Tuesday, August 23, 2011

ಮನ ತುಂಬಿದ ಹಲಸಿನ ಮನೆಹಬ್ಬ



ಮದುವೆ ಮನೆಯನ್ನು ಕಲ್ಪಸಿಕೊಳ್ಳಿ. ಮಿರಿಮಿರಿ ಸೀರೆಯುಟ್ಟು ಓಡಾಡುವ ನೀರೆಯರು, ಶಾಲು ಹಾಕಿ ಒಡಾಡುತ್ತಲೇ ಇರುವ ಅಣ್ಣಂದಿರು, ಜಗಲಿಯ ಬದಿಯಲ್ಲಿ ಹರಟೆಯಲ್ಲಿರುವ ಅಮ್ಮಂದಿರು, ತಮ್ಮದೇ ಲೋಕದಲ್ಲಿ ವಿಹರಿಸುವ ಮಕ್ಕಳು, ಅಡುಗೆ ಮನೆಯ ಭರಾಟೆ.. ಹೀಗೆ.

ಇದನ್ನೇ ಹಲಸಿನ ಹಬ್ಬಕ್ಕೆ ಸಮೀಕರಿಸಿ. ದಿಬ್ಬಣೋಪಾದಿಯಲ್ಲಿ ಆಗಮಿಸುವ ಅತಿಥಿಗಳು. ಕೈಕಾಲು ತೊಳೆದು ಮನೆಯೊಳಗೆ ಪ್ರವೇಶಿಸುವ ಬಂಧುಗಳು, 'ಶುರುವಾಯಿತಾ' ಎನ್ನುತ್ತಾ ಮುಖದ ಬೆವರೊರೆಸಿ ಪಾನೀಯ ಹೀರುವ ಹಲಸು ಪ್ರಿಯರು, 'ಮನೆಯ ಕಾರ್ಯಕ್ರಮವಲ್ವಾ, ಬಾರದೇ ಇರುವುದಕೆ ಆಗುತ್ತಾ' ಎನ್ನುತ್ತಾ ವೀಳ್ಯವನ್ನು ಉಗುಳುವ ಅಜ್ಜಿಯಂದಿರು, 'ಹಲಸಿನ ಹಣ್ಣು ತಂದಿದ್ದೆ. ಎಲ್ಲಿ ಕೊಡುವುದು' ಎಂದು ಹುಡುಕಾಡುವ ಮಂದಿ...

ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಉಬರು ರಾಜಗೋಪಾಲ ಭಟ್ಟರ (ರಾಜಣ್ಣ) ಮನೆಯಲ್ಲಿ ಜರುಗಿದ 'ಹಲಸಿನ ಹಬ್ಬ'ದ ಗುಂಗಿನ ಮಾದರಿಗಳು. ಆಗಸ್ಟ್ 20, 21ರಂದು ಹಬ್ಬಕ್ಕಾಗಿ ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದರು. ಸೀಮಿತ ಮಂದಿಗೆ ಆಮಂತ್ರಣ. ಸುದ್ದಿ ಕೇಳಿ ಆಗಮಿಸಿದವರ 'ಹಲಸು ಪ್ರಿಯ'ರೇ ಅಧಿಕ. ಈಚೆಗಿನ ವರುಷಗಳಿಂದ ಸದ್ದಿಲ್ಲದ ನಡೆಯುತ್ತಿರುವ ಹಲಸಿನ ಆಂದೋಳನದ ಇಂಪ್ಯಾಕ್ಟ್.

ಅನ್ನ, ಮಜ್ಜಿಗೆ, ಚಾ, ಕಾಫಿ ಹೊರತಾಗಿ ಮಿಕ್ಕೆಲ್ಲವೂ ಹಲಸಿನ ಖಾದ್ಯಗಳೇ. 'ವಾ.. ಇದು ಹಲಸಿನ ಉಪ್ಪಿನಕಾಯಿಯಾ' ಎನ್ನುತ್ತಾ ಎರಡು ಚಮಚ ಹೆಚ್ಚೇ ಬಟ್ಟಲಿಗೆ ಹಾಕಿಕೊಂಡ ಅಮ್ಮಂದಿರು, 'ನಮ್ಮಲ್ಲಿಯೂ ತಯಾರಿಸಬೇಕು' ಎಂದು ಶಪಥ ತೊಟ್ಟಿದ್ದರು! 'ಓ.. ಇದು ಹಲಸಿನ ಬೇಳೆಯ ಸಾರಾ..' ಎನ್ನುವ ಮನೆಯ ಯಜಮಾನರು 'ಮನೆಯವಳಿಗೆ ಹೇಳಬೇಕು' ಎಂದು ಕಣ್ಣುಮಿಟುಕಿಸುತ್ತಿದ್ದರು.

ಹಲಸಿನ ಹಬ್ಬಕ್ಕೆ ಮೂರು ತಿಂಗಳಿಂದ ತಯಾರಿ. ಎಪ್ರಿಲ್ ಮಧ್ಯ ಭಾಗದಲ್ಲಿ ಮುಳಿಯ ವೆಂಕಟಕೃಷ್ಣ ಶರ್ಮಾರಲ್ಲಿ 'ರುಚಿ ನೋಡಿ ತಳಿ ಆಯ್ಕೆ' ಕಾರ್ಯಕ್ರಮ ನಡೆದಿತ್ತು. ಅಂದಿನಿನ ಹಲಸಿನ 'ಹುಚ್ಚನ್ನು' ಹೆಚ್ಚೇ ಅಂಟಿಸಿಕೊಂಡ ಉಬರು ರಾಜಣ್ಣ, 'ನಮ್ಮ ಮನೆಯಲ್ಲೂ ಆಗಬೇಕು' ಎಂಬ ಸಂಕಲ್ಪ. ಶರ್ಮರ ಮನೆಯಂಗಳದಲ್ಲಿ ಹೊತ್ತಿದ ಹಣತೆ, ಉಬರು ಮನೆಯಂಗಳದಲ್ಲಿ ಬೆಳಗಿತು.

ಮೊದಲ ದಿವಸ ಸಾಂಕೇತಿಕ ಉದ್ಘಾಟನೆ. ಪ್ರತಿಷ್ಠಿತ 'ಉಬರು' ಮನೆಯ ಸದಸ್ಯರ ಪರಿಚಯ. ಹಲಸಿನ ಸೊಳೆಗೆ ಮಾರುಕಟ್ಟೆ ಮಾಡಿದ ಅಡ್ಕತ್ತಿಮಾರು ಸುಬ್ರಹ್ಮಣ್ಯ ಭಟ್ ಅವರ ಮಾರುಕಟ್ಟೆ ಜಾಣ್ಮೆ. ವಿಶೇಷಜ್ಞೆಯರಾದ ಸವಿತಾ ಎಸ್.ಭಟ್ ಅಡ್ವಾಯಿ ಮತ್ತು ಪಾತನಡ್ಕ ಸುಶೀಲ ಭಟ್ಟರಿಂದ ನಲವತ್ತಕ್ಕೂ ಮಿಕ್ಕಿ ಅಡುಗೆಗಳ ಪ್ರಾತ್ಯಕ್ಷಿಕೆ.

ರೆಚ್ಚೆಯ(ಸೊಳೆ ಮತ್ತು ಮುಳ್ಳುಗಳ ನಡುವಣ ಹೊರಮೈ)ಯ ಜೆಲ್ಲಿ, ಉಪ್ಪಿನಸೊಳೆಯ ಗರಂ ದೋಸೆ, ವಡೆ, ಕಾಯಿ ಮಸಾಲ, ಬೀಜ-ಸೊಳೆ ಸಾಂಗ್, ಶ್ರೀಖಂಡ.. ಹೀಗೆ. ಇಬ್ಬರೂ ನೂರಕ್ಕೂ ಮಿಕ್ಕಿ ಹಲಸಿನ ಪಾಕಗಳನ್ನು ತಯಾರಿಸಬಲ್ಲ ಸಮರ್ಥೆಯರು. 'ನೋಡಿ.. ಇದು ಹಲಸಿನ ಮೇಣದ ಡೈ' ಎಂದು ಸುಶೀಲಕ್ಕ ತೋರಿಸಿದಾಗ, ಹಿಂಬದಿ ಆಸನದಲ್ಲಿದ್ದ ಮಾತೆಯರು, ಮಹನೀಯರು ಮುಂಬದಿಗೆ ಆಗಮಿಸಿ ಕುತೂಹಲಿಗರಾದುದು 'ಡೈ ಮಹಾತ್ಮೆ'! ತಯಾರಿ ಕ್ರಮವನ್ನು ಒಂದಷ್ಟು ಮಂದಿ ಕಾಗದಕ್ಕಿಳಿಸಿಕೊಂಡರು. ಪ್ರಶ್ನೆಗಳ ಸುರಿಮಳೆ. 'ಮಾಡಿ ಕೊಡ್ತೀರಾ' ಎಂಬ ಬೇಡಿಕೆ.

ಕಸಿತಜ್ಞರಾದ ಗುರುರಾಜ ಬಾಳ್ತಿಲ್ಲಾಯ ಮತ್ತು ಕೃಷ್ಣ ಕೆದಿಲಾಯರಿಂದ ಕಸಿ ಪ್ರಾತ್ಯಕ್ಷಿಕೆ. ಕಸಿಯ ಸೂಕ್ಷ್ಮಗಳ ಪ್ರಸ್ತುತಿ. ಸಯಾನ್ ಆಯ್ಕೆಯಲ್ಲಿಂದ ಗಿಡದ ಬೆಳವಣಿಗಯ ಹಂತಗಳ ಗುಟ್ಟು ರಟ್ಟು. 'ಉತ್ತಮ ಹಣ್ಣುಗಳನ್ನು ಪಡೆಯುವ ಕುತೂಹಲ ಎಲ್ಲರಲ್ಲಿದೆ. ಹಾಗಾಗಿ ಹಲಸಿನ ಕಸಿ ಗಿಡಗಳಿಗೆ ಬಹು ಬೇಡಿಕೆಯಿದೆ' ಎನ್ನುತ್ತಾರೆ ಗುರುರಾಜ್.

ವೆಂಕಟಕೃಷ್ಣ ಶರ್ಮರಲ್ಲಿ ಜರುಗಿದ 'ರುಚಿ ನೋಡಿ ತಳಿ ಆಯ್ಕೆ'ಯ ಪ್ರಕ್ರಿಯೆಯಲ್ಲಿ ಆಯ್ಕೆಯಾದ 'ಬಿಲ್ಲಂಪದವು ಅನನ್ಯ, ಕುದ್ದುಪದವು ಮಧುರ, ಅಳಿಕೆಯ ಪ್ರಶಾಂತಿ, ಮುದ್ರಾಕ್ಷಿ, ಉಬರು ರಾಜರುದ್ರಾಕ್ಷಿ' ತಳಿಗಳ ಅನಾವರಣ. ನೂತನ ನಾಮಕರಣ. 'ಹಬ್ಬದಲ್ಲಿ ಉತ್ತಮವಾದುದೆಂದು ಆಯ್ಕೆಯಾದ ತಳಿಗಳನ್ನು ಕಸಿ ಕಟ್ಟಿ ಅಭಿವೃದ್ಧಿ ಪಡಿಸುವುದು ಮುಂದಿನ ಹೆಜ್ಜೆ' ಎನ್ನುತ್ತಾರೆ ವಾರಣಾಸಿ ಸಂಶೋಧನಾ ಪ್ರತಿಷ್ಠಾನದ ಡಾ.ವಾರಣಾಶಿ ಕೃಷ್ಣಮೂರ್ತಿ.

ಹಲಸಿನ ಗಿಡಗಳನ್ನು ನೆಡುವ ಪರಿಪಾಠ ಈಚೆಗೆ ಶುರುವಾದ ಆಸಕ್ತಿ. ಅದರಲ್ಲೂ ಕಸಿ ಗಿಡಗಳ ಹುಡುಕಾಟ. ಉತ್ತಮ ಹಣ್ಣುಗಳನ್ನು ಪಡೆಯಬೇಕೆಂಬ ಕುತೂಹಲ. ದೂರದೂರಿಂದ ಸಯಾನ್ ತಂದು ಕಸಿ ಕಟ್ಟುವುದಕ್ಕಿಂತ, ತಮ್ಮ ಸುತ್ತಮುತ್ತಲಿನ ಉತ್ತಮ ತಳಿಗಳ ಕಸಿ ಗಿಡ ತಯಾರಿಸುವುದು ಸೂಕ್ತ. ಇಂತಹ ಹಬ್ಬಗಳು ಅವಕ್ಕೆ ದಿಕ್ಸೂಚಿ.

ನ್ಯಾಚುರಲ್ ಐಸ್ಕ್ರೀಂನ ರಘುನಂದನ ಕಾಮತ್ ದಂಪತಿಗಳು ಮುಂಬಯಿಂದ ಉಬರಿಗೆ ಹಾರಿ ಬಂದಿದ್ದರು. ಹಬ್ಬವಿಡೀ ಓಡಾಡಿದರು. ಖಾದ್ಯಗಳ ರುಚಿ ಸವಿದರು. 'ಹಳ್ಳಿ ಮನೆಯ ರುಚಿ ಇದೆಯಲ್ಲಾ, ಅದು ನಗರದವರಿಗೆ ಪ್ರಿಯವಾಗುತ್ತದೆ. ನಮ್ಮ ಐಸ್ಕ್ರೀಂ ಜನಪ್ರಿಯವಾದುದೇ ಹಾಗೆ' ಎಂದು ನಗೆಯಾಡುತ್ತಾ, ಎಲ್ಲರಿಗೂ ಹಲಸಿನ ಹಣ್ಣಿನ ಐಸ್ಕ್ರೀಂ ಹಂಚಿದರು.

ಹಳ್ಳಿಯಿಂದ ಸಾಗರದಾಚೆ ಹಲಸು ಜನಪ್ರಿಯವಾಗುತ್ತದೆ. ಹಳ್ಳಿ ಹೆಣ್ಮಕ್ಕಳ ಹಪ್ಪಳ, ಚಿಪ್ಸ್ ರುಚಿಗಳು ಬಣ್ಣ ಬಣ್ಣದ ಪ್ಯಾಕೆಟ್ನಲ್ಲಿ ಮಾರುಕಟ್ಟೆಗಳಿದಿವೆ. ಈ ರುಚಿಗಳನ್ನು ಕಂಪೆನಿಗಳು ತಮ್ಮವೆಂದು ಹೇಳಿಕೊಳ್ಳುತ್ತಿವೆ! ವಿಯೆಟ್ನಾಂ, ಶ್ರೀಲಂಕಾದಂತಹ ದೇಶಗಳಲ್ಲಿ ಹಲಸನ್ನು ಬಿಟ್ಟು ಮಾತುಕತೆಯಿಲ್ಲ. ಹೊಲಸೆನ್ನುವ ಕೀಳರಿಮೆಯಿಲ್ಲ. ಶ್ರೀ ಪಡ್ರೆಯವರಿಂದ ನಡೆದ 'ಹಲಸಿನ ಯಶೋಗಾಥೆ'ಗಳ ಪ್ರಸ್ತುತಿಗೆ ಸಭಾಸದರು ಮಧ್ಯಾಹ್ನದ ಹಸಿವಿನ ಹೊತ್ತಲ್ಲೂ ಆಕಳಿಸದೇ ಕುತೂಹಲಿಗರಾಗಿದ್ದರು.

ಪಾಕಶಾಲೆಯನ್ನು ಅಣಿಗೊಳಿಸುವುದು ಸುಲಭದ ಮಾತಲ್ಲ. ಸಮಾರಂಭಗಳಲ್ಲಿ ಸಿದ್ಧ ವೈವಿಧ್ಯದ ಪಾಕ ರೂಢಿಯಾದ ಸೂಪತಜ್ಞರ ಮಾತೇ ಅಂತಿಮ. ಅದರಲ್ಲೂ ಎಲ್ಲವೂ ಹಲಸುಮಯವಾಗಬೇಕೆಂಬ ಬೇಡಿಕೆಯನ್ನು ನಿರಾಕರಿಸಬಹುದೆಂಬ ಭಯ. ಈ ಹಿನ್ನೆಲೆಯಲ್ಲಿ ಪಾಕಶಾಲೆಯ ಹೊಣೆಹೊತ್ತ ಶಿರಂಕಲ್ಲು ನಾರಾಯಣ ಭಟ್ಟರು ಸೂಪಜ್ಞರನ್ನು ಗೊತ್ತುಮಾಡುವಲ್ಲಿ ಗೆದ್ದಿದ್ದಾರೆ. ಸಂಘಟಕರ ಆಶಯ ಖಾದ್ಯಗಳಲ್ಲಿ ಅನಾವರಣವಾಗಿದೆ.

ಹಲಸಿನ ವಿವಿಧ ಖಾದ್ಯಗಳ ಸ್ಪರ್ಧೆ.. ಮರೆತುಹೋದ ಮರೆಯಾಗುತ್ತಿರುವ ಪಾಕಗಳು, ಸಿಹಿತಿಂಡಿಗಳು, ಹುರಿದ ತಿಂಡಿಗಳು, ವ್ಯಂಜನಗಳು, ಉಪ್ಪುಸೊಳೆ ಖಾದ್ಯಗಳು, ಹಪ್ಪಳಗಳು, ಬೇಳೆಯ ತಿನಿಸುಗಳು ಸ್ಪರ್ಧೆಗಾಗಿ ಬಂದಿದ್ದುವು. ನೂರಕ್ಕೂ ಮಿಕ್ಕಿದ ವೆರೈಟಿಗಳು. ಎಲ್ಲದಕ್ಕೂ ಸವಿನೋಡಿಯೇ ಅಂಕ. ತಂತಮ್ಮ ಮನೆಗಳಿಂದ ಪಾಕಗಳನ್ನು ತಯಾರಿಸಿ ತಂದಿದ್ದರು. ಸ್ಪರ್ಧೆಯ ಮುನ್ನಾ ದಿನ ಸ್ಪರ್ಧಾಳುಗಳ ಅಡುಗೆ ಮನೆಯಲ್ಲಿ ತಡರಾತ್ರಿಯವರೆಗೂ ಬೆಳಕಿತ್ತು! 'ಅವಳಿಗೆ ನಿನ್ನೆ ರಾತ್ರಿ ನಿದ್ದೆಯೇ ಇಲ್ಲ. ಸ್ಪರ್ಧೆಯಂತೆ. ಏನೋ ಹೊಸತು ಮಾಡುತ್ತಿದ್ದಳು' ಎನ್ನಲು ಯಜಮಾನರಿಗೆ ಹೆಮ್ಮೆ.

ಒಂದೆಡೆ ಹಲಸಿನ ಹಣ್ಣನ್ನು ಕೊಯಿದು ಸೊಳೆ ಮಾಡಿಟ್ಟುಕೊಳ್ಳುವಷ್ಟರಲ್ಲಿ ಹಬ್ಬದ ಗುಂಗು ಅವನ್ನು ಖಾಲಿ ಮಾಡುತ್ತಿತ್ತು! ಪಾಕ ಸ್ಪರ್ಧೆಗಾಗಿ ಪೇರಿಸಿಟ್ಟ ಖಾದ್ಯಗಳನ್ನು 'ಮುಟ್ಟಬೇಡಿ' ಎಂಬ ಬೇಡಿಕೆಯನ್ನು ಕಿವಿಗೆ ಹಾಕಿಕೊಳ್ಳದೆ, ಖಾದ್ಯಗಳನ್ನು ಬಾಯಿಗೆ ಹಾಕಿಕೊಂಡು ಮಗುಮ್ಮಾಗಿ ಇದ್ದುಬಿಡುವ ಮಂದಿಯನ್ನು ನೆನೆಸಿದಾಗ 'ಹಲಸಿನ ಮಹಾತ್ಮೆ'ಯಲ್ಲದೆ ಮತ್ತೇನು ಹೇಳಿ!

'ಶೈಕ್ಷಣಿಕವಾಗಿ ನನಗೆ ಸಾಕಷ್ಟು ಜ್ಞಾನ ಸಿಕ್ಕಿದೆ. ಹಲಸಿನ ಬಗ್ಗೆ ಯಾರೂ ಒಂಟಿಯಲ್ಲ ಎಂಬ ಅಂಶ ಮನವರಿಕೆಯಾಗಿದೆ. ಈ ರೀತಿಯ ಹಬ್ಬಗಳು ಗ್ರಾಮೀಣ ಬದುಕನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಸಾಧನ' - ಹಬ್ಬವನ್ನು ಸವಿದ ಚಿಕ್ಕಮಗಳೂರು ಸಖರಾಯಪಟ್ಟಣದ ಶಿವಣ್ಣ ಅವರ ಮನದ ಮಾತು. ದಂಪತಿ ಸಹಿತವಾಗಿ ಹಲಸಿನ ಒಣಸೊಳೆ, ಹಣ್ಣಿನ ಹುಡಿ ಮೊದಲಾದ ಉತ್ಪನ್ನಗಳನ್ನು ಪ್ರಾಯೋಗಿಕವಾಗಿ ಪ್ರದರ್ಶನಕ್ಕಿಟ್ಟಿದ್ದರು.

ಹಲಸಿನ ಹಬ್ಬಕ್ಕೆ ವಾರಣಾಸಿ ಸಂಶೋಧನಾ ಪ್ರತಿಷ್ಠಾನದ ಸಾರಥ್ಯ. ಅಡಿಕೆ ಪತ್ರಿಕೆಯೂ ಸೇರಿದಂತೆ ವಿವಿಧ ಸಂಘಟನೆಗಳ ಹೆಗಲೆಣೆ. ಮುಳಿಯ ವೆಂಕಟೇಶ ಶರ್ಮ ಮತ್ತು ಒಡನಾಡಿಗಳ ನೇಪಥ್ಯ ಕೆಲಸಗಳು. ಡಾ.ವಾರಣಾಸಿ ಕೃಷ್ಣಮೂರ್ತಿ ಮತ್ತು ಡಾ.ಅಶ್ವಿನಿ ಕೃಷ್ಣಮೂರ್ತಿಯವರ 'ಸಂಘಟನೆ ಅನುಭವ' - ಹಲಸಿನ ಹಬ್ಬದ ಯಶದಲ್ಲಿ ಎದ್ದು ಕಾಣುತ್ತಿತ್ತು.

ಉಬರು ತೋಟದಲ್ಲಿ ನೂರಕ್ಕೂ ಮಿಕ್ಕಿ ಫಲನೀಡುವ ಹಲಸಿನ ಮರಗಳಿವೆ. ಮನೆಯ ಸಮಾರಂಭಗಳಲ್ಲಿ ಹಲಸಿಗೆ ಮಣೆ. 'ಮನೆ ಸಮೀಪದ ಮರಗಳ ಹಣ್ಣುಗಳನ್ನು ಮಾತ್ರ ರುಚಿ ನೋಡಿದ್ದೇವೆ. ಹಬ್ಬದಿಂದಾಗಿ ಉಳಿದ ಮರಗಳದ್ದು ರುಚಿ ನೋಡಬೇಕೆನ್ನುವ ತುಡಿತ ಹೆಚ್ಚಾಗಿದೆ' ಎಂದು ಮನೆಯ ಹಿರಿಯರಾದ ಪಾರ್ವತಿಯಮ್ಮ ಮತ್ತು ಒಡತಿ ಗೀತಾಲಕ್ಷ್ಮಿ ಎಲ್ಲರನ್ನೂ ಬೀಳ್ಕೊಡುತ್ತಿದ್ದಾಗ ಅವರ ಕಣ್ಣಂಚಿನಲ್ಲಿ ಆನಂದದ ಭಾಷ್ಪ.

ಈಚೆಗಿನ ವರುಷಗಳಿಂದ ವಿವಿಧ ಸಂಘಟನೆಗಳು ಹಲಸಿನ ಮೇಳವನ್ನು ನಡೆಸಿಕೊಂಡು ಬರುತ್ತಿವೆ. ಇಲಾಖೆಗಳು ಹಬ್ಬದ ಶಾಸ್ತ್ರ ಮಾಡುತ್ತಿವೆ. ಇವೆಲ್ಲವನ್ನೂ ಮೀರಿ ಉಬರು ಹಲಸಿನ ಹಬ್ಬ ನಡೆದಿದೆ. ಮನೆಮಟ್ಟದಲ್ಲಿ ಹಲಸಿನ ಮಾತುಕತೆಗೆ ಹಣತೆ ಹಚ್ಚಿನ ಉಬರು ಮನೆಯವರ ಮಾದರಿ ಮುಂದಿನ ಸಾಲಿನಲ್ಲಿ ಇನ್ನಷ್ಟು ಈ ಥರದ 'ಮನೆ ಹಬ್ಬ'ಗಳಿಗೆ ನಾಂದಿಯಾಗಲಿ.


ಎಸ್ಸೆಮ್ಮೆಸ್ : 'ಹಲಸಿನ ಮೇಣದಿಂದ ಹೇರ್ ಡೈ' ಹೊಸ ಸುದ್ದಿ. ತಲೆಗೆ ಮೆತ್ತುವ ಕೂದಲ ಬಣ್ಣವಾದರೂ ಮನಸ್ಸಿಗೆ ಹಲಸುಪ್ರೀತಿ ತಂದುಕೊಡಲಿ!

(ಇಂದಿನ ಉದಯವಾಣಿಯಲ್ಲಿ 'ಮಣ್ಣಿನ ನಾಡಿ' ಕಾಲಂನಲ್ಲಿ ಪ್ರಕಟವಾದ ಬರೆಹ)

Sunday, August 21, 2011

ಮನೆಯಂಗಳದಲ್ಲಿ ಹಲಸಿನ ಹಬ್ಬ













ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಉಬರು ರಾಜಗೋಪಾಲ ಭಟ್ಟರ ಮನೆಯಲ್ಲಿ ಅಂದು ಸಂಭ್ರಮ. ಮದುವೆ ಮನೆಯನ್ನೂ ನಾಚಿಸುವ 'ಹಲಸಿನ ಹಬ್ಬ'. ಬಂಧುಗಳು, ನೆಂಟರಿಷ್ಟರು, ಹಲಸು ಪ್ರಿಯರು.. ಹೀಗೆ ಅತಿಥಿಗಳ ಸಾಲು ಸಾಲು. ಅನ್ನ, ಮಜ್ಜಿಗೆ ಹೊರತು ಪಡಿಸಿ ಮಿಕ್ಕಿದ್ದೆಲ್ಲಾ ಹಲಸಿನದ್ದೇ ಖಾದ್ಯ. ಕಸಿ ತರಬೇತಿ, ಹಲಸಿನ ಮೌಲ್ಯವರ್ಧನೆಯ ಮಾಹಿತಿ, ಶತಕ ಮೀರಿನ ಖಾದ್ಯ ಸ್ಪರ್ಧೆ, ನೂರರ ಹತ್ತಿರ ಹಲಸಿನ ಹಣ್ಣಿನ ಸ್ಪರ್ಧೆ,, ಮಕ್ಕಳಿಗೆ ಹಲಸಿನ ಚಿತ್ರ ಸ್ಪರ್ಧೆ,... ಹೀಗೆ ವಿವಿಧ ವೈವಿಧ್ಯ. ಈ ರೀತಿಯ ಮನೆಯಂಗಳದ ಹಲಸಿನ ಹಬ್ಬ ಕನ್ನಾಡಲ್ಲೇ ಪ್ರಥಮ. ಅಡ್ಯನಡ್ಕದ ವಾರಣಾಶಿ ಸಂಶೋಧನಾ ಪ್ರತಿಷ್ಠಾನದ ಸಾರಥ್ಯ.
(ಹೆಚ್ಚಿನ ವಿವರ ಮುಂದೆ...)

Monday, August 15, 2011

'ಬಯೋಪಾಟ್' ಮಾಹಿತಿ ಕಾರ್ಯಾಗಾರ



"ಕೃಷಿಯಲ್ಲಿ ಲಘುಪೋಷಕಾಂಶಗಳ ನಿರ್ವಹಣೆ ಅತೀ ಅಗತ್ಯ. ಕಾಳುಮೆಣಸಿನ ಸೊರಗು ರೋಗ ನಿಯಂತ್ರಣವನ್ನು ಪೋಷಕಾಂಶಗಳ ನಿರ್ವಹಣೆ, ಇದಕ್ಕೆ ಸಂಬಂಧಿಸಿದ ಬಯೋಪಾಟ್ ಸಿಂಪಡಣೆಯನ್ನು ಮಳೆಗಾಲದ ಮೊದಲು, ನಂತರ ಸಿಂಪಡಿಸಿದಲ್ಲಿ ಹತೋಟಿಗೆ ತರಬಹುದು" ಎಂದು ಬೆಂಗಳೂರು ಕ್ರಾಪ್ಕೆರ್ ಇಂಡಿಯಾದ ವಿಜ್ಞಾನಿ ಪ್ರಕಾಶ್ ಅಭಿಪ್ರಾಯಪಟ್ಟರು.

ಅವರು ಪುತ್ತೂರಿನ 'ಸಮೃದ್ಧಿ' ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಜಿ.ಎಲ್.ರೋಟರಿ ಸಭಾಭವನದಲ್ಲಿ ಆಯೋಜಿಸಿದ 'ಮಾಹಿತಿ-ಸಂವಾದ' ಕಾರ್ಯಕ್ರಮದಲ್ಲಿ ಕಾಳುಮೆಣಸು ಸೊರಗು ರೋಗ ನಿಯಂತ್ರಣ, ಅಡಿಕೆ ಮರದ ಬುಡಕ್ಕೆ ಬಯೋಪಾಟ್ ಉಣಿಸಿ ಕೊಳೆರೋಗ ನಿಯಂತ್ರಣದ ಕುರಿತು ಮಾಹಿತಿ ನೀಡಿದರು. ಇನ್ನೋರ್ವ ವಿಜ್ಞಾನಿ ಚಂದ್ರಶೇಖರ್ ಕ್ರಾಪ್ಕೇರ್ ಸಿಂಪಡಣೆಯ ಕೃಷಿಕರ ಫೀಡ್ಬ್ಯಾಕನ್ನು ವಿವರಿಸಿದರು.

ಈ ವರುಷ ಬಯೋಪಾಟ್ನ್ನು ಸಿಂಪಡಿಸಿದ ಬಹುತೇಕ ತೋಟಗಳಲ್ಲಿ ಕೊಳೆರೋಗದ ಅಂಶ ಬಹಳಷ್ಟು ಕಡಿಮೆಯಿರುವ ಕುರಿತು ಬಳಸಿದ ಕೃಷಿಕರು ತಮ್ಮ ಅನುಭವಗಳನ್ನು ಹಂಚಿಕೊಡರು.

ಶ್ರೀಗಳಾದ ಸೇಡಿಯಾಪು ತ್ರಿವಿಕ್ರಮ ಭಟ್, ವಿಶ್ವಪ್ರಸಾದ್, ಬಿ.ಟಿ.ನಾರಾಯಣ ಭಟ್, ಡಾ.ಡಿ.ಸಿ.ಚೌಟ, ಜಿ.ಬಿ.ನೂಜಿ, ಮೈಕೆ ಗಣೇಶ ಭಟ್, ಪವನ ವೆಂಕಟ್ರಮಣ ಭಟ್, ಶ್ರೀಮತಿ ಉಷಾ ಮೆಹಂದಳೆ, ಡಾ.ಜಯಪ್ರಕಾಶ್, ಶಿವಸುಬ್ರಹ್ಮಣ್ಯ ಪೆಲತ್ತಡ್ಕ, ಎ.ಪಿ.ಸದಾಶಿವ.. ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.

'ಕೃಷಿಯಲ್ಲಿ ಆಧುನಿಕ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವ ಅನಿವಾರ್ಯತೆ ಬಂದಿದೆ. ಕೃಷಿಕರ ಸಭೆಗಳು ಆಗಾಗ ನಡೆದಾಗ ನೋವು-ನಲಿವು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಸಾಧ್ಯ' ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಆಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಹೇಳಿದರು. ಸಮೃದ್ಧಿಯ ಕಾರ್ಯದರ್ಶಿ ರಾಮ್ ಕಿಶೋರ್, ಕೊಳೆರೋಗಕ್ಕೆ ಸಿಂಪಡಿಸುವ ಕ್ರಾಪ್ಕೇರ್ ಉತ್ಪನ್ನದ ಲ್ಯಾಬ್ ಫಲಿತಾಂಶವನ್ನು ಪ್ರಕಟಿಸಿದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರಿನ ಶ್ರೀ ಅನ್ನಪೂರ್ಣ ಏಜೆನ್ಸೀಸ್ ಇದರ ಮುಖ್ಯಸ್ಥ ಸುಧೀರ್ ಇವರು ಇಟೆಲಿ ನಿರ್ಮಿತ ಸ್ಪ್ರೇಗನ್ಗಳ ಮಾಹಿತಿ ನೀಡಿದರು. ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ, ಮಾಣಿ ಇವರು ಸ್ಪ್ರೇಗನ್ ಬಳಸಿ ನೋಡಿದ ಅನುಭವ ಹಂಚಿಕೊಂಡರು. ಬಳಿಕ ಪುತ್ತೂರಿನ ಸಾಯ ಎಂಟರ್ಪ್ರೈಸಸ್ ಇವರ ಸಹಯೋಗದೊಂದಿಗೆ ಸ್ಪ್ರೇಗನ್ನಿನ ಪ್ರಾತ್ಯಕ್ಷಿಕೆ ನಡೆಯಿತು.

'ಸಮೃದ್ಧಿ' ಪುತ್ತೂರು ಇದರ ಕಾರ್ಯದರ್ಶಿ ರಾಮ್ ಕಿಶೋರ್ ಮಂಚಿ ಸ್ವಾಗತಿಸಿ, ನಿರ್ವಹಿಸಿದರು. ಅಧ್ಯಕ್ಷ ಪೆರುವಾಜೆ ಈಶ್ವರ ಭಟ್ ವಂದಿಸಿದರು. ಹಿರಿಯ ಕೃಷಿಕ, ಸಾಹಿತಿ ವಾಟೆ ಮಹಾಲಿಂಗ ಭಟ್ ಅಡ್ಯನಡ್ಕ ಪ್ರಾರ್ಥಿಸಿದರು.

Thursday, August 11, 2011

ಬದುಕಿಗೆ ಶಾಪವಾದ ಭತ್ತದ ಮರೆವು

ದೇಶದಲ್ಲೇ ಏಕದಳ ಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕ ಮುಂದು. ಕೇಂದ್ರದಿಂದ ಒಂದು ಕೋಟಿ ರೂಪಾಯಿ ಮೊತ್ತದೊಂದಿಗೆ 'ಕೃಷಿ ಕರ್ಮಣ' ಪ್ರಶಸ್ತಿ ಪ್ರಾಪ್ತಿ. ಈ ಹಿರಿಮೆಯನ್ನು ರಾಜ್ಯದ ಅನ್ನದಾತರಿಗೆ ಮಾಜಿ ಸಿಎಂ ಅರ್ಪಿಸಿದ್ದರು! ಏನೇ ಆಗಲಿ, ಕೋಟಿ ಬಂತಲ್ವಾ, ಸಂತೋಷ! ಸಮ್ಮಾನಕ್ಕೆ ಹಿಗ್ಗು!

ಒಂದೆಡೆ ಪುರಸ್ಕಾರದ ಹಿರಿಮೆ. ಮತ್ತೊಂದೆಡೆ 'ಅಭಿವೃದ್ಧಿ'ಗಾಗಿ ಸಾವಿರಗಟ್ಟಲೆ ಕೃಷಿ ಭೂಮಿಗಳ ಸ್ವಾಧೀನತೆ. ಕೃಷಿಕನಿಗೆ ಮುನ್ಸೂಚನೆ ನೀಡದೆ ಕಂಪನಿಗಳು ಮನೆಯಂಗಳಕ್ಕೆ ನುಗ್ಗುತ್ತಿರುವಾಗ ಪರಿಹಾರ ಬಿಡಿ, ಯಾವ 'ಅರ್ಪಣೆ'ಗಳೂ ನೆರವಿಗೆ ಬರುತ್ತಿಲ್ಲ ಎಂಬುದು ಸ್ಥಾಪಿತವಾದ ಸತ್ಯ.

ಏಕದಳ ಧಾನ್ಯದ ಉತ್ಪಾದನೆ ಕನ್ನಾಡಿನಲ್ಲಿ ಸಾಕಷ್ಟು ಆಗಿದೆ ಎಂಬುದಕ್ಕೆ ಪುರಾವೆ - ಪ್ರಶಸ್ತಿ. ಏಕದಳದಲ್ಲಿ ಭತ್ತವೂ ಸೇರಿತಲ್ವಾ. ಒಂದು ಕಾಲಘಟ್ಟದಲ್ಲಿ ಕರಾವಳಿ ಭತ್ತದ ಕಣಜ. ಬದುಕಿನಲ್ಲಿ ಸಮ್ಮಿಳಿತವಾಗಿದ್ದ ಸಂಸ್ಕೃತಿ. ವಸ್ತುಗಳ ವಿನಿಮಯಕ್ಕೆ ರೂಪಾಯಿಯ ಬದಲಿಗೆ ಭತ್ತ, ಅಕ್ಕಿ ಬಳಕೆ. 'ಯಾವಾಗ ಕೈಗೆ ಕ್ಯಾಲುಕ್ಯುಲೇಟರ್ ಬಂತೋ, ಅಂದಿನಿಂದ ಭತ್ತದ ಕೃಷಿ ಹಿಂದೆ ಸರಿಯಲು ಶುರುವಾಯಿತು. ಲಾಭ ನಷ್ಟದ ಲೆಕ್ಕಾಚಾರಗಳು ಆರಂಭವಾದುವು. ಉಣ್ಣಲು ಅಂಗಡಿಯಿಂದ ಅಕ್ಕಿ ತರುವ ಸ್ಥಿತಿ,' ತಳಿ ತಪಸ್ವಿ ಅಮೈ ದೇವರಾಯರಿಂದ ಕಾಲದ ಕಥನ.

ಮೌನವಾಯಿತು, ಭತ್ತದ ಮಾತು

ಭತ್ತದ ಬೇಸಾಯ ಬದುಕಿನಿಂದ 'ಉದ್ಯಮ'ದತ್ತ ವಾಲಿತು. ಅಡಿಕೆ ಧಾರಣೆ ಇನ್ನೂರು ರೂಪಾಯಿಯ ಗಡಿ ದಾಟಿದ ಒಂದು ಹಂತದಲ್ಲಿ 'ಅರಿವಿಲ್ಲದೆ' ಗದ್ದೆ ಸಂಸ್ಕೃತಿಯ ಪುಟಗಳು ಮುಚ್ಚಿದುವು. ಗದ್ದೆಗಳಲ್ಲಿ ತೋಟಗಳೆದ್ದು ವಿಸ್ತಾರವಾದುವು. ಚಿಕ್ಕಪುಟ್ಟ ಗುಡ್ಡಗಳನ್ನೆಲ್ಲಾ ಮಣ್ಣುಮಾಂದಿ (ಜೆಸಿಬಿ) ನುಂಗಿತು. ಹೆಚ್ಚು ಇಳುವರಿ ನೀಡುವ ಗಿಡಗಳಿಗೆ ಬೇಡಿಕೆ, ನೀಡಿಕೆ. ಹೊಸ ತೋಟಗಳದ್ದೇ ಸುದ್ದಿ. ನಂತರದ ದಿವಸಗಳ ಕತೆ ನಿತ್ಯಾನುಭವ. ಧಾರಣೆ ಇಳಿದು ಇನ್ನೇನು 'ತೋಟವೇ ಬೇಡ' ಎನ್ನುವ ಸ್ಥಿತಿಯಿಲ್ಲಿದ್ದಾಗ, 'ಧಾರಣೆ ಏರಿ' ಸದ್ಯಕ್ಕೆ ನಿರುಮ್ಮಳ.

ಯಾವಾಗ ಗದ್ದೆಗಳು ತೋಟಗಳಾದುವೋ ಅಲ್ಲಿಂದ ಬೇಸಾಯಕ್ಕೆ ಇಳಿಲೆಕ್ಕ. ಕಾರ್ಮಿಕ ಅವಲಂಬನೆಯನ್ನು ಹೆಚ್ಚು ಬೇಡುತ್ತಿದ್ದ ಭತ್ತದ ಕೃಷಿಗೆ ಕಾರ್ಮಿಕ ಅಭಾವವೂ ಥಳಕು ಹಾಕಿತು. 'ಗದ್ದೆ ಬೇಸಾಯ ಪ್ರಯೋಜನವಿಲ್ಲ ಮಾರಾಯ್ರೆ' ಎನ್ನುವ ಮಾತು ನಿತ್ಯ ಮಂತ್ರವಾಯಿತು. 'ಆರ್ಡರ್ ಮಾಡಿದರೆ ಅಕ್ಕಿಯ ಮೂಟೆ ಅಂಗಡಿಯಿಂದ ಬರುತ್ತದೆ' ಎನ್ನುತ್ತಾ, ಕೃಷಿ ಪರಿಕರಗಳು ಅಟ್ಟ ಸೇರಿದುವು. 'ಸಂಸ್ಕೃತಿ' ಎಂಬುದು ನೆನಪಾದಾಗ ಆಡುವ ಮಾತಿನ ಸರಕಾಗಿ ಬದಲಾಯಿತು.

ಸರಿ, ಅಕ್ಕಿ ಅಂಗಡಿಯಿಂದ ಬರುತ್ತದಲ್ವ. ಅಂಗಡಿಗೆ ಎಲ್ಲಿಂದ ಬರಬೇಕು? ಈಚೆಗೆ ಈ ಪ್ರಶ್ನೆಯನ್ನು ಒಂದು ಸಭೆಯಲ್ಲಿ ಮುಂದಿಟ್ಟಾಗ ಒಂದು ಕ್ಷಣ ಮೌನ. 'ಭತ್ತದ ವಿಷಯ ಬಂದಾಗ ಯಾಕೆ ನಾವು ಮೌನವಾಗ್ತೇವೆ' ಎಂದು ಛೇಡಿಸಿದೆ. 'ಭತ್ತ ಬೆಳೆದು ಯಾಕೆ ನಷ್ಟ ಹೊಂದಬೇಕು?, ಉತ್ಪತ್ತಿಗಿಂತ ದುಪ್ಪಟ್ಟು ಖರ್ಚು ಬರುತ್ತದೆ? ಕೆಲಸಕ್ಕೆ ಜನ ಸಿಗುವುದಿಲ್ಲ..' ಇವೇ ಮುಂತಾದ ಅಡ್ಡ ಮಾತುಗಳು ಹಾದು ಹೋದುವು.

ಸಂದು ಹೋದ ಬದುಕಿನಲ್ಲಿ ಭತ್ತದ ಕೃಷಿ ಎಂದೂ ಮೌನವಾಗಲೇ ಇಲ್ಲ. 'ನಾನೀಗ ಕೋಟ್ಯಾಧಿಪತಿ. ನನ್ನಷ್ಟು ಶ್ರೀಮಂತ ಯಾರೂ ಇಲ್ಲ. ಕಾರಣ, ನನ್ನಲ್ಲಿ ವರ್ಷ ಪೂರ್ತಿ ಉಣ್ಣುವಷ್ಟು ಅಕ್ಕಿಯಿದೆ,' ದೇವರಾಯರ ಮನದ ಮಾತಿದು. ಇದು ಭತ್ತದ ಮಾತು. ಅವರಲ್ಲಿ ಎಂದೂ ಭತ್ತ ಮೌನವಾದುದೇ ಇಲ್ಲ. ಅರುವತ್ತಕ್ಕೂ ಮಿಕ್ಕಿ ತಳಿಗಳನ್ನು ಉಳಿಸುತ್ತಲೇ ಇದ್ದಾರೆ.
ರಾಜಧಾನಿಯಲ್ಲಿ ಅಕ್ಕಿಯ ಉತ್ಸವ ನಡೆದಾಗ, 'ಅಕ್ಕಿಯನ್ನು ಹುಡುಕಿಕೊಂಡು' ಬರುವ ಅಮ್ಮಂದಿರ ತುಮುಲ ಅರ್ಥವಾಗುತ್ತದೆ. 'ಅಕ್ಕಿಯನ್ನು ಹುಡುಕಬೇಕೇ? ಅಂಗಡಿಯಲ್ಲಿ ಸಿಗುವುದಿಲ್ವಾ,' ಫಕ್ಕನೆ ರಾಚುವ ಅಡ್ಡ ಮಾತು. ದೋಸೆ, ಕಡುಬು, ಪಾಯಸಗಳಿಗೆ ಹೊಂದುವ; ಔಷಧಿ ಮತ್ತು ಆರೋಗ್ಯದ ಕುರಿತಾಗಿಯೇ ಬೆಳೆಯುತ್ತಿದ್ದ ತಳಿಗಳು ಒಕ್ಕಲೆದ್ದಿವೆ. ಗದ್ದೆಗಳೇ ಇಲ್ಲವೆಂದ ಮೇಲೆ ಭತ್ತವಾದರೂ ಎಲ್ಲಿಂದ ಬರಬೇಕು?

ಗದ್ದೆಗಳು ಮಾಯವಾಗುತ್ತಿವೆ! ಸರಿ, ಅಲ್ಲೆಲ್ಲಾ ಕಟ್ಟಡಗಳು ತಲೆಯೆತ್ತುತ್ತಿವೆ. ಇಂಚಿಂಚು ಅಳೆದು ತೂಗಿ ಮಾರಲಾಗುತ್ತಿವೆ. ಎಲ್ಲೆಲ್ಲಿಂದೋ ಮೇಲ್ಮಣ್ಣು ತಂದು ಗದ್ದೆಯನ್ನು ಎತ್ತರಿಸುವ ಕೆಲಸ ಕಣ್ಣೆದುರೇ ನಡೆಯುತ್ತಿದೆ. ಮುಡಿಗಟ್ಟಲೆ ಅಕ್ಕಿಯನ್ನು ಕೊಡುತ್ತಿದ್ದ ಗದ್ದೆಯಲ್ಲಿ ಹತ್ತಾರು ಮಹಡಿ ಕಾಂಪ್ಲೆಕ್ಸ್ನ ಅಡಿಪಾಯಗಳಿವೆ. ರಸ್ತೆ ಅಗಲೀಕರಣವೂ ಒಂದಷ್ಟು ಗದ್ದೆಗಳನ್ನು ಒಡಲಿಗೆ ಸೇರಿಸಿಕೊಂಡಿವೆ.

ಬೆಂಗಳೂರಿನ ಸಹಜ ಸಮೃದ್ಧವು ಈಚೆಗಿನ ಕೆಲವು ವರುಷಗಳಿಂದ 'ಭತ್ತ ಉಳಿಸೋಣ' ಆಂದೋಳನವನ್ನು ಹಮ್ಮಿಕೊಂಡಿದೆ. ಸಾಕಷ್ಟು ರೈತರು ಮರಳಿ ಗದ್ದೆಗಿಳಿದಿದ್ದಾರೆ. ಜನಪ್ರಿಯ ತಳಿಗಳನ್ನು ಪುನಃ ತಂದು ಅಭಿವೃದ್ಧಿ ಮಾಡುತ್ತಿದ್ದಾರೆ. ಮರೆತುಹೋದ ತಳಿಗಳ ಹುಡುಕಾಟ ಆರಂಭಿಸಿದ್ದಾರೆ. ಆದರೆ ಕರಾವಳಿಯಲ್ಲಿ ಭತ್ತ ಉಳಿಸೋಣ ಅಭಿಯಾನಕ್ಕಿಂತ 'ಗದ್ದೆ ಉಳಿಸೋಣ' ಚಳುವಳಿ ರೂಪುಗೊಳ್ಳಬೇಕೇನೋ? ಆಕಳಿಸಿ ಎದ್ದು ಹೊರಡುವ ಹೊತ್ತಿಗೆ ಗದ್ದೆಗಳನ್ನು ಚಿತ್ರಗಳಲ್ಲಿ ಮಾತ್ರ ನೋಡಬಹುದಷ್ಟೇ.

ಗದ್ದೆಯಾಗಿ ಬದಲಾದ ತೋಟ

ಒಮ್ಮೆ ತೋಟವಾಗಿ ಮಾರ್ಪಟ್ಟ ಗದ್ದೆಗಳು, ಮರಳಿ ಗದ್ದೆಗಳಾಗಲು ಸಾಧ್ಯವಿದೆಯೇ? ಸುಳ್ಯ ತಾಲೂಕು ಮಣಿಕ್ಕಾರದ ಲೋಕೇಶ್ ಪೂಜಾರಿ ಹೊಸ ಸಾಹಸದಲ್ಲಿ ಯಶ ಕಾಣುತ್ತಿದ್ದಾರೆ. ತಾವು ಜಾಗ ಖರೀದಿಸಿ ಎರಡೂವರೆ ವರ್ಷವಾಯಿತು. ಮಳೆಗಾಲದಲ್ಲಿ ಸ್ವಲ್ಪ ಹೆಚ್ಚು ನೀರು ನಿಲ್ಲುವ ಜಾಗದಲ್ಲಿ ತೆಂಗು ಗಿಡಗಳಿದ್ದುವು. ಇಳುವರಿ ಅಷ್ಟಕ್ಕಷ್ಟೇ. ಹಾಗಾಗಿ ಹಡಿಲು ಬಿದ್ದಿತ್ತು.

'ಇಪ್ಪತ್ತೈದು ವರುಷಕ್ಕಿಂತಲೂ ಹಿಂದೆ ಇದು ಭತ್ತದ ಗದ್ದೆಯಾಗಿತ್ತು. ನಂತರ ತೆಂಗಿನ ತೋಟ ಎದ್ದಿತ್ತು' ಎಂದು ಹಿರಿಯರು ಜ್ಞಾಪಿಸುತ್ತಾರಂತೆ. ಲೋಕೇಶರ ಕೈಗೆ ಈ ಜಾಗ ಬಂದಾಗ, 'ಪುನಃ ಗದ್ದೆಯನ್ನಾಗಿ ಮಾರ್ಪಡಿಸಿದರೆ ಹೇಗೆ' ಎಂಬ ಯೋಚನೆ ಬಂದದ್ದೇ ತಡ, ಸೊರಗಿದ ತೆಂಗಿನ ಮರಗಳೆಲ್ಲವನ್ನೂ ಕಡಿದರು. ಗದ್ದೆಯಾಗಿ ಮಾರ್ಪಡಿಸಿದರು.

ಮಳೆಗಾಲದಲ್ಲಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿ, ಬೇಸಾಯ ಶುರು ಮಾಡಿದರು. 'ನಿಮಗೆ ಈ ಸಾಹಸ ಬೇಡ. ಅಡಿಕೆಯೋ, ಕೊಕ್ಕೋ ಹಾಕಿ' ಎಂದು ಸಲಹೆ ನೀಡಿದವರೇ ಅಧಿಕ. 'ನಾನು ಬೆಳೆದ ಅಕ್ಕಿಯನ್ನು ನಾನು ಉಣ್ಣಬೇಕು' ಎನ್ನುವ ಛಲದಿಂದ ಬೇಸಾಯ ಆರಂಭಿಸಿದ ಲೋಕೇಶರಿಗೆ ಮೊದಲನೇ ಬೆಳೆಯಲ್ಲೇ ಹಡಿಲು ಗದ್ದೆಯಲ್ಲಿ ಎರಡು ಕ್ವಿಂಟಾಲ್ ಭತ್ತ ಸಿಕ್ಕಿತು. ನಂತರದ ಬೆಳೆಯಲ್ಲಿ ಹನ್ನೆರಡು ಕ್ವಿಂಟಾಲ್. ಈ ವರುಷ ಮೂರನೇ ಬೆಳೆ. ದುಪ್ಪಟ್ಟು ನಿರೀಕ್ಷೆ.

'ಎಷ್ಟೋ ವರುಷದಿಂದ ಹಡಿಲು ಬಿದ್ದ ಗದ್ದೆಯಲ್ವಾ. ಸೆಟ್ ಆಗಲು ಮೂರ್ನಾಲ್ಕು ವರ್ಷ ಬೇಕು' ಎನ್ನುತ್ತಾರೆ ಲೋಕೇಶ್. ಕಳೆದ ವರುಷ ಎಂಟೂವರೆ ಕ್ವಿಂಟಾಲ್ ಅಕ್ಕಿ. 'ವರ್ಷಪೂರ್ತಿ ಉಣ್ಣುವುದಕ್ಕೂ ಸಾಕಾಗಿ, ಸ್ನೇಹಿತರಿಗೆ ಹಂಚಿದ್ದೇನೆ' ಎನ್ನುತ್ತಾರೆ. ದೇವರಾಯರ ಮಾತು ಲೋಕೇಶರ ಗದ್ದೆ ಸಹವಾಸದಲ್ಲಿ ರಿಫ್ಲೆಕ್ಟ್ ಆಗಿ ಕಾಣುತ್ತದೆ.

'ಆರ್ಥಿಕವಾಗಿ ನಷ್ಟವೆಂದೇ ಲೆಕ್ಕ ಹಾಕೋಣ. ಆದರೆ ನಾವು ಬದುಕುವುದು ಯಾಕೆ? ಹೊಟ್ಟೆಪಾಡಲ್ವಾ. ಹೊಟ್ಟೆ ತುಂಬಿದ ಬಳಿಕವೆ ಇತರ ಉದ್ಯಮವೋ, ಕೈಗಾರಿಕೆಯೋ..' ಲೋಕೇಶ್ ಪ್ರತಿಪಾದಿಸುತ್ತಾರೆ. ಭತ್ತದ ವಿಚಾರದಲ್ಲಿ ಇತರರಿಂದ ಬರುವ ಯಾವುದೇ ಅಡ್ಡ ಮಾತುಗಳನ್ನು ಲೋಕೇಶ್ ಕೇಳಿಲ್ಲ. ಅಡಿಕೆ ಮತ್ತು ಇತರ ಆದಾಯಗಳಿದ್ದರೂ, 'ಭತ್ತ ಬೆಳೆಯಬೇಕು, ಉಣ್ಣಬೇಕು' ಎಂಬ ಅರಿವು ಅವರಲ್ಲಿ ಮೂಡಿತ್ತಲ್ವಾ, ಅದರಲ್ಲಿ ನಮಗೂ ಸಂದೇಶ ಉಂಟಲ್ವಾ!


ಹಡಿಲು ಗದ್ದೆಗೆ ಮರುಹುಟ್ಟು

ಸುಳ್ಯ ಸನಿಹದ ಅರಂಬೂರಿನ ತ್ರಯಂಬಕಾಶ್ರಮದ ನಿತ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಬೂಡು ವಾಲಸರಿ ಗದ್ದೆಯಲ್ಲಿ ಸಾಮೂಹಿಕ ನಾಟಿ ಮಾಡುವ ಕೆಲಸ ಕಳೆದ ವರುಷದಿಂದ ಆರಂಭವಾಗಿದ್ದು, ಈ ವರ್ಷವೂ ಮುಂದುವರಿದೆ. 'ಅನ್ನದ ಕಾರಣದಿಂದ ನಾವು ದಾಸ್ಯದ ಕಡೆಗೆ ವಾಲುತ್ತಿದ್ದೇವೆ. ನಾವೂ ಅನ್ನ ಬೆಳೆದು ಸ್ವಾವಲಂಬಿಯಾಗಬೇಕು' ಎನ್ನುವುದು ಸ್ವಾಮೀಜಿ ಸಂದೇಶವೂ ಹೌದು, ಭತ್ತ ಕೊಡುವ ಎಚ್ಚರಿಕೆಯೂ ಹೌದು. ಕುಮಟಾ ತಾಲೂಕಿನ ಮದ್ಗುಣಿಯಲ್ಲೂ ಪಾಳು ಬಿದ್ದಿದ್ದ ಗದ್ದೆಗಳು ಕಾಯಕಲ್ಪಗೊಂಡು, ಸಾಮೂಹಿಕ ನಾಟಿಯಾದ ಸುದ್ದಿ ಬಂದಿದೆ.

ಹಡಿಲು ಬಿದ್ದ ಗದ್ದೆಗೆ ಮರುಹುಟ್ಟು ಕೊಡುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಬದುಕಿನಿಂದ ಕಳಚಿಕೊಂಡ ಭತ್ತದ ಸಹವಾಸ ನಿಧಾನಕ್ಕೆ ಬೆಸೆಯುತ್ತಿದೆ. ಕಾಂಚಾಣದ ಝಣಝಣ ಸದ್ದಿನಬ್ಬರ ಹೆಚ್ಚಾದರೂ, ಹೊಟ್ಟೆಗೆ ಬೇಕಾದುದು ಅನ್ನ ತಾನೆ. 'ಭತ್ತದ ಮರೆವು ಭವಿಷ್ಯಕ್ಕೊಂದು ಕರಾಳ ಕರೆಗಂಟೆ' ಎಂದ ನಾಡೋಜ ಡಾ. ನಾರಾಯಣ ರೆಡ್ಡಿಯವರ ಮಾತು, ನಾಡಿನ ದೊರೆಗಳಿಗೆ ಢಾಳಾಗಿ ಕಂಡರೂ, ಹೊಟ್ಟೆ ಹಸಿವಿನ ಮಂದಿ ಮರೆಯುವಂತಹುದಲ್ಲ.

ಎಸ್ಸೆಮ್ಮೆಸ್: 'ಇನ್ನಾರು ತಿಂಗಳಲ್ಲಿ ಮತ್ತೆ ಬರ್ತೆನೆ'-ಮಾಜಿ ಸಿಎಂ ಹೇಳಿಕೆ. 'ಭ್ರಷ್ಠಾಚಾರ ಸಹಿಸಲ್ಲ' ಎಂದಿದ್ದ ಲೋಕಾಯುಕ್ತರ ಮಾತು ಹುಸಿಯಾಗಬಹುದೇ?

(೯-೮-೨೦೧೧, ಉದಯವಾಣಿಯಲ್ಲಿ ಪ್ರಕಟವಾದ "ನೆಲದ ನಾಡಿ-೩" ಅಂಕಣ)

ತೆಂಗಿನೆಣ್ಣೆ ಸಾಬೂನು





ಸ್ನಾನದ ಸಾಬೂನಿಗೂ 'ಮೇಳದ' ಯೋಗ! ಈಚೆಗೆ ರಾಜಧಾನಿಯಲ್ಲಿ ಸಾಬೂನು ಮೇಳ ನಡೆದಿತ್ತಲ್ವಾ. ಎಷ್ಟೊಂದು ವಿವಿಧ ವೈವಿಧ್ಯಗಳು. ಹಲವು ಬಣ್ಣಗಳು, ಪರಿಮಳಗಳು, ಸ್ವಾದಗಳು. ಎರಡಂಕೆಯಿಂದ ನಾಲ್ಕಂಕೆ ತನಕದ ದರ!


ಇಲ್ನೋಡಿ. ಇದು ತೆಂಗಿನೆಣ್ಣೆ ಸಾಬೂನು. ಗುಣಮಟ್ಟದಲ್ಲಿ ಕಂಪೆನಿ ಸಾಬೂನಿನೊದಿಗೆ ಸ್ಪರ್ಧಿಸಬಲ್ಲ ಎಲ್ಲಾ ಅರ್ಹತೆ ಪಡೆದಿದೆ. ತುಮಕೂರು ಜಿಲ್ಲೆಯ ನಂದಿಹಳ್ಳಿಯ ಅನಿತಾರ ಮನೆ ಉತ್ಪನ್ನ. ಪತ್ರಿಕೆಯೊಂದರಲ್ಲಿ ಪ್ರಕಟವಾದ ಮಾಹಿತಿಯಿಂದ ಪ್ರೇರೇಪಣೆ. ಸಾಬೂನಿನ ಪಾಕ ಕೈಗೆ ಬರುವಾಗ ಒಂದಷ್ಟು ಹಣ, ಶ್ರಮ ಮತ್ತು ಕಚ್ಚಾವಸ್ತುಗಳ ನಷ್ಟ. ಒಂದು ಹಂತದಲ್ಲಿ ಸಾಬೂನು ಯಶವಾದಾಗ ಸ್ನೇಹಿತರಿಗೆ ಹಂಚಿದರು. ಫೀಡ್ಬ್ಯಾಕ್ ಪಡೆದರು. ಉತ್ತಮ ಪ್ರತಿಕ್ರಿಯೆ. ಮಾರುಕಟ್ಟೆ ಮಾಡುವತ್ತ ಯೋಚನೆ-ಯೋಜನೆ.


ಸಾಬೂನಿಗೆ ರೂಪ, ಆಕಾರ ಕೊಡುವಲ್ಲಿ ಚಾಕು, ಚೂರಿಗಳ ಬಳಕೆ. ಗುಣಮಟ್ಟ ಓಕೆಯಾದರೂ, ನೋಡಲು ಚಂದವಿರಬೇಕಲ್ವಾ! ನಿಗದಿತ ಆಕಾರ ಮತ್ತು ನಿಶ್ಚಿತ ತೂಕಕ್ಕಾಗಿ 'ವಿಶೇಷ'ವಾಗಿ ಐದಿಂಚು ಉದ್ದ, ಏಳೂವರೆ ಇಂಚು ಅಗಲ ಮತ್ತು ಎರಡೂವರೆ ಇಂಚು ದಪ್ಪ ಬರುವಂತೆ ಟ್ರೇ ತಯಾರಿ. ಈ ಅಳತೆಯಲ್ಲಿ ತಯಾರಾದ ಸಾಬೂನಿನ ತೂಕ 100 ಗ್ರಾಮ್. ಪಾಕವನ್ನು ಟ್ರೇಯಲ್ಲಿ ಸುರಿದು, ಆರಿದ ನಂತರ ನಿಶ್ಚಿತ ಆಕಾರದಲ್ಲಿ ದಾರದ ಸಹಾಯದಿಂದ ಕಟ್.


ಪಾಕ ತಯಾರಿಸುವಾಗಲೇ ವಿವಿಧ ಪರಿಮಳಗಳನ್ನು ಬೆರೆಸುತ್ತಾರೆ. ನೈಸರ್ಗಿಕ ಸುವಾಸನಾ ದ್ರವ್ಯಗಳನ್ನು ಬೆಂಗಳೂರಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಸಿನಲ್ ಅಂಡ್ ಅರೋಮೆಟಿಕ್ ಪ್ಲಾಂಟ್ಸ್' ನಿಂದ ಖರೀದಿ. ಅನಿತಾರಲ್ಲೀಗ ಹತ್ತು ವಿವಿಧ ಪರಿಮಳದ ಹಸ್ತನಿರ್ಮಿತ ಸಾಬೂನಿದೆ.


ಮಲ್ಲಿಗೆ, ಅರಶಿನ, ಪನ್ನೀರ್, ಕಹಿಬೇವು-ತುಳಸಿ, ಇದಕ್ಕೆ ನೀಲಗಿರಿ ಎಣ್ಣೆ ಸೇರಿಸಿದ್ದು ಪ್ರತ್ಯೇಕ.. ಹೀಗೆ ವಿವಿಧ ಆಯ್ಕೆಗಳು. ಸಾಬೂನೊಂದರ ನಲವತ್ತು ರೂಪಾಯಿ. 'ಮೇಲ್ನೋಟಕ್ಕೆ ನೋಡುವಾಗ ದರ ಜಾಸ್ತಿ ಅಂತ ಕಾಣುತ್ತದೆ. ಇದಕ್ಕೆ ಸೇರಿಸುವ ಪರಿಮಳ ದ್ರವ್ಯದ ದರ ವಿಪರೀತ. ಹಾಗಾಗಿ ಅನಿವಾರ್ಯ' ಎನ್ನುತ್ತಾರೆ ಅನಿತಾ. ಸಾಬೂನಿನ ಮೇಲೆ ತಮ್ಮ ಸಂಸ್ಥೆಯ 'ಓದೇಕರ್' ಹೆಸರಿನ ಅಚ್ಚು. 'ಯಾವುದಕ್ಕೂ ಯಂತ್ರವಿಲ್ಲ. ಎಲ್ಲವೂ ಹಸ್ತನಿರ್ಮಿತ'! ಪತಿ ನೀಲಕಂಠ ಮೂರ್ತಿಯವರಿಗೆ ಮಾರುಕಟ್ಟೆಯ ಜವಾಬ್ದಾರಿ.


ಮಾರುಕಟ್ಟೆಯಲ್ಲಿ ಕಂಪೆನಿ ಸಾಬೂನಿನ ಬಣ್ಣಬಣ್ಣದ ಪ್ಯಾಕಿಂಗ್ ಗ್ರಾಹಕರನ್ನು ಸೆಳೆಯುತ್ತದೆ. ಅಲ್ಲಿ ಗುಣಮಟ್ಟ ಮುಖ್ಯವಲ್ಲ. ನೀಲಕಂಠಮೂರ್ತಿ ಹೇಳುತ್ತಾರೆ -'ಅವರಂತೆ ಪ್ಯಾಕಿಂಗ್ ಮಾಡಬಹುದು. ಆಗ ಸಾಬೂನಿನ ದರವೂ ಏರಿಕೆಯಾಗುತ್ತೆ. ಎಲ್ಲಿ ಗುಣಮಟ್ಟಕ್ಕೆ ಪ್ರಾಧಾನ್ಯತೆ ಕೊಡ್ಬೇಕೋ ಅಲ್ಲಿ ಪ್ಯಾಕಿಂಗ್ ಬಣ್ಣಬಣ್ಣಗಳಲ್ಲಿ ಬೇಕಾಗುವುದಿಲ್ಲ. ಬಳಸುವ ಗ್ರಾಹಕರು ಕೂಡಾ ಪ್ಯಾಕಿಂಗನ್ನು ನೋಡುವುದಿಲ್ಲ. ಆದರೆ ಹೊಸ ಗ್ರಾಹಕರನ್ನು ಸೆಳೆಯಲು ಮುಂದಿನ ದಿನಗಳಲ್ಲಿ ಬೇಕಾಗಬಹುದು'.


ಕಂಪೆನಿ ಸಾಬೂನುಗಳು ಪ್ಯಾಕಿಂಗ್ ತೆರೆದಾಗ ಘಮಘಮ ಪರಿಮಳ ಸೂಸುತ್ತದೆ. ನಂತರದ ದಿವಸಗಳಲ್ಲಿ ಭಣಭಣ! ಓದೇಕರ್ ಸಾಬೂನು ಹಾಗಲ್ಲ. ಒಮ್ಮೆ ಬಳಸಿದವರು ಮತ್ತೆಂದೂ ಬಿಡುವುದಿಲ್ಲ. ಸ್ನಾನದ ಸಂದರ್ಭದಲ್ಲಿ ನೀಡುವ ಹಿತಾನುಭವ. ಅಲ್ಲದೆ ಬಳಸಿ ಬಳಸಿ ಕೊನೆಗೆ ಉಳಿವ ಚಿಕ್ಕ ತುಂಡಿನ ವರೆಗೂ ಪರಿಮಳ ಹಾಗೇ ಉಳಿದುಕೊಳ್ಳುವುದು ವಿಶೇಷ.


ಮೊದಮೊದಲು ಆತ್ಮೀಯರಿಗೆ, ಸಂಬಂಧಿಕರಿಗೆ ಸಾಬೂನಿನ ಮಾದರಿಗಳನ್ನು ಕೊಟ್ಟಿದ್ದರು. ಬಳಸಿ ನೋಡಿದ ಇವರೆಲ್ಲಾ ಮತ್ತೆ ಕಂಪೆನಿ ಸೋಪನ್ನು ನೆಚ್ಚಿಕೊಳ್ಳಲಿಲ್ಲವಂತೆ! ಬಾಯಿಂದ ಬಾಯಿಗೆ ಪ್ರಚಾರ. ಕಡಲಾಚೆಯ ಬಂಧುಗಳು ಸಾಬೂನನ್ನು ಒಯ್ದು, ಮತ್ತೆ ಮತ್ತೆ ತರಿಸಿಕೊಳ್ಳುತ್ತಿದ್ದಾರೆ!


ತಿಂಗಳಿಗೆ 250-300 ಸಾಬೂನು ತಯಾರಿ. ಮೂರ್ತಿ ದಂಪತಿಗಳ ಶ್ರಮವೇ ಸಿಂಹಪಾಲು. ತುಮಕೂರಿನಲ್ಲೇ ತಿಂಗಳಿಗೆ ನೂರಕ್ಕೂ ಮಿಕ್ಕಿ ಖಾಯಂ ಗಿರಾಕಿಗಳು. ತುಮಕೂರು-ತಿಪಟೂರಿನ ಬೈಫ್ ಸಂಸ್ಥೆಗಳ ಮಾರಾಟ ಮಳಿಗೆ ಮತ್ತು ರಾಜಧಾನಿಯಲ್ಲಿ ಪರಿಚಿತರ ಕೆಲವು ಅಂಗಡಿಗಳಲ್ಲಿ ಲಭ್ಯ. ಈಗ ಮೈಸೂರಿನಲ್ಲೂ ಗ್ರಾಹಕರನ್ನು ಹುಟ್ಟಿಕೊಂಡಿದ್ದಾರೆ. 'ಹುತ್ತದ ಮಣ್ಣಿನ ಸಾಬೂನು' ಅನಿತಾರವರ ಜನಪ್ರಿಯ ಉತ್ಪನ್ನ. ಮನೆವಾರ್ತೆಯೊಂದಿಗೆ ತಿಂಗಳಿಗೆ 250-300 ಹುತ್ತದ ಮಣ್ಣಿನ ಸಾಬೂನು ತಯಾರಿ.

(0816-2018480, 9448741129)

Tuesday, August 2, 2011

ಎಳನೀರು ಸೂಫ್ಲೇ


'ಇದೇನು ಹೇಳಿ ನೋಡುವಾ,' ಮೀಯಪದವಿನ ಡಾ.ಡಿ.ಸಿ.ಚೌಟರು ಬೌಲ್ ಕೈಗಿತ್ತರು. 'ಐಸ್ಕ್ರೀಂ' ಎಂದೆ. 'ತಿಂದು ನೋಡಿ ಹೇಳಿ' ಎಂದರು. ತಿಂದಾಗ ಆಹಾ.. ಸ್ವಾದ.

ಏನಿದು ಹೊಸರುಚಿ? 'ಇದು ಎಳನೀರಿನ ಸೂಫ್ಲೇ' ಎಂದರು. ಐಸ್ಕ್ರೀಮನ್ನು ಹೋಲುವ ಕ್ರೀಂ. ಬಿಳಿ ಬಣ್ಣ. ತಿಂದಷ್ಟೂ ಮತ್ತೂ ತಿನ್ನಲು ಪ್ರೇರೇಪಿಸುವ ರುಚಿ. ಡಾ.ಡಿ.ಸಿ.ಚೌಟರಲ್ಲಿ ಸಮಾರಂಭವಿರಲಿ, ನೆಂಟರಿಷ್ಟರು ಬರಲಿ, ಸೂಫ್ಲೇಯೊಂದಿಗೆ ಸ್ವಾಗತ.

ಅನಾನಾಸ್, ಮಾವು ಹಣ್ಣುಗಳ ಸೂಫ್ಲೇ ಮಾರುಕಟ್ಟೆಯಲ್ಲಿದೆ. ಎಳನೀರಿನದ್ದು ಅಪರೂಪ. 'ಕಾಸರಗೋಡು, ಕರಾವಳಿ ಭಾಗಕ್ಕೆ ಎಳನೀರು ಸೂಫ್ಲೇಯನ್ನು ಪರಿಚಯಿಸಿದ್ದು ನಾನೇ. ಸಾಕಷ್ಟು ಮಂದಿ ರೆಸಿಪಿ ಪಡೆದಿದ್ದಾರೆ' ಎನ್ನುತ್ತಾರೆ ಚೌಟರು. ತಿರುವನಂತಪುರದ ಸ್ಟಾರ್ ಹೋಟೆಲ್ಗಳಲ್ಲಿ ಈಗ ಎಳನೀರಿನದ್ದೂ ಸಿಗುತ್ತದಂತೆ.

ತಯಾರಿ ಹೇಗೆ: ಮನೆಯೊಡತಿ ಸ್ವರೂಪರಾಣಿ ಚೌಟ ಹೇಳುತ್ತಾರೆ - ಐದು ಟೀಸ್ಪೂನ್ ಜಿಲೆಟಿನ್ ಪುಡಿ, ಮೂರು ಕಪ್ ಎಳನೀರು, ಎರಡು ಕಪ್ ಹಾಲು, ಒಂದು ಕಪ್ ಮಿಟಾಯಿ ಮೇಟ್ ಅಥವಾ ಮಿಲ್ಕ್ ಮೇಡ್.

ತಿರುಳಿನಲ್ಲಿ ಬಾವೆಕಟ್ಟಿದ ಎಳನೀರನ್ನು ಚಿಕ್ಕ ಪಾತ್ರೆಯಲ್ಲಿ ತೆಗೆದುಕೊಳ್ಳಿ. ಅದನ್ನು ಇನ್ನೊಂದು ಬಿಸಿನೀರಿನ ಪಾತ್ರೆಯ ಒಳಗಿಟ್ಟು ಬಿಸಿ ಮಾಡಿ, ಜಿಲೆಟಿನ್ ಪುಡಿಯನ್ನು ಕರಗಿಸಿ. ಯಾವ ಕಾರಣಕ್ಕೂ ನೇರ ಬಿಸಿ ಮಾಡಬಾರದು, ಕುದಿಸಬಾರದು. ನಂತರ ಮೀಟಾಯಿ ಮೇಟ್, ಹಾಲು, ಎಳನೀರಲ್ಲಿ ಕರಗಿದ ಜಿಲೆಟಿನ್ ಪಾಕವನ್ನು ಮಿಕ್ಸಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಪಾತ್ರೆಗೆ ಹಾಕಿ. ಎಳನೀರಿನ ಗಂಜಿ ಯಾ ಬಾವೆಯನ್ನು ಅದರಲ್ಲಿ ಹರಡಿ. ಗಟ್ಟಿಯಾಗಲು ಮತ್ತು ತಣ್ಣಗಾಗಲು ತಂಪು ಪೆಟ್ಟಿಗೆಯಲ್ಲಿಡಿ. ಒಂದೆರಡು ಗಂಟೆ ಕಳೆದು ಉಪಯೋಗಿಸಿ.

'ನಮ್ಮ ಮನೆಯಲ್ಲಿ ಸೂಫ್ಲೇ ಮಾಡುವಾಗ ಎಳನೀರನ್ನು ನಾನೇ ಆರಿಸುತ್ತೇನೆ. ಯಾಕೆಂದರೆ ಹೆಚ್ಚು ಬಲಿತರೆ ಒಳಗಿನ ಗಂಜಿ ಯಾ ಬಾವೆ ಸಿಗುವುದಿಲ್ಲ. ಬಾವೆಯು ಕೈಯಲ್ಲಿ ತೆಗೆಯುವಂತಿರಬೇಕು. ತೀರಾ ಎಳೆಯದೂ ಆಗದು,' ಎನ್ನುತ್ತಾರೆ. ಕೆಲವು ವರುಷದ ಹಿಂದೆ ಮೀಯಪದವಿನ ತನ್ನ ತೋಟದಲ್ಲಿ ಎಳನೀರು ಸಮ್ಮೇಳನ ನಡೆದಾಗ ಸೂಫ್ಲೇಯನ್ನು ಹಂಚಿದ್ದು, ಇಲಾಖೆಗಳ ಗಮನ ಸೆಳೆದದ್ದನ್ನು ಚೌಟ ಜ್ಞಾಪಿಸಿಕೊಳ್ಳುತ್ತಾರೆ.

'ನಮ್ಮಲ್ಲಿ ಎಳನೀರು ಕುಡಿಯಲು ಕೊಡುವಾಗ ಅದಕ್ಕೆ ಬಾವೆ ಸೇರಿಸಿ ಕೊಡುವುದು ಮೊದಲಿನಿಂದಲೂ ಸಂಪ್ರದಾಯ. ಈಚೆಗೆ ಹತ್ತು ವರುಷದಿಂದ ಸೂಫ್ಲೇ ಆಪ್ತ ವಲಯದಲ್ಲಿ ಹೆಚ್ಚು ಪಾಪ್ಯುಲರ್ ಆಗಿದೆ. ಆಪ್ತರು ಮನೆಗೆ ಬರುವಾಗ ನೆನಪಿಸುತ್ತಾರೆ' ಎನ್ನಲು ಮರೆಯಲಿಲ್ಲ.

ಬೀಜ ಸ್ವಾತಂತ್ರ್ಯಕ್ಕೊಂದು ಮಾದರಿ


ಮಂಡ್ಯ ಶಿವಳ್ಳಿಯ ಬೋರೇಗೌಡರು ಎಂಟು ವರುಷದ ಹಿಂದೆ ಭತ್ತದ ತಳಿ ಸಂರಕ್ಷಕ ಅಮೈ ದೇವರಾವ್ ಅವರಲ್ಲಿಗೆ ಬಂದಿದ್ದರು. ಎರಡು ಎಕ್ರೆಯಲ್ಲಿ ಮೂವತ್ತಕ್ಕೂ ಅಧಿಕ ತಳಿಗಳನ್ನು ನೋಡಿದ್ದರು. ಭತ್ತದ ಸಂಸ್ಕೃತಿ, ಕೃಷಿಕ್ರಮಗಳನ್ನು ತಿಳಿಸಿದ ರಾಯರು ನಾಲ್ಕು ವಿಧದ ಭತ್ತದ ಬೀಜಗಳನ್ನು ನೀಡಿ ಗೌಡರನ್ನು ಉತ್ತೇಜಿಸಿದ್ದರು.

ಫಲಶ್ರುತಿಯಾಗಿ, ಶಿವಳ್ಳಿಯ ಗದ್ದೆಯಲ್ಲೀಗ ವಿವಿಧ ತಳಿಗಳ ಸಮೃದ್ಧತೆ. ನಾಲ್ಕು ಎಕರೆ ಗದ್ದೆಯಲ್ಲಿ ಸುಮಾರು 144 ಕ್ವಿಂಟಾಲ್ ಭತ್ತ ಉತ್ಪಾದನೆ. ಅದರಲ್ಲಿ 20 ಕ್ವಿಂಟಾಲ್ ಭತ್ತವನ್ನು ಬೀಜವಾಗಿ ಮಾರುತ್ತಾರೆ. ಹದಿಮೂರು ಕ್ವಿಂಟಾಲ್ ಮನೆಬಳಕೆಗೆ ಉಪಯೋಗ. ಮಿಕ್ಕಿದ್ದನ್ನು ಅಕ್ಕಿ ಮಾಡಿಸಿ ಗ್ರಾಹಕರಿಗೆ ವಿತರಣೆ.

ಬೋರೇಗೌಡರ ಎಂಟು ವರ್ಷದ ಸಾಧನೆಯ ಹಿಂದೆ ಅಚಲ ನಿರ್ಧಾರವಿದೆ. ಭತ್ತದ ಸಂಸ್ಕೃತಿಯನ್ನು ಪುನಃ ಸ್ಥಾಪಿಸುವ ಮನಸ್ಸಿದೆ. ಭವಷ್ಯದ ಆಹಾರ ಸುರಕ್ಷತೆಯ ನೋಟವಿದೆ.

ಗೌಡರಿಗೆ ಹನ್ನೆರಡು ಎಕ್ರೆ ಜಮೀನು. ಕೃಷಿಯೇ ಮುಖ್ಯ ಕಾಯಕ. ತಂದೆ ಸಿದ್ದೇಗೌಡ, ತಾಯಿ ಸಣ್ಣಮ್ಮ. ಮೂರು ಮಂದಿ ಗಂಡು. ನಾಲ್ಕು ಮಂದಿ ಹೆಣ್ಣುಮಕ್ಕಳು. ರಾಗಿ, ಜೋಳ ಬೆಳೆವ ಜಮೀನು. ಯಾವಾಗ ಕನ್ನಂಬಾಡಿ ನೀರು ಶಿವಳ್ಳಿಗೆ ಹರಿಯಿತೋ, ಅಲ್ಲಿಂದ ಭತ್ತದೊಲವು.

ಆರಂಭದಲ್ಲಿ ರಾಸಾಯನಿಕ ಬಳಕೆ. ನಿತ್ಯ ಒಂದಲ್ಲ ಒಂದು ಅನಾರೋಗ್ಯ. ರಾಸಾಯನಿಕ ಪರಿಣಾಮ ಅರಿವಾದಂತೆ ಸಾವಯವಕ್ಕೆ ಒತ್ತು. ಕನ್ನಾಡಿನಾದ್ಯಂತ ಕೃಷಿಕರ ಭೇಟಿ. ನೈಸರ್ಗಿಕ ಕೃಷಿಯತ್ತ ಅಧ್ಯಯನ. ಬೆಂಗಳೂರಿನ ಸಹಜ ಸಮೃದ್ಧದ ಸಂಪರ್ಕ. ಅವರಿಂದ ನಾಟೀ ಬೀಜದ ಲಭ್ಯತೆ. ಈಗ ಎಪ್ಪತ್ತು ವೆರೈಟಿ ಭತ್ತದ ಒಡೆಯ. ಪೂರ್ತಿ ಸಾವಯವ.

ಸಹಜ ಸಮೃದ್ಧದ ಮೂಲಕ ಮುನ್ನೂರು ವಿಧದ ಭತ್ತವನ್ನು ಬೆಳೆಸಿ ಸಂರಕ್ಷಿಸುತ್ತಿರುವ ಒರಿಸ್ಸಾದ ನಟವರ ಸಾರಂಗಿಯವರ ಸಾಧನೆ ವೀಕ್ಷಣೆ. ಭತ್ತ ಸಂರಕ್ಷಣೆಯ ನಿರ್ಧಾರ ಮತ್ತಷ್ಟು ಗಟ್ಟಿಯಾಯಿತು. 'ಭತ್ತ ಉಳಿಸಿ ಆಂದೋಳನ'ದತ್ತ ಹೆಚ್ಚು ಆಸಕ್ತರಾದ ಗೌಡರು, ತನ್ನ ಹೊಲದಲ್ಲೂ ಕ್ಷೇತ್ರೋತ್ಸವ ಏರ್ಪಡಿಸಿದರು.

ಭತ್ತದ ಬೀಜದ ಕೊರತೆಯನ್ನು ಮನಗಂಡ ಬೋರೇಗೌಡರು, ಉತ್ತಮ ಬೀಜದ ಉತ್ಪಾದನೆಗಾಗಿ ಕಾಳಜಿ ವಹಿಸಿದರು. ನಾಟಿ ಭತ್ತದ ತಳಿಗಳಿಗೆ ಜೀವಾಮೃತವೇ ಗೊಬ್ಬರ. ಕೃಷಿ ಇಲಾಖೆ ಪೋಷಿತ 'ಕಾಮಧೇನು ಕೃಷಿಕರ ಸಂಘ'ದಿಂದ ಬೀಜ ಹಂಚುವಿಕೆ.

ಒಂದಿನ ಹೊಲದಲ್ಲಿ ಓಡಾಡುವಾಗ ಎರಡು ತೆನೆಗಳ ಬಣ್ಣ, ಗಾತ್ರ, ಪ್ರಮಾಣ ಉಳಿದವುಗಳಿಗಿಂತ ಭಿನ್ನವಾಗಿರುವುದನ್ನು ಕಂಡರು. ಅವರೆಡನ್ನು ಕಟಾವಿನ ವೇಳೆ ತೆಗೆದಿಟ್ಟು, ಮುಂದೆ ಪ್ರತ್ಯೇಕ ಮಡಿಯಲ್ಲಿ ಬಿತ್ತಿದರು. ಬಣ್ಣ, ಆಕಾರದಲ್ಲಿ ಭಿನ್ನವಾಗಿ ಬೆಳೆದ ಎರಡು ತೆನೆಯಿಂದ ಅರ್ಧ ಸೇರು ಕಾಳು ಸಿಕ್ಕಿತ್ತು. ಮುಂದಿನ ಋತುವಿನಲ್ಲಿ ಪುನಃ ಬಿತ್ತಿ ಅಭಿವೃದ್ಧಿ. 'ಕಣದ ತುಂಬ' ಎಂಬ ನಾಮಕರಣ. ಇಂತಹುದೇ ಅನುಭವದಲ್ಲಿ ಇನ್ನೆರಡು ತೆನೆ ಸಿಕ್ಕಿ ಅವಕ್ಕೆ 'ಸಿದ್ದಸಣ್ಣ' ಎಂಬ ಹೆಸರಾಯಿತು.

ಭತ್ತ ಬೆಳೆವ ಋತುವಿನಲ್ಲಾದರೆ ನೋಡಲು ಸಿಗುತ್ತದೆ. ಉಳಿದ ಸಮಯದಲ್ಲಿ? ಅದಕ್ಕಾಗಿ 'ಭತ್ತ ಮ್ಯೂಸಿಯಂ' ರೂಪೀಕರಣ. ಭತ್ತದ ಕುರಿತಾದ ಗೋಡೆ ಬರೆಹಗಳು. ವಿವಿಧ ಫಲಕಗಳು. ಮೂಲೆಗುಂಪಾಗುತ್ತಿರುವ ನಲವತ್ತು ಜಾತಿಯ ರಾಗಿ ಹಾಗೂ ಸಿರಿಧಾನ್ಯಗಳು ಕೂಡಾ. ಇದು ದೇಶದ ಮೊಟ್ಟ ಮೊದಲ ರೈತರೊಬ್ಬರ 'ಭತ್ತ ಮ್ಯೂಸಿಯಂ'.

ಬೋರೇಗೌಡರ ಭತ್ತದ ಸಾಧನೆಯನ್ನು ಧಾರವಾಡದ ಕೃಷಿ ಮಾಧ್ಯಮ ಕೇಂದ್ರವು 'ಬೀಜಸ್ವಾತಂತ್ರ್ಯದ ಕಲ್ಪನೆಯನ್ನು ಸಾಕಾರಗೊಳಿಸಿದ ಭತ್ತದ ಬೋರೇಗೌಡರು' ಎಂಬ ಪುಸ್ತಿಕೆಯೊಂದರಲ್ಲಿ ಹಿಡಿದಿಟ್ಟಿದೆ. ಬೆಂಗಳೂರಿನ ಸೀಮ ಜಿ.ಪ್ರಸಾದ್ ಅಕ್ಷರ ರೂಪ ನೀಡಿದ್ದಾರೆ. ಒಂದೇ ಟೇಕ್ನಲ್ಲಿ ಓದಬಹುದಾದ ಪುಸ್ತಕ. ಬೆಲೆ ಇಪ್ಪತ್ತು ರೂಪಾಯಿ.

ಪುಸ್ತಕ ಆಸಕ್ತರಿಗೆ ವಿಳಾಸ: ಕೃಷಿ ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ 580 008 - ದೂರವಾಣಿ 0836-2444736.