Thursday, March 4, 2021

ನೈಜ ಘಟನೆಗಳ ನಿದರ್ಶನ

 - ಡಾ . ಬಿ . . ವಿವೇಕ ರೈ 

ಮಂಗಳೂರು

ಕೊರೋನ ಉಂಟುಮಾಡಿದ ಬಹುರೂಪಿ ಪಾಸಿಟಿವ್ ಪರಿಣಾಮಗಳನ್ನು ನೈಜ ಘಟನೆಗಳ ನಿದರ್ಶನಗಳ ಮೂಲಕ ಮನಮುಟ್ಟುವಂತೆ ವರ್ಣಿಸಿದ್ದೀರಿ . ಪುಸ್ತಕದ ಒಂದೊಂದು ಕಿರು ಕಥನವೂ ಬದುಕು ಕಟ್ಟುವ ಒಂದೊಂದು ಸಾಹಸಗಾಥೆಯಾಗಿದೆ . ಸಂಕಷ್ಟದ ಕಾಲದಲ್ಲಿ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ , ಹೊಸ ಬದುಕನ್ನು ಕಟ್ಟಬಹುದು ಎಂದು ಮಾಡಿ ತೋರಿಸಿದ ಜನರು ನಮಗೆ ನಿಜವಾದ ಮಾರ್ಗದರ್ಶಕರಾಗಿದ್ದಾರೆ . ನೂರು ಉಪದೇಶಗಳಿಗಿಂತ ಇಂತಹ ಒಂದು ದಿಟ್ಟಹೆಜ್ಜೆ ಹೆಚ್ಚು ಆತ್ಮವಿಶ್ವಾಸವನ್ನು ಉಂಟುಮಾಡುತ್ತದೆ

ಇಲ್ಲಿನ ಕಥನಗಳ ಇನ್ನೊಂದು ಪಾಸಿಟಿವ್ ಅಂಶವೆಂದರೆ ಕೊರೋನ ಪೀಡಿತ ಕಾಲಾವಧಿಯಲ್ಲಿ ಜನರು ಹಳ್ಳಿಗಳೆಗೆ ಮರಳಿದ್ದು , ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು , ಗ್ರಾಮೀಣ ಬದುಕಿನ ಜೊತೆಗೆ ಮನುಷ್ಯ ಸಂಬಂಧಗಳನ್ನು ಬೆಸೆದದ್ದು . ಅಂತರ್ಜಾಲದ ನೆಟ್ವರ್ಕ್  ಮತ್ತು ಮನುಷ್ಯ ಸಂಬಂಧದ ನೆಟ್ವರ್ಕ್ ಗಳು ಮುಖಾಮುಖಿಯಾದದ್ದು , ಕೆಲವೊಮ್ಮೆ ಪೂರಕವಾದದ್ದು

ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆ ಮತ್ತು ಪರ್ಯಾಯ ವ್ಯವಸ್ಥೆಗಳ ದೃಷ್ಟಿಯಿಂದ  ನಾಗೇಂದ್ರರ ಮೊಬೈಲ್ ದಾನದ ಉಪಕ್ರಮ , ಧರ್ಮಸ್ಥಳದ ಧರ್ಮಾಧಿಕಾರಿ ಡಾವೀರೇಂದ್ರ ಹೆಗ್ಗಡೆ ಅವರ ಜ್ಞಾನತಾಣದ ಮೂಲಕ ವಿದ್ಯಾರ್ಥಿಗಳಿಗೆ  ಟ್ಯಾಬ್ ವಿತರಣೆ , ಚಿಕ್ಕೇನಹಳ್ಳಿಯ ಮಾತೃಭೂಮಿ ಸೇವಾ ಪೌಂಡೇಶನ್ ರೂಪಿಸಿದ ವೈ ಫೈ ಹಳ್ಳಿ , ನೆಟ್ ವರ್ಕ್ ಇಲ್ಲದ ಮನೆಗಳಿಗೆ ಶಿಕ್ಷಕರು ಹೋಗಿ ಮಕ್ಕಳಿಗೆ ಪಾಠಮಾಡಿದ ಸುಳ್ಯದ ಪ್ರಯೋಗ - ಇವು ಹಣದ ದೃಷ್ಟಿಯ 'ಧನಾತ್ಮಕ ಚಿಂತನೆಗಳು ' ಅಲ್ಲ ! ಇವೆಲ್ಲ ಶಿಕ್ಷಣ ಪ್ರೀತಿಯ ಸಕಾರಾತ್ಮಕ ಮನೋಧರ್ಮದ ಧನಾತ್ಮಕ ಹೆಜ್ಜೆಗಳು

ಮರಳಿ ಹಳ್ಳಿಗೆ ಬಂದು ಕೃಷಿಯನ್ನು ಬದುಕಿನ ಜೀವಧಾತುವಾಗಿ ಸ್ವೀಕರಿಸಿದವರ ಕಥನಗಳು ಸಾಕಷ್ಠಿವೆ : ಅಡಿಕೆ ಮರ ಏರುವ ವಿದ್ಯೆ ಕಲಿತ ಯುವಕರು , ನಗರದಿಂದ ಹಳ್ಳಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿದ ರಮೇಶ , ಬೆಂಗಳೂರಿನಿಂದ ಹಳ್ಳಿಗೆ ಬಂದು ತರಕಾರಿ ಬೆಳೆದು ಮಾರಾಟಮಾಡಿ ಹೊಸ ಬದುಕು ಕಂಡ  ರವಿ , ಹಳ್ಳಿಗೆ ಬಂದು ಅಡಿಕೆ ಕೃಷಿಯೊಂದಿಗೆ  ತರಕಾರಿ ಬೆಲೆ ಬೆಳೆದು ಬದುಕು ಸಾಗಿಸಲು ನಿರ್ಧರಿಸಿದ ಇಂಜಿನಿಯರ್ ದಂಪತಿಗಳು ನಿಖಿಲ್ - ಲತಾ , ಅಧ್ಯಾಪಕ ವೃತ್ತಿ ಬಿಟ್ಟು ಹಳ್ಳಿಯಲ್ಲಿ ಭತ್ತದ ಕೃಷಿ ಶುರುಮಾಡಿದ ಕಿಶೋರ್ ಕುಮಾರ್ : ಈರೀತಿ ಮಣ್ಣಿನ ಪ್ರೀತಿಯೇ ಅವರ ಅನ್ನದ ಬಟ್ಟಲನ್ನು ತುಂಬಿದ ಸಂತೃಪ್ತಿಯ ಕಥನಗಳು ಇಲ್ಲಿವೆ

     ಲಾಕ್ ಡೌನ್ ಅವಧಿಯಲ್ಲಿ ಮತ್ತು ಬಳಿಕ ಜನರು ಹೆಚ್ಚು ಹಂಬಲಿಸಿದ್ದು ತರಕಾರಿಗಳಿಗೆ . ಹೊರಗಿನಿಂದ ತರಕಾರಿಗಳ ಪೂರೈಕೆ  ಇರಲಿಲ್ಲ .ಸ್ಥಳೀಯವಾಗಿ ತರಕಾರಿಗಳನ್ನು ಹೆಚ್ಚು ಬೆಳೆಯುತ್ತಿರಲಿಲ್ಲ . ಹಾಗಾಗಿ ತರಕಾರಿಗಳನ್ನೇ ಬೆಳೆಸಲು ಮತ್ತು ಜನರಿಗೆ ಪೂರೈಸಲು ನಡೆಸಿದ ಸಾಹಸಗಳ ಕಥನಗಳು ಸಂಕಲನದಲ್ಲಿ ಸಾಕಷ್ಟಿವೆ : 'ತರಕಾರಿ ಕೃಷಿಕರ ಮಾತಿನ ತಾಣ 'ದಲ್ಲಿ ಶ್ರೀಪಡ್ರೆಯವರ ನೇತೃತ್ವದಲ್ಲಿ ನಿರ್ಮಾಣವಾದ ಏಟಿವಿ ಎಂಬ ವಾಟ್ಸ್ ಅಪ್ ಗುಂಪಿನ ಮೂಲಕ ತರಕಾರಿ ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿದ್ದು , ಮಹಾರಾಷ್ಟ್ರದ ಅವಿನಾಶ್ ಪ್ರಯತ್ನದಿಂದ ಕೃಷಿಕರೇ ಗ್ರಾಹಕರ ಮನೆಬಾಗಿಲಿಗೆ ತರಕಾರಿ ಹಣ್ಣುಗಳನ್ನು ಒಯ್ದು ಮಾರಿದ್ದು , 'ನಮ್ಮ ಊಟಕ್ಕೆ ನಮ್ಮದೇ ತರಕಾರಿ ' ಎನ್ನುವ ಮನಸ್ಥಿತಿಯಿಂದ ಸಾವಯವ ತರಕಾರಿ ಬೆಳೆಸಲು ಶುರುಮಾಡಿದ ಕೃಷಿಕರ ಸ್ವಾವಲಂಬನೆಯ ಬೇರಿಳಿಸುತ್ತಿರುವ ಕರಾವಳಿ , ಧಾರವಾಡ ಮಾಲತಿ ಮುಕುಂದ ಅವರು ಮಾವಿನಹಣ್ಣುಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಸಿದ್ಧಪಡಿಸಿ ಅವುಗಳ ಮಾರಾಟದಿಂದ ಲಕ್ಷ ಮೀರಿದ ಸಂಪಾದನೆ ಮಾಡಿದ್ದು , ಮೀಯಪದವಿನ ಚೌಟರ ಚಾವಡಿಯಲ್ಲಿ ಸೇರಿದ ಕೃಷಿಕರು ವಾಟ್ಸ್ ಅಪ್ ಬಳಗ ಮಾಡಿಕೊಂಡು ಸಾವಯವ ಕೃಷಿ ಮಳಿಗೆಗಳನ್ನು ತೆರೆದದ್ದು, ಕುಳಾಯಿ ಬಳಿ ಖಾಲಿ ಜಾಗದಲ್ಲಿ ನಿವೃತ್ತ ಹಿರಿಯರು ಕೈತೋಟ ಮಾಡಿ ತರಕಾರಿ ಬೆಳೆಸಿದ್ದು  - ಇಂತಹ ಹೊಸ ಆವಿಷ್ಕಾರದ ಸಂಗತಿಗಳು ಇಲ್ಲಿವೆ

ಅಡಿಕೆ ಕೃಷಿಗೆ ಸಂಬಂಧಿಸಿದಂತೆ 'ಕೈಹಿಡಿದ ಅಡಿಕೆ ಖೇಣಿ ' ಮತ್ತು 'ಮರುಜೀವಗೊಂಡ ಅಡಿಕೆ ತೋಟ ' ಕತೂಹಲಕಾರಿಯಾಗಿವೆ . ಡಿಜಿಟಲ್ ತಂತ್ರಜ್ನಾದ ಪಾಸಿಟಿವ್ ಪ್ರಯೋಜನಗಳಲ್ಲಿ 'ದಿನಸಿ ವ್ಯಾಪಾರಕ್ಕೆ ಡಿಜಿಟಲ್ ಸ್ಪರ್ಶ ' ಲೇಖನ ಒಳ್ಳೆಯ ಉದಾಹರಣೆ .ಹಾಗೆಯೇ ಹಳೆಯ ಸಹಪಾಠಿಗಳು ಮತ್ತೆ  ಒಗ್ಗೂಡುವ ಮತ್ತು ಸಂಬಂಧ ಬೆಸೆದ ಗಾಥೆಯೂ ಹ್ರದಯಸ್ಪರ್ಶಿಯಾಗಿದೆ . ಅಲ್ಲಿ ಕೇವಲ ಒಟ್ಟಿಗೆ ಸೇರುವುದಷ್ಟೇ  ಅಲ್ಲದೆ ಕಷ್ಟದಲ್ಲಿ ಇರುವವರಿಗೆ ಪರಸ್ಪರ ನೆರವಾಗುವ ಮಾನವೀಯ ಸ್ಪರ್ಶ  ಇದೆ

     ಕೊರೋನ ಕಾಲದಲ್ಲಿ ಮನೆಯಲ್ಲೇ ಉಳಿಯಬೇಕಾಗಿ ಬಂದವರು ಅಡುಗೆ ಮಾಡಲು ಕಲಿತದ್ದು , ಮನೆಯ ಊಟದಲ್ಲಿ ರುಚಿ ಕಂಡದ್ದು , ಊಟ ಬೇಕಾದವರಿಗೆ ಬುತ್ತಿ ಊಟವನ್ನು ಪೂರೈಕೆಮಾಡಿದ್ದು , ಬಾಬಣ್ಣ ಉಣ್ಣಿಯಪ್ಪ ಮಾಡಿ ತಾನೂ  ಉಣ್ಣುವ ಸಂತೃಪ್ತಿ ಪಡೆದದ್ದು : ಇವು ಕೂಡಾ ಕೊರೋನ ಯುಗದ ಇತ್ಯಾತ್ಮಕ ಉತ್ಪನ್ನಗಳು

   ಯಕ್ಷಗಾನದ ಕ್ಷೇತ್ರದಲ್ಲಿ ನಡೆಸಿದ ಪ್ರಯೋಗಗಳನ್ನು ನಾನು ಸ್ವತಃ ಆನ್ ಲೈನ್ ನಲ್ಲಿ ನೋಡಿದ್ದೇನೆ .ನಾ ಕಾರಂತ ಪೆರಾಜೆ ಅವರು ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ವತಿಯಿಂದ ಸಿರಿಬಾಗಿಲು ರಾಮಕೃಷ್ಣ ಮಯ್ಯರು ನಡೆಸಿದ ಪ್ರಯೋಗಗಳನ್ನು ವಿವರಿಸಿದ್ದಾರೆ . ಎಲ್ಲ ಪ್ರಯೋಗಳನ್ನು ನಾನು ಆನ್ ಲೈನ್ ನಲ್ಲಿ ನೋಡಿದ್ದೇನೆ .ಹಾಗೆಯೇ ಪಟ್ಲ ಸತೀಶ ಶೆಟ್ಟರು ನಡೆಸಿದ ಯಕ್ಷಗಾನ ತಾಳಮದ್ದಳೆ ಮತ್ತು ಬಯಲಾಟಗಳನ್ನೂ ನೋಡಿದ್ದೇನೆ .ಅದೇ ರೀತಿ  ಉಜಿರೆ ಅಶೋಕ ಭಟ್ಟರು ನಡೆಸಿದ ತಾಳಮದ್ದಳೆ ಪ್ರದರ್ಶನಗಳನ್ನೂ ಆನ್ ಲೈನ್ ನಲ್ಲಿ ವೀಕ್ಷಿಸಿದ್ದೇನೆ . ಇವರು ಎಲ್ಲರೂ ಮಾಡಿದ ಸಾಹಸದ ಪ್ರಯೋಗಳಿಂದಾಗಿ ಈಗ ಆನ್ ಲೈನ್ ನಲ್ಲಿ ಯಕ್ಷಗಾನವನ್ನು ನೋಡುವವರ ಪ್ರಮಾಣ  ಹೆಚ್ಚಾಗಿದೆ . ಯಕ್ಷಜಾಗೃತಿಯ ಬಗ್ಗೆ ನಾ ಕಾರಂತ ಪೆರಾಜೆಯವರು  ಕೊಟ್ಟ ಮಾಹಿತಿಗಳು ಸಾಂಸ್ಕೃತಿಕ ಸಂಗತಿಗಳ ದಾಖಲೀಕರಣದ ನೆಲೆಯಿಂದಲೂ ಮುಖ್ಯವಾಗಿವೆ

ಬದುಕನ್ನು ಹೊಸತಾಗಿ ಕಟ್ಟುವವರು , ಹಳ್ಳಿಗಳ ನೈಸರ್ಗಿಕ ಸುಖವನ್ನು ಅರಸುವವರು , ಕೃಷಿಯ ಮೂಲಕ ಜೀವನಪ್ರೀತಿಯನ್ನು ಬೆಳೆಸಿಕೊಳ್ಳುವವರು , ಸಾವಯವ ಸಾಮೂಹಿಕ ಜೀವನಕ್ಕೆ ಒಲಿಯುವವರು ಓದಬೇಕಾದ ಪುಸ್ತಕ ' ಮುಸ್ಸಂಜೆಯ ಹೊಂಗಿರಣ ' . ಅದು ಗಾತ್ರದಲ್ಲಿ ಕಿರಿದಾದುದು , ಸೂತ್ರದಲ್ಲಿ ಹಿರಿದಾದುದು


0 comments:

Post a Comment