Monday, February 17, 2014

ಹಿರಿಯ ಕೃಷಿಕ ಮರಿಕೆ ಎ.ಪಿ.ತಿಮ್ಮಪ್ಪಯ್ಯ ವಿಧಿವಶ

               ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸನಿಹದ ಮರಿಕೆಯ ಎ.ಪಿ.ತಿಮ್ಮಪ್ಪಯ್ಯನವರು (87) ಇಂದು (18-2-2014) ಬೆಳಿಗ್ಗೆ ಮೈಸೂರು 'ಇಂದ್ರಪ್ರಸ್ಥ'ದ ತನ್ನ ಪುತ್ರನ ಮನೆಯಲ್ಲಿ ವಿಧಿವಶರಾದರು. ಪತ್ನಿ ರಮಾ, ಪುತ್ರರಾದ ಸುಬ್ಬಯ್ಯ, ಚಂದ್ರಶೇಖರ್, ಸದಾಶಿವ; ಪುತ್ರಿಯರಾದ ಶಾರದಾ, ನಳಿನಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
              ತಿಮ್ಮಪ್ಪಯ್ಯನವರು ಮರಿಕೆ ಕುಟುಂಬದ ಹಿರಿಯಣ್ಣ.  ಎ.ಪಿ.ಗೋವಿಂದಯ್ಯ, ಎ.ಪಿ.ಗೌರೀಶಂಕರ, ಎ.ಪಿ.ರಮಾನಾಥ ರಾವ್ ತಮ್ಮಂದಿರು. ಇವರ ತಂದೆ ಎ.ಪಿ.ಸುಬ್ಬಯ್ಯರು 1915ರಿಂದ ಮರಿಕೆಯಲ್ಲಿ ಕೃಷಿ ಜೀವನ ಮಾಡುತ್ತಿದ್ದರು.  ಮಗ ತಿಮ್ಮಪ್ಪಯ್ಯರಿಗೆ ಹದಿನೆಂಟನೇ ವರುಷಕ್ಕೆ ಕೃಷಿ-ಕುಟುಂಬದ ಹೊಣೆ. 
              ತಿಮ್ಮಪ್ಪಯ್ಯ ಸ್ವತಃ ದುಡಿಮೆಗಾರ. ಹಿಡಿದ ಕೆಲಸದಲ್ಲಿ ಶೃದ್ಧೆ, ಪ್ರೀತಿ.  'ಕೃಷಿಕನಾದವನಿಗೆ ಎಲ್ಲಾ ಕೆಲಸಗಳು ಗೊತ್ತಿರಬೇಕು' ಎನ್ನುವ ಜಾಯಮಾನ. 1972ರಲ್ಲಿ ತೋಟದಲ್ಲಿ ಸ್ವತಃ ಹೊಂಡ ತೆಗೆದು ಅಡಿಕೆ, ತೆಂಗು ಗಿಡಗಳನ್ನು ನೆಟ್ಟು ಸಲಹಿದ ಸಾಹಸಿ. ಇವರಿಗೆ ಗಾರೆ, ಬಡಗಿ ಕೆಲಸಗಳು ಗೊತ್ತು. ಇವರ ಮನೆಯ ಮುಂದೆ ಹರಿವ ತೋಡಿನ ಒಂದು ಬದಿ ಜರಿಯದಂತೆ ದೊಡ್ಡ ಕಲ್ಲಿನ ಕಟ್ಟವನ್ನು ಸ್ವತಃ ಕಟ್ಟಿದ್ದರು. ಜವ್ವನದಲ್ಲಿ ಒಂದು ಕ್ವಿಂಟಾಲ್ ಭಾರವನ್ನು ಹೊರುತ್ತಿದ್ದರಂತೆ. ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಸಾಮಾಜಿಕ ವಿಚಾರಗಳಲ್ಲಿ ಚಿಂತನೆ, ನಿರಂತರ ಓದು, ಮಾಹಿತಿಗಳ ವಿನಿಮಯ, ದಾನ ಪ್ರವೃತ್ತಿಗಳು ತಿಮ್ಮಪ್ಪಯ್ಯನವರ ಬದುಕಿನಂಗವಾಗಿತ್ತು.
              ತಂದೆಯೊಂದಿಗಿದ್ದು ಸದಾಶಿವರು ಮರಿಕೆಯಲ್ಲಿ ಕೃಷಿ ಮಾಡುತ್ತಿದ್ದರೆ, ಅತ್ತ ಚಂದ್ರಶೇಖರರು ಮೈಸೂರಿನ ಇಂದ್ರಪ್ರಸ್ಥದಲ್ಲಿ ಕೃಷಿಗೆ ಹೊಸತೊಂದು ಭಾಷೆಯನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ಅಗಲಿದ ಹಿರಿಯ ಚೇತನಕ್ಕ ಅಕ್ಷರ ನಮನ.


2 comments:

subbanna said...

ಶ್ರಮ ಜೀವಿ, ವ್ಯವಹಾರ ಕುಶಲಿ, ದೊಡ್ಡ ಲಾಭ, ಲಾಭಬಡುಕತನ ವಿರೋಧಿ, ಇವರು ನನ್ನ ಅಪ್ಪನ ಅಣ್ಣ, ನನಗೆ ದೊಡ್ಡಪ್ಪ, ಮನೆಯ ಹಿರಿಯರು, ವ್ಯಾವಹಾರಿಕತೆಯ ಬಗೆಗೆ ಹೆಚ್ಚು ತಲೆಕೆಡಿಸಿಕೊ೦ಡವರಲ್ಲ, ಆದರೆ ಸದಾ ಯಶಸ್ವಿ. ಭೂಮಿ ಮತ್ತು ಸಮಯವನ್ನು ಸುಮ್ಮನೆ ಬಿಡುವುದು ಇವರಿಗೆ ಆಗುತ್ತಿರಲಿಲ್ಲ, ಕೃಷಿಯಲ್ಲಿ ಹೊಸತನ್ನು ಹುಡುಕಿ, ಅನುಷ್ಟಾನಗೊಳಿಸಿ, ಯಶಸ್ವಿಗೊಳಿಸಿದವರು. ಸ್ವಾವಲ೦ಬನೆ, ಸಮ್ಮಿಶ್ರ- ಸಮನ್ವಯದ ಕೃಷಿಯನ್ನು ಇವರು
ಮೆಚ್ಚಿಕೊ೦ಡವರು . ದನ ಸಾಕಣೆಯಲ್ಲಿ, ಸಾ೦ಪ್ರದಾಯಿಕ ಭತ್ತ ಮತ್ತು ಅಡಿಕೆ-ತೆ೦ಗು-ಕರಿಮೆಣಸು-ಕೊಕೋ ಕೃಷಿಯಲ್ಲಿ ದೊಡ್ಡ ಸಾಧನೆ ಮಾಡಿದವರು.
ಪುತ್ತೂರಿ೦ದ ಸುಳ್ಯ ದಾರಿಯಲ್ಲಿ ಸುಮಾರು ಏಳು ಕಿಮೀ ದೂರದಲ್ಲಿ ಸಿಗುವ ಬಲ್ಲೇರಿ ಕಾಡು ತಪ್ಪಲಿನ ಮರಿಕೆ ಬೈಲು ಇವರ ಕೃಷಿ ಸಾಧನೆಯ ಪ್ರತೀಕ. ಎಲ್ಲೆಡೆ ಇವರ ಕೃಷಿಯ ಚಾಪು ಕಾಣಬಹುದು. ಎ ಪಿ ಸುಬ್ರಹ್ಮಣ್ಯ೦

madanna manila said...

"" ಮರಿಕ್ಕೆ ಮನೆಯ ಹಿರಿಯರಾದ ಇವರು........ ಅಂದು ವಾರಾಣಾಶಿ ಸುಬ್ರಾಯ ಭಟ್ ರವರು ಚಾಕಾಲೇಟ್ ಕಾರ್ಖಾನೆ ಸ್ಥಾಪಿಸ ಹೊರಟಾಗ ಪುತ್ತೂರಿನಲ್ಲಿ ಅದರ ಬಗ್ಗೆ ಜಾಗ ಖರೀದಿಸಿದ್ದರು.. ನಾವು ಆವಾಗ ನಮ್ಮ ಮಣೀಲಾ ಸಂಸ್ಥೆಯಲ್ಲಿ ಕೃಷಿ ವಿದ್ಯ್ತುತ್ ನೀರಾವರಿ ಕೆಲಸಗಳ ಒಂದು ಸೇವಾಸ್ಂಸ್ಥೆ ಸ್ಥಾಪಿಸ ಹೊರಟವರು.. ಅದರ ಉಪ ಗುತ್ತಿಗೆಯ ಕೆಲಸ ಮಾಡುತ್ತಿದ್ದೆವು.. ಕ್ಯಾಂಪ್ಕೋ ಸಂಸ್ಥೆ ಯ ಎಲ್ಲ ಕೆಲಸಗಳ ಹತ್ತಿರ ದಿಂದ ನೋಡುವ ಅವಕಾಶ ನಮಗಿತ್ತು.. ಆವೇಳೆ..ಕ್ಯಾಂಪ್ಕೊ ಚಾಕಲೇಟ್ ಕಾರ್ಖ್ಹಾನೆ ಗುದ್ದಲಿ ಪೂಜೆ.. ಹತ್ತು ಸಾವಿರ ಜನರ ನಿರೀಕ್ಷೆ .. ವಾರಾಣಾಷಿ ಸುಬ್ರಾಯ ಭಟ್ ರವರು ಎರಡು ಮೂರು ಎಕರೆ ಪ್ರದೇಶದ ಬಹುಬಾಗ ಸಮತಟ್ಟು ಗೊಳಿಸಿ ಹೆಚ್ಚಿನ ಭಾಗ ಕ್ಕೆ ಚಪ್ಪರ ಹಾಕುವ ನಿಟ್ಟಿನಲ್ಲಿ.. ಈ ಮಹನೀಯರಿಗೂ ಕರಿಯಾಲ ದ ಮುಂಡತ್ತಜೆ ಶಿವರಾಮ ಭಟ್ ರವರಿಗೆ ವಹಿಸಿಕೊಟ್ಟಿದ್ದರು.. ಸುಮಾರು ಹತ್ತುದಿನಗಳ ಕಾಲ ಈ ಇಬ್ಬರುಮಹನೀಯರು.. ಹಗಲಿಡೀ ಬಿರು ಬಿಸಿಲಿನಲ್ಲಿ ನಿಂತು ನೂರಾರು ಕಾರ್ಮಿಕರನ್ನ ಒಂದು ಗೂಡಿಸಿ. ಸ್ವಯಂ ಸೇವಕರಾಗಿ.. ಮನೆಯಿಂದ ಬುತ್ತಿತಂದು ಅಲ್ಲೇ ಉಂಡು.. ತನ್ನ ಮನೆಯಲ್ಲಿದ್ದ ಅಡಿಕೆ ಮರವನ್ನೂ ನೀಡಿ ಸುಂದರ ವಾಗಿ ತೆಂಗಿನ ಮಡಲಿನ ಅಂತರ ಚಪ್ಪರವನ್ನ ಹಾಕಿಸಿದ್ದರು.. ಸ್ವತಹ್ ಕಂಬ ಹೊರಲು ಸಹಕರಿಸಿದ್ದನ್ನಾ ನಾನುಕಣ್ಣಾರೆ ಕಂಡವ. ನಂತರ ಗುದ್ದಲಿ ಪೂಜೆ ದಿನ ಶಂಕು ಸ್ಥಾಪನೆ ದಿವಸ ಇವರಿಬ್ಬರಿಗೂ ಏರು ಜ್ವರ.. ಒಂದೆರಡು ನಿಮಿಷಕ್ಕೆ ಕಾರ್ಯಕ್ರಮ ಕ್ಕೆ ಬಂದ ಇವರು.. ವೈದ್ಯರ ಸಲಹೆ ಯಂತೆ ವಿಶ್ರಾಂತಿ ಪಡೆಯಲು ಹೋದರು. ಸಭೆಯ ಬಂದ ಇವರನ್ನ ಗುರುತು ಹಿಡಿಯಲಾರದಷ್ತು ಕಪ್ಪಾಗಿ ಬಡವಾಗಿ ಹೋಗಿದ್ದರು.. ವಾರಾಷಾಷಿ ಸುಬ್ರಾಯ ಭಟ್ ರ ಅತ್ಯಂತ ಆತ್ಮೀರಾಗಿ ಇವರು ಇಡಿ ಚಪ್ಪರದ ಡಿಸೈನ್ ಮಾಡಿ ದ ಆ ಅಂತರ ಚಪ್ಪರ ಅತೀ ಸುಂದರ ವಾಗಿತ್ತು.. ಚಾಕಲೇಟ್ ಕಾರ್ಕಾನೆಯ ಈ ಶಂಕು ಸ್ಥಾಪನೆ ಇವರು ದುಡಿದ ರೀತಿಯ ಎಲ್ಲ ಹಿರಿ ಕಿರಿಯ ರೈತರು ಕ್ಯಾಂಪ್ಕೋ ಸದಸ್ಯರು ಮುಕ್ತ ಕಂಠ ದಿಂದ ಹೊಗಳುತ್ತಿದ್ದರು.. ಎಲ್ಲಿಯೂ ಗುರುತಿಸಿ ಸನ್ಮಾನಿಸಿ ಕೊಳ್ಲಲು ಬಯಸದ ಇವರು.. ಕೃಷಿ ಭೂಮಿಯ ಎಲ್ಲ ರೀತಿಯ ನೀರಿನ ಕಟ ಗಳು.. ಕಲ್ಲಿನ ಪಗಾರ ಗಳು.. ಹರಿಯುವ ನೀರಿನ ತೋಡಿನ ಕಗ್ಗಲ್ಲಿನ ಬದುಗಳ ನಿರ್ಮಾಣ ದಲ್ಲಿ ಅಪಾರ ಅನುಭವ ಹೊಂದಿದ "" ಪದವಿ ಸರ್ಟಿಪಿಕೇಟು ಇಲ್ಲದ ಸಿವಿಲ್ ಇಂಜಿನಿಯರ್ ಆಗಿದ್ದರು.. ಹಾಗೆಯ ಚ್ಯವನ ಪ್ರಾಶ ಲೇಹ ಸಹಿತ ಅನೇಕ ಆಯುರ್ವೇದ ಔಷದಿ ತಯ್ಯಾರಿಸ ಬಲ್ಲ ವೈದ್ಯರಾಗಿದ್ದರು.. ಪ್ರಶಸ್ತಿ ಪಡೆಯದ ಕೃಷಿ ಪಂಡಿತರಾರಿದ್ದರು.. ..

Post a Comment