Friday, August 22, 2014

ಐಟಿ ದುಡ್ಡು ಕೊಡುತ್ತದೆ, ಯೌವನ ಕೊಡುವುದಿಲ್ಲ!

              "ರಾತ್ರಿ ಪಾಳಿಯ ವೃತ್ತಿ ಮುಗಿಸಿ ಮನೆ ಸೇರಿದಾಗ ಮಗನನ್ನು ಶಾಲಾ ವಾಹನದೊಳಗೆ ತಳ್ಳಿ ಮಡದಿ ಉದ್ಯೋಗಕ್ಕೆ ತೆರಳಿರುತ್ತಾಳೆ. ಸಂಜೆ ಅವರಿಬ್ಬರು ಮನೆಗೆ ಬಂದಿರುವಾಗ ನಾನು ಡ್ಯೂಟಿಗೆ ತೆರಳಿರುತ್ತೇನೆ.  ಮೊಬೈಲಿನಲ್ಲಿ ಮನೆ ನಿರ್ವಹಣೆಯ ಮಾತುಕತೆ. ರವಿವಾರ ಎಲ್ಲರೂ ಜತೆಯಾಗುತ್ತೀವಿ. ಮಕ್ಕಳ ಪಾಲಿಗೆ ನಾನೊಬ್ಬ ಅಪರಿಚಿತ. ಮಕ್ಕಳ ಬಾಲ್ಯದೊಂದಿಗೆ ಬೆರೆಯುವ ದಿನಗಳನ್ನು ಉದ್ಯೋಗ ಕಸಿದುಕೊಂಡಿರುತ್ತದೆ" ಈಗ ಕೃಷಿಕರಾಗಿದ್ದು, ಹಿಂದೆ ಐಟಿ ಉದ್ಯೋಗದಲ್ಲಿದ್ದ ಲಕ್ಷ್ಮಣ್ ಕಳೆದ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.
                ಲಕ್ಷ್ಮಣ ಮೂಲತಃ ಸುಳ್ಯ ತಾಲೂಕು (ದ.ಕ.) ಗುತ್ತಿಗಾರು ಸನಿಹದ ದೇವಸ್ಯದವರು. ಕೃಷಿ ಪಾರಂಪರಿಕ ವೃತ್ತಿ. ಇಂಜಿನಿಯರಿಂಗ್ ಕಲಿಕೆ ಬಳಿಕ ರಾಜಧಾನಿ ಸೆಳೆಯಿತು. ಬೆಂಗಳೂರಿನ ಹಿಂದುಸ್ಥಾನ್ ಏರಾನಾಟಿಕ್ಸ್ ಲಿ., ಹೆಚ್.ಎ.ಎಲ್.)ಯಲ್ಲಿ ಡಿಸೈನ್ ಇಂಜಿನಿಯರ್ ಆಗಿ ಏಳು ವರುಷ, ಐಟಿ ಕಂಪೆನಿಯೊಂದರಲ್ಲಿ ಏಳೆಂಟು ವರುಷ ದುಡಿತ. ತನ್ನ ಜಾಯಮಾನಕ್ಕೆ ಒಗ್ಗದ ಸೂಟುಬೂಟಿನ ಜೀವನಕ್ಕೆ ಒಗ್ಗಿಸಿಕೊಳ್ಳುವ ಮಾನಸಿಕತೆ.
                 ವಿಮಾನ ಕಂಪೆನಿಯಲ್ಲಿದ್ದಾಗ ಲಕ್ಷ್ಮಣ್ ಎಲ್ಲರಿಗೂ ಅಚ್ಚುಮೆಚ್ಚು. ಹಸಿರು, ಕೃಷಿಯ ಸುತ್ತ ಅವರ ಮಾತುಕತೆ. ವಸತಿಗೃಹದ ಸುತ್ತಲೂ ಹಸುರೆಬ್ಬಿಸಿದ್ದರು. ಇವರ 'ವೀಕೆಂಡ್' ಭಿನ್ನ. ನಗರದಲ್ಲಿ ಕೃಷಿ ಹಿನ್ನೆಲೆಯ ಯಾವುದೇ ಕಾರ್ಯಕ್ರಮಗಳಿಗೆ ಹಾಜರ್. ಜೇನು, ಹೈನು ತರಬೇತಿಗಳಿಗೆ ಭಾಗಿ. ಕೃಷಿ ಮೇಳಗಳಲ್ಲಿ ಸುತ್ತಾಟ. ಸ್ನೇಹಿತರೊಂದಿಗೆ ಅನುಭವಗಳ ವಿನಿಮಯ. ಪಾಸ್ಬುಕ್ಕಿನಲ್ಲಿ ಕಾಂಚಾಣ ನಲಿಯುತ್ತಿದ್ದರೂ ಮನಸ್ಸು ತನ್ನೂರಿನ ಹೊಲ, ತೋಟ, ಹಸಿರಿನತ್ತ ಸುತ್ತುತ್ತಿದ್ದುವು. ತನ್ನ ಬಾಳಿಗೆ ದಿವ್ಯಶ್ರೀ ಪ್ರವೇಶವಾದ ಬಳಿಕವಂತೂ ಅವರ ಯೋಜನೆ, ಯೋಚನೆಗಳೆಲ್ಲವೂ ನಗರದ ಹೊರಗಿನ ಕೃಷಿ, ಹಸಿರಿನ ಸುತ್ತ ರಿಂಗಣಿಸುತ್ತಿದ್ದುವು.
                ದಿವ್ಯಶ್ರೀ ಕೃಷಿ ಹಿನ್ನೆಲೆಯವರು. ಅವರ ಹಿರಿಯರೆಲ್ಲಾ ಹಳ್ಳಿ ಬಿಟ್ಟು ಪಟ್ಟಣ ಸೇರಿದವರು. ನಗರ ಸೇರಿದ ಬಳಿಕ ಸಹಜವಾಗಿ ಕೃಷಿ ಸಂಸ್ಕೃತಿ ಮಸುಕಾಯಿತು. ಬಾಲ್ಯದಿಂದಲೇ ಕೃಷಿಯ ಬದುಕಿನೊಂದಿಗೆ ಬೆಳೆದ ದಿವ್ಯಶ್ರೀ ಕೂಡಾ ನಗರದ ವಾತಾವರಣಕ್ಕೆ ಒಗ್ಗಿಸಿಕೊಂಡವರು. ಲಕ್ಷ್ಮಣ್ ಕೈಹಿಡಿದ ಬಳಿಕ ಇಬ್ಬರ ಆಸಕ್ತಿಗಳೂ ಮಿಳಿತವಾದುವು. ಎಷ್ಟೋ ಸಾರಿ ಬೆಂಗಳೂರಿನ ಒತ್ತಡದ ವಾತಾವರಣದಲ್ಲಿ ಒದ್ದಾಡುತ್ತಾ ಅಸಹನೆಯಿಂದಿದ್ದ ಅವರಿಗೆ ಐಟಿ ಬಿಟ್ಟು ಹಳ್ಳಿಗೆ ಹೋಗೋಣ ಎಂದು ಸಲಹೆ ಮಾಡಿದ್ದೆ ಎನ್ನುತ್ತಾರೆ.
                ನಗರಕ್ಕೆ ಯುವಕರನ್ನು ಆಧುನಿಕ ತಂತ್ರಜ್ಞಾನಗಳ ರಂಗಿನ ಲೋಕವು ಸೆಳೆದುಕೊಳ್ಳುತ್ತದೆ ಅಲ್ವಾ,' ಎನ್ನುವ ನನ್ನ ಕುತೂಹಲವನ್ನು ಲಕ್ಷ್ಮಣ್ ಗಂಭೀರವಾಗಿ ಪರಿಗಣಿಸಿದ್ದರು -
              "ನನ್ನ ಅಪ್ಪನಿಗೆ ಮಗ ಇಂಜಿನಿಯರ್ ಆಗ ಬೇಕೂಂತ ಆಸೆಯಿತ್ತು. ಇಂಜಿನಿಯರ್ ಪದವಿ ಪಡೆದೆ. ನಗರ ಸೇರಿದೆ. ಒತ್ತಡದ ಬದುಕನ್ನು ಅಪ್ಪಿಕೊಂಡೆ. ಅತ್ತಿತ್ತ ತಿರುಗಲು ಹೆಣಗಾಡಬೇಕಾದ ಪುಟ್ಟ ಕ್ಯಾಬಿನ್ನೊಳಗೆ ವೃತ್ತಿ ಜೀವನ. ಪರಸ್ಪರ ಮಾತುಕತೆಯಿಲ್ಲ, ನಗೆಯಿಲ್ಲ, ಭಾವನೆಗಳ ವಿನಿಮಯವಿಲ್ಲ, ಮಣಗಟ್ಟಲೆ ಭಾರ ತಲೆ ಮೇಲೆ ಕುಳಿತಂತಿರುವ ಶುಷ್ಕತೆ. ಹೊತ್ತು ಹೊತ್ತಿಗೆ ಆಹಾರವನ್ನು ಹೊಟ್ಟೆಗಿಳಿಸಿಕೊಳ್ಳುವುದು. ಆರೋಗ್ಯ ವ್ಯತ್ಯಾಸವಾದರೆ ಕಂಪೆನಿಯ ಆಸ್ಪತ್ರೆ ಕಾಯುತ್ತಾ ಇರುತ್ತದೆ!
             ಕೃಷಿಯಲ್ಲಿ ಗೌರವವಿಲ್ಲ, ಯಾರೂ ಮರ್ಯಾಾದೆ ಕೊಡುವುದಿಲ್ಲ ಎನ್ನುವ ಭಾವನೆ. ಮಗ ಉನ್ನತ ಹುದ್ದೆಯಲ್ಲಿದ್ದರೆ 'ನಾನು ಇಂತಹವನ ಅಪ್ಪ' ಎನ್ನುವಲ್ಲಿ ಖುಷಿಯೇನೋ? ಐಟಿ ಉದ್ಯೋಗದಲ್ಲಿ ಸಿಗುವ ಗೌರವ, ಹಣ ಕೃಷಿಯಲ್ಲಿ ಖಂಡಿತಾ ಸಿಗದು. ಆದರೆ ಕಳೆದುಕೊಂಡ ಜೀವನ, ಹಾಳಾದ ಆರೋಗ್ಯ ಮತ್ತೆ ಸಿಗದು. ಗೊತ್ತಾಗುವಾಗ ಮಾತ್ರೆಗಳ ಸಂಬಂಧ ಗಟ್ಟಿಯಾಗಿರುತ್ತದೆ. ಬಹುತೇಕ ಹೆತ್ತವರಿಗೆ ಐಟಿ ಉದ್ಯೋಗದ ಬವಣೆಗಳ ಅರಿವಿಲ್ಲ. ಅಂತಸ್ತು ಮತ್ತು ಭವಿಷ್ಯ ಜೀವನದ ಭದ್ರತೆ ಎನ್ನುವ ಮರೀಚಿಕೆ ಆವರಿಸಿರುತ್ತದೆ. ಇಂತಹ ಉದ್ಯೋಗಕ್ಕೆ ಸಮಾಜವೂ ಬೆಂಬಲಿಸುತ್ತದೆ, ಸಂಭ್ರಮಿಸುತ್ತದೆ. ಉದ್ಯೋಗದ ಸಿರಿತನವನ್ನು ಆರಾಧನೆ ಮಾಡುವ ಹಂತಕ್ಕೆ ತಲುಪುತ್ತದೆ.
                  ಮೋಹಕವಾದ ಐಟಿ ಕ್ಷೇತ್ರವು ನಮ್ಮ ದೂರದೃಷ್ಟಿಯನ್ನು ಕಸಿದುಕೊಳ್ಳುತ್ತದೆ. ವೃತ್ತಿ ಸಂತೃಪ್ತಿಯಿಲ್ಲ. ಸ್ಪಷ್ಟವಾದ ಗುರಿಯಿಲ್ಲ. ಕುಟುಂಬ ಸುಖವಿಲ್ಲ. ಎಳೆ ವಯಸ್ಸಿಯಲ್ಲಿ ಹೆಚ್ಚು ದುಡ್ಡು ಬಂದಾಗ ಹೇಗೆ ಖರ್ಚುು ಮಾಡುವುದೆನ್ನುವ ಜ್ಞಾನವಿಲ್ಲ. ವೀಕೆಂಡಿಗೆ ಸುಖ-ಸಂತೋಷಕ್ಕಾಗಿ ವೆಚ್ಚಗಳ ಹೊಳೆ. ಏರಿಕೆಯಾಗುವ ಸ್ನೇಹಿತರ ಗಡಣ. ಹತ್ತು ಹಲವು ವ್ಯಸನಗಳು ಅಂಟುವುದು ಇಂತಹ ಹೊತ್ತಲ್ಲೇ.  ಸರಿ-ತಪ್ಪುಗಳನ್ನು ಹೇಳುವ ಮಂದಿ ಜತೆಗಿಲ್ಲ. ಕಲಿಕೆಯ ಹಂತದಲ್ಲಿ ಕಟ್ಟಿಕೊಂಡ ಕನಸುಗಳು ಗರಿಕೆದರಿ ತೇಲುತ್ತಿದ್ದಂತೆ ಬದುಕಿನ ಸುಖವು ಜಾರುವುದು ಅರಿವಿಗೆ ಬಂದಿರುವುದಿಲ್ಲ. ಸ್ಥಿತಪ್ರಜ್ಞತೆಯನ್ನು ಎಳವೆಯಲ್ಲೇ ಅಂಟಿಸಿಕೊಂಡವರಿಗೆ ಇವುಗಳ ಭಯವಿಲ್ಲ ಬಿಡಿ!
               ಅಂತಸ್ತು ಹೆಚ್ಚಿದಂತೆ ಬದುಕಿನ ವ್ಯವಸ್ಥೆಗಳೂ ಹೈ-ಫೈ ಆಗಬೇಕಷ್ಟೇ. ಐಟಿ ಉದ್ಯೋಗಿಗಳಿಗೆ ಸಾಲ ಕೊಡಲು ಬ್ಯಾಂಕುಗಳು ತುದಿಗಾಲಲ್ಲಿ  ನಿಂತಿರುತ್ತವೆ. ಸಾಲ ತೆಕ್ಕೊಂಡು ಕೋಟಿಗಟ್ಟಲೆ ಸುರಿದು ಜಾಗ ಖರೀದಿಸಿ, ಐಷರಾಮದ ಮನೆ ನಿರ್ಮಾಣ ಮಾಡಿಕೊಳ್ಳುತ್ತಾರೆ. ಮಗನ ಹಿತಕ್ಕಲ್ಲವಾ, ಒಂದಷ್ಟು ದುಡ್ಡು ಹೆತ್ತವರಿಂದಲೂ ಕೊಡಲ್ಪಡುತ್ತದೆ. 'ಮಗ ಸೆಟ್ಲ್' ಆಗಿದ್ದಾನೆ ಎನ್ನುವ ಹಿಗ್ಗು ಹೆತ್ತವರಲ್ಲಿ ಜೀವಂತವಾಗಿರುವಾಗಲೇ, ನಿವೃತ್ತಿಯ ಹಂತಕ್ಕೆ ತಲುಪುತ್ತಾನೆ. ಮನೆಗಾಗಿ ಮಾಡಿದ್ದ ಬ್ಯಾಂಕ್ ಸಾಲವೂ ಆಗಷ್ಟೇ ಚುಕ್ತಾ ಆಗಿರುತ್ತದೆ!
                 ನಗರದಲ್ಲೇ ಹುಟ್ಟಿ ಬೆಳೆದು ಬದುಕನ್ನು ರೂಪಿಸಿಕೊಳ್ಳುತ್ತಿರುವ ಐಟಿ ಉದ್ಯೋಗಿಗಳು ಬೇರೆಲ್ಲಿಗೆ ಹೋಗಲಿ? ಅವರಿಗದು ಅನಿವಾರ್ಯ. ಹೊಟ್ಟೆಪಾಡಿಗಾಗಿ ಉದ್ಯೋಗ. ಹಳ್ಳಿಯಲ್ಲಿ ತೋಟ ಗದ್ದೆಗಳಿದ್ದು, ಅದನ್ನೆಲ್ಲಾ ಮಾರಿ ನಗರ ಸೇರಿದ ಎಷ್ಟೋ ಕುಟುಂಬವಿಂದು ಮಮ್ಮಲ ಮರುಗುತ್ತಿರುವುದನ್ನು ಹತ್ತಿರದಿಂದ ಬಲ್ಲೆ. ಪುನಃ ಹಳ್ಳಿಗೆ ಹೋಗುವಂತಿಲ್ಲ. ಕೃಷಿಯಲ್ಲಿ ಸುಖವಿಲ್ಲ, ನೆಮ್ಮದಿಯಿಲ್ಲ ಎನ್ನುತ್ತಾ ಸಮಸ್ಯೆಯ ಮೂಟೆಯನ್ನು ಗಗನಕ್ಕೇರಿಸಿದವರೇ, 'ಛೆ.. ತಪ್ಪು ಮಾಡಿಬಿಟ್ಟೆವು, ಹಳ್ಳಿಯ ತೋಟ ಮಾರಬಾರದಿತ್ತು,' ಎನ್ನುವವರೂ ಇಲ್ಲದಿಲ್ಲ. ಆಗ ಕಾಲ ಮಿಂಚಿಹೋಗಿರುತ್ತದೆ..."
               ಲಕ್ಷ್ಮಣ ಐಟಿ ಬದುಕಿನಲ್ಲಿದ್ದೂ, ಅಲ್ಲಿನ ಕಾಣದ ಬದುಕನ್ನು ವಿವರಿಸುತ್ತಾ ಹೋಗುತ್ತಿದ್ದಂತೆ ಮಾತು ಮೌನವಾಗುತ್ತದೆ. ರೋಚಕತೆಯ ವೈಭವವನ್ನೇ ಕಾಣುತ್ತಿದ್ದ ಐಟಿ ಉದ್ಯೋಗ ವೈಯಕ್ತಿಕ ಬದುಕನ್ನು ಕಸಿಯುತ್ತಿದೆ. ಹೀಗಿದ್ದರೂ ’ಇದ್ದಷ್ಟು ದಿನ ಸಂತೋಷದಿಂದ ಇರಬೇಕು. ಹಳ್ಳಿಯಲ್ಲಿದ್ದು ಏನು ಮಾಡಲಿಕ್ಕಿದೆ? ಆ ಕಷ್ಟ ಯಾರಿಗೆ ಬೇಕು. ಬದುಕಿನಲ್ಲಿ ಹಣವೇ ಮುಖ್ಯ” ಎಂದು ಬಾಯಿ ಮುಚ್ಚಿಸುವ ಕಂಠತ್ರಾಣಿಗಳೂ ಇದ್ದಾರಲ್ಲಾ!
                ಐಟಿ ವೃತ್ತಿಯನ್ನು ಲಕ್ಷ್ಮಣ್ ಹಳಿಯುತ್ತಿಲ್ಲ, ವಿರೋಧಿಸುತ್ತಿಲ್ಲ. ಬಂಗಾರದ ಪಂಜರದ ಉದ್ಯೋಗ ಕೈತುಂಬಾ ದುಡ್ಡು ಕೊಡುತ್ತದೆ. ಬದುಕನ್ನು ಹಸನಾಗಿಸುತ್ತದೆ. ಬಡತನದಿಂದ ಮೇಲೆದ್ದು ಬಂದ ಕುಟುಂಬಕ್ಕೆ ಆಸರೆಯಾಗುತ್ತದೆ. ಒಂದು ಕಾಲ ಘಟ್ಟದ ಕೃಷಿ ಬದುಕನ್ನು ಐಟಿ ಆಧರಿಸಿದುದು ಮರೆಯುವಂತಿಲ್ಲ. ದೇಶಕ್ಕೆ ಐಟಿ ಕ್ಷೇತ್ರದಿಂದ ಉತ್ತಮ ಲಾಭ. ಉದ್ಯೋಗಿಗಳಿಗೂ ಪ್ರಯೋಜನ. ಆದರೆ ಕಳೆದುಹೋದ ಸಂಬಂಧ, ಆರೋಗ್ಯ ಮರುಭರ್ತಿ ಹೇಗೆ? ಎಂದು ಪ್ರಶ್ನಿಸುತ್ತಾರೆ.
                 ಕೃಷಿಕರಾಗಿದ್ದೂ ತಮ್ಮ ಮಕ್ಕಳನ್ನು ಐಟಿ ವೃತ್ತಿಗೆ ತಳ್ಳುವ ವ್ಯವಸ್ಥೆಯತ್ತ ಅಸಹನೆಯಿದೆ. ಕೃಷಿಯಲ್ಲಿ ಕೈತುಂಬಾ ಸದ್ದಾಗುವ ಕಾಂಚಾಣ ಕುಣಿಯದಿರಬಹುದು. ಆದರೆ ಬದುಕಿನಲ್ಲಿ ಎಂದೂ ಬತ್ತದ ಆರೋಗ್ಯವನ್ನು ಅನುಭವಿಸಬಹುದು ಎನ್ನುವ ಸತ್ಯ ಮನಗಂಡಿದ್ದಾರೆ. ಬಹುತೇಕ ಹಿರಿಯರ ಮನಃಸ್ಥಿತಿಯೂ ಇದುವೇ. ಆದರೆ ಯಾರೂ ಮಾತನಾಡುವುದಿಲ್ಲವಷ್ಟೇ. ತನ್ನ ಬದುಕು ಕುಸಿಯುತ್ತಿರುವುದನ್ನು ಅರಿತ ಲಕ್ಷ್ಮಣ್ ಐಟಿ ಉದ್ಯೋಗಕ್ಕೆ ವಿದಾಯ ಹೇಳಿ ಎರಡು ವರುಷವಾಯಿತು. ಹಳ್ಳಿ ಮನೆಗೆ ಬಂದರು. ತನ್ನ ತೀರ್ಥರೂಪರು ನಡೆದಾಡಿದ ತೋಟದೆಲ್ಲೆಡೆ ಓಡಾಡಿದರು. ಅವರ ಕನಸನ್ನು ಮುಂದುವರಿಸುವ ಸಂಕಲ್ಪ ಮಾಡಿದರು. ತೋಟವನ್ನು ವ್ಯವಸ್ಥಿತವಾಗಿ ರೂಪಿಸುವತ್ತ ಚಿತ್ತ.
                  ಹನ್ನೆರಡು ಹಸುಗಳುಳ್ಳ ಡೈರಿ ತೆರೆದರು. ಪ್ಯಾಕೆಟ್ ಹಾಲಿಗೆ ಒಗ್ಗಿಕೊಂಡವರು ಲಕ್ಷ್ಮಣರ ಹಸುವಿನ ಹಾಲನ್ನು ಸವಿದರು. ಬೇಡಿಕೆ ಹೆಚ್ಚಾಯಿತು. ಅವರ ಕನಸಿನ ಆಧುನಿಕ ಹಟ್ಟಿ ನಿರ್ಮಾಣವಾಗುತ್ತಿದೆ. ನಗರದಿಂದ ಪುನಃ ಹಳ್ಳಿಗೆ ಬಂದು ಮಣ್ಣನ್ನು ಮುಟ್ಟಿದಾಗ, ಮೆಟ್ಟಿದಾಗ ಬೆನ್ನು ತಟ್ಟುವ ಮನಸ್ಸುಗಳ ಕೊರತೆಯನ್ನು ಕಂಡುಕೊಂಡರು. ಗೇಲಿ ಮಾಡುವ ಮುಖಗಳ ದರ್ಶನ. 'ನೋಡಿ, ಕೃಷಿಯಲ್ಲಿ ಎಷ್ಟು ಕಷ್ಟ ಇದೆಯೆಂದು ನಿಮಗೆ ಗೊತ್ತಾಗುತ್ತೆ, ಎಂದು ಗುಮ್ಮನನ್ನು ಛೂ ಬಿಡುವ ಮಂದಿ. 'ನಾವಿಲ್ಲಿ ಒದ್ದಾಡುತ್ತಾ ಇಲ್ವಾ,' ಕೀಳರಿಮೆಯ ಕೂಪದೊಳಗಿನ ಮಾತುಗಳು.
                  ಲಕ್ಷ್ಮಣರ ಮುಂದೆ ಸ್ಪಷ್ಟ ಗುರಿಯಿದೆ. ತನ್ನ ಸುಖ-ಆರೋಗ್ಯದಾಯಕ ಬದುಕಿಗೆ ಕೃಷಿಯೊಂದೇ ದಾರಿ. ನಗರದಲ್ಲಿ ಓದುತ್ತಿದ್ದ ಮಕ್ಕಳೀಗ ಹಳ್ಳಿಯ ಶಾಲೆಯಲ್ಲಿ ಓದು ಮುಂದುವರಿಸಿದ್ದಾರೆ. ಸಮಾಜದ ಚುಚ್ಚು ಮಾತುಗಳ ಮಧ್ಯೆ ಕೃಷಿಯಲ್ಲಿ ಸುಭಗತೆಯನ್ನು ತೋರಿ ಮಾದರಿಯಾಗಬೇಕೆನ್ನುವ ಛಲವಿದೆ. ’ಐಟಿ ಉದ್ಯೋಗ ದುಡ್ಡು ಕೊಡಬಹುದು ಸಾರ್, ಆದರೆ ಯೌವನ ಕೊಡುವುದಿಲ್”, ಎನ್ನುವ ಲಕ್ಷ್ಮಣರಲ್ಲಿ ಸಮಯ ಕೊಲ್ಲುವ ಫೇಸ್ಬುಕ್ ಅಕೌಂಟ್ ಇಲ್ಲ!


Wednesday, August 20, 2014

ಮಣ್ಣಿನ ಮಕ್ಕಳ ಮನಸಿನ ಮಾತು


              ವಿದ್ಯಾರ್ಥಿಗಳಿಗೆ ಕೃಷಿ ಪಾಠ!
             ವೇದಿಕೆಯ 'ಭೀಷಣ' ಭಾಷಣದಲ್ಲಿ, ಬರೆಹಗಳಲ್ಲಿ, ಕೃಷಿ ಸಂಬಂಧಿ ಮಾತುಕತೆಗಳಲ್ಲಿ ನುಸುಳುವ ಪದಪುಂಜ. ಅಲ್ಲೋ ಇಲ್ಲೋ ಕೆಲವೆಡೆ ಹಸುರಿನ ಸ್ಪರ್ಶವಾದುದು ಬಿಟ್ಟರೆ ಕೃಷಿಯ ಪಾಠವೆನ್ನುವುದು ದೂರದ ಮಾತು.
              ಪುತ್ತೂರಿನ (ದ.ಕ.) ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ತನ್ನ ವಿದ್ಯಾರ್ಥಿಗಳಿಗೆ 'ಕೃಷಿ ಖುಷಿ' ಎನ್ನುವ ಪಾಕ್ಷಿಕ ಕೃಷಿ ಪಾಠ ಸರಣಿಯನ್ನು ರೂಪಿಸಿದೆ. ತನ್ನ ಪಠ್ಯದ ಕಾರ್ಯಸೂಚಿಗೆ  ಕೃಷಿಯ ಪಾಠ ಅಂಟಿಸಿದೆ. ಈಗಾಗಲೇ ಎರಡು ಉಪನ್ಯಾಸಗಳು ಜರುಗಿದೆ. ಕೃಷಿಕ ಮುಳಿಯ ವೆಂಕಟಕೃಷ್ಣ ಶರ್ಮ, ಸೇಡಿಯಾಪು ಜನಾರ್ದನ ಭಟ್ಟರ ಕೃಷಿ ಜೀವನದ ಅನುಭವಕ್ಕೆ ವಿದ್ಯಾಥರ್ಿಗಳು ಕಿವಿಯಾಗಿದ್ದಾರೆ. ವಿದ್ಯಾರ್ಥಿಗಳ ಮನಸ್ಸು ಅರಳಿದೆ.  
               'ಕೃಷಿ-ಖುಷಿ' ಸರಣಿಯ ಒಂದು ಅವಧಿಗೆ ಒಂದು ಗಂಟೆ ಸಮಯ. ಕೃಷಿ ಅನುಭವಿಗಳಿಂದ ಅನುಭವ ಗಾಥಾ. ಇವರ ಮಾತನ್ನು ಆಧರಿಸಿ ಪ್ರಶ್ನೋತ್ತರ. ನಂತರ ಆಯ್ದ ವಿದ್ಯಾರ್ಥಿಗಳ ತಂಡ ನಿಗದಿತ ದಿವಸದಂದು ಇವರ ತೋಟಕ್ಕೆ ಭೇಟಿ ನೀಡುತ್ತದೆ. ತೋಟ ಸುತ್ತುತ್ತದೆ. ಕುಟುಂಬದೊಂದಿಗೆ ಮಾತನಾಡುತ್ತದೆ. ವಿಚಾರಗಳನ್ನು ದಾಖಲಿಸುತ್ತದೆ.
                ಈ ವಿಚಾರಗಳನ್ನು ಪೋಣಿಸಿ ವಿದ್ಯಾರ್ಥಿಗಳು ಲೇಖನ ಸಿದ್ದಪಡಿಸಬೇಕು. ವಿಭಾಗದ ಮುಖ್ಯಸ್ಥರಿಂದ ಕಾಯಕಲ್ಪಗೊಂಡ ಬರೆಹಗಳನ್ನು ಪತ್ರಿಕೆಗಳಿಗೆ ಕಳುಹಿಸಬಹುದು. ಸಂದರ್ಶನ, ವಿಷಯದ ಆಯ್ಕೆ, ಲೇಖನ ಬರೆಯುವುದು, ಎಡಿಟ್ ಮಾಡುವುದು.. ಜತೆಜತೆಗೆ ಇವಕ್ಕೆ ಪೂರಕವಾದ ಮಾನಸಿಕ ತಯಾರಿಗಳು ಗಟ್ಟಿಯಾಗುತ್ತಾ ಹೋಗಬೇಕೆನ್ನುವುದು ಆಶಯ.
                 ಯುವಜನತೆಗೆ ಕೃಷಿ ಕ್ಷೇತ್ರವನ್ನು ಪರಿಚಯಿಸುವುದು, ಸಸ್ಯಪ್ರೇಮವನ್ನು ಮೂಡಿಸುವುದು. ತಮಗೆ ಲಭ್ಯವಿರುವ ಜಾಗದಲ್ಲಿ ಆರ್ಥಿಕ ದೃಷ್ಟಿಯಿಂದ ಅಲ್ಲದಿದ್ದರೂ, ಬದುಕಿಗೆ ಖುಷಿ ನೀಡುವ ಸಣ್ಣಪುಟ್ಟ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂಬ ದೂರದೃಷ್ಟಿ ಸರಣಿಯಲ್ಲಿದೆ,' ಎನ್ನುತ್ತಾರೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ. ಸರಣಿಯ ಉದ್ಘಾಟನೆಯಂದು ಮುಳಿಯ ಶರ್ಮರ ಉಪನ್ಯಾಸ. ಸುಮಾರು ಮೂವತ್ತಕ್ಕೂ ಮಿಕ್ಕಿದ ಸಸ್ಯ, ಹಣ್ಣುಗಳನ್ನು ಪ್ರದರ್ಶನಕ್ಕಾಗಿ ತಂದಿದ್ದರು. ವಿದ್ಯಾರ್ಥಿಗಳಿಗೆ ಅರಿವಾಗದವುಗಳನ್ನು ಶರ್ಮರೇ ಸ್ವತಃ ವಿವರಿಸಿದ್ದರು.
                 ಕಾಲೇಜೊಂದರಲ್ಲಿ ಹೆಜ್ಜೆಯೂರಿದ ಕೃಷಿ ಪಾಠದ ಪ್ರಕ್ರಿಯೆ ಶ್ಲಾಘ್ಯ. ಬಹುತೇಕರು ಕೃಷಿ ಹಿನ್ನೆಲೆಯವರು. ಕಲಿಕೆಯ ಧಾವಂತದಲ್ಲಿ ಕೃಷಿ ಕಲಿಕೆಗೆ ಮನೆಗಳಲ್ಲಿ ಪೂರಕ ವಾತಾವರಣವಿಲ್ಲ. ಹಿರಿಯರಿಂದ ಹೆಚ್ಚು ಅಂಕ ತೆಗೆಯುವ ಒತ್ತಡಕ್ಕೆ ಅನಿವಾರ್ಯವಾಗಿ ವಿದ್ಯಾರ್ಥಿ ತನ್ನನ್ನು ಒಡ್ಡಿಕೊಳ್ಳಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಕೃಷಿ-ಖುಷಿ ಸರಣಿಯಲ್ಲಿ ಪ್ರಸ್ತುತವಾಗುವ ಪ್ರಶ್ನೋತ್ತರಗಳು ಹೆಚ್ಚು ಮೌಲಿಕವಾಗುತ್ತದೆ. 
              ಸರಣಿಯಲ್ಲಿ ಕೃಷಿಕರ ಅನುಭವಗಳನ್ನು ಕೇಳಿ, ಬಳಿಕ ಅವರ ತೋಟಕ್ಕೆ ಹೋದಾಗ ಪ್ರಾಕ್ಟಿಕಲ್ ವಿಚಾರಗಳು ಮನದಟ್ಟಾಗುತ್ತದೆ. ನೆಲದ ಭಾಷೆ ಅರಿಯಲು ಸಹಾಯಕ. ಅಡಿಕೆ ತೋಟದಲ್ಲಿ ಅಡ್ಡಾಡುವಾಗ ಅಡಿಕೆ ಮರವು ಕೇವಲ ಅಡಿಕೆಯನ್ನು ಕೊಡುವ ಮರವಾಗಿರದೆ, ಅದು ಬದುಕನ್ನು ಕಟ್ಟಿಕೊಡುವ ಮರವೆಂಬ ಅರಿವು ಮೂಡುತ್ತದೆ, ಮೂಡಬೇಕು. ಹಸುರಿನೊಳಗೆ ಬದುಕನ್ನು ರೂಪಿಸಿಕೊಂಡ  ಕೃಷಿಕನ ನೋವು-ನಲಿವುಗಳಿಗೆ ಅಲ್ಲಿನ ಪರಿಸರ ಉತ್ತರ ಕೊಡುತ್ತದೆ. ಅದನ್ನು ನೋಡುವ, ಕೇಳುವ ಮನಸ್ಥಿತಿ ರೂಪುಗೊಳ್ಳುತ್ತದೆ. ಕೃಷಿಕರ ಹಲವಾರು ಸಮಸ್ಯೆಗಳು ಮೌನದ ಕೂಪದೊಳಗೆ ಮೌನವಾಗಿರುತ್ತದೆ. ಅದನ್ನು ಮಾತನಾಡಿಸುವ, ಅದಕ್ಕೆ ಮಾತನ್ನು ಕೊಡುವ ಕಷ್ಟದ ಕೆಲಸಕ್ಕೆ ನಿಧಾನವಾಗಿ ಸಜ್ಜಾಗಲು ಇಂತಹ ಕ್ಷೇತ್ರ ಭೇಟಿ ಸಹಾಯಕ.
                ವಾಹಿನಿಯೊಂದರ ರಸಪ್ರಶ್ನೆಯಲ್ಲಿ ತುಳಸಿ ಗಿಡವನ್ನು ಗುರುತುಹಿಡಿಯಲಾಗದ ವಿದ್ಯಾರ್ಥಿಗಳ ಒದ್ದಾಟ ನೋಡಿದ್ದೆ. ಮೂಡುಬಿದಿರೆಯಲ್ಲಿ ಜರುಗಿದ ಕೃಷಿ ಮೇಳದಲ್ಲಿ ಕಾಫಿ ಬೀಜವನ್ನು ಸಾಸಿವೆಕಾಳು ಎಂದು ಗುರುತು ಹಿಡಿವ ವಿದ್ಯಾರ್ಥಿ ಮನಸ್ಸುಗಳನ್ನು ನೋಡಿದ್ದೆ. ಅರಸಿನ, ಶುಂಠಿಯು ಯಾವ ಸಸ್ಯದಲ್ಲಿ ಬೆಳೆಯುತ್ತದೆ ಎನ್ನುವ ಪ್ರಶ್ನೆಯನ್ನು ಎದುರಿಸಿದ್ದೆ. ಇದನ್ನೆಲ್ಲಾ ನೋಡುವಾಗ ವಿದ್ಯಾರ್ಥಿಗಳು ರೂಪುಗೊಳ್ಳುವ ಪರಿ, ಮನೆಯ ವಾತಾವರಣ, ಹೆತ್ತರವ ನಿಲುವು ದಿಗಿಲು ಹುಟ್ಟಿಸುತ್ತದೆ.
                 ಕೃಷಿಕನ ಮಗನೋ, ಮಗಳೋ ಅಂಗಳ ದಾಟಿ ತೋಟದೊಳಗೆ ಹೆಜ್ಜೆಯೂರುವುದು ಕಡಿಮೆ.  ಅಡಿಕೆಯನ್ನು ಹೆಕ್ಕಿರುವುದಿಲ್ಲ. ಒಂದು ಖಂಡಿಗೆ ಎಷ್ಟು ಕಿಲೋ ಅಡಿಕೆ ಎಂಬ ಲೆಕ್ಕಾಚಾರ ಗೊತ್ತಿಲ್ಲ. ಅಡಿಕೆಯ ಕೊಯಿಲು ಯಾವಾಗ ಆಗುತ್ತದೆ ಎನ್ನುವ ಅರಿವಿನಿಂದ ದೂರ. ಗದ್ದೆಯಲ್ಲಿ ತೆನೆಕಟ್ಟಿದ ಭತ್ತದ ತಳಿ ಯಾವುದೆಂದು ಗೊತ್ತಿಲ್ಲ. ಹಟ್ಟಿಯಲ್ಲಿ ಪಶು ಸಂಸಾರ ಎಷ್ಟಿದೆ ಎನ್ನುವ ಲೆಕ್ಕ ಇನ್ನಷ್ಟೇ ಮಾಡಬೇಕಾಗಿದೆ!
                 'ಇದೆಲ್ಲಾ ಗೊತ್ತಾಗಿ ಆಗಬೇಕಾದ್ದೇನು,' ಎಂದು ಉಡಾಫೆ ಉತ್ತರ ನೀಡಿದ ಮುಖಗಳ ಹತ್ತಿರದ ಪರಿಚಯ ನನಗಿದೆ. ಹೆತ್ತವರಿಗೆ ಕೃಷಿಯ ವಿಚಾರ ಹೇಳಲು ಪುರುಸೊತ್ತಿಲ್ಲ. ವಿದ್ಯಾರ್ಥಿಗಳಿಗೆ ಪಾಠದ ಹೊರೆ. ಅಂಕಗಳನ್ನು ಅಟ್ಟಿಸುವ ಹಾವೇಣಿಯಾಟಕ್ಕೆ ಸಜ್ಜಾಗುವ ಪರಿ. ಒಂದು ಕಾಲಘಟ್ಟದಲ್ಲಿ ಕಾಡುಹಣ್ಣುಗಳನ್ನು ತಿಂದು, ಅವುಗಳೊಂದಿಗೆ ಬದುಕನ್ನು ರೂಪಿಸಿದ ಅದೆಷ್ಟೋ ಹಿರಿಯರ ಖುಷಿಯ ಬಾಲ್ಯಗಳು ಈಗಿಲ್ಲ ಎಂದು ಧೈರ್ಯವಾಗಿ ಹೇಳಬಹುದು.
                 ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ 'ಕೃಷಿ-ಖುಷಿ' ಸರಣಿಯು ವಿದ್ಯಾರ್ಥಿಗಳಿಗೆ ಹಸುರಿನ ಭಾಷೆ ಕಲಿಸಲು ಮುಂದಾಗಿದೆ. ಪತ್ರಕರ್ತರಾಗಿ ರೂಪುಗೊಳ್ಳುವ ಮನಸ್ಸುಗಳಿಗೆ ಹಸುರಿನ ಸ್ಪರ್ಶ ನೀಡುವ ಕೆಲಸಕ್ಕೆ ಸಜ್ಜಾಗಿದೆ. ಇಂತಹ ಸಣ್ಣ ಯತ್ನಗಳು ದೊಡ್ಡ ಪರಿಣಾಮಗಳನ್ನು ಖಂಡಿತಾ ಬೀರುತ್ತವೆ. ಪದವಿ ಕಲಿಕೆಯ ಬಳಿಕ ಹೊರ ಬರುವ ವಿದ್ಯಾರ್ಥಿಯ ಫೈಲೊಳಗೆ ಪ್ರಕಟಿತ ಹತ್ತಾರು ಕೃಷಿ ಲೇಖನಗಳು ತುಂಬಿದಾಗ ಉಂಟಾಗುವ ಖುಷಿ ಇದೆಯಲ್ಲಾ, ಅದನ್ನು ವರ್ಣಿಸಲು ಶಬ್ದಗಳಿಲ್ಲ.
                   ಮಾಧ್ಯಮ ಲೋಕದ ನಾಲ್ಕು ಗೋಡೆಗಳ ಒಳಗೆ ವಿಶ್ವವನ್ನು ನೋಡಿ ಅಕ್ಷರಕ್ಕಿಳಿಸುವ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಕೃಷಿಯ ನೇರ ದರ್ಶನವನ್ನು ಮಾಡಿಸುವ ವಿವೇಕಾನಂದ ಕಾಲೇಜಿನ ಯೋಜನೆ, ಯೋಜನೆಯಲ್ಲಿ ಕನ್ನಾಡಿಗೆ ಸಂದೇಶವಿದೆ. ಮಣ್ಣಿನ ಮಕ್ಕಳ ಮನಸ್ಸಿನ ಮಾತು ಕನಸಾಗದೆ ನನಸಿನತ್ತ ಒಯ್ಯಲಿ ಎನ್ನುವುದು ಶುಭ ಹಾರೈಕೆ.

Monday, August 11, 2014

ಕೃಷಿ ಪ್ರವಾಸ ತಿರುಗಾಟವಲ್ಲ, ಮಾಹಿತಿಗಳ ಬೇಟೆ

                 "ಕೇರಳದ ಪೊಳ್ಳಾಚಿ, ಕಾಞಿರಪಳ್ಳಿಯ ರಬ್ಬರ್ ಕೃಷಿಯ ವೀಕ್ಷಣೆ-ಅಧ್ಯಯನಕ್ಕಾಗಿ ಪ್ರವಾಸ ಹೋಗಿದ್ದೆವು. ವಿವಿಧ ನರ್ಸರಿಗಳನ್ನು ಭೇಟಿಯಾದೆವು. ರಬ್ಬರ್ ಕೃಷಿಯ 'ಮಾಡಿ-ಬೇಡಿ'ಗಳ ಮಾಹಿತಿ ಪಡೆದೆವು. ಕೃಷಿಕರನ್ನು ಮಾತನಾಡಿಸಿದೆವು. ಕಷ್ಟ-ಸುಖ ಹಂಚಿಕೊಂಡೆವು. ಅಲ್ಲಿನ ಕೃಷಿಕರು ನೀಡಿದ 'ಆನೆಕೊಂಬನ್' ಬೆಂಡೆ ಬೀಜ ನಮ್ಮೂರಿಗೆ ಬಂತು. ಅವರ  ಅಪೇಕ್ಷೆಯಂತೆ ಹಲಸಿನ ಗಿಡಗಳನ್ನು ಒದಗಿಸಿದೆವು. ಅಲ್ಲಿನ ಕೃಷಿಕರೊಂದಿಗೆ ಸಂಬಂಧ ಈಗ ಗಟ್ಟಿಯಾಗಿದೆ", ಕಾಸರಗೋಡು ಜಿಲ್ಲೆಯ ಮೀಯಪದವಿನ ಕೃಷಿಕ ಡಾ.ಡಿ.ಸಿ.ಚೌಟರು ಕೃಷಿ ಪ್ರವಾಸದ ಪರಿಣಾಮಗಳನ್ನು ವಿವರಿಸುತ್ತಾರೆ.
                 ಆನೆಯ ಸೊಂಡಿಲಿನಂತೆ ಭಾಸವಾಗುವುದರಿಂದಲೋ ಏನೋ 'ಆನೆಕೊಂಬನ್ ಬೆಂಡೆ' ಪ್ರಬೇಧ ಮೀಯಪದವಿಗೆ ಬಂತು. ಚೌಟರು ಆಸಕ್ತರಿಗೆ ಬೀಜ ಹಂಚಿದರು. ಏನಿಲ್ಲವೆಂದರೂ ಐವತ್ತಕ್ಕೂ ಮಿಕ್ಕಿ ಕೃಷಿಕರಲ್ಲಿ ಅಭಿವೃದ್ಧಿಯಾಗಿದೆ. ಬೆಂಡೆಕಾಯಿ ಒಂದೂವರೆ ಅಡಿಯಷ್ಟು ಉದ್ದ. ಸ್ಥಳೀಯ ಬೆಂಡೆಯದ್ದೇ ವರ್ಣ. ಇದು ಕಿಲೋಗೆ 20-23 ಬೆಂಡೆ ತೂಗಿದರೆ ಆನೆಕೊಂಬನ್ ತಳಿಯದ್ದರಲ್ಲಿ ಹತ್ತರಿಂದ ಹನ್ನೆರಡು ಕಾಯಿ. ಸಾಮಾನ್ಯ ರುಚಿ. ಬೀಜ ಪ್ರದಾನಿಸಿ ನಲವತ್ತೈದು ದಿನದಲ್ಲಿ ಇಳುವರಿ ಶುರು.
                 ಚೌಟರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸನಿಹದ ರಂಬುಟಾನ್ ತೋಟಕ್ಕೆ ಭೇಟಿ ನೀಡಿದ್ದರು. ದೊಡ್ಡ ಪ್ರಮಾಣದ ಕೃಷಿ ನೋಡಿ ಉತ್ಸುಕರಾದರು. ಕೃಷಿ ಕ್ರಮಗಳನ್ನು ತಿಳಿದುಕೊಂಡರು. ಇತರ ತೋಟಗಳಿಗೂ ಭೇಟಿ ನೀಡಿದರು. ಕೇರಳದ ತೋಟಕ್ಕೂ ಲಗ್ಗೆಯಿಟ್ಟರು. ಹೀಗೆ ಅವಿರತ ಪ್ರವಾಸ ಮಾಡಿದ್ದರಿಂದಾಗಿ ಚೌಟರ ತೋಟದಲ್ಲಿ ಈಗ ಸುಮಾರು ಐನೂರರ ಹತ್ತಿರ ರಂಬುಟಾನ್ ಗಿಡಗಳು ಬೆಳೆಯುತ್ತಿವೆ. ಹಳೆಯ ಗಿಡಗಳು ಇಳುವರಿ ನೀಡುತ್ತಿವೆ.
                 ಚೌಟರಲ್ಲಿಗೆ ಭೇಟಿಯಿತ್ತ ಬೆಂಗಳೂರು ವಿಶ್ವವಿದ್ಯಾನಿಲಯದ ಕೃಷಿ ಮೂಲದ ವರಿಷ್ಠರೊಬ್ಬರನ್ನು ರಂಬುಟಾನ್ ಹಣ್ಣು ಸೆಳೆಯಿತು. ರುಚಿ ನೋಡಿದ ಅವರು ಸ್ಥಳದಲ್ಲೇ ಐವತ್ತು ಗಿಡಗಳಿಗೆ ಬೇಡಿಕೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಹಣ್ಣು ಹೂ ಬಿಡುವ, ಬೆಳವಣಿಗೆಯ ಕ್ರಮ ಗೊತ್ತಿಲ್ಲ. ನಾಲ್ಕೈದು ಗಿಡ ನೆಟ್ಟು, ಹೂ-ಕಾಯಿ ಬಿಡುತ್ತದೆ ಎಂದು ಖಾತ್ರಿಯಾದ ಬಳಿಕ ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡಬಹುದು, ಎಂದು ಸಲಹೆ ನೀಡಿದರು. ಚೌಟರ ಸಲಹೆ ಆಪ್ತವಾಗಿ ಸ್ವೀಕರಿಸಿದರು.
                 ಕೃಷಿ ಪ್ರವಾಸವು ಉಂಟುಮಾಡುವ ಕೃಷಿಕ-ಕೃಷಿಕರೊಳಗಿನ ಬಾಂಧವ್ಯದ ಬಂಧ ಗಟ್ಟಿಯಾದುದು. ವೈವಿಧ್ಯ ಬೆಳೆಯನ್ನು ನೋಡಿ, ಸುಖ-ಕಷ್ಟಗಳನ್ನು ಪರಸ್ಪರ ಹಂಚಿಕೊಂಡಾಗ ತನ್ನ ತೋಟದಲ್ಲಿ ಯಾವುದು ಬೆಳೆಯಬಹುದು, ಯಾವುದು ಬೇಡ ಎನ್ನುವ ನಿರ್ಧಾಾರಕ್ಕೆ ಬರಲು ಸಹಾಯಕ. ಗಿಡ ಗೆಳೆತನವನ್ನು ಬೆಸೆಯಲು ಅನುಕೂಲ. ಒಂದೂರಿನ ಕೃಷಿ ಪದ್ಧತಿಯು ಮತ್ತೊಂದು ಊರಿನ ಕೃಷಿ ಸಮಸ್ಯೆಗೆ ಉತ್ತರವಾಗಬಹುದು. ತಪ್ಪುಗಳನ್ನು ತಿದ್ದಿಕೊಳ್ಳಲು ಪೂರಕ. ಕೃಷಿಯಲ್ಲಿ ಪುಸ್ತಕದ ಜ್ಙಾನಕ್ಕಿಂತ ಪ್ರವಾಸ ಜ್ಞಾನ ಹೆಚ್ಚು ಬೌದ್ಧಿಕತೆಯನ್ನು ತಂದುಕೊಡುತ್ತದೆ.
                ಪ್ರವಾಸ ಹೋದಾಗ ಕೆಲವು ಕೃಷಿಕರು ಮಾಹಿತಿ ಬಿಟ್ಟುಕೊಡುವುದಿಲ್ಲ ಎನ್ನುವ ಅಪವಾದವೂ ಇದೆ. ಇಲ್ಲದಿಲ್ಲ, ಆದರೆ ಬಹಳ ಕಡಿಮೆ. ಬಹುತೇಕರಿಗೆ ತನ್ನ ಕೃಷಿಯ ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಉತ್ಸಾಹವಿರುತ್ತದೆ. ನನಗೆ ರೈತರು ಮಾಹಿತಿ ನೀಡದೆ ಎಂದೂ ವಂಚಿಸಿಲ್ಲ. ಚಿಕ್ಕಪುಟ್ಟ ಗುಟ್ಟುಗಳಿರಬಹುದು ಬಿಡಿ. ನಾವು ಎಲ್ಲಿಗೆ, ಯಾಕಾಗಿ ಹೋಗುತ್ತೇವೆ ಎನ್ನುವ ರೂಪುರೇಷೆ ಹಾಕಿಕೊಳ್ಳಬೇಕು. ಕೇರಳ, ಗೋವಾ, ಮಹಾರಾಷ್ಟ್ರಗಳ ಹಲವಾರು ಕೃಷಿಕರಿಂದ ಒಳ್ಳೊಳ್ಳೆಯ ಕೃಷಿ ಮಾಹಿತಿ ತಿಳಿದುಕೊಂಡಿದ್ದೆ. ಈ ರೀತಿಯ ಪ್ರವಾಸಗಳ ಅನುಭವವನ್ನು ನನ್ನ ತೋಟವೇ ಹೇಳುತ್ತದೆ, ಡಾ.ಚೌಟರು ಖುಷಿ ಹಂಚಿಕೊಂಡರು.  
                  ಪುತ್ತೂರು ಬೆಟ್ಟಂಪಾಡಿಯ ಕೃಷಿಕ ಅರುಣ್ ಕುಮಾರ್ ರೈ ಆನಾಜೆ ದುಬೈ, ಥೈಲ್ಯಾಂಡ್ ದೇಶಗಳಿಗೆ ಪ್ರವಾಸ ಹೋಗಿದ್ದರು. ಕೃಷಿ ಉತ್ಪನ್ನಗಳ ಮಾಲ್ಗಳಿಗೆ ಹೋಗಿ ಮೌಲ್ಯವರ್ಧಿತ ಉತ್ಪನ್ನಗಳ ಹುಡುಕಾಟ ಮಾಡುವುದು ಅವರ ಆಸಕ್ತಿಯ ಭಾಗ. ಹಲಸಿನ, ತೆಂಗಿನ ಉತ್ಪನ್ನಗಳ ಪ್ಯಾಕೆಟನ್ನು ಆಯಾಯಾ ಹಣ್ಣಿನ ಆಕಾರದಲ್ಲಿ ಸಿದ್ಧಪಡಿಸಿದ್ದರು. ಊರಿಗೆ ಮರಳುವಾಗ ತೋರಿಸಲೆಂದು ಅಂತಹ ಪ್ಯಾಕೆಟುಗಳನ್ನು ತಂದಿದ್ದರು. ಆಸಕ್ತರಿಗೆ ತೋರಿಸಿದರು. ರೈಯವರು ತಾರದೇ ಇರುತ್ತಿದ್ದರೆ ಇಂತಹ ಯತ್ನಗಳು ಆಗಿರುವುದು ಗೊತ್ತಾಗುವ ಸಾಧ್ಯತೆ ಕಡಿಮೆ. ಕೃಷಿ ಪ್ರವಾಸಗಳು ನಮ್ಮನ್ನು ಅಪ್ಡೇಟ್ ಮಾಡಿಸುತ್ತವೆ. ಹೊಸ ಸಂಗತಿಗಳನ್ನು ಹತ್ತಿರದಿಂದ ನೋಡಿದಾಗ ಸತ್ಯದರ್ಶನವಾಗುತ್ತದೆ. ಇಲ್ಲದಿದ್ದರೆ ಸಂಶಯದೊಳಗೆ ಸುತ್ತುತ್ತಾ ಇರಬೇಕಷ್ಟೇ, ಎನ್ನುತ್ತಾರೆ ಅರಣ್.
                   ಶಿರಸಿಯ ಕೃಷಿಕ ಬಾಲಚಂದ್ರ ಹೆಗಡೆ ಸಾಯಿಮನೆ ಇಪ್ಪತ್ತಾರು ದೇಶಗಳನ್ನು ಸುತ್ತಿದ ಸಾಹಸಿ. ಶ್ರೀಲಂಕಾ ದೇಶದಲ್ಲಿ ಪಾಮ್ನಾಮ್, ಫಿಲಿಪೈನ್ಸ್ನಲ್ಲಿ ಕೈಮಿತೋ ಹಣ್ಣು.. ಹೀಗೆ ಆಯಾಯ ದೇಶದ ಹಣ್ಣಿನ ಗಿಡಗಳನ್ನು ಪಡೆಯುವಲ್ಲಿ ಹರಸಾಹಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅಡಿಕೆಯ ವಿವಿಧ ಉಪಯೋಗ, ಔಷಧವಾಗಿ ಬಳಕೆ ಮಾಡುವ ಕುತೂಹಲಕರ ಮಾಹಿತಿ ಹೊತ್ತು ತಂದಿದ್ದರು. ವಿದೇಶಿ ಹೊಲಗಳಲ್ಲಿ ಕೃಷಿಕರ ಬದಲು ಯಂತ್ರವೇ ಕಾಣಿಸುತ್ತದಂತೆ! ಸಣ್ಣ ರೈತರು ಕುಟುಂಬಾಧಾರಿತವಾಗಿ ಕೃಷಿ ಮಾಡುವುದನ್ನು ಹತ್ತಿರದಿಂದ ನೋಡಿದ್ದಾರೆ. ಎಲ್ಲಾ ದೇಶವನ್ನು ಸುತ್ತಾಡಿದ ಸಾಯಿಮನೆಯವರು  ಹೇಳಿದ್ದೇನು ಗೊತ್ತೇ -  'ನಮ್ಮ ದೇಶದಲ್ಲಿರುವಷ್ಟು ವೈವಿಧ್ಯತೆ ಬೇರೆಲ್ಲೂ ಇಲ್ಲ'.
                 ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಹವಾಯ್ ಮತ್ತು ಶ್ರೀಲಂಕಾ ದೇಶಕ್ಕೆ ಪ್ರವಾಸ ಮಾಡಿದ್ದರು. ಶ್ರೀಲಂಕಾದಲ್ಲಿ ಹಲಸನ್ನು 'ಅನ್ನದ ಮರ' ಎಂದು ಕರೆಯುತ್ತಾರೆ. ಇದರ ಮೌಲ್ಯವರ್ಧಿತ ಉತ್ಪನ್ನಗಳ ಉದ್ದಿಮೆಗಳ ಸಂದರ್ಶನ. ಹಲಸಿನ ತೋಟಗಳ ವೀಕ್ಷಣೆ. ಬದುಕಿನಲ್ಲಿ ಹಲಸನ್ನು ಆಹಾರವಾಗಿ ಸ್ವೀಕರಿಸಿದ ಶ್ರೀಲಂಕನ್ನರು ಅನ್ನಕ್ಕೆ ಬರ ಬಂದರೂ ವಿಚಲಿತರಾಗರು! ಹಣ್ಣುಗಳ ದೇಶ ಹವಾಯಿ ಸುತ್ತಿದ ಶ್ರೀಪಡ್ರೆಯವರು ಹೊಸ ಹೊಸ ಹಣ್ಣುಗಳ ಪರಿಚಯ ಮಾಡಿಕೊಂಡರು. ಬೆಳೆ ವೈವಿಧ್ಯತೆ, ಆಹಾರ, ರುಚಿ ವೈವಿಧ್ಯತೆಯನ್ನು ನೋಡಲು, ಅನುಭವಿಸಲು ಪ್ರವಾಸ ಬೇಕು, ಎನ್ನುತ್ತಾರೆ.
                 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವ-ಸಹಾಯ ಸಂಘಗಳ ಮೂಲಕ ಕಿರು ಆರ್ಥಿಕ ವ್ಯವಹಾರವನ್ನು ನಿರ್ವಹಣೆ ಮಾಡುವ ಅಧ್ಯಯನಕ್ಕಾಗಿ ಬಾಂಗ್ಲಾ ದೇಶವನ್ನು ಆಯ್ಕೆ ಮಾಡಿತ್ತು. ಅಲ್ಲಿ ಮಹಿಳೆಯರಿಗೆ ಆರ್ಥಿಕ ಸೌಲಭ್ಯ ನೀಡಿ ಅವರನ್ನು ಹೇಗೆ ಸ್ವಾವಲಂಬಿಯಾಗಿ ಮಾಡಬಹುದು ಎನ್ನುವುದು ಆಧ್ಯಯನದಿಂದ ಅರಿವಿಗೆ ಬಂತು ಎನ್ನುವ ಯೋಜನೆಯ ನಿರ್ದೇಶಕರಲ್ಲೊಬ್ಬರಾದ ಜಯಶಂಕರ ಶರ್ಮ ಹೇಳುತ್ತಾರೆ, ಯೋಜನೆಯು ಹಮ್ಮಿಕೊಳ್ಳುವ ಪ್ರವಾಸದಿಂದಾಗಿ ಕಟಪಾಡಿ ಮಲ್ಲಿಗೆಯ ಕೃಷಿಯನ್ನು ಮಾಡಲು ಧ್ಯೆರ್ಯ ಬಂತು. ಕೃಷಿ ಕ್ರಮಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಯೋಜನೆಯ ಬಹುತೇಕ ಮಹಿಳೆಯರಿಂದು ಮಲ್ಲಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ..
               ಕೃಷಿ ಪ್ರವಾಸಗಳು ಕೃಷಿ ಕ್ಷೇತ್ರದ ಹೊಸ ಹೊಳವುಗಳನ್ನು ತಿಳಿಸುವ ಉಪಾಧಿ. ಕೃಷಿಕರಿಂದಲೇ ರೂಪುಗೊಂಡ ತಂಡಗಳು ಯಶಸ್ವಿಯಾಗಿ ಪ್ರವಾಸಗಳನ್ನು ಮಾಡುತ್ತಿವೆ. ಪುತ್ತೂರಿನ ಗಿಡ ಗೆಳೆತನ ಸಂಘ 'ಸಮೃದ್ಧಿ'ಯ ತಂಡ ಎರಡು ದಶಕಕ್ಕೂ ಮಿಕ್ಕಿ ಕನ್ನಾಡಿನ ವಿವಿಧ ಕೃಷಿ ಕ್ಷೇತ್ರಗಳನ್ನು ಸಂದರ್ಶಿಸಿದೆ. ಇಂದು ಕರಾವಳಿಗೆ ಬನಾರಸ್ ನೆಲ್ಲಿ, ಬೀಜರಹಿತ ನೇರಳೆ, ಗಾಸರ್ೀನಿಯಾ ಕೋವಾ.. ಮೊದಲಾದ ಹಣ್ಣುಗಳು ಪ್ರವೇಶಿಸಿರುವುದು ಸಮೃದ್ಧಿಯಿಂದ. ಇದರ ಸದಸ್ಯರ ತೋಟಕ್ಕೆ ಹೋದಾಗ ಒಂದೊಂದು ಗಿಡದ ಹಿಂದೆ ರೋಚಕ ಕಥನಗಳನ್ನು ಹೇಳುವುದು ಕೃಷಿಕರಿಗೆ ರೋಚಕ ಅನುಭವ.
               ಕನ್ನಾಡಿನಲ್ಲಿ ಕೃಷಿ ಪ್ರವಾಸಗಳನ್ನು ಕೈಗೊಳ್ಳುವ ತಂಡಗಳಿವೆ. ಕೃಷಿ ಪ್ರವಾಸದ ಹೆಸರಿನಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಿ, ಕಾಟಾಚಾರಕ್ಕೆ ಒಂದೆರಡು ತೋಟಗಳನ್ನು ವೀಕ್ಷಿಸುವ ಪರಿಪಾಠದ ತಂಡಗಳೂ ಇವೆ. ಇಂತಹುದರಲ್ಲಿ  ಕೃಷಿಯ ಹೊರತು ಮಿಕ್ಕೆಲ್ಲಾ ಆಸಕ್ತಿಯ ಮಂದಿ ಇರುತ್ತಾರೆ. ಇವರಿಗೆ ಕೃಷಿ ಇಷ್ಟವಾಗುವುದಿಲ್ಲ. ಪ್ರವಾಸದ ಶೀರ್ಶಿಕೆಗೆ ಮಾತ್ರ ಕೃಷಿ ಹೊಸೆದಿರುತ್ತದಷ್ಟೇ. ಕೃಷಿ ಪ್ರವಾಸವು ಅಧ್ಯಯನ ಪ್ರವಾಸವಾಗಬೇಕು.
                  ಸರಕಾರಿ ಪ್ರಾಯೋಜಿತ ಕೃಷಿ ಪ್ರವಾಸಗಳು ಯಶವಾಗುವುದು ಕಡಿಮೆ. ಇಲ್ಲವೆಂದಲ್ಲ. ಅಲ್ಲಿರುವ ಅಧಿಕಾರಿಯ ಆಸಕ್ತಿ, ಕೃಷಿಕರ ಮೇಲಿನ ಆಭಿಮಾನವನ್ನು ಹೊಂದಿಕೊಂಡು ಕಾರ್ಯಹೂರಣ ಸಿದ್ಧವಾಗುತ್ತದೆ. ಅಂತಹ ಪ್ರವಾಸದಿಂದ ಕೃಷಿಕರಿಗೆ ಲಾಭ. ಆದರೆ ಫಂಡ್ ಮುಗಿಸುವ ಪ್ರವಾಸಗಳ ಫೈಲುಗಳು ಇಲಾಖೆಗಳಲ್ಲಿ ನೂರಾರಿವೆ. ಇಂತಹ ಸಂದರ್ಭಗಳನ್ನು ಸದುಪಯೋಗಪಡಿಸಿಕೊಳ್ಳುವ 'ವೃತ್ತಿಪರ ಫಲಾನುಭವಿ'ಗಳು ತುದಿಗಾಲಲ್ಲಿರುತ್ತಾರೆ! ಇವರಿಗೆ ಚೀನಾ, ಇಸ್ರೆಲ್ನಂತಹ ವಿದೇಶಿ ಪ್ರವಾಸಗಳು ರಜಾಕಾಲದ ಟೂರ್! ಕೃಷಿ ಅಧ್ಯಯನದ ಹೆಸರಿನಲ್ಲಿ ಜನನಾಯಕರ ಪ್ರವಾಸ ಕಥನ ಹೇಳಿದರೆ ಬೇತಾಳನ ಕಥೆಯಂತೆ ನಮ್ಮ ತಲೆ ನೂರಲ್ಲ, ಸಾವಿರ ಹೋಳಾಗುವ ಭೀತಿಯಿದೆ!
                 ಕೃಷಿ ಪ್ರವಾಸವು ತಿರುಗಾಟವಾಗಬಾರದು. ಅದು ಮಾಹಿತಿಗಳ ಆಪೋಶನವಾಗಬೇಕು. ಕಾಲಕಾಲದ ಜ್ಞಾನಗಳು ಅಪ್ಡೇಟ್ ಆಗಲು ಸುಲಭ ದಾರಿ. ಪ್ರವಾಸದ ಅನುಭವಗಳು ಬದುಕಿನಲ್ಲಿ, ಕೃಷಿಯಲ್ಲಿ ಪ್ರತಿಫಲನವಾದಾಗ ಪ್ರವಾಸದಿಂದ ಸಾರ್ಥಕ. ಇಲ್ಲದಿದ್ದರೆ ಬರಿಗುಲ್ಲು, ನಿದ್ದೆಗೇಡು!

(ಉದಯವಾಣಿಯ ನೆಲದ ನಾಡಿ ಅಂಕಣದಲ್ಲಿ ಪ್ರಕಟಿತ - 7-8-2014)


Thursday, July 31, 2014

ಹಲಸು ಉದ್ದಿಮೆ : ಯಂತ್ರಸಂಸ್ಥೆಗಳೊಂದಿಗೆ ಕೊಂಡಿ

 ಹಲಸಿನ ಹಣ್ಣನ ಪಲ್ಪಿಂಗ್ ಈ ಯಂತ್ರದಲ್ಲಿ ಸುಲಭ
 ಪೆರ್ಡೂೂರಿನ 'ಅರುಣೋದಯ ಇಂಡಸ್ಟ್ರೀಸಿನಲ್ಲಿ ವಿಜ್ಞಾನಿಗಳ ತಂಡ

               ಮೂರ್ನಾಲ್ಕು ವರುಷಗಳಿಂದ ಕರಾವಳಿಯಲ್ಲಿ ಹಲಸಿನ ಅಲೆ ಎದ್ದಿದೆ. ಮೌಲ್ಯವರ್ಧಿತ ಉತ್ಪನ್ನ ತಯಾರಿಯತ್ತ ಒಲವು ಮೂಡುತ್ತಿದೆ. ಹಲಸಿನ ಹಪ್ಪಳ, ಚಿಪ್ಸ್, ಹಲ್ವ.. ಮೊದಲಾದ ಮನೆಉತ್ಪನ್ನಗಳಿಗೆ ಕೊಳ್ಳುಗರ ಕೊರತೆಯಿಲ್ಲ. ಹಲಸಿನ ಹಪ್ಪಳ ತಯಾರಿಯು ಶ್ರಮ ಬೇಡುವ ಕೆಲಸ. ಶ್ರಮ ಹಗುರ ಮಾಡುವ ಯಂತ್ರಗಳು ಬಂದುಬಿಟ್ಟರೆ ಉತ್ಪಾದನೆ ಹೆಚ್ಚು ಮಾಡಬಹುದು.
                ಕೃಷಿ, ಕೃಷಿ ಆಗ್ರೋ ಉದ್ಯಮ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗಳಿಗೆ ಯಂತ್ರಗಳನ್ನು ಆವಿಷ್ಕರಿಸುವ ಕೊಯಂಬತ್ತೂರಿನ ಪೊನ್ಮಣಿ ಇಂಡಸ್ಟ್ರೀಸಿನ ಎನ್.ಆರ್.ನಟರಾಜನ್, ಭೂಪಾಲ್ ಕೇಂದ್ರವಾಗಿರುವ ಕೊಯಂಬತ್ತೂರು ಉಪಕೇಂದ್ರವಾದ ಕೇಂದ್ರ ಕೃಷಿ ಇಂಜಿನಿಯರಿಂಗ್ ಸಂಸ್ಥೆಯ ಮುಖ್ಯಸ್ಥ ಡಾ.ಎಸ್.ಜೇಕಬ್ ಕೆ.ಅಣ್ಣಾಮಲೈ ಮತ್ತು ಹಿರಿಯ ವಿಜ್ಞಾನಿ ಡಾ.ರವೀಂದ್ರ ನಾಯಕ್ ಜೂನ್ 21, 22ರಂದು ಕರಾವಳಿಗೆ ಆಗಮಿಸಿದ್ದರು.
                ಹಲಸಿನ ಹಪ್ಪಳದ ಉದ್ದಿಮೆದಾರರು ಸಂಘಟಿತರಾಗಿಲ್ಲ. ಅವರಿಗೆ ಪರಸ್ಪರರ ಪರಿಚಯವಿಲ್ಲ, ಸಂವಹನವಿಲ್ಲ. ಇವರು ಮತ್ತು ವಿಜ್ಞಾನಿಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡಿದ್ದು ಹಲಸು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅಡಿಕೆ ಪತ್ರಿಕೆ. ಆರಂಭದ ದಿವಸ ಕ್ಯಾಂಪ್ಕೋ ವರಿಷ್ಠರು, ಅಡಿಕೆ ಕೃಷಿಕರು ಮತ್ತು ಕೇಂದ್ರ ಕೃಷಿ ಇಂಜಿನಿಯರಿಂಗ್ ಸಂಸ್ಥೆಯನ್ನು ಮುಖಾಮುಖಿಯ ಮೇಜಿಗೆ ತಂದದ್ದೂ ಇದೇ ಪತ್ರಿಕೆ. ಈ ಸಂಸ್ಥೆ ಮತ್ತು  ಕನ್ನಾಡಿನ ಅಡಿಕೆ ಕೃಷಿಕ ಸಮುದಾಯಕ್ಕೆ ಈ ವರೆಗೆ ಸಂಪರ್ಕವೇ ಇದ್ದಿರಲಿಲ್ಲ.
                ಜೂನ್ 22ರಂದು ಪೆರ್ಡೂೂರಿನ 'ಅರುಣೋದಯ ಇಂಡಸ್ಟ್ರೀಸ್'ನ ವಸಂತ ನಾಯಕರ ಹಪ್ಪಳ ತಯಾರಿ ಕೇಂದ್ರಕ್ಕೆ ಭೇಟಿ. ಇವರದು ಹಲಸಿನ ಹಪ್ಪಳದ ಉದ್ದಿಮೆಯಲ್ಲೇ ಗರಿಷ್ಠ ಉತ್ಪಾದನೆ ಮಾಡುತ್ತಿರುವ ಸಾಧಕ ಸಂಸ್ಥೆ. ದಿನಕ್ಕೆ ಆರುನೂರು ಹಲಸು ನಾಲ್ಕು ಡಜನ್ ಕೈಗಳ ಮೂಲಕ ಇಲ್ಲಿ ಸಾವಿರಸಾವಿರ ಹಪ್ಪಳಗಳಾಗುತ್ತದೆ. ಹಪ್ಪಳ ತಯಾರಿಯಲ್ಲಿ ಹಲಸಿನ ಸೊಳೆ ರುಬ್ಬುವುದು, ಅದನ್ನು ಉಂಡೆ ಮಾಡುವುದು, ಉಂಡೆ ಒತ್ತುವುದು ಮುಖ್ಯ ಶ್ರಮದ ಕೆಲಸ. ಸದ್ಯ ಉಂಡೆಯನ್ನು ಎರಡು ಪ್ಲಾಸ್ಟಿಕ್ ಹಾಳೆ ಮೇಲಿಟ್ಟು ಅದರ ಮೇಲೆ ಮರದ ಒಂದು ಉರುಟು ಮಣೆ ಇಟ್ಟು ಒತ್ತುತ್ತಾರೆ.
               ಇದನ್ನು ಗಮನಿಸಿದ ನಟರಾಜನ್ ’ಕೈಯಲ್ಲಿ ಉಂಡೆ ಮಾಡುವಾಗ ಸಹಜವಾಗಿ ಆಕಾರ, ಗಾತ್ರ ವ್ಯತ್ಯಾಸವಾಗುತ್ತದೆ. ಉಂಡೆ ಮಾಡಲೆಂದೇ ಒಂದು ಯಂತ್ರ ಅಭಿವೃದ್ಧಿಗೊಳಿಸಬಹುದು. ಆಗ ಸಮಾನ ತೂಕ, ಗಾತ್ರದ ಹಪ್ಪಳ ತಯಾರಿಸಬಹುದ” ಎನ್ನುತ್ತಾರೆ.”ಹಪ್ಪಳ ಒತ್ತಲು ಅರೆ ಅಟೋಮ್ಯಾಟಿಕ್ ಯಂತ್ರ ಸಾಕು. ಏಕೆಂದರೆ ಇದು ಮೂರು-ನಾಲ್ಕು ತಿಂಗಳ ಉತ್ಪಾದನಾ ಕೆಲಸ. ಈ ನಿಟ್ಟಿನಲ್ಲಿ ನಾವು  ಯತ್ನಿಸುತ್ತೇವೆ’ ಎಂದು ಈ ವಿಜ್ಞಾನಿ ತಂಡ ಭರವಸೆ ಕೊಟ್ಟಿದೆ.
              ವಸಂತ ನಾಯಕರ ಹಪ್ಪಳ ಒಣಗಿಸುವ ಒಂದು ಶಾಖಪೆಟ್ಟಿಗೆ ಹೆಚ್ಚು ಕಟ್ಟಿಗೆ ಬೇಡುತ್ತಿದೆ. ಮುಂದಿನ ಘಟ್ಟದಲ್ಲಿ ಇದರ ಕ್ಷಮತೆ ಹೆಚ್ಚಿಸಿ ಕಟ್ಟಿಗೆಯ ಅವಶ್ಯಕತೆ ಕುಗ್ಗಿಸುವ ಯೋಚನೆ ಮಾಡಬಹುದು ಎನ್ನುತ್ತಾರೆ ಡಾ.ಅಣ್ಣಾಮಲೈ.
                ಬಿ.ಸಿ.ರೋಡಿನ ಹಲಸು ಪ್ರೇಮಿ ಮೌನೀಶ್ ಮಲ್ಯರ ಮನೆಗೆ ತಂಡ ಭೇಟಿ ನೀಡಿ ಅವರ ಉತ್ಪನ್ನಗಳು, ಅದಕ್ಕೆ ಸಂಬಂಧಪಟ್ಟ ಯಂತ್ರಗಳನ್ನು ವೀಕ್ಷಿಸಿತು. ಮನೆಮಟ್ಟದ ಹಲಸು ಮೌಲ್ಯವರ್ಧನೆ ಮಾಡುವ ಒಂದು ಪುಟ್ಟ ಗುಂಪೇ ಅಲ್ಲಿಗೆ ಬಂದಿತ್ತು.  ಇವರ ಯಂತ್ರಾವಶ್ಯಕತೆಯ ಬಗ್ಗೆ ಸವಿವರವಾಗಿ ಕೇಳಿಕೊಂಡ ತಂಡ ’ಕೊಯಂಬತ್ತೂರಿಗೆ ಮುಂದಾಗಿ ತಿಳಿಸಿ ಬನ್ನಿ. ಹಲಸಿನ ಉತ್ಪನ್ನಗಳಿಗೆ ಬೇಕಾಗುವ ಯಂತ್ರವನ್ನು ರೂಪಿಸೋಣ’ ಎಂದಿದೆ.
                  ಹಲಸು ಇಷ್ಟ್ಟೊಂದು ಆದಾಯ ತರಬಲ್ಲುದು ಮತ್ತು ಇದರಿಂದ ಅದೆಷ್ಟೋ ಉತ್ಪನ್ನ ತಯಾರಿ ಸಾಧ್ಯ ಎನ್ನುವುದು ತಂಡಕ್ಕೆ ದೊಡ್ಡ ಅಚ್ಚರಿ ಕೊಟ್ಟ ವಿಚಾರ. ಅಡಿಗೆಯ ಮಿಕ್ಸಿಯಲ್ಲಿ ಹಲಸಿನ ಹಣ್ಣಿನ ಪಲ್ಪ್ ಮಾಡುವುದು ಮೌನೀಶರಿಗೆ ತ್ರಾಸದಾಯಕವಾಗಿತ್ತು. ಇದಕ್ಕೆ ಈಗಾಗಲೇ ನಮ್ಮಲ್ಲಿರುವ ಗಟ್ಟಿಮುಟ್ಟಾದ ನಾಲ್ಕು ಕಿಲೋ ಒಳಸುರಿ ಹಾಕಬಲ್ಲ ಮಿಕ್ಸಿ ಆಗಬಹುದು ಎಂದರು ನಟರಾಜನ್.
                 ಕೊಯಂಬತ್ತೂರಿಗೆ ಮರಳಿದ ದಿನವೇ ನಟರಾಜನ್ ಮತ್ತು ಉಳಿದ ವಿಜ್ಞಾನಿಗಳು ಹಲಸಿನ ಹಣ್ಣು ಕೊಯ್ಯಿಸಿ ಈ ದೊಡ್ಡ ಮಿಕ್ಸಿಯಲ್ಲಿ ಹಾಕಿ ಪಲ್ಪ್ ಮಾಡಿ ನೋಡಿದ್ದಾರೆ. ಅದು ಯಶಸ್ವಿ ಎಂದು ತೋರಿಸುವ ಫೋಟೋಗಳನ್ನು ಕಳಿಸಿದ್ದಾರೆ. ಕರಾವಳಿಯ ಹಪ್ಪಳದ ಮತ್ತು ಚಿಕ್ಕಚಿಕ್ಕ ಗೃಹ ಉದ್ದಿಮೆ ಮಾಡುವ ಒಂದಷ್ಟು ಕೃಷಿಕರು, ಉದ್ಯಮಶೀಲರು ಕೊಯಂಬತ್ತೂರಿಗೆ ಟಿಕೆಟ್ ಬುಕ್ ಮಾಡಹೊರಟಿದ್ದಾರೆ.
                  "ಇದೊಂದು ಮೊದಲ ಹೆಜ್ಜೆಯಷ್ಟೇ. ಈ ಭಾಗದ ಕೃಷಿಕರು, ಉದ್ದಿಮೆದಾರರು ಮತ್ತು ವಿಜ್ಞಾನಿಗಳ ನಡುವೆ ನೇರ ಪರಿಚಯವಾಗಿದೆೆ. ಮುಂದಿನ ದಿನಗಳಲ್ಲಿ ಪರಸ್ಪರ ಸಂಪರ್ಕ ಇರಿಸಿಕೊಂಡರೆ ಎಷ್ಟೋ ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯ. ಇಲ್ಲಿಗೆ ಮಾಧ್ಯಮದ ಕೆಲಸ ಬಹುತೇಕ ಮುಗಿದಂತೆ, ಮುಂದೆ ಏನಿದ್ದರೂ ನಮ್ಮದು ಪ್ರೇರೇಪಣೆ ಮತ್ತು ವರದಿಗಾರಿಕೆ ಮಾತ್ರ", ಎನ್ನುತ್ತಾರೆ  ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ.


Sunday, July 27, 2014

ಕೃಷಿ ತಿರುಗಾಟದಿಂದ ಜ್ಞಾನವೃದ್ಧಿ


           'ಕೃಷಿಕ ತೋಟದಲ್ಲೇ ಇರಬೇಕು, ಅವನು ತಿರುಗಾಡಬಾರದು,' ಕೃಷಿಯ ಪಾರಂಪರಿಕ ಮಾತುಕತೆಗಳಲ್ಲಿ ಹಾದುಹೋಗುವ ಸೊಲ್ಲಿದು. ಕೃಷಿ ತಿರುಗಾಟದಿಂದ ಜ್ಞಾನವೃದ್ಧಿಯಾಗುತ್ತದೆ. ಆಗುಹೋಗುಗಳು ಅಪ್ಡೇಟ್ ಆಗುತ್ತಿರುತ್ತದೆ,’ ಕೃಷಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡ ಪುತ್ತೂರು (ದ.ಕ.) ಬೆಟ್ಟಂಪಾಡಿಯ ಅರುಣ್ ಕುಮಾರ್ ರೈ ಆನಾಜೆಯವರ ಅನುಭವ.
            ಅರುಣ್ ದೇಶ ಸುತ್ತಿದ್ದಾರೆ, ಸುತ್ತುತ್ತಾರೆ. ಅಂತಹ ಸಂದರ್ಭಗಳಲ್ಲಿ - ಕೃಷಿ ಸಂಬಂಧಿ ಮೇಳಗಳಿಗೆ ಬೇಟಿ. ಯಂತ್ರ-ತಂತ್ರ ಮಾಹಿತಿಗಳ ಬೆನ್ನೇರಿ ಪ್ರವಾಸ. ಹೊಸ ಬೆಳೆಗಳತ್ತ ಆಸಕ್ತಿ. ಕೃಷಿಕರಲ್ಲಿಗೆ ಭೇಟಿ. ಬೀಜ-ಗಿಡಗಳ ವಿನಿಮಯ. ಮಾಹಿತಿ ಹಂಚಿಕೆ - ಹೀಗೆ ಅರುಣ್ ಸಕ್ರಿಯ. ಮಿತಭಾಷಿಯಾದ ಇವರನ್ನು ಮಾತನಾಡಿಸಿದರೆ ಕೃಷಿ ಲೋಕದ ಅಪ್ಡೇಟ್ ಗೊತ್ತಾಗಿಬಿಡುತ್ತದೆ.
            ಈಚೆಗೆ ಹಾಂಗ್ ಕಾಂಗ್, ಮಕಾವೋ, ಥೈಲಾಂಡ್ ಪ್ರವಾಸ ಕೈಗೊಂಡಿದ್ದರು. ಸೀಮಿತ ಅವಧಿಯ ಭೇಟಿಯಾದರೂ ಅವರ ಕಣ್ಣೆಲ್ಲಾ ಕೃಷಿಯ ಸುತ್ತಮುತ್ತ ಗಿರಕಿ ಹೊಡೆಯುತ್ತಿತ್ತು. "ಮಾಲ್ಗಳಲ್ಲಿ ಕೃಷಿ ಉತ್ಪನ್ನಗಳನ್ನು ಆಕರ್ಷಕವಾಗಿ ಜೋಡಿಸಿಡುವ ವಿನ್ಯಾಸ ಮೋಡಿ ಮಾಡಿತ್ತು.
          ವಿವಿಧ ವೈವಿಧ್ಯ ಹಣ್ಣುಗಳ ಜೋಡಣಾ ವಿನ್ಯಾಸದ ನೋಟ ಕಣ್ಸೆಳೆಯುವಂತಿತ್ತು. ಗ್ರಾಹಕರನ್ನು ಸೆಳೆಯುವ ಮಾರುಕಟ್ಟೆ ತಂತ್ರ ನಿಜಕ್ಕೂ ಬೆರಗು. ಭಾರತದಲ್ಲಿ ಮಾರುಕಟ್ಟೆಯಿಲ್ಲ, ಮಾರಾಟವಿಲ್ಲ ಅಂತ ಕೂಗುತ್ತೇವೆ. ನಿಜಕ್ಕೂ ಮಾರುಕಟ್ಟೆಯ ಅಧ್ಯಯನದಲ್ಲಿ ನಾವು ಹಿಂದಿದ್ದೇವೆ ಅನ್ನಿಸುತ್ತದೆ. ಉತ್ಪನ್ನಗಳನ್ನು ಗ್ರಾಹಕ ಸ್ವೀಕೃತಿಯಾಗಿ ಕೊಡುವಲ್ಲಿ ಇನ್ನೂ ಮುಂದೆ ಸಾಗಬೇಕಿದೆ," ಎಂದರು.
               ಅರುಣ್ ಮರಳುವಾಗ ತೆಂಗಿನ ನಿರ್ಜಲೀಕೃತ (ಡಿಹೈಡ್ರೇಟೆಡ್) ಉತ್ಪನ್ನವನ್ನು ತಂದಿದ್ದರು. ಅದರ ಪ್ಯಾಕೆಟ್ ಹೇಗಿತ್ತೆಂದರೆ ತೆಂಗಿನದ್ದೇ ಆಕಾರದ ಪ್ಯಾಕಿಂಗ್. ತೆಂಗಿನ ಉತ್ಪನ್ನ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ಯಾಕೆಟಿನ ವಿನ್ಯಾಸವೇ ಅದು ಯಾವ ಉತ್ಪನ್ನ ಎನ್ನುವುದನ್ನು ಮನಸ್ಸಿನಲ್ಲಿ ರಿಜಸ್ತ್ರಿ ಮಾಡಿಸಿ ಬಿಡುತ್ತವೆ. ಪ್ರತೀಯೊಂದು ಹಣ್ಣಿಗೂ ಆ ಹಣ್ಣನ್ನೇ ಹೋಲುವ ಪೌಚ್ ತಯಾರಿಸಿರುವುದು ಮಾರಾಟ ಜಾಣ್ಮೆ. ಹಲಸು, ಪಪ್ಪಾಯಿಯಂತಿರುವ ಪೌಚ್ ಅರುಣರನ್ನು ಸೆಳೆದಿತ್ತು.
             ಹಣ್ಣಿನ ಋತುವಿನಲ್ಲಿ ಯಥೇಷ್ಟ ಹಣ್ಣು ಸಿಕ್ಕಿದಾಗ ಬೆಲೆಯೂ ಕಡಿಮೆ. ಬಿಸಾಕು ಕ್ರಯಕ್ಕೆ ಮಾರುವ ಪ್ರಮೇಯ ಕೃಷಿಕರದ್ದು. ಥೈಲ್ಯಾಂಡಿನಂತೆ ಹಣ್ಣುಗಳನ್ನು ಸೀಸನ್ನಿನಲ್ಲಿ ನಿರ್ಜಲಗೊಳಿಸಿ ಅಕಾಲದಲ್ಲಿ ಉತ್ಪನ್ನವನ್ನು ನೀಡುವ ಜ್ಞಾನ ನಮ್ಮಲ್ಲೂ ಸಾಧ್ಯವಿದೆ. ಅದರ ಅನುಷ್ಠಾನ ಎಲ್ಲಿಂದ ಶುರುವಾಗಬೇಕು, ಯಾರು ಮಾಡಬೇಕು? ಸರಕಾರ ಮಾಡಲಿ ಎಂದು ಕೃಷಿಕ, ಕೃಷಿಕರೇ ಮಾಡಿಕೊಂಡರೆ ಸಪೋರ್ಟ್ ಮಾಡುತ್ತೇವೆ ಎನ್ನುವ ಹುಸಿ ಆಶ್ವಾಸನೆ ಸರಕಾರದಿಂದ. ಹಾಗಾಗಿ ನಮ್ಮಲ್ಲಿ ಕೃಷಿ ವ್ಯವಸ್ಥೆಗಳು ಮುಂದೆ ಹೋಗಿಲ್ಲ," ಎನ್ನುತ್ತಾರೆ.
              ರಸ್ತೆಬದಿಗಳಲ್ಲಿರುವ ಸೀಯಾಳ ಮಾರಾಟಕ್ಕೂ ಹೈಟೆಕ್ ಟಚ್. ಸೀಯಾಳದ ಮೇಲ್ಬದಿ, ಕೆಳಬದಿ ಕೆತ್ತಿ ತಂಪುಪೆಟ್ಟಿಗೆಯಲ್ಲಿಡುತ್ತಾರೆ. ಇದನ್ನು ಗ್ರಾಹಕರು ಹೆಚ್ಚು ಇಷ್ಟಪಡುತ್ತಾರೆ. ಮಾಲ್ಗಳಲ್ಲಿ ಸೀಯಾಳವನ್ನು ಅಂದವಾಗಿ ಕೆತ್ತಿ, ಕ್ಲಿಂಗ್ಪಿಲ್ಮ್  ಪ್ಯಾಕ್  ಮಾಡಿ, ಲೇಬಲ್ ಅಂಟಿಸಿದಾಗಲೇ ಗುಣಮಟ್ಟ! ಈ ರೀತಿ ಇದ್ದಾಗ ಮಾತ್ರ ಗ್ರಾಹಕರೂ ಸ್ವೀಕರಿಸುತ್ತಾರಂತೆ.
             ರಂಬುಟಾನ್ ತುಂಬಾ ಮಾರಿಹೋಗುವ ಹಣ್ಣು. ಧರ್ಮಾಕೋಲ್ ಪ್ಲೇಟಿನೊಳಗೆ ಕ್ಲಿಂಗ್ಫಿಲ್ಮ್ ಸುತ್ತಿದ ಪ್ಯಾಕೆಟ್ ಆಕರ್ಷಕ. ಹಣ್ಣಿನ ಹೊರಮೈ ತುಂಬಾ ಗಟ್ಟಿ. ರಂಬುಟಾನ್ ಹಣ್ಣಿನ ಮೇಲ್ಬದಿ, ಕೆಳಬದಿಯನ್ನು ಒಳಗಿನ ಗುಳ ಸ್ವಲ್ಪ ಕಾಣುವಂತೆ ಕೆತ್ತಿಡುತ್ತಾರೆ. ತಿನ್ನುವವನಿಗೆ ಸುಲಭ, ಹಣ್ಣನ್ನು ತಿಂದ ಅರುಣ್ ಅನುಭವ.
            ಐದು ವರುಷದ ಹಿಂದೆ ದುಬೈಗೆ ಹೋಗಿದ್ದರು. ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡುವ ಯೋಚನೆಯಿತ್ತು.  ಅಲ್ಲಿನ ಕೃಷಿ ಕ್ರಮಗಳನ್ನು ಅಧ್ಯಯನ ಮಾಡಿದ್ದರು. ಶ್ರೀಮಂತ ಹೋಟೆಲುಗಳಲ್ಲಿ ಉತ್ತಮ ಬೇಡಿಕೆಯಿದ್ದ ತರಕಾರಿ 'ಕೂಸಾ', 'ಕಾರ್ಗೆಟ್'  ಸೆಳೆದಿತ್ತು. ಎಳೆಯ ಕೂಸಾವನ್ನು ತೊಟ್ಟಿನ ಜಾಗದಲ್ಲಿ ತುಂಡರಿಸಿ, ಒಳಗಿನ ಹೂರಣವನ್ನು ತೆಗೆಯುತ್ತಾರೆ. ಇದರೊಳಗೆ ಮಿಶ್ರ ಮಾಡಿದ ಅನ್ನ ಮತ್ತು ಮಾಂಸವನ್ನು ಸೇರಿಸಿ ಹಬೆಯಲ್ಲಿ ಬೇಯಿಸುತ್ತಾರೆ. ಇದು ಸಾಂಬಾರಿನೊಂದಿಗೆ ಮುಳುಗಿ ಊಟದ ಟೇಬಲ್ ಸೇರುತ್ತದೆ. ಒಂದು ಕಪ್ ಸಾಂಬಾರಿನಲ್ಲಿ ಒಂದು ಕೂಸಾ! ಇದು ಅರೇಬಿಯನ್ ರಾಷ್ಟ್ರದಲ್ಲಿ ಶ್ರೀಮಂತ ತಿಂಡಿ, ಹೊಸ ಖಾದ್ಯವೊಂದನ್ನು ಪರಿಚಯಿಸುತ್ತಾರೆ ಅರುಣ್.
            ಚೀನಾ ದೇಶಕ್ಕೆ ಹೋಗಿದ್ದಾಗ ಭತ್ತ, ಗೋಧಿ ಕೃಷಿಯತ್ತ ಚಿತ್ತ. ಅದಕ್ಕೆ ಬಳಸುವ ಯಂತ್ರೋಪಕರಣವನ್ನು ನೋಡಿ ಬೆರಗು. ಎಲ್ಲವೂ ಯಂತ್ರಾವಲಂಬಿತ. ಇಲ್ಲಿನ ಕೃಷಿ ಕೆಲಸಗಳು ನಿಜಕ್ಕೂ ಅಚ್ಚರಿ. ಚಿಕ್ಕ ಯಂತ್ರದಿಂದ ತೊಡಗಿ ದೊಡ್ಡ ದೊಡ್ಡ ಯಂತ್ರಗಳ ನಿರ್ವಹಣೆ. ಆಹಾರ ಉತ್ಪಾದನೆಯಲ್ಲಿ ಇಂತಹ ವ್ಯವಸ್ಥೆಗಳು ಅನಿವಾರ್ಯ, ಎನ್ನುತ್ತಾರೆ.
            ಹಳ್ಳಿಗಳಲ್ಲಿ ಯಾವ ಬೆಳೆ ಬೆಳೆಯುತ್ತಾರೋ ಅದು ಅಲ್ಲಲ್ಲಿ ಸಂಸ್ಕರಣೆಗೊಂಡೇ ನಗರದ ಮಾರುಕಟ್ಟೆ ಸೇರುತ್ತದೆ. ಅದಕ್ಕೆಂದೇ ಪ್ರತ್ಯೇಕವಾದ ಜಾಲವನ್ನು ಸರಕಾರವೇ ರೂಪಿಸಿದೆ. ಕೃಷಿಕರಿಗೆ ಬಾಡಿಗೆ ನೆಲೆಯಲ್ಲಿ ಯಂತ್ರಗಳನ್ನು ನೀಡಲು ಸೊಸೈಟಿಗಳಂತಹ ಸಂಸ್ಥೆಗಳ ಸ್ಥಾಪನೆ. ಸಣ್ಣ, ಮಧ್ಯಮ ವರ್ಗದ ಕೃಷಿಕರಿಗಿದು ಅನುಕೂಲ.
              "ಗಿಡ ನೆಡುವಲ್ಲಿಂದ ಮಾರುಕಟ್ಟೆ ತನಕದ ವಿವಿಧ ಹಂತಗಳ ಜ್ಞಾನವು ಪ್ರವಾಸದಿಂದ ತಿಳಿಯುತ್ತದೆ. ಆಯಾಯ ಪ್ರದೇಶದ ಪದ್ಧತಿಗಳು, ಕೆಣಿಗಳನ್ನು ಹತ್ತಿರದಿಂದ ನೋಡಲು ಅನುಕೂಲ. ಹೊಸ ಹಣ್ಣುಗಳ ಪರಿಚಯ. ಅಡಿಕೆಯೊಂದಿಗೆ ಬೇರೆ ಯಾವ ಬೆಳೆಗಳನ್ನು ಬೆಳೆಸಬಹುದೆಂಬುದಕ್ಕೆ ನನಗೆ ಪ್ರವಾಸ ಹೆಚ್ಚು ಪುಷ್ಟಿ ಕೊಟ್ಟಿದೆ," ಎನ್ನುತ್ತಾರೆ. ಅರುಣ್ ಪ್ರವಾಸ ಹೋದಾಗಲೆಲ್ಲಾ ಕೃಷಿಯ ವಿಚಾರಗಳನ್ನು ಆಸಕ್ತಿಯಿಂದ ಗಮನಿಸುತ್ತಾರೆ. ದಾಖಲೆ ಮಾಡಿಟ್ಟುಕೊಳ್ಳುತ್ತಾರೆ. ಪುತ್ತೂರಿನ ಗಿಡಗೆಳೆತನ ಸಂಘ 'ಸಮೃದ್ಧಿ'ಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು


Monday, July 14, 2014

ಕಪ್ಪು ಸುಂದರಿಯ ಹಸಿರು ಒಡಲು!




             ಕುಂದನಗರಿಯಲ್ಲಿ ಕೃಷಿಕರೊಬ್ಬರ ಮನೆಯಲ್ಲಿ ಉಳಕೊಂಡಿದ್ದೆ. ಉತ್ತರ ಕರ್ನಾಟಕದ ಖಾದ್ಯವೈವಿಧ್ಯವನ್ನು ಸವಿದಿದ್ದೆ. ಮಾತಿನ ಮಧ್ಯೆ ಖಾದ್ಯಗಳಲ್ಲಿ 'ಕಪ್ಪು ಹೆಸರುಕಾಳು' ಬಳಕೆಯು ಹಿರಿಯರ ಕಾಲದಿಂದಲೂ ನಮ್ಮ ಮನೆಯಲ್ಲಿತ್ತು. ಈಗ ಕಪ್ಪು ಹೆಸರಿನ ಕೃಷಿಯೇ ಅಪರೂಪವಾಗುತ್ತಿದೆ. ಮಾರುಕಟ್ಟೆಯಲ್ಲಿ ಬೇಕಾದಷ್ಟು ಸಿಗುತ್ತಿದೆ. ಎಲ್ಲಿಂದ ಬರುತ್ತದೆ ಎನ್ನುವುದು ಗೊತ್ತಿಲ್ಲ ಅಂದಿದ್ದರು. ಊರಿಗೆ ಮರಳುವಾಗ ಒಯ್ಯಬೇಕೆಂದುಕೊಂಡರೂ ಹಾಳು ಮರೆವು!
              ಹಸಿರು ವರ್ಣದ ಹೆಸರುಕಾಳು ಉಪಾಹಾರದಲ್ಲಿ, ಅಡುಗೆಯಲ್ಲಿ ಕರಾವಳಿಯಲ್ಲಿ ಬಳಕೆಯಿದೆ. ಆದರೆ ಕಪ್ಪುಹೆಸರು? ಹುಬ್ಬಳ್ಳಿಯ ಸ್ನೇಹಿತ ಮುಳಿಯ ಜಯಶಂಕರ ಶರ್ಮ ಅವರಲ್ಲಿ ವಿನಂತಿಸಿದೆ. ಕೋರಿಯರಿನಲ್ಲಿ ಕಳುಹಿಸಿಕೊಟ್ಟರು. ಕುಂದನಗರದ ಕೃಷಿಕರೆಂದಂತೆ ಆಕಾರದಲ್ಲಿ ಹಸಿರು ಹೆಸರು ಹೋಲುತ್ತದೆ. ವರ್ಣದಲ್ಲಿ ಮಾತ್ರ ಕಪ್ಪು. ಹೊಸ ನೆಂಟನ ಆಗಮನಕ್ಕೆ ಅಡುಗೆ ಮನೆ ಸಜ್ಜಾಯಿತು.
              ಮೊದಲಿಗೆ ಕಾಳಿಗೆ ಸ್ನಾನ. ನೀರಲ್ಲಿ ಕಾಳನ್ನು ಹಿಚುಕಿದ್ದೇ ತಡ, ನೀರು ಕಪ್ಪು ವರ್ಣಕ್ಕೆ ತಿರುಗಿತು. ಹಿಚುಕುತ್ತಾ ಹೋದಂತೆ ಕಾಳಿಗೆ ಅಂಟಿದ್ದ ಕಪ್ಪು ಬಣ್ಣ ಬಿಟ್ಟುಕೊಡುತ್ತಾ ಬಂತು. ನೀರಿನ ಬಣ್ಣ ಹೇಗಿತ್ತೆಂದರೆ ಗಟಾರ ನೀರನ್ನು ನೆನಪಿಸುವಂತಿತ್ತು. ಗಾಢ ಕಪ್ಪು. ಕಮಟು ವಾಸನೆ. ಕಾಳನ್ನು ನೀರಲ್ಲಿ ಹಾಕಿ ಒಂದೆರಡು ಗಂಟೆ ಕಳೆದ ಬಳಿಕ ಪುನಃ ಹಿಚುಕಿದಾಗ ಕಪ್ಪು ಬಣ್ಣಕ್ಕೆ ಕಾಳು ವಿಚ್ಛೇದನ ನೀಡಿತ್ತು! ಕಪ್ಪಾಗಿದ್ದ 'ಕಪ್ಪು ಹೆಸರು' ಹಸಿರು ಕಾಳಾಗಿ ಪರಿವರ್ತನೆಯಾಯಿತು!
           ಅನ್ನದ ಬಟ್ಟಲಿಗೆ ಸೇರುವ ಆಹಾರಕ್ಕೂ ಕಲಬೆರಕೆಯ ಯೋಗ. ಹಸಿರು ಹೆಸರು ಕಾಳಿಗೆ ಬಣ್ಣ, ಕೆಮಿಕಲ್ಗಳನ್ನು ಲೇಪಿಸಿ ಕಪ್ಪು ಕಾಳೆಂದು ಹೆಚ್ಚು ದರಕ್ಕೆ ಮಾರಾಟ ಮಾಡುವ ವ್ಯಾಪಾರಿ ಹುನ್ನಾರ. ಮಾರ್ಕೆಟಿನಲ್ಲಿ ಸಿಗುವ ಕಪ್ಪು ಕಡಲೆಯ ಕತೆಯೂ ಹೀಗಿರಬೇಕು, ಪರೀಕ್ಷಿಸುತ್ತೇನೆ, ಎಂದರು ಅತ್ತ ಕಡೆಯಿಂದ ಜಯಶಂಕರ್.
             ಆಹಾರದಲ್ಲಿ ಕಲಬೆರಕೆ ಹೊಸ ವಿಷಯವಲ್ಲ. ರಾಜಾರೋಷವಾಗಿ ನಡೆಯುವ ವ್ಯವಸ್ಥಿತ ವ್ಯವಹಾರ. ಸರಕಾರದ ವರಿಷ್ಠರಿಂದ ಅಂಗಡಿ ಮಾಲಕನ ತನಕ ಹಲವು ಕೈಗಳ ಕೈವಾಡ. ಅಕ್ಕಿಗೆ ಬಣ್ಣ, ಹಾಲಿಗೆ ಬಿಳಿ ವರ್ಣದ ಇನ್ನೇನೋ, ಸಕ್ಕರೆಯೊಂದಿಗೆ ಮಿಳಿತವಾಗುವ ಅದಾವುದೋ ಹರಳು.. ಹೀಗೆ ಗುರುತು ಹಿಡಿಯದಷ್ಟು ಜಾಣ್ಮೆಯಲ್ಲಿ ಕಲಬೆರಕೆ ಆಹಾರದಲ್ಲಿ ಸೇರುತ್ತವೆ. ಉದರಕ್ಕಿಳಿಯುತ್ತದೆ.
              ಗದಗ ಸಮೀಪದ ಹೋಟೆಲಿನಲ್ಲಿ ಊಟದ ಹೊತ್ತು. ತಟ್ಟೆ ತುಂಬಾ ವಿವಿಧ ಐಟಂಗಳು. ಅದರಲ್ಲಿ ಹಸಿಯಾಗಿ ಕತ್ತರಿಸಿದ ಕ್ಯಾಬೇಜ್ ಚೂರುಗಳು. 'ಸರ್, ಈಗಷ್ಟೇ ಹೊಲದಿಂದ ಬಂದ ಕ್ಯಾಬೇಜ್ಗಳು ಸಾರ್,' ಎಂದು ಕಚಕಚನೆ ತುಂಡು ಮಾಡಿ ಬಟ್ಟಲಿಗೆ ಹಾಕುತ್ತಾ ಸಪ್ಲೈಯರ್ ಬರಬೇಕೇ? ಹೋಟೆಲಿನ ಕಿಟಕಿಯಾಚೆಗಿನ  ಹೊಲದಲ್ಲಿ ಕ್ಯಾಬೇಜ್ ಕಟಾವಿನ ಕ್ಷಣಕ್ಕಾಗಿ ನಗುತ್ತಿತ್ತು. ಕಣ್ಣೆದಿರುಗೆ ವಿಷ ಸಿಂಪಡಣೆ  ಮಾಡುತ್ತಿರುವ ದೃಶ್ಯವನ್ನು ನೋಡಿ ನಿಜಕ್ಕೂ ಕೈ ನಡುಗಿತು.
             ಟೊಮೆಟೊ ಮೊದಲಾದ ವಿವಿಧ ಸಾಸ್ಗಳು, ಬಣ್ಣ ಬಣ್ಣದ ಐಸ್ಕ್ರೀಂಗಳು, ಚಹಾ ಪುಡಿ, ಸಿಂಥೆಟಿಕ್ ಹಾಲು-ಮೊಸರು-ಬೆಣ್ಣೆ.. ಹೀಗೆ ಒಂದೊಂದು ಆಹಾರದ ಅಕರಾಳ ಮುಖಗಳನ್ನು ಈಚೆಗೆ ವಾಹಿನಿಗಳು ಪ್ರಸಾರ ಮಾಡುತ್ತಲೇ ಇವೆ. ವೈದ್ಯಕೀಯ ವರದಿಯು 'ಆರೋಗ್ಯಕ್ಕೆ ಹಾನಿಕರ, ಕ್ಯಾನ್ಸರ್ಕಾರಕ..' ಎನ್ನುವ ಎಚ್ಚರಿಕೆ ನೀಡಿದರೂ ಕಾಣದ ಕೈಗಳ ಕೈವಾಡ ಸಾರ್ವಜನಿಕರಿಗೆ ಕಾಣುವುದಿಲ್ಲ.
             ಕಲಬೆರಕೆಯಲ್ಲಿ ಬಳಸುವ ಕೆಮಿಕಲ್ಗಳು ವಿಷಕಾರಕ. ಕೃಷಿಯಲ್ಲಿ ಕೀಟನಾಶಕಗಳ ಎಗ್ಗಿಲ್ಲದ ಬಳಕೆ.  ನಮ್ಮ ಶರೀರ ಹೆಸರು ಹೇಳಲು ಭಯವಾಗುವ ವಿವಿಧ ಕಾಯಿಲೆಗಳ ಗೂಡಾಗುತ್ತಿವೆ. ನಿತ್ಯ ಟಾನಿಕ್, ಗುಳಿಗೆಗಳನ್ನು ನುಂಗುವುದು ಬದುಕಿನಂಗವಾಗಿದೆ.
            ಆಹಾರ ಕ್ರಮ, ಜೀವನ ಶೈಲಿಯಲ್ಲಿ ಮಾರ್ಪಾಡು ಮಾಡುವ ಬದಲು, 'ಏನು ಮಾಡುವುದು, ತಿನ್ನಬೇಕಲ್ಲಾ. ಬೇರೆ ದಾರಿ ಇಲ್ವಲ್ಲಾ,' ಎಂದು ವಿಷವನ್ನು ನಿತ್ಯ ತಿನ್ನುತ್ತಾ ಇರುವ ನಮಗೆ ಮೆಡಿಕಲ್ ಶಾಪ್ಗಳ ಮುಂದೆ ಕ್ಯೂ ನಿಲ್ಲುವುದೆಂದರೆ ಖುಷಿ! ಎಲ್ಲಿಯ ವರೆಗೆ ಆಹಾರದ ಕುರಿತು ನಿರ್ಲಿಪ್ತತೆ ನಮ್ಮಲ್ಲಿ ಇರುತ್ತದೋ ಅಲ್ಲಿಯ ವರೆಗೆ ಕಲಬೆರಕೆ ಮಾಡುವವರು ನಮ್ಮ ಮಗ್ಗುಲಲ್ಲೇ ಇರುತ್ತಾರೆ. ವಿಷ ಹಾಕುವವರು ನೆರೆಮನೆಯಲ್ಲೇ ಇರುತ್ತಾರೆ.

Sunday, July 6, 2014

ಬಾಯಿಸಿಹಿ ಮಾಡಿದ ಹಲ್ವ : ಹೀಗೂ ಹಲಸು ಚಳುವಳಿ

ಹಲಸಿನ ಹಣ್ಣಿನ ಪಲ್ಪಿಂಗ್
 ಪಲ್ಪ್ ಸಕ್ಕರೆ, ತುಪ್ಪದೊಂದಿಗೆ ಮಿಳಿತ

               ತಿನ್ನಲು ಸಿದ್ಧ 'ಹಲಸಿನ ಹಣ್ಣಿನ ಹಲ್ವ'

               2014 ಜೂನ್ 22ರಂದು ಪುಣಚ (ದ.ಕ.)ದಲ್ಲಿ ಹಲಸಿನ ಹಬ್ಬ ಜರುಗಿತು. ಹಬ್ಬದಲ್ಲೊಂದು  'ಹಲಸು ಸ್ನೇಹಿ ಕೂಟ'ದ ಮಳಿಗೆ. ಅದರಲ್ಲಿ ಹಲಸಿನ ಹಣ್ಣಿನ (ಹಹ) ಹಲ್ವದ ಪ್ರದರ್ಶನ.  'ಹಲಸಿನ ಹಣ್ಣಿನಿಂದಲೂ ಇಷ್ಟೊಂದು ಸ್ವಾದಭರಿತ ಹಲ್ವ ಮಾಡಲು ಆಗುತ್ತಾ' ಚಿಕ್ಕಮಗಳೂರಿನಿಂದ ಆಗಮಿಸಿದ ದಂಪತಿಗಳ ಸೋಜಿಗ. ಅವರ ಆಸಕ್ತಿಯನ್ನು ಗಮನಿಸಿದ ಮುಳಿಯ ವೆಂಕಟಕೃಷ್ಣ ಶರ್ಮರಿಂದ ರೆಸಿಪಿ ಪ್ರಸ್ತುತಿ.
                ಹಲಸಿನ ಹಣ್ಣಿನ ಹೊರಮೈ ಶುಚಿಗೊಳಿಸಿ. ಹಣ್ಣನ್ನು ಬಿಡಿಸಿ ಸೊಳೆ ಪ್ರತ್ಯೇಕಿಸಿ. ನೀರು ಹಾಕದೆ ಸೊಳೆಯನ್ನು ಮಿಕ್ಸಿಯಲ್ಲಿ ರುಬ್ಬಿ. ಪಲ್ಪ್ ರೆಡಿ. ಕಂಚಿನ ಉರುಳಿಯಲ್ಲಿ ಪಲ್ಪನ್ನು ತುಪ್ಪದೊಂದಿಗೆ ಬೇಯಿಸಿ. ಸುಮಾರು ಮುಕ್ಕಾಲು ಗಂಟೆ ತಳಹಿಡಿಯದಂತೆ ಸೌಟಿಯಲ್ಲಿ ತಿರುವಬೇಕು. ಕಂದು ವರ್ಣಕ್ಕೆ ಪಲ್ಪ್ ಬದಲಾದಾಗ ಸಕ್ಕರೆ ಹಾಕಿ. ಸಕ್ಕರೆಯ ತೇವಾಂಶ ಆರುವ ತನಕ ಅಂದರೆ ಸುಮಾರು ಮುಕ್ಕಾಲು ಗಂಟೆ ತಿರುವಿ. ತುಂಡು ಮಾಡಿಟ್ಟ ಗೇರುಬೀಜ ಸೇರಿಸಿ. ಪಾಕ ಅಂತಿಮವಾಗುತ್ತಿದ್ದಂತೆ ಮೊದಲು ಪಲ್ಪ್ ಎಳೆದುಕೊಂಡ ತುಪ್ಪವನ್ನು ಬಿಟ್ಟುಕೊಡಲು ಆರಂಭಿಸುತ್ತದೆ. ಹತ್ತು ನಿಮಿಷ ತಿರುವಿ ಉರುಳಿಯನ್ನು ಒಲೆಯಿಂದ ಇಳಿಸಿ. ಗಾಢ ಕಂದು ಬಣ್ಣದ ಹಲ್ವವನ್ನು ದೊಡ್ಡ ಬಟ್ಟಲಿಗೆ ಹಾಕಿ. ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಚಾಕುವಿನಿಂದ ತುಂಡು ಮಾಡಿ. ಒಂದು ಕಿಲೋ ಸೊಳೆಗೆ ಅರುವತ್ತು ಎಂ.ಎಲ್. ತುಪ್ಪ, ಮೂನ್ನೂರೈವತ್ತು ಗ್ರಾಮ್ ಸಕ್ಕರೆ ಸಾಕು.
                  ಹಲ್ವ ಮಾಡುವ ವಿದ್ಯೆ ಬಹುತೇಕ ಅಮ್ಮಂದಿರಿಗೆ ಗೊತ್ತು. ಮುಳಿಯದ ವೆಂಕಟಕೃಷ್ಣ ಶರ್ಮರು ಸ್ವತಃ ಮಾಡುವ ಹಲ್ವದ ರುಚಿಯೇ ಬೇರೆ. ಮಾರುಕಟ್ಟೆಯಲ್ಲಿ ಸಿಗುವ ಹಲ್ವದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚು. ಸಹಜವಾಗಿ ತೂಕವೂ ಅಧಿಕ. ಸುಮಾರು ಒಂದೂವರೆಯಿಂದ ಎರಡು ಗಂಟೆ ಕಾಲ ಉರುಳಿಯಲ್ಲಿ ಬೆಂದರೆ ಮಾತ್ರ ಹಲ್ವಕ್ಕೆ ನಿಜ ರುಚಿ, ಎನ್ನುತ್ತಾರೆ. ಹಲ್ವಕ್ಕೆ ಹದಿನೈದು ದಿವಸ ತಾಳಿಕೆ. ತಂಪುಪೆಟ್ಟಿಗೆಯಲ್ಲಿ ಮುಗಿಯುವ ವರೆಗೆ ಕಾಪಿಟ್ಟು ಬಳಸಲಡ್ಡಿಯಿಲ್ಲ.
                    2013ರಲ್ಲಿ ಅಡ್ಯನಡ್ಕದಲ್ಲಿ ಹಲಸು ಮೇಳ ನಡೆದಾಗ ಶರ್ಮ ಬಳಗ ಸುಮಾರು ನಲವತ್ತು ಕಿಲೋ ಹಲ್ವ ತಯಾರಿಸಿದ್ದರು. ಬಹುತೇಕ ಮಾರಾಟ.  ಜತೆಗೆ ಮನೆಗೆ ಬಂದ ಅತಿಥಿಗಳಿಗೆ, ಹಲಸಿನ ಖಾದ್ಯಗಳ ಪರಿಚಯ ಇಲ್ಲದವರಿಗೆ, ಹಲಸನ್ನು ಹೊಸತಾಗಿ ನೋಡಿದವರಿಗೆ ಉಚಿತವಾಗಿ ಕೊಟ್ಟು ರುಚಿ ಹಿಡಿಸಿದ್ದಾರೆ. ಹಲಸಿನ ಹಣ್ಣಿನ ಸವಿಯನ್ನು ಒಮ್ಮೆ ಅನುಭವಿಸಿದರೆ ಮತ್ತೆ ತಪ್ಪಿಸುವಂತಿಲ್ಲ. ಮೌಲ್ಯವರ್ಧಿಸಿದರೆ ಯಾವತ್ತೂ ಬೇಡಿಕೆಯಿದೆ' ಎನ್ನುವುದು ಅನುಭವ.
                   ಕಳೆದ ವರುಷ ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಹಲಸಿನ ಅಧ್ಯಯನಕ್ಕೆ ವಿದರ್ಭಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶರ್ಮರು ನೀಡಿದ ಹಲ್ವವನ್ನು ಒಯ್ದಿದ್ದರು. ಅಲ್ಲಿನ ಹಲಸು ಸ್ನೇಹಿಗಳ ಬಾಯಿ ಸಿಹಿ ಮಾಡಿದ್ದರು. ತಿಂದ ಅನೇಕರು ರೆಸಿಪಿ ಕೊಡುವಂತೆ ಆಗ್ರಹಿಸಿದ್ದರಂತೆ!  ವಿದರ್ಭದಲ್ಲಿ ಹಲಸಿನ ಹಣ್ಣಿನ ಹಲ್ವ ಅಪರೂಪ. ಬಹುತೇಕರಿಗೆ ಗೊತ್ತಿಲ್ಲ. ರುಚಿ ನೋಡಿದ ಅನೇಕರು 'ಇಲ್ಲಿ ಮಾರಾಟಕ್ಕೆ ಅವಕಾಶವಿದೆ' ಎಂದರಂತೆ.
                  ಬೆಂಗಳೂರು ಕೃಷಿ ವಿವಿಯ ಸಹಪ್ರಾಧ್ಯಾಪಕಿ ಡಾ.ಶ್ಯಾಮಲಮ್ಮ ಹಲಸಿನ ಹಬ್ಬಕ್ಕೆ ಎರಡು ವರುಷವೂ ಆಗಮಿಸಿದ್ದರು. ಇವರಿಗೆ ಉಡುಗೊರೆಯಾಗಿ ನೀಡಿದ್ದ ಹಲ್ವ ವಿವಿಯ ಮುಖ್ಯಸ್ಥರಿಗೆ ತಲುಪಿತು. 'ಹಲಸಿನ ಹಣ್ಣಿನಿಂದ ಇಷ್ಟು ರುಚಿಯ ಹಲ್ವ ಮಾಡಲು ಆಗುತ್ತೆ ಅಂತ ಇಂದೇ ಗೊತ್ತಾಯಿತು' ಎಂದು ಉದ್ಗರಿಸಿದ್ದರಂತೆ.
                 ಹಲ್ವಕ್ಕೆ ಎಲ್ಲಾ ಹಣ್ಣು ಆಗದು. ಸೊಳೆಯ ಪರಿಮಳ, ಬಣ್ಣ, ರುಚಿ, ಮಿಕ್ಸಿಗೆ ಹಾಕುವಾಗ ಸುಲಭವಾಗಿ ರುಬ್ಬುವ ಗುಣವಿರುವಂತಹ ಹಣ್ಣು ಓಕೆ. ಹೆಚ್ಚು ನಾರು ಇರಬಾರದು. ಎರಡು ವರುಷದಿಂದ ಬೇರೆ ಬೇರೆ ತಳಿಗಳ ಹಲಸಿನ ಹಲ್ವ ಮಾಡಿದ್ದೆ. ತೃಪ್ತಿ ತರಲಿಲ್ಲ. ಈ ವರುಷ ಉಬರಿನ 'ಗೆನಹಣು' ಮತ್ತು ಬಾಯಾರು ಕೆರೆಕ್ಕೋಡಿಯ 'ಕ್ರೀಮ್ ಜಾಕ್' ಎಂಬೆರಡು ತಳಿಗಳು ಹಲ್ವಕ್ಕೆ ಉತ್ಕೃಷ್ಟವಾಗುತ್ತದೆ ಎನ್ನಲು ಮರೆಯಲಿಲ್ಲ.
               ಹಲ್ವ ತಯಾರಿಗೆ ಕಂಚಿನ ಉರುಳಿಯೇ ಯಾಕಾಗಬೇಕು ಎಂಬ ಪ್ರಶ್ನೆಗೆ ಹಲಸು ಸ್ನೇಹಿ ಕೂಟದ ಉಬರು ರಾಜಗೋಪಾಲ ಭಟ್ ಹೇಳುತ್ತಾರೆ, 'ಕಂಚಿನ ಉರುಳಿಯಲ್ಲಿ ಮಾಡಿದ ಹಲ್ವಕ್ಕೆ ಹೊಳಪು ಹೆಚ್ಚು. ಉತ್ತಮ ನೋಟ.
ಶರ್ಮರಿಗಿಂತ ಇನ್ನೂ ರುಚಿಯಾಗಿ ಹಲ್ವ ತಯಾರಿಸುವ ಜಾಣ್ಮೆ ಹಲವರಲ್ಲಿದೆ. ಕೆಲವು ಉದ್ಯಮಗಳು ಪೇಟೆಂಟ್ ಪಡೆದಿರಬಹುದು. ಆದರೆ ಶರ್ಮರು ಹಲಸಿನ ಅರಿವನ್ನು ಮೂಡಿಸುವ ಮಾಧ್ಯಮವಾಗಿ ಹಲ್ವದ ತಯಾರಿಗೆ ಹೊರಟಿದ್ದರಷ್ಟೇ. ಮಾರಾಟ ಉದ್ದೇಶವಲ್ಲ. ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು ಮನೆಮಟ್ಟದಲ್ಲಾದರೂ ಆರಂಭವಾಗಲಿ ಎನ್ನುವ ಆಶಯ.
             ಅಡಿಕೆ ಪತ್ರಿಕೆ ಹುಟ್ಟು ಹಾಕಿದ ಹಲಸಿನ ಆಂದೋಳನದ ಹೆಜ್ಜೆಯಾಗಿ ಶರ್ಮರು ಹಲ್ವದಂತಹ ಸಿಹಿ ತಿಂಡಿಯನ್ನು ಆರಿಸಿಕೊಂಡಿದ್ದರು. ಅದು ಕ್ಲಿಕ್ ಆಯಿತು. ಈ ಯೋಜನೆಗೆ 'ಹಲಸು ಸ್ನೇಹಿ ಕೂಟ'ವು ಸಾಥ್ ನೀಡಿತ್ತು. ಕಡಂಬಿಲ ಕೃಷ್ಣಪ್ರಸಾದ್, ಶಿರಂಕಲ್ಲು ನಾರಾಯಣ ಭಟ್ ಸಾಥ್. ಹಲ್ವದಂತಹ ಸಿಹಿ ತಿಂಡಿಯು ಹಲಸು ಸ್ನೇಹಿ ಕೂಟಕ್ಕೆ ಹೊಸ ಸ್ನೇಹಿತರನ್ನು ಬೆಸೆದು ಕೊಟ್ಟಿದೆ. ಎಲ್ಲವೂ ಗ್ರಹಿಸಿದಂತೆ ಸಾಗಿದರೆ ಹಲಸು ಸ್ನೇಹಿ ಕೂಟದ 'ಬ್ರಾಂಡೆಡ್ ಹಲ್ವ' ನಿಕಟ ಭವಿಷ್ಯದಲ್ಲಿ ರೂಪುಗೊಳ್ಳುವ ಸಾಧ್ಯತೆಯಿದೆ
 (ಶರ್ಮ : 9480200832)