ದಶಕದಾಚೆಗಿನ ನೆನಪು…. (ಸುಧಾದಲ್ಲಿ ಪ್ರಕಟ)
“ನಮಗ ಸಾಲಿ ಬ್ಯಾಡ ಸಾರ್, ಮಕ್ಳನ್ನ ದೊಡ್ಡ ಸಾಲಿಗೆ ಹಾಕುದಿಲ್ಲ. ಅದ್ರ ಬದ್ಲಿ ಕಂಬಳಿ ಕೆಲಸಕ್ಕ ಕಳಿಸಿದ್ರ ಪಗಾರ ಸಿಗ್ತೈತಿ. ನಮಗೊಂದ ಜೀವನಕ್ಕ ಆಧಾರ ಆಗ್ತೈತ್ರಿ” ಕುರುಬರಗಲ್ಲಿಯ ಮಹಾದೇವಿಯವರ ಮಾತಿಗೆ ಅಲ್ಲಿ ದುಡಿಯುತ್ತಿದ್ದ ಮಕ್ಕಳು ಸಾಕ್ಷಿಯಾದರು.
ಬೆಳಗಾವಿ ಜಿಲ್ಲೆಯ ಕೋಕಟನೂರಿನ ಕುರುಬರಗಲ್ಲಿ ಹಳ್ಳಿಯು ಕಂಬಳಿ ಉತ್ಪಾದನೆಗೆ ಹೆಸರುವಾಸಿ. ನಾಲ್ಕು ದಶಕಗಳಿಂದಲೂ ಪಾರಂಪರಿಕ ವೃತ್ತಿ. ಉತ್ಪನ್ನ ತಯಾರಿಗೆ ಯಂತ್ರಗಳಿಲ್ಲ, ಎಲ್ಲವೂ ಕೈಚಾಲಿತ. ಸುಮಾರು ಐವತ್ತು ಕುಟುಂಬ ಕಂಬಳಿಯನ್ನು ನಂಬಿದೆ. ಕಂಬಳಿ ಅವರ ಕೈಬಿಟ್ಟಿಲ್ಲ. ಕಂಬಳಿಯ ಮುಖ್ಯ ಕಚ್ಚಾವಸ್ತು - ಕುರಿಯ ಉಣ್ಣೆ (ಕುರಿಉಣ್ಣಿ). ಹುಬ್ಬಳ್ಳಿಯಿಂದ ಲೋಡುಗಟ್ಟಲೆ ತರಿಸಿಕೊಳ್ಳುತ್ತಾರೆ.
ಖರೀದಿಸಿದ ಉಣ್ಣೆಯನ್ನು ಶುಚಿಗೊಳಿಸುವುದು ಮೊದಲ ಕೆಲಸ. ಕಪ್ಪು, ಬಿಳಿ, ನೆರೆ ಬಣ್ಣದ ಉಣ್ಣೆಗಳು ಮಿಶ್ರವಾಗಿರುತ್ತವೆ. ಇದನ್ನು ಪ್ರತ್ಯಪ್ರತ್ಯೇಕವಾಗಿ ಬಿಡಿಸಿ, ಶುಚಿಗೊಳಿಸಿದ ಬಳಿಕವಷ್ಟೇ ತಕಲಿಯಲ್ಲಿ ನೂಲು ತೆಗೆವ ಕೆಲಸ. “ಈ ನೂಲು ತಗ್ಯಾಕ ಒಂದು ಯಂತ್ರ ಐತಿ. ಆದ್ರ ಸ್ವಲ್ಪ ಮಂದಿ ಅದನ್ನ ಉಪಯೋಗಿಸ್ತಾರ ಸ್ವಲ್ಪ ಮಂದಿ ಕೈಲೇ ತಗಿತೀವ್ರಿ. ಗಟ್ಟಿ ಇರತೈತಿ, ಚಲೋನೂ ಬರತೈತ್ರಿ” ಎನ್ನುತ್ತಾ ನೂಲು ತೆಗೆಯುವುದರಲ್ಲೇ ಮಗ್ನರಾಗುತ್ತಾರೆ ಮಹಾದೇವಿ.
ಒಂದು ಕಂಬಳಿ ನೇಯ್ಗೆಗೆ ಸುಮಾರು ನಾಲ್ಕು ಕಿಲೋ ಉಣ್ಣೆಯನೂಲು ಬೇಕು. ಮಾರುಕಟ್ಟೆಯಲ್ಲಿ ಒಂದು ಕಿಲೋ ಉಣ್ಣಿಗೆ ನಲವತ್ತರಿಂದ ಐವತ್ತು ರೂಪಾಯಿ. ಶುಚಿಗೊಳಿಸಿದ ಉಣ್ಣಿಗೆ 150 ರೂಪಾಯಿ. ಕಂಬಳಿ ನೇಯ್ಗೆಯು ರಟ್ಟೆ ಶ್ರಮದ ಕೆಲಸ. ನೇಯ್ಗೆಯ ಬಳಿಕ ಗಡಸು ಬರಲು ಹುಣಸೆ ಬೀಜದ ಸ್ಟಾರ್ಚ್ ಲೇಪನ. ಕಪ್ಪು ವರ್ಣದ ಕಂಬಳಿ ಪ್ರಥಮ ದರ್ಜೆ, ಕಪ್ಪು-ಬಿಳುಪು ವರ್ಣದ್ದು ಸೆಕೆಂಡ್ ಕ್ವಾಲಿಟಿ ಎಂಬ ನಿರ್ಣಯ. ದರದಲ್ಲೂ ವ್ಯತ್ಯಾಸ.
ಸಾಮಾನ್ಯವಾಗಿ ಒಬ್ಬರು ವಾರಕ್ಕೆ 3 ರಿಂದ 4 ಕಂಬಳಿ ತಯಾರಿಸುತ್ತಾರೆ. ಕನಿಷ್ಠ ದರ ಒಂದು ಸಾವಿರ ರೂಪಾಯಿ. ಕಚ್ಚಾವಸ್ತು, ಸಾರಿಗೆ, ದುಡಿಮೆ ಎಲ್ಲವನ್ನೂ ಗಣನೆಗೆ ತೆಕ್ಕೊಂಡು, ಜತೆಸೇರಿ ಚರ್ಚಿಸಿ ದರ ನಿರ್ಧಾರ ಮಾಡುತ್ತಾರೆ. ಸಂಕೇಶ್ವರ, ರಾಯಭಾಗ, ನಿಪ್ಪಾಣಿಯ ಖಾಯಂ ಗಿರಾಕಿಗಳು ಕಂಬಳಿಯನ್ನು ರಖಂ ಆಗಿ ಖರೀದಿಸಿ ಒಯ್ಯುತ್ತಾರೆ. ನಂಬುಗೆಯ ವ್ಯವಹಾರ. ಮೋಸಗಾರಿಕೆ ಇಲ್ಲದಿಲ್ಲ. ಸ್ಥಳೀಯ ಮಾರುಕಟ್ಟೆ ಸಣ್ಣದಲ್ಲ.
ವರುಷಕ್ಕೊಂದು ಬಾರಿ ಊರಿನಲ್ಲಿ ಎರಡು ಜಾತ್ರೆಗಳು ನಡೆಯುತ್ತವೆ. ಆಗ ಕಂಬಳಿ ವ್ಯಾಪಾರ ಬರೋಬ್ಬರಿ! ಕಂಬಳಿ ಒಯ್ಯಲೆಂದೇ ಜಾತ್ರೆಗೆ ಬರುವ ಮಂದಿ ಹೆಚ್ಚು. ಮೊದಲೇ ಕಂಬಳಿ ತಯಾರಿಸಿ ಸಂಗ್ರಹ ಮಾಡಿಟ್ಟುಕೊಳ್ಳುತ್ತಾರೆ. “ಜಾತ್ರೀಗೆ ನಾವೆಲ್ಲಾ ಹೊಕ್ಕೀವಿ ಸಾರ್, ನಾವ ಖುದ್ದಾಗಿ ಮಾರಾಟ ಮಾಡ್ತೀವಿ. ಇದರಿಂದ ನಮಗ ಹೆಚ್ಗೀ ಲಾಭ ಸಿಗ್ತೈತಿ” ಎನ್ನುತ್ತಾರೆ ಯಲ್ಲಪ್ಪ ರಾಮ ಹಗರಿ.
ಮನೆಯ ಎಲ್ಲಾ ಸದಸ್ಯರು ಕಂಬಳಿ ಉದ್ಯಮದಲ್ಲಿ ತೊಡಗಿದ್ದಾರೆ. ತಿರುಗಾಡಿಗಳು ಅಪರೂಪ. ಮನೆಯ ಹೆಣ್ಮಕ್ಕಳಿಗೆ ಉಣ್ಣೆಯನ್ನು ಶುಚಿಗೊಳಿಸುವ, ನೂಲು ತೆಗೆವ ಕೆಲಸ. ಗಂಡಸರಿಗೆ ನೇಯ್ಗೆ, ಮಾರುಕಟ್ಟೆ ಜವಾಬ್ದಾರಿ. ಉಣ್ಣೆಯನ್ನು ಲೋಡುಗಟ್ಟಲೆ ಖರೀದಿಸುವುದಕ್ಕೆ ಹಣಕಾಸಿನ ನೆರವು ಬೇಕು. ಸಾವಿರಗಟ್ಟಲೆ ಹಣ ಹೊಂದಿಸುವುದಕ್ಕೆ ಒಬ್ಬಿಬ್ಬರಿಗೆ ಕಷ್ಟ. ಉಣ್ಣೆ ಸಂಗ್ರಹವಿಲ್ಲದಿದ್ದರೆ ಸಕಾಲಕ್ಕೆ ಕಂಬಳಿ ತಯಾರಿ ತ್ರಾಸ.
ಮದುವೆ, ಲಗ್ನ, ನಿಶ್ಚಿತಾರ್ಥ..ಗಳಂದು ಕಂಬಳಿ ಹಾಸಿ, ಅದರ ಮೇಲೆ ಕುಳಿತು ಶುಭಕಾರ್ಯಗಳ ಚಿಂತನೆ, ಮಾತುಕತೆ ಮಾಡಬೇಕೆನ್ನುವುದು ನಂಬುಗೆ. ಪ್ರತೀಯೊಬ್ಬರ ಮನೆಯಲ್ಲಿ ಒಂದು ಕಂಬಳಿಯಂತೂ ಬೇಕೇಬೇಕು. ಕಂಬಳಿಯಿಲ್ಲದ ಮನೆ, ಅದು ಮನೆಯಲ್ಲ! ವರುಷಕ್ಕೊಂದಾದರೂ ಕಂಬಳಿ ಖರೀದಿಸದೇ ಇರುವವರು ಕಡಿಮೆ.
ಕೋಕಟನೂರು ತೀರಾ ಹಳ್ಳಿ. ಕಂಬಳಿ ಉದ್ಯಮದೊಂದಿಗೆ ಕೃಷಿಯನ್ನೂ ಮಾಡಿಕೊಳ್ಳುವವರಿದ್ದಾರೆ. ವರುಷಪೂರ್ತಿ ಕೈತುಂಬಾ ಕೆಲಸ, ಶ್ರಮಕ್ಕೆ ತಕ್ಕ ಖುಷಿಯ ಪಗಾರ ಸಿಗುವುದರಿಂದ ಯುವಕರ ನಗರ ವಲಸೆ ತೀರಾ ಕಡಿಮೆ. ಎಲ್ಲರಿಗೂ ಬಿಡುವಿರದ ಕೆಲಸವಿರುವುದರಿಂದ ನಗರದತ್ತ ಮುಖ ಮಾಡಲು ಪುರುಸೊತ್ತಿಲ್ಲ. ಹಾಗೆಂತ ಮೊಬೈಲ್ ಇದೆ, ಟಿವಿ ಇದೆ. ದ್ವಿಚಕ್ರಗಳಿವೆ. ಯುವಕರು ಆಧುನಿಕ ಆವಶ್ಯಕತೆಗಳನ್ನು ಹೊಂದಿದ್ದಾರೆ.
“ನೂಲು ತೆಗೆಯಲು ಯಂತ್ರವಿದ್ದರೂ, ತಕಲಿಯಲ್ಲೇ ನೂಲು ತೆಗೆಯುವುದಕ್ಕೆ ಒಲವು ಹೆಚ್ಚು. ನೇಯ್ಗೆಗೆ ಯಂತ್ರಗಳನ್ನು ಬಳಸುವಂತಾದರೆ ಉತ್ಪಾದನೆ ಹೆಚ್ಚಿಸಬಹುದು. ಇವರು ಅದಕ್ಕೆ ಒಗ್ಗಿಕೊಳ್ಳುವಂತೆ ಮೈಂಡ್ಸೆಟ್ ಬದಲಾಯಿಸಿಕೊಳ್ಳಬೇಕು,” ಎನ್ನುತ್ತಾರೆ, ಜಯಶಂಕರ ಶರ್ಮ. (ಆಗ ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ವಲಯ ನಿರ್ದೇಶಕರಾಗಿದ್ದರು).
ಕೋಕಟನೂರಿನ ಆಡಳಿತ ವ್ಯವಸ್ಥೆಯು ನೀರು ಶೌಚಾಲಯದಂತಹ ಪ್ರಾಥಮಿಕ ಅವಶ್ಯಕತೆಯನ್ನು ನೀಡುವಲ್ಲಿ ಮುಂದೆ ಬರಬೇಕಿದೆ. ಜನರ ಬೇಡಿಕೆಯೂ ಇದೆ. ಆಡಳಿತ ಯಂತ್ರವಲ್ವಾ, ಆಕಳಿಸಿಕೊಂಡು ಎದ್ದು ಬರುವಾಗ ಮುಂದಿನ ಬೇಸಿಗೆ ಬಂದಿರುತ್ತದೆ. ಅಷ್ಟುಹೊತ್ತಿಗೆ ಗ್ರಾಮದ ಉಸಿರಿನ ವೇಗವೂ ಕಡಿಮೆಯಾಗಿರುತ್ತದೆ!


