Wednesday, March 31, 2010

ಅಡಿಕೆಯನ್ನಾಧರಿಸಿದ ತೊಂಡೆಕೃಷಿ

'ಈಗಿನ ಅಡಿಕೆ ಬೆಲೆಯನ್ನು ನೋಡಿದರೆ, ಅಡಿಕೆಕೃಷಿಗಿಂತ ತರಕಾರಿ ಕೃಷಿ ಒಳ್ಳೆಯದು' ಎನ್ನುತ್ತಾರೆ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಸನಿಹದ ಎ.ಸುಬ್ರಹ್ಮಣ್ಯ ಭಟ್. ಇವರಿಗೆ ಮುಖ್ಯ ಕೃಷಿ ಅಡಿಕೆ. ಜತೆಗೆ ಬಾಳೆ, ಭತ್ತ, ತರಕಾರಿ. ದಿನನಿತ್ಯದ ಕೃಷಿ ನಿರ್ವಹಣಾ ವೆಚ್ಚವನ್ನು ತರಕಾರಿ ಭರಿಸುತ್ತದೆ.

ಕಳೆದ ೩-೪ ವರುಷದಿಂದ ತೊಂಡೆಕಾಯಿ ಇವರಿಗೆ ಆದಾಯ ತರುವ ಉಪಕೃಷಿ. ಸನಿಹದ ಪುತ್ತೂರು ಮುಖ್ಯ ಮಾರುಕಟ್ಟೆ. ವಾರಕ್ಕೆ ಸರಾಸರಿ ಆರರಿಂದ ಏಳು ಕ್ವಿಂಟಾಲ್ ಇಳುವರಿ. ಕಿಲೋಗೆ ಸರಾಸರಿ 6 ರೂಪಾಯಿ ದರದಂತೆ ಮಾರಾಟ. ಸೀಸನ್ನಲ್ಲಿ ಇಪ್ಪತ್ತಾರು ಸಿಕ್ಕಿದ್ದೂ ಇದೆ!

ತೊಂಡೆ ಕೃಷಿಯಲ್ಲಿ 'ಮಾಡಿ-ನೋಡಿದ' ಸ್ವ-ಅನುಭವ. ತೊಂಡೆ ಕೃಷಿಯ ಅನುಭವಿ ಗುಂಡಿಮಜಲು ಗೋಪಾಲ ಭಟ್ ಇವರಿಗೆ ಪ್ರೇರಣೆ. ಎರಡೂವರೆ ಅಡಿ ಅಗಲ, ಮೂರುವರೆ ಅಡಿ ಉದ್ದ, ಮೂರಡಿ ಅಳದ ಹೊಂಡ. ಇದರೊಳಗೆ ಸುಡುಮಣ್ಣು ಮಿಶ್ರಮಾಡಿದ ಮಣ್ಣಿನ ಅರ್ಧಡಿ ಎತ್ತರದ ಮಡಿ.

ಚಪ್ಪರಕ್ಕೆ ಹಬ್ಬಿದ ಚೆನ್ನಾಗಿ ಇಳುವರಿ ಬರುವ ಅರ್ಧ ಇಂಚು ದಪ್ಪದ ಬಳ್ಳಿಯಲ್ಲಿ ಒಂದಡಿ ಬಳ್ಳಿಯನ್ನು ತುಂಡರಿಸಿ, ಅದರಲ್ಲಿ ಒಂದು ಗಂಟು ಮಣ್ಣಿನೊಳಗಿರುವಂತೆ ನೆಡುವುದು. 'ಒಂದು ಹೊಂಡದಲ್ಲಿ ಕನಿಷ್ಠ ಐದು ಬಳ್ಳಿ ನೆಡಿ. ಕ್ರಮೇಣ ಎರಡೋ ಮೂರೋ ಬದುಕುಳಿಯುತ್ತದೆ. ಮೂಲ ಬಳ್ಳಿಯಿಂದ ಕಟ್ ಮಾಡಿದ ಇಪ್ಪತ್ತನಾಲ್ಕು ಗಂಟೆಯ ಒಳಗೆ ನೆಡಬೇಕು' ಎನ್ನುತ್ತಾರೆ ಎ.ಎಸ್.ಭಟ್. ಬುಡದಿಂದ ಬುಡಕ್ಕೆ ಮತ್ತು ಸಾಲಿನಿಂದ ಸಾಲಿಗೆ ಇಪ್ಪತ್ತಡಿ ಅಂತರ.

ಬಳ್ಳಿ ಚಿಗುರು ಬಂದ ನಂತರ ಅವಕ್ಕೆ ಆಧಾರ ಕೊಟ್ಟು, ಒಂದು ಬುಡಕ್ಕೆ ಎರಡು ಬುಟ್ಟಿಯಂತೆ ಹಟ್ಟಿಗೊಬ್ಬರ ಉಣಿಕೆ. ಇಪ್ಪತ್ತೇ ದಿವಸಕ್ಕೆ ಬಳ್ಳಿ ಹಬ್ಬಲು ಸುರು. ಚಪ್ಪರಕ್ಕೆ ಬಳ್ಳಿ ಹಬ್ಬಲು ಸುರುವಾದ ನಂತರ ಬುಡದ ಹೊಂಡ ಮುಚ್ಚುವಂತೆ ವಾರದಲ್ಲಿ ಮೂರು ದಿವಸ ನೀರು ನಿಲ್ಲಿಸುತ್ತಾರೆ. 'ಯಾವುದೇ ಕಾರಣಕ್ಕೂ ತೊಂಡೆ ಬಳ್ಳಿಯ ಬುಡ ಒಣಗಿರಬಾರದು. ತೇವವಾಗಿರಬೇಕು' ಇವರ ಅನುಭವದ ಮಾತು.

ತಿಂಗಳೊಳಗೆ ಹೂ ಬಿಡುತ್ತದೆ. ಈ ಹಂತದಲ್ಲಿ ಹೇನು, ನೊಣ ಬಂದುಬಿಡುತ್ತದೆ. ಅದಕ್ಕೆ 1:5ರ ಅನುಪಾತದಲ್ಲಿ ಗೋಮೂತ್ರದ ಸಿಂಪಡಣೆ. 'ಸಮತಟ್ಟಾದ ಭೂಮಿಯಲ್ಲಿ ಕೀಟಗಳ ಹಾವಳಿ ಜಾಸ್ತಿ. ಹಾಗಾಗಿ ತೊಂಡೆಕೃಷಿಗೆ ಇಳಿಜಾರಾದ ಭೂಮಿ ಒಳ್ಳೆಯದು. ಕೀಟ ಬಾಧೆ ಕಡಿಮೆ.'

ಇವರ ತೊಂಡೆ ಇಳುವರಿಯ ಲೆಕ್ಕಾಚಾರ - ಒಂದು ಬುಡದಲ್ಲಿ ಆರಂಭದ ದಿವಸಗಳಲ್ಲಿ ಒಂದು ವಾರಕ್ಕೆ ಎರಡು ಕಿಲೋದಿಂದ ಇಳುವರಿ ಆರಂಭ. ಬಳ್ಳಿಗೆ ಎರಡು ತಿಂಗಳು ಕಳೆದಾಗ ವಾರಕ್ಕೆ 5-7 ಕಿಲೋ ಸಿಗುತ್ತದೆ. ನಂತರದ ದಿವಸಗಳಲ್ಲಿ 15-17 ಕಿಲೋ ಖಚಿತ. ವಾರಕ್ಕೆ ಎರಡು ಕೊಯಿಲು. ಈ ಹಂತದಲ್ಲಿ ಗಿಡ ಸದೃಢವಾಗಲು ಮತ್ತು ಇಳುವರಿ ಜಾಸ್ತಿಯಾಗಲು ಒಂದೊಂದು ಬುಡಕ್ಕೆ ಒಂದು ಕಿಲೋದಷ್ಟು ರಾಸಾಯನಿಕ ಗೊಬ್ಬರ ಉಣಿಕೆ. ವಾರಕ್ಕೆ ಎರಡು ಕೊಯಿಲು ಮಾಡಿದರೆ ಗಿಡದಲ್ಲೇ ತೊಂಡೆಕಾಯಿ ಹಣ್ಣಾಗುವ ಸಾಧ್ಯತೆ ಕಡಿಮೆ. ಜನವರಿ-ಫೆಬ್ರವರಿ ತಿಂಗಳಲ್ಲಿ ಇಳುವರಿ ಕಡಿಮೆ.

ಎರಡೆಕ್ರೆ ಜಾಗದಲ್ಲಿ 72 ತೊಂಡೆ ಬುಡಗಳಿವೆ. ಜೂನ್ ತಿಂಗಳಲ್ಲಿ ನಾಟಿ. ನೀರು, ಗೊಬ್ಬರ, ಕೊಯಿಲು ಮತ್ತು ಇತರ ನಿರ್ವಹಣಾ ಕೆಲಸಕ್ಕೆ ವಾರಕ್ಕೆ ಇಪ್ಪತ್ತು ಮಂದಿಯ ಶ್ರಮ. 'ಕಳೆದ ವರುಷ ಸುಮಾರು ಒಂದೂಕಾಲು ಲಕ್ಷ ರೂಪಾಯಿ ತೊಂಡೆ ಗಳಿಸಿಕೊಟ್ಟಿದೆ. ಇದರಲ್ಲಿ ನಲವತ್ತು ಸಾವಿರದಷ್ಟು ಖರ್ಚು.’ ಎನ್ನುತ್ತಾರೆ.

ಶೇ.40ರಷ್ಟು ತೊಂಡೆಕಾಯಿ ಸಮಾರಂಭಗಳಿಗೆ ವಿತರಿಸುತ್ತಾರೆ. ಮಿಕ್ಕುಳಿದುದು ಪುತ್ತೂರಿನಲ್ಲಿ ಮಾರಾಟ. 'ಚಪ್ಪರದಲ್ಲಿ ಬಳ್ಳಿಗಳು ಯೂನಿಫಾರ್ಮಿನಲ್ಲಿದೆಯೋ ಎಂಬುದನ್ನು ಗಮನಿಸಬೇಕು. ಯಾವುದಾದರೂ ಬಳ್ಳಿ ಸೊರಗಿದರೆ ತಕ್ಷಣ ಗೊಬ್ಬರ, ನೀರು ಕೊಟ್ಟು ಆರೈಕೆ ಮಾಡಬೇಕು.'

ನೈಲಾನ್ ಹಗ್ಗ ಮತ್ತು ತಂತಿ ಬಳಸಿ ಚಪ್ಪರ. ಆರಂಭದಲ್ಲಿ ಅವರಿಗಾದ ವೆಚ್ಚ ಇಪ್ಪತ್ತು ಸಾವಿರ ರೂಪಾಯಿ. ಒಮ್ಮೆ ಚಪ್ಪರ ಹಾಕಿದರೆ ಮುಂದಿನ ಐದು ವರುಷಕ್ಕೆ ತೊಂದರೆಯಿಲ್ಲ. ಮತ್ತೆ ಪುನಃ ತಂತಿ, ಹಬ್ಬ ಬದಲಿಸಬೇಕು.

ಈ ವರುಷ ನೆಟ್ಟ ಹೊಂಡದಲ್ಲಿ ಮುಂದಿನ ವರುಷ ನೆಡುವುದಿಲ್ಲ. ಅದರ ಪಕ್ಕವೇ ಹೊಸ ಹೊಂಡದಲ್ಲಿ ನಾಟಿ. ನಂತರದ ವರುಷ ಹಳೆ ಹೊಂಡದಲ್ಲೇ ಪುನರಾವರ್ತನೆ. ಇದರಿಂದಾಗಿ ಇಳುವರಿಯಲ್ಲಿ ಹೆಚ್ಚಳ ಕಂಡಿದ್ದಾರಂತೆ. ಜತೆಗೆ ಮಣ್ಣಿನ ಫಲವತ್ತತೆಯೂ.
'ನಮ್ಮಲ್ಲಿಗೆ ಘಟ್ಟದ ಮೇಲಿನಿಂದ ತರಕಾರಿ ಬರುವುದು ಹೆಚ್ಚು. ಈಗೀಗ ಸಾಕಷ್ಟು ಕೃಷಿಕರು ತರಕಾರಿ ಕೃಷಿಯತ್ತ ಒಲವು ತೋರಿಸುತ್ತಿದ್ದಾರೆ. ಊರಿನ ತರಕಾರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕೆಲವೊಮ್ಮೆ ಪೂರೈಸಲು ಕಷ್ಟವಾಗುತ್ತಿದೆ. ನಾನು ಯಾವುದೇ ವಿಷ ಸಿಂಪಡಣೆ ಮಾಡದಿರುವುದರಿಂದ ತೊಂಡೆಕಾಯಿ ಖರೀದಿಸಲು ನನ್ನಲ್ಲಿಗೆ ಹುಡುಕಿ ಬರುತ್ತಾರೆ. ಅಡಿಕೆಯ ದರದ ಸೋಲನ್ನು ತೊಂಡೆ ಭರಿಸಿದೆ' ಎನ್ನುವಾಗ ಎ.ಎಸ್.ಭಟ್ಟರ ಮುಖ ಅರಳುತ್ತದೆ!

Tuesday, March 23, 2010

ಮೂರು ತೆನೆ - ಇಪ್ಪತ್ತು ಕ್ವಿಂಟಾಲ್!


ಸಕಲೇಶಪುರ ಸನಿಹದ ಯೆಡೇಹಳ್ಳಿಯ ಯಶೋದಾರಿಗೆ 'ನಾಗಮಲೆ' ತಳಿ ರಾಗಿಯ ಮೂರು ತೆನೆ ಸಿಕ್ಕಿತು. ಅದನ್ನು ಬಿತ್ತಿ, ಬೆಳೆದಾಗ ಇಪ್ಪತ್ತಾರು ಸೇರು (24 ಕಿಲೋ) ರಾಗಿ ಮಡಿಲಿಗೆ ಬಂತು.

ಕಳೆದ ವರ್ಷ ಈ ಬೀಜವನ್ನು ಪುನಃ ಬಿತ್ತಿದಾಗ ಅವರಿಗೆ ಒಂದೂವರೆ ಕ್ವಿಂಟಾಲ್ ಇಳುವರಿ. ಇದರಲ್ಲಿ ತೆನೆ ಆಯ್ಕೆ ಮಾಡಿ ಒಂದು ಕ್ವಿಂಟಾಲ್ ರಾಗಿಯನ್ನು ಬೀಜಕ್ಕಾಗಿ ಆಯ್ದರು. ಏನಿಲ್ಲವೆಂದರೂ ಮೂವತ್ತು ಮಂದಿ ರೈತರು ಇವರಿಂದ ಬೀಜ ಒಯ್ದಿದ್ದಾರೆ.
ನೆಲಮೂಲ ಜ್ಞಾನದೊಂದಿಗೆ ಬೆಳೆದ ಹಳ್ಳಿಯ ರೈತ ಮಹಿಳೆ ರಾಗಿಯನ್ನು ಅಭಿವೃದ್ಧಿಗೊಳಿಸಿದ ಕಾಯಕದಲ್ಲಿ ಹೇಳುವಂತಹ ವಿಶೇಷವಿಲ್ಲದಿರಬಹುದು! ಆದರೆ ಬೀಜ ಕಂಪೆನಿಗಳ ದೂರವಾಣಿ ಸಂಖ್ಯೆ ಜೋಪಾನವಾಗಿಡುವ ನಮಗೆ ಯಶೋದಾ ಅವರ ಈ ಕೆಲಸ ಮಸುಕಾಗಿ ಕಂಡರೆ ಆಶ್ಚರ್ಯವಿಲ್ಲ.

'ಮಧುಗಿರಿ ಕೊರಟಗೆರೆ ಭಾಗದ ಗುಡ್ಡಗಾಡಿನಲ್ಲಿ ಚೆನ್ನಾಗಿ ಬೆಳೆಯುವ ನಾಗಮಲೆ, ಗುಡ್ಡಕಿಂಡಾಲ, ಮಳಲಿ, ಕುಳ್ಳು, ಕರಿಮುಂಡುಗ ರಾಗಿ ತಳಿಗಳ ಮೂರ್ಮೂರು ತೆನೆ ಸಿಕ್ಕಿತು. ಇವೆಲ್ಲವನ್ನೂ ನಾಟಿ ಮಾಡಿ ಇಳುವರಿ, ಗಿಡಗಳ ಆರೋಗ್ಯ ಇವೆಲ್ಲವನ್ನೂ ನೋಡಿದಾಗ ಈ ಭಾಗಕ್ಕೆ ನಾಗಮಲೆ ತಳಿ ಸರಿಹೊಂದುತ್ತದೆ' ಎನ್ನುತ್ತಾರೆ ಭೂಮಿ ಸುಸ್ಥಿರ ಆಭಿವೃದ್ಧಿ ಸಂಸ್ಥೆಯ ಜಯಪ್ರಸಾದ್. ಕಳೆದ ಮೂರು ವರ್ಷಗಳಿಂದ ಈ ಸಂಸ್ಥೆ ರೈತರೊಂದಿಗೆ ಕೆಲಸ ಮಾಡುತ್ತಿದೆ.

ತೆನೆ ಆಯ್ಕೆ ಹೇಗೆ? ಯಶೋದಾ ಹೇಳುತ್ತಾರೆ - ತೆನೆಯು ಬಲಿತಿದ್ದು, ಮಧ್ಯಮ ಎತ್ತರ, ಹೆಚ್ಚು ತೆಂಡೆ ಬಂದಿರಬೇಕು. ತೆನೆಯ ಇಲುಕು ಒಳಭಾಗಕ್ಕೆ ಮಡಚಿದಂತಿರಬೇಕು. ಕೆಲವೊಂದು ಸಲ ಇಲುಕು ನೆಟ್ಟಗಿದ್ದರೂ ಪರವಾಗಿಲ್ಲ. ಇಂತಹ ತೆನೆಯನ್ನು ಬೀಜಕ್ಕಾಗಿ ಆಯ್ಕೆ ಮಾಡುತ್ತೇವೆ. ಇದನ್ನು ಪುನಃ ಬಿತ್ತಿದಾಗ ತೆನೆಯ ಗಾತ್ರ, ಇಳುವರಿ ಒಂದೇತೆರನಾಗಿ ಬರುತ್ತೆ'.
ಮೊದಲಿಗೆ ಮಡಿ ಮಾಡಿಟ್ಟುಕೊಂಡು ಕೊಟ್ಟಿಗೆ ಗೊಬ್ಬರ, ಎರೆ ಗೊಬ್ಬರವನ್ನು ಮಣ್ಣಿನೊಂದಿಗೆ ಮಿಶ್ರ ಮಾಡಿ ರಾಗಿ ಬೀಜ ಬಿತ್ತುತ್ತಾರೆ. ಬಿತ್ತಿ 20-22 ದಿವಸಕ್ಕೆ ನಾಟಿಗೆ ಸಸಿ ರೆಡಿ. ನಾಟಿ ಮಾಡಿದ 120ನೇ ದಿವಸಕ್ಕೆ ಕಟಾವ್. 'ಅರ್ಧ ಕಿಲೋ ಬೀಜವು ಐದು ಗುಂಟೆಗೆ ಸಾಕಾಗುತ್ತದೆ' ಯಶೋದಾ ಅನುಭವ.

ಸಾವಯವದಲ್ಲಿ ಬೆಳೆದ, ಉತ್ತಮ ಇಳುವರಿ ನೀಡುವ, ಈ ಭಾಗಕ್ಕೆ ಹೊಸದಾದ ನಾಗಮಲೆ ತಳಿಯನ್ನು ಅಭಿವೃದ್ಧಿಪಡಿಸಲು ಕೃಷಿ ಇಲಾಖೆ ಆಸಕ್ತವಾಗಿದೆಯಂತೆ. ಯೆಡೇಹಳ್ಳಿಯಲ್ಲಿ ಐದು ಗುಂಟೆಯಿಂದ ಹದಿನೈದು ಗುಂಟೆ ತನಕ ಹೊಸದಾಗಿ ರಾಗಿ ಕೃಷಿ ಮಾಡುವ ಸುಮಾರು ಐವತ್ತು ಮಂದಿ ರೈತರು ರೂಪುಗೊಂಡಿದ್ದಾರೆ. ಅಕ್ಕಪಕ್ಕದ ಗ್ರಾಮಗಳ ರೈತರು ಆಸಕ್ತರಾಗಿ ಬೆಳೆಯುತ್ತಿದ್ದಾರೆ.

'ಈ ರಾಗಿಯ ಮುದ್ದೆ ಬಹಳ ರುಚಿ. ಬಿಸಿ ಆರಿದಾಗ ಮುದ್ದೆ ಬಿರಿಯುವುದಿಲ್ಲ. ಬಣ್ಣವೂ ಚೆನ್ನಾಗಿದೆ. ಈ ವರ್ಷ ಒಂದೆಕ್ರೆಯಲ್ಲಿ ಇಪ್ಪತ್ತು ಕ್ವಿಂಟಾಲ್ ಇಳುವರಿ ಬರ್ಬೋದು' ಎಂಬ ಸಂತಸದಲ್ಲಿದ್ದಾರೆ ಯಶೋದಾ. ಸಕಲೇಶಪುರ ಸುತ್ತಮುತ್ತ ರಾಗಿ ಬೆಳೆಯುವವರ ಸಂಖ್ಯೆ ವಿರಳ. ಖರೀದಿಸಿ ಬಳಸುವವರೇ ಹೆಚ್ಚು. ವಾರಕ್ಕೆ ಕನಿಷ್ಠ ಎರಡ್ಮೂರು ದಿನ ರಾಗಿಮುದ್ದೆ ತಯಾರಾಗುವ ಅಡುಗೆ ಮನೆಗಳೇ ಅಧಿಕ.

ಭೂಮಿ ಸಂಸ್ಥೆಯ ಮುಂದಾಳ್ತನದಲ್ಲಿ ಯೆಡೇಹಳ್ಳಿಯ ಬಹುತೇಕ ರೈತರಲ್ಲಿ ಎರೆಗೊಬ್ಬರ, ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಕಡ್ಡಿಕಾಂಪೋಸ್ಟ್ಗಳಿವೆ. ತಾವು ಬಳಸುವುದಲ್ಲದೆ, ಮಿಕ್ಕುಳಿದುದನ್ನು ಮಾರಾಟ ಮಾಡುವಷ್ಟು ಗೊಬ್ಬರಗಳ ಸಂಪನ್ನತೆಯಿದೆ. 'ಈ ಸಲ ನಾವು ಹನ್ನೆರಡು ಟ್ರಾಕ್ಟರ್ ಕಾಂಪೋಸ್ಟ್ ಮಾರಾಟ ಮಾಡಿದ್ವಿ' ಎನ್ನುತ್ತಾರೆ ಯಶೋದಾ ಅವರ ಪತಿ ವಸಂತ.

ಈ ಕುಟುಂಬಕ್ಕೆ ಎರಡೆಕ್ರೆಯೊಳಗಿನ ಚಿಕ್ಕ ಭೂಮಿ. ಹೆಚ್ಚುವರಿಯಾಗಿ ಗುತ್ತಿಗೆಗೆ ಒಂದೆಕ್ರೆ ಗದ್ದೆ ಪಡೆದು ಭತ್ತದ ಕೃಷಿ. ಬಂದ ಇಳುವರಿಯಲ್ಲಿ ಬಹ್ವಂಶ ಗೇಣಿಗೆ ಸಮ. ಪೂರ್ತಿ ಸಾವಯವದಲ್ಲಿ ಒಂದೆಕ್ರೆ ಗದ್ದೆಯಲ್ಲಿ ಭತ್ತ ಬೆಳೆದಿದ್ದಾರೆ. ತಾವೇ ತಯಾರಿಸಿದ ಹಟ್ಟಿಗೊಬ್ಬರ, ಎರೆಗೊಬ್ಬರಗಳ ಉಣಿಕೆ. 'ರಾಸಾಯನಿಕಗಳನ್ನು ಬಳಸುತ್ತಿದ್ವಿ. ಸ್ವಲ್ಪ ಜಾಗದಲ್ಲಿ ಸಾವಯವ ಮಾಡಿದ್ದರಿಂದ ಇಳುವರಿ ಕಡಿಮೆಯಾಗಿಲ್ಲ' ಎನ್ನುತ್ತಾರೆ. ಮೆಣಸು, ಶುಂಠಿ, ಕಾಫಿ ಇತರ ಕೃಷಿಗಳು.

ಮನೆ ಮಂದಿಯ ದುಡಿಮೆ. ಹೆಚ್ಚುವರಿ ಕೆಲಸಗಳಿಗೆ ಕೂಲಿಯವರ ಅವಲಂಬನೆ. ಅದೂ ದುಬಾರಿ. 'ಟಿಲ್ಲರ್ ಇದ್ದರೆ ಕೃಷಿ ಕೆಲಸ ಹಗುರ ಮಾಡ್ಬೋದು. ಮೂರೆಕ್ರೆಗಿಂತ ಕಡಿಮೆ ಜಾಗ ಇದ್ದವರಿಗೆ ಲೋನ್ ಕೊಡೋದಿಲ್ಲಾರಿ' ವಸಂತ್ ಅಸಹಾಯಕತೆ.
ಯಶೋದಾರಂತಹ ಚಿಕ್ಕ ರೈತರು ನಮ್ಮ ನಡುವೆ ಎಷ್ಟಿಲ್ಲ? ಸದ್ದುಗದ್ದಲವಿಲ್ಲದೆ ತಮ್ಮಷ್ಟಕ್ಕೇ ದುಡಿಯುವ ಇಂತಹ ರೈತರಿಗೆ ನೀಡುವ ಸವಲತ್ತು ನೀಡಿಕೆಗಿರುವ ಪಾಲಿಸಿಗಳು ಸರಳವಾಗಬೇಕು.

ಗೊಬ್ಬರದಬ್ಬರವಿಲ್ಲದ 'ಜಿನೈನ್'

ಸೀಮೆಗೊಬ್ಬರ (ರಾಸಾಯನಿಕ) ರಹಿತವಾಗಿ ಬಾಳೆ ಬೆಳೆಯಲು ಯಾಕೆ ಸಾಧ್ಯವಾಗುತ್ತಿಲ್ಲ - ನೋಡ್ಬೇಕು ಎಂಬ ಹಠವಿತ್ತು. ಬೆಳೆದು ನಿಂತ ಬಾಳೆ, ಗೊನೆಯನ್ನು ಕಂಡಾಗ ಸಾಧ್ಯ ಅಂತ ವಿಶ್ವಾಸ ಬಂತು' - ಬಾಳೆ ಕೃಷಿಯ ಯಶದ ಖುಷಿಯಲ್ಲಿ ಮಾತಿಗೆಳೆಯುತ್ತಾರೆ ಸಕಲೇಶಪುರ ಸನಿಹದ ಯಡೆಹಳ್ಳಿಯ ಆರ್.ಭಾಗ್ಯವತಿ ರುದ್ರಪ್ಪ.

ಮನೆಗೆ ತಾಗಿಕೊಂಡೇ ಎರೆಗೊಬ್ಬರದ ತೊಟ್ಟಿ. ಅದರ ಸನಿಹ ಸ್ವಲ್ಪ ಇಳಿಜಾರಾದ ಭೂಮಿಯಲ್ಲಿ ನೂರು 'ಜಿನೈನ್' ತಳಿಯ ಬಾಳೆ ನೆಟ್ಟು ಒಂದು ವರ್ಷವಾಯಿತು. ಆಳೆತ್ತರದ ಗೊನೆಗಳು ಇನ್ನೇನು ಕಟಾವ್ ಆಗಲಿದೆ!

ಗಿಡದಿಂದ ಗಿಡಕ್ಕೆ ಆರಡಿ ಅಂತರ. ಒಂದೂವರೆ ಅಡಿ ಆಳದ ಹೊಂಡ. ಎರಡಡಿ ಉದ್ದಗಲ. ಇದಕ್ಕೆ ಎರೆಗೊಬ್ಬರ ಹಾಕಿ ಗಿಡ ನಾಟಿ. ಹತ್ತು ದಿನಕ್ಕೊಮ್ಮೆ ನಿಯಮಿತ ಸ್ಲರಿ ಮತ್ತು ಎರೆಗೊಬ್ಬರ ಉಣಿಕೆ. ಯಾವುದೇ ಸಿಂಪಡಣೆ ಮಾಡಿಲ್ಲ. 'ಗೊನೆ ಬಿಟ್ಟ ನಂತರವೂ ಸ್ಲರಿ, ಗೊಬ್ಬರ ಇದ್ದೀವಿ. ತೊಂದರೆಯಾಗಿಲ್ಲ. ಮೂರ್ನಾಲ್ಕು ಗಿಡಗಳಿಗೆ ಕಟ್ಟೆ ರೋಗ ಬಂತು. ಅದನ್ನು ಸಮೂಲ ತೆಗೆದು ಪುನಃ ಗಿಡ ನೆಟ್ವಿ' ಎನ್ನುತ್ತಾರೆ ಭಾಗ್ಯವತಿ. ಎರೆಹುಳಗಳನ್ನು ಬಾಳೆ ಬುಡಕ್ಕೆ ಬಿಟ್ಟಿದ್ದಾರೆ. ಅಲ್ಲೂ ಕೂಡಾ ಎರೆಗೊಬ್ಬರದ ಕಾರ್ಖಾನೆ ಸ್ಥಷ್ಟಿಯಾಗಿವೆ!

ಬೇಸಿಗೆಯಲ್ಲಿ ನೀರಾವರಿ. ಮನೆಕೆಲಸವನ್ನು ಹೊಂದಿಸಿಕೊಂಡು ಬಾಳೆ ಕೆಲಸ. ನೀರು, ಸ್ಲರಿ, ಗೊಬ್ಬರ, ಒಣಗಿದ ಬಾಳೆಕೈಗಳನ್ನು ಕಡಿದು ಎರೆತೊಟ್ಟಿಗೆ ಸೇರಿಸುವುದು ಮುಂತಾದ ಕೆಲಸಕ್ಕೆ ಇವರಿಗೆ ಸಹಾಯಕರು ಬೇಡ. ದಿನಕ್ಕೆ ಒಂದು ಗಂಟೆ ಇವರ ಕೈ ಕೆಸರು! ಗಿಡ ನಾಟಿ ಮಾಡುವಾಗ ಮಾತ್ರ ಸಹಾಯಕರ ಅವಲಂಬನೆ.

ಬಾಳೆ ನೆಟ್ಟು ಒಂದು ವರ್ಷವಾಯಿತು. 'ಆರುವರೆ ತಿಂಗಳಲ್ಲೇ ಗೊನೆ ಬಿಟ್ಟಿದೆ'. ಹದಿನೈದಡಿ ಎತ್ತರಕ್ಕೆ ಬೆಳೆದಿದೆ. ಗೊನೆಯ ಭಾರ ತಾಳಲು ಮರದ ಕವಲನ್ನು ಕೊಟ್ಟಿದ್ದಾರೆ. 'ಸೀಮೆ ಗೊಬ್ಬರ ಹಾಕಿದರೆ ಗಿಡ ಎತ್ತರಕ್ಕೆ ಬರುವುದಿಲ್ಲ. ಇದು ನೋಡಿ, ಎಷ್ಟು ಎತ್ತರ ಬೆಳೆದಿದೆ' ಎನ್ನುವಾಗ ಅವರಿಗೆ ಖುಷಿ.

ಒಂದು ಗೊನೆ 35-45 ಕಿಲೋ ಭಾರ. ಗೊನೆಯೊಂದು ಏನಿಲ್ಲವೆಂದರೂ 350-400 ಗಳಿಸಿಕೊಡುತ್ತದೆ. ಕಿಲೋಗೆ 10-12 ರೂಪಾಯಿ. ಬಂದು ಒಯ್ಯುವ ಕೆಲವು ನಿಶ್ಚಿತ ಗಿರಾಕಿಗಳು. ಗೊನೆಯಲ್ಲಿ ಒಳ್ಳೆಯ ಬೆಲೆಯ ನಿರೀಕ್ಷೆಯಲ್ಲಿ ರಾಜಧಾನಿಗೊಯ್ಯುವ ಸಿದ್ಧತೆಯಲ್ಲಿದ್ದಾರೆ ವೈ.ಸಿ.ರುದ್ರಪ್ಪನವರು.

ಇವರಿಗೆ ಐವತ್ತೆಕ್ರೆ ಕೃಷಿಭೂಮಿ. ಕಾಫಿ, ಭತ್ತ ಸಿಂಹಪಾಲು. ಹತ್ತು ವರ್ಷಗಳ ಹಿಂದೆ ನಾಲ್ಕೂವರೆ ಎಕ್ರೆಯಲ್ಲಿ ಸೀಮೆ ಗೊಬ್ಬರ ಬಳಸಿ ಬಾಳೆ ಬೆಳೆದ ಅನುಭವ. ಇವರು ಸಾಮಾಜಿಕ ಕಾರ್ಯಕರ್ತ. ಸ್ಥಳೀಯ ನಿಸರ್ಗ ಸಾವಯವ ಕೃಷಿಕರ ಸಂಘದ ಅಧ್ಯಕ್ಷ. ಗಂಡನ ಅನುಪಸ್ಥಿತಿಯಲ್ಲಿ ಭಾಗ್ಯವತಿಯವರ ಉಸ್ತುವಾರಿಕೆ.

'ಅಂದಿನ ಬಾಳೆ ಕೃಷಿಯ ಕಷ್ಟ-ಸುಖದ ಅರಿವಿತ್ತು. ಗೊನೆಗಳನ್ನು ಒಯ್ಯಲು ಬರುವ ಲಾರಿಗಳ ಭರಾಟೆ ಇನ್ನೂ ಮನಸ್ಸಿಂದ ಮಾಸಿಲ್ಲ' ಹಳೆ ಅನುಭವದ ಬುತ್ತಿ ತೆರೆಯುತ್ತಾರೆ ಭಾಗ್ಯವತಿಯವರು. ಅಂದಿನ ಅನುಭವವೇ ಸ್ವ-ಶ್ರಮದಿಂದ ಬಾಳೆ ಬೆಳೆಯಲು ಪ್ರೇರಣೆ.

ಕಳೆದ ಮೂರು ವರ್ಷಗಳಿಂದ 'ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ'ಯು ಯಡೆಹಳ್ಳಿಯಲ್ಲಿ 'ಗ್ರಾಸ್ರೂಟ್' ಲಕ್ಷ್ಯವಿಟ್ಟು ಸಾವಯವ ಗೊಬ್ಬರ/ಕೃಷಿಯ ಅರಿವನ್ನು ಬಿತ್ತುತ್ತಿದೆ. ಅದರ ನೇರ ಫಲಶ್ರುತಿಯಲ್ಲೊಂದು ಬಾಳೆ ಕೃಷಿ. ಭಾಗ್ಯವತಿಯರಿಗೆ ಇವೆಲ್ಲಾ ಉಸಾಬರಿ ಇಲ್ಲದೆ ಹಾಯಾಗಿರಬಹುದಿತ್ತು. ಇವುಗಳ ಮಧ್ಯೆ 'ಸೀಮೆಗೊಬ್ಬರ ಇಲ್ಲದೆ ಬೆಳೆಯಬೇಕು' ಎಂಬ ಛಲ ಮತ್ತು ಸ್ವ-ದುಡಿಮೆ - ಇದರಲ್ಲಿದೆ ಸಂದೇಶ.

ಆರ್. ಭಾಗ್ಯವತಿ, ತಿ/ಠ ವೈ.ಸಿ.ರುದ್ರಪ್ಪ, ಯಡೇಹಳ್ಳಿ ಅಂಚೆ, ಸಕಲೇಶಪುರ ತಾಲೂಕು, ಹಾಸನ ಜಿಲ್ಲೆ.
ದೂರವಾಣಿ : 08173-292610

Wednesday, March 10, 2010

ಸ್ವಾವಲಂಬಿ ಕೃಷಿಯ ತಪಸ್ವಿ'ಚೇರ್ಕಾಡಿ' ಅಂದರೆ ಸಾಕು, ರಾಮಚಂದ್ರ ರಾವ್ ಅನ್ನಬೇಕಾಗಿಲ್ಲ - ಒಂದು ಕೃಷಿ ಪದ್ಧತಿಯೇ ಕಣ್ಣ ಮುಂದೆ ನಿಂತುಬಿಡುತ್ತದೆ. ಈ ಪದ್ಧತಿಯ ಕಲಿಕೆ ಮತ್ತು ಅಳವಡಿಕೆ ಪುಸ್ತಕ ಆಧರಿಸಿದ್ದಲ್ಲ. ಎರವಲು ಪಡೆದದ್ದೂ ಅಲ್ಲ. ನಿತ್ಯ ಮಣ್ಣಿನೊಂದಿಗೆ, ಗಿಡಗಳೊಂದಿಗಿರುತ್ತಾ ಅವೂ ಬೆಳೆದಂತೆ, ತಾನೂ ಬೆಳೆಯುತ್ತಾ ರೂಪಿಸಿದ ಕೃಷಿಕ್ರಮ.

ಮೇಲ್ನೋಟಕ್ಕೆ ಚೇರ್ಕಾಡಿಯವರ ಕೃಷಿಯಲ್ಲಿ ಹೇಳುವಂತಹುದು, ನೋಡುವಂತಹುದು ಹೆಚ್ಚೇನಿಲ್ಲ ಅನ್ನಿಸಬಹುದು. ಅವರ ಕೃಷಿ ವಿಚಾರಗಳನ್ನು 'ಮಾಡಿ-ನೋಡಿ' ಅನುಭವಿಸಿದರೆ ಮಾತ್ರ ಮಹತ್ವ ವೇದ್ಯ.

ಕೃಷಿ ಮತ್ತು ಬದುಕನ್ನು ಚೇರ್ಕಾಡಿಯವರು ಪ್ರತ್ಯಪ್ರತ್ಯೇಕಿಸಿಲ್ಲ. ಅದಕ್ಕೆ ವಾಣಿಜ್ಯಿಕ ಟಚ್ ಕೊಟ್ಟಿಲ್ಲ! 'ಅವರಿಗೆ ಬದುಕಿಗಾಗಿ ಕೃಷಿ, ಕೃಷಿಗಾಗಿ ಬದುಕು ಅಲ್ಲ' ಎನ್ನುತ್ತಾ ಬಾಳಿದವರು. ಒಂದು ಕಾಲಘಟ್ಟದಲ್ಲಿ ಹೊಟ್ಟೆಪಾಡಿಗಾಗಿ ಹತ್ತಿ ಬೆಳೆದು, 'ಚರಕ'ದಿಂದ ನೂಲು ಎಳೆದರು. ಮಗ್ಗದಿಂದ ಬಟ್ಟೆ ನೇಯ್ದರು. ಅರ್ಧ ಹೊಟ್ಟೆ ತುಂಬಿದರೂ, ಪೂರ್ತಿ ತುಂಬಿದ ಸಂತೃಪ್ತಿ ಉಂಟಾದುದು - ನೇಯ್ದ ಬಟ್ಟೆಯನ್ನು ಸ್ವತಃ ಧರಿಸಿದಾಗ!

ಮಹಾತ್ಮ ಗಾಂಧೀಜಿಯವರ ವಿಚಾರ, ಅದರ ಅನುಷ್ಠಾನ ರಾಮಚಂದ್ರ ರಾಯರ ಬದುಕಿನುಸಿರು. ತುಂಡು ಬಟ್ಟೆ, ಹೆಗಲಲ್ಲಿ ಶಲ್ಯ, ಅಗತ್ಯ ಬಿದ್ದರಷ್ಟೇ ಅಂಗಿ - ಇದು ಬಿಟ್ಟರೆ ಬೇರ್ಯಾವ ಉಡುಪನ್ನೂ ಆಶಿಸಿಲ್ಲ. ರಂಗುರಂಗಿನ ಪ್ರಲೋಭನೆಗಳು ಅಟ್ಟಿಸಿಕೊಂಡು ಬಂದಿಲ್ಲ.

ನಲುವತ್ತರ ದಶಕದಲ್ಲಿ ದೇಶದಲ್ಲಿ ಅನ್ನಕ್ಷಾಮ ಬಂದಾಗ 'ನಿಮ್ಮ ಅನ್ನವನ್ನು ನೀವೇ ಬೆಳೆಯಿರಿ' ಗಾಂಧೀಜಿ ಕರೆ. ಅಲ್ಲಿಂದ ಶುರುವಾಯಿತು, ಭತ್ತದ ಕೃಷಿ. ಎರಡಕ್ರೆ ಭೂಮಿಯ ಒಂದು ಭಾಗದಲ್ಲಿ ಮಳೆನೀರು ಬಳಸಿ ಭತ್ತದ ಬೇಸಾಯ.

1962ರ ಒಂದು ದಿನ. ಮೆಣಸಿನ ಏರು ಮಡಿಯಲ್ಲಿ ಅದರಷ್ಟಕ್ಕೇ ಬೆಳೆದ ಒಂದೇ ಒಂದು ಭತ್ತದ ತೆನೆ. ಅದರಲ್ಲಿ ಸಿಕ್ಕಿತು, ಅರ್ಧ ಪಾವು ಭತ್ತ. ' ನೀರು ನಿಲ್ಲಿಸದೆ, ಕಾರ್ಮಿಕರ ಅವಲಂಬನೆಯಿಲ್ಲದೆ, ಉಳುಮೆ ಮಾಡದೆ ಭತ್ತದ ಕೃಷಿ ಸಾಧ್ಯ' - ಚೇರ್ಕಾಡಿಯವರ 'ಆರನೇ ಸೆನ್ಸ್' ಚುರುಕಾಯಿತು. ಸಿಕ್ಕಿದ ಅರ್ಧ ಪಾವನ್ನು ಮಡಿ ಮಾಡಿ ಬೆಳೆದರು. ಬರೋಬ್ಬರಿ ಇಪ್ಪತ್ತೊಂದು ಕಿಲೋ ಇಳುವರಿ. ಮುಂದಿನ ವರುಷಗಳಲ್ಲಿ ಕ್ವಿಂಟಾಲಾಯಿತು.

'ನೋಡಿ. ಯಾವ ಸಂಶೋಧನೆಗಳನ್ನು ಭೂಮಿ ಸ್ವೀಕರಿಸುವುದಿಲ್ಲ. ನಮ್ಮ ಬೆವರು ಭೂಮಿಗೆ ಬಿದ್ದರೆ, ಅದು ಅನ್ನದ ರೂಪದಲ್ಲಿ ಚಿನ್ನವಾಗಿ ಬರುತ್ತದೆ' ಇಲಾಖೆಗಳಿಗೆ, ಸಂಶೋಧಕರಿಗೆ ಚೇರ್ಕಾಡಿಯವರ ಸಲಹೆ. ಈ ಕ್ರಮದಲ್ಲಿ ಪಡೆದ ಇಳುವರಿ ಇದೆಯಲ್ಲಾ, ಇಲಾಖೆಗಳ ಅಂಕಿಅಂಶಗಳ ಕಡತವನ್ನು ಮುಚ್ಚಿಸಿತ್ತು! ಕೆಲವರ ಮುಖ ಕೆಂಪಗಾಗಿತ್ತು.

ಕೃಷಿ ನೋಡಲು ಸಾವಿರಾರು ರೈತರು ಚೇರ್ಕಾಡಿಯವರ ತೋಟಕ್ಕೆ ಬಂದರು. ನೋಡಿದರು. ಮಾತಾಡಿಸಿದರು. 'ಶಹಬ್ಬಾಸ್' ಕೊಟ್ಟರು. 'ಅದೆಲ್ಲಾ ಬೇಡ. ನೀವು ಮಾಡಿ ನೋಡಿ ಫಲಿತಾಂಶ ಹೇಳಿ. ಸುಮ್ಮನೆ ಮಾತನಾಡಿ ಪ್ರಯೋಜನವಿಲ್ಲ' ಎನ್ನುತ್ತಿದ್ದರು.
ಭೂಮಿಗೆ ಹಟ್ಟಿಗೊಬ್ಬರವೇ ಅಮೃತ. ಅದಕ್ಕಿಂತ ಮಿಗಿಲಾದ ಬೇರೆ ಗೊಬ್ಬರವಿಲ್ಲ. ಸುತ್ತಲಿನ ಕಚ್ಚಾವಸ್ತುಗಳನ್ನು ಭೂಒಡಲಿಗೆ ಹಾಕಿದರೆ ಗೊಬ್ಬರವಾಗುತ್ತದೆ. ರಾಯರು ಸಾವಯವ, ರಾಸಾಯನಿಕ ಶೂನ್ಯ - ಅಂತ 'ಬೋರ್ಡು' ಹಾಕಿ ಕೃಷಿ ಮಾಡಿದವರಲ್ಲ. ಅವರ ತೋಟಕ್ಕೆ ರಾಸಾಯನಿಕ, ಬೀಜ ಕಂಪೆನಿಗಳು ನುಗ್ಗಿಯೇ ಇಲ್ಲ!

ಡಾ.ಟಿ.ಎ.ಪೈಗಳು ಇವರ ಕಷ್ಟ ನೋಡಿ 'ನಿಮಗೆ ಪಂಪ್ ಸೆಟ್ ಕೊಡಿಸ್ತೇನೆ' ಅಂದರು. ಅದನ್ನು ನಯವಾಗಿ ತಿರಸ್ಕರಿಸಿ, ಬಾವಿಯಿಂದ ನೀರು ಸೇದಿ, ಏತದಿಂದ ಎತ್ತಿ ತೋಟದ ಗಿಡಗಳನ್ನು ಹಸಿರು ಮಾಡಿದ್ದರು. ಚರಕದಂತಹುದೇ, ಆದರೆ ಸ್ವಲ್ಪ ದೊಡ್ಡದಾದ ರಾಟೆಯನ್ನು ಮಾಡಿ ಬಾವಿಯ ನೀರನ್ನು ಮೇಲೆತ್ತಿದ ದಿವಸಗಳನ್ನು ಹೇಳುವಾಗ ಚೇರ್ಕಾಡಿಯವರು ಮುಖ ಬಾಡುತ್ತಿರಲಿಲ್ಲ.

'ಹೌದಪ್ಪಾ.. ಪಂಪ್ ಕೊಟ್ಟರು ಅಂತಿಟ್ಟುಕೊಳ್ಳೋಣ. ಅರ್ಧ ಗಂಟೆಯಲ್ಲಿ ನನ್ನ ಕೆಲಸಗಳೆಲ್ಲಾ ಮುಗಿದುಹೋಗುತ್ತದೆ. ನಂತರ ಏನು ಮಾಡೋಣ. ಅಂಗಡಿಯ ಜಗಲಿಯಲ್ಲೋ, ಬಸ್ಸ್ಟಾಂಡಿನಲ್ಲೋ, ರಸ್ತೆಯಲ್ಲೋ ಪರದೂಷಣೆ ಮಾಡುತ್ತಾ ಸಮಯ ಕೊಲ್ಲಲು ನನಗಿಷ್ಟವಿಲ್ಲ' ಎನ್ನುತ್ತಿದ್ದರು. ಕೃಷಿಕನಾದವ ತೋಟದಲ್ಲೇ ಇರಬೇಕು, ಆತನಿಗೆ ತಿರುಗಾಟ ಸಲ್ಲದು. ತಿರುಗಾಟ ಅನಿವಾರ್ಯವಾದರೂ ಹಿಡಿತದಲ್ಲಿರಲಿ - ಅವರ ಕಿವಿಮಾತು.

ನಿತ್ಯ ಬದುಕಿಗೆ ಬೇಕಾಗುವಂತಹ ಎಲ್ಲವೂ ತೋಟದಲ್ಲಿರಬೇಕು. ಅಂಗಡಿಯಿಂದ ಉಪ್ಪು, ಚಹಪುಡಿ ಬಿಟ್ಟರೆ ಬೇರೇನನ್ನೂ ತರುವಂತಿರಬಾರದು! ಈ ನಿಲುವಿನಲ್ಲಿ ಅವರಿಗೆ ರಾಜಿಯಿಲ್ಲ. ಮಾವು, ಹಲಸು, ಚಿಕ್ಕು, ಶುಂಠಿ, ಕಾಳುಮೆಣಸು, ಅನಾನಸ್, ಗೇರು.. ಒಂದೇ ಎರಡೇ. ಜತೆಗೆ ಕಾಡುಮರಗಳು.

'ಬ್ಯಾಂಕಲ್ಲಿ ಹಣವಿಡಲು ನನ್ನಲ್ಲಿಲ್ಲ. ತೋಟವೇ ನನಗೆ ಬ್ಯಾಂಕ್. ಇಲ್ಲಿರುವ ಮರಗಳೆಲ್ಲಾ ಫಿಕ್ಸೆಡ್ ಡಿಪಾಸಿಟ್. ನೆಲದೊಳಗಿನ ಶುಂಠಿ, ಅರಸಿನ ಏಟಿಎಂ. ಬೇಕಾದಾಗ ನಗದೀಕರಿಸಿದರಾಯಿತು' ಎನ್ನುತ್ತಿದ್ದರು. ಒಮ್ಮೆ ಬ್ಯಾಂಕಿನಿಂದ ಸಾಲ ಮಾಡಿದ್ದರಂತೆ. ಸಾಕೋ ಸಾಕಾಯಿತು - ಮತ್ತೆಂದೂ ಸಾಲಕ್ಕಾಗಿ ಬ್ಯಾಂಕಿನ ಮುಂದೆ ಅರ್ಜಿ ಹಿಡಿದು ನಿಲ್ಲಲಿಲ್ಲ. ವೇದಿಕೆಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಹೇಳುತ್ತಿದ್ದರು - 'ದಯಮಾಡಿ ಕೃಷಿಕರಿಗೆ ಸಾಲಕೊಟ್ಟು ಅವರನ್ನು ಲಗಾಡಿ ಕೊಡಬೇಡಿ'.

ಕೃಷಿಕನಿಗೆ ಎರಡು ಎಕರೆಗಳಿಗಿಂತ ಹೆಚ್ಚು ಕೃಷಿ ಭೂಮಿಯಿರಬಾರದು. ಅದರೊಳಗೆ ಹೆಚ್ಚು ತಾಳಿಕೆ ಬರುವಂತಹ ಕೃಷಿ ಬೆಳೆಯಿರಿ. ಕೃಷಿ ಕೆಲಸಗಳಿಗೆ ಯಂತ್ರೋಪಕರಣಗಳು ಬಂದಿವೆ. ಅವು ನಮ್ಮನ್ನು ಆಳಬಾರದು. ಅವುಗಳ ಸಹವಾಸ ಹೆಚ್ಚಾದರೆ ಮತ್ತೆ ಅಳುವೇ ಗತಿ!

'ಈಗ ನೋಡಿ. ಎಲ್ಲೆಲ್ಲೂ ಪವರ್.. ಬೊಬ್ಬೆ! ವಿದ್ಯುತ್..! ಕೃಷಿಕನಿಗೆ ಪವರ್ ಬರುವುದು ಸ್ವಿಚ್ ಹಾಕಿದಾಗ ಅಲ್ಲ. ತೋಟದಲ್ಲಿದ್ದಷ್ಟೂ, ಮಣ್ಣಿನೊಂದಿಗೆ ಇದ್ದಷ್ಟೂ ಹೊತ್ತು ಪವರ್ ಜಮೆ ಆಗುತ್ತ ಇರುತ್ತದೆ.'

ಶಾಲೆಗಳಲ್ಲಿ ಮಕ್ಕಳಿಗೆ ಕೃಷಿ ಪಾಠ ಬೇಕು. ಥಿಯರಿಯೊಂದಿಗೆ ಪ್ರಾಕ್ಟಿಕಲ್ ಕೂಡ. ಅಲ್ಲಿ ಕಲಿತ ಪಾಠ ಮನೆಯಲ್ಲಿ ಅನುಷ್ಠಾನವಾಗಬೇಕು. ಈಗಿನ ಶಿಕ್ಷಣ ಪದ್ಧತಿ ಮಕ್ಕಳನ್ನು ಕೃಷಿಯಿಂದ ದೂರಮಾಡುತ್ತದೆ - ಎಂಬ ದೂರದೃಷ್ಟಿ.
ಮಾತಿನ ಮಧ್ಯೆ ರಾಯರು ಹೇಳಿದ್ದರು - 'ಯಾರು ಶ್ರಮ ಪಟ್ಟು, ಬೆವರುಸುರಿಸಿ ತಂತಮ್ಮ ತೋಟದಲ್ಲಿ ದುಡೀತಾರೋ ಅವರೆಂದೂ 'ಅದು ಕೊಡಿ, ಇದು ಕೊಡಿ' ಅಂತ ಬೊಬ್ಬೆ ಹಾಕುವುದಿಲ್ಲ!

ಕೃಷಿಕ ಸ್ವಾವಲಂಬಿಯಾಗಿ ಬದುಕಬಹುದು ಎಂಬುದನ್ನು ಚೇರ್ಕಾಡಿ ರಾಮಚಂದ್ರ ರಾಯರು ಬದುಕಿ ತೋರಿಸಿದರು. 'ಸ್ವಾವಲಂಬನೆ ಮತ್ತು ಸ್ವ-ನಂಬಿಕೆ' ಅವರ ಕೃಷಿಯ ಗುಟ್ಟು. ಇವೆರಡೂ ಇದ್ದರೆ ಕೃಷಿ ಸೋಲುವುದಿಲ್ಲ. ಒಂದು ದಿನವೂ 'ಕೃಷಿ ಪ್ರಯೋಜನವಿಲ್ಲ' ಅತ ಗೊಣಗಿದವರಲ್ಲ. ಇದರಿಂದಾಗಿ 'ಕೊಳ್ಳುಬಾಕ ಸಂಸ್ಕೃತಿ' ಅವರ ಅಂಗಳವೇರಿಲ್ಲ. ಬದುಕಿನ ಹೊಯ್ದಾಟವನ್ನು ತಾನು ನಂಬಿದ ತತ್ವದಲ್ಲಿ ನಿಯಂತ್ರಿಸಿದ ಚೇರ್ಕಾಡಿಯವರು ನಿಜಾರ್ಥದಲ್ಲಿ ಓರ್ವ ಸಂತ.

ಚೇರ್ಕಾಡಿಯವರು ಹಾಕಿಕೊಟ್ಟ 'ಕೃಷಿ ಬದುಕಿನ ದಾರಿ' ಮುಂದಿದೆ. ಸರಳ ಬದುಕಿನ ಅಡಿಗಟ್ಟನ್ನು ಹಾಕಿಕೊಟ್ಟಿದ್ದಾರೆ. ನಾವದರ ನೊಣಪ್ರತಿಯಾಗುವುದು ಬೇಡ, ಆಗಲೂ ಸಾಧ್ಯವಿಲ್ಲ. ಆದರೆ 'ಸರಳ' ದಾರಿಯಿದೆಯಲ್ಲಾ - ಅದರಲ್ಲಿ ಕಲ್ಲುಮುಳ್ಳುಗಳಿಲ್ಲ! ನಡೆಯುವ ಕೆಲಸ ನಾವೇ ಮಾಡಬೇಕಷ್ಟೇ.

ತೊಂಭತ್ತೆರಡು ಸಂವತ್ಸರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಚೇರ್ಕಾಡಿಯವರು ಫೆ.21, 2010 ರಂದು ಕಾಲವಾದರು. ಅವರಿಗಿದು ಅಕ್ಷರ ನಮನ.

Monday, March 1, 2010

ತರಕಾರಿಯ ತಾಜಾ ಪ್ರಾತ್ಯಕ್ಷಿಕೆ!

ವಾರದಾರಂಭಕ್ಕೆ ಮಂಗಳೂರಿನ ಕದ್ರಿ ಪಾರ್ಕಿನಲ್ಲಿ ಕಾಲಾವಧಿ 'ಫಲಪುಷ್ಪ ಪ್ರದರ್ಶನ' ನಡೆದಿತ್ತು. ಪುಷ್ಪ ವಿನ್ಯಾಸಗಳು. ಗುಲಾಬಿ ಹೂವಿನ ಕಲಶ, ಕಲ್ಲಂಗಡಿಯಲ್ಲಿ ಕೆತ್ತಿದ ವಿವಿಧ ಸಾಹಿತಿಗಳ ರಚನೆಗಳು, ಪಿಲಿಕುಳದ ದೇಸೀ ತಯಾರಿಗಳು, ಸಿರಿ ಉತ್ಪನ್ನಗಳು.. ಮಿಕ್ಕಂತೆ ಮಾಮೂಲಿ ಮಳಿಗೆಗಳು.

ಪ್ರದರ್ಶನದಂಗವಾಗಿಯೇ ರೂಪಿತವಾಗಿತ್ತು - 'ಪೌಷ್ಟಿಕಾಂಶ ತರಕಾರಿ ತೋಟ'. ಸುಮಾರು ಇಪ್ಪತ್ತೈದು ವಿಧಧ ತರಕಾರಿಗಳನ್ನು ಬೆಳೆಸಲಾಗಿತ್ತು. ಫಲದ ಭಾರದಿಂದ ಅವೆಲ್ಲಾ ತೊನೆದಿದ್ದುವು! ಹೆಚ್ಚಿನವು ಮಾಗಿ, ದಿನದೆಣಿಕೆ ಸುರುಮಾಡಿದ್ದುವು!
ತರಕಾರಿ ತೋಟದ ವಿವರಗಳ ಬಗ್ಗೆ ಇಲಾಖಾ ಮಳಿಗೆಯೊಂದರಲ್ಲಿ ಕೇಳಿದಾಗ ಅದೇ ಸರಕಾರಿ ಮರ್ಜಿಯ ಉತ್ತರ! ಅತ್ತಿತ್ತ ಅಲೆದಾಡಿದ ಬಳಿಕ ಒಬ್ಬ ಮಹಾಶಯನಿಂದ 'ಅಲ್ಲಿ ಹೋಗ್ರಿ.. ಬಾಬು ನಾಯಕ್ ಎಂಬವರಿದ್ದಾರೆ. ಅವರಲ್ಲಿ ಕೇಳಿ' ಎಂಬ ಉತ್ತರ ಸಿಕ್ತು! 'ಇನ್ನೆಂದೂ ಯಾರಿಗೂ ನಗುಮುಖ ತೋರಿಸಲಾರೆ' ಎಂಬ ಹರಕೆ ಹೊತ್ತಂತಿತ್ತು ಆ ಮುಖ!

ನಾಯ್ಕರನ್ನು ಹುಡುಕಿ ಹೋದೆ. ತರಕಾರಿ ಗಿಡಗಳಿಗೆ ತಮ್ಮ ಪಾಡಿಗೆ ನೀರು ಹಾಕುತ್ತಿದ್ದರು. 'ನೋಡಿ.. ಈ ಜನವರಿ ತಿಂಗಳಿಗೆ ಸರಿಯಾಗಿ ಇಳುವರಿ ಬರುವಂತೆ ಬೆಳೆಸಿದ್ದೇವೆ. ಫೆಬ್ರವರಿಯಲ್ಲಿ ಪ್ರದರ್ಶನ ಮಾಡಿದ್ದಾರೆ. ತರಕಾರಿಗಳು ಗಿಡದಲ್ಲಿ ಉಳಿದಿರುವುದೇ ಪುಣ್ಯ' ಎಂದರು.

ಪ್ರದರ್ಶನಕ್ಕೆ ಪುಷ್ಟವೇ ಮುಖ್ಯ. ಹಾಗಾಗಿ ಅವಗಳು ಅರಳುವ ಸಮಯದಲ್ಲೇ ಪುಷ್ಪಪ್ರದರ್ಶನ. ಈ ಸಲ ಹವಾಮಾನದ ವೈಪರೀತ್ಯದಿಂದಾಗಿ ಒಂದು ತಿಂಗಳು ತಡವಾಗಿ ಹೂಗಳು ಅರಳಿವೆ. ಹಾಗಾಗಿ ಫೆಬ್ರವರಿಯಲ್ಲಿ ಪ್ರದರ್ಶನ. 'ಜನವರಿಯಲ್ಲಿ ಶೋ ಇರಬೇಕಿತ್ತು. ತರಕಾರಿಗಳಿಗೆ ಕಣ್ಣುಮುಟ್ಟುತ್ತಿತ್ತು. ಅಷ್ಟು ಹಿಂಡುಹಿಂಡಾಗಿ ಬಂದಿತ್ತು'- ಎನ್ನುತ್ತಾರೆ ಬಾಬು.

ಕಳೆದ ವರುಷದಿಂದ ತರಕಾರಿ ಡೆಮೋ ಸುರು. ಈ ಸಲ ವಿಸ್ತಾರಗೊಂಡಿದೆ. ಬದನೆ, ಸೊರೆ, ಚೀನಿಕಾಯಿ, ಬೂದುಗುಂಬಳ, ಬೆಂಡೆ, ತಿಂಗಳ ಹುರುಳಿ, ಮೂಲಂಗಿ.. ಹೀಗೆ ನಾಯ್ಕರ ಕೈ ಗುಣದಿಂದ ಸೊಂಪಾಗಿ ಬೆಳೆದಿವೆ.

ಆರಂಭಕ್ಕೆ ರಾಸಾಯನಿಕ ಗೊಬ್ಬರ ಕೊಟ್ಟಿಲ್ಲ! ಕುರಿಗೊಬ್ಬರ ಹೇರಳ ಕೊಟ್ಟಿದ್ದಾರೆ. ಇಳುವರಿಯ ಹಂತವೂ ದಾಟಿತಲ್ವಾ - ಪ್ರದರ್ಶನಕ್ಕಾಗಿ ಇವರನ್ನು ಉಳಿಸಲೋಸುವ ರಾಸಾಯನಿಕ ಗೊಬ್ಬರೆ ಕೊಟ್ಟಿದ್ದೇವೆ - ಎನ್ನುತ್ತಾರೆ ಬಾಬು. ಇವರ ಅನುಭವದಂತೆ ಕುರಿಗೊಬ್ಬರ ಹೆಚ್ಚಾದರೆ ಅವಕ್ಕೆ ಯಥೇಷ್ಟ ನೀರು ಬೇಕು, ಗಿಡದ ಬುಡಕ್ಕೆ ಉಷ್ಣ ಹೆಚ್ಚಾಗಿ ಗಿಡಗಳು ಬಾಡುತ್ತವೆ. ಎರೆ, ಹಟ್ಟಿಗೊಬ್ಬರ ಒಳ್ಳೆಯದು.

ಪ್ರದರ್ಶನಕ್ಕೆ ಬಂದ ತರಕಾರಿ ಪ್ರಿಯರೊಬ್ಬರು ಕೇಳಿದರು - ನಾವು ಎಷ್ಟು ಆರೈಕೆ ಮಾಡಿದರೂ ಬೀಜ ಮೊಳಕೆ ಬರುವುದೇ ಇಲ್ಲ - ಏನು ಕಾರಣ? ತರಕಾರಿ ಕೃಷಿಗೆ ಬಿಸಿಲು ಬೇಕು. ನೆರಳಿನಲ್ಲಿ ಗಿಡ, ಇಳುವರಿ ಚೆನ್ನಾಗಿ ಬರುವುದಿಲ್ಲ. ಮೊಳಕೆ ಹಂತದಲ್ಲಿ ನೀರಿನಂಶ ಮಣ್ಣಿನಲ್ಲಿ ಹೆಚ್ಚಾಗಕೂಡದು. ಬಳ್ಳಿ ತರಕಾರಿಗಳಿಗೆ ಚಪ್ಪರ ಬೇಕೇ ಬೇಕು. ಅದು ಅದರ ಗುಣ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟರೆ ಬಳ್ಳಿ ತರಕಾರಿಗಳು ಒಳ್ಳೆಯ ಇಳುವರಿಯನ್ನು ನೀಡುತ್ತವೆ.

ಸುಂದರ ವಿನ್ಯಾಸದಲ್ಲಿ ತರಕಾರಿ ತೋಟವನ್ನು ಬೆಳೆಸಿದ್ದಾರೆ. ಪ್ರವೇಶದಲ್ಲೇ ಬಸಲೆ ಚಪ್ಪರ. ನಂತರ ಸೊಪ್ಪು ತರಕಾರಿಗಳ 'ಗಡಿಯಾರ ತೋಟ'! ಅಂದರೆ ವೃತ್ತಾಕಾರದಲ್ಲಿ ವಿವಿಧ ಸೊಪ್ಪು ತರಕಾರಿಗಳ ಬೆಳೆ. ಹೊರಭಾಗದಲ್ಲಿ ಅಲಂಕಾರಿಕ ಕೋಸು ಗಿಡಗಳು. ಮಧ್ಯದಲ್ಲಿ ಹರಿವೆ ಗಿಡಗಳು. ಮಧ್ಯೆ ಪಾಲಕ್, ಮೆಂತೆ ಮೊದಲಾದ ಸೊಪ್ಪುಗಳು.

'ದಿಸ್ ಇಸ್ ಬ್ರಿಂಜಾಲ್' ಇಂಗ್ಲೀಷ್ ಅಮ್ಮ ತನ್ನ ಮಗುವಿಗೆ ಬದನೆಯನ್ನು ವಿವರಿಸುತ್ತಿದ್ದರು. ಆ ಮಗು ಬದನೆಯನ್ನು ಮುಟ್ಟಿ-ತಟ್ಟಿ ಸಂತೋಷಪಡುತ್ತಿತ್ತು. ಅಂಗಡಿಯಿಂದ ತೊಟ್ಟೆಯಲ್ಲಿ ತೂಗಿಸಿಕೊಂಡು ಮನೆಗೆ ತರುವ ತರಕಾರಿಯನ್ನು ನೋಡಿದ ಮಗುವಿಗೆ ಗಿಡದ 'ಲೈವ್' ತರಕಾರಿಯನ್ನು ನೋಡಿದಾಗ ಎಷ್ಟು ಖುಷಿಯಾಗಿತ್ತು ಗೊತ್ತಾ?

ಶಾಲಾ ತಂಡವೊಂದು ಪ್ರದರ್ಶನವನ್ನು ವೀಕ್ಷಿಸಲು ಬಂದಿತ್ತು. ಬಹಳ ಶಿಸ್ತಿನ ವೀಕ್ಷಣೆ. ಮಕ್ಕಳು ಗಿಡಗಳನ್ನು, ಬದನೆ, ಬೆಂಡೆ, ಸೊರೆಗಳನ್ನು ನೇವರಿಸುತ್ತಿದಾಗ, 'ಡಿಸಿಪ್ಲಿನ್.. 'ಡಿಸಿಪ್ಲಿನ್' ಶಿಕ್ಷಕಿಯರು 'ಬೊಬ್ಬೆ'ಯೊಡೆಯುತ್ತಿದ್ದರು! ಪ್ರದರ್ಶನಕ್ಕೆ ಮಕ್ಕಳನ್ನು ಕರೆತರುವುದು ಶಾಲೆಯ 'ಡಿಸಿಪ್ಲಿನ್ ಶೋ'ಗೆ ಅಲ್ವಲ್ಲಾ. ಅಲ್ಲಾದರೂ ಮಕ್ಕಳನ್ನು ಹಾಯಾಗಿ ಬಿಟ್ಟುಬಿಡಿ. ಮಕ್ಕಳೇ ಕಲಿತುಕೊಳ್ಳುತ್ತಾರೆ. ಈ 'ಡಿಸಿಪ್ಲಿನ್' ಭೂತವಿದೆಯಲ್ಲಾ, ಮಕ್ಕಳ ಅರ್ಧ ಜ್ಞಾನದಾಹವನ್ನು ಮುರುಟಿಸಿಬಿಡುತ್ತದೆ.
ಅಲ್ಲೊಂದೆಡೆ ಕೆಂಪು ಬಸಳೆ ಬೆಳೆದಿದ್ದರು. 'ಅದರ ಬೀಜ ಬೇಕಿತ್ತಲ್ವಾ' ಒಬ್ಬರು ಬೇಡಿಕೆ ಮುಂದಿಟ್ಟರು. 'ಅದರ ಬೀಜವನ್ನು ಬಿತ್ತಿ ಬಸಳೆ ಬೆಳೆಯಬಾರದು. ಗೆಲ್ಲನ್ನು ನೆಡಿ. ಬೀಜವನ್ನು ಬಿತ್ತಿದರೆ ನಮ್ಮ ಜೀವಮಾನ ಪರ್ಯಂತ ನಮ್ಮ ಮನೆತೋಟದಲ್ಲಿ ಬೆಳೆಯುತ್ತಿರಬೇಕು. ಇಲ್ಲವಾದರೆ ನೆಟ್ಟವರಿಗೆ ಅಪಶಕುನ' ರೂಢಿಯಲ್ಲಿದ್ದ ನಂಬುಗೆಯನ್ನು ಬಾಬು ಹೇಳುತ್ತಿದ್ದಂತೆ ಆ ಅಮ್ಮ ಜಾಗ ಖಾಲಿ ಮಾಡಬೇಕೇ?

ಮತ್ತೊಂದೆಡೆ ಅಲಂಕಾರಿಕ ಮೆಣಸು ಗಿಡ. ಬರೋಬ್ಬರಿ ಇಳುವರಿ. 'ಅದರ ಬೀಜ ಎಲ್ಲಿ ಸಿಗುತ್ತೆ.' ಹಲವಾರು ಮಂದಿ ಕೇಳುವವರೇ. 'ನಗರದಲ್ಲಿ ತರಕಾರಿ ಬೆಳಸುವ ಆಸಕ್ತಿ ಇದೆ. ಆದರೆ ಮಾಡುವ ಕ್ರಮ ಮತ್ತು ಬೀಜಗಳ ಅಲಭ್ಯತೆಯಿಂದಾಗಿ ಎಷ್ಟೋ ಮಂದಿ ಹಿಂದೆ ಸರಿದಿದ್ದಾರೆ ಎಂದು ಈ ನಾಲ್ಕು ದಿನಗಳಲ್ಲಿ ಗೊತ್ತಾಯಿತು' ಎನ್ನುತ್ತಾರೆ ಬಾಬು.

ಬಳ್ಳಿ ತರಕಾರಿಗಳನ್ನು ಚಪ್ಪರಕ್ಕೆ ಬಿಟ್ಟರೆ, ಮಿಕ್ಕುಳಿದವನ್ನು ಮಣ್ಣಿನ ಚಟ್ಟಿ (ಕುಂಡ)ಗಳಲ್ಲಿ ಬೆಳೆದಿದ್ದಾರೆ. 'ಇವೆಲ್ಲಾ ಎಲ್ಲಿಂದ ತಂದ್ರಿ. ಇನ್ನು ಎಲ್ಲಿಗೆ ಕೊಂಡು ಹೋಗ್ತೀರಿ' ಎನ್ನುವ ಮಂದಿಯೂ ಇದ್ದಾರೆ!

ತರಕಾರಿಯ ಇಳುವರಿ ತೋಟಗಾರಿಕಾ ಇಲಾಖೆಯ ಸೊತ್ತು. ಬಾಬು ನಾಯ್ಕರು ಪುತ್ತೂರಿನ ತೋಟಗಾರಿಕಾ ಇಲಾಖೆಯಲ್ಲಿ 'ಮುಖ್ಯ ತೋಟಗಾರ'. ಇಲಾಖೆಯ ಬೀಜೋತ್ಪಾದನಾ ಕೇಂದ್ರದಲ್ಲಿ ದುಡಿದ ಅನುಭವ.

ಮಂತ್ರಿ ಮಹೋದಯರು ಪುಷ್ಪಪ್ರದರ್ಶನ, ತರಕಾರಿ ತೋಟವನ್ನು ವೀಕ್ಷಿಸಿದ್ದಾರೆ, ಖುಷಿಪಟ್ಟಿದ್ದಾರೆ. ಅಧಿಕಾರಿಗಳಿಗೆ ಶಹಬ್ಬಾರಿಗಿರಿ ಸಿಕ್ಕಿದೆ. ಇದಕ್ಕೆಲ್ಲಾ ಕಾರಣನಾದ ಬಾಬು ನಾಯ್ಕರಿಗೆ ಶಹಬ್ಬಾಸ್ ಬಿಡಿ, ಒಂದು ಕಿರುನಗೆ ಸಿಕ್ಕರೆ ಸಾಕು, ಅವರ ತರಕಾರಿ ಕೃಷಿಯ ಶ್ರಮ ಸಾರ್ಥಕ!