Wednesday, February 24, 2010

ಚಹಕ್ಕೆ ಬಿದ್ದ ನೀರುಳ್ಳಿ ಸಿಪ್ಪೆ!

ಮಂಗಳೂರಿನ ಅರೆಪ್ರತಿಷ್ಠಿತ ಹೋಟೆಲ್. ಇಳಿ ಹೊತ್ತಾಗಿತ್ತು. ಹೋಟೆಲ್ ತುಂಬಿತ್ತು. ಪಕ್ಕದ ಮೇಜಿನಲ್ಲಿ ಕುಳಿತ ಒಬ್ಬರ ಚಹದ ಲೋಟದಲ್ಲಿ ಅಪ್ಪಿತಪ್ಪಿ ನೀರುಳ್ಳಿ ಸಿಪ್ಪೆ ಬಿದ್ದಿತ್ತು. 'ಬೇರೆ ತಂದು ಕೊಡ್ತೀನಿ' ಎಂದು 'ವಿತರಕ' (ಸಪ್ಲೆಯರ್) ಹೇಳುತ್ತಿದ್ದಂತೆ, ಆ ಗಿರಾಕಿ ವಾಚಾಮಗೋಚರವಾಗಿ ಆತನಿಗೆ ಬಯ್ಯುತ್ತಿದ್ದ. ತಂದಿಟ್ಟ ಚಹವನ್ನು ಆತ ಕುಡಿಯಲಾರ, ಬೇರೆ ಚಹ ತರಲು ಬಿಡ - ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು.

ಈ 'ಗಿರಾಕಿ ದೇವರ' ಅವತಾರ ಎಷ್ಟಿತ್ತೆಂದರೆ, ನೀರುಳ್ಳಿ ಸಿಪ್ಪೆಯಿದ್ದ ಚಹದ ಅರ್ಧ ಭಾಗವನ್ನು ಅಲ್ಲೇ ಚೆಲ್ಲಿ, ಉಳಿದರ್ಧವನ್ನು ಆತನ ಮೇಲೆರಚಿ, 'ಬೇರೆ ತೆಕ್ಕೊಂಡು ಬಾ' ಸುಗ್ರೀವಾಜ್ಞೆ ಮಾಡಿದ. ಇತರ ಮೇಜಿನಲ್ಲಿರುವ ಗಿರಾಕಿಗಳಿಂದ ಈತನಿಗೆ 'ಆತನಿಗೆ ಕಣ್ಣು ಕೋಣೊಲ್ವಾ. ಇವನ್ನು ಸಿಪ್ಪೆ, ನಾಳೆ ಇನ್ನೊಂದು. ನೀವು ಮಾಡಿದ್ದು ಸರಿ' ಎಂಬ ಪ್ರೋತ್ಸಾಹ.

ಆತನೇನೋ ಚಹ ತಂದಿಟ್ಟ. ಅತ್ತ ಯಜಮಾನನಿಂದಲೂ ಸಹಸ್ರನಾಮ. ಇನ್ನೊಂದು ಮೇಜಿಗೆ ಚಹ-ತಿಂಡಿ ವಿತರಣೆ ಮಾಡಲು ತೆರಳಿದ. ನಮ್ಮ ಸಮಾಜದಲ್ಲಿ ಇಂತಹ ಎಷ್ಟೋ ಘಟನೆಗಳಿಗೆ ಪ್ರೋತ್ಸಾಹ ಕೊಡುವ 'ಪತನ ಸುಖಿ'ಗಳನ್ನು ನೋಡಿದರೆ, ನಮ್ಮ ಗ್ರಹಿಸುವ ನರದ ಶಕ್ತಿ ಮಸುಕಾಗಿದೆ! ನಾಲ್ಕು ಜನ ಸೇರಿದಲ್ಲಿ 'ಗೆಜಲು'ವ ಕಂಠತ್ರಾಣಿಗಳ ಈ ವಿಕಾರವನ್ನು 'ಗುಣ' ಅಂತ ಸ್ವೀಕರಿಸಲ್ಪಡುತ್ತದೆ.

ಚಹದ ಲೋಟನಲ್ಲಿ ಬಿದ್ದಿರುವುದು ನೀರುಳ್ಳಿ ಸಿಪ್ಪೆ ತಾನೆ? ಬೇರೇನೂ ಅಲ್ವಲ್ಲ! 'ಆರು ರೂಪಾಯಿ ಚಹಕ್ಕೆ ಆರುನೂರು ರೂಪಾಯಿ'ಯಷ್ಟು ಮಾತನಾಡಬೇಕಿತ್ತೇ? ವಿನಯದಿಂದ ಹೇಳಿದರೆ ಇನ್ನೊಂದು ಕಪ್ ಸಿಗುತ್ತಿತ್ತು. ಬೇಕಿದ್ದರೆ ನೀರುಳ್ಳಿ ಸಿಪ್ಪೆ ಬಿದ್ದ ಚಹವೂ ಕೂಡಾ!

ಎಷ್ಟೋ ಸಲ ನಮ್ಮ 'ಪ್ರತಿಷ್ಠೆ' ಸ್ಥಾಪಿತವಾಗುವುದು ಇಂತಹ ಹೊತ್ತಲ್ಲಿ! ಅರ್ಹತೆ ಇದೆಯೋ, ಇಲ್ಲವೋ ಬೇರೆ ಮಾತು. ನಾನೋರ್ವ ಗಣ್ಯವ್ಯಕ್ತಿ, ಪ್ರಭಾವಿ ವ್ಯಕ್ತಿಯಾಗಿ ಕಾಣಿಸಿಕೊಳ್ಳವ' ಛಾತಿ. ಅಡುಗೆ ಮನೆ ಅಂದ ಮೇಲೆ ಅಲ್ಲಿ ನೀರುಳ್ಳಿ ಸಿಪ್ಪೆಯೂ ಇರುತ್ತದೆ, ಆಲೂಗೆಡ್ಡೆಯೂ ಇರುತ್ತದೆ.

ಇದೇ ಪ್ರಕರಣವನ್ನು ಮನೆಗೆ ಥಳಕು ಹಾಕೋಣ. ಮನೆಯೊಡತಿ ತಂದಿತ್ತ ಕಾಫಿ ಲೋಟದಲ್ಲಿ ಕಸವೋ ಇನ್ನೊಂದೋ ಇದ್ದಾಗ ಇಷ್ಟೊಂದು ರಂಪಾಟ ಮಾಡುವುದಿಲ್ಲ. ಯಾಕೆ ಹೇಳಿ? ಅದು 'ಆರು ರೂಪಾಯಿ'ಯ ಮಹಿಮೆ! ಇಲ್ಲಿ ಕಾಣಿಸಿಕೊಳ್ಳಲು ಆಗುವುದಿಲ್ಲವಲ್ಲಾ!

ಕಳೆದ ವಾರ ಗುಲ್ಬರ್ಗಾದಲ್ಲಿ ಹೋಟೆಲ್ಗೆ ಹೋಗಿದ್ದೆ. ಚಿಕ್ಕ ಗೂಡಿನಂತಹ ಕೋಣೆಯಲ್ಲಿ ಚಹ ಮಾಡ್ತಾರೆ ಎಂಬ ಕಾರಣಕ್ಕಾಗಿ ಅದು ಹೋಟೆಲ್! ಅಲ್ಲಿನ ಮೇಜು, ಚಹ ಮಾಡುವಾತ, ಚಹದ ಗ್ಲಾಸ್, ಒಲೆ, ಮಿಕ್ಕುಳಿದ ಪರಿಕರ - ಇವೆಲ್ಲವನ್ನು ನೋಡಿದರೆ, 'ನೀರುಳ್ಳಿ ಸಿಪ್ಪೆ ಬಿದ್ದ ಚಹ' ಎಷ್ಟೋ ವಾಸಿ ಅನ್ನಿಸಿತ್ತು.

ನಮ್ಮೂರಲ್ಲಿ ಹುಕ್ರಪ್ಪ ಎಂಬವರ ಹೋಟೆಲ್ ಉದ್ಯಮಕ್ಕೆ ಅರ್ಧ ಶತಮಾನ. ಈಗವರು ಕೀರ್ತಿಶೇಷ. ಹಳ್ಳಿಯಿಂದ ಪೇಟೆಗೆ ಹೋಗುವವರು ಇವರ ಹೋಟೆಲಿಗೆ ನುಗ್ಗದೆ ಮುಂದಿನ ಪ್ರಯಾಣವಿಲ್ಲ. ಅಲ್ಲಿ ಕಾಫಿ, ಚಹ ಮತ್ತು ಅವಲಕ್ಕಿಗೆ ಮಿಶ್ರ ಮಾಡಿದ ಸೇಮಿಗೆ - ಇವಿಷ್ಟೇ ಪಾಕಗಳು. ಚಹ ಮಾಡುವ ಕೋಣೆ ತೀರಾ ಕತ್ತಲು. ಅಲ್ಲೊಂದು ಮೂಲೆಯಲ್ಲಿ ಚಿಮಿಣಿ ದೀಪ. ಕುಬ್ಜ ದೇಹದ ಅವರೊಬ್ಬರೇ ಸಲೀಸಾಗಿ ಅದರೊಳಗೆ ಹೋದಾರು ವಿನಾ ಇನ್ನೊಬ್ಬರಿಗೆ ಅಸಾಧ್ಯ. ತಂದಿಡುವ ಚಹದಲ್ಲಿ ಒಂದೊಂದು ಸಲ ಒಂದೊಂದು ಬೋನಸ್ ಇರುತ್ತಿತ್ತು! ಅದನ್ನು ಅಷ್ಟೇ ನಯವಾಗಿ ಕೆಳಗಿಟ್ಟು, ಚಹವನ್ನು ಹೀರಿ, ಹಣಕೊಟ್ಟು ಹಿಂದಿರುಗುವ ಗಿರಾಕಿಗಳನ್ನು ಹತ್ತಿರದಿಂದ ನೋಡಿದ ನನಗೆ ಈ 'ನೀರುಳ್ಳಿ ಸಿಪ್ಪೆ ಬಿದ್ದ ಚಹ' ಏನು ಮಹಾ?

ಜಾತ್ರೆಗಳ ಸಂತೆಗಳ ಹೋಟೆಲಿಗೊಮ್ಮೆ ಇಣುಕುವಾ. ಬಿದಿರಿನ ಸಲಕೆಗಳಿಂದ ಮಾಡಿದ ಬೆಂಚ್, ಮೇಜು. ತಿಂಡಿಯಿಡುವ ಮೇಜು ಕೂಡಾ ದೇಸಿ! ಇತ್ತೀಚೆಗೆ ಗುಲ್ಬರ್ಗ ಜಿಲ್ಲೆಯ ಒಂದು ಹಳ್ಳಿಯ ಜಾತ್ರೆಗೆ ಮಿತ್ರ ಸಂಪತ್ ಜತೆಗೆ ಹೋಗಿದ್ದೆ. ಚಾ ಕುಡಿಯಲೆಂದು 'ಸಂತೆ ಹೋಟೆಲ್'ನಲ್ಲಿ ಕುಳಿತಿದ್ದೆವು. ಚಹ ಆರ್ಡರ್ ಮಾಡಿ ಹತ್ತಿಪ್ಪತ್ತು ನಿಮಿಷವಾದರೂ ಪತ್ತೆನೇ ಇಲ್ಲ! ಮೆಲ್ಲನೆ ಪಾಕಶಾಲೆಗೆ ಇಣುಕಿದೆ.

ಆ ಹೋಟೆಲನ್ನು ನಡೆಸುವುದು ಪಾಪ, ಓರ್ವ ಮಹಿಳೆ. ಇನ್ನೊಬ್ಬ ಶುಚಿಗೊಳಿಸುವಾತ. ಆಕೆಯ ಗಂಡ ಜಿನಸಿ ತರಲು ಹೋಗಿದ್ದ. ಪಾಕಶಾಲೆಯ ಒಂದೆಡೆ ತನ್ನ ಮಗುವಿಗೆ ಹಾಲುಣಿಸುತ್ತಾ ಇದ್ದಾಳೆ. ಮತ್ತೊಂದೆಡೆ ಅವಳ ಇನ್ನೊಂದು ಮಗು ರಂಪಾಟ ಮಾಡುತ್ತಾ ಅಲ್ಲೇ ಬಹಿರ್ದೆಶೆಯನ್ನೂ ಪೂರೈಸಿತ್ತು. ಈಗ ಕಲ್ಪಿಸಿಕೊಳ್ಳಿ - ಈ ದೃಶ್ಯವನ್ನು ನೋಡದಿರುತ್ತಿದ್ದರೆ ಆ ಹೋಟೆಲಿನ ಚಹ ಎಷ್ಟು ಸವಿಯಾಗಿರುತ್ತಿತ್ತು. 'ಇಲ್ಲೆಲ್ಲಾ ಕಾಮನ್ ಸಾರ್' ಸಂಪತ್ ಪಿಸುಗುಟ್ಟಿದರು. ಸರಿ, ಈ ದೃಶ್ಯವನ್ನು ಮನಸ್ಸಿಗೆ ತೆಕ್ಕೊಂಡರೆ, 'ಚಹಕ್ಕೆ ಬಿದ್ದ ನೀರುಳ್ಳಿ ಸಿಪ್ಪೆ' ಎಷ್ಟೋ ವಾಸಿ.

ಗುಲ್ಬರ್ಗಾದ ಹಳ್ಳಿಯಲ್ಲಿ ಜತೆಗಿದ್ದ ಸಂಪತ್ ಒತ್ತಾಯಕ್ಕೆ ರೈತರೊಬ್ಬರ ಮನೆಗೆ ಹೋಗಿದ್ದೆವು. 'ಚಹ ಕೊಡ್ರಿ' ಬೇಡಿಕೆ ಮುಂದಿಟ್ಟೆವು. 'ಚಾ ಇಲ್ಲಾರಿ. ರಾಗಿ ಅಂಬ್ಲಿ ಇದೆ. ನಮ್ಮ ಹೊಲಾದ್ದೇ ರಾಗಿ. ಚೆನ್ನಾಗಿದೆ' ಎಂದು ಬೀದರ್ ಕನ್ನಡದಲ್ಲಿ ಮನೆಯೊಡತಿ ಸಣ್ಣವ್ವ ಮಾತನಾಡುತ್ತಾ, ಎರಡು ಲೋಟದಲ್ಲಿ ರಾಗಿ ಅಂಬ್ಲಿ ತಂದಿಟ್ಟರು. ಆ ಅಂಬಲಿಗೆ ಯಾವುದೋ ಸೊಪ್ಪನ್ನು ಅರೆದು ಸೇರಿಸಿದ್ದರು. ಒಳ್ಳೆಯ ಸ್ವಾದ, ಪರಿಮಳ. ಅತ್ತ ಹೆಚ್ಚು ದ್ರವವೂ ಅಲ್ಲ, ಇತ್ತ ಹೆಚ್ಚು ಮಂದವೂ ಅಲ್ಲದ ಪಾಕ. ಕುಡಿಯುತ್ತಾ ಇನ್ನೇನು ಮುಗಿಯುತ್ತಾ ಬಂತೆನ್ನುವಾಗ - 'ಚಹಕ್ಕೆ ಬಿದ್ದ ನೀರುಳ್ಳಿ ಸಿಪ್ಪೆ' ನೆನಪಾಯಿತು!

0 comments:

Post a Comment