Monday, September 15, 2014

ಉಸಿರು ನಿಲ್ಲಿಸಿದ ಕೊಳವೆ ಬಾವಿಗಳಿಗೆ ಮೋಕ್ಷ!




                 ಕೊಳವೆ ಬಾವಿಯ ಮಾತೆತ್ತಿದರೆ ಅಕ್ಷತಾ, ತಿಮ್ಮಣ್ಣ ಮರೆಯಲಾಗದಷ್ಟು ಕಾಡುತ್ತಾರೆ. ಮನುಷ್ಯತ್ವವನ್ನು ಕೆದಕಿದ ಎರಡು ಘಟನೆಗಳು ಜನರನ್ನು ಅಲರ್ಟ್  ಮಾಡಿದೆ, ಸರಕಾರವನ್ನು ಚುಚ್ಚಿದೆ. ಪರಿಣಾಮ, ವಿಫಲ ಕೊಳವೆ ಬಾವಿಗಳನ್ನು ಕ್ಷಿಪ್ರವಾಗಿ ಮುಚ್ಚಲು ಆದೇಶ. ಇಲಾಖೆಯ ಪಟ್ಟಿಗೆ ಹೊಸ ಹೊಣೆ ಹೊಸೆಯಿತು. ಬಾವಿಗಳನ್ನು ಮುಚ್ಚುವ ಸಂಭ್ರಮ. ಕೆಲವೆಡೆ ಸರಕಾರದೊಂದಿಗೆ ಸ್ಥಳೀಯ ಸಂಸ್ಥೆಗಳೂ ಸೇರಿಕೊಂಡಿವೆ.  ಕೊಳವೆಬಾವಿಗಳನ್ನು ಮುಚ್ಚಿದ ಅಂಕಿಅಂಶಗಳು ಸರಕಾರಕ್ಕೆ ತಲುಪಿದೆ.
                ಜನರ ಸಹಭಾಗಿತ್ವದಲ್ಲಿ ವಿಫಲ ಕೊಳವೆಬಾವಿಗಳನ್ನು ಮುಚ್ಚಿದರೆ ಜನರಿಗೆ ತಮ್ಮ ಹೊಣೆ, ಕರ್ತವ್ಯಗಳು ಮನದಟ್ಟಾಗುತ್ತದೆ ಎನ್ನುವ ದೂರದೃಷ್ಟಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅಖಾಡಕ್ಕಿಳಿಯಿತು. ಬೆಳಗಾವಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ದಿನದಂದು 918 ಕೊಳವೆ ಬಾವಿಗಳಿಗೆ ಮೋಕ್ಷ ನೀಡಿದೆ.
ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಿ ಜೀವ ರಕ್ಷಣೆ ಮಾಡುವುದು - ಯೋಜನೆಯ ಅಧ್ಯಕ್ಷ  ಡಾ.ವೀರೇಂದ್ರ ಹೆಗ್ಗಡೆಯವರ ಆಶಯ. ಸ್ವ-ಸಹಾಯ ಸಂಘ, ಪ್ರಗತಿ ಬಂಧು ತಂಡಗಳ ಸದಸ್ಯರಿಗೆ ವಿಷಯದ ಗಾಢತೆಯನ್ನು ಮನದಟ್ಟು ಮಾಡಿ ಈ ಕಾರ್ಯಕ್ಕೆ ಬಳಕೆ.  ಹಳ್ಳಿಹಳ್ಳಿಗಳಲ್ಲಿ ಅಭಿಯಾನ.
                  ಬಯಲುಸೀಮೆಗೆ ಮಳೆ ಅಪರೂಪ. ಅಂತರ್ಜಲದ ಮಾತಂತೂ ದೂರ. ನೀರಿಲ್ಲದೆ ಕೃಷಿ ಮಾಡುವಂತಿಲ್ಲ. ಕೊಳವೆ ಬಾವಿ ಕೊರೆಯುವುದೇ ಅಂತಿಮ ಆಯ್ಕೆ. ಬಹುತೇಕ ಸಂದರ್ಭಗಳಲ್ಲಿ ನೀರು ಸಿಗದೆ ನಿರುಪಯುಕ್ತವಾದಾಗ ಕೊರೆತ ನಿಲ್ಲಿಸಿ ಮರೆತುಬಿಡುವುದೇ ಹೆಚ್ಚು. ಕೇಸಿಂಗ್ ಪೈಪ್ಯನ್ನು ಮಣ್ಣಲ್ಲಿ ಉಳಿಸದೆ ತೆಗೆದುಬಿಡುತ್ತಾರೆ.  ಕಪ್ಪು ಮತ್ತು ಮರಳು ಮಿಶ್ರಿತ ಮಣ್ಣಾದುದರಿಂದ ಮೇಲ್ಪದರ ಕರಗಿ ಆಳಕ್ಕೆ ಇಳಿಯುತ್ತಿದ್ದಂತೆ ಬಾವಿಯ ವ್ಯಾಸ ಹಿರಿದಾಗುತ್ತದೆ. ಇವೆಲ್ಲ ಹೆಚ್ಚು ಜನಸಂಚಾರವಿರುವಲ್ಲಿ ಇರುವಂಥವುಗಳು. ಅಪಾಯದ ಸಾಧ್ಯತೆಯಿದ್ದರೂ ನೋಡಿಯೂ ನೋಡದಂತಿರುವುದು ಜಾಯಮಾನ.
                 ಕೇಸಿಂಗ್ ಪೈಪ್ ಇಲ್ಲದ ಬಾವಿಯ ಸುತ್ತ ಎರಡಡಿ ಮಣ್ಣನ್ನು ಅಗೆದು ದೊಡ್ಡ ಚಪ್ಪಡಿಕಲ್ಲನ್ನು ಹಾಸಿ ಮುಚ್ಚುವುದು ಒಂದು ವಿಧಾನ. ಕೇಸಿಂಗ್ ಪೈಪ್ ಇದ್ದ ಬಾವಿಗಾದರೆ ಅದಕ್ಕೆ ಸರಿಹೊಂದುವ ಇಟ್ಟಿಗೆ, ಸಿಮೆಂಟ್ ಬಳಸಿ ಮುಚ್ಚುವಿಕೆ. ಯೋಜನೆಗೆ ಪಂಚಾಯತ್ಗಳು ಸಾಥ್ ನೀಡಿದೆ. ಈ ಕೆಲಸಗಳಿಗೆ ತನುಶ್ರಮವೇ ಬಂಡವಾಳ. ಕೆಲವೆಡೆ ಚಿಕ್ಕಪುಟ್ಟ ವೆಚ್ಚವೂ ಬಂದಿದೆ.  
                 ಮೂರು ಜಿಲ್ಲೆಗಳಲ್ಲಿ ಇನ್ನೂರರಿಂದ ಐನೂರು ಅಡಿ ತನಕ ಕೊರೆಯಂತ್ರದ ಕೊಚ್ಚುಹಲ್ಲು ಇಳಿದಿದೆ. ಒಂದೊಂದು ತಾಲೂಕಿನಲ್ಲಿ ಏನಿಲ್ಲವೆಂದರೂ ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿ ಕೊಳವೆ ಬಾವಿಗಳಿವೆ. ಅವುಗಳಲ್ಲಿ ಮೂರನೇ ಒಂದು ವಿಫಲ. ಬಾಗೀರಥಿಗಾಗಿ ಇಪ್ಪತ್ತಕ್ಕೂ ಮಿಕ್ಕಿ ಬಾವಿಗಳನ್ನು ಕೊರೆದ ನಿದರ್ಶನಗಳಿವೆ. ಒಂದೊಂದು ಬಾವಿಗೆ ಲಕ್ಷದ ತನಕ ವೆಚ್ಚವಾದರೂ ಕೊರೆಯುವಲ್ಲಿ ಪೈಪೋಟಿ. ಸಣ್ಣ ರೈತರು ಕೈಸಾಲ ಯಾ ಬ್ಯಾಂಕ್ ಸಾಲ ಮಾಡಿ ಕೃಷಿ ಉಳಿಸಲು ಕೊಳವೆ ಬಾವಿ ಕೊರೆಸಲು ಮನ ಮಾಡುತ್ತಾರೆ, ಎನ್ನುತ್ತಾರೆ, ಯೋಜನೆಯ ಧಾರವಾಡ ವಲಯ ನಿರ್ದೇಶಕ ಜಯಶಂಕರ ಶರ್ಮ.
                   ಯೋಜನೆಯು ನಿರುಪಯುಕ್ತ ಕೊಳವೆಬಾವಿಗಳನ್ನು ಗೊತ್ತು ಮಾಡಲು ಹಳ್ಳಿಗಳಿಗೆ ಹೋದಾಗ ಜನರ ಸ್ಪಂದನ ಉತ್ತಮ. ಹೆಚ್ಚಿನೆಡೆ ತಂಡಕ್ಕೆ ಶ್ರಮಕೊಡದೆ ತಾವೇ ಗೊತ್ತು ಮಾಡುತ್ತಿದ್ದರು. ಮುಚ್ಚುವ ಕೆಲಸಕ್ಕೆ ತಾವೇ ಮುಂದಾಗುತ್ತಿದ್ದರು. ಈಚೆಗೆ ತಿಮ್ಮಣ್ಣ, ಅಕ್ಷತಾ ಸಾವಿನ ಪ್ರಕರಣ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಹಳ್ಳಿಗಳಲ್ಲಿ ನಿಜಕ್ಕೂ ದಿಗಿಲಿನ ಸಂಚಲನವಾಗಿತ್ತು. 'ಇದೊಂದು ಪುಣ್ಯದ ಕೆಲಸ' ಎಂದು ಕೈಜೋಡಿಸಿದವರೇ ಅಧಿಕ. ಒಂದು ಕೊಳವೆ ಬಾವಿಯನ್ನು ಮುಚ್ಚುವುದೆಂದರೆ ಒಬ್ಬ ಜೀವ ಉಳಿಸಿದಂತೆ, ಚನ್ನಗಿರಿ ತಾಲೂಕಿನ ನಲ್ಲೂರು ಶಶಿಕಲಾ ಭಾವುಕರಾಗುತ್ತಾರೆ.
              ’"ಕೊಳವೆ ಬಾವಿ ಕೊರೆಸುವುದು ದೊಡ್ಡ ಕೆಲಸವಲ್ಲ. ನಿರುಪಯುಕ್ತವಾದಾಗ ತಕ್ಷಣ ಮುಚ್ಚಿ ಬಿಡುವ ಕೆಲಸವೂ ನಡೆಯಬೇಕು. ಕೊರೆಯುವ ಮೊದಲೇ ಒಪ್ಪಂದ ಮಾಡಿಕೊಳ್ಳುವುದು ಸೂಕ್ತ” ಎನ್ನುವ ಅಭಿಪ್ರಾಯ ಸೆಂತೆಬೆನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಿತ್ರಮ್ಮ ಅವರದು.
               ಯೋಜನೆಯ ಅಭಿಯಾನಕ್ಕೆ ಒಂದು ವಾರದ ಸಿದ್ಧತೆ. ವ್ಯವಹಾರ ಜಾಲ ಗಟ್ಟಿಯಿದ್ದುದರಿಂದ ಜನರನ್ನು ಒಗ್ಗೂಡಿಸಲು ಯೋಜನೆಗೆ ಸುಲಭವಾಯಿತು. ಹಿಂದಿನ ವರುಷದ ಸ್ವಾತಂತ್ರ್ಯ ದಿನಾಚರಣೆಯಂದು ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡಿತ್ತು. ಈ ಬಾರಿಯೂ 'ಕನರ್ಾಟಕ ರಾಜ್ಯಾದ್ಯಂತ ನೈರ್ಮಲ್ಯ ಅಭಿಯಾನ' ಆಂದೋಳನದ ಜತೆಗೆ ಕೊಳವೆ ಬಾವಿ ಮುಚ್ಚುವಿಕೆ ಸೇರ್ಪಡೆ.
               ನಿರುಪಯುಕ್ತ ಬಾವಿಗಳನ್ನು ಮುಚ್ಚದೆ ಹಾಗೆ ಬಿಟ್ಟರೆ ಮಳೆ ಬಂದಾಗ ನೀರು ತುಂಬಿ ಅಂತರ್ಜಲ ಹೆಚ್ಚಾಗಬಹುದು ಎನ್ನುವ ಅಭಿಪ್ರಾಯ ಹಲವರಲ್ಲಿದೆ. ಇದು ಎಷ್ಟು ವಾಸ್ತವ ಎನ್ನುವ ಅಧ್ಯಯನ ಬೇಕಾಗಬಹುದು. ಅಪಾಯ ಎದುರಾದಾಗ ಹೊಣೆ ಯಾರ ಹೆಗಲಿಗೆ? ನೀರಿಂಗಿಸುವ ವೈಜ್ಞಾನಿಕ ವಿಧಾನವನ್ನು ತಿಳಿಸಿದರೆ ಪ್ರಯೋಜನವಾಗಬಹುದು, ಎನ್ನುತ್ತಾರೆ ಯೋಜನೆಯ ಚಿತ್ರದುರ್ಗ ಜಿಲ್ಲಾ ನಿದರ್ೆಶಕ ಸುಬ್ರಹ್ಮಣ್ಯ ಪ್ರಸಾದ್.
               ಸಂಘಸಂಸ್ಥೆಗಳು ಮನಸ್ಸು ಮಾಡಿದರೆ ಸಮಾಜಮುಖಿಯಾಗಿ ಹೇಗೆ ಕೆಲಸ ಮಾಡಬಹುದು ಎನ್ನುವುದನ್ನು ಯೋಜನೆ ಮಾಡಿ ತೋರಿಸಿದೆ. ಎಲ್ಲವನ್ನೂ ಸರಕಾರವೇ ಮಾಡಲಿ ಧೋರಣೆಗಿಂತ ಸ್ವತಃ ನಾವೇ ಕಾರ್ಯಕ್ಷೇತ್ರಕ್ಕಿಳಿದರೆ ಸಮಸ್ಯೆ ಹತ್ತಿಯಷ್ಟು ಹಗುರವಾಗುತ್ತದೆ. ರಾಜಕೀಯ, ಮತೀಯ, ಜಾತೀಯ ಭಾವಗಳನ್ನು ಮನಸ್ಸಿನಿಂದ ಕಿತ್ತುಹಾಕಿದರೆ ಕೆಲಸ ಹಗುರವಾಗುತ್ತದೆ. 

0 comments:

Post a Comment