Thursday, January 29, 2015

ಹಸಿರ ಚಿಗುರಲ್ಲಿ ಅರಿವಿನ ಮಿಳಿತ

               ಊಟದ ಬಟ್ಟಲು ಬರಿದಾಗುತ್ತಿದೆ!
             'ರೆಡಿ ಟು ಈಟ್' ಸಂಸ್ಕೃತಿಯು ಅನುಭವಿಸಿ ತಿನ್ನುವ ಅಭ್ಯಾಸವನ್ನು ಕಸಿದುಕೊಂಡಿದೆ. ಹೊಟ್ಟೆಯು ತ್ಯಾಜ್ಯ ತುಂಬುವ ಚೀಲವಾಗಿದೆ. ಹಸಿವಾದಾಗ ಹೊಟ್ಟೆ ತುಂಬಿಸುವುದು - ಇಷ್ಟಕ್ಕೆ ಊಟ ಸೀಮಿತವಾಗಿದೆ. ಮೊಬೈಲ್ ಕಿವಿಗಂಟಿದರೆ ಮುಗಿಯಿತು. ಏನನ್ನು ಹೊಟ್ಟೆಗಿಳಿಸಿದ್ದೇವೆ, ಎಷ್ಟು ತಿಂದಿದ್ದೇವೆ, ತಿಂದ ಖಾದ್ಯದ ರುಚಿ ಹೇಗಿದೆ, ಉಪ್ಪು-ಖಾರ ಸಮಪಾಕದಲ್ಲಿದೆಯೇ? - ನಮ್ಮೊಳಗೆ ಯಾವ ಪ್ರಶ್ನೆಯನ್ನೂ ಹುಟ್ಟುಹಾಕದ ಮನಃಸ್ಥಿತಿ.
                  ಕ್ಯಾಬೇಜ್, ಹೂಕೋಸು ಪ್ರಸಿದ್ಧಿಗಿಂತ ಮೊದಲು ಹಸಿರ ಕುಡಿಗಳು ಖಾದ್ಯಗಳಾಗಿ ಬದಲಾಗುತ್ತಿದ್ದುವು. ಯಾವ್ಯಾವ ಋತುವಿನಲ್ಲಿ ಏನೇನು ತಿನ್ನಬೇಕೆಂಬ ಜ್ಞಾನ ಹಿರಿಯರ ನಾಲಗೆ ತುದಿಯಲ್ಲಿರುತ್ತಿದ್ದುವು. ದಿನಕ್ಕೊಂದು ಸೊಪ್ಪಿನ ಐಟಂ ಅನ್ನದ ಬಟ್ಟಲೇರದೆ ಭೋಜನವಾಗುತ್ತಿರಲಿಲ್ಲ. ಇವುಗಳಲ್ಲಿ ಔಷಧೀಯ ಜ್ಞಾನವೂ ಮಿಳಿತವಾಗಿರುತ್ತಿದ್ದುವು. ಯಾವಾಗ ಔಷಧಿ ಮತ್ತು ಆಹಾರಗಳು ವಿಚ್ಛೇದನ ಪಡೆದುವೋ ಅಲ್ಲಿಂದ ಸೊಪ್ಪುಗಳು, ಕುಡಿಗಳು ಮರೆಗೆ-ಮರೆವಿಗೆ ಸರಿಯಿತು.
                  ಬಸಳೆ, ಪಾಲಕ್, ಹರಿವೆ, ಮೆಂತೆ.. ಮೊದಲಾದ ಸೊಪ್ಪುಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಸೊಪ್ಪು ತರಕಾರಿಗಳನ್ನು ಬೆಳೆಸುವ ಪರಿಪಾಠ ಕಡಿಮೆ. ಹಿತ್ತಿಲಲ್ಲೇ ಬೆಳೆವ ವೈವಿಧ್ಯಮಯ ಸೊಪ್ಪುಗಳನ್ನು ಪ್ರಕೃತಿ ಒದಗಿಸಿದೆ. ಅವುಗಳು ತಂಬುಳಿ, ಪಲ್ಯ, ಚಟ್ನಿ, ಸಾರಿನ ಮೂಲಕ ಹೊಟ್ಟೆಗಿಳಿದು ಉದರಾಗ್ನಿಯನ್ನು ಶಮನಿಸುತ್ತದೆ, ಆರೋಗ್ಯ ಭಾಗ್ಯವಾಗುವತ್ತಲೂ ಸಹಕರಿಸುತ್ತದೆ.
                 ಸಂತೆಯಲ್ಲಿ ಬಗೆಬಗೆಯ ತರಕಾರಿಗಳ ಮಧ್ಯೆ ಸೊಪ್ಪು ತರಕಾರಿಗಳನ್ನು ಆಯಲೆಂದೇ ಬರುವ ಸೊಪ್ಪುಪ್ರಿಯರನ್ನು ಕಾಣಬಹುದು. ನಾರಿನ ಅಂಶ, ವಿಟಮಿನ್ಗಳು, ಪೋಷಕಾಂಶಗಳಿರುವ ಸೊಪ್ಪುಗಳನ್ನು ಅನ್ನದೊಂದಿಗೆ ತಿನ್ನಬೇಕೆನ್ನುವ ಅರಿವು ಮೂಡುತ್ತಿದೆ. ವೈದ್ಯರು ಕೂಡಾ ಶಿಫಾರಸು ಮಾಡುತ್ತಿದ್ದಾರೆ. ಹಾಗಾಗಿ ಸೊಪ್ಪು ತರಕಾರಿಗಳಿಗೆ ಬೇಡಿಕೆ.
               ಬಂಟ್ವಾಳ ತಾಲೂಕಿನ (ದ.ಕ.) ಕೇಪು-ಉಬರು 'ಹಲಸು ಸ್ನೇಹಿ ಕೂಟ'ವು 'ಊಟಕ್ಕಿರಲಿ, ಸೊಪ್ಪು ತರಕಾರಿ' ಎನ್ನುವ ವಿಶಿಷ್ಟ ಕಾರ್ಯಾಾಗಾರವನ್ನು ಅನ್ಯಾನ್ಯ ಸಂಸ್ಥೆಗಳೊಂದಿಗೆ ಯೋಜಿಸಿತ್ತು. ಸೊಪ್ಪುಗಳ ಮರೆವಿನ ಕಾಲಘಟ್ಟದಲ್ಲಿ ಕಾರ್ಯಾಾಗಾರವು ಹೊಸ ದಿಕ್ಕಿನತ್ತ ಯೋಚಿಸುವಂತೆ ಮಾಡಿದೆ. ಸೊಪ್ಪುಗಳು ಊಟದ ಬಟ್ಟಲಿಗೆ ಮರಳಲು ಯೋಜನೆ ರೂಪಿಸಿದೆ. ಇಲ್ಲಿ ವಿಚಾರಗಳ ಹೆರುವಿಕೆ ಇರಲಿಲ್ಲ. ಒತ್ತಡವಿರಲಿಲ್ಲ. ಸೊಪ್ಪುಗಳಲ್ಲಿರುವ ಔಷಧೀಯ ವಿಚಾರ, ವಿವಿಧ ಖಾದ್ಯಗಳ ಸವಿರುಚಿಗಳನ್ನು ಉಣಿಸುವ ಹೂರಣ.
              ನೂರಕ್ಕೂ ಮಿಕ್ಕಿ ಸೊಪ್ಪುಗಳ ಪ್ರದರ್ಶನ. ಪರಿಚಯ ಇಲ್ಲದವುಗಳೇ ಸಿಂಹಪಾಲು. ಮಂಗಳೂರಿನ ವೈದ್ಯ ಡಾ.ಮನೋಹರ ಉಪಾಧ್ಯರ ಕನಸು. ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮರ ಸಾರಥ್ಯ.  ಕಾರ್ಯಾಾಗಾರದ ಪ್ರದರ್ಶನಕ್ಕಾಗಿ ಎರಡು ತಿಂಗಳ ಮೊದಲೇ  ಕಾಡು-ಹಿತ್ತಿಲುಗಳನ್ನು ಅಲೆದು, ಸಸಿಗಳನ್ನು ಗುರುತು ಹಿಡಿದು, ಆರೈಕೆ ಮಾಡಿ ಬೆಳೆಸಿದ ಇವರ ಶ್ರಮ ಅಜ್ಞಾತ. ಎಲ್ಲದರ ಬಳಕೆ ಕ್ರಮಗಳನ್ನು ಗುರುತುಹಾಕಿ, ಔಷಧೀಯ ವಿಚಾರಗಳನ್ನು ದಾಖಲಿಸಿದ್ದಾರೆ.
               ಹದಿನೈದು ವಿಧದ ಹರಿವೆ, ಏಳು ತರಹದ ಬಸಳೆ, ನಾಲ್ಕು ಜಾತಿಯ ಬ್ರಾಹ್ಮಿ, ನೆಕ್ಕರೆ ಜಾತಿಯದು ಐದು, ಪರಿಮಳದ ಸಸ್ಯಗಳು ನಾಲ್ಕು, ತಂಬುಳಿಗಾಗುವ ಸೊಪ್ಪುಗಳು ಹಲವಾರು. ಇವೆಲ್ಲಾ ಹೊಸದೇನಲ್ಲ. ನಮ್ಮ ಹಿರಿಯರು ನಿತ್ಯ ಬಳಸುತ್ತಿದ್ದಂತಹ ಸಸ್ಯಗಳು. ಪುನರ್ನವ ಮತ್ತು ಪುರುಷರತ್ನ ಎನ್ನುವ ಎರಡು ಜಾತಿಯ ಸಸ್ಯಗಳನ್ನು ಸಂಗ್ರಹಿಸಲು ತುಸು ತ್ರಾಸ ಪಡಬೇಕಾಯಿತು. ಮಿಕ್ಕಂತೆ ಹೇಳುವಂತಹ ಕಷ್ಟವಾಗಿಲ್ಲ. ಎಲ್ಲವೂ ಸುತ್ತಮುತ್ತ ಸಿಗುವಂತಹುದೇ, ಎನ್ನುತ್ತಾರೆ ಶರ್ಮ.
               ಕಾರ್ಯಾಾಗಾರದ ಅಡುಗೆಮನೆಯಲ್ಲಿ ಸೊಪ್ಪುಗಳದ್ದೇ ಕಾರುಬಾರು. ಅನ್ನ, ಮಜ್ಜಿಗೆ ಹೊರತುಪಡಿಸಿ ವಿವಿಧ ವೈವಿಧ್ಯ ಸೊಪ್ಪುಗಳ ಖಾದ್ಯಗಳು. ಬಸಳೆ, ಹರಿವೆ, ಕೆಸು, ಬ್ರಾಹ್ಮಿ.. ಮೊದಲಾದ ಕೆಲವೇ ಕೆಲವು ಹಸಿರುಗಳನ್ನು ನಿತ್ಯ ಬಳಸಿ ಗೊತ್ತಿತ್ತು. ಮಿಕ್ಕ ಹಸಿರುಗಳನ್ನು ಬಳಸಿದ, ತಯಾರಿಸಿದ ಅನುಭವ ಅಷ್ಟಕ್ಕಷ್ಟೇ. ಹಾಗಾಗಿ ಹಲಸು ಸ್ನೇಹಿ ಕೂಟದ ಸದಸ್ಯರ ಮನೆಗಳಲ್ಲಿ ಒಂದೊಂದು ಖಾದ್ಯಗಳ ಪ್ರಯೋಗ, ಪರೀಕ್ಷೆ.
               ವರ್ಮುುಡಿ ಶಿವಪ್ರಸಾದರದಲ್ಲಿ ಗೆಣಸಿನ ಸೊಪ್ಪಿನ ಪಾಯಸ ಸಿದ್ಧವಾಯಿತು.  ಕಡಂಬಿಲ  ಕೃಷ್ಣಪ್ರಸಾದರಲ್ಲಿ ದಾಲ್ತೋವೆ ರೆಡಿ. ಶರ್ಮರಲ್ಲಿ ಪಕೋಡ, ಸಾರು, ಕೇಸರಿಬಾತ್, ಸಲಾಡ್... ಹೀಗೆ ಸರದಿ ಸಾಲಿನಲ್ಲಿ ಒಂದೊಂದೇ ಖಾದ್ಯಗಳು ಪರೀಕ್ಷೆಯಲ್ಲಿ ಗೆದ್ದುವು. ಕಾರ್ಯಾಾಗಾರದ ಖಾದ್ಯಗಳ ಪಟ್ಟಿಗಳನ್ನು ನೋಡಿದರೆ ಅಬ್ಬಾ, ಸೊಪ್ಪುಗಳ ಕರಾಮತ್ತು! ಒಂದಕ್ಕೊಂದು ಸೇರಿಕೊಂಡು ದುಪ್ಪಟ್ಟು ರುಚಿ ಕೊಡುವ ಹಸಿರಿನ ತಾಕತ್ತು!.
              ವಿಟಮಿನ್ ಸೊಪ್ಪು ಮತ್ತು ಕೆಸುವಿನ ಸೊಪ್ಪುಗಳ ಪತ್ರೊಡೆ, ಕುಂಟಾಲ ಮತ್ತು ಗೇರು ಕುಡಿಗಳ 'ಗ್ರೀನ್ ಟೀ' (ಚಹ, ಕಾಫಿಯ ಬದಲಿಗೆ). ಎಳೆ ಜಾಯಿಕಾಯಿಯ ಉಪ್ಪಿನಕಾಯಿ. ಒಂದೆಲಗ ಚಟ್ನಿ. ವಿವಿಧ ಕಾಡುಕುಡಿಗಳ ತಂಬುಳಿ. ಹುರುಳಿ ಸೇರಿಸಿದ ಹರಿವೆ ಪಲ್ಯ. ನೆರುಗೆಲೆ, ಇಲಿಕಿವಿ, ನೀರ್ಪಂತಿ, ಪುಳ್ಳಂಪುರುಚಿ ಸೊಪ್ಪುಗಳ ತಿಳಿಸಾರು. ನೆಲಹರಿವೆಯ ಸಾಸಿವೆ. ನುಗ್ಗೆಸೊಪ್ಪು, ಸಿಹಿ ಕುಂಬಳ ಕುಡಿಗಳ ದಾಲ್ತೋವೆ. ಗೆಣಸಿನ ಸೊಪ್ಪಿನ ಪಾಯಸ, ಕ್ರೋಟಾನ್ ಹರಿವೆಯ ಪಕೋಡ.. ಹೀಗೆ. (ಇಲ್ಲಿ ಹೆಸರಿಸಿರುವ ಕುಡಿಗಳಿಗೆ ಪ್ರಾದೇಶಿಕವಾಗಿ ವಿವಿಧ ಹೆಸರುಗಳಿವೆ)
                  ಅನುಭವಿ ವೈದ್ಯ ಡಾ.ಶ್ರೀಕುಮಾರ್ ವೃತ್ತಿಯಲ್ಲಿ ವೈದ್ಯರು. ಸೊಪ್ಪುಗಳ ಖಾದ್ಯಗಳ ಬಳಕೆಯಿಂದ ದೇಹಕ್ಕೆ ಸಿಗುವ ಪೋಷಕಾಂಶಗಳ ಮಾಹಿತಿಯನ್ನು ನಿಖರವಾಗಿ ಹೇಳಬಲ್ಲರು. ತಮ್ಮ ಪತ್ನಿ ಆಶಾರೊಂದಿಗೆ ಕಾರ್ಯಾಾಗಾರದಲ್ಲಿ ಸೊಪ್ಪುಗಳ ಖಾದ್ಯಗಳ ಪ್ರಾತ್ಯಕ್ಷಿಕೆಯನ್ನು ಸ್ವತಃ ಮಾಡಿದರು. ಜತೆಜತೆಗೆ ಅವುಗಳ ಔಷಧೀಯ, ಸಸ್ಯಶಾಸ್ತ್ರೀಯ ಪರಿಚಯ. ಯಾವುದನ್ನು ಹೆಚ್ಚು ಸೇವಿಸಬಾರದು, ಯಾವುದನ್ನು ಸ್ವೀಕರಿಸಲೇ ಬೇಕು ಎನ್ನುವ ಮಾಹಿತಿಗಳು ಸದಾ ಅಡುಗೆ ಮನೆಯಲ್ಲಿರಬೇಕಾದವುಗಳು.
             ಹರಿವೆ, ಬಸಳೆ, ವಿಟಮಿನ್, ಪುಂಡಿ, ನೆಲಬಸಳೆ, ಗೆಣಸು ಸೊಪ್ಪುಗಳ ಸಾರು; ಬಸಳೆ ಸೊಪ್ಪಿನ ದೋಸೆ, ಗೆಣಸಿನ ಸೊಪ್ಪಿನ ವಡೆ, ತೊಂಡೆಸೊಪ್ಪಿನ ತಂಬುಳಿ; ವೀಳ್ಯದೆಲೆ, ಸಾಂಬ್ರಾಣಿ, ಬಸಳೆ ಸೊಪ್ಪುಗಳ ಪ್ರತ್ಯಪ್ರತ್ಯೇಕವಾಗಿ ತಯಾರಿಸಿದ ಪೋಡಿ(ಬಜ್ಜಿ), ಬಸಳೆ ಸೊಪ್ಪಿನ ಗೊಜ್ಜು - ಸುಮಾರು ಒಂದೂವರೆ ಗಂಟೆಯಲ್ಲಿ ಹತ್ತಾರು ಬಗೆಯ ಖಾದ್ಯಗಳನ್ನು ತಯಾರಿಸುತ್ತಿದ್ದಂತೆ ಆಸಕ್ತ ಅಮ್ಮಂದಿರ ನೋಟ್ ಬುಕ್ಕಿನಲ್ಲಿ ದಾಖಲಾದುವು.
              ಖಾದ್ಯಗಳನ್ನು ಕಣ್ಣೆದುರೇ ಮಾಡಿ ತೋರಿಸಿದಾಗ ಒಲವು, ವಿಶ್ವಾಸ ಹೆಚ್ಚು. ವಾಹಿನಿಗಳಲ್ಲಿ ಬಿತ್ತರವಾಗುವ ಅಡುಗೆ ಕಾರ್ಯಕ್ರಮಗಳ ಜನಪ್ರಿಯತೆಯ ಗುಟ್ಟು ಇದೇ ಇರಬಹುದೇನೋ? ಹೊಸ ಹೊಸ ರುಚಿಗಳನ್ನು ಸವಿಯಲು ಹವಣಿಸುವ ನಾಲಗೆಗಳಿಗೆ ಪ್ರಾತ್ಯಕ್ಷಿಕೆ, ಕಾರ್ಯಾಾಗಾರಗಳು ಉತ್ತಮ ವೇದಿಕೆ. ಹಲಸು ಸ್ನೇಹಿ ಕೂಟವು ಹಿಂದೆ ಏರ್ಪಡಿಸಿದ್ದ ಹಲಸು, ಮಾವು ಮೇಳಗಳ ಅಡುಗೆ ಪ್ರಾತ್ಯಕ್ಷಿಕೆ;. ಖಾದ್ಯಗಳ ಸ್ಪರ್ಧೆಗಳಲ್ಲಿ ನೂರಾರು ಖಾದ್ಯಗಳ ಪ್ರದರ್ಶನಗಳ ಸೊಬಗು ನೆನಪಾಗುತ್ತದೆ. ಇವೆಲ್ಲಾ ಸೀಮಿತ ಸಂಪನ್ಮೂಲ ಮತ್ತು ಹೆಗಲುಗಳಿಂದಾಗಿ ಸಂಪನ್ನವಾಗಿತ್ತು.
              ಸೊಪ್ಪು ತರಕಾರಿ ಕಾರ್ಯಾಾಗಾರದಲ್ಲಿ ಖಾದ್ಯಗಳನ್ನು ಸಿದ್ಧಪಡಿಸಿದ ಸೂಪಜ್ಞರಿಗೆ ಇವೆಲ್ಲಾ ಹೊಸತು. ಸಮಾರಂಭಗಳಲ್ಲಿ ಸಿದ್ಧ ಮೆನುಗಳನ್ನು ಸಿದ್ಧಪಡಿಸಿ ಅನುಭವವಿತ್ತಷ್ಟೇ. ಶರ್ಮ ಬಳಗ ಸೂಪಜ್ಞರ ಹಿಂದೆ ನಿಂತು ಸವಿಸವಿಯಾದ ಖಾದ್ಯಗಳನ್ನು ಉಣಬಡಿಸಿದ್ದು ನಿಜಕ್ಕೂ ಹೆಚ್ಚುಗಾರಿಕೆ. ಮಾದರಿಗಳು ಮುಂದಿದ್ದಾಗ ಅನುಸರಣೆ ಸುಲಭ. ಕಾರ್ಯಗಾರದಲ್ಲಿ ಖಾದ್ಯಗಳ ಮಾದರಿಗಳು ರೂಪುಗೊಂಡಿವೆ. ಏನಿಲ್ಲವೆಂದರೂ ಹತ್ತಾರು ಮನೆಗಳಲ್ಲಿ ಈ ಖಾದ್ಯಗಳ ಪ್ರಯೋಗವಂತೂ ನಡೆದಿದೆ.
              ನಿರ್ವಿಷವಾಗಿ ಸಿಗಬಲ್ಲ ಸೊಪ್ಪು ತರಕಾರಿಗಳ ಸೇವನೆ ನಿತ್ಯ ಆಹಾರದಲ್ಲಿ ಸೇರಿಕೊಳ್ಳಬೇಕು ಎನ್ನುವುದು ಕಾರ್ಯಾಗಾರದ ಉದ್ದೇಶ. ಹೆಸರಿನ ಗೀಳಿಗಾಗಿ ಫೋಸ್ ನೀಡುವವರು ಹಲಸು ಸ್ನೇಹಿ ಕೂಟದಲ್ಲಿಲ್ಲ. ಫಂಡ್ಗಳ ಹಿಂದೆ ಓಡುವ ಮಾತಂತೂ ದೂರ. ನಮ್ಮ ಮನೆಯಿಂದಲೇ ಬದಲಾವಣೆ ಶುರುವಾಗಬೇಕೆನ್ನುವುದು ದೂರದೃಷ್ಟಿ. ಕೂಟದ ಬಹುತೇಕ ಎಲ್ಲಾ ಸಮಾರಂಭಗಳ ಮೆನುಗಳು ಸದಸ್ಯರ ಮನೆಗಳಲ್ಲಿ ಪ್ರಯೋಗ-ಪರೀಕ್ಷೆಗೆ ಒಳಪಟ್ಟು ನಿರ್ಧಾಾರವಾಗುತ್ತದೆ.
                ಹಲಸು, ತರಕಾರಿ, ಮಾವು, ಸಿರಿಧಾನ್ಯ, ಗೆಡ್ಡೆತರಕಾರಿ.. ಗಳ ಕಾರ್ಯಗಾರಗಳನ್ನು ಸ್ನೇಹಿ ಕೂಟವು ಕಳೆದ ನಾಲ್ಕೈದು ವರುಷಗಳಲ್ಲಿ ಏರ್ಪಡಿಸಿತ್ತು. ಆರೋಗ್ಯವು ಭಾಗ್ಯವಾಗಬೇಕೆನ್ನುವ ಸಮಾನ ಮನಸ್ಸುಗಳ ಜಾಲ ರೂಪುಗೊಂಡಿದೆ. ಮೆದುಳಿಗೆ ಮೇವನ್ನು ಒದಗಿಸುವ ಜತೆಗೆ ಹೊಸ ಹೊಸ ಖಾದ್ಯಗಳನ್ನು ಸ್ನೇಹಿ ಕೂಟವು ಪರಿಚಯಿಸುತ್ತಿರುವುದರಿಂದ ಅಮ್ಮಂದಿರ ಒಲವು ಹೆಚ್ಚಾಗಿದೆ. ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯ ಈ ಸದ್ದಿಲ್ಲದ ಕಾಯಕ ಇತರೆಡೆಯೂ ಹಬ್ಬಬೇಕು. ಅದು ಕೇಪು-ಉಬರಿಗೆ ಸೀಮಿತವಾಗಬಾರದು. ಅಂತಹ ಮನಸ್ಸುಗಳು ರೂಪುಗೊಳ್ಳಬೇಕಾದುದು ಕಾಲದ ಅನಿವಾರ್ಯತೆ.
(ಉದಯವಾಣಿ-ನೆಲದನಾಡಿ ಅಂಕಣ-29-1-2015)


0 comments:

Post a Comment