ಒಂದು ಕಾಲಘಟ್ಟದಲ್ಲಿ ಐವತ್ತಕ್ಕೂ ಮಿಕ್ಕಿ ಸದಸ್ಯರು ಓಡಾಡಿಕೊಂಡಿದ್ದ ಹಿರಿಮನೆಯದು. ಏನಿಲ್ಲವೆಂದರೂ ಐವತ್ತೆಕರೆ ಕೃಷಿ ಭೂಮಿ. ಅದರಲ್ಲಿ ಮೂವತ್ತರಷ್ಟು ಅಡಿಕೆ. ನಿತ್ಯ ಹತ್ತಿಪ್ಪತ್ತು ಮಂದಿ ಅತಿಥಿಗಳಿಗೆ ಅನ್ನ ದಾಸೋಹ. ಹತ್ತಿರದ ಸರಕಾರಿ ಶಾಲೆಯಲ್ಲಿ ಶಿಕ್ಷಣ. ಹಳ್ಳಿ ಬದುಕು.
ಕಾಲ ಸರಿಯಿತು. ಶಿಕ್ಷಣಕ್ಕಾಗಿ ನಗರ ಸೇರಿದವರು ಮತ್ತೆ ಹಳ್ಳಿಯತ್ತ ನೋಡಿಲ್ಲ. ಈಗ ಆ ಮನೆಯಲ್ಲಿರುವುದು ಇಬ್ಬರೇ. ಯಜಮಾನರಿಗೆ ಅರುವತ್ತು ದಾಟಿತು. ಯಜಮಾನ್ತಿಗೆ ನಲವತ್ತೋ, ಐವತ್ತೋ ಅಷ್ಟೇ. ಒಬ್ಬನೇ ಮಗ. ಮತ್ತೊಬ್ಬಳು ಮಗಳು.
ಅಳಿಯನೊಂದಿಗೆ ಮಗಳು ಮುಂಬಯಿ ಸೇರಿ ಅದೆಷ್ಟೋ ವರುಷವಾಗಿತ್ತು. ಮಗ ಬೆಂಗಳೂರಿನಲ್ಲಿ ಲಕ್ಷ ಎಣಿಸುವ ಹುದ್ದೆಯಲ್ಲಿದ್ದಾನೆ. ಅಪ್ಪನ-ಅಮ್ಮನ ಮೇಲಿನ ಭಕ್ತಿ, ಕಲಿತ ಊರೆಂಬ ಅಭಿಮಾನದಿಂದ 2-3 ತಿಂಗಳಿಗೊಮ್ಮೆ ತಂಪು ಕಾರಲ್ಲಿ ಭರ್ರನೆ ಬಂದು ಇದ್ದು ಹೋಗುವವನು.
ಮಗನಿಗೆ ವಯಸ್ಸಾಯಿತು. ಮದುವೆಯಾಗಿಲ್ಲ ಎಂಬ ಚಿಂತೆ. ಮದುವೆಯಾಗುವುದಿದ್ದರೂ ಹಳ್ಳಿ ಮನೆಯಲ್ಲಾಗಬೇಕೆಂಬ ಪಟ್ಟು. ಮಗನ ಸಮ್ಮತಿ. ಹುಡುಗಿಯ ಆಯ್ಕೆಯ ಹೊಣೆಯನ್ನು ಮಗನಿಗೆ ವಹಿಸಿಕೊಟ್ಟಿದ್ದರು. ಯೋಗ ಕೂಡಿ ಬಂತು. ಮದುವೆಯ ದಿವಸ ನಿಶ್ಚಯವಾಯಿತು.
'ಹಳ್ಳಿ ಮನೆಯಲ್ಲೇ ಮದುವೆ. ಯಾವ ಸಿದ್ದತೆಯನ್ನೂ ಮಾಡಬೇಡಿ. ನಾನೇ ಊರಿಗೆ ಬಂದು ಮಾಡುತ್ತೇನೆ' ಎಂದಿದ್ದ ಮಗ. ಮದುವೆಗಿನ್ನು ಮೂರೇ ದಿವಸ. ಏನು ಮಾಡೋಣ. ಯಜಮಾನ್ರಿಗೆ ಕೈಕೈ ಹಿಸುಕುವುದೊಂದೇ ದಾರಿ. ಸರಿ, ಮದುವೆಗೆ ಎರಡು ದಿವಸದ ಮುನ್ನ ಮದುಮಗ ಹಾಜರ್.
'ಎರಡು ದಿವಸದಲ್ಲಿ ಏನು ಮಾಡೋಣ. ಯಾವ ಕೆಲಸವೂ ಆಗಿಲ್ಲ', ಅಪ್ಪನ ಒತ್ತಡ ನೋಡಿ 'ನೀವು ಆರಾಮ ಇರಿ. ನೋಡ್ತಾ ಇರಿ, ಏನೇನು ಮಾಡ್ತೇನೆ ಅಂತ' ಅಪ್ಪನಿಗೆ ಸಮಾಧಾನ.
ನಾಳೆಯೇ ಮದುವೆ. ಮದುಮಗ ನಿರಾಳ. ಅವರಪ್ಪನಿಗೆ ಗಡಿಬಿಡಿ. ಅಮ್ಮನಿಗೆ ಅಂಜಿಕೆ. ಮಧ್ಯಾಹ್ನದ ಹೊತ್ತು. 'ಕ್ಷಿಪ್ರಮಾಂಗಲ್ಯ' ಎಂಬ ಫಲಕ ಅಂಟಿಸಿಕೊಂಡ ಲಾರಿಯೊಂದು ಮನೆ ಮುಂದೆ ನಿಂತಿತು. ಅದರಿಂದ ಶಾಮಿಯಾನ, ಚಯರ್, ಮದುವೆ ಮಂಟಪ, ಅಡುಗೆಗೆ ಬೇಕಾದ ಎಲ್ಲವೂ ಅನ್ಲೋಡ್ ಆದುವು.
ನೋಡು ನೋಡುತ್ತಿದ್ದಂತೆ ಮನೆ ಮುಂದೆ ಚಪ್ಪರ ಎದ್ದಿತು. ಅಡುಗೆ ಮನೆ ಸಿದ್ಧವಾಯಿತು. ಮದುವೆ ಮಂಟಪ ಅಲಂಕೃತವಾಗುತ್ತಾ ಇತ್ತು. ವಿದ್ಯುತ್ ಝಗಮಗ ಉರಿಯಲು ಆರಂಭವಾಯಿತು. 'ನಾಳೆ ಹನ್ನೊಂದು ಗಂಟೆಗೆ ಧಾರಾಮುಹೂರ್ತ. ಬೆಳಿಗ್ಗೆಯೇ ಬಂದುಬಿಡ್ತೇನೆ' ಎಂಬ ಅಭಯ ವಾಕ್ಯ 'ಕ್ಷಿಪ್ರ ಮಾಂಗಲ್ಯ'ದ ದನಿಯದು. 'ಸಮಯಕ್ಕೆ ಬಂದುಬಿಡಿ, ಇನ್ನೂರು ಜನರನ್ನು ಕರೆತನ್ನಿ. ಹತ್ತಿಪ್ಪತ್ತು ಮಂದಿ 'ಪಾಂಡಿತ್ಯ'ವುಳ್ಳ ಪುರೋಹಿತರೂ ಇರಲಿ. ಮಂತ್ರ ಘೋಷ ಬೇಕಲ್ವಾ.. ಫೋಟೋ, ವೀಡಿಯೋ ಎಲ್ಲಾ ನಿಮ್ಮದೆ' ಅಂತ ಮದುಮಗ ಲಿಸ್ಟ್ ನೀಡಿದ. ಮನೆಯ ಪಡಸಾಲೆಯಲ್ಲಿ ವೀಳ್ಯ ಮೆಲ್ಲುತ್ತಾ ಕ್ಷಿಪ್ರ ವ್ಯವಸ್ಥೆಯನ್ನು ವೀಕ್ಷಿಸುತ್ತಿರುವ ಯಜಮಾನರಿಗೆ ದಂಗು. ಮಗನ ಕರಾಮತ್ತು ನೋಡಿ ಮನದಲ್ಲೇ ಖುಷಿ!
ಮದುವೆ ದಿನ. ಬೆಳ್ಳಂಬೆಳಿಗ್ಗೆ 'ಕ್ಷಿಪ್ರ ಮಾಂಗಲ್ಯ'ದ ಬಸ್ ಆಗಮಿಸಿತು. ಇಪ್ಪತ್ತು ಮಂದಿ ಪುರೋಹಿತರು. ಇಪ್ಪತ್ತೈದು ಮಂದಿ ಸಾಲಂಕೃತ ಮಹಿಳೆಯರು. ಜತೆಗೆ ಗಟ್ಟಿಮೇಳದ ಗಟ್ಟಿ ಸೆಟ್. 'ಹನ್ನೊಂದು ಗಂಟೆಗೆ ಇನ್ನೂರು ಮಂದಿ ರೆಡಿ' ಎನ್ನುತ್ತಾ ಮಾಂಗಲ್ಯ ಹೊರಟು ಹೋಯಿತು.
ಮೊದಲೇ ನಿಶ್ಚಯವಾದಂತೆ ಸಮಯಕ್ಕೆ ಸರಿಯಾಗಿ 'ವಧುವಿನ ದಿಬ್ಬಣ' ಆಗಮನ. (ವರನ ದಿಬ್ಬಣ ವಧುವಿನ ಮನೆಗೆ ಹೋಗುವುದು ಸಂಪ್ರದಾಯ) ಸ್ವಾಗತ, ಉಪಾಹಾರ. ಎಲ್ಲವೂ 'ಮಾಂಗಲ್ಯ'ದ ವ್ಯವಸ್ಥೆ. ಧಾರಾಮುಹೂರ್ತವೂ ಆಯಿತು. ಮಧ್ಯಾಹ್ನ ಭರ್ಜರಿ ಭೋಜನ. ತೆರಳುವವರ ಕೈಗೆ ಒಂದೊಂದು ಸಿಹಿ ತಿಂಡಿಗಳ ಪೊಟ್ಟಣ. ಮದುಮಗನಿಗೆ ಲಕ್ಷ ಸಂಪಾದನೆಯಲ್ವಾ!
ಸಂಜೆಯಾಗುತ್ತಿದ್ದಂತೆ ಮದುಮಗನಿಗೆ ಟೆನ್ಶನ್. 'ಅಪ್ಪಾ, ನಾಳೆನೇ ಡ್ಯೂಟಿಗೆ ಸೇರಬೇಕು. ಇಂದು ರಾತ್ರಿ ಹೋಗುತ್ತಿದ್ದೇವೆ' ಎನ್ನಬೇಕೆ. ರಾಯರಿಗೆ ಆಕಾಶವೇ ಕಳಚಿದ ಅನುಭವ. ಏನು ಮಾಡೋಣ. ಮಾತನಾಡುವಂತಿಲ್ಲ. ಸಂಜೆ 'ಕ್ಷಿಪ್ರ ಮಾಂಗಲ್ಯ'ದ ಯಜಮಾನ ಬಂದು ಲೆಕ್ಕ ಚುಕ್ತಾ ಮಡುತ್ತಿದ್ದಂತೆ, ಮುನ್ನಾ ದಿನ ಹೇಗೆ ಮದುವೆ ಮನೆ ತೆರೆದುಕೊಂಡಿತ್ತೋ, ಅಷ್ಟೇ ವೇಗವಾಗಿ ಪ್ಯಾಕ್ಅಪ್ ಆಗಿ ಲಾರಿಗೆ ಲೋಡ್ ಆಗಿತ್ತು. ಸಂಜೆ ಹೊತ್ತಿಗೆ ಮಗ, ಸೊಸೆ ಮತ್ತು ಉಳಿದ ಮಂದಿ ಕಾರಲ್ಲಿ ಹೊರಟು ಹೋದ ಮೇಲೆ, ಮೇಲೆದ್ದ ಧೂಳಿನಲ್ಲಿ ಮದುಮಗನ ಅಪ್ಪ ತನ್ನ ಭವಿಷ್ಯವನ್ನು ಬರೆಯತೊಡಗಿದರು.
ಇದೊಂದು ಕಲ್ಪಿತ ಘಟನೆ. 'ಸಂಬಂಧಗಳು ಅರ್ಥಶೂನ್ಯ, ಕಾಂಚಾಣವೇ ಮುಖ್ಯ' ಎನ್ನುವ ಒಂದಷ್ಟು ಮಂದಿಗೆ ತುಂಬಾ ಸಹಕಾರಿಯಾಗಬಹುದಾದ ಯೋಜನೆ. ಆರ್ಡರ್ ಮಾಡಿದರೆ ಸಾಕು, 'ಮದುಮಗಳು-ಅಪ್ಪ-ಅಮ್ಮ' ಹೊರತುಪಡಿಸಿ, ಮಿಕ್ಕೆಲ್ಲವನ್ನೂ ಕಾಲಬುಡಕ್ಕೆ 'ತಂದೆಸೆಯುವ' ವ್ಯವಸ್ಥೆ ಭವಿಷ್ಯದ ಅನಿವಾರ್ಯತೆಯಾಗಬಹುದೋ ಏನೋ?
ಆಮಂತ್ರಣ ಪತ್ರವನ್ನು ಹಂಚುವ ಕಿರಿಕಿರಿಯಿಲ್ಲ. ಹಾಲ್ ಬುಕ್ ಮಾಡಬೇಕಾಗಿಲ್ಲ. ಸೂಪಜ್ಞರನ್ನು ಸಂಪರ್ಕಿಸಬೇಕಿಲ್ಲ. ಮೊದಲೇ ನೆಂಟರನ್ನು ದೂರಮಾಡಿದ ಬಳಿಕ ಅವರ ಬಾಧೆಯಿಲ್ಲ. 'ಹಳ್ಳಿಯಲ್ಲೇ ಸಮಾರಂಭ ನಡೆಯಬೇಕು' ಎಂಬ ಆಶೆಯೂ ಈಡೇರಿದ ಹಾಗಾಯಿತು. ಒಟ್ಟಿನಲ್ಲಿ ಟೆನ್ಶನ್ ಫ್ರೀ.. ಫ್ರೀ..!
ಹಳ್ಳಿಯಲ್ಲೇ ಅಪ್ಪಾಮ್ಮ ಇಬ್ಬರನ್ನೇ ಬಿಟ್ಟು ಹೆಂಡತಿಯೊಂದಿಗೆ ನಗರ ಸೇರಿದ ಮಗನಿಗೆ ಕ್ರಮೇಣ ಹಳ್ಳಿ ಒಂದು ಮ್ಯೂಸಿಯಂ ಆಗಿ ಕಾಣುತ್ತದೆ! ನಗರ ಬೋರ್ ಆದಾಗ ಬಂದುಳಿಯಲು ತಾಣವಷ್ಟೇ. ಯಾವುದೇ ಭಾವನೆಗಳಿಲ್ಲ. ಸಂಬಂಧಗಳ ಸೋಂಕಿಲ್ಲ. ಹಳ್ಳಿ ಮನೆಯಲ್ಲಿ ಮುದುಡುವ ಎರಡು ಜೀವಗಳು ನೆನಪಿನಿಂದ ಮರೆಯಾಗುವಷ್ಟು ಕೆಲಸದ ಧಾವಂತ!
ಒಂದು ದಿವಸವಾದರೂ ಅಪ್ಪಾಮ್ಮನನ್ನು ನಗರಕ್ಕೆ ಕರೆದುಕೊಂಡು ಹೋಗದ ಮಕ್ಕಳು ಎಷ್ಟು ಮಂದಿ ಬೇಕು? 'ಹಳ್ಳಿ ಮನೆಯನ್ನು ಮಾರಿ, ಅದರಲ್ಲಿ ಸಿಕ್ಕಿದ ಹಣ ನಂಗೆ ಕೊಡು. ಬೆಂಗಳೂರಲ್ಲಿ ಸೈಟ್ ತೆಕ್ಕೊಳ್ಳಬೇಕು' ಎನ್ನುವ ಮಗನ ಬೇಡಿಕೆ ಮುಂದೆ ಅಪ್ಪ ಕಂಗಾಲು!
ಹಳ್ಳಿಗಳಿಂದು 'ಮಾರಾಟಕ್ಕಿವೆ' ಎಂಬ ಬೋರ್ಡ್ ತಗಲಿಸಿಕೊಂಡಿವೆ. ಒಂದರ್ಥದಲ್ಲಿ ಅವೆಲ್ಲಾ ವೃದ್ಧಾಶ್ರಮಗಳಾಗಿವೆ. ಅವನ್ನು ಖರೀದಿಸಲು 'ತಾಮುಂದು ನಾಮುಂದು' ಎನ್ನುವ ಬ್ರೋಕರ್ಗಳು ಮುತ್ತುತ್ತಿರುತ್ತಾರೆ. ಕಣ್ಣೆದುರಲ್ಲೇ ಹುಟ್ಟಿದ ಮನೆ ಬುಲ್ಡೋಜರ್ಗೆ ಬಲಿಯಾದಾಗ ಮುಂದಿನ ದಾರಿ ಮಸುಕು.. ಮಸುಕು.. 'ಎಲ್ಲವನ್ನೂ ಮಾರಿ ನಗರಕ್ಕೆ ಬಾ' ಎಂದ ಮಗನ ಮೊಬೈಲ್ ಸಿಮ್ ಬದಲಾಗಿರುತ್ತದೆ!
0 comments:
Post a Comment