸಿದ್ದೀವಿ' ಎಂದರು ಸಸದ ಕೃಷ್ಣಪ್ರಸಾದ್.

          ಅಮ್ಮನಿಂದ ಮಗಳಿಗೆ ಅಡುಗೆಯ ಜ್ಞಾನ ಹರಿದು ಬರಬೇಕು. ಅದು ಥಿಯರಿ ಅಲ್ಲ, ಪ್ರಾಕ್ಟಿಕಲ್. ಜತೆಯಲ್ಲಿದ್ದು ಕಲಿಯುವಂತಾದ್ದು. ಅಮ್ಮನೇ ಅಡುಗೆ ಮನೆಗೆ ಬಾರದಿದ್ದರೆ? ಕಲಿಯುವ ಬಗೆಯೆಂತು?  ಮಗಳು ಅತ್ತೆ ಮನೆ ಸೇರಿದಾಗ ಗಲಿಬಿಲಿ, ಕಂಗಾಲು. ಅಲ್ಲೂ ಅದೇ ಸ್ಥಿತಿಯಿದ್ದರೆ ಓಕೆ. ಇಲ್ಲದಿದ್ದರೆ? ಪರಿಸ್ಥಿತಿ ಊಹಿಸಿ. 'ಗಂಡ ಸಹಕಾರ ಮಾಡಬೇಡ್ವಾ' ಅಂತ ವಾದವನ್ನು ಮುಂದಿಡಬಹುದು. ಆದರೆ ಜ್ಞಾನಗ್ರಹಿಕೆಗೆ ವಾದಗಳು ಮಾನದಂಡವಲ್ಲ.

          ನಗರದ ಜಂಜಾಟದ ಮಧ್ಯೆ ಅರೋಗ್ಯದೊಂದಿಗೆ ವೈಯಕ್ತಿಕವಾದ ಬದುಕು ಕಳೆದು ಹೋಗುತ್ತದೆ. ಹೊಟ್ಟೆ ಹಸಿವಾದರೆ ಹೋಟೆಲ್ ಇದೆ. ದುಡ್ಡಿದೆಯಲ್ಲಾ, ಬಿಸಾಕಿದರಾಯಿತು! ಸಾಕಷ್ಟು ಮಂದಿಯಲ್ಲಿ ಇಂತಹ 'ಅಹಂ' (ಅಲ್ಲ, ಗುಣ) ಪದಪ್ರಯೋಗದ ಬಳಕೆಯನ್ನು ಕೇಳಿದ್ದೇನೆ. ಗಡದ್ದು ಉಂಡು ತೇಗಿದರೆ ಆಯಿತು. ಅಡುಗೆ ಮನೆಯ ಉಸಾಬರಿ ಯಾಕಲ್ವಾ. ಯಾವಾಗ ಅಡುಗೆ ಮನೆಯ ಮರೆವು ಆಗುತ್ತೋ, 'ಅನ್ನ ಮಾಡುವುದು ಹೇಗೆ' ಎಂಬ ಅಸಹಾಯಕತೆ ಇನ್ನಷ್ಟು ಗಟ್ಟಿಯಾಗುತ್ತದೆ.  

          ಈಚೆಗೆ ಹುಬ್ಬಳ್ಳಿಗೆ ಹೋಗಿದ್ದೆ. ಪರಿಚಿತರೊಬ್ಬರ ಮನೆ ಭೇಟಿ. ಮಕ್ಕಳಿಬ್ಬರು ಅಧ್ಯಯನ ನಿರತರು. ಮನೆಯೊಡತಿ ಕಂಪೆನಿಯಲ್ಲಿ ಹಗಲಿಡೀ ದುಡಿದು ಸುಸ್ತಾಗಿ ಒರಗಿದ್ದರು. ಯಜಮಾನ ಇನ್ನಾವುದೋ ವ್ಯಾವಹಾರಿಕ ಚಿಂತೆ. ಉಭಯ ಕುಶಲೋಪರಿಯ ಬಳಿಕ, ಬನ್ನಿ, ಹತ್ತಿರದಲ್ಲಿ ಹೋಟೆಲ್ ಇದೆ. 'ಹೊಟ್ಟೆ ತುಂಬಿಸಿ' ಬರೋಣ. ಅವಳಿಗೆ ಕೊಂಡೂ ಬರೋಣ ಎನ್ನಬೇಕೆ. ಸರಿ, ದಂಪತಿಗೆ ದುಡಿತ ಅನಿವಾರ್ಯವೆಂದು ಸ್ವೀಕರಿಸೋಣ. ಮನೆ ಮಕ್ಕಳ ಹಸಿದ ಹೊಟ್ಟೆಗೆ ಅಡುಗೆ ಮನೆಯಲ್ಲೇ ಆಹಾರ ತಯಾರಾದರೆ ಅದು ಅಮೃತವಾಗದೇ? ಹೋಟೆಲ್ನಲ್ಲೂ 'ಅಡುಗೆಮನೆಯಿದೆ' ಎಂಬ ಅಡ್ಡ ಮಾತಿಗೆ ಏನು ಹೇಳಲಿ?

          ಅಕ್ಕಿ ಮೇಳದಲ್ಲಿ 'ಅನ್ನ ಮಾಡಲು ಕಲಿವ' ಹೊಸ ಅಮ್ಮಂದಿರು. ಈಗಷ್ಟೇ ಗಂಡನ ಮನೆ ಸೇರಿದವರು. 'ನಮಗೂ ಬ್ರೋಷರ್ ಕೊಡಿ' ಎನ್ನುವಾಗ ಅಯ್ಯೋ ಅನ್ನಬೇಕಷ್ಟೇ. ಬದುಕಿನ ಈ ಸ್ಥಿತಿಯನ್ನು ಪ್ರಶ್ನಿಸುವಂತಿಲ್ಲ. ಫ್ಯಾಷನ್ ಬದುಕಿನ ಅಲಿಖಿತ ರೂಪ. ಅಡುಗೆ ಮನೆಯಲ್ಲಿ 'ರೆಡಿ ಟು ಈಟ್'ನಲ್ಲಿ ಅಮ್ಮಂದಿರ ಪಾತ್ರ ಇದೆಯೇ? 'ಕುಕ್ ಟು ಈಟ್'ನಲ್ಲಾದರೆ 'ಅಮ್ಮನ ಕೈರುಚಿ' ಇದೆ. ಆಗಲೇ ಆರೋಗ್ಯ.

          ಮೇಳದಲ್ಲಿ ಪಾಲಿಶ್ ಮಾಡದ ಕೆಂಪಕ್ಕಿಗೆ ಬೇಡಿಕೆ. ಪಾಯಸಕ್ಕೆ ಸೂಕ್ತವಾಗುವ 'ಕಪ್ಪಕ್ಕಿ', ಇನ್ನೊಂದು ಸಕ್ಕರೆ ಕಾಯಿಲೆಯವರೂ ಸ್ವೀಕರಿಸಬಹುದಾದ ಡಯಾಬಿಟೀಸ್ ರೈಸ್. ಅಕ್ಕಿಯ ಹೆಸರಿನೊಂದಿಗೆ ಕಾಯಿಲೆಯ ಹೆಸರೂ ಥಳಕು ಹಾಕಿಕೊಂಡಿದೆ! ಸುಲಭದಲ್ಲಿ ಆರ್ಥವಾಗಬೇಕಲ್ವಾ. 'ಪಾಲಿಶ್ ಮಾಡದ' ಅಕ್ಕಿಯ ಅನ್ನದ ಸೇವನೆಗೆ ವ್ಯೆದ್ಯರ ಸಲಹೆಯೂ ಇದೆ.  

'ನನ್ನ ಮೊಮ್ಮಗಳೀಗ ಎಲ್.ಕೆ.ಜಿ. ಅವಳಿಗೆ ಕೆಂಪಕ್ಕಿಯ ಅನ್ನವನ್ನು ಮಧ್ಯಾಹ್ನದ ಊಟಕ್ಕೆ ಬುತ್ತಿಯಲ್ಲಿ ಹಾಕಿ ಕಳುಹಿಸುತ್ತಿದ್ದೆವು. ಕೆಂಪು ವರ್ಣದ ಅನ್ನವನ್ನು ನೋಡಿದ ಇತರ ಪುಟಾಣಿಗಲ್ಲಿ ಅಸಹ್ಯ! ಅವರಲ್ಲಿ  ಬಿಸ್ಕತ್ತೋ, ಇನ್ನೇನೋ ಕುರುಕುರು ಇರುತ್ತಿದ್ದುವು. ಗೇಲಿ ಮಾಡಿದರಂತೆ. ಅಲ್ಲಿಂದ ಈ ಮಗು ಕೆಂಪಕ್ಕಿ ಅಂದರೆ ಮಾರುದ್ದ,' ಸಸದ ಅಧ್ಯಕ್ಷ ಎನ್. ಆರ್.ಶೆಟ್ಟರು ಕಥೆ ಹೇಳಿ ಮುಗಿಸುವಾಗ ವಿಷಾದದ ಛಾಯೆ. ನಮ್ಮ ಸುತ್ತಮುತ್ತಲಿನ ವಿಚಾರಗಳು ಮಗುವಿನ ಮೇಲೆ ಬೀರುವ ಪರಿಣಾಮದ ಒಂದು ಎಳೆಯಷ್ಟೇ.

          ಶೆಟ್ಟರು ಇನ್ನೊಂದು ಸಂದರ್ಭವನ್ನು ಜ್ಞಾಪಿಸಿಕೊಂಡರು. ಬೆಂಗಳೂರಿನಲ್ಲಿ ಆಯುರ್ವೇದದ ಕುರಿತು ಅಖಿಲ ಭಾರತ ಸಮ್ಮೇಳನ. ಔಷಧೀಯ ಗುಣಗಳ ಅಕ್ಕಿ ಮತ್ತು ಕಿರುಧಾನ್ಯಗಳ ಪ್ರದರ್ಶನದ ಉಸ್ತುವಾರಿ ಹತ್ತಿದ್ದರು 'ಓ.. ಈ ಅಕ್ಕಿ ಎಲ್ಲಿ ಸಿಗುತ್ತದೆ?', 'ನವರ, ಕರಿಗಜಿವಿಲಿಯನ್ನು ರೋಗಿಗಳಿಗೆ  ಸ್ವೀಕರಿಸುವಂತೆ ಹೇಳಬಹುದಾ?', ವೈದ್ಯ ಬಂಧುಗಳ ಚೋದ್ಯ. ಪಾರಂಪರಿಕವಾದ ಔಷಧೀಯ ಭತ್ತದ ತಳಿಗಳು ಹಿರಿಯರಲ್ಲಿ ಕಂಠಸ್ತ. ಬಳಕೆಯ ಅರಿವು ಸಾಮಾನ್ಯರಿಗೆ ಬಿಡಿ, ವೈದ್ಯರಿಗೂ ಇಲ್ಲವಲ್ಲಾ - ವಿಷಾದಿಸುತ್ತಾರೆ.

          ಅಕ್ಕಿಮೇಳದಲ್ಲಿ ಮಹಿಳೆಯರ ಪಾಲುಗಾರಿಕೆ ಹೆಚ್ಚು. ಅದರಲ್ಲೂ ಮೂವತ್ತೈದರ ಒಳಗಿನವರು. ಅಕ್ಕಿ ಖರೀದಿಯ ಹಿಂದೆ 'ಆಹಾರದೊಂದಿಗೆ ಆರೋಗ್ಯದ ಕಾಳಜಿ'. ಅಕ್ಕಿ ಅಂದರೆ ಸೋನಾ ಮಸ್ಸೂರಿ. ಬೇರೆಯದು ಗೊತ್ತಿಲ್ಲ, ಬೇಕಾಗಿಲ್ಲ. ಅದು ಬಿಳಿಯದಾಗಿರಬೇಕು. ಆಗಷ್ಟೇ ಅಂಗಡಿಯಿಂದ ತಂದಿರಬೇಕು. ಅನ್ನವು ಶ್ವೇತವರ್ಣದಲ್ಲಿ ಉದುರು ಉದುರಾಗಿರಬೇಕು. ಪ್ಯಾಕೆಟ್ ಒಡೆದು ಕುಕ್ಕರಿಗೆ ಹಾಕುವಾಗ ಸಿಗುವ ಆನಂದ ವರ್ಣನಾತೀತ.. - ಈ ರೀತಿಯ 'ಮೈಂಡ್ ಸೆಟ್' ದೂರವಾಗಬೇಕು. ಆಗಲೇ ಆರೋಗ್ಯದ ಕುರಿತು ಮಾತನಾಡಲು ಅರ್ಹತೆ ಬರುತ್ತದಷ್ಟೇ.

          ಸಸವು 'ವಿಷ ಸಿಂಪಡಿಸದೆ' ಭತ್ತ ಬೆಳೆಯಲು ರೈತರನ್ನು ಪ್ರೋತ್ಸಾಹಿಸುತ್ತಿದೆ. ಬೆಳೆದ ಭತ್ತವನ್ನು ಖರೀದಿಸಿ, ಮಿಲ್ನಲ್ಲಿ ಅಕ್ಕಿ ಮಾಡಿ ಗ್ರಾಹಕರಿಗೆ ಒದಗಿಸುವ ರೈತಸ್ನೇಹಿ ಕೆಲಸ ಮಾಡುತ್ತಿದೆ. ಒಂದು, ಐದು, ಹತ್ತು, ಐವತ್ತು ಕಿಲೋದ ಪ್ಯಾಕೆಟ್ಗಳು. ಹೆಚ್ಚು ಲಾಭಾಂಶ ಇಲ್ಲದ ವ್ಯವಹಾರ. ಕೇಳಿ/ಹುಡುಕಿ ಬರುವ ಗ್ರಾಹಕರನ್ನು ಹೊಂದಿರುವುದು ವಿಶ್ವಾಸಾರ್ಹತೆಯ ದ್ಯೋತಕ. ಭತ್ತವನ್ನು ಲ್ಯಾಬ್ ಪರೀಕ್ಷೆಗೆ ಒಳಪಡಿಸಿ, ಅವುಗಳಲ್ಲಿರುವ ಪೌಷ್ಠಿಕಾಂಶಗಳನ್ನು ದಾಖಲಿಸಿ ಕೇಳಿದಾಗ ಒದಗಿಸುವ ವ್ಯವಸ್ಥೆ. 

          'ಈ ಅಕ್ಕಿಯ ಬ್ರಾಂಡ್ ಯಾವುದು? ಎಕ್ಸ್ಪಾಯಿರಿ ಡೇಟ್ ಯಾವಾಗ? ಎಂ.ಆರ್.ಪಿ.ಎಷ್ಟು?' ಹೀಗೆ ಇಂಗ್ಲಿಷ್ ಜಾತಕವನ್ನು ಅಪೇಕ್ಷಿಸುವವರೂ ಇಲ್ಲದಿಲ್ಲ. ಇಂತಹವರಿಗೆ ಅಕ್ಕಿಯ, ಆರೋಗ್ಯದ ಕುರಿತು ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆ ಎನ್ನುತ್ತಾರೆ ಎನ್.ಆರ್.ಶೆಟ್ಟರು. ಆದರೆ ನಗರದ ಹಳ್ಳಿ ಮೂಲದ ಮಂದಿಗೆ ಪಾರಂಪರಿಕ ಅಕ್ಕಿಯ ರುಚಿ ಗೊತ್ತು.

          ಅಕ್ಕಿಮೇಳದಲ್ಲಿ ಗಮನ ಸೆಳೆದಿರುವುದು ವಿವಿಧ ಭತ್ತದ ತಳಿಗಳ ಪ್ರದರ್ಶನ. ಒರಿಸ್ಸಾ ಮೂಲದ 'ನಾರಿಕೇಳಾ' ಮತ್ತು 'ಕಾಳಜೀರಾ', ಖಾನಾಪುರ ಮೂಲದ ಬಾಣಂತಿ ಭತ್ತ 'ಕರಿಗಜಿವಿಲಿ' ಮತ್ತು 'ಕಪ್ಪು ಭತ್ತ', ಶಿರಸಿ-ಸೊರಬಾ ನದಿ ತೀರದ ಆಳ ನೀರಿನ ಭತ್ತ 'ಕರಕಂಠಕ', ಮಹಾರಾಷ್ಟ್ರ ಮೂಲದ ರೈತ ಸಂಶೋಧಿತ ತಳಿ 'ಎಚ್.ಎಂ.ಟಿ'.. ಇನ್ನೂ ಅನೇಕ. ಕೋಲಾರ-ಬೆಂಗಳೂರು ಗ್ರಾಮಾಂತರ ಪ್ರದೇಶದ 'ಭೈರನೆಲ್ಲು' ಇದರ ಭತ್ತವನ್ನು ಕುಟ್ಟಿ, ಹಾಲು ತೆಗೆದು, ಬೆಲ್ಲ ಸೇರಿಸಿ ಮಾಡಿದ ಬರ್ಫಿಯನ್ನು ಎದೆನೋವಿರುವವರಿಗೆ ನೀಡಿದರೆ ನೋವು ಶಮನವಾಗುತ್ತದಂತೆ.

          ವಿಪ್ರೋ ಐಟಿಗಳಲ್ಲಿ ಸಾವಯವದ ಹುಡುಕಾಟ ಶುರುವಾಗಿದೆ. ಸಸವು ಮಳಿಗೆ ತೆರೆದಿದೆ. ಇನ್ನೂರಕ್ಕೂ ಮಿಕ್ಕಿ ಐಟಿ ಲೋಕದ ಬಂಧುಗಳು ಆರೋಗ್ಯ ಕಾಳಜಿಯತ್ತ ಹೊರಳಿದ್ದಾರೆ! ಇಂಪೋಸಿಸ್ನವರಿಗೂ ಒಲವು. ಎಲ್ಲರಿಗೂ ಗೊತ್ತಿದೆ, ನಾವು ಮಾಡುತ್ತಿರುವ ಉದ್ಯೋಗ, ಕೈತುಂಬಾ ಸಿಗುವ ಸಂಬಳ ಕಾಸು - ಬದುಕನ್ನು ಆಧರಿಸುತ್ತಿದೆ, ಆದರೆ ಆರೋಗ್ಯವನ್ನಲ್ಲ. ಅದು ಹಾಳಾದರೆ ಕಂಪೆನಿಯೂ ಮರುಭರ್ತಿ ಮಾಡಲಾರದು. ಅವರವರೇ ದಾರಿ ಕಂಡುಕೊಳ್ಳಬೇಕಷ್ಟೇ.

           'ಸಾರ್, ಬೆಂಗಳೂರಿನಲ್ಲಿರುವ ಕ್ರಾಸ್ರೋಡ್ಗಳಲ್ಲೆಲ್ಲಾ ವಸತಿಗಳು ಹೆಚ್ಚು. ಇಲ್ಲಿ ಜೀನಸಿ ಅಂಗಡಿಗಳು ಯಥೇಷ್ಟವಾಗಿ ತೆರೆಯಬೇಕಿತ್ತು. ಆದರೆ ಪ್ರತಿ ರೋಡಲ್ಲೂ ಮೆಡಿಕಲ್ ಶಾಪ್ಗಳು ತಲೆ ಎತ್ತುತ್ತಿವೆ,' - ನಗರದ ಬದುಕಿನ ಚಿತ್ರಣವನ್ನು ನಗರದಲ್ಲಿರುವ ಎನ್. ಆರ್.ಶೆಟ್ಟರು ಕಟ್ಟಿಕೊಟ್ಟ ಬಗೆ. ಸೇವಿಸುವ ಆಹಾರ ಆರೋಗ್ಯಕ್ಕೆ ಮುಳುವಾಗಿದೆ. ಅದನ್ನು ಆಹಾರದ ಮೂಲಕವೇ ಸರಿಪಡಿಸಬೇಕು. ಇದಕ್ಕಾಗಿ ಬೇಕು, ವಿಷ ರಹಿತವಾದ ಆಹಾರದ ಸೇವನೆ. ಈ ಹಿನ್ನೆಲೆಯಲ್ಲಿ ಅಕ್ಕಿಮೇಳಕ್ಕೆ ಬರುವ ಗ್ರಾಹಕರು ತಮ್ಮ 'ಆರೋಗ್ಯ'ವನ್ನು ಲಕ್ಷ್ಯದಲ್ಲಿಟ್ಟಿರುವುದು ಮೆಚ್ಚತಕ್ಕ ವಿಚಾರ.

ಸಾವಯವ ಎಂದರೆ ಸಂತೃಪ್ತಿ


ಸಾವಯವ ಅಂದರೆ ಕೃಷಿಯಲ್ಲ. ಅದೊಂದು ಬದುಕು. ಸ್ವಾವಲಂಬಿ ಜೀವನಕ್ಕೆ ಮತ್ತೊಂದು ಹೆಸರು. ಇದನ್ನು ಅಳವಡಿಸಿಕೊಂಡದ್ದರಲ್ಲಿ ಖುಷಿಯಿದೆ. ನೆಮ್ಮದಿಯಿದೆ. ಆರೋಗ್ಯವಿದೆ - ಹೀಗೆ ಮಾತಿಗೆ ಸಿಕ್ಕಾಗಲೆಲ್ಲಾ ಅನುಭವವನ್ನು ಹಂಚಿಕೊಳ್ಳುತ್ತಾರೆ, ಸಾವಯವ ಕೃಷಿಕ ಎ.ಪಿ.ಸದಾಶಿವ. 'ಸಾವಯವ ಸದಾಶಿವ' ಅಂತಲೇ ಆಪ್ತವಲಯದಲ್ಲಿ ಪರಿಚಿತ.

ಪುತ್ತೂರು (ದ.ಕ.) ಸನಿಹದ ಆರ್ಯಾಪು ಗ್ರಾಮದ ಮರಿಕೆಯಲ್ಲಿದೆ, ಸದಾಶಿವರ ತಪೋಭೂಮಿ. ಉಣ್ಣಲು ತನ್ನದೇ ಗದ್ದೆಯ ಅಕ್ಕಿ, ತೋಟದ ತರಕಾರಿ, ಹಣ್ಣು ಹಂಪಲು. ಮಾರುಕಟ್ಟೆಯಿಂದ ತರಕಾರಿ, ಬೇಕರಿ ಐಟಂ, ಸಿಹಿ ತಿಂಡಿಗಳು ಇವರ ಅಡುಗೆ ಮನೆ ಪ್ರವೇಶಿಸುವುದಿಲ್ಲ. ಹಲ್ಲುಜ್ಜಲು ತಮ್ಮದೇ ತಯಾರಿಯ ಹಲ್ಲುಪುಡಿ. ಮೈಉಜ್ಜಲು ಸ್ವ-ನಿರ್ಮಿತ ಸಾಬೂನು. ದುಂದುವೆಚ್ಚವಿಲ್ಲದ ಸ್ವಾವಲಂಬಿ ಬದುಕು.

1986ರ ಸುಮಾರಿಗೆ ಸದಾಶಿವರು ರಾಸಾಯನಿಕ ಗೊಬ್ಬರಗಳನ್ನು ಸುರಿದು ಕೃಷಿ ಮಾಡುತ್ತಿದ್ದರು. ಗಂಧಸಾಲೆ ಭತ್ತದ ತಳಿಗೆ ಬಂದ ರೋಗದಿಂದಾಗಿ ವಿಷಗಳ ಸಿಂಪಡಣೆ. ಇದರಿಂದಾಗಿ ಜಲಚರಗಳ ನಾಶ. 'ಇಷ್ಟೊಂದು ವಿಷ ಸಿಂಪಡಿಸಿ, ಅದರಿಂದ ಬೆಳೆದ ಉತ್ಪನ್ನವನ್ನು ನಾವೂ ಉಂಡು ಆರೋಗ್ಯ ಹಾಳುಮಾಡಿಕೊಳ್ಳುವುದಕ್ಕಿಂತ ಭಿನ್ನವಾದ ಕೃಷಿ ಕ್ರಮಗಳನ್ನು ಅನುಸರಿಸಲು ನಿರ್ಧಾರ. ಆಗಷ್ಟೇ ಸಾವಯವ ಕೃಷಿ ಎಂದು ಹೆಜ್ಜೆಯಿರಿಸಿದ ಕೃಷಿ ಕ್ರಮದತ್ತ ಒಲವು. ಡಾ.ನಾರಾಯಣ ರೆಡ್ಡಿಯವರ ಸಾವಯವದ ವೈಚಾರಿಕತೆಯತ್ತ ಪ್ರಭಾವ. ಅಲ್ಲಿಂದೀಚೆಗೆ ಅವರ ಹೊಲಕ್ಕೆ ರಾಸಾಯನಿಕ ಗೊಬ್ಬರದ ಚೀಲ ಬಂದಿಲ್ಲ. ವಿಷ ಸಿಂಪಡಣೆ ಇಲ್ಲವೇ ಇಲ್ಲ.

          ಹತ್ತೆಕ್ರೆ ಕೃಷಿ ಭೂಮಿ. ಹದಿನೈದೆಕ್ರೆ ಕಾಡು. ಅಡಿಕೆ, ತೆಂಗು, ಕಾಳುಮೆಣಸು, ಕೊಕ್ಕೊ, ಭತ್ತ ಮುಖ್ಯ ಕೃಷಿಗಳು. ವಿವಿಧ ನಮೂನೆಯ ಹಣ್ಣಿನ ಗಿಡಗಳು, ಔಷಧೀಯ ಗಿಡಗಳು, ಕಾಡುಮರಗಳು ಹೇರಳ.

          ಸದಾಶಿವರಿಗೆ ಹೈನುಗಾರಿಕೆಯು ಪಾರಂಪರಿಕ. ಹದಿನೈದು ಜಾನುವಾರು ಕುಟುಂಬಗಳಿವೆ. ಅದರಲ್ಲಿ ನಾಲ್ಕು ಸ್ಥಳೀಯ, ಎರಡು ಹೆಚ್.ಎಫ್. ಮಿಕ್ಕಿದ್ದೆಲ್ಲಾ ಜರ್ಸಿ ತಳಿಯ ಹಸುಗಳು. ದಿವಸಕ್ಕೆ ಒಂದು ಹೊತ್ತು ಹಸಿಹುಲ್ಲು ಆಹಾರ. ಜತೆಗೆ ತಮ್ಮದೇ ಮಿಶ್ರಣದ ಹಿಂಡಿ ಪಾಕ. ಅಕ್ಕಿತೌಡು, ಜೋಳ-ರಾಗಿಯ ಹುಡಿ, ನೆಲಗಡಲೆ ಹಿಂಡಿ, ಉದ್ದಿನತೌಡು, ಎಳ್ಳಿನಹಿಂಡಿ.. ಇವುಗಳ ಮಿಶ್ರಣ. ಮಿಕ್ಕ ಹೊತ್ತಲ್ಲಿ ಸೋಗೆ, ಹಾಳೆ, ಬಾಳೆದಿಂಡುಗಳ ಸಮಾರಾಧನೆ. ಹಲಸಿನ ಸೀಸನ್ನಲ್ಲಿ ಹಲಸು. ಒಟ್ಟೂ ಪಶುಸಮೂಹದಲ್ಲಿ ಮೂರು ಮಾತ್ರ ಹಾಲಿಳಿಸುವಂತಾದ್ದು.

ದಕ್ಷಿಣ ಕನ್ನಡ ಜಿಲ್ಲೆಗೆ ಬಂದ ಗೋಬರ್ಗ್ಯಾಸ್ ಸ್ಥಾವರಗಳ ಪೈಕಿ ಇವರದು ಬಹುಶಃ ನಾಲ್ಕನೆಯದು! ಸ್ಲರಿ ಸಂಗ್ರಹಕ್ಕೆ 40 ಅಡಿ ಉದ್ದ, 6 ಅಡಿ ಅಳತೆಯ ಟ್ಯಾಂಕ್. ಸ್ಲರಿಯು ತೋಟಕ್ಕೆ ಮುಖ್ಯ ಗೊಬ್ಬರ. ಸ್ಲರಿ ಪಂಪ್ ಮೂಲಕ ಸರಬರಾಜು. ಶೇ.25ರಷ್ಟು ಡೀಸೆಲ್ ಮತ್ತು ಶೇ.75ರಷ್ಟು ಗೋಬರ್ ಗ್ಯಾಸ್ನಿಂದ ಸ್ಲರಿ ಪಂಪ್ ಚಾಲೂ.

          ಅಡಿಕೆ ಮರದ ಬುಡವನ್ನು ಬಿಡಿಸಿ ಪ್ರತ್ಯೇಕವಾಗಿ ಗೊಬ್ಬರವನ್ನು ಹಾಕುವ ಪರಿಪಾಠವಿಲ್ಲ. ಬಿದ್ದ ಸೋಗೆಯನ್ನು ಕೊಚ್ಚಿ ಬುಡಕ್ಕೆ ಹಾಕುತ್ತಾರೆ. ವಾರಕ್ಕೆ ಎರಡು ಗಂಟೆ ಪಂಪ್ ಮೂಲಕ ಸ್ಲರಿ ಉಣಿಕೆಯಿಂದ ಅರ್ಧ ಎಕ್ರೆಯಷ್ಟು ತೋಟ ತೋಯುತ್ತದೆ.

          ನಾಲ್ಕು ಕೆರೆಗಳಿವೆ. ಅವುಗಳಲ್ಲಿ ಎರಡು ಮಾತ್ರ ಬಳಕೆ. ಮತ್ತೆರಡು ನೀರು ಮರುಪೂರಣ ಪ್ರಕ್ರಿಯೆಗಾಗಿ. ಒಂದು ಕೊಳವೆ ಬಾವಿಯಿದೆ. ಅದು ಆಪತ್ತಿಗಾಗಿ ಮಾತ್ರ! ಸ್ಪ್ರಿಂಕ್ಲರ್ ಮೂಲಕ ನೀರಾವರಿ. ಸುತ್ತಲೂ ಕಾಡು ಸಮೃದ್ಧವಾಗಿರುವುದರಿಂದ ನೀರಿನ ಸಂಪನ್ನತೆ ಚೆನ್ನಾಗಿದೆ.

          ಒಂದೆಕ್ರೆಯಲ್ಲಿ ಭತ್ತದ ಕೃಷಿ. ಎರಡು ಬೆಳೆ. ಒಂದು ಬೆಳೆಯಲ್ಲಿ ಗಂಧಸಾಲೆ ಬೆಳೆದರೆ, ಮತ್ತೊಂದರಲ್ಲಿ ಬಿಟಿ ತಳಿ. ಗದ್ದೆಗೆ ನೂರೈವತ್ತು ಬುಟ್ಟಿ (ಒಂದು ಬುಟ್ಟಿ ಅಂದರೆ 30 ಕಿಲೋ) ಹಟ್ಟಿಗೊಬ್ಬರ ಹೊರತು ಬೇರ್ಯಾವುದೇ ಗೊಬ್ಬರವಿಲ್ಲ. ಭತ್ತವನ್ನು ಮನೆಯಲ್ಲೇ ಮಿಲ್ ಮಾಡುತ್ತಾರೆ. ಮನೆಬಳಕೆಗೆ ಮಿಕ್ಕಿ ಒಂದೂವರೆ ಕ್ವಿಂಟಾಲಿನಷ್ಟು ಅಕ್ಕಿಯನ್ನು ಮಾರಾಟ ಮಾಡುತ್ತಾರೆ.

          ಸದಾಶಿವರಿಗೆ ರಬ್ಬರ್ ಕೃಷಿಯಲ್ಲಿ ಒಲವಿಲ್ಲ. 'ಯಾವಾಗ ರಬ್ಬರ್ ಕೃಷಿ ಪ್ರವೇಶವಾಯಿತೋ, ಅಲ್ಲಿಂದ ಕಾಡುಗಳು ನಾಶವಾಯಿತು, ಗುಡ್ಡಗಳು ನುಣುಪಾದುವು. ನಂತರ ಶುರುವಾಯಿತು, ಮಂಗ ಮತ್ತು ಹಂದಿಯ ಕಾಟ.' ಇವರ ಮಾತಿನಲ್ಲಿ ಸತ್ಯವಿಲ್ಲದಿಲ್ಲ.

          ಪುತ್ತೂರಿನಲ್ಲಿರುವ ಗಿಡಗೆಳೆತನ ಸಂಘ 'ಸಮೃದ್ಧಿ'ಯಲ್ಲಿ ಸಕ್ರಿಯರು. ಅವರು ಅಧ್ಯಕ್ಷರಾಗಿ ಸಮೃದ್ಧಿಯನ್ನು ಮುನ್ನಡೆಸಿದ್ದರು. ಇದರ ಸಂಪರ್ಕದಿಂದಾಗಿ ಸಾಕಷ್ಟು ಬೀಜಗಳು, ಸಸ್ಯಗಳು ಮತ್ತು ಅನುಭವಗಳು ಕೃಷಿಗೆ ಅನುಕೂಲವಾಗಿರುವುದನ್ನು ಸದಾಶಿವರು ಜ್ಞಾಪಿಸಿಕೊಳ್ಳುತ್ತಾರೆ. 

          ಅಡುಗೆ ಮನೆಯ ಒಳಸುರಿಗಳನ್ನು ಮಾರುಕಟ್ಟೆಯಿಂದ ಖರೀದಿಸುವುದು ಅನಿವಾರ್ಯ. ಎಲ್ಲವನ್ನೂ ಬೆಳೆಯಲಾಗುವುದಿಲ್ಲವಲ್ಲಾ. ಅದರಲ್ಲಿ ಸಾವಯವ ವಸ್ತುಗಳಿಗೆ ಮೊದಲ ಮಣೆ. ಅನಾವಶ್ಯಕ ದುಂದುವೆಚ್ಚಗಳಿಗೆ ಕಡಿವಾಣ. ಸದಾಶಿವರ ಮನೆಯಲ್ಲಿ ಸಾವಯವ ಕೃಷಿಯನ್ನು ಮತ್ತು ಸಾವಯವ ಬದುಕನ್ನು ಕುಟುಂಬಸ್ಥರು ಒಪ್ಪಿದ್ದಾರೆ. ಸಾಮಾಜಿಕವಾಗಿ ಗೌರವ ಪ್ರಾಪ್ತವಾಗಿದೆ.

ಒಂದು ಕಡೆಯಿಂದ 'ಸಾವಯವ' ಎಂಬುದು ಫ್ಯಾಶನ್ ಆಗುತ್ತಿದೆ. ಮತ್ತೊಂದೆಡೆಯಿಂದ ಮಾರುಕಟ್ಟೆ ತಂತ್ರಕ್ಕಿರುವ ಐಕಾನ್! ಇವೆರಡರ ಮಧ್ಯೆ ಸಾವಯವದ ನಿಜಾರ್ಥವನ್ನು ಗ್ರಹಿಸಿ, ಅದರಂತೆ ಬದುಕನ್ನು ನಡೆಸುತ್ತಿರುವ ಸದಾಶಿವರ ಕೃಷಿ ಎಂದೂ ಸದ್ದಾಗುವುದಿಲ್ಲ. ಸುದ್ದಿಯಾಗುವುದಿಲ್ಲ. ಸುದ್ದಿಯಾಗುವ ಮೋಹವೂ ಅವರಿಗಿಲ್ಲ.

ಕೃಷಿಕನ ಮನೆಯವರೆಲ್ಲರೂ ದುಡಿಯಬೇಕು. ದುಡಿದು ತಿನ್ನುವುದು ಇದೆಯಲ್ಲಾ, ಅದಕ್ಕಿಂತ ಸಂತೃಪ್ತಿ ಬೇರೊಂದಿಲ್ಲ - ಈ  ವಿಚಾರಗಳಿಗೆ ಸದಾಶಿವರು ಅಂಟಿಕೊಂಡುದರಿಂದ ಅವರದು ಗೊಣಗಾಟವಿಲ್ಲದ ಕೃಷಿ ಬದುಕು.

Thursday, April 12, 2012

ಮುಳಿಯದಲ್ಲಿ 'ಹಲಸು ಸ್ನೇಹಿ ಕೂಟ'ಕ್ಕೆ ಚಾಲನೆ




"ನಿರ್ಲಕ್ಷಿತ ಹಲಸು ರೆಡಿ ಟು ಕುಕ್ ರೂಪದಲ್ಲಿ ಅಡುಗೆ ಮನೆ ಪ್ರವೇಶಿಸಿದೆ. ಅದರ ಕನಿಷ್ಠ ಸಂಸ್ಕರಣೆಯ ತೊಡಕಿನಿಂದಾಗಿ ಅಡುಗೆ ಮನೆಯಿಂದ ದೂರವಾಗಿತ್ತು. ಈಗ ಆ ತೊಡಕು ದೂರವಾಗಿದೆ. ಪ್ಯಾಕೆಟ್ ಒಡೆದು ನೇರವಾಗಿ ಅಡುಗೆಗೆ ಬಳಸುವಂತಹ ಉತ್ಪನ್ನಗಳು ಕೇರಳದಲ್ಲಿ ಮಾರುಕಟ್ಟೆಗೆ ಬಂದಿವೆ, ಎಂದು ಹಲಸು ಆಂದೋಳನದ ರೂವಾರಿ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆ ಹೇಳಿದರು.


ಅವರು ಅಳಿಕೆ ಸನಿಹದ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಜರುಗಿದ 'ಹಲಸು ತನ್ನಿ, ತಿನ್ನೋಣ ಬನ್ನಿ' ಕಾರ್ಯಕ್ರಮದಲ್ಲಿ ಹಲಸು ಪ್ರಿಯರನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ರೂಪಿತವಾದ 'ಹಲಸು ಸ್ನೇಹಿ ಕೂಟ'ವನ್ನು 'ಹಲಸಿನ ಹಣ್ಣನ್ನು ತುಂಡರಿಸುವ' ಮೂಲಕ ಉದ್ಘಾಟಿಸಿದರು. ಹಿರಿಯ ಕೃಷಿಕ ಡಾ.ಕೆ.ಎಸ್.ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ವೇದಿಕೆಯಲ್ಲಿ ಕೃಷಿಕ ಅಮ್ಮಂಕಲ್ಲು ಕೇಶವ ಭಟ್, ಡಾ.ಡಿ.ಸಿ.ಚೌಟ ಉಪಸ್ಥಿತರಿದ್ದರು.


ಅಳಿಕೆ ಸುತ್ತಮುತ್ತಲಿನ ಸುಮಾರು ಇಪ್ಪತ್ತೈದು ಹಲಸಿನ ತಳಿಗಳು 'ರುಚಿ ನೋಡಿ, ತಳಿ ಆಯ್ಕೆ'ಗಾಗಿ ಬಂದಿದ್ದು, ಅದರಲ್ಲಿ ಉತ್ತಮ ಐದು ಹಲಸಿನ ತಳಿಯನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಕಾಡು ಹಣ್ಣುಗಳು, ನಾಡ ಹಣ್ಣುಗಳು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಹಲಸಿನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಾ. ಕೆ.ಎಸ್.ಕಾಮತ್ ಬಹುಮಾನ ವಿತರಿಸಿದರು.


ಭಾಗವಹಿಸಿದ ಎಲ್ಲರಿಗೂ ಹಲಸಿನ ಹಣ್ಣಿನ ಸಮಾರಾಧನೆ. ಶಿರಂಕಲ್ಲು ನಾರಾಯಣ ಭಟ್, ಉಬರು ರಾಜಗೋಪಾಲ ಭಟ್, ಮಲ್ಯ ಶಂಕರನಾರಾಯಣ ಭಟ್ ಹಲಸಿನ ಸಂಸ್ಕರಣೆ ಕಾಯಕದ ಸಾರಥ್ಯ ವಹಿಸಿದ್ದರು. 'ಹಲಸಿ ತನ್ನಿ, ತಿನ್ನೋಣ ಬನ್ನಿ' ಕಾರ್ಯಕ್ರಮದ ರೂವಾರಿ ಮುಳಿಯ ವೆಂಕಟಕೃಷ್ಣ ಶರ್ಮ ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು.


ಕಳೆದ ವರುಷ ಎಪ್ರಿಲ್ 14ರಂದು ಮುಳಿಯ ಶರ್ಮರ ಮನೆಯಲ್ಲಿ ಜರುಗಿದ ಪ್ರಥಮ 'ರುಚಿ ನೋಡಿ ತಳಿ ಆಯ್ಕೆ' ಪ್ರಕ್ರಿಯೆ, ಶಿರಂಕಲ್ಲು ನಾರಾಯಣ ಭಟ್ಟರ ಮನೆಯಲ್ಲಿ ಜರುಗಿದ ’ಸಾತ್ವಿಕ ಆಹಾರ’ ಕಾರ್ಯಾಗಾರ, ಆ ಬಳಿಕ ಉಬರಿನಲ್ಲಿ ಜರುಗಿದ ಹಲಸಿನ ಹಣ್ಣಿನ ಹಬ್ಬದ ಮುಂದುವರಿಕೆಯಾಗಿ ಈ ಕಾರ್ಯಕ್ರಮ ಜರುಗಿರುವುದು ಉಲ್ಲೇಖಾರ್ಹ.

Monday, April 2, 2012

ಬರಡು ಬಯಲಲಿ ಹಸುರು ಭವನ



ಕೃಷಿಯಲ್ಲಿ ಭಾರೀ ಹಣ ಮಾಡಲು ಎಂದೂ ಸಾಧ್ಯವಿಲ್ಲ. ಅದು ಪ್ರಕೃತಿಯ ಮಿತಿ, ನೀತಿ. ಆದರೆ ಪ್ರತಿಯೊಬ್ಬರ ನಿಜದ ಬೇಕುಗಳನ್ನು ಕೃಷಿಯಿಂದ ಪಡೆಯಲು ಯಾವುದೇ ತೊಂದರೆಯಿಲ್ಲ, ಮೈಸೂರು 'ಇಂದ್ರಪ್ರಸ್ಥ' ತೋಟದ ಎ.ಪಿ.ಚಂದ್ರಶೇಖರ್ (ಎಪಿಸಿ) ಮಾತಿಗಿಳಿದರು. ಕೃಷಿಯನ್ನು ವ್ಯಾಪಾರವಾಗಿ ಕಂಡ ಪ್ರಕೃತಿ ವಿರೋಧಿ ಧೋರಣೆ, ಎಲ್ಲವನ್ನೂ ಹಣದ ರೂಪದಲ್ಲಿ ಕಾಣುವ ದುರಾಗ್ರಹ, ಕೆಲಸಕ್ಕಿಂತ ಹೆಚ್ಚು ಆದಾಯ ಕಾಣುವ ಹವಣಿಕೆಗಳ ಬೀಜಗಳನ್ನು ಸುಟ್ಟರೆ ಮಾತ್ರ ಕೃಷಿಯಲ್ಲಿ ಖುಷಿ ಸಾಧ್ಯ.

ಸರಿ, ಕಿಲೋ ಅಡಿಕೆಗೆ ಇನ್ನೂರು ರೂಪಾಯಿ ದಾಟಿತು! ಕಾಳುಮೆಣಸಿಗೆ ನಾಲ್ಕುನೂರು ದಾಟಿದರೂ ಅಟ್ಟದಿಂದಿಳಿಯುವುದಿಲ್ಲ! 'ನೋಡಿ.. ಇನ್ನೂ ದರ ಜಾಸ್ತಿಯಾಗಬಹುದು' ಎನ್ನುವ ಆಪ್ತರ ಸಲಹೆ. ನಿತ್ಯ ಮೂಟೆಗಳನ್ನು ನೋಡುತ್ತಾ ಹಣದ ಎಣಿಕೆಯಲ್ಲಿ ಟೆನ್ಶನ್ನ್ನು ಅಪ್ಪಿಕೊಂಡಿರುವುದು ಖುಷಿಯ ಹೊತ್ತಲ್ಲಿ ಮಸುಕಾಗಿರುತ್ತದೆ. ಒಂದು ದಿವಸ ಐದು ರೂಪಾಯಿ ದರ ಇಳಿಯೆತೆನ್ನಿ. ಏರಿದ ಟೆನ್ಶನ್ ಮತ್ತೂ ಏರುತ್ತದೆ!


ಚಂದ್ರಶೇಖರ್ರ ಕೃಷಿ ಬದುಕಿನಲ್ಲಿ ಇಂತಹ ಟೆನ್ಶನ್ಗಳು ನುಸುಳುವುದಿಲ್ಲ. ಹಾಗಾಗಿ ಕೃಷಿ ಒಳನೋಟಗಳನ್ನು ಸ್ಪಷ್ಟವಾಗಿ, ಅಷ್ಟೇ ಧೈರ್ಯವಾಗಿ ಹೇಳಲು ಸಾಧ್ಯವಾಗಿದೆ. ವೇಗವೇ ಮಾನದಂಡವಾಗುಳ್ಳ ವಾಹನ, ಹಣ, ಬದುಕುಗಳು ನಮ್ಮನ್ನು ಪ್ರಕೃತಿಯಿಂದ ದೂರವಿಟ್ಟಿವೆ. ಯಾವುದಾದರೂ ಗಿಡ ಕಾಣಬೇಕಾದರೆ 'ಎಕ್ರೆಗಟ್ಟಲೆ ಬೆಳೆದು ಸಂಪಾದಿಸು' ಎಂದು ಯಾರಾದರೂ ಹೇಳಬೇಕು ಅಥವಾ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು, ಸೆಮಿನಾರುಗಳಲ್ಲಿ ಹೇಳಬೇಕು.'


ಎಪಿಸಿಯವರ ಇಂದ್ರಪ್ರಸ್ಥದೊಳಗೆ ಮೂರು ವರುಷದ ಹಿಂದೊಮ್ಮೆ ಸುತ್ತಿದ್ದೆ. ಮೊನ್ನೆಯಷ್ಟೇ ಪುನಃ ಸುತ್ತಾಡಿದೆ. ಅಂದಿನ ಅನುಭವಕ್ಕೂ, ಈಗಕ್ಕೂ ತುಂಬಾ ವ್ಯತ್ಯಾಸ. ಅಂದಿದ್ದ ಇಂದ್ರಪ್ರಸ್ಥ ಹಾಗೆನೇ ಇದೆ. ನಾವು ಪ್ರಕೃತಿಯನ್ನು ನೋಡುವ ದೃಷ್ಠಿಕೋನ ಬದಲಾಗಿದೆ ಎಂದು ತಿದ್ದುಪಡಿ ಮಾಡಿಕೊಂಡರೆ ಹೇಗೆ, ಎನ್ನುತ್ತಾ ಚಿನ್ನದ ಸೂಜಿಯಿಂದ ಚುಚ್ಚಬೇಕೇ!


ಮೈಸೂರಿನಿಂದ ಹದಿನೈದು ಕಿಲೋಮೀಟರ್ ದೂರದ ಕಳಲವಾಡಿ ಗ್ರಾಮದಲ್ಲಿ ಹದಿಮೂರೆಕ್ರೆ ಜಾಗ. ಬಯಲು ಸೀಮೆ. ಮಳೆ ತೀರಾ ಕಡಿಮೆ. ಈ ಜಾಗಕ್ಕೆ ಕಾಲಿರಿಸಿದಾಗ ಎಲ್ಲಾ ತೋಟಗಳಂತೆ ಒಂದಷ್ಟು ತೆಂಗು, ಕಬ್ಬು, ಹಣ್ಣಿನ ಮರಗಳು ಬಿಟ್ಟರೆ ಮತ್ತೆಲ್ಲಾ ಬೋಳು ಬೋಳು. ಮೂವತ್ತು ವರ್ಷವಾಯಿತು, ಇಂದ್ರಪ್ರಸ್ಥದಲ್ಲೀಗ ಎರಡೂವರೆ ಸಾವಿರಕ್ಕೂ ಮಿಕ್ಕಿ ಸಸ್ಯವೈವಿಧ್ಯಗಳಿವೆ. ಇವುಗಳಲ್ಲಿ ಮನುಷ್ಯ ಪ್ರಯತ್ನದಿಂದ ಅರ್ಧದಷ್ಟಾದರೆ, ಮಿಕ್ಕಿದ್ದೆಲ್ಲಾ ಪ್ರಕೃತಿಯ ಕೊಡುಗೆ.


ತಾಂತ್ರಿಕ ಪದವೀಧರರಾದ ಎಪಿಸಿ ಐದಂಕೆ ಹಣ ಬರುವ ಉದ್ಯೋಗವನ್ನು ಆಯ್ಕೆ ಮಾಡಬಹುದಿತ್ತು. ನಗರದ ಮಧ್ಯೆ ತಂಪು ಕಾರಿನಲ್ಲಿ ಓಡಾಡುವಷ್ಟು ವಿತ್ತಸಂಪನ್ನತೆ ಗಳಿಸಬಹುದಿತ್ತು. 'ಇನ್ನೊಬ್ಬರ ಅಧೀನದಲ್ಲಿ ದುಡಿಯುವುದಿಲ್ಲ. ಪೇಟೆಯ ವಾತಾವರಣ ಸಲ್ಲ' ಎಂಬ ಎರಡು ಕಾರಣಗಳಿಗಾಗಿ ಕೃಷಿಯನ್ನು ಆಯ್ದುಕೊಂಡಾಗ, ಅಪ್ಪ ತಿಮ್ಮಪ್ಪಯ್ಯನವರು ಬೆನ್ನುತಟ್ಟಿದರು. ಅನುಭವವನ್ನು ಧಾರೆಯೆರೆದರು. ಮಗನ ಕೃಷಿ ಕಾಯಕಕ್ಕೆ ಹೆಗಲಾದರು.


ಅಲ್ಲಿಂದ ಶುರುವಾಯಿತು, ಕೃಷಿಯೊಂದಿಗೆ ಪ್ರಕೃತಿಯ ಓದುವಿಕೆ. ಅವುಗಳೊಂದಿಗೆ ಮಾತುಕತೆ. 'ಆಧುನಿಕ ಒಳಸುರಿಗಳ ಗಾಢತೆ ಮತ್ತು ಪರಿಣಾಮಗಳ ಅಧ್ಯಯನ. ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಪರಿ. ಇವುಗಳಿಂದ ಹೊರ ಬಾರದೆ ತಾನು ನಂಬಿದ ಕೃಷಿ ಅಸಾಧ್ಯ' ಎನ್ನುತ್ತಾ ರಾಸಾಯನಿಕ ಗೊಬ್ಬರ, ಸಿಂಪಡಣೆಗಳಿಗೆ ತಿಲಾಂಜಲಿಯಿಟ್ಟರು.


'ಕಾಡಿನ ವಾತಾವರಣವು ತೋಟಕ್ಕೆ ಸಮೀಪವಾಗಿರಬೇಕು. ಆಗಲೇ ಜೀವವೈವಿಧ್ಯ', ಎಂಬ ತತ್ವವನ್ನು ನಂಬಿದ್ದು ಮಾತ್ರವಲ್ಲ, ಅನುಷ್ಠಾನಿಸಿದ್ದಾರೆ ಎಪಿಸಿ. ಪ್ರಕೃತಿಯೊಂದಿಗೆ ಬದುಕನ್ನು ಅನುಸಂಧಾನ ಮಾಡಿಕೊಂಡರೆ ಕಷ್ಟವಿಲ್ಲ. ಒಮ್ಮೆ ಅಭ್ಯಾಸವಾದರೆ ಮತ್ತೆಲ್ಲಾ ಸಲೀಸು.


ಈಗ ಇಂದ್ರಪ್ರಸ್ಥದಲ್ಲಿ ಏನೇನಿದೆ? ಹನ್ನೊಂದು ಜಾತಿಯ ತೆಂಗು, ಹದಿನಾರು ಜಾತಿಯ ಬಾಳೆ, ತೊಂಭತ್ತು ಜಾತಿಯ ಗಡ್ಡೆಗಳು, ಅಷ್ಟೇ ತರಕಾರಿಗಳು; ನೂರೈವತ್ತು ಜಾತಿಯ ಔಷಧೀಯ ಗಿಡಗಳು, ಐನೂರೈವತ್ತು ಜಾತಿಯ ಅಲಂಕಾರಿಕ ಗಿಡಗಳು, ಇನ್ನೂರ ಇಪ್ಪತ್ತೈದು ಕಾಡು ಮರಗಳು, ಹದಿಮೂರು ಜಾತಿಯ ಅಡಿಕೆ, ನೂರ ಎಂಭತ್ತು ವಿಧದ ಹಣ್ಣುಗಳು, ಎಂಭತ್ತೈದು ಜಾತಿಯ ಸೊಪ್ಪುಗಳು, ಅರುವತ್ತು ಸುವಾಸನಾ ಸಸ್ಯಗಳು, ಇಪ್ಪತ್ತೈದು ಜಾತಿಯ ಹುಲ್ಲುಗಳು, ನೂರು ಜಾತಿಯ ಕಳ್ಳಿಗಳು. ಅಲ್ಲದೆ ಹೆಸರು ಗೊತ್ತಿಲ್ಲದ ಅಲಂಕಾರಿಕ ಗಿಡಗಳು, ಬಳ್ಳಿಗಳು, ಕಳೆಗಳು ಸಾವಿರಕ್ಕೂ ಮಿಕ್ಕಿ..!

'ನನ್ನ ತೋಟದಲ್ಲಿ ಎಲ್ಲೆಲ್ಲೂ ಹಣವೇ ಬಿದ್ದಿರುತ್ತದೆ' ಎನ್ನುತ್ತಾರೆ. ಫಕ್ಕನೆ ಕೇಳುವಾಗ ಒಗಟಾಗಿ ಕಾಣುತ್ತದೆ. ಅಲ್ಲಿನ ಒಂದೊಂದು ಹಣ್ಣು, ಚಿಗುರು ಪ್ರಕೃತಿ ನೀಡಿದ ಹಣ. ಪೃಕೃತಿ ನೀಡುವ ಕೃತಜ್ಞತೆ. ವರ್ಷಪೂರ್ತಿ ಒಂದಲ್ಲ ಒಂದು ಉತ್ಪನ್ನದ ಕೊಯಿಲು. ಅವನ್ನು ನಗದೀಕರಿಸುವ ಕೈತುಂಬಾ ಕೆಲಸಗಳು. ಜತೆಗೆ ಹಟ್ಟಿ, ಬೋನ್ಸಾಯಿ, ಗಿಡಗಳು.. ಹೀಗೆ ದಿನವಿಡೀ ದುಡಿತ. ಹೀಗಿರುತ್ತಾ ನಗರದ ಬೇರೆ ಆಲೋಚನೆಗಳು ಹೇಗೆ ಬಂದಾವು? ದಿನವಿಡೀ 'ಶೆಡ್ಯೂಲ್' ಆದಾಗ ಮನಸ್ಸು ಗೆಜಲುವುದಿಲ್ಲ! ವಿಕಾರ ನುಸುಳುವುದಿಲ್ಲ. ಇಂದಿನ ಕೆಲಸ ಮಾಡುತ್ತಿದ್ದಂತೆ, ನಾಳೆಯ ಕೆಲಸಗಳ ಪಟ್ಟಿ ಮನಃಪಟಲದಲ್ಲಿ ಸಿದ್ಧವಾಗಿರುತ್ತದೆ.


ಕೃಷಿ ಯಶಸ್ಸಾದರೆ ಸಾಲದಲ್ವಾ, ಅಡುಗೆ ಮನೆಯೂ ಸಂಪನ್ನವಾಗಬೇಕು. ಆಗಲೇ ಆರೋಗ್ಯ, ಭಾಗ್ಯ. 'ನನ್ನ ತೋಟದ ಎಲ್ಲಾ ಚಿಗುರು, ಕಾಯಿಗಳು ಅಡುಗೆ ಮನೆಗೆ ಹೋಗುತ್ತದೆ. ಬಳಕೆಯ ಸಾಧ್ಯಾಸಾಧ್ಯತೆಗೆ ಇದೊಂದು ಪ್ರಾಕ್ಟಿಕಲ್ ಪ್ರಯೋಗಾಲಯ,' ಮಡದಿ ನಿರ್ಮಲ ಎ.ಪಿ.ಸಿ.ಯವರತ್ತ ಕಣ್ಣುಮಿಟುಕಿಸುತ್ತಾ ಚಂದ್ರಶೇಖರ್ ಹೇಳುತ್ತಾರೆ, ತಿಂದು ನೋಡಿದರೆ ತಾನೆ; ತಿನ್ನಲು ಆಗುತ್ತೋ, ಇಲ್ವೋ ಅಂತ ಗೊತ್ತಾಗೋದು? ದನಗಳು ತಿಂದರೆ ಏನೂ ಆಗುವುದಿಲ್ಲ ಅಂತಾದರೆ ಮನುಷ್ಯರು ಧಾರಾಳ ತಿನ್ನಬಹುದು. ಶೇ.99ರಷ್ಟು ಬಾಯಿಗೆ ಇಷ್ಟವಾದರೆ ಅದು ಆಹಾರಕ್ಕೆ ಓಕೆ. ಪಕ್ಷಿಗಳಿಗೆ ಮೂಸಿದ ತಕ್ಷಣ ಗೊತ್ತಾಗಿ ಬಿಡುವುದಿಲ್ವಾ. ರುಚಿ ಇಲ್ಲದ್ದನ್ನು ರುಚಿ ಬರುವಂತೆ ಮಾಡಿ ಸೇವಿಸುತ್ತೇವೆ. ಹಾಗಾಗಿ ಹೊಸತನ್ನು ಹುಡುಕಿ ತಿನ್ನಲು ಕಲಿಯಬೇಕು. ಆಹಾರ ಸಂಸ್ಕೃತಿಯ ಮೂಲ ಆಸರೆಯಾಗಿದ್ದ ಅಡುಗೆ ಮನೆಯು ಯಾಂತ್ರಿಕ ಬದುಕಿನಲ್ಲಿ ಕಳೆದುಹೋಗುತ್ತಿದೆ!

ಎಪಿಸಿಯವರ ಆಹಾರ ಸಂಶೋಧನೆಗಳ ಫಲವಾಗಿ ಅವರ ಅಡುಗೆ ಮನೆಯಲ್ಲಿ ಇನ್ನೂರಕ್ಕೂ ಮಿಕ್ಕಿ ಮೌಲ್ಯವರ್ಧಿತ ಉತ್ಪನ್ನಗಳು ಸಿದ್ಧವಾಗುತ್ತದೆ. ತೋಟದ ಉತ್ಪನ್ನಗಳು ಹೊಸ ಹೊಸ ಅವತಾರದೊಂದಿಗೆ ಗ್ರಾಹಕರ ಕೈಗೆ 'ತಾಜಾ'ವಾಗಿ ಸಿಕ್ಕಿದಾಗ ಯಾರಿಗೆ ಬೇಡ ಹೇಳಿ? ಗಂಡ-ಹೆಂಡಿರ ಸತತ ದುಡಿಮೆ. ತೋಟ ಭೇಟಿಗೆ ಬಂದವರಿಗೆ ಖರೀದಿಗೆ ಅವಕಾಶವಾಗಲಿ ಎಂಬುದಕ್ಕಾಗಿ ಮನೆಯಲ್ಲೇ ಔಟ್ಲೆಟ್. ಬಹ್ವಂಶ ಮೈಸೂರು ಪೇಟೆಯಲ್ಲಿರುವ 'ನೇಸರ' ಸಾವಯವ ಮಳಿಗೆಗೆ ರವಾನೆ.


ಸಾವಯವ ಕೃಷಿಯು ಉಪದೇಶ, ಭಾಷಣದಿಂದ ಬರುವಂತಹುದಲ್ಲ. ಬಹುತೇಕರು ರಾಸಾಯನಿಕ ಕೃಷಿಯಿಂದ ರೋಸಿಯೇ ಸಾವಯವವನ್ನು ನೆಚ್ಚಿಕೊಂಡಿದ್ದಾರೆ. ನನ್ನ ತೋಟದಲ್ಲಿ ಇಳುವರಿಗಿಂತ, ಜ್ಞಾನಕ್ಕೆ ಪ್ರಾಧಾನ್ಯತೆ. ಇದು 'ನಾಲೇಜ್ ಬ್ಯಾಂಕ್'. ಇದನ್ನು ಗಳಿಸಲು ಮಾನಸಿಕ ದೃಢತೆ ಬೇಕು. ಸಾವಯವದ ಕುರಿತು ಅಧಿಕೃತ ಮತ್ತು ಗಟ್ಟಿ ಅನುಭವಗಳ ಪರಿಣಾಮವಾಗಿ ಕೆಲವೊಂದು ಸಲ ಎಪಿಸಿ ನಿಷ್ಠುರವಾಗಿ ಮಾತನಾಡಿದಂತೆ ಭಾಸವಾಗುತ್ತದೆ.


ತನ್ನ ಕೃಷಿಯನ್ನು ಅವರೇ ಒಂದೆಡೆ ಹೇಳುತ್ತಾರೆ - ಇಂದ್ರಪ್ರಸ್ಥವೆಂಬ ನಮ್ಮ ತೋಟದಲ್ಲಿ ಏನಾದರೊಂದಷ್ಟು ಭಿನ್ನ ಸಾಧನೆ ಆಗಿದ್ದರೆ, ಇತರರಿಗೆ ಹೇಳಬಹುದಾದ ಒಂದಷ್ಟು ವಿಷಯಗಳು ನನಗೆ ತಿಳಿದಿದ್ದರೆ, ಅದಕ್ಕೆ ಅತ್ಯಂತ ಪ್ರಮುಖ ಕಾರಣ - ನಮಗೆ ಇರುವುದರೊಂದೇ ಮನೆ, ಅದುವೇ ನಮ್ಮ ತೋಟದ ಮನೆ. ಮನವೆಲ್ಲೋ? ಮನೆಯೆಲ್ಲೋ? ಇರುವವರಿಗೆ ಎಲ್ಲಿದ್ದಿತು ನೆಮ್ಮದಿ ಸುಮ್ಮನೆ?! ಇಷ್ಟೆಲ್ಲಾ ಸಂಪನ್ಮೂಲವಿದ್ದ ಇಂದ್ರಪ್ರಸ್ಥದ ಆದಾಯ ಎಷ್ಟು? 'ಸಾಲಸೋಲಗಳಿಲ್ಲದೆ ಜೀವನ ನಡೆಸುವಷ್ಟು'!


ತೀರ್ಥಹಳ್ಳಿಯ ಕುರುವಳ್ಳಿ ಪುರುಷೋತ್ತಮ ರಾವ್ ಪ್ರತಿಷ್ಠಾನವು ಪ್ರತೀ ವರುಷ ಅಪ್ಪಟ ಸಾವಯವ ಕೃಷಿಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಸಾವಯವವನ್ನು ಬದುಕಾಗಿ ಸ್ವೀಕರಿಸಿ, ಬರಡು ಬಯಲಲಿ ಹಸುರು ಭವನ ರೂಪಿಸಿದ ಮರಿಕೆಯ ಎ.ಪಿ.ತಿಮ್ಮಪ್ಪಯ್ಯ ಕುಟುಂಬಕ್ಕೆ (ಎ.ಪಿ.ಚಂದ್ರಶೇಖರ್, ಎ.ಪಿ.ಸದಾಶಿವ) ಈ ಸಾಲಿನ 'ಪುರುಷೋತ್ರಮ ಸಂಮಾನ್'. ಎಪ್ರಿಲ್ 8, 2012ರಂದು ತೀರ್ಥಹಳ್ಳಿಯಲ್ಲಿ ಪ್ರಶಸ್ತಿ ಪ್ರದಾನ-ಸಂವಾದ.

Tuesday, March 20, 2012

ಕೋಲಾರ ರೈತರನ್ನು ಸೆಳೆದ ಗೇರು






ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಲ್ಲಿ (ರಾಷ್ಟ್ರೀಯ ಗೇರು ಸಂಶೋಧನಾಲಯ - Directorate of Cashew Research, Puttur) 'ಗೇರು ದಿನೋತ್ಸವ'. ದೂರದ ಕೋಲಾರದಿಂದ ಮೂವತ್ತಕ್ಕೂ ಮಿಕ್ಕಿ ರೈತರು ಭಾಗಿ. ತಮ್ಮೂರಲ್ಲೂ ಗೇರು ಕೃಷಿಯನ್ನು ಕೈಗೊಳ್ಳಬಹುದೇ? ಅವರ ಮುಂದಿದ್ದ ಪ್ರಶ್ನೆ. 'ನಮ್ಮಲ್ಲಿ ಟೊಮೆಟೋ ವಾಣಿಜ್ಯ ಕೃಷಿ. ಅದಕ್ಕೆ ರಸಗೊಬ್ಬರ, ಸಿಂಪಡಣೆ ಅನಿವಾರ್ಯ. ದರವೂ ಏರಿಳಿತ. ನೀರಾವರಿ ಹೆಚ್ಚು ಬೇಡದ ಗೇರು ಕೃಷಿಯು ಟೊಮೆಟೋಗೆ ಪರ್ಯಾಯವಾಗಬಹುದೇ?' ಎಂಬ ಸಂಶಯಕ್ಕೆ ಕೇಂದ್ರದ ಹಿರಿಯ ವಿಜ್ಞಾನಿ ಗಂಗಾಧರ ನಾಯಕ್ - ಆಗದು - ಎಂದಷ್ಟೇ ಉತ್ತರಿಸಿದರು.


ಕಾರಣವೂ ಇಲ್ಲದಿಲ್ಲ. ಟೊಮೆಟೋ ಕೃಷಿಯಲ್ಲಿ ಲಕ್ಷದ ಲಕ್ಷ್ಯ. ಎಕರೆ ಇಂತಿಷ್ಟು ಲಕ್ಷ ಸಿಗಲೇ ಬೇಕೆಂಬ ನಿರೀಕ್ಷೆ. ಒಳಸುರಿಗಳೂ ಯಥೇಷ್ಟ. ಇಳುವರಿಯಲ್ಲಿ ಮಾತ್ರ ಅದೃಷ್ಟದಾಟ. ಆ ರೀತಿಯ ಲಕ್ಷವನ್ನು ಗೇರು ಕೃಷಿಯಲ್ಲಿ ನಿರೀಕ್ಷಿಸುವಂತಿಲ್ಲ. ಎಕರೆಗೆ ಸೀಮಿತ ಗಿಡಗಳು. ಹೆಚ್ಚು ಇಳುವರಿ ಸಿಗಬೇಕೆಂದರೆ ಕೆಲವು ವರುಷಗಳು ಕಾಯಬೇಕು. ಜತೆಗೆ ಮಾರುಕಟ್ಟೆಯಲ್ಲಿ ದರವೂ ಚೆನ್ನಾಗಿರಬೇಕು. ಕೋಲಾರ ಸುತ್ತಮುತ್ತ ಗೇರುಬೀಜದ ಫ್ಯಾಕ್ಟರಿಗಳು ಇವೆ. ಹಾಗಾಗಿ ಸಂಸ್ಕರಣೆ, ಮಾರಾಟ ಸುಲಭ.

ಮುಳಬಾಗಿಲು, ಕೋಲಾರ ಪ್ರದೇಶವು ಮಾವಿಗೆ ಖ್ಯಾತಿ. ಮಾವಿಗೆ ಪರ್ಯಾಯವಾಗಿ ಗೇರು ಕೃಷಿಯತ್ತ ಬಹುತೇಕರ ಒಲವು. ಮಾವು ಈ ವರುಷ ಹೆಚ್ಚು ಇಳುವರಿ ನೀಡಿದರೆ, ಮುಂದಿನ ವರುಷ ಅಷ್ಟಕ್ಕಷ್ಟೇ. ಜತೆಗೆ ರೋಗಬಾಧೆ. ಅಸಮರ್ಪಕವಾಗುತ್ತಿರುವ ಪ್ರಾಕೃತಿಕ ಸ್ಥಿತಿ. ಮಾರುಕಟ್ಟೆಯೂ ಅನಿಶ್ಚಿತ. ಹೀಗಾಗಿ ಹೊಸ ತಂತ್ರಜ್ಞಾನದಲ್ಲಿ ಬೆಳೆಯಬಹುದಾದ ಗೇರು ಕೃಷಿಯನ್ನು ನೆಚ್ಚಿಕೊಂಡ ರೈತರು ಪುತ್ತೂರಿನ ಸಂಶೋಧನಾ ಕೇಂದ್ರಕ್ಕೆ ಆಗಮಿಸಿ, ಕೃಷಿ ಕ್ರಮವನ್ನು ನೋಡಿ ನಿರ್ಧಾರಕ್ಕೆ ಬಂದರು - ಮಾವಿಗೆ ಪರ್ಯಾಯವಾಗಿ ಗೇರು ಕೃಷಿಯನ್ನು ಆಯ್ದುಕೊಳ್ಳಬಹುದು.

ಗೇರು ದಿನೋತ್ಸವದಂದು ಕೇಂದ್ರದ ನಿರ್ದೇಶನದಲ್ಲಿ ರೂಪಿತವಾದ ಗೇರು ಕೃಷಿಕರ ತೋಟವನ್ನು ಸಂದರ್ಶಿಸುವುದು ವಾಡಿಕೆ. ಈ ವರುಷ ಪುತ್ತೂರು (ದ.ಕ.) ಸನಿಹದ ಇರ್ದೆ-ಪಾಪನಡ್ಕ ಕೆ.ದೇರಣ್ಣ ರೈಯವರ ಗೇರು ತೋಟದ ವೀಕ್ಷಣೆ. ಹೀಗೆ ನೇರವಾಗಿ ವೀಕ್ಷಿಸುವುದರಿಂದ ಕೃಷಿಯ ಸುಖ-ದುಃಖಗಳ ವಿನಿಮಯ. ಬೇಕು-ಬೇಡಗಳ ನಿರ್ಧಾರ ಸುಲಲಿತ. ಕೋಲಾರದ ಕೃಷಿಕರಿಗೆ ಅವರ ಕೃಷಿ, ಇಳುವರಿ ಮತ್ತು ಮಾರುಕಟ್ಟೆ ಆಕರ್ಶಿತವಾಯಿತು.


ಸರಿ, ದೇರಣ್ಣ ರೈಯವರ ಗೇರು ತೋಟದ ವೈಶಿಷ್ಯವೇನು? ಒಮ್ಮೆ ತಿರುಗಾಡಿ ಬರೋಣ. ಇವರದು ಅತಿ ಸಾಂದ್ರ ಕೃಷಿ ಪದ್ಧತಿ. ಎಕ್ರೆಗೆ ನಾಲ್ಕು ನೂರು ಗೇರು ಗಿಡಗಳು. ಗಿಡದಿಂದ ಗಿಡಕ್ಕೆ ಮೂರಡಿ ಅಂತರ. ಎನ್.ಆರ್.ಸಿ.ಸಿ.ಸೆಲೆಕ್ಷನ್ 2, ವಿಆರ್ಐ3, ವಿ-4, ಉಳ್ಳಾಲ-3 ತಳಿಗಳು. 2010ರಲ್ಲಿ ಗಿಡಗಳ ನಾಟಿ.


ನೆಡುವಾಗಲೇ ಇಪ್ಪತ್ತು ಕಿಲೋ ಹಟ್ಟಿಗೊಬ್ಬರ, ಕಾಲು ಕಿಲೋ ರಾಕ್ಫಾಸ್ಪೇಟ್ ಗೊಬ್ಬರ ಉಣಿಕೆ. ಆರು ತಿಂಗಳಲ್ಲಿ ಮೂರಡಿ ಎತ್ತರಕ್ಕೆ ಗಿಡವು ಆರೋಗ್ಯವಾಗಿ ಬಂತಂತೆ. ಹನಿ ನೀರಾವರಿ ಪದ್ಧತಿಯಲ್ಲಿ ನೀರಾವರಿ. ಆರಂಭದ ಹೂವನ್ನು ಕೇಂದ್ರದ ಸಲಹೆಯಂತೆ ಚಿವುಟಿದರು. 'ಅಷ್ಟು ಚೆನ್ನಾಗಿ ಬಂದ ಹೂವನ್ನು ಕೀಳಲು ಮನಸ್ಸು ಬರಲಿಲ್ಲ. ಒಂದಷ್ಟು ಗಿಡದಲ್ಲಿ ಹೂವನ್ನು ಚಿವುಟದೆ ಬಿಟ್ಟಿದ್ದೆ' ಎನ್ನುತ್ತಾರೆ. ಇದರಿಂದಾಗಿ ಚಿವುಟಿದ ಮರಕ್ಕೂ, ಚಿವುಟದ ಮರಕ್ಕೂ ಇಳುವರಿಯಲ್ಲಿ ವ್ಯತ್ಯಾಸವನ್ನು ರೈಗಳು ಗಮನಿಸಿದ್ದಾರೆ.


ಸಾಂದ್ರ ಬೇಸಾಯವಾದ್ದರಿಂದ ಮಧ್ಯೆ ಅಂತರ ಬೆಳೆ ಅಸಾಧ್ಯ. ಅಂತರ ಬೆಳೆಯನ್ನು ಬಯಸುವವರು ಗಿಡಗಳ ಅಂತರವನ್ನು ಕನಿಷ್ಠ ಏಳಡಿಯಷ್ಟು ವಿಸ್ತರಿಸಬೇಕು. ಈ ಭಾಗದಲ್ಲಿ ಸಾಂದ್ರ ಬೇಸಾಯವನ್ನು ಮಾಡಿದವರು ವಿರಳ. ತೋಟ ವೀಕ್ಷಣೆ ಬಳಿಕ ಗೇರು ಮಾತುಕತೆ ಜರುಗಿತು. ಹೆಚ್ಚು ವ್ಯಾಪ್ತಿಯಲ್ಲಿ ಗೇರು ಕೃಷಿ ಇರುವ ಮಹಾರಾಷ್ಟ್ರ. ಭಾರತದಲ್ಲಿ ಪ್ರಸ್ತುತ ಹದಿಮೂರುವರೆ ಟನ್ ಬೇಡಿಕೆಯಿದ್ದು, ಆರೂವರೆ ಟನ್ ಮಾತ್ರ ಉತ್ಪಾದನೆಯಾಗುತ್ತಿದೆ. 2001ರಲ್ಲಿ ಗೇರು ಬೀಜ ಉತ್ಪಾದನೆಯಲ್ಲಿ ಭಾರತವು ನಂ.1 ಆಗಿತ್ತು. ಈಗದು ವಿಯೆಟ್ನಾಂಗೆ ಜಾಗ ಬಿಟ್ಟುಕೊಟ್ಟಿದೆ!


ಉಳಿದ ಬೆಳೆಗಳಂತೆ ಗೇರುಬೀಜಕ್ಕೂ ಉತ್ತಮ ಧಾರಣೆ ಸಿಗುವಂತಾಗಬೇಕು. ಬೇಕಾದಂತೆ ಧಾರಣೆ ಪಡೆಯಲು ಆಗುತ್ತಿಲ್ಲ. ಮಾರುಕಟ್ಟೆ ವ್ಯವಸ್ಥೆಯನ್ನು ನಿಯಂತ್ರಿಸುವ ರೈತರ ಸಂಘಟನೆ ಬೇಕು. ಅಡಿಕೆ, ಕಾಫಿಗೆ ಇದ್ದಂತೆ ಕೃಷಿಕರ ಲಾಬಿ ಮುಖ್ಯ. ಮಾರುಕಟ್ಟೆಯನ್ನು ಕೃಷಿಕರೇ ನಿರ್ಧರಿಸುವಂತಾಗಬೇಕು. ಸರಿಯಾದ ಧಾರಣೆ ಸಿಗದ ಕಾರಣ ಕೃಷಿಗೆ ಮುತುವರ್ಜಿ ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ 'ಗೇರು ಬೆಳೆಗಾರರ ಸಂಘ'ವೊಂದರ ಸ್ಥಾಪನೆಗೆ ಕೃಷಿಕರೇ ನಿರ್ಧರಿಸಿರುವುದು ಶ್ಲಾಘನೀಯ. ಅದರ ರೂಪುರೇಷೆ, ಸ್ವರೂಪ..ಗಳ ಕುರಿತು ಶೀಘ್ರದಲ್ಲೇ ಕಾರ್ಯಹೂರಣ ಸಿದ್ಧವಾಗಲಿದೆ.


ಗೇರು ಸಂಶೋಧನಾ ಕೇಂದ್ರವು ನಮ್ಮ ನಡುವೆ ಇರುವ ಉಳಿದ ಸಂಶೋಧನಾ ಕೇಂದ್ರಗಳಿಗಿಂತ ಭಿನ್ನ. ಇಲ್ಲಿ ರೈತರಿಗೆ ಮಣೆ. ಅವರ ಮಾತು, ಅನುಭವಗಳ ಸ್ವೀಕಾರ. ರೈತರು ಕೇಂದ್ರಕ್ಕೆ ಯಾವ ವೇಳೆಗೆ ಬರಲಿ, ವಾಚ್ ನೋಡದೆ ಸೇವೆ ನೀಡುವ ವಿಜ್ಞಾನಿಗಳು, ವರಿಷ್ಠರು ಕೇಂದ್ರದ ಆಸ್ತಿ. ಇಲ್ಲಿ ಒತ್ತಡ ಇಲ್ಲ. ಸಬ್ಸಿಡಿಯನ್ನು ಮನೆಬಾಗಿಲಿಗೆ ಚೆಕ್ ಮೂಲಕ ಕೊಡುವ ವ್ಯವಸ್ಥೆ. ಅವಿದ್ಯಾವಂತ ರೈತರೂ ಇಲ್ಲಿ ಮುಕ್ತವಾಗಿ ಮಾತನಾಡಬಹುದು. ಸಂಶೋಧನಾ ಫಲಿತಾಂಶ ನೇರವಾಗಿ ರೈತರ ಹೊಲಕ್ಕೆ. ಲ್ಯಾಬ್ ಟು ಲ್ಯಾಂಡ್.


ಗೇರು ದಿನೋತ್ಸವದಲ್ಲಿ ಮಂಚಿಯ ಶ್ರೀಮತಿ ಸತ್ಯಭಾಮ ಅವರು ತಯಾರಿಸಿದ ಗೇರು ಹಣ್ಣಿನ ಹಲ್ವ ಮತ್ತು ಪಾಯಸ - ಮೌಲ್ಯವರ್ಧನೆಯ ಅವಕಾಶಕ್ಕೆ ಕನ್ನಡಿ.