Tuesday, August 23, 2011

ಮನ ತುಂಬಿದ ಹಲಸಿನ ಮನೆಹಬ್ಬಮದುವೆ ಮನೆಯನ್ನು ಕಲ್ಪಸಿಕೊಳ್ಳಿ. ಮಿರಿಮಿರಿ ಸೀರೆಯುಟ್ಟು ಓಡಾಡುವ ನೀರೆಯರು, ಶಾಲು ಹಾಕಿ ಒಡಾಡುತ್ತಲೇ ಇರುವ ಅಣ್ಣಂದಿರು, ಜಗಲಿಯ ಬದಿಯಲ್ಲಿ ಹರಟೆಯಲ್ಲಿರುವ ಅಮ್ಮಂದಿರು, ತಮ್ಮದೇ ಲೋಕದಲ್ಲಿ ವಿಹರಿಸುವ ಮಕ್ಕಳು, ಅಡುಗೆ ಮನೆಯ ಭರಾಟೆ.. ಹೀಗೆ.

ಇದನ್ನೇ ಹಲಸಿನ ಹಬ್ಬಕ್ಕೆ ಸಮೀಕರಿಸಿ. ದಿಬ್ಬಣೋಪಾದಿಯಲ್ಲಿ ಆಗಮಿಸುವ ಅತಿಥಿಗಳು. ಕೈಕಾಲು ತೊಳೆದು ಮನೆಯೊಳಗೆ ಪ್ರವೇಶಿಸುವ ಬಂಧುಗಳು, 'ಶುರುವಾಯಿತಾ' ಎನ್ನುತ್ತಾ ಮುಖದ ಬೆವರೊರೆಸಿ ಪಾನೀಯ ಹೀರುವ ಹಲಸು ಪ್ರಿಯರು, 'ಮನೆಯ ಕಾರ್ಯಕ್ರಮವಲ್ವಾ, ಬಾರದೇ ಇರುವುದಕೆ ಆಗುತ್ತಾ' ಎನ್ನುತ್ತಾ ವೀಳ್ಯವನ್ನು ಉಗುಳುವ ಅಜ್ಜಿಯಂದಿರು, 'ಹಲಸಿನ ಹಣ್ಣು ತಂದಿದ್ದೆ. ಎಲ್ಲಿ ಕೊಡುವುದು' ಎಂದು ಹುಡುಕಾಡುವ ಮಂದಿ...

ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಉಬರು ರಾಜಗೋಪಾಲ ಭಟ್ಟರ (ರಾಜಣ್ಣ) ಮನೆಯಲ್ಲಿ ಜರುಗಿದ 'ಹಲಸಿನ ಹಬ್ಬ'ದ ಗುಂಗಿನ ಮಾದರಿಗಳು. ಆಗಸ್ಟ್ 20, 21ರಂದು ಹಬ್ಬಕ್ಕಾಗಿ ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದರು. ಸೀಮಿತ ಮಂದಿಗೆ ಆಮಂತ್ರಣ. ಸುದ್ದಿ ಕೇಳಿ ಆಗಮಿಸಿದವರ 'ಹಲಸು ಪ್ರಿಯ'ರೇ ಅಧಿಕ. ಈಚೆಗಿನ ವರುಷಗಳಿಂದ ಸದ್ದಿಲ್ಲದ ನಡೆಯುತ್ತಿರುವ ಹಲಸಿನ ಆಂದೋಳನದ ಇಂಪ್ಯಾಕ್ಟ್.

ಅನ್ನ, ಮಜ್ಜಿಗೆ, ಚಾ, ಕಾಫಿ ಹೊರತಾಗಿ ಮಿಕ್ಕೆಲ್ಲವೂ ಹಲಸಿನ ಖಾದ್ಯಗಳೇ. 'ವಾ.. ಇದು ಹಲಸಿನ ಉಪ್ಪಿನಕಾಯಿಯಾ' ಎನ್ನುತ್ತಾ ಎರಡು ಚಮಚ ಹೆಚ್ಚೇ ಬಟ್ಟಲಿಗೆ ಹಾಕಿಕೊಂಡ ಅಮ್ಮಂದಿರು, 'ನಮ್ಮಲ್ಲಿಯೂ ತಯಾರಿಸಬೇಕು' ಎಂದು ಶಪಥ ತೊಟ್ಟಿದ್ದರು! 'ಓ.. ಇದು ಹಲಸಿನ ಬೇಳೆಯ ಸಾರಾ..' ಎನ್ನುವ ಮನೆಯ ಯಜಮಾನರು 'ಮನೆಯವಳಿಗೆ ಹೇಳಬೇಕು' ಎಂದು ಕಣ್ಣುಮಿಟುಕಿಸುತ್ತಿದ್ದರು.

ಹಲಸಿನ ಹಬ್ಬಕ್ಕೆ ಮೂರು ತಿಂಗಳಿಂದ ತಯಾರಿ. ಎಪ್ರಿಲ್ ಮಧ್ಯ ಭಾಗದಲ್ಲಿ ಮುಳಿಯ ವೆಂಕಟಕೃಷ್ಣ ಶರ್ಮಾರಲ್ಲಿ 'ರುಚಿ ನೋಡಿ ತಳಿ ಆಯ್ಕೆ' ಕಾರ್ಯಕ್ರಮ ನಡೆದಿತ್ತು. ಅಂದಿನಿನ ಹಲಸಿನ 'ಹುಚ್ಚನ್ನು' ಹೆಚ್ಚೇ ಅಂಟಿಸಿಕೊಂಡ ಉಬರು ರಾಜಣ್ಣ, 'ನಮ್ಮ ಮನೆಯಲ್ಲೂ ಆಗಬೇಕು' ಎಂಬ ಸಂಕಲ್ಪ. ಶರ್ಮರ ಮನೆಯಂಗಳದಲ್ಲಿ ಹೊತ್ತಿದ ಹಣತೆ, ಉಬರು ಮನೆಯಂಗಳದಲ್ಲಿ ಬೆಳಗಿತು.

ಮೊದಲ ದಿವಸ ಸಾಂಕೇತಿಕ ಉದ್ಘಾಟನೆ. ಪ್ರತಿಷ್ಠಿತ 'ಉಬರು' ಮನೆಯ ಸದಸ್ಯರ ಪರಿಚಯ. ಹಲಸಿನ ಸೊಳೆಗೆ ಮಾರುಕಟ್ಟೆ ಮಾಡಿದ ಅಡ್ಕತ್ತಿಮಾರು ಸುಬ್ರಹ್ಮಣ್ಯ ಭಟ್ ಅವರ ಮಾರುಕಟ್ಟೆ ಜಾಣ್ಮೆ. ವಿಶೇಷಜ್ಞೆಯರಾದ ಸವಿತಾ ಎಸ್.ಭಟ್ ಅಡ್ವಾಯಿ ಮತ್ತು ಪಾತನಡ್ಕ ಸುಶೀಲ ಭಟ್ಟರಿಂದ ನಲವತ್ತಕ್ಕೂ ಮಿಕ್ಕಿ ಅಡುಗೆಗಳ ಪ್ರಾತ್ಯಕ್ಷಿಕೆ.

ರೆಚ್ಚೆಯ(ಸೊಳೆ ಮತ್ತು ಮುಳ್ಳುಗಳ ನಡುವಣ ಹೊರಮೈ)ಯ ಜೆಲ್ಲಿ, ಉಪ್ಪಿನಸೊಳೆಯ ಗರಂ ದೋಸೆ, ವಡೆ, ಕಾಯಿ ಮಸಾಲ, ಬೀಜ-ಸೊಳೆ ಸಾಂಗ್, ಶ್ರೀಖಂಡ.. ಹೀಗೆ. ಇಬ್ಬರೂ ನೂರಕ್ಕೂ ಮಿಕ್ಕಿ ಹಲಸಿನ ಪಾಕಗಳನ್ನು ತಯಾರಿಸಬಲ್ಲ ಸಮರ್ಥೆಯರು. 'ನೋಡಿ.. ಇದು ಹಲಸಿನ ಮೇಣದ ಡೈ' ಎಂದು ಸುಶೀಲಕ್ಕ ತೋರಿಸಿದಾಗ, ಹಿಂಬದಿ ಆಸನದಲ್ಲಿದ್ದ ಮಾತೆಯರು, ಮಹನೀಯರು ಮುಂಬದಿಗೆ ಆಗಮಿಸಿ ಕುತೂಹಲಿಗರಾದುದು 'ಡೈ ಮಹಾತ್ಮೆ'! ತಯಾರಿ ಕ್ರಮವನ್ನು ಒಂದಷ್ಟು ಮಂದಿ ಕಾಗದಕ್ಕಿಳಿಸಿಕೊಂಡರು. ಪ್ರಶ್ನೆಗಳ ಸುರಿಮಳೆ. 'ಮಾಡಿ ಕೊಡ್ತೀರಾ' ಎಂಬ ಬೇಡಿಕೆ.

ಕಸಿತಜ್ಞರಾದ ಗುರುರಾಜ ಬಾಳ್ತಿಲ್ಲಾಯ ಮತ್ತು ಕೃಷ್ಣ ಕೆದಿಲಾಯರಿಂದ ಕಸಿ ಪ್ರಾತ್ಯಕ್ಷಿಕೆ. ಕಸಿಯ ಸೂಕ್ಷ್ಮಗಳ ಪ್ರಸ್ತುತಿ. ಸಯಾನ್ ಆಯ್ಕೆಯಲ್ಲಿಂದ ಗಿಡದ ಬೆಳವಣಿಗಯ ಹಂತಗಳ ಗುಟ್ಟು ರಟ್ಟು. 'ಉತ್ತಮ ಹಣ್ಣುಗಳನ್ನು ಪಡೆಯುವ ಕುತೂಹಲ ಎಲ್ಲರಲ್ಲಿದೆ. ಹಾಗಾಗಿ ಹಲಸಿನ ಕಸಿ ಗಿಡಗಳಿಗೆ ಬಹು ಬೇಡಿಕೆಯಿದೆ' ಎನ್ನುತ್ತಾರೆ ಗುರುರಾಜ್.

ವೆಂಕಟಕೃಷ್ಣ ಶರ್ಮರಲ್ಲಿ ಜರುಗಿದ 'ರುಚಿ ನೋಡಿ ತಳಿ ಆಯ್ಕೆ'ಯ ಪ್ರಕ್ರಿಯೆಯಲ್ಲಿ ಆಯ್ಕೆಯಾದ 'ಬಿಲ್ಲಂಪದವು ಅನನ್ಯ, ಕುದ್ದುಪದವು ಮಧುರ, ಅಳಿಕೆಯ ಪ್ರಶಾಂತಿ, ಮುದ್ರಾಕ್ಷಿ, ಉಬರು ರಾಜರುದ್ರಾಕ್ಷಿ' ತಳಿಗಳ ಅನಾವರಣ. ನೂತನ ನಾಮಕರಣ. 'ಹಬ್ಬದಲ್ಲಿ ಉತ್ತಮವಾದುದೆಂದು ಆಯ್ಕೆಯಾದ ತಳಿಗಳನ್ನು ಕಸಿ ಕಟ್ಟಿ ಅಭಿವೃದ್ಧಿ ಪಡಿಸುವುದು ಮುಂದಿನ ಹೆಜ್ಜೆ' ಎನ್ನುತ್ತಾರೆ ವಾರಣಾಸಿ ಸಂಶೋಧನಾ ಪ್ರತಿಷ್ಠಾನದ ಡಾ.ವಾರಣಾಶಿ ಕೃಷ್ಣಮೂರ್ತಿ.

ಹಲಸಿನ ಗಿಡಗಳನ್ನು ನೆಡುವ ಪರಿಪಾಠ ಈಚೆಗೆ ಶುರುವಾದ ಆಸಕ್ತಿ. ಅದರಲ್ಲೂ ಕಸಿ ಗಿಡಗಳ ಹುಡುಕಾಟ. ಉತ್ತಮ ಹಣ್ಣುಗಳನ್ನು ಪಡೆಯಬೇಕೆಂಬ ಕುತೂಹಲ. ದೂರದೂರಿಂದ ಸಯಾನ್ ತಂದು ಕಸಿ ಕಟ್ಟುವುದಕ್ಕಿಂತ, ತಮ್ಮ ಸುತ್ತಮುತ್ತಲಿನ ಉತ್ತಮ ತಳಿಗಳ ಕಸಿ ಗಿಡ ತಯಾರಿಸುವುದು ಸೂಕ್ತ. ಇಂತಹ ಹಬ್ಬಗಳು ಅವಕ್ಕೆ ದಿಕ್ಸೂಚಿ.

ನ್ಯಾಚುರಲ್ ಐಸ್ಕ್ರೀಂನ ರಘುನಂದನ ಕಾಮತ್ ದಂಪತಿಗಳು ಮುಂಬಯಿಂದ ಉಬರಿಗೆ ಹಾರಿ ಬಂದಿದ್ದರು. ಹಬ್ಬವಿಡೀ ಓಡಾಡಿದರು. ಖಾದ್ಯಗಳ ರುಚಿ ಸವಿದರು. 'ಹಳ್ಳಿ ಮನೆಯ ರುಚಿ ಇದೆಯಲ್ಲಾ, ಅದು ನಗರದವರಿಗೆ ಪ್ರಿಯವಾಗುತ್ತದೆ. ನಮ್ಮ ಐಸ್ಕ್ರೀಂ ಜನಪ್ರಿಯವಾದುದೇ ಹಾಗೆ' ಎಂದು ನಗೆಯಾಡುತ್ತಾ, ಎಲ್ಲರಿಗೂ ಹಲಸಿನ ಹಣ್ಣಿನ ಐಸ್ಕ್ರೀಂ ಹಂಚಿದರು.

ಹಳ್ಳಿಯಿಂದ ಸಾಗರದಾಚೆ ಹಲಸು ಜನಪ್ರಿಯವಾಗುತ್ತದೆ. ಹಳ್ಳಿ ಹೆಣ್ಮಕ್ಕಳ ಹಪ್ಪಳ, ಚಿಪ್ಸ್ ರುಚಿಗಳು ಬಣ್ಣ ಬಣ್ಣದ ಪ್ಯಾಕೆಟ್ನಲ್ಲಿ ಮಾರುಕಟ್ಟೆಗಳಿದಿವೆ. ಈ ರುಚಿಗಳನ್ನು ಕಂಪೆನಿಗಳು ತಮ್ಮವೆಂದು ಹೇಳಿಕೊಳ್ಳುತ್ತಿವೆ! ವಿಯೆಟ್ನಾಂ, ಶ್ರೀಲಂಕಾದಂತಹ ದೇಶಗಳಲ್ಲಿ ಹಲಸನ್ನು ಬಿಟ್ಟು ಮಾತುಕತೆಯಿಲ್ಲ. ಹೊಲಸೆನ್ನುವ ಕೀಳರಿಮೆಯಿಲ್ಲ. ಶ್ರೀ ಪಡ್ರೆಯವರಿಂದ ನಡೆದ 'ಹಲಸಿನ ಯಶೋಗಾಥೆ'ಗಳ ಪ್ರಸ್ತುತಿಗೆ ಸಭಾಸದರು ಮಧ್ಯಾಹ್ನದ ಹಸಿವಿನ ಹೊತ್ತಲ್ಲೂ ಆಕಳಿಸದೇ ಕುತೂಹಲಿಗರಾಗಿದ್ದರು.

ಪಾಕಶಾಲೆಯನ್ನು ಅಣಿಗೊಳಿಸುವುದು ಸುಲಭದ ಮಾತಲ್ಲ. ಸಮಾರಂಭಗಳಲ್ಲಿ ಸಿದ್ಧ ವೈವಿಧ್ಯದ ಪಾಕ ರೂಢಿಯಾದ ಸೂಪತಜ್ಞರ ಮಾತೇ ಅಂತಿಮ. ಅದರಲ್ಲೂ ಎಲ್ಲವೂ ಹಲಸುಮಯವಾಗಬೇಕೆಂಬ ಬೇಡಿಕೆಯನ್ನು ನಿರಾಕರಿಸಬಹುದೆಂಬ ಭಯ. ಈ ಹಿನ್ನೆಲೆಯಲ್ಲಿ ಪಾಕಶಾಲೆಯ ಹೊಣೆಹೊತ್ತ ಶಿರಂಕಲ್ಲು ನಾರಾಯಣ ಭಟ್ಟರು ಸೂಪಜ್ಞರನ್ನು ಗೊತ್ತುಮಾಡುವಲ್ಲಿ ಗೆದ್ದಿದ್ದಾರೆ. ಸಂಘಟಕರ ಆಶಯ ಖಾದ್ಯಗಳಲ್ಲಿ ಅನಾವರಣವಾಗಿದೆ.

ಹಲಸಿನ ವಿವಿಧ ಖಾದ್ಯಗಳ ಸ್ಪರ್ಧೆ.. ಮರೆತುಹೋದ ಮರೆಯಾಗುತ್ತಿರುವ ಪಾಕಗಳು, ಸಿಹಿತಿಂಡಿಗಳು, ಹುರಿದ ತಿಂಡಿಗಳು, ವ್ಯಂಜನಗಳು, ಉಪ್ಪುಸೊಳೆ ಖಾದ್ಯಗಳು, ಹಪ್ಪಳಗಳು, ಬೇಳೆಯ ತಿನಿಸುಗಳು ಸ್ಪರ್ಧೆಗಾಗಿ ಬಂದಿದ್ದುವು. ನೂರಕ್ಕೂ ಮಿಕ್ಕಿದ ವೆರೈಟಿಗಳು. ಎಲ್ಲದಕ್ಕೂ ಸವಿನೋಡಿಯೇ ಅಂಕ. ತಂತಮ್ಮ ಮನೆಗಳಿಂದ ಪಾಕಗಳನ್ನು ತಯಾರಿಸಿ ತಂದಿದ್ದರು. ಸ್ಪರ್ಧೆಯ ಮುನ್ನಾ ದಿನ ಸ್ಪರ್ಧಾಳುಗಳ ಅಡುಗೆ ಮನೆಯಲ್ಲಿ ತಡರಾತ್ರಿಯವರೆಗೂ ಬೆಳಕಿತ್ತು! 'ಅವಳಿಗೆ ನಿನ್ನೆ ರಾತ್ರಿ ನಿದ್ದೆಯೇ ಇಲ್ಲ. ಸ್ಪರ್ಧೆಯಂತೆ. ಏನೋ ಹೊಸತು ಮಾಡುತ್ತಿದ್ದಳು' ಎನ್ನಲು ಯಜಮಾನರಿಗೆ ಹೆಮ್ಮೆ.

ಒಂದೆಡೆ ಹಲಸಿನ ಹಣ್ಣನ್ನು ಕೊಯಿದು ಸೊಳೆ ಮಾಡಿಟ್ಟುಕೊಳ್ಳುವಷ್ಟರಲ್ಲಿ ಹಬ್ಬದ ಗುಂಗು ಅವನ್ನು ಖಾಲಿ ಮಾಡುತ್ತಿತ್ತು! ಪಾಕ ಸ್ಪರ್ಧೆಗಾಗಿ ಪೇರಿಸಿಟ್ಟ ಖಾದ್ಯಗಳನ್ನು 'ಮುಟ್ಟಬೇಡಿ' ಎಂಬ ಬೇಡಿಕೆಯನ್ನು ಕಿವಿಗೆ ಹಾಕಿಕೊಳ್ಳದೆ, ಖಾದ್ಯಗಳನ್ನು ಬಾಯಿಗೆ ಹಾಕಿಕೊಂಡು ಮಗುಮ್ಮಾಗಿ ಇದ್ದುಬಿಡುವ ಮಂದಿಯನ್ನು ನೆನೆಸಿದಾಗ 'ಹಲಸಿನ ಮಹಾತ್ಮೆ'ಯಲ್ಲದೆ ಮತ್ತೇನು ಹೇಳಿ!

'ಶೈಕ್ಷಣಿಕವಾಗಿ ನನಗೆ ಸಾಕಷ್ಟು ಜ್ಞಾನ ಸಿಕ್ಕಿದೆ. ಹಲಸಿನ ಬಗ್ಗೆ ಯಾರೂ ಒಂಟಿಯಲ್ಲ ಎಂಬ ಅಂಶ ಮನವರಿಕೆಯಾಗಿದೆ. ಈ ರೀತಿಯ ಹಬ್ಬಗಳು ಗ್ರಾಮೀಣ ಬದುಕನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಸಾಧನ' - ಹಬ್ಬವನ್ನು ಸವಿದ ಚಿಕ್ಕಮಗಳೂರು ಸಖರಾಯಪಟ್ಟಣದ ಶಿವಣ್ಣ ಅವರ ಮನದ ಮಾತು. ದಂಪತಿ ಸಹಿತವಾಗಿ ಹಲಸಿನ ಒಣಸೊಳೆ, ಹಣ್ಣಿನ ಹುಡಿ ಮೊದಲಾದ ಉತ್ಪನ್ನಗಳನ್ನು ಪ್ರಾಯೋಗಿಕವಾಗಿ ಪ್ರದರ್ಶನಕ್ಕಿಟ್ಟಿದ್ದರು.

ಹಲಸಿನ ಹಬ್ಬಕ್ಕೆ ವಾರಣಾಸಿ ಸಂಶೋಧನಾ ಪ್ರತಿಷ್ಠಾನದ ಸಾರಥ್ಯ. ಅಡಿಕೆ ಪತ್ರಿಕೆಯೂ ಸೇರಿದಂತೆ ವಿವಿಧ ಸಂಘಟನೆಗಳ ಹೆಗಲೆಣೆ. ಮುಳಿಯ ವೆಂಕಟೇಶ ಶರ್ಮ ಮತ್ತು ಒಡನಾಡಿಗಳ ನೇಪಥ್ಯ ಕೆಲಸಗಳು. ಡಾ.ವಾರಣಾಸಿ ಕೃಷ್ಣಮೂರ್ತಿ ಮತ್ತು ಡಾ.ಅಶ್ವಿನಿ ಕೃಷ್ಣಮೂರ್ತಿಯವರ 'ಸಂಘಟನೆ ಅನುಭವ' - ಹಲಸಿನ ಹಬ್ಬದ ಯಶದಲ್ಲಿ ಎದ್ದು ಕಾಣುತ್ತಿತ್ತು.

ಉಬರು ತೋಟದಲ್ಲಿ ನೂರಕ್ಕೂ ಮಿಕ್ಕಿ ಫಲನೀಡುವ ಹಲಸಿನ ಮರಗಳಿವೆ. ಮನೆಯ ಸಮಾರಂಭಗಳಲ್ಲಿ ಹಲಸಿಗೆ ಮಣೆ. 'ಮನೆ ಸಮೀಪದ ಮರಗಳ ಹಣ್ಣುಗಳನ್ನು ಮಾತ್ರ ರುಚಿ ನೋಡಿದ್ದೇವೆ. ಹಬ್ಬದಿಂದಾಗಿ ಉಳಿದ ಮರಗಳದ್ದು ರುಚಿ ನೋಡಬೇಕೆನ್ನುವ ತುಡಿತ ಹೆಚ್ಚಾಗಿದೆ' ಎಂದು ಮನೆಯ ಹಿರಿಯರಾದ ಪಾರ್ವತಿಯಮ್ಮ ಮತ್ತು ಒಡತಿ ಗೀತಾಲಕ್ಷ್ಮಿ ಎಲ್ಲರನ್ನೂ ಬೀಳ್ಕೊಡುತ್ತಿದ್ದಾಗ ಅವರ ಕಣ್ಣಂಚಿನಲ್ಲಿ ಆನಂದದ ಭಾಷ್ಪ.

ಈಚೆಗಿನ ವರುಷಗಳಿಂದ ವಿವಿಧ ಸಂಘಟನೆಗಳು ಹಲಸಿನ ಮೇಳವನ್ನು ನಡೆಸಿಕೊಂಡು ಬರುತ್ತಿವೆ. ಇಲಾಖೆಗಳು ಹಬ್ಬದ ಶಾಸ್ತ್ರ ಮಾಡುತ್ತಿವೆ. ಇವೆಲ್ಲವನ್ನೂ ಮೀರಿ ಉಬರು ಹಲಸಿನ ಹಬ್ಬ ನಡೆದಿದೆ. ಮನೆಮಟ್ಟದಲ್ಲಿ ಹಲಸಿನ ಮಾತುಕತೆಗೆ ಹಣತೆ ಹಚ್ಚಿನ ಉಬರು ಮನೆಯವರ ಮಾದರಿ ಮುಂದಿನ ಸಾಲಿನಲ್ಲಿ ಇನ್ನಷ್ಟು ಈ ಥರದ 'ಮನೆ ಹಬ್ಬ'ಗಳಿಗೆ ನಾಂದಿಯಾಗಲಿ.


ಎಸ್ಸೆಮ್ಮೆಸ್ : 'ಹಲಸಿನ ಮೇಣದಿಂದ ಹೇರ್ ಡೈ' ಹೊಸ ಸುದ್ದಿ. ತಲೆಗೆ ಮೆತ್ತುವ ಕೂದಲ ಬಣ್ಣವಾದರೂ ಮನಸ್ಸಿಗೆ ಹಲಸುಪ್ರೀತಿ ತಂದುಕೊಡಲಿ!

(ಇಂದಿನ ಉದಯವಾಣಿಯಲ್ಲಿ 'ಮಣ್ಣಿನ ನಾಡಿ' ಕಾಲಂನಲ್ಲಿ ಪ್ರಕಟವಾದ ಬರೆಹ)

0 comments:

Post a Comment