Thursday, January 29, 2015

ಹಸಿರ ಚಿಗುರಲ್ಲಿ ಅರಿವಿನ ಮಿಳಿತ

               ಊಟದ ಬಟ್ಟಲು ಬರಿದಾಗುತ್ತಿದೆ!
             'ರೆಡಿ ಟು ಈಟ್' ಸಂಸ್ಕೃತಿಯು ಅನುಭವಿಸಿ ತಿನ್ನುವ ಅಭ್ಯಾಸವನ್ನು ಕಸಿದುಕೊಂಡಿದೆ. ಹೊಟ್ಟೆಯು ತ್ಯಾಜ್ಯ ತುಂಬುವ ಚೀಲವಾಗಿದೆ. ಹಸಿವಾದಾಗ ಹೊಟ್ಟೆ ತುಂಬಿಸುವುದು - ಇಷ್ಟಕ್ಕೆ ಊಟ ಸೀಮಿತವಾಗಿದೆ. ಮೊಬೈಲ್ ಕಿವಿಗಂಟಿದರೆ ಮುಗಿಯಿತು. ಏನನ್ನು ಹೊಟ್ಟೆಗಿಳಿಸಿದ್ದೇವೆ, ಎಷ್ಟು ತಿಂದಿದ್ದೇವೆ, ತಿಂದ ಖಾದ್ಯದ ರುಚಿ ಹೇಗಿದೆ, ಉಪ್ಪು-ಖಾರ ಸಮಪಾಕದಲ್ಲಿದೆಯೇ? - ನಮ್ಮೊಳಗೆ ಯಾವ ಪ್ರಶ್ನೆಯನ್ನೂ ಹುಟ್ಟುಹಾಕದ ಮನಃಸ್ಥಿತಿ.
                  ಕ್ಯಾಬೇಜ್, ಹೂಕೋಸು ಪ್ರಸಿದ್ಧಿಗಿಂತ ಮೊದಲು ಹಸಿರ ಕುಡಿಗಳು ಖಾದ್ಯಗಳಾಗಿ ಬದಲಾಗುತ್ತಿದ್ದುವು. ಯಾವ್ಯಾವ ಋತುವಿನಲ್ಲಿ ಏನೇನು ತಿನ್ನಬೇಕೆಂಬ ಜ್ಞಾನ ಹಿರಿಯರ ನಾಲಗೆ ತುದಿಯಲ್ಲಿರುತ್ತಿದ್ದುವು. ದಿನಕ್ಕೊಂದು ಸೊಪ್ಪಿನ ಐಟಂ ಅನ್ನದ ಬಟ್ಟಲೇರದೆ ಭೋಜನವಾಗುತ್ತಿರಲಿಲ್ಲ. ಇವುಗಳಲ್ಲಿ ಔಷಧೀಯ ಜ್ಞಾನವೂ ಮಿಳಿತವಾಗಿರುತ್ತಿದ್ದುವು. ಯಾವಾಗ ಔಷಧಿ ಮತ್ತು ಆಹಾರಗಳು ವಿಚ್ಛೇದನ ಪಡೆದುವೋ ಅಲ್ಲಿಂದ ಸೊಪ್ಪುಗಳು, ಕುಡಿಗಳು ಮರೆಗೆ-ಮರೆವಿಗೆ ಸರಿಯಿತು.
                  ಬಸಳೆ, ಪಾಲಕ್, ಹರಿವೆ, ಮೆಂತೆ.. ಮೊದಲಾದ ಸೊಪ್ಪುಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಸೊಪ್ಪು ತರಕಾರಿಗಳನ್ನು ಬೆಳೆಸುವ ಪರಿಪಾಠ ಕಡಿಮೆ. ಹಿತ್ತಿಲಲ್ಲೇ ಬೆಳೆವ ವೈವಿಧ್ಯಮಯ ಸೊಪ್ಪುಗಳನ್ನು ಪ್ರಕೃತಿ ಒದಗಿಸಿದೆ. ಅವುಗಳು ತಂಬುಳಿ, ಪಲ್ಯ, ಚಟ್ನಿ, ಸಾರಿನ ಮೂಲಕ ಹೊಟ್ಟೆಗಿಳಿದು ಉದರಾಗ್ನಿಯನ್ನು ಶಮನಿಸುತ್ತದೆ, ಆರೋಗ್ಯ ಭಾಗ್ಯವಾಗುವತ್ತಲೂ ಸಹಕರಿಸುತ್ತದೆ.
                 ಸಂತೆಯಲ್ಲಿ ಬಗೆಬಗೆಯ ತರಕಾರಿಗಳ ಮಧ್ಯೆ ಸೊಪ್ಪು ತರಕಾರಿಗಳನ್ನು ಆಯಲೆಂದೇ ಬರುವ ಸೊಪ್ಪುಪ್ರಿಯರನ್ನು ಕಾಣಬಹುದು. ನಾರಿನ ಅಂಶ, ವಿಟಮಿನ್ಗಳು, ಪೋಷಕಾಂಶಗಳಿರುವ ಸೊಪ್ಪುಗಳನ್ನು ಅನ್ನದೊಂದಿಗೆ ತಿನ್ನಬೇಕೆನ್ನುವ ಅರಿವು ಮೂಡುತ್ತಿದೆ. ವೈದ್ಯರು ಕೂಡಾ ಶಿಫಾರಸು ಮಾಡುತ್ತಿದ್ದಾರೆ. ಹಾಗಾಗಿ ಸೊಪ್ಪು ತರಕಾರಿಗಳಿಗೆ ಬೇಡಿಕೆ.
               ಬಂಟ್ವಾಳ ತಾಲೂಕಿನ (ದ.ಕ.) ಕೇಪು-ಉಬರು 'ಹಲಸು ಸ್ನೇಹಿ ಕೂಟ'ವು 'ಊಟಕ್ಕಿರಲಿ, ಸೊಪ್ಪು ತರಕಾರಿ' ಎನ್ನುವ ವಿಶಿಷ್ಟ ಕಾರ್ಯಾಾಗಾರವನ್ನು ಅನ್ಯಾನ್ಯ ಸಂಸ್ಥೆಗಳೊಂದಿಗೆ ಯೋಜಿಸಿತ್ತು. ಸೊಪ್ಪುಗಳ ಮರೆವಿನ ಕಾಲಘಟ್ಟದಲ್ಲಿ ಕಾರ್ಯಾಾಗಾರವು ಹೊಸ ದಿಕ್ಕಿನತ್ತ ಯೋಚಿಸುವಂತೆ ಮಾಡಿದೆ. ಸೊಪ್ಪುಗಳು ಊಟದ ಬಟ್ಟಲಿಗೆ ಮರಳಲು ಯೋಜನೆ ರೂಪಿಸಿದೆ. ಇಲ್ಲಿ ವಿಚಾರಗಳ ಹೆರುವಿಕೆ ಇರಲಿಲ್ಲ. ಒತ್ತಡವಿರಲಿಲ್ಲ. ಸೊಪ್ಪುಗಳಲ್ಲಿರುವ ಔಷಧೀಯ ವಿಚಾರ, ವಿವಿಧ ಖಾದ್ಯಗಳ ಸವಿರುಚಿಗಳನ್ನು ಉಣಿಸುವ ಹೂರಣ.
              ನೂರಕ್ಕೂ ಮಿಕ್ಕಿ ಸೊಪ್ಪುಗಳ ಪ್ರದರ್ಶನ. ಪರಿಚಯ ಇಲ್ಲದವುಗಳೇ ಸಿಂಹಪಾಲು. ಮಂಗಳೂರಿನ ವೈದ್ಯ ಡಾ.ಮನೋಹರ ಉಪಾಧ್ಯರ ಕನಸು. ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮರ ಸಾರಥ್ಯ.  ಕಾರ್ಯಾಾಗಾರದ ಪ್ರದರ್ಶನಕ್ಕಾಗಿ ಎರಡು ತಿಂಗಳ ಮೊದಲೇ  ಕಾಡು-ಹಿತ್ತಿಲುಗಳನ್ನು ಅಲೆದು, ಸಸಿಗಳನ್ನು ಗುರುತು ಹಿಡಿದು, ಆರೈಕೆ ಮಾಡಿ ಬೆಳೆಸಿದ ಇವರ ಶ್ರಮ ಅಜ್ಞಾತ. ಎಲ್ಲದರ ಬಳಕೆ ಕ್ರಮಗಳನ್ನು ಗುರುತುಹಾಕಿ, ಔಷಧೀಯ ವಿಚಾರಗಳನ್ನು ದಾಖಲಿಸಿದ್ದಾರೆ.
               ಹದಿನೈದು ವಿಧದ ಹರಿವೆ, ಏಳು ತರಹದ ಬಸಳೆ, ನಾಲ್ಕು ಜಾತಿಯ ಬ್ರಾಹ್ಮಿ, ನೆಕ್ಕರೆ ಜಾತಿಯದು ಐದು, ಪರಿಮಳದ ಸಸ್ಯಗಳು ನಾಲ್ಕು, ತಂಬುಳಿಗಾಗುವ ಸೊಪ್ಪುಗಳು ಹಲವಾರು. ಇವೆಲ್ಲಾ ಹೊಸದೇನಲ್ಲ. ನಮ್ಮ ಹಿರಿಯರು ನಿತ್ಯ ಬಳಸುತ್ತಿದ್ದಂತಹ ಸಸ್ಯಗಳು. ಪುನರ್ನವ ಮತ್ತು ಪುರುಷರತ್ನ ಎನ್ನುವ ಎರಡು ಜಾತಿಯ ಸಸ್ಯಗಳನ್ನು ಸಂಗ್ರಹಿಸಲು ತುಸು ತ್ರಾಸ ಪಡಬೇಕಾಯಿತು. ಮಿಕ್ಕಂತೆ ಹೇಳುವಂತಹ ಕಷ್ಟವಾಗಿಲ್ಲ. ಎಲ್ಲವೂ ಸುತ್ತಮುತ್ತ ಸಿಗುವಂತಹುದೇ, ಎನ್ನುತ್ತಾರೆ ಶರ್ಮ.
               ಕಾರ್ಯಾಾಗಾರದ ಅಡುಗೆಮನೆಯಲ್ಲಿ ಸೊಪ್ಪುಗಳದ್ದೇ ಕಾರುಬಾರು. ಅನ್ನ, ಮಜ್ಜಿಗೆ ಹೊರತುಪಡಿಸಿ ವಿವಿಧ ವೈವಿಧ್ಯ ಸೊಪ್ಪುಗಳ ಖಾದ್ಯಗಳು. ಬಸಳೆ, ಹರಿವೆ, ಕೆಸು, ಬ್ರಾಹ್ಮಿ.. ಮೊದಲಾದ ಕೆಲವೇ ಕೆಲವು ಹಸಿರುಗಳನ್ನು ನಿತ್ಯ ಬಳಸಿ ಗೊತ್ತಿತ್ತು. ಮಿಕ್ಕ ಹಸಿರುಗಳನ್ನು ಬಳಸಿದ, ತಯಾರಿಸಿದ ಅನುಭವ ಅಷ್ಟಕ್ಕಷ್ಟೇ. ಹಾಗಾಗಿ ಹಲಸು ಸ್ನೇಹಿ ಕೂಟದ ಸದಸ್ಯರ ಮನೆಗಳಲ್ಲಿ ಒಂದೊಂದು ಖಾದ್ಯಗಳ ಪ್ರಯೋಗ, ಪರೀಕ್ಷೆ.
               ವರ್ಮುುಡಿ ಶಿವಪ್ರಸಾದರದಲ್ಲಿ ಗೆಣಸಿನ ಸೊಪ್ಪಿನ ಪಾಯಸ ಸಿದ್ಧವಾಯಿತು.  ಕಡಂಬಿಲ  ಕೃಷ್ಣಪ್ರಸಾದರಲ್ಲಿ ದಾಲ್ತೋವೆ ರೆಡಿ. ಶರ್ಮರಲ್ಲಿ ಪಕೋಡ, ಸಾರು, ಕೇಸರಿಬಾತ್, ಸಲಾಡ್... ಹೀಗೆ ಸರದಿ ಸಾಲಿನಲ್ಲಿ ಒಂದೊಂದೇ ಖಾದ್ಯಗಳು ಪರೀಕ್ಷೆಯಲ್ಲಿ ಗೆದ್ದುವು. ಕಾರ್ಯಾಾಗಾರದ ಖಾದ್ಯಗಳ ಪಟ್ಟಿಗಳನ್ನು ನೋಡಿದರೆ ಅಬ್ಬಾ, ಸೊಪ್ಪುಗಳ ಕರಾಮತ್ತು! ಒಂದಕ್ಕೊಂದು ಸೇರಿಕೊಂಡು ದುಪ್ಪಟ್ಟು ರುಚಿ ಕೊಡುವ ಹಸಿರಿನ ತಾಕತ್ತು!.
              ವಿಟಮಿನ್ ಸೊಪ್ಪು ಮತ್ತು ಕೆಸುವಿನ ಸೊಪ್ಪುಗಳ ಪತ್ರೊಡೆ, ಕುಂಟಾಲ ಮತ್ತು ಗೇರು ಕುಡಿಗಳ 'ಗ್ರೀನ್ ಟೀ' (ಚಹ, ಕಾಫಿಯ ಬದಲಿಗೆ). ಎಳೆ ಜಾಯಿಕಾಯಿಯ ಉಪ್ಪಿನಕಾಯಿ. ಒಂದೆಲಗ ಚಟ್ನಿ. ವಿವಿಧ ಕಾಡುಕುಡಿಗಳ ತಂಬುಳಿ. ಹುರುಳಿ ಸೇರಿಸಿದ ಹರಿವೆ ಪಲ್ಯ. ನೆರುಗೆಲೆ, ಇಲಿಕಿವಿ, ನೀರ್ಪಂತಿ, ಪುಳ್ಳಂಪುರುಚಿ ಸೊಪ್ಪುಗಳ ತಿಳಿಸಾರು. ನೆಲಹರಿವೆಯ ಸಾಸಿವೆ. ನುಗ್ಗೆಸೊಪ್ಪು, ಸಿಹಿ ಕುಂಬಳ ಕುಡಿಗಳ ದಾಲ್ತೋವೆ. ಗೆಣಸಿನ ಸೊಪ್ಪಿನ ಪಾಯಸ, ಕ್ರೋಟಾನ್ ಹರಿವೆಯ ಪಕೋಡ.. ಹೀಗೆ. (ಇಲ್ಲಿ ಹೆಸರಿಸಿರುವ ಕುಡಿಗಳಿಗೆ ಪ್ರಾದೇಶಿಕವಾಗಿ ವಿವಿಧ ಹೆಸರುಗಳಿವೆ)
                  ಅನುಭವಿ ವೈದ್ಯ ಡಾ.ಶ್ರೀಕುಮಾರ್ ವೃತ್ತಿಯಲ್ಲಿ ವೈದ್ಯರು. ಸೊಪ್ಪುಗಳ ಖಾದ್ಯಗಳ ಬಳಕೆಯಿಂದ ದೇಹಕ್ಕೆ ಸಿಗುವ ಪೋಷಕಾಂಶಗಳ ಮಾಹಿತಿಯನ್ನು ನಿಖರವಾಗಿ ಹೇಳಬಲ್ಲರು. ತಮ್ಮ ಪತ್ನಿ ಆಶಾರೊಂದಿಗೆ ಕಾರ್ಯಾಾಗಾರದಲ್ಲಿ ಸೊಪ್ಪುಗಳ ಖಾದ್ಯಗಳ ಪ್ರಾತ್ಯಕ್ಷಿಕೆಯನ್ನು ಸ್ವತಃ ಮಾಡಿದರು. ಜತೆಜತೆಗೆ ಅವುಗಳ ಔಷಧೀಯ, ಸಸ್ಯಶಾಸ್ತ್ರೀಯ ಪರಿಚಯ. ಯಾವುದನ್ನು ಹೆಚ್ಚು ಸೇವಿಸಬಾರದು, ಯಾವುದನ್ನು ಸ್ವೀಕರಿಸಲೇ ಬೇಕು ಎನ್ನುವ ಮಾಹಿತಿಗಳು ಸದಾ ಅಡುಗೆ ಮನೆಯಲ್ಲಿರಬೇಕಾದವುಗಳು.
             ಹರಿವೆ, ಬಸಳೆ, ವಿಟಮಿನ್, ಪುಂಡಿ, ನೆಲಬಸಳೆ, ಗೆಣಸು ಸೊಪ್ಪುಗಳ ಸಾರು; ಬಸಳೆ ಸೊಪ್ಪಿನ ದೋಸೆ, ಗೆಣಸಿನ ಸೊಪ್ಪಿನ ವಡೆ, ತೊಂಡೆಸೊಪ್ಪಿನ ತಂಬುಳಿ; ವೀಳ್ಯದೆಲೆ, ಸಾಂಬ್ರಾಣಿ, ಬಸಳೆ ಸೊಪ್ಪುಗಳ ಪ್ರತ್ಯಪ್ರತ್ಯೇಕವಾಗಿ ತಯಾರಿಸಿದ ಪೋಡಿ(ಬಜ್ಜಿ), ಬಸಳೆ ಸೊಪ್ಪಿನ ಗೊಜ್ಜು - ಸುಮಾರು ಒಂದೂವರೆ ಗಂಟೆಯಲ್ಲಿ ಹತ್ತಾರು ಬಗೆಯ ಖಾದ್ಯಗಳನ್ನು ತಯಾರಿಸುತ್ತಿದ್ದಂತೆ ಆಸಕ್ತ ಅಮ್ಮಂದಿರ ನೋಟ್ ಬುಕ್ಕಿನಲ್ಲಿ ದಾಖಲಾದುವು.
              ಖಾದ್ಯಗಳನ್ನು ಕಣ್ಣೆದುರೇ ಮಾಡಿ ತೋರಿಸಿದಾಗ ಒಲವು, ವಿಶ್ವಾಸ ಹೆಚ್ಚು. ವಾಹಿನಿಗಳಲ್ಲಿ ಬಿತ್ತರವಾಗುವ ಅಡುಗೆ ಕಾರ್ಯಕ್ರಮಗಳ ಜನಪ್ರಿಯತೆಯ ಗುಟ್ಟು ಇದೇ ಇರಬಹುದೇನೋ? ಹೊಸ ಹೊಸ ರುಚಿಗಳನ್ನು ಸವಿಯಲು ಹವಣಿಸುವ ನಾಲಗೆಗಳಿಗೆ ಪ್ರಾತ್ಯಕ್ಷಿಕೆ, ಕಾರ್ಯಾಾಗಾರಗಳು ಉತ್ತಮ ವೇದಿಕೆ. ಹಲಸು ಸ್ನೇಹಿ ಕೂಟವು ಹಿಂದೆ ಏರ್ಪಡಿಸಿದ್ದ ಹಲಸು, ಮಾವು ಮೇಳಗಳ ಅಡುಗೆ ಪ್ರಾತ್ಯಕ್ಷಿಕೆ;. ಖಾದ್ಯಗಳ ಸ್ಪರ್ಧೆಗಳಲ್ಲಿ ನೂರಾರು ಖಾದ್ಯಗಳ ಪ್ರದರ್ಶನಗಳ ಸೊಬಗು ನೆನಪಾಗುತ್ತದೆ. ಇವೆಲ್ಲಾ ಸೀಮಿತ ಸಂಪನ್ಮೂಲ ಮತ್ತು ಹೆಗಲುಗಳಿಂದಾಗಿ ಸಂಪನ್ನವಾಗಿತ್ತು.
              ಸೊಪ್ಪು ತರಕಾರಿ ಕಾರ್ಯಾಾಗಾರದಲ್ಲಿ ಖಾದ್ಯಗಳನ್ನು ಸಿದ್ಧಪಡಿಸಿದ ಸೂಪಜ್ಞರಿಗೆ ಇವೆಲ್ಲಾ ಹೊಸತು. ಸಮಾರಂಭಗಳಲ್ಲಿ ಸಿದ್ಧ ಮೆನುಗಳನ್ನು ಸಿದ್ಧಪಡಿಸಿ ಅನುಭವವಿತ್ತಷ್ಟೇ. ಶರ್ಮ ಬಳಗ ಸೂಪಜ್ಞರ ಹಿಂದೆ ನಿಂತು ಸವಿಸವಿಯಾದ ಖಾದ್ಯಗಳನ್ನು ಉಣಬಡಿಸಿದ್ದು ನಿಜಕ್ಕೂ ಹೆಚ್ಚುಗಾರಿಕೆ. ಮಾದರಿಗಳು ಮುಂದಿದ್ದಾಗ ಅನುಸರಣೆ ಸುಲಭ. ಕಾರ್ಯಗಾರದಲ್ಲಿ ಖಾದ್ಯಗಳ ಮಾದರಿಗಳು ರೂಪುಗೊಂಡಿವೆ. ಏನಿಲ್ಲವೆಂದರೂ ಹತ್ತಾರು ಮನೆಗಳಲ್ಲಿ ಈ ಖಾದ್ಯಗಳ ಪ್ರಯೋಗವಂತೂ ನಡೆದಿದೆ.
              ನಿರ್ವಿಷವಾಗಿ ಸಿಗಬಲ್ಲ ಸೊಪ್ಪು ತರಕಾರಿಗಳ ಸೇವನೆ ನಿತ್ಯ ಆಹಾರದಲ್ಲಿ ಸೇರಿಕೊಳ್ಳಬೇಕು ಎನ್ನುವುದು ಕಾರ್ಯಾಗಾರದ ಉದ್ದೇಶ. ಹೆಸರಿನ ಗೀಳಿಗಾಗಿ ಫೋಸ್ ನೀಡುವವರು ಹಲಸು ಸ್ನೇಹಿ ಕೂಟದಲ್ಲಿಲ್ಲ. ಫಂಡ್ಗಳ ಹಿಂದೆ ಓಡುವ ಮಾತಂತೂ ದೂರ. ನಮ್ಮ ಮನೆಯಿಂದಲೇ ಬದಲಾವಣೆ ಶುರುವಾಗಬೇಕೆನ್ನುವುದು ದೂರದೃಷ್ಟಿ. ಕೂಟದ ಬಹುತೇಕ ಎಲ್ಲಾ ಸಮಾರಂಭಗಳ ಮೆನುಗಳು ಸದಸ್ಯರ ಮನೆಗಳಲ್ಲಿ ಪ್ರಯೋಗ-ಪರೀಕ್ಷೆಗೆ ಒಳಪಟ್ಟು ನಿರ್ಧಾಾರವಾಗುತ್ತದೆ.
                ಹಲಸು, ತರಕಾರಿ, ಮಾವು, ಸಿರಿಧಾನ್ಯ, ಗೆಡ್ಡೆತರಕಾರಿ.. ಗಳ ಕಾರ್ಯಗಾರಗಳನ್ನು ಸ್ನೇಹಿ ಕೂಟವು ಕಳೆದ ನಾಲ್ಕೈದು ವರುಷಗಳಲ್ಲಿ ಏರ್ಪಡಿಸಿತ್ತು. ಆರೋಗ್ಯವು ಭಾಗ್ಯವಾಗಬೇಕೆನ್ನುವ ಸಮಾನ ಮನಸ್ಸುಗಳ ಜಾಲ ರೂಪುಗೊಂಡಿದೆ. ಮೆದುಳಿಗೆ ಮೇವನ್ನು ಒದಗಿಸುವ ಜತೆಗೆ ಹೊಸ ಹೊಸ ಖಾದ್ಯಗಳನ್ನು ಸ್ನೇಹಿ ಕೂಟವು ಪರಿಚಯಿಸುತ್ತಿರುವುದರಿಂದ ಅಮ್ಮಂದಿರ ಒಲವು ಹೆಚ್ಚಾಗಿದೆ. ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯ ಈ ಸದ್ದಿಲ್ಲದ ಕಾಯಕ ಇತರೆಡೆಯೂ ಹಬ್ಬಬೇಕು. ಅದು ಕೇಪು-ಉಬರಿಗೆ ಸೀಮಿತವಾಗಬಾರದು. ಅಂತಹ ಮನಸ್ಸುಗಳು ರೂಪುಗೊಳ್ಳಬೇಕಾದುದು ಕಾಲದ ಅನಿವಾರ್ಯತೆ.
(ಉದಯವಾಣಿ-ನೆಲದನಾಡಿ ಅಂಕಣ-29-1-2015)


ಆಲೂಗೆಡ್ಡೆ ಸಿಪ್ಪೆ ತೆಗೆಯುವ ಯಂತ್ರ

ಪುತ್ತೂರಿನಲ್ಲಿ ಜರುಗಿದ ಕೃಷಿ ಯಂತ್ರ ಮೇಳದಲ್ಲಿ 'ಆಲೂಗೆಡ್ಡೆ (ಬಟಾಟೆ) ಸಿಪ್ಪೆ ತೆಗೆಯುವ ಯಂತ್ರ ಕುತೂಹಲಕರ.

Tuesday, January 27, 2015

ಕೃಷಿ ಯಂತ್ರ ಮೇಳ (Agri machinery fair 2015) - ಕೆಲವು ಕ್ಷಣಗಳು

    ಯಂತ್ರ ಮೇಳದ ಆವರಣದಲ್ಲಿ ಪುತ್ತೂರು ಪುರಸಭಾಧ್ಯಕ್ಷರಿಂದ ಗಣರಾಜ್ಯೋತ್ಸವ ಧ್ವಜಾರೋಹಣ
             ಮಧ್ಯಮ ಕೇಂದ್ರದಲ್ಲಿ ರಾಮಚಂದ್ರ  ಕಾಮತ್, ಮಂಚಿ ಶ್ರೀನಿವಾಸ ಆಚಾರ್ ಮತ್ತು ಪತ್ರಕರ್ತ ರಮೇಶ್ ಕೈಂತಜೆ
 ಯಂತ್ರಮೇಳದ ಮಾಹಿತಿ ಕೈಪಿಡಿ ಬಿಡುಗಡೆಗೊಂಡಾಗ....
ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖವಾಣಿ 'ವಿಕಸನ' ಪತ್ರಿಕೆಯು ಯಂತ್ರಮೇಳದಲ್ಲಿ ಎರಡು ವಿಶೇಷ ಪುರವಣಿಯನ್ನು ಮುದ್ರಿಸಿತ್ತು. ಅದು ಬಿಡುಗಡೆಗೊಂಡಾಗ ವಿದ್ಯಾರ್ಥಿಗಳಿಗೆ ಸಾರ್ಥಕ ಭಾವ. ಈ ಪುರವಣಿಯ ಎಲ್ಲಾ ವೆಚ್ಚವನ್ನು ಯಂತ್ರ ಮೇಳ ಭರಿಸಿತ್ತು.

ವಿದ್ಯಾರ್ಥಿಗಳ ಧೈರ್ಯ, ಆತ್ಮವಿಶ್ವಾಸ

ಪುತ್ತೂರಿನ ವಿವೇಕಾನಂದ ವಿದ್ಯಾಲಯದ ವಿದ್ಯಾರ್ಥಿಗಳಿಗೆ ತಮ್ಮ ಆವಿಷ್ಕಾರಗಳನ್ನು ಕೃಷಿಕರಿಗೆ ವಿವರಿಸಲು ಖುಷಿ. ಸ್ಪಷ್ಟವಾಗಿ, ಅರ್ಥವತ್ತಾಗಿ ಪಟಪಟನೆ ವಿವರಗಳನ್ನು ಹೇಳುವ ವಿದ್ಯಾರ್ಥಿಗಳ ಧೈರ್ಯ, ಆತ್ಮವಿಶ್ವಾಸ ಕೃಷಿಕರ ಮನಸೆಳೆಯಿತು. ಸಮವಸ್ತ್ರ ಮತ್ತು ತಲೆಗೆ ಅಡಿಕೆ ಹಾಳೆಯ ಟೊಪ್ಪಿ, ಅದರ ಮೇಲೊಂದು ಕೀರೀಟವನ್ನು ಹೋಲುವ ರಚನೆ. ತುಂಬಾ ಖುಷಿ ಕೊಟ್ಟ ಮಳಿಗೆಯಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.

ಕ್ಯಾಂಪ್ಕೋ ಚಾಕೋಲೇಟ್ : ಖುಷಿ

ಪುತ್ತೂರಿನ ಕೃಷಿ ಯಂತ್ರಮೇಳದಲ್ಲಿ ಕ್ಯಾಂಪ್ಕೋ ಚಾಕೋಲೇಟ್ ಮಳಿಗೆಯಲ್ಲಿ ಮೂರು ದಿವಸವೂ (ಜನವರಿ 24, 25, 26) ರಶ್! ಮೇಳಕ್ಕೆ ಆಗಮಿಸುವ ಕೃಷಿಕರಿಗೆ ಶೇ.40ರ ರಿಯಾಯಿತಿ. ಮೇಳದ ಮಳಿಗೆಯನ್ನು ವೀಕ್ಷಿಸಿ ತೆರಳುವಾಗ ಬಹುತೇಕರ ಕೈಯಲ್ಲಿ ಕ್ಯಾಂಪ್ಕೋ ಚಾಕೋಲೆಟ್ ಇರುತ್ತಿತ್ತು. ನೂರು ರೂಪಾಯಿಗೆ ನೂರ ಅರುವತ್ತೈದು ರೂಪಾಯಿಯ ಚಾಕೋಲೆಟ್. ಮಳಿಗೆಯನ್ನು ನಿರ್ವಹಿಸುವ ಸಿಬ್ಬಂದಿಗಳಿಗೆ ಖುಷಿಯೋ ಖುಷಿ. ಕ್ಯಾಂಪ್ಕೋ ಸಂಸ್ಥೆಯ ಅಧಿಕಾರಿ ರವೀಶ್ ಎಷ್ಟೊಂದು ಖುಷಿಯಾಗಿದ್ದಾರೆ ನೋಡಿ. ಬಾಯಿತುಂಬಾ ನಕ್ಕಾಗ ಅದು ಚಾಕೋಲೆಟಿಗಿಂತಲೂ ಸಿಹಿ.

ಮೇಳದಿಂದ ಮೂಡಿದ ಯಂತ್ರದೊಲವು(26-1-2015ರ ಹೊಸದಿಗಂತದಲ್ಲಿ ಪ್ರಕಟ)

              2009. ಅಡಿಕೆ ಸುಲಿತಕ್ಕೆ ಯಂತ್ರಗಳು ಹೆಜ್ಜೆಯೂರಿದ ಸಮಯ. ಕೃಷಿಕ ಸಂಶೋಧಕರು ಅಲ್ಲಿಲ್ಲಿ 'ತಮಗಾಗಿ' ಯಂತ್ರಗಳನ್ನು ಆವಿಷ್ಕರಿಸಿದ್ದರು. ಕೆಲವು ಉದ್ಯಮಗಳು ಯಂತ್ರಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು. ಅವುಗಳ ಕ್ಷಮತೆ, ಸುಲಿತದ ಸಾಮಥ್ರ್ಯ, ಸಾಧ್ಯಾಸಾಧ್ಯತೆಗಳ ನಿಖರ ಚಿತ್ರಣವಿರಲಿಲ್ಲ. ಪರಸ್ಪರ ಸಿಕ್ಕಾಗ ಯಂತ್ರಗಳದ್ದೇ ಮಾತುಕತೆ.
ಆಗಿನ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ರಂಗಮೂರ್ತಿಯವರ ಸಾರಥ್ಯದ ಮೊದಲ ಯಂತ್ರಮೇಳದಲ್ಲಿ ಅಡಿಕೆ ಸುಲಿ ಯಂತ್ರಗಳನ್ನು ಕೃಷಿಕರಿಗೆ ಪರಿಚಯಿಸುವುದು ಮೊದಲಾದ್ಯತೆಯ ಕೆಲಸವಾಗಿತ್ತು. ಆಗಲೇ ಅಡಿಕೆ ಪತ್ರಿಕೆಯಲ್ಲಿ ಬೆಳಕು ಕಂಡಿದ್ದ ಹತ್ತಾರು ಸಂಶೋಧಕರು ಮೇಳದಲ್ಲಿ ಮಳಿಗೆ ತೆರೆದಿದ್ದರು. ಮೂವತ್ತೈದಕ್ಕೂ ಮಿಕ್ಕಿದ ಯಂತ್ರಗಳು ಮೇಳದಲ್ಲಿ ಸದ್ದು ಮಾಡಿದಾಗ ಕೃಷಿಕರ ಮುಖದಲ್ಲಿ ನೆರಿಗೆಯ ಬದಲು ನಗು ಮೂಡಿತ್ತು.
             ಮೇಳದ ಬಳಿಕ ಸಂಶೋಧಕರ ಮಧ್ಯೆ ಸಂವಹನ ಶುರುವಾಯಿತು. ಸಂಪರ್ಕದ ಕೊಂಡಿ ಬಿಗಿಯಾಯಿತು. ಯಂತ್ರಗಳತ್ತ ಹೊರಳಿದ ಕೃಷಿಕರ ಚಿತ್ತವನ್ನು ಮನಗಂಡ ಉದ್ಯಮಗಳು ಹೊಸ ಯಂತ್ರಗಳನ್ನು ರೂಪಿಸುವತ್ತ ಯೋಚಿಸಿದುವು. ಅಡಿಕೆ ಸುಲಿ ಯಂತ್ರಕ್ಕೂ ಮಾರುಕಟ್ಟೆ ಮಾಡಬಹುದೆಂಬ ಧೈರ್ಯ ಉದ್ಯಮಗಳಿಗೆ ಬಂದುವು. ಕೃಷಿಕ ಸಂಶೋಧಕರು ತಮ್ಮ ಜ್ಞಾನದ ಮಿತಿಯಲ್ಲಿ ಯಂತ್ರಗಳನ್ನು ತಯಾರಿಸುವತ್ತ ಯೋಚಿಸುವಂತಾಯಿತು. ಈ ಎಲ್ಲಾ ಅಜ್ಞಾತ ಪ್ರಕ್ರಿಯೆಗೆ ಕ್ಯಾಂಪ್ಕೋ ಬೆನ್ನು ತಟ್ಟಿತ್ತು.
              ಆಮೇಲಿನ ಬೆಳವಣಿಗೆಗಳಿಗೆ ವಿವರಣೆ ಬೇಕಾಗದು. ಕೃಷಿಕರ ಅಂಗಳದಲ್ಲಿ ಅಡಿಕೆ ಸುಲಿ ಯಂತ್ರಗಳು ಚಾಲೂ ಆದುವು. ಸ್ವಲ್ಪ ಮಟ್ಟಿನ ಏರು ದರವಿದ್ದರೂ ಕ್ಷಮತೆ ಮತ್ತು ಸಹಾಯಕರ ಅಲಭ್ಯತೆಯ ತಲೆನೋವನ್ನು ಯಂತ್ರಗಳು ಹಗುರಗೊಳಿಸುವುದು. ಸಕಾಲಕ್ಕೆ ಅಡಿಕೆ ಸುಲಿತವಾಗತೊಡಗಿದುವು. ಮಾರುಕಟ್ಟೆಯ ದರವನ್ನು ಅಧ್ಯಯನ ಮಾಡಿ, ಏರು ದರವಿದ್ದಾಗ ಅಡಿಕೆಯನ್ನು ಸುಲಿದು ಮಾರುಕಟ್ಟೆಗೆ ಬಿಡುವ ಜಾಣ್ಮೆ ರೂಢನೆಯಾಯಿತು.
            ಕರಾವಳಿಯಲ್ಲಿ ಚಾಲಿ ಅಡಿಕೆಯಿದ್ದಂತೆ ಮಲೆನಾಡಿನಲ್ಲಿ 'ಕೆಂಪಡಿಕೆ' ಮಾಡುವುದು ಪಾರಂಪರಿಕ. ಎಳೆ ಅಡಿಕೆಯನ್ನು ಸುಲಿದು, ಬೇಯಿಸಿ, ಒಣಗಿಸುವ ಪ್ರಕ್ರಿಯೆ. ಎಳೆ ಅಡಿಕೆಯನ್ನು ಸುಲಿಯುವುದು ಶ್ರಮ ಬೇಡುವ ಕೆಲಸ. ಸಹಾಯಕರ ಅವಲಂಬನೆಯೂ ಹೆಚ್ಚು ಬೇಕಾಗುತ್ತದೆ. ಎಳೆ ಅಡಿಕೆ ಸುಲಿಯುವ ಯಂತ್ರಗಳು ಮಲೆನಾಡಿಯಲ್ಲಿ ಕ್ಷಿಪ್ರವಾಗಿ ಅಭಿವೃದ್ಧಿಯಾದುವು.
            2012ರಲ್ಲಿ ಎರಡನೇ ಯಂತ್ರಮೇಳವು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭರ ನೇತೃತ್ವದಲ್ಲಿ ಜರುಗಿತ್ತು. ಅಂತರ್ಸಾಾಗಟಕ್ಕೆ ಹೆಚ್ಚು ಒತ್ತು ನೀಡಿದ ಮೇಳದಲ್ಲಿ ವಿವಿಧ ಕ್ಷಮತೆಯ ಗಾಡಿಗಳು, ಯಾಂತ್ರೀಕೃತ ಗಾಡಿಗಳು, ಮೋಟೊ ಕಾರ್ಟ್ ಗಳು ಕೃಷಿಕರ ಚಿತ್ತವನ್ನು ಗೆದ್ದುವು. ಮಳೆಗಾಲದಲ್ಲಿ ಅಡಿಕೆ ಕೊಳೆ ರೋಗಕ್ಕೆ ಬೋರ್ಡೋ ಸಿಂಪಡಿಸಲು ಯಾಂತ್ರೀಕೃತ ಸಿಂಪಡಣೆಗಳ ಪ್ರವೇಶವಾಯಿತು. ಪವರ್ ಸ್ಪ್ರೇಯರ್ಗಳ ಕ್ಷಮತೆಗಳು ಕೃಷಿಕ ಸ್ವೀಕೃತಿ ಪಡೆಯಿತು. ಒಂದು ಪವರ್ ಸ್ಪ್ರೇಯರಿನಿಂದ ನಾಲ್ಕು ಮಂದಿ ಏಕಕಾಲದಲ್ಲಿ ಸಿಂಪಡಣೆ ಮಾಡಬಹುದಾದ ವ್ಯವಸ್ಥೆಗಳು ಕೃಷಿ ಸಂಕಟಕ್ಕೆ ಚಿಕ್ಕ ಪರಿಹಾರವಾಗಿ ಒದಗಿ ಬಂದುವು.
           ಕಳೆದೆರಡು ವರುಷಗಳಿಂದ ತೋಟಗಳಲ್ಲಿ ಮಹತ್ತಾದ ಬದಲಾವಣೆ ಕಾಣುತ್ತೇವೆ. ಸಹಾಯಕರು ಕೆಲಸಕ್ಕೆ ಬಾರದಿದ್ದಾಗ ಅಧೀರರಾಗದೆ ಯಜಮಾನನೇ ಕೇರ್ಪು, ಏಣಿಯನ್ನು ಬಳಸಿ ಮರವೇರಿ ಪವರ್ ಸ್ಪ್ರೇಯರ್ನಿಂದ ಬೋರ್ಡೋ  ಸಿಂಪಡಿಸುವುದನ್ನು ನೋಡುತ್ತೇವೆ. ಈ ರೀತಿಯ ಧೈರ್ಯ, ಸ್ಥೈರ್ಯ ಕೊಟ್ಟಿರುವುದು ಯಂತ್ರ ಮೇಳಗಳೆಂದು ಹೇಳಲು ಖುಷಿಯಾಗುತ್ತದೆ,' ಎನ್ನುತ್ತಾರೆ ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ.
              ಯಂತ್ರಾಸಕ್ತ ಕೃಷಿಕರು ಬೇರೆ ಬೇರೆ ದೇಶಗಳಿಗೆ ಪ್ರವಾಸ ಹೋಗುವಾಗ ಅಲ್ಲಿನ ಯಾಂತ್ರೀಕರಣವನ್ನು ನೋಡುವ ಮನಃಸ್ಥಿತಿ ರೂಪಿತವಾಗಿದೆ. ಇಸ್ರೇಲ್, ಚೀನಾ, ಫಿಲಿಪೈನ್ಸ್ ದೇಶಗಳ ಯಂತ್ರಗಳನ್ನು ಅಭ್ಯಸಿಸಿ, ಅವು ನಮ್ಮ ನೆಲಕ್ಕೆ ಹೇಗೆ ಹೊಂದಬಹುದೆನ್ನುವ ಪರೀಕ್ಷೆಗಳು ನಡೆಯುತ್ತಿವೆ. ಹೊರ ದೇಶಗಳ ಮೋಟೋಕಾರ್ಟ್ ಗಳು ವಿವಿಧ ವಿನ್ಯಾಸಗಳಲ್ಲಿ ನಮ್ಮೂರ ತೋಟ ಹೊಕ್ಕಿವೆ. ಅಲ್ಲಿನ ವಿನ್ಯಾಸವನ್ನು ಅಧ್ಯಯನ ಮಾಡಿದ ತಂತ್ರಜ್ಞರು ತಂತಮ್ಮ ವರ್ಕ್ ಶಾಪಿನಲ್ಲಿ ವಿವಿಧ ಸಾಗಾಟ ಯಂತ್ರಗಳನ್ನು ರೂಪಿಸುತ್ತಿರುವುದು ದೊಡ್ಡ ಹೆಜ್ಜೆ.
            ದೆಹಲಿ, ಪೂನಾ, ಬೆಂಗಳೂರು.. ಮೊದಲಾದೆಡೆ ನಡೆಯುವ ಕಿಸಾನ್ ಮೇಳ, ಯಂತ್ರಮೇಳಗಳತ್ತ ಆಸಕ್ತರಾಗಿ ಯಂತ್ರೋಪಕರಣ, ಕೃಷಿ ಅಭಿವೃದ್ಧಿ, ಬದಲಾವಣೆಗಳನ್ನು ನೋಡುವ ಅಭ್ಯಾಸ ಬಹುತೇಕರಲ್ಲಿ ರೂಢಿಯಾಗಿದೆ. ಕೃಷಿಕ ಸಂಕಟಗಳನ್ನು ಪರಸ್ಪರ ಹಂಚಿಕೊಂಡು, ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವ ರೈತಜಾಣ್ಮೆಗಳು ಅಪ್ಡೇಟ್ ಆಗುತ್ತಿವೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಆವಿಷ್ಕರಿಸಿದ ಯಂತ್ರಗಳ ಪ್ರದರ್ಶನಗಳಿಗೆ ಮೇಳದಲ್ಲಿ ಅನುವು ಮಾಡಿದೆ.
ಈಗ ಮೂರನೇ ಯಂತ್ರಮೇಳ ಸಂಪನ್ನವಾಗಿದೆ.  ಕಳೆದೆರಡು ಮೇಳಗಳು ಹಬ್ಬಿಸಿದ ಯಂತ್ರಗಳ ಅರಿವು ಮೂರನೇ ಮೇಳದಲ್ಲಿ ಮಿಳಿತವಾಗಿ, ಕೃಷಿ ಸಂಕಟಗಳ ಪರಿಹಾರಕ್ಕೆ ಹೊಸ ಹಾದಿ ಕಂಡುಕೊಳ್ಳಲು ಸಹಕಾರಿಯಾಯಿತು.

 

Monday, January 26, 2015

ಕೃಷಿ ಯಂತ್ರ ಮೇಳ ಸಮಾರೋಪ ; ’ವಾರಣಾಸಿ ಸುಬ್ರಾಯ ಭಟ್ ಪ್ರಶಸ್ತಿ’ ಪ್ರದಾನ                "ಕೃಷಿ ಕ್ಷೇತ್ರ ಇನ್ನಷ್ಟು ಆಧುನೀಕರಣವಾಗಬೇಕು, ಯಂತ್ರಗಳ ಬಳಕೆ ಹೆಚ್ಚಾಗಬೇಕು. ಯುವಕರು  ಕೃಷಿ ಕ್ಷೇತ್ರದತ್ತ ಆಗಮಿಸುವಂತಾಗಬೇಕು ಇದು  ಕ್ಯಾಂಪ್ಕೋ ಉದ್ದೇಶ.  ಈ ಹಿನ್ನೆಲೆಯಲ್ಲಿ  ಕೃಷಿಯಂತ್ರ ಮೇಳ ಆಯೋಜನೆಯಾಗಿದೆ. ಈಗ ಯಂತ್ರಮೇಳ ಯಶಸ್ವಿಯಾಗಿದೆ" ಎಂದು  ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಹೇಳಿದರು.
ಅವರು ಸೋಮವಾರ ಕ್ಯಾಂಪ್ಕೋ ವತಿಯಿಂದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ವಿವೇಕಾನಂದ ಪಾಲಿಟೆಕ್ನಿಕ್ ಸಹಯೋಗದೊಂದಿಗೆ ಮೂರನೇ ಕೃಷಿಯಂತ್ರ ಮೇಳದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
                   ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕ ರಾಧಾಕೃಷ್ಣ ಭಕ್ತ ಯಂತ್ರಮೇಳದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.ವೇದಿಕೆಯಲ್ಲಿ  ಕ್ಯಾಂಪ್ಕೋ ಉಪಾದ್ಯಕ್ಷ ಸತೀಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್, ಎಆರ್ಡಿಎಫ್ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಕೇಶವ ಭಟ್ ಉಪಸ್ಥಿತರಿದ್ದರು.
               ವಿವೇಕಾನಂದ ಪಾಲಿಟೆಕ್ನಿಕ್ ಅಧ್ಯಕ್ಷ ಎವಿ ನಾರಾಯಣ ಸ್ವಾಗತಿಸಿ, ಕ್ಯಾಂಪ್ಕೋ ನಿರ್ದೇಶಕ ಚಣಿಲ ತಿಮ್ಮಪ್ಪ ಶೆಟ್ಟಿ ವಂದಿಸಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಿಬಂದಿ  ಹರಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ಯಂತ್ರ ಸಂಶೋಧಿಸಿದ ವಿದ್ಯಾರ್ಥಿಗಳ ಯಂತ್ರಗಳಿಗೆ ವಾರಣಾಸಿ ಸುಬ್ರಾಯ ಭಟ್ ಬಹುಮಾನ ನೀಡಿ ಗೌರವಿಸಲಾಯಿತು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಸಂಶೋಧಿಸಿದ ’ಅಡಿಕೆ ಕೀಳುವ ಹಾಗೂ ಔಷಧಿ ಸಿಂಪಡಿಸುವ ಯಂತ್”ಕ್ಕೆ ಪ್ರಥಮ ಬಹುಮಾನ ಐವತ್ತು ಸಾವಿರ ರೂಪಾಯಿಯೊಂದಿಗೆ ನೀಡಲಾಯಿತು. ಎಸ್ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು  ಸಂಶೋಧಿಸಿದ ’ಅಡಿಕೆ ತೆಗೆಯುವ ಯಂತ್”ಕ್ಕೆ ದ್ವಿತೀಯ ಬಹುಮಾನವನ್ನು  25 ಸಾವಿರ ರೂಪಾಯಿಯೊಂದಿಗೆ ನೀಡಲಾಯಿತು. ವಿವೇಕಾನಂದ ಶಾಲೆಯ ಪುಟಾಣಿ ವಿದ್ಯಾರ್ಥಿಗಳ ಸಂಶೋಧನೆಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.
                ಇದೇ ವೇಳೆ ಯಂತ್ರ ಸಂಶೋಧಿಸಿದ ಕೃಷಿಕರನ್ನು  ಗೌರವಿಸಲಾಯಿತು. ರೋಬೋಟ್ ತಯಾರಿಸಿದ ಗಣೇಶ್ ಶೆಟ್ಟಿ, ಸ್ಪ್ರೇಯರ್ ತಯಾರಿಸಿದ ಸುಬ್ರಹ್ಮಣ್ಯ ಹೆಗ್ಡೆ, ಕ್ಲೈಂಬರ್ ತಯಾರಿಸಿದ  ನಿತಿನ್ ಹೇರಳೆ, ಡೈನೆಮೋ ತಯಾರಿಸಿದ ಗಣೇಶ್ ಆಚಾರ್ಯ, ವಾಟರ್ ಲಿಫ್ಟರ್ ತಯಾರಿಸಿದ ಮೋಹನ್ ರಾಜ್, ಅಡಿಕೆ ಸುಲಿಯುವ ಯಂತ್ರ ತಯಾರಿಸಿದ ಜೋಯ್ ಅಗಸ್ಟಿನ್ ಅವರನ್ನು  ಗೌರವಿಸಲಾಯಿತು.

ವರದಿ ಕ್ರಪೆ : ಹರ್ಶಿತಾ ಎಂ.ಪಿ.

ತಂತ್ರ 'ಜ್ಞಾನ'ಕ್ಕೆ ಬಾಗಿನ(ಉದಯವಾಣಿ/ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಿತ/೨೬-೧-೨೦೧೫)

            ಕೃಷಿಕರ ಮಕ್ಕಳು ಕೃಷಿಕರಾಗುವುದಿಲ್ಲ!
ಹೀಗೊಂದು ಮಾತು ಬಹುತೇಕ ಸಂದರ್ಭಗಳಲ್ಲಿ ಕೇಳುತ್ತೇವೆ. ಅವಕಾಶ ಬಂದಾಗ ಮಾತನಾಡಲೂ ಹಿಂಜರಿಯುವುದಿಲ್ಲ. ವೇದಿಕೆಯ ಮಾತುಗಳು ಯಾವಾಗಲೂ ವಾಸ್ತವಕ್ಕಿಂತ ದೂರ, ಬಹುದೂರ. ಕೆಲವೊಮ್ಮೆ ಮಾತನಾಡುವ ವ್ಯಕ್ತಿಗೆ ಕೃಷಿಯ ಸ್ಪರ್ಶವೇ ಇರದಿರುವುದೂ ಇದೆ.
           ಕೃಷಿಕನ ಮಗ ಯಾಕೆ ಕೃಷಿಕನಾಗುವುದಿಲ್ಲ? ಒಂದು ವಾಕ್ಯದ ಉತ್ತರದಲ್ಲಿ ತೃಪ್ತಿಪಡಬಹುದೇನೋ.  ಆದರೆ ಉತ್ತರದ ಆಳಕ್ಕೆ ಇಳಿದಂತೆ ಭವಿಷ್ಯವನ್ನು ಕತ್ತಲು ಮಾಡುವ ಎಲ್ಲಾ ಉಪಾಧಿಗಳು ನಂನಮ್ಮ ಜಗಲಿಯಲ್ಲೇ ಬಿದ್ದಿರುವುದು ಗೋಚರವಾಗುತ್ತದೆ.
         ಕಾಲೇಜಿನ ವಿದ್ಯಾರ್ಥಿ ತಂಡವೊಂದರ ಜತೆ ಕೃಷಿಕರೋರ್ವರಲ್ಲಿಗೆ ಭೇಟಿ ನೀಡಿದ್ದೆ. ಅವರು ಬೆವರಿನಿಂದಲೇ ತೋಟವನ್ನು ತೋಟವನ್ನು ಎಬ್ಬಿಸಿದ್ದರು. ವಿದ್ಯಾರ್ಥಿಗಳೆಲ್ಲಾ ಕೃಷಿ ಹಿನ್ನೆಲೆಯವರು.  ತಂಡದಲ್ಲಿದ್ದ ಓರ್ವ ವಿದ್ಯಾರ್ಥಿನಿಯ ಮಾತು ಕೇಳಿ ದಂಗಾದೆ. "ನಮ್ಮ ತೋಟ ಚೆನ್ನಾಗಿದೆ. ಅಪ್ಪಾಮ್ಮ ದುಡಿಯುತ್ತಾರೆ. ನನ್ನನ್ನು ಮಾತ್ರ ತೋಟಕ್ಕಿಳಿಯಲು ಬಿಡುವುದಿಲ್ಲ. ನನಗೆ ತೋಟದಲ್ಲಿ ಕೆಲಸ ಮಾಡುವ ಉಮೇದು ಇದೆ. ದಿನಾ ಓದಲು ಒತ್ತಾಯಿಸುತ್ತಾರೆ. ತೊಂಭತ್ತೈದಕ್ಕೂ ಮಿಂಕಿ ಅಂಕ ಪಡೆಯಬೇಕೆನ್ನುವುದು ಅವರ ಆಶೆ."
           ಹೌದಲ್ಲಾ... ಕೃಷಿ ಜ್ಞಾನವನ್ನು ಅಂಕಗಳು ಕಸಿದುಕೊಂಡಿವೆ. ತೊಂಭತ್ತೊಂಭತ್ತು ಅಂಕ ಸಿಕ್ಕರೂ ತೃಪ್ತರಾಗದ ಅಮ್ಮ. ತೋಟಕ್ಕೆ ಮಗಳನ್ನೋ, ಮಗನನ್ನೋ ಇಳಿಯಗೊಡದ ಅಪ್ಪ. ಕೃಷಿ ಕಲಿತು ಆಗಬೇಕಾದುದೇನು ಎನ್ನುವ ಮನೋನಿರ್ಧಾಾರ. ಮಕ್ಕಳ ಎದುರು ಕೃಷಿಯನ್ನು ಎಷ್ಟೊಂದು ಹಗುರದಿಂದ ಕಾಣುತ್ತೇವೆ. ಕೃಷಿಯಲ್ಲಿ ಗೌರವವಿಲ್ಲವೆಂದು ಸಮರ್ಥಿಸುತ್ತೇವೆ. ತನ್ನ ಬದುಕನ್ನು ರೂಪಿಸಿದ ಅಡಿಕೆ ಮರಗಳನ್ನು ಶತ್ರುಸ್ಥಾನದಲ್ಲಿ ನಿಲ್ಲಿಸಿ ನಡೆಯುವ ಸಂಭಾಷಣೆಗೆ ಮಕ್ಕಳು ಕಿವಿಯಾಗುತ್ತಾರೆ. ಬೆಳೆಯುವ ಮನಸ್ಸುಗಳನ್ನು ಪುಸ್ತಕದೊಳಗೆ ಮುರುಟಿಸುವ ಹಲವು ಐಡಿಯಾಗಳನ್ನು ಅಭಿವೃದ್ದಿ, ಪಕ್ವತೆ ಎಂದು ತಿಳಿದು ಬೀಗುತ್ತೇವೆ.
           ನಗರದ ಬದುಕಿನಿಂದ ಬೇಸತ್ತು ಮರಳಿ ಮಣ್ಣನ್ನು ಅಪ್ಪಿಕೊಂಡು ಕೃಷಿಕರಾದ ಒಬ್ಬರನ್ನು ಮಾತನಾಡಿಸಿದ್ದೆ. "ನಮ್ಮ ಮಕ್ಕಳನ್ನು ನಾವು ನಗರಕ್ಕೆ ಕಳುಹಿಸುವುದಲ್ಲ. ಸಿಟಿಯೊಳಗೆ ಬಲವಂತದಿಂದ ತಳ್ಳಿಬಿಡುತ್ತೇವೆ," ಎಂದ ಮಾತು ನೆನಪಾಗುತ್ತದೆ. ಮಣ್ಣನ್ನು ಪ್ರೀತಿಸುವ ಶಿಕ್ಷಣದಿಂದ ದೂರವಾದ ಮನಸ್ಸುಗಳಿಗೆ ಯಾವಾಗಲೂ ದೂರದ ಬೆಟ್ಟ ನುಣ್ಣಗೆ. .
ಮಕ್ಕಳನ್ನು ಮೆಡಿಕಲ್ ಓದಿಸುತ್ತೇವೆ. ಇಂಜಿನಿಯರಿಂಗ್ ಪದವಿ ಕೊಡಿಸುತ್ತೇವೆ. ಅವರ ಉತ್ಕರ್ಷವನ್ನು ಕಂಡು ಹಿಗ್ಗುತ್ತೇವೆ. ಸಹಜ ಬಿಡಿ. ಕಲಿಕೆಯ ಬಳಿಕ ಮಕ್ಕಳನ್ನು ದುಡಿಸಿಕೊಳ್ಳುವ ಪರಿ ನಿಜಕ್ಕೂ ಆತಂಕ. ಮೆಡಿಕಲ್ ಕಲಿತವ ಊರಲ್ಲಿರಬಾರದು, ಇಂಜಿನಿಯರಿಂಗ್ ಕಲಿತವ ಮುಂಬೈ, ದುಬೈ.. ಸೇರಲೇಬೇಕೆಂಬ ಒತ್ತಡ.
             ನಮ್ಮ ಮಕ್ಕಳಾದರೇನು? ಅವರಿಗೂ ಮನಸ್ಸಿದೆ. ಭವಿಷ್ಯ ಬದುಕಿನತ್ತ ದೂರದೃಷ್ಟಿಯಿದೆ. ತಾನು ಏನಾಗಬೇಕೆಂಬ ಯೋಜನೆ, ಯೋಚನೆಗಳಿವೆ. ನಾವು ಕೈತಾಂಗು ಆಗುವ ಬದಲು ನಮ್ಮ ಆಸಕ್ತಿಗಳನ್ನು ಮಕ್ಕಳಲ್ಲಿ ಕಾಣಲು ಹಪಾಹಪಿಸುತ್ತೇವೆ. ಹಾಗಾಗಿ ನೋಡಿ - ಮೆಡಿಕಲ್, ಇಂಜಿನಿಯರಿಂಗ್ ಪದವಿ ಬಳಿಕ ಎಷ್ಟೋ ಮೊಗ್ಗುಗಳು ಅರಳದೆ, ಅಲ್ಲಿಲ್ಲಿ ನಾಲ್ಕಂಕೆ ಸಂಬಳದ ಉದ್ಯೋಗಗಳಲ್ಲಿ ತೃಪ್ತಿ ಪಡುವ  ಉದಾಹರಣೆಗಳು (ತೋಟ, ಗದ್ದೆ ಎಲ್ಲವೂ ಇದ್ದು) ಎಷ್ಟು ಬೇಕು? ಎಲ್ಲರನ್ನೂ ಈ ಸಾಲಿಗೆ ಸೇರಿಸುವಂತಿಲ್ಲ. ಉತ್ತಮ ಸಾಧನೆ ತೋರಿ ಎತ್ತರದ ಬದುಕನ್ನು ಕಲ್ಪಿಸಿಕೊಂಡವರು ಯಶಸ್ಸಾಗುತ್ತಾರೆ.
            ಭವಿಷ್ಯದ ಬದುಕನ್ನು ತೋರುವ ವಾತಾವರಣ ಮನೆಯಲ್ಲಿ ಕ್ಷೀಣವಾಗುತ್ತದೆ. ಕಾಲೇಜುಗಳಲ್ಲಂತೂ ಅಂತಹ ವಾತಾವರಣವನ್ನು ಕಲ್ಪಿಸಲೂ ಅಸಾಧ್ಯ. ಬದಲಾದ ಶೈಕ್ಷಣಿಕ ಪದ್ಧತಿಯೊಳಗೆ ಮನಸ್ಸು ಲೀನವಾಗಿರುತ್ತದೆ.  ಅವ್ಯಕ್ತ ಪ್ರತಿಭೆಯ ಅನಾವರಣಕ್ಕೆ ಸಂದರ್ಭವೇ ಇರುವುದಿಲ್ಲ. ಪ್ರಾಜೆಕ್ಟ್, ಪ್ರಬಂಧಗಳಿಗೆ ಸುಪ್ತ ಜ್ಞಾನ ಮೀಸಲಾಗುತ್ತದೆ.
             ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಹದಿನೇಳಕ್ಕೂ ಮಿಕ್ಕಿ ತಾಂತ್ರಿಕ ಕಾಲೇಜುಗಳಿವೆ. ಸುಸಜ್ಜಿತ ಕಾರ್ಯಾಾಗಾರಗಳಿವೆ. ಆಧುನಿಕ ಕಲಿಕಾ ವ್ಯವಸ್ಥೆಗಳಿವೆ. ವರುಷಕ್ಕೆ ಸಾವಿರಕ್ಕೂ ಮಿಕ್ಕಿ ಮೆಕಾನಿಕಲ್ ವಿದ್ಯಾರ್ಥಿಗಳು ಪದವಿ ಪತ್ರ ಪಡೆದು ತಂತ್ರಜ್ಞರಾಗುತ್ತಾರೆ. ಇವರಿಗೆ ಮಾರ್ಗದರ್ಶನ ನೀಡಲು ನೂರಕ್ಕೂ ಮಿಕ್ಕಿ ಅಧ್ಯಾಪಕರಿದ್ದಾರೆ.
           ಅಂತಿಮ ವರುಷದ ತಾಂತ್ರಿಕ ಕಲಿಕೆಯಲ್ಲಿ 'ಪ್ರಾಜೆಕ್ಟ್' ತಯಾರಿ ಕಡ್ಡಾಯ. ಸೀಯಾಳ ತೂತು ಮಾಡುವ ಸಲಕರಣೆಯಿಂದ ತೊಡಗಿ ದೊಡ್ಡ ಗಾತ್ರದ ಯಂತ್ರಗಳ ತನಕ ವಿವಿಧ ಆವಿಷ್ಕಾರಗಳು ನಾಲ್ಕು ಗೋಡೆಗಳ ಮಧ್ಯೆ ಕಾಗದದಲ್ಲಿ ರೂಪುಗೊಳ್ಳುತ್ತದೆ. ವಿನ್ಯಾಸವೂ ಸಿದ್ಧವಾಗುತ್ತದೆ. ಆಯ್ದ ಕೆಲವು ಮಾಧ್ಯಮಗಳಲ್ಲಿ ಮಿಂಚಿ ಮರೆಯಾಗುತ್ತವೆ. ಇಂತಹ ಆವಿಷ್ಕಾರಗಳಿಗೆ ಮಾನ ಕೊಡಲು ಮಂಗಳೂರಿನ ಪ್ರಸಿದ್ಧ ಅಡಿಕೆ ಸಹಕಾರಿ ಸಂಸ್ಥೆ 'ಕ್ಯಾಂಪ್ಕೋ' ಮುಂದಾಗಿದೆ. 
             2012ರಲ್ಲಿ ಕ್ಯಾಂಪ್ಕೋ ಎರಡನೇಯ ಯಂತ್ರಮೇಳ ಆಯೋಜಿಸಿತ್ತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಅದರಲ್ಲೂ ಕೃಷಿ ಹಿನ್ನೆಲೆಯವರು ಆವಿಷ್ಕರಿಸಿದ ಯಂತ್ರ-ತಂತ್ರಗಳಿಗೆ ಮೇಳದಲ್ಲಿ ಮಳಿಗೆ ನೀಡಿ ಸಾರ್ವಜನಿಕರ ಮುಂದೆ ತೆರೆದಿಟ್ಟಿತ್ತು. ಯಂತ್ರದ ಕ್ಷಮತೆ, ಉಪಯೋಗವನ್ನು ವಿದ್ಯಾರ್ಥಿಗಳೇ ಕೃಷಿಕರಿಗೆ ಮನದಟ್ಟು ಮಾಡಿಕೊಟ್ಟಿದ್ದರು. ಈ ಪ್ರಾಜೆಕ್ಟ್ಗಳೆಲ್ಲಾ ಅನುಷ್ಠಾನಗೊಂಡರೆ ಕೃಷಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ. ಅವೆಲ್ಲಾ ಹೆಚ್ಚು ಬಂಡವಾಳ ಬೇಡುವಂತಹುಗಳು. ಸಮಾಜ, ಸಂಸ್ಥೆಗಳು ಆರ್ಥಿಕ ನೆರವನ್ನು ನೀಡಿ ಆವಿಷ್ಕಾರಗಳನ್ನು ಅಭಿವೃದ್ಧಿ ಪಡಿಸುವಲ್ಲಿ ನೆರವಾಗಬಾರದೇಕೆ?
ಜನವರಿ 24 ರಿಂದ 26ರ ತನಕ ಪುತ್ತೂರಿನ (ದ.ಕ.) ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಮೂರನೇ ಕೃಷಿ ಯಂತ್ರ ಮೇಳ ಸಂಪನ್ನವಾಗಲಿದೆ. ನಲವತ್ತು ಮಳಿಗೆಗಳಲ್ಲಿ ತಾಂತ್ರಿಕ ವಿದ್ಯಾರ್ಥಿಗಳ ಕೃಷಿ ಸಂಬಂದಿ ಆವಿಷ್ಕಾರಗಳ ಪ್ರದರ್ಶನ ಜರುಗಲಿದೆ. ಅನುಭವಿ ತೀರ್ಪುುಗಾರರು ನೀಡುವ ಉತ್ತಮ ಆವಿಷ್ಕಾರಕ್ಕೆ ಪ್ರಶಸ್ತಿ ನೀಡಲಾಗುತ್ತದೆ. ಕ್ಯಾಂಪ್ಕೋ ಸ್ಥಾಪಕ ಕೀರ್ತಿಶೇಷ ವಾರಣಾಶಿ ಸುಬ್ರಾಯ ಭಟ್ಟರ ನೆನಪಿನಲ್ಲಿ ನೀಡುವ ಪ್ರಶಸ್ತಿಯನ್ನು ಯಂತ್ರಮೇಳದ ವೇದಿಕೆಯಲ್ಲಿ ಪ್ರದಾನಿಸಲಾಗುವುದು.
            ರಾಜ್ಯದಲ್ಲಿ ಅಲ್ಲ, ದೇಶದಲ್ಲೇ ಇದೊಂದು ಹೊಸ ಪರಿಕ್ರಮ. ತಾಂತ್ರಿಕ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ನೀಡುವ, ಅವರನ್ನು ಹುರಿದುಂಬಿಸುವ ಯೋಜನೆಯನ್ನು ರೂಪಿಸಿದ ಸಂಘಟಕರ ಯೋಜನೆ ಶ್ಲಾಘ್ಯ.
ಕೃಷಿ ರಂಗದಲ್ಲಿ ಆದ, ಆಗುತ್ತಿರುವ ಬದಲಾವಣೆಗಳನ್ನು ಒಂದೇ ಸೂರಿನಡಿ ನೋಡುವ ಅವಕಾಶ. ಕೃಷಿಯಲ್ಲಿ ಯಾಂತ್ರೀಕರಣದ ಅನಿವಾರ್ಯತೆಯ ಕಾಲಘಟ್ಟದಲ್ಲಿ ನಮಗೆ ಬೇಕಾದ ಯಂತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಸೂಕ್ತ ಸಂದರ್ಭ. ಅದಕ್ಕಿಂತಲೂ ಮುಖ್ಯವಾಗಿ ಯಂತ್ರೋಪಕರಣ ಜ್ಞಾನವನ್ನು ಅಪ್ಡೇಟ್ ಮಾಡಿಕೊಳ್ಳಲು ಜಾಲತಾಣಗಳಿಗಿಂತ ಉತ್ತಮ ದಾರಿ.
 'ಕೃಷಿಕರ ಮಕ್ಕಳು ಕೃಷಿಕರಾಗುವುದಿಲ್ಲ' ಎಂದು ಆರಂಭದಲ್ಲಿ ಉಲ್ಲೇಖಿಸಿದ್ದೆ. ಕೃಷಿಗೆ ಗೌರವ ತರುವ,  ಕೃಷಿ ಕೆಲಸಗಳನ್ನು ಹಗುರ ಮಾಡುವ, ಬೆರಳ ತುದಿಯಲ್ಲಿರುವ ತಂತ್ರಜ್ಞಾನದ ಮಾಹಿತಿ ಮತ್ತು ಕೃಷಿಯಲ್ಲೂ ಭವಿಷ್ಯವಿದೆ ಎಂದು ಮನದಟ್ಟು ಮಾಡಿಕೊಟ್ಟರೆ ಬಹುತೇಕ ಮಕ್ಕಳು ರಾಜಧಾನಿಯ ಬಸ್ಸನ್ನು ಏರಲು ಯೋಚಿಸುತ್ತಾರೆ.

ಕೃಷಿ ಯಂತ್ರ ಮೇಳ - 'ಕಾಡುಪ್ರಾಣಿ ನಿಯಂತ್ರಣ' - ಗೋಷ್ಠಿ 3 - 26-1-2015

                                      ಹೊನ್ನಾವರದ ಪಿ.ಎಸ್.ಭಟ್ ಉಪ್ಪೋಣಿಯವರಿಂದ ಸ್ವಾನುಭವ

                 "ಕೃಷಿ ಉತ್ಪನ್ನಗಳನ್ನು ನಾಶ ಮಾಡುವ ಹಕ್ಕಿ-ಪ್ರಾಣಿಗಳ ಗಡಿಪಾರಿಗೆ ಆಯಾಯ ಪ್ರಾಣಿಗಳ ಆರ್ತನಾದ ಬಳಸಿ, ಅವುಗಳನ್ನು ಓಡಿಸಿದ-ನಿಯಂತ್ರಿಸಿದ ಯತ್ನ ಬಹುತೇಕ ಯಶ ಕಾಣುತ್ತಿದೆ,"  ಬೆಂಗಳೂರಿನ ಸಿ.ಇ.ಓ., ಗುರು ಇಕೋಸೈಯನ್ಸಸ್  ಸಂಸ್ಥೆಯ ಮುಖ್ಯಸ್ಥ ಮಹೇಶ್ ಅಯ್ಯರ್ ಹೇಳಿದರು. ಅವರು ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಕೃಷಿ ಯಂತ್ರಮೇಳದಲ್ಲಿ 'ಕಾಡು ಪ್ರಾಣಿಗಳ ನಿಯಂತ್ರಣ' ವಿಚಾರಗೋಷ್ಠಿಯಲ್ಲಿ ತಮ್ಮ ಪ್ರಯೋಗಗಳನ್ನು ವಿವರಿಸಿದರು. ಒಂಭತ್ತು ವಿವಿಧ ಪ್ರಾಣಿಗಳ ಶಬ್ದಗಳನ್ನು ತಾಂತ್ರಿಕವಾಗಿ ಅಭಿವೃದ್ಧಿಗೊಳಿಸಿದ ಮಹೇಶ್ ,ಆಯಾ ಪ್ರದೇಶಗಳ ವಿದ್ಯಮಾನ, ವಿಶ್ಲೇಷಣೆ ಮಾಡಿಕೊಂಡು, ಧ್ವನಿಮಾತ್ರದಿಂದ ಕಪಿಬಾಧೆಯನ್ನು ತಡೆಯಬಹುದು.' ಎಂದರು.
                ಶಿವಮೊಗ್ಗದ ಮಿಲ್ಕ್-ಸಿ ಟೆಕ್ನೋಲಜಿಸ್, ಮೇಕರ್ಸ್ ಆಫ್ ಆಗ್ರೋ ಬರ್ಗ್ ಲರ್ ಸೈರನ್ಸ್ ಸಂಸ್ಥೆಯ ಭರತ್ ಕುಮಾರ್ ಶೆಟ್ಟಿ, ಪ್ರಾಣಿ, ಪಕ್ಷಿಗಳ ಕೂಗನ್ನು ತಂತ್ರಜ್ಞಾನಕ್ಕೆ ಅಳವಡಿಸಿದ ಸಂಶೋಧಕ. ತೋಟಗಳಲ್ಲಿ ಧ್ವನಿಪೆಟ್ಟಿಗೆಗಳನ್ನು ಅಳವಡಿಸಿ ವಿವಿಧ ಪ್ರಾಣಿಗಳ ಕೂಗನ್ನು ಅವುಗಳಲ್ಲಿ ಮಾರ್ದನಿಸುವ ವ್ಯವಸ್ಥೆಯು ಕೃಷಿಕ ಸ್ವೀಕೃತಿ ಪಡೆದಿದೆ. ಕೃಷಿಗೆ ರಾತ್ರಿ ಹೊತ್ತಲ್ಲಿ ಬಾಧೆ ಕೊಡುವ ಪ್ರಾಣಿಗಳು ಇಂತಹ ವ್ಯವಸ್ಥೆಯಿಂದ ಪೂರ್ತಿ ನಿಯಂತ್ರಣವಾಗಿದೆ.
                 ಮಂಗಗಳು ಬಹಳ ಸೂಕ್ಷ್ಮ ಪ್ರಾಣಿ. ಬರಬಹುದಾದಂತಹ ಆಪತ್ತನ್ನು ಮೊದಲೇ ಗ್ರಹಿಸುತ್ತವೆ. ಆನೆ, ಕಾಡುಹಂದಿಗಳು ಮನುಷ್ಯರಿಂದ ಬರಬಹುದಾದ ಆಪತ್ತನ್ನು ಮೊದಲೇ ಸೂಕ್ಷ್ಮಗ್ರಾಹಿಯಾಗಿ ಅರಿಯುತ್ತದೆ, ಎನ್ನುವ ಭರತ್, ಭವಿಷ್ಯದಲ್ಲಿ 'ಮಂಕಿ ಫಿರಂಗಿ' ಮತ್ತು 'ಹಾರಾಡುವ ಚಕ್ರ'ವನ್ನು ಅನುಶೋಧಿಸುವ ಸುಳಿವು ನೀಡಿದರು.
                 ಉಪ್ಪೋಣಿಯ ಕೃಷಿಕ ಪಿ.ಎಸ್.ಭಟ್ ಧ್ವನಿಗಳನ್ನು ಬಳಸಿ ಕಾಡುಪ್ರಾಣಿಗಳನ್ನು ನಿಯಂತ್ರಿಸಿದ ಸ್ವಾನುಭವ ಹಂಚಿಕೊಳ್ಳುತ್ತಾ, "ನ್ನಾವರದ ಒಂದು ತಾಲೂಕಿನಲ್ಲಿ ವರುಷಕ್ಕೆ ಒಂದೂವರೆ ಕೋಟಿ ರೂಪಾಯಿಗೂ ಮಿಕ್ಕಿ ಕೃಷಿ ಉತ್ಪನ್ನಗಳು ಕಾಡುಪ್ರಾಣಿಗಳಿಂದ ನಷ್ಟವಾಗುತ್ತಿದೆ. ಮೂವತ್ತು ಸಾವಿರ ತೆಂಗಿನಕಾಯಿಗಳು ಹಿಡಿಯುವ ನನ್ನ ತೋಟದಲ್ಲಿ ಮಂಗಗಳ ಬಾಧೆಯಿಂದಾಗಿ ಐದು ಸಾವಿರ ಕಾಯಿಗಳು ಸಿಗುವುದೂ ತ್ರಾಸವಾಗಿತ್ತು. ತೋಟಗಳಲ್ಲಿ ಧ್ವನಿಪೆಟ್ಟಿಗೆಗಳನ್ನು ಸ್ಥಾಪಿಸಿ, ಅವುಗಳ ಮೂಲಕ ವಿವಿಧ ಧ್ವನಿಗಳನ್ನು ಪ್ರಸರಿಸುವುದರಿಂದ ಮುಖ್ಯವಾಗಿ ಮಂಗಗಳ ಕಾಟ ನಿಯಂತ್ರಣವಾಗಿದೆ. ಈ ವಿಚಾರದಲ್ಲಿ ಕೃಷಿಕನೇ ಸಂಶೋಧಕನಾಗಬೇಕು," ಎಂದರು.
                  ಕಾಡುಪ್ರಾಣಿಗಳು ಆಹಾರವನ್ನು ಹುಡುಕಿ ನಾಡಿಗೆ ಬರುತ್ತವೆ. ಅವುಗಳಿಗೆ ಬೇಕಾದ ಅತ್ತಿ, ಆಲ, ಮತ್ತಿ, ಮುರುಗಲು.. ಮೊದಲಾದ ಹಣ್ಣು, ಕಾಯಿಗಳ ಮರಗಳು ಕಾಡಿನಲ್ಲಿ ಅಜ್ಞಾತವಾಗಿದೆ. ನಮ್ಮ ಅರಣ್ಯ ಇಲಾಖೆಗಳಿಗೆ ಇಂತಹ ಸಮಸ್ಯೆಗಳು ಗೋಚರವಾಗುವುದಿಲ್ಲ. ಕಾಡುಪ್ರಾಣಿ, ಪಕ್ಷಿಗಳಿಗೆ ಆಹಾರವಾಗಬಹುದಾದ ಕಾಡು ಗಿಡಗಳನ್ನು ಬೆಳೆಸಿ, ಆರೈಕೆ ಮಾಡಿ ಬೆಳೆಸುವ ಯೋಜನೆಗಳು ಭವಿಷ್ಯದಲ್ಲಿ ಸಮಸ್ಯೆಯನ್ನು ಹಗುರ ಮಾಡಬಲ್ಲವು -  ಎನ್ನುವ ಅಭಿಪ್ರಾಯ ಪಿ.ಎಸ್. ಭಟ್ಟರದು.
                    ಬೆಂಗಳೂರು ಪೆಸ್ಟ್ ಕಂಟ್ರೋಲ್ ಸಂಸ್ಥೆಯ ಡಾ.ಪ್ರಭಾಕರ್ ತಮ್ಮ ಸಸ್ಯಾಧಾರಿತ 'ನೀಲ್ಬೋ' ದ್ರಾವಣ ಸಿಂಪಡಣೆಯಿಂದ ಕಾಡುಪ್ರಾಣಿಗಳ ನಿಯಂತ್ರಿಸುವ ವಿಧಾನ, ಗೋವಾದ ಅಡಿಕೆ ಕೃಷಿಕ ನೀಲೇಶ್ ಪ್ರಭು ವೆಲ್ಗಾಂವ್ಕರ್ ಕೃತಕವಾಗಿ ತಯಾರಿಸಿದ ವಿವಿಧ ತರಂಗಾಂತರಗಳ ಶಬ್ದಗಳ ಮೂಲಕ ಪ್ರಾಣಿ, ಪಕ್ಷಿಗಳ ಉಪಟಳಕ್ಕೆ ಪರಿಹಾರ ಕಂಡುಕೊಂಡ ಪ್ರಯೋಗವನ್ನು ವಿವರಿಸಿದರು.
                         ಪ್ರಸ್ತುತ ದಿನಗಳಲ್ಲಿ ಕೃಷಿಕರು ಕಾಡುಪ್ರಾಣಿಗಳ ಉಪಟಳವನ್ನು ಅನುಭವಿಸುತ್ತಿದ್ದಾರೆ. ಪರಿಹಾರ ಕಾಣದೆ ನಾಶನಷ್ಟವನ್ನು ಅನುಭವಿಸುತ್ತಿದ್ದಾರೆ.  ಇವುಗಳ ಪರಿಹಾರಕ್ಕೆ ಚಿಕ್ಕ ಎಳೆ ಸಿಗಬಹುದೆನ್ನುವ ನಿರೀಕ್ಷೆಯಿಂದ ಆಗಮಿಸಿದ ಕೃಷಿಕರಿಗೆ ವಿಚಾರಗೋಷ್ಠಿಯ ಮಾಹಿತಿ ಮತ್ತು ವಿವಿಧ ಪ್ರಾಣಿ-ಶಬ್ದಗಳ ಸ್ವರಗಳ ಪ್ರಾತ್ಯಕ್ಷಿಕೆಗಳು ಪ್ರಯೋಜನವಾದುವು. ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆಯವರು ಗೋಷ್ಠಿಯ ಸಮನ್ವಯಕಾರರಾಗಿದ್ದರು. ದೇಶಮಟ್ಟದಲ್ಲಿ ಆಗುತ್ತಿರುವ ಕಾಡುಪ್ರಾಣಿಗಳ ನಿಯಂತ್ರಣಗಳ ಯತ್ನಗಳು, ಅದರಲ್ಲಿ ಯಶಸ್ಸಾದ ಯಶೋಗಾಥೆಗಳನ್ನು ಸೂಕ್ಷ್ಮವಾಗಿ ವಿವರಿಸಿದರು. ಡಾ.ನಿರುಪಮಾ ಸ್ವಾಗತಿಸಿದರು. ಡಾ.ಕೆ.ಕೆ.ಮಹೇಶ್ ವಂದಿಸಿದರು.

ಮಂಗಗಳು ಯಾಕೆ ಸಾಕುಪ್ರಾಣಿಯಾಗಬಾರದು? -
ನಾಡಿಗೆ ಬಂದ ಕಾಡುಕೋಳಿಯನ್ನು ಕೊಂದರೆ ಅಪರಾಧ. ಸಾಕುಪ್ರಾಣಿಗಳಾದ ಕೋಳಿ, ಹಂದಿಯನ್ನು ಕೊಂದು ತಿನ್ನಬಹುದು. ಮಂಗನನ್ನು ಕೂಡ ಸಾಕು ಪ್ರಾಣಿ ಎಂದು ಪರಿಗಣಿಸಬೇಕು! ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಗಳನ್ನು ತಿನ್ನುವ ವರ್ಗಗಳನ್ನು ಕಾಣುತ್ತೇವೆ. ಅವುಗಳ ರಕ್ತ, ಮಾಂಸಗಳಲ್ಲಿರುವ ಪೌಷ್ಟಿಕತೆಯನ್ನು ವೈಜ್ಞಾನಿಕ ಅಧ್ಯಯನ ಮಾಡಿ, ಅವುಗಳ ಔಷಧೀಯ, ಆಹಾರ ಗುಣಗಳನ್ನು  ತಿಳಿಸುವ ಕೆಲಸಗಳನ್ನು ಸಂಶೋಧನಾ ಸಂಸ್ಥೆಗಳು ಮಾಡವು ಕಾಲ ಸನ್ನಿಹಿತವಾಗಿದೆ.
                                                                                                                     - ಪಿ.ಎಸ್.ಭಟ್ ಉಪ್ಪೋಣಿ

ಮಂಕಿ ಫಿರಂಗಿ-ಹಾರಾಡುವ ತಟ್ಟೆ
ತೋಟದ ವಿವಿದೆಡೆ ಕೋವಿಗಳನ್ನು ಸ್ಥಾಪಿಸಿ, ಅವುಗಳ ನಳಿಗೆಗಳಲ್ಲಿ ಗನ್ ಪೌಡರ್ ಇಟ್ಟು, ಅವುಗಳನ್ನು ನಿರ್ದಿಷ್ಟ ಸಮಯದಲ್ಲಿ ಸಿಡಿಯುವಂತೆ ಟೈಮರ್ ಅಳವಡಿಸಿದ ತಂತ್ರಜ್ಞಾನವು ಭವಿಷ್ಯದ ಯೋಜನೆ. ತೋಟದಲ್ಲಿ ಯಾಂತ್ರಿಕವಾಗಿ 'ಹಾರಾಡುವ ತಟ್ಟೆ'ಯೊಂದನ್ನು ವ್ಯವಸ್ಥೆ ಮಾಡಿಕೊಂಡು, ಅವುಗಳ ಮೂಲಕ ತೋಟಗಳ ಮರಗಳಲ್ಲಿ ಅವಿತ ಮಂಗಗಳನ್ನು ಕುಳಿತಲ್ಲೇ ಪತ್ತೆ ಮಾಡುವ ವ್ಯವಸ್ಥೆ - 'ಹಾರಾಡುವ ತಟ್ಟೆ'. ಇವೆರಡು ನಿಕಟ ಭವಿಷ್ಯದ ಯೋಜನೆಗಳು.
                                                                                                                          -     ಭರತ್ ಕುಮಾರ್ ಶೆಟ್ಟಿ.

'ರಾಷ್ಟ್ರೀಯ ಕಾಡು ಪ್ರಾಣಿ ನಿಯಂತ್ರಣ ಸಮಿತಿ' ಬೇಕು!
ದೇಶದಲ್ಲಿ ಕೋತಿಯಿಂದಾಗಿ ಗರಿಷ್ಠ ನಾಶ-ನಷ್ಟಗಳಾಗುವ ರಾಜ್ಯ ಹಿಮಾಚಲ ಪ್ರದೇಶ.  ಒಂದು ಅಂಕಿಅಂಶದ ಪ್ರಕಾರ ಪ್ರತಿವರುಷ ಎರಡು ಸಾವಿರ ಕೋಟಿ ರೂಪಾಯಿಗಳ ಬೆಳೆ ಅಲ್ಲಿ ನಾಶವಾಗುತ್ತಿದೆ. ಒಂದು ರಾಜ್ಯದಲ್ಲೇ ಇಷ್ಟಾಯಿತೆಂದರೆ ದೇಶಮಟ್ಟದ ಎಷ್ಟಾಗಬಹುದು? ನಮ್ಮ ವಿಮಾನಯಾನ ಸಚಿವಾಲಯ 'ರಾಷ್ಟ್ರೀಯ ಹಕ್ಕಿ ನಿಯಂತ್ರಣ ಸಮಿತಿ'ಯ ಒಂದು ಲೆಕ್ಕಾಚಾರದಂತೆ ವಿಮಾನಕ್ಕೆ ಢಿಕ್ಕಿಯಾಗಿ ಪ್ರತಿವರುಷ ನಮ್ಮಲ್ಲಿ 3,300 ಕೋಟಿ ರೂಪಾಯಿಗಳ ನಷ್ಟ ಆಗುತ್ತಿದೆಯಂತೆ. ಈ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರಕ್ಕೆ 'ರಾಷ್ಟ್ರೀಯ ಕಾಡು ಪ್ರಾಣಿ ನಿಯಂತ್ರಣ ಸಮಸಿತಿ' ಬೇಕಾಗಿದೆ.
                                                                                                                                     - ಶ್ರೀ ಪಡ್ರೆ


ಕೃಷಿ ಯಂತ್ರ ಮೇಳದಲ್ಲಿ 'ಸೌರ ಶಕ್ತಿ' - ವಿಚಾರ ಗೋಷ್ಠಿ


                    "ದೇಶದಲ್ಲಿ ಸುಮಾರು ಮೂವತ್ತೈದು ಕೋಟಿಯಷ್ಟು ಜನಕ್ಕೆ ವಿದ್ಯುತ್ ಸೌಲಭ್ಯ ಇಲ್ಲ. ಬಿಹಾರದಂತಹ ರಾಜ್ಯಗಳಲ್ಲಿ ಮೊಬೈಲ್ ಚಾರ್ಜು ಮಾಡಲು ಐದರಿಂದ ಎಂಟು ರೂಪಾಯಿ ಖರ್ಚುು ಮಾಡುತ್ತಾರೆ. ನಾವು ಸೌರ ಶಕ್ತಿಯನ್ನು ಸಮರ್ಪಕವಾಗಿ ಬಳಸುವ ಯೋಚನೆ ಮಾಡಿದರೆ ದೇಶದ ವಿದ್ಯುತ್ ಕೊರತೆಯನ್ನು ನೀಗಿಸಲು ಸಾಧ್ಯ, ಮಾತ್ರವಲ್ಲ  ವಿದ್ಯುತ್ನಲ್ಲೂ ಸ್ವಾವಲಂಬಿಯಾಗಲು ಸಾಧ್ಯ," ಎಂದು ಸೆಲ್ಕೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಹಂದೆ ಹೇಳಿದರು.
               ಪುತ್ತೂರಿನಲ್ಲಿ ಜರುಗಿದ (25-1-2015) ಎರಡನೇ ವಿಚಾರಸಂಕಿರನದಲ್ಲಿ ಸೌರಶಕ್ತಿಯ ಬಳಕೆಯ ಕುರಿತು ಮಾತನಾಡುತ್ತಾ, ಸೋಲಾರ್ ತಂತ್ರಜ್ಞಾನವನ್ನು ಕೇವಲ ತಂತ್ರಜ್ಞಾನವೆಂಬಂತೆ ನೋಡದೆ ಬದುಕಿನ ಉಪಯೋಗದ ಭಾಗವಾಗಿ ನೋಡಿದಾಗ ನಮಗೆ ಸೋಲಾರ್ ತಂತ್ರಜ್ಞಾನದ ಬಗ್ಗೆ ಒಲವು ಮೂಡಲು ಸಾಧ್ಯ. ಸೋಲಾರ್ ತಂತ್ರಜ್ಞಾನದ ಪರಿಣಾಮಗಳ ಬಗ್ಗೆ ನಾವು ಗಮನಹರಿಸಿದಾಗ ಇನ್ನಷ್ಟು ಪ್ರಗತಿ ಸಾಧ್ಯವಿದೆ. ಅನೇಕ ಸಂದರ್ಭದಲ್ಲಿ  ಸೋಲಾರ್ ತೀರಾ ದುಬಾರಿ ಎನ್ನಲಾಗುತ್ತಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಇದು ದುಬಾರಿಯಾಗಲು ಸಾದ್ಯವಿಲ್ಲ. ಸೌರ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳುವುದರ ಮೂಲಕ ಶಾಲೆಗಳಲ್ಲಿ ಬೆಳಕು ನೀಡಲು ಹಾಗೂ ವಿದ್ಯುತ್ ಒದಗಿಸಲಾಗದ ಹಳ್ಳಿಗಳಿಗೆ ಬೆಳಕು ನೀಡಲು ಸಾಧ್ಯ. ಕರ್ನಾಾಟಕದಲ್ಲಿ ಸೋಲಾರ್ ಕ್ಷೇತ್ರದಲ್ಲಿ ಆದ ಕೆಲಸ ಗಮನಾರ್ಹವಾದದ್ದು. ಇಲ್ಲಿ ಐದು ಲಕ್ಷ ಮನೆಗಳು ಸೌರಶಕ್ತಿಯನ್ನು ಬಳಸುತ್ತಿವೆ. ಕೇವಲ ಬೆಳಕಿಗೆ ಮಾತ್ರವಲ್ಲದೆ ಸೌರಶಕ್ತಿಯ ಮೂಲಕ ಅಕ್ಕಿ ಮಿಲ್ ಗಳನ್ನೂ ನಡೆಸಬಹುದು. ಅಲ್ಲದೆ ನವೀಕರಿಸಬಹುದಾದ ಇಂಧನಗಳನ್ನು ಸರಿಯಾಗಿ ಬಳಸಿಕೊಳ್ಳಲು ಕಾರ್ಯಪ್ರವೃತ್ತರಾದರೆ ಉದ್ಯೋಗವೂ ಸೃಷ್ಟಿಯಾಗುತ್ತದೆ, ಅಮೇರಿಕಾಕ್ಕೂ ಸೌರಶಕ್ತಿ ಕುರಿತಾಗಿ ಮಾರ್ಗದರ್ಶನ ನೀಡುವಷ್ಟು ನಾವು ಸಶಕ್ತರಾಗಬಹುದು," ಎಂದು ತಿಳಿಸಿದರು.
                     ಬೆಂಗಳೂರಿನ ಎನ್ಟಿಸಿಎಸ್ಟಿಯ ನಿರ್ದೇಶಕ ಡಾ.ನಾಗನ ಗೌಡ ಮಾತನಾಡಿ, "ನವೀಕರಿಸಲಾಗದ ಇಂಧನಗಳನ್ನು ನಾವೀಗಾಗಲೇ ಶೇ.60 ರಷ್ಟು ಉಪಯೋಗಿಸಿಬಿಟ್ಟಿದ್ದೇವೆ. ಇನ್ನುಳಿದ ಶೇ.40 ರಷ್ಟು ಇಂಧನ ಮುಂದಿನ ಐವತ್ತು ವರ್ಷದಲ್ಲಿ ಬರಿದಾಗಲಿದೆ. ಹಾಗಾಗಿ ನಾವು ನಮ್ಮ ಅವಶ್ಯಕತೆಯಷ್ಟೇ ವಿದ್ಯುತ್ ಬಳಸಿಕೊಳ್ಳುವುದು ಅಗತ್ಯ. ಸೌರಶಕ್ತಿಯ ಬಳಕೆ ಮಾತ್ರ ಇದಕ್ಕೆ ಪರಿಹಾರವಾಗಬಲ್ಲದು" ಎಂದರು.
                  ಅಧ್ಯಕ್ಷತೆಯನ್ನು ವಹಿಸಿದ್ದ ಶಿವಮೊಗ್ಗದ ಮ್ಯಾಮ್ಕೋಸ್ ಸಂಸ್ಥೆಯ ಉಪಾಧ್ಯಕ್ಷ ನರಸಿಂಹ ನಾಯಕ್ ಮಾತನಾಡುತ್ತಾ, "ಬೆಳೆಗಾರರ ಬಗ್ಗೆ, ಕೃಷಿಕರ ಬಗ್ಗೆ ಅಧಿಕಾರಿಗಳು ನಿಗಾ ಇರಿಸಬೇಕು. ಅಧಿಕಾರಿಗಳು ಕೃಷಿಕರನ್ನು  ನಿರ್ಲಕ್ಷ್ಯ ಮಾಡಿದ್ದರಿಂದಲೇ ಇಂದು ಸಮಸ್ಯೆಯಾಗಿದೆ. ಗ್ರಾಮೀಣ ಭಾಗದಲ್ಲಿ  ಸೋಲಾರ್ ಶಕ್ತಿ ಬಳಕೆಗೆ ಅವಕಾಶ ಇದೆ. ಆದರೆ ಅದರ ಬಗ್ಗೆ ಮಾಹಿತಿ ಬೇಕು,"  ಎಂದರು. ಇದೇ ಸಂದರ್ಭದಲ್ಲಿ  ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ಆನಂದ್ ಅವರು  ತಯಾರಿಸಿದ ಅಡಿಕೆ ಕೃಷಿ ಬಗ್ಗೆ ಮೊಬೈಲ್ ಆಪ್ ಪತ್ರಕರ್ತ ಶ್ರೀ ಪಡ್ರೆ ಉದ್ಘಾಟಿಸಿದರು.
               ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಮಹೇಶ್ ಕೆ.ಕೆ ಸ್ವಾಗತಿಸಿದರು. ಪ್ರಾಧ್ಯಾಪಕಿ ಜಿ.ಆರ್.ಕಲ್ಪನಾ ವಂದಿಸಿದರು. ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಕಾರ್ಯಕ್ರಮ ಸಮನ್ವಯಗೊಳಿಸಿದರು.


'ತೆಂಗಿನಿಂದ ನೀರಾ ತಯಾರಿ' - ಕೃಷಿಯಂತ್ರ ಮೇಳದಲ್ಲಿ ವಿಚಾರಗೋಷ್ಠಿ

             ಪುತ್ತೂರಿನಲ್ಲಿ ಜರುಗಿದ ಕೃಷಿಯಂತ್ರ ಮೇಳದ ಎರಡನೇ ದಿವಸದ (25-1-2015) ವಿಚಾರಗೋಷ್ಠಿಯಿದು. ವಿಷಯ : 'ತೆಂಗಿನಿಂದ ನೀರಾ ತಯಾರಿ'.
             "ನೀರಾ ಒಂದು ಆರೊಗ್ಯಕರ ಹಾಗೂ ನೈಸರ್ಗಿಕ ಪಾನೀಯ. ಇದರಲ್ಲಿ ಅನೇಕ ಬಗೆಯ ಪೌಷ್ಟಿಕಾಂಶಗಳು ಇದೆ. ಈ ಬಗ್ಗೆ ಈಗಾಗಲೇ ಅಧ್ಯಯನಗಳೂ ನಡೆದಿದೆ ಸರ್ಕಾಾರದ ಪಾಲಿಸಿಗಳಲ್ಲಿ  ಬದಲಾವಣೆಯಾಗದ ಹೊರತು ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಈಗಾಗಲೇ ಬಹುತೇಕ ರಾಜ್ಯಗಳು ನೀರಾ ಬಗ್ಗೆ ಚಿಂತಿಸಿವೆ. ಆದರೆ ರಾಜ್ಯದಲ್ಲಿ  ಮಾತ್ರ ಈ ಬಗ್ಗೆ ಯಾವುದೇ ಪ್ರಗತಿ ಆಗಿಲ್ಲ ನೀರಾವನ್ನು ಕಾರ್ಬೋನೇಟೆಡ್ ಡ್ರಿಂಕ್ ಆಗಿಯೂ ಬಳಕೆ ಮಾಡಲು ಸಾಧ್ಯವಿದೆ. ಇದರಲ್ಲಿ  ವಿವಿಧ ಪ್ಲೇವರ್ ನೀಡಿ ಗ್ರಾಹಕರಿಗೇ ಆಯ್ಕೆ ಕೊಡಬೇಕಾಗಿದೆ. ಸ್ಥಳೀಯ ಪೇಯವಾಗಿಯೂ ನೀರಾ ಬಳಕೆ ಮಾಡಲು ಸಾಧ್ಯವಿದೆ. ಆದರೆ ಈಗಾಗಲೇ ಬಹುಪಾಲು ಸ್ಥಳೀಯ ಕಂಪನಿಗಳನ್ನು ದೊಡ್ಡ ಕಂಪನಿಗಳು ಖರೀದಿ ಮಾಡಿವೆ. ಈಗ ನೀರಾವನ್ನು ಬ್ರಾಂಡಿಂಗ್ ಮಾಡುವ ಕೆಲಸ ಆಗಬೇಕಾಗಿದೆ," ಎಂದು ಪಾಲಕ್ಕಾಡ್ ತೆಂಗು ಉತ್ಪಾದಕರ ಸಹಕಾರಿ ಸಂಘದ ಸತೀಶ್ ನೀರಾ ಗೋಷ್ಠಿಯಲ್ಲಿ ಶಿಖರೋಪನ್ಯಾಸ ನೀಡಿದರು.
              ಕಾಸರಗೋಡಿನ ಸಿಪಿಆರ್ಐನ ಹಿರಿಯ ವಿಜ್ಞಾನಿ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಮಾತನಾಡಿ, "ದೇಶದಲ್ಲಿ  ಶೇ.15 ರಷ್ಟು ಎಳನೀರು ಬಳಕೆಯಾದರೆ ಉಳಿದಂತೆ ಬಹುಪಾಲು ತೆಂಗಿನ ಕಾಯಿ ಬಳಕೆ ಮಾತ್ರ  ಆಗುತ್ತಿದೆ. ನೀರಾ ಬಳಕೆ ಆರಂಭವಾದ ಬಳಿಕ ಮೌಲ್ಯವರ್ಧನೆಯ ಪಾಲು ಅಧಿಕವಾಗಿದೆ. ನೀರಾದಲ್ಲಿ  ರೋಗ ನಿರೋಧಕ ಶಕ್ತಿ ಹೆಚ್ಚಿದೆ. ನೀರಾ ಬೇರೆ, ಶೇಂದಿ ಬೇರೆ - ಈ ಬಗ್ಗೆ ಅರಿವು ಬೇಕು. ನೀರಾ ಸಂಗ್ರಹಕ್ಕೆ ಐಸ್ ಬಾಕ್ಸ್ ತಂತ್ರಜ್ಞಾನ ಉಪಯೋಗಿಸಲಾಗುತ್ತಿದೆ. ನೀರಾ ಗುಣಮಟ್ಟವು 7.8 ಪಿಎಚ್ ಇರಬೇಕು, ಇದಕ್ಕಿಂತ ಕಡಿಮೆ ಬಂದರೆ ಅದರ ಉಪಯೋಗ ಆಗದು. ಸದ್ಯ ನೀರಾ ದಾಸ್ತಾನು ಸಮಸ್ಯೆ ಇದೆ. ತೆಂಗಿನ ಮರದಿಂದ ನಿರಂತರ ನೀರಾ ತೆಗೆಯುವ ಬದಲು ಮೂರು ತಿಂಗಳಿಗೊಮ್ಮೆ ಈ ಪ್ರಯೋಗ ಮಾಡಿದರೆ ತೆಂಗಿನ ಕಾಯಿ ಕೂಡಾ ಲಭ್ಯವಾಗುತ್ತದೆ. ನೀರಾದಿಂದ ಸಕ್ರೆ, ಬೆಲ್ಲ, ಜೇನು ಮೊದಲಾದ ಉತ್ಪನ್ನಗಳನ್ನು ಮಾಡಲು ಸಾಧ್ಯವಿದೆ. ಒಂದು ಎಕ್ರೆ ತೆಂಗಿನ ತೋಟದಲ್ಲಿ ಹತ್ತೊಂಭತ್ತು ಟನ್ ಸಕ್ರೆ ಉತ್ಪಾದನೆಗೆ ಸಾಧ್ಯವಿದೆ. ದೇಶದ ತೆಂಗಿನ ಉತ್ಪಾದನೆಯ ಶೇ.10 ರಷ್ಟು ನೀರಾಕ್ಕೆ ಬಳಕೆ ಮಾಡಿದರೆ ಮೂರು ಸಾವಿರದಿಂದ ನಾಲ್ಕು ಸಾವಿರ ಆದಾಯ ಗಳಿಸಬಹುದು," ಎಂದರು.
                  ಬೆಂಗಳೂರಿನ ತೆಂಗು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ್ಯೆ ಸಿಮಿ ಥಾಮಸ್ ಮಾತನಾಡಿ, "ನೀರಾ ತೆಗೆಯುವ ಮೊದಲು  ಬೆಳೆಗಾರರು ಸಂಘದ ರಚನೆ ಮಾಡಬೇಕು, ಆ ಬಳಿಕ ಒಕ್ಕೂಟದ ರಚನೆಯಾಗಿ ಬಳಿಕ ಕಂಪನಿ ರಚನೆಯಾದಾಗ ನೀರಾ ಇಳುವರಿ ಪಡೆಯಲು ಸುಲಭವಾಗುತ್ತದೆ. ಮಂಡಳಿ ವತಿಯಿಂದ ಕಂಪನಿ ಮೂಲಕ ನೀರಾ ಟ್ಯಾಪಿಂಗ್ಗೆ ತರಬೇತಿಯನ್ನೂ ನೀಡಲಾಗುತ್ತದೆ. ರಾಜ್ಯದಲ್ಲಿ  ಈಗಾಗಲೇ ಕಂಪನಿ ರಚನೆ ಪ್ರಕ್ರಿಯೆ ಶುರುವಾಗಿದೆ. ಕೇರಳದಲ್ಲಿ  13 ಕಂಪನಿ ಸ್ಥಾಪನೆಯಾಗಿದೆ" ಎಂದರು.
               ಸಭಾಧ್ಯಕ್ಷತೆ ವಹಿಸಿದ್ದ ಶಿರಸಿಯ ಟಿಎಸ್ಎಸ್ನ ಅಧ್ಯಕ್ಷ ಶಾಂತಾರಾಮ ಹೆಗ್ಡೆ ಮಾತನಾಡಿ, "ನಮಗೆ ನೀರಾದ ಬಗ್ಗೆ ತಪ್ಪು ಕಲ್ಪನೆ ಇದೆ. ಈಗ ದೂರವಾಗಿದೆ. ಮುಂದೆ ಈ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ನಡೆಯಲಿ ಎಂದರು.  ಇಂಜಿನಿಯರಿಂಗ್ ಕಾಲೇಜಿನ ತಾಂತ್ರಿಕ ವಿಭಾಗದ ಉಪನ್ಯಾಸಕಿ ನಿರುಪಮಾ ಕೆ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಮಂಜುನಾಥ ಐ ವಂದಿಸಿದರು. ಹಿರಿಯ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ಕಾರ್ಯಕ್ರಮವನ್ನು ಸಮನ್ವಯಗೊಳಿಸಿದರು.

ಬಾಯಿ ರುಚಿ ಮಾಡಿದ ನೀರಾ!
ನೀರಾ ಬಗ್ಗೆ ವಿಚಾರಗೋಷ್ಟಿ ನಡೆಯುತ್ತಿರುವ ವೇಳೆ ಜಿಲ್ಲೆಯ ತುಂಬೆಯಲ್ಲಿ  ತಯಾರಾಗುತ್ತಿರುವ ನೀರಾ ಘಟಕದ ವತಿಯಿಂದ ಸಭೆಯಲ್ಲಿ  ಭಾಗವಹಿಸಿದ ಎಲ್ಲರಿಗೂ ನೀರಾ ವಿತರಣೆ ನಡೆಯಿತು. ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ , ಕ್ಯಾಂಪ್ಕೋ ನಿರ್ದೇಶಕ ರಾಧಾಕೃಷ್ಣ ಕೋಟೆ, ಪುತ್ತೂರು ಪುರಸಭಾ ಅಧ್ಯಕ್ಷ ಜಗದೀಶ ನೆಲ್ಲಿಕಟ್ಟೆ ಅವರಿಗೆ ಸಭೆಯಲ್ಲಿ ನೀರಾ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು. ನೀರಾ ಸವಿದ ಎಲ್ಲರೂ ಬಾಯಿ ಚಪ್ಪರಿಸಿದರು.

ಕೃಷಿ ಯಂತ್ರಮೇಳದಲ್ಲಿ "ಕೃಷಿ ಸಂಸತ”


             ಕೃಷಿ ಯಂತ್ರಮೇಳದಲ್ಲಿ  ಈ ಬಾರಿ ಕೃಷಿ ಸಂಸತ್ ಕಾರ್ಯಕ್ರಮ ಆಯೋಜಿಸಲಾಗಿತ್ತು.ಅತ್ಯಂತ ಯಶಸ್ವಿಯಾಗಿ ನಡೆದ ಕಾರ್ಯಕ್ರಮ.  ಇಡೀ ಕಾರ್ಯಕ್ರಮದಲ್ಲಿ  ಕೃಷಿಕರು ಉತ್ಸಾಹದಿಂದ. ವೇದಿಕೆ ಕೂಡಾ ಸಂಸತ್ ಮಾದರಿಯಲ್ಲೇ ರೂಪುಗೊಂಡಿತ್ತು. .
              ಜನವರಿ ೨೪, ಶನಿವಾರ ಕ್ಯಾಂಪ್ಕೋ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ವಿವೇಕಾನಂದ ಪಾಲಿಟೆಕ್ನಿಕ್ ಸಹಯೋಗದೊಂದಿಗೆ  ನಡೆದ ಕೃಷಿಯಂತ್ರ ಮೇಳದಲ್ಲಿ  ಕೃಷಿ ಸಂಸತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸದ ಬಿ.ಎಸ್.ಯಡಿಯೂರಪ್ಪ  ವಹಿಸಿದ್ದರು.
              "ಅಡಿಕೆ ಬೆಳೆಗಾರರ ಪರವಾಗಿ ಇರುವ ಗೋರಖ್ ಸಿಂಗ್ ವರದಿ ಜಾರಿಗೆ ಸರಕಾರ  ಏಕೆ ಪ್ರಯತ್ನ ಮಾಡುತ್ತಿಲ್ಲ, ಈಗಲಾದರೂ ಈ ಬಗ್ಗೆ ಕ್ರಮ ಕೈಗೊಳ್ಳಬಹುದಲ್ಲಾ" -  ಕೃಷಿಕ ಕರುಣಾಕರ ಪ್ರಶ್ನೆ. ಉತ್ತರಿಸಿದ ಶೋಭಾ ಕರಂದ್ಲಾಜೆ, "ಗೋರಖ್ಸಿಂಗ್ ವರದಿಯ ಎರಡು ಅಂಶಗಳ ಬಗ್ಗೆ ಮಾತ್ರ ಅಡಿಕೆ ಬೆಳೆಗಾರರಿಗೆ ಗೊತ್ತಿದೆ. ಆದರೆ ವರದಿಯ ಬಗ್ಗೆ ಸಮಗ್ರ ಅಧ್ಯಯನವಾಗಬೇಕು. ಏಕೆಂದರೆ ವರದಿಯ ಕೊನೆಯಲ್ಲಿ  ಮುಂದೆ ಅಡಿಕೆ ಬೆಳೆಯನ್ನು  ಬೆಳೆಯಲೇಬಾರದು, ರಾಸಾಯನಿಕ ಬಳಕೆ ಇಲ್ಲವೇ ಇಲ್ಲ, ಸಹಜವಾಗಿ ಹರಿಯುವ ನೀರನ್ನು  ಅಡಿಕೆ ಕೃಷಿಗೆ ಬಳಕೆ ಮಾಡುವಂತಿಲ್ಲ ಎಂಬ ಇತ್ಯಾದಿ ಅಂಶಗಳು ಇವೆ. ಹೀಗಾಗಿ ಈ ಬಗ್ಗೆ ಸಮಗ್ರ ಅಧ್ಯಯನವಾದ ಬಳಿಕವೇ ವರದಿಯ ಬಗ್ಗೆ ಹೇಳಲಾಗುತ್ತದೆ. ಒಂದು ವೇಳೆ ವರದಿ ಜಾರಿಯಾದರೆ ಅಡಿಕೆ ಬೆಳೆಗಾರರಿಗೆ ಆಗುವ ಸಂಕಷ್ಟಗಳ ಬಗ್ಗೆಯೂ ಅಧ್ಯಯನವಾಗಬೇಕಾಗಿದೆ" ಎಂದರು.
              ಸಭೆಯಲ್ಲಿ  ಮಾತನಾಡಿದ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ, "ಕೃಷಿಕರ ಸಮಸ್ಯೆಗಳ ಬಗ್ಗೆ ನೇರವಾಗಿ ಸಂಸದರುಗಳ ಮೂಲಕವೇ ಉತ್ತರ ಕಂಡುಕೊಳ್ಳುವ ವಿಶೇಷ ಪ್ರಯತ್ನ ಮಾಡಲಾಗಿದೆ. ಇದರ ಜೊತೆಗೇ ಇಲ್ಲಿನ ಸಮಸ್ಯೆಗಳು ಸಂಸತ್ನಲ್ಲಿ ಕೂಡಾ ಚರ್ಚೆಯಾದಾಗ ಕೃಷಿಕರಿಗೆ ಅನುಕೂಲವಾಗುತ್ತದೆ" ಎಂದರು.

ಕೃಷಿ ಸಂಸತ್ ನಲ್ಲಿ ಬಂದ ಪ್ರಶ್ನೆಗಳು ಹೀಗಿದೆ :

* ಆಹಾರ ಬೆಳೆಗಳ ದೃಷ್ಟಿಯಿಂದ ಕೈಗೊಂಡ ಕ್ರಮಗಳು ಏನು ? - ಮಹೇಶ್ ಚೌಟ
- ಹಸಿರು ಕ್ರಾಂತಿಯ ಬಳಿಕ ಸ್ವಾವಲಂಬಿಗಳಾಗಿದ್ದರೂ ಕೂಡಾ ಸರ್ಕಾಾರ ಆಹಾರ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. . ಇದಕ್ಕಾಗಿ ಸೂಕ್ತ ಬೆಂಬಲ ಬೆಲೆ, ವೈಜ್ಞಾನಿಕ ಬೆಲೆ ನಿಗದಿಯಾಗಲಿ - ಯಡಿಯೂರಪ್ಪ

* ಬೀಳಿ ಚೀಟಿ ವ್ಯವಹಾರ ತಡೆಯಲು ಸರಕಾರದ ಕ್ರಮ ಏನು ? - ಎಂ.ಡಿ.ವಿಜಯಕುಮಾರ್
- ಅಡಿಕೆ ವ್ಯವಹಾರ ಸೇರಿದಂತೆ ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಪಾರದರ್ಶಕತೆ ಬೇಕು. ಇದಕ್ಕಾಗಿ ಸಿಸಿಟಿವಿ, ಕಂಪ್ಯೂಟರ್ ಬಳಕೆ, ಬಿಲ್ ಮೂಲಕವೇ ವ್ಯವಹಾರ ಸೇರಿದಂತೆ ವೈಜ್ಞಾನಿಕ ತಂತ್ರಜ್ಞಾನ ಬಳಕೆಯಾಗಬೇಕು. ಕೃಷಿಕರೂ ಎಚ್ಚರ ವಹಿಸಬೇಕು.- ಯಡಿಯೂರಪ್ಪ

* ಅಡಿಕೆ ಹಳದಿ ರೋಗ ಪೀಡಿತ  ಬೆಳೆಗಾರರಿಗೆ ಪರ್ಯಾಯ ಬೆಳೆಯಾದ ತಾಳೆ ಬೆಳೆಯ ಬಗ್ಗೆ ಏನು ಕ್ರಮ? - ವಸಂತ ರಾವ್
_ಅಡಿಕೆ ಹಳದಿ ರೋಗ ಪೀಡಿತ ಪ್ರದೇಶದ ಅಡಿಕೆ ಬೆಳೆಗಾರರಿಗೆ  ತಾಳೆ ಬೆಳೆಯಲು ಸರಕಾರ ಪ್ರೋತ್ಸಾಹ ನೀಡುತ್ತಿದೆ.  ಜೊತೆಗೆ ಇತರ ಬೆಳೆಯ ಕಡೆಗೂ ಕೃಷಿಕರು ಗಮನಹರಿಸಬೇಕು.- ಯಡಿಯೂರಪ್ಪ

* ಆಮದು ಅಡಿಕೆಗೆ ಏನು ಕ್ರಮ ಕೈಗೊಂಡಿದೆ, ಸಾರ್ಕ್ ಒಪ್ಪಂದದಿಂದ ಅಡಿಕೆ ಹೊರಗಿಡಲು ಅಸಾಧ್ಯವೇ ? - ಶಾಂತಾರಾಮ ಹೆಗಡೆ
- ಅಡಿಕೆ ಆಮದು ತಡೆಗೆ ಈಗಾಗಲೇ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಆಮದು ತಡೆಗೆ ಮತ್ತಷ್ಟು ಬಿಗಿ ಕಾನೂನು ಮಾಡಲಾಗುತ್ತಿದೆ. ಈಗಾಗಲೇ ನೇಪಾಳ ಮೂಲಕ ಬರುವ ಅಡಿಕೆಗೆ ತಡೆಯಾಗಿದೆ .ಸಾರ್ಕ್ ಒಪ್ಪಂದ ಈಗಾಗಲೇ ಆಗಿರುವುದರಿಂದ ಏನೂ ಮಾಡಲು ಆಗದು. ಆದರೆ ಕಾನೂನು ಬಿಗಿ ಮಾಡುವ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ. - ಯಡಿಯೂರಪ್ಪ

* ರಬ್ಬರ್ ಧಾರಣೆ ಇಳಿಕೆಯಾಗುತ್ತಿದೆ, ಸರಕಾರ  ಕೈಗೊಂಡ ಕ್ರಮ ಏನು ? - ರಮೇಶ್ ಕೈಕಾರ
- ರಬ್ಬರ್ ಧಾರಣೆ ಇಳಿಕೆಗೆ ಹಿಂದಿನ ಸರಕಾರವೇ ಕಾರಣ. ಅಂದು ಕೈಗೊಂಡ ನಿರ್ಣಯದ ಕಾರಣ ಇಂದು ಧಾರಣೆ ಇಳಿಕೆಯಾಗಿದೆ. ಹಾಗಿದ್ದರೂ ಕೇಂದ್ರ ಸರಕಾರ ಧಾರಣೆ ಏರಿಕೆಗೆ ಬೇಕಾದ ಕ್ರಮ ಕೈಗೊಳ್ಳುತ್ತಿದೆ. ಇಲ್ಲಿನ ರಬ್ಬರ್ ಬಳಕೆಗೇ ಆದ್ಯತೆ ನೀಡಬೇಕು ಎಂದು ಕಂಪನಿಗಳಿಗೆ ಹೇಳಿದೆ. ಆಮದು ಸುಂಕ ಹೆಚ್ಚು ಮಾಡಿ ರಬ್ಬರ್ ಆಮದು ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ  ಧಾರಣೆ ಏರಿಕೆಯಾಗಬಹುದು. -ಶೋಭಾ ಕರಂದ್ಲಾಜೆ

*ಯಂತ್ರಗಳಿಗೆ ಸಿಗುವ ಸಬ್ಸೀಡಿ ನೇರವಾಗಿ ಕೃಷಿಕರಿಗೇ ಲಭ್ಯವಾಗಲಿ - ಸಂತೋಷ್ ಕುತ್ತಮೊಟ್ಟೆ
-ಈ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಪ್ರಯತ್ನವಾಗುತ್ತಿದೆ. ಯಂತ್ರೋಪಕರಣಗಳ ಸಬ್ಸೀಡಿ ನೇರವಾಗಿ ಕೃಷಿಕರ ಖಾತೆಗೇ ಜಮಾಮಾಡುವಂತೆ ಸರಕಾರ್ರವನ್ನು  ಒತ್ತಾಯಿಸುತ್ತೇನೆ. - ಯಡಿಯೂರಪ್ಪ.

*ಅಡಿಕೆ ಮೌಲ್ಯವರ್ಧನೆಗೆ ಕೇಂದ್ರ ಸರಕಾರ ಕೈಗೊಂಡಿರುವ ನಿರ್ಧಾರ ಏನು ? - ಎ.ಎಸ್.ಭಟ್
- ಈಗ ಅಡಿಕೆ ನಿಷೇಧವಾಗುವ ಹಂತಕ್ಕ ಬಂದಿದೆ. ಇದಕ್ಕೆ ಹಿಂದಿನ ಸರಕಾರದ ನಿರ್ಧಾರಗಳೇ ಕಾರಣ. ಆದರೆ ಈಗ ಅದೆಲ್ಲವನ್ನೂ ಸರಿ ಮಾಡಿ ನಿಷೇಧ ಪಟ್ಟಿಯಿಂದ ಹೊರತರುವ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ನ್ಯಾಚುರಲ್ ಅಡಿಕೆ ಬೆಳೆಯ ಬಗ್ಗೆ ಈಗ ಚಿಂತನೆ ನಡೆಯಬೇಕು. . - ಶೋಭಾ ಕರಂದ್ಲಾಜೆ

*ಸರಕಾರದ ಕೃಷಿ ಸಂಸ್ಥೆಗಳ ಜವಾಬ್ದಾರಿ ಬಗ್ಗೆ ಏನು ಕ್ರಮ ? - ಸುರೇಶ್ವಂದ್ರ ಟಿ.ಆರ್
- ಕೃಷಿ ಸಂಸ್ಥೆಗಳಾದ ಸಿಪಿಸಿಆರ್ ಐ ಅಡಿಕೆ ಬೆಳೆಗೆ ಬೇಕಾದ ಎಲ್ಲಾ ಅಂಶಗಳ ಬಗ್ಗೆ ಅಧ್ಯಯನ ಮಾಡಿ ಬೆಳೆಗಾರರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು .ಈ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗುತ್ತದೆ. - ಯಡಿಯೂರಪ್ಪ

*ಭತ್ತದ ಕೃಷಿಗೆ ಸಹಾಯ ಬೇಕು - ಕೃಷ್ಣ ರೈ ಪುಣ್ಚಪ್ಪಾಡಿ
-ಭತ್ತದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಹಾಗೂ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು ಎಂದು ಈಗಾಗಲೇ ಒತ್ತಾಯಿಸಲಾಗಿದೆ. ಈಗ ಸರಕಾರ ಒಂದು  ರೂಪಾಯಿಗೆ ಅಕ್ಕಿ ನೀಡುತ್ತಿರುವುದು  ರೈತರ ಮೇಲೆಯೇ ಒತ್ತಡ ತಂದಂತಾಗಿದೆ. ಇದಕ್ಕಾಗಿ ಸರಕಾರವೇ ರೈತರಿಗೆ ಸಹಾಯ ನೀಡಬೇಕು. -ಯಡಿಯೂರಪ್ಪ

* ಮಂಗನ ಹಾವಳಿಗೆ ಏನು ಕ್ರಮ ಇದೆ ? - ಯೂಸುಫ್
- ಕಾಡುಪ್ರಾಣಿಗಳ ಹಾವಳಿಗೆ ರಾಜ್ಯ ಸರಕಾರದಲ್ಲಿ ಸಾಕಷ್ಟು ಅನುದಾನಗಳು ಇದೆ. ಈ ಅನುದಾನಗಳ ಮೂಲಕ ಕಾಡುಪ್ರಾಣಿ ಹಾವಳಿ  ತಡೆಗೆ ಸಾಧ್ಯವಿದೆ. ಆದರೆ ಅರಣ್ಯ ಸಚಿವರಿಗ ಈ ಬಗ್ಗೆ ಆಸಕ್ತಿ ಬೇಕು ಅಷ್ಟೇ. ಇಲ್ಲಿ  ಅನುದಾನ ಇದ್ದರೂ ಈ ಬಗ್ಗೆ ಯಾವುದೇ ಚರ್ಚೆಯಾಗದ ಕಾರಣ ಹೀಗಾಗಿದೆ.- ಶೋಭಾ ಕರಂದ್ಲಾಜೆ

* ವೆನಿಲ್ಲಾ ನಾಶವಾಗಿ ಬ್ಯಾಂಕ್ ಸಾಲ ಕಟ್ಟಲಾಗುತ್ತಿಲ್ಲ, ಪರಿಹಾರ ಇದೆಯಾ ?- ದೀಪಕ್
-ವೆನಿಲ್ಲಾ ಬೆಳೆ ನಾಶವಾದ ಬಗ್ಗೆ ಈಗಾಗಲೇ ಎಲ್ಲಡೆ ಕೇಳಿಬರುತ್ತಿದೆ. ಆದರೆ ಧಾರಣೆ ಇದ್ದ ಸಂದರ್ಭದಲ್ಲಿ  ಈ ಬಗ್ಗೆ ಯಾವುದೇ ಸೂಕ್ತ ದಾಖಲೆಗಳು ರಚನೆಯಾಗದ ಕಾರಣ ಈಗ ಸಮಸ್ಯೆಯಾಗಿದೆ. ಈಗ ಸಾಲಮನ್ನಾವೇ ಪರಿಹಾರ ಅಲ್ಲ, ರೈತರ ಬೆಳೆಗೆ ಉತ್ತಮ ಬೆಲೆ ಸಿಗಬೇಕು, ಪರ್ಯಾಾಯ ಬೆಳೆಗೆ ವ್ಯವಸ್ಥೆಯಾಗಬೇಕು- ಯಡಿಯೂರಪ್ಪ

(ವರದಿ ಕ್ರಪೆ : ಹರ್ಶಿತಾ ಪಿ.)

ಕೃಷಿ ಯಂತ್ರ ಮೇಳಕ್ಕೆ ಶುಭ ಚಾಲನೆ

 ಕೃಷಿ ಮೇಳದ ಉದ್ಘಾಟನೆ
 ಮಳಿಗೆಗಳ ಉದ್ಘಾಟನೆ
ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷ ಕೀರ್ತಿಶೇಷ ವಾರಣಾಶಿ ಸುಬ್ರಾಯ ಭಟ್ಟರ ಭಾವಚಿತ್ರವಿರುವ ಅಂಚೆ ಲಕೋಟೆ ಬಿಡುಗಡೆ


      ಡಾ.ವೀರೇಂದ್ರ ಹೆಗ್ಗಡೆಯವರಿಂದ ಅಧ್ಯಕ್ಷೀಯ ಮಾತುಗಳು   

      "ಕಳೆದ ಕೆಲವು ಸಮಯಗಳಿಂದ ಅಡಿಕೆಯ ಬಗ್ಗೆ ಅಪಪ್ರಚಾರ ನಡೆಯುತ್ತಿದೆ.ಇದನ್ನು  ಅಡಿಕೆ ಹಾನಿಕಾರಕ ಎಂದು ಬಿಂಬಿಸಿ ಅಡಿಕೆ ಮೇಲೆಯೇ ಪ್ರಹಾರ ನಡೆಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರವು ಯಾವುದೇ ಕಾರಣಕ್ಕೂ ಈ ಒತ್ತಡಕ್ಕೆ ಮಣಿಯದೆ ಅಪಪ್ರಚಾರದಿಂದ ತಪ್ಪಿಸುತ್ತದೆ" ಎಂದು  ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ ಕುಮಾರ್ ಹೇಳಿದರು.
           ಅವರು  ಶನಿವಾರ ಕ್ಯಾಂಪ್ಕೋ ವತಿಯಿಂದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ವಿವೇಕಾನಂದ ಪಾಲಿಟೆಕ್ನಿಕ್ ಸಹಯೋಗದೊಂದಿಗೆ ಮೂರನೇ ಕೃಷಿ ಯಂತ್ರಮೇಳ ಉದ್ಘಾಟಿಸಿ ಮಾತನಾಡಿದರು. "ಈ ಹಿಂದೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು  ಸುಪ್ರೀಂಕೋರ್ಟಿ್ಗೆ ಅಫಿಡವಿಟ್ ಸಲ್ಲಿಸಿತ್ತು. ಇದರಿಂದಾಗಿ ಅಡಿಕೆ ಬೆಳೆಗಾರಿರಿಗೆ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.ಆದರೆ ಈಗ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ನಿಷೇಧಕ್ಕೆ ಬಿಡುವುದಿಲ್ಲ. ಈಗಾಗಲೇ ಸಚಿವರ ಸಭೆ ನಡೆಸಿದೆ, ಅಡಿಕೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ ಎಂಬುದು ಸಾಬೀತಾಗಿದೆ. ಶತಮಾನಗಳಿಂದ ಅಡಿಕೆ ಬಳಕೆ ಮಾಡಲಾಗುತ್ತಿದೆ ಎಂಬುದನ್ನೂ ಮನವರಿಕೆ ಮಾಡಲಾಗಿದೆ. ಸುಪ್ರೀಂಕೋರ್ಟಿಗೆ ಮತ್ತೆ ಅಫಿಡವಿಟ್ ಸಲ್ಲಿಸಲು ನಿರ್ಧರಿಸಿದೆ" ಎಂದರು.
          ಧ್ವಜಾರೋಹಣ ಮಾಡಿದ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವ ಸಿದ್ದೇಶ್ವರ್ ಮಾತನಾಡಿ, "ಅಡಿಕೆ ನಿಷೇಧಕ್ಕೆ ಸರ್ಕಾರವು  ಎಂದೂ ಬಿಡುವುದಿಲ್ಲ. ಅಡಿಕೆ ಧಾರಣೆ ಸ್ಥಿರತೆ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ. ಈ ಮೂಲಕ ಕೃಷಿಕರಿಗೆ ಹಾಗೂ ವ್ಯಾಪಾರಿಗಳಿಗೆ ಸಹಕಾರ ಮಾಡಬೇಕಿದೆ. ಅಡಿಕೆಯು ಗುಟ್ಕಾ, ಪಾನ್ಮಸಾಲವಾಗಿ ದೇಶದೆಲ್ಲೆಡೆ ಇಂದಿಗೂ ಬೇಕಾದ ವಸ್ತುವಾಗಿದೆ. .ಇದಕ್ಕಾಗಿ ಆಮದು ಅಡಿಕೆ ನಿಷೇಧಕ್ಕೆ ಈಗಾಗಲೇ ಸರ್ಕಾರ ಕ್ರಮಕೈಗೊಂಡಿದೆ" ಎಂದರು. ಸಂಸದ ನಳಿನ್ ಕುಮಾರ್ ಕಟೀಲು ಉಪಸ್ಥಿತರಿದ್ದರು.
          ಸಭೆಯ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, "ಇಂದು ಕೃಷಿ ಲಾಭದಾಯಕವಲ್ಲ ಎಂಬ ಕಾರಣದಿಂದ ಯುವಕರು ಕೃಷಿಯಿಂದ ದೂರ ನಿಲ್ಲುವಂತಾಗಿದೆ. ಆದರೆ ಲಾಭದಾಯಕ ಮಾಡಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಯಂತ್ರಗಳು ಹಾಗೂ ತಂತ್ರಜ್ಞಾನಗಳ ಬಳಕೆ ಮೂಲಕ ಕೃಷಿಯನ್ನು ಮತ್ತೆ ಪುನಶ್ಚೇತನ ಮಾಡಬೇಕು. ಇಂದು ಯಂತ್ರಗಳು ಶ್ರೀಮಂತ ವರ್ಗಕ್ಕೆ ಮಾತ್ರವೇ ಸೀಮಿತವಾಗಿದೆ. ಆದರೆ ಯಂತ್ರಗಳ ಬೆಲೆಯೂ ಕಡಿಮೆಯಾಗಿ, ಉಪಯೋಗವೂ ಹೆಚ್ಚಾದಾಗ ಸಾಮಾನ್ಯ ಜನರಿಗೂ ಯಂತ್ರಗಳ ಬಳಕೆ ಸಾದ್ಯವಿದೆ. ಹೀಗಾಗಿ ಕೃಷಿ ಯಂತ್ರ ಮೇಳಕ್ಕೆ ಆಗಮಿಸಿ  ಯಂತ್ರಗಳ ವೀಕ್ಷಣೆ ಮಾಡುವ ಕೆಲಸ ಕೃಷಿಕರು ಮಾಡಬೇಕು"  ಎಂದರು.
         ಇದೇ ಸಂದರ್ಭದಲ್ಲಿ  ವಾರಣಾಸಿ ಸುಬ್ರಾಯ ಭಟ ಭಾವಚಿತ್ರದ ವಿಶೇಷ ಅಂಚೆ ಲಕೋಟೆಯನ್ನು ಮತ್ತು ಅಡಿಕೆ ಪತ್ರಿಕೆಯ ವಿಶೇಷ ಸಂಚಿಕೆಯನ್ನು  ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಸೌತ್ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಐಂದ್ರಿಯಾ ಅನುರಾಗ್ , ಕ್ಯಾಂಪ್ಕೋ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಇ,, ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ, ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಉಪಸ್ಥಿತರಿದ್ದರು.
               ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಸ್ವಾಗತಿಸಿದರು. ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಅಧ್ಯಕ್ಷ ಬಲರಾಮ ಆಚಾರ್ಯ ವಂದಿಸಿದರು

ಮೇಳದಿಂದ ಮೂಡಿದ ಯಂತ್ರದೊಲವು

            2009. ಅಡಿಕೆ ಸುಲಿತಕ್ಕೆ ಯಂತ್ರಗಳು ಹೆಜ್ಜೆಯೂರಿದ ಸಮಯ. ಕೃಷಿಕ ಸಂಶೋಧಕರು ಅಲ್ಲಿಲ್ಲಿ 'ತಮಗಾಗಿ' ಯಂತ್ರಗಳನ್ನು ಆವಿಷ್ಕರಿಸಿದ್ದರು. ಕೆಲವು ಉದ್ಯಮಗಳು ಯಂತ್ರಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು. ಅವುಗಳ ಕ್ಷಮತೆ, ಸುಲಿತದ ಸಾಮಥ್ರ್ಯ, ಸಾಧ್ಯಾಸಾಧ್ಯತೆಗಳ ನಿಖರ ಚಿತ್ರಣವಿರಲಿಲ್ಲ. ಪರಸ್ಪರ ಸಿಕ್ಕಾಗ ಯಂತ್ರಗಳದ್ದೇ ಮಾತುಕತೆ.
            ಆಗಿನ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ರಂಗಮೂರ್ತಿಯವರ ಸಾರಥ್ಯದ ಮೊದಲ ಯಂತ್ರಮೇಳದಲ್ಲಿ ಅಡಿಕೆ ಸುಲಿ ಯಂತ್ರಗಳನ್ನು ಕೃಷಿಕರಿಗೆ ಪರಿಚಯಿಸುವುದು ಮೊದಲಾದ್ಯತೆಯ ಕೆಲಸವಾಗಿತ್ತು. ಆಗಲೇ ಅಡಿಕೆ ಪತ್ರಿಕೆಯಲ್ಲಿ ಬೆಳಕು ಕಂಡಿದ್ದ ಹತ್ತಾರು ಸಂಶೋಧಕರು ಮೇಳದಲ್ಲಿ ಮಳಿಗೆ ತೆರೆದಿದ್ದರು. ಮೂವತ್ತೈದಕ್ಕೂ ಮಿಕ್ಕಿದ ಯಂತ್ರಗಳು ಮೇಳದಲ್ಲಿ ಸದ್ದು ಮಾಡಿದಾಗ ಕೃಷಿಕರ ಮುಖದಲ್ಲಿ ನೆರಿಗೆಯ ಬದಲು ನಗು ಮೂಡಿತ್ತು.
           ಮೇಳದ ಬಳಿಕ ಸಂಶೋಧಕರ ಮಧ್ಯೆ ಸಂವಹನ ಶುರುವಾಯಿತು. ಸಂಪರ್ಕದ ಕೊಂಡಿ ಬಿಗಿಯಾಯಿತು. ಯಂತ್ರಗಳತ್ತ ಹೊರಳಿದ ಕೃಷಿಕರ ಚಿತ್ತವನ್ನು ಮನಗಂಡ ಉದ್ಯಮಗಳು ಹೊಸ ಯಂತ್ರಗಳನ್ನು ರೂಪಿಸುವತ್ತ ಯೋಚಿಸಿದುವು. ಅಡಿಕೆ ಸುಲಿ ಯಂತ್ರಕ್ಕೂ ಮಾರುಕಟ್ಟೆ ಮಾಡಬಹುದೆಂಬ ಧೈರ್ಯ ಉದ್ಯಮಗಳಿಗೆ ಬಂದುವು. ಕೃಷಿಕ ಸಂಶೋಧಕರು ತಮ್ಮ ಜ್ಞಾನದ ಮಿತಿಯಲ್ಲಿ ಯಂತ್ರಗಳನ್ನು ತಯಾರಿಸುವತ್ತ ಯೋಚಿಸುವಂತಾಯಿತು. ಈ ಎಲ್ಲಾ ಅಜ್ಞಾತ ಪ್ರಕ್ರಿಯೆಗೆ ಕ್ಯಾಂಪ್ಕೋ ಬೆನ್ನು ತಟ್ಟಿತ್ತು.
           ಆಮೇಲಿನ ಬೆಳವಣಿಗೆಗಳಿಗೆ ವಿವರಣೆ ಬೇಕಾಗದು. ಕೃಷಿಕರ ಅಂಗಳದಲ್ಲಿ ಅಡಿಕೆ ಸುಲಿ ಯಂತ್ರಗಳು ಚಾಲೂ ಆದುವು. ಸ್ವಲ್ಪ ಮಟ್ಟಿನ ಏರು ದರವಿದ್ದರೂ ಕ್ಷಮತೆ ಮತ್ತು ಸಹಾಯಕರ ಅಲಭ್ಯತೆಯ ತಲೆನೋವನ್ನು ಯಂತ್ರಗಳು ಹಗುರಗೊಳಿಸುವುದು. ಸಕಾಲಕ್ಕೆ ಅಡಿಕೆ ಸುಲಿತವಾಗತೊಡಗಿದುವು. ಮಾರುಕಟ್ಟೆಯ ದರವನ್ನು ಅಧ್ಯಯನ ಮಾಡಿ, ಏರು ದರವಿದ್ದಾಗ ಅಡಿಕೆಯನ್ನು ಸುಲಿದು ಮಾರುಕಟ್ಟೆಗೆ ಬಿಡುವ ಜಾಣ್ಮೆ ರೂಢನೆಯಾಯಿತು.
            ಕರಾವಳಿಯಲ್ಲಿ ಚಾಲಿ ಅಡಿಕೆಯಿದ್ದಂತೆ ಮಲೆನಾಡಿನಲ್ಲಿ 'ಕೆಂಪಡಿಕೆ' ಮಾಡುವುದು ಪಾರಂಪರಿಕ. ಎಳೆ ಅಡಿಕೆಯನ್ನು ಸುಲಿದು, ಬೇಯಿಸಿ, ಒಣಗಿಸುವ ಪ್ರಕ್ರಿಯೆ. ಎಳೆ ಅಡಿಕೆಯನ್ನು ಸುಲಿಯುವುದು ಶ್ರಮ ಬೇಡುವ ಕೆಲಸ. ಸಹಾಯಕರ ಅವಲಂಬನೆಯೂ ಹೆಚ್ಚು ಬೇಕಾಗುತ್ತದೆ. ಎಳೆ ಅಡಿಕೆ ಸುಲಿಯುವ ಯಂತ್ರಗಳು ಮಲೆನಾಡಿಯಲ್ಲಿ ಕ್ಷಿಪ್ರವಾಗಿ ಅಭಿವೃದ್ಧಿಯಾದುವು.
            2012ರಲ್ಲಿ ಎರಡನೇ ಯಂತ್ರಮೇಳವು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭರ ನೇತೃತ್ವದಲ್ಲಿ ಜರುಗಿತ್ತು. ಅಂತರ್ಸಾಗಟಕ್ಕೆ ಹೆಚ್ಚು ಒತ್ತು ನೀಡಿದ ಮೇಳದಲ್ಲಿ ವಿವಿಧ ಕ್ಷಮತೆಯ ಗಾಡಿಗಳು, ಯಾಂತ್ರೀಕೃತ ಗಾಡಿಗಳು, ಮೋಟೊ ಕಾರ್ಟ್ ಗಳು ಕೃಷಿಕರ ಚಿತ್ತವನ್ನು ಗೆದ್ದುವು. ಮಳೆಗಾಲದಲ್ಲಿ ಅಡಿಕೆ ಕೊಳೆ ರೋಗಕ್ಕೆ ಬೋರ್ಡೋ ಸಿಂಪಡಿಸಲು ಯಾಂತ್ರೀಕೃತ ಸಿಂಪಡಣೆಗಳ ಪ್ರವೇಶವಾಯಿತು. ಪವರ್ ಸ್ಪ್ರೇಯರ್ಗಳ ಕ್ಷಮತೆಗಳು ಕೃಷಿಕ ಸ್ವೀಕೃತಿ ಪಡೆಯಿತು. ಒಂದು ಪವರ್ ಸ್ಪ್ರೇಯರಿನಿಂದ ನಾಲ್ಕು ಮಂದಿ ಏಕಕಾಲದಲ್ಲಿ ಸಿಂಪಡಣೆ ಮಾಡಬಹುದಾದ ವ್ಯವಸ್ಥೆಗಳು ಕೃಷಿ ಸಂಕಟಕ್ಕೆ ಚಿಕ್ಕ ಪರಿಹಾರವಾಗಿ ಒದಗಿ ಬಂದುವು.
          "ಕಳೆದೆರಡು ವರುಷಗಳಿಂದ ತೋಟಗಳಲ್ಲಿ ಮಹತ್ತಾದ ಬದಲಾವಣೆ ಕಾಣುತ್ತೇವೆ. ಸಹಾಯಕರು ಕೆಲಸಕ್ಕೆ ಬಾರದಿದ್ದಾಗ ಅಧೀರರಾಗದೆ ಯಜಮಾನನೇ ಕೇರ್ಪು, ಏಣಿಯನ್ನು ಬಳಸಿ ಮರವೇರಿ ಪವರ್ ಸ್ಪ್ರೇಯರ್ನಿಂದ ಬೋರ್ಡೋ ಸಿಂಪಡಿಸುವುದನ್ನು ನೋಡುತ್ತೇವೆ. ಈ ರೀತಿಯ ಧೈರ್ಯ, ಸ್ಥೈರ್ಯ ಕೊಟ್ಟಿರುವುದು ಯಂತ್ರ ಮೇಳಗಳೆಂದು ಹೇಳಲು ಖುಷಿಯಾಗುತ್ತದೆ," ಎನ್ನುತ್ತಾರೆ ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ.
           ಯಂತ್ರಾಸಕ್ತ ಕೃಷಿಕರು ಬೇರೆ ಬೇರೆ ದೇಶಗಳಿಗೆ ಪ್ರವಾಸ ಹೋಗುವಾಗ ಅಲ್ಲಿನ ಯಾಂತ್ರೀಕರಣವನ್ನು ನೋಡುವ ಮನಃಸ್ಥಿತಿ ರೂಪಿತವಾಗಿದೆ. ಇಸ್ರೇಲ್, ಚೀನಾ, ಫಿಲಿಪೈನ್ಸ್ ದೇಶಗಳ ಯಂತ್ರಗಳನ್ನು ಅಭ್ಯಸಿಸಿ, ಅವು ನಮ್ಮ ನೆಲಕ್ಕೆ ಹೇಗೆ ಹೊಂದಬಹುದೆನ್ನುವ ಪರೀಕ್ಷೆಗಳು ನಡೆಯುತ್ತಿವೆ. ಹೊರ ದೇಶಗಳ ಮೋಟೋಕಾರ್ಟ್ ಗಳು ವಿವಿಧ ವಿನ್ಯಾಸಗಳಲ್ಲಿ ನಮ್ಮೂರ ತೋಟ ಹೊಕ್ಕಿವೆ. ಅಲ್ಲಿನ ವಿನ್ಯಾಸವನ್ನು ಅಧ್ಯಯನ ಮಾಡಿದ ತಂತ್ರಜ್ಞರು ತಂತಮ್ಮ ವರ್ಕ್ ಶಾಪಿನಲ್ಲಿ ವಿವಿಧ ಸಾಗಾಟ ಯಂತ್ರಗಳನ್ನು ರೂಪಿಸುತ್ತಿರುವುದು ದೊಡ್ಡ ಹೆಜ್ಜೆ.
           ದೆಹಲಿ, ಪೂನಾ, ಬೆಂಗಳೂರು.. ಮೊದಲಾದೆಡೆ ನಡೆಯುವ ಕಿಸಾನ್ ಮೇಳ, ಯಂತ್ರಮೇಳಗಳತ್ತ ಆಸಕ್ತರಾಗಿ ಯಂತ್ರೋಪಕರಣ, ಕೃಷಿ ಅಭಿವೃದ್ಧಿ, ಬದಲಾವಣೆಗಳನ್ನು ನೋಡುವ ಅಭ್ಯಾಸ ಬಹುತೇಕರಲ್ಲಿ ರೂಢಿಯಾಗಿದೆ. ಕೃಷಿಕ ಸಂಕಟಗಳನ್ನು ಪರಸ್ಪರ ಹಂಚಿಕೊಂಡು, ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವ ರೈತಜಾಣ್ಮೆಗಳು ಅಪ್ಡೇಟ್ ಆಗುತ್ತಿವೆ.   ಇಂಜಿನಿಯರಿಂಗ್ ವಿದ್ಯಾರ್ಥಿಗಳು ಆವಿಷ್ಕರಿಸಿದ ಯಂತ್ರಗಳ ಪ್ರದರ್ಶನಗಳಿಗೆ ಮೇಳದಲ್ಲಿ ಅನುವು ಮಾಡಿದೆ.
ಈಗ ಮೂರನೇ ಯಂತ್ರಮೇಳ ಸಂಪನ್ನವಾಗುತ್ತಿದೆ. ಕಳೆದೆರಡು ಮೇಳಗಳು ಹಬ್ಬಿಸಿದ ಯಂತ್ರಗಳ ಅರಿವು ಮೂರನೇ ಮೇಳದಲ್ಲಿ ಮಿಳಿತವಾಗಿ, ಕೃಷಿ ಸಂಕಟಗಳ ಪರಿಹಾರಕ್ಕೆ ಹೊಸ ಹಾದಿ ಕಂಡುಕೊಳ್ಳಲು ಸಹಕಾರಿ.

Tuesday, January 13, 2015

"ರೋಗನಿರೋಧಕ ಶಕ್ತಿವರ್ಧನೆಗೆ ಸೊಪ್ಪುಗಳನ್ನು ಬಳಸಿ" - ಡಾ.ಸರಿತಾ ಹೆಗಡೆ

                   ಕೆಸುವಿನ ಪ್ರಬೇಧ 'ತಳ್ಳಿಚೇವು'ವಿನಿಂದ ಮಾಡಿದ ಮೊರಬ್ಬವನ್ನು ಹಂಚುವುದರ ಮೂಲಕ ಉದ್ಘಾಟನೆ.
                                        ನಾ. ಕಾರಂತ ಪೆರಾಜೆ ಸಂಪಾದಕತ್ವದ ವಾರ್ತಾಪತ್ರ ಬಿಡುಗಡೆ


              "ಪಾರಂಪರಿಕ ಆಹಾರಗಳು ಮರೆಯಾಗುತ್ತಿವೆ. ವಿವಿಧ ಬಗೆಯ ಸೊಪ್ಪುಗಳನ್ನು ಔಷಧೀಯ ಉದ್ದೇಶಕ್ಕಾಗಿ ಖಾದ್ಯಗಳನ್ನಾಗಿ ಮಾಡುವ ಸಂಪ್ರದಾಯವನ್ನು ಆಧುನಿಕ ಜೀವನ ಪದ್ಧತಿ ಕಸಿದುಕೊಂಡಿದೆ. ವಿಷಯುಕ್ತ ಆಹಾರಗಳು ಸ್ವಾಸ್ಥ್ಯಬದುಕಿಗೆ ಮಾರಕವಾಗಿದೆ. ಹಳ್ಳಿಯ ಉತ್ಪನ್ನಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆಗೊಳಿಸುವ ಕನಿಷ್ಠ ಜ್ಞಾನವನ್ನು ಹಳ್ಳಿಯಲ್ಲಿಯೇ ಪರಿಚಯಿಸುವ ಅಗತ್ಯವಿದೆ," ಎಂದು ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ಡಾ.ಸರಿತಾ ಹೆಗ್ಡೆ ಹೇಳಿದರು.
                ಅವರು ಜನವರಿ 11ರಂದು ವಿಟ್ಲ-ಅಳಿಕೆ ಸನಿಹದ ಮುಳಿಯ ಶಾಲೆಯಲ್ಲಿ ಜರುಗಿದ 'ಊಟಕ್ಕಿರಲಿ, ಸೊಪ್ಪು ತರಕಾರಿ' ಕಾರ್ಯಾಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, "ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾತ್ರೆಗಳ ಬಳಕೆಯ ಬದಲಿಗೆ ಸೊಪ್ಪುಗಳನ್ನು ಬಳಸುವ ಪರಿಪಾಠ ಶುರುವಾಗಬೇಕು," ಎಂದರು. ಕೆಸುವಿನ ಪ್ರಬೇಧ 'ತಳ್ಳಿಚೇವು'ವಿನಿಂದ ಮಾಡಿದ ಮೊರಬ್ಬವನ್ನು ಸಭಿಕರಿಗೆ ಹಂಚುವುದರ ಮೂಲಕ ವಿಶಿಷ್ಟವಾಗಿ ಕಾರ್ಯಾಗಾರವನ್ನು ಉದ್ಘಾಟಿಸಿದ್ದರು.
            ಕೇಪು-ಉಬರು ಹಲಸು ಸ್ನೇಹಿ ಕೂಟವು ಆಯೋಜಿಸಿದ ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕ ಡಾ.ಕೆ.ಎಸ್.ಕಾಮತ್ ಕರಿಂಗಾಣ ಅಧ್ಯಕ್ಷತೆ ವಹಿಸಿ, ವಾರ್ತಾಾಪತ್ರವನ್ನು ಬಿಡುಗಡೆಗೊಳಿಸಿದರು. ವಿಟ್ಲ ರೋಟರಿ ಕ್ಲಬ್ಬಿನ ನಿಯೋಜಿತ ಅಧ್ಯಕ್ಷ ಅಬೂಬಕರ್ ಮುಖ್ಯ ಅತಿಥಿ ಸ್ಥಾನದಿಂದ ಸೋದಾಹರಣವಾಗಿ ಮಾತನಾಡಿದರು. ವೇದಿಕೆಯಲ್ಲಿ ಹಲಸು ಸ್ನೇಹಿ ಕೂಟದ ವರ್ಮುುಡಿ ಶಿವಪ್ರಸಾದ್ ಉಪಸ್ಥಿತರಿದ್ದರು.
            ಅಂಕಣಗಾರ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಶ್ರೀಮತಿ ವಿನುತ ರವಿ ಮುಳಿಯ ಪ್ರಾರ್ಥನೆಗೈದರು. ವಸಂತ ಕಜೆ ಮಂಚಿ ಪ್ರಸ್ತಾವನೆಗೈದರು. ಬೈಂಕ್ರೋಡು ಗಿರೀಶ ವಂದಿಸಿದರು. ಉಬರು ರಾಜಗೋಪಾಲ ಭಟ್, ಶಿರಂಕಲ್ಲು ನಾರಾಯಣ ಭಟ್, ಬೈಂಕ್ರೋಡು ವೆಂಕಟಕೃಷ್ಣ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಜನಹಿತ ಅಳಿಕೆ, ರೋಟರಿ ಕ್ಲಬ್ ವಿಟ್ಲ ಸಂಸ್ಥೆಗಳು ಕಾರ್ಯಕ್ರಮಕ್ಕೆ ಕೈಜೋಡಿಸಿದ್ದುವು.
              ಈಶ್ವರಮಂಗಲದ ವೈದ್ಯ ಡಾ.ಶ್ರೀಕುಮಾರ್, ಆಶಾ ಶ್ರೀಕುಮಾರ್ ಸೊಪ್ಪುಗಳ ವಿವಿಧ ಖಾದ್ಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ಮಾಡಿ ತೋರಿಸಿದರು. ಸೊಪ್ಪುಗಳ ಆಹಾರ ಮತ್ತು ಔಷಧೀಯ ಗುಣಗಳ ಕುರಿತು ಉಡುಪಿಯ ಡಾ.ಸಾವಿತ್ರಿ ದೈತೋಟ ಮಾಹಿತಿ ನೀಡಿದರು. ಉಕ್ಕಿನಡ್ಕ ಸಹಸ್ರಾಕ್ಷ ವೈದ್ಯಶಾಲಾದ ಮುಖ್ಯಸ್ಥ ಡಾ.ಜಯಗೋವಿಂದ ಇವರು ಬದುಕಿನೊಂದಿಗೆ ಮಿಳಿತವಾಗಲೇಬೇಕಾದ ಸೊಪ್ಪುಗಳ ವೈಜ್ಞಾನಿಕ, ಔಷಧೀಯ ಮಾಹಿತಿಯನ್ನು ಪವರ್ಪಾಯಿಂಟ್ ಪ್ರಸ್ತುತಿಯ ಮೂಲಕ ವಿವರಿಸಿದರು. ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆ ಸಮಾರೋಪ ಭಾಷಣ ಮಾಡಿದರು.
               ಹಲಸು ಸ್ನೇಹಿ ಕೂಟದ ಕಡಂಬಿಲ ಕೃಷ್ಣಪ್ರಸಾದ್ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಮುಳಿಯ ವೆಂಕಟಕೃಷ್ಣ ಶರ್ಮ ವಂದಿಸಿದರು. ಮಧ್ಯಾಹ್ನದ ಭೋಜನಕ್ಕೆ ವಿವಿಧ ಸೊಪ್ಪುಗಳ ಖಾದ್ಯ ವೈವಿಧ್ಯಗಳಿದ್ದುವು. ನೂರಕ್ಕೂ ಮಿಕ್ಕಿ ಅಡುಗೆ, ಔಷಧೀಯ ಸಸ್ಯಗಳ ಪ್ರದರ್ಶನವು ಗಮನ ಸೆಳೆಯಿತು.

Friday, January 9, 2015

ಊಟಕ್ಕಿರಲಿ, ಸೊಪ್ಪು ತರಕಾರಿ


               ಊಟದ ತಟ್ಟೆಯಲ್ಲಿ ಬಗೆಬಗೆಯ ಸೊಪ್ಪುಗಳ ಖಾದ್ಯಗಳ ಸಂಪನ್ನತೆಯ ದಿವಸಗಳಿದ್ದುವು ಎನ್ನಲು ವಿಷಾದವಾಗುತ್ತದೆ.
             ಯಾವಾಗ ಪ್ರಕೃತಿದತ್ತವಾದ ಸೊಪ್ಪು, ಗೆಡ್ಡೆ, ಕಾಯಿ, ಹಣ್ಣುಗಳ ಬಳಕೆಗಳು ಬದುಕಿನಿಂದ ದೂರವಾಯಿತೋ ಅಂದಿನಿಂದ ವಿವಿಧ ರೋಗಗಳ ಪ್ರವೇಶಗಳಿಗೆ ರತ್ನಗಂಬಳಿ ಹಾಸಿದೆವು. ಪರಿಣಾಮ ಊಹಿಸಲು  ದೂರ ಹೋಗಬೇಕಾಗಿಲ್ಲ. ಮೆಡಿಕಲ್ ಶಾಪ್ಗಳ ಮುಂದೆ ಮಾತ್ರೆಗಳಿಗಾಗಿ ನಿಲ್ಲುವ ಕ್ಯೂ ಸಾಕ್ಷಿ ಹೇಳುತ್ತದೆ.
              ಹಿತ್ತಿಲಿನಲ್ಲಿ ಅಡ್ಡಾಡಿದರೆ ಸಾಕು, ಹತ್ತಾರು ವಿಧದ ಸಸ್ಯಗಳ ಕುಡಿಗಳು ಚಟ್ನಿಗೋ, ತಂಬುಳಿಗೋ, ಪಲ್ಯಕ್ಕೋ ಯಥೇಷ್ಟ ಸಿಗುತ್ತದೆ. ಅದನ್ನು ಗುರುತು ಹಿಡಿಯುವ, ಬಳಕೆಯ ವಿಧಾನ ತಿಳಿದಿರಬೇಕಷ್ಟೇ. ಒಂದೊಂದು ಕುಡಿಯಲ್ಲೂ ಔಷಧೀಯ ಗುಣಗಳಿರುವುದರಿಂದ ಆಹಾರವೇ ಔಷಧಿಯಾಗುತ್ತದೆ. ಆದರೆ ಈಗ ಔಷಧಿಯೇ ಆಹಾರ!
              ಹಸಿರನ್ನೆಲ್ಲಾ ಕಳೆಯೆಂದು ತಿಳಿವ ಕಾಲಘಟ್ಟದಲ್ಲಿದ್ದೇವೆ. ವಿಷಕಾರಕವಾದ ಸಿಂಪಡಣೆಗಳು ವಿವಿಧ ರೋಗಕ್ಕೆ ಆಹ್ವಾನ ನೀಡುತ್ತಿವೆ. ದೇಹಕ್ಕೆ ವಿಟಮಿನ್ಗಳನ್ನು ನೀಡುವ ಸೊಪ್ಪುಗಳು ಬಟ್ಟಲಿನಿಂದ ದೂರವಾಗಿವೆ. ವರುಷಕ್ಕೊಮ್ಮೆ ಆಹಾರೋತ್ಸವ ಮಾಡಿ ಅದರಲ್ಲಿ ಪಾರಂಪರಿಕ ಖಾದ್ಯಗಳನ್ನು ಮಾಡಿ ಪ್ರದರ್ಶನವಿಟ್ಟು ಹೊಟ್ಟೆಗಿಳಿಸುವುದರಲ್ಲಿ ಆನಂದ, ಸಾರ್ಥಕ ಅನುಭವಿಸುತ್ತಿದ್ದೇವೆ.
               ಸುಲಭವಾಗಿ ಬೆಳೆಯಬಹುದಾದ ಬಸಳೆ, ಕ್ರೋಟಾನ್ ಹರಿವೆ, ಕೆಂಪು-ಹಸಿರು ಹರಿವೆ, ನೆಲ ಬಸಳೆ.. ಮುಂತಾದ ಸೊಪ್ಪುಗಳನ್ನು ಬೆಳೆಸಲು ಎಕ್ರೆಗಟ್ಟಲೆ ಜಾಗ ಬೇಡ. ಚಕ್ರಮುನಿ, ಕೆಸು, ನುಗ್ಗೆ, ಪುಳಿಚ್ಚಪ್ಪು, ಓಟೆಹುಳಿ ಸೊಪ್ಪು, ಒಂದೆಲಗ, ಕೊತ್ತಂಬರಿ ಸೊಪ್ಪು, ದೊಡ್ಡ ಪತ್ರೆ, ಚಕ್ಕೋತ ಸೊಪ್ಪು, ನೀರ್ಪಂತಿ, ಪುದಿನ, ಮೆಂತೆ.. ಹೀಗೆ ಹತ್ತಾರು ಸೊಪ್ಪುಗಳು ಆಗಾಗ್ಗೆ ಅನ್ನದ ಬಟ್ಟಲಿಗೆ ಬರಬೇಕು. ಇದಕ್ಕಾಗಿ ಮೊದಲು ಮನಸ್ಸಿನಲ್ಲಿ ಜಾಗ ಕೊಡಿ, ಆಗ ಹಿತ್ತಿಲಿನಲ್ಲಿ ಬೆಳೆಯುವ, ಬೆಳೆಸುವ ಜಾಗ ಗೋಚರಿಸುತ್ತದೆ. ನಿವರ್ಿಷವಾಗಿ ಬೆಳೆಯುವ ಇಂತಹ ಸೊಪ್ಪುಗಳಿಂದ ಆರೋಗ್ಯ-ಭಾಗ್ಯ.
               ಗ್ರಾಮೀಣ ಪ್ರದೇಶದ ಅಡುಗೆ ಮನೆಯಲ್ಲಿ ತಂಬುಳಿಗಳಿಗೆ ಪ್ರತ್ಯೇಕ ಮಣೆ. ತಂಬುಳಿ ಅಂದರೆ ತಂಪು ಹುಳಿ ಎಂದರ್ಥ. ಬ್ರಾಹ್ಮಿ, ನೆಲ್ಲಿ, ಮೊದಲಾದ ಹಸಿರೆಲೆಗಳಿಂದ ಸಿದ್ಧಪಡಿಸುವ ತಂಬುಳಿ ಮಿಳಿತವಾದ ಮೊದಲ ತುತ್ತು ಉದರಾಗ್ನಿಯನ್ನು ಶಮನಗೊಳಿಸುವ ಆಜ್ಯ. ದೇಹದ ಉಷ್ಣತೆಯನ್ನು ಸಮತೋಲನಗೊಳಿಸುವ ತಾಕತ್ತು ತಂಬುಳಿಗಿದೆ. ಬಸಳೆಯ ಪದಾರ್ಥ ಜನಪ್ರಿಯ. ನಮ್ಮ ಹಿರಿಯರ ಬದುಕಿನಲ್ಲಿ ತೊಂಡೆ ಮತ್ತು ಬಸಳೆಯ ಚಪ್ಪರಗಳು ಮನೆಯ ಹಿಂಬದಿಯಲ್ಲೋ, ತೋಟದಲ್ಲೋ ಇರುತ್ತಿತ್ತು. ಯಾಕೆಂದರೆ ಇದು ಆಪದ್ಭಾಂಧವ.
                 ಪಾಣಾಜೆಯ (ದ.ಕ.) ಗೃಹಿಣಿ ಜಯಲಕ್ಷ್ಮೀ ದೈತೋಟ ಹೇಳುತ್ತಾರೆ, "ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಪ್ರಕೃತಿಯು ಸಾಕಷ್ಟು ಸಂಪನ್ಮೂಲಗಳನ್ನು ನೀಡಿದೆ. ಅದನ್ನು ಗುರುತಿಸುವ ಜಾಣ್ಮೆಯನ್ನು ನಾವೇ ರೂಢಿಸಿಕೊಳ್ಳಬೇಕು. ಆಹಾರವೇ ಔಷಧಿಯಾಗಬೇಕು. ಹಿತ್ತಿಲಿನ ಧನ್ವಂತರಿಯನ್ನು ಮರೆತು ನಗರದಲ್ಲಿ ಸಿಗುವ ವಿಷಸಿಂಪಡಿತ ತರಕಾರಿಯನ್ನು ಹೊಟ್ಟೆಗಿಳಿಸುತ್ತೇವೆ. ನಗರದವರಿಗೆ ಅನಿವಾರ್ಯ. ಆದರೆ ಹಳ್ಳಿ, ಗ್ರಾಮೀಣ ಪ್ರದೇಶದವರೂ ಕೂಡಾ ಪೇಟೆಯಿಂದ ತರಕಾರಿ ತರುವುದು ನಿಜಕ್ಕೂ ನಾಚಿಕೆ." ಜಯಕ್ಕನ ಮಾತಲ್ಲಿ ಸತ್ಯವಿಲ್ವಾ. ಅರ್ಧ ಕಿಲೋ ಟೊಮೆಟೊವನ್ನು ಕೈಯಲ್ಲಿ ತೂಗಿಸಿಕೊಂಡು ಮನೆಗೆ ಬರುವುದೇ ನಮ್ಮ ಸ್ಟೇಟಸ್ ಆಗಿದೆ.
              ಬಂಟ್ವಾಳ ತಾಲೂಕು (ದ.ಕ.) ಉಬರಿನ ಹಲಸು ಸ್ನೇಹಿ ಕೂಟವು ಇಂತಹ ಮರೆಯುತ್ತಿರುವ ಖಾದ್ಯಗಳನ್ನು ನೆನಪಿಸುವ ಜಾಗೃತಿ ಕಾರ್ಯಕ್ರಮವನ್ನು ಕಳೆದೈದು ವರುಷದಿಂದ ಮಾಡುತ್ತಿದೆ. ಇದೇ ೨೦೧೫ ಜನವರಿ 11ರಂದು ವಿಟ್ಲ ಸನಿಹದ ಅಳಿಕೆಯ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಶಾಲೆಯಲ್ಲಿ ಒಂದು ದಿವಸದ 'ಊಟಕ್ಕಿರಲಿ ಸೊಪ್ಪು ತರಕಾರಿ' ಎನ್ನುವ ಕಾರ್ಯಾಗಾರವನ್ನು ಏರ್ಪಡಿಸಿದೆ. ಊಟದ ತಟ್ಟೆಗೆ ವಿಧವಿಧದ ಸೊಪ್ಪನ್ನು ಖಾದ್ಯ ಮೂಲಕ ಉಣಿಸಲಿದೆ. ಇದರ ಔಷಧೀಯ ವಿಚಾರಗಳನ್ನು ತಿಳಿಸಲಿದೆ. ಖರ್ಚು  ವೆಚ್ಚಗಳನ್ನು ಸರಿಸಮಗೊಳಿಸಲು ಶುಲ್ಕ ನಿಗದಿಪಡಿಸಿದೆ. ವ್ಯವಸ್ಥೆಯ ಅನುಕೂಲಕ್ಕಾಗಿ ಮೊದಲೇ ತಿಳಿಸಿ ನೋಂದಾಯಿಸಿದವರಿಗೆ ಆದ್ಯತೆ. (ವೆಂಕಟಕೃಷ್ಣ ಶರ್ಮ : 94802 00832)
                 ಹಲಸು ಸ್ನೇಹಿ ಕೂಟವು ತರಕಾರಿ ಹಬ್ಬ, ಹಲಸು ಹಬ್ಬ, ಮಾವಿನ ಹಬ್ಬ, ಗೆಡ್ಡೆ ತರಕಾರಿ ಹಬ್ಬ, ಸಿರಿಧಾನ್ಯದಡುಗೆ.. ಹೀಗೆ ನಿರ್ವಿಷ ಆಹಾರವನ್ನು ಬದುಕಿನಲ್ಲಿ ಮಿಳಿತಗೊಳಿಸುವ ಅರಿವಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ಸಾಗಿದೆ. ಈಗ ಸೊಪ್ಪು ತರಕಾರಿಗಳ ಸರದಿ. ಇದಕ್ಕಾಗಿ ಕಳೆದೆರಡು ತಿಂಗಳುಗಳಿಂದ ವಿವಿಧ ಸೊಪ್ಪುಗಳನ್ನು ಬೆಳೆಸುವ ಕೆಲಸವನ್ನು ಹಲಸು ಸ್ನೇಹಿ ಕೂಟದ ಸದಸ್ಯರು ಮಾಡುತ್ತಿದ್ದಾರೆ. 

Agri Machinery Fair _ III _ 2015 _ InvitationThursday, January 8, 2015

ಕೃಷಿ ಸಂಕಟಗಳಿಗೆ ಪರಿಹಾರದ ಮಿಣುಕು

          "ಅಮೆರಿಕಕ್ಕೆ ಸೇರಿದ ಹವಾಯಿಯಲ್ಲಿ ಒಂದು ಗಂಟೆಯ ಕೃಷಿ ಶ್ರಮಕ್ಕೆ ಹದಿನೈದು ಡಾಲರ್ ವೇತನವಿದೆ. ಹೆಚ್ಚು ಬಿಸಿಲಿನಲ್ಲಿ, ಮೈಹುಡಿ ಮಾಡಿದ ದುಡಿತಕ್ಕೆ ನಗರದಲ್ಲಿ ಗಂಟೆಗೆ ಹದಿನೆಂಟು ಡಾಲರ್ ತನಕವೂ ವೇತನ ನಡೆಯುತ್ತದೆ"- ತಿಂಗಳ ಹಿಂದೆ ಕನ್ನಾಡಿಗೆ ಬಂದ ಹಣ್ಣು ಕೃಷಿಕ ಕೆನ್ ಲವ್ ತಮ್ಮೂರಿನ ಕೃಷಿ, ಕಾರ್ಮಿಕರ ಸಮಸ್ಯೆಯ ಎಳೆಯನ್ನು ಬಿಚ್ಚಿಟ್ಟ ಬಗೆ. ಅಬ್ಬಾ... ಹದಿನೈದು ಡಾಲರ್! ಅಂದರೆ ಸುಮಾರು ಸಾವಿರ ರೂಪಾಯಿ. ಸದ್ಯ ನಮ್ಮಲ್ಲಿ ಕೃಷಿ ಕೆಲಸಗಳ ಸಹಾಯಕರಿಗೆ (ಕಾರ್ಮಿಕರಿಗೆ) ಚಲಾವಣೆಯಲ್ಲಿರುವ 'ಎರಡು ದಿವಸ'ದ ವೇತನ ಎಂದಿಟ್ಟುಕೊಳ್ಳೋಣ.
           "ಒಂದು ಕಾಲಘಟ್ಟದಲ್ಲಿ ನಮ್ಮ ತೋಟದಲ್ಲಿ ಕೃಷಿ ವೈವಿಧ್ಯವಿತ್ತು. ಅದನ್ನು ನಿರ್ವಹಿಸಲು ಇನ್ನೂರು ಮಂದಿ ಕೆಲಸಗಾರರಿದ್ದರು. ಈಗ ಇಪ್ಪತ್ತು ಮಂದಿಯನ್ನು ಹೊಂದಿಸಲು ತ್ರಾಸಪಡಬೇಕಾಗುತ್ತದೆ," ಎನ್ನುತ್ತಾರೆ ಪುತ್ತೂರಿನ ಕೃಷಿಕ ಸೇಡಿಯಾಪು ಜನಾರ್ದನ ಭಟ್. ಕಾರ್ಮಿಕರ ಕೊರತೆಯಿಂದಾಗಿ ಕೃಷಿಗೆ ಸಂಕಟ. ಕಾಲಕಾಲಕ್ಕೆ ನಿರ್ವಹಣೆ ಬೇಡುವ ಕೆಲಸಗಳು ಆಗಬೇಕಾದುದು ಅಗತ್ಯ. ಸ್ವಲ್ಪ ವ್ಯತ್ಯಯಗೊಂಡರೂ ಫಸಲಿನ ಮೇಲೆ ಹೊಡೆತ. ಒಟ್ಟೂ ವ್ಯವಸ್ಥೆಗಳು ಬುಡಮೇಲು. ಬಹುತೇಕ ಅವಲಂಬನಾ ಕೆಲಸವಾದ್ದರಿಂದ ಸಹಾಯಕರನ್ನು ಅವಲಂಬಿಸಿಯೇ ಕರಾವಳಿ, ಮಲೆನಾಡಿನ ಕೃಷಿಕಾರ್ಯಗಳು ಉಸಿರಾಡುತ್ತಿವೆ.
              ಉತ್ತರ ಕರ್ನಾಾಟಕದ ಹೊಲಕ್ಕೆ ಕಾಲಿಟ್ಟರೆ ಯಜಮಾನನೊಂದಿಗೆ ಕುಟುಂಬವೇ ದುಡಿಯುವುದನ್ನು ಕಾಣಬಹುದು. ಬೆಳ್ಳಂಬೆಳಿಗ್ಗೆ ಹೊಲ ಪ್ರವೇಶಿಸಿದರೆ ಸೂರ್ಯಾಸ್ತದ ಬಳಿಕವೇ ಮನೆಕಡೆ ಮುಖ ಮಾಡುವ ಶ್ರಮಿಕರು ಎಂದೂ ಸಹಾಯಕರನ್ನು ನೆಚ್ಚಿಕೊಂಡಿಲ್ಲ. ಅಲ್ಲೋ ಇಲ್ಲೋ ಪರಸ್ಪರ ಶ್ರಮ ವಿನಿಮಯದ ಮೂಲಕ ಕೆಲಸಗಳನ್ನು ಹಗುರಗೊಳಿಸುತ್ತಿರುವುದು ಕಾಣಬಹುದು.
              ಕೆಲವು ವರುಷದ ಹಿಂದೆ ಧಾರವಾಡ, ಬೆಳಗಾವಿ, ಬಿಜಾಪುರ.. ಮೊದಲಾದ ಪ್ರದೇಶಗಳಲ್ಲಿ ಮಳೆ ಕೈಕೊಟಾಗ ಕೃಷಿಕರು ಗುಳೆ ಹೋದರು. ಹಲವಾರು ಮಂದಿ ಕರಾವಳಿಯ ತೋಟಗಳಲ್ಲಿ ಕೆಲಸ ಕಲಿತು ಹೊಟ್ಟೆಪಾಡಿಗಾಗಿ ದುಡಿದರು. ಇವರನ್ನು ಒದಗಿಸಲು ದಲ್ಲಾಳಿಗಳು ಹುಟ್ಟಿಕೊಂಡರು! ಎಷ್ಟು ಮಂದಿ ಸಹಾಯಕರು ಬೇಕೆಂಬ ಲೆಕ್ಕದಲ್ಲಿ ವಾಹನದಲ್ಲಿ ಕರೆದುಕೊಂಡು ಹೋಗಿ, ಸಂಜೆ ಮರುಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಂಡರೆ ಆಯಿತು. ಈಗೆಲ್ಲವೂ ತಿರುಗುಮುರುಗು. ಮಳೆ ಬಂದಿದೆ. ಕಾಳು ಕೈಯಲ್ಲಿದೆ. ಮತ್ಯಾಕೆ ಇನ್ನೊಬ್ಬರ ಹೊಲದ ದುಡಿತ!
              ಕೃಷಿ ಕೆಲಸಗಳ ಜಾಣ್ಮೆ ಅಪ್ಪನಲ್ಲೆ ಉಳಿಯಿತು. ಮಗನಿಗೆ ಶಾಲೆಯ ಓದು. ಬಾಲ್ಯದಲ್ಲಿ ಅಪ್ಪನ ದುಡಿತದ ಕಷ್ಟಗಳ ಅರಿವಿದ್ದ ಮಗನಿಗೆ ಆ ಉದ್ಯೋಗದಲ್ಲಿ ಭರವಸೆಯಿಲ್ಲ. ಕೆಲವರನ್ನು ನಗರ ಸೆಳೆಯಿತು. ಇನ್ನೂ ಕೆಲವರನ್ನು ಹೆತ್ತವರೇ ತಳ್ಳಿದರು. ಹಳ್ಳಿಯ ಪಗಾರಕ್ಕಿಂತ ಕಡಿಮೆ ಸಿಕ್ಕರೂ ಬಸ್ಸಿನಲ್ಲಿ ಬಂದ ಹೋಗುವ ಖುಷಿ.  ಹಳ್ಳಿಯಲ್ಲಿ ಶ್ರಮಿಕ ವರ್ಗ ಕರಗುತ್ತಿದ್ದಂತೆ, ತೋಟದ ವ್ಯವಸ್ಥೆಗಳು ನಲುಗಲು ಆರಂಭವಾಗಿ ಒಂದೂವರೆ-ಎರಡು ದಶಕ ಮೀರಿತು. ಈಚೆಗಿನ ಕೆಲವು ವರುಷಗಳಿಂದ ಕೃಷಿ ಕೆಲಸಗಳಿಗೆ ಪರ್ಯಾಾಯ ವ್ಯವಸ್ಥೆಗಳು ಅಲ್ಲಿಲ್ಲಿ ತಲೆಎತ್ತಿವೆ. ಚಿಕ್ಕಪುಟ್ಟ ಕೆಲಸಗಳಿಗೆ ಯಂತ್ರಗಳು, ಸಾಧನಗಳು ಸಬ್ಸಿಡಿಯಲ್ಲಿ ದೊರೆತುವು. ಅವೆಷ್ಟು ಬಳಕೆಯಾಗುತ್ತಿವೆ ಎನ್ನುವುದು ಬೇರೆ ಮಾತು. ಜವ್ವನವಿರುವಾಗಲೇ ಕೃಷಿಯನ್ನು ಹೊಣೆಗೇರಿಸಿಕೊಂಡ ಯುವಕರು ಜಾಣ್ಮೆಯ ಮೂಲಕ ಕೆಲಸಗಳನ್ನು ಹಗುರ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು.
               ದಕ್ಷಿಣ ಕನ್ನಡ ಜಿಲ್ಲೆಯ ಕನ್ಯಾನ ಸನಿಹದ ಆನೆಕಲ್ಲು ಸುಳ್ಳಿಮೂಲೆಯ ಸದಾಶಿವರಲ್ಲಿ ಹತ್ತು ಮಂದಿಯ ಟೀಮ್ ಇದೆ. ಎಲ್ಲರೂ ಒಂದೇ ಕುಟುಂಬದ ಸದಸ್ಯರು.  ಕೃಷಿ ಕೆಲಸಗಳಲ್ಲಿ ಪ್ರವೀಣರು. ಮೂವತ್ತರೊಳಗಿನ ಹೊಂತಕಾರಿಗಳು. ಇವರಿಗೆ ತಂತಮ್ಮ ತೋಟಗಳಲ್ಲಿ ದುಡಿದ ಅನುಭವವಿದೆ. ಸದಾಶಿವ ತಂಡ ಕೆಲಸದ  ಸರಂಜಾಮಿನೊಂದಿಗೆ ತೋಟಕ್ಕಿಳಿಯುವಾಗಲೇ ಮೊಬೈಲ್ ಆಫ್. ಕಾಡುಹರಟೆಯಿಲ್ಲ. ಲೋಕದ ಸುದ್ದಿಯಿಲ್ಲ. ಕೊಳಕು ರಾಜಕೀಯದ ಮಾತುಕತೆಯಿಲ್ಲ. ಕಾಫಿ, ಊಟಕ್ಕೆ ಬ್ರೇಕ್. ಬೆಳಿಗ್ಗೆ ಒಂಭತ್ತರಿಂದ ಸಂಜೆ ಐದು ಗಂಟೆಯ ತನಕ ಅವಿರತ ಕೆಲಸ. ತಂಡದಲ್ಲಿ ಮದ್ಯಪಾನಿಗಳಿಲ್ಲ. ಯಾರು ಯಾವ ಕೆಲಸ ಮಾಡಬೇಕೆನ್ನುವುದು ಸದಾಶಿವರ ನಿರ್ದೇಶನದಂತೆ ನಡೆಯುತ್ತದೆ.
                 ನವೆಂಬರಿನಿಂದ ಫೆಬ್ರವರಿ ತನಕ ಅಡಿಕೆ ಕೊಯ್ಲಿನ ಕೆಲಸ. ಮಳೆಗಾಲದಲ್ಲಿ ಅಡಿಕೆ ಮರಗಳಿಗೆ ಬೋರ್ಡೋ ದ್ರಾವಣ ಸಿಂಪಡಣೆ. ಮಳೆಯಿಂದಾಗಿ ಸಿಂಪಡಣೆ ಕೆಲಸ ನಿಂತಾಗ ತೋಟದ ಇತರ ಕೆಲಸಗಳಿಗೂ ಬಳಸಿಕೊಳ್ಳಬಹುದು. ಕೆಲಸ ಮುಗಿದ ತಕ್ಷಣ ಲೆಕ್ಕ ಚುಕ್ತಾ.    ತನ್ನೂರಿನ ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯೊಳಗೆ ಸದಾಶಿವ ತಂಡ ವರುಷಪೂರ್ತಿ ದುಡಿಯುತ್ತದೆ. ಹಳ್ಳಿಯಲ್ಲಿ ದುಡಿದರೆ ಹನ್ನೆರಡು ತಿಂಗಳೂ ಕೆಲಸವಿದೆ. ಕೇವಲ ಕೆಲಸಕ್ಕಾಗಿಯೇ ನಗರಕ್ಕೆ ಹೋಗುವುದು ಅರ್ಥಶೂನ್ಯ. ನಗರಕ್ಕಿಂತ ಹೆಚ್ಚು ನಮ್ಮ ತಂಡ ದುಡಿಯುತ್ತದೆ - ಎನ್ನುವುದು ಸದಾಶಿವರ ವಿಶ್ವಾಸದ ಮಾತು.
              ಇತ್ತ ತೀರ್ಥಹಳ್ಳಿ ಸುತ್ತಮುತ್ತ ಮಳೆಗಾಲದಲ್ಲಿ ಅಡಿಕೆ ಗೊನೆಗಳಿಗೆ ಬೋರ್ಡೋ ಸಿಂಪಡಿಸುವ 'ಜಾಬ್ ವರ್ಕ್’  ತಂಡ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಮರ ಏರಿ ಮದ್ದು ಸಿಂಪಡಿಸುವ ಕೌಶಲ, ಅನುಭವ, ದೇಹಶ್ರಮವಿರುವ ಟೀಮ್ನಿಂದಾಗಿ ಅಡಿಕೆ ತೋಟದ ಕೆಲಸಗಳು ಸಕಾಲಕ್ಕೆ ನಡೆಯುತ್ತಿವೆ. ಇಂತಹ ಕೆಲಸಗಳಿಗೆ ಹೊಸಬರನ್ನು ಪ್ರೇರೇಪಿಸಲು ಸಂಘಸಂಸ್ಥೆಗಳು ಸಿಂಪಡನಾ ತರಬೇತಿ ನೀಡುವಂತಾಗಬೇಕು. ಜಾಬ್ ವರ್ಕ್ ತಂಡಗಳಿಗೆ ಪರಿಕರಗಳ ಖರೀದಿಗೆ ಬ್ಯಾಂಕ್, ಸಹಕಾರಿ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು.
               ಕಾಯಕಷ್ಟವನ್ನು ಬೇಡುವ ಅಡಿಕೆ ಕೊಯ್ಲು ಕೆಲಸಕ್ಕೆ ತಮಿಳುನಾಡಿನ ಕೃಷಿಕ-ಉದ್ಯಮಿ ನಟರಾಜನ್ ಹೊಸ ಹಾದಿ ಕಂಡುಕೊಂಡಿದ್ದಾರೆ. ಅಡಿಕೆ ಕೊಯ್ಯುವ ಉಪಕರಣವನ್ನು ತನ್ನ ಕಾರ್ಯಾಗಾರದಲ್ಲಿ ನಿರ್ಮಿಸಿ ಹೆಣ್ಮಕ್ಕಳ ಮೂಲಕ ಅಡಿಕೆ ಕೊಯ್ಲು ಮಾಡಿ ಯಶ ಕಂಡವರು. ಕೇರಳದಲ್ಲಿ ತೆಂಗು ಅಭಿವೃದ್ಧಿ ಮಂಡಳಿಯು ಮಹಿಳೆಯರೂ ಸೇರಿದಂತೆ ಎಳೆಯರಿಗೆ ತೆಂಗಿನ ಮರವೇರುವ ತರಬೇತಿ ನೀಡುತ್ತಿದೆ. ಬಹುತೇಕ ಮಂದಿ ಮರವೇರಿ ತೆಂಗು ಕೊಯಿಲಿನ ವೃತ್ತಿ ಮಾಡುವಷ್ಟು ನಿಪುಣೆಯರಾಗಿದ್ದಾರೆ. 'ತೆಂಗಿನ ಮರದ ಗೆಳೆಯರು' (ಫ್ರೆಂಡ್ಸ್ ಆಫ್ ಕೊಕೊನಟ್ ಟ್ರೀಸ್) ಎಂಬ ತಂಡಗಳು ರೂಪುಗೊಂಡಿವೆ. ಇದನ್ನು ಅಧ್ಯಯನ ಮಾಡಿದ ಹಿರಿಯ ಪತ್ರಕರ್ತ ಶ್ರೀ ಪಡ್ರೆ ಹೇಳುತ್ತಾರೆ, "ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ಮೂವತ್ತನಾಲ್ಕು ಸಾವಿರಕ್ಕೂ ಮಿಕ್ಕಿ  'ತೆಂಗಿನ ಸ್ನೇಹಿತರು' ತಯಾರಾಗಿದ್ದಾರೆ. ಇದರಲ್ಲಿ ಕೇರಳಿಗರದು ಸಿಂಹಪಾಲು. ಕೃಷಿಕ ಸಮುದಾಯದ ಕಷ್ಟ ಮನಗಂಡು ಇಂತಹ ಕಾರ್ಯಕ್ರಮ ಹಾಕಿಕೊಂಡ ಮಂಡಳಿಯು ಅಭಿನಂದನೀಯ."
                ಕಳೆ ಕೊಚ್ಚುವ ಯಂತ್ರದಲ್ಲಿ ಕಳೆ ತೆಗೆಯುವ ಕೆಲಸವನ್ನು ನಿಭಾಯಿಸುವ ಜಾಬ್ ವರ್ಕ್ ತಂಡಗಳು ಕೆಲಸವನ್ನು ಹಗುರ ಮಾಡಿವೆ. ಆವಶ್ಯಕತೆಯನ್ನು ಸಕಾಲಕ್ಕೆ ಪೂರೈಸುವ ತಂಡಗಳು ಕೃಷಿಕರ ಮನ ಗೆದ್ದಿವೆ. ತಂಡದಲ್ಲಿ ಹತ್ತಾರು ಮಂದಿ ಸಹಾಯಕರಿದ್ದು ಎಲ್ಲರಿಗೂ ಸ್ಥಳೀಯವಾಗಿ ಉದ್ಯೋಗಾವಕಾಶ ನೀಡಿದೆ. ಹತ್ತಾರು ದಿವಸಗಳಲ್ಲಿ ಮುಗಿಯದ ಕೆಲಸವನ್ನು ಒಂದೇ ದಿವಸದಲ್ಲಿ ಮುಗಿಸುವ ಜಾಬ್ ವರ್ಕ್ ತಂಡದ ಕೆಲಸ ಕೃಷಿಕರ ಸ್ವೀಕೃತಿ ಪಡೆದಿದೆ.
              ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತನ್ನ 'ಪ್ರಗತಿ ಬಂಧು' ತಂಡಗಳ ಮೂಲಕ ಸಣ್ಣ, ಅತಿಸಣ್ಣ ರೈತರ ತಂಡಗಳನ್ನು ಹುಟ್ಟುಹಾಕಿದೆ. ಮುರಿಯಾಳು ಪದ್ಧತಿಯಲ್ಲಿ ಕೃಷಿ ಕೆಲಸಗಳನ್ನು ಹಗುರ ಮಾಡಿಕೊಂಡಿದೆ. ತಂತಮ್ಮ ಜಮೀನಿನಲ್ಲಿ ದುಡಿಯುವ ಪರಿಪಾಠವನ್ನು ಹೇಳಿಕೊಟ್ಟಿದೆ. ಕಾರ್ಮಿಕ ಸಮಸ್ಯೆಗೆ ತನ್ನದೇ ವಿಧಾನದಲ್ಲಿ ಪರಿಹಾರವನ್ನೂ ಕಂಡುಕೊಂಡಿದೆ.
              ಒಂದೆಡೆಯಿಂದ ಕೃಷಿ ಸಹಾಯಕರ ಅಲಭ್ಯತೆಯ ಕೊರಗಿನ ಮಧ್ಯೆ, ಪರಿಹಾರವಾಗಿ ಇಂತಹ ಚಿಕ್ಕಪುಟ್ಟ ವ್ಯವಸ್ಥೆಗಳು ಆಶಾದಾಯಕ. ಕೃಷಿಯಲ್ಲಿ ಬಲವಂತದಿಂದಲಾದರೂ ಯಾಂತ್ರೀಕರಣ ವ್ಯವಸ್ಥೆಯನ್ನು ರೂಢಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.  ಉತ್ತರ ಕರ್ನಾಾಟಕದ ಕೃಷಿಯಲ್ಲಿ ಯಾಂತ್ರೀಕರಣದ್ದೇ ಕರಾಮತ್ತು. ಅಡಿಕೆ ಸುಲಿ ಯಂತ್ರವು ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಈಗಾಗಲೇ ಸದ್ದು ಮಾಡುತ್ತಿವೆ.
             ಕರ್ನಾಾಟಕ ಸರಕಾರವು ಕೃಷಿ ಯಂತ್ರಗಳನ್ನು ಬಾಡಿಗೆ ನೀಡುವ ಹೊಸ ಯೋಜನೆಗೆ ಸಹಿ ಹಾಕಿರುವುದು ಭರವಸೆಯ ಬೆಳವಣಿಗೆ. ಕರ್ನಾಾಟಕದ ನೂರ ಎಂಭತ್ತಾರು ಕೇಂದ್ರಗಳಲ್ಲಿ ಯೋಜನೆಯ ಅನುಷ್ಠಾನ. ಇದರಲ್ಲಿ ನೂರ ಅರವತ್ತ ಒಂದು ಕೇಂದ್ರಗಳ ಅನುಷ್ಠಾನದ ಹೊಣೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಿದೆ. ಒಂದೊಂದು ಕೇಂದ್ರಕ್ಕೆ ಆಯಾಯಾ ಪ್ರದೇಶಕ್ಕೆ ಹೊಂದುವ ಸುಮಾರು ಐವತ್ತು ಲಕ್ಷ ರೂಪಾಯಿ ಮೊತ್ತದ ಯಂತ್ರೋಪಕರಣಗಳ ಸಂಪನ್ನತೆ.
             ಸಂಕಟಗಳ ಮಧ್ಯೆ ಪರಿಹಾರವೋ ಎಂಬಂತೆ ಖಾಸಗಿ, ಸರಕಾರದ ವ್ಯವಸ್ಥೆಗಳು ರೂಪುಗೊಳ್ಳುತ್ತಿರುವುದು ಶ್ಲಾಘ್ಯ. ಇದು ನೆರೆಯಲ್ಲಿ ಕೊಚ್ಚಿಕೊಂಡು ಹೋಗುವವನಿಗೆ ಹುಲ್ಲುಕಡ್ಡಿ ಸಿಕ್ಕಂತೆ. ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅದರ ಯಶಸ್ಸು.
(ಚಿತ್ರ : ಶ್ರೀ ಪಡ್ರೆ)
(ನೆಲದನಾಡಿ/ಉದಯವಾಣಿ/8-1-2015)