Thursday, May 22, 2014

ಮರದ ಬೇರಿನೊಳಗಿದೆ, ಬದುಕಿನ ನರ

               ಹೆದ್ದಾರಿ ಪಕ್ಕದಲ್ಲಿರುವ ಯಾವ ರಸ್ತೆ ಕೆಲಸಕ್ಕೂ ತೊಂದರೆ ಕೊಡದ ಕಾಡು ಮಾವಿನ ಮರವೊಂದು ಆಗಷ್ಟೇ ಧರಾಶಾಯಿಯಾಗಿತ್ತು. ಯಾಂತ್ರೀಕೃತ ಗರಗಸವು ಕಣ್ರೆಪ್ಪೆ ಮುಚ್ಚಿ ತೆರೆಯುವುದರೊಳಗೆ ರೆಂಬೆಕೊಂಬೆಗಳನ್ನು ಬೇರ್ಪಡಿಸಿತ್ತು. ಅರ್ಧ ಗಂಟೆಯೊಳಗೆ ಶತಮಾನಕ್ಕೆ ಸಾಕ್ಷಿಯಾದ ಮರ ಛಿದ್ರವಾಗಿ ಲಾರಿಯೇರಲು ಸಿದ್ಧವಾಯಿತು. ವರಿಷ್ಠರಿಂದ ಯಶಸ್ವೀ ಪೋಸ್ಟ್ ಮಾರ್ಟ್ಂ. ಸಾಧಕನೋರ್ವನ ಸಾಧನೆಯ ಭಾವ, ಆನಂದದ ಪುಳಕ ಮಾತು-ಕೃತಿಗಳಲ್ಲಿ ವ್ಯಕ್ತವಾಗುತ್ತಿತ್ತು.
               ಸನಿಹದ ಅರುವತ್ತರ ವೃದ್ಧೆ ಯಮುನಾಬಾಯಿ ಮರವೊಂದರ ಸಾವನ್ನು ಕಣ್ಣೆವೆಯಿಕ್ಕದೆ ನೋಡುತ್ತಾ, ಈ ಮರದೊಂದಿಗೆ ಕಳೆದ ಬಾಲ್ಯವನ್ನು ನೆನಪು ಮಾಡಿಕೊಂಡರು. ಸ್ವಾದದ ಹಣ್ಣು ಕೊಡುತ್ತಿದ್ದ ಮರದ ಕೆಳಗೆ ಬಾಲ್ಯದ ಬದುಕನ್ನು ಕಟ್ಟಿಕೊಂಡಿದ್ದ ಕುಟುಂಬದ ಮಕ್ಕಳನ್ನು ಜ್ಞಾಪಿಸಿಕೊಂಡರು. ಒಂದು ಗಾಳಿ ಬೀಸಿದರೂ ಸಾಕು, ಮಕ್ಕಳೆಲ್ಲಾ ಓಡಿ ಬಂದು ಹಣ್ಣನ್ನು ಹೆಕ್ಕಿಕೊಳ್ಳಲು  ಪೈಪೋಟಿ. ಕನಿಷ್ಠ ಹದಿನೈದು ಮನೆಗಳ ಮಾವಿನ ಬಯಕೆಯನ್ನು ಈ ಮರ ನೀಗಿಸುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಈ ಮರಕ್ಕೆ ಬೀಜಾಂಕರ ಮಾಡಿದ ತನ್ನ ಕುಟುಂಬದ ಹಿರಿಯರನ್ನು ಜ್ಞಾಪಿಸಿಕೊಂಡರು.
                 ಮರ ನೆಲಕ್ಕೊರಗಿದಾಗ ಯಮುನಾಬಾಯಿಯವರ ಕಣ್ಣಂಚಿನಲ್ಲಿ ಜಿನುಗಿದ ಕಣ್ಣೀರು ಮರವನ್ನೊರಗಿಸುವ ಭರದಲ್ಲಿದ್ದ ಯಾರೂ ಗಮನಿಸಿಲ್ಲ. ಗಮನಿಸಿಯೂ ಆಗಬೇಕಾದ್ದಿಲ್ಲ ಬಿಡಿ! ಉಳಿಸುವ ಮನಸ್ಸುಗಳು ಕಾಂಚಾಣಕ್ಕೆ ಬಾಯ್ತೆರೆದುಕೊಂಡಿರುವಾಗ ಉರುಳಿಸುವ ಪ್ರಕ್ರಿಯೆಗಳು ನಿರಂತರ ನಡೆಯುತ್ತಲೇ ಇರುತ್ತದೆ. ಮಾವು, ಹಲಸುಗಳ ಹಿಂದೆ ಒಂದೊಂದು ಪ್ರದೇಶದ ಬದುಕಿನ ಕತೆಗಳು ನೆಲಕಚ್ಚುತ್ತಿವೆ.
                 ದೇಶಾದ್ಯಂತ ರಸ್ತೆಗಳು ಅಗಲವಾಗುತ್ತಿವೆ. ಅಭಿವೃದ್ಧಿಯತ್ತ ದೊಡ್ಡ ಹೆಜ್ಜೆಯಿಡುತ್ತಿದ್ದೇವೆ. ಸಹಜವಾಗಿ ಮರಗಳಿಗೂ ಕೊಡಲಿ. ರಸ್ತೆಯ ಕಾಮಗಾರಿಗಳಿಗೆ ತೊಡಕಾಗುವಂತಹ ಮರಗಳನ್ನು ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕಡಿಯುವುದು ಅನಿವಾರ್ಯ. ಆದರೆ ಯಾವ ಕೆಲಸಗಳಿಗೂ ತೊಂದರೆ ಕೊಡದ, ಕೇವಲ ರಸ್ತೆಯ ಪಕ್ಕದಲ್ಲಿರುವುದೇ ಪಾಪ ಎನ್ನುವ ಕಾರಣಕ್ಕಾಗಿ ಅಸಂಖ್ಯಾತ ಮರಗಳು ಉರುಳಿವೆ. ಮಾವು, ಹಲಸು ಮತ್ತು ಮೌಲ್ಯಯುತ ಬೃಹತ್ ಮರಗಳ ಸಂಖ್ಯೆ ಕ್ಷೀಣಿಸುತ್ತಿವೆ.  ಯಮುನಾಬಾಯಿಯಂತಹ ಹಿರಿಯ ಜೀವಗಳಿಗೆ ಮಾವಿನ ಮರವು ಪರಿಸರ-ಬದುಕಿನ ಪಾಠವನ್ನು ಹೇಳಿತ್ತು ನೋಡಿ, ಜಿನುಗಿದ ಕಣ್ಣೀರಿನ ಒಂದೊಂದು ಹನಿಗಳಲ್ಲಿ ಭವಿಷ್ಯದ ಕರಾಳ ದಿನಮಾನಗಳ ಚಿತ್ರವಿದೆ.
              ವಾರಗಳ ಹಿಂದೆ ಅಕಾಲಿಕ ಮಳೆ ಬಂತು. ಗಾಳಿ, ಗುಡುಗು, ಸಿಡಿಲಿನ ಅಬ್ಬರ. ಆ ಸಮಯದಲ್ಲಿ ಹಳ್ಳಿಯಲ್ಲಿದ್ದೆ. ರಾತ್ರಿಯ ಗಾಳಿಯು ವಾತಾವರಣವನ್ನು ಹೈರಾಣ ಮಾಡಿತ್ತು. ಬೆಳ್ಳಂಬೆಳಿಗ್ಗೆ  ಮಾವಿನ ಮರದ ಸುತ್ತ ಚಿಣ್ಣರ ಕಲರವ! ಜತೆಗೆ ಹೆತ್ತವರ ಕಮಾಂಡ್! ಕಾಡು ಮಾವಿನ ಹಣ್ಣನ್ನು ಆಯುವ ಕೈಗಳಿಗೆ ಪುರುಸೊತ್ತಿಲ್ಲ. ಒಂದೊಂದು ಮರದ ಹಣ್ಣುಗಳಿಗೆ ಪ್ರತ್ಯೇಕಪ್ರತ್ಯೇಕವಾದ ರುಚಿ. ಹಿರಿಯರು ನೆಟ್ಟು ಪೋಷಿಸಿದ ಮರಗಳ ಹಿಂದೆ-ಮುಂದೆ ಬದುಕಿನ ಸ್ಪಷ್ಟ ಕಲ್ಪನೆಯಿತ್ತು. ಮಾವು-ಹಲಸಿಗಾಗಿ ಇನ್ನೊಬ್ಬರ ಮುಂದೆ ಕೈಚಾಚಬಾರದೆನ್ನುವ ಸಂದೇಶವಿತ್ತು. ಹಾಗಾಗಿಯೇ ತನ್ನ ತೋಟವಲ್ಲದೆ ಸರಹದ್ದಿನ ಜಾಗದಲ್ಲೆಲ್ಲಾ ಕಾಡುಮಾವಿನ ಸಸಿಗಳನ್ನು ಬೆಳೆಸುವ ಪ್ರಕ್ರಿಯೆ ಒಂದು ಕಾಲಘಟ್ಟದ ಸಮಾಜಮುಖಿ ಮನಸ್ಸಿನ ಜೀವಂತಿಕೆ.
              ನೆಟ್ಟು ಬೆಳೆಸಿದ ಹಿರಿಯರ ಸಂಖ್ಯೆ ಕ್ಷೀಣಿಸುತ್ತಿದೆ. ಮೊಬೈಲ್ ಹಿಡಿದ ಕೈಗಳಿಗೆ ಮಾವು ಯಾಕೆ, ಬದುಕೇ ಭಾರ! ಹೊಸದಾಗಿ ರೂಪುಗೊಳ್ಳುತ್ತಿರುವ ಚಿಣ್ಣರಿಗೆ ಕಾಡುಮಾವಿನ ರುಚಿ ಗೊತ್ತಿಲ್ಲ. ಹಿರಿಯರಿಗೆ ರುಚಿ ಮೂಡಿಸಲು ಪುರುಸೊತ್ತಿಲ್ಲ. ಇಲ್ಲಗಳ ಮಧ್ಯೆಯೂ ಕಾಡುಮಾವಿಗೆ ಪ್ರತ್ಯೇಕ ಸ್ಥಾನ. ಅಲ್ಲೋ ಇಲ್ಲೋ ಕೆಲವರು ಮಾತುಕತೆಗೆ ಸಿಗುತ್ತಾರೆ. ತಳಿಗಳನ್ನು ಉಳಿಸಿಕೊಳ್ಳುತ್ತಿದ್ದಾರೆ. ಅದರ ಸವಿಯನ್ನು ನೆನಪಿಸಿಕೊಳ್ಳುತ್ತಾರೆ. ಆ ಅಡುಗೆ ಮನೆಯಲ್ಲಿ ಕಾಡುಮಾವಿಗೆ ಪ್ರತ್ಯೇಕ ಸ್ಥಾನ-ಮಾನ. ಖಾದ್ಯಗಳ ವೈಭವ. ಒಂದೆರಡು ತುತ್ತು ಅನ್ನವನ್ನು ಅಧಿಕವಾಗಿ ಉದರಕ್ಕೆ ತಳ್ಳುವ ತಾಕತ್ತು ಅದಕ್ಕಿದೆ.
              ಸುಳ್ಯ ತಾಲೂಕಿನ ಮರ್ಕಂಜದ ಮಾಪಲ್ತೋಟ ಸುಬ್ರಾಯ ಭಟ್ಟರಲ್ಲಿ ಏನಿಲ್ಲವೆಂದರೂ ನೂರಕ್ಕೂ ಅಧಿಕ ಕಾಡು ಮಾವಿನ ತಳಿಗಳಿವೆ. ಎಲ್ಲವೂ ನೆಟ್ಟು ಪೋಷಿಸಿದವುಗಳು. ಮಾಂಬಳ, ಗೊಜ್ಜು, ಹುಳಿ ಪದಾರ್ಥಗಳಿಗೆ ಒಗ್ಗುವ ಹಲವು ವಿಧದ ತಳಿ ಬ್ಯಾಂಕ್ ರೂಪುಗೊಂಡದ್ದರ ಹಿಂದೆ ಬೆವರ ಶ್ರಮವಿದೆ. ಉಪ್ಪಿನಕಾಯಿಗೆ ಹೊಂದುವ ಹನ್ನೆರಡು ತಳಿಗಳು, ನೀರು ಮಾವಿನಕಾಯಿಗೆಂದೇ ಇರುವ ಎರಡು ಜಾತಿಗಳ ಜಾತಕ ಬಿಡಿಸಲು ಭಟ್ಟರಿಗೆ ಖುಷಿ. ಜತೆಗೆ ಹೈಬ್ರಿಡ್ ಸಂಸಾರ ದೊಡ್ಡದಿದೆ.  'ಮಾವು, ಹಲಸಿನ ಗಿಡಗಳನ್ನು ಸಂರಕ್ಷಿಸಿ ಅದರ ಹಣ್ಣನ್ನು ತಿಂದ ಸಂತೃಪ್ತಿ ಕೋಟಿ ರೂಪಾಯಿಗೂ ಮಿಗಿಲು. ಹಾಗಾಗಿ ನಾನು ಕೋಟ್ಯಾಧೀಶ್ವರ' ಎನ್ನುತ್ತಾರೆ.
             ಉಪ್ಪಿನಕಾಯಿ ಯಾರಿಗೆ ಬೇಡ? ಸವಿಯುವ ನಾಲಗೆಯು ಕಾಡುಮಾವಿನ ಪ್ರೀತಿಯನ್ನು ಬಯಸುವುದಿಲ್ಲ. ಮರಗಳ ಕಾಳಜಿಯನ್ನು ಬೇಡುವುದಿಲ್ಲ! ಎಲ್ಲಾ ಮರಗಳ ಮಾವಿನ ಮಿಡಿಗಳು ಉಪ್ಪಿನಕಾಯಿಗೆ ಸೂಕ್ತವಲ್ಲ. ಹಾಗಾದರೆ ತಳಿ ಆಯ್ಕೆ ಹೇಗೆ? ಸುಬ್ರಾಯ ಭಟ್ ಹೇಳುತ್ತಾರೆ, ಮಿಡಿಯ ಆಯ್ಕೆಗೆ ಹೇಳುವಂತಹ ಮಾನದಂಡಗಳಿಲ್ಲ. ಸೊನೆಯಿರುವ ಮಾವನ್ನೇ ಆರಿಸಿ, ಸೊನೆಯ ಮುಖಾಂತರ ಮಿಡಿಗೆ ರುಚಿ. ಮಿಡಿಯನ್ನು ಹೋಳುಮಾಡಿ, ಪದಾರ್ಥ ಮಾಡುವಾಗ ಇತರ ತರಕಾರಿಯೊಂದಿಗೆ ಹಾಕಿಬಿಡಿ. ಉಪ್ಪು, ಮೆಣಸು, ಹುಳಿಯೊಂದಿಗೆ ಮಿಳಿತವಾಗಿ ಮಾವಿನ ಹೋಳು ಕಪ್ಪಾಗದಿದ್ದರೆ ಮಿಡಿ ಪಾಸ್, ಕಪ್ಪಾದರೆ ರಿಜೆಕ್ಟ್...
          ಕಾಡುಮಾವಿನ ಅಪರೂಪದ ತಳಿಯೊಂದನ್ನು ಮಾಪಲ್ತೋಟ ಪರಿಚಯಿಸುತ್ತಾರೆ, "ದಿವಂಗತ ಮಂಚಿ ನಾರಾಯಣ ಆಚಾರ್ ಅವರ ಹಿತ್ತಿಲಿನಲ್ಲಿ 'ಕುಡಿಯುವ ಮಾವು' (ತಿನ್ನುವ ಮಾವಲ್ಲ) ಇತ್ತು. ಅಲ್ಲಿಂದ ಕುಡಿ ತಂದು ಗಿಡ ಮಾಡಿದೆ. ಇದು ಉತ್ಕೃಷ್ಟ ಹಣ್ಣು. ತಿಕ್ಕಿದಾಗ ಜ್ಯೂಸ್ ಬಿಟ್ಟುಕೊಡುತ್ತದೆ. ನಂತರ ತೊಟ್ಟಿನ ಬಳಿ ಕಚ್ಚಿದರೆ ಸಾಕು, ಕುಡಿಯಲು ಸಿದ್ಧ". ಕಲ್ಲಡ್ಕ ಕರಿಂಗಾಣದ ಡಾ.ಕೆ.ಎಸ್.ಕಾಮತರಲ್ಲಿ ಕಾಡುಮಾವಿನ ಡಾಟಾದ ಪೈಲ್ ದೊಡ್ಡದಿದೆ.. ಪಾಸ್ ವರ್ಡ್ ಕೊಟ್ಟರೆ ಸಾಕು, ಬೇಕಾದಾಗ ಬೇಕಾದಷ್ಟು ಮೊಗೆಯುವಂತಹ ಜ್ಞಾನ. ಕರಾವಳಿಯ ಹಿತ್ತಿಲಲ್ಲಿ ಮಲೆನಾಡಿನ ಅಪ್ಪೆಮಿಡಿ ತಳಿಗಳು ಸಾಕಷ್ಟಿವೆ. ಇಳುವರಿ ಅಷ್ಟಕ್ಕಷ್ಟೇ. ಕಾಯಿ ಬಿಡುತ್ತಿಲ್ಲವೆಂದು ಕಡಿಯುವವರಿಗೆ ಕಾಮತರ ಕಿವಿಮಾತೊಂದಿದೆ - ಅದಕ್ಕೆ ಊರತಳಿಗಳಾದ ಕಾಳಪ್ಪಾಡಿ, ತೋತಾಪುರಿಗಳ ಕಸಿಕಟ್ಟಿ. ಪ್ರತೀ ವರುಷವೂ ಕಾಯಿ ಕೊಡುವ ಸಾಧ್ಯತೆಯಿದೆ.
             ಶಿರಸಿಯ ಪರಿಸರ ಪತ್ರಕರ್ತ ಶಿವಾನಂದ ಕಳವೆ ಅರಣ್ಯ ಇಲಾಖೆಯ ವರಿಷ್ಠರ ಮನವೊಲಿಸಿ ಸರಕಾರಿ ಜಾಗದಲ್ಲಿ ಅಕೇಶಿಯಾದ ಬದಲು ಹಲಸು, ಮಾವು, ಹಣ್ಣಿನ ಗಿಡಗಳನ್ನು ನೆಡುವಲ್ಲಿ ಯಶಸ್ಸಾಗಿದ್ದಾರೆ. ಎಷ್ಟೋ ಸಲ ಇಲಾಖೆಯ ಕೆಲಸಗಳನ್ನು ಹಳಿಯುತ್ತೇವೆ. ಅಧಿಕಾರಿಗಳನ್ನು ದೂರುತ್ತೇವೆ. ಆದರೆ ಸಾಮಾಜಿಕ ಕಾಳಜಿಯಿದ್ದ, ನಿಜದ ನೇರಕ್ಕೆ ನಡೆಯುವ, ಮನವಿಯನ್ನು ಮನಸಾ ಸ್ವೀಕರಿಸುವ ಮನಸ್ಸುಗಳು ಇಲಾಖೆಯೊಳಗಿದ್ದಾರೆ. ಅವರನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೋ ಅಷ್ಟು ಫಲಿತಾಂಶ. ಕಳವೆಯವರು ಇಲಾಖೆಯೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಫಾರೆಸ್ಟ್ ಕಾಡಿನಲ್ಲಿ ಹಲಸು-ಮಾವುಗಳು ಬೆಳೆಯುವುದಕ್ಕೆ ಸಾಧ್ಯವಾಯಿತು.
          ಈಚೆಗೆ ಹಲವೆಡೆ ಗಮನಿಸಿದ್ದೇನೆ. ಅಕೇಶಿಯಾ ಗುಡ್ಡಗಳು ನುಣುಪಾಗುತ್ತಿವೆ. ಕಾಂಡಗಳು ಪ್ರವಾಸಕ್ಕೆ ಕಾದಿರುವ ದೃಶ್ಯ. ಒಮ್ಮೆ ಜತೆಗಿದ್ದ ರಾಕೇಶ್ ಕಮ್ಮಾಜೆ ಹೇಳಿದರು, 'ಸರ್, ಅಕೇಶಿಯಾ ಕಡಿದಾಯಿತು. ಇನ್ನು ಪುನಃ ನೆಡುವುದು ಅಕೇಶಿಯಾ ಗಿಡಗಳನ್ನು,' ಎಂದರು. ಸರಿ, ಅಕೇಶಿಯಾವೇ ಬೇಕೆಂದರೆ ಓಕೆ. ಅದರೊಂದಿಗೆ ಒಂದಿಷ್ಟು ಹಲಸು, ಮಾವು, ಕಾಡುಹಣ್ಣುಗಳೂ ಇದ್ದರೇನಂತೆ. ಬಹುಶಃ ಆದೇಶದ ಪತ್ರದಲ್ಲಿ ಅಕೇಶಿಯಾ ಮಾತ್ರ ಇದ್ದಿರಬೇಕು. ಅದಕ್ಕೆ ಉಳಿದವನ್ನು ಸೇರಿಸುವ ಕೆಲಸ ಆಗಬೇಕು. ಸಾರ್ವಜನಿಕರಿಂದ ಒತ್ತಡ ಬೀಳದಿದ್ದರೆ ಮುಂದೆಯೂ ಅಕೇಶಿಯಾ ಸಂಸಾರ ಬೆಳೆಯುತ್ತದೆ. ಆದರೆ ಸಾರ್ವಜನಿಕರ ಮಾತಿಗೆ ಮನ್ನಣೆ ಕೊಡುವ ಮನಸ್ಸುಗಳು ಬೇಕಷ್ಟೇ. ನೆನಪಿಟ್ಟುಕೊಳ್ಳೋಣ, ಹೊಟ್ಟೆಯನ್ನು ತಂಪು ಮಾಡುವ ಮರಗಳ  ಬೇರಿನೊಂದಿಗಿದೆ, ಬದುಕಿನ ನರನಾಡಿ.
              ಹೆದ್ದಾರಿಗಳ ಸುತ್ತಮುತ್ತದ ದೈತ್ಯ ಮರಗಳು ಅಭಿವೃದ್ಧಿಗಾಗಿ ಪ್ರಾಣ ಕಳೆದುಕೊಂಡಿವೆ. ಇತ್ತ ಹೈಬ್ರಿಡ್ ತಳಿಗಳಿಗೆ ಬಾಧಿಸುವ ಕೀಟಗಳನ್ನು ಕೊಲ್ಲಲು ವಿಷ ಸಿಂಪಡಣೆ. ಈಚೆಗೆ ಇಪ್ಪತ್ತೆಂಟು ರಾಷ್ಟ್ರಗಳನ್ನೊಳಗೊಂಡ ಐರೋಪ್ಯ ಸಂಘವು ಭಾರತದ ಅಲ್ಪಾನ್ಸೋ ಮಾವಿನ ಹಣ್ಣಿಗೆ ಕಾಲಮಿತಿ ನಿಷೇಧ ಹೇರಿದೆ. ಹಣ್ಣಿನೊಂದಿಗೆ ಬದನೆ, ಕೆಸು, ಹಾಗಲಕಾಯಿ, ಪಡುವಲಕ್ಕೂ ನಿಷೇಧ ಭಾಗ್ಯ. ಚುನಾವಣೆಯ ಗುಂಗಿನಲ್ಲಿದ್ದ ದೇಶದ ನಾಯಕರಿಗೆ ಈ ನಿಷೇಧವು 'ಒಂದು ವಾಕ್ಯದ ಖಂಡನೆ'ಯೊಂದಿಗೆ ಕಾಲಗರ್ಭಕ್ಕೆ ಸೇರಿಹೋಯಿತು!
             ತಿನ್ನುವ ಆಹಾರದಲ್ಲಿ ಗೊತ್ತಿಲ್ಲದೇ ಉದರ ಸೇರಿದ ವಿಷವು ತಾಮಸ ಗುಣವಾಗಿ ಪ್ರವರ್ತಿತವಾಯಿನೋ ಎನ್ನುವ ಗುಮಾನಿಯಂತೂ ನನಗಿದೆ. ಯಾಕೆ ಹೇಳಿ? ಈ ಸಲದ ಚುನಾವಣೆಯ ಸಮಯದಲ್ಲಿ ಜನನಾಯಕರ ಬಾಯಿಂದ ಉದುರಿದ್ದ ಅಣಿಮುತ್ತುಗಳ ಮುಂದೆ ಬದುಕಿನ ಸಂಸ್ಕಾರವು ನಾಚಿ ನೀರಾಯಿತು!

0 comments:

Post a Comment