Saturday, July 3, 2021

ವರ್ಕ್ ಇದೆ, ನೆಟ್ವರ್ಕ ಇಲ್ಲ..!


 

ಕನ್ನಾಡಿನ ಚಿಣ್ಣರಿಗೆ ಆನ್ಲೈನ್ ಶಿಕ್ಷಣ ಶುರುವಾಗಿದೆ. ಚಂದನ ವಾಹಿನಿಯಲ್ಲಿ ಪಾಠಗಳು ಪ್ರಸಾರವಾಗುತ್ತಿವೆ. ತಮ್ಮೆದುರು ವಿದ್ಯಾರ್ಥಿಗಳಿದ್ದಾರೆಂದು ಊಹಿಸಿಕೊಂಡು ಆಧ್ಯಾಪಕರು ಪಾಠ ಮಾಡಬೇಕಾದ ಮನಸ್ಥಿತಿಯನ್ನು ರೂಪಿಸಿಕೊಂಡಿದ್ದಾರೆ. ಪ್ರಾಥಮಿಕ, ಪ್ರೌಢ ಶಾಲೆಯ ಅಧ್ಯಾಪಕರಿಗೆ ಮಕ್ಕಳ ಮನಸ್ಸಿನ ಆಳ, ಅಗಲಗಳ ವಿಸ್ತಾರ ಗೊತ್ತು. ಮಕ್ಕಳೆದುರು ಮಗುವಾಗುತ್ತಾರೆ ಕೂಡಾ. ಮಕ್ಕಳಿಗೆ ತಿಳಿಯುವಂತೆ ಪಾಠ ಮಾಡಬಲ್ಲರು. ಆದರೆ ಪದವಿ ತರಗತಿಗೆ ಪಾಠ ಮಾಡುವ ಉಪನ್ಯಾಸಕರು ಈ ಮಕ್ಕಳಿಗೆ ಪಾಠ ಮಾಡಿದರೆ ಹೇಗಿದ್ದೀತು? ಅಲ್ಲಿ ಮಗುತನವಿರುವುದಿಲ್ಲ.

 ಶಾಲೆಗಳು ತೆರೆಯದಿರುವುದರಿಂದ ಆನ್ಲೈನ್ ಶಿಕ್ಷಣವೊಂದೇ ಪರ್ಯಾಯ ಹಾದಿ. ಇದು ಒಪ್ಪತಕ್ಕ ವಿಚಾರ. ಇಂದು ತಂತ್ರಜ್ಞಾನಗಳು ಬೆರಳಿನ ತುದಿಯಲ್ಲಿವೆ. ಮನೆಯ ಮೇಜಿನ ಮೇಲೆ ವಿವಿಧ ಪ್ಯಾಕೇಜ್ಗಳು ಕುಳಿತು ಅನುಷ್ಠಾನಕ್ಕೆ ಕಾಯುತ್ತಿವೆ. ನಿಗದಿತ ಸಮಯಕ್ಕೆ ವಿದ್ಯಾರ್ಥಿ ಆನ್ಲೈನ್ ತರಗತಿಗೆ ಹಾಜರಾದರೆ ಆಯಿತು. ಆಗ ಹೆತ್ತವರ ಕಾವಲು ಹೇಗೂ ಬೇಕು.

          ಆನ್ಲೈನ್ ಶಿಕ್ಷಣವು ನೆಟ್ವವರ್ಕ್ ಕೇಂದ್ರಿತ ವ್ಯವಸ್ಥೆಯಲ್ಲಿ ನಡೆಯುತ್ತವೆ. ಪಟ್ಟಣ ವ್ಯಾಪ್ತಿಯಲ್ಲಿ ನೆಟ್ವರ್ಕಿಗೆ ತೊಂದರೆಯಿಲ್ಲ. ನೆಟ್ವರ್ಕ್  ಸಿಗದ ಗ್ರಾಮೀಣ ಪ್ರದೇಶಗಳಲ್ಲಿ ಆನ್ಲೈನ್ ಶಿಕ್ಷಣಕ್ಕೆ ವಿದ್ಯಾರ್ಥಿಗಳು, ಹೆತ್ತವರು ಒದ್ದಾಡುತ್ತಿದ್ದಾರೆ. ಮಕ್ಕಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಒಂದು ದಿನ ತಪ್ಪಿದರೆ ಅಂದಿನ ಪಾಠವೂ ತಪ್ಪಿದಂತೆ. ಶಾಲೆಯಲ್ಲಾದರೆ ಅಧ್ಯಾಪಕರಲ್ಲಿ ಕೇಳಬಹುದು. ಇಲ್ಲಿ ದೂರವಾಣಿ ಮಾಡಿ ಸಂಬಂಧಿತ ಅಧ್ಯಾಪಕರನ್ನು ಸಂಪರ್ಕಿಸಬೇಕು. 

          ಜಾಲತಾಣದಲ್ಲಿ ಚಿತ್ರವೊಂದು ಹರಿದಾಡುತ್ತಾ ಬಂತು - ಮನೆಯ ಸನಿಹದ ಗುಡ್ಡದಲ್ಲಿ ಶೆಡ್ ನಿರ್ಮಿಸಿ ಅಲ್ಲಿ ಆನ್ಲೈನ್ ಪಾಠಕ್ಕೆ ವಿದ್ಯಾರ್ಥಿ ಅಣಿಯಾಗುತ್ತಿದ್ದಾನೆ. ಆತನ ಕೈಯಲ್ಲಿ ಲ್ಯಾಪ್ಟಾಪ್ ಇದೆ. ಗುಡ್ಡದ ತುದಿಯಲ್ಲಿ ಸ್ವಲ್ಪವಾದರೂ ನೆಟ್ವರ್ಕ್ ಸಿಗಬಹುದೆಂಬ ನಿರೀಕ್ಷೆ. ಹಳ್ಳಿಯಲ್ಲಿ ಸ್ಮಾರ್ಟ್ ಫೋನಿಗೆ ನೆಟ್ವರ್ಕ್ ಯಾವಾಗಲು ಗುಡ್ಡವನ್ನೋ, ಎತ್ತರದ ಮರವನ್ನೋ ಏರಲೇಬೇಕು! ಬಹುತೇಕ ಹಳ್ಳಿಗಳಿಂದು ನೆಟ್ವರ್ಕ್ ಸಮಸ್ಯೆಯಿಂದ ಬಾಧಿತವಾಗಿದ್ದು ಆನ್ಲೈನ್ ಕ್ಲಾಸುಗಳು ತಲಪುವಲ್ಲಿ ಏದುಸಿರು ಬಿಡುತ್ತವೆ.

          ಇಂತಹ ಸಮಸ್ಯೆಗೆ ಸುಳ್ಯದಲ್ಲೊಂದು ಪ್ರಯತ್ನವಾಗಿದೆ. ಸರಕಾರಿ ಶಾಲೆಗಳ ಶಿಕ್ಷಕರ ತಂಡವು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪಾಠ ಮಾಡಿದೆ. ನೆಟ್ವರ್ಕ್ ಇಲ್ಲದ, ಸ್ಮಾರ್ಟ್ ಫೋನ್ ಇಲ್ಲದವರ ಮನೆಯಲ್ಲೇ ಪಾಠದ ವ್ಯವಸ್ಥೆ. ಶಿಕ್ಷಣದಿಂದ ಯಾರೂ ವಂಚಿತರಾಗಕೂಡದು ಎಂಬ ಸರಕಾರದ ಆಶಯಕ್ಕೆ ಅಧ್ಯಾಪಕರು ಮಾನ ನೀಡಿದ್ದಾರೆ. ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಧನಾತ್ಮಕ ಯೋಚನೆಯ ಶಿಕ್ಷಕರ ತಂಡವು ಜೂನ್ ತಿಂಗಳಲ್ಲಿ ರಂಗಕ್ಕಿಳಿದಿದೆ. ಪುತ್ತೂರು ತಾಲೂಕಿನಲ್ಲೂ ಕೆಲವು ಸರಕಾರಿ ಶಾಲೆಯ ಶಿಕ್ಷಕರು ಕೂಡಾ ಓದು-ಬರಹಕ್ಕೆ ಉತ್ತೇಜನ ನೀಡಿದ್ದಾರೆ. ಇವೆಲ್ಲಾ ಕೊರೊನಾ ಪಾಸಿಟಿವ್ ಸಂದರ್ಭದ ನಿಜಾರ್ಥದ ಪಾಸಿಟಿವ್ ಸಂಗತಿಗಳು.

          ಜೂನ್ ತಿಂಗಳಲ್ಲಿ ಶಾಲಾರಂಭ ಆಗುತ್ತದೆ. ಮನೆಮನೆಗಳಲ್ಲಿ ಮೇ ತಿಂಗಳಿನಲ್ಲೇ ಯೂನಿಫಾರ್ಮ್, ಪುಸ್ತಕ, ಶುಲ್ಕ.. ಹೀಗೆ ಸಿದ್ಧತೆಗಳು ಗರಿಗೆದರುತ್ತದೆ. ಪುಸ್ತಕದ ಭಾರವನ್ನು ಬೆನ್ನಿಗೆ ಏರಿಸಿ ಶಾಲೆಗೆ ಹೊರಡುವ ದೃಶ್ಯವನ್ನು ಕಣ್ತುಂಬಿಕೊಳ್ಳುವ, ಸಂಜೆ ಮನೆಯಲ್ಲಿ ಶಾಲೆಯಲ್ಲಾಗಿರುವ ವಿದ್ಯಮಾನಗಳ ವಿವರಣೆಗಳಿಗೆ ಕಿವಿಯಾಗುತ್ತಿರುವ ಹೆತ್ತವರು. ಇದು ಬದುಕಿನ ಅಲಾರಂ. ಈಗ ಮಕ್ಕಳು ಶಾಲೆಗೆ ಹೋಗಲಾಗದ ಸ್ಥಿತಿ. ಮನೆಯಲ್ಲಿ ಕಲಿಯಲಾಗದ ಮತ್ತು ಕಲಿಸಲಾಗದ ಮಾನಸಿಕ ಒತ್ತಡ. ತಮ್ಮ ನಿಯಂತ್ರಣಕ್ಕೆ ಸಿಕ್ಕದ ಮಕ್ಕಳ ಚಟುವಟಿಕೆಗಳು. ಇವೆಲ್ಲಾ ಹೆತ್ತವರಿಗೆ ಭಾರವಾದರೂ ಅದನ್ನು ಭಾರ ಎಂದು ತೋರಿಸದ ಸಹನೆಯು ಅರಿವಿಲ್ಲದೆ ರೂಢಿಯಾಗಿದೆ.

          ಸ್ಮಾರ್ಟ್ ಫೋನ್ಗಳು ಕೈಯಲ್ಲಿ ಇಲ್ಲವೆಂದಾದರೆ ಏನನ್ನೋ ಕಳಕೊಂಡ ಅನುಭವ. ಕ್ಷಣಕ್ಕೊಮ್ಮೆ ಮೆಸ್ಸೇಜ್ಗಳನ್ನು ನೋಡುತ್ತಾ, ಕಳುಹಿಸುತ್ತಾ, ತಮ್ಮಷ್ಟಕ್ಕೆ ನಗುವ ಕ್ಷಿಪ್ರಸುಖಿಗಳ ಸುಖಾನುಭವದ ದೃಶ್ಯಗಳು. ಈ ಖುಷಿಯನ್ನು ಅನುಭವಿಸದ, ಸ್ಮಾರ್ಟ್ ಫೋನ್ಗಳೇ ಇಲ್ಲದ ಮಂದಿ ಇಲ್ವಾ?  ವಾರಕ್ಕೆ ನಾಲ್ಕು ದಿವಸ ಕೈಕೊಡುವ ಸ್ಥಿರ ದೂರವಾಣಿ ಬಿಟ್ಟರೆ, ಬೇರೆ ಯಾವುದೇ ನೆಟ್ವರ್ಕ್ ಸಿಗದಲ್ಲಿ ಆನ್ಲೈನ್ ಶಿಕ್ಷಣವು ವಿದ್ಯಾರ್ಥಿಗಳನ್ನು ಹೇಗೆ ತಲುಪಬಹುದು?

          ಇಷ್ಟೆಲ್ಲಾ ಯೋಚನೆಗಳು ರಿಂಗಣಿಸುತ್ತಿದ್ದಾಗ ಗದಗ ಜಿಲ್ಲೆಯ ನರಗುಂದ ತಾಲೂಕಿನ ನಾಗನೂರು ಗ್ರಾಮದ ಘಟನೆಯೊಂದು ಮನಕಲಕಿತು - ತನ್ನ ಇಬ್ಬರು ಮಕ್ಕಳಿಗೆ ಆನ್ಲೈನ್ ಶಿಕ್ಷಣದಲ್ಲಿ ಭಾಗಿಯಾಗಲು ಮನೆಯಲ್ಲಿ ಟಿವಿ ಇಲ್ಲ. ಅವರಿಗೂ ಶಿಕ್ಷಣ ಸಿಗಬೇಕು ಎಂದು ಅವರಮ್ಮ ಕಸ್ತೂರಿ ಚಲವಾದಿ ತನ್ನ ಮಾಂಗಲ್ಯವನ್ನು ಅಡವಿಟ್ಟು ಟಿವಿ ಖರೀದಿಸಿದರು. ಮಾಧ್ಯಮದಲ್ಲದು ಸುದ್ದಿಯಾಯಿತು.

ನೆಟ್ವರ್ಕ್ ಶಿಕ್ಷಣದ ಯಶವನ್ನು ಹೇಳುವಾಗ, ಅದು ಸಿಗದೆ ಒದ್ದಾಡುವ ಮನಸ್ಸುಗಳೂ ನೆನಪಾಗಬೇಕು. ಒಂದು ವರುಷ ಶಾಲೆಗೆ ಹೋಗದಿದ್ದರೆ ತೊಂದರೆಯಿಲ್ಲ. - ಕೊರೊನಾ ಭಯದಿಂದ ಅಪ್ಪಾಮ್ಮ ಆಡುವ ಮಾತುಗಳು ವಾಸ್ತವದ ಅಣಕ. ಮಕ್ಕಳ ಮನಸ್ಸನ್ನು ಓದಲು ಬಂದರೆ ಇವೆಲ್ಲಾ ಅರ್ಥವಾಗುತ್ತದೆ. ಪಠ್ಯದ ಹೊರತಾಗಿ ಕಲಿಯುವಂತಹ ಸಂವಹನ, ಭಾಷೆ, ಕ್ರೀಡೆ, ಸೌಹಾರ್ದತೆ, ಮನೋರಂಜನೆ.. ಇತ್ಯಾದಿಗಳು ಮನೆಯಲ್ಲಿ ನೀಡಲು ಸಾಧ್ಯವೇ?

0 comments:

Post a Comment