Saturday, December 31, 2011

ಭವಿಷ್ಯದ ಆಪತ್ತುಗಳಿಗೆ ವರ್ತಮಾನದ ಬೆಳಕಿಂಡಿ

ಅಂದು ಅಡಿಕೆ ಕೊಯ್ಲು ದಿನ. ಕಷ್ಟಪಟ್ಟು 'ಹುಡುಕಿ ತಂದ' ನಾಲ್ಕೈದು ಮಂದಿ ಅಡಿಕೆ ಕೊಯ್ಯುವವರು ಮರ ಏರಿದ್ದಾರೆ. ಉಳಿದ ಸಹಾಯಕರು ಗೊನೆ ಕೀಳುತ್ತಿದ್ದಾರೆ. ಬಿದ್ದ ಅಡಿಕೆ ಗೊನೆಯನ್ನು ಹೆಕ್ಕಿ ಕೈಗಾಡಿಗಳಿಗೆ ತುಂಬಿ, ಅಂಗಳಕ್ಕೆ ಸಾಗಾಟ. ಅಲ್ಲಿ ಗೊನೆಯಿಂದ ಅಡಿಕೆಯನ್ನು ಕಿತ್ತು ಗೋಣಿಗಳಿಗೆ ತುಂಬುವ ಕೆಲಸ ನಡೆಯುತ್ತಿದೆ. ಮತ್ತೊಂದೆಡೆ ಗೋಣಿಗಳು ಲಾರಿಗೆ ಲೋಡ್ ಆಗಿ 'ಅಡಿಕೆ ಮಿಲ್' ಸೇರುತ್ತಿವೆ.

ದೊಡ್ಡ ಶಾಖ ಪೆಟ್ಟಿಗೆಯ (ಡ್ರೈಯರ್) ಬಾಯೊಳಗೆ ಅಡಿಕೆ ತೂರುತ್ತಿದ್ದಾರೆ. ಮತ್ತೊಂದೆಡೆ ಈಗಾಗಲೇ ನಾಲ್ಕೈದು ದಿವಸದ ಹಿಂದೆ ತೂರಿದ ಅಡಿಕೆಯನ್ನು ಹೊರ ತೆಗೆಯುತ್ತಿದ್ದಾರೆ. ಅದನ್ನು ಅಡಿಕೆ ಸುಲಿ ಯಂತ್ರದ ಹಾಪರ್ಗೆ ಹಾಕುತ್ತಿದ್ದಾರೆ. ಸುಲಿದ ಅಡಿಕೆ ಮತ್ತು ಸಿಪ್ಪೆ ಬೇರೆ ಬೇರೆಯಾಗಿ ಸಂಗ್ರಹವಾಗುತ್ತಿದೆ. ಸುಲಿದ ಅಡಿಕೆ ಜೀಪ್ಗೆ ಲೋಡ್ ಆಗುತ್ತಿದೆ. ಚಾಲಕನ ಆಸನದಲ್ಲಿ ಕುಳಿತ ಯಜಮಾನನ ಮುಖದಲ್ಲಿ ನಗು. ಸುಲಿದ ಅಡಿಕೆಯ ಗೋಣಿಗಳು ಜಗಲಿಯಲ್ಲಿ ಪೇರಿಸಲ್ಪಡುತ್ತಿವೆ. 'ಹೋ.. ಇಂದು ಕಿಲೋಗೆ ನೂರೈವತ್ತು ಅಲ್ವಾ. ಒಂದು ವಾರ ಕಾಯೋಣ, ಇನ್ನೂರಾಗಬಹುದು' ಎನ್ನುತ್ತಾ ವೀಳ್ಯತಟ್ಟೆಯನ್ನು ಎಳೆದುಕೊಳ್ಳುತ್ತಾನೆ ಆ ಯಜಮಾನ.

ಸದ್ಯಕ್ಕೆ ಮೇಲಿನದು ಒಂದು ಸುಂದರ ಕಲ್ಪನೆ ಮಾತ್ರ. ಅಡಿಕೆ ಕೃಷಿರಂಗದಲ್ಲಿ ಇಂತಹ ಒಂದಷ್ಟು 'ಶ್ರಮ ಉಳಿಸುವ ವ್ಯವಸ್ಥೆ ಬಂದರೆ ಅದೆಷ್ಟು ಅನುಕೂಲ. ಏನಂತೀರಿ? ಮಿಲ್ನಲ್ಲಿ ಬೇಕಾದಾಗ ಭತ್ತವನ್ನು ಅಕ್ಕಿ ಮಾಡಬಹುದು. ಕಿರುಧಾನ್ಯಗಳನ್ನು ಸಂಸ್ಕರಿಸಬಹುದು. ಧಾನ್ಯಗಳನ್ನು ಪುಡಿಗಟ್ಟಬಹುದು. ಅಡಿಕೆಗೂ 'ಮಿಲ್' ಇರುತ್ತಿದ್ದರೆ? ಸಂಸ್ಕರಣೆ ಎಷ್ಟು ಸುಲಭವಲ್ವಾ. ಅಡಿಕೆ ಒಣಗಿಸಲು ಅಂಗಳ ಸಿದ್ಧವಾಗಬೇಕಾಗಿಲ್ಲ, ಐವತ್ತು ದಿನ ಅಡಿಕೆಗೆ ಬಿಸಿಲು ಸ್ನಾನದ ಆವಶ್ಯತೆಯಿರಲಿಲ್ಲ..

ಇಂತಹ ಒಂದು ವ್ಯವಸ್ಥೆಯ ಅಗತ್ಯವನ್ನು ಕೃಷಿಕ ಮಂಚಿ ಶ್ರೀನಿವಾಸ ಆಚಾರ್, ಈಚೆಗೆ ಮಂಗಳೂರಿನಲ್ಲಿ ಕ್ಯಾಂಪ್ಕೋ ಆಯೋಜಿಸಿದ 'ಅಡಿಕೆ ಕೃಷಿ ಯಾಂತ್ರೀಕರಣ' ಕಾರ್ಯಾಗಾರದಲ್ಲಿ ಮುಂದಿಟ್ಟಾಗ ಎಲ್ಲರೂ ತಲೆತೂಗಿದವರೇ!

ಬದುಕಿನ ಒಂದು ಹಂತದಲ್ಲಿ ಕೃಷಿಯು ಸಮಸ್ಯೆಯಾಗಿಲ್ಲ. ಬದಲಾದ ಕಾಲಘಟ್ಟದಲ್ಲಿ 'ಕೃಷಿಯೇ ಒಂದು ಸಮಸ್ಯೆ' ಅಂತ ನಮ್ಮ ಮಾತುಕತೆಗಳಲ್ಲಿ, ಸಭೆಗಳಲ್ಲಿ ಬಿಂಬಿಸಲಾಗುತ್ತಿದೆ. ವಾಸ್ತವ ಹೌದಾದರೂ ಸಮಸ್ಯೆಗೆ 'ಸಮಸ್ಯೆಯ ವೈಭವೀಕರಣ' ಪರಿಹಾರವಲ್ಲ. ಪರ್ಯಾಯವಾಗಿ ಯೋಚಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜರುಗಿದ ಕಾರ್ಯಾಗಾರ ಹೊಸ ಹೊಳಹುಗಳನ್ನು ತೆರೆದಿಟ್ಟಿತು.

ಇಂದೆಲ್ಲಾ ಸಣ್ಣ ಕುಟುಂಬ. ದೊಡ್ಡ ಮನೆಗಳಿದ್ದರೂ ಒಳಗಿರುವವರು ಇಬ್ಬರೋ, ಮೂವರೋ. ಮನೆಯಿಂದ ಪಂಪುಮನೆಗೆ ಕಿಲೋಮೀಟರ್ ದೂರ. ಕೈಕೊಡುವ ವಿದ್ಯುತ್ನಿಂದಾಗಿ ಆಗಾಗ್ಗೆ ಪುಂಪು ಮನೆಗೆ ಓಡುವ ಯೋಗ! ಇದನ್ನು ಸಮಸ್ಯೆ ಅಂತ ಸ್ವೀಕರಿಸುವ ಬದಲು ಮನೆಯಿಂದಲೇ ಮೊಬೈಲ್ ಮೂಲಕ ಪಂಪನ್ನು ಚಾಲೂ ಮಾಡುವ, ನಿಲ್ಲಿಸುವ ವ್ಯವಸ್ಥೆ ಇರುತ್ತಿದ್ದರೆ? ಈಗಾಗಲೇ ಪ್ರಾಯೋಗಿಕವಾಗಿ ಮೊಬೈನಿಂದ ಚಾಲೂ ಮಾಡುವ ವ್ಯವಸ್ಥೆಗಳಿದ್ದರೂ ಕೃಷಿಕರಿಗಿನ್ನೂ ತಲುಪಬೇಕಷ್ಟೇ.
ವಿದ್ಯುತ್ ಇದೆ, ಕೆರೆಯಲ್ಲಿ ಬೇಕಾದಷ್ಟು ನೀರಿದೆ. ಪಂಪ್ ಆನ್ ಮಾಡಿದರೆ ಆಯಿತು. ದಿನವಿಡೀ ತೋಟ ಒದ್ದೆಯಾಗುತ್ತಿದೆ. ಯಜಮಾನನಿಗೆ ಖುಷಿಯೋ ಖುಷಿ. ಆದರೆ ದಿನವಿಡೀ ಪಂಪ್ ಆನ್ ಮಾಡಿ ನೀರು ಹಾಯಿಸುವುದು ಅಡಿಕೆ, ತೆಂಗು ಕೃಷಿಗೆ ಅನಿವಾರ್ಯವೇ? ಯಾವುದಕ್ಕೆ ಎಷ್ಟೆಷ್ಟು ಪ್ರಮಾಣದಲ್ಲಿ ನೀರು ಬೇಕು ಎಂಬ ಲೆಕ್ಕಾಚಾರ ಬೇಕಾಗಿದೆ.

ಅಡಿಕೆಗೆ ಬಾಧಿಸುವ ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣವನ್ನು ಹೇಗೆ ತಯಾರಿಸುವುದು? ಎಷ್ಟು ದಿವಸದ ಅಂತರದಲ್ಲಿ ಸಿಂಪಡಣೆ ಮಾಡುವುದು? ಖಚಿತವಾದ ಮಾಹಿತಿ ಅಲಭ್ಯ. ಅವರವರ ಅನುಭವದಂತೆ ಈ ಕೆಲಸ ನಿರಂತರ ನಡೆಯುತ್ತಲೇ ಇದೆ. ಬೋರ್ಡೋ ದ್ರಾವಣಕ್ಕೆ ಬಳಸುವ ಮೈಲುತುತ್ತು ಎಷ್ಟು ಸಾಚಾ? 'ಮೈಲುತುತ್ತಿಗೆ ಇರುವೆ ಮುತ್ತಿದ್ದಿದೆ,' ಡಾ.ಡಿ.ಸಿ.ಚೌಟರು ಮಾತಿನ ಮಧ್ಯೆ ಹೇಳಿದರು.

' ದಿನವಿಡೀ ಮರ ಏರಿ ಗೊನೆ ಕೊಯ್ಯುವ, ಮದ್ದು ಸಿಂಪಡಿಸುವವರು ಕೆಲವೆಡೆ ಐದು-ಆರು ಎಂಟು ನೂರು ರೂಪಾಯಿ ಸಂಬಳ ಕೇಳಿದ್ದೂ ಇದೆ ’ - ಚೌಟರೆಂದಾಗ ಎಲ್ಲರ ಹುಬ್ಬು ಮೇಲೇರಿತು. 'ಈಗಿನ ಕಾಲಮಾನದಲ್ಲಿ ಈ ವೇತನ ಸರಿ. ಅವರಿಗೆ ಆರೋಗ್ಯ ಭದ್ರತೆ, ಭವಿಷ್ಯ ಭದ್ರತೆ, ಕುಟುಂಬ ಭದ್ರತೆಯಿದೆಯೇ' ಎಂದು ಪ್ರಶ್ನಿಸಿದರು. ಇಂತಹ ವಿಶೇಷಜ್ಞರನ್ನು 'ತಾಂತ್ರಿಕ ತಜ್ಞ'ರೆಂದು ನಾವು ಯಾಕೆ ಸ್ವೀಕರಿಸಬಾರದು. ವಿಶ್ವವಿದ್ಯಾಲಯಗಳಲ್ಲಿ ಕಲಿತು ಕೆಲವು ತಂತ್ರಜ್ಞರಾಗುತ್ತಾರೆ. ಇವರಿಗೆ ಅನುಭವವೇ 'ತಂತ್ರಜ್ಞ' ಪದವಿ.

ಅಡಿಕೆ ಒಣಗಿಸಲು ಬಿಸಿಲು ಮನೆಗೆ ಈಚೆಗೆ ಬೇಡಿಕೆ ಹೆಚ್ಚು. ಇಲಾಖೆಯ ಸಹಾಯಧನ 'ಪ್ರಸಾದ'ವೂ ಸಿಗುತ್ತಿದೆ. ಎರಡು ಎಕ್ರೆ ತೋಟವಿರುವ ಕೃಷಿಕರೂ ಬಿಸಿಲು ಮನೆಯನ್ನು ಹೊಂದುವಂತಾಗಬೇಕು.

'ಕಳೆಕೀಳುವ, ಅಡಿಕೆ ಸುಲಿಯುವ ಯಂತ್ರ, ಪಂಪುಗಳು.. ಹಾಳಾದರೆ ಫೋನ್ ಮಾಡಿದರೆ ಸಾಕು, ಮನೆಬಾಗಿಲಿಗೆ ಬಂದು ರಿಪೇರಿ ಮಾಡಿ ಕೊಡುವ ಸಂಚಾರಿ ಕ್ಲಿನಿಕ್ ಬೇಕಾಗಿದೆ' ಎಂದವರು ಕೃಷಿ ಪತ್ರಕರ್ತ ಪಡಾರು ರಾಮಕೃಷ್ಣ ಶಾಸ್ತ್ರಿ. ಅವರವರ ಅನುಕೂಲಕ್ಕೆ ತಕ್ಕಂತೆ ಯಂತ್ರವನ್ನು ಬಳಸುವ ಕೃಷಿಕರಿಗೆ ರೀಪೇರಿ ಸಮಸ್ಯೆ ತಲೆನೋವು. ದೂರದ ಪೇಟೆಗೆ ಒಯ್ಯುವುದರಿಂದ ಖರ್ಚು ಹೆಚ್ಚು. ಸಮಯ ಹಾಳು. ಇಂತಹ ಸಂಚಾರಿ ಕ್ಲಿನಿಕ್ ಅಗತ್ಯ.

ವಿದೇಶದಲ್ಲಿ ದ್ರಾಕ್ಷಿ, ಮಾವು, ಕಿತ್ತಳೆ ಹಣ್ಣುಗಳನ್ನು ಕೊಯ್ಯುವ ಸಲಕರಣೆಗಳಿವೆ. ಚಿಕ್ಕಪುಟ್ಟ ಸಲಕರಣೆಗಳು ನಮ್ಮಲ್ಲಿದ್ದರೂ ಅವುಗಳ ಕಾರ್ಯಕ್ಷಮತೆ ಹೆಚ್ಚಿಸಬೇಕಾಗಿದೆ. ಚಹಾದ ಚಿಗುರೆಲೆ ಕೀಳಲು, ಕಾಫಿಯ ಹಣ್ಣುಗಳನ್ನು ಕೊಯ್ಯಲು ಇರುವಂತಹ ವಿದೇಶಿ ಯಂತ್ರಗಳ ಮಾದರಿಯಲ್ಲಿ ಕಾಳುಮೆಣಸನ್ನು ಕೊಯ್ಯುವ ಸಲಕರಣೆಯನ್ನು ರೂಪಿಸುವುದು ಅಗತ್ಯ.

'ಕೃಷಿಯಲ್ಲಿ ಅಂತರ್ಸಾಗಾಟಕ್ಕೆ ಒತ್ತುಕೊಡಬೇಕಾದ ಅಗತ್ಯವಿದೆ' ಎಂದವರು ಹಿರಿಯ ಪತ್ರಕರ್ತ ಶ್ರೀ ಪಡ್ರೆ. ಫಿಲಿಪೈನ್ಸ್ನಲ್ಲಿ ದ್ವಿಚಕ್ರಗಾಡಿಗಳಿಗೆ ಪ್ರತ್ಯೇಕವಾದ ಫಿಟ್ಟಿಂಗ್ ಮಾಡಿ ಅವನ್ನು ಗಾಡಿಯಂತೆ ಬಳಸುತ್ತಾರೆ. ಅಲ್ಲಿಂದ ಪ್ರಭಾವಿತರಾದ ಶಿರಸಿಯ ಕೃಷಿಕರು ತಮ್ಮೂರಿನ ದ್ವಿಚಕ್ರ ವಾಹನವನ್ನು ಗಾಡಿಯನ್ನಾಗಿ ಪರಿವರ್ತಿಸಿದ್ದಾರೆ. ಇದಕ್ಕೆ 'ಟುಕ್ಟುಕ್' ಅಂದು ಹೆಸರು. ಇಂತಹ ಏಳೆಂಟು ಟುಕ್ಟುಕ್ಗಳು ತಯಾರಾಗಿ ಕೆಲಸ ಮಾಡುತ್ತಿದ್ದರೂ ಕೃಷಿಕರಿಂದ ಉತ್ತಮ ಸ್ವೀಕೃತಿ ಬರಲಿಲ್ಲ. ಇದರ ವಿನ್ಯಾಸದಲ್ಲಿ ಸುಧಾರಣೆಯಾಗಬೇಕು.

ಕೇರಳದಲ್ಲಿ ತೆಂಗಿನ ಮರವೇರುವ ತರಬೇತಿ ಆಕರ್ಷಕವಾಗುತ್ತಿದೆ. ಮಹಿಳೆಯರೂ ಆಸಕ್ತರಾಗುತ್ತಿದ್ದಾರೆ. ನಮ್ಮಲ್ಲೂ 'ಮ್ಯಾನ್ ಪವರ್ ಡೆವಲಪ್ಮೆಂಟ್' ಮಾಡುವ ಕುರಿತು ಯೋಚನೆ ಅಗತ್ಯ. 'ನಮ್ಮ ನಡುವೆ ಇರುವ ಅಂತರ್ಸಾಗಾಟ ವಾಹನಗಳನ್ನು ಒಂದೇ ಸೂರಿನಡಿ ತರಬೇಕಾಗಿದೆ' ಎಂದರು ಶ್ರೀ ಪಡ್ರೆ.

ಕೆಂಪಡಿಕೆಯನ್ನು ಒಣಗಿಸುವ, ಅದಕ್ಕೆ ಬಣ್ಣ ಹಾಕುವ ವಿಧಾನದಲ್ಲಿ ಏಕತಾನತೆ ಬೇಕು. 'ಅಡಿಕೆಯನ್ನು ಒಣಗಿಸಲು ಸ್ಟೀಲ್ ಹಂಡೆಯೇ ಆಗಬೇಕಾ, ತಾಮ್ರದ ಹಂಡೆ ನಡೆಯುತ್ತದಾ' ಈ ವಿಚಾರದಲ್ಲಿ ಗೊಂದಲವಿದೆ. ಅದಕ್ಕೆ ಏಕಸೂತ್ರತೆ ಬೇಕು.
ಕಾರ್ಯಾಗಾರದಲ್ಲಿ ಮರ ಏರುವ ರೊಬೋಟ್, ರಿಮೋಟ್ ಕಂಟ್ರೋಲ್ ಟಿಲ್ಲರ್, ಅಡಿಕೆ ಸುಲಿ ಉಪಕರಣ, ಶ್ರಮ ಹಗುರ ಮಾಡುವ ಕೃಷಿ ಆವಿಷ್ಕಾರ'ಗಳ ಕುರಿತು ತಜ್ಞ ಕೃಷಿಕರಿಂದ, ತಂತ್ರಜ್ಞರಿಂದ ಪವರ್ಪಾಯಿಂಟ್ ಪ್ರಸ್ತುತಿ. ಶ್ರಮ ಹಗುರ ಮಾಡುವ ಉಪಕರಣಗಳು, ಯಂತ್ರಗಳು ಕಾಲದ ಅವಶ್ಯಕತೆ.

ಕೃಷಿಯ ಬಹುಪಾಲು 'ಬೇಕು'ಗಳನ್ನು ಮುಂದಿಟ್ಟಿದ್ದೀರಿ. ಆದರೆ ಹೈನುಗಾರಿಕೆ ವಿಚಾರಗಳನ್ನು ಯಾರೂ ಟಚ್ ಮಾಡಿಲ್ಲವಲ್ಲಾ.. ಸೋಲಾರ್ ಕುರಿತು ಮಾತನಾಡಿಲ್ಲವಲ್ಲಾ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ವಿಶ್ಲೇಷಿಸುತ್ತಾ, 'ಒಂದು ದಿವಸದಲ್ಲಿ ಕೃಷಿಯ ಎಲ್ಲಾ ಸಮಸ್ಯೆಗಳನ್ನು ಬಿಡಿಸುವುದು ಕಷ್ಟಸಾಧ್ಯವಲ್ವಾ' ಎಂಬ ಸಮಾಧಾನದ ಉತ್ತರವನ್ನೂ ನೀಡಿದರು.

'ಅಡಿಕೆ ಸುಲಿ ಯಂತ್ರಗಳು ರೈತನಿಗೆ ಬೇಕಾದ ಹಾಗೆ ವಿನ್ಯಾಸವಾಗಿಲ್ಲ. ಆ ದಿಸೆಯಲ್ಲಿ ಪ್ರಯತ್ನವಾಗಬೇಕು. ಸಣ್ಣ ರೈತರಿಗೂ ಯಂತ್ರ ಸಿಗುವಂತಿರಬೇಕು' - ಕ್ಯಾಂಪ್ಕೋ ಅಧ್ಯಕ್ಷರು ಸಮಸ್ಯೆಗಳ ಪಟ್ಟಿಗೆ ಇನ್ನೊಂದನ್ನು ಸೇರಿಸಿದರು. ಮರ ಏರುವ ವ್ಯವಸ್ಥೆ, ನೆಲದಿಂದಲೇ ಸಿಂಪಡಣೆ, ಗಾಳಿಯಂತ್ರದ ಮೂಲಕ ವಿದ್ಯುತ್ನಲ್ಲಿ ಸ್ವಾವಲಂಬನೆ, ಅಡಿಕೆಯ ಪರ್ಯಾಯ ಉಪಯೋಗಗಳು, ಹಾಲು ಕರೆಯುವ ಯಂತ್ರಗಳ ಸರಳೀಕರಣ, ಕೃಷಿಯ ವಿವಿಧ ವಿಚಾರಗಳಿಗೆ ಪ್ರತ್ಯಪ್ರತ್ಯೇಕ ವಿಚಾರ ಸಂಕಿರಣಗಳ ಅಗತ್ಯವನ್ನು ಹೇಳುತ್ತಾ, 'ಮುಂದಿನ ಮಾರ್ಚ್ ತಿಂಗಳಲ್ಲಿ ನಡೆಯುವ ಎರಡನೇ ಅಡಿಕೆ ಯಂತ್ರ ಮೇಳ'ದ ಸುಳಿವಿತ್ತರು ಕ್ಯಾಂಪ್ಕೋ ಅಧ್ಯಕ್ಷರು.

ಜರುಗಿದ ಕಾರ್ಯಾಗಾರಕ್ಕೆ (15-12-2011) ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಹೆಗಲೆಣೆ. ಕಾರ್ಮಿಕರ ಅಭಾವದಿಂದಾಗಿ ಭವಿಷ್ಯದಲ್ಲಿ ಎರಗಬಹುದಾದ ಆಪತ್ತುಗಳಿಗೆ ವರ್ತಮಾನದಲ್ಲಿ ಹುಟ್ಟಿದ ಜಾಗೃತಿ ಕೃಷಿ ರಂಗಕ್ಕೊಂದು ಆಶಾದಾಯಕ ಬೆಳಕಿಂಡಿ. ಕಾರ್ಯಾಗಾರದಲ್ಲಿ ಕೃಷಿಕರಿಂದ ಪ್ರಸ್ತುತವಾದ ವಿಚಾರಗಳ ಅನುಷ್ಠಾನಕ್ಕೆ ಹೆಗಲು ನೀಡಲಿದೆ, ನಮ್ಮ 'ಕ್ಯಾಂಪ್ಕೋ'.

ಟೆನ್ಶನ್ ಫ್ರೀ ಮದುವೆ!

ಒಂದು ಕಾಲಘಟ್ಟದಲ್ಲಿ ಐವತ್ತಕ್ಕೂ ಮಿಕ್ಕಿ ಸದಸ್ಯರು ಓಡಾಡಿಕೊಂಡಿದ್ದ ಹಿರಿಮನೆಯದು. ಏನಿಲ್ಲವೆಂದರೂ ಐವತ್ತೆಕರೆ ಕೃಷಿ ಭೂಮಿ. ಅದರಲ್ಲಿ ಮೂವತ್ತರಷ್ಟು ಅಡಿಕೆ. ನಿತ್ಯ ಹತ್ತಿಪ್ಪತ್ತು ಮಂದಿ ಅತಿಥಿಗಳಿಗೆ ಅನ್ನ ದಾಸೋಹ. ಹತ್ತಿರದ ಸರಕಾರಿ ಶಾಲೆಯಲ್ಲಿ ಶಿಕ್ಷಣ. ಹಳ್ಳಿ ಬದುಕು.

ಕಾಲ ಸರಿಯಿತು. ಶಿಕ್ಷಣಕ್ಕಾಗಿ ನಗರ ಸೇರಿದವರು ಮತ್ತೆ ಹಳ್ಳಿಯತ್ತ ನೋಡಿಲ್ಲ. ಈಗ ಆ ಮನೆಯಲ್ಲಿರುವುದು ಇಬ್ಬರೇ. ಯಜಮಾನರಿಗೆ ಅರುವತ್ತು ದಾಟಿತು. ಯಜಮಾನ್ತಿಗೆ ನಲವತ್ತೋ, ಐವತ್ತೋ ಅಷ್ಟೇ. ಒಬ್ಬನೇ ಮಗ. ಮತ್ತೊಬ್ಬಳು ಮಗಳು.
ಅಳಿಯನೊಂದಿಗೆ ಮಗಳು ಮುಂಬಯಿ ಸೇರಿ ಅದೆಷ್ಟೋ ವರುಷವಾಗಿತ್ತು. ಮಗ ಬೆಂಗಳೂರಿನಲ್ಲಿ ಲಕ್ಷ ಎಣಿಸುವ ಹುದ್ದೆಯಲ್ಲಿದ್ದಾನೆ. ಅಪ್ಪನ-ಅಮ್ಮನ ಮೇಲಿನ ಭಕ್ತಿ, ಕಲಿತ ಊರೆಂಬ ಅಭಿಮಾನದಿಂದ 2-3 ತಿಂಗಳಿಗೊಮ್ಮೆ ತಂಪು ಕಾರಲ್ಲಿ ಭರ್ರನೆ ಬಂದು ಇದ್ದು ಹೋಗುವವನು.

ಮಗನಿಗೆ ವಯಸ್ಸಾಯಿತು. ಮದುವೆಯಾಗಿಲ್ಲ ಎಂಬ ಚಿಂತೆ. ಮದುವೆಯಾಗುವುದಿದ್ದರೂ ಹಳ್ಳಿ ಮನೆಯಲ್ಲಾಗಬೇಕೆಂಬ ಪಟ್ಟು. ಮಗನ ಸಮ್ಮತಿ. ಹುಡುಗಿಯ ಆಯ್ಕೆಯ ಹೊಣೆಯನ್ನು ಮಗನಿಗೆ ವಹಿಸಿಕೊಟ್ಟಿದ್ದರು. ಯೋಗ ಕೂಡಿ ಬಂತು. ಮದುವೆಯ ದಿವಸ ನಿಶ್ಚಯವಾಯಿತು.

'ಹಳ್ಳಿ ಮನೆಯಲ್ಲೇ ಮದುವೆ. ಯಾವ ಸಿದ್ದತೆಯನ್ನೂ ಮಾಡಬೇಡಿ. ನಾನೇ ಊರಿಗೆ ಬಂದು ಮಾಡುತ್ತೇನೆ' ಎಂದಿದ್ದ ಮಗ. ಮದುವೆಗಿನ್ನು ಮೂರೇ ದಿವಸ. ಏನು ಮಾಡೋಣ. ಯಜಮಾನ್ರಿಗೆ ಕೈಕೈ ಹಿಸುಕುವುದೊಂದೇ ದಾರಿ. ಸರಿ, ಮದುವೆಗೆ ಎರಡು ದಿವಸದ ಮುನ್ನ ಮದುಮಗ ಹಾಜರ್.

'ಎರಡು ದಿವಸದಲ್ಲಿ ಏನು ಮಾಡೋಣ. ಯಾವ ಕೆಲಸವೂ ಆಗಿಲ್ಲ', ಅಪ್ಪನ ಒತ್ತಡ ನೋಡಿ 'ನೀವು ಆರಾಮ ಇರಿ. ನೋಡ್ತಾ ಇರಿ, ಏನೇನು ಮಾಡ್ತೇನೆ ಅಂತ' ಅಪ್ಪನಿಗೆ ಸಮಾಧಾನ.

ನಾಳೆಯೇ ಮದುವೆ. ಮದುಮಗ ನಿರಾಳ. ಅವರಪ್ಪನಿಗೆ ಗಡಿಬಿಡಿ. ಅಮ್ಮನಿಗೆ ಅಂಜಿಕೆ. ಮಧ್ಯಾಹ್ನದ ಹೊತ್ತು. 'ಕ್ಷಿಪ್ರಮಾಂಗಲ್ಯ' ಎಂಬ ಫಲಕ ಅಂಟಿಸಿಕೊಂಡ ಲಾರಿಯೊಂದು ಮನೆ ಮುಂದೆ ನಿಂತಿತು. ಅದರಿಂದ ಶಾಮಿಯಾನ, ಚಯರ್, ಮದುವೆ ಮಂಟಪ, ಅಡುಗೆಗೆ ಬೇಕಾದ ಎಲ್ಲವೂ ಅನ್ಲೋಡ್ ಆದುವು.

ನೋಡು ನೋಡುತ್ತಿದ್ದಂತೆ ಮನೆ ಮುಂದೆ ಚಪ್ಪರ ಎದ್ದಿತು. ಅಡುಗೆ ಮನೆ ಸಿದ್ಧವಾಯಿತು. ಮದುವೆ ಮಂಟಪ ಅಲಂಕೃತವಾಗುತ್ತಾ ಇತ್ತು. ವಿದ್ಯುತ್ ಝಗಮಗ ಉರಿಯಲು ಆರಂಭವಾಯಿತು. 'ನಾಳೆ ಹನ್ನೊಂದು ಗಂಟೆಗೆ ಧಾರಾಮುಹೂರ್ತ. ಬೆಳಿಗ್ಗೆಯೇ ಬಂದುಬಿಡ್ತೇನೆ' ಎಂಬ ಅಭಯ ವಾಕ್ಯ 'ಕ್ಷಿಪ್ರ ಮಾಂಗಲ್ಯ'ದ ದನಿಯದು. 'ಸಮಯಕ್ಕೆ ಬಂದುಬಿಡಿ, ಇನ್ನೂರು ಜನರನ್ನು ಕರೆತನ್ನಿ. ಹತ್ತಿಪ್ಪತ್ತು ಮಂದಿ 'ಪಾಂಡಿತ್ಯ'ವುಳ್ಳ ಪುರೋಹಿತರೂ ಇರಲಿ. ಮಂತ್ರ ಘೋಷ ಬೇಕಲ್ವಾ.. ಫೋಟೋ, ವೀಡಿಯೋ ಎಲ್ಲಾ ನಿಮ್ಮದೆ' ಅಂತ ಮದುಮಗ ಲಿಸ್ಟ್ ನೀಡಿದ. ಮನೆಯ ಪಡಸಾಲೆಯಲ್ಲಿ ವೀಳ್ಯ ಮೆಲ್ಲುತ್ತಾ ಕ್ಷಿಪ್ರ ವ್ಯವಸ್ಥೆಯನ್ನು ವೀಕ್ಷಿಸುತ್ತಿರುವ ಯಜಮಾನರಿಗೆ ದಂಗು. ಮಗನ ಕರಾಮತ್ತು ನೋಡಿ ಮನದಲ್ಲೇ ಖುಷಿ!

ಮದುವೆ ದಿನ. ಬೆಳ್ಳಂಬೆಳಿಗ್ಗೆ 'ಕ್ಷಿಪ್ರ ಮಾಂಗಲ್ಯ'ದ ಬಸ್ ಆಗಮಿಸಿತು. ಇಪ್ಪತ್ತು ಮಂದಿ ಪುರೋಹಿತರು. ಇಪ್ಪತ್ತೈದು ಮಂದಿ ಸಾಲಂಕೃತ ಮಹಿಳೆಯರು. ಜತೆಗೆ ಗಟ್ಟಿಮೇಳದ ಗಟ್ಟಿ ಸೆಟ್. 'ಹನ್ನೊಂದು ಗಂಟೆಗೆ ಇನ್ನೂರು ಮಂದಿ ರೆಡಿ' ಎನ್ನುತ್ತಾ ಮಾಂಗಲ್ಯ ಹೊರಟು ಹೋಯಿತು.

ಮೊದಲೇ ನಿಶ್ಚಯವಾದಂತೆ ಸಮಯಕ್ಕೆ ಸರಿಯಾಗಿ 'ವಧುವಿನ ದಿಬ್ಬಣ' ಆಗಮನ. (ವರನ ದಿಬ್ಬಣ ವಧುವಿನ ಮನೆಗೆ ಹೋಗುವುದು ಸಂಪ್ರದಾಯ) ಸ್ವಾಗತ, ಉಪಾಹಾರ. ಎಲ್ಲವೂ 'ಮಾಂಗಲ್ಯ'ದ ವ್ಯವಸ್ಥೆ. ಧಾರಾಮುಹೂರ್ತವೂ ಆಯಿತು. ಮಧ್ಯಾಹ್ನ ಭರ್ಜರಿ ಭೋಜನ. ತೆರಳುವವರ ಕೈಗೆ ಒಂದೊಂದು ಸಿಹಿ ತಿಂಡಿಗಳ ಪೊಟ್ಟಣ. ಮದುಮಗನಿಗೆ ಲಕ್ಷ ಸಂಪಾದನೆಯಲ್ವಾ!

ಸಂಜೆಯಾಗುತ್ತಿದ್ದಂತೆ ಮದುಮಗನಿಗೆ ಟೆನ್ಶನ್. 'ಅಪ್ಪಾ, ನಾಳೆನೇ ಡ್ಯೂಟಿಗೆ ಸೇರಬೇಕು. ಇಂದು ರಾತ್ರಿ ಹೋಗುತ್ತಿದ್ದೇವೆ' ಎನ್ನಬೇಕೆ. ರಾಯರಿಗೆ ಆಕಾಶವೇ ಕಳಚಿದ ಅನುಭವ. ಏನು ಮಾಡೋಣ. ಮಾತನಾಡುವಂತಿಲ್ಲ. ಸಂಜೆ 'ಕ್ಷಿಪ್ರ ಮಾಂಗಲ್ಯ'ದ ಯಜಮಾನ ಬಂದು ಲೆಕ್ಕ ಚುಕ್ತಾ ಮಡುತ್ತಿದ್ದಂತೆ, ಮುನ್ನಾ ದಿನ ಹೇಗೆ ಮದುವೆ ಮನೆ ತೆರೆದುಕೊಂಡಿತ್ತೋ, ಅಷ್ಟೇ ವೇಗವಾಗಿ ಪ್ಯಾಕ್ಅಪ್ ಆಗಿ ಲಾರಿಗೆ ಲೋಡ್ ಆಗಿತ್ತು. ಸಂಜೆ ಹೊತ್ತಿಗೆ ಮಗ, ಸೊಸೆ ಮತ್ತು ಉಳಿದ ಮಂದಿ ಕಾರಲ್ಲಿ ಹೊರಟು ಹೋದ ಮೇಲೆ, ಮೇಲೆದ್ದ ಧೂಳಿನಲ್ಲಿ ಮದುಮಗನ ಅಪ್ಪ ತನ್ನ ಭವಿಷ್ಯವನ್ನು ಬರೆಯತೊಡಗಿದರು.

ಇದೊಂದು ಕಲ್ಪಿತ ಘಟನೆ. 'ಸಂಬಂಧಗಳು ಅರ್ಥಶೂನ್ಯ, ಕಾಂಚಾಣವೇ ಮುಖ್ಯ' ಎನ್ನುವ ಒಂದಷ್ಟು ಮಂದಿಗೆ ತುಂಬಾ ಸಹಕಾರಿಯಾಗಬಹುದಾದ ಯೋಜನೆ. ಆರ್ಡರ್ ಮಾಡಿದರೆ ಸಾಕು, 'ಮದುಮಗಳು-ಅಪ್ಪ-ಅಮ್ಮ' ಹೊರತುಪಡಿಸಿ, ಮಿಕ್ಕೆಲ್ಲವನ್ನೂ ಕಾಲಬುಡಕ್ಕೆ 'ತಂದೆಸೆಯುವ' ವ್ಯವಸ್ಥೆ ಭವಿಷ್ಯದ ಅನಿವಾರ್ಯತೆಯಾಗಬಹುದೋ ಏನೋ?

ಆಮಂತ್ರಣ ಪತ್ರವನ್ನು ಹಂಚುವ ಕಿರಿಕಿರಿಯಿಲ್ಲ. ಹಾಲ್ ಬುಕ್ ಮಾಡಬೇಕಾಗಿಲ್ಲ. ಸೂಪಜ್ಞರನ್ನು ಸಂಪರ್ಕಿಸಬೇಕಿಲ್ಲ. ಮೊದಲೇ ನೆಂಟರನ್ನು ದೂರಮಾಡಿದ ಬಳಿಕ ಅವರ ಬಾಧೆಯಿಲ್ಲ. 'ಹಳ್ಳಿಯಲ್ಲೇ ಸಮಾರಂಭ ನಡೆಯಬೇಕು' ಎಂಬ ಆಶೆಯೂ ಈಡೇರಿದ ಹಾಗಾಯಿತು. ಒಟ್ಟಿನಲ್ಲಿ ಟೆನ್ಶನ್ ಫ್ರೀ.. ಫ್ರೀ..!

ಹಳ್ಳಿಯಲ್ಲೇ ಅಪ್ಪಾಮ್ಮ ಇಬ್ಬರನ್ನೇ ಬಿಟ್ಟು ಹೆಂಡತಿಯೊಂದಿಗೆ ನಗರ ಸೇರಿದ ಮಗನಿಗೆ ಕ್ರಮೇಣ ಹಳ್ಳಿ ಒಂದು ಮ್ಯೂಸಿಯಂ ಆಗಿ ಕಾಣುತ್ತದೆ! ನಗರ ಬೋರ್ ಆದಾಗ ಬಂದುಳಿಯಲು ತಾಣವಷ್ಟೇ. ಯಾವುದೇ ಭಾವನೆಗಳಿಲ್ಲ. ಸಂಬಂಧಗಳ ಸೋಂಕಿಲ್ಲ. ಹಳ್ಳಿ ಮನೆಯಲ್ಲಿ ಮುದುಡುವ ಎರಡು ಜೀವಗಳು ನೆನಪಿನಿಂದ ಮರೆಯಾಗುವಷ್ಟು ಕೆಲಸದ ಧಾವಂತ!

ಒಂದು ದಿವಸವಾದರೂ ಅಪ್ಪಾಮ್ಮನನ್ನು ನಗರಕ್ಕೆ ಕರೆದುಕೊಂಡು ಹೋಗದ ಮಕ್ಕಳು ಎಷ್ಟು ಮಂದಿ ಬೇಕು? 'ಹಳ್ಳಿ ಮನೆಯನ್ನು ಮಾರಿ, ಅದರಲ್ಲಿ ಸಿಕ್ಕಿದ ಹಣ ನಂಗೆ ಕೊಡು. ಬೆಂಗಳೂರಲ್ಲಿ ಸೈಟ್ ತೆಕ್ಕೊಳ್ಳಬೇಕು' ಎನ್ನುವ ಮಗನ ಬೇಡಿಕೆ ಮುಂದೆ ಅಪ್ಪ ಕಂಗಾಲು!

ಹಳ್ಳಿಗಳಿಂದು 'ಮಾರಾಟಕ್ಕಿವೆ' ಎಂಬ ಬೋರ್ಡ್ ತಗಲಿಸಿಕೊಂಡಿವೆ. ಒಂದರ್ಥದಲ್ಲಿ ಅವೆಲ್ಲಾ ವೃದ್ಧಾಶ್ರಮಗಳಾಗಿವೆ. ಅವನ್ನು ಖರೀದಿಸಲು 'ತಾಮುಂದು ನಾಮುಂದು' ಎನ್ನುವ ಬ್ರೋಕರ್ಗಳು ಮುತ್ತುತ್ತಿರುತ್ತಾರೆ. ಕಣ್ಣೆದುರಲ್ಲೇ ಹುಟ್ಟಿದ ಮನೆ ಬುಲ್ಡೋಜರ್ಗೆ ಬಲಿಯಾದಾಗ ಮುಂದಿನ ದಾರಿ ಮಸುಕು.. ಮಸುಕು.. 'ಎಲ್ಲವನ್ನೂ ಮಾರಿ ನಗರಕ್ಕೆ ಬಾ' ಎಂದ ಮಗನ ಮೊಬೈಲ್ ಸಿಮ್ ಬದಲಾಗಿರುತ್ತದೆ!

Thursday, December 29, 2011

ಇಡ್ಲಿ ಮಾತ್ರ ಕೊಡ್ತೀರಿ ..ಸಾಂಬಾರು ಬೇಡವೇ ? - ಶ್ರೀ ಸುಭಾಶ್ ಪಾಳೇಕರ್ದಶಂಬರ ೨೭-೩೦ರ ತನಕ ಕಾಸರಗೋಡಿನಲ್ಲಿ ಶೂನ್ಯ ಬಂಡವಾಳ ತರಬೇತಿ ಶಿಬಿರ. ಶ್ರೀ ಸುಭಾಶ್ ಪಾಳೇಕ ಸಾರಥ್ಯ. ಉತ್ತರ ಭಾರತದ ಇಬ್ಬರು ಕೃಷಿಕರ ಸಾಥ್.

ಈ ಸಂದರ್ಭದಲ್ಲಿ ಪೆರ್ಲ ಸಮೀಪದ ವಿಶ್ವದ ಏಕೈಕ 'ಕಾಸರಗೋಡು ಗೋ ತಳಿ ಸಂವರ್ಧನಾ ಕೇಂದ್ರ’ವಾದ ಬಜಕೂಡ್ಲು ಅಮೃತಧಾರ ಗೋ ಶಾಲೆಗೆ ಪಾಳೇಕರ್ ಭೇಟಿ ಇತ್ತರು. ಅನಂತರ ಅಡಿಕೆ ಹಾಗೂ ಮಿಶ್ರ ಬೆಳೆಯಲ್ಲಿ ಶ್ರೀ ಸುಭಾಶ್ ಪಾಳೇಕರ್ ಪದ್ಧತಿ ಅಳವಡಿಸಿ ಯಶಸ್ಸು ಗಳಿಸಿದ ಕೃಷಿಕರಾದ ಶ್ರೀ ಸರ್ಪಮಲೆ ಜಯರಾಂ ಗೋಪಾಲರ ಕೃಷಿ ಕ್ಷೇತ್ರ ಸಂದರ್ಶನ ಮಾಡಿದರು. ಈ ಸಂದರ್ಭದಲ್ಲಿ ನಡೆದ ಕಿರು ಮಾತುಕತೆ.

* ಅಡಿಕೆ ಕೃಷಿಯಲ್ಲಿ ಹಾಗೂ ಉಪಬೆಳೆಗಳಲ್ಲಿ ನಿಮ್ಮ ಪದ್ದತಿಯನ್ನು ಹೇಗೆ ಅಳವಡಿಸಲು ಸಾಧ್ಯ ?
ಪಾಳೇಕರ್ : ''ಕೃಷಿಯಲ್ಲಿ ಉತ್ಪತ್ತಿ ನೀಡುವುದು ಮರಗಳಲ್ಲ -ಮಣ್ಣು .ಆಯಾಯ ಪ್ರದ್ವ್ಶದ ಮಣ್ಣಿನಲ್ಲಿ ಇಂಗಾಲ [carbon] ಮತ್ತು ಸಾರಜನಕದ ಪ್ರಮಾಣ ಹದಗೆಟ್ಟಾಗ ಫಸಲು ಇಳಿಮುಖ ವಾಗುತ್ತದೆ .ಕೇವಲ ಇಡ್ಲಿ ಮಾತ್ರ ನೀಡಿ ಸಾಂಬಾರು ನೀಡದಿದ್ದರೆ ಹೇಗೆ? ಮಣ್ಣಿನಲ್ಲಿ ಈ ಕೆಲಸವನ್ನು ಸೂಕ್ಷ್ಮ ಜೀವಾಣುಗಳು ಮಾಡುತ್ತವೆ .ಇಲ್ಲಿನ ಭೂ ಪ್ರಕೃತಿಯ ಏರು ಪೆರು, ಅತೀವ ಮಳೆ ಸಾರಜನಕವನ್ನು ಇರಗೊಡುದಿಲ್ಲ .ಹ್ಯುಮಾಸ್ ಅಂಶವೇ ಇಲ್ಲ .ತತ್ವಶ ಶೂನ್ಯ ಬಂಡವಾಳ ಪದ್ಧತಿ ಅಳವಡಿಸಿದರೆ ಅದ್ಭುತ ಪಲಿತಾಂಶ ಬಂದೇ ಬರುತ್ತದೆ''

* ಐದು ದಿನಗಳ ಸುಧೀರ್ಘ ತರಬೇತಿಗಿಂತ ಕಿರು ಅವದಿಯ ತರಬೇತಿ ಸಾಲದೇ ?
''ನೋಡಿ ,ಅರ್ಧಂಬರ್ದ ಜ್ಞಾನದಿಂದ ಏನನ್ನು ಸಾಧಿಸಲಾಗುವುದಿಲ್ಲ. ಇವತ್ತು ಮೆಕಾನಿಕಲ್ ಎಂಜಿನಯಾರ್ಗೆ ನಟ್ಟು-ಬೋಲ್ಟು ಕೆಟ್ಟು ಹೋದರೆ ಪುನಹ ಜೋಡಿಸಲು ತಿಳಿಯದು ..ನಮ್ಮ ಶಿಕ್ಷಣ ವ್ಯವಸ್ತೆಯಲ್ಲಿ ಎಲ್ಲ ವಿಷಯಗಳ ಬಗ್ಗೆ ಅಲ್ಪ ಜ್ಞಾನ ನೀಡುತ್ತವೆ .ಪರಿಪೂರ್ಣತೆ ಇಲ್ಲದಿದ್ದರೆ ಅಳವಡಿಸುವಾಗ ಗೊಂದಲ ಉಂಟಾಗುತ್ತದೆ '.

ಡಾ .ವೈ ವಿ .ಕೃಷ್ಣಮೂರ್ತಿ ,ಬದಿಯಡ್ಕ ಹಾಗೂ ಸುಬ್ರಮಣ್ಯ ಪ್ರಸಾದ್ ನೆಕ್ಕರೆಕಳೆಯ ಇವರು ಕ್ಕ್ಷೇತ್ರ ಸಂದರ್ಶನ ಸಂಯೋಜಿಸಿದ್ದರು .

ಸಂದರ್ಶನ / ಚಿತ್ರ : ಚಂದ್ರಶೇಖರ್ ಏತಡ್ಕ


Tuesday, December 27, 2011

'ಕೃಷಿ ವಿಜ್ಞಾನಿಗಳೆ ಕಾಲುಭಾಗ ಸಮಯ ರೈತರೊಂದಿಗೆ ಕಳೆಯಿರಿ'

'ನಮ್ಮ ರೈತರ ಹೊಲಗಳಲ್ಲಿ ಅತ್ಯಪೂರ್ವ ತಂತ್ರಜ್ಞಾನ, ತಳಿಗಳು ಅಡಗಿವೆ. ಕೃಷಿ ವಿಜ್ಞಾನಿಗಳೇ ರೈತರಿಗೆ ಆಧ್ಯತೆ ನೀಡಿ. ನಿಮ್ಮ ಕಾಲುಭಾಗ ಸಮಯವನ್ನು ಅವರೊಂದಿಗೆ, ಹೊಲಗಳಲ್ಲಿ ಕಳೆಯಿರಿ,' ಎಂದು ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಮಹಾನಿರ್ದೇಶಕರಾದ ಡಾ. ಅಯ್ಯಪ್ಪನ್ ಕರೆನಿಡಿದರು. ಪುತ್ತೂರಿನ, ಗೇರು ಸಂಶೋಧನಾ ನಿರ್ದೇಶನಾಲಯದ (Directorate of Cashew Research, Puttur) ಬೆಳ್ಳಿಹಬ್ಬದ (೨೩, ೨೪ ದಶಂಬರ ೨೦೧೧) ಸಮಾರೋಪ ಭಾಷಣ ಮಾಡುತ್ತಿದ್ದರು.

ಹರಿಯಾಣದಲ್ಲಿ ರೈತರೊಬ್ಬರ ಹೊಲದಲ್ಲಿ ಪ್ರತಿ ಎಕರೆಗೆ 12 ಕ್ವಿಂಟಲ್ ಇಳುವರಿ ಕೊಡುವ ಕೆಂಪು ಕಡಲೆಯ ದೇಸೀ ತಳಿಯೊಂದನ್ನು ಕಂಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದರಲ್ಲದೇ, 'ರೈತ ಹಕ್ಕು ಸಂರಕ್ಷಣಾ ಕಾಯ್ದೆ' ಅಂತಹ ತಳಿಗಳ ಹಕ್ಕನ್ನು ರೈತರೇ ಪಡೆದುಕೊಳ್ಳಲು ಸಹಕಾರಿಯಾಗುವುದು ಎಂದರು. ಇಂತಹ ಉನ್ನತ ತಂತ್ರಜ್ಞಾನ, ತಳಿಗಳ ಪ್ರಾಯೋಗಿಕ ಜ್ಞಾನವಿರುವ ರೈತರನ್ನು 'ಅತಿಥಿ ಪ್ರಾಧ್ಯಾಪಕ'ರೆಂದು ಪರಿಗಣಿಸಿ, ಗೌರವಿಸಿ ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನಾ ಸಂಸ್ಥೆಗಳು ಅವರ ಜ್ಞಾನವನ್ನು ಸದುಪಯೋಗಿಸಿಕೊಳ್ಳಬೇಕೆಂದು ಹೇಳಿದರು.

ಗೇರು ಉತ್ಪಾದಕತೆ ಹೆಚ್ಚಿಸಲು ಸಾಂದ್ರ ಬೇಸಾಯ ಪದ್ಧತಿ ಹಾಗೂ ಅದಕ್ಕೆ ಬಳಕೆಯಾಗಬಲ್ಲ ಕುಬ್ಜ ತಳಿಗಳ ಕುರಿತು, ಹಾಗೂ ಕಾಂಡಕೊರಕ ಹುಳಗಳ ನಿಯಂತ್ರಣಕ್ಕೆ ಭವಿಷ್ಯದ ಸಂಶೋಧನೆ ಸಹಾಯಕವಾಗಲಿ. ಗೇರು ಬೆಳೆಯನ್ನು 'ಜೀವಂತ ಬೇಲಿ'ಯಾಗಿ, ಪರಿಸರ ಸ್ನೇಹಿ ಬೆಳೆಯಾಗಿ, 'ಗಾಳಿತಡೆ' ಬೆಳೆಯಾಗಿ ಮತ್ತು ಮೌಲ್ಯವರ್ಧನೆಯಲ್ಲಿ ಸಂಸ್ಕರಣಾ ಉದ್ದಿಮೆಗಳ ಸಹಕಾರ ಪಡೆಯುವಂತಹ ವಿವಿಧ ಸಾಧ್ಯತೆಗಳ ಅಧ್ಯಯನವಾಗಬೇಕು. 2017ನೆ ಇಸವಿಯ ವೇಳೆಗೆ ದೇಶದ ಗೇರು ಉತ್ಪಾದನೆಯನ್ನು ಇಂದಿನ 6.5 ಲಕ್ಷ ಟನ್ನಿಂದ 10 ಲಕ್ಷ ಟನ್ನಿಗೇರಿಸುವ ನಿರ್ಧಿಷ್ಟ ಗುರಿಯನ್ನು ಹೊಂದೋಣ ಎಂದು ಅವರು ಹೇಳಿದರು.
ನಿರ್ದೇಶನಾಲಯದ ವರ್ತಮಾನದ ಬೆಳವಣಿಗೆಗಳ ಕುರಿತು ಅಯ್ಯಪ್ಪನ್ ಅವರು ಸಂತಸ ವ್ಯಕ್ತಪಡಿಸಿದರು. ಎರಡು ದಿನಗಳ ಕಾಲ ನಡೆದ ವಿವಿಧ ಗೋಷ್ಠಿಗಳಲ್ಲಿ ಮಂಡಿಸಿದ ಗೇರು ಅಭಿವೃದ್ಧಿ ಕುರಿತಾದ ವಿಚಾರಗಳ, ಅಲ್ಲಿ ಮೂಡಿಬಂದ ಸಲಹೆಗಳ ಸಂಕ್ಷಿಪ್ತ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಪರಿಷತ್ತಿನ ಉಪಮಹಾನಿರ್ದೇಶಕರಾದ ಡಾ ಎಚ್ ಪಿ ಸಿಂಗ್, ಗೇರು ಸಂಶೋಧನೆಯ ಸ್ಥಿಗತಿ ಹಾಗೂ ಭವಿಷ್ಯದ ಯೋಜನೆಗಳನ್ನು ವಿವರಿಸಿದರು.

(ವರದಿ : ಪ್ರಕಾಶ್ ಭಟ್ ಕರ್ಕಿ)

Monday, December 26, 2011

ಟೆನ್ಶನ್ ಫ್ರೀ ಮದುವೆ!

ಒಂದು ಕಾಲಘಟ್ಟದಲ್ಲಿ ಐವತ್ತಕ್ಕೂ ಮಿಕ್ಕಿ ಸದಸ್ಯರು ಓಡಾಡಿಕೊಂಡಿದ್ದ ಹಿರಿಮನೆಯದು. ಏನಿಲ್ಲವೆಂದರೂ ಐವತ್ತೆಕರೆ ಕೃಷಿ ಭೂಮಿ. ಅದರಲ್ಲಿ ಮೂವತ್ತರಷ್ಟು ಅಡಿಕೆ. ನಿತ್ಯ ಹತ್ತಿಪ್ಪತ್ತು ಮಂದಿ ಅತಿಥಿಗಳಿಗೆ ಅನ್ನ ದಾಸೋಹ. ಹತ್ತಿರದ ಸರಕಾರಿ ಶಾಲೆಯಲ್ಲಿ ಶಿಕ್ಷಣ. ಹಳ್ಳಿ ಬದುಕು.

ಕಾಲ ಸರಿಯಿತು. ಶಿಕ್ಷಣಕ್ಕಾಗಿ ನಗರ ಸೇರಿದವರು ಮತ್ತೆ ಹಳ್ಳಿಯತ್ತ ನೋಡಿಲ್ಲ. ಈಗ ಆ ಮನೆಯಲ್ಲಿರುವುದು ಇಬ್ಬರೇ. ಯಜಮಾನರಿಗೆ ಅರುವತ್ತು ದಾಟಿತು. ಯಜಮಾನ್ತಿಗೆ ನಲವತ್ತೋ, ಐವತ್ತೋ ಅಷ್ಟೇ. ಒಬ್ಬನೇ ಮಗ. ಮತ್ತೊಬ್ಬಳು ಮಗಳು.
ಅಳಿಯನೊಂದಿಗೆ ಮಗಳು ಮುಂಬಯಿ ಸೇರಿ ಅದೆಷ್ಟೋ ವರುಷವಾಗಿತ್ತು. ಮಗ ಬೆಂಗಳೂರಿನಲ್ಲಿ ಲಕ್ಷ ಎಣಿಸುವ ಹುದ್ದೆಯಲ್ಲಿದ್ದಾನೆ. ಅಪ್ಪನ-ಅಮ್ಮನ ಮೇಲಿನ ಭಕ್ತಿ, ಕಲಿತ ಊರೆಂಬ ಅಭಿಮಾನದಿಂದ 2-3 ತಿಂಗಳಿಗೊಮ್ಮೆ ತಂಪು ಕಾರಲ್ಲಿ ಭರ್ರನೆ ಬಂದು ಇದ್ದು ಹೋಗುವವನು.

ಮಗನಿಗೆ ವಯಸ್ಸಾಯಿತು. ಮದುವೆಯಾಗಿಲ್ಲ ಎಂಬ ಚಿಂತೆ. ಮದುವೆಯಾಗುವುದಿದ್ದರೂ ಹಳ್ಳಿ ಮನೆಯಲ್ಲಾಗಬೇಕೆಂಬ ಪಟ್ಟು. ಮಗನ ಸಮ್ಮತಿ. ಹುಡುಗಿಯ ಆಯ್ಕೆಯ ಹೊಣೆಯನ್ನು ಮಗನಿಗೆ ವಹಿಸಿಕೊಟ್ಟಿದ್ದರು. ಯೋಗ ಕೂಡಿ ಬಂತು. ಮದುವೆಯ ದಿವಸ ನಿಶ್ಚಯವಾಯಿತು.

'ಹಳ್ಳಿ ಮನೆಯಲ್ಲೇ ಮದುವೆ. ಯಾವ ಸಿದ್ದತೆಯನ್ನೂ ಮಾಡಬೇಡಿ. ನಾನೇ ಊರಿಗೆ ಬಂದು ಮಾಡುತ್ತೇನೆ' ಎಂದಿದ್ದ ಮಗ. ಮದುವೆಗಿನ್ನು ಮೂರೇ ದಿವಸ. ಏನು ಮಾಡೋಣ. ಯಜಮಾನ್ರಿಗೆ ಕೈಕೈ ಹಿಸುಕುವುದೊಂದೇ ದಾರಿ. ಸರಿ, ಮದುವೆಗೆ ಎರಡು ದಿವಸದ ಮುನ್ನ ಮದುಮಗ ಹಾಜರ್.

'ಎರಡು ದಿವಸದಲ್ಲಿ ಏನು ಮಾಡೋಣ. ಯಾವ ಕೆಲಸವೂ ಆಗಿಲ್ಲ', ಅಪ್ಪನ ಒತ್ತಡ ನೋಡಿ 'ನೀವು ಆರಾಮ ಇರಿ. ನೋಡ್ತಾ ಇರಿ, ಏನೇನು ಮಾಡ್ತೇನೆ ಅಂತ' ಅಪ್ಪನಿಗೆ ಸಮಾಧಾನ.

ನಾಳೆಯೇ ಮದುವೆ. ಮದುಮಗ ನಿರಾಳ. ಅವರಪ್ಪನಿಗೆ ಗಡಿಬಿಡಿ. ಅಮ್ಮನಿಗೆ ಅಂಜಿಕೆ. ಮಧ್ಯಾಹ್ನದ ಹೊತ್ತು. 'ಕ್ಷಿಪ್ರಮಾಂಗಲ್ಯ' ಎಂಬ ಫಲಕ ಅಂಟಿಸಿಕೊಂಡ ಲಾರಿಯೊಂದು ಮನೆ ಮುಂದೆ ನಿಂತಿತು. ಅದರಿಂದ ಶಾಮಿಯಾನ, ಚಯರ್, ಮದುವೆ ಮಂಟಪ, ಅಡುಗೆಗೆ ಬೇಕಾದ ಎಲ್ಲವೂ ಅನ್ಲೋಡ್ ಆದುವು.

ನೋಡು ನೋಡುತ್ತಿದ್ದಂತೆ ಮನೆ ಮುಂದೆ ಚಪ್ಪರ ಎದ್ದಿತು. ಅಡುಗೆ ಮನೆ ಸಿದ್ಧವಾಯಿತು. ಮದುವೆ ಮಂಟಪ ಅಲಂಕೃತವಾಗುತ್ತಾ ಇತ್ತು. ವಿದ್ಯುತ್ ಝಗಮಗ ಉರಿಯಲು ಆರಂಭವಾಯಿತು. 'ನಾಳೆ ಹನ್ನೊಂದು ಗಂಟೆಗೆ ಧಾರಾಮುಹೂರ್ತ. ಬೆಳಿಗ್ಗೆಯೇ ಬಂದುಬಿಡ್ತೇನೆ' ಎಂಬ ಅಭಯ ವಾಕ್ಯ 'ಕ್ಷಿಪ್ರಮಾಂಗಲ್ಯ'ದ ದನಿಯದು. 'ಸಮಯಕ್ಕೆ ಬಂದುಬಿಡಿ, ಇನ್ನೂರು ಜನರನ್ನು ಕರೆತನ್ನಿ. ಹತ್ತಿಪ್ಪತ್ತು ಮಂದಿ 'ಪಾಂಡಿತ್ಯ'ವುಳ್ಳ ಪುರೋಹಿತರೂ ಇರಲಿ. ಮಂತ್ರ ಘೋಷ ಬೇಕಲ್ವಾ.. ಫೋಟೋ, ವೀಡಿಯೋ ಎಲ್ಲಾ ನಿಮ್ಮದೆ' ಅಂತ ಮದುಮಗ ಲಿಸ್ಟ್ ನೀಡಿದ. ಮನೆಯ ಪಡಸಾಲೆಯಲ್ಲಿ ವೀಳ್ಯ ಮೆಲ್ಲುತ್ತಾ ಕ್ಷಿಪ್ರ ವ್ಯವಸ್ಥೆಯನ್ನು ವೀಕ್ಷಿಸುತ್ತಿರುವ ಯಜಮಾನರಿಗೆ ದಂಗು. ಮಗನ ಕರಾಮತ್ತು ನೋಡಿ ಮನದಲ್ಲೇ ಖುಷಿ!

ಮದುವೆ ದಿನ. ಬೆಳ್ಳಂಬೆಳಿಗ್ಗೆ 'ಕ್ಷಿಪ್ರ ಮಾಂಗಲ್ಯ'ದ ಬಸ್ ಆಗಮಿಸಿತು. ಇಪ್ಪತ್ತು ಮಂದಿ ಪುರೋಹಿತರು. ಇಪ್ಪತ್ತೈದು ಮಂದಿ ಸಾಲಂಕೃತ ಮಹಿಳೆಯರು. ಜತೆಗೆ ಗಟ್ಟಿಮೇಳದ ಗಟ್ಟಿ ಸೆಟ್. 'ಹನ್ನೊಂದು ಗಂಟೆಗೆ ಇನ್ನೂರು ಮಂದಿ ರೆಡಿ' ಎನ್ನುತ್ತಾ ಮಾಂಗಲ್ಯ ಹೊರಟು ಹೋಯಿತು.

ಮೊದಲೇ ನಿಶ್ಚಯವಾದಂತೆ ಸಮಯಕ್ಕೆ ಸರಿಯಾಗಿ 'ವಧುವಿನ ದಿಬ್ಬಣ' ಆಗಮನ. (ವರನ ದಿಬ್ಬಣ ವಧುವಿನ ಮನೆಗೆ ಹೋಗುವುದು ಸಂಪ್ರದಾಯ) ಸ್ವಾಗತ, ಉಪಾಹಾರ. ಎಲ್ಲವೂ 'ಮಾಂಗಲ್ಯ'ದ ವ್ಯವಸ್ಥೆ. ಧಾರಾಮುಹೂರ್ತವೂ ಆಯಿತು. ಮಧ್ಯಾಹ್ನ ಭರ್ಜರಿ ಭೋಜನ. ತೆರಳುವವರ ಕೈಗೆ ಒಂದೊಂದು ಸಿಹಿ ತಿಂಡಿಗಳ ಪೊಟ್ಟಣ. ಮದುಮಗನಿಗೆ ಲಕ್ಷ ಸಂಪಾದನೆಯಲ್ವಾ!

ಸಂಜೆಯಾಗುತ್ತಿದ್ದಂತೆ ಮದುಮಗನಿಗೆ ಟೆನ್ಶನ್. 'ಅಪ್ಪಾ, ನಾಳೆನೇ ಡ್ಯೂಟಿಗೆ ಸೇರಬೇಕು. ಇಂದು ರಾತ್ರಿ ಹೋಗುತ್ತಿದ್ದೇವೆ' ಎನ್ನಬೇಕೆ. ರಾಯರಿಗೆ ಆಕಾಶವೇ ಕಳಚಿದ ಅನುಭವ. ಏನು ಮಾಡೋಣ. ಮಾತನಾಡುವಂತಿಲ್ಲ. ಸಂಜೆ 'ಕ್ಷಿಪ್ರ ಮಾಂಗಲ್ಯ'ದ ಯಜಮಾನ ಬಂದು ಲೆಕ್ಕ ಚುಕ್ತಾ ಮಡುತ್ತಿದ್ದಂತೆ, ಮುನ್ನಾ ದಿನ ಹೇಗೆ ಮದುವೆ ಮನೆ ತೆರೆದುಕೊಂಡಿತ್ತೋ, ಅಷ್ಟೇ ವೇಗವಾಗಿ ಪ್ಯಾಕ್ಅಪ್ ಆಗಿ ಲಾರಿಗೆ ಲೋಡ್ ಆಗಿತ್ತು. ಸಂಜೆ ಹೊತ್ತಿಗೆ ಮಗ, ಸೊಸೆ ಮತ್ತು ಉಳಿದ ಮಂದಿ ಕಾರಲ್ಲಿ ಹೊರಟು ಹೋದ ಮೇಲೆ, ಮೇಲೆದ್ದ ಧೂಳಿನಲ್ಲಿ ಮದುಮಗನ ಅಪ್ಪ ತನ್ನ ಭವಿಷ್ಯವನ್ನು ಬರೆಯತೊಡಗಿದರು.

ಇದೊಂದು ಕಲ್ಪಿತ ಘಟನೆ. 'ಸಂಬಂಧಗಳು ಅರ್ಥಶೂನ್ಯ, ಕಾಂಚಾಣವೇ ಮುಖ್ಯ' ಎನ್ನುವ ಒಂದಷ್ಟು ಮಂದಿಗೆ ತುಂಬಾ ಸಹಕಾರಿಯಾಗಬಹುದಾದ ಯೋಜನೆ. ಆರ್ಡರ್ ಮಾಡಿದರೆ ಸಾಕು, 'ಮದುಮಗಳು-ಅಪ್ಪ-ಅಮ್ಮ' ಹೊರತುಪಡಿಸಿ, ಮಿಕ್ಕೆಲ್ಲವನ್ನೂ ಕಾಲಬುಡಕ್ಕೆ 'ತಂದೆಸೆಯುವ' ವ್ಯವಸ್ಥೆ ಭವಿಷ್ಯದ ಅನಿವಾರ್ಯತೆಯಾಗಬಹುದೋ ಏನೋ?

ಆಮಂತ್ರಣ ಪತ್ರವನ್ನು ಹಂಚುವ ಕಿರಿಕಿರಿಯಿಲ್ಲ. ಹಾಲ್ ಬುಕ್ ಮಾಡಬೇಕಾಗಿಲ್ಲ. ಸೂಪಜ್ಞರನ್ನು ಸಂಪರ್ಕಿಸಬೇಕಿಲ್ಲ. ಮೊದಲೇ ನೆಂಟರನ್ನು ದೂರಮಾಡಿದ ಬಳಿಕ ಅವರ ಬಾಧೆಯಿಲ್ಲ. 'ಹಳ್ಳಿಯಲ್ಲೇ ಸಮಾರಂಭ ನಡೆಯಬೇಕು' ಎಂಬ ಆಶೆಯೂ ಈಡೇರಿದ ಹಾಗಾಯಿತು. ಒಟ್ಟಿನಲ್ಲಿ ಟೆನ್ಶನ್ ಫ್ರೀ.. ಫ್ರೀ..!

ಹಳ್ಳಿಯಲ್ಲೇ ಅಪ್ಪಾಮ್ಮ ಇಬ್ಬರನ್ನೇ ಬಿಟ್ಟು ಹೆಂಡತಿಯೊಂದಿಗೆ ನಗರ ಸೇರಿದ ಮಗನಿಗೆ ಕ್ರಮೇಣ ಹಳ್ಳಿ ಒಂದು ಮ್ಯೂಸಿಯಂ ಆಗಿ ಕಾಣುತ್ತದೆ! ನಗರ ಬೋರ್ ಆದಾಗ ಬಂದುಳಿಯಲು ತಾಣವಷ್ಟೇ. ಯಾವುದೇ ಭಾವನೆಗಳಿಲ್ಲ. ಸಂಬಂಧಗಳ ಸೋಂಕಿಲ್ಲ. ಹಳ್ಳಿ ಮನೆಯಲ್ಲಿ ಮುದುಡುವ ಎರಡು ಜೀವಗಳು ನೆನಪಿನಿಂದ ಮರೆಯಾಗುವಷ್ಟು ಕೆಲಸದ ಧಾವಂತ!

ಒಂದು ದಿವಸವಾದರೂ ಅಪ್ಪಾಮ್ಮನನ್ನು ನಗರಕ್ಕೆ ಕರೆದುಕೊಂಡು ಹೋಗದ ಮಕ್ಕಳು ಎಷ್ಟು ಮಂದಿ ಬೇಕು? 'ಹಳ್ಳಿ ಮನೆಯನ್ನು ಮಾರಿ, ಅದರಲ್ಲಿ ಸಿಕ್ಕಿದ ಹಣ ನಂಗೆ ಕೊಡು. ಬೆಂಗಳೂರಲ್ಲಿ ಸೈಟ್ ತೆಕ್ಕೊಳ್ಳಬೇಕು' ಎನ್ನುವ ಮಗನ ಬೇಡಿಕೆ ಮುಂದೆ ಅಪ್ಪ ಕಂಗಾಲು!

ಹಳ್ಳಿಗಳಿಂದು 'ಮಾರಾಟಕ್ಕಿವೆ' ಎಂಬ ಬೋರ್ಡ್ ತಗಲಿಸಿಕೊಂಡಿವೆ. ಒಂದರ್ಥದಲ್ಲಿ ಅವೆಲ್ಲಾ ವೃದ್ಧಾಶ್ರಮಗಳಾಗಿವೆ. ಅವನ್ನು ಖರೀದಿಸಲು 'ತಾಮುಂದು ನಾಮುಂದು' ಎನ್ನುವ ಬ್ರೋಕರ್ಗಳು ಮುತ್ತುತ್ತಿರುತ್ತಾರೆ. ಕಣ್ಣೆದುರಲ್ಲೇ ಹುಟ್ಟಿದ ಮನೆ ಬುಲ್ಡೋಜರ್ಗೆ ಬಲಿಯಾದಾಗ ಮುಂದಿನ ದಾರಿ ಮಸುಕು.. ಮಸುಕು.. ಆಗ 'ಎಲ್ಲವನ್ನೂ ಮಾರಿ ನಗರಕ್ಕೆ ಬಾ' ಎಂದ ಮಗನ ಮೊಬೈಲ್ ಸಿಮ್ ಬದಲಿರುತ್ತದೆ!

Tuesday, December 20, 2011

'ಮಂಚೂರಿ' ಲೋಕದೊಳಗೊಂದು ಸುತ್ತು!ಜಾತ್ರೆಯೊಂದರ ಸಂತೆಯಲ್ಲಿ ತಿರುಗಾಡುತ್ತಿದ್ದೆ. ಗೋಬಿ ಮಂಚೂರಿ(ಯನ್) ಮಳಿಗೆಯಿಂದ 'ಬನ್ನಿ, ರುಚಿ ರುಚಿಯಾದ ಮಂಚೂರಿ ರೆಡಿ. ಸವಿಯಿರಿ. ಖುಷಿ ಪಡೆಯಿರಿ' ಎಂಬ ನಿಲುಗಡೆಯಿಲ್ಲದ ಘೋಷಣೆ. ಅಲ್ಲ ಬೊಬ್ಬೆ! ಹತ್ತಾರು ಪುಟಾಣಿಗಳು ಮಳಿಗೆಗೆ ಲಗ್ಗೆ ಇಟ್ಟರು. ಗೋಬಿಯನ್ನು ಆರ್ಡರ್ ಮಾಡಿದರು. ಪ್ಲೇಟ್ನಲ್ಲಿ ಹೊಗೆಯೇಳುತ್ತಿದ್ದ, ಕೆಂಪು ವರ್ಣದ 'ಗೋಬಿ' ನಿಧಾನಕ್ಕೆ ಹೊಟ್ಟೆಗಿಳಿಯುತ್ತಿದ್ದಂತೆ ಮಕ್ಕಳ ಮುಖ ಅರಳಿತ್ತು. ಒಂದಿಬ್ಬರು ಇನ್ನೊಂದು ಪ್ಲೇಟ್ಗೆ ಆರ್ಡರ್ ಮಾಡಿಯೂ ಆಗಿತ್ತು.
'ಛೆ.. ಇವರೆಲ್ಲಾ ಕಣ್ಣೆದುರೇ ವಿಷವನ್ನು ತಿನ್ನುತ್ತಿದ್ದಾರಲ್ಲಾ' ಅಂತ ಕೊರಗಿದೆ. ಫೋಟೋ ಕ್ಲಿಕ್ಲಿಸಲು ಕ್ಯಾಮೆರಾ ತೆಗೆಯುತ್ತಿದ್ದಂತೆ ಕೈ ಜಾರಿತು! ಮನಸ್ಸೂ ಕೂಡಾ. 'ಬನ್ನಿ ಸ್ವಾಮಿ, ಮಕ್ಕಳೊಂದಿಗೆ ತಿನ್ನಲು ನಿಮಗೆ ಸಂಕೋಚವಾ' ಎನ್ನಬೇಕೆ. ಅಲ್ಲಿಂದ ಕಾಲ್ಕಿತ್ತೆ.


ಜಾತ್ರೆಯಿರಲಿ, ಸಮಾರಂಭವಿರಲಿ ಗೋಬಿ ಮಂಚೂರಿಗೆ ದೊಡ್ಡ ಮಣೆ. ಹೆಸರು ಕೇಳಿದಾಗಲೇ ಜೊಲ್ಲು ಸೃಷ್ಟಿಯಾಗುತ್ತದೆ. ಪ್ಲೇಟ್, ಚಮಚ ಬಿಟ್ಟರೆ ಬಳಸುವ ಒಳಸುರಿಗಳು ಪೂರ್ತಿ 'ರಾಸಾಯನಿಕ' ಎಂದು ಮಕ್ಕಳಿಗೇನು ಗೊತ್ತು? ಯಾವುದೇ ಪಾಠ ಅವರಿಗೆ ಹೇಳಿಲ್ಲ. ಹಿರಿಯರಿಗೆ ಹೇಳಲು ಗೊತ್ತಿಲ್ಲ. ಗೊತ್ತಿದ್ದರೂ ಪುರುಸೊತ್ತಿಲ್ಲ. ಸಂದರ್ಭ ಸಿಕ್ಕರೆ ಮಕ್ಕಳೊಂದಿಗೇ ತಾವೂ ಗೋಬಿಯನ್ನು ಮೆದ್ದಾರು!


ಗೋಬಿ ಮಂಚೂರಿಗೆ ಬಳಸುವ ಮುಖ್ಯ ಕಚ್ಚಾವಸ್ತು ಕಾಲಿಫ್ಲವರ್ ಯಾ ಹೂಕೋಸು. ಬಯಲು ಸೀಮೆಯ ನೆಲಕ್ಕೆ ಸೂಕ್ತ. ಎಲೆಯೊಡೆದು ಕೊಯಿಲು ಮಾಡುವ ಹಂತದ ತನಕ ಕೀಟಬಾಧೆಗಾಗಿ ಹಲವು ಸಲ ವಿಷದ (ರಾಸಾಯನಿಕ) ಸ್ನಾನ. ಕೊಯಿದ ಬಳಿಕವೂ ವಿಷದ ನೀರಿನಲ್ಲಿ ಮಿಂದೆದ್ದು ಲಾರಿಗೆ ಲೋಡ್ ಆಗುತ್ತದೆ. ನಮ್ಮೂರಿಗೆ ಬರುತ್ತದೆ. ಅಂಗಡಿ ಸೇರುತ್ತದೆ. ಅಲ್ಲಿಂದ ಗೋಬಿ ಮಳಿಗೆಗೆ. ಬಳಿಕ ನೇರವಾಗಿ ಹೊಟ್ಟೆಗೆ. ಮಂಚೂರಿಯನ್ ಎಂಬ ಹೆಸರಿನ 'ಬಣ್ಣದ ವೇಷ'ವಾಗುವಾಗ ಇನ್ನೂ ನಾಲ್ಕೈದು 'ಬಣ್ಣದ ವಿಷಗಳು' ಸಾಥ್ ನೀಡುತ್ತವೆ. ಬಿಳಿಯ ಪ್ಲೇಟ್ನಲ್ಲಿ ಮಂಚೂರಿಯ ಮೇಲೆ ತಂತಿಕಂಬದ ಹಾಗೆ ಕಡ್ಡಿಗಳನ್ನು ಪೋಣಿಸಿ, ಟೇಬಲ್ ಮೇಲೆ ಸಪ್ಲೈಯರ್ ತಂದಿಟ್ಟಾಗ ಆನಂದ ಅಲ್ಲ, ಪರಮಾನಂದ. ಮನೆಗೊಂದಿಷ್ಟು ಕಟ್ಟಿಸಿಕೊಂಡೂ ಹೋಗುತ್ತೇವೆ.


ಹೂಕೋಸು ಕೊಯಿಲು ಆಗುವ ತನಕ ಒಂದಷ್ಟು ಸಿಂಪಡಣೆ ಕಂಡಿತಲ್ವಾ, ಆಗ ಅದರೊಳಗೆ ಸೇರಿದ್ದ ಕೀಟಗಳು ವಿಷದಿಂದಾಗಿ ಅಲ್ಲೇ ಢಮಾರ್ ಆಗಿರುತ್ತವೆ. ಅವುಗಳು ಮಂಚೂರಿ ಮೂಲಕ 'ಬೋನಸ್' ಆಗಿ ಹೊಟ್ಟೆ ಸೇರುತ್ತವೆ.


'ಛೆ.. ಜನಪ್ರಿಯವಾದ ಮಂಚೂರಿಯನ್ ಕುರಿತು ಹೀಗೆಲ್ಲಾ ಬರೆಯುವುದಾ' ಎಂದು ನೀವು ಆಶ್ಚರ್ಯಪಟ್ಟರೆ ಅದರಲ್ಲಿ ಆಶ್ಚರ್ಯವಿಲ್ಲ. ಕಾರಣ, ಇಂತಹ ಕಟು ಸತ್ಯಗಳು ಯಾವಾಗಲೂ ತೆರೆಯ ಮರೆಯಲ್ಲೇ ಇರುತ್ತದೆ. ವಾಹಿನಿಗಳಲ್ಲಿ ಸಾಕಷ್ಟು ಬಾರಿ ಪ್ರಸಾರವಾದಾಗಲೂ ವೀಕ್ಷಕರಾದ ನಮ್ಮೆಲ್ಲರದು 'ದಿವ್ಯಮೌನ'! 'ಆ ವಿಚಾರ ನಮಗಲ್ಲ, ನೆರೆಯವನಿಗೆ' ಎಂಬ ಭಾವ!
ರಾಸಾಯನಿಕ ಯಾ ವಿಷಗಳು ಬದುಕಿನೊಂದಿಗೆ ಆಟವಾಡುತ್ತಿವೆ. ಇಪ್ಪತ್ತರ ತಾರುಣ್ಯದಲ್ಲೇ ಐವತ್ತರಂತೆ ಕಾಣಿಸಿಕೊಳ್ಳುತ್ತೇವೆ. ಚಿಕೂನ್ ಗುನ್ಯಾವೋ, ಹಂದಿಜ್ವರವೋ ಕಾಣಿಸಿಕೊಂಡಾಗ ಅದನ್ನು ತಾಳಿಕೊಳ್ಳುವಂತಹ ಧಾರಣ ಶಕ್ತಿಯನ್ನೇ ಕಳೆದುಕೊಂಡಿದ್ದೇವೆ. ಆಸ್ಪತ್ರೆಗಳಲ್ಲಿ ಡ್ರಿಪ್ ಹಾಕಿಸಿಕೊಂಡು, ಸೂರು ನೋಡುತ್ತಾ ನಿರ್ಲಿಪ್ತರಾಗತ್ತೇವೆ.


ಎಂಡೋಸಲ್ಫಾನ್ ಘೋರ ವಿಷಗಳ ಪರಿಣಾಮದಿಂದ ಸಾವಿರಗಟ್ಟಲೆ ಮಂದಿ ಜೀವಚ್ಛವವಾಗಿರುವ ಸತ್ಯ ಕಣ್ಣೆದುರಿಗಿದೆ. ಸದ್ಯಕ್ಕೆ ಸರಕಾರವು 'ಎಂಡೋ ನಿಷೇಧ' ನಾಟಕ ಕಂಪನಿ ಸೃಷ್ಟಿಸಿದೆ. ಆದರೆ ಭವಿಷ್ಯದಲ್ಲಿ ಹೊಸ ಡಬ್ಬದಲ್ಲಿ ಇದೇ ವಿಷ ಪುನಃ ಭಾರತ ಪ್ರವೇಶಿಸಿದಾಗ, ರತ್ನಗಂಬಳಿ ಹಾಸಿ ಸ್ವಾಗತಿಸುತ್ತೇವೆ. ನಮ್ಮದು ಉದಾರ ಮನಸ್ಸಲ್ವಾ..!


ಉಪ್ಪಿನಂಗಡಿ ಸನಿಹದ ಪಂಜಳ 'ಸುಧಾಮ' ಮನೆಯಲ್ಲಿ 'ವಸುಧಾ ಪ್ರತಿಷ್ಠಾನ' ಏರ್ಪಡಿಸಿದ 'ಹೇಮಂತ ಹಬ್ಬ'ದಲ್ಲಿ ಮಂಚೂರಿಯನ್ 'ಸಮಾರಾಧನೆ'ಯಿತ್ತು! ಆದರೆ ಹೊಟ್ಟೆಗಲ್ಲ, ಬುದ್ಧಿಗೆ. ಐವತ್ತಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಮಂಚೂರಿಯನ್ನು ಮನಸಾ ಸವಿದರು. 'ಇಷ್ಟೊಂದು ರಾಸಾಯನಿಕ ಬಳಸುತ್ತಾರೆ ಅಂತ ಗೊತ್ತಿಲ್ಲ' ಅಂತ ವಿದ್ಯಾರ್ಥಿನಿಯೋರ್ವಳ ವಿಸ್ಮಯ.


ಹೂಕೋಸಿನ ಸಾಲಿಗೆ ಸೇಬು, ದ್ರಾಕ್ಷಿಗಳು, ಹೂಗಳು, ತರಕಾರಿಗಳು, ಬೇಳೆ ಕಾಳುಗಳು, ಎಣ್ಣೆ.. ಹೀಗೆ ಒಂದೇ ಎರಡೇ.. 'ಹಾಗಿದ್ದರೆ ಬದುಕುವುದು ಹೇಗೆ?', 'ನಾವು ಕುಡಿಯುವ ನೀರೇ ವಿಷವಾದರೆ ಮುಂದಿನ ಗತಿ', 'ಡಾಕ್ಟರ್ ದಿನಕ್ಕೊಂದು ಸೇಬು ತಿನ್ನಿ ಅನ್ತಾರಲ್ಲಾ, ಅದು ಸುಳ್ಳಾ', 'ವಿಷದಿಂದ ಪಾರಾಗುವುದು ಹೇಗೆ'.. ಮುಂತಾದ ಪ್ರಶ್ನೆಗಳು ವಿದ್ಯಾರ್ಥಿಗಳಲ್ಲಿ ಗಿರಕಿ ಹೊಡೆಯಲಾರಂಭಿಸಿತು. 'ನಮ್ಮ ಆಹಾರವನ್ನು ನಾವೇ ಬೆಳೆದುಕೊಳ್ಳುವುದು' ಈಗಿರುವ ಮುಂದಿನ ದಾರಿ. ಸಾಧ್ಯವಾ? ನಂನಮ್ಮ ವಿವೇಚನೆಗೆ ಬಿಟ್ಟ ವಿಚಾರ.


ವಸುಧಾ ಪ್ರತಿಷ್ಠಾನದ ಮುಖ್ಯಸ್ಥ, ಮನೆಯ ಯಜಮಾನರಾದ ಡಾ.ತಾಳ್ತಜೆ ವಸಂತ ಕುಮಾರ್ ಇಂತಹುದೊಂದು ಅರಿವನ್ನು ಬಿತ್ತುವ ಹೂರಣವನ್ನು ಹೇಮಂತ ಹಬ್ಬದಲ್ಲಿ ಆಯೋಜಿಸಿದ್ದು ಆರ್ಥಪೂರ್ಣ. 'ಪರಿಸರ ಹಾಳಾಯಿತು. ಇದನ್ನು ಸರಿ ಮಾಡೋದು ಹೇಗೆ. ವೇದಿಕೆಯ ಭಾಷಣದಿಂದ ಆಗದು. ಮಕ್ಕಳಲ್ಲಿ ಪರಿಸರ ನಾಶದ ಕುರಿತು ಅರಿವು ಬಿತ್ತುವುದೊಂದೇ ದಾರಿ' - ಇಡೀ ಕಾರ್ಯಕ್ರಮದ ಆಶಯವನ್ನು ಕಟ್ಟಿಕೊಟ್ಟರು ಪ್ರೊ: ವೇದವ್ಯಾಸರು.


ಪಂಜಳದ 'ಸುಧಾಮ' ಮನೆಯಂಗಳದಲ್ಲಿ ಜರುಗಿದ ಪ್ರಕೃತಿ ಪಾಠ ಒಂದು ಉತ್ತಮ ಆಂದೋಳನಕ್ಕೆ ನಾಂದಿ. ಪಠ್ಯಗಳಲ್ಲಿ ಸಿಗದ, ನಿತ್ಯ ಬದುಕಿನಲ್ಲಿ ಕಾಣಿಸಿದ, ಅಣುಅಣುವಾಗಿ ನಮ್ಮ ಜೀವವನ್ನು ಹಿಂಡುತ್ತಿರುವ 'ಕಾಣದ ಸತ್ಯಗಳನ್ನು' ವಿದ್ಯಾರ್ಥಿಗಳಿಗೆ ತಿಳಿಹೇಳುವುದು ಕಾಲದ ಆವಶ್ಯಕತೆ.


'ಜೀವಾಯನ' ಎಂಬ ಶೀರ್ಷಿಕೆಯಡಿಯಲ್ಲಿ ಜರುಗಿದ ಪರಿಸರ ಮಾತುಕತೆಯಲ್ಲಿ ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಕು: ಮಿರ್ಲಾಂ ಬೇಗಂ ಅವರು ಪಕ್ಷಿಗಳ, ಜೇನ್ನೊಣಗಳ, ಪ್ರಾಣಿಗಳ ಜೀವನ ಕ್ರಮವನ್ನು ಚಿತ್ರ ಸಮೇತ ವಿವರಿಸಿರುವುದು ಮಕ್ಕಳಲ್ಲಿ ಕುತೂಹಲ ಮೂಡಿಸಿತ್ತು.


ತಾಳ್ತಜೆಯವರ ಪತ್ನಿ ಮಣಿಮಾಲಿನಿ ಪ್ರಕೃತಿ ಪ್ರಿಯೆ. ಅವರ ಸ್ಮೃತಿಗಾಗಿ ಅವರ ಮನೆಯಂಗಳದಲ್ಲಿ ನಡೆದ ಈ ಹಬ್ಬವು ಆ ಚೇತನಕ್ಕೆ ಗೌರವ ಸಲ್ಲಿಸಿದಂತಾಗಿದೆ. ಸಂಜೆ ನೆಲ್ಯಾಡಿಯ ಅಬ್ರಹಾಂ ವರ್ಗೀಸರಿಂದ 'ಠಾಗೋರ್ ನೆನಪು', ಹಿರಿಯ ಸಾಹಿತಿ ಕೆ.ಟಿ.ಗಟ್ಟಿ ಮತ್ತು ಹಿರಿಯ ನಾಟಿ ವೈದ್ಯೆ ಪುತ್ತೂರಿನ ಮುತ್ತಮ್ಮ ಅವರಿಗೆ ಸಂಮಾನ. ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರ ಅಧ್ಯಕ್ಷತೆ. ಬಳಿಕ ಯಕ್ಷಗಾನ.

Thursday, December 15, 2011

ಅಡಿಕೆ ಕೃಷಿ ಯಾಂತ್ರೀಕರಣ - ವಿಚಾರಗೋಷ್ಠಿ

ಮಂಗಳೂರಿನ ಕೇಂದ್ರ ಅಡಿಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ ಸಂಘ ನಿ (ಕ್ಯಾಂಪ್ಕೋ) ಮತ್ತು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನವು 'ಅಡಿಕೆ ಕೃಷಿ, ಸಂಸ್ಕರಣೆಯಲ್ಲಿ ಯಂತ್ರಗಳ ಬಳಕೆ' ಹೂರಣದ ಒಂದು ದಿವಸದ ವಿಚಾರಗೋಷ್ಠಿ ಇಂದು (15-12-2011) ಕ್ಯಾಂಪ್ಕೋ ಸಭಾಭವನದಲ್ಲಿ ಜರುಗಿತು. ದಕ್ಷಿಣಕನ್ನಡ, ಕೇರಳ, ಉತ್ತರ ಕನ್ನಡದಿಂದ ನೂರಕ್ಕೂ ಮಿಕ್ಕಿ ಕೃಷಿಕರು, ಕೃಷಿ ತಂತ್ರಜ್ಞರು, ಅಡಿಕೆ ಸಂಸ್ಥೆಗಳ ಮುಖ್ಯಸ್ಥರು, ಸಂಶೋಧನಾ ಕ್ಷೇತ್ರದ ಇಂಜಿನಿಯರುಗಳು... ಭಾಗವಹಿಸಿದ್ದರು.

ಅಡಿಕೆ ಕೃಷಿಯ ಗೊಬ್ಬರ, ನೀರಾವರಿ, ಸಿಂಪಡಣೆ, ಕೊಯ್ಲು, ಸಂಸ್ಕರಣೆಯಲ್ಲಿ ಚಿಕ್ಕ ಚಿಕ್ಕ ಯಂತ್ರಗಳು, ಸಲಕರಣೆಗಳ ಆವಿಷ್ಕಾರ, ಶ್ರಮ ಹಗುರ ಮಾಡುವ ವಿಧಾನಗಳು, ಈಗಾಗಲೇ ತಯಾರಾಗಿರುವ ಅಡಿಕೆ ಸುಲಿ ಯಂತ್ರಗಳ ಕ್ಷಮತೆಗಳನ್ನು ಸೆಮಿನಾರಿನಲ್ಲಿ ಚರ್ಚೆ, ಕೃಷಿಕರು ರೂಪಿಸಿದ ಯಂತ್ರಗಳ ಅಭಿವೃದ್ಧಿ ಕುರಿತು ಚಿಂತನೆ. ಹಸಿ ಅಡಿಕೆ, ಚಾಲಿ ಅಡಿಕೆ ಸಂಸ್ಕರಣಾ ವಿಧಾನದಲ್ಲಿ ಏಕರೂಪತೆ ತರುವ ವ್ಯವಸ್ಥೆಯನ್ನು ರೂಪಿಸಲು ಕೃಷಿಕರಿಂದ ಒತ್ತಾಯ. ತೋಟದ ಕೆಲಸಗಳ ವಿಶೇಷಜ್ಞರ (ಮರವೇರಿ ಬೋರ್ಡೋ ಸಿಂಪಡಿಸುವ, ಅಡಿಕೆ ಕೊಯ್ಯುವ) 'ಜ್ಞಾನ'ವನ್ನು ಹೊಸ ತಲೆಮಾರಿಗೆ ದಾಟಿಸಲು ತರಬೇತಿಯತ್ತ ಒಲವು.

ಸುರತ್ಕಲ್ ತಾಂತ್ರಿಕ ಕಾಲೇಜು, ಸಿ.ಪಿ.ಸಿ.ಆರ್.ಐ., ಅಡಿಕೆ ಸುಲಿ ಯಂತ್ರಗಳ ತಯಾರಕರಿಂದ ಪವರ್ ಪಾಯಿಂಟ್ ಮೂಲಕ ವಿಚಾರಗಳ ಪ್ರಸ್ತುತಿ. ವಿಚಾರ ವಿಮರ್ಶೆ. 2012ರ ಮಾರ್ಚ್ ತಿಂಗಳಲ್ಲಿ ಎರಡನೇ 'ಯಂತ್ರಮೇಳ'ವನ್ನು ಪುತ್ತೂರಿನಲ್ಲಿ ಏರ್ಪಡಿಸಲು ನಿರ್ಧಾರ. ಅಡಿಕೆ ಕೃಷಿಯ ಒಂದೊಂದು ವಿಭಾಗಗಳ ಕುರಿತಾಗಿ ಪ್ರತ್ಯ ಪ್ರತ್ಯೇಕ ಗೋಷ್ಠಿಗಳು ಮತ್ತು ಕೃಷಿ ಯಂತ್ರೋಪಕರಣಗಳ ಕೈಪಿಡಿಯೊಂದರ ರಚನೆಯತ್ತ ಸೆಮಿನಾರ್ ತೀರ್ಮಾನ.

ಡಾ.ಡಿ.ಸಿ.ಚೌಟ ಮೀಯಪದವು, ಕೃಷಿಕ-ಲೇಖಕ ಪಡಾರು ರಾಮಕೃಷ್ಣ ಶಾಸ್ತ್ರಿ, ಕೆ.ಎಂ.ಹೆಗಡೆ, ಶ್ರೀ ಪಡ್ರೆ, ಮಂಚಿ ಶ್ರೀನಿವಾಸ ಆಚಾರ್, ಬಯೋಪಾಟ್ ಇದರ ಚಂದ್ರಶೇಖರ್, ಎಸ್.ಆರ್.ಹೆಗಡೆ ಶೀಗೆಹಳ್ಳಿ.. ಹೀಗೆ ಅನುಭವಿ ಕೃಷಿಕರಿಂದ ಕೃಷಿ ರಂಗದ ಈಗಿನ ಸವಾಲುಗಳು, ಅಗತ್ಯತೆಗಳು ಮತ್ತು ಯಂತ್ರದ ಕುರಿತಾದ ಸಲಹೆಗಳು.

ಕ್ಯಾಂಪ್ಕೋ ಆವಿಷ್ಕರಿಸಿದ ಅಡಿಕೆ ಸುಲಿ ಯಂತ್ರದ ಪ್ರಾತ್ಯಕ್ಷಿಕೆಯಿತ್ತು. ವಿಚಾರಗೋಷ್ಠಿಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಶ್ರೀ ಕೊಂಕೋಡಿ ಪದ್ಮನಾಭ, ಆಡಳಿತ ನಿರ್ದೇಶಕ ಎ.ಎಸ್. ಭಟ್ ಮತ್ತು ಆಡಳಿತ ಸಮಿತಿಯವರ ಸಮರ್ಥ ಸಾರಥ್ಯ.

Tuesday, December 13, 2011

ಛಾಯಾಗ್ರಾಹಕ ಯಜ್ಞರಿಗೆ 'ಜೀವಮಾನ ಸಾಧನೆ ಪ್ರಶಸ್ತಿ'


ಮಂಗಳೂರಿನ ಹಿರಿಯ ಛಾಯಾಗ್ರಾಹಕ ಯಜ್ಞೇಶ್ವರ ಆಚಾರ್ಯರಿಗೆ (ಯಜ್ಞ, ಮಂಗಳೂರು - Yajna, Mangalore ) ಛಾಯಾಚಿತ್ರ ಕ್ಷೇತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮದ ಸಾಧನೆಗಾಗಿ 'ಜೀವಮಾನ ಸಾಧನೆ ಪ್ರಶಸ್ತಿ' ಪ್ರಾಪ್ತವಾಗಿದೆ. ಬೆಂಗಳೂರಿನ ಟಿ.ಎಸ್.ಸತ್ಯನ್ ಮೆಮೋರಿಯಲ್ ಅವಾರ್ಡ್ ಫಾರ್ ಫೋಟೋಜರ್ನಲಿಸಂ ಸಂಸ್ಥೆಯು ಪ್ರಶಸ್ತಿಯನ್ನು ನೀಡುತ್ತಿದೆ.

ದಶಂಬರ 18ರಂದು ಬೆಳಿಗ್ಗೆ ಗಂಟೆ 11-15ಕ್ಕೆ ಬೆಂಗಳೂರಿನ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ಯಜ್ಞರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ಈ ಸಂತಸದ ಸಮಯದಲ್ಲಿ ಯಜ್ಞರನ್ನು ಮಾತನಾಡಿಸುವ ಅವಕಾಶ ಪ್ರಾಪ್ತವಾಯಿತು. ಬದುಕಿನ ಹಿನ್ನೋಟವನ್ನು ಅವರೇ ಕಟ್ಟಿಕೊಡುತ್ತಾರೆ : -

ಶಾಲಾದಿನಗಳಿನ್ನೂ ನೆನಪಿದೆ. ಗೀಚುವುದು ನನ್ನ ಬಾಲ್ಯ ಚಟ. ಅದಕ್ಕೆ ರೂಪಕೊಟ್ಟವರು ಮಂಗಳೂರಿನ ಗಣಪತಿ ಹೈಸ್ಕೂಲ್ನ ರಾಧಾಕೃಷ್ಣ ಮಾಸ್ತರ್. ಶಾಲಾಮೆಟ್ಟಿಲು ಇಳಿದಾಗ, 'ನಾನು ದೊಡ್ಡ ಚಿತ್ರಕಲಾವಿದನಾಗಬೇಕು' ಕನಸು ಸೌಧಕಟ್ಟಿತ್ತು.

ಕೊಡಿಯಾಲ್ಬೈಲಿನ ಬಿ.ಜಿ.ಎಂ. ಫೈನ್ ಅಟ್ಸ್ ನ ಮೆಟ್ಟಲೇರಿದೆ. ಬಿ.ಜಿ.ಮಹಮ್ಮದ್ ಮಾಸ್ಟ್ರ ಶಿಷ್ಯನಾದೆ. ನಾಲ್ಕು ವರುಷ ಲಲಿತಕಲಾ ಕಲಿಕೆ. ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ರವರ ರೇಖೆಗಳು ನನ್ನನ್ನು ಸುತ್ತಿಕೊಂಡವು. ವ್ಯಂಗ್ಯಭಾವಚಿತ್ರ ರಚನೆ. ಆ ಕಾಲಕ್ಕೆ ಕನ್ನಾಡಿಗೆ ಅದರಲ್ಲೂ ದಕ್ಷಿಣ ಕನ್ನಡಕ್ಕೆ ಹೊಸತಿದು. ಪ್ರಶಂಸೆಗಳ ಮಹಾಪೂರ. 'ಏನಿದ್ದರೂ ಆರ್.ಕೆ.ಯವರ ದಾರಿ. ಅದರಲ್ಲಿ ನನ್ನದೇನಿದೆ ಕೊಡುಗೆ?' ಒಂದು ಹಂತದಲ್ಲಿ ಬಿಟ್ಟುಬಿಟ್ಟೆ.

ಚಿತ್ರಕಲಾವಿದನಾದರೆ ಹೊಟ್ಟೆ ತುಂಬಲು ಸಾಧ್ಯವಾ? ಕಲಾವಿದನಾಗಿ ಪ್ರಚಾರ ಪಡೆದು, ಜನರು ಚಿತ್ರಗಳನ್ನು ಒಪ್ಪಿ, ನಂತರವಷ್ಟೇ ಬೇಡಿಕೆ ಬಂದೀತು. ಎಷ್ಟೋ ವರುಷಗಳ ಕಾಯುವಿಕೆ ಬೇಡುವಂತಹ ಕೆಲಸ. ತಕ್ಷಣಕ್ಕೆ ಏನು?

ಕಲಿಕೆಯಲ್ಲಿದ್ದಾಗಲೇ ಬಿ.ಜಿ.ಮಾಸ್ಟ್ರು ಕ್ಯಾಮೆರಾದ ಪ್ರಥಮಾಕ್ಷರಗಳನ್ನು ಕಲಿಸಿದ್ದರು. ಇವರ ಮುಖಾಂತರ ಖ್ಯಾತ ಛಾಯಾಚಿತ್ರಗ್ರಾಹಕ ಆರ್.ಜೆ.ಪ್ರಭು ಪರಿಚಯ. ಅವರೊಂದಿಗೆ ನಾಲ್ಕೈದು ವರುಷ ದುಡಿತ. ಇತರರಿಗೆ ಗೌರವ ನೀಡುವ ಅವರ ಕ್ರಮ ನನ್ನಲ್ಲಿ ಮೋಡಿ ಮಾಡಿ, 'ಸ್ವಾಭಿಮಾನ'ದ ಬೀಜ ಬಿತ್ತಿತ್ತು. 'ನನ್ನ ಕಾಲಲ್ಲೇ ನಿಲ್ಲಬೇಕು' ಎಂಬ ಅವ್ಯಕ್ತ ಛಲ ಹುಟ್ಟಿಸಿತು. ಹೊಟ್ಟೆಪಾಡಿಗೆ ದಾರಿ ಸಿಕ್ತು.

1973 - ಕನಸಿನ 'ಸಪ್ನ ಸ್ಟುಡಿಯೋ' ಶುರು. ಐನೂರು ರೂಪಾಯಿ ಸಾಲ ಮಾಡಿ ಕ್ಯಾಮೆರಾ ಖರೀದಿ. ದಿವಸಕ್ಕೆ ಇಪ್ಪತ್ತು ರೂಪಾಯಿ ಬಾಡಿಗೆ ನೀಡಿ ಪ್ಲಾಶ್. ಕಪ್ಪು-ಬಿಳುಪು ಫೋಟೋ. ಸ್ವತಃ ಸಂಸ್ಕರಣೆ.

'ಚಿತ್ರಕಲೆ/ಫೋಟೋಗ್ರಫಿಯಲ್ಲಿ ಎಲ್ಲರಂತೆ ಇರಬಾರದು' - ನನ್ನ ಧ್ಯೇಯ. ಏನಾದರೂ ಪ್ರಯೋಗ ಮಾಡಬೇಕು - ಕಲಿಕೆಯಲ್ಲಿದ್ದಾಗಲೇ ಮನದಲ್ಲಿ ಅಚ್ಚುಮೂಡಿತ್ತು.

ಎಲ್ಲರೂ ಪ್ಲಾಶ್ ಬಳಸಿ ಫೋಟೋ ತೆಗೆಯುತ್ತಿದ್ದರೆ, ಸಿದ್ಧಬೆಳಕಿನಲ್ಲಿ ಚಿತ್ರ ತೆಗೆಯಲು ಶುರು ಮಾಡಿದೆ. ಚಿತ್ರಶಾಲೆಯಲ್ಲಿ ಕಲಿತ ಸೂಕ್ಷ್ಮಗಳು ಕ್ಯಾಮೆರಾ ಮೂಲಕ ಪ್ರಯೋಗಕ್ಕೆ ಒಡ್ಡಿಕೊಂಡವು. ಹೆಚ್ಚು ಶ್ರಮ ಬೇಡುವ ಕೆಲಸ. ಮೂಡುವ ಚಿತ್ರಗಳೆಲ್ಲಾ ಸಹಜ, ನೈಜ.

ಫೋಸ್ ಕೊಡುವ ಫೋಟೋಗಳಲ್ಲಿ ಇಷ್ಟವಿರಲಿಲ್ಲ. ಸಿದ್ಧ ಬೆಳಕಿನಲ್ಲಿ ಚಿತ್ರದ 'ಮೂಡ್' ತೋರಿಸುವುದು ಹೇಗೆ? ಈ ಬಗ್ಗೆ ಅಧ್ಯಯನ, ಆಲೋಚನೆ.

ಆಗ 'ಉದಯವಾಣಿ' ಸಂಪರ್ಕ. 'ಪ್ರೆಸ್ ಫೋಟೋಗ್ರಾಫರ್' ಆಗಿ ನೇಮಕ. ಪತ್ರಿಕೆಯ ಯಜಮಾನರ, ಸಂಪಾದಕ ಮಂಡಳಿಯವರ ಸಹಕಾರ. ನನ್ನ ಪ್ರಯೋಗಗಳಿಗೆ ಇನ್ನಷ್ಟು ಚಾಲನೆ ಸಿಕ್ಕಿತು. 'ಯಜ್ಞ' ಹೆಸರಿನಲ್ಲಿ ದಿನಂಪ್ರತಿ ಒಂದಲ್ಲ ಒಂದು ಚಿತ್ರ ಪ್ರಕಟವಾಗುತ್ತಿತ್ತು. ವಾರಕ್ಕೊಂದು 'ಕಲಾ ಲೇಪವಿದ್ದ ಚಿತ್ರ' ಮುಖಪುಟದಲ್ಲಿ ದೊಡ್ಡದಾಗಿ ಪ್ರಕಟವಾಗುತ್ತಿತ್ತು. ಇದರಿಂದಾಗಿ ಓದುಗರಿಗೆ 'ಯಜ್ಞ' ಚಿರಪರಿಚಿತನಾದ!

ಪ್ರ್ರೆಸ್ನವ ತಾನೆ! ಜಿಲ್ಲೆಗೆ ಆಗಮಿಸುವ ಗಣ್ಯಾತಿಗಣ್ಯರನ್ನು ತೀರಾ ಹತ್ತಿರದಿಂದ ನೋಡುವ ಅವಕಾಶ ಪ್ರಾಪ್ತವಾಯಿತು. ಮೊರಾರ್ಜಿ ದೇಸಾಯಿ ಹೊರತುಪಡಿಸಿ, ದೇಶ ಕಂಡ ಪ್ರಧಾನ ಮಂತ್ರಿಗಳನ್ನೆಲ್ಲಾ ಕ್ಯಾಮೆರಾದೊಳಗೆ ತುರುಕಿಸಿದ್ದೇನೆ! ನಿತ್ಯ ಜೀವನದ ಘಟನೆಗಳನ್ನು ಸೆರೆ ಹಿಡಿಯುವುದು ನನ್ನ ಮೆಚ್ಚಿನ ಹವ್ಯಾಸ.

ಅದರಂತೆ ಸಾಹಿತಿಗಳು ಕೂಡಾ. ಕನ್ನಾಡಿನ ಸಾಹಿತಿಗಳು ಫೋಟೋ ತೆಗೆಸಲು ಹುಡುಕಿ ಬರುತ್ತಿದ್ದಾಗ ಮುಜುಗರವಾಗುತ್ತಿತ್ತು! ಡಾ.ಶಿವರಾಮ ಕಾರಂತರ ಬಹುತೇಕ 'ಮೂಡ್'ಗಳನ್ನು ಸೆರೆಹಿಡಿದಿದ್ದೆ. ಒಮ್ಮೆ ಅವರ ಫೋಟೋ ತೆಗೆಯುತ್ತಿದ್ದಾಗ, 'ಅದರಲ್ಲಿ ರೀಲು ಉಂಟಾ ಮಾರಾಯ್ರೆ' ಅಂತ ನಕ್ಕರು. ಆ ನಗೆಯ ಫೋಟೋಗೆ ಕಾರಂತರೇ ಶಹಬ್ಬಾಸ್ ಕೊಟ್ಟರು!

ಆರಂಭದ ಏರು ಉತ್ಸಾಹದಲ್ಲಿ ಕ್ಯಾಮೆರಾ ಹೆಗಲಿಗೇರಿಸಿ, ಸುದ್ದಿಯ ಬೆನ್ನೆತ್ತಿ ತಿರುಗಾಡಿದುದನ್ನು ನೆನೆಸಿಕೊಂಡರೆ 'ಝುಂ' ಆಗುತ್ತದೆ. 'ಭಿನ್ನವಾಗಿ' ಹೇಗೆ ಕ್ಲಿಕ್ಕಿಸಬಹುದೆಂಬ ತುಡಿತಕ್ಕೆ ಪ್ರತೀ ಹಂತವೂ ನನಗೊಂದು ಕಲಿಕೆ. ಅಂದು ಡಾರ್ಕ್ ರೂಂನಲ್ಲಿ ಮಾಡಬಹುದಾದ ಕಪ್ಪುಬಿಳುಪು ಸಂಸ್ಕರಣೆ ಈಗ ಕಂಪ್ಯೂಟರ್ನಲ್ಲಾಗುತ್ತಿದೆ. ತಂತ್ರಜ್ಞಾನವನ್ನು ನಮಗೆ ಬೇಕಾದಂತೆ ದುಡಿಸಿಕೊಳ್ಳುವುದು ಕಾಲದ ಅನಿವಾರ್ಯತೆ.

ಬೇರೆ ಸಮಾರಂಭಗಳಲ್ಲಿ ಚಿತ್ರ ತೆಗೆಯುವಾಗ ಒಂದು ಮಾತು ಕಿವಿಯಲ್ಲಿ ಆಗಾಗ ರಿಂಗಣಿಸುತ್ತಾ ಇರುತ್ತದೆ - 'ಸಮಾರಂಭ ನನಗಾಗಿ ನಡೆಯುವುದಲ್ಲ. ನಡೆಯುತ್ತಿರುವುದನ್ನು ತೆಗೆಯುವುದು ನನ್ನ ಕೆಲಸ'.

ಕ್ಯಾಮೆರಾ ಬದುಕನ್ನು ನೀಡಿದೆ. ಕುಟುಂಬವನ್ನು ಆಧರಿಸಿದೆ. ಹಾಡುಗಾರನಾಗಲು ಸಂಗೀತ ಹೇಗೆ ಸಾಥಿಯೋ, ಫೋಟೋಗ್ರಾಫರ್ನಾಗಲು ಚಿತ್ರಕಲೆಯ ಜ್ಞಾನ ಮುಖ್ಯ. ಅವು ಪರಸ್ಪರ ಪೂರಕ. ಜತೆಗೆ ಪ್ರಯೋಗ, ಸಂಶೋಧನೆ ಕೂಡಾ. 'ಚಿತ್ರಕಲಾವಿನಾಗಬೇಕು' ಎಂದಿದ್ದ ಕನಸು, ಕ್ಯಾಮೆರಾ ಮೂಲಕ ನನಸಾಗಿದೆ.

Sunday, December 11, 2011

ಹಸಿರು ಹಳ್ಳಿಯ ಹಸಿದ ಚಿತ್ರಗಳು


ನೀರಿನ ಹಿಂದೆ ಓಡುವ, ಮರಗಳ ಹತ್ತಿರ ಮಾತನಾಡುವ, ಕಂಡದ್ದನ್ನು ಕಾಗದಕ್ಕಿಳಿಸುವ, ನೆಲ-ಜಲದ ಬಗ್ಗೆ ನಿರಂತರ `ಕಾಲಿಗೆ ಚಕ್ರ ಕಟ್ಟಿ' ಸುತ್ತಾಡುವ ಶಿರಸಿಯ ಶಿವಾನಂದ ಕಳವೆ ಪರಿಸರ-ಅಭಿವೃದ್ಧಿ ಪತ್ರಕರ್ತ. ಹಳ್ಳಿಯ ನೆಲ-ಬದುಕುಗಳ ವಾಸ್ತವ ಚಿತ್ರವನ್ನು ನಾಲ್ಕು ಪುಟಗಳ 'ಊರ ಬಾಗಿಲು' ಎಂಬ ವಾರ್ತಾಪತ್ರದಲ್ಲಿ 'ಅರಿವಿಗಾಗಿ' ಹಿಡಿದಿಟ್ಟಿದ್ದಾರೆ. ಸ್ವಂತ ವೆಚ್ಚದಿಂದ ಮುದ್ರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯನ್ನು ಕೇಂದ್ರೀಕರಿಸಿದ ವಾರ್ತಾಪತ್ರದ ಚಿತ್ರಣವು ಕನ್ನಾಡಿನ ಎಲ್ಲಾ ಹಳ್ಳಿಗಳಲ್ಲೂ ಪ್ರತಿಫಲನ. ಅದರಿಂದ ಆಯ್ದ ಒಂದಷ್ಟು ವಿಚಾರಗಳು ಮೆದುಳಿಗೆ ಮೇವಾಗಬಹುದು. ಚಿಂತನಗ್ರಾಸವಾಗಬಹುದು.

ಉತ್ತರ ಕರ್ನಾಟಕದ ಬಹುತೇಕ ಬರಪೀಡಿತ ಊರುಗಳಲ್ಲಿ ಭೂಮಿಯ ಬೆಲೆಯಲ್ಲಿ ಏರುಗತಿ. ಬಡವನಿಗೆ ಭೂಮಿ ಖರೀದಿ ಬಿಸಿತುಪ್ಪ. ಕೃಷಿ ಭೂಮಿಯಲ್ಲಿ ಕಾಂಚಾಣದ ತಕಥೈ! ಭೂಮಿ ಖರೀದಿಸಲೆಂದು ಹಣ ಕೂಡಿಟ್ಟವರು 'ತಕಥೈ' ಮುಂದೆ ನೆಲನೋಟಕರಾಗುತ್ತಾರೆ. ಹೆಚ್ಚು ಹಣ ಎಲ್ಲಿದೆಯೋ ಅಲ್ಲಿಗೆ ಭೂರಮೆಯ ಒಲುಮೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜನಸಂಖ್ಯೆ ಏರುತ್ತಿದೆ. ಉದ್ಯಮಗಳು ಹೆಚ್ಚುತ್ತಿವೆ. ಪರಿಣಾಮ, ವಸತಿಗಾಗಿ ಬೇಡಿಕೆ. ಸೆಂಟ್ಸ್ಗೆ ಸಾವಿರಗಟ್ಟಲೆಯ ಮಾಪಕ ಈಗಿಲ್ಲ. ಎಲ್ಲವೂ ಲಕ್ಷ, ಕೋಟಿ..! ಗುಡ್ಡ ಪ್ರದೇಶಕ್ಕೂ ಲಕ್ಷ್ಮಿಯ ಭಾಗ್ಯ. ನದಿಯಂಚಿನಲ್ಲಿ ವಾಸ್ತವ್ಯವಿದ್ದವರಿಗೆ ಗೊತ್ತಿಲ್ಲದೆ ನುಗ್ಗುವ ಹೊಸ ಹೊಸ ಯೋಜನೆಗಳ ಭಯ. ಮಾರ್ಗದ ಇಕ್ಕೆಡೆಗಳ ವಸತಿಗಳಿಗೆ ಹೆದ್ದಾರಿ ಅಗಲೀಕರಣದ ಹೆದರಿಕೆ.

ಅಥಣಿ, ಜಮಖಂಡಿ, ರಾಯಚೂರು, ಗಂಗಾವತಿಯಲ್ಲಿ ಭತ್ತ, ಕಬ್ಬು ಮುಖ್ಯ ಬೆಳೆ. ನೀರಾವರಿ ನೆಲೆಯ ಇಲ್ಲಿ ದಶಕಗಳ ಹಿಂದೆಯೇ ಭೂಮಿಯ ಬೆಲೆ ಏರಿತ್ತು. ಸಿಂಧನೂರಿನಲ್ಲಿ ಒಂದೆಕರೆ ಭತ್ತದ ಗದ್ದೆಗೆ ಹತ್ತು ವರುಷದ ಹಿಂದೆ ಹನ್ನೆರಡು ಲಕ್ಷ. ಆಗದು ಅಚ್ಚರಿ. ಈಗ..? ಹನಿ ನೀರೂ ಇಲ್ಲದ ಭೂಮಿಗಳಿಗೂ ಶುಕ್ರದೆಸೆ. ಮಣ್ಣು, ನೀರು ಇಲ್ಲದಿದ್ದರೂ ಪರವಾಗಿಲ್ಲ, ಕಲ್ಲು-ಮಣ್ಣು ಮಾರಾಟದಲ್ಲಿ ಹಣ ಗಳಿಸಬಹುದಲ್ಲಾ..!

ರಸ್ತೆ, ವಿದ್ಯುತ್, ನೀರು, ಪ್ರಶಾಂತ ಪರಿಸರ ಇದ್ದಲ್ಲೆಲ್ಲಾ ಸಿಕ್ಕಷ್ಟು ಬಾಚಿಕೊಳ್ಳುವವರ ಜಾಲ ಅಜ್ಞಾತವಾಗಿದೆ. ಹೆದ್ದಾರಿ ಆಸುಪಾಸು ನೆಲಗಳಲ್ಲಂತೂ ಯಜಮಾನರ ವಿಳಾಸ ಬದಲಾಗುತ್ತಲೇ ಇವೆ. ಸುಮ್ಮನೆ ಭೂಮಿ ನೋಡುತ್ತಾ ರಾಜ್ಯ ಸುತ್ತಿದರೆ ಮಣ್ಣಿನ ಅನುಭವದ ಕೃಷಿ ಭವಿಷ್ಯ ಕಣ್ಣೀರು ಮೂಡುತ್ತದೆ. ಹಳ್ಳಿಗಳಲ್ಲಿ ಭೂಮಾಫಿಯಾಗಳ ಚಟುವಟಿಕೆಗಳು ಬೀಸುಹೆಜ್ಜೆಯಲ್ಲಿವೆ ಕೃಷಿ ಭೂಮಿಗಳು ಉಳ್ಳವರ ಕೈಸೇರಿದೆ, ಸೇರುತ್ತಿದೆ.

ಬ್ರಿಟಿಷರು ಭಾರತಕ್ಕೆ ಏಕೆ ಬಂದರು - ಎಂಬ ಪ್ರಶ್ನೆಗೆ ಪಠ್ಯದಲ್ಲಿ ಉತ್ತರ ಸಿಗುತ್ತದೆ. ಅದನ್ನು ಓದಿ, ಬಾಯಿಪಾಠ ಮಾಡಿ, ಪರೀಕ್ಷೆ ಬರೆದಿದ್ದೇವೆ. ನಮ್ಮ ಹಳ್ಳಿಗಳಿಗೆ ಯಾರ್ಯಾರೋ ಭೂಮಿ ಅರಸಿ ಬರುತ್ತಿದ್ದರೂ ಸುಮ್ಮನಿದ್ದೇವೆ. ರಾಗಿ ಹೇಗೆ ಬೆಳೆಯಬಹುದು? ಭತ್ತ ಎಷ್ಟು ಸಿಗಬಹುದು? ಒಂದು ಎಕರೆಗೆ ತೆಂಗಿನ ತೋಟದ ಉತ್ಪಾದನೆ ಎಷ್ಟು? ಯಾವ ಜೋಳದ ತಳಿ ಬಿತ್ತನೆಗೆ ಸೂಕ್ತ? ಇಂತಹ ಮಾತುಕತೆಗಳ ಮಧ್ಯೆ ಬೆಳೆದ ಹಳ್ಳಿಮಕ್ಕಳಲ್ಲಿ ನಗರವು ಉದ್ಯೋಗದ ಕನಸನ್ನು ಬಿತ್ತಿತು. ಅವರನ್ನೆಲ್ಲಾ ತೆಕ್ಕೆಗೆ ಸೇರಿಸಿಕೊಂಡಿತು. ಅದೇ ನಗರದ ಮಧ್ಯೆ ಬೆಳೆದ 'ಹಳ್ಳಿ ಮನಸ್ಸು'ಗಳು ಹಳ್ಳಿಯನ್ನೇ ಖರೀದಿಸಲು ಬರುತ್ತಿವೆ.

ಸರಿ, ಭೂಮಿ ಮಾರುವ ನಮ್ಮ ರೈತರಿಗೆ ಹಣವಾದರೂ ಹೆಚ್ಚು ಸಿಗುತ್ತದೆಯೇ? ಮೇಲ್ನೋಟಕ್ಕೆ ಲಕ್ಷ, ಕೋಟಿಗಳ ಮಾತುಕತೆಗಳು ಹುಚ್ಚುಕಟ್ಟಿಸುತ್ತಿವೆ. ಕೈಗೆ ಸಿಕ್ಕ ಕಾಂಚಾಣ ಅನುತ್ಪಾದಕ ವೆಚ್ಚಗಳಿಗೆ ಕರಗುತ್ತವೆ. ಭೂಮಿ ಮಾರುವುದಕ್ಕಿಂತ ಹೇಗೆ ಉಳಿಸಿಕೊಳ್ಳಬೇಕೆಂದು ಯೋಚಿಸಿರುವುದು ಕಡಿಮೆ. ಉದಾ: ಎರಡು ವರುಷದ ಹಿಂದೆ ಕೊಲ್ಲೂರಿನ ಮೇಗನಿಯಲ್ಲಿ ಹಣದಾಸೆಗೆ ಭೂಮಿಯನ್ನು ಮಾರಿದರು. ಈ ಹಣದಲ್ಲಿ ಬೇರೆಡೆ ಭೂಮಿ ಖರೀದಿಸುತ್ತೇವೆ ಎಂದರು. ಈವರೆಗೂ ಹೊಸ ಭೂಮಿ ಖರೀದಿಸಲು ಸಾಧ್ಯವಾಗಿಲ್ಲ. ಅವರಲ್ಲಿನ ಹಣ ಈಗ ಭೂಮಿ ಖರೀದಿಗೆ ಸಾಕಾಗುವುದಿಲ್ಲ. ದುಪ್ಪಟ್ಟು ನೀಡಲು ಶಕ್ತಿಯಿಲ್ಲ.'

ಸರಿ, ಭೂಮಿಯ ಕತೆ ಹೀಗೆ. ನಮ್ಮ ಮಕ್ಕಳ ನಗರ ದಾರಿಯ ಕತೆ ಕರಾಳ. ಕೃಷಿ ಜತೆಯಲ್ಲಿ ನಾವು ಉಪ ಉದ್ಯೋಗವನ್ನು ಹೊಂದಿಸಿಕೊಂಡಿಲ್ಲ. ಕೃಷಿಯನ್ನು ಪಕ್ಕಕ್ಕೆ ಸರಿಸಿ ಮುಂದೆ 'ಸಾಕಷ್ಟು' ಸಾಗಿದ್ದೇವೆ. 'ಕೃಷಿಯಲ್ಲಿ ಕಷ್ಟವಿದೆ, ನಮ್ಮಂತೆ ಮಕ್ಕಳು ಕಷ್ಟ ಪಡುವುದು ಬೇಡ'ವೆಂದು ಕೃಷಿಯೇತರ ರಂಗಕ್ಕೆ ನೆಗೆಯಲು ಶಿಕ್ಷಣ ನೀಡಿದ್ದೇವೆ. ಪರಿಣಾಮ, ಕಣ್ಣಮುಂದಿದೆ - ನಿತ್ಯ ಉಣ್ಣುತ್ತಿದ್ದೇವೆ! ಹಳ್ಳಿಯಲ್ಲಿ ಕೂಲಿ ಬರ. ಕೂಲಿಕಾರರು ಕೆಲಸಕ್ಕೆ ಬರುತ್ತಿಲ್ಲವೆಂದು ಬೊಬ್ಬೆ ಹೊಡೆಯುವ ನಾವು ಮನೆ ಮಕ್ಕಳನ್ನು ಮಣ್ಣಿನಲ್ಲಿ ಎಷ್ಟು ಬೆಳೆಸಿದ್ದೇವೆ?

ಕೃಷಿ ಅವನತಿ ಬಗ್ಗೆ ಮಾತನಾಡುವ ಬಹುತೇಕ ಮಂದಿ ತಮ್ಮ ಮಕ್ಕಳನ್ನು ಕೃಷಿಯಿಂದ ದೂರ ಅಟ್ಟಿದವರು. ನಮ್ಮ ನೆಲ, ಪರಿಸರ, ಬದುಕನ್ನು ಇನ್ನಷ್ಟು ಉತ್ತಮಪಡಿಸಲು ಹೇಗೆ ಸಾಧ್ಯವೆಂದು ಯೋಚಿಸದೆ ಪಲಾಯನಕ್ಕೆ ಫರ್ಮಿಟ್ ನೀಡಿದವರು. ಮೆಡಿಕಲ್, ಇಂಜಿನಿಯರಿಂಗ್, ಸಾಫ್ಟ್ವೇರ್ ಓದು ಹಳ್ಳಿಗೆ ಹೇಗೆ ನೆರವಾಗುವಂತೆ ಬಳಸಬೇಕು ಎಂಬುದಕ್ಕಿಂತ ಕಲಿತವರ ಬೇರು ಕಿತ್ತು ನಗರದಲ್ಲಿ ನೆಲೆಯೂರುವ ಅವಕಾಶವಾಗಿದೆ. ಹಣದ ವ್ಯವಹಾರದಲ್ಲಿ ಕೃಷಿ ಭೂಮಿ ಜತೆಗಿನ ಭಾವನೆ ಬದಲಾಗಿದೆ. ಕೃಷಿ ತೆಗಳುವ ಸಮೂಹ ಹೆಚ್ಚಿದೆ. ಊಟಕ್ಕೆ ಅನ್ನ ಬೇಕು ಎಂಬ ಸತ್ಯ ಮರೆತು ಹಣಕ್ಕೆ ಎಲ್ಲವನ್ನೂ ಖರೀದಿಸುವ ತಾಕತ್ತಿದೆ ಎಂಬ ತರ್ಕ ಮೆರೆದಿದೆ, ಎನ್ನುವ ಶಿವಾನಂದರ ಮಾತು ಸತ್ಯವೆಂದು ಕಾಣುವುದಿಲ್ವಾ?

'ನಮ್ಮ ಹಳ್ಳಿಗಳು ಏನಾಗುತ್ತಿವೆ?' ಎಂಬ ವಾರ್ತಾಪತ್ರದ ಪುಟ ವಾಸ್ತವ ಚಿತ್ರದತ್ತ ಬೆಳಕು ಹಾಕುತ್ತದೆ. ಬದುಕು ಬದಲಾವಣೆಗಳನ್ನು ಒಗ್ಗಿಸಿಕೊಳ್ಳುತ್ತಾ ಹೋಗಿದೆ. ಹೀಗಾಗಿ ಎಲ್ಲವೂ ಇರುವ ಹಳ್ಳಿಯಲ್ಲಿ ಈಗ ಏನೂ ಇಲ್ಲದಂತಾಗಿದೆ. ಯುದ್ಧಕ್ಕಿಂತ ಮೊದಲೇ ಸೋತವರಂತೆ ಜನ ಮಾತನಾಡುತ್ತಾರೆ. ಮನೆಗೆ ಆಗಮಿಸಿದ ಅತಿಥಿಗಳ ಜತೆಗೆ ಕೃಷಿಗಿಂತ ವ್ಯವಹಾರದ ಮಾತುಕತೆ ಜಾಸ್ತಿಯಾಗಿದೆ. ಕರೆಂಟ್ ಇದ್ದಾಗ ಚಾನೆಲ್. ಇಲ್ಲದಿದ್ದರೆ ಆಲ್ಬಂ. ಸೀರಿಯಲ್ ಬಗ್ಗೆ ಚರ್ಚೆ. ಕೇಬಲ್ನವರು ನಗರಕ್ಕೆ ಮೂವತ್ತು ಚಾನೆಲ್ ನೀಡಿದರೆ, ಹಳ್ಳಿಗೆ ನೂರಕ್ಕೂ ಮಿಕ್ಕಿ ಒದಗಿಸುತ್ತಾರೆ... ಕುಳಿತು ನೋಡುವ ಕಾಲಹರಣದಲ್ಲಿ ಸಮಯದ ಬೆಲೆ ಮರೆತಿದೆ. ಬ್ಯಾಂಕಿನವರು ಕೃಷಿ ಸಾಲಕ್ಕಿಂತ ಸುಲಭವಾಗಿ ವಾಹನ ಖರೀದಿಗೆ ಸಾಲ ನೀಡುತ್ತಾರೆ!

ಹಳ್ಳಿ ಉಳಿಸಲು ಏನು ಮಾಡಬಹುದು? - ಇದು ಕಾಲದ ಪ್ರಶ್ನೆ. ಒಂದಷ್ಟು ವಿಚಾರಗಳನ್ನು ಪಟ್ಟಿ ಮಾಡಿದ್ದಾರೆ : 'ಹಳ್ಳಿಯ ಬದುಕು ಅತ್ಯುತ್ತಮ, ಪೇಟೆಯದು ಕೆಟ್ಟದ್ದು' ಎಂಬ ಫೋಕಸ್ಗೆ ಕಡಿವಾಣ. ಪೇಟೆಯ ಸೌಲಭ್ಯಗಳೊಂದಿಗೆ ಹೋಲಿಕೆ ಸಲ್ಲ. ಪೇಟೆಯಲ್ಲಿ ದೊರೆಯದ ಒಳ್ಳೆಯ ಗಾಳಿ, ಪ್ರಶಾಂತ ವಾತಾವರಣ ಸೇರಿದಂತೆ ಅನೇಕ ಸಂಗತಿಗಳು ಹಳ್ಳಿಗಳಲ್ಲಿವೆ ಎಂಬುದನ್ನು ತೋರಿಸಬೇಕು. ಹಳ್ಳಿ ಶಾಲೆಗಳಲ್ಲಿ ಓದಿ ಸಾಧನೆ ಮಾಡಿದವರ ಕುರಿತು ಯಶೋಗಾಥೆಗಳ ಪ್ರಸ್ತುತಿ.

ನಮ್ಮ ಶಾಲೆ, ಕಾಲೇಜುಗಳಿಗೆ ಮಕ್ಕಳನ್ನು ನಗರಕ್ಕೆ ಪ್ಯಾಕ್ ಮಾಡುವ ಕೆಲಸ! ಇಲ್ಲಿ ಶಿಕ್ಷಕರ, ಮಕ್ಕಳ ಮನಸ್ಥಿತಿ ಬದಲಿಸುವ ಶಿಕ್ಷಣ ಬೇಕು. ಹಳ್ಳಿ ಕೇಂದ್ರಿತ ಬದುಕಿನ ಬಗೆಗೆ ಸಿನೆಮಾ, ನಾಟಕ, ಲೇಖನ, ಪುಸ್ತಕ, ಸಾಕ್ಷ್ಯಚಿತ್ರಗಳು ಬರಬೇಕು. ಕೃಷಿ ವೇದಿಕೆಗಳು ಹಳ್ಳಿ ಉಳಿಸುವ ಅಭಿಯಾನ ನಡೆಸಬೇಕು. ರಂಗಿನ ಬದುಕಿಗೆ ಓಡುವವರನ್ನು ಹಿಡಿದು ನಿಲ್ಲಿಸಿ ಸರಳತೆಯ ಪಾಠ ಹೇಳುವ ಯತ್ನ. ಎಲ್ಲಕ್ಕಿಂತ ಮುಖ್ಯವಾಗಿ 'ನಮ್ಮ ಹಳ್ಳಿಗಳೂ ಎಲ್ಲಿಗೆ ಹೊರಟಿವೆ' ಎಂದು ಗಮನಿಸುವ ಅಗತ್ಯವಿದೆ.

ಹೀಗೆ 'ಊರಬಾಗಿಲು' ವಾರ್ತಾಪತ್ರದಲ್ಲಿ ಗ್ರಾಮೀಣ ಬದುಕಿನ ಪ್ರಸ್ತುತ ಸ್ಥಿತಿಗಳನ್ನು ಸಂಪಾದಕ ಶಿವಾನಂದ ಕಳವೆ ತೆರೆದಿಟ್ಟಿದ್ದಾರೆ. 'ಹಳ್ಳಿಯ ಸಮಸ್ಯೆಗಳು ಅಲ್ಲಿದ್ದವರಿಗೆ ಮಾತ್ರ ಅರ್ಥವಾದೀತು. ಅದರ ದಾಖಲಾತಿಯೂ ಅವರಿಂದಲೇ ನಡೆಯಬೇಕು. ಲಕ್ಷಗಟ್ಟಲೆ ಹಣದಲ್ಲಿ ಸ್ಮರಣ ಸಂಚಿಕೆಗಳನ್ನು ಅಚ್ಚು ಹಾಕುತ್ತೇವೆ. ಅದರ ಚಿಕ್ಕ ಒಂದು ಪಾಲು ಇಂತಹ ಕೆಲಸಕ್ಕೆ ಸಾಕು. ಮನಸ್ಸು ಮಾಡಿದರೆ ಕಷ್ಟವಲ್ಲ' ಎಂಬ ಆಪ್ತ ಕಿವಿಮಾತು. ಇದು ಕಳವೆಯವರ ಸಂಪಾದಕತ್ವದ ನಾಲ್ಕನೇ ವಾರ್ತಾಪತ್ರ. ಅವರ 'ಅಡವಿ ಅಡುಗೆ, ಮಿಡಿಮಾವು' ವಾರ್ತಾಪತ್ರಗಳು ಕಾಲದ ದಾಖಲೆ.

(ಶಿವಾನಂದ ಕಳವೆ : ೯೪೪೮೦೨೩೭೧೫)

Tuesday, December 6, 2011

ಗಡ್ಡೆ ತರಕಾರಿಗಳ ಮರೆವುಅಳಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ. ಪುಸ್ತಕದ ಮಳಿಗೆಗಳು ಭರ್ತಿ. ಎರಡೂ ದಿನಗಳಲ್ಲಿ ಪುಸ್ತಕ ಪ್ರಿಯರಿಗೆ ಸುಗ್ಗಿ. ಅತ್ತ ಸಭಾವೇದಿಕೆಯಲ್ಲಿ ಕನ್ನಡ ಮಂತ್ರ.

ಮತ್ತೊಂದೆಡೆ ವಸ್ತುಪ್ರದರ್ಶನದಲ್ಲಿ ಔಷಧೀಯ ಸಸ್ಯಗಳು, ಪಾರಂಪರಿಕ ವಸ್ತುಗಳು. ಪತ್ರಿಕೆಗಳ ಪ್ರದರ್ಶನ. ಈ ಮಧ್ಯೆ ಅಡುಗೆಗಳಲ್ಲಿ ಬಳಸುವ ಹದಿನೈದಕ್ಕೂ ಮಿಕ್ಕಿ ವಿವಿಧ ಗಡ್ಡೆಗಳನ್ನು ಪ್ಲೇಟ್ನಲ್ಲಿಟ್ಟಿದ್ದರು. ಪ್ರತಿಯೊಂದರಲ್ಲೂ ಅವುಗಳ ನಾಮ ಬರಹ.
ಸಮ್ಮೇಳನಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಗಡ್ಡೆಗಳು ಆಕರ್ಶಿಸಿದ್ದುವು. ಅದರಲ್ಲೂ ಹೆಣ್ಮಕ್ಕಳು 'ಇದು ನಮ್ಮಲ್ಲಿದೆ, ಇದು ಚಿಕ್ಕಪ್ಪನಲ್ಲಿವೆ', 'ಓ. ಇದನ್ನು ನೋಡಿಯೇ ಇಲ್ಲ' - ಎಂಬ ಸಂಭಾಷಣೆ. ಪರಸ್ಪರ ಮಾತುಕತೆ ಮೂಲಕ ಗುರುತು ಹಿಡಿವ ಪ್ರಯತ್ನ.

ಒಂದು ಕಾಲಘಟ್ಟದ ಬದುಕಿನಲ್ಲಿ ಊಟದ ಬಟ್ಟಲಿನಲ್ಲಿ ಗಡ್ಡೆಗಳು ಬಳಸದ ಪಾಕವಿಲ್ಲ. ಈಗಿನ ಟೊಮೆಟೋ ಯುಗದಲ್ಲಿ ಆಲೂಗಡ್ಡೆ ಹೊರತು ಪಡಿಸಿದರೆ ಮಿಕ್ಕೆಲ್ಲಾ ಗಡ್ಡೆಗಳು ಅಜ್ಞಾತ. ಹೊಟೇಲುಗಳಲ್ಲಿ ಆಲೂಗೆಡ್ಡೆ ಖಾದ್ಯಗಳ ಸಾಲು ಸಾಲು ಮೆನುಗಳು ಈಗಲೂ ಜೀವಂತವಿರುವುದರಂದ ಆಲೂ ಗಡ್ಡೆ ಜನರ ಬಾಯಲ್ಲಿ ನಿತ್ಯ ಓಡುತ್ತಿದೆಯಷ್ಟೇ.

ಅಳಿಕೆಯಲ್ಲಿ ಪ್ರದರ್ಶಿಸಲ್ಪಟ್ಟ ಗಡ್ಡೆಗಳು: ಬಿಳಿ ಕೆಸು - ಇದರ ಬಳಕೆ ಅಡುಗೆ ಮನೆಯಲ್ಲಿ ಸಾಂಪ್ರದಾಯಿಕ. ಎಲೆ, ದಂಟು, ಗಡ್ಡೆ - ಹೀಗೆ ಸರ್ವಸ್ವ ಬಳಕೆ. ಚಳ್ಳಿಚೇವು - ಇದರ ದಂಟನ್ನು ಹಸಿಯಾಗಿ ಸಲಾಡ್ನಂತೆ ಬಳಕೆ. ಹೀಗೆ ಪ್ರತೀ ಗಡ್ಡೆಗೆ ಒಂದೊಂದು ಮೆನು.

ನರೆಗೆಡ್ಡೆ, ಬೇರು ಕೆಸು, ಕಾಡುಕೇನೆ, ಬಾರಿಗೆಣಸು, (ದೊಡ್ಡದು) ಸುವರ್ಣಗೆಡ್ಡೆ, ಸಿಹಿಗೆಣಸು, ಕೆಂಪುಕೂವೆ, ತುಪ್ಪೆಗೆಣಸು, ತಗ್ಗೆಣಸು, ಸೂಣಕೆರೆಂಗ್, ಮರಗೆಣಸು, ಕೆಸುವಿನಗೆಡ್ಡೆ, ಸಾಂಬ್ರಾಣಿ ಗೆಡ್ಡೆ.. ಪ್ರದರ್ಶನಕ್ಕೆ ಬಾರದವು ಇನ್ನೆಷ್ಟೋ. ಇವುಗಳಲ್ಲಿ ಕೆಲವು ಹೆಸರುಗಳು ಪ್ರಾದೇಶಿಕವಾಗಿ ಭಿನ್ನವಾಗಿರುವ ಸಾಧ್ಯತೆ ಹೆಚ್ಚು.

ಕೆಸುವಿನಲ್ಲೇ ಎಷ್ಟೊಂದು ವಿಧ. ಮುಂಡಿಕೆಸು, ಬಿಳಿಕೆಸು, ಕಪ್ಪುಕೆಸು, ನೇರಳೆಬಣ್ಣದ ಕೆಸು, ಕಾಡುಕೆಸು, ಮರಕೆಸು.. ಕರಾವಳಿಯಲ್ಲಿ ಹೊಸಕ್ಕಿ ಊಟಕ್ಕೆ ಕರಿ-ನೇರಳೆ ಕೆಸುವಿನ ದಂಟಿನ ಪದಾರ್ಥ ಬೇಕೇ ಬೇಕು. ಮರದ ಮೇಲೆ ಬೆಳೆಯುವುದು ಮರ ಕೆಸು. ಇದರ ಎಲೆಗಳಿಗೆ ಬಹು ಬೇಡಿಕೆ. ಪತ್ರೊಡೆ ಋತುವಿನಲ್ಲಿ ಮಾರುಕಟ್ಟೆಯಲ್ಲಿ ಒಂದು ಎಲೆಗೆ ಮೂರರಿಂದ ಐದು ರೂಪಾಯಿ.

ಸುವರ್ಣಗೆಡ್ಡೆಗೆ ಆಂಗ್ಲ ಭಾಷೆಯಲ್ಲಿ ಎಲಿಫೆಂಟ್ ಫೂಟ್. ಗಡ್ಡೆ ಉರುಟು. ಹೊರಸಿಪ್ಪೆ ಕಂದುಬಣ್ಣ. ಕೆಂಪು-ಕಿತ್ತಳೆ ವರ್ಣದ ತಿರುಳು. ಕೈಂತಜೆ ವಿಷ್ಣು ಭಟ್ಟರು ತಮ್ಮ 'ಕೃಷಿ ಲೋಕ ಪ್ರವೇಶ ಪುಸ್ತಕ'ದಲ್ಲಿ ಸುವರ್ಣಗಡ್ಡೆಯ ಬಗ್ಗೆ ಉಲ್ಲೇಖಿಸುತ್ತಾರೆ. 'ಸುವರ್ಣಗಡ್ಡೆಯಲ್ಲಿ ಬಿಳಿ-ಅರಸಿನ ತಿರುಳಿನದ್ದಿದೆ. ಇದು ಉತ್ತಮ. ಹೆಚ್ಚು ರುಚಿ. ಬೇಗ ಬೇಯುತ್ತದೆ.'

ಸಿಹಿಗೆಣಸು - ಅಂದಾಗ ಬಾಲ್ಯದಲ್ಲಿ ಶಾಲೆಬಿಟ್ಟು ಮನೆಗೆ ಬಂದಾಗ ಅಮ್ಮ ಸಿಹಿಗೆಣಸನ್ನು ಬೇಯಿಸಿ ತಿನ್ನಲು ಕೊಡುತ್ತಿದ್ದ ದಿನಗಳು ನೆನಪಾಗುತ್ತವೆ. ಅಡುಗೆಗೆ ಎಲ್ಲರೂ ಇಷ್ಟ ಪಡುವ ಗಡ್ಡೆ. ಸಲಾಡ್ನಂತೆ ಕುರುಕುರು ತಿನ್ನಲು ರುಚಿ. ಗಡ್ಡೆಗಳನ್ನು ಕೆಂಡದಲ್ಲಿ ಸುಟ್ಟು ತಿನ್ನುತ್ತಿದ್ದಂತೆ 'ಮತ್ತೂಮತ್ತೂ' ತಿನ್ನಿಸುವ ಸ್ವಾದ-ರುಚಿ ಅದಕ್ಕಿದೆ. ಅಕ್ಕಿಗೆ ತತ್ವಾರವಿದ್ದಾಗ ಹಲಸು ಅಣ್ಣನಾಗಿ ಹೇಗೆ ಬದುಕನ್ನು ಆಧರಿಸಿತ್ತೋ, ತಮ್ಮನಾಗಿ ಗೆಣಸು ಹೊಟ್ಟೆಗಿಳಿದು ಹಸಿವನ್ನು ಅಡಗಿಸುತ್ತಿತ್ತು.

ಮರಗೆಣಸಿಗೆ 'ಕಪ್ಪ' ಎಂಬ ಹೆಸರಿದೆ. ಈಚೆಗೆ ಅಪರೂಪವಾಗುತ್ತಿರುವ ಗಡ್ಡೆ ತರಕಾರಿ. ಇದನ್ನು ಬೇಯಿಸಿ ಅಡುಗೆಯಲ್ಲಿ ಬಳಕೆ. ಕಹಿ ರುಚಿ. ಜಾನುವಾರುಗಳ ಮೇವಿಗೆ ಒಳಸುರಿ. ಮಲೆನಾಡಿನ ಇಳಿಜಾರು ಪ್ರದೇಶದ ಮೇಲ್ಮಣ್ಣು ಮರಗೆಣಸು ಕೃಷಿಗೆ ಉತ್ತಮ. ಯಾವುದೇ ಆರೈಕೆ ಬೇಡುವುದಿಲ್ಲ.

ಗಡ್ಡೆಗಳೆಲ್ಲಾ ಬಹುತೇಕ ಚಳಿ ಸಮಯದ ತರಕಾರಿ. ನವೆಂಬರ್ ನಿಂದ ಜನವರಿ ತನಕ. ಆಲೂ, ಸುವರ್ಣಗಡ್ಡೆ ಬಿಟ್ಟರೆ ಮಿಕ್ಕ ಗಡ್ಡೆಗಳು ಮಾರುಕಟ್ಟೆಯಲ್ಲಿ ಅಪರೂಪ. ಕೆಲವೊಂದು ಮರೆತೇ ಹೋಗಿದೆ. ಉಪಯೋಗವೂ ಕಡಿಮೆ. ಮಳೆಗಾಲ ಕಳೆದು ಬೇಸಿಗೆ ತರಕಾರಿ ಆರಂಭವಾಗುವ ಮೊದಲು ಗಡ್ಡೆ ತರಕಾರಿಗಳ ಬಳಕೆ ಕುರಿತು ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ.

ಮರೆತುಹೋಗುತ್ತಿರುವ ಗೆಡ್ಡೆ ತರಕಾರಿಗಳನ್ನು ಹುಡುಕಿ, ಸಂಗ್ರಹಿಸಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದವರು ಕೃಷಿಕ ಎಂ.ವೆಂಕಟಕೃಷ್ಣ ಶರ್ಮ. ಇದರ ಜತೆಗೆ ಕುಕ್ಕುಶುಂಠಿ, ಕಲ್ಲುಶುಂಠಿ, ಸಿಂಗಾಪುರ ಅಡಿಕೆ, ಕೊಕ್ಕೊ, ಜಾಯಿಕಾಯಿ, ಲವಂಗ, ಕಾನಕಲ್ಲಟೆ, ಕಸ್ತೂರಿಬೆಂಡೆ, ಇಪ್ಪಿಲಿ, ಬೀಂಬುಳಿ, ಖಾರಮೆಣಸು, ಗೊಂಚಲುಹೀರೆ, ಸಿಹಿಬದನೆ, ಬಹುವಾರ್ಶಿಕ ಬದನೆ, ನಿತ್ಯ ಬದನೆ, ಗೊಂಚಲುಬದನೆ..ಗಳ ಸಂಗ್ರಹ.

ಮಕ್ಕಳೊಂದಿಗೆ ಹಿರಿಯರೂ ಪ್ರದರ್ಶನಕ್ಕೆ ಬಂದಿದ್ದರು. 'ಗೊಂಚಲು ಬದನೆಯ ಬೀಜ ಸಿಗುತ್ತಾ?', 'ತುಪ್ಪೆಗೆಣಸಿನ ಗಡ್ಡೆಯೊಂದು ಬೇಕಿತ್ತು?', ಕಸ್ತೂರಿ ಬೆಂಡೆಯ ಬಳಕೆ ಹೇಗೆ?'.. ಹೀಗೆ ವಿವಿಧ ಪ್ರಶ್ನೆಗಳು ರಾಚಿರುವುದು, ಪ್ರದರ್ಶನ ಪರಿಣಾಮಕಾರಿ ಎಂಬುದರ ದ್ಯೋತಕ.

Thursday, December 1, 2011

ಅಡವಿ ಕಲಿಸಿದ ಬದುಕಿನ ಜ್ಞಾನ

ಉತ್ತರ ಕನ್ನಡ ಜಿಲ್ಲೆಯ ಶಿರಸ್ಗಾಂವ್ ಅರಣ್ಯದಂಚಿನ ಊರು. ಕಾಡನ್ನೆ ನಂಬಿದ ಸಿದ್ದಿ ಕುಟುಂಬಗಳು. ಆಧುನಿಕ ವಿದ್ಯಮಾನಗಳು ಗೊತ್ತಿದ್ದೂ, ನಿರ್ಲಿಪ್ತರಾಗಿ ಬದುಕುವ ಸಿದ್ದಿಗಳ ಜೀವನ ಅಪ್ಪಟ ದೇಸಿ.

ಶಿರಸಿಯ ಎಂ.ಆರ್.ಹೆಗಡೆ, 'ಪ್ರಕೃತಿ' ಸಂಸ್ಥೆಯಡಿ ಸಿದ್ದಿಗಳ ಬದುಕನ್ನು ಓದಿದವರು. ಸಿಕ್ಕಾಗಲೆಲ್ಲಾ ಕಾಡಿನ ಸಹವಾಸಗಳನ್ನು ರೋಚಕವಾಗಿ ಹೇಳುತ್ತಿದ್ದರು. 'ಮರದ ಪೊಟರೆಯೊಳಗಿಂದ ಜೇನು ಸಂಸಾರವನ್ನು ತೆಗೆಯುವ ವಿಧಾನ ನೋಡಬೇಕಿತ್ತಲ್ವಾ,' ಎಂದಿದ್ದೆ.

ಮಧ್ಯಾಹ್ನದ ಹೊತ್ತು. ಹೆಗಡೆಯವರ ದ್ವಿಚಕ್ರದಲ್ಲಿ ಶಿರಸ್ಗಾಂವ್ ಪ್ರಯಣ. ನಗರ ಬಿಟ್ಟು, ಗ್ರಾಮ ಹಿಂದಿಕ್ಕಿ, ಹಳ್ಳಿ ಸೇರಿದಾಗ 'ಜೇನು ಕುತೂಹಲ' ತಣಿದಿತ್ತು! ಆಗಷ್ಟೇ ಊಟ ಮುಗಿಸಿ, ನಿದ್ದೆಗೆ ಜಾರುತ್ತಿದ್ದ ವೆಂಕಟ್ರಮಣ ಸಿದ್ದಿಯ ಮನೆಯ ಕದ ತಟ್ಟಿದಾಗ, ಆಕಳಿಸುತ್ತಾ ಬಾಗಿಲು ತೆರೆದರು.

ಹೆಗಡೆಯವರಿಂದ ಪರಿಚಯ. 'ಕರಾವಳಿಯಿಂದ ಬಂದಿದ್ದಾರೆ. ಆಗಷ್ಟೇ ತೆಗೆದ ಜೇನನ್ನು ತಿನ್ನಬೇಕಂತೆ. ನೀವು ಹೇಗೆ ತೆಗೀತೀರಿ ಎಂಬುದನ್ನೂ ನೋಡಬೇಕಂತೆ' ಎಂಬ ಬೇಡಿಕೆಯ ಪಟ್ಟಿ ಮುಂದಿಟ್ಟಾಗ, 'ಈಗೆಲ್ಲಿ, ಸೀಸನ್ ಮುಗಿದೋಯಿತು' ಎಂಬ ಉತ್ತರದಲ್ಲಿ ಜಾಗ ಖಾಲಿ ಮಾಡಬೇಕೆಂಬ ಸೂಚನೆಯಿತ್ತು.

ಹೆಗಡೆಯವರ ಒತ್ತಾಯದ ಮೇರೆಗೆ ವೆಂಕಟ್ರಮಣ ಹಸಿರು ನಿಶಾನೆ. ಮಗ ಪ್ರಕಾಶ ಹೆಜ್ಜೆ ಹಾಕಿದ. ಎಳೇ ವಯಸ್ಸಿನಲ್ಲೇ ಕಾಡನ್ನು ಪಿಎಚ್ಡಿಗಿಂತಲೂ ಹೆಚ್ಚು ಓದಿದ್ದ, ಅಭ್ಯಾಸ ಮಾಡಿದ್ದ. ಎರಡು ತಾಸು ನಡೆದಿರಬಹುದು. ನಡೆದಷ್ಟೂ ಕಾಡು ಆವರಿಸಿಕೊಳ್ಳುತ್ತಿತ್ತು.
'ಜೇನು ಹುಳ ಹಾರುವ ಸದ್ದು ಕೇಳುತ್ತೆ,' ಪ್ರಕಾಶನ ಅವ್ಯಕ್ತ ವಾಣಿ. ವೆಂಕಟ್ರಮಣ ಒಂದು ಕ್ಷಣ ಸುಮ್ಮನಿದ್ದು, ಧ್ಯಾನಸ್ಥನಾಗಿ ಮೇಲೆ ದಿಟ್ಟಿಸಿ, 'ಹೌದು ಕಣೋ' ಮಗನಿಗೆ ಸ್ಪಂದಿಸಿದರು. ಏನೆಂದು ಅರ್ಥವಾಗಲಿಲ್ಲ. ದಟ್ಟ ಕಾಡಿನ ಮಧ್ಯೆ ತರಗಲೆ ಸದ್ದು, ಗಾಳಿ ಬೀಸುವ ದನಿ, ಅದರ ಮಧ್ಯೆ 'ಒಂದು ಜೇನು ನೋಣ' ಹಾರುವ ಸದ್ದು ವೆಂಕಟ್ರಮಣನಿಗೆ ಕೇಳಿಸಿತು! ಪುರಾಣ ಕಾಲದ 'ಶಬ್ದವೇಧಿ' ಸಿದ್ಧಿಸಿರಬೇಕು. ತೊಂಭತ್ತು ಡಿಗ್ರಿಗೆ ಹತ್ತಿರವಿದ್ದ ಗುಡ್ಡದ ಮೇಲೆ ಪ್ರಕಾಶ ನಿಂತಿದ್ದ. ಆತ ಹೇಗೆ ಏರಿರಬಹುದು. ರಾಮಾಯಣ ನೆನಪಾಯಿತು.

ಹೊಟ್ಟೆ ಖಾಲಿಯಾಗಿತ್ತು. ಬಾಟಲ್ ನೀರು ತಳ ಸೇರಿತ್ತು. ಸರಿ, ಗುಡ್ಡ ಏರಲು ಶುರು. ದಾರಿ ಮಾಡಿಕೊಂಡು, ಬಳ್ಳಿಗಳ ಎಡೆಯಲ್ಲಿ ಹರಿದಾಡಿ, ತರಗೆಲೆಗಳ ಮೇಲೆ ಕಾಲಿಟ್ಟು ಜಾರಿ - ಬಿದ್ದು, ಪುನಃ ಎದ್ದು ಏರಿದ್ದೇ ಏರಿದ್ದು! ಅತ ಐದು ನಿಮಿಷದಲ್ಲಿ ಏರಿದ ಗುಡ್ಡವನ್ನು ನನಗೆ, ಹೆಗಡೆಯವರಿಗೆ ಏರಲು ಬರೋಬ್ಬರಿ ಮೂವತ್ತು ನಿಮಿಷ! ನಮ್ಮೊಂದಿಗಿದ್ದ ವೆಂಕಟ್ರಮಣ ಆಗಲೇ ತುದಿ ಮುಟ್ಟಿದ್ದ.

ಗುಡ್ಡದ ತುದಿ ತಲುಪಿದಾಗ ಸ್ವರ್ಗದಲ್ಲಿದ್ದ ನನ್ನ ಹಿರಿಯರೆಲ್ಲಾ ಕೈಬೀಸಿ ಕರೆಯುತ್ತಿದ್ದರು! ಮಂಪರು ಸ್ಥಿತಿ. ಬಾಯಿ ಒಣಗಿ ಮಾತು ಮುಷ್ಕರ ಹೂಡಿತ್ತು. 'ದೊಡ್ಡ ಸಂಸಾರವಿದೆ. ಬನ್ನಿ. ಅಂತೂ ಸಿಕ್ಕಿತಲ್ವಾ..' ಮೊದಲಾದ ಮಾತುಗಳು ಕೇಳುತ್ತಿತ್ತೇ ವಿನಾ, ದೃಶ್ಯ ಗೋಚರಿಸುತ್ತಿರಲಿಲ್ಲ. ನನ್ನ ಅವಸ್ಥೆಯನ್ನು ನೋಡಿ ಹೆಗಡೆಯವರು 'ಸ್ವಲ್ಪ ನೀರಾದರೂ ಕೊಡೋಣ' ಎಂದರು.

ಅಷ್ಟರಲ್ಲಿ ವೆಂಕಟ್ರಮಣ ತಡೆದು, 'ಇಷ್ಟು ಸುಸ್ತಾಗಿದ್ದಾಗ ನೀರು ಕೊಟ್ಟರೆ ಅವರನ್ನು ಪುನಃ ಊರಿಗೆ ಕಳುಹಿಸಲು ಕಷ್ಟ. ನಮಗೂ ಅಪವಾದ. ಬಾಯಿಗೆ ಜೇನು ಹಾಕಿ' ಎನ್ನುತ್ತಿದ್ದಾಗ ಪ್ರಕಾಶ ಆಗಷ್ಟೇ ಪೊಟರೆಯೊಳಗಿಂದ ತೆಗೆದ ಜೇನಿನ ಎರಿಯಲ್ಲಿದ್ದ ಜೇನನ್ನು ಬಾಯಿಗೆ ಹಿಂಡಿದ. ಸುಸ್ತು ಜರ್ರನೆ ಇಳಿದ ಅನುಭವ.

ಆಶ್ಚರ್ಯವಾಯಿತು. ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದಾಗ ಯಾವುದು ಕೊಡಬೇಕು, ಯಾವುದು ಕೊಡಬಾರದು ಎಂಬ ಜ್ಞಾನವನ್ನು ಹೇಗೆ ಕಲಿತರು? ಯಾವುದೇ ಪದವಿ ಪಡೆದಿಲ್ಲ. ಅಬ್ಬಬ್ಬಾ ಅಂದರೆ ಮೂರೋ, ನಾಲ್ಕೋ ಓದಿರಬಹುದಷ್ಟೇ. ಅದು ಅಡವಿ ಕಲಿಸಿದ ಜ್ಞಾನ. ಬದುಕಿನ ಜ್ಞಾನ. ಪಾರಂಪರಿಕ ಜ್ಞಾನ.

ಗುಡ್ಡದ ತುದಿಯಲ್ಲಿದ್ದೇವೆ. ಮರದ ಪೊಟರೆಯೊಳಗೆ ವೆಂಕಟ್ರಮಣ ತನ್ನ ಇಡೀ ಕೈಯನ್ನು ವೆಂಕಟ್ರಮಣ ತೂರಿದ್ದಾನೆ. ಕೈಯಲ್ಲಿ ಚಿಕ್ಕ ಚೂರಿಯಿದೆ. ಒಂದೊಂದೇ ಎರಿಯನ್ನು ತೆಗೆಯುತ್ತಿದ್ದಾನೆ. ಜೇನು ನೊಣಗಳು ರೋಷಗೊಂಡು ಮುತ್ತುತ್ತಿವೆ, ಆದರೆ ಕಚ್ಚುತ್ತಿಲ್ಲ. 'ಅವು ಯಾಕೆ ಕಚ್ಚುತ್ತವೆ. ಏನೂ ಮಾಡೊಲ್ಲ. ಅವಕ್ಕೂ ಮಾತು ಬರ್ತಾವೆ ಸಾರ್,' ಎಂದ. ಜೇನು ನೊಣಗಳೊಂದಿಗೆ ಎಂತಹ ನಿಕಟ ಸಂಬಂಧ!

ತೆಗೆದಷ್ಟೂ ಹೊರ ಬರುವ ಜೇನು ತುಂಬಿದ ಎರಿಗಳು. ಎಲ್ಲವನ್ನೂ ಅಡಿಕೆ ಮರದ ಹಾಳೆಯಲ್ಲಿ ಗಂಟು ಕಟ್ಟಿದ. ಒಂದೊಂದು ಎರಿಯನ್ನು ನಮ್ಮ ಕೈಗೆ ಹಾಕಿದ. ತಾನೂ ತಿಂದ. ಅಲ್ಲ, ತಿನ್ನುತ್ತಲೇ ಇದ್ದ. ನಾವು ಎರಿಯನ್ನು ಎಲೆಯಲ್ಲಿ ಹಿಂಡಿ, ಬಾಯಿಗೆ ಎರೆದುಕೊಳ್ಳುತ್ತಿದ್ದಾಗ ವೆಂಕಟ್ರಮಣ ಗೇಲಿ ಮಾಡಿದ. ಹಾಗಲ್ಲರೀ ಜೇನುತುಪ್ಪ ತಿನ್ನೋದು - ಎನ್ನುತ್ತಾ ಕಚಕಚನೆ ಎರಿಯನ್ನು ಅಗಿದು, ತ್ಯಾಜ್ಯವನ್ನು ಉಗಿದಾಗ ಮುಖ ನೋಡಬೇಕಿತ್ತು!

'ಜೇನು ತಿನ್ನುವುದೆಂದರೆ ಅನ್ನ ತಿಂದಂತೆ ಅಲ್ಲ, ತಿನ್ನುತ್ತಾ ಇದ್ದಾಗ ಅದು ಬಾಯಲ್ಲಿ ಇಳಿದು, ಹೊಟ್ಟೆಯ ಮೇಲೆ ಇಳಿಯಬೇಕು. ಒಂದು ರೀತಿಯಲ್ಲಿ ಬಾಯಿ ಕೆಸರಾಗಬೇಕು'! ಹೀಗೆ ತಿಂದಾಗಲೇ ಜೇನಿನ ನಿಜವಾದ ಸವಿ, ಸ್ವಾದ.

ಇದನ್ನು ಕೇಳುವಾಗ ವೆಂಕಟ್ರಮಣ ಅಸಂಸ್ಕೃತ ಎಂಬ ನಿರ್ಧಾರಕ್ಕೆ ಬಂದರೆ ನಾವೇ ಅಜ್ಞಾನಿಗಳು. ಯಾವ ವಸ್ತುವನ್ನು ಹೇಗೆ ಅನುಭವಿಸಿ ತಿನ್ನಬೇಕು ಎಂಬ ಅರಿವು ಅವರಲ್ಲಿದೆ. ನಾವು ಒಂದು ದಿನವಾದರೂ ಆಹಾರವನ್ನು ಅನುಭವಿಸಿ ತಿನ್ನುತ್ತೇವೆಯೇ? ಟಿವಿ ನೋಡುತ್ತಾ, ಮೊಬೈಲಲ್ಲಿ ಮಾತನಾಡುತ್ತಾ ಆಹಾರವನ್ನು ಮುಕ್ಕುತ್ತೇವೆ ಹೊಟ್ಟೆಗೆ ತಳ್ಳುತ್ತೇವೆ. ನಮ್ಮ ಪಾಲಿಗೆ ಹೊಟ್ಟೆಯೆಂಬುದು ತ್ಯಾಜ್ಯ ತುಂಬುವ ಚೀಲ.

ಇರಲಿ, ಅಂದು ವೆಂಕಟ್ರಮಣರಿಗೆ ಎಂಟು ಕಿಲೋದಷ್ಟು ಜೇನು ಸಿಕ್ಕಿರಬಹುದು. ಹೊರಡುವಾಗ ತೋರಿದ ಉದಾಸೀನವು ಬರುವಾಗ ಮಾಯವಾಗಿತ್ತು. ಆತನ ಮನೆ ಸೇರಿದಾಗ ಕತ್ತಲಾಗಿತ್ತು. ಮನೆಯಲ್ಲೂ ಜೇನಿನ ಸಮಾರಾಧನೆ. 'ಹೇಂಗಿದೆ, ನಮ್ಮ ಕಾಡು' ಎಂದು ಛೇಡಿಸಿ, ನನ್ನ ಅವಸ್ಥೆಯನ್ನು ಮನೆಯಲ್ಲಿ ಹೇಳುತ್ತಾ ನಕ್ಕಿದ್ದೇ ನಕ್ಕಿದ್ದು.

ಇದು ಸಿದ್ದಿಗಳ ಬದುಕಿನಲ್ಲಿ ಕಾಡಿನ ಜ್ಞಾನ ಹೊಸೆದ ಒಂದು ಎಳೆ. 'ಅಪರೂಪಕ್ಕೆ ಪೇಟೆಗೆ ಬರ್ತೇವೆ. ಅಲ್ಲಿ ಉಸಿರುಗಟ್ಟುತ್ತೆ. ಹೆಚ್ಚು ಹೊತ್ತು ನಿಲ್ಲೊಲ್ಲ. ಕೂಡಲೇ ಬಂದುಬಿಡ್ತೀವಿ', ವೆಂಕಟ್ರಮಣ ಅಂದಾಗ, ನಗರದ ಬದುಕಿನ ಜಂಜಾಟದ ಸೆಳೆಯೊಂದು ಮಿಂಚಿ ಮರೆಯಾಯಿತು.

ಹಣೆಯಲ್ಲಿ ಬೆವರಿಳಿಸದೆ ಗುಡ್ಡವನ್ನು ಹತ್ತುತ್ತಾರೆ, ಹೊಳೆಯನ್ನು ನಿರಾಯಾಸವಾಗಿ ಈಜುತ್ತಾರೆ, ಸರಸರನೆ ಮರವನ್ನು ಏರುತ್ತಾರೆ. ಕಾಡುತ್ಪತ್ತಿಗಾಗಿ ಮೂರ್ನಾಲ್ಕು ದಿವಸ ಮನೆ ಬಿಟ್ಟು ಕಾಡಿನಲ್ಲೇ ಐಕ್ಯವಾಗುತ್ತಾರೆ. ಪ್ರಕೃತಿಯೇ ಬಯಲು. ಕಾಡೇ ಜೀವನ. ಅದರಲ್ಲಿ ಸಂತೋಷವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಶುದ್ಧವಾದ ಆಹಾರವಿದೆ, ಆರೋಗ್ಯವಿದೆ. ಸುಖವಾಗಿ ಬದುಕುವ ಜಾಣ್ಮೆ ಗೊತ್ತಿದೆ.

ಪ್ರಕೃತಿ ಸಂಸ್ಥೆಯು ಶಿರಸ್ಗಾಂವ್ನಲ್ಲಿ ಬೇಸಿಗೆಯಲ್ಲಿ ಮಕ್ಕಳ ಶಿಬಿರವನ್ನು ಏರ್ಪಡಿಸುತ್ತಿದೆ. ಅದಕ್ಕೆ ನಗರದಿಂದ ಟೈ ಕಟ್ಟಿದ ಸಂಪನ್ಮೂಲ ವ್ಯಕ್ತಿಗಳು ಬರುವುದಿಲ್ಲ. ವೆಂಕಟ್ರಮಣ ಸಿದ್ದಿ, ಪ್ರಕಾಶನಂತಹ ಹಳ್ಳಿ ಮಂದಿ ಸಂಪನ್ಮೂಲ ವ್ಯಕ್ತಿಗಳು. ಅಲ್ಲಿನ ಆಹಾರ, ಕಲೆ, ಬದುಕಿನ ಸಮೀಪ ದರ್ಶನ. ಪೇಟೆ ಮಂದಿಯ ಹಳ್ಳಿ ವಾಸ.

ಇಲ್ಲಿ ನಡೆವ ಶಿಬಿರದಲ್ಲಿ ಮಸಿ ಚಿತ್ರಗಳಿಲ್ಲ, ಮುಖವಾಡಗಳ ರಚನೆಗಳಿಲ್ಲ. ಈಜುವುದು, ಮರಗಳನ್ನು ಗುರುತು ಹಿಡಿಯುವುದು, ಸಸ್ಯಗಳ ಔಷಧೀಯ ಗುಣಗಳ ಕಲಿಕೆ, ಚಾರಣ.. ಮೊದಲಾದ ಅಪ್ಪಟ ಹಳ್ಳಿ ವಿಚಾರಗಳ ಕಲಿಕೆ.

ನಗರದ ಮಧ್ಯೆ ನಿಂತು ಹಳ್ಳಿಯನ್ನು ಓದುತ್ತೇವೆ. ಹಳ್ಳಿಗರ ಜ್ಞಾನವನ್ನು ವೈಜ್ಞಾನಿಕ ಕಣ್ಣಿನಲ್ಲಿ ನೋಡಿ ಗೇಲಿ ಮಾಡುತ್ತೇವೆ. ಆದರೆ ಶುದ್ಧ ಆಹಾರಕ್ಕಾಗಿ ಹಳ್ಳಿಯತ್ತ ಮುಖ ಮಾಡುತ್ತೇವೆ. ಹಳ್ಳಿಯನ್ನು, ಹಳ್ಳಿಜ್ಞಾನವನ್ನು ಮರೆತ 'ಅಭಿವೃದ್ಧಿ'ಯ ಹಿಂದೆ ಇರುವ ಕೋಟಿಗಳ ಲೆಕ್ಕಗಳು ಗ್ರಾಮೀಣ ಭಾರತವನ್ನು ಅಣಕಿಸುತ್ತದೆ.

Monday, November 21, 2011

ಕನ್ನಡ ಮನಸ್ಸುಗಳ ತಡಕಾಟ!ಕಳೆದ ಶನಿವಾರ ಸಂಪನ್ನಗೊಂಡ ಅಳಿಕೆಯ (ದ.ಕ.) ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ. ಪ್ರತಿನಿಧಿ ಬ್ಯಾಜ್ ಹಾಕಿದ ಓರ್ವ 'ಕನ್ನಡ ಪುತ್ರ' ತನ್ನ ನಾಲ್ಕನೇ ತರಗತಿಯ ಚಿರಂಜೀವಿಯೊಂದಿಗೆ ಬಂದರು. ಪುಸ್ತಕ ಆಯಲು ಅವರನ್ನು ಮೊಬೈಲ್ ಬಿಡುತ್ತಿಲ್ಲ! ಮಗು ನಾಲ್ಕೈದು ಕನ್ನಡ ಪುಸ್ತಕಗಳನ್ನು ಆಯ್ದು, 'ಅಪ್ಪಾ, ಇಂಗ್ಲಿಷ್ ಕಥೆ ಪುಸ್ತಕ ಮನೆಯಲ್ಲಿ ಉಂಟು. ಕನ್ನಡ ಪುಸ್ತಕ ಇಲ್ಲ. ನನಗಿದು ಬೇಕು' ಎಂಬ ಬೇಡಿಕೆಯನ್ನು ಮುಂದಿಟ್ಟ.


'ಛೆ.. ಇಂಗ್ಲಿಷ್ ಪುಸ್ತಕವನ್ನೇ ಓದಬೇಕೆಂದು ಮಿಸ್ ಹೇಳಿಲ್ವಾ. ಕನ್ನಡ ಪುಸ್ತಕ ಬೇಡ. ಇಂಗ್ಲಿಷ್ನದ್ದು ತೆಕ್ಕೋ' ಎನ್ನುತ್ತಾ, ಮಗನ ಕೈಯಲ್ಲಿದ್ದ ಪುಸ್ತಕವನ್ನು ಸೆಳೆದು-ಕುಕ್ಕಿ, ಪುನಃ ಮೊಬೈಲ್ನ ದಾಸರಾದರು. ಮಗುವಿನ ಮೋರೆ ಸಣ್ಣದಾಯಿತು. ಕುಕ್ಕಿದ ಪುಸ್ತಕವನ್ನು ಪುನಃ ಆಯ್ದು ಅಪ್ಪನ ಮೋರೆ ನೋಡಿದ. ಪಾಪ, ಈ ಅಪ್ಪನಿಗೆ ಮಗನ ಮುಖಭಾವವನ್ನು ಓದಲು, ಅದಕ್ಕೆ ಸ್ಪಂದಿಸಲು ಪುರುಸೊತ್ತು ಎಲ್ಲಿದೆ? ಪುರುಸೊತ್ತು ಇದ್ದರೂ ಮುಖವನ್ನು ಓದಲಾಗದ ಅನಕ್ಷರಸ್ಥ.


'ನಿನಗೆ ಹೇಳಿದ್ರೆ ಅರ್ಥವಾಗುವುದಿಲ್ವಾ' ಎಂದು ಪುಸ್ತಕವನ್ನು ಎಳೆದು ಪುಸ್ತಕವನ್ನು ಮೇಜಿನ ಮೇಲೆ ಬಿಸಾಡಿ, ಮಗನನ್ನು ಎಳೆದುಕೊಂಡು ಹೋಗಬೇಕೇ?' ಅವರ ಅಂಗಿಗೆ ತೂಗಿಸಿದ ಬ್ಯಾಜ್ ಆಗ ನಕ್ಕಿತು!


ಕುತೂಹಲದಿಂದ ಅವರನ್ನು ಸ್ವಲ್ಪ ಹೊತ್ತು ಅನುಸರಿಸಿದೆ. ಇನ್ನೊಂದು ಮಳಿಗೆಯಲ್ಲೂ ಪುನರಾವರ್ತನೆ. ಕೊನೆಗೆ ಅಪ್ಪನ ಕೆಂಗಣ್ಣಿಗೆ ಬಲಿಯಾದ ಬಾಲಕ ಇಂಗ್ಲಿಷ್ ಪುಸ್ತಕ ಖರೀದಿಯಲ್ಲೇ ತೃಪ್ತಿಪಟ್ಟ. ಅದೂ ಬರೋಬ್ಬರಿ ಒಂದು ಸಾವಿರ ರೂಪಾಯಿಯ ಪುಸ್ತಕ. ಇದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗ್ಲ ನಂಟಿನ ಅಪ್ಪ-ಮಗನ ಪುಸ್ತಕದ ಕತೆ.


'ಕನ್ನಡ ಮನಸ್ಸು' ಕುರಿತು ಮಾತನಾಡುವಾಗ, ಯೋಚಿಸುವಾಗ ಈ ಅಪ್ಪ-ಮಗನನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಅಜ್ಞಾತವಾಗಿ ರಿಂಗಣಿಸುವ ಆಂಗ್ಲ ಮನಸ್ಸು ಇದೆಯಲ್ಲಾ, ಬಹುತೇಕ ಮನೆಮನೆಯಲ್ಲಿ ಪ್ರಕಟವಾಗುವಂತಾದ್ದೇ. 'ಸಾಹಿತ್ಯ ಸಮ್ಮೇಳನದಲ್ಲಿ ಆಂಗ್ಲ ಪುಸ್ತಕದ ಮಾರಾಟಕ್ಕೆ ನಿಷೇಧ ಹೇರಬೇಕು,' ಪ್ರತ್ಯಕ್ಷದರ್ಶಿ ಅಕ್ಷರಪ್ರಿಯರೊಬ್ಬರ ಅನಿಸಿಕೆ.


ಮಳಿಗೆಯಲ್ಲಿ ಆಂಗ್ಲ ಪುಸ್ತಕಗಳೇ ಇಲ್ಲದಿರುತ್ತಿದ್ದರೆ? ಆ ಬಾಲಕನಿಗೆ ಕನ್ನಡ ಪುಸ್ತಕ ಸಿಗುತ್ತಿತ್ತೇನೋ? ಒತ್ತಾಯಕ್ಕಾದರೂ ಮಗನ ಆಸೆಯನ್ನು ಅಪ್ಪ ಪೂರೈಸುತ್ತಿದ್ದರೇ? - ಹೀಗೆ ಪ್ರಶ್ನೆಗಳನ್ನು ಪಟ್ಟಿ ಮಾಡಿದರೆ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಕೇವಲ ಬ್ಯಾಜ್ ಧರಿಸಿ ಸಮ್ಮೇಳನದಲ್ಲಿ ಭಾಗವಹಿಸಿ 'ನಾನೊಬ್ಬ ಕನ್ನಡ ಪ್ರೇಮಿ' ಎಂದು ತೋರಿಸಿ ಕೊಳ್ಳಬಹುದಷ್ಟೇ. ಇದರಿಂದ ಅವರಿಗಾಗಲೀ, ಸಮ್ಮೇಳನಕ್ಕಾಗಲೀ ಏನೂ ಪ್ರಯೋಜನವಿಲ್ಲ


'ಕನ್ನಡ ಮನಸ್ಸು'ಗಳ ಉದ್ದೀಪನಕ್ಕೆ ಸಾಹಿತ್ಯ ಸಮ್ಮೇಳನಗಳು ಒತ್ತುಕೊಡುತ್ತಿವೆ. ಎಷ್ಟು ಮನಸ್ಸುಗಳು ಸಭಾಮಂಟಪದಲ್ಲಿ ಮೇಳೈಸಿವೆ? ಎಷ್ಟು ಮನಸ್ಸುಗಳಿಗೆ ಕಲಾಪ ಹೂರಣ ಮನ ಹೊಕ್ಕಿವೆ? ಪ್ರಬಂಧ ಮಂಡಣೆಗೆ ಆರಂಭವಾಗುವಾಗ 'ಗೊಣಗುವ, ಅತೃಪ್ತಿ ಸೂಚಿಸುವ, ಚಡಪಡಿಸುವ' ಮಂದಿ ತನ್ನ ಆಚೀಚೆ ಕುಳಿತವರ 'ಕನ್ನಡ ಮನಸ್ಸನ್ನು' ಕೆದಕುತ್ತಾನೆ! ಚಿತ್ತಸ್ಥೈರ್ಯವನ್ನು ಒರೆಗೆ ಹಚ್ಚುತ್ತಾನೆ. ಇವೆಲ್ಲಾ ಸಮ್ಮೇಳನ ಕಲಾಪದ ಹೊರಗೆ ವಿಹರಿಸುವ ವಿಚಾರಗಳು.


'ಸಮ್ಮೇಳನಕ್ಕೆ ಹೋಗಿದ್ದೆ. ಭಾರೀ ಗೌಜಿ' ಎನ್ನುವಲ್ಲೇ ಸಂಭ್ರಮ. 'ಸಾವಿರಗಟ್ಟಲೆ ಜನ ಬಂದಿದ್ದರು. ಒಳ್ಳೆಯ ಊಟ' ಎನ್ನುತ್ತಾ ಬಾಯಿಚಪ್ಪರಿಸುವುದರಲ್ಲೇ ಸಂತೃಪ್ತಿ. 'ಇದೆಲ್ಲಾ ಮಾಮೂಲಿ ಮಾರಾಯ್ರೆ' ಎನ್ನುವ ಕನ್ನಡ ಮನಸ್ಸು ಮುಂದಿನ ಸಮ್ಮೇಳನದಲ್ಲೂ ಇದೇ ಪುನರುಕ್ತಿ. ನಡೆದ ಗೋಷ್ಠಿಗಳ ಮಥನ, ಸಾಹಿತಿಗಳ ಭಾಷಣಗಳ ಸಾರ ಗ್ರಹಿಕೆ, ಕನ್ನಡ ಪುಸ್ತಕಗಳ ಓದು ಮತ್ತು ಖರೀದಿ, ಕನ್ನಡ ನಾಡು-ನುಡಿಯ ಕುರಿತಾಗಿ ಶ್ರದ್ಧೆ-ಗೌರವ ಬಾರದ ಹೊರತು ಕನ್ನಡದ ಮನಸ್ಸನ್ನು ಹೇಗೆ ಕಟ್ಟಲು ಸಾಧ್ಯ ಹೇಳಿ? ಸಮ್ಮೇಳನಗಳನ್ನು ಒಪ್ಪದೆ, ವಿಚಾರಗಳನ್ನು ಮನನಿಸದೆ, ಕನ್ನಡಕ್ಕೆ ಮನ-ಮನೆಯಲ್ಲಿ ಸ್ಥಾನಕೊಡದೆ, 'ನಾನು ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದೆ' ಎಂದರೆ 'ಹೋದ ಪುಟ್ಟ.. ಬಂದ ಪುಟ್ಟ..' ಅಷ್ಟೇ.


ಸರಿ, ವಿಚಾರ ಎಲ್ಲೋ ಹೋಯಿತಲ್ವಾ. ಎರಡು ದಿವಸದ ಅಳಿಕೆಯ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು 'ಕನ್ನಡ ಮನಸ್ಸು'ಗಳನ್ನು ಕಂಡಾಗ ನನಗುದಿಸಿದ ವಿಚಾರಗಳು. ಉದ್ಘಾಟನಾ ಸಮಾರಂಭ ತಡವಾದುದು ಬಿಟ್ಟರೆ, ಮಿಕ್ಕಂತೆ ಯಶಸ್ವೀ ಸಮ್ಮೇಳನ. ಸಂವಾದವೊಂದರಲ್ಲಿ ಸಮ್ಮೇಳನಾಧ್ಯಕ್ಷ ಡಾ.ತಾಳ್ತಜೆ ವಸಂತ ಕುಮಾರರು ತಮ್ಮ ಬಾಲ್ಯ-ಬದುಕನ್ನು ನೆನಪಿಸಿಕೊಂಡಾಗ, ಕಣ್ಣೀರಿನ ಒಂದು ಹನಿ ಬಿದ್ದುದು ನನಗೆ ಗೊತ್ತಾಗಲೇ ಇಲ್ಲ!


ಅಳಿಕೆಯ ಪ್ರಧ್ಯಾಪಕ ವದ್ವ ವೆಂಕಟ್ರಮಣ ಭಟ್ಟರ 'ಪತ್ರಿಕೆಗಳ ವಿಶ್ವರೂಪ' ಸಮ್ಮೇಳನದ ಆಕರ್ಷಣೆ. ದೈನಿಕ, ಸಾಪ್ತಾಹಿಕ, ಪಾಕ್ಷಿಕ, ಮಾಸಿಕಗಳ ಪ್ರದರ್ಶನ. 'ಐದು ಸಾವಿರಕ್ಕೂ ಮಿಕ್ಕಿ ಸಂಗ್ರಹವಿದೆ. ಇಲ್ಲಿಗೆ ಕೇವಲ ಒಂದು ಸಾವಿರ ಮಾತ್ರವಷ್ಟೇ ತಂದಿದ್ದೇನೆ' ಎಂದರು. ಅವರದ್ದೇ ಸಂಗ್ರಹದ 'ಚಿಟ್ಟೆಗಳ ಸಾಮ್ರಾಜ್ಯ' ವಿದ್ಯಾರ್ಥಿಗಳನ್ನು ಬಹುವಾಗಿ ಆಕರ್ಶಿಸಿತು.


ಕೃಷಿಕ ಮುಳಿಯ ವೆಂಕಟಕೃಷ್ಣ ಶರ್ಮರು ಅಪರೂಪವಾಗುತ್ತಿರುವ ಹದಿನೈದಕ್ಕೂ ಮಿಕ್ಕಿ ಗೆಡ್ಡೆ ಗೆಣಸುಗಳನ್ನು ಹುಡುಕಿ ತಂದು ಪ್ರದರ್ಶನಕ್ಕಿಟ್ಟಿದ್ದರು. 'ಸಮ್ಮೇಳನ ಮುಗಿಯುವಾಗ ಕೆಂಪು ಕೂವೆ ಗೆಡ್ಡೆಯನ್ನು ನನಗೆ ಕೊಡ್ತೀರಾ', 'ಮನೆ ಮಟ್ಟದಲ್ಲಿ ಗೆಡ್ಡೆಗಳನ್ನು ಬೆಳೆಯಲು ಉತ್ತೇಜನ ಬಂದಿದೆ. ಮಾಹಿತಿ ಕೊಡಿ'.. ಹೀಗೆ ಮಾಹಿತಿ ಅಪೇಕ್ಷಿಸುವ ಮಂದಿಯನ್ನು ಗೆಡ್ಡೆಗೆಣಸುಗಳು ಆಕರ್ಷಿಸಿದುವು.

ಮತ್ತೊಂದೆಡೆ ಮಂಗಳೂರಿನ ಕಲಾವಿದ ದಿನೇಶ್ ಹೊಳ್ಳ ಮತ್ತು ಸಂಗಡಿಗರಿಂದ ಸ್ಥಳದಲ್ಲೇ ಚಿತ್ರ ರಚನೆ. ಕ್ಯಾರಿಕೇಚರ್, ತೈಲಚಿತ್ರ, ಶೇಡ್ ಚಿತ್ರಗಳ ರಚನೆ. 'ಹದಿನೇಳನೇ ಸಮ್ಮೇಳನ ಅಲ್ವಾ. ಹಾಗಾಗಿ ನಾವು ಹದಿನೇಳು ಮಂದಿ ಕಲಾವಿದರು ಭಾಗವಹಿಸಿದ್ದೇವೆ' ಎಂದರು. ಇವರೆಲ್ಲಾ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ, ಸ್ವ-ಇಚ್ಚೆಯಿಂದ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ ಎಂಬುದು ಉಲ್ಲೇಖನೀಯ. ಪೂಜ್ಯ ಸಾಯಿಬಾಬಾ ಅವರ ಬದುಕಿನ ಕ್ಷಣಗಳ ಪ್ರದರ್ಶನ, ಪವರ್ ಪಾಯಿಂಟ್ ಪ್ರಸ್ತುತಿ ಚಿಂತನಾಗ್ರಾಸ.


ಅಳಿಕೆ ಸಮ್ಮೇಳನ (19-11-2011) ಯಶಸ್ವಿಯಾಗಿ ಮುಗಿದಿದೆ. ಮುಂದಿನ ಸಮ್ಮೇಳನ..? ಆಗಲೂ ಕನ್ನಡ ಮನಸ್ಸುಗಳ ಹುಡುಕಾಟ-ತಡಕಾಟ!

Sunday, November 20, 2011

ಅಂತಿಂಥಾ ಸೇತುವಲ್ಲ, ಬದುಕು ಕಟ್ಟಿದ ಸೇತು


ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಪುಟ್ಟ ಹಳ್ಳಿ ಶಿವಪುರ. ದಶಕದ ಹಿಂದೆ ಕೊಡಸಳ್ಳಿ ಜಲವಿದ್ಯುತ್ ಯೋಜನೆಗಾಗಿ ಕಾಳೀ ನದಿಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಕೊಡಸಳ್ಳಿಯನ್ನು ನೀರು ನುಂಗಿತು. ಶಿವಪುರವನ್ನು ಸಂಪರ್ಕಿಸುವ ಎಲ್ಲಾ ದಾರಿಗಳನ್ನು ಹಿನ್ನೀರು ಆಪೋಶನ ಮಾಡಿತು. ಮಿಕ್ಕ ಸುತ್ತಲಿನ ದಾರಿಗಳೆಲ್ಲಾ ಸುತ್ತುಬಳಸು.

ಯಲ್ಲಾಪುರ ಶಿವಪುರಕ್ಕೆ ಹತ್ತಿರ. ಕುಂಬ್ರಾಳದವರೆಗೆ ರಸ್ತೆ. ಹಿನ್ನೀರು ದಾಟಿದ ಬಳಿಕ ಆರೇಳು ಕಿಲೋಮೀಟರ್ ಕಾಡು ಹಳ್ಳಿಯೊಳಗೆ ಎಳೆದೊಯ್ಯುತ್ತದೆ. ನಂತರ ಸಿಗುವುದೇ ಐವತ್ತು ಮನೆಗಳಿರುವ ಶಿವಪುರ. ಒಂದು ಕಾಲಘಟ್ಟದಲ್ಲಿ ಕಾರ್ಮಿಕರು ಕೆಲಸ ಹುಡುಕಿ ಬರುವ ಊರಿದು.

ಹಿನ್ನೀರು ದಾಟಲು ದೇಸೀ ತೆಪ್ಪ. ಆಧಾರ ಹಲಗೆಯಲ್ಲಿ ನಿಂತು ನದಿದಂಡೆಗೆ ಕಟ್ಟಿದ ಹಗ್ಗವನ್ನು ಜಗ್ಗುತ್ತಿದ್ದಂತೆ ತೆಪ್ಪ ಚಾಲೂ. ಮಿತ್ರ ಶಿವಾನಂದ ಕಳವೆ ಹಗ್ಗ ಜಗ್ಗುತ್ತಿದ್ದರು. ತೆಪ್ಪ ಚಲಿಸುತ್ತಿತ್ತು. ನದಿಯ ಮಧ್ಯಕ್ಕೆ ಬಂದಾಗ ಕಳವೆ, 'ಇನ್ನೂರು ಅಡಿ ಆಳವಿದೆ ಗೊತ್ತಾ, ಜಾಗ್ರತೆ' ಅಂದರು. ಅಷ್ಟರಲ್ಲಿ ಕೈನಡುಗಿ ಹಲಗೆ ಮೇಲೆ ಮೊಬೈಲ್ ಬಿತ್ತು. 'ಬಾಗಬೇಡಿ. ಮೊಬೈಲ್ ಬೇಕಾ, ಜೀವ ಬೇಕಾ' ನಿರ್ಧರಿಸಿ ಅಂದರು! ಜೀವ ಕೈಯಲ್ಲಿ ಹಿಡಿದು ಕಾಣದ ದೇವರನ್ನು ಜ್ಞಾಪಿಸಿಕೊಳ್ಳುವುದೊಂದೇ ದಾರಿ! 'ಛೇ, ಇದಕ್ಕೊಂದು ತೂಗುಸೇತುವೆಯಾದರೂ ಆಗಿರುತ್ತಿದ್ದರೆ, ಈ ಕಷ್ಟವಿಲ್ಲ' ಅಂದೆ.

ತೂಗುಸೇತುವೆ ಬಿಡಿ, ಊರಿನ ಚಿಕ್ಕ ತೋಡುಗಳಿಗೆ ಸಂಕವಿಲ್ಲ. ಅಡಿಕೆ ಮರವನ್ನು ಅಡ್ಡಲಾಗಿ ಮಲಗಿಸಿದರೆ ಅದೇ ಸೇತುವೆ. ಅದರ ಮೇಲೆ ಸಾಹಸದ ಬೈಕ್ ಸವಾರಿ. ಅಲ್ಲಿನವರಿಗೆ ಸಲೀಸು. ಕಾಳಿ ನದಿ ತಂದೊಡ್ಡಿದ ಹಿನ್ನೀರು ಸವಾಲಿಗೆ ಆರು ವರುಷದ ಹಿಂದೆ ಮಾಡಿದ ತೂಗುಸೇತುವೆಯ ಪ್ರಸ್ತಾಪ ತುಕ್ಕು ಹಿಡಿದು ಕರಟಲೊಂದೇ ಬಾಕಿ.

ಒಂದಲ್ಲ, ಶತಸೇತು

ಸ್ವಲ್ಪ ಸಮಯದ ನಂತರ ತೂಗುಸೇತುವೆಯ ಹರಿಕಾರ ಗಿರೀಶ್ ಭಾರದ್ವಾಜರಿಗೆ ರಿಂಗಿಸಿದೆ. ಅವರಾಗ ಆಗಷ್ಟೇ ಮುಗಿಸಿದ ಪಂಜಿಕಲ್ಲಿನ 'ಶತಸೇತು'ವೆಯ ಫೈಲನ್ನು ಮುಚ್ಚುತ್ತಿದ್ದರು! ನಾಡಿನ ದೊರೆಯಿಂದ ಲೋಕಾರ್ಪಣೆಗಾಗಿ ಸಿದ್ಧತೆ ನಡೆಯುತ್ತಿತ್ತು.

ನೂರನೇ ಸೇತುವೆ ಅಂದಾಗ ಒಂದನೇ ಸೇತುವೆಯನ್ನು ಮರೆಯಲುಂಟೇ? ಒಂದು 'ನೂರು' ಆಗಲು ಬರೋಬ್ಬರಿ ಇಪ್ಪತ್ತೆರಡು ವರುಷಗಳ ಅವಿರತ ದುಡಿಮೆ. ಒಂದೊಂದು ಸೇತುವೆಯು ಹೊಸ ಹೊಸ ಅನುಭವಗಳನ್ನು ಕಟ್ಟಿಕೊಡುತ್ತಿತ್ತು. ಅದರ ಹಿಂದೆ ರಾಜಕೀಯ ವ್ಯವಸ್ಥೆಯ ಗಬ್ಬಿನ ಅನುಭವಗಳಿವೆ. ಸಾಮಾಜಿಕ ಬದುಕಿನ ಮಧ್ಯದಿಂದೆದ್ದ ಸತ್ಯದ ಅನುಭವಗಳಿವೆ. ಮೊಗೆದಷ್ಟೂ ರೋಚಕ.

ಶಿವಪುರದಂತೆ ಅಸಂಖ್ಯಾತ ಹಳ್ಳಿಗಳಿಂದು ಕತ್ತಲೆಯ ಕೂಪದಲ್ಲಿವೆ. 'ಅಭಿವೃದ್ಧಿ' ಎಂಬುದು ಕನಸು. ಮೂಲಭೂತ ಆವಶ್ಯತೆಗಳಿಗಾಗಿ ಪರದಾಟ. ಮಳೆಗಾಲದಲ್ಲಂತೂ ಪೂರ್ತಿ ದ್ವೀಪ. ಇಂತಹ ಹಳ್ಳಿಗಳಿಂದು ಗಿರೀಶ ಭಾರದ್ವಾಜರನ್ನು ಜ್ಞಾಪಿಸಿಕೊಳ್ಳುತ್ತವೆ. ಅವರ ಮಿದುಳ ಮರಿಯಾದ ತೂಗುಸೇತುವೆ ದಡ ದಡಗಳನ್ನು ಬೆಸೆದಿವೆ. ಮನ-ಮನಗಳನ್ನು ಒಗ್ಗೂಡಿಸಿವೆ. ಹೊಸ ಬದುಕಿಗೆ ದಾರಿ ಮಾಡಿಕೊಟ್ಟಿದೆ.

ನದಿಯ ಆಚೀಚೆ ದಡದಲ್ಲಿ ಎರಡು ಪೈಲಾನ್(ಗೋಪುರ)ಗಳು, ಇವಕ್ಕೆ ಬಂಧಿಸಲ್ಪಟ್ಟ ರೋಪ್ಗಳು ಸೇತುವೆಗೆ ಮೂಲಾಧಾರ. ಎರಡೂ ತುದಿಯಿರುವುದು ದಡದಾಚೆಗಿನ ಕಾಂಕ್ರಿಟ್ ರೂಪಿತ 'ಆಂಕರ್'ನಲ್ಲಿ. ಕೇಬಲ್ಗಳಿಗೆ ಸಸ್ಪೆಂಡರ್ಸ್ ತೂಗಿಸಿ, ಅದಕ್ಕೆ ಚ್ಯಾನೆಲ್ನ್ನು ಬಂಧಿಸುತ್ತಾರೆ. ಇದರ ಮೇಲೆ ಫೆರೋಸಿಮೆಂಟ್ ಸ್ಲಾಬ್ಗಳನ್ನು ಜೋಡಿಸಿದರೆ ತೂಗುಸೇತುವೆ ಸಿದ್ಧ.

'ಸುಳ್ಯ ಸನಿಹದ ಅಮಚೂರು ಶ್ರೀಧರ ಭಟ್ಟರು ಮಳೆಗಾಲದಲ್ಲಿ ಅತ್ತಿತ್ತ ಸಂಚರಿಸಲು ಮರದಿಂದ ಮರಕ್ಕೆ ಕೇಬಲ್ಗಳನ್ನು ಜೋಡಿಸಿ ಸೇತುವೆ (ಪಾಲ, ಕೈತಾಂಗು) ರಚಿಸಿದ್ದರು. ಇದು ಭವಿಷ್ಯದ ನನ್ನೆಲ್ಲಾ ಸೇತುವೆಗಳಿಗೆ ಮೂಲ' ಎನ್ನುತ್ತಾರೆ. ಆರಂಭದ ದಿನಗಳಲ್ಲಿ ತಾಂತ್ರಿಕ ಕಾಲೇಜುಗಳ ಭೇಟಿ, ವರಿಷ್ಠರೊಂದಿಗೆ ಸಂಪರ್ಕ. ಪುಸ್ತಕಗಳ ಅಧ್ಯಯನ, ತಾಂತ್ರಿಕಾಂಶಗಳ ಅಭ್ಯಾಸಗಳ ಪರಿಣಾಮವಾಗಿ ಊರಿನ ಸನಿಹದ ಅರಂಬೂರು ತೂಗುಸೇತುವೆ ರಚನೆಯಾಯಿತು. ಈ ಯಶಸ್ಸನ್ನು ನೂರನೇ ಸೇತುವೆಯ ಖುಷಿಯಲ್ಲಿದ್ದ ಸಂದರ್ಭದಲ್ಲಿ ಗಿರೀಶರು ನೆನಪಿಸಿಕೊಂಡರು.

ಒಂದು ಸೇತುವೆ ಬಿಡಿ, ಚಿಕ್ಕ 'ಮೋರಿ' ರಚನೆಯಾಗಲು ಎಷ್ಟು ಸಮಯ ಬೇಕು? ಮಾಣಿಯಿಂದ ಮಡಿಕೇರಿ ತನಕ ಸಂಚರಿಸಿದರೆ ಸತ್ಯ ಗೋಚರಿಸುತ್ತದೆ. ಇನ್ನೂ ಮುಗಿಯದ ಅರ್ಧಂಬರ್ಧ ಸ್ಮಾರಕಗಳು ಎಷ್ಟು ಬೇಕು? ಸರಕಾರ ನಂಬಿದ 'ಪ್ರಾಮಾಣಿಕ ಗುತ್ತಿಗೆದಾರ' ಸಿಕ್ಕರೆ ಅಬ್ಬಬ್ಬಾ ಅಂದರೂ ನಾಲ್ಕೈದು ವರುಷ ಬೇಕೇ ಬೇಕು.

ವರುಷವಲ್ಲ, ಮೂರೇ ತಿಂಗಳು

ಗಿರೀಶರ ತೂಗುಸೇತುವೆ ನಿರ್ಮಾಣಕ್ಕೆ ವರುಷವಲ್ಲ, ಕೇವಲ ಮೂರು ತಿಂಗಳು. ಕಾಂಕ್ರಿಟ್ ಸೇತುವೆ ವೆಚ್ಚದ ಐದನೇ ಒಂದು ಪಾಲು. ಸಕಾಲಕ್ಕೆ ಮೊತ್ತ ಸಿಕ್ಕರೆ ಮಾತ್ರ! ಸೇತುವೆ ಪೂರ್ತಿಯಾದರೂ ಹಣ ನೀಡದೆ ಸತಾಯಿಸಿದ, 'ಇಂದು-ನಾಳೆ' ಎಂದು ಗೋಳುಹೊಯ್ಸಿದ ಅಧಿಕಾರಿಗಳ ಪರಿಚಯ ಗಿರೀಶರಿಗೆ ಮಾಸಿಲ್ಲ!

'ಸರಕಾರದ ಹಣವಲ್ವಾ, ನಾಳೆ ಸಿಕ್ಕೇ ಸಿಗುತ್ತದೆ,' ಗಿರೀಶರ ಆರಂಭದ ದಿನಗಳ ನಂಬುಗೆಯನ್ನು 'ಯಶಸ್ಸಿಯಾಗಿ' ತಳಮಟ್ಟದ ಆಡಳಿತ ವ್ಯವಸ್ಥೆಗಳು ಹುಸಿಮಾಡಿವೆ. 'ತೊಂದರೆಯಿಲ್ಲ, ಕೊಟ್ಟಾರು' ಎನ್ನುತ್ತಾ ಸಾಲ ಮಾಡಿ, ಸೇತುವೆಗೆ ಹಣವನ್ನು ಸುರಿದು, ಬಳಿಕ ಕೈಕೈ ಹಿಸುಕಿಕೊಂಡ ಆ ದಿನಗಳು ಇನ್ನೂ ಹಸಿಯಾಗಿವೆ. ಅಲ್ಲಿಂದೀಚೆಗೆ ರೊಕ್ಕ ಸಿಕ್ಕರೆ ಮಾತ್ರ ಕೆಲಸ.

ಖಾಸಗಿ ಸಹಭಾಗಿತ್ವದಲ್ಲಿ ಎಂದೂ ಕಹಿ ಅನುಭವ ಆದದ್ದಿಲ್ಲ ಎನ್ನುತ್ತಾರೆ. 'ನಾನು ಸೇತುವೆಯ ಕಂಟ್ರಾಕ್ಟರ್ ಎಂದು ಎಷ್ಟೋ ಜನರಲ್ಲಿ ತಪ್ಪು ಕಲ್ಪನೆಯಿದೆ. ಹಾಗಲ್ಲ. ನನ್ನಲ್ಲಿ ಸೇತುವೆ ಪರಿಕಲ್ಪನೆಯಿದೆ. ಹಣ ಕೊಟ್ಟರೆ ಮಾಡಿಕೊಡುತ್ತೇನೆ. ಅಷ್ಟೇ'.

ಕೇರಳದಲ್ಲಿ ಜನಬೆಂಬಲ ಹೆಚ್ಚಂತೆ. ಕೆಲಸ ಆಗುವಲ್ಲೆಲ್ಲಾ ಕುತೂಹಲಿಗರ ದಂಡು ಅಧಿಕ. ಸೇತುವೆ ಕೆಲಸ ಪೂರ್ತಿಯಾಗುವಾಗ ಹಲವರು ಸ್ನೇಹಿತರಾಗಿಬಿಡುತ್ತಾರೆ. ಆದರೆ ಕನ್ನಾಡಿನಲ್ಲಿ..? ಒಂದೊಂದು ಸೇತುವೆ ಆಗುತ್ತಿದ್ದಂತೆ, ಇಲ್ಲಿ ನೈತಿಕತೆಯ ಒಂದೊಂದೇ ಮೆಟ್ಟಿಲು ಕುಸಿಯುವ ಅನುಭವವಾಗುತ್ತದೆ!
ಶತಕ ಸಂಭ್ರಮದ ಗಿರೀಶ್ ಭಾರದ್ವಾಜರ ಖುಷಿಯ ಹಿಂದೆ ಮೂವತ್ತು ಮಂದಿಯ 'ಸೇನಾ ಪಡೆ'ಯ ಶ್ರಮವಿದೆ. ಅಹೋರಾತ್ರಿ ದುಡಿತ. 'ಯಜಮಾನ ಇವರನ್ನು ನಂಬಿದ್ದಾರೆ, ಇವರು ಯಜಮಾನರನ್ನು ನಂಬಿದ್ದಾರೆ,' ಇದೇ ಯಶಸ್ಸಿನ ಗುಟ್ಟು. ಒಮ್ಮೆ ಮನೆಬಿಟ್ಟರೆ ವಾರವಲ್ಲ, ತಿಂಗಳುಗಟ್ಟಲೆ ಒಂದೆಡೆ ಟೆಂಟ್. ಅಲ್ಲೇ ಊಟ, ವಸತಿ. ಸಹಾಯಕರಿಗೆ ಟೆಂಟ್ನಲ್ಲಿ ವ್ಯವಸ್ಥೆ ಮಾಡಿಕೊಟ್ಟು, ತಾನು ಹತ್ತಿರದ ನಗರದ ಐಷರಾಮಿ ಹೋಟೆಲಿನಲ್ಲಿ ವಿಶ್ರಾಂತಿ ಮಾಡಬಹುದಿತ್ತು. ಆದರೆ ಗಿರೀಶ್ ಎಂದೂ ಆ ತಪ್ಪು ಮಾಡಿಲ್ಲ. 'ದನಿ-ಆಳು' ಸಂಬಂಧ ಇಲ್ಲಿಲ್ಲ. 'ನಮ್ಮ ಸಮಾಜದ ಮಧ್ಯೆ ಇರುವ ಎಲ್ಲಾ ಸಮಸ್ಯೆಗಳು ಈ ರೀತಿಯ ಅಂತರದಿಂದ ಉದ್ಭವವಾಗುತ್ತದೆ' ಎನ್ನುತ್ತಾರೆ.

ಕಳೆದ ವಾರವಷ್ಟೇ ಫೋನಿಸಿದ್ದೆ. ಕುದುರೆಮುಖದ ಹತ್ತಿರ ಸೇತುವೆ ಕೆಲಸ ನಡೆಯುತ್ತಿತ್ತು. 'ನೂರ ಮೂರನೇ ಸೇತುವೆ ನಡೀತಿದೆ, ನೋಡಲು ಬರ್ತೀರಾ' ಅಂತ ಆಹ್ವಾನಿಸಿದರು. ಏನೇ ಸಿಹಿ-ಕಹಿ ಬಂದರೂ ಹೊಸ ಸೇತುವೆಗೆ ಅಡಿಗಲ್ಲನ್ನು ಹಾಕುವಾಗ ಹಿಂದಿನ ಎಲ್ಲವನ್ನೂ ಮರೆತುಬಿಡುತ್ತಾರೆ. ಅದು ಮುಗಿಯುತಾ ಬರುವಾಗ ಮತ್ತೊಂದಕ್ಕೆ ನೀಲನಕ್ಷೆ ತಯಾರಾಗಿ ಬಿಡುತ್ತದೆ.

ನೀರಿಗೆ ಅಡ್ಡವಾಗಿ ಸೇತುವೆ. ನೀರು ಹರಿಯುತ್ತಾ ಇರುತ್ತದೆ. ಜೀವನವೂ ಹಾಗೆ. ಗಿರೀಶರ ಸೇತುವೆ ನಿರ್ಮಾಣವೂ ಹಾಗೆ. ಒಂದು ಸೇತುವೆ ನಿರ್ಮಾಣವಾಗಿ ಸಂಚಾರಕ್ಕೆ ಮುಕ್ತವಾಯಿತೆಂದರೆ ಹಳ್ಳಿಯು ಅಭಿವೃದ್ಧಿಯತ್ತ ಹೆಜ್ಜೆಯಿಟ್ಟಂತೆ. ಈ ಜೀವಮಾನದಲ್ಲಿ ಸೇತುವೆ ಆಗದ ಎಷ್ಟೋ ಹಳ್ಳಿಗಳಲ್ಲಿ 'ಅ' ಅಕ್ಷರದೊಳಗೇ ಸುತ್ತುತ್ತಿದ್ದ ಕಂದಮ್ಮಗಳು 'ಎಬಿಸಿಡಿ' ಕಲಿತದ್ದಿದ್ದರೆ ಅದು ಗಿರೀಶರಿಂದ. ಶತಸೇತುವಿನ 'ಅಧಿಪತಿ'ಗೆ ಅಭಿನಂದನೆ. ಅಭಿವಂದನೆ.

ಹಾ.. ಮರೆತುಬಿಟ್ಟೆ. 'ಶಿವಪುರದ ಸೇತುವೆ ಫೈಲ್ ಏನಾಯಿತು?' ಸಾರ್. ಆ ಕಡೆಯಿಂದ ಗಿರೀಶರ ಉತ್ತರ. 'ಆರು ವರುಷದ ಹಿಂದೆ ಯೋಜನೆ ಮಾಡಿಕೊಟ್ಟಿದ್ದೆ. ಈಗ ಪುನಃ ನವೀಕರಣ ಮಾಡಿ ಕೊಟ್ಟಿದ್ದೇನೆ. ಫೈಲ್ ಚಾಲೂ ಆಗುವುದಕ್ಕೆ ಶುರುವಾಗಿದೆಯಂತೆ. ಬಹುಬೇಗನೆ ಸೇತುವೆ ಆಗುವ ಲಕ್ಷಣ ಕಾಣುತ್ತದೆ' ಎಂದರು. ಅಬ್ಬಾ.. ಅಂತೂ ಶಿವಪುರದ ಸಮಸ್ಯೆಯ ಮೋಕ್ಷಕ್ಕಿನ್ನು ಇಳಿಲೆಕ್ಕ ಅಂತ ಊಹಿಸಬಹುದೋ ಏನೋ.

'ಬನ್ನಿ, ತೆಕ್ಕೊಳ್ಳಿ.. ಹತ್ತು ರೂಪಾಯಿಗೆ ಪುಸ್ತಕ'!

ಆಳ್ವಾಸ್ ನುಡಿಸಿರಿಗೆ ನಿನ್ನೆ (13-11-2011) ತೆರೆ. ಕನ್ನಡ ನಾಡು-ನುಡಿಯ ನಿಜಾರ್ಥದ ಹಬ್ಬ. ಪುಸ್ತಕ ಮಳಿಗೆಗಳನ್ನು ಸುತ್ತುತ್ತಿದ್ದೆ. ಅಬ್ಬಾ.. ಒಂದೇ ಕಡೆ ಎಷ್ಟೊಂದು ಪುಸ್ತಕಗಳು. ಆಯ್ಕೆಗೆ ಉತ್ತಮ ಅವಕಾಶ.

ಪುಸ್ತಕ ಖರೀದಿಸಲೆಂದೇ ದೂರದೂರಿನಿಂದ ಆಗಮಿಸಿದ ಅಕ್ಷರ ಪ್ರಿಯರು ಮುಖತಃ ಸಿಕ್ಕಾಗಲೆಲ್ಲಾ, 'ವಾ.. ಎಷ್ಟೊತ್ತಿಗೆ ಬಂದ್ರಿ.. ಇವತ್ತು ಇರ್ತೀರಾ' ಎಂಬ ಉಭಯಕುಶಲೋಪರಿ. 'ಅಬ್ಬಾ.. ಎಷ್ಟೋ ಸಮಯದಿಂದ ಹುಡುಕುತ್ತಿದ್ದ ಪುಸ್ತಕ ಸಿಕ್ತು,' ಎಂಬ ಖುಷಿ. 'ಐದು ಸಾವಿರದ್ದು ತೆಕ್ಕೊಂಡೆ. ಇನ್ನೂ ಬೇಕಿತ್ತು. ಹಣ ತಂದಿಲ್ಲ', ಎಂಬ ನಿರಾಶೆ ಪ್ರಕಟಿತ ಸಂತೋಷ. 'ನೀವು ಎಷ್ಟು ರೂಪಾಯಿಯದ್ದು ತೆಕ್ಕೊಂಡ್ರಿ', ಮರುಪ್ರಶ್ನೆ. 'ವಾ.. ಸೂಪರ್.. ಮೋರ್ ಬುಕ್ಸ್.. ವೆರೈಟಿ ಟೈಟಲ್..', ಕನ್ನಡ ಹಬ್ಬದಲ್ಲಿ ಆಂಗ್ಲದಲ್ಲೇ ಹಠದಿಂದ ಮಾತನಾಡುವ ಟಿಪ್ಟಾಪ್ ಮಂದಿ... ಹೀಗೆ ಒಂದೇ ಸೂರಿನಡಿ ಹಲವು ರುಚಿಯ, ಆಸಕ್ತಿಯ ಸಾಕಾರ.

'ಬನ್ನಿ ಸಾರ್, ಕೇವಲ ಹತ್ತು ರೂಪಾಯಿಗೆ ಪುಸ್ತಕ. ಯಾವುದು ಬೇಕಾದ್ರೂ ತೆಕ್ಕೊಳ್ಳಿ,' ಮಳಿಗೆಯೊಂದರಿಂದ ಕೂಗು. ಒಂದೆಡೆ ಹಳೆ ಪುಸ್ತಕಗಳನ್ನು ಪೇರಿಸಿಟ್ಟಿದ್ದರು. ಮತ್ತೊಂದೆಡೆ ಹುಡುಕುವ ಭರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ರಾಶಿ. ತರಕಾರಿಯಂತೆ. 'ಎಂತದ್ದೋ ಹುಡುಕುತ್ತಾರೆ ಸಾರ್, ಹತ್ತು ರೂಪಾಯಿಯಲ್ವಾ. ಒಂದಾದ್ರೂ ಪುಸ್ತಕ ಒಯ್ದರೆ ಇಷ್ಟು ಹೊತ್ತಿಗೆ ಪುಸ್ತಕವೆಲ್ಲಾ ಖಾಲಿಯಾಗಿರುತ್ತಿತ್ತು,' ಹುಬ್ಬು ಗಂಟಿಕ್ಕಿದ ನಿಟ್ಟುಸಿರು.

ಪುಸ್ತಕಗಳಲ್ಲಿ ಕಾದಂಬರಿಗಳದ್ದು ಸಿಂಹಪಾಲು. ಅವರಿಗೆ ಹೊಟ್ಟೆಪಾಡೋ ಇನ್ನೊಂದೋ.. ಹತ್ತು ರೂಪಾಯಿಗೆ ಕೊಡಲು ಮುಂದಾದ ಆ ವ್ಯಾಪಾರಿಯ ಕುರಿತು ಮರುಕವಾದುದಲ್ಲ, ಗೌರವ ಉಂಟಾಯಿತು. 'ಹೌದು ಸಾರ್, ಹೊಸ ಪುಸ್ತಕ ಅಂದ್ರೆ ದರ ಜಾಸ್ತಿ. ಒಂದೊಂದು ಕಾದಂಬರಿಯ ಬೆಲೆ ನೂರು ರೂಪಾಯಿಯಿಂದ ಆರಂಭವಾಗುತ್ತೆ. ಐನೂರೋ, ಆರುನೂರು ತನಕ ಇದೆ. ಇಲ್ಲಿ ಹೊಸ ಕಾದಂಬರಿಗಳು ಸಿಗದಿದ್ದರೂ ಮಾರುಕಟ್ಟೆಯಲ್ಲಿ ಸಿಗದವುಗಳು ಸಿಗುತ್ತೆ,' ಎನ್ನುತ್ತಾ, 'ಹತ್ತು ರೂಪಾಯಿಗೆ ಪುಸ್ತಕ, ಬನ್ನಿ.' ಆತನ ಮಾಮೂಲಿ ವೃತ್ತಿ ಖಯಾಲಿಗೆ ಬಿದ್ದ.

ಹಳೆಯ ಕಾದಂಬರಿಗಳು, ವೈಚಾರಿಕ ಪುಸ್ತಕಗಳು 'ಕಡಿಮೆ ಬೆಲೆ' ಎಂಬ ಕಾರಣಕ್ಕೆ ಸಾಕಷ್ಟು ಅಕ್ಷರ ಪ್ರಿಯರ ಮನೆ ತಲುಪಿವೆ. 'ಒಳ್ಳೆಯ ಯೋಚನೆ ಅಲ್ವಾ, ನನ್ನಲ್ಲೂ ತುಂಬಾ ಪುಸ್ತಕ ಇದೆ. ಒಮ್ಮೆ ಓದಿ ಆಗಿದೆ. ಇನ್ನಾರೂ ಓದುವವರಿಲ್ಲ. ಮಗಳು ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದಾಳೆ. ಮಗ ಈಗಷ್ಟೇ ಇಂಜಿನಿಯರ್. ಹಾಗಾಗಿ ಇದ್ದ ಪುಸ್ತಕಗಳನ್ನು ಇಂತಹ ಮೇಳದಲ್ಲಿ ಕಡಿಮೆ ಬೆಲೆಗೆ ಮಾರಿದರೆ ಹೇಗೆ,' ಜತೆಗಿದ್ದ ಶಂಕರ ವಿನೋದಕ್ಕೆ ಹೇಳಿದರೂ, ಕಾಲದ ವಿಷಾದ ಅದರಲ್ಲಿದೆ.

ಮನೆಯಲ್ಲಿ ಚಿಕ್ಕದಾದರೂ ಪುಸ್ತಕ ಭಂಡಾರ ಬೇಕು ಎಂದು ಊರು ಸೂರಿನಲ್ಲಿ ಪ್ರತಿಪಾದಿಸಿದ್ದೆ. ಪುಸ್ತಕ ಭಂಡಾರದ ಬಾಗಿಲನ್ನು ತೆಗೆಯಲು ಹರಸಾಹಸ ಪಡುವ ದಿನಮಾನಗಳಿವು. ಶಂಕರನ ಮಾತನ್ನು 'ಶೂನ್ಯವೇಳೆ'ಯಲ್ಲಿ ಯೋಚಿಸಲು ಇರುವುದಲ್ಲ, ಖಂಡಿತ. ಮಗನಿಗೆ, ಮಗಳಿಗೆ ಬೇಡ. ತನಗೆ ವಯಸ್ಸಾಯಿತು. ಇದ್ದ ಪುಸ್ತಕಗಳು ಗೆದ್ದಲು ನುಂಗುವ ಮೊದಲು ಆಸಕ್ತರ ಕೈಗೆ ಇಡುವುದೇ ಪುಣ್ಯದ ಕೆಲಸ ಎಂಬ ನಿಧರ್ಾರ ಶಂಕರನ ಮಾತಿನ ಹಿಂದಿನ ದನಿ.

ಅವನ ವಿಚಾರ ಏನಿದೆಯೋ, ಇಳಿ ಬಿಸಿರಕ್ತದ ಬಹುತೇಕರ ವಿಚಾರವೂ ಭಿನ್ನವಾಗಿಲ್ಲ. 'ಹೊಸ ಪುಸ್ತಕ ಬಿಡಿ, ಇರುವುದನ್ನು ಏನು ಮಾಡುವುದು' ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಪ್ರಶ್ನೆ ಕೇಳಿದವನನ್ನು ಜಾಣ್ಮೆಯ ಉತ್ತರದಿಂದ ಬಾಯಿ ಮುಚ್ಚಿಸಬಹುದು. ಆದು ಸಮಸ್ಯೆಗೆ ಪರಿಹಾರವಲ್ಲ.

'ಮಕ್ಕಳಲ್ಲಿ ಓದುವ ಪ್ರವೃತ್ತಿ ಇಲ್ಲ,' ಎಂದು ಗೊಣಗುವ ಹೆತ್ತವರಾದ ನಾವು ಎಷ್ಟು ಓದುತ್ತೇವೆ ಹೇಳಿ? ಶಾಲೆಗಳಲ್ಲಿ ಓದುವ 'ಹುಚ್ಚನ್ನು' ಹಿಡಿಸುವ ಎಷ್ಟು ವ್ಯವಸ್ಥೆಗಳಿವೆ? ಪುಸ್ತಕದ ಕಪಾಟಿನ ಬೀಗವನ್ನು ತೆರೆಯದ ಎಷ್ಟು ಶಾಲೆಗಳು ಬೇಕು? ಅಧ್ಯಾಪಕರಿಗೆ ಓದುವ ಗೀಳು ಇದೆಯೇ? ಸಮಾರಂಭದಲ್ಲಿ ಹಾರದ ಬದಲು ಪುಸ್ತಕವನ್ನು ನೀಡಿದಾಗ ಮುಖ ಯಾಕೆ ಹುಳಿಹಿಂಡಿದಂತಾಗುತ್ತದೆ?.. ಹೀಗೆ ಪ್ರಶ್ನೆಗಳನ್ನು ಒಂದರ ಕೆಳಗೆ ಇನ್ನೊಂದನ್ನು ಬರೆಯುತ್ತಾ ಹೋದಂತೆ ಪುಟ ಭರ್ತಿಯಾಗುತ್ತದೆ. ದಿಗಿಲಾಗುತ್ತದೆ.

ಬಾಲ್ಯದಿಂದಲೇ ಓದುವ ಗೀಳು ಹುಟ್ಟಿದರೆ, ಪ್ರೌಢರಾದಾಗ ಕೊನೇಪಕ್ಷ ದಿನಪತ್ರಿಕೆಯನ್ನು ಓದುವಷ್ಟಾದರೂ ರೂಪುಗೊಳ್ಳಬಹುದು. 'ಯಾರಿಗೆ ಪುರುಸೊತ್ತುಂಟು ಮಾರಾಯ್ರೆ. ಪೇಪರ್ ಓದಲೇ ಸಮಯವಿಲ್ಲ' ಎನ್ನುತ್ತಾ ಟಿವಿ ಮುಂದೆ ಜಪ್ಪೆಂದು ಕುಳಿತುಕೊಳ್ಳುತ್ತೇವಲ್ಲಾ. ನಾವೇ ಹೀಗಿರುತ್ತಾ ನಮ್ಮ ಮಕ್ಕಳು ಎಷ್ಟು ಪುಸ್ತಕ ಓದಬಹುದು ಹೇಳಿ?

'ನನ್ನ ಮಗನಿಗೆ ಟಿವಿ ಅಂದರೆ ಆಯಿತು' ಎಂದು ಬೀಗುತ್ತೇವೆ. 'ಅವನಿಗೆ ಶಾಲೆ ಪುಸ್ತಕ ಓದಿಯೇ ಆಗುವುದಿಲ್ಲ. ಮತ್ತೆ ಬೇರೆ ಪುಸ್ತಕ ಓದಲು ಎಲ್ಲಿ ಸಮಯವಿದೆ, ಪಾಪ' ಎಂದು ಮಕ್ಕಳ ಎದುರೇ ಪ್ರಶಂಸಿಸುತ್ತೇವೆ. 'ಏನೋ.. ಶಾಲೆ ಪುಸ್ತಕ ಓದಿಯಾಯಿತಾ.. ಅದನ್ನು ಬಿಟ್ಟು ಬೇರೆ ಪುಸ್ತಕ ಓದುತ್ತಿಯೋ' ಎಂದು ಗದರುವ ಅಮ್ಮ. ಮಕ್ಕಳ ಬೌದ್ಧಿಕ ವೃದ್ಧಿಗೆ ಮನೆಮನೆಯಲ್ಲಿ ಕಾವಲು ಪಡೆ.
'ಇಡೀ ದಿನ ಶಾಲೆ ಪುಸ್ತಕವನ್ನು ಎಷ್ಟೂಂತ ಓದುತ್ತಿಯೋ.. ಒಂದರ್ಧ ಗಂಟೆ ತೇಜಸ್ವಿಯವರ ಪರಿಸರ ಕತೆ ಓದೂ' ಎಂದು ಪ್ರೀತಿಯಿಂದ, ಅಭಿಮಾನದಿಂದ ಮಗನ/ಮಗಳ ಕೈಗೆ ಪುಸ್ತಕವನ್ನು ಕೊಡುವ ಅಮ್ಮ/ಅಪ್ಪನನ್ನು ತೋರಿಸ್ತೀರಾ?
ಯಾವಾಗ ಮಕ್ಕಳ ಕೈಗೆ ಪುಸ್ತಕವನ್ನು ಕೊಡುವ ಅಪ್ಪನೋ, ಅಮ್ಮನೋ ರೂಪುಗೊಳ್ಳುತ್ತಾರೋ, ಆ ಮನೆಯಲ್ಲಿ ಪುಸ್ತಕ ಸಂಸ್ಕೃತಿ ಬೆಳೆಯುತ್ತದೆ. ಅಕ್ಷರ ಗೌರವ ಉಂಟಾಗುತ್ತದೆ. ಒಂದೊಂದೇ ಪುಸ್ತಕ ಸೇರಿ ಚಿಕ್ಕ ಗ್ರಂಥಾಲಯವಾದಾಗ ಅಭಿಮಾನವಾಗುತ್ತದೆ. ಆಗ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳಿಗೆ ಸುತ್ತಾಡಲು ಅರ್ಹತೆ ಬರುತ್ತದೆ! ಹೀಗಾದಾಗ ಶಂಕರನಂತಹ 'ಅಕ್ಷರಪ್ರೀತಿಯ ಸಾಹಿತಿ'ಗೆ ಬಂದ ವಿಷಾದದ ಕ್ಷಣಿಕ ಎಳೆ ನಮ್ಮ ಭವಿಷ್ಯದಲ್ಲಿ ಖಂಡಿತಾ ಬಾರದು, ಬರಬಾರದು. ಬರಲಾರದು.

Tuesday, November 1, 2011

ಕದಿರು: ಕಾಲೇಜು ಮಟ್ಟದ ಕನ್ನಡ ಲೇಖನ ಸ್ಪರ್ಧೆ


ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಯುಕ್ತ ಆಶ್ರಯದ ಮಹತ್ವದ ಸ್ಪರ್ಧೆ.

ಕಣಜ-www.kanaja.in ಇದು ಕರ್ನಾಟಕ ಜ್ಞಾನ ಆಯೋಗವು ರೂಪಿಸಿ ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ – ಬೆಂಗಳೂರು ಇವರು ಜಾರಿಗೊಳಿಸುತ್ತಿರುವ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಕನ್ನಡ, ಕೃಷಿ, ವಿಜ್ಞಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾವಿರಾರು ಲೇಖನಗಳನ್ನು ಪ್ರಕಟಿಸಿರುವ ಕಣಜವು ಇದೀಗ ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಬರವಣಿಗೆಯನ್ನು ಪ್ರೋತ್ಸಾಹಿಸಲು ಈ ಸ್ಪರ್ಧೆಯನ್ನು ಏರ್ಪಡಿಸಿದೆ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದೊಡನೆ ನಡೆಸುತ್ತಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿನಲ್ಲಿ ಇರದ 17 ರಿಂದ 20 ವಯಸ್ಸಿನ ಯುವಕರಿಗೆ ಅವಕಾಶವಿದೆ.

* ಲೇಖನ ತಲುಪಲು ಕಡೇ ದಿನಾಂಕ 14 ನವೆಂಬರ್ 2011 * ಪ್ರತೀ ಲೇಖನದ ಪದಮಿತಿ : ಗರಿಷ್ಠ 1000 ಪದಗಳು *
ರಾಜ್ಯ ಮಟ್ಟದ ನಗದು ಬಹುಮಾನಗಳು * ಮೊದಲ ಬಹುಮಾನ : ರೂ. 40,000 * ಎರಡನೇ ಬಹುಮಾನ : ರೂ. 30,000
·ಮೂರನೇ ಬಹುಮಾನ :ರೂ. 25,000 * ಜಿಲ್ಲಾ ಮಟ್ಟದ ನಗದು ಬಹುಮಾನಗಳು * ಮೊದಲ ಬಹುಮಾನ : ರೂ. 5,000 * ಎರಡನೇ ಬಹುಮಾನ : ರೂ. 3,000 * ಮೂರನೇ ಬಹುಮಾನ : ರೂ. 2,000 * ಜೊತೆಗೆ, ಜಿಲ್ಲಾ ಮಟ್ಟದಲ್ಲಿ ಹತ್ತು ಪ್ರಶಂಸಾ ಬಹುಮಾನಗಳು ಮತ್ತು ವಿಶೇಷ ಪುಸ್ತಕಗಳ ಕೊಡುಗೆ

ನೀವು ಯಾವ ವಿಷಯಗಳ ಬಗ್ಗೆ ಬರೆಯಬಹುದು?

ಸಾಂಸ್ಕೃತಿಕ ಪರಂಪರೆ – ಸಂಪ್ರದಾಯ, ಜಾನಪದ ಆಚರಣೆಗಳು. ಕೃಷಿಯಲ್ಲಿ ಹೊಸ ವಿಧಾನಗಳು, ರೈತರ, ವಿಷಯತಜ್ಞರ, ಹಿರಿಯರ ಪಾರಂಪರಿಕ ಅನುಭವಗಳು, ಸಂದರ್ಶನ ಇತ್ಯಾದಿ – ನಿಮ್ಮ ಊರಿನ ವಿಶೇಷ ಸಂಗತಿ ಕುರಿತ ಲೇಖನ. ಲೇಖನದ ಜೊತೆಗೆ ಸೂಕ್ತ ಛಾಯಾಚಿತ್ರಗಳನ್ನೂ ತೆಗೆದು ಕಳಿಸಿಕೊಡಿ.

ನಿಮ್ಮ ಕಾಲೇಜಿನಲ್ಲಿ ನಡೆಸಿದ ವಿಶೇಷ (ಹೆಚ್ಚು ಪ್ರಚಲಿತದಲ್ಲಿ ಇರದ ಸಂಗತಿಗಳು) ವಿಜ್ಞಾನ ಪ್ರಯೋಗಗಳು, ಪರಿಸರ ಸಮೀಕ್ಷೆಗಳು, ಅಪರೂಪದ ಪ್ರೇಕ್ಷಣೀಯ ತಾಣ ಇತ್ಯಾದಿಗಳ ಬಗೆಗೆ ವಿವರವಾದ ಲೇಖನ. ನೀವು ಹುಡುಕಿದ ಯಾವುದೇ ಹೊಸ ಸಂಗತಿಯ ಬಗ್ಗೆ ಮಾಹಿತಿಪೂರ್ಣವಾದ ಲೇಖನ.

ಯಾವುದು ಬೇಡ?

ಸಾಮಾಜಿಕ ಸಮಸ್ಯೆಗಳು ಮತ್ತಿತರ ವಿಷಯಗಳ ಬಗ್ಗೆ ಮಾಡಿದ ಚರ್ಚಾಸ್ಪರ್ಧೆಯ ಮಾಹಿತಿ ಅಥವಾ ನಿಮ್ಮ ಕಾಲೇಜಿಗಾಗಿ, ಸ್ಪರ್ಧೆಗಾಗಿ ಬರೆದ ಪ್ರಬಂಧಗಳು ಬೇಡ. ನಿಮ್ಮ ಅಭಿಪ್ರಾಯಗಳು, ಕನಸುಗಳು, ವಿಚಾರಗಳು ತುಂಬಿರುವ ಲೇಖನಗಳು ಬೇಡ; `ಕಣಜ’ಕ್ಕೆ ಬೇಕಿರುವುದು ಕೇವಲ ಮಾಹಿತಿಯುಕ್ತ, ಜ್ಞಾನ ಕೇಂದ್ರಿತ ಲೇಖನಗಳು. ದಯವಿಟ್ಟು ಬೇರೆ ಪುಸ್ತಕ, ಮಾಹಿತಿ ಮೂಲಗಳಿಂದ ನಕಲು ಮಾಡಬೇಡಿ.

ನಿಯಮಗಳು

ನಿಮ್ಮ ಮೊದಲ ಲೇಖನದ ಜೊತೆಗೆ ಕಾಲೇಜಿನ ಮುಖ್ಯಸ್ಥರಿಂದ ವಿದ್ಯಾರ್ಥಿ ದೃಢೀಕರಣ ಪತ್ರವನ್ನು ಲಗತ್ತಿಸಿ ಕಳಿಸಬೇಕು.
ನೀವು ಕಳಿಸಿದ ಯಾವುದೇ ಲೇಖನವನ್ನು ಸೂಕ್ತವಾಗಿ ಸಂಪಾದಿಸಿ ಪ್ರಕಟಿಸುವ ಅಥವಾ ತಿರಸ್ಕರಿಸುವ ಹಕ್ಕು `ಕಣಜ’ ಸಂಪಾದಕೀಯ ತಂಡಕ್ಕೆ ಇರುತ್ತದೆ. ಪ್ರತೀ ವಿದ್ಯಾರ್ಥಿಯು ಗರಿಷ್ಠ ಎರಡು ಲೇಖನಗಳನ್ನು ಕಳಿಸಬಹುದು.

ಲೇಖನ ಕಳಿಸಬೇಕಾದ ವಿಳಾಸ

ಸಲಹಾ ಸಮನ್ವಯಕಾರ, ಕಣಜ ಅಂತರಜಾಲ ಕನ್ನಡ ಜ್ಞಾನಕೋಶ, ನಂ.24/2,3, ವಿಜ್ಞಾನ ಭವನ, 22ನೇ ಮುಖ್ಯ ರಸ್ತೆ,
ಬನಶಂಕರಿ 2ನೇ ಹಂತ, ಬೆಂಗಳೂರು 560070 - ಮಿಂಚಂಚೆ (ಈಮೈಲ್) kadiru@kanaja.in, ದೂರವಾಣಿ: 080 – 26716244

ಎಲ್ಲ ಲೇಖನಗಳನ್ನು kadiru@kanaja.in ಈ ಈಮೈಲ್ ವಿಳಾಸಕ್ಕೆ ಕಳಿಸಿಕೊಡಿ.

ಡಿಸೆಂಬರಿನಲ್ಲಿ ಬೆಂಗಳೂರಿನಲ್ಲಿ ಸಮಾರಂಭದ ಮೂಲಕ ಬಹುಮಾನಗಳನ್ನು ನಾಡಿನ ಗಣ್ಯರಿಂದ ವಿತರಿಸಲಾಗುವುದು.

Sunday, October 30, 2011

'ಶ್ರೀ'ಪಡ್ರೆಯವರಿಂದ ಹವಾಯ್ ಅನುಭವ ಪ್ರಸ್ತುತಿ


ಪುತ್ತೂರಿನ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಹಾಸಭೆಯು 29 ಅಕ್ಟೋಬರ್ 2011ರಂದು ಪುತ್ತೂರಿನ ದ.ಕ.ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ನಡೆದಿತ್ತು.

ಅಡಿಕೆ ಪತ್ರಿಕೆಯು ಹೊರತಂದ ತನ್ನ 23ನೇ ಹುಟ್ಟುಹಬ್ಬ ವಿಶೇಷಾಂಕವನ್ನು ಸಂಘದ ಅಧ್ಯಕ್ಷ ಹಾಗೂ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್, ಸುಳ್ಯ ವಿಶ್ವನಾಥ ರಾವ್, ಕೋಟೆ ದಯಾನಂದ, ವಾಟೆ ಮಹಾಲಿಂಗ ಭಟ್, ಗುಂಡ್ಯಡ್ಕ ವೆಂಕಟ್ರಮಣ ಭಟ್.. ಮೊದಲಾದ ಗಣ್ಯರು ಅನಾವರಣಗೊಳಿಸಿದರು.

ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ'ಪಡ್ರೆಯವರು ಈಚೆಗೆ ಹವಾಯ್ ದ್ವೀಪಕ್ಕೆ ಭೇಟಿ ನೀಡಿದ್ದರು. ಅವರ ಪ್ರವಾಸ ಅನುಭವ ಮತ್ತು ಹವಾಯಿಯ ಹಣ್ಣಿನ ಕುರಿತಾಗಿ ಪವರ್ ಪಾಯಿಂಟ್ ಪ್ರಸ್ತುತಿ ನಡೆಯಿತು. ಗಿಡಗೆಳೆತನ ಸಂಘ 'ಸಮೃದ್ಧಿ'ಯ ಸಹಯೋಗ.

(ಚಿತ್ರ : ಪಡಾರು)

ನರಿಕಬ್ಬು ಸೊಪ್ಪಿನ ಪಲ್ಯವೂ.. ನೀರ್ಕಡ್ಡಿ ಸಾರೂ..


'ಶಿರಂಕಲ್ಲು ದೇವಕಿ ಅಮ್ಮನ ಅಡುಗೆ ಮನೆಯಲ್ಲಿ ವರುಷದ ಮುನ್ನೂರು ದಿವಸವೂ ಅವರು ಬೆಳೆದದ್ದೇ ತರಕಾರಿ. ಅಂಗಡಿಯಿಂದ ತರುವುದಿಲ್ಲ,' ಎಂಬ ಹೊಸ ಸುಳಿವನ್ನು ಮುಳಿಯದ ವಾಣಿ ಶರ್ಮ ನೀಡಿದರು. ಕುತೂಹಲ ಹೆಚ್ಚಾಯಿತು, ಆಸಕ್ತಿ ಕೆರಳಿತು. 'ಬನ್ನಿ, ಬಾಳೆದಿಂಡಿನ ಪಲ್ಯ, ನೀರು ಮಾವಿನ ಗೊಜ್ಜು, ಪಪ್ಪಾಯಿ-ಬಾಳೆ ಕುಂಡಿಗೆಯ ಸಮೋಸ ಮಾಡಿದ್ದೇವೆ' ಎನ್ನುತ್ತಾ ಅವರ ಮಗ ನಾರಾಯಣ ಭಟ್ಟರ ಆಹ್ವಾನ. ತೋಟದ ಉತ್ಪನ್ನಗಳ ಖಾದ್ಯಗಳನ್ನು ಸವಿಯುವ ಅವಕಾಶ.

ಟೊಮೆಟೊ ಸಾರು, ಕ್ಯಾಬೇಜ್ ಪಲ್ಯ, ಆಲೂಗೆಡ್ಡೆ ಸಾಂಬಾರು.. ಇವಿಷ್ಟು ಅಡುಗೆ ಮನೆಗೆ ಬಾರದೆ ಸ್ಟೌ ಉರಿಯದ ಮನೆಗಳು ಎಷ್ಟು ಬೇಕು?! ಇದಕ್ಕಿಂತ ಭಿನ್ನವಾದ ಲೋಕವನ್ನು ಶಿರಂಕಲ್ಲಿನಲ್ಲಿ ನೋಡಿದೆ, ಅನುಭವಿಸಿದೆ. 'ಮನೆಯಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ಸೇರುವ ಸಮಾರಂಭವಿದ್ದರೆ ಮಾತ್ರ ಮಾರುಕಟ್ಟೆಯಿಂದ ತರಕಾರಿ ತರುವುದು. ಹಾಗೆ ತರುವಾಗಲೂ ಗೆಡ್ಡೆ, ಸೌತೆ.. ಹೀಗೆ ಹೆಚ್ಚು ರಾಸಾಯನಿಕದಲ್ಲಿ ಮೀಯದ ತರಕಾರಿಯನ್ನು ತರುತ್ತೇವೆ' ಎಂದರು.

ತರಕಾರಿ ಕೃಷಿಕರೊಬ್ಬರಲ್ಲಿಗೆ ಭೇಟಿ ನೀಡಿದ್ದೆ. ತೊಂಡೆ ಕೃಷಿಯಲ್ಲಿ ಅನುಭವಿ. ಮಂಗಳೂರು ಮಾರುಕಟ್ಟೆಗೆ ಕ್ವಿಂಟಾಲ್ಗಟ್ಟಲೆ ತೊಂಡೆಕಾಯಿಯನ್ನು ನೀಡುವ ಕೃಷಿಕ. ಮಾತನಾಡುತ್ತಾ ತೊಂಡೆ ಚಪ್ಪರ ಸುತ್ತುತ್ತಾ ಇರುವಾಗ, ಮನೆಯ ಪಕ್ಕ ಸ್ವಲ್ಪ ಜಾಗದಲ್ಲಿ ತೊಂಡೆಯ ಬಳ್ಳಿಯನ್ನು ನೆಟ್ಟಿರುವುದನ್ನು ಕಂಡೆ. 'ಇದು ನಮ್ಮ ಮನೆಯ ಬಳಕೆಗೆ ಮಾತ್ರ' ಎಂದರು ನಗುತ್ತಾ.

ಪ್ರತ್ಯೇಕ ಆರೈಕೆಯ ಮನೆಯ ಬಳಕೆಯ ತೊಂಡೆಗೆ ಯಾವುದೇ ವಿಷ ಸಿಂಪಡಣೆ ಇಲ್ಲ. ಮಾರಾಟ ಮಾಡುವುದಕ್ಕೆ ಮಾತ್ರ ಕೀಟ ನಿಯಂತ್ರಣಕ್ಕಾಗಿ ಔಷಧದ ಹೆಸರಿನ ವಿಷ ಸಿಂಪಡಣೆ. 'ನಾವು ಮಾತ್ರ ಆರೋಗ್ಯದಿಂದಿರಬೇಕು, ಇತರರು ವಿಷ ತಿನ್ನಲಿ, ಬಿಡಲಿ' ಎಂಬ ಮನೋಸ್ಥಿತಿ. ಕಾಲಸ್ಥಿತಿಯೂ ಕೂಡಾ. ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ತರಕಾರಿಗಳ ಹಿಂದೆ ಅದೆಷ್ಟು ಕರಾಳ ವಿಷ ಕತೆಗಳು!

ತಾಜಾತನಕ್ಕೆ ಮಣೆ

ಶಿರಂಕಲ್ಲು (ದ.ಕ.ಜಿಲ್ಲೆಯ ಕನ್ಯಾನ ಸನಿಹ) ಮನೆಯ ಸದಸ್ಯರಿಗೆ ಮಾರುಕಟ್ಟೆ ತರಕಾರಿಗಳ 'ತಾಜಾತನ' ಗೊತ್ತು. ತಾವೇ ಬೆಳೆದ ತರಕಾರಿಯನ್ನು ತಿನ್ನುವುದು, ಉಣ್ಣುವುದು, ಬಳಕೆ ಮೀರಿದ್ದನ್ನು ಸ್ನೇಹಿತರಿಗೆ ಹಂಚುವುದು ಅವರಿಗೆ ಖುಷಿ. ಅಂಗಳ ತುಂಬಾ ಒಂದಲ್ಲ ಒಂದು ತರಕಾರಿಗಳು. 'ಬೆಳೆದರೆ ಸಾಲದಲ್ಲಾ, ತಿನ್ನಲೂ ಗೊತ್ತಿರಬೇಕು. ಬಹು ಮಂದಿ ತಾವು ಬೆಳೆದುದನ್ನು ತಿನ್ನುವುದಿಲ್ಲ. ಮಾರಾಟ ಮಾಡುತ್ತಾರೆ. ಮನೆ ಉಪಯೋಗಕ್ಕೆ ಪೇಟೆಯಿಂದಲೇ ತರುತ್ತಾರೆ. ಇದೊಂದು ಟ್ರೆಂಡ್, ಪ್ರತಿಷ್ಠೆ'!

ಹೌದಲ್ಲಾ.. ಕೃಷಿಕರೊಬ್ಬರ ತೋಟದಲ್ಲಿ ನಿಂತಿದ್ದೆ. ಬಾಳೆಕಾಯಿ ಕಟಾವ್ ಆಗುತ್ತಿತ್ತು. ಲಾರಿಗೆ ಪೇರಿಸುತ್ತಿದ್ದರು. 'ರೀ.. ನಾಡಿದ್ದೇ ಶನಿವಾರ ನಮ್ಮಲ್ಲಿ ಕಾರ್ಯಕ್ರಮವಲ್ವಾ. ಒಂದೆರಡು ಗೊನೆ ಇರಲಿ' ಮನೆಯೊಡತಿಯ ಬುಲಾವ್. 'ತೊಂದರೆಯಿಲ್ಲ ಬಿಡೇ.. ಸಫಲ್ಯರ ಗೂಡಂಗಡಿಯಿಂದ ಹಣ್ಣು ತಂದರೆ ಆಯಿತು, ಅದಕ್ಕೇನಂತೆ ಗಡಿಬಿಡಿ..' ಯಜಮಾನರ ಉತ್ತರ. ಇದು ಕೃಷಿ ಬದುಕಿನ ತಾಳ-ಮೇಳದ ಒಂದು ಎಳೆ!

'ಬಳಕೆಯ ಬಗ್ಗೆ ಜನರಿಗೆ ಗೊತ್ತಿಲ್ಲ. ಬಳಸಿ ತೋರಿಸಬೇಕು.,' ಮಾತಿನ ಮಧ್ಯೆ ದೇವಕಿ ಅಮ್ಮ ಹೇಳಿದಾಗ ಹನುಮಜೆ ಶ್ರೀಕೃಷ್ಣ ಭಟ್ಟರ ಮನೆಯ ಸಮಾರಂಭವೊಂದರಲ್ಲಿ ಬಡಿಸಿದ ಖಾದ್ಯಗಳು ನೆನಪಾಗಿ ಬಾಯಿರುಚಿ ಹೆಚ್ಚಿಸಿತು. ಅಂದು - ಹಲಸಿನ ಉಪ್ಪುಸೊಳೆ ಮತ್ತು ಬಾಳೆದಿಂಡಿನ ಪಲ್ಯ, ಹತ್ತಾರು ಚಿಗುರುಗಳ ತಂಬುಳಿ, ತೆಂಗಿನಕಾಯಿಯ ಸಾರು, ಮುಂಡಿಗೆಡ್ಡೆಯ ಕಾಯಿಹುಳಿ, ಕೆಸುವಿನ ದಂಟು ಮತ್ತು ಹಲಸಿನ ಬೇಳೆ ಸೇರಿಸಿದ ಪದಾರ್ಥ - ಹೀಗೆ ವಿವಿಧ ಪಾಕೇತನಗಳು. 'ಅಂಗಡಿ ಹತ್ತಿರವೇ ಇದೆ. ಬೇಕಾದ ಹಾಗೆ ತರಬಹುದಿತ್ತು. ನಮ್ಮದೇ ತಾಜಾ ಸಂಪನ್ಮೂಲಗಳನ್ನು ಬಳಸದಿದ್ದರೆ ಅವು ಹಾಳಾಗುವುದಿಲ್ವಾ. ಈ ಅಡುಗೆ ಬಹುತೇಕರಿಗೆ ಇಷ್ಟವಾಗಿದೆ. ಗೇಲಿ ಮಾಡಿದವರೂ ಇದ್ದಾರೆ' ಎನ್ನುತ್ತಾರೆ.

ಸಾವಯವದ ಒಲವು ಹೇಗೆ ಹೆಚ್ಚುತ್ತಿದೆಯೋ, ಜತೆ ಜತೆಗೆ ಖಾದ್ಯಗಳ ತಯಾರಿಯ ಅರಿವೂ ಕೂಡಾ ಆಗಬೇಕಾಗಿದೆ. ತರಕಾರಿಯೋ, ಬೇಳೆಯೋ ಸಾವಯವದಲ್ಲಿ ಸಿಕ್ಕಿತೆನ್ನಿ. ಉಣ್ಣುವ ಅನ್ನವೇ ಸಿಂಪಡಣೆಗಳಿಂದ ತೋಯ್ದರೆ? ಹೀಗೆಂದಾಗ 'ಕ್ರಿಮಿಕೀಟಗಳಿಂದ ರಕ್ಷಿಸಲು ರಾಸಾಯನಿಕ ಸಿಂಪಡಣೆ ಅನಿವಾರ್ಯವಲ್ವಾ' ಎಂಬ ಹತ್ತಾರು ಅಡ್ಡಪ್ರಶ್ನೆಗಳಿಗೆ ಅದರದ್ದೇ ಆದ ಪರಿಹಾರೋಪಾಯಗಳಿವೆ ಬಿಡಿ.

ಕಳೆದ ವರುಷ ಬೆಂಗಳೂರಿನ ಕೃಷಿಮೇಳದ ಸಾವಯವ ಅಕ್ಕಿಯ ಮಳಿಗೆಯೊಂದರಲ್ಲಿದ್ದೆ. ವಯೋವೃದ್ಧ ಮಹಿಳೆಯೊಬ್ಬರು 'ಏ ತಮ್ಮಾ.. ಸಾವಯವ ಅಕ್ಕಿ ಬೇಕಾಗಿತ್ತು. ಡಾಕ್ಟ್ರು ಹೇಳಿದ್ದಾರಪ್ಪಾ.. ಪಾಲಿಶ್ ಮಾಡದ ಅಕ್ಕಿ ಎಲ್ಲಿ ಸಿಗುತ್ತೋ'? ದೂರದ ನೆಲಮಂಗಲದಿಂದ ಅಕ್ಕಿಯನ್ನು ಹುಡುಕುತ್ತಾ ಜಿಕೆವಿಕೆ ಆವರಣಕ್ಕೆ ಬಂದಿದ್ದರು. ಅವರ ಮನೆಯ ಪಕ್ಕ ಅಂಗಡಿ ಇರಲಿಲ್ವೇನು? ಸೂಪರ್ ಬಜಾರ್ ಇಲ್ಲವೇನು? ಎಲ್ಲವೂ ಇದ್ದರೂ ಬದುಕಿಗಾಗಿ, ಆರೋಗ್ಯಕ್ಕಾಗಿ ಅಕ್ಕಿಗೂ ಹುಡುಕಾಟ, ಪರದಾಟ.

ಇರಲಿ, ಪುನಃ ಶಿರಂಕಲ್ಲು ಮನೆಗೆ ಬರೋಣ. ಉಣ್ಣುವ ಅನ್ನವನ್ನು ಇವರೇ ಬೆಳೆಯುತ್ತಾರೆ. ಪಾಲಿಶ್ ಮಾಡದ ಅಕ್ಕಿ! ಮನೆಯೊಳಗೆ ಪೇರಿಸಿಟ್ಟ ಭತ್ತದ ಮೂಟೆಯನ್ನು ತೋರಿಸುವುದು ನಾರಾಯಣ ಭಟ್ಟರಿಗೆ ಹೆಮ್ಮೆಯಾದರೂ, 'ನಾನು ಬೆಳೆದಿದ್ದೇನೆ. ನೀವೂ ಬೆಳೆಯಿರಿ. ಇತರರನ್ನು ಬೆಳೆಯಲು ಪ್ರೋತ್ಸಾಹಿಸಿ' ಎಂಬ ಸಂದೇಶವೂ ಇದೆ.

ಸಾತ್ವಿಕ ಆಹಾರದಿಂದ ಆರೋಗ್ಯ

ಆಹಾರವೇ ಔಷಧ. ಅದನ್ನು ಮನೆ ಆಹಾರದಲ್ಲಿ ಅನುಷ್ಠಾನ ಮಾಡಿದ ಇವರು, ಇತರರ ಆರೋಗ್ಯವೂ ಸುಧಾರಿಸಲಿ ಎಂಬ ದೃಷ್ಟಿಯಿಂದ ಖ್ಯಾತ ಮೂಲಿಕಾ ವೈದ್ಯ ಪಾಣಾಜೆಯ ವೆಂಕಟ್ರಾಮ ದೈತೋಟ, ಜಯಲಕ್ಷ್ಮೀ ವಿ. ದೈತೋಟ ಇವರಿಂದ 'ಸಾತ್ವಿಕ ಆಹಾರದಿಂದ ಆರೋಗ್ಯ' ಎಂಬ ಮಾಹಿತಿ ಕಾರ್ಯಾಗಾರವನ್ನು ಮನೆಯ ಜಗಲಿಯಲ್ಲಿ ನಾರಾಯಣ ಭಟ್ ಆಯೋಜನೆ ಮಾಡಿದ್ದರು. ಸುಮಾರು ಐವತ್ತಕ್ಕೂ ಮಿಕ್ಕಿ ಅಮ್ಮಂದಿರ ಉಪಸ್ಥಿತಿ. ಇಲ್ಲಿನ ಮಾಹಿತಿಗಳು ತಂತಮ್ಮ ಅಡುಗೆ ಮನೆಯಲ್ಲಿ ಸಾಕಾರವಾಗಬೇಕೆಂಬ ಕಾಳಜಿ.

ಅಂದಿನ ಅಡುಗೆಯ ಪಾಕೇತನಗಳನ್ನು ನೋಡಿ. ಎಳೆ ನರಿಕಬ್ಬು ಸೊಪ್ಪು ಮತ್ತು ಹಲಸಿನ ಬೇಳೆ ಸೇರಿಸಿ ಮಾಡಿದ ಪಲ್ಯ, ಕ್ರೋಟಾನ್ ಹರಿವೆಯ ಸಾಸಿವೆ, ಸೊರಳೆ ಸೊಪ್ಪಿನ ತಂಬುಳಿ, ನೀರ್ಪಂತಿ (ನೀರ್ಕಡ್ಡಿ) ಸೊಪ್ಪಿನ ಸಾರು, ದೊಡ್ಡಪತ್ರೆ ಮತ್ತು ಹೆಸರು ಕಾಳಿನ ಗಸಿ, ಪಡುವಲ-ಅಕ್ಕಿತರಿಯ ಪಾಯಸ, ಬಾಳೆದಿಂಡಿನ ಪೋಡಿ (ಬಜ್ಜಿ), ರಾಗಿ ಹಾಲುಬಾಯಿ (ಹಲ್ವದಂತೆ), ಬಾಳೆಹಣ್ಣಿನ ಹಲ್ವ, ನೀರ್ಗುಜ್ಜೆ ಹುಳಿ, ಶುಂಠಿ-ನಿಂಬೆ-ಬೆಲ್ಲದ ಪಾನಕ, ನಿಂಬೆಹುಳಿ-ಅರೆಮಾದಲ ಉಪ್ಪಿನಕಾಯಿ.

ಅರೆ.. ಹೆಸರು ಕೇಳದ ಸೊಪ್ಪುಗಳು! ನನ್ನ ಆಶ್ಚರ್ಯ ನೋಡಿ ವೆಂಕಟ್ರಾಮರೇ ಹೇಳಿದರು - ನರಿಕಬ್ಬು ಸೊಪ್ಪು ಜೀರ್ಣಕ್ರಿಯೆ ಮತ್ತು ಕರುಳು ಶುದ್ದೀಕರಣಕ್ಕೆ, ಕ್ರೋಟಾನ್ ರಕ್ತವರ್ಧಕ, ಸೊರಳೆ ಸೊಪ್ಪಿಗೆ ಸಮಗ್ರ ಅನ್ನನಾಳದ ಉರಿಯನ್ನು ಶಮನಿಸುವ ಗುಣ, ನೀರ್ಕಡ್ಡಿ ಜೀರ್ಣಕಾರಿ, ಯಕೃತ್-ಪ್ಲೀಹ ಸಂಬಂಧಿಗಳಿಗೆ ಸಾಂಬ್ರಾಣಿ..

ಇಷ್ಟೆಲ್ಲಾ ಔಷಧೀಯ ಗುಣಗಳ ಸೊಪ್ಪುಗಳನ್ನು ಮುಂದಿಟ್ಟುಕೊಂಡು ವಯೋವೃದ್ಧ ಶಂಕರ ಭಟ್ಟರು ಅಡುಗೆ ಮನೆಯಿಂದ ಉದ್ಗರಿಸಿದ್ದು ಹೀಗೆ - 'ನನ್ನ ಐವತ್ತಾರು ವರುಷದ ಅಡುಗೆ ಅನುಭವದಲ್ಲಿ ಇಂತಹ ಪದಾರ್ಥಗಳನ್ನು ಮಾಡಿಯೇ ಗೊತ್ತಿಲ್ಲ. ಇದೇ ಪ್ರಥಮ. ಹೊಸ ಅನುಭವ' ಎಂದರು.

ಇಂತಹ ವಿಶೇಷ ಕಾರ್ಯಕ್ರಮಗಳಿಗೆ ಹೋಗಿ ಬಂದಾಗ ಮೆಚ್ಚುತ್ತೇವೆ, ಹೊಗಳುತ್ತೇವೆ. ನಮ್ಮ ಮನೆಯಲ್ಲಿ ಅಂತಹ ಖಾದ್ಯಗಳನ್ನು ಮಾಡುವ ಪ್ರಯತ್ನ ಬಿಡಿ, ನೆನಪಾಗುವುದೇ ಇಲ್ಲ. ಮನೆಯ ಹಿತ್ತಿಲಿನ ತರಕಾರಿಗಳು ಕೊಳೆತರೂ 'ಅವರಿಗೆ ಬೇರೆ ಕೆಲಸವಿಲ್ಲ' ಎನ್ನುತ್ತಾ ಬೈಕ್ ಸ್ಟಾರ್ಟ್ ಮಾಡಿ ಪೇಟೆಯತ್ತ ಮುಖಮಾಡುತ್ತೇವೆ. ಬರುವಾಗ ಪ್ಲಾಸ್ಟಿಕ್ ಚೀಲ ತುಂಬಾ ಕ್ಯಾಬೇಜ್, ಕ್ಯಾಲಿಫ್ಲವರ್.. ಇತ್ಯಾದಿ ಅಡುಗೆ ಮನೆ ಸೇರುತ್ತದೆ. ಖಾದ್ಯಗಳು ಬಟ್ಟಲಿಗೆ ಬಂದಾಗ 'ಸೂಪರ್' ಎಂದು ತೇಗುತ್ತೇವೆ.

'ಮುಂಬಯಿಯಲ್ಲಿ ಡಬ್ಬಾವಾಲಾಗಳ ವ್ಯಾಪಾರ ಕಡಿಮೆಯಾಗಿದೆ. ಸಿದ್ಧ ಆಹಾರಗಳತ್ತ ಜನರ ಒಲವು ಹೆಚ್ಚಾಗಿದೆ' ವಾರದ ಹಿಂದೆ ಓದಿದ ಸುದ್ದಿ. ಮನೆಆಹಾರ ಕಡಿಮೆಯಾಗಿದೆ ಅಂದರೆ ಕಾಯಿಲೆಗಳ ಆಹ್ವಾನಕ್ಕೆ ನಾಂದಿ ಎಂದರ್ಥ. ದಿನಕ್ಕೊಂದು ಕಾಯಿಲೆಗಳು ವಕ್ಕರಿಸಿಕೊಂಡು ಬರುತ್ತದೆ. ಆಹಾರದ ಬದಲಾವಣೆ ಕಾಲದ ಅನಿವಾರ್ಯತೆ. ಆಹಾರದಲ್ಲೇ ಔಷಧಿಯಿದೆ. ಪ್ರತ್ಯೇಕ ಗುಳಿಗೆ, ಟಾನಿಕ್ಗಳು ಬೇಕಾಗಿಲ್ಲ. ಆಹಾರವನ್ನು ಕಡೆಗಣಿಸಿದರೆ ಜೀವನಪೂರ್ತಿ ಗುಳಿಗೆ, ಟಾನಿಕ್ಗಳನ್ನು ಬಿಟ್ಟಿರಲು ಸಾಧ್ಯವೂ ಇಲ್ಲ' ಎಂದು ಎಚ್ಚರಿಸುತ್ತಾರೆ ವೆಂಕಟ್ರಾಮ.

Wednesday, October 19, 2011

ಚಿಣ್ಣರ ಓದಿಗೆ ಸೂರ್ಯಂಗೆ ಲಾಳಿಕೆ

'ಮಕ್ಕಳ ವಿದ್ಯಾಭ್ಯಾಸ ಸುಧಾರಿಸಿದೆ. ರಾತ್ರಿ ಹತ್ತು ಗಂಟೆಯ ತನಕವೂ ಅಭ್ಯಾಸ ಮಾಡಬಹುದು. ಮೊದಲೆಲ್ಲಾ ಸೂರ್ಯಾಸ್ತಕ್ಕಾಗುವಾಗ ಹೋಂವರ್ಕ್ ಮುಗಿಸಬೇಕು. ಸೀಮೆಎಣ್ಣೆ ಬುಡ್ಡಿ ಉರಿಸೋಣವೆಂದರೆ ಎಣ್ಣೆನೂ ಇಲ್ಲ. ಮಕ್ಕಳು ಓದುತ್ತಿದ್ದಾಗ ಕಣ್ಣು ತೂಗಿ ಬುಡ್ಡಿ ಮೇಲೆ ಬೀಳದಂತೆ ಕಾಯುವ ಕೆಲಸ ಕೂಡಾ ಇಲ್ಲ' - ಧಾರವಾಡದ ದೇವಗರಿ ಹಳ್ಳಿಯಲ್ಲಿ ಸುತ್ತಾಡುತ್ತಿದ್ದಾಗ ಕಲ್ಮೇಶ ಕಬ್ಬೂರ ಅಭಿಮಾನದಿಂದ ಸೋಲಾರ್ ಕುರಿತು ಹೇಳಿದ ಮಾತು, ಈಚೆಗೆ ಬೆಳ್ತಂಗಡಿಯ ಸವಣಾಲಿಗೆ ಹೋದಾಗ ನೆನಪಾಯಿತು.

ಸವಣಾಲಿನ ನೇತಾಜಿ ಸುಭಾಸ್ಚಂದ್ರ ಭೋಸ್ ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ಒಂಭತ್ತರ ವಿದ್ಯಾರ್ಥಿನಿಯರಾದ ಪ್ರಜ್ಞಾ ಮತ್ತು ಪಲ್ಲವಿಯ ಅಭಿಪ್ರಾಯ ಮತ್ತು ಕಲ್ಮೇಶರ ಹೇಳಿಕೆ ಹೇಗೆ ಹೊಂದುತ್ತದೆ ನೋಡಿ - 'ಬುಡ್ಡಿಗೆ ಸೀಮೆಎಣ್ಣೆ ಸಿಗದೆ ಓದು ತ್ರಾಸವಾಗುತ್ತಿತ್ತು. ಸೋಲಾರ್ ಲ್ಯಾಂಪ್ ಮನೆಯಲ್ಲಿ ಉರಿದ ಮೇಲೆ ಓದಿನಲ್ಲೂ, ಅಂಕದಲ್ಲೂ ಅಭಿವೃದ್ಧಿಯಾಗಿದೆ'.

ಅಭಿವೃದ್ಧಿಯ ಹರಿಕಾರರು ನಗರದ ಮಧ್ಯೆ ನಿಂತು ಹಳ್ಳಿಗಳ ವಿಶ್ಲೇಷಣೆ ಮಾಡುತ್ತಾರೆ. ರೂಪುರೇಷೆಗಳನ್ನು ಸಿದ್ಧಪಡಿಸುತ್ತಾರೆ. ಕಂಪ್ಯೂಟರ್ ಮೇಲೆ ಯೋಜನೆಗಳ ನಕ್ಷೆಗಳನ್ನು ಬಿಡಿಸುತ್ತಾರೆ. ಇಂತಹವರು ಒಮ್ಮೆ ಹಳ್ಳಿಗಳಿಗೆ ಪ್ರವಾಸ ಹೋಗಿ. ನಾಲ್ಕು ದಿನ ತಂಗಿ. ಆಗ ತಿಳಿಯುತ್ತದೆ - ಒಂದೇ ಕೋಣೆಯಲ್ಲಿ ಎಲ್ಲವನ್ನೂ ನಿಭಾಯಿಸುವ ಕುಟುಂಬಗಳು, ಚಿಮಿಣಿ ದೀಪ ಇಲ್ಲದೆ ಸೂರ್ಯಾಸ್ತದ ಮೊದಲೇ ದೈನಂದಿನ ಬದುಕನ್ನು ಮುಗಿಸುವ ಕುಟುಂಬಗಳ ಕಾಯ-ಕಷ್ಟ. ಬೀಡಿಯ ಸುರುಳಿಯಲ್ಲಿ ಬದುಕನ್ನು ರೂಪಿಸುವ ಕುಟುಂಬದ ಕೂಗು ಬೇಲಿಯಾಚೆ ಕೇಳಿಸದು.

ಇಂತಹ ಕುಟುಂಬದ ಬದುಕಿನಲ್ಲಿ ವಿಷಾದವಿದೆ. 'ತಮ್ಮ ಮಕ್ಕಳು ವಿದ್ಯಾವಂತರಾಗಬೇಕು' ಎಂಬ ಭವಿಷ್ಯದ ದಿನಗಳ ಲೆಕ್ಕಣಿಕೆಯಲ್ಲಿ ಸಂತೋಷವೂ ಇದೆ. ಪ್ರಜ್ಞಾಳ ಅಮ್ಮ, 'ಅವಳು ಚೆನ್ನಾಗಿ ಓದುತ್ತಾಳೆ' ಎನ್ನುವ ವಿಶ್ವಾಸದಲ್ಲಿ ಬದುಕಿನ ನಾಳೆಗಳಿವೆ.

ಶಿಕ್ಷಣವೇ ಬೆಳಕು, ಶಿಕ್ಷಣಕ್ಕಾಗಿ ಬೆಳಕು

ವಿದ್ಯುತ್ ಸಂಪರ್ಕ ಇಲ್ಲದ, ನಿಯಮಿತವಾಗಿ ಪವರ್ ಕಟ್ನಿಂದ ಕತ್ತಲೆಯಾದ ಹಳ್ಳಿಗಳ ಮಕ್ಕಳ ಶೈಕ್ಷಣಿಕ ಬದುಕನ್ನು ಬೆಳಗಿಸುವುದು ಸೆಲ್ಕೋ ಯೋಜನೆಗಳ ಒಂದೆಸಳು. ಕನ್ನಾಡಿನಾದ್ಯಂತ ನಲವತ್ತು ಶಾಲೆಗಳ ಎರಡು ಸಾವಿರ ವಿದ್ಯಾರ್ಥಿಗಳಿಗೆ ಆಸರೆಯಾಗುವುದು ಗುರಿ. ಈಗಲೇ ಅರ್ಧದಷ್ಟು ಸಫಲ. 'ಶಿಕ್ಷಣಕ್ಕಾಗಿ ಬೆಳಕು' ಯೋಜನೆ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ್ ಹಂದೆಯವರ ಮಿದುಳ ಮರಿ.

ಕೊಡಗಿನ ಕರಿಕೆಯಲ್ಲಿ ಪ್ರಾಯೋಗಿಕವಾಗಿ ಆರಂಭ. ಕಳೆದ ನವೆಂಬರ್ನಲ್ಲಿ ಆರಂಭವಾದ ಸವಣಾಲು ಶಾಲೆಯ ಯೂನಿಟ್ ಮಾರ್ಚ್ ಗೆ ಮುಕ್ತಾಯವಾಗಬೇಕಿತ್ತು. ಹೆತ್ತವರ, ಮಕ್ಕಳ ಕೋರಿಕೆಯಿಂದಾಗಿ ಈ 'ಡೆಮೋ ಯೂನಿಟ್' ಈಗಲೂ ಚಾಲೂ. ಪ್ರಸ್ತುತ ಅರಂತೋಡು, ನೆರಿಯಾ, ಉಡುಪಿ ಜಿಲ್ಲೆ, ಶಿವಮೊಗ್ಗ, ಬಿಜಾಪುರ, ಗುಲ್ಬರ್ಗಾ..ಗಳ ಆಯ್ದ ವಿದ್ಯಾರರ್ಥಿಗಳ ರಾತ್ರಿ ಓದಿನಲ್ಲಿ ಈಗ ಕತ್ತಲೆಯಿಲ್ಲ.

ಶಾಲೆಗಳಲ್ಲಿ ಪವರ್ ಚಾರ್ಜ್ ಯೂನಿಟ್ ಸ್ಥಾಪನೆ. ಹೆಚ್ಚು ಬ್ಯಾಕ್ಅಪ್ಪಿನ ಬಾಟರಿ. ಮೂರು ಪ್ಯಾನೆಲ್ಗಳು. ಎಲ್.ಇ.ಡಿ.ಬಲ್ಬ್ ಇರುವ, ಕಳಚಿ ಜೋಡಿಸಬಹುದಾದ ಬ್ಯಾಟರಿ ಹೊಂದಿರುವ ಲ್ಯಾಂಪ್. ಸುಮಾರು ಒಂದುಸಾವಿರದ ಆರುನೂರು ರೂಪಾಯಿ ಮೌಲ್ಯದ ಇವಿಷ್ಟನ್ನು ವಿದ್ಯಾರ್ಥಿಗೆ ನೀಡಲಾಗುತ್ತದೆ. ಯೂನಿಟ್ನಲ್ಲಿ ವಿದ್ಯಾರ್ಥಿ ದಿನ ಬಿಟ್ಟು ದಿನ ಬ್ಯಾಟರಿಯನ್ನು ಚಾರ್ಜ್ ಮಾಡುವ ವ್ಯವಸ್ಥೆ. ಚಾರ್ಜರಿಗೆ ಬ್ಯಾಟರಿಯನ್ನು ಮಾತ್ರ ತಂದರಾಯಿತು.

ಒಮ್ಮೆ ಚಾರ್ಜ್ ಮಾಡಿದರೆ ಎಂಟು ಗಂಟೆ ಲ್ಯಾಂಪ್ ಉರಿಯಬಲ್ಲುದು. ಕೆಲವೊಮ್ಮೆ ವಯರ್ ಸರಿಯಾಗಿ ಸಂಪರ್ಕವಾಗದೆ ಚಾರ್ಜ್ ಆಗದಿರುವುದೂ ಇದೆ. 'ಲ್ಯಾಂಪ್ ಸರಿಯಿಲ್ಲ' ಎಂದು ಮಕ್ಕಳ ಹೆತ್ತವರು ತಕ್ಷಣದ ತೀರ್ಮಾನಕ್ಕೆ ಬರುತ್ತಾರೆ. 'ಇಂತಹ ಸಂದರ್ಭಗಳಲ್ಲಿ ಅಧ್ಯಾಪಕರು ಸಹಕರಿಸಿದರೆ ಸಮಸ್ಯೆ ಪರಿಹರಿಸಬಹುದು' ಎನ್ನುತ್ತಾರೆ ಘಟಕ ನಿರ್ವಹಣೆ ಮಾಡುವ ಸೆಲ್ಕೋದ ಸಂದೀಪ್.

ಒಂದು ಯೂನಿಟ್ ಸ್ಥಾಪನೆಗೆ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ವೆಚ್ಚ. ಬಹುತೇಕ ದಾನಿಗಳಿಂದ ಮೊತ್ತವನ್ನು ಭರಿಸಲಾಗುತ್ತದೆ. ವಿದ್ಯಾರ್ಥಿಗೆ ನೀಡುವ ಲ್ಯಾಂಪ್, ಚಾರ್ಜರ್ಗಳ ನಿರ್ವಹಣೆಗೆ ವರುಷಕ್ಕೆ ನೂರ ಐವತ್ತು ರೂಪಾಯಿ ಶುಲ್ಕ. ಉಚಿತ ಅಂದರೆ ಸಸಾರ ಅಲ್ವಾ! ಶುಲ್ಕ ಕೊಟ್ಟಾಗ 'ಇದು ನಮ್ಮದು' ಅಂತ ಭಾವ ಬಂದುಬಿಡುತ್ತದೆ. ಸಕಾರಣವಾಗಿ ಲ್ಯಾಂಪ್ ಹಾಳಾದರೆ ಹೊಸತನ್ನು ನೀಡುತ್ತಾರೆ.

'ಸೀಮೆಎಣ್ಣೆ, ಕ್ಯಾಂಡಲ್ಗಳಿಗೆ ವೆಚ್ಚ ಮಾಡುವುದಕ್ಕಿಂತ ವರುಷಕ್ಕೆ ಇಷ್ಟು ಸಣ್ಣ ಮೊತ್ತ ಹೊರೆಯಾಗದು. ರಜಾ ದಿನಗಳನ್ನು ಹೊರತು ಪಡಿಸಿದರೆ ದಿನಕ್ಕೆ ಐವತ್ತು ಪೈಸೆ ಕೂಡಾ ಬೀಳದು. ಮಕ್ಕಳ ಪಾಲಕರು ಇದಕ್ಕೆ ತಕರಾರು ಮಾಡದಿದ್ದರೂ, ತಕರಾರು ಮಾಡುವವರೇ ಒಂದಷ್ಟು ಮಂದಿ ಸಮಾಜದಲ್ಲಿ ಇದ್ದಾರಲ್ಲ..' ಜತೆಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಜಯಶಂಕರ ಶರ್ಮ ದನಿಗೂಡಿಸಿದರು.

'ಸವಣಾಲು ಶಾಲೆಯದು ಪ್ರಾತ್ಯಕ್ಷಿಕಾ ಘಟಕ. ಹಾಗಾಗಿ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸುತ್ತಿಲ್ಲ' ಎನ್ನುತ್ತಾರೆ ಸೆಲ್ಕೋ ಪೌಂಡೇಶನ್ನಿನ ಆನಂದ ನಾರಾಯಣ. ಲ್ಯಾಂಪನ್ನು ಬಳಸುವ ವಿದ್ಯಾರ್ಥಿಗಳಾದ ಶಿವರಾಂ, ತಸ್ರೀಫಾ, ಪಲ್ಲವಿ, ಪ್ರಜ್ಞಾ ಇವರನ್ನೆಲ್ಲಾ ಮಾತನಾಡಿಸಿದಾಗ 'ಈ ವರುಷ ನಮಗೆ ಮಾರ್ಕ್ ಹೆಚ್ಚು ಸಾರ್' ಎನ್ನುವಾಗ ಅವರ ಮುಖವರಳುತ್ತದೆ.

ಬಯಲು ಸೀಮೆಯಲ್ಲಿ ಸೋಲಾರ್ ಘಟಕಕ್ಕೆ ಉತ್ತಮ ಪ್ರತಿಕ್ರಿಯೆ. ವಿದ್ಯುತ್ತಿನಿಂದ ದೂರವಾದ ಹಳ್ಳಿಗಳೇ ಅಧಿಕ. ದೂರದೂರ ಹಂಚಿಹೋಗಿರುವ ಮನೆಗಳಿಂದಾಗಿ ನಿರ್ವಹಣೆ ತ್ರಾಸ. ಕೆಲವೆಡೆ ದುರ್ಬಳಕೆಯೂ ಆಗುತ್ತಿದೆ. ಲ್ಯಾಂಪ್ ಮಕ್ಕಳಿಗೆ ಸಿಗುವುದೇ ಇಲ್ಲ! ಪಾಲಕರು ಶೌಚಕ್ಕೆ, ಬೆಳಿಗ್ಗೆ ದನದ ಹಾಲು ಹಿಂಡಲು, ಅಡುಗೆ ಮಾಡಲು ಬಳಸುವವರೂ ಇದ್ದಾರೆ!

ಹಳ್ಳಿಗಳಲ್ಲಿದೆ, ಅಭಿವೃದ್ಧಿಯ 'ಬೀಜ'

ಅಭಿವೃದ್ಧಿ ಎಂದಾಕ್ಷಣ ಜೆಸಿಬಿ ಯಂತ್ರಗಳು ಕಣ್ಣ ಮುಂದೆ ಬರುತ್ತವೆ. ಜಲ್ಲಿ, ಸರಳುಗಳು, ಸಿಮೆಂಟ್.. ಇವೆಲ್ಲಾ ಅಭಿವೃದ್ಧಿಯ ಸರಕುಗಳು ಎಂದು ನಂಬುವ ದಿನಗಳು. ನಿಜಕ್ಕೂ ಗ್ರಾಮೀಣ ಭಾರತದ ಬದುಕಿನ ಕತ್ತಲೆಯನ್ನು ದೂರಮಾಡುವ 'ಶೈಕ್ಷಣಿಕ ಆಭಿವೃದ್ಧಿ'ಯತ್ತ ಲಕ್ಷ್ಯವಿಟ್ಟ ಸೆಲ್ಕೋ ಅಭಿನಂದನಾರ್ಹ ಅಂತ ಕಾಣುವುದಿಲ್ವೇ? ಎರಡು ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಕತ್ತಲನ್ನು ದೂರಮಾಡುವಂತಹ ಯೋಜನೆಗಳಲ್ಲೇ ಗ್ರಾಮೀಣ ಅಭಿವೃದ್ಧಿಯ ಬೀಜವಿದೆ.

ಸೀಮೆಎಣ್ಣೆ ದೀಪದ ಹೊಗೆಯನ್ನು ನಿತ್ಯ ನುಂಗುವ ಬೀದಿ ವ್ಯಾಪಾರಿಗಳಿಗೆ ಸೂರ್ಯನ ಬೆಳಕನ್ನು ಹಿಡಿದಿಟ್ಟು ಸೆಲ್ಕೋ ನೀಡುತ್ತಿದೆ. ಊರಲ್ಲೊಂದು ಯೂನಿಟ್. ಗಾಡಿ ವ್ಯಾಪಾರಸ್ಥರಿಗೆ ಲ್ಯಾಂಪ್. ಯೂನಿಟನ್ನು ನಿರ್ವಹಿಸುವ ವ್ಯಕ್ತಿ ಬ್ಯಾಟರಿಯನ್ನು ಚಾರ್ಜರ್ ಮಾಡಿ ಸಂಜೆ ವ್ಯಾಪಾರಸ್ಥರಿಗೆ ತಲಪಿಸಿದರೆ ಇಂತಿಷ್ಟು ಶುಲ್ಕ. ಇದರಿಂದಾಗಿ ಒಬ್ಬ ವ್ಯಕ್ತಿಗೆ ಉದ್ಯೋಗವೂ ಆಯಿತು, ಅಷ್ಟೂ ಬೀದಿ ವ್ಯಾಪಾರಸ್ಥರಿಗೆ ಬೆಳಕೂ ಆಯಿತು. ಜತೆಗೆ ಆರೋಗ್ಯವೂ ಕೂಡಾ. 'ಈಗಾಗಲೇ ಹಾಸನದಲ್ಲಿ ನೂರ ಇಪ್ಪತ್ತು ಮಂದಿ, ಕುಂದಾಪುರದಲ್ಲಿ ಎಪ್ಪತ್ತು, ಧಾರವಾಡದಲ್ಲಿ ಮೂವತ್ತು ಮಂದಿ ಬೀದಿ ವ್ಯಾಪಾರಸ್ಥರು ಸೀಮೆಎಣ್ಣೆ ಬುಡ್ಡಿ ಇಡದೆ ವರ್ಷಗಳೇ ಕಳೆಯಿತು' ಎನ್ನುತ್ತಾರೆ ಸಂದೀಪ್.

ಗ್ರಾಮೀಣ ಅಭಿವೃದ್ಧಿಯ ಕ್ರಾಂತಿಕಾರಿ ಹೆಜ್ಜೆಯಿಟ್ಟ ಕಾರಣದಿಂದಲೇ ಸೆಲ್ಕೋದ ಹರೀಶ್ ಹಂದೆಯವರಿಗೆ ಪ್ರಶಸ್ತಿ ಅರಸಿ ಬಂದಿದೆ. ಗ್ರಾಮೀಣ ಪ್ರದೇಶದವರಾದ ಅವರಿಗೆ ಗ್ರಾಮೀಣ ಭಾರತದ ಬದುಕಿನ ಸ್ಪಷ್ಟ ಚಿತ್ರಣವಿದೆ. ಹದಿನಾರು ವರುಷದ ಹಿಂದೆ ಶುರುವಾದ ಸೆಲ್ಕೋ ಆರಂಭದಲ್ಲಿ ಒಂದು ಸಾವಿರ ಮನೆಗಳಿಗೆ ಸೌರ ವಿದ್ಯುತ್ ಘಟಕವನ್ನು ಅಳವಡಿಸಿದ್ದರು. ಪ್ರಕೃತ ಕರ್ನಾಟಕ, ಕೇರಳ, ಗುಜರಾತ್.. ರಾಜ್ಯಗಳಲ್ಲಿ ಒಂದೂಕಾಲು ಲಕ್ಷ ಮನೆಗಳನ್ನು, ಮನಗಳನ್ನು ಸೂರ್ಯನ ಬೆಳಕು ಬೆಳಗಿಸುತ್ತದೆ.

ಸೆಲ್ಕೋದ 'ಕ್ರಿಯಾತ್ಮಕ ಸಂಶೋಧನಾ ವಿಭಾಗ'ವು ಹಳ್ಳಿಗಳತ್ತ ಮುಖ ಮಾಡಿದೆ. ಪರಿಣಾಮವಾಗಿ ಸೌರ ಶಕ್ತಿಯಿಂದ ಶುದ್ಧೀಕರಿಸಿದ ಕುಡಿನೀರು, ಡ್ರೈಯರ್, ಸುಧಾರಿತ ಅಡುಗೆ ಒಲೆ, ಗೃಹ ಬಳಕೆಯ ಉತ್ಪನ್ನಗಳ ಬಳಕೆ. 'ನಾನು ಸಂಸ್ಥೆ ಕಟ್ಟಿರುವುದು ಹಣ ಮಾಡಿ ಶ್ರೀಮಂತನಾಗುವ ಉದ್ದೇಶದಲ್ಲಲ್ಲ. ಹಣ ಮಾಡಲು ಬೇಕಾದಷ್ಟು ದಾರಿಗಳಿಲ್ವಾ. ನೈಸರ್ಗಿಕ ಬೆಳಕನ್ನು ಬಳಸಿ ಬದುಕಿನ ಕತ್ತಲೆಯಿಂದ ಬಡವರನ್ನು ಹೊರತರುವುದೇ ನನ್ನ ಉದ್ದೇಶ' ಅಂತಾರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಹರೀಶ್ ಹಂದೆಯವರ ಮನದ ಮಾತು.

'ಕೋಟಿಗಳಲ್ಲಿ ಬದುಕನ್ನು ಅಳೆಯುವ' ಕಾಲಮಾನದ ಪ್ರಸ್ತುತ ಕಾಲಘಟ್ಟದಲ್ಲಿ ಹಂದೆಯವರ ಮಾತು ಕ್ಲೀಷೆಯಾಗಿ ಕಂಡರೆ ಅದಕ್ಕೆ ಅವರ ಮಾತು ಕಾರಣವಲ್ಲ, ಗ್ರಾಮೀಣ ಭಾರತವನ್ನು ಕಾಣುವ, ಓದುವ ನಮ್ಮ ಬೌದ್ಧಿಕ ದಾರಿದ್ರ್ಯವೇ ಕಾರಣವಾಗಬಹುದು.

Monday, October 10, 2011

ಮಾಂಬಳದ ನೂರನೇ ಹೆಜ್ಜೆ

ನೋಡ್ತಾ.. ನೋಡ್ತಾ ಇದ್ದಂತೆ ನೂರು ವಾರ ಕಳೆಯಿತು. ಇದು ಮಾಂಬಳ ಅಂಕಣದ ನೂರನೇ ಕಂತು. 22 ನವೆಂಬರ್ 2009ರಂದು ಅಂಕಣದ ಆರಂಭ. ದಿಗಂತದ ಮಂಗಳೂರಿನ ವರಿಷ್ಠರು ಅಂಕಣದ ಪ್ರಸ್ತಾಪ ಮುಂದಿಟ್ಟಾಗ ಅಂಜುತ್ತಂಜುತ್ತಲೇ ಒಪ್ಪಿಕೊಂಡಿದ್ದೆ.


ಅಂಕಣ ಆರಂಭವಾಯಿತು. ಒಂದು ಬರೆಹ ಕಳುಹಿಸಿದಾಕ್ಷಣ ಮತ್ತೊಂದರ ಹುಡುಕಾಟ. ಒಂದು ವಾರವೂ ಬರೆಹ ತಪ್ಪಬಾರದು ಎಂಬ ಬದ್ಧತೆ ಹುಸಿಯಾಗಲಿಲ್ಲ. ಮಾಂಬಳದ ಲೇಖನ ಓದಿ ಸಾಕಷ್ಟು ಮಂದಿ ದೂರವಾಣಿ, ಮಿಂಚಂಚೆ ಪ್ರತಿಕ್ರಿಯೆ ನೀಡಿದ್ದಾರೆ. ದಿಗಂತದ ಶಿವಮೊಗ್ಗ ಆವೃತ್ತಿ ಆರಂಭವಾದ ಮೇಲಂತೂ ಮಿಂಚಂಚೆಗಳ ಸಂಖ್ಯೆ ಇಮ್ಮಡಿ. ಇದು ಹೊಸದಿಗಂತದ ಜನಪ್ರಿಯತೆ.


ಕನ್ನಡದ ಬೇರೆ ಬೇರೆ ಪತ್ರಿಕೆಗಳಲ್ಲಿ ವಿವಿಧ, ವೈವಿಧ್ಯ ಅಂಕಣಗಳಿವೆ. ಕೃಷಿ/ಗ್ರಾಮೀಣ ಬರೆಹಗಳೂ ಅಚ್ಚಾಗುತ್ತಿವೆ. ಆದರೆ ಕೃಷಿಗೇ ಸೀಮಿತವಾದ, ಸಾಪ್ತಾಹಿಕ ಕೃಷಿ ಅಂಕಣ ಆರಂಭಿಸಿ ಮುಂದುವರಿಸುತ್ತಿರುವುದು ದಿಗಂತದ ಹೆಮ್ಮೆ. ಅವಕಾಶ ಕೊಟ್ಟ ದಿಗಂತದ ಸಂಪಾದಕರಿಗೆ, ಎಲ್ಲಾ ಉಪಸಂಪಾದಕರಿಗೆ, ಓದುಗರಿಗೆ ಅಭಿನಂದನೆಗಳು.


ಮಾಂಬಳ - ಎಂದರೇನು? ಅಂಕಣಾರಂಭಕ್ಕೆ ಬಹುತೇಕರ ಪ್ರಶ್ನೆ. ಇದು ಹಳ್ಳಿ ಬದುಕಿನಲ್ಲಿ ಮರೆಯಾದ, ಮರೆಯಾಗುತ್ತಿರುವ ರುಚಿ. ಧಾವಂತದ ಬದುಕಿನಲ್ಲಿ ಈ ರುಚಿ ಮರೀಚಿಕೆ. ಹಳ್ಳಿಯ ಹಿರಿಯ ಅಮ್ಮಂದಿರ ಕೈಚಳಕದಲ್ಲಿ ಅಲ್ಲೋ ಇಲ್ಲೋ ಮಾಂಬಳ ಸಿದ್ಧವಾಗುತ್ತಿದೆ. ವಾರವಾರವೂ ಅಂಕಣದಲ್ಲಿ ಮಾಂಬಳ ಕಾಣಿಸಿಕೊಂಡಾಗ ರುಚಿಗೊತ್ತಿದ್ದ ಹಲವರಿಗೆ ನೆನಪಾಗದೆ ಇರದು.


ಮಾಂಬಳ ಅಂದರೆ ಕಾಡುಮಾವಿನ ಹಣ್ಣಿನ ರಸದ ಘನ ರೂಪ. ಮಾಡುವ ವಿಧಾನ : ಕಾಡು ಮಾವಿನ ಹಣ್ಣನ್ನು ತೊಳೆದು, ರಸವನ್ನು ಹಿಂಡಿ, ಅದನ್ನು ಬಿಸಿಲಿನಲ್ಲಿ ಒಣಗಿಸುವುದು. ಗೆರಸೆಯ (ಭತ್ತ, ಧಾನ್ಯ ಗೇರುವ) ಮೇಲೆ ಹತ್ತಿ ವಸ್ತ್ರವನ್ನು ಹಾಸಿ ಅದರ ಮೇಲೆ ರಸ ಎರೆಯಬೇಕು. ಮರುದಿವಸ ಹಣ್ಣಿನ ರಸವನ್ನು ಒಣಗಿದ ರಸದ ಮೇಲೆ ಪುನಃ ಎರೆಯುವುದು. ಹೀಗೆ ಹದಿನೈದು ದಿವಸದ ಲೇಯರ್. ಬಿಸಿಲಿನ ಸ್ನಾನದೊಂದಿಗೆ ಹದವಾದ ಘನ ವಸ್ತುವೇ ಮಾಂಬಳ.


ಪ್ರತಿ ಸಲ ಎರೆಯುವಾಗಲೂ ರುಚಿಗೆ ಸ್ವಲ್ಪ ಉಪ್ಪು ಸೇರಿಸಿ. ಬಿಸಿಲಿನಲ್ಲಿ ಒಣಗಿದಷ್ಟೂ ತಾಳಿಕೆ ಹೆಚ್ಚು. ಕೊನೆಗೆ ಮಾಂಬಳವನ್ನು ಕಟ್ ಮಾಡಿ. ಪುನಃ ಐದಾರು ದಿವಸದ ಬಿಸಿಲಿನ ಸ್ನಾನ. ನಂತರ ರೋಲ್ ಮಾಡಿ ಭದ್ರವಾಗಿ ತೆಗೆದಿಡಿ. ರೋಲ್ ಮಾಡುವ ಹೊತ್ತಿಗೆ ಉಪ್ಪಿನ ಹುಡಿಯನ್ನು ತೆಳುವಾಗಿ ಲೇಪಿಸಲು ಮರೆಯದಿರಿ - ಎಂಬ ಅನುಭವ ಹಂಚಿಕೊಳ್ಳುತ್ತಾರೆ ಸಜಂಕಬೆಟ್ಟಿನ (ದ.ಕ.) ಶಾರದಾ ಶರ್ಮ. ಮಾವಿನ ರುಚಿ ಸಿಹಿ-ಹುಳಿಯನ್ನು ಹೊಂದಿಕೊಂಡು ಮಾಂಬಳದ ರುಚಿ.


ಹದಿನೈದು ಲೇಯರ್ನಲ್ಲಿ ಸಿದ್ಧಗೊಂಡ ಮಾಂಬಳವು ಅರ್ಧ ಇಂಚು ದಪ್ಪವಾಗಿರುತ್ತದೆ. ಸರಿಯಾದ ಬಿಸಿಲಿನ ಸ್ನಾನದೊಂದಿಗೆ ಸಿದ್ಧವಾದ ಮಾಂಬಳವು ಒಂದು ವರುಷವಾದರೂ ಕೆಡದು. ತಂಪು ಪೆಟ್ಟಿಗೆಯಲ್ಲಿಟ್ಟರೆ ಬಾಳ್ವಿಕೆ ಹೆಚ್ಚು. ಕಾಡು ಮಾವಿನ ಹಣ್ಣಿನ ರಸ ದಪ್ಪವಾದಷ್ಟು ಒಳ್ಳೆಯದು. ತೆಳುವಾಗಿದ್ದರೆ ಒಣಗುವುದಿಲ್ಲ. ಗುಣಮಟ್ಟವೂ ಸಿಗುವುದಿಲ್ಲ. ಹೈಬ್ರಿಡ್ ಮಾವಿನ ಹಣ್ಣು ಕಾಡು ಮಾವಿನಷ್ಟು ರಸ ಬಿಟ್ಟುಕೊಡದ ಕಾರಣ ಮಾಂಬಳಕ್ಕೆ ಅಷ್ಟಕ್ಕಷ್ಟೇ.


ಐವತ್ತು ವರುಷದ ಹಿಂದೆ ಸೊಸೈಟಿಗೆ ಅಡಿಕೆ ಹಾಕುವ ಮಂದಿ ತಂತಮ್ಮ ಮನೆಯಲ್ಲಿ ಮಾಡಿದ ಮಾಂಬಳವನ್ನು ತಂದು ಅಲ್ಲಿನ ಸಿಬ್ಬಂದಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಹಳೆಯ ನೆನಪನ್ನು ಕೆದಕಿದರು ಸಜಂಕಬೆಟ್ಟು ಕೃಷ್ಣ ಶರ್ಮ.


ಶಾರದಾ ಶರ್ಮರು ಪ್ರತೀ ವರುಷ ಮಾಂಬಳ ಮಾಡುತ್ತಾರೆ. ಆಪ್ತೇಷ್ಟರಿಗೆ ಹಂಚುತ್ತಾರೆ. ಚಿಕ್ಕಚಿಕ್ಕ ಚೂರುಗಳನ್ನಾಗಿ ಮಾಡಿಟ್ಟುಕೊಂಡರೆ ಮಕ್ಕಳಿಗೆ ಚಾಕೊಲೆಟ್ನಂತೆ ಕೊಡಬಹುದು. ಮಕ್ಕಳು ಇಷ್ಟಪಡುತ್ತಾರೆ. ತೆಂಗಿನಕಾಯಿ ಹಾಕಿದ್ದು ಮತ್ತು ಹಾಕದೇ ಮಾಡುವ ಮಾಂಬಳದ ಗೊಜ್ಜು ಬಹಳ ರುಚಿ. ಬೆಳ್ತಿಗೆ ಅನ್ನಕ್ಕೆ ಒಳ್ಳೆಯ ಕಾಂಬಿನೇಶನ್.


ಕಾಡು ಮಾವಿನ ಹಣ್ಣಿನ ರಸದಿಂದ ಮಾಡಿದ ಕಾರಣ ಮಾಂಬಳ. ಹಲಸಿನ ಹಣ್ಣಿನದ್ದಾದರೆ ಅದು ಹಂಬಳ - ಎಂಬ ಹೊಸ ರುಚಿಯನ್ನು ಪರಿಚಯಿಸುತ್ತಾರೆ ಪಾಕತಜ್ಞೆ ದೈತೋಟದ ಜಯಕ್ಕ.

Tuesday, October 4, 2011

ನವರಾತ್ರಿಯ 'ಸುಂದರ'ನ ವೇಷ

ಸಂಜೆ ಆರರ ಸಮಯ. ಕಚೇರಿಯಲ್ಲಿದ್ದೆ. ಅಸಹ್ಯ ಉಡುಪಿನ 'ಪುರುಷ-ಪ್ರಕೃತಿ' ವೇಷಗಳ ಆಗಮನ. ಆಶ್ಲೀಲವಾದ ಮಾತುಗಳು. ಕಣ್ಣು ಮುಚ್ಚಿಕೊಳ್ಳುವ ವರ್ತನೆಗಳು. ವಾಕರಿಕೆ ತರುವ ಭಂಗಿಗಳು. ಐದು ರೂಪಾಯಿ ಕೈಗೆ ಕುಕ್ಕಿದೆ. ಟಾ ಟಾ ಮಾಡಿಕ್ಕೊಂಡು ಹೊರಟು ಹೋದುವು. ಇದು ನವರಾತ್ರಿ ವೇಷಗಳ ಸುಲಿಗೆಯ ಒಂದು ರೂಪ.

'ನಿಮ್ಮ ಪುಣ್ಯ ಮಾರಾಯ್ರೆ. ಆ ವೇಷಗಳು ಮೈಮೇಲೆ ಬಿದ್ದು ಕಿಸೆಗೆ ಕೈಹಾಕಿ ದೋಚುತ್ತವೆ' ಎಂದು ನೆರೆಯವರು ಅಂದಾಗ 'ಆ ಪ್ರಾರಬ್ಧ ನನಗಾಗಲಿಲ್ಲ, ಬದುಕಿದೆ' ಎಂದು ಸಮಾಧಾನ ಪಟ್ಟುಕೊಂಡೆ. ನವರಾತ್ರಿಯಲ್ಲಿ ಪ್ರತ್ಯಕ್ಷವಾಗುವ 'ದೋಚುವ ಪ್ರವೃತ್ತಿಯ ವೇಷಗಳಿಗೆ ಕಡಿವಾಣ ಹಾಕುವವರಿಲ್ಲವೇ' ಎಂಬ ಮಾಮೂಲಿ 'ಒಣಭಾಷೆ'ಯಲ್ಲಿ ಪತ್ರಿಕೆಗಳ 'ಸಂಪಾದಕರಿಗೆ ಪತ್ರ' ವಿಭಾಗಕ್ಕೆ ಬರೆಯಬಹುದಿತ್ತು. ಪ್ರಯೋಜನ?

ಈ ರೀತಿಯ ವೇಷಗಳ ಉದ್ದೇಶ ಹೊಟ್ಟೆಪಾಡು. ಸಮಯ ಕೊಲ್ಲುವ ಪ್ರಕ್ರಿಯೆ. ದೇವ-ದೇವತೆಯರ ವೇಷ ಹಾಕಿ ಅಸಹ್ಯ ಹುಟ್ಟಿಸುವ ವರ್ತನೆಗಳು ಎಷ್ಟು ಬೇಕು? ರಾಮ, ಕೃಷ್ಣ ವೇಷತೊಟ್ಟು ರಾಜಾರೋಷವಾಗಿ 'ಬೀಡಿ ಸೇದಿ ನಿರುಮ್ಮಳ'ವಾಗಿರುವವರು ಎಷ್ಟು ಬೇಕು? ಪುತ್ತೂರು ಪೇಟೆಯಲ್ಲಿ ಮೂರ್ನಾಲ್ಕು ದಿನಗಳಿಂದ ಮಹಿಷಾಸುರ, ಚಂಡ ಮುಂಡರ ಪ್ರವೇಶವಾಗಿದೆ! ಹುಲಿ, ಸಿಂಹ, ಕರಡಿಗಳು ಆರ್ಭಟಿಸುತ್ತಿವೆ! ಅವುಗಳಲ್ಲಿ ಕೆಲವು ಶಾಂತ, ಕೆಲವು ಘೋರ. ಇನ್ನೂ ಕೆಲವು ಭೀಭತ್ಸ!

ಇರಲಿ, ನವರಾತ್ರಿಯ ವೇಷ ಅಂದಾಗ ನನ್ನ ಹುಟ್ಟೂರಿನ ಸಮಾನ ಪ್ರಾಯದ ಸುಂದರ ನೆನಪಾಗುತ್ತಾನೆ. ನಾಲ್ಕನೇ ತರಗತಿಯ ತನಕ ಒಂದೇ ಅಧ್ಯಾಪಕರಲ್ಲಿ ಓದಿದವರು. ನಂತರ ಅವನು ಯಾಕೋ ಶಾಲೆಗೆ ಕೊಕ್. ಕೂಲಿ ಮಾಡಿ ಜೀವನ. ಅವನ ತಂದೆ ಮಾಂಕು. ನಮ್ಮಲ್ಲಿಗೆ ಆತ್ಮೀಯ. ಸೀಸನ್ನಿನಲ್ಲಿ ಕಾಡುಹಣ್ಣುಗಳನ್ನು ಎಲೆಯಲ್ಲಿ ಕಟ್ಟಿ ತಂದುಕೊಡುವಷ್ಟು, ಜೇನು ತುಪ್ಪವನ್ನು ಎಲೆಯ ದೊನ್ನೆಯಲ್ಲಿ ಹಿಡಿದು ತರುವಷ್ಟು ಆತ್ಮೀಯ.

ಮಾಂಕು ಮನೆಯಿಂದ ಹೊರಟರೆ ಸಾಕು, ಅವರನ್ನು ಕಾದು ಕುಳಿತುಕೊಳ್ಳುವ ಮಕ್ಕಳು ಅನೇಕ. ತೆಂಗಿನ ಹಸಿ ಮಡಲಿನಿಂದ ಗಾಳಿಪಟ, ಗಿಳಿಗಳನ್ನು ಸ್ಥಳದಲ್ಲೇ ತಯಾರು ಮಾಡಿ, ಡೆಮೋ ಕೊಟ್ಟು ಮಕ್ಕಳಿಗೆ ಫ್ರೀಯಾಗಿ ಹಂಚುತ್ತಿದ್ದರು. ದೊಡ್ಡ ಮರದಲ್ಲಿದ್ದ ಹಕ್ಕಿಗಳನ್ನೋ, ಹಣ್ಣನ್ನೋ ಹೊಡೆದುರುಳಿಸಲು ಸಲಕೆಯಿಂದ ಬಿಲ್ಲು-ಬಾಣಗಳನ್ನು ತಯಾರಿಸುತ್ತಿದ್ದರು.

ಸುಂದರ ಹಾಗಲ್ಲ. ಬಾಲ್ಯದಿಂದಲೇ ಕಲಾಪ್ರಿಯ. ಯಕ್ಷಗಾನದ ನಂಟೂ ಇತ್ತು. 'ಅವ ಸುಂದರನ ವೇಷ ಬತ್ತ್ಂಡ್ (ಸುಂದರ ವೇಷ ಪ್ರವೇಶವಾಯಿತು) ಎಂದು ಅವನ ಆಪ್ತರು ಮಲಗಿದ್ದವರನ್ನು ಎಬ್ಬಿಸುತ್ತಿದ್ದ ದೃಶ್ಯ ನೆನಪಾಗುತ್ತದೆ.

ದಿನಗಳು ಉರುಳುತ್ತಿತ್ತು. ನವರಾತ್ರಿ ಸಮಯ. 'ಇನಿ ಸುಂದರನ ಕೊರಗ ವೇಷ ಬರ್ಪುಂಡ್' (ಸುಂದರನ ಕೊರಗ ವೇಷ ಬರುತ್ತದೆ) ಮಕ್ಕಳಾಡಿಕೊಳ್ಳುತ್ತಿದ್ದರು. ಮಾಂಕು, ಸುಂದರ ಸನಿಹದ ಐದಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಳ್ಳೆಯ ಸಂಬಂಧ ಹೊಂದಿದ್ದರಿಂದಲೇ ಸುಂದರನ ಕೊರಗ ವೇಷಕ್ಕೆ ಅಷ್ಟೊಂದು ನಿರೀಕ್ಷೆ, ಜನಪ್ರಿಯತೆ.

ಅಂದು ಬೆಳಿಗ್ಗೆ ಸನಿಹದ ಪಯಸ್ವಿನಿ ನದಿಯಲ್ಲಿ ಮಿಂದು, ಶುಚಿರ್ಭೂತನಾಗಿ, ದೇವಾಲಯಕ್ಕೆ ಹೋಗಿ ಪ್ರಸಾದ ಸ್ವೀಕರಿಸಿದ ಬಳಿದ 'ಕೊರಗ ವೇಷಕ್ಕೆ ತಯಾರಿ' ಮಾಡುತ್ತಿದ್ದ. ಅವನ ಪಾಲಿಗೆ ಅದು ವೇಷವಲ್ಲ, ಹರಕೆ. ಅಲ್ಲಿರುವುದು ಭಯ-ಭಕ್ತಿ. ಮೈಯಲ್ಲೊಂದು ತುಂಡು ಬಟ್ಟೆ, ಕಾಯ ಪೂರ್ತಿ ಕೃಷ್ಣವರ್ಣ. ಶಿರದಲ್ಲೊಂದು ಪೂಗದ ಹಾಳೆಯ ಮುಟ್ಟಾಳೆ, ಅದರ ಎರಡೂ ಬದಿಗೆ ಹೂವಿನ ಗೊಂಚಲು, ಕೊರಳಲ್ಲಿ ಹೂವಿನ ಮಾಲೆ, ಕೈಯಲ್ಲೊಂದು ಕೊಳಲು, ಕಾಲಿಗೆ ಗೆಜ್ಜೆ.. ಇವಿಷ್ಟು ವೇಷದ ಪರಿಕರಗಳು.

ಆರಂಭದಲ್ಲಿ ದೇವಸ್ಥಾನದಲ್ಲಿ ಸೇವೆ. ನಂತರ ಆಪ್ತರ ಮನೆಗಳಿಗೆ ಭೇಟಿ. ಜೊತೆಗೆ ಮಾಂಕೂ ಇರುತ್ತಿದ್ದ. ಒಂದೈದು ನಿಮಿಷ ಕುಣಿದು, ಮನೆಯವರು ಕೊಟ್ಟ ಬಾಯಾರಿಕೆ-ತಿಂಡಿ ತಿನ್ನುತ್ತಾನೆ. ಜತೆಗೆ ಊರಿನ ಸುದ್ದಿಗಳ ವಿನಿಮಯ ಹಣ, ಭತ್ತ, ತರಕಾರಿಗಳನ್ನು ಚೀಲಕ್ಕೆ ಸೇರಿಸುತ್ತಿದ್ದಂತೆ ಸುಖ ದುಃಖ ವಿನಿಮಯ. ಮತ್ತೊಂದು ಮನೆಗೆ ಪ್ರಯಾಣ. ಹೀಗೆ ಸುಮಾರು ಐವತ್ತಕ್ಕೂ ಮಿಕ್ಕಿ ಮನೆಗಳ ಭೇಟಿ.

ಸುಂದರನ ವೇಷ ಬರುವಾಗ ನಮ್ಮ ನಗರದ ಮನೆಗಳಂತೆ ಯಾರೂ ಬಾಗಿಲು ಹಾಕುವುದಿಲ್ಲ. 'ಮನೆಯಲ್ಲಿ ಯಾರೂ ಇಲ್ಲ' ಅಂತ ಮಕ್ಕಳಲ್ಲಿ ಹೇಳಿಸುವುದಿಲ್ಲ. ನಾಣ್ಯವನ್ನು ಬಿಸಾಡುವುದಿಲ್ಲ. ಮುಕ್ತ ಸ್ವಾಗತ. ಒಂದು ವಾರದ ಕುಣಿತದ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ವೇಷ ಕಳಚಿ ಊರಿಗೆ ಮರಳಿದಲ್ಲಿಗೆ 'ಹರಕೆ' ಮುಗಿಯುತ್ತದೆ.

ನಮ್ಮ ತಾತನ ಕಾಲದಿಂದಲೇ 'ಕೊರಗ ವೇಷದ ಹರಕೆ' ಇದೆ. ನನಗೆ ಪ್ರಾಯವಾಯಿತು. ಈಗ ನನ್ನ ಮಗ ಮಾಡ್ತಾನೆ. ಅವನ ನಂತರ ಯಾರೆಂಬುದು ಅವನೇ ನಿರ್ಧಾರ ಮಾಡ್ತಾನೆ' ಎಂದು ಇಳಿ ವಯಸ್ಸಿನ ಮಾಂಕು ಹೇಳಿದ್ದರು.
ಮಾಂಕು ಇದನ್ನೆಂದೂ ಹೊಟ್ಟೆಪಾಡಿನ ವೃತ್ತಿಯನ್ನಾಗಿ ಮಾಡಿಕೊಂಡಿಲ್ಲ. ನಂತರದ ದಿನಗಳಲ್ಲಿ ಸುಂದರ 'ಕರಡಿ, ಹುಲಿ' ಅಂತ ವೇಷಾಂತರವಾಗಿದ್ದ. ಆಗಲೂ 'ಸುಂದರನ ಕೊರಗ' ವೇಷದ ಬದಲಿಗೆ 'ಸುಂದರನ ಕರಡಿ' ಎಂದು ಜನರೇ ಹೆಸರನ್ನು ಬದಲಾಯಿಸಿದ್ದರು.

ಈಚೆಗೊಮ್ಮೆ ಸಿಕ್ಕಿದ್ದ. 'ನವರಾತ್ರಿ ಬಂತಲ್ವಾ ಮಾರಾಯ. ವೇಷ ಇಲ್ವಾ' ಕೇಳಿದೆ. 'ತಂದೆಯವರ ನೆನಪಿಗಾಗಿ ಒಂದು ದಿವಸ ಕೊರಗ ವೇಷ ಹಾಕ್ತೇನೆ' ಎಂದಿದ್ದ. ನಂತರ ಹೊಟ್ಟೆಪಾಡಿಗಾಗಿ ಕರಡಿಯನ್ನು ಆವಾಹಿಸಿಕೊಳ್ಳುತ್ತಾ ಪುತ್ತೂರಿಗೂ ಬರುವುದುಂಟಂತೆ. ಅವನ ವೇಷವನ್ನು ನೋಡಲು ಕಾಯುತ್ತಿದ್ದೇನೆ!

ಸುಂದರನಂತೆ ಮತ್ತೂ ಒಂದಿಬ್ಬರು ಹಿರಿಯರು ಕೊರಗ ವೇಷ ಧರಿಸುತ್ತಿದ್ದರು. ಹರಕೆಯ ಭಯ-ಭಕ್ತಿಯ ಹಿನ್ನೆಲೆಯಲ್ಲಿ ಇವು ರೂಪುಗೊಳ್ಳುತ್ತವೆ. ಇದರಲ್ಲಿ ಆರಾಧನೆಯ ಉದ್ದೇಶವಿದೆ. ಸಾಮಾಜಿಕವಾದ ಸ್ಪಂದನವಿದೆ. ಯಾರೂ ಕೂಡಾ ಜಾತಿ ಎತ್ತಿ ಮಾತನಾಡಿದ್ದನ್ನು ನಾನು ನೋಡಿಲ್ಲ. ಗೇಲಿ ಮಾಡಿದ್ದಿಲ್ಲ. ಬದುಕಿನ ಪಥದಲ್ಲಿ ಹಾದುಹೋಗುವ ಇಂತಹ ಕ್ಷಣಗಳನ್ನು ಪ್ರಶ್ನಿಸುವ, ಪೋಸ್ಟ್ಮಾರ್ಟಂ ಮಾಡುವ, ಅಡ್ಡಮಾತುಗಳಿಂದ ವಿಮರ್ಶಿಸುವ ಪ್ರವೃತ್ತಿ ಎಲ್ಲಿಂದ ಆರಂಭವಾಯಿತೋ; ಅಲ್ಲಿಂದ ವೇಷಗಳ, ಬದುಕಿನ ಅರ್ಥಗಳಿಗೆ ಕ್ಷೀಣನೆ. ಇದನ್ನೇ 'ಬೌದ್ಧಿಕ ಅಭಿವೃದ್ಧಿ' ಎಂದು ನಂಬಿದ್ದೇವೆ.

ಈಗಿನ ಸ್ಥಿತಿಗೆ ಅಂದಿನ ಬದುಕನ್ನು ಸಮೀಕರಿಸೋಣ. ಯಾವುದೇ ವೇಷ ತೊಡಿ. ಅಲ್ಲೆಲ್ಲಾ ಜಾತಿ, ಧರ್ಮದ ಲೇಪ ಅಂಟಿಕೊಳ್ಳುತ್ತದೆ. ರಾಜಕೀಯ ಸ್ಪರ್ಶವಿರುವ ಮಂದಿಯ ಪ್ರವೇಶವಾಗುತ್ತದೆ. ದಿಢೀರ್ ಸಮಾಜ ಸುಧಾರಕರು ಸೃಷ್ಟಿಯಾಗುತ್ತಾರೆ. 'ಜಾತಿ ನಿಂದನೆ, ವ್ಯಕ್ತಿ ನಿಂದನೆ' ಎನ್ನುವ ಹೊಸ ಅವತಾರದ ಆರೋಪಗಳು ರಾಚುತ್ತವೆ. ಇವುಗಳ ಮಧ್ಯೆ ನಿಜವಾದ 'ನವರಾತ್ರಿ ವೇಷ'ದ ಹಿಂದಿನ ಭಾವನೆಗಳು, ಭಕ್ತಿಗಳು ನುಣುಚಿಹೋಗುತ್ತವೆ. ಇದಕ್ಕೆ ಕಾಲದ ಬದಲಾವಣೆ ಎನ್ನಬೇಕೋ, ಕಾಲವೇ ನಮ್ಮನ್ನು ಬದಲಿಸಿತು ಎಂದು ನಂಬೋಣವೋ?

Monday, October 3, 2011

ಇಲ್ಲಿ ತರಕಾರಿ, ಹವಾಯ್ಯಲ್ಲಿ 'ಕಳೆ'!

ಕರಾವಳಿಯ ಅಡುಗೆಗಳಲ್ಲಿ ತೊಂಡೆಕಾಯಿ ವ್ಯಾಪಕ. ಗೇರುಬೀಜ ಸೇರಿಸಿದ ಅದರ ಪಲ್ಯ, ಕಾಯಿಹುಳಿ, ಎಳೆಯದ್ದರ ಉಪ್ಪಿನಕಾಯಿ.. ಹೀಗೆ ಹಲವು. ತೊಂಡೆಯನ್ನೇ ಕೃಷಿ ಮಾಡುವ ಕೃಷಿಕರೂ ಧಾರಾಳ. ಬೇಡಿಕೆ, ಮಾರುಕಟ್ಟೆಯೂ ಚೆನ್ನಗಿದೆ. ಇದು ಕನ್ನಾಡಿನ ಕತೆ.

ಅತ್ತ ಹವಾಯ್ಯಲ್ಲಿ ತೊಂಡೆಕಾಯಿ ಕಳೆ! ಅದನ್ನು ಕಂಡರೆ ಸಾಕು, ಯಾಕೋ ಅಲರ್ಜಿ! ರೌಂಡ್ಅಪ್ ಎಂಬ ವಿಷವನ್ನು ಸಿಂಪಡಿಸಿ ಸಮೂಲ ನಾಶಮಾಡುತ್ತಾರೆ. 'ಅದು ತಿನ್ನಲು ಬರುತ್ತದೆ' ಎಂದು ಗೊತ್ತಿಲ್ಲ. ಮೂರ್ನಾಲ್ಕು ತಿಂಗಳ ಹಿಂದೆ ಕರಾವಳಿಗೆ ಬಂದಿದ್ದ ಹವಾಯಿಯ ಹಣ್ಣು ಕೃಷಿಕ ಕೆನ್ಲವ್ ತೊಂಡೆಯ ಖಾದ್ಯವನ್ನು ಸವಿದು, 'ನಮ್ಮೂರಲ್ಲಿ ಇದನ್ನು ನಾಶ ಮಾಡದಂತೆ ಕೃಷಿಕರಿಗೆ ಹೇಳುತ್ತೇನೆ' ಎಂದಿದ್ದರು.

ಈಚೆಗೆ ಹಿರಿಯ ಪತ್ರಕರ್ತ 'ಶ್ರೀ' ಪಡ್ರೆಯವರು ಹವಾಯಿ ದ್ವೀಪ ಸಮೂಹವನ್ನು ಸಂದರ್ಶಿಸಿದ್ದರು. ಅಲ್ಲಿನ ಹಣ್ಣು ಬೆಳೆಗಾರರ ಸಂಘವು ತಮ್ಮ ವಾರ್ಷಿಕ ಸಮಾವೇಶಕ್ಕೆ ಪಡ್ರೆಯವರನ್ನು ಕರೆಸಿ ದಿಕ್ಸೂಚಿ ಭಾಷಣ ಮಾಡಿಸಿತ್ತು. ಭಾರತದ ಹಣ್ಣುಗಳ ಪರಿಚಯ, ಮೌಲ್ಯವರ್ಧನೆಯತ್ತ ಬೆಳಕು. 'ಮುಂದಿನ ಸಮಾವೇಶಕ್ಕೆ ನೀವು ಕರೆಸಿಕೊಳ್ಳುವುದಿದ್ದರೆ, ಅದಕ್ಕಿಂತ ಮುಂಚೆ ನಿಮ್ಮ ಊಟದ ಬಟ್ಟಲಿಗೆ ತೊಂಡೆಕಾಯಿ ಬರಲಿ' ಎಂದು ಹಾರೈಸಿದ್ದರಂತೆ! ಅವರ ಪ್ರವಾಸ ಅನುಭವದ ಕೆಲವು 'ಝಲಕ್' ಇಲ್ಲಿದೆ.

ಹವಾಯ್ಯಲ್ಲಿ ಅರ್ಧ ಎಕರೆಯಿಂದ ಐದು ಎಕರೆ ತನಕ ಕೃಷಿ ಭೂಮಿ ಹೊಂದಿದ ಕೃಷಿಕರಿದ್ದಾರೆ. ಬಹುತೇಕರ ಕೃಷಿ ಹಣ್ಣು. ಕೃಷಿಕರೇ ವ್ಯಾಪಾರಿಗಳು. ಫಾರ್ಮರ್ಸ್ ಮಾರ್ಕೆಟ್ನಲ್ಲಿ ವ್ಯಾಪಾರ ಮಾಡುವ ವಸ್ತುಗಳಿಗೆ ಧಾರಣೆಯನ್ನು ಬೆಳೆದವರೇ ನಿಗದಿ ಮಾಡುತ್ತಾರೆ.
ಹಣ್ಣುಗಳ ವೈವಿಧ್ಯವೇ ಹವಾಯಿಗಳ ಬಂಡವಾಳ. ಹವಾಮಾನ ವ್ಯತ್ಯಾಸದಿಂದಾಗಿ ಒಂದೇ ದೇಶದಲ್ಲಿ ಬೇರೆ ಬೇರೆ ನಮೂನೆಯ ಭೌಗೋಳಿಕ ಸ್ಥಿತಿ. ಹಾಗಾಗಿ ವರುಷದ ಉದ್ದಕ್ಕೂ ವೈವಿಧ್ಯದ ಹಣ್ಣುಗಳು ಲಭ್ಯ. ಬೆಳೆಯುವಷ್ಟು ಪ್ರಮಾಣದಲ್ಲಿ ಮೌಲ್ಯವರ್ಧನೆ ಆಗುತ್ತಿಲ್ಲ.

ಚಿಕ್ಕ ಚಿಕ್ಕ ಯಂತ್ರಗಳ ಬಳಕೆ ಹೆಚ್ಚು. ಹಣ್ಣುಗಳನ್ನು, ಸಾಮಗ್ರಿಗಳನ್ನು ಅತ್ತಿತ್ತ ಒಯ್ಯಲು ತಲೆಹೊರೆ ಬದಲಿಗೆ ಮಡಚು ಕೈಗಾಡಿಗಳು. ಹಣ್ಣು ಕೊಯ್ಯಲು ಉದ್ದನೆಯ ಕೊಕ್ಕೆ. ಅದು ಹಣ್ಣನ್ನು ಕೊಯಿದು, ಅಲ್ಲೇ ಹಿಡಿದಿಟ್ಟುಕೊಳ್ಳುತ್ತದೆ. ಕೆಳಗೆ ಬಿದ್ದು ಹಾಳಾಗದು.
'ನಾನು ವಿಮಾನ ಇಳಿಯುತ್ತಿದ್ದಂತೆಯೇ ನಿಲ್ದಾಣದ ಸುತ್ತ ತೆಂಗಿನಮರಗಳನ್ನು ನೋಡಿದೆ' ಎನ್ನುತ್ತಾರೆ ಪಡ್ರೆ. ತೆಂಗಿನಮರಗಳ ಸಾಕಣೆ ಅಲಂಕಾರಿಕವೂ ಹೌದು, ಕೃಷಿಯೂ ಹೌದು. ವಸತಿಗೃಹಗಳಲ್ಲಿ ಲೋಶನ್, ಸಾಬೂನು, ಎಣ್ಣೆ.. ಹೀಗೆ ಹಲಸು ತೆಂಗಿನ ಉತ್ಪನ್ನಗಳು. ತೆಂಗಿನ ಕಾಯಿಯ ಸಿಪ್ಪೆ ತೆಗೆಯಲು ಅಲ್ಲಿಯವರಿಗೆ ಗೊತ್ತಿಲ್ಲ! ನಮ್ಮೂರಿನ ತೆಂಗಿನ ಸುಲಿ ಸಾಧನ ಹವಾಯ್ಯಲ್ಲಿ ಕ್ಲಿಕ್ ಆಗಬಹುದೋ ಏನೋ!

ಗೋಸಂಪಿಗೆ ಹೂವು ಪ್ರತಿಷ್ಠೆಯ ದ್ಯೋತಕ. ಕಿವಿಯಲ್ಲಿ ಹೂವನ್ನಿಟ್ಟುಕೊಳ್ಳುವುದು, ಮಾಲೆ ಧರಿಸಿಕೊಳ್ಳುವುದು, ಹೂವಿನಂತಹ ರಚನೆಯ ಕಿವಿ ಆಭರಣ..ಗಳು ಜನಪ್ರಿಯ. ಅದನ್ನು ಬೆಳೆಯುವುದು, ಗಿಡಗಳನ್ನು ಹಂಚುವುದು ಪ್ರೀತಿ. ಹೂವನ್ನು ಬಲಕಿವಿಯಲ್ಲಿಟ್ಟರೆ ಅವಿವಾಹಿತೆ, ಎಡಕಿವಿಯಲ್ಲಿಟ್ಟರೆ ವಿವಾಹಿತೆ ಎಂಬರ್ಥವೂ ಇದೆಯಂತೆ.

ನಮ್ಮೂರಿನಲ್ಲಿದ್ದಂತೆ 'ಆಸ್ತಿ ಮಾರಾಟಕ್ಕಿದೆ' ಎಂಬ ಫಲಕಗಳು ಕಾಣಸಿಗುತ್ತವೆ! ಭೂಮಿಯ ಬೆಲೆ ಏರುತ್ತಿದೆ! ಕಾರ್ಮಿಕ ಸಮಸ್ಯೆ ಮತ್ತು ರೋಗಬಾಧೆಯಿಂದಾಗಿ ಮುಖ್ಯ ಆರ್ಥಿಕ ಉತ್ಪನ್ನ ಕಾಫಿಗೆ ಕುತ್ತು. 'ವೈವಿಧ್ಯತೆಯಿಲ್ಲದೆ ಬದುಕಿಲ್ಲ' ಎಂದರಿತ ಹಣ್ಣು ಕೃಷಿಕ ಕೆನ್ಲವ್, ಕೃಷಿಕರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕಾಫಿಯನ್ನು ಮಾತ್ರ ನೆಚ್ಚಿಕೊಂಡರೆ ಸಾಲದು, ಜತೆಗೆ ವರ್ಷಪೂರ್ತಿ ಸಿಗುವ ಹಣ್ಣುಗಳ ಕೃಷಿಯತ್ತ ಕೃಷಿಕ ಒಲವನ್ನು ಪರಿವರ್ತಿಸಿದ ಸಾಹಸಿ.

ಒಂದು ತೆಂಗಿನ ಮರವೇರಿ ಕಾಯಿ ಕೊಯ್ಯಲು, ಮರವನ್ನು ಟ್ರಿಂ ಮಾಡಲು ಒಬ್ಬನಿಗೆ ಗಂಟೆಗೆ ಹತ್ತು ಡಾಲರ್ ಸಂಬಳ. ದಿವಸಕ್ಕೆ ನೂರು ಡಾಲರ್ ಸಂಪಾದನೆ ಮಾಡುವ ತಜ್ಞರೂ ಇದ್ದಾರೆ. ಪ್ರವಾಸಿಗರಿಗೆ ಬೇಕಾದಂತೆ ಆಹಾರ ಉದ್ಯಮ ಅಭಿವೃದ್ಧಿಯಾಗಿದೆ. ಮನೆಮನೆಗಳಲ್ಲಿ ಮೌಲ್ಯವರ್ಧಿತ ಉತ್ಪನ್ನಗಳು ತಯಾರಾಗುತ್ತಿವೆ. ಕೆನ್ಲವ್ ದಂಪತಿಗಳು ನೂರೈವತ್ತಕ್ಕೂ ಮಿಕ್ಕಿ ಉತ್ಪನ್ನಗಳನ್ನು ಸಿದ್ಧಪಡಿಸುತ್ತಾರೆ.

ವಿಶ್ರಾಂತ ಜೀವನವನ್ನು ಕಳೆಯಲು ಬರುವವರ ಸಂಖ್ಯೆ ಹೆಚ್ಚು. ಹಾಗಾಗಿ ಪ್ರವಾಸೋದ್ಯಮ ದೊಡ್ಡ ರೀತಿಯಲ್ಲಿ ಬೆಳೆದಿದೆ, ಬೆಳೆಯುತ್ತಿದೆ. ನೈಸರ್ಗಿಕ ಸಂಪತ್ತನ್ನು ಸಮರ್ಥವಾಗಿ ಬಳಸಿಕೊಂಡ ದೇಶವದು. ಅಗ್ನಿಪರ್ವತ ಕಂಡರೆ ಬೆಚ್ಚಿ ಬೀಳುವುದಿಲ್ಲ. ಅದು ಅವರಿಗೆ ಸಹ ಜೀವಿ.

ಆಸಕ್ತರಿಗೆ ಜಾಲತಾಣ : www.hawaiitropicalfruitgrowers.org, www.hawaiifruit.net