Tuesday, December 11, 2018

ಶ್ರೀನಿವಾಸ ರಾವ್ - ಸಾವಿತ್ರಿ ದಂಪತಿಗೆ ಬೋಳಂತಕೋಡಿ ಕನ್ನಡ ಪ್ರಶಸ್ತಿ


                ಕನ್ನಡ ಸಾಹಿತ್ಯ ಪರಿಚಾರಕರು ಮತ್ತು ಮಕ್ಕಳಲ್ಲಿ ಅಕ್ಷರಪ್ರೀತಿ ಮೂಡಿಸುವ ಮಂಗಳೂರಿನ ಬಿ.ಶ್ರೀನಿವಾಸ ರಾವ್ ಮತ್ತು ಸಾವಿತ್ರಿ ಎಸ್.ರಾವ್ ದಂಪತಿ ಇವರು ಸಾಲಿನ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. ದಶಂಬರ 15, ಶನಿವಾರ ಸಂಜೆ 5-00ಕ್ಕೆ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ  ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಪುತ್ತೂರಿನ 'ಬೋಳಂತಕೋಡಿ ಅಭಿಮಾನಿ ಬಳಗ'ವು ಆಯೋಜಿಸುವ ಸಮಾರಂಭದಲ್ಲಿ ಪುತ್ತೂರು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಬೋಳಂತಕೋಡಿ ಈಶ್ವರ ಭಟ್ಟರ ಸಂಸ್ಮರಣೆ ನಡೆಯಲಿದೆ.
                ಸಮಾರಂಭದ ಅಧ್ಯಕ್ಷತೆಯನ್ನು ರಾಜೇಶ್ ಪವರ್ ಪ್ರೆಸ್ಸಿನ ಶ್ರೀ ಎಂಎಸ್.ರಘುನಾಥ್ ರಾವ್ ವಹಿಸಲಿದ್ದಾರೆ. ನ್ಯಾಯವಾದಿ ಶ್ರೀ ಕೆ.ಆರ್.ಆಚಾರ್ಯರು ಬೋಳಂತಕೋಡಿಯವರ ಸ್ಮೃತಿ ನಮನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಕುರಿತು ಶ್ರೀಮತಿ ಸುಮಂಗಲಾ ರತ್ನಾಕರ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷ ಶ್ರೀ ಬಿ.ಐತ್ತಪ್ಪ ನಾಯ್ಕ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬೋಳಂತಕೋಡಿ ಕನ್ನಡ ಪ್ರಶಸ್ತಿಯನ್ನು ಹಿಂದಿನ ವರುಷಗಳಲ್ಲಿ ಪಳಕಳ ಸೀತಾರಾಮ ಭಟ್, ಸಿದ್ಧಮೂಲೆ ಶಂಕರನಾರಾಯಣ ಭಟ್ (ದಿ.), ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ(ದಿ.) ಹರೇಕಳ ಹಾಜಬ್ಬ, ಕುಂಞಿಹಿತ್ಲು ಸೂರ್ಯನಾರಾಯಣ ಭಟ್, ಕವಯಿತ್ರಿ ನಿರ್ಮಲಾ ಸುರತ್ಕಲ್ ಮತ್ತು ಕು.ಗೋ.ಉಡುಪಿ ಇವರಿಗೆ ಪ್ರದಾನಿಸಲಾಗಿದೆ.
ಪುಸ್ತಕ ಹಬ್ಬ : ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ದಶಂಬರ 14ರಿಂದ 16 ತನಕ ದಿನಪೂರ್ತಿ 'ಪುಸ್ತಕ ಹಬ್ಬ' ಜರುಗಲಿದ್ದು ಪುಸ್ತಕ ಪ್ರದರ್ಶನ-ಮಾರಾಟ ವ್ಯವಸ್ಥೆಯಿದೆ.
                ಪ್ರಶಸ್ತಿ ಪುರಸ್ಕೃತರ ಪರಿಚಯ : ಮಂಗಳೂರಿನ ಬಿ.ಶ್ರೀನಿವಾಸ ರಾವ್ ಮತ್ತು ಸಾವಿತ್ರಿ ಎಸ್.ರಾವ್ ದಂಪತಿಗಳಿಗೆ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಮೂಡಿಸುವ ಕನ್ನಡ ಕಾಯಕ. ಬದಲಾದ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಅಕ್ಷರಪ್ರೀತಿಯು ಮರೀಚಿಕೆಯಾಗಿದ್ದು, ಶಿಕ್ಷಣದ ಅಡಿಗಟ್ಟು ಪ್ರಾಥಮಿಕ-ಪ್ರೌಢ ಶಿಕ್ಷಣದಲ್ಲಿರುವುದನ್ನು ಮನಗಂಡ ಇವರು ವಿದ್ಯಾರ್ಥಿಗಳಿಗಾಗಿ ಕಥೆ, ಕವನಗಳ ಸಂಕಲನ; ಸಾಹಿತ್ಯಾಭಿರುಚಿ ಮತ್ತು ಓದುವ ಹವ್ಯಾಸವನ್ನು ರೂಢಿಸುವ ಸಾಹಿತ್ಯ ಶಿಬಿರಗಳು, ಮಕ್ಕಳ ಪ್ರತಿಭೆಗಳ ಮುಖವಾಗಿರುವ ಶಾಲಾ ಸಂಚಿಕೆಗಳ ಸ್ಪರ್ಧೆ,  ಮಕ್ಕಳ ಸಾಹಿತಿಗಳಿಗೆ ಪ್ರೋತ್ಸಾಹ, ಕವಿ ಕಾವ್ಯ ಗಾಯನ, ಮಕ್ಕಳ ನಾಟಕೋತ್ಸವ, ಮಕ್ಕಳ ಮೇಳ, ಮಕ್ಕಳ ಸಾಹಿತ್ಯ ವಿಚಾರಗೋಷ್ಠಿ, ಪುಸ್ತಕ ಪ್ರದರ್ಶನ ಹೀಗೆ ಅನ್ಯಾನ್ಯ ಕಲಾಪಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. 'ಮಕ್ಕಳು, ಮಕ್ಕಳಿಗಾಗಿ, ಮಕ್ಕಳೇ' ಮಾಡುವ 'ಮಕ್ಕಳ ಧ್ವನಿ' ತುಂಬು ಯಶ ಪಡೆದ ಕಾರ್ಯಕ್ರಮ. ದಶಕದೀಚೆಗೆ ಅವರ ಮನೆಯಲ್ಲಿ ಅಕ್ಷರಗಳು ಕುಣಿದಾಡುತ್ತಿವೆ! ಮಕ್ಕಳೊಂದಿಗೆ ಬೆರೆವ ಶ್ರೀನಿವಾಸ ರಾವ್ ದಂಪತಿಗಳು ಮಕ್ಕಳ ಮನಸ್ಸಿನೊಂದಿಗೆ ಸದಾ ಅನುಸಂಧಾನ ಮಾಡುತ್ತಿರುವ ಅಧ್ಯಾಪಕರು. ಇವರ ಇಳಿ ವಯಸ್ಸಿನ ಕಾಯಕದಲ್ಲಿ ಯುವಕರನ್ನು ನಾಚಿಸುವ ಕ್ರಿಯಾಶೀಲತೆಯಿದೆ.

Thursday, December 6, 2018

‘ಅಡಿಕೆ ಕೌಶಲ್ಯ ಪಡೆ’ ಶಿಬಿರದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಿಪಿಸಿಆರ್ ಐ ಆವರಣದಲ್ಲಿ ‘ಅಡಿಕೆ ಕೌಶಲ್ಯ ಪಡೆ’ ಶಿಬಿರವು ದಶಂಬರ 5ರಂದು ಶುಭಚಾಲನೆಗೊಂಡಿತು. ಸಂಸದ ನಳಿನ್ ಕುಮಾರ್ ಕಟೀಲರು ಉದ್ಘಾಟನೆ ಮಾಡಿದರು. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ‍್ವವಿದ್ಯಾನಿಲಯದ ಕುಲಪತಿ ಡಾ. ಮಂಜುನಾಥ ಕೆ. ನಾಯ್ಕ್ ಅಧ‍್ಯಕ್ಷತೆ ವಹಿಸಿದ್ದರು. ಶಿಬಿರವು ದಶಂಬರ 5 ರಿಂದ 9ರ ತನಕ ನಡೆಯಲಿದೆ. ಮೂವತ್ತು ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ‘ಜೀವ ರಕ್ಷೆಯ ಜೀವ ವಿಮೆ’ ವೀಡೀಯೋವನ್ನು ಶಾಸಕ ಸಂಜೀವ ಮಠಂದೂರು ಅನಾವರಣಗೊಳಿಸಿದರು. ವೀಡಿಯೋವನ್ನು ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ, ಪ್ರಸಾದ್ ಬಲ್ನಾಡ್ ನಿರ್ಮಾಣ ಮಾಡಿದ್ದಾರೆ.
ಶಿಬಿರಕ್ಕೆ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ, ಅಡಿಕೆ ಪತ್ರಿಕೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಹಯೋಗ.

Sunday, November 18, 2018

ಓದುವ ಗೀಳು ತಂದ 'ಚಂದಮಾಮ'

 
ಯಾಕೋ.. ಶಾಲಾ ದಿನಗಳಿಂದಲೇ ಪುಸ್ತಕದ ಗೀಳು. ಇದಕ್ಕೆ ಕಾರಣ ಪ್ರಾಥಮಿಕ ಶಾಲೆಯಲ್ಲಿದ್ದ ಚಿಕ್ಕ ಗ್ರಂಥಾಲಯ. ತಿಂಗಳಿಗೆ ಎರಡು ಬಾರಿ ನೀಡುತ್ತಿದ್ದ ಪುಸ್ತಕದ ಓದು. ಕೃಷ್ಣಪ್ಪ ಮಾಸ್ತರರ ಒತ್ತಾಸೆ. ಓದದೆ ಕಲಿಯುವುದೇನನ್ನು ಎಂದು ಓದದ ಸಹಪಾಠಿಗಳಿಗೆ ಬೆತ್ತದ ರುಚಿ ತೋರಿಸಿದ ಆ ದಿನಗಳು ಮರೆಯುವುದಿಲ್ಲ. 

ಹೈಸ್ಕೂಲ್ ಓದುತ್ತಿದ್ದಾಗ ಚಂದಮಾಮ, ಬಾಲಮಿತ್ರ, ಚುಟುಕ.. ಮೊದಲಾದ ನಿಯತಕಾಲಿಕಗಳತ್ತ ಆಸಕ್ತಿ ಹೆಚ್ಚಾಯಿತು. ಒಂದೇ 'ಧಮ್ಮಿನಲ್ಲಿ' ಎಲ್ಲಾ ಪುಟಗಳನ್ನು ಓದುವ ತವಕ, ಚಪಲ. ಕೆಲವೊಮ್ಮೆ ಪತ್ರಿಕೆಗಳಲ್ಲಿ 'ಉಚಿತ ಪುಸ್ತಕಗಳಿಗೆ ಬರೆಯಿರಿ' ಎನ್ನುವ ಜಾಹೀರಾತುಗಳು ಆಸಕ್ತಿದಾಯಕವಾಗಿರುತ್ತಿತ್ತು. ಹೀಗೆ ಪಡೆದ ಪುಸ್ತಕಗಳು ಕೈ ಸೇರಿದಾಗ ನಿರಾಶೆ! 

 ಸುಳ್ಯ ಸನಿಹದ ಪೆರಾಜೆಯು ಒಂದು ಕಾಲಘಟ್ಟದಲ್ಲಿ ತ್ರಿಶಂಕು ಗ್ರಾಮ! ಆಚೆ ಕೊಡಗಿಗೂ ಬೇಡ, ಇತ್ತ ದಕ್ಷಿಣ ಕನ್ನಡವೂ ಸ್ವೀಕರಿಸದ ಹಳ್ಳಿ. ಕೊಡಗಿನ ಭೂಪಟದಲ್ಲಿ ಚಿಕ್ಕ ಬಾಲ! ವಿದ್ಯುತ್ ಶುಲ್ಕ ಪಾವತಿಸಲೂ ದೂರದ ಮಡಿಕೇರಿಗೆ ಹೋಗಬೇಕಾಗಿತ್ತು. ಈಗ ಗ್ರಾಮ ಬೆಳೆದಿದೆ. ಶೈಕ್ಷಣಿಕವಾಗಿ ಮುಂದಿದೆ. ಸೌಕರ್ಯಗಳೆಲ್ಲಾ ಬಂದಿವೆ. 

ಅಂಚೆ ಕಚೇರಿಯ ಪಕ್ಕ ಅಂಚೆ ಮಾಸ್ತರರ ಅಂಗಡಿಯಿತ್ತು. ಅವರು ಯಕ್ಷಗಾನ ಪ್ರಿಯರು. ವೈಯಕ್ತಿಕವಾಗಿ ಹಿತರು. ಅಂಗಡಿಯು ಊರಿನ ಆಗುಹೋಗುಗಳ ಕೇಂದ್ರ! ಅಲ್ಲಿಗೆ ಯಾರೆಲ್ಲಾ ಬರುತ್ತಾರೆ ಎಂದು ಅಂಚೆಯಣ್ಣನಿಗೆ ಗೊತ್ತು. ಅವರು ಪೆಟ್ಟಿಗೆಯೊಂದರಲ್ಲಿ ಅಂಚೆಯನ್ನು ಹಾಕಿಡುತ್ತಿದ್ದರು. ಸಂಬಂಧಪಟ್ಟವರು ಒಯ್ಯುತ್ತಿದ್ದರು. 

ತಂದೆಯ ಆಪ್ತರೊಬ್ಬರು ಚಂದಮಾಮದ ಚಂದಾದಾರರು. ತಿಂಗಳಿಗೊಮ್ಮೆ ಅವರ ಮನೆಗೆ ಹೋಗಿ ಓದುತ್ತಿದ್ದೆ. ಪತ್ರಿಕೆ ಖರೀದಿಸಲು ಆರ್ಥಿಕ ಶಕ್ತಿಯಿಲ್ಲದ ಕಾಲ. ಅಂದು ಅಂಚೆಯಲ್ಲಿ ಬಂದ ಚಂದಮಾಮ ಪುಸ್ತಕವನ್ನು ಬಿಡಿಸಿ ಕುಳಿತು ಓದುತ್ತಿದ್ದೆ. ಇನ್ನೊಬ್ಬರ ಹೆಸರಿಗೆ ಬಂದ ಅಂಚೆಯನ್ನು ಒಡೆಯುವುದು ತಪ್ಪೆಂದು ಗೊತ್ತಿತ್ತು. ಆದರೆ ಓದುವ ಚಟ ಹಾಗೆ ಮಾಡಿಸಿತ್ತು.
ಸ್ವಲ್ಪ ಹೊತ್ತಾಗಿರಬಹುಷ್ಟೇ. ತನಗೆ ಬಂದ ಅಂಚೆಯನ್ನು ಒಯ್ಯಲು ಆ ಅಪ್ತರು ಬಂದರು. ತಕ್ಷಣ ಪುಸ್ತಕವನ್ನು ನೀಡಿದೆ. ಅಲ್ಲಿದ್ದ ಪ್ರತಿಷ್ಠಿತ ವ್ಯಕ್ತಿಯೋರ್ವ, ಹಣ ಕೊಟ್ಟು ಪುಸ್ತಕ ಪರ್ಚೇಸ್ ಮಾಡುವ ಯೋಗ್ಯತೆ ಇಲ್ಲದಿದ್ದ ಮೇಲೆ ಓದುವ ದೊಡ್ಡಸ್ತಿಕೆ ಯಾಕೆ? ನಾಚಿಕೆಯಾಗುವುದಿಲ್ವಾ. ಅನ್ನಬೇಕೇ? ತಲೆ ತಗ್ಗಿಸಿ ಮರಳಿದೆ. 

ಚುಚ್ಚು ಮಾತುಗಳು ಚುಚ್ಚಿತು. ಬಹುಕಾಲ ಚುಚ್ಚುತ್ತಿದ್ದುವು. ತುತ್ತಿಗೂ ತತ್ವಾರವಿದ್ದರೂ 'ಯೋಗ್ಯತೆ'ಯ ಕುರಿತು ತುಂಬಾ ಹಗುರವಾಗಿ ಮಾತನಾಡಿದ್ದರಿಂದ ನೋವು ಅನುಭವಿಸಿದ್ದೆ. ಬಳಿಕ ಐದಾರು ತಿಂಗಳು ಓದುವಿಕೆಗೆ ಸ್ವ-ಘೋಷಿತ ರಜೆ! ಆ ಆಪ್ತರಿಗೆ ಯಾಕೋ ಸಂಶಯ ಬಂದು ಅಷ್ಟೂ ತಿಂಗಳ ಪುಸ್ತಕವನ್ನು ತಂದು ಕೊಟ್ಟರು. 

ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ಪೆರಾಜೆಯಿಂದ ಸುಳ್ಯಕ್ಕೆ ಐದಾರು ಕಿಲೋಮೀಟರ್ ನಿತ್ಯ ಬಸ್ ಪ್ರಯಾಣ. ಬಹುಶಃ ಎರಡೋ ಮೂರು ರೂಪಾಯಿ ಟಿಕೇಟ್. ಹಳೆಯ ಚಂದಮಾಮದ ಸಂಚಿಕೆಗಳು ಅಣಕಿಸುತ್ತಿದ್ದುವು.  ಓದದೆ ಚಡಪಡಿಕೆ. ಮನೆಯಲ್ಲಿ ಹಣ ಕೊಡುವ ಸ್ಥಿತಿಯಿದ್ದಿರಲಿಲ್ಲ. ವಾರದ ಕೊನೆಗೆ ಸುಳ್ಯದಿಂದ ಪೆರಾಜೆಗೆ ಕಾಲ್ನಡಿಗೆ ಜಾಥಾ! ಬಸ್ಸಿನ ಹಣವನ್ನು ಉಳಿಸುತ್ತಿದ್ದೆ. ಅದರಲ್ಲಿ ಚಂದಮಾಮ ಖರೀದಿಸಿ ಓದಲು ಶುರು ಮಾಡಿದೆ. 

ಮೊದಲು ಹಣ ನೀಡಿ ಖರೀದಿಸಿದ ಚಂದಮಾಮದ ಪುಟಗಳಲ್ಲಿ ಕೀಳಾಗಿ, ಹಗುರವಾಗಿ ಮಾತನಾಡಿದರ ಮುಖವೇ ಕಾಣುತ್ತಿತ್ತು. ಮತ್ತೆಂದೂ ಪುಕ್ಕಟೆಯಾಗಿ ಪತ್ರಿಕೆಯನ್ನೋ, ನಿಯತಕಾಲಿಕೆಯನ್ನು ಓದಿಲ್ಲ. ಕೊಂಡು ಓದುವ 'ಯೋಗ್ಯತೆ' ಬಂತು! ನಂತರದ ದಿವಸಗಳಲ್ಲಿ ಒಂದೆರಡು ದಿನಪತ್ರಿಕೆಗಳು ಸಾಥ್ ಆದುವು.  
 
ಹೀಗೆ ರೂಢನೆಯಾದ 'ಕೊಂಡು ಓದುವ' ಹುಚ್ಚು ಅಧರ್ಾಯುಷ್ಯ ದಾಟಿದರೂ ನಿಂತಿಲ್ಲ!  ಅವರ ಚುಚ್ಚು ಮಾತುಗಳು ಆಸಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಯಿತೇನೋ ಹೌದು. ಆದರೆ ಬದುಕಿನಲ್ಲಿ 'ಮಮರ್ಾಘಾತ' ಮಾಡುವಂತಹ ವ್ಯಕ್ತಿಗಳು 'ಹಿತರ' ಸೋಗಿನಲ್ಲಿ ಈಗಲೂ ಇದ್ದಾರೆ. ನಿತ್ಯ ಗೆಜಲುತ್ತಾ ಇರುವುದು ಇಂತಹವರ ಸ್ವಭಾವ. ಅವರು ಕೊಡುವ, ಕೊಟ್ಟ ನೋವು ಫಕ್ಕರೆ ಆರುವುದಿಲ್ಲ.   

          ಹೀಗೆ ಶುರುವಾದ ಪುಸ್ತಕದ ಹುಚ್ಚು ನಿಜಾರ್ಥದ ಹುಚ್ಚಾಗಿ ಪರಿಣಾಮಿಸಿತು. ಚಿಕ್ಕ ಪುಸ್ತಕ ಭಂಡಾರದ ಹುಟ್ಟಿಗೂ ಕಾರಣವಾಯಿತು. (ಲೇಖನದ ಜತೆಗಿರುವ ಚಂದಮಾಮ ಮುಖಚಿತ್ರ  1954 ನವೆಂಬರ ತಿಂಗಳ ಸಂಚಿಕೆಯದ್ದು. ಜಾಲತಾಣ ಕೃಪೆ) 

ಸುದ್ದಿ ಬಿಡುಗಡೆ / ಊರುಸೂರು 7 / 21-10-2018
 ಜಿಹ್ವಾಚಾಪಲ್ಯ ವೃದ್ಧಿಸುವ ರುಚಿವರ್ಧಕ


           ಬಸ್ಸಿನ ಮುಂದಿನ ಆಸನದಲ್ಲಿದ್ದ ಅಡುಗೆ ವಿಶೇಷಜ್ಞರ ಮಾತಿಗೆ ಕಿವಿಯೊಡ್ಡಬೇಕಾದ ಪ್ರಮೇಯ ಬಂತು. ಅವರಿಬ್ಬರು ದೊಡ್ಡ ಸಮಾರಂಭಗಳ ಅಡುಗೆಯ ಜವಾಬ್ದಾರಿಯನ್ನು ನಿಭಾಯಿಸಿದ ಅನುಭವಿಗಳು. ಒಬ್ಬರೆಂದರು, ಮೊನ್ನೆ ಎರಡು ಸಾವಿರ ಮಂದಿಯ ಅಡುಗೆಗೆ ಶಹಬ್ಬಾಸ್ ಸಿಕ್ಕಿದ್ದೇ ಸಿಕ್ಕಿದ್ದು. ಯಾವಾಗಲೂ ಹಾಕುವುದಕ್ಕಿಂತ ಸ್ವಲ್ಪ ಹೆಚ್ಚೇ ಟೇಸ್ಟ್ ಮೇಕರ್ ಹಾಕಿದ್ದೆ, ಎಂದಾಗ ಇನ್ನೊಬ್ಬರು ದನಿ ಸೇರಿಸಿದರು, ಅಂಗಡಿಯಲ್ಲಿ ಟೇಸ್ಟ್ ಮೇಕರ್ ಅಂತ ಕೇಳಿದ್ರೆ ಆಯಿತು, ಏನೋ ಬಿಳಿ ಪುಡಿ ಕೊಡ್ತಾರೆ. ಅದು ಎಂತಾದ್ದು ಅಂತ ಗೊತ್ತಿಲ್ಲ. ಈಚೆಗೆ ಎಲ್ಲರೂ ಹಾಕ್ತಾರೆ, ನಾನ್ಯಾಕೆ ಹಾಕಬಾರ್ದು? ಆ ಪುಡಿ ಹಾಕಿದರೆ ಸಾರು, ಸಾಂಬಾರಿನ ರುಚಿಯೇ ಬೇರೆ.
          ದಂಗಾಗುವ ಸರದಿ ನನ್ನದು. ಹೋಟೆಲ್, ಉದ್ಯಮಗಳಲ್ಲಿ ರುಚಿವರ್ಧಕವನ್ನು ಬಳಸುವುದನ್ನು ಕಿವುಡಾಗಿ, ಕುರುಡಾಗಿ ಒಪ್ಪಿಕೊಂಡಾಗಿದೆ. ಅಡುಗೆ ವಿಶೇಷಜ್ಞರು ಅಪರೂಪಕ್ಕೆ ಬಳಸುತ್ತಾರೆನ್ನುವುದು (ಎಲ್ಲರೂ ಅಲ್ಲ) ಇಂದಷ್ಟೇ ತಿಳಿಯಿತು. ಸಮಾರಂಭಗಳ ಸಂಖ್ಯೆ ಅಧಿಕವಾಗುತ್ತಾ ಬಂದ ಹಾಗೆ ಸೂಪಜ್ಞರಲ್ಲೂ ತಮ್ಮದೇ ಕೈರುಚಿ ಮೇಲುಗೈಯಾಗಬೇಕೆನ್ನುವ ಪೈಪೋಟಿ ಸಹಜ. ಒಂದು ಸಮಾರಂಭದಲ್ಲಿ ಅಡುಗೆ ಸೈ ಎನಿಸಿದರೆ ಮತ್ತೊಂದು ಅಡುಗೆ ಹುಡುಕಿಕೊಂಡು ಬರುತ್ತದೆ. ಆದರೆ ಈ ವಿಚಾರವು ಸಮಾರಂಭದ ಯಜಮಾನನಿಗೆ ಗೊತ್ತಿದೆಯೋ ಇಲ್ವೋ.
          ಇದು ರುಚಿವರ್ಧಕದ ಮಾತಾಯಿತು. ತರಕಾರಿ, ಜೀನಸುಗಳಿಗೆ ಸಹಜವಾಗಿ ಮಾರುಕಟ್ಟೆಯನ್ನು ಅವಲಂಬಿಸಬೇಕು. ಮಾರುಕಟ್ಟೆಯ ತರಕಾರಿ ಅಂದಾಗ ಅದು ರಾಸಾಯನಿಕದಲ್ಲಿ ಮಿಂದೆದ್ದು ಬಂದವುಗಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಕ್ಕಿಯಿಂದ ಉಪ್ಪಿನ ತನಕ ಸಾಚಾತನಕ್ಕೆ ಪ್ರತ್ಯೇಕ ಪರೀಕ್ಷೆ ಬೇಕಾಗುವ ಕಾಲಮಾನ. ಇವುಗಳೊಂದಿಗೆ ಉದರಕ್ಕಿಳಿಯುವ ಖಾದ್ಯಗಳಿಗೂ ಈಗ ರುಚಿವರ್ಧಕದ ಸ್ಪರ್ಶ!  ಕಾರ್ಬೈಡ್ ಹಾಕಿ ದಿಢೀರ್ ಹಣ್ಣು ಮಾಡಿದ ಬಾಳೆಹಣ್ಣುಗಳು ಭೋಜನದೊಂದಿಗೆ ಬೋನಸ್. ಉಚಿತವಾಗಿ ಕೊಡುವ ಕೃತಿ ಒಳಸುರಿಗಳಿಂದ ತಯಾರಿಸಿದ ಐಸ್ಕ್ರೀಂನಲ್ಲಿ ಏನೆಲ್ಲಾ ಇವೆಯೋ? ಹಾಗೆಂತ ರುಚಿವರ್ಧಕ ಬಳಸದೆ ತಮ್ಮ ಅನುಭವ ಮತ್ತು ಕೈಗುಣದಿಂದ ಶುಚಿರುಚಿಯಾದ ಭೋಜನವನ್ನು ಸಿದ್ಧಪಡಿಸುವ ವಿಶೇಷಜ್ಞರನ್ನು ನಾವೆಷ್ಟು ಗೌರವಿಸಿದ್ದೇವೆ?
          ಒಂದೆರಡು ವರುಷದ ಹಿಂದೆ ಮ್ಯಾಗಿ ನಿಷೇಧದ ಕಾವು ದೇಶವಲ್ಲ, ವಿಶ್ವಾದ್ಯಂತ ಕಂಪನ ಮೂಡಿಸಿತ್ತು. ಅದರಲ್ಲಿ ಅಗತ್ಯಕ್ಕಿಂತ ಹೆಚ್ಚಿರುವ ಸೀಸ, ರುಚಿವರ್ಧಕವು ಉದ್ಯಮದ ಅಡಿಗಟ್ಟನ್ನು ಅಲ್ಲಾಡಿಸಿದ್ದುವು.  ಕೋಟಿಗಟ್ಟಲೆ ಉತ್ಪನ್ನ ಬೆಂಕಿಗಾಹುತಿಯಾಗಿದೆ. ಜಾಹೀರಾತುಗಳ ಮೂಲಕ ನಂಬಿಸಿದ ಸಂಸ್ಥೆಯು ವಿಶ್ವಾಸ ಕಳೆದುಕೊಂಡಿದೆ. ತಿನ್ನುವ ಎಲ್ಲಾ ವಸ್ತುಗಳನ್ನು ಸಂಶಯ ದೃಷ್ಟಿಯಿಂದ ನೋಡುವ ಸ್ಥಿತಿ ರೂಪುಗೊಂಡಿದೆ. ಸೇಬು- ದ್ರಾಕ್ಷಿಯೊಳಗಿರುವ ರಾಸಾಯನಿಕ, ಹಾಮರ್ೋನುಗಳ ಕುರಿತು, ಕಲ್ಲಂಗಡಿಗೆ ಇಂಜೆಕ್ಟ್ ಮಾಡುವ ವಿವಿಧ ಮುಖಗಳನ್ನು ವಾಹಿನಿಗಳು ಪ್ರಸಾರ ಮಾಡುತ್ತಲೇ ಇವೆ. ರಾಸಾಯನಿಕ ಸಿಂಪಡಣೆಗಳ ಕರಾಳ ಮುಖಗಳತ್ತ ವಿವಿಧ ಮಾಧ್ಯಮಗಳು ಸತ್ಯಗಳನ್ನು ಬಿಚ್ಚಿಡುತ್ತಿವೆ. 
          ತಮಿಳುನಾಡಿನಿಂದ ಬರುವ ತರಕಾರಿಗಳಿಗೆ ಕೇರಳ ರಾಜ್ಯವು ಅವಲಂಬಿತ. ನಿರ್ವಿಷ ಆಹಾರದ ಕುರಿತು ಕೇರಳದಲ್ಲಿ ವ್ಯಾಪಕವಾಗಿ ಅರಿವು ಮೂಡಿಸುವ ಕೆಲಸವನ್ನು ಸರಕಾರ ಮತ್ತು ಖಾಸಗಿ ಸಂಸ್ಥೆಗಳು ಮಾಡುತ್ತಾ ಇವೆ. ಆರೋಗ್ಯ ಕಾಳಜಿಯಿದ್ದ ಮಂದಿ ಸಾವಯವಕ್ಕೆ ಬದಲಾಗುತ್ತಿದ್ದಾರೆ. ಸ್ವಾವಲಂಬನೆಯತ್ತ ಹೊರಳುತ್ತಿದ್ದಾರೆ. ಕೈತೋಟಗಳನ್ನು ಎಬ್ಬಿಸುವ ಮನಃಸ್ಥಿತಿ ನಿರ್ಮಾಣವಾಗುತ್ತಿದೆ. ಮಾವು, ಹಲಸು, ಗೆಡ್ಡೆ, ಎಲೆಗಳು ತರಕಾರಿಯಾಗಿ ಉದರ ಸೇರುತ್ತಿದೆ. ರಾಸಾಯನಿಕದ ಪರಿಣಾಮ ಜನರ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ, ಹೊರ ರಾಜ್ಯಗಳಿಂದ ತರಕಾರಿಯನ್ನು ತರಿಸದೇ ಇರಲು ಕೆಲವು ವ್ಯಾಪಾರಿಗಳು ನಿರ್ಧರಿಸಿದ್ದಾರೆ! 
          ಸಾವಯವದ ಅರಿವು ಪ್ರಚಾರದಲ್ಲಷ್ಟೇ ಉಳಿದಿವೆ! ಅನುಷ್ಠಾನ ತೀರಾ ಕಡಿಮೆ. ಸಾವಯವದ ಸಾರ ಮನದೊಳಗೆ ಇಳಿಯುವುದಂತೂ ನಿಧಾನ. ಆಹಾರದಲ್ಲಿ ವಿಷದ ಪ್ರಮಾಣಗಳು ಪತ್ತೆಯಾಗುತ್ತಲೇ ಇದ್ದಂತೆ ನಿರ್ವಿಷ ಆಹಾರಗಳ ಹುಡುಕಾಟದತ್ತ, ಬೆಳೆಯುವತ್ತ ಯೋಜನೆ, ಯೋಚನೆಗಳು ಹೆಜ್ಜೆಯೂರುತ್ತಿವೆ.  ಕೆಲವು ಸಂಘಟನೆಗಳು ನಗರಗಳಲ್ಲಿ ಸಾವಯವದ ಮಹತ್ವ, ನಿರ್ವಿಷ ಆಹಾರದ ಅಪಾಯಗಳತ್ತ ಅರಿವು ಚೆಲ್ಲುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿವೆ. ಪಾಲಿಶ್ ಮಾಡದ ಅಕ್ಕಿಯನ್ನು ಅರಸಿ ಬರುವ, ವಿಳಾಸ ಕೇಳುವ ಅಮ್ಮಂದಿರು ಎಚ್ಚರವಾಗಿದ್ದಾರೆ.
          ವಿವಿಧ ರೂಪಗಳಲ್ಲಿ ರಾಸಾಯನಿಕಗಳನ್ನು ಗೊತ್ತಿಲ್ಲದೆ ಬದುಕಿನಂಗವಾಗಿ ಸ್ವೀಕರಿಸಿದ್ದೇವೆ. ಗೊತ್ತಾದ ಬಳಿಕ ದೂರವಿರುವುದರಲ್ಲಿ ಆರೋಗ್ಯ ಭಾಗ್ಯ. ತಕ್ಷಣ ಎಲ್ಲವನ್ನೂ ವಜ್ರ್ಯ ಮಾಡಲಸಾಧ್ಯ. ಹಂತ ಹಂತವಾಗಿ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಒಂದಷ್ಟು ದಿವಸ ಹೆಚ್ಚು ಬಾಳಬಹುದೇನೋ? ನಿರ್ವಿಷವಾಗಿ ಕೃಷಿ ಉತ್ಪನ್ನಗಳನ್ನು ಬೆಳೆದುಕೊಡುವ ಕೃಷಿಕರನ್ನು ಪ್ರೋತ್ಸಾಹಿಸೋಣ.

 ಸುದ್ದಿ ಬಿಡುಗಡೆ / ಊರುಸೂರು | 14-10-2018