Sunday, November 18, 2018

ಜಿಹ್ವಾಚಾಪಲ್ಯ ವೃದ್ಧಿಸುವ ರುಚಿವರ್ಧಕ


           ಬಸ್ಸಿನ ಮುಂದಿನ ಆಸನದಲ್ಲಿದ್ದ ಅಡುಗೆ ವಿಶೇಷಜ್ಞರ ಮಾತಿಗೆ ಕಿವಿಯೊಡ್ಡಬೇಕಾದ ಪ್ರಮೇಯ ಬಂತು. ಅವರಿಬ್ಬರು ದೊಡ್ಡ ಸಮಾರಂಭಗಳ ಅಡುಗೆಯ ಜವಾಬ್ದಾರಿಯನ್ನು ನಿಭಾಯಿಸಿದ ಅನುಭವಿಗಳು. ಒಬ್ಬರೆಂದರು, ಮೊನ್ನೆ ಎರಡು ಸಾವಿರ ಮಂದಿಯ ಅಡುಗೆಗೆ ಶಹಬ್ಬಾಸ್ ಸಿಕ್ಕಿದ್ದೇ ಸಿಕ್ಕಿದ್ದು. ಯಾವಾಗಲೂ ಹಾಕುವುದಕ್ಕಿಂತ ಸ್ವಲ್ಪ ಹೆಚ್ಚೇ ಟೇಸ್ಟ್ ಮೇಕರ್ ಹಾಕಿದ್ದೆ, ಎಂದಾಗ ಇನ್ನೊಬ್ಬರು ದನಿ ಸೇರಿಸಿದರು, ಅಂಗಡಿಯಲ್ಲಿ ಟೇಸ್ಟ್ ಮೇಕರ್ ಅಂತ ಕೇಳಿದ್ರೆ ಆಯಿತು, ಏನೋ ಬಿಳಿ ಪುಡಿ ಕೊಡ್ತಾರೆ. ಅದು ಎಂತಾದ್ದು ಅಂತ ಗೊತ್ತಿಲ್ಲ. ಈಚೆಗೆ ಎಲ್ಲರೂ ಹಾಕ್ತಾರೆ, ನಾನ್ಯಾಕೆ ಹಾಕಬಾರ್ದು? ಆ ಪುಡಿ ಹಾಕಿದರೆ ಸಾರು, ಸಾಂಬಾರಿನ ರುಚಿಯೇ ಬೇರೆ.
          ದಂಗಾಗುವ ಸರದಿ ನನ್ನದು. ಹೋಟೆಲ್, ಉದ್ಯಮಗಳಲ್ಲಿ ರುಚಿವರ್ಧಕವನ್ನು ಬಳಸುವುದನ್ನು ಕಿವುಡಾಗಿ, ಕುರುಡಾಗಿ ಒಪ್ಪಿಕೊಂಡಾಗಿದೆ. ಅಡುಗೆ ವಿಶೇಷಜ್ಞರು ಅಪರೂಪಕ್ಕೆ ಬಳಸುತ್ತಾರೆನ್ನುವುದು (ಎಲ್ಲರೂ ಅಲ್ಲ) ಇಂದಷ್ಟೇ ತಿಳಿಯಿತು. ಸಮಾರಂಭಗಳ ಸಂಖ್ಯೆ ಅಧಿಕವಾಗುತ್ತಾ ಬಂದ ಹಾಗೆ ಸೂಪಜ್ಞರಲ್ಲೂ ತಮ್ಮದೇ ಕೈರುಚಿ ಮೇಲುಗೈಯಾಗಬೇಕೆನ್ನುವ ಪೈಪೋಟಿ ಸಹಜ. ಒಂದು ಸಮಾರಂಭದಲ್ಲಿ ಅಡುಗೆ ಸೈ ಎನಿಸಿದರೆ ಮತ್ತೊಂದು ಅಡುಗೆ ಹುಡುಕಿಕೊಂಡು ಬರುತ್ತದೆ. ಆದರೆ ಈ ವಿಚಾರವು ಸಮಾರಂಭದ ಯಜಮಾನನಿಗೆ ಗೊತ್ತಿದೆಯೋ ಇಲ್ವೋ.
          ಇದು ರುಚಿವರ್ಧಕದ ಮಾತಾಯಿತು. ತರಕಾರಿ, ಜೀನಸುಗಳಿಗೆ ಸಹಜವಾಗಿ ಮಾರುಕಟ್ಟೆಯನ್ನು ಅವಲಂಬಿಸಬೇಕು. ಮಾರುಕಟ್ಟೆಯ ತರಕಾರಿ ಅಂದಾಗ ಅದು ರಾಸಾಯನಿಕದಲ್ಲಿ ಮಿಂದೆದ್ದು ಬಂದವುಗಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಕ್ಕಿಯಿಂದ ಉಪ್ಪಿನ ತನಕ ಸಾಚಾತನಕ್ಕೆ ಪ್ರತ್ಯೇಕ ಪರೀಕ್ಷೆ ಬೇಕಾಗುವ ಕಾಲಮಾನ. ಇವುಗಳೊಂದಿಗೆ ಉದರಕ್ಕಿಳಿಯುವ ಖಾದ್ಯಗಳಿಗೂ ಈಗ ರುಚಿವರ್ಧಕದ ಸ್ಪರ್ಶ!  ಕಾರ್ಬೈಡ್ ಹಾಕಿ ದಿಢೀರ್ ಹಣ್ಣು ಮಾಡಿದ ಬಾಳೆಹಣ್ಣುಗಳು ಭೋಜನದೊಂದಿಗೆ ಬೋನಸ್. ಉಚಿತವಾಗಿ ಕೊಡುವ ಕೃತಿ ಒಳಸುರಿಗಳಿಂದ ತಯಾರಿಸಿದ ಐಸ್ಕ್ರೀಂನಲ್ಲಿ ಏನೆಲ್ಲಾ ಇವೆಯೋ? ಹಾಗೆಂತ ರುಚಿವರ್ಧಕ ಬಳಸದೆ ತಮ್ಮ ಅನುಭವ ಮತ್ತು ಕೈಗುಣದಿಂದ ಶುಚಿರುಚಿಯಾದ ಭೋಜನವನ್ನು ಸಿದ್ಧಪಡಿಸುವ ವಿಶೇಷಜ್ಞರನ್ನು ನಾವೆಷ್ಟು ಗೌರವಿಸಿದ್ದೇವೆ?
          ಒಂದೆರಡು ವರುಷದ ಹಿಂದೆ ಮ್ಯಾಗಿ ನಿಷೇಧದ ಕಾವು ದೇಶವಲ್ಲ, ವಿಶ್ವಾದ್ಯಂತ ಕಂಪನ ಮೂಡಿಸಿತ್ತು. ಅದರಲ್ಲಿ ಅಗತ್ಯಕ್ಕಿಂತ ಹೆಚ್ಚಿರುವ ಸೀಸ, ರುಚಿವರ್ಧಕವು ಉದ್ಯಮದ ಅಡಿಗಟ್ಟನ್ನು ಅಲ್ಲಾಡಿಸಿದ್ದುವು.  ಕೋಟಿಗಟ್ಟಲೆ ಉತ್ಪನ್ನ ಬೆಂಕಿಗಾಹುತಿಯಾಗಿದೆ. ಜಾಹೀರಾತುಗಳ ಮೂಲಕ ನಂಬಿಸಿದ ಸಂಸ್ಥೆಯು ವಿಶ್ವಾಸ ಕಳೆದುಕೊಂಡಿದೆ. ತಿನ್ನುವ ಎಲ್ಲಾ ವಸ್ತುಗಳನ್ನು ಸಂಶಯ ದೃಷ್ಟಿಯಿಂದ ನೋಡುವ ಸ್ಥಿತಿ ರೂಪುಗೊಂಡಿದೆ. ಸೇಬು- ದ್ರಾಕ್ಷಿಯೊಳಗಿರುವ ರಾಸಾಯನಿಕ, ಹಾಮರ್ೋನುಗಳ ಕುರಿತು, ಕಲ್ಲಂಗಡಿಗೆ ಇಂಜೆಕ್ಟ್ ಮಾಡುವ ವಿವಿಧ ಮುಖಗಳನ್ನು ವಾಹಿನಿಗಳು ಪ್ರಸಾರ ಮಾಡುತ್ತಲೇ ಇವೆ. ರಾಸಾಯನಿಕ ಸಿಂಪಡಣೆಗಳ ಕರಾಳ ಮುಖಗಳತ್ತ ವಿವಿಧ ಮಾಧ್ಯಮಗಳು ಸತ್ಯಗಳನ್ನು ಬಿಚ್ಚಿಡುತ್ತಿವೆ. 
          ತಮಿಳುನಾಡಿನಿಂದ ಬರುವ ತರಕಾರಿಗಳಿಗೆ ಕೇರಳ ರಾಜ್ಯವು ಅವಲಂಬಿತ. ನಿರ್ವಿಷ ಆಹಾರದ ಕುರಿತು ಕೇರಳದಲ್ಲಿ ವ್ಯಾಪಕವಾಗಿ ಅರಿವು ಮೂಡಿಸುವ ಕೆಲಸವನ್ನು ಸರಕಾರ ಮತ್ತು ಖಾಸಗಿ ಸಂಸ್ಥೆಗಳು ಮಾಡುತ್ತಾ ಇವೆ. ಆರೋಗ್ಯ ಕಾಳಜಿಯಿದ್ದ ಮಂದಿ ಸಾವಯವಕ್ಕೆ ಬದಲಾಗುತ್ತಿದ್ದಾರೆ. ಸ್ವಾವಲಂಬನೆಯತ್ತ ಹೊರಳುತ್ತಿದ್ದಾರೆ. ಕೈತೋಟಗಳನ್ನು ಎಬ್ಬಿಸುವ ಮನಃಸ್ಥಿತಿ ನಿರ್ಮಾಣವಾಗುತ್ತಿದೆ. ಮಾವು, ಹಲಸು, ಗೆಡ್ಡೆ, ಎಲೆಗಳು ತರಕಾರಿಯಾಗಿ ಉದರ ಸೇರುತ್ತಿದೆ. ರಾಸಾಯನಿಕದ ಪರಿಣಾಮ ಜನರ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ, ಹೊರ ರಾಜ್ಯಗಳಿಂದ ತರಕಾರಿಯನ್ನು ತರಿಸದೇ ಇರಲು ಕೆಲವು ವ್ಯಾಪಾರಿಗಳು ನಿರ್ಧರಿಸಿದ್ದಾರೆ! 
          ಸಾವಯವದ ಅರಿವು ಪ್ರಚಾರದಲ್ಲಷ್ಟೇ ಉಳಿದಿವೆ! ಅನುಷ್ಠಾನ ತೀರಾ ಕಡಿಮೆ. ಸಾವಯವದ ಸಾರ ಮನದೊಳಗೆ ಇಳಿಯುವುದಂತೂ ನಿಧಾನ. ಆಹಾರದಲ್ಲಿ ವಿಷದ ಪ್ರಮಾಣಗಳು ಪತ್ತೆಯಾಗುತ್ತಲೇ ಇದ್ದಂತೆ ನಿರ್ವಿಷ ಆಹಾರಗಳ ಹುಡುಕಾಟದತ್ತ, ಬೆಳೆಯುವತ್ತ ಯೋಜನೆ, ಯೋಚನೆಗಳು ಹೆಜ್ಜೆಯೂರುತ್ತಿವೆ.  ಕೆಲವು ಸಂಘಟನೆಗಳು ನಗರಗಳಲ್ಲಿ ಸಾವಯವದ ಮಹತ್ವ, ನಿರ್ವಿಷ ಆಹಾರದ ಅಪಾಯಗಳತ್ತ ಅರಿವು ಚೆಲ್ಲುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿವೆ. ಪಾಲಿಶ್ ಮಾಡದ ಅಕ್ಕಿಯನ್ನು ಅರಸಿ ಬರುವ, ವಿಳಾಸ ಕೇಳುವ ಅಮ್ಮಂದಿರು ಎಚ್ಚರವಾಗಿದ್ದಾರೆ.
          ವಿವಿಧ ರೂಪಗಳಲ್ಲಿ ರಾಸಾಯನಿಕಗಳನ್ನು ಗೊತ್ತಿಲ್ಲದೆ ಬದುಕಿನಂಗವಾಗಿ ಸ್ವೀಕರಿಸಿದ್ದೇವೆ. ಗೊತ್ತಾದ ಬಳಿಕ ದೂರವಿರುವುದರಲ್ಲಿ ಆರೋಗ್ಯ ಭಾಗ್ಯ. ತಕ್ಷಣ ಎಲ್ಲವನ್ನೂ ವಜ್ರ್ಯ ಮಾಡಲಸಾಧ್ಯ. ಹಂತ ಹಂತವಾಗಿ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಒಂದಷ್ಟು ದಿವಸ ಹೆಚ್ಚು ಬಾಳಬಹುದೇನೋ? ನಿರ್ವಿಷವಾಗಿ ಕೃಷಿ ಉತ್ಪನ್ನಗಳನ್ನು ಬೆಳೆದುಕೊಡುವ ಕೃಷಿಕರನ್ನು ಪ್ರೋತ್ಸಾಹಿಸೋಣ.

 ಸುದ್ದಿ ಬಿಡುಗಡೆ / ಊರುಸೂರು | 14-10-2018

ಭೂತಕಾಲವನ್ನು ಅಕ್ಷರಗಳಲ್ಲಿ ಕಟ್ಟಿಡುವ ಅಧ್ಯಾಪಕ



                "ಬರಹಗಾರರು ಐಡಿಯಾ ಫೈಲ್ ಇಟ್ಟುಕೊಳ್ಳಬೇಕು. ಇದರಲ್ಲಿ ಬರಹಗಳಿಗೆ ಒಳಸುರಿಯಾಗಬಹುದಾದ ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಗಳ ಕಟ್ಟಿಂಗ್ಗಳನ್ನು ಫೈಲ್ ಮಾಡುತ್ತಿರಬೇಕು. ಭವಿಷ್ಯದಲ್ಲಿ ಇದು ಲೇಖಕನಿಗೆ ಮಾಹಿತಿ ಒದಗಿಸುವ ಕಿಟ್." - ಕಾರ್ಯಾಗಾರಗಳಲ್ಲಿ ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರು ಹೇಳುತ್ತಿರುವ ಮಾತುಗಳಿವು.
                2018 ಸೆಪ್ಟೆಂಬರಿನಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನವಾಗಿತ್ತು. ಪುಸ್ತಕಗಳ ಮಳಿಗೆಗಳ ಒಂದು ಪಾಶ್ರ್ವದಲ್ಲಿ ಜೋನ್ ವೇಗಸ್ ಅವರ ಮಳಿಗೆ. ಇವರು ಕಡಬ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ. ಇವರ ಮಳಿಗೆ ಹೊರತು ಪಡಿಸಿ ಮಿಕ್ಕೆಲ್ಲಾ ಮಳಿಗೆಗಳಲ್ಲೂ ರಶ್! ಯಾಕೆಂದರೆ ಇವರಲ್ಲಿ ಖರೀದಿ ಉತ್ಪನ್ನಗಳಿರಲಿಲ್ಲ. ಮಾಹಿತಿಗಳನ್ನು ಆಪೋಶನ ಮಾಡಬಹುದಾದ ಸಿಹಿ ಸರಕುಗಳಿದ್ದುವು. ಅವುಗಳು ಬೆಲೆ ಕಟ್ಟಲಾಗದ ಸರಕುಗಳು!
                ದಿನಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ಪ್ರಕಟವಾದ ಅಪರೂಪದ ಘಟನೆಗಳ ಕಟ್ಟಿಂಗ್ಗಳನ್ನು ಅಂದವಾಗಿ ಬುಕ್ಬೈಂಡ್ ಮಾಡಿ ಪ್ರದರ್ಶನಕ್ಕಿಟ್ಟಿದ್ದರು. ಕೆಲವೊಂದನ್ನು ಎನ್ ಲಾರ್ಜ್  ಮಾಡಿಸಿ ತೂಗುಹಾಕಿದ್ದರು. ಸಮ್ಮೇಳನಕ್ಕೆ ಆಗಮಿಸಿದ ಬಹುತೇಕ ಅಕ್ಷರಪ್ರಿಯರಿಗೆ ಬುಕ್ಬೈಂಡಿನೊಳಗೆ ಅವಿತ ಅಕ್ಷರಗಳು ಕಾಣಲಿಲ್ಲ! ನೋಡುವ ಕುತೂಹಲವೂ ಇಲ್ಲವೆನ್ನಿ! ಮೇಲ್ನೋಟಕ್ಕೆ ಫಕ್ಕನೆ ಗೋಚರವಾಗದ ಇವರ ಶ್ರಮ ಸಣ್ಣದಲ್ಲ. 
                ಜೋನ್ ವೇಗಸ್ ಅಕ್ಷರ ಪ್ರಿಯರು. ಅನೇಕ ಸಾಹಿತ್ಯ ಕೃತಿಗಳ ಓದುಗ. ಇವರ ವೃತ್ತಿ ಗಳಿಕೆಯಲ್ಲಿ ಶೇ.20ರಷ್ಟು ಪತ್ರಿಕೆ, ಪುಸ್ತಕಗಳ ಖರೀದಿಗೆ ಮೀಸಲು. ಮಕ್ಕಳಲ್ಲಿ ಅಕ್ಷರ ಪ್ರೀತಿಯೊಂದಿಗೆ ಪುಸ್ತಕದ ಆಸಕ್ತಿಯನ್ನು ಮೂಡಿಸುತ್ತಿರುವ ಅಪರೂಪದ ಶಿಕ್ಷಕ. ಶಾಲೆಗಳಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಿಗೆ ಪುಸ್ತಕವೇ ಬಹುಮಾನ.
                ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿಯಿಲ್ಲ ಎಂದು ಆರೋಪಿಸುತ್ತೇವೆ. ಹೆತ್ತವರ ಮನದೊಳಗೆ ಪುಸ್ತಕಗಳು ಸ್ಥಾನ ಪಡೆದರೆ ಮಕ್ಕಳು ಅನುಸರಿಸುತ್ತಾರೆ. ಶಾಲೆಗಳಲ್ಲಿ ಶಿಕ್ಷಕರು ಪುಸ್ತಕದ ಒಲವು ತೋರಿದರೆ ವಿದ್ಯಾರ್ಥಿಗಳು ಅನುಸರಿಸುತ್ತಾರೆ. ಎಂದು ತಮ್ಮ ಅನುಭವವನ್ನು ಹೇಳಲು ಖುಷಿ. ಪತ್ರಿಕೆಗಳನ್ನು ಓದುತ್ತಾ ಮುಖ್ಯವಾದ ಘಟನೆಗಳನ್ನು ಸಂಗ್ರಹಿಸಿದ್ದಾರೆ.
                ಕ್ರೀಡೆ, ಪ್ರಕೃತಿ, ಜೀವಿಗಳ ಲೋಕ, ಜೀವಜಾಲ, ಜೀವ ವೈವಿಧ್ಯ, ಪಕ್ಷಿ ಪ್ರಪಂಚ, ಭಾರತ ದರ್ಶನ, ಕಲಾಭಿವ್ಯಕ್ತಿ, ನೆನಪುಗಳು, ದಿನಬಳಕೆ ಸಾಧನಗಳು, ದುರ್ಘಟನೆಗಳು, ದುರಂತಗಳು.. ಹೀಗೆ ಸುಮಾರು ಮೂವತ್ತೈದು ವಿಷಯವಾರು ಮಾಹಿತಿಗಳು ಆಸಕ್ತಿದಾಯಕ. ಎಲ್ಲದಕ್ಕೂ ಪ್ರತ್ಯಪ್ರತ್ಯೇಕವಾದ ಪುಸ್ತಕಗಳ ಸಂಚಿ. ಕಳೆದ ವರುಷ ಕಡಬದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನ ಮಾಡಿದ್ದೆ. ಬಹುತೇಕ ವಿದ್ಯಾರ್ಥಿಗಳ ಆಸಕ್ತರಾಗಿದ್ದರು. ಎನ್ನುವ ಸಂತಸ ಹಂಚಿಕೊಂಡರು.
                ಉದಾ: 1989, ಎಪ್ರಿಲ್ 29-30 - ಬಾಂಗ್ಲಾದ ಭೀಕರ ಚಂಡಮಾರುತ. ಮೂರು ಲಕ್ಷ ಮಂದಿ ಸಾವು. 1991 ಮೇ 21ರಂದು ರಾಜೀವ ಗಾಂಧಿ ನಿಧನ, 2001 ಜನವರಿ 26 ಗುಜರಾತಿನಲ್ಲಿ ಭೂಕಂಪ. 1995 ಜನವರಿ 17 - ಜಪಾನಿನಲ್ಲಿ ಭೂಕಂಪ. ಐದು ಸಾವಿರಕ್ಕೂ ಮಿಕ್ಕಿ ಸಾವು. ಮೂರು ಲಕ್ಷದ ತೊಂಭತ್ತು ಸಾವಿರ ಕೋಟಿ ರೂಪಾಯಿ ನಷ್ಟ... ವೇಗಸ್ ಅವರ ಇಂತಹ ಮಾಹಿತಿಗಳ ಸಂಗ್ರಹ ಕೈಂಕರ್ಯಕ್ಕೆ ವಿಂಶತಿಯ ಸಡಗರ.
                ವೇಗಸ್ ಮಾಸ್ಟ್ರು ಡಾ.ಶಿವರಾಮ ಕಾರಂತರ ಅಭಿಮಾನಿ. ಅವರ ಕೃತಿಗಳ ಓದುಗ. ಪತ್ರಿಕೆಗಳಲ್ಲಿ ಅವರ ಕುರಿತು ಪ್ರಕಟವಾದ ಲೇಖನ, ವಿಮರ್ಶೆ, ವರದಿಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿದ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ಚಿತ್ರಗಳು ಮಕ್ಕಳನ್ನು ಸೆಳೆಯಬೇಕು. ಈಗ ಮೊಬೈಲ್ಗಳು ರಾಶಿರಾಶಿ ಚಿತ್ರಗಳನ್ನು ತೋರಿಸುತ್ತಿವೆ. ಇದರಿಂದಾಗಿ ಬೆರಗಿನ ಲೋಕವನ್ನು ನೋಡುವ ಮನಸ್ಥಿತಿ ದೂರವಾಗಿದೆ. ಯೂಟ್ಯೂಬ್ಗಳು ಮಕ್ಕಳಲ್ಲಿರುವ ಬೆರಗಿನ ನೋಟವನ್ನು ಕಸಿದಿದೆ ಎಂದು ವಿಷಾದಿಸುವ ಜೋನ್ ವೇಗಸ್, ನಾಣ್ಯ, ಅಂಚೆಚೀಟಿ ಸಂಗ್ರಹ ಹೇಗೆ ಹವ್ಯಾಸವೋ ಅದೇ ರೀತಿ ಪತ್ರಿಕೆಗಳ ಮಾಹಿತಿಗಳ ಸಂಗ್ರಹವೂ ಹವ್ಯಾಸವಾಗಿ ಬೆಳೆಯಬೇಕು, ಎನ್ನುತ್ತಾರೆ.
                ಅಧ್ಯಾಪಕರಿಗೆ ಮಕ್ಕಳೆಂದರೆ ಪ್ರೀತಿ. ಯಾರಿಗೆ 'ಮಕ್ಕಳ ಮೇಲೆ ಪ್ರೀತಿ' ಮನಸಾ ಹುಟ್ಟಿತೋ ಆಗ ಕಲಿಕೆಯು ವಿದ್ಯಾರ್ಥಿಗೂ, ಅಧ್ಯಾಪಕನಿಗೂ ಭಾರವಾಗುವುದಿಲ್ಲ! ಬೆರಗಿನ ಲೋಕದಲ್ಲಿ ಕಲಿಕೆಯನ್ನು ಕಟ್ಟಿಕೊಳ್ಳುವಂತಹ ವಾತಾವರಣ ಶಾಲೆಗಳಲ್ಲಿ ಸೃಷ್ಟಿಯಾಗಬೇಕು. ಇವುಗಳು ಪುಸ್ತಕ, ಪತ್ರಿಕೆಗಳ ಅಕ್ಷರಗಳಿಂದ ಸಾಧ್ಯ.
                ಜೋನ್ ವೇಗಸ್ ಅವರ ಕೈಂಕರ್ಯದಲ್ಲಿ ಹೊಸತೇನೂ ಇಲ್ಲದಿರಬಹುದು. ಆದರೆ ಭೂತಕಾಲವನ್ನು ಅಕ್ಷರರೂಪದಲ್ಲಿ ಕಟ್ಟಿಡುವ ಸದ್ದಿಲ್ಲದ ಕಾಯಕ. ಒಂದೊಂದು ಚಿತ್ರಕ್ಕೆ ಸಂದು ಹೋದ ಘಟನೆಗಳನ್ನು, ಅದರ ಪರಿಣಾಮಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸುವ ತಾಕತ್ತಿದೆ. ಅಧ್ಯಾಪಕ ಜೋನ್ ವೇಗಸ್ ಅವರಿಗೆ ಅಭಿನಂದನೆಗಳು.

 (ಸುದ್ದಿ ಬಿಡುಗಡೆ - 7-10-2018 - ಊರು ಸೂರು)

Saturday, November 17, 2018

ಅಸ್ಪತ್ರೆ ಬಸ್ ಮತ್ತು ಕ್ಯಾನ್ಸರ್ ರೈಲು!


ಮಂಗಳೂರಿನಿಂದ ಶಿರಸಿ ಮಾರ್ಗವಾಗಿ ಹೋಗುವ ಬಹುತೇಕ ಬಸ್ಸುಗಳು ಸಾಮಾನ್ಯ  ದರ್ಜೆಯವು. ವೋಲ್ವೋ, ಡಿಲಕ್ಸ್, ಸ್ಲೀಪರ್ ಬಸ್ಸುಗಳಿಲ್ಲ. ದೂರದ ಬಾದಾಮಿ, ಬಾಗಲಕೋಟೆ, ಸಂಕೇಶ್ವರ, ಐಹೊಳೆ.. ಗಳಿಂದ ಬರುವ ಬಸ್ಸೆಲ್ಲವೂ ಶಿರಸಿ ಮಾರ್ಗವಾಗಿ ಬರುತ್ತವೆ

ಮಂಗಳೂರಿನಿಂದ ಯಲ್ಲಾಪುರಕ್ಕೆ ಸ್ಲೀಪರ್ ಬಸ್ ಆರಂಭವಾದ ಸುದ್ದಿ ಓದಿದ್ದೆ. ಒಮ್ಮೆ ಪ್ರಯಾಣಿಸುವ ಸಂದರ್ಭ ಬಂತು. ಮರುಪ್ರಯಾಣಕ್ಕಾಗಿ ಮುಂಗಡ ಟಿಕೇಟ್ ಕಾದಿರಿಸಲು ಶಿರಸಿಯ ಬಸ್ ನಿಲ್ದಾಣದ ಕೌಂಟರಿನಲ್ಲಿ ವಿಚಾರಿಸಿದೆ. ಅಲ್ಲಿನ ಸಿಬ್ಬಂದಿ 'ಅದು ಆಸ್ಪತ್ರೆ ಬಸ್ ಅಲ್ವಾ' ಎಂದರು. ಅರ್ಥವಾಗದೆ 'ಅಲ್ಲ' ಅಂದೆ

ನನ್ನ ಗೊಂದಲವನ್ನು ನೋಡಿ, 'ಹೌದೂರೀ ಅದು ಯಲ್ಲಾಪುರದಿಂದ ದೇರಳಕಟ್ಟೆಗೆ ಹೋಗುವ ಬಸ್' ಎಂದರು. ಟಕೇಟ್ ಕಾದಿರಿಸಿದೆ. 'ಇದಕ್ಕೆ ಆಸ್ಪತ್ರೆ ಬಸ್' ಎಂದು ಯಾಕೆ ಕರೆಯುತ್ತಾರೆ? ಕೆಟ್ಟ ಕುತೂಹಲದಿಂದ ಗೊಂದಲಕ್ಕೀಡಾದೆ. ಮತ್ತೆ ತಿಳಿಯಿತು

ಶಿರಸಿ ಸುತ್ತಮುತ್ತಲಿನ ತಾಲೂಕುಗಳಿಂದ ಸುಲಭ ಪ್ರಯಾಣದಲ್ಲಿ ಆಸ್ಪತ್ರೆ ಸೇರುವ ಸಾರಿಗೆ ವ್ಯವಸ್ಥೆಗಳಿಲ್ಲ.  ಚಿಕಿತ್ಸೆಗಾಗಿ ಬರುವವರು, ಚಿಕಿತ್ಸೆ ಪಡೆದು ತೆರಳುವವರಿಗೆ ಅನುಕೂಲವಾಗಲು ಸರಕಾರವು ಸ್ಲೀಪರ್ ಬಸ್ ಹೊರಡಿಸಿತ್ತು. ಹಾಗೆಂತ ರೋಗಿಗಳು ಮಾತ್ರವಲ್ಲ, ಇತರರೂ ಪ್ರಯಾಣಿಸಬಹುದು. ಪ್ರಜ್ಞಾವಂತರಾದ, ಬುದ್ಧಿವಂತರಾದ ನಾವು ಬಸ್ಸಿಗೆ 'ಆಸ್ಪತ್ರೆ ಬಸ್' ಅಂತ ನಾಮಕರಣ ಮಾಡಿದ್ದೇವೆ.  

ಅಂದು ಬಸ್ಸು ತುಂಬಿತ್ತು. ಚಿಕಿತ್ಸೆಗಾಗಿ ಹೋಗುವ ಐದಾರು ಮಂದಿ ವಿಶ್ರಾಂತಿಯಲ್ಲಿದ್ದರು. ಮಿಕ್ಕಂತೆ ಇತರ ಪ್ರಯಾಣಿಕರೇ ಅಧಿಕ. ಆಸ್ಪತ್ರೆ ಬಸ್ಸೆಂದು ವಿನೋದಕ್ಕೆ ಹೆಸರಿಟ್ಟಿರಬಹುದು. ಪರಿಣಾಮ ಗಂಭೀರ ಅಲ್ವಾ. ಸಂಬಂಧಪಟ್ಟ ಸಿಬ್ಬಂದಿ ಹೀಗೆನ್ನಬಾರದಿತ್ತು. ಅವರ ಮಾತುಗಳು ನನ್ನೊಳಗೆ ತಪ್ಪು ಸಂದೇಶವನ್ನು ಕಟ್ಟಿಕೊಟ್ಟಿತ್ತು.  

ಹೆಸರೇ ಬಸ್ಸಿಗೆ ಶಾಪ! ನಿಧಾನಕ್ಕೆ ಪಸರಿಸಿ ಇತರ ಪ್ರಯಾಣಿಕರು ದೂರ ಉಳಿಯುವ ಸಾಧ್ಯತೆ ನಿಚ್ಚಳ. ಅದೊಂದು ಮನಸ್ಥಿತಿ. ಒಮ್ಮೆ ಕಪ್ಪುಚುಕ್ಕೆ ಅಂಟಿದರೆ ಒರೆಸುವುದು ಕಷ್ಟ. ಯಾಕೆ ಹಾಗೆಂದರೋ ಗೊತ್ತಿಲ್ಲ. ಸರಕಾರಿ ಮನಸ್ಸುಗಳ ಗುಣಗಳನ್ನು ಮೆಲುಕು ಹಾಕುತ್ತಿದ್ದಾಗ ದೇಶದಲ್ಲೇ ಮನಕರಗುವಂತಹ 'ಕ್ಯಾನ್ಸರ್ ರೈಲು' ನೆನಪಿಗೆ ಬಂತು

ಗೋಧಿಯ ಕಣಜ ಪಂಜಾಬ್. ಒಂದು ಕಾಲಘಟ್ಟದಲ್ಲಿ ಹೊಲಕ್ಕೆ ನುಗ್ಗಿದ ಕೀಟನಾಶಕಗಳ ಅವಿರತ ಸಿಂಪಡಣೆಗಳು ರೈತರ ಬದುಕನ್ನು ಕಸಿದಿವೆ. ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗಿದೆ. ರೋಗಪೀಡಿತರು ಅಗಣಿತ. ವಿವಿಧ ಬೆಳೆಗಳನ್ನು ಬೆಳೆಯುತ್ತಾರಾದರೂ ಅವೆಲ್ಲವೂ ಕೀಟನಾಶಕಗಳ ಹೊರತಾಗಿಲ್ಲ. ಶಿಫಾರಸಿಗಿಂತ ಹೆಚ್ಚು ವಿಷಗಳ ಸಿಂಪಡಣೆ. ಪರಿಣಾಮ, ಕ್ಯಾನ್ಸರ್ ರೋಗಿಗಳ ಹೆಚ್ಚಳ.

ಪಂಜಾಬಿನಲ್ಲಿ ಬಡವರ ಚಿಕಿತ್ಸೆಗಾಗಿ ಆಸ್ಪತ್ರೆಗಳು ಕಡಿಮೆ. ಬಿಕಾನೇರ್ನಲ್ಲಿ ಆಚಾರ್ಯ ತುಳಸಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಮತ್ತು ಸಂಶೋಧನಾ ಕೇಂದ್ರವು ಚಿಕಿತ್ಸೆ ನೀಡುತ್ತಿದೆ. ಪಂಜಾಬಿನಿಂದ ಒಂದು ರಾತ್ರಿಗಿಂತಲೂ ಹೆಚ್ಚು ಪ್ರಯಾಣ. ಬಡವರು ಪ್ರಯಾಣಕ್ಕಾಗಿ ಪ್ಯಾಸೆಂಜರ್ ರೈಲನ್ನೇ ನೆಚ್ಚಿಕೊಂಡಿದ್ದರು. ಇದರಲ್ಲಿ ಕ್ಯಾನ್ಸರ್ ಪೀಡಿತರು ಚಿಕಿತ್ಸೆಗಾಗಿ ಹೋಗಿ, ಬರುತ್ತಿರುವುದರಿಂದ ಇದು 'ಕ್ಯಾನ್ಸರ್ ರೈಲು' ಆಯಿತು.

ಬ್ಲಾಗ್ ಬರಹವೊಂದರ ಮಾಹಿತಿ ಗಮನಿಸಿ. 1960 - ಹಸಿರು ಕ್ರಾಂತಿಯ ದಶಕ. ದೇಶದ ಹಸಿವನ್ನು ತಣಿಸಲು ಆಗಿನ ಸರಕಾರವು ಹೆಚ್ಚು ಹೆಚ್ಚು ಆಹಾರ ಬೆಳೆಯಲು ಪ್ರೋತ್ಸಾಹಿಸಿತು. ಅನಿಯಮಿತ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಸುರಿಯಲಾಯಿತು. ವಿಷವು ಪಂಜಾಬಿನ ಅಂತರ್ಜಲಕ್ಕೆ ಸೇರಿದೆ. ನೀರು ಕುಡಿಯುವ ಪ್ರತಿಯೊಬ್ಬನೂ ಸಂತ್ರಸ್ತನೇ ಆಗಿದ್ದಾನೆ. ಅದೆಷ್ಟೋ ಮಕ್ಕಳು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಬಿಕನೇರ್ಗೆ ಬರುತ್ತಿದ್ದಾರೆ

ನಾನಿಲ್ಲಿ ಕ್ಯಾನ್ಸರಿಗೆ ಕಾರಣವನ್ನು ಪೋಸ್ಟ್ಮಾರ್ಟಂ ಮಾಡಲು ಹೊರಟಿಲ್ಲ. ಬುದ್ಧಿವಂತ ನಾಗರಿಕ ಒಂದು ಪ್ರಕರಣವನ್ನು ಹೇಗೆ ಹಗುರವಾಗಿ ಕಂಡಿದ್ದಾನೆ ಎನ್ನುವುದಕ್ಕೆ ಉದಾಹರಣೆಗಳಿವು. ಮಾನವೀಯತೆಗಿಂತ ಹೊರತಾದ ಮನಸ್ಥಿತಿ. ಧನಿಕರ, ರಾಜಕಾರಣಿಗಳ ಅಹಂಕಾರದ ಮುಖ. ಬಡತನದ ಗೇಲಿ. ಇವರಿಗೆಲ್ಲಾ ಇಂತಹ ಸ್ಥಿತಿ ಬರುವುದು ಬೇಡ. ಒಂದು ವೇಳೆ ಬಂದುಬಿಟ್ಟರೆ? ಐಷರಾಮದ ಆಸ್ಪತ್ರೆಗಳಿವೆ. ದುಡ್ಡು ಚೆಲ್ಲಿದರೆ ಆಯಿತು. ಚಿಕಿತ್ಸೆ ನೀಡುವ ವೈದ್ಯರಿದ್ದಾರೆ. ಕಾಂಚಾಣ ಸದ್ದಿನ ವಿಮಾ ಕಂಪೆನಿಗಳಿವೆ. ಗುಣ ಆಗುತ್ತೋ ಇಲ್ವೋ ಬೇರೆ ವಿಚಾರ

ಬಡವರಿಗಾಗಿ ಒಂದು ವ್ಯವಸ್ಥೆಯನ್ನು ಸರಕಾರ ಮಾಡಿದಾಗ ಅದನ್ನು ಹಗುರವಾಗಿ ಕಾಣುವ ಬುದ್ಧಿವಂತ ಮನಸ್ಸುಗಳ ಮನಸ್ಥಿತಿಯನ್ನು ಏನೆಂದು ಕರೆಯೋಣ? ರೈತರು, ಶ್ರಮಜೀವಿಗಳು ದೇಶವಾಸಿಗಳ ಹೊಟ್ಟೆ ತುಂಬಿಸುತ್ತಾರೆ. ಸ್ವತಃ ಆತ ತೊಂದರೆಗೊಳಗಾದಾಗ ಕನಿಷ್ಠ ಅನುಕಂಪವನ್ನು ಸೂಚಿಸಲು ಮನಸ್ಸು ಯಾಕೆ ಸಿದ್ಧವಾಗುವುದಿಲ್ಲ? ಬಹುಶಃ ಇಂತಹ ಹಗುರ ಮಾತುಗಳಿಗೆ ಕಡಿವಾಣ ಹಾಕಲು ದೇಶದಲ್ಲಿ ಇನ್ಯಾವ ವ್ಯವಸ್ಥೆ ರೂಪುಗೊಳ್ಳಬೇಕು? ಬಡತನ ಎನ್ನುವುದು ಸಾಮಾಜಿಕ ಸ್ಥಿತಿ. ಅದು ಶಾಪ ಅಲ್ಲ!  

- ನಾ. ಕಾರಂತ ಪೆರಾಜೆ / 30-9-2018
ಊರು ಸೂರು / ಸಾಂದರ್ಭಿಕ ಚಿತ್ರ – ನೆಟ್ ಕೃಪೆ