Sunday, July 4, 2021

ಅನ್ಯಾಯದ ವಿರುದ್ಧ ಸಣ್ಣ ದನಿ!


ಇಲ್ನೋಡಿ... ಇವರು ರಾಜು. ಪುತ್ತೂರು ಅರುಣಾ ಥಿಯೇಟರ್ ಸನಿಹವಿರುವ 'ಸ್ವಾಗತ್ ಸ್ವೀಟ್ಸ್' ಬೇಕರಿಯಲ್ಲಿ ಸಹಾಯಕ. ಕಳೆದ ಮೂರುವರೆ ವರುಷಗಳಿಂದ ಗ್ರಾಹಕರ ಹಾಗೂ ಬೇಕರಿಯ ಯಜಮಾನರ ಒಲವು ಪಡೆದವರು. ನಿನ್ನೆ ಇವರು ಧರಿಸಿದ 'ಬನಿಯನ್' ಗಮನ ಸೆಳೆಯಿತು. ಅದರಲ್ಲೊಂದು ಘೋಷಣೆಯಿತ್ತು ರೋಹಿಣಿ ಸಿಂಧೂರಿಯಂತಹ ದಕ್ಷ ಅಧಿಕಾರಿ ನಮ್ಮ ರಾಜ್ಯಕ್ಕೆ ಬೇಕು. ಸರ್ಕಾರಿ ಕೆಲಸ ದೇವರ ಕೆಲಸ”

ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿಯವರನ್ನು ಅನ್ಯಾನ್ಯ ಕಾರಣಗಳಿಂದ ಸರಕಾರವು ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾಯಿಸಿತ್ತು. ಕರ್ನಾಟಕದಲ್ಲಿ 'ದಕ್ಷತೆ' ತೋರಿಸಿದ ಅಧಿಕಾರಿ ಬಹುಬೇಗ ಎತ್ತಂಗಡಿಯಾಗ್ತಾರೆ ಎನ್ನುವುದಕ್ಕೆ ಹತ್ತಾರು ಉದಾಹರಣೆಗಳಿವೆ. ರೋಹಿಣಿಯವರು ತಾನು ವೃತ್ತಿ ನಿರ್ವಹಿಸಿದಲ್ಲೆಲ್ಲಾ ‘ದಕ್ಷತೆ’ಯನ್ನು ತೋರಿಸುತ್ತಾ ಬಂದರು. ಜನಮಾನಸದಲ್ಲಿ 'ದಕ್ಷ ಅಧಿಕಾರಿ' ಎಂದೇ ಜನರು ಸ್ವೀಕರಿಸಿದ್ದರು. ಇವರ ದಕ್ಷತೆಯನ್ನು ‘ಅಹಂಕಾರ, ಬಿಗುಮಾನ’ ಎಂದು ಕರೆದರು!

ಹಿನ್ನೆಲೆಯಲ್ಲಿ ರಾಜು ಧರಿಸಿದ ಬನಿಯನ್ ವಿಷಯಕ್ಕೆ ಬರೋಣ. ತನ್ನ ವೃತ್ತಿಯೊಂದಿಗೆ ಸದಾ ಒಂದಲ್ಲ ಒಂದು 'ಪಾಸಿಟಿವ್' ವಿಷಯ, ಸಮಾಜಕ್ಕೆ ಸೇವೆಗೈದವರ ನೆನಪು, ತಾಲೂಕಿಗೆ ಹಾಗೂ ಜಿಲ್ಲೆಗೆ ಬಂದಿರುವ ದಕ್ಷ ಅಧಿಕಾರಿಗಳನ್ನು ತನ್ನದೇ ಶೈಲಿಯಲ್ಲಿ ನೆನಪಿಸುವುದು ಇವರ ವ್ಯಕ್ತಿತ್ವದ ಭಾಗ. ವೈಯಕ್ತಿಕ ವಿಚಾರ, ರಾಜಕೀಯ ಹಿನ್ನೆಲೆಯ ಆಟೋಪಗಳು ಇವರಿಗೆ ಬೇಕಾಗಿಲ್ಲ. “ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದು ತಪ್ಪು. ಹಾಗಾದರೆ ದಕ್ಷವಾಗಿ ಕೆಲಸ ಮಾಡುವುದು ಸಾಧ್ಯವಿಲ್ಲ ಎಂದಾಯಿತಲ್ಲಾ? ಪ್ರಾಮಾಣಿಕತೆಗೆ ಬೆಲೆಯಿಲ್ವಾ ಅಕ್ಷರ ಕಲಿಯುವುದು ವ್ಯರ್ಥ ಎಂದಾಯಿತಲ್ಲ,” ಹೀಗೆ ಕಳೆದೆರಡು ವಾರದಿಂದ ರಾಜು ಎಲ್ಲರನ್ನೂ ಮಾತಿಗೆಳೆಯುತ್ತಿದ್ದರು. ತನ್ನ ಮನಸ್ಸಿನ ಆತಂಕಕ್ಕೆ ಮಾತಿನ ಸ್ವರೂಪ ನೀಡುತ್ತಿದ್ದರು.  

ಅವರ ಮಾತುಗಳನ್ನು ಪ್ರತಿಕ್ರಿಯೆ ಪ್ರಕಟಿಸದೆ ಆಲಿಸುತ್ತಾ ಇದ್ದೆ. ಆದರೆ ಆತಂಕದ ಮೌನಕ್ಕೆ ಮಾತನ್ನು ಕೊಡುವ ಕೆಲಸ ಅವರ ಬನಿಯನ್ ಮಾಡಿತು. ಒಂದು ಘೋಷಣೆಯನ್ನು ಮುದ್ರಿಸಿ, ಗಮನವನ್ನು ಸೆಳೆದು 'ಒಳ್ಳೆಯ ಸಂದೇಶ'ವನ್ನು ಹಬ್ಬಿಸಿದರು. ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದರು. ನ್ಯಾಯವನ್ನು ಬಯಸಿದರು. ದನಿಯ ವ್ಯಾಪ್ತಿ ಕಿರಿದಾದರೂ ನೀಡುವ ಸಂದೇಶ ದೊಡ್ಡದು ಅಲ್ವಾ. ಆಶ್ಚರ್ಯ ಮೂಡಿಸುತ್ತದೆ. ನಿಜಕ್ಕೂ ಗ್ರೇಟ್. 'ಅಭಿವ್ಯಕ್ತಿ ಸ್ವಾತಂತ್ರ್ಯ' ಪದದ ಅರ್ಥವನ್ನು ಕೆಡಿಸಿ, ಬೇಕಾದಂತೆ ಮಾತನಾಡುವ ಕಾಲಘಟ್ಟದಲ್ಲಿ ರಾಜು ಅವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ತಂದಿದ್ದಾರೆ.

“ದೇಶವನ್ನು ಪ್ರೀತಿಸಬೇಕು. ದಕ್ಷ ಅಧಿಕಾರಿಗಳನ್ನು ಗೌರವಿಸಬೇಕು. ಸೈನಿಕರಿಗೆ ಗೌರವ ಕೊಡಬೇಕು. ಕಷ್ಟಪಟ್ಟು ದುಡಿಯುವವರನ್ನು ಸಮಾಜ ಗುರುತಿಸಬೇಕು. ನಿತ್ಯದ ಮಾತುಕತೆಯಲ್ಲಿ ಹಗುರ ಮಾತುಗಳ ಬದಲು ಗೌರವ ಕೊಡುವ ಪರಿಪಾಠ ರೂಢಿಸಿಕೊಳ್ಳಬೇಕು,” ಎನ್ನುತ್ತಾರೆ ರಾಜು. ಅವರಿಗೆ ನಮ್ಮೆಲ್ಲರ 'ಸಲಾಂ' ಇರಲಿ.


 

Saturday, July 3, 2021

ಸ್ವಾಭಿಮಾನ ಬೆಸೆದ ಗ್ರಾಮ ಸೇತು


                ಹಳ್ಳಿಯ ಸ್ವಾಭಿಮಾನದ ಸೇತುವೆ 'ಗ್ರಾಮ ಸೇತು'! ಮನಸ್ಸುಗಳನ್ನು ಬೆಸೆದ ಸೇತು. ಸಮ್ಮನಸಿಗರನ್ನು ಒಂದು ಮಾಡಿದ ಸೇತು. ಊರವರ ಹದಿನೈದು ವರುಷಗಳ ಹರಕೆ. ಗ್ರಾಮದೊಳಗಿನ ಊರುಗಳು ಇನ್ನು ದ್ವೀಪವಾಗುವುದಿಲ್ಲ. ಮಳೆಗಾಲದಲ್ಲಿ ಮೌನಕ್ಕೆ ಜಾರುತ್ತಿದ್ದ ದಿನಮಾನಗಳು ಭೂತಕಾಲಕ್ಕೆ ಸೇರಿದುವು. ಮೊಗ್ರದಲ್ಲೀಗ ಮಂದಹಾಸದ ಮಂದಾನಿಲ.

                ಅದು ಸುಳ್ಯ ತಾಲೂಕಿನ (..) ಗುತ್ತಿಗಾರು ಗ್ರಾಮದ - ಒಂದನೇ ವಾರ್ಡ್ - ಹಳ್ಳಿ 'ಮೊಗ್ರ'. ಸರಕಾರಿ ಆಸ್ಪತ್ರೆ, ಶಾಲೆ, ಅಂಗನವಾಡಿ, ಭಜನಾ ಮಂದಿರ, ದೈವಸ್ಥಾನವಿರುವ ಊರು. ಇಲ್ಲಿನ ಶಾಲೆಯು ಮತದಾನದ ಕೇಂದ್ರ. ಸುತ್ತಲಿನ ಕಮಿಲ, ಏರಣಗುಡ್ಡೆ, ಮಲ್ಕಜೆ, ಬಳ್ಳಕ್ಕ ಊರುಗಳಿಂದ ಮೊಗ್ರ ಸೇರಲು ಬೇಸಿಗೆಯಲ್ಲಿ ಕಷ್ಟವಿಲ್ಲ. ಮಳೆಗಾಲದಲ್ಲಿ ಹಳ್ಳ ದಾಟುವುದು ತ್ರಾಸ. ಇಲ್ಲಿನದು ಸುಮಾರು ಸಾವಿರದ ಮುನ್ನೂರು ಜನಸಂಖ್ಯೆ.

                ಹೆಚ್ಚು ಮಳೆ ಬೀಳುವ ಪ್ರದೇಶವಾದ್ದರಿಂದ ಹಳ್ಳವು ತುಂಬಿ ಹರಿಯುತ್ತಿದೆ. ದಾಟಲು ಕಷ್ಟ. ವಾಹನ ಚಲಾಯಿಸಲು ಅಸಾಧ್ಯ.  ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳು, ಶಾಲಾ ವಿದ್ಯಾರ್ಥಿಗಳು, ಶ್ರಮಿಕರ ಪಾಡು ವಿಷಾದಗಳ ಗೂಡು. ಪ್ರತಿವರುಷವೂ ಪಂಚಾಯತ್ ನಿರ್ರ್ಮಿಸುವ  ಅಡಿಕೆ ಮರದ ಸಂಕ ಯಾ ಪಾಲದಲ್ಲಿ (ಕಿರು ಸೇತುವೆಯ ತರಹ, ಇದು ಅಲ್ಪಾಯುಷಿ) ಉಸಿರು ಬಿಗಿ ಹಿಡಿದು ದಾಟಬೇಕಿತ್ತು. ದಾಟುವಾಗ ಸಮತೋಲನ ತಪ್ಪಿದರೆ ಕಣ್ಣೀರಿನ ದುರಂತ. ಬೆಳಿಗ್ಗೆ ಸಲೀಸಾಗಿ ದಾಟಲು ಮೊಣಕಾಲಿನ ತನಕ ನೀರಿದ್ದರೆ, ಬಳಿಕ ಮಳೆ ಬಂದು  ನೀರು ಏರಿದಾಗ ಸಂಜೆ ಆಚೆ ದಡದವರು ಆಚೆ, ಈಚೆ ದಡದವರು ಈಚೆ! ತ್ರಿಶಂಕು ಸ್ಥಿತಿ.

                ಶಾಶ್ವತವಾದ ಸೇತುವೆಯ ನಿರ್ಮಾಣಕ್ಕೆ ಊರವರು ಮನವಿಯ ಮೇಲೆ ಮನವಿಯನ್ನು ಸರಕಾರಕ್ಕೆ ಸಲ್ಲಿಸುತ್ತಾ ಬಂದರು. ಜತೆಗೆ ಚುನಾವಣೆಗಳು ಬಂದಾಗ ಅರಳಿದ ಮುಖಗಳಿಂದ ತುಂಬು ಆಶ್ವಾಸನೆಗಳ ಭರಪೂರ. ಅದೂ ನಿರಂತರ ಹದಿನೈದು ವರುಷ. ರಾಜ್ಯ ಅಲ್ಲ, ದೇಶದ ಪ್ರಧಾನಿ ಕಾರ್ಯಾಲಯದ ವರೆಗೂ ಊರಿನ ಸಮಸ್ಯೆ ಚಿತ್ರಿತ ವೀಡಿಯೋ ತಲಪಿತು. ಅಲ್ಲಿಂದ ಸಂಬಂಧಪಟ್ಟ ಇಲಾಖೆಗೆ 'ಸಮಸ್ಯೆ ಪರಿಹರಿಸಲು' ಹಿಮ್ಮಾಹಿತಿ ಬಂದಿತ್ತು. ಎಷ್ಟು ವೇಗದಲ್ಲಿ ಹಿಮ್ಮಾಹಿತಿ ಬಂದಿತ್ತೋ ಅಷ್ಟೇ ವೇಗದಲ್ಲದು ಕಡತದೊಳಗೆ ಮಲಗಿತು ಕೂಡಾ! ಅಲ್ಲದೆ ನವಮಾಧ್ಯಮಗಳಲ್ಲಿ ಸಮಸ್ಯೆಯನ್ನು ತಿಳಿಸುವ ಯತ್ನ ಮಾಡಲಾಯಿತು. ಎಲ್ಲವೂ ಗೋರ್ಕಲ್ಲ ಮೇಲಿನ ನೀರಾದಾಗ ಮಳೆಗಾಲ ಬೆನ್ನಟ್ಟುತ್ತಾ ಬಂತು. ವರುಷವೂ ಅಡಿಕೆ ಮರದ ಸಂಕವೇ ಗತಿ!

    ಪಂಚಾಯತ್ ಯಾಕೆ, ಊರವರೇ ಸೇರಿ ತಾತ್ಕಾಲಿಕ ಕಬ್ಬಿಣದ ಸೇತುವೆ ಮಾಡಿದರೆ ಹೇಗೆ?, ಗ್ರಾಮದ ಮಧ್ಯೆಯೇ ಗ್ರಾಮಸ್ಥರಿಂದ ಕೇಳಿ ಬಂದ ದನಿ. ಅದೂ ಯುವ ದನಿ. ಹೇಳಿದಷ್ಟು ಸುಲಭವಾಗಿರಲಿಲ್ಲ. ಜವಾಬ್ದಾರಿ ಹೊರುವ ಹೆಗಲುಗಳು, ಲಕ್ಷ ಮೀರುವ ಆರ್ಥಿಕತೆ ಮತ್ತು ಎಲ್ಲವನ್ನೂ ಸಮಚಿತ್ತದಲ್ಲಿ ಗ್ರಹಿಸುವ ನಾಯಕತ್ವ ಬೇಕಾಗಿತ್ತು. ಮುಖ್ಯವಾಗಿ ಕೊರೊನಾ ಸಂಕಟಗಳಿಂದ ಮುದುಡಿದ್ದ ಹಳ್ಳಿ ಮನಸ್ಸುಗಳಿಗೆ ಚೇತನ ತುಂಬುವ ಕೆಲಸವೂ ಜತೆಜತೆಯಲ್ಲಿ ಆಗಬೇಕಿತ್ತು.

    ಆಗಲೇ ನಾಲ್ಕು ಪಂಚಾಯತ್ ಸದಸ್ಯರನ್ನು ಹೊಂದಿದ್ದ 'ಗ್ರಾಮ ಭಾರತ' ಎನ್ನುವ ಪಕ್ಷೇತರ ತಂಡದ  ರೂವಾರಿ ಮಹೇಶ್ ಪುಚ್ಚಪ್ಪಾಡಿಯವರ ಕಿವಿ ಅರಳಿತು. ಯುವ ತಂತ್ರಜ್ಞ ಪತಂಜಲಿ ಭಾರದ್ವಾಜ್ ಇವರ ಭೇಟಿ, ಮಾತುಕತೆ. ಇವರು ತೂಗುಸೇತುವೆಯ ಸರದಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜರ ಚಿರಂಜೀವಿ. ಸುಮಾರು ಒಂದೂವರೆ ಲಕ್ಷ ರೂಪಾಯಿಯ ನೀಲನಕ್ಷೆ ಸಿದ್ಧವಾಯಿತು. ಇನ್ನು ಹಣ ಕ್ರೋಢೀಕರಣ.  ಅಬ್ಬಬ್ಬಾ ಅಂದರೆ ಊರಿಂದ ಅರ್ಧಾಂಶದಷ್ಟು ಭರಿಸಬಹುದು. ಮಿಕ್ಕುಳಿದ ಮೊತ್ತ?

    ಊರವರ ಆಶ್ವಾಸನೆಗಳು ಬಾಯ್ಮಾತಿನಲ್ಲಿ ನಿಲ್ಲಲಿಲ್ಲ. ನಿಧಾನಕ್ಕೆ ಬೊಗಸೆಗೆ ಹರಿದು ಬರಲು ಆರಂಭವಾಯಿತು. ಐನೂರು ರೂಪಾಯಿಯಿಂದ ಐದು, ಹತ್ತು ಸಾವಿರದ ತನಕ! ಗ್ರಾಮಾಭಿವೃದ್ಧಿಯ ಒಂದು ಎಸಳಾದ ಸೇತುವೆ ನಿರ್ಮಾಣದ ಆಶಯವನ್ನು ಫೇಸ್ ಬುಕ್ಕಿನಲ್ಲಿ ಹರಿಯಬಿಟ್ಟ ಮಹೇಶ್ ಹೇಳುತ್ತಾರೆ, ಊರಿನ ಗಣ್ಯರಲ್ಲದೆ ಮಂಗಳೂರಿನ ಬ್ರಿವೆರಾ ಟೆಕ್ನಾಲಜೀಸ್ ಪ್ರೈವೇಟ್ ಲಿ., ಮಯೋರಾ ಐಟಿ ಸರ್ವಿಸ್ ಅಂಡ್ ಕನ್ಸಲ್ಟಿಂಗ್ ಪ್ರೈ ಲಿ., ರೈಟ್ ಟು ಲೀವ್, ಕೆನಡಾದಿಂದ ಸೂರಜ್ ಮುತ್ಲಾಜೆ, ಫಾ. ಆದರ್ಶ ಜೋಸೆಫ್, ಗುತ್ತಿಗಾರಿನ ಆಶಾಭಾರತಿ ಎಸೋಸಿಯೇಟ್ಸ್, ಸುಳ್ಯದ ಚಂದ್ರಶೇಖರ ದಾಮ್ಲೆ, ಮುಳಿಯ ಜ್ಯುವೆಲ್ಸ್, ಯಶ್ಚಿತ್ ಕಾಳಮ್ಮನೆ, ಎಚ್.ವಿ.ನೀಲಾವತಿ ಕತ್ಲಡ್ಕ, ಪುಚ್ಚಪ್ಪಾಡಿಯ ಹರಿಸುಬ್ರಹ್ಮಣ್ಯ ಪಿ.ವಿ., ರಘುರಾಮ ಎಂ. ಇವರೆಲ್ಲಾ ಸೇತುವೆಗೆ ಬೆನ್ನು ನೀಡಿದ ಮಹನೀಯರು. ಸಮಸ್ಯೆಯು ಹತ್ತಿಯಂತೆ ಹಗುರವಾಯಿತು.

                ತಂತ್ರಜ್ಞರಿಂದ 2021 ಜೂನ್ 5ಕ್ಕೆ ನೀಲನಕ್ಷೆ ಸಿದ್ಧವಾಗಿತ್ತು. ಜೂನ್ 12ಕ್ಕೆ ಶ್ರೀಕಾರ. ಜೂನ್ 24ಕ್ಕೆ ಸೇತುವೆ ಪೂರ್ಣ. 30ಕ್ಕೆ ಶುಭಚಾಲನೆಗೊಂಡು ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತ! ಒಂದೆರಡು ವಾಕ್ಯದಲ್ಲಿ ಹೇಳಿ ಮುಗಿಸುವ ಸೇತು ಬಂಧದ ಹಿಂದೆ ಹಣಕ್ಕಿಂತಲೂ ಶ್ರಮ, ಊರವರ ಪ್ರೀತಿ, ಯುವಕರ ಹುಮ್ಮಸ್ಸುಗಳ ಆಧಿಕ್ಯ ಕಣ್ಣಿಗೆ ಕಾಣಿಸದು. ಊರಿನ ಹಿರಿಯರು, ಕಿರಿಯರು, ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು ಶ್ರಮದಾನಕ್ಕೆ ಟೊಂಕ ಕಟ್ಟಿದರು. 'ಇದು ನಮ್ಮ ಸೇತುವೆ' ಎನ್ನುವ ಆಭಿಮಾನದ ಹೊನಲು ಸಂಚಲನ ಮೂಡಿಸಿತು.

                ಏನಿಲ್ಲವೆಂದರೂ ನೂರು ಅರುವತ್ತು ಮಾನವ ದಿವಸಗಳ ಶ್ರಮದ ದಾನವು ಸೇತುವೆಯ ಅಡಿಪಾಯದಲ್ಲಿದೆ. ಸಿಮೆಂಟಿನ ಕಾಂಕ್ರಿಟ್ ಕೆಲಸ, ಫಿಲ್ಲರಿನ ಅಡಿಪಾಯದ ರಚನೆ, ಸಂಪರ್ಕಿಸುವ ಸೇತುವೆ ನಿರ್ಮಾಣ, ತಂತ್ರಜ್ಞರೊಂದಿಗನ ಕೆಲಸಗಳು. ಆಯಾಯ ಕೆಲಸಗಳಲ್ಲಿ ಹಿಡಿತವಿರುವ ಜ್ಞಾನಿಗಳು ಮುಂದಾಳತ್ವ ವಹಿಸಿದ್ದರು.   ಶ್ರಮ ಬೇಡುವ ಕೆಲಸಗಳೆಲ್ಲಾ ನಗದಾದರೆ ಲಕ್ಷ ರೂಪಾಯಿಗೂ ಮೀರಬಹುದು. ಸೇತುವಿನ  ಉದ್ದ 20 ಮೀಟರ್, ಅಗಲ 1.2 ಮೀಟರ್.

ತಂತಮ್ಮ ಮಕ್ಕಳು ಹಳ್ಳ ದಾಟಿ ಆಚೆ ದಡ ಸೇರುವ ಮತ್ತು ಸಂಜೆ ಈಚೆ ತಲಪುವಾಗಲೆಲ್ಲಾ ಹೆತ್ತವರು  ಕಾವಲು ಬೇಕಾಗಿತ್ತು. ಬಹುತೇಕ ಮಂದಿ ಕೂಲಿ ಕೆಲಸವನ್ನು ಅವಲಂಬಿಸಿರುವುದರಿಂದ ಮಗುವಿನ ತಂದೆ ಅಥವಾ ತಾಯಿ ಕೂಲಿ ಕೆಲಸಗಳಿಗೆ ರಜೆ ಮಾಡಬೇಕಾಗುತ್ತಿತ್ತು. ಇದರಿಂದಾಗಿ ಗಳಿಕೆಯಲ್ಲಿ ನಷ್ಟವಾಗುತ್ತಿತ್ತು. ಇನ್ನು ದ್ವಿಚಕ್ರಿಗಳ ಪಾಡು. ಹಳ್ಳದಲ್ಲಿ ದಾಟುವಾಗ ಸ್ಕೂಟರ್, ಬೈಕ್ ಆಫ್ ಆಗುವುದು; ಅದರ ಬಿಡಿ ಭಾಗಗಳು ಹಾಳಾಗುವುದು ಮಾಮೂಲಿ. ಒಂದು ಮಳೆ ಋತುವಿನಲ್ಲಿ ಕನಿಷ್ಠ ನಾಲ್ಕೈದು ಸಾವಿರ ರೂಪಾಯಿ ದುರಸ್ಥಿಗಾಗಿ ವ್ಯಯವಾಗುತ್ತಿತ್ತು. ಇನ್ನು ಭಯವಿಲ್ಲ. ಎನ್ನುವ ಖುಷಿಯನ್ನು ಹಂಚಿಕೊಂಡರು ಸ್ಥಳೀಯ ಬಾಬು ಕಮಿಲ. 

                ಸೇತುವೆಗೆ ಕಬ್ಬಿಣದ ಚೌಕಟ್ಟುಗಳನ್ನು ಮಾತ್ರ ಬಳಸುವುದು ಆರಂಭದ ಯೋಜನೆಯಾಗಿತ್ತು. ಮಿಕ್ಕುಳಿದಂತೆ ಅಡಿಕೆ ಮರದ ಸಲಕೆಗಳ ಹಾಸು. ಹಣಕಾಸು ಹಗುರವಾದಾಗ ಸಲಕೆಯನ್ನು ಕೈಬಿಟ್ಟು ವಾಟರ್ಫ್ರೂಫ್ ಶೀಟನ್ನು ಹಾಸಿದೆವು. ಇದರಲ್ಲಿ ಪಾದಚಾರಿಗಳಲ್ಲದೆ, ದ್ವಿಚಕ್ರ ವಾಹನವನ್ನೂ ಚಲಾಯಿಸಬಹುದು, ಸೇತುವಿನ ಕ್ಷಮತೆಯನ್ನು ಮಹೇಶ್ ಹೇಳುತ್ತಾ, ಹಳ್ಳಿಯ ಅಭಿವೃದ್ಧಿಯು ಹಳ್ಳಿಯಿಂದಲೇ ಸಾಧ್ಯ. ಎಂದು ಮನದಟ್ಟಾಗಿದೆ. ಮುಖ್ಯವಾಗಿ ಊರಿನ ಯುವಕರ ಇಚ್ಛಾಶಕ್ತಿಯನ್ನು ನೋಡಿ ದಂಗಾದೆ. ಎಂದು ಯುವ ಮನಸ್ಸುಗಳನ್ನು ಶ್ಲಾಘಿಸುತ್ತಾರೆ.

                ಸಂಗ್ರಹವಾದ ಪ್ರತಿ ಪೈಸೆಗೂ ಲೆಕ್ಕವಿದೆ. ಊರಿನ ಹಿರಿಯರೊಬ್ಬರನ್ನು ಸೇರಿಸಿಕೊಂಡು ಬ್ಯಾಂಕ್ ಖಾತೆ ತೆರೆದಿದ್ದಾರೆ. ಯಾರೆಲ್ಲಾ ಹಣ ನೀಡಿದ್ದಾರೆಂದು ಸೇತುವೆ ಪಕ್ಕದಲ್ಲಿ ಪ್ಲೆಕ್ಸಿ ಹಾಕಿದ್ದಾರೆ. ಖರ್ಚಾದ ಲೆಕ್ಕಗಳೆಲ್ಲವೂ ಪಾರದರ್ಶಕ. ಅದನ್ನು ಜಾಲತಾಣದಲ್ಲೂ ಮಹೇಶ್ ಅಂಟಿಸಲಿದ್ದಾರೆ. ಸೇತುವೆಗೆ ಹೇಳುವಂತಹ ನಿರ್ವಹಣೆಯಿಲ್ಲ. ಇಲ್ಲಿನ ಪ್ರೇರಣೆಯಿಂದ ಸನಿಹದ ಕಿನ್ನಿಕುಮೇರಿ ಹಳ್ಳಕ್ಕೂ ಸೇತುಭಾಗ್ಯ ಬರಲಿದೆ. ಜನರ ಚಿತ್ತವೀಗ ಮೊಗ್ರದತ್ತ.

                ಸೇತುವೆ ಕೆಲಸಗಳು ಪೂರ್ತಿಯಾಗಿ ಎಲ್ಲರೂ ಸಂತಸದಲ್ಲಿರುವಾಗ ತಂತ್ರಜ್ಞ ಪತಂಜಲಿ ಭಾರದ್ವಾಜ್ ಕಿವಿ ಮಾತು ಹೇಳಿದರು. ಸೇತುವೆ ನಿಮ್ಮದೇ. ಅರೆ ಶಾಶ್ವತ ಸೇತುವಾದ್ದರಿಂದ ಕ್ಷಮತೆಗೂ ಮಿತಿಯಿದೆ. ಹಾಗಾಗಿ ಏಕಕಾಲಕ್ಕೆ ಹಿಂದೆ-ಮುಂದೆ ಚದುರಿದಂತೆ ಏಕಕಾಲಕ್ಕೆ ನಾಲ್ಕೈದು ಮಂದಿ ದಾಟಬಹುದು. ದ್ವಿಚಕ್ರದಲ್ಲಾದರೆ ಡಬ್ಬಲ್ರೈಡ್ ಬೇಡ. ಎಚ್ಚರವು ಎಲ್ಲರಲ್ಲೂ ಇದ್ದರೆ ನಿರ್ವಹಣೆ ಬೇಕಾಗದು.

                ಒಂದೆಡೆ ರಾಜಕೀಯ ವ್ಯವಸ್ಥೆ, ಮತ್ತೊಂದೆಡೆ ಜನರನ್ನು ಸಂಘಟಿಸುವ ಯತ್ನ. ಇವುಗಳ ಮಧ್ಯೆ ತಲೆ ಎತ್ತುವ ಕಣ್ಣಿಗೆ ಕಾಣದ 'ಹಳ್ಳಿ ರಾಜಕೀಯ'ಗಳನ್ನು ಎದುರಿಸುವುದು ಸವಾಲಿನ ಕೆಲಸ. ಇವೆಲ್ಲವನ್ನೂ ಮೀರಿ ನಿಂತ ಮಹೇಶ್ ತಂಡವು ಹಳ್ಳಿಗರ ಮೊಗದಲ್ಲಿ ಮುಗುಳ್ನಗೆಯನ್ನು ತಂದಿರುವುದು ನಿಜಾರ್ಥದ ಗ್ರಾಮಾಭಿವೃದ್ಧಿ. ನಿರ್ಮಾಣವಾದ ಸೇತುವೆ ಚಿಕ್ಕದಾಗಿರಬಹುದು. ಅದು ಕಟ್ಟಿಕೊಟ್ಟ ಸ್ವಾಭಿಮಾನ ಮಾತ್ರ ದೊಡ್ಡದು.

ಸ್ವಾವಲಂಬನೆಯ ಮಾದರಿ

                ಸುಳ್ಯದ ನಿವೃತ್ತ ಪ್ರಾಧ್ಯಾಪಕ, ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಚಂದ್ರಶೇಖರ ದಾಮ್ಲೆ, ಸುಳ್ಯ ಮೊಗ್ರವನ್ನು ಕಂಡದ್ದು ಹೀಗೆ.... “ ನಮ್ಮ ದೇಶದಲ್ಲಿ ಸುಭದ್ರವಾದ ಸಂಪರ್ಕ ಸೇತುಗಳಿಲ್ಲದೆ ಹಳ್ಳಿಗಳು ದ್ವೀಪಗಳಾಗುತ್ತಿರುವ ವಿದ್ಯಮಾನ ಇಂದೂ ಕಾಣಸಿಗುತ್ತದೆ. ನೇತ್ರಾವತಿ ತಿರುವಿಗೆಂದು ಸಾವಿರ ಕೋಟಿಗಳಲ್ಲಿ ಸರಕಾರವು ಹಣ ಹಾಕುತ್ತಿರುವುದನ್ನು ಕಾಣುತ್ತೇವೆ. ಯೋಜನೆಗಳಲ್ಲಿ ನ್ಯೂನತೆಗಳಿದ್ದು ಹಾಕಿದ ಹಣವು ವ್ಯರ್ಥವಾಗುತ್ತಿದೆ. ಆದರೆ ಒಂದು ಲಕ್ಷದೊಳಗೆ ನಿರ್ಮಿಸಬಹುದಾದ ನೂರಾರು ಕಿರು ಸೇತುವೆಗಳಿಗೆ ಹಣ ಮಂಜೂರಾಗದೆ ಜನ ಪರದಾಡುತ್ತಲೇ ಇರಬೇಕಾಗುತ್ತದೆ. ನಾನು ಬಾಲ್ಯದಲ್ಲೇ ಇಂತಹ ಪರದಾಟವನ್ನು ಕಂಡವನು. ಅದಕ್ಕೆ ಅಂತ್ಯ ಹಾಡಲು ಊರವರೇ ಮುಂದೆ ಬಂದುದು ಅಭಿನಂದನೀಯ. ಮೊಗ್ರ ಗ್ರಾಮದ ಜನರು ಈಗಾಗಲೇ ಅನೇಕ ಅಭಿವೃದ್ಧಿ ಕೆಲಸಗಳಲ್ಲಿ ಸ್ವಾವಲಂಬನೆಯ ಮಾದರಿಗಳನ್ನು ತೋರಿದ್ದಾರೆ. ಹಾಗಾಗಿ ಅವರ ಪ್ರಸ್ತುತ ಸೇತುವೆಯನ್ನು ಕಟ್ಟುವ ಪ್ರಯತ್ನ ಇತರರಿಗೂ ಅರ್ಥಪೂರ್ಣ ಮಾದರಿ.”


ವರ್ಕ್ ಇದೆ, ನೆಟ್ವರ್ಕ ಇಲ್ಲ..!


 

ಕನ್ನಾಡಿನ ಚಿಣ್ಣರಿಗೆ ಆನ್ಲೈನ್ ಶಿಕ್ಷಣ ಶುರುವಾಗಿದೆ. ಚಂದನ ವಾಹಿನಿಯಲ್ಲಿ ಪಾಠಗಳು ಪ್ರಸಾರವಾಗುತ್ತಿವೆ. ತಮ್ಮೆದುರು ವಿದ್ಯಾರ್ಥಿಗಳಿದ್ದಾರೆಂದು ಊಹಿಸಿಕೊಂಡು ಆಧ್ಯಾಪಕರು ಪಾಠ ಮಾಡಬೇಕಾದ ಮನಸ್ಥಿತಿಯನ್ನು ರೂಪಿಸಿಕೊಂಡಿದ್ದಾರೆ. ಪ್ರಾಥಮಿಕ, ಪ್ರೌಢ ಶಾಲೆಯ ಅಧ್ಯಾಪಕರಿಗೆ ಮಕ್ಕಳ ಮನಸ್ಸಿನ ಆಳ, ಅಗಲಗಳ ವಿಸ್ತಾರ ಗೊತ್ತು. ಮಕ್ಕಳೆದುರು ಮಗುವಾಗುತ್ತಾರೆ ಕೂಡಾ. ಮಕ್ಕಳಿಗೆ ತಿಳಿಯುವಂತೆ ಪಾಠ ಮಾಡಬಲ್ಲರು. ಆದರೆ ಪದವಿ ತರಗತಿಗೆ ಪಾಠ ಮಾಡುವ ಉಪನ್ಯಾಸಕರು ಈ ಮಕ್ಕಳಿಗೆ ಪಾಠ ಮಾಡಿದರೆ ಹೇಗಿದ್ದೀತು? ಅಲ್ಲಿ ಮಗುತನವಿರುವುದಿಲ್ಲ.

 ಶಾಲೆಗಳು ತೆರೆಯದಿರುವುದರಿಂದ ಆನ್ಲೈನ್ ಶಿಕ್ಷಣವೊಂದೇ ಪರ್ಯಾಯ ಹಾದಿ. ಇದು ಒಪ್ಪತಕ್ಕ ವಿಚಾರ. ಇಂದು ತಂತ್ರಜ್ಞಾನಗಳು ಬೆರಳಿನ ತುದಿಯಲ್ಲಿವೆ. ಮನೆಯ ಮೇಜಿನ ಮೇಲೆ ವಿವಿಧ ಪ್ಯಾಕೇಜ್ಗಳು ಕುಳಿತು ಅನುಷ್ಠಾನಕ್ಕೆ ಕಾಯುತ್ತಿವೆ. ನಿಗದಿತ ಸಮಯಕ್ಕೆ ವಿದ್ಯಾರ್ಥಿ ಆನ್ಲೈನ್ ತರಗತಿಗೆ ಹಾಜರಾದರೆ ಆಯಿತು. ಆಗ ಹೆತ್ತವರ ಕಾವಲು ಹೇಗೂ ಬೇಕು.

          ಆನ್ಲೈನ್ ಶಿಕ್ಷಣವು ನೆಟ್ವವರ್ಕ್ ಕೇಂದ್ರಿತ ವ್ಯವಸ್ಥೆಯಲ್ಲಿ ನಡೆಯುತ್ತವೆ. ಪಟ್ಟಣ ವ್ಯಾಪ್ತಿಯಲ್ಲಿ ನೆಟ್ವರ್ಕಿಗೆ ತೊಂದರೆಯಿಲ್ಲ. ನೆಟ್ವರ್ಕ್  ಸಿಗದ ಗ್ರಾಮೀಣ ಪ್ರದೇಶಗಳಲ್ಲಿ ಆನ್ಲೈನ್ ಶಿಕ್ಷಣಕ್ಕೆ ವಿದ್ಯಾರ್ಥಿಗಳು, ಹೆತ್ತವರು ಒದ್ದಾಡುತ್ತಿದ್ದಾರೆ. ಮಕ್ಕಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಒಂದು ದಿನ ತಪ್ಪಿದರೆ ಅಂದಿನ ಪಾಠವೂ ತಪ್ಪಿದಂತೆ. ಶಾಲೆಯಲ್ಲಾದರೆ ಅಧ್ಯಾಪಕರಲ್ಲಿ ಕೇಳಬಹುದು. ಇಲ್ಲಿ ದೂರವಾಣಿ ಮಾಡಿ ಸಂಬಂಧಿತ ಅಧ್ಯಾಪಕರನ್ನು ಸಂಪರ್ಕಿಸಬೇಕು. 

          ಜಾಲತಾಣದಲ್ಲಿ ಚಿತ್ರವೊಂದು ಹರಿದಾಡುತ್ತಾ ಬಂತು - ಮನೆಯ ಸನಿಹದ ಗುಡ್ಡದಲ್ಲಿ ಶೆಡ್ ನಿರ್ಮಿಸಿ ಅಲ್ಲಿ ಆನ್ಲೈನ್ ಪಾಠಕ್ಕೆ ವಿದ್ಯಾರ್ಥಿ ಅಣಿಯಾಗುತ್ತಿದ್ದಾನೆ. ಆತನ ಕೈಯಲ್ಲಿ ಲ್ಯಾಪ್ಟಾಪ್ ಇದೆ. ಗುಡ್ಡದ ತುದಿಯಲ್ಲಿ ಸ್ವಲ್ಪವಾದರೂ ನೆಟ್ವರ್ಕ್ ಸಿಗಬಹುದೆಂಬ ನಿರೀಕ್ಷೆ. ಹಳ್ಳಿಯಲ್ಲಿ ಸ್ಮಾರ್ಟ್ ಫೋನಿಗೆ ನೆಟ್ವರ್ಕ್ ಯಾವಾಗಲು ಗುಡ್ಡವನ್ನೋ, ಎತ್ತರದ ಮರವನ್ನೋ ಏರಲೇಬೇಕು! ಬಹುತೇಕ ಹಳ್ಳಿಗಳಿಂದು ನೆಟ್ವರ್ಕ್ ಸಮಸ್ಯೆಯಿಂದ ಬಾಧಿತವಾಗಿದ್ದು ಆನ್ಲೈನ್ ಕ್ಲಾಸುಗಳು ತಲಪುವಲ್ಲಿ ಏದುಸಿರು ಬಿಡುತ್ತವೆ.

          ಇಂತಹ ಸಮಸ್ಯೆಗೆ ಸುಳ್ಯದಲ್ಲೊಂದು ಪ್ರಯತ್ನವಾಗಿದೆ. ಸರಕಾರಿ ಶಾಲೆಗಳ ಶಿಕ್ಷಕರ ತಂಡವು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪಾಠ ಮಾಡಿದೆ. ನೆಟ್ವರ್ಕ್ ಇಲ್ಲದ, ಸ್ಮಾರ್ಟ್ ಫೋನ್ ಇಲ್ಲದವರ ಮನೆಯಲ್ಲೇ ಪಾಠದ ವ್ಯವಸ್ಥೆ. ಶಿಕ್ಷಣದಿಂದ ಯಾರೂ ವಂಚಿತರಾಗಕೂಡದು ಎಂಬ ಸರಕಾರದ ಆಶಯಕ್ಕೆ ಅಧ್ಯಾಪಕರು ಮಾನ ನೀಡಿದ್ದಾರೆ. ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಧನಾತ್ಮಕ ಯೋಚನೆಯ ಶಿಕ್ಷಕರ ತಂಡವು ಜೂನ್ ತಿಂಗಳಲ್ಲಿ ರಂಗಕ್ಕಿಳಿದಿದೆ. ಪುತ್ತೂರು ತಾಲೂಕಿನಲ್ಲೂ ಕೆಲವು ಸರಕಾರಿ ಶಾಲೆಯ ಶಿಕ್ಷಕರು ಕೂಡಾ ಓದು-ಬರಹಕ್ಕೆ ಉತ್ತೇಜನ ನೀಡಿದ್ದಾರೆ. ಇವೆಲ್ಲಾ ಕೊರೊನಾ ಪಾಸಿಟಿವ್ ಸಂದರ್ಭದ ನಿಜಾರ್ಥದ ಪಾಸಿಟಿವ್ ಸಂಗತಿಗಳು.

          ಜೂನ್ ತಿಂಗಳಲ್ಲಿ ಶಾಲಾರಂಭ ಆಗುತ್ತದೆ. ಮನೆಮನೆಗಳಲ್ಲಿ ಮೇ ತಿಂಗಳಿನಲ್ಲೇ ಯೂನಿಫಾರ್ಮ್, ಪುಸ್ತಕ, ಶುಲ್ಕ.. ಹೀಗೆ ಸಿದ್ಧತೆಗಳು ಗರಿಗೆದರುತ್ತದೆ. ಪುಸ್ತಕದ ಭಾರವನ್ನು ಬೆನ್ನಿಗೆ ಏರಿಸಿ ಶಾಲೆಗೆ ಹೊರಡುವ ದೃಶ್ಯವನ್ನು ಕಣ್ತುಂಬಿಕೊಳ್ಳುವ, ಸಂಜೆ ಮನೆಯಲ್ಲಿ ಶಾಲೆಯಲ್ಲಾಗಿರುವ ವಿದ್ಯಮಾನಗಳ ವಿವರಣೆಗಳಿಗೆ ಕಿವಿಯಾಗುತ್ತಿರುವ ಹೆತ್ತವರು. ಇದು ಬದುಕಿನ ಅಲಾರಂ. ಈಗ ಮಕ್ಕಳು ಶಾಲೆಗೆ ಹೋಗಲಾಗದ ಸ್ಥಿತಿ. ಮನೆಯಲ್ಲಿ ಕಲಿಯಲಾಗದ ಮತ್ತು ಕಲಿಸಲಾಗದ ಮಾನಸಿಕ ಒತ್ತಡ. ತಮ್ಮ ನಿಯಂತ್ರಣಕ್ಕೆ ಸಿಕ್ಕದ ಮಕ್ಕಳ ಚಟುವಟಿಕೆಗಳು. ಇವೆಲ್ಲಾ ಹೆತ್ತವರಿಗೆ ಭಾರವಾದರೂ ಅದನ್ನು ಭಾರ ಎಂದು ತೋರಿಸದ ಸಹನೆಯು ಅರಿವಿಲ್ಲದೆ ರೂಢಿಯಾಗಿದೆ.

          ಸ್ಮಾರ್ಟ್ ಫೋನ್ಗಳು ಕೈಯಲ್ಲಿ ಇಲ್ಲವೆಂದಾದರೆ ಏನನ್ನೋ ಕಳಕೊಂಡ ಅನುಭವ. ಕ್ಷಣಕ್ಕೊಮ್ಮೆ ಮೆಸ್ಸೇಜ್ಗಳನ್ನು ನೋಡುತ್ತಾ, ಕಳುಹಿಸುತ್ತಾ, ತಮ್ಮಷ್ಟಕ್ಕೆ ನಗುವ ಕ್ಷಿಪ್ರಸುಖಿಗಳ ಸುಖಾನುಭವದ ದೃಶ್ಯಗಳು. ಈ ಖುಷಿಯನ್ನು ಅನುಭವಿಸದ, ಸ್ಮಾರ್ಟ್ ಫೋನ್ಗಳೇ ಇಲ್ಲದ ಮಂದಿ ಇಲ್ವಾ?  ವಾರಕ್ಕೆ ನಾಲ್ಕು ದಿವಸ ಕೈಕೊಡುವ ಸ್ಥಿರ ದೂರವಾಣಿ ಬಿಟ್ಟರೆ, ಬೇರೆ ಯಾವುದೇ ನೆಟ್ವರ್ಕ್ ಸಿಗದಲ್ಲಿ ಆನ್ಲೈನ್ ಶಿಕ್ಷಣವು ವಿದ್ಯಾರ್ಥಿಗಳನ್ನು ಹೇಗೆ ತಲುಪಬಹುದು?

          ಇಷ್ಟೆಲ್ಲಾ ಯೋಚನೆಗಳು ರಿಂಗಣಿಸುತ್ತಿದ್ದಾಗ ಗದಗ ಜಿಲ್ಲೆಯ ನರಗುಂದ ತಾಲೂಕಿನ ನಾಗನೂರು ಗ್ರಾಮದ ಘಟನೆಯೊಂದು ಮನಕಲಕಿತು - ತನ್ನ ಇಬ್ಬರು ಮಕ್ಕಳಿಗೆ ಆನ್ಲೈನ್ ಶಿಕ್ಷಣದಲ್ಲಿ ಭಾಗಿಯಾಗಲು ಮನೆಯಲ್ಲಿ ಟಿವಿ ಇಲ್ಲ. ಅವರಿಗೂ ಶಿಕ್ಷಣ ಸಿಗಬೇಕು ಎಂದು ಅವರಮ್ಮ ಕಸ್ತೂರಿ ಚಲವಾದಿ ತನ್ನ ಮಾಂಗಲ್ಯವನ್ನು ಅಡವಿಟ್ಟು ಟಿವಿ ಖರೀದಿಸಿದರು. ಮಾಧ್ಯಮದಲ್ಲದು ಸುದ್ದಿಯಾಯಿತು.

ನೆಟ್ವರ್ಕ್ ಶಿಕ್ಷಣದ ಯಶವನ್ನು ಹೇಳುವಾಗ, ಅದು ಸಿಗದೆ ಒದ್ದಾಡುವ ಮನಸ್ಸುಗಳೂ ನೆನಪಾಗಬೇಕು. ಒಂದು ವರುಷ ಶಾಲೆಗೆ ಹೋಗದಿದ್ದರೆ ತೊಂದರೆಯಿಲ್ಲ. - ಕೊರೊನಾ ಭಯದಿಂದ ಅಪ್ಪಾಮ್ಮ ಆಡುವ ಮಾತುಗಳು ವಾಸ್ತವದ ಅಣಕ. ಮಕ್ಕಳ ಮನಸ್ಸನ್ನು ಓದಲು ಬಂದರೆ ಇವೆಲ್ಲಾ ಅರ್ಥವಾಗುತ್ತದೆ. ಪಠ್ಯದ ಹೊರತಾಗಿ ಕಲಿಯುವಂತಹ ಸಂವಹನ, ಭಾಷೆ, ಕ್ರೀಡೆ, ಸೌಹಾರ್ದತೆ, ಮನೋರಂಜನೆ.. ಇತ್ಯಾದಿಗಳು ಮನೆಯಲ್ಲಿ ನೀಡಲು ಸಾಧ್ಯವೇ?