Monday, January 26, 2015

ತಂತ್ರ 'ಜ್ಞಾನ'ಕ್ಕೆ ಬಾಗಿನ



(ಉದಯವಾಣಿ/ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಿತ/೨೬-೧-೨೦೧೫)

            ಕೃಷಿಕರ ಮಕ್ಕಳು ಕೃಷಿಕರಾಗುವುದಿಲ್ಲ!
ಹೀಗೊಂದು ಮಾತು ಬಹುತೇಕ ಸಂದರ್ಭಗಳಲ್ಲಿ ಕೇಳುತ್ತೇವೆ. ಅವಕಾಶ ಬಂದಾಗ ಮಾತನಾಡಲೂ ಹಿಂಜರಿಯುವುದಿಲ್ಲ. ವೇದಿಕೆಯ ಮಾತುಗಳು ಯಾವಾಗಲೂ ವಾಸ್ತವಕ್ಕಿಂತ ದೂರ, ಬಹುದೂರ. ಕೆಲವೊಮ್ಮೆ ಮಾತನಾಡುವ ವ್ಯಕ್ತಿಗೆ ಕೃಷಿಯ ಸ್ಪರ್ಶವೇ ಇರದಿರುವುದೂ ಇದೆ.
           ಕೃಷಿಕನ ಮಗ ಯಾಕೆ ಕೃಷಿಕನಾಗುವುದಿಲ್ಲ? ಒಂದು ವಾಕ್ಯದ ಉತ್ತರದಲ್ಲಿ ತೃಪ್ತಿಪಡಬಹುದೇನೋ.  ಆದರೆ ಉತ್ತರದ ಆಳಕ್ಕೆ ಇಳಿದಂತೆ ಭವಿಷ್ಯವನ್ನು ಕತ್ತಲು ಮಾಡುವ ಎಲ್ಲಾ ಉಪಾಧಿಗಳು ನಂನಮ್ಮ ಜಗಲಿಯಲ್ಲೇ ಬಿದ್ದಿರುವುದು ಗೋಚರವಾಗುತ್ತದೆ.
         ಕಾಲೇಜಿನ ವಿದ್ಯಾರ್ಥಿ ತಂಡವೊಂದರ ಜತೆ ಕೃಷಿಕರೋರ್ವರಲ್ಲಿಗೆ ಭೇಟಿ ನೀಡಿದ್ದೆ. ಅವರು ಬೆವರಿನಿಂದಲೇ ತೋಟವನ್ನು ತೋಟವನ್ನು ಎಬ್ಬಿಸಿದ್ದರು. ವಿದ್ಯಾರ್ಥಿಗಳೆಲ್ಲಾ ಕೃಷಿ ಹಿನ್ನೆಲೆಯವರು.  ತಂಡದಲ್ಲಿದ್ದ ಓರ್ವ ವಿದ್ಯಾರ್ಥಿನಿಯ ಮಾತು ಕೇಳಿ ದಂಗಾದೆ. "ನಮ್ಮ ತೋಟ ಚೆನ್ನಾಗಿದೆ. ಅಪ್ಪಾಮ್ಮ ದುಡಿಯುತ್ತಾರೆ. ನನ್ನನ್ನು ಮಾತ್ರ ತೋಟಕ್ಕಿಳಿಯಲು ಬಿಡುವುದಿಲ್ಲ. ನನಗೆ ತೋಟದಲ್ಲಿ ಕೆಲಸ ಮಾಡುವ ಉಮೇದು ಇದೆ. ದಿನಾ ಓದಲು ಒತ್ತಾಯಿಸುತ್ತಾರೆ. ತೊಂಭತ್ತೈದಕ್ಕೂ ಮಿಂಕಿ ಅಂಕ ಪಡೆಯಬೇಕೆನ್ನುವುದು ಅವರ ಆಶೆ."
           ಹೌದಲ್ಲಾ... ಕೃಷಿ ಜ್ಞಾನವನ್ನು ಅಂಕಗಳು ಕಸಿದುಕೊಂಡಿವೆ. ತೊಂಭತ್ತೊಂಭತ್ತು ಅಂಕ ಸಿಕ್ಕರೂ ತೃಪ್ತರಾಗದ ಅಮ್ಮ. ತೋಟಕ್ಕೆ ಮಗಳನ್ನೋ, ಮಗನನ್ನೋ ಇಳಿಯಗೊಡದ ಅಪ್ಪ. ಕೃಷಿ ಕಲಿತು ಆಗಬೇಕಾದುದೇನು ಎನ್ನುವ ಮನೋನಿರ್ಧಾಾರ. ಮಕ್ಕಳ ಎದುರು ಕೃಷಿಯನ್ನು ಎಷ್ಟೊಂದು ಹಗುರದಿಂದ ಕಾಣುತ್ತೇವೆ. ಕೃಷಿಯಲ್ಲಿ ಗೌರವವಿಲ್ಲವೆಂದು ಸಮರ್ಥಿಸುತ್ತೇವೆ. ತನ್ನ ಬದುಕನ್ನು ರೂಪಿಸಿದ ಅಡಿಕೆ ಮರಗಳನ್ನು ಶತ್ರುಸ್ಥಾನದಲ್ಲಿ ನಿಲ್ಲಿಸಿ ನಡೆಯುವ ಸಂಭಾಷಣೆಗೆ ಮಕ್ಕಳು ಕಿವಿಯಾಗುತ್ತಾರೆ. ಬೆಳೆಯುವ ಮನಸ್ಸುಗಳನ್ನು ಪುಸ್ತಕದೊಳಗೆ ಮುರುಟಿಸುವ ಹಲವು ಐಡಿಯಾಗಳನ್ನು ಅಭಿವೃದ್ದಿ, ಪಕ್ವತೆ ಎಂದು ತಿಳಿದು ಬೀಗುತ್ತೇವೆ.
           ನಗರದ ಬದುಕಿನಿಂದ ಬೇಸತ್ತು ಮರಳಿ ಮಣ್ಣನ್ನು ಅಪ್ಪಿಕೊಂಡು ಕೃಷಿಕರಾದ ಒಬ್ಬರನ್ನು ಮಾತನಾಡಿಸಿದ್ದೆ. "ನಮ್ಮ ಮಕ್ಕಳನ್ನು ನಾವು ನಗರಕ್ಕೆ ಕಳುಹಿಸುವುದಲ್ಲ. ಸಿಟಿಯೊಳಗೆ ಬಲವಂತದಿಂದ ತಳ್ಳಿಬಿಡುತ್ತೇವೆ," ಎಂದ ಮಾತು ನೆನಪಾಗುತ್ತದೆ. ಮಣ್ಣನ್ನು ಪ್ರೀತಿಸುವ ಶಿಕ್ಷಣದಿಂದ ದೂರವಾದ ಮನಸ್ಸುಗಳಿಗೆ ಯಾವಾಗಲೂ ದೂರದ ಬೆಟ್ಟ ನುಣ್ಣಗೆ. .
ಮಕ್ಕಳನ್ನು ಮೆಡಿಕಲ್ ಓದಿಸುತ್ತೇವೆ. ಇಂಜಿನಿಯರಿಂಗ್ ಪದವಿ ಕೊಡಿಸುತ್ತೇವೆ. ಅವರ ಉತ್ಕರ್ಷವನ್ನು ಕಂಡು ಹಿಗ್ಗುತ್ತೇವೆ. ಸಹಜ ಬಿಡಿ. ಕಲಿಕೆಯ ಬಳಿಕ ಮಕ್ಕಳನ್ನು ದುಡಿಸಿಕೊಳ್ಳುವ ಪರಿ ನಿಜಕ್ಕೂ ಆತಂಕ. ಮೆಡಿಕಲ್ ಕಲಿತವ ಊರಲ್ಲಿರಬಾರದು, ಇಂಜಿನಿಯರಿಂಗ್ ಕಲಿತವ ಮುಂಬೈ, ದುಬೈ.. ಸೇರಲೇಬೇಕೆಂಬ ಒತ್ತಡ.
             ನಮ್ಮ ಮಕ್ಕಳಾದರೇನು? ಅವರಿಗೂ ಮನಸ್ಸಿದೆ. ಭವಿಷ್ಯ ಬದುಕಿನತ್ತ ದೂರದೃಷ್ಟಿಯಿದೆ. ತಾನು ಏನಾಗಬೇಕೆಂಬ ಯೋಜನೆ, ಯೋಚನೆಗಳಿವೆ. ನಾವು ಕೈತಾಂಗು ಆಗುವ ಬದಲು ನಮ್ಮ ಆಸಕ್ತಿಗಳನ್ನು ಮಕ್ಕಳಲ್ಲಿ ಕಾಣಲು ಹಪಾಹಪಿಸುತ್ತೇವೆ. ಹಾಗಾಗಿ ನೋಡಿ - ಮೆಡಿಕಲ್, ಇಂಜಿನಿಯರಿಂಗ್ ಪದವಿ ಬಳಿಕ ಎಷ್ಟೋ ಮೊಗ್ಗುಗಳು ಅರಳದೆ, ಅಲ್ಲಿಲ್ಲಿ ನಾಲ್ಕಂಕೆ ಸಂಬಳದ ಉದ್ಯೋಗಗಳಲ್ಲಿ ತೃಪ್ತಿ ಪಡುವ  ಉದಾಹರಣೆಗಳು (ತೋಟ, ಗದ್ದೆ ಎಲ್ಲವೂ ಇದ್ದು) ಎಷ್ಟು ಬೇಕು? ಎಲ್ಲರನ್ನೂ ಈ ಸಾಲಿಗೆ ಸೇರಿಸುವಂತಿಲ್ಲ. ಉತ್ತಮ ಸಾಧನೆ ತೋರಿ ಎತ್ತರದ ಬದುಕನ್ನು ಕಲ್ಪಿಸಿಕೊಂಡವರು ಯಶಸ್ಸಾಗುತ್ತಾರೆ.
            ಭವಿಷ್ಯದ ಬದುಕನ್ನು ತೋರುವ ವಾತಾವರಣ ಮನೆಯಲ್ಲಿ ಕ್ಷೀಣವಾಗುತ್ತದೆ. ಕಾಲೇಜುಗಳಲ್ಲಂತೂ ಅಂತಹ ವಾತಾವರಣವನ್ನು ಕಲ್ಪಿಸಲೂ ಅಸಾಧ್ಯ. ಬದಲಾದ ಶೈಕ್ಷಣಿಕ ಪದ್ಧತಿಯೊಳಗೆ ಮನಸ್ಸು ಲೀನವಾಗಿರುತ್ತದೆ.  ಅವ್ಯಕ್ತ ಪ್ರತಿಭೆಯ ಅನಾವರಣಕ್ಕೆ ಸಂದರ್ಭವೇ ಇರುವುದಿಲ್ಲ. ಪ್ರಾಜೆಕ್ಟ್, ಪ್ರಬಂಧಗಳಿಗೆ ಸುಪ್ತ ಜ್ಞಾನ ಮೀಸಲಾಗುತ್ತದೆ.
             ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಹದಿನೇಳಕ್ಕೂ ಮಿಕ್ಕಿ ತಾಂತ್ರಿಕ ಕಾಲೇಜುಗಳಿವೆ. ಸುಸಜ್ಜಿತ ಕಾರ್ಯಾಾಗಾರಗಳಿವೆ. ಆಧುನಿಕ ಕಲಿಕಾ ವ್ಯವಸ್ಥೆಗಳಿವೆ. ವರುಷಕ್ಕೆ ಸಾವಿರಕ್ಕೂ ಮಿಕ್ಕಿ ಮೆಕಾನಿಕಲ್ ವಿದ್ಯಾರ್ಥಿಗಳು ಪದವಿ ಪತ್ರ ಪಡೆದು ತಂತ್ರಜ್ಞರಾಗುತ್ತಾರೆ. ಇವರಿಗೆ ಮಾರ್ಗದರ್ಶನ ನೀಡಲು ನೂರಕ್ಕೂ ಮಿಕ್ಕಿ ಅಧ್ಯಾಪಕರಿದ್ದಾರೆ.
           ಅಂತಿಮ ವರುಷದ ತಾಂತ್ರಿಕ ಕಲಿಕೆಯಲ್ಲಿ 'ಪ್ರಾಜೆಕ್ಟ್' ತಯಾರಿ ಕಡ್ಡಾಯ. ಸೀಯಾಳ ತೂತು ಮಾಡುವ ಸಲಕರಣೆಯಿಂದ ತೊಡಗಿ ದೊಡ್ಡ ಗಾತ್ರದ ಯಂತ್ರಗಳ ತನಕ ವಿವಿಧ ಆವಿಷ್ಕಾರಗಳು ನಾಲ್ಕು ಗೋಡೆಗಳ ಮಧ್ಯೆ ಕಾಗದದಲ್ಲಿ ರೂಪುಗೊಳ್ಳುತ್ತದೆ. ವಿನ್ಯಾಸವೂ ಸಿದ್ಧವಾಗುತ್ತದೆ. ಆಯ್ದ ಕೆಲವು ಮಾಧ್ಯಮಗಳಲ್ಲಿ ಮಿಂಚಿ ಮರೆಯಾಗುತ್ತವೆ. ಇಂತಹ ಆವಿಷ್ಕಾರಗಳಿಗೆ ಮಾನ ಕೊಡಲು ಮಂಗಳೂರಿನ ಪ್ರಸಿದ್ಧ ಅಡಿಕೆ ಸಹಕಾರಿ ಸಂಸ್ಥೆ 'ಕ್ಯಾಂಪ್ಕೋ' ಮುಂದಾಗಿದೆ. 
             2012ರಲ್ಲಿ ಕ್ಯಾಂಪ್ಕೋ ಎರಡನೇಯ ಯಂತ್ರಮೇಳ ಆಯೋಜಿಸಿತ್ತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಅದರಲ್ಲೂ ಕೃಷಿ ಹಿನ್ನೆಲೆಯವರು ಆವಿಷ್ಕರಿಸಿದ ಯಂತ್ರ-ತಂತ್ರಗಳಿಗೆ ಮೇಳದಲ್ಲಿ ಮಳಿಗೆ ನೀಡಿ ಸಾರ್ವಜನಿಕರ ಮುಂದೆ ತೆರೆದಿಟ್ಟಿತ್ತು. ಯಂತ್ರದ ಕ್ಷಮತೆ, ಉಪಯೋಗವನ್ನು ವಿದ್ಯಾರ್ಥಿಗಳೇ ಕೃಷಿಕರಿಗೆ ಮನದಟ್ಟು ಮಾಡಿಕೊಟ್ಟಿದ್ದರು. ಈ ಪ್ರಾಜೆಕ್ಟ್ಗಳೆಲ್ಲಾ ಅನುಷ್ಠಾನಗೊಂಡರೆ ಕೃಷಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ. ಅವೆಲ್ಲಾ ಹೆಚ್ಚು ಬಂಡವಾಳ ಬೇಡುವಂತಹುಗಳು. ಸಮಾಜ, ಸಂಸ್ಥೆಗಳು ಆರ್ಥಿಕ ನೆರವನ್ನು ನೀಡಿ ಆವಿಷ್ಕಾರಗಳನ್ನು ಅಭಿವೃದ್ಧಿ ಪಡಿಸುವಲ್ಲಿ ನೆರವಾಗಬಾರದೇಕೆ?
ಜನವರಿ 24 ರಿಂದ 26ರ ತನಕ ಪುತ್ತೂರಿನ (ದ.ಕ.) ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಮೂರನೇ ಕೃಷಿ ಯಂತ್ರ ಮೇಳ ಸಂಪನ್ನವಾಗಲಿದೆ. ನಲವತ್ತು ಮಳಿಗೆಗಳಲ್ಲಿ ತಾಂತ್ರಿಕ ವಿದ್ಯಾರ್ಥಿಗಳ ಕೃಷಿ ಸಂಬಂದಿ ಆವಿಷ್ಕಾರಗಳ ಪ್ರದರ್ಶನ ಜರುಗಲಿದೆ. ಅನುಭವಿ ತೀರ್ಪುುಗಾರರು ನೀಡುವ ಉತ್ತಮ ಆವಿಷ್ಕಾರಕ್ಕೆ ಪ್ರಶಸ್ತಿ ನೀಡಲಾಗುತ್ತದೆ. ಕ್ಯಾಂಪ್ಕೋ ಸ್ಥಾಪಕ ಕೀರ್ತಿಶೇಷ ವಾರಣಾಶಿ ಸುಬ್ರಾಯ ಭಟ್ಟರ ನೆನಪಿನಲ್ಲಿ ನೀಡುವ ಪ್ರಶಸ್ತಿಯನ್ನು ಯಂತ್ರಮೇಳದ ವೇದಿಕೆಯಲ್ಲಿ ಪ್ರದಾನಿಸಲಾಗುವುದು.
            ರಾಜ್ಯದಲ್ಲಿ ಅಲ್ಲ, ದೇಶದಲ್ಲೇ ಇದೊಂದು ಹೊಸ ಪರಿಕ್ರಮ. ತಾಂತ್ರಿಕ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ನೀಡುವ, ಅವರನ್ನು ಹುರಿದುಂಬಿಸುವ ಯೋಜನೆಯನ್ನು ರೂಪಿಸಿದ ಸಂಘಟಕರ ಯೋಜನೆ ಶ್ಲಾಘ್ಯ.
ಕೃಷಿ ರಂಗದಲ್ಲಿ ಆದ, ಆಗುತ್ತಿರುವ ಬದಲಾವಣೆಗಳನ್ನು ಒಂದೇ ಸೂರಿನಡಿ ನೋಡುವ ಅವಕಾಶ. ಕೃಷಿಯಲ್ಲಿ ಯಾಂತ್ರೀಕರಣದ ಅನಿವಾರ್ಯತೆಯ ಕಾಲಘಟ್ಟದಲ್ಲಿ ನಮಗೆ ಬೇಕಾದ ಯಂತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಸೂಕ್ತ ಸಂದರ್ಭ. ಅದಕ್ಕಿಂತಲೂ ಮುಖ್ಯವಾಗಿ ಯಂತ್ರೋಪಕರಣ ಜ್ಞಾನವನ್ನು ಅಪ್ಡೇಟ್ ಮಾಡಿಕೊಳ್ಳಲು ಜಾಲತಾಣಗಳಿಗಿಂತ ಉತ್ತಮ ದಾರಿ.
 'ಕೃಷಿಕರ ಮಕ್ಕಳು ಕೃಷಿಕರಾಗುವುದಿಲ್ಲ' ಎಂದು ಆರಂಭದಲ್ಲಿ ಉಲ್ಲೇಖಿಸಿದ್ದೆ. ಕೃಷಿಗೆ ಗೌರವ ತರುವ,  ಕೃಷಿ ಕೆಲಸಗಳನ್ನು ಹಗುರ ಮಾಡುವ, ಬೆರಳ ತುದಿಯಲ್ಲಿರುವ ತಂತ್ರಜ್ಞಾನದ ಮಾಹಿತಿ ಮತ್ತು ಕೃಷಿಯಲ್ಲೂ ಭವಿಷ್ಯವಿದೆ ಎಂದು ಮನದಟ್ಟು ಮಾಡಿಕೊಟ್ಟರೆ ಬಹುತೇಕ ಮಕ್ಕಳು ರಾಜಧಾನಿಯ ಬಸ್ಸನ್ನು ಏರಲು ಯೋಚಿಸುತ್ತಾರೆ.

0 comments:

Post a Comment