Saturday, June 30, 2012

ಮೀಯಪದವು : ಹಲಸಿನ ಹಬ್ಬ



ಕಾಸರಗೋಡು ಜಿಲ್ಲೆಯ ಮೀಯಪದವಿನ 'ಚೌಟರ ಚಾವಡಿ'ಯಲ್ಲಿ ಹಲಸಿನ ಹಬ್ಬ. (Jack Fest, Meeyapadavu) ಡಾ.ಡಿ.ಸಿ.ಚೌಟ ಸಹೋದರರ ಉಸ್ತುವಾರಿಕೆ. ಹಿರಿಯರಾದ ಡಿ.ಕೆ.ಚೌಟರು ಹಲಸಿನ ಹಣ್ಣನ್ನು ತುಂಡರಿಸುವುದರ ಮೂಲಕ ಹಬ್ಬದ ಉದ್ಘಾಟನೆ. ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್, ಡಾ.ವಾರಣಾಶಿ ಕೃಷ್ಣಮೂರ್ತಿ, ಕಸಿತಜ್ಞ ಗುರುರಾಜ ಬಾಳ್ತಿಲ್ಲಾಯರ ಉಪಸ್ಥಿತಿ.

ಮೀಯಪದವು ಸುತ್ತುಮುತ್ತಲಿನ ಮೂವತ್ತೈದು ಹಲಸಿನ ಹಣ್ಣುಗಳು 'ರುಚಿನೋಡಿ-ತಳಿಆಯ್ಕೆ' ಪ್ರಕ್ರಿಯೆಗೆ ಆಗಮಿಸಿದ್ದುವು. ಮುಳಿಯ ವೆಂಕಟಕೃಷ್ಣ ಶರ್ಮರ ನೇತೃತ್ವದ ಎಂಟು ಮಂದಿ ತೀರ್ಪುಗಾರರ ತಂಡವು ನಾಲ್ಕು ಉತ್ತಮ ತಳಿಯನ್ನು ಆಯ್ಕೆ ಮಾಡಿತ್ತು. ಹಲಸಿನ ಬಣ್ಣ, ಪರಿಮಳ, ಫಿಲ್ಲಿಂಗ್, ಹಲಸಿನ ಗಾತ್ರ, ಕ್ರಿಸ್ಪ್. ರುಚಿ - ಹಣ್ಣುಗಳ ಆಯ್ಕೆಗೆ ಮಾನದಂಡಗಳು. ತಿರುಮಲೇಶ್ವರ ಭಟ್ಟರ 'ಮಲ್ಲಿಗೆ ಬಕ್ಕೆ'ಯು ಓಟದಲ್ಲಿ ಮುಂದಿದ್ದರೆ, ಶಿವಕುಮಾರ್ ಆವರ 'ಹೊನ್ನಾಡಿ ಎಲಿಮಲೆ' ತಳಿಗೆ ದ್ವಿತೀಯ ಸ್ಥಾನ. ಶರೀಫ್ ಮತ್ತು ಕೆ.ವಿ.ರಾಧಾಕೃಷ್ಣ ಅವರ ಹಿತ್ತಿಲಿನ ತಳಿಗಳಿಗೆ ತೃಪ್ತಿಕರ ಸ್ಥಾನ.

ಮಧ್ಯಾಹ್ನ ಹಲಸಿನ ಪುಷ್ಕಳ ಭೋಜನ. ಜ್ಯಾಕ್ ಮಂಚೂರಿಯನ್, ಜೆಲ್ಲಿ, ಮುಳುಕ, ಹಲ್ವ, ಪಾಯಸ.. ಹೀಗೆ ಹಲಸುಮಯ. ಅಪರಾಹ್ನ 'ಹಲಸಿನ ಮಾತುಕತೆ'. ಹಲಸಿನ ಮಾರುಕಟ್ಟೆ ಕುರಿತ ಯಶೋಗಾಥೆಯನ್ನು ತೆರೆದಿಟ್ಟವರು ಮುಳಿಯ ವೆಂಕಟಕೃಷ್ಣ ಶರ್ಮ, ಡಾ.ವಾರಣಾಶಿ ಕೃಷ್ಣಮೂರ್ತಿ ಮತ್ತು ಡಾ.ಡಿ.ಸಿ.ಚೌಟ. ಗಿಡಗಳ ಆರೈಕೆಯ ಸೂಕ್ಷ್ಮಗಳತ್ತ ಗುರುರಾಜ ಬಾಳ್ತಿಲ್ಲಾಯ ಬೆಳಕು ಚೆಲ್ಲಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಣೆ. ಪತ್ರಕರ್ತ ಅಡ್ಡೂರು ಕೃಷ್ಣರಾವ್, ಉಬರು ರಾಜಗೋಪಾಲ ಭಟ್ಟ, ಶಿರಂಕಲ್ಲು ನಾರಾಯಣ ಭಟ್ಟರು ತಳಿಆಯ್ಕೆಯಲ್ಲಿ ಮುಂದಿದ್ದ ಹಲಸಿನ ಯಜಮಾನರುಗಳಿಗೆ ಬಹುಮಾನ ವಿತರಿಸಿದರು.

'ಹಣ್ಣು ನೀಡುವ ಹಲಸಿನ ಮರಗಳನ್ನು ಕಡಿಯದೆ ಉಳಿಸಿ' ಎಂದು ಉದ್ಘಾಟನೆ ಮಾಡುತ್ತಾ ಡಿ.ಕೆ.ಚೌಟರು ಹೇಳಿದ್ದರು. ಇದು ಹಬ್ಬದ ಘೋಷವಾಕ್ಯ! ಹಪ್ಪಳ, ಚಿಪ್ಸ್, ಉಪ್ಪುಸೊಳೆ, ಹಲಸಿನ ವೈನ್, ಜ್ಯಾಕ್ ನಟ್.. ಪ್ರದರ್ಶನದಲ್ಲಿ ಗಮನ ಸೆಳೆದವು. ಹಲಸಿನ ಗಿಡಗಳ ಮಾರಾಟವು ಹಬ್ಬದ ಹೈಲೈಟ್.

ಅಧ್ಯಾಪಕ ಶ್ರೀಧರ ರಾವ್, ಜಯಪ್ರಕಾಶ್.. ತಂಡವು ಹಬ್ಬದ ವಿವಿಧ ವಿಭಾಗವನ್ನು ಪ್ರತಿನಿಧಿಸಿತ್ತು. ಮನೋಹರ ಚೌಟ, ಪ್ರಭಾಕರ ಚೌಟ ಅಲ್ಲದೆ ಚೌಟರ ಕುಟುಂಬದ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು. ಚೌಟರ ಚಾವಡಿಯ ಈ ಹಬ್ಬಕ್ಕೆ ಮೀಯಪದವಿನ ಸಾಂಸ್ಕೃತಿಕ ವೇದಿಕೆ, ಕೃಷಿ ವಿಕಾಸ ಚಾರಿಟೇಬಲ್ ವಾಹಿನಿ, ಎನ್.ಎಂ.ಜಿ.ಬ್ಯಾಂಕ್ ಮತ್ತು ನಬಾರ್ಡ್ ಕೈಜೋಡಿಸಿದ್ದುವು.

ಪಂಚ್ ಲೈನ್ : ಡಿ.ಕೆ.ಚೌಟ ಉವಾಚ : 'ಬೆಂಗಳೂರು ಹೊರವಲಯದ ತೂಬುಗೆರೆ ಹಲಸು ಇಂದಿರಾಗಾಂಧಿಯವರಿಗೆ ಪ್ರಿಯವಾಗಿತ್ತು. ಅವರಿಗಾಗಿ ಈ ಹಣ್ಣು ದೆಹಲಿ ಸೇರುತ್ತಿದ್ದುದು ಈಗ ಇತಿಹಾಸ'.

Monday, June 25, 2012

ಹಲಸಿನ 'ಹಳ್ಳಿ ಮಾರುಕಟ್ಟೆ'


ಐದಾರು ವರುಷದಿಂದ ಹಲಸು ಸುದ್ದಿಮಾಡುತ್ತಿದೆ, ಅಡುಗೆಮನೆಯಿಂದ ತೊಡಗಿ ಐಸ್ಕ್ರೀಂ ಪಾರ್ಲರ್ ತನಕ! ಅಕಾಲದಲ್ಲಿ ಹಲಸಿನ ಸ್ವಾದ ಸವಿಯುವ ಹಳ್ಳಿ ಜ್ಞಾನಕ್ಕೆ ತಂತ್ರಜ್ಞಾನದ ಝಲಕ್. ಹಪ್ಪಳ, ಚಿಪ್ಸ್ಗಳು ಹಳ್ಳಿಯಲ್ಲಿ ಮಾತ್ರವಲ್ಲ, ನಗರದ ಚುಮುಚುಮು ಚಳಿಗೆ 'ಕುರುಕುರು' ಸದ್ದು ಮಾಡುತ್ತವೆ. ಮೌಲ್ಯವರ್ಧನೆಯತ್ತ ಒಲವು ಹೆಚ್ಚುತ್ತಿದೆ.
ಕಾಡಿನ ಸರಹದ್ದಿನಲ್ಲಿರುವ ಹಲಸಿನ ಹಣ್ಣುಗಳು ಮಂಗಗಳಿಗೆ ಬಿಟ್ಟುಕೊಡೋಣ. (ಕಾಡು ಇದ್ದರೆ!?) ತೋಟದೊಳಗಿನ ಹಣ್ಣುಗಳು ಕೊಳೆತು, ಬಿದ್ದು ರಣರಂಗ! ಒಂದೆಡೆ ಮೌಲ್ಯವರ್ಧನೆ, ಮತ್ತೊಂದೆಡೆ ದುಃಸ್ಥಿತಿ. ದ.ಕ.ಜಿಲ್ಲೆಯ ವಿಟ್ಲ ಸನಿಹದ ಉಬರು 'ಹಲಸು ಸ್ನೇಹಿ ಕೂಟ'ವು, ಅಡ್ಯನಡ್ಕ ವಾರಣಾಶಿ ಸಂಶೋಧನಾ ಪ್ರತಿಷ್ಠಾನದ ಸಾರಥ್ಯದಲ್ಲಿ ಹಲಸಿಗೆ ಹಳ್ಳಿ ಮಾರುಕಟ್ಟೆ ನೀಡುವತ್ತ ಸಣ್ಣ ಹೆಜ್ಜೆಯಿಟ್ಟಿದೆ.
ಈ ಋತುವಿನಲ್ಲಿ ಸುಮಾರು ಮೂವತ್ತು ಟನ್ 'ಬಕ್ಕೆ' ಹಲಸಿಗೆ 'ಮಾನ' ತರುವ ಯತ್ನ. ಇವೆಲ್ಲವೂ ಮುಂಬಯಿಯ ಐಸ್ಕ್ರೀಂ ಉದ್ಯಮದ ಯಂತ್ರದ ಬಾಯೊಳಕ್ಕೆ ಬೀಳುತ್ತವೆ. 'ಅಳಿಕೆ ಮತ್ತು ಕೇಪು ಗ್ರಾಮಗಳ ಸೀಮಿತ ಪ್ರದೇಶದಲ್ಲಿ ಈಗಾಗಲೇ ಹದಿನೈದು ಟನ್ನಿನಷ್ಟು ಕಾಯಿಗಳನ್ನು ಪಡೆದು ಮಾರಾಟ ಮಾಡಿದ್ದೇವೆ. ಈಗಿನ ಅನುಭವ ಆಧಾರದಲ್ಲಿ ಮುಂದಿನ ವರುಷ ಐವತ್ತು ಟನ್ ಮೀರಿದರೂ ಆಶ್ಚರ್ಯವಿಲ್ಲ' ಎನ್ನುತ್ತಾರೆ ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ.
ಮರದಿಂದ ಬಲಿತ ಕಾಯನ್ನು ಕೀಳುವುದು ಶ್ರಮ ಬೇಡುವ ಕೆಲಸ. ಕೊಯಿದು ನಾಲ್ಕೈದು ದಿವಸದಲ್ಲಿ ಹಣ್ಣಾಗುವಂತಹ ಕಾಯನ್ನು ಹಗ್ಗದ ಸಹಾಯದಿಂದ ಕೆಳಗಿಳಿಸಬೇಕು. ಎಲ್ಲರಿಗೂ ಈ ಕೆಲಸ ಅಸಾಧ್ಯ. ಜಾಣ್ಮೆಯರಿತ 'ಸ್ಪೆಷಲಿಸ್ಟ್'ಗಳಿಂದ ಸಾಧ್ಯ. ನಂತರ ವಾಹನಕ್ಕೆ ಲೋಡ್. ಮೊದಲು ಅಡಿಕೆ ಸಿಪ್ಪೆಯ ಬೆಡ್. ಅದರ ಮೇಲೆ ಒಂದು ಲೇಯರ್ ಹಲಸಿನ ಕಾಯಿ. ಡ್ಯಾಮೇಜ್ ಆಗದಂತೆ ಪುನಃ ಮೇಲೆ ಬಾಳೆಗಿಡದ ಕೈಗಳು, ಅಡಿಕೆ ಸೋಗೆಗಳ ಪದರ. ನಂತರ ಹಲಸಿನ ಕಾಯಿಯ ಲೇಯರ್.
ಓರ್ವ ಸ್ಪೆಷಲಿಸ್ಟ್ ಒಂದು ದಿವಸದಲ್ಲಿ 100-120 ಕಾಯಿ ಕೆಳಗಿಳಿಸಬಹುದಷ್ಟೇ. ನಮ್ಮೂರಿನಲ್ಲಿ ಉಮಾನಾಥ ನಾಯಕ್ ಎಂಬವರು ಜಾಣ್ಮೆಯ ಕೆಲಸಗಾರರು. ಒಂದು ದಿವಸದ ಶ್ರಮಕ್ಕೆ ಒಂದು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನುತ್ತಾರೆ ಶರ್ಮ. ಸುಮಾರು  ಐವತ್ತು ಮನೆಗಳಿಂದ ಹಲಸು ಸಂಗ್ರಹ. ಎರಡು ಕ್ವಿಂಟಾಲಿನಿಂದ ಒಂದು ಟನ್ ತನಕ ಹಲಸು ನೀಡುವ ಕೃಷಿಕರಿದ್ದಾರೆ. 'ನಾವೇ ಕೊಯ್ದರೆ ಕಿಲೋಗೆ ಐದು ರೂಪಾಯಿ, ಕೃಷಿಕರೇ ಕೊಯ್ದು ನಿಗದಿತ ಜಾಗಕ್ಕೆ ತಂದರೆ ಏಳೂವರೆ ರೂಪಾಯಿ ನೀಡಿದ್ದೇವೆ. ಒಂದು ಹಲಸು ಏನಿಲ್ಲವೆಂದರೂ ಕನಿಷ್ಟ ಐದಾರು ಕಿಲೋ ತೂಗುತ್ತದೆ. ಕೃಷಿಕರಿಗೆ ಕಾಯಿಯೊಂದರ ಸರಿಸುಮಾರು 25-30 ರೂಪಾಯಿ ಸಿಕ್ಕದಂತಾಯಿತು' ಎಂಬ ಲೆಕ್ಕಾಚಾರ ಶರ್ಮರದು.
ಕಾಯಿ ಕೀಳುವಾಗ ಬಕ್ಕೆ ಮತ್ತು ತುಳುವ (ಬಿಳುವ, ಅಂಬಲಿ) ಯಾವುದೆಂದು ಫಕ್ಕನೆ ಗುರುತು ಹಿಡಿಯಲು ಕಷ್ಟ.  ಮನೆಯವರು ರುಚಿ ನೋಡಿ 'ಬಕ್ಕೆ' ಮರವನ್ನು ಆಯ್ಕೆ ಮಾಡಿದರೆ ಈ ಗೊಂದಲವನ್ನು ಪರಿಹರಿಸಬಹುದು. ಮಳೆಗಾಲದಲ್ಲಿ ಮರ ಏರುವುದು ದೊಡ್ಡ ಸಮಸ್ಯೆ.
ಈ ಪರಿಸರದಲ್ಲಿ 'ಹಲಸಿನ ಕಾಯಿ ಕೊಳ್ಳುತ್ತೀರಂತೆ, ಹೌದಾ, ತೆಕ್ಕೊಳ್ಳುವುದಿದ್ದರೆ ನನ್ನಲ್ಲಿದೆ ಎಂಬ ಮಾತುಕತೆ ಶುರುವಾಗಿದೆ. 'ನಿಮಗಲ್ವಾ, ಒಳ್ಳೆಯ ರುಚಿಯ ಹಣ್ಣು ತಿನ್ನಲು ಕೊಡುತ್ತೇನೆ' ಎಂದವರು, ಹಲಸಿಗೆ ಚಿಕ್ಕ ಮೌಲ್ಯ ಬಂದಾಗ ಈಗ 'ಉಚಿತ'ದ ಸುದ್ದಿ ಮಾತನಾಡುವುದಿಲ್ಲ!
ಯಾವ್ಯಾವ ಮರ ಎಷ್ಟೆಷ್ಟು ಕಾಯಿ ಕೊಡುತ್ತೆ, ಯಾವ ತಳಿ, ಕಾಯಿಕೊಡುವ ಸಮಯ, ಗುಣಮಟ್ಟವನ್ನು ಗುರುತು ಮಾಡಿಕೊಳ್ಳವ ಕೆಲಸವನ್ನು ಶರ್ಮರು ಜತೆಜತೆಗೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬನೂ ಮಾಹಿತಿ ನೀಡಿದರೆ ಒಂದೊಂದು ಗ್ರಾಮದಲ್ಲಿ ಐವತ್ತು ಟನ್ನಿಗೂ ಮಿಕ್ಕಿ ಹಲಸಿನ ಕಾಯಿಗಳ ಸಂಪನ್ಮೂಲತೆಯಿದೆ.   
ಹಲಸು ಮಾರಾಟ ನಮಗೆ ಉದ್ಯಮವಲ್ಲ. ಅದಕ್ಕೊಂದು ಮೌಲ್ಯ ಬರಬೇಕು ಎನ್ನುವ ದೂರದೃಷ್ಟಿ. ಹಳ್ಳಿಯಲ್ಲಿ ಹಲಸಿಗೂ ಮಾರುಕಟ್ಟೆ ಇದೆ ಎಂಬುದು ಅರಿವಾಗಬೇಕು. ನಮ್ಮ ಈ ಪ್ರಕ್ರಿಯೆಯಿಂದ ಮಾರ್ಕೆಟ್ ಓಪನ್ ಆದರೆ ಶ್ರಮ ಸಾರ್ಥಕ,' ಎನ್ನುತ್ತಾರೆ ಡಾ.ವಾರಣಾಶಿ ಕೃಷ್ಣಮೂರ್ತಿ.
(ಸಂಪರ್ಕ : ಮುಳಿಯ ವೆಂಕಟಕೃಷ್ಣ ಶರ್ಮ : 94802200832)

Wednesday, June 20, 2012

ಹಲಸಿನ ಮಾನವರ್ಧನೆ : 'ಅಡುಗೆಗೆ ಸಿದ್ಧ ಹಲಸು'





ನಮ್ಮೂರ ಪ್ರತಿ ಮನೆಯಲ್ಲಿ ಹಲಸಿನ ಮರಗಳಿವೆ, ಯಥೇಷ್ಟ ಕಾಯಿಗಳಿವೆ. ಮರವೇರಿ ಕೊಯ್ಯುವ ಸ್ಪೆಷಲಿಸ್ಟ್ಗಳಿಲ್ಲ. ಹಾಗಾಗಿ ಹಲಸಿನ ಕಾಯಿ ಮರದಲ್ಲೇ ಹಣ್ಣಾಗಿ, ಕೊಳೆತು ಬಿದ್ದು ಮಣ್ಣು ಸೇರುತ್ತದೆ. ಈ ಹಿನ್ನೆಲೆಯಲ್ಲಿ ಹಲಸಿನ ಕಾಯಿಯ ಸೊಳೆ ತೆಗೆದು ಪ್ಲಾಸ್ಟಿಕ್ನೊಳಗಿಟ್ಟು ಒಂದು, ಎರಡು ಕಿಲೋದ ಪ್ಯಾಕೆಟ್ ಮಾಡಿ ಪ್ರಾಯೋಗಿಕವಾಗಿ ಮಾರಾಟಕ್ಕಿಟ್ಟೆವು. ಒಂದೇ ದಿವಸದಲ್ಲಿ ಐವತ್ತು ಕಿಲೋ ಸೊಳೆ ಮಾರಾಟವಾಯಿತು ಎಂಬ ಹೊಸ ಸುದ್ದಿಯನ್ನು ನೀಡುತ್ತಾರೆ, ಕೇರಳದ ಮೀಯಪದವಿನ ಕೃಷಿಕ ಡಾ.ಡಿ.ಸಿ.ಚೌಟ.

ಹೆದ್ದಾರಿಯಿಂದ ಅನತಿ ದೂರದ ಮೀಯಪದವು ಹಳ್ಳಿ. ಹಿತ್ತಿಲಿನ ಮರದಲ್ಲಿ ಹಲಸು ಬಲಿತು ತೂಗಾಡುತ್ತಿದ್ದರೂ ಕೊಯ್ಯಲಾಗದ ಸ್ಥಿತಿ. ಅದರ ಸೊಳೆ ಪ್ರತ್ಯೇಕವಾಗಿ ಸಿಕ್ಕಿದರೆ ಕಾಸು ತೆತ್ತಾದರೂ ಒಯ್ಯುವ ಹಲಸು ಪ್ರಿಯರು! 'ಹಲಸಿನ ಹಣ್ಣಿನ ಸೊಳೆಯನ್ನು ಅಡಿಕೆ ಹಾಳೆಯ ಚಿಕ್ಕ ಪ್ಲೇಟ್ನಲ್ಲಿಟ್ಟು, ಅದಕ್ಕೆ ಕ್ಲಿಂಗ್ಫಿಲ್ಮ್ ಅಂಗಿ ತೊಡಿಸಿದರೆ ಮಾರಾಟವಾಗುತ್ತೋ ಪ್ರಯತ್ನದಲ್ಲಿದ್ದೇನೆ' ಎಂದರು ಚೌಟರು.

ಹಲಸಿನ ಸಂಸ್ಕರಣೆ ಹಲಸಿನ ಬಳಕೆಗಿರುವ ಶಾಪ! ಅದನ್ನು ಬಿಡಿಸಿ, ಮೇಣದಿಂದ ಪಾರಾಗಿ, ಬೇಳೆಯಿಂದ ಬೇರ್ಪಡಿಸಿದ ಸೊಳೆ ಸಿಕ್ಕರೆ ನಮ್ಮ ಅಡುಗೆ ಮನೆಗಳು ಒಳ್ಳೊಳ್ಳೆಯ ಖಾದ್ಯಗಳಿಗೆ ಸಾಕ್ಷಿಗಳಾಗಬಹುದು! ಹಣ್ಣು ಸೊಳೆಗಳನ್ನು ಪ್ಲಾಸ್ಟಿಕ್ ಪ್ಯಾಕೆಟ್ನೊಳಗಿಟ್ಟು ನೀಡಿದರೆ ನಗರಗಳು ಯಾಕೆ, ಹಳ್ಳಿಗಳಲ್ಲೂ ಗ್ರಾಹಕರಿದ್ದಾರೆ!

ಅದನ್ನು 'ಮಿನಿಮಲ್ ಪ್ರಾಸೆಸಿಂಗ್' (ಕನಿಷ್ಠ ಸಂಸ್ಕರಣೆ) ಮಾಡಿ, 'ಅಡುಗೆಗೆ ಸಿದ್ಧ'ವಾಗಿ ನೀಡಿದರೆ ಅಮ್ಮಂದಿರಿಗೆ ಎಷ್ಟೊಂದು ಖುಷಿಯಲ್ವಾ. ಕೇರಳದ ಪತ್ತನಾಂತಿಟ್ಟ ಕಾರ್ಡ್ ಕೃಷಿ ವಿಜ್ಞಾನ ಕೇಂದ್ರವು (ಕೆವಿಕೆ) ಇಂತಹ 'ರೆಡಿ ಟು ಕುಕ್' ಉತ್ಪನ್ನವನ್ನು ಪ್ರಾಯೋಗಿಕವಾಗಿ ಮಾಡಿ ಗೆದ್ದಿದೆ. ತನ್ನ ಮಳಿಗೆಯಲ್ಲಿ ಮಾರಾಟಕ್ಕಿಟ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಎಳೆ ಹಲಸು, ಬಲಿತ ಹಲಸಿನ ಸೊಳೆ ಮತ್ತು ಹಲಸಿನ ಬೀಜಗಳನ್ನು ಅಡುಗೆಗೆ ಸಿದ್ಧ ರೂಪದಲ್ಲಿ ಕೆವಿಕೆ ತಯಾರಿಸುತ್ತಿದೆ. ಈ ಉತ್ಪನ್ನದ ತಾಳಿಕೆ ಒಂದು ದಿವಸ. ತಂಪುಪೆಟ್ಟಿಗೆಯಲ್ಲಿಟ್ಟರೆ ಮೂರು ದಿವಸ. 'ತಾಳಿಕೆ ಕಡಿಮೆಯಾದರೂ ತೊಂದರೆಯಿಲ್ಲ. ರಾಸಾಯನಿಕ ಬಳಸದೇ ಇರುವ ಹಲಸಿನ ಉತ್ಪನ್ನ ಆರೋಗ್ಯಕ್ಕೆ ಉತ್ತಮ' ಎನ್ನುತ್ತಾರೆ ಹಲಸು ಆಂದೋಳನದ ರೂವಾರಿ ಶ್ರೀ ಪಡ್ರೆ.

ಕೆವಿಕೆಗೆ ಅಂದಂದಿಗೆ ಒಯ್ಯುವ ಗ್ರಾಹಕರಿದ್ದಾರೆ. ಸರಳ ಪ್ಯಾಕಿಂಗ್. ಸದ್ಯಕ್ಕೆ ಥರ್ಮೋಕೋಲ್ ಟ್ರೇ ಮತ್ತು ಅದನ್ನು ಮುಚ್ಚಲು ಪಾರದರ್ಶಕ ಕ್ಲಿಂಗ್ ಫೀಲಂ. ಇನ್ನೂರೈವತ್ತು ಗ್ರಾಮಿನ ಎಳೆ ಹಲಸು ಮತ್ತು ಬೀಜದ ಪ್ಯಾಕೆಟ್ಗಳಿಗೆ ತಲಾ ಇಪ್ಪತ್ತು ರೂಪಾಯಿ. ಬಲಿತ ಹಲಸಿಗೆ ಅರ್ಧ ಕಿಲೋ ಪ್ಯಾಕಿಗೆ ಇಪ್ಪತ್ತು ರೂಪಾಯಿ.

ಕೇವೀಕೆ ಈ ಉತ್ಪನ್ನ ತಯಾರಿಯ ವಿಧಾನವನ್ನು ಇನ್ನೂ ಸುಧಾರಿಸಿ ಬೇಗನೆ ಸ್ಟಾಂಡರ್ಡ್ಯೆಸ್ ಮಾಡಬೇಕೆಂದಿದೆ. ಏನಿದ್ದರೂ ಮಾಡಿದ ಕೆಲಸ ದೊಡ್ಡದು. ಹಲಸು ಬೆಳೆಯುವ ಪ್ರದೇಶಕ್ಕೆಲ್ಲಾ ಹೊಸ ಪಾಠ. ದೊಡ್ಡ ಯಂತ್ರ, ಎಕ್ರೆಗಟ್ಟಲೆ ಜಾಗ, ಕೋಟಿಗಟ್ಟಲೆ ಬಂಡವಾಳ ಬೇಡ. ಸ್ಥಳೀಯವಾಗಿಯೇ ಮಾರಾಟವಾಗುವ ಅವಕಾಶ. ಜನಸಾಮಾನ್ಯರೂ ಕೂಡಾ ಖರೀದಿಸಿ ತಿನ್ನಬಹುದಾದುದು. ಪತ್ತನಾಂತಿಟ್ಟದ ಕಾರ್ಡ್ ಕೆವಿಕೆ ಹಲಸಿನ ಮೌಲ್ಯವರ್ಧನೆಯಲ್ಲಿ ಗಣನೀಯ ಕೆಲಸ ಮಾಡಿದೆ.

ನಗರ ಪ್ರದೇಶದಲ್ಲಿ ಬೆಳ್ಳಂಬೆಳಿಗ್ಗೆ ಮನೆಯೆದುರಿಗೆ ಬರುವ ತರಕಾರಿ ಗಾಡಿಗಳಲ್ಲಿ ಹಲಸಿನ 'ಅಡುಗೆಗೆ ಸಿದ್ಧ' ಉತ್ಪನ್ನ ಸಿಕ್ಕರೆ, ರುಚಿಗೊತ್ತಿದ್ದ ಅಮ್ಮಂದಿರು ಖಂಡಿತಾ ಆಯ್ಕೆ ಮಾಡದಿರರು. ವಿಷದಲ್ಲಿ ಮಿಂದೆದ್ದ ತರಕಾರಿಗಳ ಸೇವನೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದೇನೋ!

ಉತ್ಪನ್ನವನ್ನು ಒದಗಿಸುವ ಚಿಕ್ಕ ಚಿಕ್ಕ ಘಟಕಗಳು ಗೃಹ ಉದ್ಯಮಗಳಾಗಿ ರೂಪುಗೊಳ್ಳಬೇಕು. ಮೀಯಪದವಿನಂತಹ ಹಳ್ಳಿಯಲ್ಲಿ ಪತ್ತನಾಂತಿಟ್ಟದಂತೆ ಅಲ್ಲದಿದ್ದರೂ ಸಣ್ಣಮಟ್ಟಿಗೆ 'ಅಡುಗೆಗೆ ಸಿದ್ಧ'ವಾಗಿಸಲು ಸಾಧ್ಯವಾಗಿದೆಯಂತೆ, ಉಳಿದೆಡೆ ಸಾಧ್ಯವಿಲ್ವಾ. ಹಳ್ಳಿಯ ಮಲ್ಲಿಗೆ ಹೂ ನಗರಕ್ಕೆ ಹೋಗುತ್ತದಲ್ಲಾ, ಅಂತಹ ಮಾರಾಟ ಸರಪಳಿಯನ್ನು ಬೆಸೆಯಬಹುದೇನೋ?
cardkvk@yahoo.com
ಬಾಕ್ಸ್


ಕೇರಳದಲ್ಲೇ ಮೊದಲ ಬಾರಿಗೆ ಕಣ್ಣೂರು ಜಿಲ್ಲೆಯ ಹಳ್ಳಿ ಮೂಲೆಯ 'ನಡುವಿಲ್ ಪಂಚಾಯತು' ಈಚೆಗೆ ದ್ವಿದಿನದ ಹಲಸಿನ ಹಬ್ಬ ಸಂಘಟಿಸಿತು. ಬಲಿತ ಹಲಸನ್ನು ಕತ್ತರಿಸಿ ಒಳಗಿನ ಬೀಜದೊಂದಿಗೆ ಇಡೀ ಸೊಳೆ(ಬಲ್ಬ್)ಯನ್ನು ಕೆಲ ಹೆಣ್ಮಕ್ಕಳು ಪ್ಯಾಕೆಟ್ ಮಾಡಿ ಮಾರಲು ತಂದರು. ಹತ್ತು ಹನ್ನೆರಡು ಇಡೀ ಸೊಳೆಗೆ ಹತ್ತು ರೂಪಾಯಿ ಬೆಲೆ. ಎಲ್ಲರಿಗೂ ಹಲಸು ತುಂಡುಮಾಡಿ ಬಳಸಲು ಗೊತ್ತಿರುವ ಈ ಮೂಲೆಯ ಹಳ್ಳಿಯಲ್ಲಿ ಇದು ಮಾರಾಟವಾದೀತೇ ಎಂಬ ಸಂಶಯ ನನಗಿತ್ತು ಎನ್ನುತ್ತಾರೆ ತಿರುವನಂತಪುರದ ಜ್ಯಾಕ್ ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಕಾರ್ಯದರ್ಶಿ ಎಲ್. ಪಂಕಜಾಕ್ಷನ್. ಆದರೆ ಆ ಹೆಣ್ಮಕ್ಕಳು ಎರಡೇ ದಿನಗಳಲ್ಲಿ ಮುನ್ನೂರು ಪ್ಯಾಕೆಟ್ ಮಾರಿ ಮೂರು ಸಾವಿರ ರೂಪಾಯಿ ಸಂಪಾದಿಸಿದರು! ಹಬ್ಬ ಇಲ್ಲದಿದ್ದರೂ ರಸ್ತೆ ಬದಿಯಲ್ಲೊಂದು ಮೇಜಿಟ್ಟು ಮಾರಹೊರಟರೆ ಒಂದು ಕುಟುಂಬದ ಜೀವನ ಈ ಕೆಲಸದಿಂದ ಸಾಗುತ್ತಿತ್ತು!

Sunday, June 17, 2012

'ಹತ್ತು ರೂಪಾಯಿಗೆ ಮೂರು ಸೊಳೆ'!

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ (ಜೂ. 17) ಹಲಸು ಮೇಳ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೂಬುಗೆರೆ ಹಲಸು ಬೆಳೆಗಾರರ ಸಂಘದ ಮಳಿಗೆಯಲ್ಲಿ ಕಾರ್ಯದರ್ಶಿ ರವಿಕುಮಾರ್ ಹಲಸಿನ ಹಣ್ಣನ್ನು ತುಂಡರಿಸುತ್ತಿದ್ದರು. ಅವರ ಸಹಾಯಕರು ಸೊಳೆ ಬಿಡಿಸಿ, ಚಿಕ್ಕ ಟ್ರೇಯಲ್ಲಿಟ್ಟು ಮಾರಾಟ ಮಾಡುತ್ತಿದ್ದರು. 'ಹತ್ತು ರೂಪಾಯಿಗೆ ಮೂರು ಸೊಳೆ'! ಬರೋಬ್ಬರಿ ಮಾರಾಟ. ಹಣ್ಣಿಂದ ಸೊಳೆ ತೆಗೆಯಲು ಪುರುಸೊತ್ತಿಲ್ಲ, ಹಲಸು ಪ್ರಿಯರು ಮುಗಿಬೀಳುತ್ತಿದ್ದರು.


ಹಣ್ಣಿನ ರುಚಿ, ಬಣ್ಣ, ಕ್ರಿಸ್ಪ್ ಮತ್ತು ನೋಟಗಳು ಸೆಳೆಯುತ್ತಿದ್ದುವು. ಸಾಮಾನ್ಯವಾಗಿ ಬೆಂಗಳೂರು, ತಿಪಟೂರು.. ಪ್ರದೇಶಗಳ ಹಲಸು ನಮ್ಮೂರಿನದಕ್ಕಿಂತ ರುಚಿಯಲ್ಲಿ ಮುಂದು. ಈ ರುಚಿಯನ್ನು ಮೀರಿಸುವ ಹಲಸಿನ ಹಣ್ಣುಗಳು ನಮ್ಮೂರಿನಲ್ಲೂ ಇವೆ. ಅದನ್ನು ಗುರುತಿಸುವ ಕೆಲಸಗಳಾಗಿಲ್ಲ. ವಿಟ್ಲ, ಅಳಿಕೆ ಸುತ್ತುಮುತ್ತಲಿನ ಪ್ರದೇಶದಲ್ಲಿ 'ಹಲಸು ಸ್ನೇಹಿ ಕೂಟ'ದ ಮೂಲಕ ಉತ್ತಮ ರುಚಿಯ ಹಣ್ಣನ್ನು ಪತ್ತೆ ಮಾಡುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ.

ಮೇಳ ಅಂದ ಮೇಲೆ ಕೇಳಬೇಕೆ, ಜನಸಂದೋಹ. ದೂರದೂರಿನಿಂದ ಹಲಸು ಪ್ರಿಯರು ಹಲಸಿನ ಕಾಯಿ, ಹಣ್ಣಿನೊಂದಿಗೆ ಆಗಮಿಸಿದ್ದರು. ಮಂಗಳೂರು ಸಂಕೊಳಿಕೆಯ ಶ್ರೀಧರ ಕುಂಬ್ಳೆಯವರು ಈಚೆಗಷ್ಟೇ ಕೇರಳಕ್ಕೆ ಹೋಗಿ ಹಲಸಿನ ರೆಸಿಪಿಗಳನ್ನು ಕಲಿತು ಬಂದು ಪ್ರಯೋಗಕ್ಕೆ ಇಳಿದಿದ್ದರು. ಅದರ ಫಲಶ್ರುತಿಯಾಗಿ ಮೇಳದಲ್ಲಿ ಹಲಸಿನ ಹಣ್ಣಿನ ಸಿರಪ್, ಜ್ಯಾಮ್, ಹಲ್ವ, ಕುಡಿಯಲು ಸಿದ್ಧ ಜ್ಯೂಸ್ಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದರು.

ಹಪ್ಪಳ, ಚಿಪ್ಸ್..ಗಳ ಮಳಿಗೆಗಳು ಯಥೇಷ್ಟ. ಹಪ್ಪಳವೊಂದರ ಮೂರರಿಂದ ನಾಲ್ಕು ರೂಪಾಯಿ! ಹಣ್ಣು ಹಪ್ಪಳವೊಂದಕ್ಕೆ ಐದು ರೂಪಾಯಿ. ಕಾಯಿ ಸೊಳೆ ಮತ್ತು ಉಪ್ಪುಸೊಳೆಗಳು ಮಾರಾಟಕ್ಕಿಟ್ಟರೂ ಯಾಕೋ ಒಲವು ಕಡಿಮೆ. ಮಳಿಗೆಯನ್ನು ವೀಕ್ಷಿಸುತ್ತಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಸ್ಥ ಡಾ.ಎಲ್.ಹೆಚ್.ಮಂಜುನಾಥ್ ಹೀಗೆಂದರು : 'ಹಲಸು ಹೀಗೆ ರೆಡಿ ಟು ಕುಕ್ ಆಗಿ ಸಿಗಬೇಕು. ಅಮ್ಮಂದಿರಿಗೆ ಮೇಣ ಮೆತ್ತಿಸಿಕೊಳ್ಳಬೇಕಾಗಿಲ್ಲ. ಕೆಲಸ ಸುಲಭ. ಚಿಕ್ಕ ಕುಟುಂಬಕ್ಕೆ ದೊಡ್ಡ ಗಾತ್ರದ ಹಲಸಿನ ಕಾಯಿ ತಲೆನೋವು ತರಿಸುತ್ತದೆ. ಇಂತಹ ಪ್ರಯತ್ನಗಳು ಹಳ್ಳಿ ಹಳ್ಳಿಗಳಲ್ಲಿ ಬರಬೇಕು.'

ವಿಟ್ಲ-ಉಬರು 'ಹಲಸು ಸ್ನೇಹಿ ಕೂಟ'ವು ತಾನು ಹುಡುಕಿ ಅಭಿವೃದ್ಧಿಪಡಿಸುತ್ತಿರುವ ಉತ್ತಮ ತಳಿಗಳ ಹಣ್ಣುಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಆಯಾಯ ಹಲಸಿನ ಪೂರ್ಣ ಜಾತಕವೂ ಜತೆಗಿತ್ತು. ಹಣ್ಣನ್ನು ನೋಡಿದ ಬಹುತೇಕರು 'ಹಲಸಿನ ಗಿಡ ಬೇಕಿತ್ತಲ್ವಾ, ಎಲ್ಲಿ ಸಿಗುತ್ತೆ' ಎಂದು ಕೂಟದ ವೆಂಕಟಕೃಷ್ಣ ಶರ್ಮರವನ್ನು ವಿಚಾರಿಸುತ್ತಿದ್ದರು. ಸಂಜೆ ಹೊತ್ತಿಗೆ ಎಲ್ಲಾ ಹಲಸಿನ ಹಣ್ಣುಗಳು ಆಸಕ್ತರ ಉದರ ಸೇರಿತ್ತು.

ಶಿರಸಿಯ ಕದಂಬ ಸಂಸ್ಥೆಯ ಮಳಿಗೆಯಲ್ಲಿ ಹಲಸಿನ 'ಬ್ರಾಂಡೆಡ್ ಹಪ್ಪಳ', ಹಲಸೇ ಬದುಕಾಗಿರುವ ಶಿರಸಿಯ ರೇಖಾ ಶರಶ್ಚಂದ್ರ ಹೆಗಡೆಯವರ ಮಳಿಗೆ, ಅಂಕುರ್ ನರ್ಸರಿ, ವಾರಣಾಶಿ ಸಂಶೋಧನಾ ಪ್ರತಿಷ್ಠಾನ.. ಹೀಗೆ ಸಾಕಷ್ಟು ಮಳಿಗೆಗಳು. ಮತ್ತೊಂದೆಡೆ ಹಲಸಿನ ಖಾದ್ಯಗಳ 'ಲೈವ್' ತಯಾರಿ. ಧರ್ಮಸ್ಥಳ ಸುತ್ತುಮುತ್ತಲಿನ, ಬೆಂಗಳೂರು, ತುಮಕೂರುಗಳ ಉತ್ತಮ ಹಲಸಿನ ಹಣ್ಣುಗಳ ಪ್ರದರ್ಶನ.

ಮಿಕ್ಕಂತೆ ಮಾಮೂಲಿ. ಮಧ್ಯಾಹ್ನ ಭೋಜನಕ್ಕೆ 'ಅನ್ನ, ಮಜ್ಜಿಗೆ ಹೊರತುಪಡಿಸಿ' ಮಿಕ್ಕತೆ ಹಲಸಿಗೆ ಮಣೆ. ಸಭಾಮಂಟಪದಲ್ಲಿ ಭೋಜನದ ಬಳಿಕ ನಿಜವಾದ ಹಲಸು ಪ್ರಿಯರ ಉಪಸ್ಥಿತಿ! ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಕುರಿತಾದ ಪವರ್ಪಾಯಿಂಟ್ ಪ್ರಸ್ತುತಿ. 'ಇಂತಹ ಮೇಳಗಳಲ್ಲಿ ಹಲಸಿನ ಗಿಡಗಳ ಮಾರಾಟ ಬೇಕಿತ್ತು' ಎನ್ನುತ್ತಾರೆ, ಉಡುಪಿಯ ಕೃಷ್ಣ ಸಫಲ್ಯ

ತೂಬುಗೆರೆ ಹಲಸು ಬೆಳೆಗಾರರ ಸಂಘವು ತನ್ನೂರಿನ ಹಲಸಿನ ಸೊಳೆಗಳಿಗೆ 'ಉತ್ತಮ್' ಎಂಬ ಬ್ರಾಂಡೆಡ್ ಹೆಸರನ್ನಿಟ್ಟಿತ್ತು. ತೂಬೆಗೆರೆ ಯಾಕೆ, ನಮ್ಮೂರಿನ ಹಲಸಿಗೂ ಆ ಭಾಗ್ಯ ಇಲ್ವಾ. ಇದೆ, ಹುಡುಕುವ ಮನಸ್ಸುಗಳು ತಯಾರಾಗಬೇಕು. ಕೇವಲ ಋಣಾತ್ಮಕ ಚಿಂತನೆ, ಯೋಚನೆಗಳಿಂದ ಇದೆಲ್ಲಾ ಸಾಧ್ಯವಿಲ್ಲ ಬಿಡಿ.

'ಮೂವತ್ತು ವರುಷಗಳ ಹಿಂದೆ ನಮ್ಮ ಬೀಡಿನಲ್ಲಿ ಹಲಸಿನ ಹಣ್ಣಿನ ಹಲವಾರು ಖಾದ್ಯಗಳನ್ನು ಮಾಡುತ್ತಿದ್ದು, ಅವೆಲ್ಲವನ್ನೂ ಸವಿದಿದ್ದೇನೆ,' ಎಂದು ಕಳೆದ ಕಾಲವನ್ನು ನೆನಪಿಸಿಕೊಂಡರು, ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಲಸು ಬೆಳೆಗಾರರಿಗೆ ಒಂದು ಸಾವಿರ ಕಸಿ ಗಿಡಗಳನ್ನು ವಿತರಿಸಿದ್ದು ಮೇಳದ ಹೈಲೈಟ್. 'ಹಲಸು ಕಲ್ಪವೃಕ್ಷ. ರೆಡಿ ಕು ಕುಕ್ ಆಗಿ ಹಲಸು ಸಿಕ್ಕರೆ ಬೇಡಿಕೆ ಅಪಾರವಿದೆ' ಎಂದು ಮೇಳವನ್ನು ಉದ್ಘಾಟಿಸಿ, ಕೃಷಿಕ ಡಾ.ಡಿ.ಸಿ.ಚೌಟ ಹೇಳಿದರು.

'ಮಳೆಗಾಲದಲ್ಲಿ ಹಲಸಿನ ಹಣ್ಣನ್ನು ಸವಿದರೆ, ತರಕಾರಿಯಂತೆ ಬಳಸಿದರೆ ಕಾಯಿಲೆಗಳು ಹೆಚ್ಚಂತೆ, ಮಕ್ಕಳಿಗೆ ಸೊಳೆ ಕೊಟ್ಟರೆ ಅನಾರೋಗ್ಯ ಕಾಡುತ್ತದಂತೆ, ಹೌದಾ' ಎಂದು ಮಳಿಗೆಯೊಂದರಲ್ಲಿ ಮಹಿಳೆಯೋರ್ವಳು ವಿಚಾರಿಸುತ್ತಿದ್ದರು. ಇಂತಹ ತಪ್ಪು ಸಂದೇಶ ಯಾಕೆ ಆ ಮಹಿಳೆಯ ತಲೆ ಹೊಕ್ಕಿತೋ? ಅತಿಯಾದರೆ ಎಲ್ಲವೂ ವಿಷ!

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ, ವಾರಣಾಶಿ ಸಂಶೋಧನಾ ಪ್ರತಿಷ್ಠಾನ, ಕೃಷಿಕ ಸಮಾಜ ಮಂಗಳೂರು - ಈ ಎಲ್ಲಾ ಸಂಸ್ಥೆಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಹೆಗಲೆಣೆ ನೀಡಿದ್ದುವು.

ಧರ್ಮಸ್ಥಳ : ಹಲಸು ಮೇಳ






ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾರಥ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ 'ಅಮೃತವರ್ಷಿಣಿ' ಸಭಾಂಗಣದಲ್ಲಿ ಜೂನ್ 17, 18ರಂದು ಹಲಸು ಮೇಳ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ, ವಾರಣಾಶಿ ಸಂಶೋಧನಾ ಪ್ರತಿಷ್ಠಾನ, ಕೃಷಿಕ ಸಮಾಜ ಮಂಗಳೂರು - ಈ ಎಲ್ಲಾ ಸಂಸ್ಥೆಗಳ ಹೆಗಲೆಣೆ. ಮೀಯಪದವಿನ ಕೃಷಿಕ ಡಾ.ಡಿ.ಸಿ.ಚೌಟರಿಂದ ದೀಪಜ್ವಲನದ ಮೂಲಕ ಮೇಳದ ಉದ್ಘಾಟನೆ. ಬೆಂಗಳೂರು ಕೃಷಿ ವಿವಿಯ ಉಪಕುಲಪತಿ ಡಾ.ನಾರಾಯಣ ಗೌಡರಿಂದ ದಿಕ್ಸೂಚಿ ಭಾಷಣ. ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ.

ಹಲಸಿನ ಉತ್ಪನ್ನಗಳ ವಿವಿಧ ಮಳಿಗೆಗಳು. ಹಲಸಿನ ಗಿಡಗಳ ಮಾರಾಟ. ಮಧ್ಯಾಹ್ನದೂಟಕ್ಕೆ ಹಲಸೇ ತರಕಾರಿ. ಧರ್ಮಸ್ಥಳ, ತುಮಕೂರು, ಬೆಂಗಳೂರು, ವಿಟ್ಲ ಸುತ್ತುಮುತ್ತಲಿನ ವಿವಿಧ ರುಚಿಗಳ ಹಲಸಿನ ಪ್ರದರ್ಶನ. ಬೆಂಗಳೂರು ತೂಬುಗೆರೆ ಹಲಸು ಬೆಳೆಗಾರರ ಸಂಘದಿಂದ ಹಲಸಿನ ಸೊಳೆಗಳ ಮಾರಾಟ. ವಿಟ್ಲ-ಉಬರು 'ಹಲಸು ಸ್ನೇಹಿ ಕೂಟ'ದಿಂದ ಆ ಭಾಗದ ಉತ್ತಮ ಹಲಸಿನ ಹಣ್ಣಿನ ಪ್ರದರ್ಶನ ಮತ್ತು ಮಾರಾಟ. ಮಿಕ್ಕುಳಿದಂತೆ ಮಾಮೂಲಿ. ವೇದಿಕೆಯಲ್ಲಿ ಹಲಸಿನ ಮಾತುಕತೆ. ಬೆಳಗ್ಗೆ ಸಭಾಭವನ ತುಂಬಿದರೂ, ನಿಜವಾದ ಹಲಸುಪ್ರಿಯರ ದರ್ಶನವಾದುದು ಭೋಜನದ ಬಳಿಕ.

ಉಬರಿನಲ್ಲಾದಂತೆ 'ರುಚಿ ನೋಡಿ, ತಳಿ ಆಯ್ಕೆ' ಪ್ರಕ್ರಿಯ, ಖಾದ್ಯಗಳ ತಯಾರಿ ಮತ್ತು ಸ್ಪರ್ಧೆ’, ಹಲಸಿನ ಕಾಯಿ ಮತ್ತು ಹಣ್ಣು ಸೊಳೆ, ಬೀಜಗಳ ಮೌಲ್ಯವರ್ಧನೆ ಮಾಡುವತ್ತ ವಿಶೇಷ ಗಮನವನ್ನು ಮೇಳಗಳು ಗಮನ ಹರಿಸಬೇಕು. ವಿಟ್ಲದ 'ಹಲಸು ಸ್ನೇಹಿ ಕೂಟ' ಮತ್ತು ಡಾ.ಡಿ.ಸಿ.ಚೌಟರ ನೇತೃತ್ವದಲ್ಲಿ ಹಲಸಿನ ಕಾಯಿ, ಸೊಳೆಗಳ ಮಾರಾಟದ ಪ್ರಾಯೋಗಿಕ ಪ್ರಯತ್ನಗಳು ಯಶ ಕಂಡಿವೆ. ಇಂತಹುದೇ ಪ್ರಕ್ರಿಯೆಗಳು ಗ್ರಾಮ ಮಟ್ಟದಲ್ಲಿ ನಡೆಯುವಂತಾಗಲು ಹಲಸು ಮೇಳಗಳು ಪ್ರೇರಣೆ ಕೊಡಬೇಕು. 'ಹಲಸು ತಿಂದರೆ ಆರೋಗ್ಯ ಹಾಳಾಗುತ್ತದೆ' ಎಂಬ ಮೈಂಡ್ ಸೆಟ್ಟನ್ನು ದೂರಮಾಡುವುದು ಹಲಸು ಮೇಳಗಳ ಮೊದಲಾದ್ಯತೆಯಾಗಬೇಕು. ತೂಬುಗೆರೆ ಹಲಸು ಬೆಳೆಗಾರರ ಸಂಘವು ತಯಾರಿಸಿದ ಒಂದು ಸಾವಿರ ಹಲಸಿನ ಗಿಡಗಳನ್ನು ಬೆಳೆಗಾರರಿಗೆ ವಿತರಿಸಿರುವುದು ಮೇಳದ ಧನಾಂಶ.

Thursday, June 14, 2012

'ಒಂದು ಖಂಡಿ ಅಡಕೆಗೆ ಒಂದೂವರೆ ಪವನ್ ಚಿನ್ನ!'


'ಡಾ.ಶಿವರಾಮ ಕಾರಂತರು ಬೆಟ್ಟದ ಜೀವ ಕಾದಂಬರಿ ಬರೆಯುವ ಮುನ್ನ ಈ ಮನೆಯಲ್ಲಿ ಹದಿನೈದು ದಿವಸ ಅತಿಥಿಯಾಗಿದ್ದು ಇಲ್ಲಿನ ಬದುಕಿನ, ಪರಿಸರಕ್ಕೆ ಮಾರುಹೋಗಿದರು,' ಎಂದು ಪಳಂಗಾಯ ಸದಾಶಿವ ಗೌಡರು ನೂರೈವತ್ತು ವರುಷದ ಮನೆಯನ್ನು ಪರಿಚಯಿಸುತ್ತಾ, ಹಿರಿಯರ ಬದುಕನ್ನು ಜ್ಞಾಪಿಸಿಕೊಂಡರು.

ಸುಳ್ಯ ತಾಲೂಕಿನ 'ಬಂಟಮಲೆ' ಎಂಟು ಗ್ರಾಮಗಳನ್ನು ಒಳಗೊಂಡಿದ್ದು, ಅದರಲ್ಲೊಂದು 'ಪಳಂಗಾಯ'. ದಟ್ಟ ಕಾನನದ ಮಧ್ಯೆ ಕಳೆದ ಶತಮಾನದ ಆದಿಯಲ್ಲೇ ಅಡಿಕೆ, ತೆಂಗು ಬೆಳೆಸಿ ಗೌರವದ ಬಾಳನ್ನು ಬಾಳಿದ್ದರು. ಬಳಿಕ ಅವರ ಮೊಮ್ಮಕ್ಕಳು ಕೃಷಿಯನ್ನು ಅಭಿವೃದ್ಧಿಪಡಿಸಿದರು. ದೇರಣ್ಣ ಗೌಡರು ವಾಸವಾಗಿದ್ದ ಮನೆಗೀಗ ಶತಮಾನ ದಾಟಿದೆ.

ಪಂಜದಿಂದ ಕೂತ್ಕುಂಜ ದಾರಿಯಾಗಿ ಪಳಂಗಾಯಕ್ಕೆ ಏಳು ಕಿಲೋಮೀಟರ್ ದೂರ. ಕೂತ್ಕುಂಜದಿಂದ ಕಾಡಿನ ಮಧ್ಯೆ ಐದು ಕಿಲೋಮೀಟರ್ ಕಚ್ಚಾರಸ್ತೆ. 1906ರಲ್ಲಿ ಬ್ರಿಟಿಷ್ ಸರಕಾರವಿದ್ದಾಗ ದೇರಣ್ಣ ಗೌಡರು ಎತ್ತಿನ ಗಾಡಿ ಹೋಗುವಷ್ಟು ಅಗಲಕ್ಕೆ ರಸ್ತೆ ನಿರ್ಮಿಸಿದ್ದರು. ಸುತ್ತು ಬಳಸು ದಾರಿ. ವರುಷಕ್ಕೆ ಎರಡು ರೂಪಾಯಿ ತೆರಿಗೆಯನ್ನು ಸರಕಾರಕ್ಕೆ ನೀಡುತ್ತಿದ್ದರು! ದೇರಣ್ಣ ಗೌಡರ ಮೊಮ್ಮಕ್ಕಳಲ್ಲೊಬ್ಬರಾದ ವಾಸುದೇವ ಗೌಡರು 'ಪಿಜ್ಜ'ನ ಕಾಲದ ಕೃಷಿ ಬದುಕನ್ನು ಮೆಲುಕುಹಾಕುತ್ತಾರೆ :

ಬ್ರಿಟಿಷರ ಆಳ್ವಿಕೆಯ ಕಾಲ. ಭದ್ರತೆಗಾಗಿ ಗುಡ್ಡದ ಮಧ್ಯೆ ಜೀವನ ರೂಪೀಕರಣ. ಕಾಲ್ನಡಿಗೆಯಲ್ಲಿ ಪ್ರಯಾಣ. ಕೆಲಸಕ್ಕೆ ಜನ ಯಥೇಷ್ಟ. ಗುಡ್ಡ ಪ್ರದೇಶದಲ್ಲಿ ಅಡಕೆ, ತೆಂಗು; ಕೆಳ ಪ್ರದೇಶದಲ್ಲಿ ಭತ್ತ, ಕಬ್ಬು ಕೃಷಿ. ಭತ್ತದ ಬೇಸಾಯದ ನಂತರ ಅಡಕೆ ಕೃಷಿಯ ಕೆಲಸಕ್ಕೆ ಸಹಾಯಕರು ಬರುತ್ತಿದ್ದರು. ದನಿ, ಆಳು ಸಂಬಂಧ ಗಟ್ಟಿ ಮತ್ತು ಸಮಾನ. ಊಟ-ತಿಂಡಿಗಳು ಬರೋಬ್ಬರಿ.

ಗುಡ್ಡ ಪ್ರದೇಶ. ಕಲ್ಲುಗಳನ್ನು ಒಡೆದು, ಕಟ್ಟಿ ಸಮತಟ್ಟು ಮಾಡಿ ತೋಟ ಎಬ್ಬಿಸಿದ್ದರು. ಅಧಿಕ ಜಲ ಸಂಪತ್ತು. ಅಡಕೆಯನ್ನು ಗಾಡಿಗಳಲ್ಲಿ ಪೇರಿಸಿ ಸಾಗಾಟ. ಒಂಟಿ ಪ್ರಯಾಣ ತ್ರಾಸ, ದರೋಡೆ ಭೀತಿ. ಹಾಗಾಗಿ ಕೃಷಿಕರೆಲ್ಲಾ ಜತೆಸೇರಿ ಎತ್ತಿನಗಾಡಿಗಳಲ್ಲಿ ಅಡಕೆ ಸಾಗಿಸುತ್ತಿದ್ದರು. ಪಳಂಗಾಯದಿಂದ ಪಾಣೆಮಂಗಳೂರಿಗೆ ಗಾಡಿಗಳಲ್ಲಿ ಪ್ರಯಾಣ, ನಂತರ ಬೋಟಿನಲ್ಲಿ ಅಡಕೆ ಗೋಣಿಗಳು ಮಂಗಳೂರು ಸೇರುತ್ತಿತ್ತು. ಐದಾರು ದಿವಸಕ್ಕೆ ಸಾಕಾಗುವಷ್ಟು ಅಡುಗೆ ಪರಿಕರಗಳು ಗಾಡಿಯಲ್ಲಿರುತ್ತಿದ್ದುವು. ಅಡಕೆ ಮಾರಿ ಮರಳುವಾಗ ಮೀನು, ಜೀನಸು ಸಾಮಾನುಗಳು.

ಪಂಜದಲ್ಲಿ ಬ್ರಿಟಿಷರ ಬಂಗ್ಲೆಯಿತ್ತು. ಅದರ ಕುರುಹು ಈಗಲೂ ಇದೆ. ಅವರು ಬಂಟಮಲೆಯನ್ನು ಸರ್ವೇ ಮಾಡಿದ್ದಾರೆ. ಕೋವಿಧಾರಿ ಅಧಿಕಾರಿಗಳು ವರುಷಕ್ಕೆರಡು ಸಲ ತಪಾಸಣೆಗೆ ಬರುತ್ತಿದ್ದರಂತೆ. ಅವರಿಗೆ ಅಂಜಿ ತಲೆಮರೆಸಿಕೊಳ್ಳುವವರೇ ಹೆಚ್ಚು. ದೇರಣ್ಣ ಗೌಡರು ಧೈರ್ಯದಿಂದ ಬರಮಾಡಿಕೊಂಡು, ಕೋಳಿ ಮಾಂಸದೂಟದ ಸಮಾರಾಧನೆ ಮಾಡಿಸುತ್ತಿದ್ದರು. ಕಾಡಿನಿಂದ ಸಂಗ್ರಹಿಸಿದ ಶುದ್ಧ ಜೇನನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳು ಖುಷಿಯಾಗಿ ತಂಟೆ ಬರುತ್ತಿರಲಿಲ್ಲ.

ದೇರಣ್ಣ ಗೌಡರ ಹಳೆಮನೆಗೆ ಆರಂಭದಲ್ಲಿ ಬೆಂಕಿ ಬಿದ್ದು ಸುಟ್ಟು ಹೋದ ನಂತರ ಕಟ್ಟಿಸಿದ ಮನೆಯೀಗ ಶತಮಾನ ಆಯುಸ್ಸಿಗೆ ಸಾಕ್ಷಿಯಾಗಿದೆ. ನಿರ್ಮಾಣಕ್ಕೆ ಬೇಕಾದ ಹಂಚುಗಳು ಪಾಣೆಮಂಗಳೂರಿನಿಂದ ಪಂಜದವರೆಗೆ ಗಾಡಿಯಲ್ಲಿ ಬಂದಿತ್ತು. ಅಲ್ಲಿಂದ ಪಳಂಗಾಯಕ್ಕೆ ತಲೆಹೊರೆ. ಮರಮಟ್ಟುಗಳೆಲ್ಲಾ ಕಾಡಿಂದ ಬೇಕಾದಂತೆ ಕಡಿದುಕೊಳ್ಳಬಹುದಿತ್ತು. ಮರದ ಕುರಿತಂತೆ ಕಾನೂನು ಆಗ ರೂಪಿತವಾಗಿರಲಿಲ್ಲ. ಹಾಗಾಗಿಯೇ ಇರಬೇಕು, ಪಿಜ್ಜ ಕಟ್ಟಿಸಿದ ಮನೆಯ ಪಕ್ಕಾಸು, ಬಾಗಿಲು, ಸ್ಥಂಭಗಳು ಒಂದೊಂದು ಮರದಷ್ಟು ದೊಡ್ಡದಾಗಿವೆ!

ಹಿಂದಿನವರ ಲೈಫ್ಸ್ಟೈಲ್ ಭಿನ್ನ. ಅದರಲ್ಲಿ ಗೊಣಗಾಟವಿರಲಿಲ್ಲ, ಆನಂದವಿತ್ತು. ಬಂದುದನ್ನು ಬಂದ ಹಾಗೆ ಸ್ವೀಕರಿಸುವ ಛಾತಿಯಿತ್ತು. ದೇರಣ್ಣ ಗೌಡರು ಕಠಿಣ ದುಡಿಮೆಗಾರ. ಕಾಡಿನ ಮಧ್ಯದ ಐದು ಕಿಲೋಮೀಟರ್ ದೂರದ ಕಚ್ಚಾರಸ್ತೆಯನ್ನು ಸಹಾಯಕರೊಂದಿಗೆ ಸ್ವತಃ ಮಾಡಿದ್ದರು. ಬ್ರಿಟಿಷ್ ಅಧಿಕಾರಿಯ ಸಹಕಾರದಿಂದ ಇಂಜಿನಿಯರ್ ಒಬ್ಬರ ಸಲಹೆಯನ್ನೂ ಪಡದುಕೊಂಡಿದ್ದರು. ಕಲ್ಲನ್ನು ಎಬ್ಬಿಸಲು ಬಳಸುವ ಆರೇಳು ಅಡಿ ಉದ್ದದ ಕಬ್ಬಿಣದ 'ಸಬ್ಬಲ್' ಮಾರ್ಗ ಪೂರ್ತಿಯಾಗುವಾಗ ಸವೆದು ಒಂದು ಅಡಿಗೆ ಇಳಿದಿತ್ತು!

ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡರು ಅಧ್ಯಾಪಕರಾಗಿ ಪಂಜಕ್ಕೆ ವರ್ಗವಾಗಿ ಬಂದರು. ಪಳಂಗಾಯದಲ್ಲಿ ವಸತಿ. ನಿತ್ಯ ಕಾಲ್ನಡಿಗೆಯಲ್ಲಿ ಪಂಜಕ್ಕೆ ಹೋಗಿ ವಾಪಾಸಾಗುತ್ತಿದ್ದರು. ಇವರು ಬಂದ ಮೇಲೆ ಪಿಜ್ಜನಿಗೆ ಭೀಮಬಲ ಬಂದಿತ್ತು. ಕಾರಣ, ಪುಟ್ಟಣ್ಣ ಗೌಡರಿಗೆ ಆಂಗ್ಲ ಭಾಷೆ ಗೊತ್ತಿತ್ತು. ಮುಂದೆ ಬ್ರಿಟಿಷ್ ಅಧಿಕಾರಿಗಳೊಂದಿಗೆ ಸಲೀಸಾದ ವ್ಯವಹಾರ

ಗೌಡರ ತಲೆಯೊಲ್ಲೊಂದು 'ರಾಜ ಮುಟ್ಟಾಳೆ'. ವಿಶೇಷ ವಿನ್ಯಾಸದ, ಅಲಂಕಾರದ ಈ ಮುಟ್ಟಾಳೆಯೊಳಗೆ ಹಣವನ್ನು ಗೌಪ್ಯವಾಗಿಡುವ ವ್ಯವಸ್ಥೆಗಳಿದ್ದುವು. ಉಳ್ಳವರು ಮಾತ್ರ ಮುಟ್ಟಾಳೆಯನ್ನು ಧರಿಸಬಹುದಾಗಿತ್ತು. ಸಮೀಪದ ಜಾತ್ರೆಗಳಿಗೆ ಹೋದರೆ ದಾನದಲ್ಲಿ ಧಾರಾಳಿ. ತಾನು ಧರಿಸಿದ ಅಂಗಿಯನ್ನೇ ದಾನ ಮಾಡಿದ ಕರ್ಣ!

1946ರ ಸುಮಾರಿಗೆ ಒಂಭತ್ತು ಎಕ್ರೆ ಅಡಿಕೆ ಕೃಷಿಯಿತ್ತು. ಮೂವತ್ತೈದು ಖಂಡಿ ಅಡಕೆ ಮಾರಾಟ ಮಾಡುತ್ತಿದ್ದರು. ಅವರೊಂದಿಗೆ ಅಡಕೆ ವ್ಯಾಪಾರ ಮಾಡುತ್ತಿದ್ದವರೊಬ್ಬರು ಹೇಳಿದ್ದರು, 'ಒಂದು ಖಂಡಿ (ಎರಡೂವರೆ ಕ್ವಿಂಟಾಲ್) ಅಡಕೆಗೆ ಒಂದೂವರೆ ಪವನ್ ಚಿನ್ನವನ್ನು ಖರೀದಿಸುತ್ತಿದ್ದರಂತೆ. ನಗದು ಅಂದರೆ ಅವರಿಗೆ ಅಷ್ಟಕ್ಕಷ್ಟೇ'. ಚಿನ್ನದ ಕುರಿತು ಆಗಲೇ ದೂರದೃಷ್ಟಿ ಇತ್ತು.

ಅಡಕೆಯ ಕೊಳೆರೋಗಕ್ಕೆ ಬೋರ್ಡೋ ದ್ರಾವಣ ಸಿಂಪಡಿಸುತ್ತೇವಷ್ಟೇ. ಆಗ ಕೊಳೆರೋಗ ಇತ್ತೋ ಇಲ್ಲವೋ, ದೇರಣ್ಣ ಗೌಡರು 'ರಾಳ ಪಾಕ'ವನ್ನು ಮಾಡಿ ಸಿಂಪಡಿಸುತ್ತಿದ್ದರು. ರಾಳದ ಹುಡಿಗೆ ಏನನ್ನು ಮಿಕ್ಸ್ ಮಾಡುತ್ತಿದ್ದರು ಅಂತ ಗೊತ್ತಿಲ್ಲ. ಆ ಹೊತ್ತಲ್ಲಿ ಪಾಕ ಮಾಡುವವರ ಕೈಯ ಸಿಪ್ಪೆ ಎದ್ದುಹೋಗುತ್ತಿದ್ದುವಂತೆ. ಅಡಕೆ ತೋಟವಿದ್ದವನಿಗೆ ಸಮಾಜದಲ್ಲಿ ಪ್ರತ್ಯೇಕ ಮಣೆ. ಅಡಕೆ ಇದ್ದವರಲ್ಲಿ ಹಣದ ಚಲಾವಣೆಯಿತ್ತು. ಆ ಕಾಲದಲ್ಲೆ ಅಡಕೆ ಬೀಜವನ್ನು ಆಯ್ಕೆ ಮಾಡಿ ನೆಟ್ಟದ್ದರಿಂದ ಉತ್ತಮ ಇಳುವರಿ. ಅಡಿಕೆ ಸಸಿಗಳನ್ನು ಒಯ್ಯಲು ದೂರದೂರಿಂದ ಕೃಷಿಕರು ಬರುತ್ತಿದ್ದರು.

ವರುಷಕ್ಕೊಮ್ಮೆ ಬೇಟೆ. ಕಡವೆ ಸಿಕ್ಕಿದರೆ ಕೊಂದು ಇಡೀ ಊರಿಗೆ ಸಮಾರಾಧನೆ. ಬ್ರಿಟಿಷ್ ಅಧಿಕಾರಿಗಳಿಗೂ ಕೂಡಾ. ಈಗ ಕಾನೂನಿನ ಭೀತಿಯಿತ್ತು. ಪಂಜದಲ್ಲಿರುವ ಬ್ರಿಟಿಷ್ ಬಂಗ್ಲೆಯ ಸೂರಿಗೆ ಊರಿನವರೇ ಗೌರವದಿಂದ ಸೋಗೆ ಹಾಸುತ್ತಿದ್ದುರು. ಅಧಿಕಾರಿಗಳಿಗೆ ಮತ್ತು ದೇರಣ್ಣ ಗೌಡರಿಗೆ ಸಲುಗೆಯಿತ್ತು. ತನ್ನಲ್ಲಿದ್ದ ರೈಫಲ್ ಕೊಟ್ಟು 'ಶೂಟ್ ಮಾಡಿ' ಎಂದಿದ್ದರಂತೆ. ಗೌಡರು ಶೂಟ್ ಮಾಡಿದಾಗ ಬುಲ್ಲೆಟ್ ಮರವನ್ನು ಸೀಳಿ ಹಾರಿ ಹೋದುದನ್ನು ನೋಡಿ ಬೆರಗಾಗಿದ್ದರು. ದೇರಣ್ಣ ಗೌಡರಲ್ಲಿ ಕೋವಿ ಇತ್ತು. ಕಾಡುಪ್ರಾಣಿಗಳ ಮೇಲೆ ಪ್ರಯೋಗಿಸುತ್ತಿದ್ದರು. ಆಗ ಕೋವಿ ಹೊಂದಲು ಲೈಸನ್ಸ್ ಬೇಕಾಗಿರಲಿಲ್ಲ. 1950ರ ಬಳಿಕ ಪಳಂಗಾಯಕ್ಕೆ ವಾಹನ ಸೌಕರ್ಯ ಶುರು. ಪಿಜ್ಜನ ನೆನಪಿಗಾಗಿ ಈಗ ಉಳಿದಿರುವುದು ಮನೆ ಮಾತ್ರ.

ವಾಸುದೇವ ಗೌಡರು ತನ್ನ ಪಿಜ್ಜನ ಜೀವನವನ್ನು ವಿವರಿಸುತ್ತಾ ಹೋದಂತೆ, ಸುಖದೊಂದಿಗೆ ಕಷ್ಟಗಳನ್ನು ಅರಗಿಸಿಕೊಳ್ಳುವ ಲೈಫ್ಸ್ಟೈಲ್ ಗೋಚರಿಸಿತು. ಕಷ್ಟಗಳನ್ನು 'ಸಮಸ್ಯೆ' ಎನ್ನುತ್ತಾ ವೈಭವೀಕರಿಸಲಿಲ್ಲ. 'ತಂದೆ ಕರಿಯಪ್ಪ ಗೌಡರ ಕಾಲದಲ್ಲಿ ತೋಟದ ಕೆಲಸಗಳೆಲ್ಲಾ ವ್ಯವಸ್ಥಿತವಾಗಿ ನಡೆದುವು' ಎನ್ನುತ್ತಾರೆ. ಇಳಿಜಾರು ಪ್ರದೇಶವಾದ್ದರಿಂದ ಅಲ್ಲಲ್ಲಿನ ಬಂಡೆ ಕಲ್ಲನ್ನು ಕತ್ತರಿಸಿ, ಗೋಡೆ ಯಾ ಕಟ್ಟವನ್ನು ರಚಿಸಿರುವುದು ಆ ಕಾಲದ ದೇಸಿ ತಂತ್ರಜ್ಞಾನಕ್ಕೆ ಸಾಕ್ಷಿ. ಸುಮಾರು ಇಪ್ಪತ್ತು ವರ್ಷ ಸತತವಾಗಿ ಕಟ್ಟವನ್ನು ಕಟ್ಟುತ್ತಾ ಇದ್ದರಂತೆ. ಈ ಕೆಲಸಗಳಿಗೆ ಐತ್ತಪ್ಪ ಮೂಲ್ಯರು ಸಾರಥಿಯಗಿದ್ದು, ಈಗ ಸಾಕ್ಷಿಯಾಗಿ ಸಿಗುತ್ತಾರೆ. ಸದಾ ಜಿನುಗುವ ಒರತೆ ನೀರು. 1983ರಲ್ಲಿ ಜುಲಾಯಿ ತಿಂಗಳಲ್ಲಿ ಮಳೆಗಾಲ ಶುರುವಾಗಿತ್ತು. ಬಂಟಮಲೆ ಶಿಖರದಿಂದ ಇಳಿದು ಬರುವ ಒರತೆ ನೀರು ಪಳಂಗಾಯಕ್ಕೆ ನೀರಿನ ಬರವನ್ನು ಕೊಡಲಿಲ್ಲ.

ಈಚೆಗೆ ಏನೆಕಲ್ಲಿನ ಯಶೋಚಂದ್ರರ ಜತೆ ಭೇಟಿಯಿತ್ತೆ. 'ಹಳೆ ಮನೆ. ನಿರ್ವಹಣೆ ಕಷ್ಟವಲ್ವಾ' ಎಂದುದಕ್ಕೆ 'ಹಳೆ ಮನೆಯನ್ನು ಬದಲಾಯಿಸಿದರೆ ಆ ಮನೆಯ ಸಂಸ್ಕೃತಿಯ ಗುಣ ಕಳೆದುಹೋಗುತ್ತದೆ' ಎಂದವರು ಅದರಲ್ಲಿ ವಾಸವಾಗಿರುವ ಸದಾಶಿವ ಗೌಡರು.

ಹಿರಿಯರ ಕೊಡುಗೆಗಳನ್ನು ಮರೆಯದೆ, ಆಧುನಿಕ ಸೌಲಭ್ಯಗಳು ಬದುಕಿನೊಂದಿಗೆ ಥಳಕು ಹಾಕಿಕೊಂಡರೂ ಹಿರಿಯರ ಭೂಮಿಯೊಂದಿಗೆ ಬದುಕುತ್ತಿರುವ ಕುಟುಂಬಗಳನ್ನು ನೋಡಿ 'ಹೀಗೂ ಉಂಟೇ' ಎಂದು ಪ್ರಶ್ನಿಸಿಕೊಂಡೆ. 'ಇಂತಹ ಕಷ್ಟದ ಬದುಕನ್ನು ಮಕ್ಕಳಿಗೆ ಹೇಳಬೇಕು. ಅದನ್ನವರು ಓದಬೇಕು', ಏನಂತೀರಿ?