Monday, August 2, 2021

'ಬಾಕಾಹು' ಆಂದೋಳನ : ಮರೆತ ವಿದ್ಯೆಗೆ ಮರುಜೀವ


 'ಈಗ ಕನ್ನಾಡಿನ ಅಮ್ಮಂದಿರು ಬಿರುಬಿಸಿಲಿಗೆ ಕಾಯುತ್ತಿದ್ದಾರೆ.' ಇದು ಹಾಸ್ಯಾಸ್ಪದ ವಾಕ್ಯವಲ್ಲ, ವಾಸ್ತವ. ಒಂದೂವರೆ ತಿಂಗಳಿನಿಂದ ಹಬ್ಬುತ್ತಿರುವ 'ಬಾಕಾಹು' ಅಲೆಯು ಮಳೆಗಾಲದಲ್ಲೂ ಬಿರು ಬಿಸಿಲಿಗಾಗಿ ಪ್ರಾರ್ಥಿಸುವಂತೆ ಮಾಡಿದೆ!

ಹಲಸಿನಂತೆ ಬದುಕಿನೊಳಗಿದ್ದು ಮರೆವಿಗೆ ಜಾರಿದ ಉತ್ಪನ್ನ 'ಬಾಕಾಹು'. ಇದೇನು, ಹೊಸದೆಂದು ಆಶ್ಚರ್ಯವಾಯಿತೇ? ಬಾಳೆ ಕಾಯಿಯ ಹುಡಿ - 'ಬಾಕಾಹು'. ಕೋವಿಡ್ ಲಾಕ್ಡೌನ್ ಅನ್ಲಾಕ್ ಆಗುತ್ತಿರುವಾಗ ಮರೆತ ವಿದ್ಯೆಗೆ ಮತ್ತೊಮ್ಮೆ ನೆನಪಿನ ಸ್ಪರ್ಶ. ಒಂದೆರಡು ಮನೆಯಲ್ಲಲ್ಲ, ಇಡೀ ಕನ್ನಾಡು ಹಾಗೂ ಕಾಸರಗೋಡು ಪ್ರದೇಶದ ಜಿಲ್ಲೆಗಳಲ್ಲಿ ತಂಗಾಳಿಯಂತೆ ಪಸರಿಸುತ್ತಿದೆ. ಹಿರಿಯರನ್ನು ಮಾತನಾಡಿಸಿದರೆ ಹಿಂದಿನಿಂದಲೂ ಬಾಳೆ ಕಾಯಿ ಹುಡಿಯು ಶಿಶು ಆಹಾರವಾಗಿ ಬಳಸಲ್ಪಡುತ್ತಿದ್ದುವು. ಇದು ತುಂಬಾ ಪೌಷ್ಟಿಕ ಆಹಾರ ಕೂಡಾ. ಮನೆಮಟ್ಟದಲ್ಲಿ ಮಾಡಬಹುದಾದ ಮೌಲ್ಯವರ್ಧಿತ ಉತ್ಪನ್ನ.

 ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಎಡ್ಮಿನ್ ಆಗಿರುವ ವಾಟ್ಸಪ್ ಬಳಗ 'ಏಟಿವಿ' (ಎನಿ ಟೈಮ್ ವೆಜಿಟೇಬಲ್). ಜೂನ್ ಕೊನೆ ವಾರ ತುಮಕೂರಿನ ಗೃಹಿಣಿ ನಯನಾ ಆನಂದ್ ಹಾಕಿದ ಒಂದು ಪೋಸ್ಟ್ ಬಾಕಾಹು ಆಂದೋಳನಕ್ಕೆ ಬೀಜಾಂಕುರವಾಯಿತು. ಅವರು ಬಾಳೆಕಾಯಿ ಹುಡಿ ಮತ್ತು ಅದರ ಕೆಲವು ಖಾದ್ಯಗಳನ್ನು ಚಿತ್ರ ಸಹಿತ ವಾಟ್ಸಿಪ್ಪಿಗೆ ಅಂಟಿಸಿದ್ದರು. ಅಲ್ಲಿಂದೀಚೆಗೆ ಹರಿದ ಬಂದ ಮಾಹಿತಿಗಳೆಲ್ಲವೂ ಕುತೂಹಲಕರ. 'ಬಾಕಾಹು'ವಿನ ಖಾದ್ಯಗಳ ವಿಶ್ವದರ್ಶನವಾಯತು. ಅವರವರು ಮಾಡಿ, ಸವಿದ ರಸರುಚಿಗಳನ್ನು ಹಂಚಿಕೊಂಡರು. ಒಬ್ಬರ ರುಚಿ ಫಾರ್ಮುಲಾ ಇನ್ನೊಬ್ಬರಿಗೆ ಸ್ಫೂರ್ತಿ ತುಂಬಿತು.

ಹೀಗೆ ಸಿದ್ಧವಾದ ಖಾದ್ಯಗಳು ಐವತ್ತಕ್ಕೂ ಮೀರಿವೆ. ತಾಲಿಪ್ಪಟ್ಟು, ರೊಟ್ಟಿ, ಕಡುಬು, ತೆಳ್ಳೇವು, ಉಪ್ಪಿಟ್ಟು, ಚಕ್ಕುಲಿ, ನಿಪ್ಪಟ್ಟು, ಪೂರಿ, ದೋಸೆ, ಬಿಸ್ಕೆಟ್, ಕುಕ್ಕೀಸ್ ಡ್ರೈ ಜಾಮೂನು, ಕೇಕ್, ಶಂಕರಪೊಳಿ, ಇಡ್ಲಿ, ದೂಡ್ಪೇಡಾ, ಗುಳಿಯಪ್ಪ, ಮಾಲ್ಟ್.. ಅಬ್ಬಾ, ಒಂದೇ ಎರಡೇ. 'ಬಾಳೆಕಾಯಿ ಹುಡಿಯು ನಮ್ಮ ಅಡುಗೆ ಮನೆಯಲ್ಲಿ ಇನ್ನು ತಪ್ಪದು.', 'ಬಿಸಾಕು ಕ್ರಯದಿಂದಾಗಿ ಹಾಳಾಗಿ ಹೋಗುತ್ತಿದ್ದ, ದನಗಳ ಮೇವಿಗೆ ಬಳಕೆಯಾಗುತ್ತಿದ್ದ ಬಾಳೆಕಾಯಿ ಇನ್ನು ಹುಡಿಯಾಗಿ ಉದರ ಸೇರುತ್ತದೆ'.. ಹೀಗೆ ಹತ್ತಾರು ಮಾತುಕತೆಗಳಿಗೆ ಚಾಲನೆ ದೊರಕಿತು.

 ಇಡೀ ಬಾಳೆಕಾಯಿ ಅಥವಾ ಸುಲಿದ ಬಾಳೆಕಾಯಿಯನ್ನು ಚಿಕ್ಕ ತುಂಡುಗಳನ್ನಾಗಿ ಮಾಡಿ, ಬಿಸಿಲಿನಲ್ಲಿ ಒಣಗಿಸಿ, ಪುಡಿ ಮಾಡಿದರೆ ಆಯಿತು. 'ಬಾಕಾಹು' ರೆಡಿ. ಸುಲಿದ ಬಾಳೆಕಾಯಿ ಹುಡಿ ಅಚ್ಚ ಬಿಳಿಯದಾದರೆ, ಸಿಪ್ಪೆ ಸುಲಿಯದ್ದು ಕಂದು ಬಣ್ಣ. ಮನೆಮಟ್ಟದ ಬಳಕೆಗೆ ಮೇಲಿನ ಸಂಸ್ಕರಣೆ ಸಾಕು. ವಾಣಿಜ್ಯ ದೃಷ್ಟಿಯಿಂದ ಮಾಡುವುದಾದರೆ ಡ್ರೈಯರ್, ಪಲ್ವರೈಸರ್ ಬೇಕಾದೀತು. ಲೀಟರ್ ನೀರಿಗೆ ಕಾಲು ಲೀಟರ್ ಅನ್ನದಿಂದ ಬಸಿದ ತೆಳಿ, ಎರಡು ಚಮಚೆ ಉಪ್ಪು ಸೇರಿಸಿ. ಬಾಳೆಕಾಯಿಯ ಸಿಪ್ಪೆ ತೆಗೆದು ದ್ರಾವಣದಲ್ಲಿ ಕಾಲು ಗಂಟೆ ನೆನೆ ಹಾಕಿ. ಇದರಿಂದಾಗಿ ಅದರ ಅರುಚಿ ಮಾಯವಾಗಿ ಬಣ್ಣ ಬದಲದೆ ಉಳಿಯುತ್ತದೆ ಎನ್ನುವ ಸುಲಭ ಉಪಾಯವನ್ನು ಹಂಚಿಕೊಂಡವರು ಕೇರಳ ಕೃಷಿ ವಿಜ್ಞಾನ ಕೇಂದ್ರದ ಜಿಸ್ಸಿ ಜಾರ್ಜ್.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾಕಾಹು ಆಂದೋಳನದ ಕಿಚ್ಚು ಹತ್ತಿಸಿದ್ದು 74 ಹರೆಯದ ಹುಮ್ಮಸ್ಸಿಗ ಊರುತೋಟ ಸುಬ್ರಾಯ ಹೆಗಡೆ. ಇವರು ಬಾಕಾಹು ತಯಾರಿಸಿ ಅದರಿಂದ ತಾಲಿಪ್ಪಿಟ್ಟು, ರೊಟ್ಟಿ, ಶಂಕರ ಪೋಳಿ ಮಾಡಿದ ಸುದ್ದಿ ಜಿಲ್ಲೆಯ ಸಾಮಾಜಿಕ ಮಾಧ್ಯಮಗಳ ಮೂಲಕ ಒಂದೆರಡು ದಿನಗಳಲ್ಲೇ ಮನೆಮಾತಾಗಿಬಿಟ್ಟಿತ್ತು! 

ಆಂದೋಳನ ಹಬ್ಬುತ್ತಿದ್ದಂತೆ ಆಗಲೇ ವಾಣಿಜ್ಯ ದೃಷ್ಟಿಯಿಂದ ಬಾಕಾಹು ಮಾಡುತ್ತಿರುವ ಕೃಷಿಕರ ಮಾಹಿತಿಗಳು ಗೋಚರವಾದುವು. ಶಿರಸಿ ಬಳಿಯ ಕಾನಳ್ಳಿಯ ಪ್ರಭಾಕರ ಹೆಗಡೆ - ವಸುಂಧರಾ ಹೆಗಡೆ ದಂಪತಿ ಬಾಕಾಹುವಿಗೆ ಉದ್ಯಮ ಸ್ವರೂಪ ನೀಡಿದ್ದಾರೆ. ಒಂದು ಕಿಲೋಗೆ ಇನ್ನೂರು ರೂಪಾಯಿಯಂತೆ ಮಾರಾಟ. ಆರು ತಿಂಗಳ ತಾಳಿಕೆ. ಬೆಳಗಾವಿ ಜಿಲ್ಲೆಯ ಕೃಷಿಕ ಅಜ್ಜಪ್ಪ ಕುಲಗೋಡು ಇವರದು ಇನ್ನೂ ಒಂದು ಹೆಜ್ಜೆ ಮುಂದೆ. ಅವರು ಮನೆಯಲ್ಲಿ ಉತ್ಪನ್ನವನ್ನು ತಯಾರಿಸಿದರೆ, ಅವರ ಅಮ್ಮ ಪಾರ್ವತವ್ವರಿಗೆ ಮಾರುಕಟ್ಟೆಯ ಹೊಣೆ.  ತಾವು ಬೆಳೆದ ತರಕಾರಿಗಳ ಮಾರಾಟದ ಜತೆ ಬಾಕಾಹು ಹುಡಿಯನ್ನು ಜನರಿಗೆ ಪರಿಚಯಿಸುತ್ತಿದ್ದಾರೆ.

“ಒಂದು ಕೃಷಿ ವಿಶ್ವವಿದ್ಯಾನಿಲಯ ಕೆಲಸವನ್ನು ಮಾಡಬೇಕಾದರೆ ಅದೆಷ್ಟೋ ಕಾಲ ಬೇಕಾಗುತ್ತದೆ. ಲಾಕ್ಡೌನ್ ಕಾಲಘಟ್ಟದಲ್ಲಿ ಕೃಷಿಕರಿಗೆ ಒದಗಿದ ಬಾಳೆಕಾಯಿ ಹುಡಿ ತಯಾರಿಯ ತಿಳಿವಳಿಕೆಯು ಸಂಕಟ ಕಾಲದ ಸಹಾಯಿ, ಎಂದು ಮೆಚ್ಚುಗೆ ಸೂಚಿಸಿದವರುಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಶ್ಯಾಮಲಮ್ಮ.

ಆಂದೋಳನದ ಸುದ್ದಿಯು ತಿರುಚಿರಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರವನ್ನು ತಲಪಿತು. ಕೇಂದ್ರದ ನಿರ್ದೇಶಕಿ ಡಾ.ಉಮಾ ಸುಬ್ಬರಾಯ ಕರ್ನಾಟಕದ ಕೃಷಿ ಗೃಹಿಣಿಯರನ್ನು ಅಭಿನಂದಿಸಿ, “ಬಾಳೆಯ ಮೌಲ್ಯವರ್ಧಿತ ಉತ್ಪನ್ನದ ನಿಮ್ಮ ಆಂದೋಳನವು ರಾಜ್ಯ ಅಲ್ಲ, ದೇಶ ಮಟ್ಟವನ್ನು ತಲುಪಲಿ. ನಮ್ಮ ಸಂಸ್ಥೆಯಿಂದ ಸಹಕಾರ ನೀಡಲು ಸಿದ್ಧ,” ಎಂದು ಬೆನ್ನು ತಟ್ಟಿದರು.

“ಕೃಷಿಕರು ಮನೆಯಲ್ಲೇ ಸುಲಭದಲ್ಲಿ ಮಾಡಿಕೊಳ್ಳಬಹುದಾದ ತುಂಬ ಪೌಷ್ಟಿಕ ಉತ್ಪನ್ನ ಬಾಳೆಕಾಯಿ ಹುಡಿ. ವರ್ಷವಿಡೀ ಇದರ ಉತ್ಪಾದನೆ ಸಾಧ್ಯ. ಅದೊಂದು ಬಹೂಪಯೋಗಿ ಹಿಟ್ಟು.  ಅದರಿಂದ ಡಜನುಗಟ್ಟಲೆ ವೈವಿಧ್ಯಮಯ ದಿನಬಳಕೆಯ ಆಹಾರ ತಯಾರಿಸಬರುತ್ತದೆ . ಕಾರಣದಿಂದ ವಿದ್ಯೆ ತುಂಬಾ ರೈತಸ್ನೇಹಿ. ಮನೆಗಳಲ್ಲಿ, ಸಮಾರಂಭಗಳಲ್ಲಿ, ಹೋಟೆಲು, ಟೀವಿ ಶೋಗಳಲ್ಲಿ ಬಾಕಾಹು ಬಳಕೆಯಾಗಬೇಕು. ಮನೆಮಟ್ಟದ ಬಾಕಾಹು ತಯಾರಿಯ ತರಬೇತಿ, ಉತ್ಪನ್ನಗಳ ಪ್ರದರ್ಶನದ ಮೇಳಗಳು, ಬಳಕೆಯ ರೀತಿಗಳು ಮತ್ತು ಇದರ ಪೌಷ್ಟಿಕಾಂಶಗಳ ಬಗ್ಗೆ ಅರಿವು ಮೂಡಿಸಬೇಕು. ಈಗ ಬಾಕಾಹು ಕನ್ನಾಡಿನ ಕೃಷಿ ಕೃಷಿ ವಿಜ್ಞಾನ ಕೇಂದ್ರಗಳ ಕದ ತಟ್ಟಿದೆ. ಸರಿಯಾಗಿ ಮುನ್ನಡೆಸಿದರೆ ಇದೊಂದು ದೇಶವ್ಯಾಪಿ ಆಂದೋಳನವಾಗಲು ಸಾಧ್ಯತೆ ಇದೆ; ಆಗುತ್ತದೆ. ಗೋಧಿ, ಮೈದಾಗಳಿಗೆ ಗಣನೀಯ ಪ್ರಮಾಣದಲ್ಲಿ ಬದಲಿ ಆಗುವ ಎಲ್ಲಾ ಲಕ್ಷಣಗಳು ಬಾಕಾಹುವಿಗಿದೆ. ಆಂದೋಳನವನ್ನು ಸರಿಯಾಗಿ ಮುನ್ನಡೆಸಿದರೆ ಇನ್ನು ಮುಂದೆ ಬಾಳೆಕಾಯಿಯ ಬೆಲೆ ಕುಸಿತ ಖಂಡಿತ ರೈತರನ್ನು ಹಿಂದಿನಷ್ಟು ಹತಾಶೆಗೆ ತಳ್ಳದುಎನ್ನುವ ದೂರದೃಷ್ಟಿ ಶ್ರೀ ಪಡ್ರೆಯವರದು.

ಮೂರೇ ವಾರಗಳಲ್ಲಿ ಆಂದೋಳನದ ಸಾತ್ವಿಕ ಕಿಡಿಯು ಅಡುಗೆ ಮನೆಯೊಳಗೆ ಹಣತೆಯನ್ನು ಹಚ್ಚಿದೆ. ಮಳೆ ಕಡಿಮೆಯಾಗಿ ಬಿಸಿಲಿನ ದಿನಗಳಿಗಾಗಿ ಅಮ್ಮಂದಿರು ಕಾಯುತ್ತಿದ್ದಾರೆ! ನವಮಾಧ್ಯಮಗಳನ್ನು ಹೇಗೆ ಸಶಕ್ತವಾಗಿ ಮತ್ತು ಸುದೃಢವಾಗಿ ರೂಪಿಸಬಹುದೆಂಬುದಕ್ಕೆ ಸಾಕ್ಷಿಯಾಗಿ ಮುಂದಿದೆ.

(Udayavani  / 1-8-2021)

Sunday, August 1, 2021

ಪುಸ್ತಕದ ಕುರಿತು ನೀವು ಅಸಕ್ತರೇ? - ಮಣಿಸರ, ಅಡ್ಡಿಗೆ, ಸುಮನಸ (ಯಕ್ಷಗಾನ) ಮತ್ತು ಜೀವಧಾನ್ಯ, ಕೃಷಿ ಕತೆ-ಕೃಷಿಕರ ಕತೆ(ಕೃಷಿ)

 

ಸುಮನಸ : (ಯಕ್ಷಹಾರದಲ್ಲಿ ಹೊಳೆವ ಮುತ್ತುಗಳು) ಯಕ್ಷ ಕಲಾವಿದರ ವ್ಯಕ್ತಿ ಪರಿಚಯ. ಶೇಣಿ, ಸಾಮಗ, ಚಿಪ್ಪಾರು, ಕುಬಣೂರು, ಚಿಟ್ಟಾಣಿ, ದಾಸರಬೈಲು, ಅಡೂರು, ಅಳಿಕೆ, ತಲೆಂಗಳ, ಅಂಬೆಮೂಲೆ, ಸಿದ್ಧಕಟ್ಟೆ ಹೀಗೆ ಸ್ಮೃತಿ ಪುಟಗಳು.. ಸಮಾಹಿತ ಅಧ್ಯಾಯದಲ್ಲಿ.. ಬಲಿಪರು, ಮೂಡಂಬೈಲು, ಪಾತಾಳ, ಪೆರುವೋಡಿ, ಪದ್ಯಾಣ ಸೂರಿಕುಮೇರು, ಕುರಿಯ, ಅಮ್ಮಣ್ಣಾಯರು, ಪುತ್ತಿಗೆ ಹೊಳ್ಳರು, ಕುಂಬಳೆ, ಮುಳಿಯಾಲ, ಕೊಕ್ಕಡ, ವಂಡ್ಸೆ...       ಬೆಲೆ ರೂ.150. 

ಅಡ್ಡಿಗೆ : (ಯಕ್ಷ ಯವನಿಕೆಯ ಸುತ್ತಮುತ್ತ).. 38 ಲೇಖನಗಳ ಗುಚ್ಚ ಕೆಲವು ಲೇಖನಗಳು - ಬಪ್ಪ ಸಾರಿದ ಸಹಿಷ್ಣುತೆ, ಬಾಹುಕನ ಭಾಹುಕ ಅಂತರಂಗ, ಕಾಫಿ ನಾಡಿನಲ್ಲರಳಿದ ಪಾಪಣ್ಣ, ಅಯ್ಯಪ್ಪ ಆಖ್ಯಾನಕ್ಕೆ ಅರ್ಧ ಶತಮಾನ, ಕೆನಡಾ ಯಕ್ಷಮಿತ್ರದ ಅರ್ಥಪೂರ್ಣ ಪಯಣ, ಅಮೇರಿಕಾದಲ್ಲಿ ತಾಳಮದ್ದಳೆಯ ಹಸಿವು, ಬಣ್ಣದ ರಂಗಿನೊಳಗೆ ಬಿನ್ನಾಣ, ಗೌಜಿಯ ಅಲೆಯೊಳಗೆ ರಂಗ ನರಳಾಟ, ಚಿತ್ರ ಸಾರಿದ ಯಕ್ಷಪಯಣ ಬೆಲೆ Rs. 100. (ಅಡ್ಡಿಗೆ ಮತ್ತು ಮಣಿಸರ ಎರಡು ಪುಸ್ತಕಗಳ ಲೇಖನಗಳು ಹಿಂದೆ ಪ್ರಜಾವಾಣಿಯಲ್ಲಿ ಅಂಕಣಗಳಾಗಿ ಪ್ರಕಟವಾಗಿವೆ. ಎರಡು ಪುಸ್ತಕಗಳು ತಮ್ಮಲ್ಲಿದ್ದರೆ ಕಳೆದೊಂದು ದಶಕಗಳ ಯಕ್ಷಪಲ್ಲಟಗಳು ನೋಟ ಸಿಗುತ್ತವೆ.)

ಮಣಿಸರ : (ಯಕ್ಷಗಾನದ ಒಳಸುಳಿಯೊಳಗೆ ಒಂದು ಇಣುಕು ನೋಟ) - 37 ಲೇಖನಗಳ ಗುಚ್ಛ. ಯಕ್ಷಗಾನದ ಸಮಸಾಮಯಿಕ ವಿಚಾರಗಳ ಮಂಥನ. ಮೌನದ ಮಾತಿಗೆ ಅಕ್ಷರಗಳ ತೋರಣ,,,, ಮಣಿಸರದಲ್ಲಿರುವ ಕೆೆಲವು ಲೇಖನಗಳು - ಸಂಭ್ರಮಗಳ ಮಧ್ಯೆ ಯಕ್ಷಗಾನ ಸೆಕೆಂಡರಿಯಗುತ್ತದೆ, ಭಾವಕೋಶದೊಳಗೆ ಜಾರಲು ಪಾತ್ರಗಳು ಅಂಜುತ್ತಿವೆ, ಪಾತ್ರಗಳಿಗೆ ಪ್ರತಿಭಟನೆಯ ಭಯ, ಸೀನಿಯರ್ ಪದದ ಅರ್ಥ ದಿಗಂತವ್ಯಾಪ್ತಿಯಲ್ಲ..ಅಬ್ಬರದ ಅಲೆಯೊಳಗೆ ಕಲೆಯ ಒದ್ದಾಟ, ಪ್ರಸಂಗ ಪುಸ್ತಕವು ಕಲಾವಿದನ ಗೀತೆ, ಬಣ್ಣದ ಮನೆಯ ಕಾಣದ ಬಣ್ಣಗಳು, ಬೊಂಬೆಗಳು ತೋರಿದ ಭಾರತೀಯ ಸಂಸ್ಕೃತಿ... ಬೆಲೆ ರೂ.120 

ಕೃಷಿ ಕತೆ-ಕೃಷಿಕರ ಕತೆ : ಇದು ಕೃಷಿ ಸಂಬಂಧಿ ಪುಸ್ತಕ. ಕೃಷಿಯೊಂದಿಗೆ ಕೃಷಿಕರ ಬದುಕು ಎಂದೂ ಮಾತನಾಡುವುದಿಲ್ಲ! ಅಂತಹ ಮೌನದ ಬದುಕಿಗೆ ಮಾತನ್ನು ಕೊಡುವ ಯತ್ನ ಪುಸ್ತಕದಲ್ಲಾಗಿವೆ. ಇದು ನಿಮ್ಮಲ್ಲಿ ಇರಲೇಬೇಕಾದ ಪುಸ್ತಕ. ಕೃಷಿಯೂ ಒಂದು ಕಲೆಯಲ್ವಾ.. ಕೃಷಿಕ ಕೂಡಾ ಕಲಾವಿದನೇ ಪಾಸಿಟಿವ್ ಯೋಚನೆಯ ಕೃಷಿಕರ ಬದುಕನ್ನು ತೆರೆದಿಟ್ಟ ಪುಸ್ತಕ. ಬೆಲೆ ರೂ. 170 

ಜೀವಧಾನ್ಯ’ – ಇದು ಭತ್ತದ ಕೃಷಿಯ ವರ್ತಮಾನದ ನೋಟ, ಮೂವತ್ತಕ್ಕೂ ಅಧಿಕ ತಳಿಗಳ ವಿವರಗಳಿವೆ. ಭತ್ತ ಬಳೆದು ಯಶ ಕಂಡವರ ಅನುಭವ ಕಥನಗಳಿವೆ. ಮುನ್ನೂರು ತಳಿಗಳ ಭತ್ತದ ತಿಜೋರಿ, ಶ್ರಮದ ಬದುಕಿಗೆ ಕಾವುಕೊಟ್ಟ ತಳಿ ಸಂಗ್ರಹ, ಕಬ್ಬಿನ ನಾಡಲ್ಲಿ ಭತ್ತದ ಕಣಜ, ಭತ್ತದ ಕಾಳಿಗೆ ಮುತ್ತಿನ ಬೆಲೆ, ಅನ್ನದ ಬರದ ಬಿಸಿ...ಹೀಗೆ ತುಂಬು ಹೂರಣಗಳು. ಪುಸ್ತಕವನ್ನು ಪುತ್ತೂರಿನ ನವತೇಜ ಟ್ರಸ್ಟ್ ಪ್ರಕಾಶಿಸಿದೆ. ಬೆಲೆ ರೂ. 100 

ಪುಸ್ತಕದ ಕುರಿತು ನೀವು ಅಸಕ್ತರೇ? ವಾಟ್ಸಾಪ್ ಮಾಡಿ 94486 25794.

ಪುಸ್ತಕ ಪಡೆಯಲು ಪಾವತಿಗಾಗಿ ಸುಲಭೋಪಾಯ ಇಲ್ಲಿದೆ.....

Bank Details:

Name : Narayana Karantha

Bank : Ujjivan Small Finance Bank, Puttur Branch, (Karnataka, D.K.Dist)

S.B.A/c . No. 1701110010051749

IFSC : UJVN0001701

 

OR

 

Bank Details :

 Name : Narayana Karantha

Bank :  Canara Bank, Puttur (Karnataka – D.K.Dist)

S.B.A/c No. 0615101028712

IFSC Code – CNRB 0000615

 

ಪಾವತಿಯ ಬಳಿಕ ನಿಮ್ಮ ವಿಳಾಸವನ್ನು 94486 25794 ವಾಟ್ಸಾಪ್ ನಂಬರಿಗೆ ಕಳುಹಿಸಿರಿ. ಪುಸ್ತಕವನ್ನು ರಿಜಿಸ್ಟರ್ಡ್ ಅಂಚೆಯಲ್ಲಿ ಕಳುಹಿಸುತ್ತೇವೆ.