Monday, February 17, 2014

ಹಿರಿಯ ಕೃಷಿಕ ಮರಿಕೆ ಎ.ಪಿ.ತಿಮ್ಮಪ್ಪಯ್ಯ ವಿಧಿವಶ

               ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸನಿಹದ ಮರಿಕೆಯ ಎ.ಪಿ.ತಿಮ್ಮಪ್ಪಯ್ಯನವರು (87) ಇಂದು (18-2-2014) ಬೆಳಿಗ್ಗೆ ಮೈಸೂರು 'ಇಂದ್ರಪ್ರಸ್ಥ'ದ ತನ್ನ ಪುತ್ರನ ಮನೆಯಲ್ಲಿ ವಿಧಿವಶರಾದರು. ಪತ್ನಿ ರಮಾ, ಪುತ್ರರಾದ ಸುಬ್ಬಯ್ಯ, ಚಂದ್ರಶೇಖರ್, ಸದಾಶಿವ; ಪುತ್ರಿಯರಾದ ಶಾರದಾ, ನಳಿನಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
              ತಿಮ್ಮಪ್ಪಯ್ಯನವರು ಮರಿಕೆ ಕುಟುಂಬದ ಹಿರಿಯಣ್ಣ.  ಎ.ಪಿ.ಗೋವಿಂದಯ್ಯ, ಎ.ಪಿ.ಗೌರೀಶಂಕರ, ಎ.ಪಿ.ರಮಾನಾಥ ರಾವ್ ತಮ್ಮಂದಿರು. ಇವರ ತಂದೆ ಎ.ಪಿ.ಸುಬ್ಬಯ್ಯರು 1915ರಿಂದ ಮರಿಕೆಯಲ್ಲಿ ಕೃಷಿ ಜೀವನ ಮಾಡುತ್ತಿದ್ದರು.  ಮಗ ತಿಮ್ಮಪ್ಪಯ್ಯರಿಗೆ ಹದಿನೆಂಟನೇ ವರುಷಕ್ಕೆ ಕೃಷಿ-ಕುಟುಂಬದ ಹೊಣೆ. 
              ತಿಮ್ಮಪ್ಪಯ್ಯ ಸ್ವತಃ ದುಡಿಮೆಗಾರ. ಹಿಡಿದ ಕೆಲಸದಲ್ಲಿ ಶೃದ್ಧೆ, ಪ್ರೀತಿ.  'ಕೃಷಿಕನಾದವನಿಗೆ ಎಲ್ಲಾ ಕೆಲಸಗಳು ಗೊತ್ತಿರಬೇಕು' ಎನ್ನುವ ಜಾಯಮಾನ. 1972ರಲ್ಲಿ ತೋಟದಲ್ಲಿ ಸ್ವತಃ ಹೊಂಡ ತೆಗೆದು ಅಡಿಕೆ, ತೆಂಗು ಗಿಡಗಳನ್ನು ನೆಟ್ಟು ಸಲಹಿದ ಸಾಹಸಿ. ಇವರಿಗೆ ಗಾರೆ, ಬಡಗಿ ಕೆಲಸಗಳು ಗೊತ್ತು. ಇವರ ಮನೆಯ ಮುಂದೆ ಹರಿವ ತೋಡಿನ ಒಂದು ಬದಿ ಜರಿಯದಂತೆ ದೊಡ್ಡ ಕಲ್ಲಿನ ಕಟ್ಟವನ್ನು ಸ್ವತಃ ಕಟ್ಟಿದ್ದರು. ಜವ್ವನದಲ್ಲಿ ಒಂದು ಕ್ವಿಂಟಾಲ್ ಭಾರವನ್ನು ಹೊರುತ್ತಿದ್ದರಂತೆ. ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಸಾಮಾಜಿಕ ವಿಚಾರಗಳಲ್ಲಿ ಚಿಂತನೆ, ನಿರಂತರ ಓದು, ಮಾಹಿತಿಗಳ ವಿನಿಮಯ, ದಾನ ಪ್ರವೃತ್ತಿಗಳು ತಿಮ್ಮಪ್ಪಯ್ಯನವರ ಬದುಕಿನಂಗವಾಗಿತ್ತು.
              ತಂದೆಯೊಂದಿಗಿದ್ದು ಸದಾಶಿವರು ಮರಿಕೆಯಲ್ಲಿ ಕೃಷಿ ಮಾಡುತ್ತಿದ್ದರೆ, ಅತ್ತ ಚಂದ್ರಶೇಖರರು ಮೈಸೂರಿನ ಇಂದ್ರಪ್ರಸ್ಥದಲ್ಲಿ ಕೃಷಿಗೆ ಹೊಸತೊಂದು ಭಾಷೆಯನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ಅಗಲಿದ ಹಿರಿಯ ಚೇತನಕ್ಕ ಅಕ್ಷರ ನಮನ.