Monday, November 8, 2021

ಅಕ್ಷರದಿಂದ ಹಳ್ಳಿ ಅಭಿವೃದ್ಧಿ

 

(ಸುಮಾರು ಏಳೆಂಟು ವರುಷದ ಹಿಂದೆ... ಹೃದಯಿಗ ಮುಳಿಯ ಜಯಶಂಕರ ಶರ್ಮರ ಜತೆ ಹಾಜಬ್ಬರ ಮನೆಯಂಗಳದಲ್ಲಿ ನಿಂತಾಗ ಅವರಿಗೆ ಸಡಗರ. ಇಬ್ಬರ ಕೈ ಹಿಡಿದು ಮನೆಯೊಳಗೆ ಎಳೆದೊಯ್ದು, ಪಾನೀಯ ನೀಡಿ, ಕಿತ್ತಳೆ ನೀಡಿದ ಆತಿಥ್ಯ ಮರೆಯದ ಕ್ಷಣ. ಅಂದು ಹೊಸೆದ ಅವರ ಲೇಖನವು ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಅದರ ಪೂರ್ಣ ಪಾಠ ಇಲ್ಲಿದೆ. ಲೇಖನವು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯಗಳ ವಾಣಿಜ್ಯ ವಿಭಾಗದ ನಾಲ್ಕನೇ ಸೆಮಿಸ್ಟರಿನ ಕನ್ನಡ ಪಠ್ಯದಲ್ಲಿ ಸೇರ್ಪಡೆಗೊಂಡಿತ್ತು. ಹಾಜಬ್ಬರಿಗೆ ಪದ್ಮಶ್ರೀ ಪ್ರದಾನವಾದ ಈ ದಿವಸ (8-11-2021) ಪಠ್ಯವೂ ಖುಷಿಪಟ್ಟಿರಬೇಕು. ಹಾಜಬ್ಬರಿಂದಾಗಿ ಪಠ್ಯಕ್ಕೆ ಗೌರವ ಬಂತು. ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಶುಭಾಶಯಪೂರ್ವಕ ಅಭಿನಂದನೆಗಳು.)

ಮಂಗಳೂರು ಸನಿಹದ ನೇತ್ರಾವತಿ ನದಿ ದಂಡೆಯ ಚಿಕ್ಕ ಹಳ್ಳಿ 'ಹರೇಕಳ'. ಬಹುತೇಕರ ವೃತ್ತಿ ಬೀಡಿ ತಯಾರಿ. ಪುಡಿಗಾಸು ಆದಾಯ. ಹೊಟ್ಟೆಗೆ ತಂಪುಬಟ್ಟೆಯ ದಿನಗಳೇ ಅಧಿಕ. ಅಕ್ಷರವೆಂಬುದು ಬದುಕಿಂದ ಬಹುದೂರ. ಉಳ್ಳವರಿಗೆ ಎರಡ್ಮೂರು ಕಿಲೋಮೀಟರ್ ದೂರದ ಶಾಲೆ. ಹೊರ ಪ್ರಪಂಚ ಕತ್ತಲು. ದಶಕದ ಹಿಂದಿನ ಚಿತ್ರಣವಿದು.

ಈಗ 'ಹರೇಕಳ' ರಾಷ್ಟ್ರ ಮಟ್ಟದಲ್ಲಿ ಖ್ಯಾತಿ. ನಿರಕ್ಷರಿಗಳು ಕಡಿಮೆ. ಅಲ್ಲಿ ಆಧುನಿಕತೆಯ ಮಿರುಗು ಇದೆ. ಶ್ರೀಮಂತರು ಹೆಚ್ಚಿರದಿದ್ದರೂ ಶ್ರೀಮಂತ ವಾಹನಗಳು ಬರುತ್ತಿವೆ. ಮಂತ್ರಿ ಮಹೋದಯರು ಕಾಲಿಟ್ಟಿದ್ದಾರೆ. ಕನ್ನಾಡು ಮಾತ್ರವಲ್ಲ, ಹೊರ ರಾಜ್ಯದ ಮಾಧ್ಯಮಗಳಲ್ಲಿ ಹರೇಕಳ ದಾಖಲಾಗುತ್ತಿದೆ.

ಬದಲಾವಣೆಗೆ ಕಾರಣ? ಗಣಿ ಧೂಳು ರಾಚಿಲ್ಲ. ಕೋಟಿಗಟ್ಟಲೆ ಹರಿವು ಬಂದಿಲ್ಲ. ಸದಾ ಹೊಗೆಯುಗುಳುವ ಫ್ಯಾಕ್ಟರಿಗಳು ಇಲ್ಲವೇ ಇಲ್ಲ. ಹಾಗಾದರೆ ಏನು? ಹಾಜಬ್ಬ ಎಂಬ ಸಾದಾ ಬಡ ಮನುಷ್ಯ ಹರೇಕಳಕ್ಕೆ ಮರುಹುಟ್ಟು ನೀಡಿದ್ದಾರೆ ಎಂದರೆ ನಂಬ್ತೀರಾ? 'ತನ್ನೂರಲ್ಲಿ ನಿರಕ್ಷಿಗಳಿರಬಾರದು' ಎಂಬ ಸಂಕಲ್ಪದಿಂದ ಶುರುವಾದ ಶಾಲೆಯಲ್ಲೀಗ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು. ಹದಿಮೂರು ಅಧ್ಯಾಪಕ ವರ್ಗ. ಎಲ್ಲಾ ಸಂಪನ್ಮೂಲವನ್ನು ಹೊಂದಿದ ವ್ಯವಸ್ಥೆ.

ಅಕ್ಷರ ಕಾಯಕ : ಹರೇಕಳ ಹಾಜಬ್ಬರ ವೃತ್ತಿ ಹಣ್ಣು ಮಾರಾಟ. ರಖಂ ವ್ಯಾಪಾರಿಗಳಿಂದ ಖರೀದಿಸಿ, ಬುಟ್ಟಿಯಲ್ಲಿಟ್ಟು ಮಂಗಳೂರಿನ ಹಂಪನಕಟ್ಟಾ ಪರಿಸರದಲ್ಲಿ ವ್ಯಾಪಾರ. ಸಂಜೆಯಾಗುವಾಗ 75 - 100 ರೂಪಾಯಿ ಕಿಸೆ ಸೇರಿದರೆ ಅಂದಿನ ಸಂಪಾದನೆ. ಮನೆಮಂದಿನ ಬೀಡಿ ಗಳಿಕೆಯೊಂದಿಗೆ ಕುಟುಂಬ ನಿರ್ವಹಣೆ.

ಒಮ್ಮೆ ವಿದೇಶಿ ವ್ಯಕ್ತಿಯೊಬ್ಬ ಹಣ್ಣು ಖರೀದಿಸುವಾಗ ಇಂಗ್ಲೀಷಲ್ಲಿ ಮಾತನಾಡಿದ. ಹಾಜಬ್ಬರು ನಿರುತ್ತರಿ. ಹೇಗೋ ನಿಭಾಯಿಸಿದರು. ಅಕ್ಷರ ಕಲಿಯದೆ ಭಾಷೆ ಬಾರದು. ಭಾಷೆ ಬಾರದೆ ಬದುಕು ಸಾಗದು. ಇದಕ್ಕೇನು ಪರಿಹಾರ? ತನ್ನೂರಿನ ಮಂದಿ ಅನಕ್ಷರಸ್ಥರು. ನನ್ನ ಸ್ಥಿತಿ ಇವರಿಗೆ ಬಾರದಿರಲಿ ಎನ್ನುತ್ತಾ ಶಾಲೆಯೊಂದರ ರೂಪೀಕರಣದ ಕನಸು ಕಟ್ಟಿದರು. ಅದು ಸಸಿಯಾಯಿತು, ಹೆಮ್ಮರವಾಗಿ ಫಲ ಬಿಟ್ಟಿತು.

ಊರಿನ ಪ್ರತಿಷ್ಠಿತರಲ್ಲಿ ವಿಚಾರ ಪ್ರಸ್ತಾವನೆ. ಸಹವ್ಯಾಪಾರಿಗಳಲ್ಲಿ ನಿವೇದನೆ. ಗೆಳೆಯಲ್ಲಿ ವಿಚಾರ ಹಂಚಿಕೆ. ಎಲ್ಲರೂ ನಕ್ಕರು, ಗೇಲಿ ಮಾಡಿದರು, ಇವರ ಚಿತ್ತಸ್ಥಿತಿಯನ್ನು ಸಂಶಯಿಸಿದರು! ಅರ್ಧ ಹೊತ್ತು ಹಣ್ಣು ಮಾರಾಟ. ಉಳಿದರ್ಧ ಹೊತ್ತು ಅವರಿವರಿಂದ ಮಾಹಿತಿ ಸಂಗ್ರಹಿಸಿ, ಅವಶ್ಯಕತೆಗಳ ಅರ್ಜಿಯೊಂದಿಗೆ ಸರಕಾರಿ ಇಲಾಖೆಗಳ ಮೆಟ್ಟಿಲೇರಿದರು. ನಿತ್ಯ ಅಲೆದಾಟ. ಅಧಿಕಾರಿಗಳಿಂದ ನಿಂದನೆ, ಅವಮಾನ. ಅರ್ಜಿ ತೆಕ್ಕೊಳ್ಳುವುದು ಬಿಡಿ, ಕಚೇರಿಯೊಳಗೆ ಪ್ರವೇಶಿಸಲೂ ಬಿಡದ ಸರಕಾರಿತನ.

1999ನೇ ಇಸವಿ. ಇಲಾಖಾ ಕಚೇರಿಗಳಿಗೆ ಭೇಟಿ ನೀಡಿ ಹಾಜಬ್ಬರ ಹಲವು ಚಪ್ಪಲಿಗಳು ಸವೆದಿದ್ದುವು. ಶಾಲೆ ಕಟ್ಟುವ ಆಸೆ ಮಾತ್ರ ಕಮರಲಿಲ್ಲ. ಆಗ ಯು.ಟಿ.ಫರೀದರು ಉಳ್ಳಾಲ ಕ್ಷೇತ್ರದ ಶಾಸಕರಾಗಿದ್ದರು. ಹಾಜಬ್ಬರು ಶಾಸಕರ ಮನೆಯ ಕದ ತಟ್ಟಿದರು. ಊರಿನ ಅಝೀಝ್ ಮಲಾರ್ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಚುನಾಯಿತರಾದರು. ಇವರಿಬ್ಬರನ್ನು ಬೆಂಬಿಡದ ಹಾಜಬ್ಬರ ಅಕ್ಷರ ಪ್ರೇಮಕ್ಕೆ ಪ್ರತಿಯಾಗಿ ಹರೇಕಳದ 'ನ್ಯೂಪಡ್ಪು'ಗೆ (ಹಾಜಬ್ಬರು ವಾಸಿಸುವ ಪ್ರದೇಶ) ಸರಕಾರಿ ಶಾಲೆ ಮಂಜೂರಾತಿ.

ಸ್ವಂತದ್ದಾದ ಕಟ್ಟಡವಿಲ್ಲ. ಸಹಾಯಕ್ಕೆ ಬರುವ ಮನಸ್ಸುಗಳಿಲ್ಲ. ಒಂಟಿ ನಡೆ. ಒಂಟಿ ನಿರ್ಧಾರ. ಸ್ಥಳೀಯ ತ್ತಾಹಾ ಜುಮಾ ಮಸೀದಿಯ ಮದ್ರಸದ ಮುಖ್ಯಸ್ಥ ಖಾಲಿದ್ರಲ್ಲಿ ಸಮಾಲೋಚನೆ. ತರಗತಿ ನಡೆಸಲು ಒಪ್ಪಿಗೆ. ಮಕ್ಕಳ ದಾಖಲಾತಿಗಾಗಿ ಮನೆಮನೆ ಭೇಟಿ. ಶಿಕ್ಷಣದ, ಅಕ್ಷರದ ಮಹತ್ವದ ಸಾರಿಕೆ. ಇಪ್ಪತ್ತೆಂಟು ಮಕ್ಕಳ ದಾಖಲಾತಿ. ಪ್ರಭಾರ ಉಪಾಧ್ಯಾಯಿನಿಯೊಬ್ಬರನ್ನು ಸರಕಾರ ನೇಮಿಸಿತು. ಶುಭ ಮುಹೂರ್ತದಂದು ಒಂದನೇ ತರಗತಿ ಆರಂಭದೊಂದಿಗೆ ಹಾಜಬ್ಬರು ಕಟ್ಟಿದ 'ಅಕ್ಷರಸೌಧ' ಅನಾವರಣ. 

ನನ್ನೂರು, ನನ್ನ ಶಾಲೆ : ಎರಡನೇ ವರುಷ ಮತ್ತೆ ಹದಿನೇಳು ಮಂದಿ ವಿದ್ಯಾರ್ಥಿಗಳ ಪ್ರವೇಶ. 'ನನ್ನೂರು, ನನ್ನ ಶಾಲೆ' ಎಂಬ ಖುಷಿಯಲ್ಲಿದ್ದ ಹಾಜಬ್ಬರಿಗೆ ಎರಡನೇ ವರುಷದಿಂದ ಸವಾಲು. ಮದ್ರಸದಲ್ಲಿ ಹೆಚ್ಚು ಕಾಲ ತರಗತಿ ಮಾಡುವಂತಿಲ್ಲ. ಬೇರೆ ಪ್ರತ್ಯೇಕ ವ್ಯವಸ್ಥೆಯಿಲ್ಲ. 'ಚಾಕ್ಪೀಸ್' ತರಲೂ ದುಡ್ಡಿಗೆ ತತ್ವಾರ. ಡೊನೇಶನ್ ಕೇಳಿಲ್ಲ. ಹೊಸ ಜಾಗವೋ, ಕಟ್ಟಡವೋ ಆಗಲೇ ಬೇಕಾಗಿತ್ತು.

ಸನಿಹದ ಏರಿಳಿತವಾಗಿದ್ದ ನಲವತ್ತು ಸೆಂಟ್ಸ್ (ಅತಿಕ್ರಮಿತ) ಜಾಗಕ್ಕೆ ಸರಿಯಾದ ದಾಖಲೆ ಪತ್ರಗಳನ್ನು ಮಾಡಿಸಿಕೊಂಡರು. ಐವತ್ತೈದು ಸಾವಿರ ರೂಪಾಯಿಗೆ ಖರೀದಿ. ಹಸಿವಿನಿಂದ ಸಂಪಾದಿಸಿದ ತನ್ನಲ್ಲಿದ್ದ ಹಣವನ್ನು ಮನೆಮಂದಿಗೆ ಅರಿಯದಂತೆ ಮುಂಗಡ ನೀಡಿದರು. ಉಳಿದ ಮೊತ್ತವನ್ನು ಶೀಘ್ರ ಪಾವತಿಸುವಂತೆ ಒಡಂಬಡಿಕೆ.

ದಿನ ಸರಿದಂತೆ ಹಾಜಬ್ಬರ ರಕ್ತದೊತ್ತಡ ಏರುತ್ತಿತ್ತು. ಹಣ್ಣು ಮಾರಿದ ಮೊತ್ತ ಬದುಕಿಗೆ ಸರಿಸಮ. ಕರುಣೆ ತೋರಿ ನೀಡಿದ ಹತ್ತೋ, ಐವತ್ತೋ ರೂಪಾಯಿಗಳು ಶಾಲಾ ನಿರ್ವಹಣೆಗೆ ವೆಚ್ಚ.  ದೊಡ್ಡ ಮೊತ್ತವನ್ನು ತಾನೊಬ್ಬನೇ ಹೊಂದಾಣಿಸುವುದು ಕಷ್ಟ. ಮರುಪಾವತಿಯ ದಿವಸ ಹತ್ತಿರವಾಗುತ್ತಿದ್ದಂತೆ 'ಮಾತಿನಂತೆ ನಡೆಯಲಾಗಲಿಲ್ಲವಲ್ಲಾ' ಎನ್ನುತ್ತಾ ತಲೆಮರೆಸಿಕೊಂಡು ಓಡಾಡಿಕೊಂಡಿದ್ದರು! 

ಹಾಜಬ್ಬರ ಅಕ್ಷರ ಪ್ರೀತಿಯನ್ನು ಕಂಡು ಶಾಫಿ ಶಮ್ನಾಡ್ ಅವರು ಐದು ಸಾವಿರ ರೂಪಾಯಿಯ ಪ್ರಥಮ ದೇಣಿಗೆಯನ್ನು ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ಮುಂದೆ ಹಾಜಬ್ಬರು ಹಾಜರಾಗಿ ತನ್ನ ಶಿಕ್ಷಣ ಕತೆಯನ್ನು ನಿವೇದಿಸಿಕೊಂಡಾಗ ಹೆಗ್ಗಡೆಯವರು ದಂಗು. 'ನಿನಗಾಗಿ ಅಲ್ಲವಲ್ಲಾ' ಎಂದು ಒಂದಷ್ಟು ಮೊತ್ತವನ್ನು ಆರಂಭಿಕವಾಗಿ ಕೊಟ್ಟರು. ಬಳಿಕ ದಾನಿಗಳು ಹತ್ತಿರವಾಗತೊಡಗಿದರು. ಹನಿಗೂಡಿ ಹಳ್ಳವಾಯಿತು. ತೆಕ್ಕೊಂಡ ಸಾಲ ತೀರಿಸಿಯಾಗಿತ್ತು. ಏರುತಗ್ಗಿನ ಪ್ರದೇಶವನ್ನು ಜೆಸಿಬಿ ಮೂಲಕ ಸಮತಟ್ಟುಗೊಳಿಸಿದ್ದೂ  ದಾನಿಗಳೇ.

ಶಾಸಕರ ಮೂಲಕ ಶಿಕ್ಷಣ ಇಲಾಖೆಯ ಸಂಪರ್ಕ. ಸರ್ವ ಶಿಕ್ಷಾ ಅಭಿಯಾನ ಯೋಜನೆಯಲ್ಲಿ ಹಣ ಮಂಜೂರು. ಕಟ್ಟಡ ನಿರ್ಮಾಣ.  2001ರಲ್ಲಿ ಮದ್ರಸದಲ್ಲಿದ್ದ ತರಗತಿ ಹೊಸ ಕಟ್ಟಡಕ್ಕೆ ಶಿಪ್ಟ್.  ಅಧ್ಯಾಪಕರಿಗೆ ಕುರ್ಚಿ-ಮೇಜುಗಳನ್ನು ಅಲ್ಪಸ್ವಲ್ಪ ಹಣದಿಂದ ಹೊಂದಾಣಿಸಿದರು. ಚಾಪೆ ಹಾಸಿ ಮಕ್ಕಳನ್ನು ಕೂಡ್ರಿಸಿ ಪಾಠಕ್ಕೆ ವ್ಯವಸ್ಥೆ ಮಾಡಿದರು.

2003-04ರಲ್ಲಿ ಹೊಸ ಕಟ್ಟಡದಲ್ಲಿ ಮೂರನೇ ತರಗತಿ ಆರಂಭ. ಮಕ್ಕಳ ಸಂಖ್ಯೆ ಎಪ್ಪತ್ತು. ಅಧ್ಯಾಪಕರು ಇಬ್ಬರು. ಇನ್ನೋರ್ವರರ ಜವಾಬ್ದಾರಿಯನ್ನು ತಾನೇ ಹೊತ್ತರು. ಇದೇ ಸಂದರ್ಭದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉಳ್ಳಾಲ ದರ್ಗಾ ಸಮಿತಿ, ಹಲವು ದಾನಿಗಳು ಹಾಜಬ್ಬರಿಗೆ ಹೆಗಲೆಣೆಯಾಗಿ ನಿಂತರು. ಶ್ರೀ ಧರ್ಮಸ್ಥಳದ ಹೆಗ್ಗಡೆಯವರು ಮೂರು ವರುಷಕ್ಕೆ ಇಬ್ಬರು ಅಧ್ಯಾಪಕರ ಮತ್ತು ಜಮೀರ್ ಅಹಮದ್ ಅವರು ಒಬ್ಬ ಅಧ್ಯಾಪಕರ ಪ್ರಾಯೋಜನೆ ಮಾಡಿದರು. 

ಅಭಿವೃದ್ಧಿಗೆ ನೆರವಾದ ಮಾಧ್ಯಮ ಬೆಳಕು : ಮಂಗಳೂರಿನ ಹೊಸದಿಗಂತ ದೈನಿಕವು ಪ್ರಥಮವಾಗಿ ಹಾಜಬ್ಬರ ಸಾಹಸವನ್ನು ಬಿತ್ತರಿಸಿತು. ನಾಲ್ದೆಡೆ ಪ್ರಚಾರವಾಯಿತು. 2004 'ಕನ್ನಡಪ್ರಭ ವರ್ಷದ ವ್ಯಕ್ತಿ'ಯಾಗಿ ಹಾಜಬ್ಬ ಆಯ್ಕೆ. ಹಾಜಬ್ಬರ ಶಿಕ್ಷಣ ಕೆಲಸಕ್ಕೆ ಮಾಧ್ಯಮ ಬೆಳಕು ಬಿತ್ತು. ಹುಡುಕಿ ಬರುವ ದಾನಿಗಳು ಹೆಚ್ಚಾದರು. ಮೊದಲು ಯಾರು ಅಪಹಾಸ್ಯ, ಅವಮಾನ ಮಾಡಿದ್ದರೋ, ಅವರಿಂದ ಹಾಜಬ್ಬರಿಗೆ ಗೌರವ ಪ್ರಾಪ್ತಿ.

ದಾನಿಗಳ ಮುಂದೆ ನಿಲ್ಲಲು ಶುದ್ಧಹಸ್ತರಾದ ಹಾಜಬ್ಬರಿಗೆ ನಾಚಿಕೆಯಿಲ್ಲ. 'ನನಗಲ್ಲ, ಸಮಾಜಕ್ಕೆ' ಎಂಬ ನಿಲುವಿನಿಂದಾಗಿ ದಾನಿಗಳ ಸಂಖ್ಯೆ ಹೆಚ್ಚಿತು. ಶೌಚಾಲಯ, ಪಾಕಶಾಲೆ, ರಂಗಮಂದಿರ, ವಿಜ್ಞಾನ ಉಪಕರಣ.. ಲಭ್ಯತೆಯನ್ನು ವಿವರಿಸುವಾಗ ಒಂದೊಂದು ಪರಿಕರಗಳ ಹಿಂದೆ ಒಬ್ಬೊಬ್ಬ ದಾನಿಯ ಹೆಸರನ್ನು ಹೇಳಲು ಮರೆಯುವುದಿಲ್ಲ. ದಾನ ಕೊಟ್ಟ ವ್ಯಕ್ತಿ, ಸಂಸ್ಥೆಯ ಹೆಸರನ್ನು ಅಳಿಸಲಾಗದಂತೆ ಅಲ್ಲಲ್ಲಿ ಬರೆದು ಹಾಕಿದ್ದಾರೆ.

ದೇಶದ ಪ್ರತಿಷ್ಠಿತ ಮಾಧ್ಯಮ CNN-IBN  ಮತ್ತು ರಿಲೆಯನ್ಸ್ ಗ್ರೂಪ್ 2008ರಲ್ಲಿ 'ದಿ ರಿಯಲ್ ಹೀರೋಸ್' ಎಂಬ ಪ್ರಶಸ್ತಿಯನ್ನು ಐದು ಲಕ್ಷ ರೂಪಾಯಿಯೊಂದಿಗೆ ನೀಡಿತು. ತನಗೆ ಸಿಕ್ಕಿದ ಪ್ರಶಸ್ತಿಯ ಮೊತ್ತದ ಒಂದು ಪೈಸೆ ಹಾಜಬ್ಬ ಸ್ವಂತಕ್ಕಾಗಿ ಬಳಸಲಿಲ್ಲ. ಶಾಲಾ ಸನಿಹದ ಐವತ್ತೆರಡು ಸೆಂಟ್ಸ್ ಜಾಗ ಶಾಲಾ ಮೈದಾನಕ್ಕಾಗಿ ವ್ಯಯಿಸಿದರು. ಸಾಹಿತಿ ಬೊಳ್ವಾರು ಮಹಮ್ಮದ್ ಕುಂಞಿಯವರು ನಾಲ್ಕು ಲಕ್ಷಕ್ಕೂ ಮಿಕ್ಕಿ ಮೊತ್ತವನ್ನು ಕೊಡಿಸಿದರು. ತನ್ನ ಮನೆಯ ಸೋರುತ್ತಿರುವ ಸೂರನ್ನೂ ಲಕ್ಷಿಸದೆ, ಬಡತನವನ್ನೂ ಗಣನೆಗೆ ತಾರದೆ, ತನಗಾಗಿ ಬಂದ ಲಕ್ಷವನ್ನೂ  ಅಲಕ್ಷ್ಯ ಮಾಡಿ ಅವೆಲ್ಲವನ್ನೂ ತನ್ನ ಕನಸಿನ ಶಾಲೆಗೆ ಧಾರೆಯೆರೆದ ಹಾಜಬ್ಬ ಅಸಾಮಾನ್ಯರಂತೆ ಕಾಣುವುದಿಲ್ಲವೆ?  ಅವರದು ಗಾಂಧಿ ಮಾರ್ಗ. 'ತನಗೆ ಬೇಡ, ಎಲ್ಲವೂ ಸಮಾಜಕ್ಕೆ' ಎಂಬ ಭಾವ.

ಇದ್ದ ಕಟ್ಟಡದಲ್ಲಿ ಹತ್ತೂ ತರಗತಿಯನ್ನು ಪೂರೈಸಲು ಅಸಾಧ್ಯ. ಮೈದಾನಕ್ಕಾಗಿ ಖರೀದಿಸಿದ ಜಾಗದಲ್ಲಿ ಹೈಸ್ಕೂಲ್ ಕಟ್ಟಡ ಮೇಲೇಳುತ್ತಿದೆ. 'ಹತ್ತರ ಕಲಿಕೆಯ ನಂತರ ಹಲವು ವಿದ್ಯಾರ್ಥಿಗಳು ಟಿಸಿ  ಕೊಂಡು ಹೋದರು. ಇಲ್ಲಿ ಪಿ.ಯು.ಸಿ. ಕಲಿಕೆ ಇದ್ದಿದ್ದರೆ ಅವರು ಊರಲ್ಲೇ ಕಲಿಯುತ್ತಿದ್ದರು' ಎನ್ನುವಾಗ ಖೇದ. ಜತೆಗೆ 'ಪಿಯು ಕಾಲೇಜಿ' ಕನಸಿನ ಎಳೆಯ ಸೆಳೆಮಿಂಚು. ಶಾಲೆಯಿಂದ ಅನತಿ ದೂರದ ಬಸ್ಸ್ಟಾಂಡ್ ಸನಿಹದ ಖಾಸಗಿ ಮೈದಾನವು ಪ್ರಸ್ತುತ ಮಕ್ಕಳಿಗೆ ಆಟದ ತಾಣ. 'ನೂತನವಾದ ಆಟದ ಮೈದಾನ, ಪದವಿ ಪೂರ್ವ ಕಾಲೇಜು ಮತ್ತು ಈಗಿದ್ದ ಕಟ್ಟಡ ಕೆಲಸಗಳಿಗೆ ಎಷ್ಟೆಂದರೂ 75 ಲಕ್ಷ ಬೇಕು' ಎನ್ನುತ್ತಾರೆ. 'ಕಷ್ಟವಾಗಲಾರದು, ದಾನಿಗಳಿದ್ದಾರೆ' ಸಂತೃಪ್ತಿ ಪಡುತ್ತಾರೆ.

ಅಕ್ಷರದಿಂದ ಅಭಿವೃದ್ಧಿ : ಮನೆಯಲ್ಲಿ ಬಡತನ. ಮಗ ಪೈಂಟರ್. ಹೆಂಡತಿ ಮೈಮೂನಾ ಮತ್ತು ಇಬ್ಬರು ಮಕ್ಕಳ ಹೊಣೆಯು ಹಣ್ಣಿನ ಬುಟ್ಟಿ ಭರಿಸಬೇಕು. ಚಹಕ್ಕೋ, ಊಟಕ್ಕೋ ಆತ್ಮೀಯವಾಗಿ ಹೋಟೇಲಿಗೆ ಕರೆದರೆ, ಅಷ್ಟೇ ಸಾತ್ವಿಕವಾಗಿ ತಿರಸ್ಕರಿಸುವ ಅಪರೂಪದ ಗುಣ. 'ಇಂದಾಯಿತು, ನಾಳೆಗೋ' ಅವರ ಮರುಪ್ರಶ್ನೆ.

ಹಾಜಬ್ಬರಿಗೆ ಇತ್ತ ಶಾಲೆಯನ್ನು ಕಟ್ಟುವ ಧಾವಂತ, ಓಡಾಟ. ಅತ್ತ ಮನೆಯಲ್ಲಿ ಮಡದಿಯ ಅನಾರೋಗ್ಯ. ತಾಯಿಗೆ ಆಸರೆಗೆ ನಿಂತ ಮೊದಲ ಮಗಳ ಶಾಲಾ ಕಲಿಕೆ ಅರ್ಧದಲ್ಲೇ ನಿಂತಿತು. ಎರಡನೇ ಮಗಳಿಗೆ ಕೂಡಾ ಅನಾರೋಗ್ಯ. ಭವಿಷ್ಯದ ಹಲವು ಆಸೆಗಳನ್ನು ಹೊತ್ತ ಎರಡೂ ಮನಸ್ಸುಗಳು ನಾಲ್ಕು ಗೋಡೆಗಳ ಒಳಗೆ ಬಂಧಿ. ಈಗ ಚೇತರಿಸಿದ್ದಾರೆ ಬಿಡಿ. ಆದರೆ ಊರಿನ ಅಕ್ಷರ ಅಭಿವೃದ್ಧಿಯ ಹಿಂದೆ ತನ್ನ ಸಂಸಾರದ ಕಷ್ಟ-ತ್ಯಾಗವನ್ನು ಕಾಣುವ ಮನಸ್ಸುಗಳು ವಿರಳ. ಅದು ಹಾಜಬ್ಬರಿಗೆ ಬೇಕಾಗಿಯೂ ಇರಲಿಲ್ಲ.

ಹಾಜಬ್ಬ ದಾನಿಗಳಿಂದ ನಗದು ಸ್ವೀಕರಿಸುವುದಿಲ್ಲ. ಚೆಕ್, ಡಿಡಿ ಮೂಲಕ ಮಾತ್ರ. ಅದನ್ನು ಜೆರಾಕ್ಸ್ ಮಾಡಿ ಇಟ್ಟುಕೊಳ್ಳುತ್ತಾರೆ. ದಾನ ನೀಡಿದವರಿಗೊಂದು ಕೃತಜ್ಞತಾ ಪತ್ರ. ವಾರ್ಷಿಕೋತ್ಸವದ ಕರೆಯೋಲೆ. ಕಿಸೆಯಲ್ಲಿದ್ದ ವಿಸಿಟಿಂಗ್ ಕಾರ್ಡ್ಗಳ ಭಾರವು ಹಾಜಬ್ಬರ ಕಾಯಕಕ್ಕೆ ಕನ್ನಡಿ. ಅದನ್ನು ಓದಲು ಬಾರದು. ಆದರೆ ಕಿಸೆಯಿಂದ ತೆಗೆದು ಅದರ ಬಣ್ಣ, ಅಕ್ಷರ ವಿನ್ಯಾಸದ ಆಧಾರದಲ್ಲಿ ಗುರುತು ಹಿಡಿಯುತ್ತಾರೆ.

ನಿತ್ಯ ಮುಂಜಾವಿಗೆ ಎದ್ದು ಮನೆಕೆಲಸಗಳನ್ನು ಪೂರೈಸಿ ಶಾಲೆಗೆ ಭೇಟಿ. ಬೀಗ ತೆಗೆದು, ಅಂಗಳದ ಕಸವನ್ನು ಹೆಕ್ಕಿ, ಟ್ಯಾಂಕಿಗೆ ನೀರು ತುಂಬಿಸಿ, ಅಧ್ಯಾಪಕರು ಬಂದ ಬಳಿಕವೇ ಇಪ್ಪತ್ತನಾಲ್ಕು  ಕಿಲೋಮೀಟರ್ ದೂರದ ಮಂಗಳೂರಿಗೆ ಹಣ್ಣು ವ್ಯಾಪಾರಕ್ಕೆ ತೆರಳುತ್ತಾರೆ.

'ಶಾಲೆ ಆರಂಭವಾದ ಬಳಿಕ ನನ್ನೂರು ಬದಲಾಗಿದೆ. ಪೇಪರ್ ಬರುತ್ತದೆ. ಹೊರ ಪ್ರಪಂಚದ ಸುದ್ದಿ ಇಲ್ಲಿ ಮಾತನಾಡುತ್ತಾರೆ. ಮಕ್ಕಳಿಗೆ ಅಕ್ಷರಾಭ್ಯಾಸ ಬಂದಿದೆ. ಓದುವ ಪರಿಪಾಠವಿದೆ. ನಾಲ್ಕು ಕಡೆಯಿಂದ ಜನ ಇಲ್ಲಿಗೆ ಬರುತ್ತಾರೆ. ಹಣವೊಂದೇ ಊರಿನ ಅಭಿವೃದ್ಧಿಯಾಗಲು ಸಾಲದು. ಅಕ್ಷರದಿಂದ ಮಾತ್ರ ಅಭಿವೃದ್ಧಿ' - ಅಕ್ಷರ ದಾಸೋಹದಿಂದ ಫಲಶ್ರುತಿಯನ್ನು ಹಾಜಬ್ಬ ಹೇಳುತ್ತಲೇ ಹೋಗುತ್ತಾರೆ.

ಅಕ್ಷರ ಯೋಗಿಯ ಬದುಕಲ್ಲಿ ಬಡತನವಿದೆ. ಆದರೆ ಮನಸ್ಸಿಗೆ ಬಡತನದ ಸೋಂಕಿಲ್ಲ. ತನ್ನೂರಿನ ಮಕ್ಕಳು ಅಕ್ಷರ ಕಲಿಯುವಾಗ ಅದರೊಂದಿಗೆ 'ಸ್ವರ್ಗ ಸುಖ'ವನ್ನು ಅನುಭವಿಸಿದ್ದಾರೆ. ರಾಜಕೀಯ, ರಾಜಕಾರಣದಿಂದ ದೂರ. ಸಂಮಾನ ಮಾಡಿದಾಗಲೆಲ್ಲಾ 'ನನಗ್ಯಾಕೆ ಗೌರವ' ಎಂದು ವಿನೀತರಾಗಿ ಹೇಳುತ್ತಾರೆ.

ಹರೇಕಳ ನ್ಯೂಪಡ್ಪು '..ಜಿ..ಸರಕಾರಿ ಹಿರಿಯ/ಪ್ರಾಥಮಿಕ/ಪ್ರೌಢ ಶಾಲೆ'  ಗೋಡೆಗಳಲ್ಲಿ ದಾನಿಗಳ ಹೆಸರನ್ನು ಕೆತ್ತಿದ ಹಾಜಬ್ಬರ ಹೆಸರು ಶಾಲೆಯಲ್ಲೆಲ್ಲೂ ಕಾಣಸಿಗುವುದೇ ಇಲ್ಲ! ಕಪಟ ಗೊತ್ತಿಲ್ಲದ, ಡೋಂಗಿಯ ಹತ್ತಿರ ಸುಳಿಯದ, ಹೈಫೈ ಬದುಕಿಗೆ ಆಸೆ ಪಡದ ಹಾಜಬ್ಬ ನಿಜವಾಗಿಯೂ ಕಾಲಘಟ್ಟದ ಓರ್ವ ಅಸಾಮಾನ್ಯ.


Wednesday, September 22, 2021

ಸ್ವಾಧ್ಯಾಯಿ, ಪುರೋಹಿತ, ಕಲಾಸಕ್ತ, ಸಾಮಾಜಿಕ ಚಿಂತಕ - ಕೂಡ್ಲು ಕೃಷ್ಣ ಮಯ್ಯ ವಿಧಿವಶ

        ಕಾಸರಗೋಡು ಜಿಲ್ಲೆಯ ಕೂಡ್ಲು ವಿಷ್ಣುಮಂಗಲ ದೇವಳದ ಸನಿಹ 'ಮಥುರಾ'ದಲ್ಲಿ ವಾಸ್ತವ್ಯವಿರುವ ಕೂಡ್ಲು ಕೃಷ್ಣ ಮಯ್ಯರು (78) ಸೆಪ್ಟೆಂಬರ್ 21ರಂದು ಮುಂಜಾನೆ ವಿಧಿವಶರಾದರು.

        ಮಯ್ಯರ ಜನನ 28-4-1943. ಪುರೋಹಿತರಾಗಿ ಜನಾನುರಾಗಿ. ತಾನು ಮಾಡುವ ಕರ್ಮಾಂಗಗಳಲ್ಲಿ ರಾಜಿಯಿಲ್ಲದ ನಿರ್ವಹಣೆ. ಹಾಗಾಗಿ ಅವರನ್ನು ಹೋಮ-ಪೂಜಾದಿಗಳಿಗೆ ಹುಡುಕಿ ಬರುವವರ ಸಂಖ್ಯೆ ಸಣ್ಣದಲ್ಲ. ಈಚೆಗಿನ ಕೆಲವು ವರುಷಗಳಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಆಸಕ್ತಿ ಹೊಂದಿ ಅಧ್ಯಯನ ಮಾಡುತ್ತಿದ್ದರು. 

ಯಾವುದೇ ಆರ್ಥಿಕ ಸುದೃಢತನವು ಇಲ್ಲದೆ ಬೆವರಿನಿಂದ ಕಟ್ಟಿದ ಸ್ವ-ರೂಢಿತ ಬದುಕು. ಒಂದೊಂದು ಪೈಸೆಯೂ ಅವರಿಗೆ ಕೋಟಿ ರೂಪಾಯಿಗೆ ಸಮವಾಗಿತ್ತು. ಎಚ್ಚರದ ಆರ್ಥಿಕ ನಿರ್ವಹಣೆ, ತನುಶ್ರಮವನ್ನು ಮರೆತ ದುಡಿಮೆ, ಸ್ವ-ಹಿತಕ್ಕಾಗಿ ಕೈಚಾಚದ ವ್ಯಕ್ತಿತ್ವ, ಗುರುತರವಾದ ಸಾಮಾಜಿಕ ಕಾಳಜಿಗಳು ಮಯ್ಯರನ್ನು ಸಾಮಾಜಿಕವಾಗಿ ಗುರುತಿಸುವಂತೆ ಮಾಡಿತ್ತು. 

ಕೂಡ್ಲುಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿದ್ದರು. ಶ್ರೀ ಶೇಷವನ ದೇವಸ್ಥಾನದ ಆಗು ಹೋಗುಗಳಲ್ಲಿ ಯಥಾಸಾಧ್ಯ ಭಾಗವಹಿಸುತ್ತಿದ್ದರು. ಶೇಷವನದ ಕುರಿತು ತುಂಬಾ ಗೌರವ, ಅಭಿಮಾನ ಹೊಂದಿದ್ದರು. ಬದುಕಿನ ಪೂರ್ವಾರ್ಧದಲ್ಲಿ ಕಾಸರಗೋಡು ಜಿಲ್ಲೆಯ ಸಹಕಾರಿ ಸ್ಟೋರ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು. ತನ್ನ ಸೇವೆಯಿಂದ ಗ್ರಾಹಕ ಸ್ವೀಕೃತಿಯನ್ನು ಪಡೆದಿದ್ದರು.

ಪುಸ್ತಕ, ಪತ್ರಿಕೆಗಳನ್ನು ಓದುವುದು ಮಯ್ಯರ ಮೆಚ್ಚಿನ ಹವ್ಯಾಸ. ಅದರಲ್ಲೂ 'ಹೊಸದಿಗಂತ' ಖಾಯಂ ಓದುಗ. ಪತ್ರಿಕೆಯ ಸಂಪಾದಕೀಯ ಪುಟಗಳ ಲೇಖನಗಳನ್ನು ಓದುತ್ತಿದ್ದರು. ಸಮಾನ ಮನಸ್ಸಿನವರೊಡನೆ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಜಾಗತಿಕ ಆಗು ಹೋಗುಗಳನ್ನು ಚರ್ಚಿಸುತ್ತಿದ್ದರು. ರಾಜಕೀಯಕ್ಕಿಂತಲೂ ದೇಶ, ಸಂಸ್ಕೃತಿ, ಆಚಾರ, ವಿಚಾರಗಳ ಮಾತುಕತೆಗಳಲ್ಲಿ ತೆರೆದುಕೊಳ್ಳುತ್ತಿದ್ದರು.

    ಯಾವುದೇ ವಿಚಾರಗಳನ್ನು 'ನನಗೆ ಅದರಲ್ಲಿ ಆಸಕ್ತಿಯಿಲ್ಲ' ಎಂದವರಲ್ಲ. ಯಕ್ಷಗಾನ, ನಾಟಕ.. ಮೊದಲಾದ ಕಲೆಗಳಲ್ಲಿ ಆಸಕ್ತ. ಕ್ರಿಕೆಟ್ ಅವರ ಮೆಚ್ಚಿನ ಕ್ರೀಡೆ. ಕ್ರಿಕೆಟಿನ ಸೂಕ್ಷ್ಮಾತಿಸೂಕ್ಷ್ಮಗಳನ್ನು ಬಲ್ಲವರು. ಅದನ್ನು ಚರ್ಚಿಸಬಲ್ಲರು. 

ಆಧುನಿಕವಾದ ಯಾವುದೇ ರಂಗಸಜ್ಜಿಕೆಗಳಿಲ್ಲದ ಸಮಯದಲ್ಲಿ ನಾಟಕ ರಂಗವು ಜನಮಾನಸದಲ್ಲಿ ತನ್ನ ಬೇರನ್ನು ಇಳಿಬಿಟ್ಟಿದ್ದ ಕಾಲದಲ್ಲಿ ಮಯ್ಯರು ಸ್ವಲ್ಪ ಕಾಲ ಕಲಾವಿದರಾಗಿದ್ದರು. “ನಾವು ಮಯ್ಯರ ಅಂಗಳದಲ್ಲಿ ನಾಟಕ ಪ್ರಾಕ್ಟೀಸ್ ಮಾಡುತ್ತಿದ್ದೆವು. ಅವರದೇ ಆತಿಥ್ಯ. ಅವರೂ ಪಾತ್ರ ಮಾಡುತ್ತಿದ್ದರು. ನಾಟಕ ರಂಗದಲ್ಲಿ ಹಾಸ್ಯ ಮತ್ತು ಗಂಭೀರ ಪಾತ್ರಗಳಲ್ಲಿ ಮಯ್ಯರದು ಗುರುತರ ಅಭಿವ್ಯಕ್ತಿ.” ಹೀಗೆಂದವರು ರಂಗ ಕಲಾವಿದ ಚಿದಾನಂದ ಕಾಮತ್ ಕಾಸರಗೋಡು. ಈಗವರು ವಿಧಿವಶ.

ಸಾಂಸಾರಿಕವಾಗಿ ನೆಮ್ಮದಿಯಾಗಿದ್ದು, ನಿಸ್ಪೃಹ ಮನಸ್ಥಿತಿಯನ್ನು ರೂಢಿಸಿಕೊಂಡಿದ್ದ ಮಯ್ಯರ ಕೊನೆಯ ಕ್ಷಣ ಮರೆಯಲಾಗದು. ಕೆಲವು ವರುಷಗಳಿಂದ ಬಾಧಿಸುತ್ತಿದ್ದ ಕಫವೇ ಮೊದಲಾದ ವಯೋಸಹಜ ತೊಂದರೆಗಳಿಗೆ ಯೋಗ, ಮುದ್ರೆಗಳಿಂದ ಪರಿಹಾರವನ್ನು ಕಂಡುಕೊಂಡಿದ್ದರು. ಸೆ.21ರಂದು ಬೆಳಿಗ್ಗೆ ಸುಮಾರು ಆರುವರೆ ಗಂಟೆ ಇರಬಹುದು. ದೈನಂದಿನ ಅನುಷ್ಠಾನದ ವಿಚಾರಗಳನ್ನು ಮಗನೊಂದಿಗೆ ಚರ್ಚಿಸಿ ಯೋಗ ಮಾಡಲು ತನ್ನ ಕೋಣೆಗೆ ತೆರಳಿದ್ದರು. ಯೋಗದ ಕೊನೆಗೆ 'ಶವಾಸನ'ದಲ್ಲಿರುವಾಗಲೇ ಇಹಲೋಕ ತ್ಯಜಿಸಿದರು.

ಮೂರು ವರುಷದ ಹಿಂದೆ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ಕೂಡ್ಲು' ಇವರು ಕೃಷ್ಣ ಮಯ್ಯರನ್ನು ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ' ನೀಡಿ ಪುರಸ್ಕರಿಸಿದ್ದರು.

ಮಡದಿ ಗಂಗಮ್ಮ. ಐವರು ಮಕ್ಕಳು. ಮಗಳಂದಿರಾದ ಗೀತಾ, ವೀಣಾ, ಪ್ರಶಾಂತಿ, ಪ್ರತಿಮಾ ಹಾಗೂ ಮಗ ರಾಮಪ್ರಸಾದ ಮಯ್ಯ. ಅಳಿಯಂದಿರು : ನೇಪಾಳದ ಪಶುಪತಿ ದೇವಸ್ಥಾನದ ಅರ್ಚಕ ರಘುರಾಮ ಕಾರಂತ, ಪುತ್ತೂರಿನ ನಾರಾಯಣ ಕಾರಂತ, ಅರ್ಚಕರಾದ ಮಂಗಳಾದೇವಿಯ ಸುಬ್ರಹ್ಮಣ್ಯ ಐತಾಳ ಮತ್ತು ತ್ರಿಶೂರಿನ ಸುಧೀರ್ ನಾವುಡ. ಮೊಮ್ಮಕ್ಕಳು : ಭಾರ್ಗವ, ಶಿವಾಂಗಿ, ಸುಕನ್ಯಾ, ವೈಶಾಲಿ, ಅಶ್ವಿನ್

ಕಳೆದ ವರುಷವಷ್ಟೇ ತನ್ನ ಪುತ್ರನ ವಿವಾಹವು ಶ್ರೀಲಕ್ಷ್ಮೀಯೊಂದಿಗೆ ಜರುಗಿತ್ತು. ಸಮಯದಲ್ಲಿನನ್ನ ಬದುಕಿನ ಬಹುದೊಡ್ಡ ಜವಾಬ್ದಾರಿ ಮುಗಿಯಿತು.” ಎಂದಿದ್ದ ಕೃಷ್ಣ ಮಯ್ಯರು ತನ್ನೆಲ್ಲಾ ಜವಾಬ್ದಾರಿಯನ್ನು ಮುಗಿಸಿ ಕಾಣದ ಲೋಕಕ್ಕೆ ತೆರಳಿದರು. ಬದುಕಿನಲ್ಲಿ ಬದ್ಧತೆಯನ್ನು ರೂಢಿಸಿಕೊಂಡಿದ್ದ ಹಿರಿಯ ಚೇತನ ಮಯ್ಯರಿಗೆ ಅಕ್ಷರ ನಮನವಿದು.


Sunday, September 5, 2021

ಹಲಸಿನೊಂದಿಗೆ ಫೋಟೋ ಬಹುಮಾನ ವಿತರಣಾ ಕಾರ್ಯಕ್ರಮ


 ಹಲಸು ಒಂದು ಕಾಲದಲ್ಲಿ  ಹಸಿದ ಹೊಟ್ಟೆಯ ಆಹಾರವಾಗಿತ್ತು, ಬದಲಾದ ಪರಿಸ್ಥಿತಿಯಲ್ಲಿ ಮನುಷ್ಯನ ನಿರ್ಲಕ್ಷ್ಯದಿಂದ ಹಲಸು ತೋಟದ ವಸ್ತುವಾಗಿತ್ತು. ಈಗ ಮನೆಯಲ್ಲಿ ಅನ್ನದ ಬಟ್ಟಲಿಗೆ ಬರುತ್ತಿದೆ, ಹಲಸು ಕೂಡಾ ಉತ್ತಮ ಆಹಾರವಾಗಿದೆ ಎಂದು ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ವಸಂತ ಬಿ ಬಾಳಿಗಾ ಹೇಳಿದರು.

ಅವರು  ರಾರಾಸಂ ಫೌಂಡೇಶನ್ ಬಂಟ್ವಾಳ ಮತ್ತು ಹಲಸು ಪ್ರೇಮಿ ಕೂಟ, ಬಂಟ್ವಾಳ ಇದರ ಸಹಯೋಗದಲ್ಲಿ ಆಯೋಜಿಸಿದ "ಹಲಸಿನೊಂದಿಗೆ ಫೋಟೋ" ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ  ಮಾತನಾಡಿದರು. ಹಲಸು ಬೆಳೆದರೆ ಮಾತ್ರಾ ಸಾಲದು ಅದರ ಮೌಲ್ಯವರ್ಧನೆ ಹಾಗೂ ಮಾರಾಟವೂ ಅಗತ್ಯವಿದೆ. ಅದನ್ನು  ಅತ್ಯಂತ ಸಮರ್ಥವಾಗಿ ಮಾಡುತ್ತಿರುವ ಹಲಸು ಪ್ರೇಮಿ ಕೂಟದ ಪಾತ್ರ ಸಮಾಜಕ್ಕೆ ಉತ್ತಮ ಕೊಡುಗೆ ಎಂದರು.ಹಲಸು ನಮ್ಮ ಜೀವನದ ಒಂದು ಭಾಗ. ನಮ್ಮಲ್ಲಿ ಬೆಳೆದ ಹಲಸುಗಳಿಗೆ ಹೊಸ ರೂಪ ಕೊಟ್ಟು ಜನರಿಗೆ ಬಗೆ ಬಗೆಯ ತಿನಸುಗಳು ಸಿಗಲು  ಹಲಸಿನಂಗಡಿ ತುಂಬಾ ಸಹಕಾರಿ ಎಂದರು.

ಅತಿಥಿಗಳಾಗಿದ್ದ  ಅಂಕಣಗಾರ, ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ ಕಾರಂತ ಪೆರಾಜೆ ಮಾತನಾಡಿ, ಯಾವುದೇ ಆಂದೋಲನಗಳು ಹಂತ ಹಂತವಾಗಿ ಬೆಳೆಯಬೇಕು. ಹಲಸು ಆಂದೋಲನವು ಈಗ ಊಟದ ಬಟ್ಟಲಿಗೆ ಬಂದಿದೆ ಮಾತ್ರವಲ್ಲ ಕಾರ್ಪೋರೇಟ್ವಲಯದಲ್ಲೂ ಹಲಸು ಸ್ಥಾನ ಪಡೆದಿದೆ.ಹಲಸು ಮಾರುಕಟ್ಟೆಯು ಇಂದು ವ್ಯಾಪಿಸಿದೆ. ಮೌಲ್ಯವರ್ಧನೆಯೂ ನಡೆಯುತ್ತಿದೆ ಇದು  ಆಶಾದಾಯಕ ಬೆಳವಣಿಗೆ ಎಂದರು.

ನಿವೃತ್ತ ಅರಣ್ಯ ಅಧಿಕಾರಿ ಮತ್ತು ಹಲಸು ಬೆಳೆಗಾರ ಗ್ಯಾಬ್ರಿಯಲ್ವೇಗಸ್ ಮಾತನಾಡಿ, ಹಲಸು ಕೃಷಿಯೂ ಭವಿಷ್ಯದಲ್ಲಿ  ಉತ್ತಮ ಕೃಷಿಯಾಗುವುದರಲ್ಲಿ  ಸಂದೇಹವಿಲ್ಲ. ಆಹಾರ ಬೆಳೆಯೂ ಆದ ಹಲಸು ಬೆಳೆದು ಬಾರಿ ಆದಾಯಯೂ ಗಳಿಸಿದ್ದೇನೆ. ಹಲಸಿಗೆ ಮಾರುಕಟ್ಟೆ ಇಲ್ಲ ಎಂದು  ಅನೇಕರು ಹೇಳುತ್ತಿದ್ದರು. ವರ್ಷ ನಮ್ಮಲ್ಲಿ  ಬೆಳೆದ ಹಲಸಿಗೆ ಉತ್ತಮ ಬೇಡಿಕೆಯೂ ಬಂದಿತ್ತು ಎಂದರು.

ಕೃಷಿಕ, ಪತ್ರಕರ್ತ ಮಹೇಶ್ಪುಚ್ಚಪ್ಪಾಡಿ ಮಾತನಾಡಿ, ಸಮ್ಮಿಶ್ರ ಕೃಷಿಯಿಂದ ಮಾತ್ರವೇ ಭವಿಷ್ಯದಲ್ಲಿ  ಕೃಷಿಕರ  ಆದಾಯ ದ್ವಿಗುಣವಾಗಲಿದೆ. ಹಲಸು ಮೌಲ್ಯವರ್ಧನೆಯ ಮೂಲಕ ಕೃಷಿಕರಿಗೆ ಉತ್ತಮ ಆದಾಯವಾಗಬಹುದು. ಕೃಷಿಕ,ಮೌಲ್ಯವರ್ಧನೆ, ಮಾರುಕಟ್ಟೆ, ಗ್ರಾಹಕರು ಇದೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿರುವುರಿಂದ ಎಲ್ಲಾ ಕಡೆಯೂ ಗಮನ ಅಗತ್ಯವಿದೆ ಎಂದರು.

ಹಲಸು ಸ್ನೇಹಿ ಕೂಟದ  ಮುಳಿಯ ವೆಂಕಟ ಕೃಷ್ಣ ಶರ್ಮ  ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಪೋನೋಸ್ ಹಲಸಿನಂಗಡಿ ಮಾಲಕರು ಹಾಗೂ ಹಲಸು ಪ್ರೇಮಿಕೂಟದ ಮೌನೇಶ್ ಮಲ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ವಿವಿಧ ಹಲಸು ತಳಿಗಳನ್ನು ಜನರಿಗೆ ನೀಡಿ ಹಲಸು ಸಂರಕ್ಷಣೆ ಹಾಗೂ ಕೃಷಿಕರಿಂದಲೇ ಹಲಸು ಖರೀದಿ ನಡೆಸುವ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಲಸಿನೊಂದಿಗೆ ಫೋಟೋ" ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.

ರಾರಾಸಂ ಸಂಸ್ಥೆಯ ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ ಸ್ವಾಗತಿಸಿದರು. ರಾರಾಸಂ ನಿರ್ದೇಶಕರಾದ ಕೇಶವ್ ಮಾಸ್ಟರ್ ಧನ್ಯವಾದ ಸಮರ್ಪಿಸಿದರು. ಶಿಕ್ಷಕರಾದ ದಾಮೋದರ್ ಮಾಸ್ಟರ್ ನಿರೂಪಿಸಿದರು.