Sunday, December 11, 2011

ಹಸಿರು ಹಳ್ಳಿಯ ಹಸಿದ ಚಿತ್ರಗಳು


ನೀರಿನ ಹಿಂದೆ ಓಡುವ, ಮರಗಳ ಹತ್ತಿರ ಮಾತನಾಡುವ, ಕಂಡದ್ದನ್ನು ಕಾಗದಕ್ಕಿಳಿಸುವ, ನೆಲ-ಜಲದ ಬಗ್ಗೆ ನಿರಂತರ `ಕಾಲಿಗೆ ಚಕ್ರ ಕಟ್ಟಿ' ಸುತ್ತಾಡುವ ಶಿರಸಿಯ ಶಿವಾನಂದ ಕಳವೆ ಪರಿಸರ-ಅಭಿವೃದ್ಧಿ ಪತ್ರಕರ್ತ. ಹಳ್ಳಿಯ ನೆಲ-ಬದುಕುಗಳ ವಾಸ್ತವ ಚಿತ್ರವನ್ನು ನಾಲ್ಕು ಪುಟಗಳ 'ಊರ ಬಾಗಿಲು' ಎಂಬ ವಾರ್ತಾಪತ್ರದಲ್ಲಿ 'ಅರಿವಿಗಾಗಿ' ಹಿಡಿದಿಟ್ಟಿದ್ದಾರೆ. ಸ್ವಂತ ವೆಚ್ಚದಿಂದ ಮುದ್ರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯನ್ನು ಕೇಂದ್ರೀಕರಿಸಿದ ವಾರ್ತಾಪತ್ರದ ಚಿತ್ರಣವು ಕನ್ನಾಡಿನ ಎಲ್ಲಾ ಹಳ್ಳಿಗಳಲ್ಲೂ ಪ್ರತಿಫಲನ. ಅದರಿಂದ ಆಯ್ದ ಒಂದಷ್ಟು ವಿಚಾರಗಳು ಮೆದುಳಿಗೆ ಮೇವಾಗಬಹುದು. ಚಿಂತನಗ್ರಾಸವಾಗಬಹುದು.

ಉತ್ತರ ಕರ್ನಾಟಕದ ಬಹುತೇಕ ಬರಪೀಡಿತ ಊರುಗಳಲ್ಲಿ ಭೂಮಿಯ ಬೆಲೆಯಲ್ಲಿ ಏರುಗತಿ. ಬಡವನಿಗೆ ಭೂಮಿ ಖರೀದಿ ಬಿಸಿತುಪ್ಪ. ಕೃಷಿ ಭೂಮಿಯಲ್ಲಿ ಕಾಂಚಾಣದ ತಕಥೈ! ಭೂಮಿ ಖರೀದಿಸಲೆಂದು ಹಣ ಕೂಡಿಟ್ಟವರು 'ತಕಥೈ' ಮುಂದೆ ನೆಲನೋಟಕರಾಗುತ್ತಾರೆ. ಹೆಚ್ಚು ಹಣ ಎಲ್ಲಿದೆಯೋ ಅಲ್ಲಿಗೆ ಭೂರಮೆಯ ಒಲುಮೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜನಸಂಖ್ಯೆ ಏರುತ್ತಿದೆ. ಉದ್ಯಮಗಳು ಹೆಚ್ಚುತ್ತಿವೆ. ಪರಿಣಾಮ, ವಸತಿಗಾಗಿ ಬೇಡಿಕೆ. ಸೆಂಟ್ಸ್ಗೆ ಸಾವಿರಗಟ್ಟಲೆಯ ಮಾಪಕ ಈಗಿಲ್ಲ. ಎಲ್ಲವೂ ಲಕ್ಷ, ಕೋಟಿ..! ಗುಡ್ಡ ಪ್ರದೇಶಕ್ಕೂ ಲಕ್ಷ್ಮಿಯ ಭಾಗ್ಯ. ನದಿಯಂಚಿನಲ್ಲಿ ವಾಸ್ತವ್ಯವಿದ್ದವರಿಗೆ ಗೊತ್ತಿಲ್ಲದೆ ನುಗ್ಗುವ ಹೊಸ ಹೊಸ ಯೋಜನೆಗಳ ಭಯ. ಮಾರ್ಗದ ಇಕ್ಕೆಡೆಗಳ ವಸತಿಗಳಿಗೆ ಹೆದ್ದಾರಿ ಅಗಲೀಕರಣದ ಹೆದರಿಕೆ.

ಅಥಣಿ, ಜಮಖಂಡಿ, ರಾಯಚೂರು, ಗಂಗಾವತಿಯಲ್ಲಿ ಭತ್ತ, ಕಬ್ಬು ಮುಖ್ಯ ಬೆಳೆ. ನೀರಾವರಿ ನೆಲೆಯ ಇಲ್ಲಿ ದಶಕಗಳ ಹಿಂದೆಯೇ ಭೂಮಿಯ ಬೆಲೆ ಏರಿತ್ತು. ಸಿಂಧನೂರಿನಲ್ಲಿ ಒಂದೆಕರೆ ಭತ್ತದ ಗದ್ದೆಗೆ ಹತ್ತು ವರುಷದ ಹಿಂದೆ ಹನ್ನೆರಡು ಲಕ್ಷ. ಆಗದು ಅಚ್ಚರಿ. ಈಗ..? ಹನಿ ನೀರೂ ಇಲ್ಲದ ಭೂಮಿಗಳಿಗೂ ಶುಕ್ರದೆಸೆ. ಮಣ್ಣು, ನೀರು ಇಲ್ಲದಿದ್ದರೂ ಪರವಾಗಿಲ್ಲ, ಕಲ್ಲು-ಮಣ್ಣು ಮಾರಾಟದಲ್ಲಿ ಹಣ ಗಳಿಸಬಹುದಲ್ಲಾ..!

ರಸ್ತೆ, ವಿದ್ಯುತ್, ನೀರು, ಪ್ರಶಾಂತ ಪರಿಸರ ಇದ್ದಲ್ಲೆಲ್ಲಾ ಸಿಕ್ಕಷ್ಟು ಬಾಚಿಕೊಳ್ಳುವವರ ಜಾಲ ಅಜ್ಞಾತವಾಗಿದೆ. ಹೆದ್ದಾರಿ ಆಸುಪಾಸು ನೆಲಗಳಲ್ಲಂತೂ ಯಜಮಾನರ ವಿಳಾಸ ಬದಲಾಗುತ್ತಲೇ ಇವೆ. ಸುಮ್ಮನೆ ಭೂಮಿ ನೋಡುತ್ತಾ ರಾಜ್ಯ ಸುತ್ತಿದರೆ ಮಣ್ಣಿನ ಅನುಭವದ ಕೃಷಿ ಭವಿಷ್ಯ ಕಣ್ಣೀರು ಮೂಡುತ್ತದೆ. ಹಳ್ಳಿಗಳಲ್ಲಿ ಭೂಮಾಫಿಯಾಗಳ ಚಟುವಟಿಕೆಗಳು ಬೀಸುಹೆಜ್ಜೆಯಲ್ಲಿವೆ ಕೃಷಿ ಭೂಮಿಗಳು ಉಳ್ಳವರ ಕೈಸೇರಿದೆ, ಸೇರುತ್ತಿದೆ.

ಬ್ರಿಟಿಷರು ಭಾರತಕ್ಕೆ ಏಕೆ ಬಂದರು - ಎಂಬ ಪ್ರಶ್ನೆಗೆ ಪಠ್ಯದಲ್ಲಿ ಉತ್ತರ ಸಿಗುತ್ತದೆ. ಅದನ್ನು ಓದಿ, ಬಾಯಿಪಾಠ ಮಾಡಿ, ಪರೀಕ್ಷೆ ಬರೆದಿದ್ದೇವೆ. ನಮ್ಮ ಹಳ್ಳಿಗಳಿಗೆ ಯಾರ್ಯಾರೋ ಭೂಮಿ ಅರಸಿ ಬರುತ್ತಿದ್ದರೂ ಸುಮ್ಮನಿದ್ದೇವೆ. ರಾಗಿ ಹೇಗೆ ಬೆಳೆಯಬಹುದು? ಭತ್ತ ಎಷ್ಟು ಸಿಗಬಹುದು? ಒಂದು ಎಕರೆಗೆ ತೆಂಗಿನ ತೋಟದ ಉತ್ಪಾದನೆ ಎಷ್ಟು? ಯಾವ ಜೋಳದ ತಳಿ ಬಿತ್ತನೆಗೆ ಸೂಕ್ತ? ಇಂತಹ ಮಾತುಕತೆಗಳ ಮಧ್ಯೆ ಬೆಳೆದ ಹಳ್ಳಿಮಕ್ಕಳಲ್ಲಿ ನಗರವು ಉದ್ಯೋಗದ ಕನಸನ್ನು ಬಿತ್ತಿತು. ಅವರನ್ನೆಲ್ಲಾ ತೆಕ್ಕೆಗೆ ಸೇರಿಸಿಕೊಂಡಿತು. ಅದೇ ನಗರದ ಮಧ್ಯೆ ಬೆಳೆದ 'ಹಳ್ಳಿ ಮನಸ್ಸು'ಗಳು ಹಳ್ಳಿಯನ್ನೇ ಖರೀದಿಸಲು ಬರುತ್ತಿವೆ.

ಸರಿ, ಭೂಮಿ ಮಾರುವ ನಮ್ಮ ರೈತರಿಗೆ ಹಣವಾದರೂ ಹೆಚ್ಚು ಸಿಗುತ್ತದೆಯೇ? ಮೇಲ್ನೋಟಕ್ಕೆ ಲಕ್ಷ, ಕೋಟಿಗಳ ಮಾತುಕತೆಗಳು ಹುಚ್ಚುಕಟ್ಟಿಸುತ್ತಿವೆ. ಕೈಗೆ ಸಿಕ್ಕ ಕಾಂಚಾಣ ಅನುತ್ಪಾದಕ ವೆಚ್ಚಗಳಿಗೆ ಕರಗುತ್ತವೆ. ಭೂಮಿ ಮಾರುವುದಕ್ಕಿಂತ ಹೇಗೆ ಉಳಿಸಿಕೊಳ್ಳಬೇಕೆಂದು ಯೋಚಿಸಿರುವುದು ಕಡಿಮೆ. ಉದಾ: ಎರಡು ವರುಷದ ಹಿಂದೆ ಕೊಲ್ಲೂರಿನ ಮೇಗನಿಯಲ್ಲಿ ಹಣದಾಸೆಗೆ ಭೂಮಿಯನ್ನು ಮಾರಿದರು. ಈ ಹಣದಲ್ಲಿ ಬೇರೆಡೆ ಭೂಮಿ ಖರೀದಿಸುತ್ತೇವೆ ಎಂದರು. ಈವರೆಗೂ ಹೊಸ ಭೂಮಿ ಖರೀದಿಸಲು ಸಾಧ್ಯವಾಗಿಲ್ಲ. ಅವರಲ್ಲಿನ ಹಣ ಈಗ ಭೂಮಿ ಖರೀದಿಗೆ ಸಾಕಾಗುವುದಿಲ್ಲ. ದುಪ್ಪಟ್ಟು ನೀಡಲು ಶಕ್ತಿಯಿಲ್ಲ.'

ಸರಿ, ಭೂಮಿಯ ಕತೆ ಹೀಗೆ. ನಮ್ಮ ಮಕ್ಕಳ ನಗರ ದಾರಿಯ ಕತೆ ಕರಾಳ. ಕೃಷಿ ಜತೆಯಲ್ಲಿ ನಾವು ಉಪ ಉದ್ಯೋಗವನ್ನು ಹೊಂದಿಸಿಕೊಂಡಿಲ್ಲ. ಕೃಷಿಯನ್ನು ಪಕ್ಕಕ್ಕೆ ಸರಿಸಿ ಮುಂದೆ 'ಸಾಕಷ್ಟು' ಸಾಗಿದ್ದೇವೆ. 'ಕೃಷಿಯಲ್ಲಿ ಕಷ್ಟವಿದೆ, ನಮ್ಮಂತೆ ಮಕ್ಕಳು ಕಷ್ಟ ಪಡುವುದು ಬೇಡ'ವೆಂದು ಕೃಷಿಯೇತರ ರಂಗಕ್ಕೆ ನೆಗೆಯಲು ಶಿಕ್ಷಣ ನೀಡಿದ್ದೇವೆ. ಪರಿಣಾಮ, ಕಣ್ಣಮುಂದಿದೆ - ನಿತ್ಯ ಉಣ್ಣುತ್ತಿದ್ದೇವೆ! ಹಳ್ಳಿಯಲ್ಲಿ ಕೂಲಿ ಬರ. ಕೂಲಿಕಾರರು ಕೆಲಸಕ್ಕೆ ಬರುತ್ತಿಲ್ಲವೆಂದು ಬೊಬ್ಬೆ ಹೊಡೆಯುವ ನಾವು ಮನೆ ಮಕ್ಕಳನ್ನು ಮಣ್ಣಿನಲ್ಲಿ ಎಷ್ಟು ಬೆಳೆಸಿದ್ದೇವೆ?

ಕೃಷಿ ಅವನತಿ ಬಗ್ಗೆ ಮಾತನಾಡುವ ಬಹುತೇಕ ಮಂದಿ ತಮ್ಮ ಮಕ್ಕಳನ್ನು ಕೃಷಿಯಿಂದ ದೂರ ಅಟ್ಟಿದವರು. ನಮ್ಮ ನೆಲ, ಪರಿಸರ, ಬದುಕನ್ನು ಇನ್ನಷ್ಟು ಉತ್ತಮಪಡಿಸಲು ಹೇಗೆ ಸಾಧ್ಯವೆಂದು ಯೋಚಿಸದೆ ಪಲಾಯನಕ್ಕೆ ಫರ್ಮಿಟ್ ನೀಡಿದವರು. ಮೆಡಿಕಲ್, ಇಂಜಿನಿಯರಿಂಗ್, ಸಾಫ್ಟ್ವೇರ್ ಓದು ಹಳ್ಳಿಗೆ ಹೇಗೆ ನೆರವಾಗುವಂತೆ ಬಳಸಬೇಕು ಎಂಬುದಕ್ಕಿಂತ ಕಲಿತವರ ಬೇರು ಕಿತ್ತು ನಗರದಲ್ಲಿ ನೆಲೆಯೂರುವ ಅವಕಾಶವಾಗಿದೆ. ಹಣದ ವ್ಯವಹಾರದಲ್ಲಿ ಕೃಷಿ ಭೂಮಿ ಜತೆಗಿನ ಭಾವನೆ ಬದಲಾಗಿದೆ. ಕೃಷಿ ತೆಗಳುವ ಸಮೂಹ ಹೆಚ್ಚಿದೆ. ಊಟಕ್ಕೆ ಅನ್ನ ಬೇಕು ಎಂಬ ಸತ್ಯ ಮರೆತು ಹಣಕ್ಕೆ ಎಲ್ಲವನ್ನೂ ಖರೀದಿಸುವ ತಾಕತ್ತಿದೆ ಎಂಬ ತರ್ಕ ಮೆರೆದಿದೆ, ಎನ್ನುವ ಶಿವಾನಂದರ ಮಾತು ಸತ್ಯವೆಂದು ಕಾಣುವುದಿಲ್ವಾ?

'ನಮ್ಮ ಹಳ್ಳಿಗಳು ಏನಾಗುತ್ತಿವೆ?' ಎಂಬ ವಾರ್ತಾಪತ್ರದ ಪುಟ ವಾಸ್ತವ ಚಿತ್ರದತ್ತ ಬೆಳಕು ಹಾಕುತ್ತದೆ. ಬದುಕು ಬದಲಾವಣೆಗಳನ್ನು ಒಗ್ಗಿಸಿಕೊಳ್ಳುತ್ತಾ ಹೋಗಿದೆ. ಹೀಗಾಗಿ ಎಲ್ಲವೂ ಇರುವ ಹಳ್ಳಿಯಲ್ಲಿ ಈಗ ಏನೂ ಇಲ್ಲದಂತಾಗಿದೆ. ಯುದ್ಧಕ್ಕಿಂತ ಮೊದಲೇ ಸೋತವರಂತೆ ಜನ ಮಾತನಾಡುತ್ತಾರೆ. ಮನೆಗೆ ಆಗಮಿಸಿದ ಅತಿಥಿಗಳ ಜತೆಗೆ ಕೃಷಿಗಿಂತ ವ್ಯವಹಾರದ ಮಾತುಕತೆ ಜಾಸ್ತಿಯಾಗಿದೆ. ಕರೆಂಟ್ ಇದ್ದಾಗ ಚಾನೆಲ್. ಇಲ್ಲದಿದ್ದರೆ ಆಲ್ಬಂ. ಸೀರಿಯಲ್ ಬಗ್ಗೆ ಚರ್ಚೆ. ಕೇಬಲ್ನವರು ನಗರಕ್ಕೆ ಮೂವತ್ತು ಚಾನೆಲ್ ನೀಡಿದರೆ, ಹಳ್ಳಿಗೆ ನೂರಕ್ಕೂ ಮಿಕ್ಕಿ ಒದಗಿಸುತ್ತಾರೆ... ಕುಳಿತು ನೋಡುವ ಕಾಲಹರಣದಲ್ಲಿ ಸಮಯದ ಬೆಲೆ ಮರೆತಿದೆ. ಬ್ಯಾಂಕಿನವರು ಕೃಷಿ ಸಾಲಕ್ಕಿಂತ ಸುಲಭವಾಗಿ ವಾಹನ ಖರೀದಿಗೆ ಸಾಲ ನೀಡುತ್ತಾರೆ!

ಹಳ್ಳಿ ಉಳಿಸಲು ಏನು ಮಾಡಬಹುದು? - ಇದು ಕಾಲದ ಪ್ರಶ್ನೆ. ಒಂದಷ್ಟು ವಿಚಾರಗಳನ್ನು ಪಟ್ಟಿ ಮಾಡಿದ್ದಾರೆ : 'ಹಳ್ಳಿಯ ಬದುಕು ಅತ್ಯುತ್ತಮ, ಪೇಟೆಯದು ಕೆಟ್ಟದ್ದು' ಎಂಬ ಫೋಕಸ್ಗೆ ಕಡಿವಾಣ. ಪೇಟೆಯ ಸೌಲಭ್ಯಗಳೊಂದಿಗೆ ಹೋಲಿಕೆ ಸಲ್ಲ. ಪೇಟೆಯಲ್ಲಿ ದೊರೆಯದ ಒಳ್ಳೆಯ ಗಾಳಿ, ಪ್ರಶಾಂತ ವಾತಾವರಣ ಸೇರಿದಂತೆ ಅನೇಕ ಸಂಗತಿಗಳು ಹಳ್ಳಿಗಳಲ್ಲಿವೆ ಎಂಬುದನ್ನು ತೋರಿಸಬೇಕು. ಹಳ್ಳಿ ಶಾಲೆಗಳಲ್ಲಿ ಓದಿ ಸಾಧನೆ ಮಾಡಿದವರ ಕುರಿತು ಯಶೋಗಾಥೆಗಳ ಪ್ರಸ್ತುತಿ.

ನಮ್ಮ ಶಾಲೆ, ಕಾಲೇಜುಗಳಿಗೆ ಮಕ್ಕಳನ್ನು ನಗರಕ್ಕೆ ಪ್ಯಾಕ್ ಮಾಡುವ ಕೆಲಸ! ಇಲ್ಲಿ ಶಿಕ್ಷಕರ, ಮಕ್ಕಳ ಮನಸ್ಥಿತಿ ಬದಲಿಸುವ ಶಿಕ್ಷಣ ಬೇಕು. ಹಳ್ಳಿ ಕೇಂದ್ರಿತ ಬದುಕಿನ ಬಗೆಗೆ ಸಿನೆಮಾ, ನಾಟಕ, ಲೇಖನ, ಪುಸ್ತಕ, ಸಾಕ್ಷ್ಯಚಿತ್ರಗಳು ಬರಬೇಕು. ಕೃಷಿ ವೇದಿಕೆಗಳು ಹಳ್ಳಿ ಉಳಿಸುವ ಅಭಿಯಾನ ನಡೆಸಬೇಕು. ರಂಗಿನ ಬದುಕಿಗೆ ಓಡುವವರನ್ನು ಹಿಡಿದು ನಿಲ್ಲಿಸಿ ಸರಳತೆಯ ಪಾಠ ಹೇಳುವ ಯತ್ನ. ಎಲ್ಲಕ್ಕಿಂತ ಮುಖ್ಯವಾಗಿ 'ನಮ್ಮ ಹಳ್ಳಿಗಳೂ ಎಲ್ಲಿಗೆ ಹೊರಟಿವೆ' ಎಂದು ಗಮನಿಸುವ ಅಗತ್ಯವಿದೆ.

ಹೀಗೆ 'ಊರಬಾಗಿಲು' ವಾರ್ತಾಪತ್ರದಲ್ಲಿ ಗ್ರಾಮೀಣ ಬದುಕಿನ ಪ್ರಸ್ತುತ ಸ್ಥಿತಿಗಳನ್ನು ಸಂಪಾದಕ ಶಿವಾನಂದ ಕಳವೆ ತೆರೆದಿಟ್ಟಿದ್ದಾರೆ. 'ಹಳ್ಳಿಯ ಸಮಸ್ಯೆಗಳು ಅಲ್ಲಿದ್ದವರಿಗೆ ಮಾತ್ರ ಅರ್ಥವಾದೀತು. ಅದರ ದಾಖಲಾತಿಯೂ ಅವರಿಂದಲೇ ನಡೆಯಬೇಕು. ಲಕ್ಷಗಟ್ಟಲೆ ಹಣದಲ್ಲಿ ಸ್ಮರಣ ಸಂಚಿಕೆಗಳನ್ನು ಅಚ್ಚು ಹಾಕುತ್ತೇವೆ. ಅದರ ಚಿಕ್ಕ ಒಂದು ಪಾಲು ಇಂತಹ ಕೆಲಸಕ್ಕೆ ಸಾಕು. ಮನಸ್ಸು ಮಾಡಿದರೆ ಕಷ್ಟವಲ್ಲ' ಎಂಬ ಆಪ್ತ ಕಿವಿಮಾತು. ಇದು ಕಳವೆಯವರ ಸಂಪಾದಕತ್ವದ ನಾಲ್ಕನೇ ವಾರ್ತಾಪತ್ರ. ಅವರ 'ಅಡವಿ ಅಡುಗೆ, ಮಿಡಿಮಾವು' ವಾರ್ತಾಪತ್ರಗಳು ಕಾಲದ ದಾಖಲೆ.

(ಶಿವಾನಂದ ಕಳವೆ : ೯೪೪೮೦೨೩೭೧೫)

0 comments:

Post a Comment