Saturday, June 27, 2009

ಮಂಗಳೂರಲ್ಲೂ ಹಲಸು ಮೇಳ!











ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಂದಾಳ್ತನದಲ್ಲಿ 'ಹಲಸು ಮೇಳ ನಿನ್ನೆ, ಇಂದು (ಜೂನ್ 26, 27, 2009) ನಡೆಯಿತು. ಇನ್ನೇನು ಹಲಸು ಮುಗಿಯುವ ಸಮಯ. 'ಈಗಲಾದರೂ ಆಯಿತಲ್ಲಾ' ಸಮಾಧಾನ! ಎರಡೂ ದಿವಸವೂ ಸುಮಾರು ಇನ್ನೂರರ ಹತ್ತಿರ ಹಲಸುಪ್ರಿಯರಿದ್ದರು. 'ನಮಗೆ ಗೊತ್ತೇ ಇಲ್ವಲ್ಲಾ' ಅಂದವರೇ ಅಧಿಕ.
ಶಿರಸಿಯ ಕದಂಬ ಸಂಸ್ಥೆಯ ಮಮತಾರಿಂದ ಮೊದಲ ದಿನ ಕೆಲವು ಖಾದ್ಯಗಳ ಪ್ರಾತ್ಯಕ್ಷಿಕೆ. ಎರಡನೇ ದಿನ ಬೆಂಗಳೂರು ಕೃವಿವಿಯ ಸಂಸ್ಕರಣಾ ವಿಭಾಗದ ಕೆ.ಬಿ.ಸುರೇಶ್ ಮತ್ತು ಉಷಾರವೀಂದ್ರರಿಂದ ಶ್ರೀಖಂಡ, ಜ್ಯೂಸ್ಗಳ ಪ್ರಾತ್ಯಕ್ತಿಕೆಗಳು ಕುತೂಹಲಕರ. ಅಡಿಕೆ ಪತ್ರಿಕೆಯ ಸಂಪಾದಕರಿಂದ ಹಲಸಿನ ವಿವಿಧ ರೂಪದ 'ದೇಶನೋಟ'! ಅಲ್ಲಲ್ಲ ಕಡಲಾಚೆಯ ಸುದ್ದಿ ಕೂಡಾ. ಮತ್ತೆಲ್ಲಾ ಮಾಮೂಲಿ.
ದೊಡ್ಡಬಳ್ಳಾಪುರ ತೂಬುಗೆರೆ ಹಲಸು ಬೆಳೆಗಾರರ ಸಂಘದ ರವಿಕುಮಾರ್ ಹಲಸಿನೊಂದಿಗೆ ಮೇಳಕ್ಕೆ ಬಂದಿದ್ದರು. ನಡೆದ ಹಲಸು ಸ್ಪರ್ಧೆಯಲ್ಲಿ ಅವರೇ ಪ್ರಥಮ! ದ್ವಿತೀಯ ಮೂಡಬಿದ್ರೆಯ ಡಾ.ಎಲ್.ಸೋನ್ಸ್ ಅವರ ಹಲಸು. ಎರಡೂ ದಿವಸ ಹಲಸಿನದ್ದೇ ಮಾತುಕತೆ. ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದಲ್ಲಿ ಹಲಸಿನ ಸುಳಿವೇ ಇಲ್ವಲ್ಲಾ. 'ಮೊದಲ ದಿವಸ ಹಲಸಿನ ಸಾಂಬಾರು ಇತ್ತಲ್ವಾ' ಯಾರೋ ಪಿಸುಗುಟ್ಟಿದರು. 'ತೀರ್ಥಹಳ್ಳಿ ಹಲಸ ಮೇಳದಲ್ಲಿ ಅನ್ನ ಮತ್ತು ಮಜ್ಜಿಗೆ ಹೊರತುಪಡಿಸಿ ಮಿಕ್ಕೆಲ್ಲಾ ಖಾದ್ಯಗಳು ಹಲಸಿನದ್ದೇ ಇದ್ದುವಲ್ಲಾ' ನೆನಪಾಯಿತು.
ಕೆವಿಕೆಯ ವರಿಷ್ಠರಲ್ಲಿ ಹೇಳಿದಾಗ 'ಮುಂದಿನ ವರುಷ ಎಲ್ಲಾ ಸರಿ ಮಾಡುವಾ' ಆಶ್ವಾಸನೆ. ಅಂತೂ ಆಯಿತು. ಎಲ್ಲಾ ಅಧಿಕಾರಿಗಳಲ್ಲಿ 'ಹಲಸು ಕಾಳಜಿ' ಎದ್ದುಕಾಣುತ್ತಿತ್ತು. ಜತೆಗೆ ಕೃಷಿಕರ ಉಪಸ್ಥಿತಿಯೂ! 'ನಮ್ಮಲ್ಲೂ ಆಗಬೇಕಲ್ಲಾ' ಕಾಸರಗೋಡು ಕೆವಿಕೆಯ ಸರಿತಾ ಹೆಗಡೆಯವರ ಉತ್ಸಾಹ. ಅಧಿಕಾರಿಗಳು ಓಕೆ ಅಂತಾರೆ ಬಿಡಿ. ಜವಾಬ್ದಾರಿಯನ್ನು ಹೊತ್ತುಕೊಳ್ಳುವವರು ಬೇಕಷ್ಟೇ. ಮೇಳದ ದಿನಾಂಕ ನಿರೀಕ್ಷಿಸಿ.
ಇಲ್ಲೂ ನಡೆದರೆ ಇದು 'ದ್ವಾದಶ ಮೇಳ'! ಈ ವರುಷಕ್ಕೆ ಸಾಕಲ್ವಾ!ಭಳಿರೇ, ಹಲಸಿನ ಮೇಳಗಳ ಮಧ್ಯೆ ಅಡಿಕೆ ಪತ್ರಿಕೆಯು ಎರಡು ಹಲಸಿನ ವಿಶೇಷಾಂಕವನ್ನೇ ಹೊರತಂದಿತು. ಓದಿಲ್ವಾ. ಖಂಡಿತಾ ಓದಿ.



Thursday, June 25, 2009

ಬೇಲಿಯಾಚೆಯ ಲೋಕ!

'ಎಳನೀರು ಕೊಯ್ದು ಮಾರಿದಾತ ತೀರಾ ದರಿದ್ರ ಸ್ಥಿತಿಗೆ ತಲುಪಿದವನು' ಎಂಬ ಭಾವನೆಯಿಂದಾಗಿ ತುಮಕೂರು ಜಿಲ್ಲೆಯಲ್ಲಿ ಎಳನೀರು ಕೀಳುವುದೇ ಇಲ್ಲ! ಏನಿದ್ದರೂ ಕೊಬ್ಬರಿಗೇ ಮೀಸಲು. ವಿಶೇಷ ಹಬ್ಬಗಳಲ್ಲಿ ಅನಿವಾರ್ಯವಾದರೆ ಮಾತ್ರ ಒಂದೋ ಎರಡೋ ಎಳನೀರು ಕೀಳುತ್ತಾರೆ.

ತಿಪಟೂರಿನ ಬಿಳಿಗೆರೆಯಲ್ಲಿ ನಡೆದ 'ಎಳನೀರು ಮೇಳ'ವು ಎಳನೀರಿನ ಕುರಿತಾದ ಭಾವನೆಗಳನ್ನು ಪೋಸ್ಟ್ಮಾರ್ಟಂ ಮಾಡಿತು. , 'ಕೊಬ್ಬರಿಯನ್ನು ಸಿಕ್ಕಿದಷ್ಟು ಧಾರಣೆಗೆ ಮಾರಿದರೆ ನಾವು ಇಂದಲ್ಲ, ಎಂದೆಂದೂ ಪರಾವಲಂಬಿಗಳೇ' ಬಿಳಿಗೆರೆ ಕೃಷ್ಣಮೂರ್ತಿ ಆಗಾಗ್ಗೆ ಮೇಳದಲ್ಲಿ ಚುಚ್ಚುತ್ತಿದ್ದರು. ಪರಿಣಾಮ, ಎಳನೀರಿನ ಹೊಸರೂಪಕ್ಕಾಗಿ ಒಂದಷ್ಟು ಜನರು ಹಪಹಪಸುತ್ತಿರುವುದು ಕಂಡುಬಂತು.

ಕೇರಳದ ಕಾಯಂಕುಳಂ ಸನಿಹದ ಪೆರುಂಗಾಲ ಹಳ್ಳಿಯಲ್ಲಿರುವ 'ಎಳನೀರು ಸೋಡಾ' ಘಟಕವು ವರುಷಕ್ಕೆ ಹತ್ತು ಲಕ್ಷಕ್ಕೂ ಮಿಕ್ಕಿ ಎಳನೀರನ್ನು ನಗದಾಗಿ ಬದಲಾಯಿಸುತ್ತದೆ. ಜತೆಗೆ ಕೃಷಿಕರನ್ನೂ ಉತ್ತೇಜಿಸುತ್ತಿದೆ. ತ್ರಿಶೂರಿನಿಂದ ತಿರುವನಂತಪುರದವರೆಗೆ ಕಳೆದೆರಡು ವರುಷದಲ್ಲಿ ಹತ್ತಕ್ಕೂ ಮಿಕ್ಕಿ ಸೋಡಾ ಘಟಕಗಳು ಶುರುವಾಗಿವೆ. ಕೇರಳದಲ್ಲೇಕೆ, ನಮ್ಮಲ್ಲೂ ಸಾಧ್ಯವಿಲ್ಲವೇ? ಅವಕಾಶಗಳು ಬೇಕಾದಷ್ಟಿವೆ. ಮನಸ್ಸು ಬೇಕಷ್ಟೇ.

ಎಳನೀರಿನ ಹಿಮಚೆಂಡು (ಸ್ನೋಬಾಲ್ ಟೆಂಡರ್ ಕೊಕೊನಟ್) - ಜನಪ್ರಿಯವಾಗುತ್ತಿರುವ ಉತ್ಪನ್ನ. ಕಾಸರಗೋಡಿನ ಸಿಪಿಸಿಆರ್ಐಯ ಕೂಸಿದು. ಅರ್ಧಬಲಿತ ಎಳನೀರಿನ್ನು ಯಂತ್ರದ ಸಹಾಯದಿಂದ ಚಿಪ್ಪು (ಗೆರಟೆ) ತೆಗದು, ಅದರೊಳಗಿನ ಬಿಳಿಗೋಳವನ್ನು ಬೇರ್ಪಡಿಸಿ, ಮೇಲ್ಮೈಯ ಪದರವನ್ನು ಕೆರೆದು ತೆಗೆದರೆ 'ಹಿಮಚೆಂಡು' ರೆಡಿ. ಕುಡಿದು ತಿನ್ನಬಹುದಾದ ಇದನ್ನು ದೊಡ್ಡ ಹೋಟೆಲ್ಗಳಲ್ಲಿ ನೀಡುವ ವ್ಯವಸ್ಥೆಯಿದೆ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದು ಸೀಯಾಳದ ಅಂದವನ್ನು ಹೆಚ್ಚಿಸಿ IT ಕಚೇರಿಗಳಿಗೆ ವಿತರಿಸುತ್ತಿದೆ. ಥೈಲ್ಯಾಂಡ್ನಲ್ಲಿ ಎಳನೀರಿನ ಸಿಪ್ಪೆ ಕೆತ್ತುವಾಗಲೇ ಅಂದದ ಆಕಾರ ಕೊಟ್ಟು, ಹೊರಬಣ್ಣ ಕೆಡದಂತೆ ಸಂರಕ್ಷಗಳನ್ನು ಬಳಸುತ್ತಾರೆೆ. ಫಿಲಂನಲ್ಲಿ ಪ್ಯಾಕ್ ಮಾಡಿ ಅಮೇರಿಕಾ, ಇಂಗ್ಲೇಂಡ್, ಜಪಾನ್, ಆಸ್ಟ್ರೇಲಿಯಾ, ಸಿಂಗಾಪುರ, ಯುರೋಪ್.ಗಳಿಗೆ ಸಾಗಾಟ.

ಥಾಯ್ಯ ಇನ್ನೊಂದು ಉತ್ಪನ್ನ ನೋಡಿ. ಸಿಪ್ಪೆ ತೆಗೆದು, ಹಿಂಬದಿಯಲ್ಲಿ ಅಡ್ಡಕ್ಕೆ ತುಂಡರಿಸಿ, ತುಂಡನ್ನು ಪುನಃ ಜೋಡಿಸಿ, ಪಾಲಿಥೀನ್ ತರಹದ ಲಕೋಟೆಯಲ್ಲಿ ಪ್ಯಾಕಿಂಗ್. ಇದನ್ನು ಐಸ್ ಬಾಕ್ಸ್ನಲ್ಲಿಟ್ಟು ಮಾರಾಟ. ಅಂತೆಯೇ ತೆಂತಾ ಎಣ್ಣೆ, ಜೆಲ್ ಕೋಕೊನಟ್, ಸಿಹಿತಿಂಡಿಗಳು.. ಕೇರಳದ ಆಲೆಪ್ಪಿಯ ಸುಧರ್ಮ ಎಂಬವರು ಕಳೆದ ನಾಲ್ಕು ವರುಷಗಳಿಂದ ತಮ್ಮ ಒಂದು ಹೆಕ್ಟೇರ್ ತೋಟದ ಉತ್ಪನ್ನವನ್ನು ಮಾರಿಲ್ಲ! ಎಲ್ಲದರ ಉತ್ಪನ್ನ ತಯಾರಿಸಿದ್ದಾರೆ. ಥಾ ಸಾಧನೆಯನ್ನು ಹಿಂದಿಕ್ಕುವ ಪ್ರಯತ್ನ! ತೆಂಗಿನ ಹಾಲಿನ ಚಾಕೋಲೆಟ್, ಹತ್ತು ನಮೂನೆಯ ಸ್ನಾನದ ಸಾಬೂನು, ಚಟ್ನಿಪುಡಿ, ಪದಾರ್ಥಕ್ಕೆ ಬಳಸಲು ದಿಢೀರ್ ಪೇಸ್ಟ್, ಜ್ಯಾಂ, ಜೆಲ್ಲಿ.. ಹೀಗೆ ನಲವತ್ತಕ್ಕೂ ಮಿಕ್ಕಿ ಉತ್ಪನ್ನಗಳು. 'ತೆಂಗು ಬೆಳೆಯುವುದು ಮಾತ್ರವಲ್ಲದೆ, ಅದನ್ನು ಮೌಲ್ಯವರ್ಧನೆ ಮಾಡಿ ಮಾರಲೂ ಕಲಿಯಬೇಕು' - ದಶಕದ ಅನುಭವದ ಹಿರಿಮಾತು.

ವಿಯೆಟ್ನಾಮಿನಲ್ಲಿ ಬಾ ಥಾನ್ ಎಪ್ಪತ್ತರ ಹಿರಿಯ ದೊಡ್ಡಪ್ರಮಾಣದಲ್ಲಿ ಹಾಳಾಗಿ ಹೋಗುತ್ತಿದ್ದ ತೆಂಗಿನ ನೀರನ್ನು ಬಳಸಿ ಮದ್ಯ ತಯಾರಿಸಿದ್ದಾರೆ. ಮಧ್ಯ ಕೊರಿಯಾ, ಆಸ್ಟ್ರೇಲಿಯಾ, ರಶ್ಯಾ, ಕಾಂಬೋಡಿಯಾ ದೇಶಗಳಿಗೆ ರಫ್ತಾಗುತ್ತದೆ.ದೂರದ ಥ್ಯಾಲ್ಯಾಂಡ್ ಸುದ್ದಿ ಬಿಡಿ. ನಮ್ಮ ಬೆಂಗಳೂರಿನಲ್ಲಿ ತೆಂಗಿನ ಹಾಲನ್ನು ಉದ್ದಿಮೆಯಾಗಿಸುವ ಪ್ರಯತ್ನ ನಡೆಯುತ್ತಿದೆ. ಇನ್ನೇನು, ಮಿಲ್ಕ್ ಪಾರ್ಲರ್ಗಳಲ್ಲಿ ಸಿಗುವ ನಂದಿನಿ ಹಾಲಿನಂತೆ, ತೆಂಗಿನ ಹಾಲೂ ಬರಲಿದೆ! ನಮ್ಮ ಗೃಹಿಣಿಯರಿಗೆ ಅಡುಗೆ ಕೆಲಸ ಮತ್ತಷ್ಟು ಹಗುರವಾಗಲಿದೆ!

ಸರಿ, 'ನಮ್ಮೂರಲ್ಲೂ ಸಾಧ್ಯವಾ, ಬಂಡವಾಡ ಬೇಡ್ವೋ, ಮಾರುಕಟ್ಟೆ ಕುದುರಿಸುವುದು ಹೇಗೆ' ಪ್ರಶ್ನೆಗಳು. 'ಮೊದಲು ಸಾಧ್ಯತೆಯನ್ನು ಪರಿಶೀಲಿಸುವಾ, ಉತ್ಪನ್ನಗಳನ್ನು ಮಾಡೋಣ. ನಂತರವಷ್ಟೇ ಮಾರುಕಟ್ಟೆ. ಉತ್ಪನ್ನವೇ ತಯಾರಾಗಿಲ್ಲ, ಇನ್ನು ಮಾರುಕಟ್ಟೆಯ ಮಾತೇನು?' - ಎಳನೀರು ಮೇಳದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮೀಯಪದವಿನ ಡಾ.ಚಂದ್ರಶೇಖರ ಚೌಟರಿಂದ ಉತ್ತರ. ಕೂಸು ಹುಟ್ಟುವ ಮೊದಲೋ ಕುಲಾವಿಯ ಚಿಂತೆ!

ಚೌಟರು ಮೀಯಪದವಿನಂತಹ ಹಳ್ಳಿಯಲ್ಲಿ ಎಳನೀರಿಗೆ ಮಾರುಕಟ್ಟೆಯನ್ನು ಸೃಷ್ಟಿಸಿದ ಕೃಷಿಕ. ದಿನಕ್ಕೆ ಏನಿಲ್ಲವೆಂದರೂ 200-250 ಎಳನೀರು ಮಾರಿಹೋಗುತ್ತವೆ. ಎಳನೀರಿನ ಬಗ್ಗೆ ಮಿದುಳಿನಲ್ಲಿರುವ ಕೆಟ್ಟ ಹುಳವನ್ನು ಹೊಡೆದೋಡಿಸಿದರೆ, ನಮ್ಮ ಬೇಲಿಗಿಂತ ಆಚೆಯೂ ಒಂದು ಪ್ರಪಂಚವಿದೆ ಅಂತ ನೋಡಬಹುದು.

Tuesday, June 16, 2009

ನೀರಿನಾಟದಿಂದ ಹಸಿರಾದ ಒಣಭೂಮಿ

'ಓಡುವ ನೀರನ್ನು ಹರಿಯುವಂತೆ, ಹರಿಯುವ ನೀರನ್ನು ತೆವಳುವಂತೆ, ತೆವಳುವ ನೀರನ್ನು ನಿಲ್ಲುವಂತೆ ಮಾಡುವುದು' - ಮಳೆಕೊಯ್ಲಿನ ಸರಳ ಸೂತ್ರ. 'ನಲ್ಲಿನಲ್ಲಿ ಒಂದು ಸೆಕೆಂಡಿಗೆ ಒಂದು ಹನಿ ಸೋರಿದರೆ ದಿನಕ್ಕೆ ಐವತ್ತು ಲೀಟರ್ ನೀರು ಹಾಳು' - ಇದು ನೀರಿನ ಲೆಕ್ಕಾಚಾರ.

ಮಹಾರಾಷ್ಟ್ರದ ಜಲಗಾಂವ್ನ ಭವರ್ಲಾಲ್ ಜೈನ್ 'ಪಾಳು ಭೂಮಿ'ಯನ್ನು ನೀರಿನ ಜಾಣ್ಮೆ ಬಳಕೆಯಿಂದ ಹಸಿರು ಮಾಡಿರುವುದು ಮಳೆಕೊಯ್ಲಿನ ಯಶಕ್ಕೊಂದು ಉದಾಹರಣೆ.ಜಲಗಾಂವ್ನ ಸಿರ್ಸೋಲಿಯಾ ಗುಡ್ಡಪ್ರದೇಶ ಮನುಷ್ಯ ಸಂಚಾರವಿಲ್ಲದ, ವ್ವವಸಾಯಕ್ಕೆ ಅಯೋಗ್ಯವಾದ ಒಣಭೂಮಿ. ನಿಷ್ಪ್ರಯೋಜಕವೆಂದು ಸರಕಾರಿ ದಾಖಲೆಯಲ್ಲಿರುವ ಈ ಭೂಮಿಯ ಖರೀದಿಗೆ ಜೈನ್ 'ತಲೆ ಕೆಟ್ಟಿದೆ' ಅಂತ ಗೇಲಿ ಮಾಡಿದರು.

ಜಲಗಾಂವ್ನಲ್ಲಿ ಬೀಳುವ ಮಳೆ 700-750 ಮಿ.ಮೀ. ತಾಪಮಾನ 7 - 45 ಡಿಗ್ರಿ ಸೆಲ್ಸಿಯಸ್. ಕೊಳವೆ ಪಾತಾಳಕ್ಕೆ ಇಳಿದರೂ ಭಣಭಣ. ಇದಕ್ಕೊಂದು ಪರಿಹಾರ ಬೇಕಾಗಿತ್ತು. ತನ್ನ ಹನಿನೀರಾವರಿ ವ್ಯವಸ್ಥೆಯ ಜ್ಞಾನವನ್ನು ಕೃಷಿಕರಿಗೆ ತಲುಪಿಸಲು ಜೈ ಅವರಿಗೆ 'ಡೆಮೋ' ಬೇಕಿತ್ತು. ತನ್ನ ಕನಸಿನ ಈ ಜಾಗ ಸಿಕ್ಕಾಗ ಅವರಿಗಾದ ಖುಷಿ ಇದೆಯಲ್ಲಾ!

ಈ ಗುಡ್ಡವು ಸಾವಿರಡಿ ಎತ್ತರ. ಮಣ್ಣು ವಿರಳ. ಕಲ್ಲುಗುಂಡುಗಳೇ ಅಧಿಕ. ಅಲ್ಲಲ್ಲಿನ ಹೊಂಡ, ಕಣಿವೆಗಳನ್ನು ಅಲ್ಲಲ್ಲೇ ಮುಚ್ಚಿ, ಸಮತಟ್ಟು ಮಾಡಿದರು. ಎತ್ತಿನ ಗಾಡಿ ಹೋಗುವಷ್ಟು ಕಚ್ಚಾ ರಸ್ತೆ ನಿರ್ಮಾಣ. ಮಾನವಶ್ರಮದೊಂದಿಗೆ ಜೆಸಿಬಿಗೂ ಕೆಲಸ. 'ಇಲ್ಲಿ ಅಂತರ್ಜಲ ಇಲ್ಲ' -ಎಂದು ಸರ್ಟಿಫಿಕೆಟ್ ನೀಡಿದ ವರಿಷ್ಠರಿಂದ. 'ಕೃಷಿಹೊಂಡಕ್ಕೆ ಓಕೆ' ಶಿಫಾರಸು.

1989ರಲ್ಲಿ ಗುಡ್ಡದ ತುದಿಯಲ್ಲಿ ಕೃಷಿಹೊಂಡವನ್ನು ನಿರ್ಮಿಸಿದರು. ಮಳೆಗಾಲದಲ್ಲಿ ನೀರು ತುಂಬಿ ಇಂಗಿತು. ಪ್ಲಾಸ್ಟಿಕ್ ಹಾಸಿದ ಮತ್ತೊಂದು ಹೊಂಡದಲ್ಲಿ ಮಳೆನೀರು ಸಂಗ್ರಹ. ಯಾಕೋ ಅದು ವಿಫಲವಾಯಿತು.ಇಂಗಿದ ನೀರಿನ ಪ್ರಯೋಜನ ಪಡೆಯಲು ತಪ್ಪಲಿನಲ್ಲಿ (ಜೈನ್ ವ್ಯಾಲಿ) ಕೊಳವೆ ಬಾವಿ ಕೊರೆತ. ಐದು ಕಿಲೋಮೀಟರ್ ದೂರದಲ್ಲಿರುವ ಗಿರಣ ನದಿ ಹರಿದಷ್ಟೂ ದಿವಸ ನೀರನ್ನು ಪಂಪ್ ಮಾಡಿ ಸಂಗ್ರಹಿಸಿದರು. ಗುಡ್ಡದ ಮೇಲೆ ಮೂರುಲಕ್ಷ ಲೀಟರಿನ ಟ್ಯಾಂಕ್ ನಿರ್ಮಾಣ. ಸಂಗ್ರಹಿತ ನದಿಯ ನೀರನ್ನು ಪಂಪ್ ಮೂಲಕ ಮೇಲೆತ್ತಿ ಟ್ಯಾಂಕಿನಲ್ಲಿ ತುಂಬಿದರು.ಗುಡ್ಡಕ್ಕೆ ಯಾವಾಗ ನೀರು ಬಂತೋ, ಮುಂದಿನ ದಾರಿಗಳು ಸುಲಭವಾಯಿತು.

ಗುಡ್ಡದ ಇಳಿಜಾರಿನಲ್ಲಿ ಸಮತಳ ಅಗಳು (ಕಂಟೂರು ಟ್ರೆಂಚ್)ಗಳನ್ನು ರಚಿಸಿದರು. ಹಣ್ಣಿನ ಗಿಡಗಳು, ಅರಣ್ಯಗಿಡಗಳನ್ನು ನೆಟ್ಟರು. ಕಚ್ಚಾರಸ್ತೆಯ ಬದಿಗಳಲ್ಲೂ ತೆಂಗಿನ ಗಿಡಗಳು. ಹನಿನೀರಾವರಿ ಮೂಲಕ ಗಿಡಗಳಿಗೆ ನೀರುಣಿಕೆ. ಅಗಳು ರಚಿಸಿದ್ದರಿಂದ ಮುಂದಿನ ಮಳೆಗಾಲದಲ್ಲಿ ಮಣ್ಣಿನ ಸವಕಳಿ ನೀಂತಿತು.ನದಿ ನೀರನ್ನು ನಂಬುವಂತಿಲ್ಲ. 93ರ ಸುಮಾರಿಗೆ ಜೈನ್ವ್ಯಾಲಿಯಲ್ಲಿ 12.5 ಕೋಟಿ ಲೀಟರ್ ನೀರಿನ ದೊಡ್ಡ ಇಂಗುಗೊಳ ರಚನೆ. ಇದಕ್ಕೆ 'ಜೈನ್ ಸಾಗರ್' ಎಂದು ಕರೆದರು.

ಗುಡ್ಡದಿಂದ ಇಳಿದು ಬರುವ ನೀರು ಇದರಲ್ಲಿ ಸಂಗ್ರಹ. ಇಲ್ಲಿಂದ ಗುಡ್ಡದ ತುದಿಗೆ! ಮಿಕ್ಕಿದ ನೀರು ಹರಿದು ಹೊರಹೋಗುವಲ್ಲಿ ಬಾವಿ ರಚನೆ. ಈ ಎಲ್ಲಾ ನೀರಿನಾಟದಿಂದಾಗಿ 2001-02ರ ಬರದಲ್ಲೂ ನೀರಿಗೆ ತೊಂದರೆಯಾಗಲಿಲ್ಲ!ಸಮತಳು ಬದು, ಬಾಂದಾರಗಳ ರಚನೆ. ದೂರದಿಂದ ಗುಡ್ಡವನ್ನು ನೋಡಿದರೆ ಮೆಟ್ಟಿಲುಗಳ ಸರಪಳಿಯಂತೆ ಕಾಣುತ್ತದೆ. ಮೆಟ್ಟಿಲುತಟ್ಟು ಅಸಾಧ್ಯವಾದ ಜಾಗದಲ್ಲಿ ಅಡ್ಡವಾಗಿ 'ಕಟ್ಟ'ದಂತಹ ರಚನೆ. ಇದರಿಂದಾಗಿ ಮಳೆನೀರು ಇಂಗಲು ಸಹಕಾರಿ. ಮೆಟ್ಟಿಲು ತಟ್ಟುಗಳು ಮಳೆನೀರನ್ನು ಹಿಡಿದಿಡುತ್ತದೆ. ವ್ಯಾಲಿಯಲ್ಲಿರುವ ಜೈನ್ ಸಾಗರ್ ಕೊಳ ಕಡು ಬೇಸಿಗೆಯಲ್ಲೂ ಬತ್ತುವುದಿಲ್ಲ!

ಜೈನ್ ಅವರ ಈ ಎಲ್ಲಾ ಕೆಲಸಗಳಿಂದಾಗಿ ಮಳೆಕೊಯ್ಲು, ಜಲಸಂರಕ್ಷಣೆ ಮತ್ತು ಮರುಪೂರಣಗಳು ಏಕಕಾಲಕ್ಕೆ ಆಗುವಂತಾಗುತ್ತದೆ.ಮೂವತ್ತು ಸಾವಿರಕ್ಕೂ ಮಿಕ್ಕಿ ಮಾವಿನ ಗಿಡಗಳು, ಹುಣಿಸೆ, ಪೇರಳೆ, ಸೀತಾಫಲಗಳು ಎದ್ದಿವೆ. ಹಸಿರೆಲೆ ಗೊಬ್ಬರ, ಸಾವಯವ ಕೃಷಿ ಫಲವತ್ತೆಗಳು ಮಣ್ಣಿಗೆ ಮರುಜೀವ ಕೊಟ್ಟಿವೆ. ಇಷ್ಟೆಲ್ಲ ಕೆಲಸ ಮಾಡಿದ ಭವರ್ಲಾಲ್ ಜೈನ್ ಯಾರು ಗೊತ್ತೇ - ವಿಶ್ವಖ್ಯಾತಿಯ ಜೈನ್ ಇರಿಗೇಶನ್ ಸಂಸ್ಥೆಯ ಯಜಮಾನ! ಜೈನ್ ಅವರ ನೀರಿನ ಕತೆಯ ಒಟ್ಟು ಸಂದೇಶ - ನೀರನ್ನು 'ಬಡವರ ತುಪ್ಪದ ಹಾಗೆ' ಬಳಸಿ. ಪ್ರತೀ ಕೆಲಸವನ್ನು ಕಡಿಮೆ ನೀರಲ್ಲಿ ಮಾಡುವ ಬಗ್ಗೆ ಚಿಂತಿಸಿ. ನೀರಿನ ಮರುಬಳಕೆ, ಮಳೆನೀರನ್ನು ಬಳಸುವ ಅಭ್ಯಾಸ ಶುರು ಮಾಡಿ.

Saturday, June 13, 2009

ತವರೂರು ಸೇರಿದ ಕೆನ್ ಲವ್

ಸುಮಾರು ಒಂದು ತಿಂಗಳ ಭಾರತ ಪ್ರವಾಸದ ಬಳಿಕ ಹವಾಯಿಯ ಕೃಷಿಕ ಕೆನ್ ಲವ್ ತವರೂರು ಸೇರಿದ್ದಾರೆ. ಕೇರಳದ ವಯನಾಡಿನ ಉರವಿನಲ್ಲಿ ಜರುಗಿದ ಹಲಸು ಮೇಳವನ್ನು ಕೆನ್ ಉದ್ಘಾಟಿಸಿದ್ದರು. ಎರಡು ದಿವಸದ ಮೇಳದಲ್ಲಿ ಕೆನ್ ಅವರೇ ಹೀರೋ! ಅಲ್ಲಿನ ಮಾಧ್ಯಮಗಳಲ್ಲಿ ಕೆನ್ ಅವರದ್ದೇ ಸುದ್ದಿ. ಜೂನ್ 2ರಂದು ಪುತ್ತೂರಿಗೂ ಬಂದಿದ್ದರು. ಸಮೃದ್ಧಿ ಆಯೋಜಿಸಿದ 'ಮುಖಾಮುಖಿ'ಯಲ್ಲಿ ಭಾಗವಸಿದ್ದರು. ಕೃಷಿಕರ ತೋಟಗಳಿಗೂ ಭೇಟಿ ನೀಡಿದ್ದರು ಎರಡ್ಮೂರು ವಾಹಿನಿ ಪ್ರತಿನಿಧಿಗಳು ಕೆನ್ ಅವರ ವಿಶೇಷ ಸಂದರ್ಶನ, ಕ್ಷೇತ್ರ ಭೇಟಿಗಳನ್ನು ದಾಖಲಿಸಿಕೊಂಡಿರುವುದು ಸಂತೋಷದ ವಿಚಾರ. ಇಲ್ಲಿನ ಹಳ್ಳಿ ಜೀವನವನ್ನು ಬಹಳಷ್ಟು ಇಷ್ಟಪಟ್ಟ ಕೆನ್ ಅವರು ಹೇಳಿದ್ದೇನು ಗೊತ್ತೇ - 'ಹವಾಯಿಯ ಮಾಧ್ಯಮಗಳು ಭಾರತವನ್ನು ಬಹಳ ಕೆಟ್ಟದಾಗಿ ನೋಡುತ್ತಿವೆ, ಬರೆಯುತ್ತಿವೆ. ಬಡ ರಾಷ್ಟ್ರ, ಅಶಿಕ್ಷಿತರು ಅಂತ ಹೇಳುತ್ತಿವೆ. ಆದರೆ ಇಲ್ಲಿನ ಚಿತ್ರಣವೇ ಬೇರೆ'. ಬಹುಶಃ ಉಳಿದ ರಾಷ್ಟ್ರದ ಕತೆಯೂ ಒಂದೇ. ಇರಲಿ, ಕೆನ್ ಮತ್ತೊಮ್ಮೆ ಬರಲಿದ್ದಾರೆ, ಇದೇ ಅಕ್ಟೋಬರ್ನಲ್ಲಿ.

Thursday, June 11, 2009

'ಗುನ್ಯಾ ಗುಮ್ಮ'

ಕಳೆದ ವರುಷ ಈ ಸಮಯದಲ್ಲಿ 'ಗುನ್ಯಾ ದರ್ಶನ'! ಬದುಕನ್ನು ನುಂಗಿ ನೊಣೆಯುತ್ತಿತ್ತು. ಪತ್ರಿಕೆಗಳಲ್ಲಿ ರಂಗುರಂಗಿನ ಪುಟಗಳು. ಕೆಲವರ ಕಾಲು ಸೊಟ್ಟಗಂತೆ, ಮುಷ್ಠಿ ಬಿಗಿಹಿಡಿದರೆ ಬಿಡಿಸಲಾಗುತ್ತಿಲ್ಲವಂತೆ, ಕುಳಿದರೆ ಏಳಲಾಗದು, ಶೌಚಕ್ಕೆ ಕುಳಿತರೆ ಅಲ್ಲೇ ಗಂಟೆಗಟ್ಟಲೆ..... ಐವರು ಸತ್ತರಂತೆ.

ಅದೇ ಹೊತ್ತಿಗೆ ನಮ್ಮ ನಾಡಿನ ಆರೋಗ್ಯ ದೊರೆಗಳ ಒಡ್ಡೋಲಗವಾಗಿತ್ತು. ಆರೋಗ್ಯಾಧಿಕಾರಿಗಳಿಂದ 'ಗುನ್ಯಾದಿಂದ ಜೀವಕ್ಕೆ ಅಪಾಯವಿಲ್ಲ' ಎಂಬ ಸಾಂತ್ವನ. ಅಲ್ಲಲ್ಲಿ ಉಚಿತ ಔಷಧಿ ಎಂಬ ಗುಳಿಗೆ (!) ನೀಡಿಕೆ. ಕೆಲವಡೆ ಅಕ್ಕಿ ವಿತರಣೆ. ಹತ್ತು ಕಿಲೋ ಅಕ್ಕಿ ಕೊಟ್ಟು, ನೂರು ಕಿಲೋ ಕೊಟ್ಟವರಂತೆ ಫೋಸ್ ಕೊಡುವ ಇಲಾಖೆ. 'ಮಳೆಬಂದರೆ ಗುನ್ಯಾ ಕೊಚ್ಚಿಕೊಂಡು ಹೋಗುತ್ತದೆ'. ಹೀಗೆ ಗುನ್ಯಾ ಕಥನ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿದ್ದಂತೆ ನನಗೂ ಅಂಟಿತ್ತು!

ಚಿಕೂನ್ಗುನ್ಯಾದಿಂದಾಗಿ ಕೃಷಿ ಎಷ್ಟು ಹಿಂದೆ ಬಂದಿದೆ, ಕೃಷಿಕರ ಸ್ಥಿತಿ-ಗತಿಗಳನ್ನು ಬಿಂಬಿಸುವ ಲೇಖನವೊಂದು 'ಸುಧಾ'ಕ್ಕೆ ಬರೆಯಬೇಕಾಗಿತ್ತು. ಅದಕ್ಕಾಗಿ ಗುನ್ಯಾ 'ಫಲಾನುಭವಿ'ಗಳ ಗ್ರಾಮಕ್ಕೆ ಭೇಟಿ. ಓಡಾಟ. ಮಾಹಿತಿ ಸಂಗ್ರಹ. ಎಲ್ಲಾ ಮುಗಿದು ಮನೆ ತಲಪುವಾಗ ರಾತ್ರಿ ಹನ್ನೊಂದು ಮೀರಿತ್ತು. ಹಗಲಿಡೀ ಓಡಾಟದಿಂದಾಗಿ ರಾತ್ರಿ ಗಾಢನಿದ್ರೆ! ಬೆಳಿಗ್ಗೆ ಎಂದಿಗಿಂತ ಸ್ವಲ್ಪ ತಡವಾಗಿಯೇ ಎಚ್ಚರವಾಗಿತ್ತು. ಗಡಿಬಿಡಿಯಿಂದ ಏಳಲು ಹೋದಾಗ ಗಂಟು ನೋವು, ಸೊಂಟನೋವು. ಹಾಸಿಗೆಯಿಂದ ಮೇಲೇಳಲಾಗದ ಸ್ಥಿತಿ. ಗುನ್ಯಾ ನನ್ನನ್ನು ಅಂಟಿತ್ತು.

ತೆಕ್ಕೊಳ್ಳಿ. ಆಸ್ಪತ್ರೆಗಳ ಓಡಾಟ. ಮಾತ್ರೆಗಳನ್ನು ನುಂಗುವ ಕಾರ್ಯಕ್ರಮ! ಅಂತೂ ಇಂತೂ ಜ್ವರ ಇಳಿದಿತ್ತು. ಕಾಲಿನ ಪಾದದ ಭಾಗ, ಗಂಟು ನೋವು ಶುರುವಾಗಿತ್ತು. ನೋವು ನಿವಾರಕ ಗುಳಿಗೆಗಳನ್ನು ನುಂಗುವುದೇ ಇದಕ್ಕಿರುವ ದಾರಿ. ಬದುಕಿನ ರಥ ಸಾಗಬೇಕಲ್ಲಾ, ಮಾತ್ರೆಗಳನ್ನು ನುಂಗಿದ್ದೇ ನುಂಗಿದ್ದು. ಐದಾರು ತಿಂಗಳು ಇದೇ ಸ್ಥಿತಿ. 'ಶತ್ರುವಿಗೂ ಬೇಡ' ಗುನ್ಯಾ ಸಹವಾಸ!

ಲೇಖನ ಮೂರು ತಿಂಗಳ ಬಳಿಕ ಬರೆದೆ. 'ಅನುಭವಿಸಿ ಬರೆಯಬೇಕು' ಹಿರಿಯರ ಪಾಠ. ಹಾಗಾಗಿ ಗುನ್ಯಾವನ್ನು 'ಅನುಭವಿಸಿ' ಬರೆದ ಸುಖ! ವರುಷ ಕಳೆಯಿತು. ಗುನ್ಯಾ ಶೇಷ - ಇನ್ನೂ ಬಿಟ್ಟಿಲ್ಲ. ಒಂದು ಕಿಲೋಮೀಟರ್ ನಡೆದರೆ ಸಾಕು, ಕಳೆದ ವರುಷ ಯಾವ ನೋವನ್ನು ಅನುಭವಿಸಿದ್ದೇನೋ ಅದೇ ಗುನ್ಯಾ ನೋವು-ಸಂಕಟ. ಭಾರ ಎತ್ತುವಂತಿಲ್ಲ. ವೇಗವಾಗಿ ನಡೆಯುವಂತಿಲ್ಲ. ಒಂದೇ ಕಡೆ ಎರಡ್ಮೂರು ಗಂಟೆ ಕುಳಿತುಕೊಳ್ಳುವಂತಿಲ್ಲ. ನೋವು ಅಟ್ಟಿಸಿಕೊಂಡು ಬರುತ್ತಿದೆ. ಯಾವುದೇ ಮಾತ್ರೆ-ಕಷಾಯಗಳಿಲ್ಲ. ಅನುಭವಿಸುವುದೊಂದೇ ದಾರಿ.

ಪುಸ್ತಕ ಸ್ನೇಹಿತ ಪ್ರಕಾಶ ಒಂದು ಸುದ್ದಿ ತಂದಿದ್ದರು. ಯಾರಿಗೋ ಪಕ್ಷವಾತ ಅಂಟಿ ಮಾತನಾಡಲೂ ಆಗದ ಸ್ಥಿತಿಯಿತ್ತು. ಯಾವುದೋ ಸ್ವಾಮಿಗಳಲ್ಲಿ ಹೋದಾಗ 'ಅದೆಲ್ಲಾ ಪೂರ್ವ ಜನ್ಮದ ಕರ್ಮಫಲ' ಅಂದರಂತೆ. ಬಹುಶಃ ಈ ಗುನ್ಯಾ ಪೀಡನೆ ಕರ್ಮಫಲವೇ ಇರಬೇಕು! ಬದುಕನ್ನು ಅನುಭವಿಸಬೇಕು - ಉಪನ್ಯಾಸದಲ್ಲೊಬ್ಬ ಮಹಾನುಭಾವರು ಹೇಳಿದ ಮಾತು. ಅದನ್ನು ಸತ್ಯಮಾಡಲು ಗುನ್ಯಾ ನೆರವಾಗುತ್ತಿದೆ! ಭಳಿರೇ, ಗುನ್ಯಾ!

Tuesday, June 9, 2009

ಸ್ನೇಹಿತನ ನೆನಪು!

ಬದುಕೇ ಹೀಗೆ. ಒಮ್ಮೆ ನೆನಪು, ಮತ್ತೊಮ್ಮೆ ಮರೆವು. ಬದುಕಿನ ಜಂಜಾಟದಲ್ಲಿ ಅನೇಕ ವ್ಯಕ್ತಿಗಳು ಹಾದುಹೋಗುತ್ತಾರೆ. ಎಲ್ಲರನ್ನೂ ನೆನಪಿನ ಬುತ್ತಿಯಲ್ಲಿಡಲು ಅಸಾಧ್ಯ.

ಬಾಲ್ಯದ ಸ್ನೇಹಿತರನ್ನು ಮತ್ತು ಶಾಲಾ ಸಹಪಾಠಿಗಳನ್ನು ಮರೆಯಲು ಸಾಧ್ಯವಿಲ್ಲ. ಬದುಕಿಗಾಗಿ ಬೇರೆ ಬೇರೆ ವೃತ್ತಿಗಳನ್ನು ಅರಿಸಿ ದೂರದೂರಿಗೋದರೂ, ಅಪರೂಪಕ್ಕೊಮ್ಮೆ ಹಳೆಯ ನೆನಪು ಕಾಡುತ್ತದೆ.

ನಿನ್ನೆಯೂ ಹಾಗೆಯೇ ಆಯಿತು. ಬಾಲ್ಯ ಸ್ನೇಹಿತ ಸುಬ್ರಹ್ಮಣ್ಯನ ನೆನಪು ಕಾಡುತ್ತಾ ಇತ್ತು. ಕಾರಣ ಗೊತ್ತಿಲ್ಲ. ಇಂದು ಮಿಂಚಂಚೆ ತೆರೆದಾಗ ಆತನ ಮೈಲ್ ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿತು. ಜಾಲತಾಣಗಳನ್ನು ಜಾಲಾಡಿ ಹೇಗೋ ಐಡಿ ಪತ್ತೆ ಮಾಡಿ ಮಿಂಚಂಚೆ ಮಾಡಿದ್ದ. ಖುಷಿಯೋ ಖುಷಿ.

ಶಾಲೆಯಲ್ಲಿ ಒಂದೇ ಬೆಂಚಲ್ಲಿ ಕುಳಿತು ಬೆಂಚನ್ನು ಬಿಸಿ ಮಾಡಿದ್ದು, ನೋಟ್ಸ್ಗಳ ವಿನಿಮಯ, ಜಾತ್ರೆಯ ಮಜಾ, ಕೆಲವೊಮ್ಮೆ ನಮ್ಮೂರ ದೇವಾಲಯದಲ್ಲಿ ಇಬ್ಬರೂ ಬಾಣಸಿಗರಾದುದು, ಕಾಡು-ಮೇಡು ಅಲೆದುದು, ಪೂಜೆ-ಪುರಸ್ಕಾರಗಳಲ್ಲಿ ಭಾಗವಹಿಸಿದ್ದು, ಹೊಳೆಯಲ್ಲಿ ಈಜಿದ್ದು, ಚೆನ್ನೆಮಣೆ ಆಟ..ಹೀಗೆ ಒಂದೊಂದೇ ನೆನಪುಗಳು ರಾಚಲು ಶುರು. ಇಂತಹ ನೆನಪಿನಲ್ಲಿ ಏನೋ ಖುಷಿ.

ಬದುಕಿನ ಒಂದು ಕಾಲಘಟ್ಟದಲ್ಲಿ ನನ್ನ ದಾರಿ ಒಂದಾಯಿತು, ಸುಬ್ರಹ್ಮಣ್ಯನ ದಾರಿ ಇನ್ನೊಂದಾಯಿತು. ಆತ ಆಸ್ಟ್ರೇಲಿಯಾದಲ್ಲಿದ್ದಾನೆ. ಪುರೋಹಿತ ವೃತ್ತಿ. ಹೆಸರಿನೊಂದಿಗೆ 'ಪಂಡಿತ' ಹೊಸೆದಿದೆ. ಈ ಕ್ಷೇತ್ರದಲ್ಲಿಆತನಿಗೆ ಒಳ್ಳೆಯ ಹೆಸರಿದೆ. ಶುಭವಾಗಲಿ, ಕಂಗ್ರಾಟ್ಸ್.

ನನಗಾದರೋ ಪೆನ್ನು, ಕಾಗದಗಳ ಸಹವಾಸ. ಆ ವೃತ್ತಿ-ಈ ವೃತ್ತಿ ಅಂತ ಎಲ್ಲಿಗೂ ಹಾರದೇ 'ಇದ್ದುದರಲ್ಲಿ ಖುಷಿ' ಪಡುತ್ತಿದ್ದೇನೆ. ಕೆಲವೊಂದು ಸಲ ಸಮಾಜ, ಸ್ನೇಹಿತರು, ನಂಬಿದ ಹಿರಿಯರಿಂದ ಈ ಖುಷಿಯನ್ನು ಕಸಿಯುವ ಪ್ರಯತ್ನಗಳು ಮನಸ್ಸನ್ನು ಅಸ್ಥಿರನನ್ನಾಗಿ ಮಾಡುತ್ತದೆ. ಸಾಂತ್ವನ ಹೇಳುವವರು ಇಲ್ಲದಾದಾಗ ಸ್ವಯಂ ಸಾಂತ್ವನ. ಈ ರೀತಿ ಎಷ್ಟು ದಿವಸ ಅಂತ ಕಾಲವೇ ಉತ್ತರಿಸಬೇಕು. ಏನನ್ನೂ ಸಾಧಿಸಲಾಗಿಲ್ಲ. ಎಲ್ಲರೂ ಹೇಳುವಂತೆ ಬದುಕಿನಲ್ಲಿ 'ಸೆಟ್ಲ್' ಆಗಬೇಕಿದೆ. ಬಹುಶಃ ಈ ಆಶಯಕ್ಕೆ ದಾರಿ ಮಾತ್ರ ಬಹುದೂರ! ಆಯಷ್ಯ ಮಾತ್ರ ಸದ್ದಿಲ್ಲದೆ ತನ್ನ ಇಳಿಲೆಕ್ಕದಲ್ಲಿದೆ.

ಬೋರ್ ಆಯ್ತಾ. ಓದಿ ಮರೆತುಬಿಡಿ. ಇಷ್ಟನ್ನು ಹೇಳಿದುದರಿಂದ ನಾನು ನಿರಾಳ!

Monday, June 8, 2009

ಚೆನ್ನಾಗಿ ಬದುಕಬೇಕು - ಬದುಕಿ ಸಾಧಿಸಬೇಕು


ಹೆಸರು : ಡಾ. ಚಂದ್ರಶೇಖರ ಚೌಟ (ಡಿ.ಸಿ.ಚೌಟ) * ಹುಟ್ಟಿದ ದಿನಾಂಕ : 8-12-1944 * ತಂದೆ : ನಾರಾಯಣ ಚೌಟ * ತಾಯಿ : ಮೋಹಿನಿ * ಜನನ ಸ್ಥಳ : ಮೀಯಪದವು * ಮಡದಿ : ಸ್ವರೂಪರಾಣಿ * ಮಕ್ಕಳು : ಸ್ವರಾಜ್, ದಿವ್ಯಾ

ತಂದೆಯವರು ಊರ ಪಟೇಲರು. ಅವರಿಗೆ 'ದೆಯ್ಯು' ಎಂಬ ಹಿರಿಯ 'ಆಲ್ರೌಂಡರ್' ಸಾಥಿ. ಕೃಷಿ ಚಟುವಟಿಕೆಗಳ ಮೇಲುಸ್ತುವಾರಿಕೆ ಈ ಸಾಥಿಯದೇ. ಬಾಲ್ಯದಿಂದಲೇ ನಮಗೆಲ್ಲಾ ಕೃಷಿ ಅಂಟಿಕೊಂಡಿತ್ತು. 'ದೆಯ್ಯು' ನಮಗಂತೂ 'ಕೃಷಿ ಪ್ರಿನ್ಸಿಪಾಲ್'!

ಆಗ ಏತದಿಂದ ನೀರಾವರಿ. ನೀರು ಹಾಯಿಸುವುದು, ಅಡಿಕೆ ಹೆಕ್ಕುವುದು ನಮಗೆ ಬಾಲ್ಯಕಾಲದ ಡ್ಯೂಟಿಗಳು. ಪ್ರಿನ್ಸಿಪಾಲರ ಕಣ್ಣು ತಪ್ಪಿಸಿ ಉಳುಮೆ ಮಾಡಿ ಬೈಸಿಕೊಂಡ ದಿನಗಳಿನ್ನೂ ಹಸಿರು. ಎಕರೆಗಟ್ಟಲೆ ತರಕಾರಿ, ಮೆಣಸು, ಭತ್ತದ ಬೇಸಾಯದ ನೆನಪು. ತರಕಾರಿ ಆಪ್ತೇಷ್ಟರಿಗೆ. ಗೆಣಸು ಹಪ್ಪಳವಾಗಿ ಮೌಲ್ಯವರ್ಧನೆ. ಮೂಟೆಗಟ್ಟಲೆ ಮೆಣಸು ಮಾರುಕಟ್ಟೆಗೆ.

ತಂದೆ ಪಟೇಲರಾದುದರಿಂದ ಸಂದರ್ಶಕರು ಹೆಚ್ಚು. ಅವರ ಪರಿಚಯ ಮಾಡಿಕೊಂಡು ಹರಟುವ ಹವ್ಯಾಸ ನನ್ನದು. ತಾಯಿ ತಂದೆಗೆ ಹೆಗಲೆಣೆಯಾಗಿ ನಿಂತು ಮನೆ ವಾರ್ತೆ . ನನ್ನ ಹೈಸ್ಕೂಲ್ ವಿದ್ಯಾಭ್ಯಾಸದೊಂದಿಗೆ ಕೃಷಿಯ ಪ್ರಾಯೋಗಿಕ ಕಲಿಕೆಯೂ ಸೇರಿತ್ತು. ನನ್ನ ಉತ್ಸಾಹ ನೋಡಿ 'ಇವನನ್ನು ಡಾಕ್ಟರಾಗಿಸಬೇಕು' ಎನ್ನುತ್ತಿದ್ದರು ತಂದೆಯವರು.
ಮಂಗಳೂರು ಅಲೋಶಿಯಸ್ನಲ್ಲಿ ಕಾಲೇಜು. ಮುಂಬಯಿಯಲ್ಲಿ ಎಂಎಸ್ಸಿ. ಸಸ್ಯಶಾಸ್ತ್ರದಲ್ಲಿ ಪಿಎಚ್ಡಿ. ಆರು ವರುಷ ಮುಂಬಯಿ ವಾಸ. ಸ್ನೇಹಿತರೊಂದಿಗೆ ಸೇರಿ ಖಂಡಾಲಾ ಘಾಟ್ನಲ್ಲಿ ಗುಲಾಬಿ ತೋಟ ಎಬ್ಬಿಸುವ ಬಯಕೆ ಆರಂಭದಲ್ಲೇ ಮುರುಟಿತು! ಎಂಎಸ್ಸಿಯಲ್ಲಿ ಮೊದಲ ರ್ಯಾಂಕ್. ಪಿಎಚ್ಡಿಗೆ ಅರ್ಜಿ ಹಾಕಿಯಾಗಿತ್ತಷ್ಟೇ. ಬ್ಯಾಂಕ್ ಆಫ್ ಇಂಡಿಯಾದ 'ಕ್ಯಾಂಪಸ್' ಆಯ್ಕೆಯಲ್ಲಿ ಪಾಸಾದೆ. 'ಉದ್ಯೋಗ ಬಿಡಬೇಡ ಹೋಗು' ಅಂತ ಗೈಡ್ ಒತ್ತಾಯಿಸಿದರೂ ತಿರಸ್ಕರಿಸಿದೆ. ಪಿಎಚ್ಡಿ ಮಾಡುವ ಛಲ.
ಮುಂಬಯಿಯ 'ರಂಗುರಂಗಿನ ಬೀಚ್'ಗಳಿಗೆ ಹೋಗಲೇ ಇಲ್ಲ! ನಾವು ಐದಾರು ಮಂದಿ ಹಳ್ಳಿಪ್ರದೇಶದಲ್ಲಿ ರಜಾ ಕಳೆಯುತ್ತಿದ್ದೆವು. ಕಾಂಡ್ಲಾ ತೋಟಗಳ ವೀಕ್ಷಣೆ, ಸಮುದ್ರಪಾಚಿ ಸಂಗ್ರಹ, ಸಿಹಿನೀರಿನ ಪಾಚಿ ಸಂಗ್ರಹ, ಹೀಗೆ ಪರಿಸ್ನೇಹಿ ಆಸಕ್ತಿಗಳು. ರವಿವಾರ ಹತ್ತಿರವಾಗುತ್ತಿದ್ದಂತೆ, 'ರಜಾ ಪ್ಲಾನೂ' ರೆಡಿ.

'ಏನೋ ಸಾಧಿಸಬೇಕು' ಎಂಬ ಕನಸಿತ್ತು, ಸ್ಪಷ್ಟತೆಯಿರಲಿಲ್ಲ. ಹೆಸರಿನೊಂದಿಗೆ 'ಡಾ' ವಿಶೇಷಣ ಹೊಸೆದರೂ, ವಿದೇಶಕ್ಕೆ ಹಾರುವ ನಿರ್ಧಾರದಿಂದ ಕೆಲಸಕ್ಕೆ ಬೇರೆಲ್ಲೂ ಅರ್ಜಿ ಹಾಕಲಿಲ್ಲ! ಹಾಕಿದ್ದರೆ, ಈಗ ಬಿಳಿ ಕಾಲರ್ ಹುದ್ದೆಯಲ್ಲಿ ಇರುತ್ತಿದ್ದೆನೇನೋ!
ಅಣ್ಣ ಕೃಷ್ಣಾನಂದ ಚೌಟ ಆಫ್ರಿಕನ್ ಘಾನಾದಲ್ಲಿ ಪ್ರಭಾವಿ ಹುದ್ದೆಯಲ್ಲಿದ್ದರು. ಅಲ್ಲಿಗೆ ಹಾರುವ ಕನಸಿಗೆ ಆ ದೇಶದ ರಾಯಭಾರಿ ಗರಿ ಕಟ್ಟಿದ್ದ. ಗ್ರಹಚಾರ ನೋಡಿ, ಅದೇ ಕಾಲಕ್ಕೆ ಅಲ್ಲಿ ಗಲಭೆ ಶುರು. ಕನಸೂ ಮುರಿದುಬಿತ್ತು.

ಮರಳಿ ಮಣ್ಣಿಗೆ. ಆರು ವರುಷ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ. ಒಂದಷ್ಟು ಸಂಶೋಧನೆ. ಮಣ್ಣಿನ ಮಿಡಿತ ಪುನಃ ತೋಟಕ್ಕೆ ಸೆಳೆಯಿತು. ತಮ್ಮ ಮನೋಹರನೊಂದಿಗೆ ಬೆಂಗಳೂರು ಮಾಗಡಿ ರಸ್ತೆಯ ಗೊಲ್ಲರಹಟ್ಟಿಯಲ್ಲಿ ಕೃಷಿ ಶುರು (1978). ದ್ರಾಕ್ಷಿ, ತರಕಾರಿ, ಸಿಹಿನೀರಿನ ಮೀನುಗಾರಿಕೆ, ಅಣಬೆ. ಆಗ ರಾಜ್ಯದಲ್ಲೇ ನಮ್ಮದು ಪ್ರಪ್ರಥಮ ಮೀನು ಕೃಷಿ. ನಮ್ಮ ಯಶೋಗಾಥೆಯು ಕೇಳಿ, ತೋಟಕ್ಕೆ ಆಸಕ್ತರ ತಂಡಗಳೇ ಬಂದುವು. ನಮ್ಮ ಜ್ಞಾನವೂ ಹೆಚ್ಚಿತು. ಉತ್ಪನ್ನಗಳಿಗೆ ಬೆಂಗಳೂರಿನ ಪ್ರತಿಷ್ಠಿತ ಮಳಿಗೆಗಳಲ್ಲಿ ಮಾರುಕಟ್ಟೆ ಸಿಕ್ಕಿತು. ವರುಷ ಸರಿದಂತೆ ಗೊಲ್ಲರಹಟ್ಟಿಗೆ ಸಿಟಿ ನುಗ್ಗಿತು! ಕೃಷಿ ಅಸಾಧ್ಯವಾದಾಗ ಅದನ್ನು 'ರೆಸಾರ್ಟ್' ಮಾಡಿದೆವು.
ಮಂಗಳೂರಿನಲ್ಲಿ 'ಮುಂಗಾರು' ದಿನಪತ್ರಿಕೆಯ ಸಾರಥ್ಯ. ಆಡಳಿತ ನಿರ್ದೇಶಕನ ಜವಾಬ್ದಾರಿ. ಎರಡು ವರುಷ ಪತ್ರಿಕೋದ್ಯಮದ ಸೂಕ್ಷ್ಮಗಳನ್ನು ತಿಳಿಯುವ ಅವಕಾಶ. ಇದೇ ಹೊತ್ತಿಗೆ ಘಾನಾದಿಂದ ಅಣ್ಣನೂ ಊರಿಗೆ ಬಂದ.
ಬೆಂಗಳೂರಿನ ಕೃಷಿ ಅನುಭವ ಬದುಕಿಗೊಂದು ತಿರುವು. ಕೊನೆಯ ತಮ್ಮ ಪ್ರಭಾಕರನೂ ಸೇರಿ, ಕೃಷಿ ವಿಸ್ತರಣೆಯ ಒಕ್ಕೊರಲ ನಿಲುಮೆ. ನಮ್ಮದು ಕಣಿವೆಯಾಕಾರದ ಭೂಪ್ರದೇಶ. ಸಮತಟ್ಟು ಮಾಡದೆ, ತೋಟ ಎಬ್ಬಿಸಲು ನಿರ್ಧಾರ. ಅಡಿಕೆ, ಭತ್ತಕ್ಕೆ ಸೀಮಿತವಾಗಿದ್ದ ಕೃಷಿಭೂಮಿಯಲ್ಲಿ ಅಂಗಾಂಶ ಬಾಳೆ, ತೆಂಗು, ಕೊಕ್ಕೋ, ವೆನಿಲ್ಲಾಗಳು ತಲೆ ಎತ್ತಿದುವು. ಸೀಯಾಳದ ಬಗ್ಗೆ ನಮಗೆಲ್ಲಾ ಮೊದಲಿನಿಂದಲೇ ಮೋಹ. ಅದು ಪ್ರಕೃತಿದತ್ತ ಅಮೃತ ತಾನೆ. ನಮ್ಮ ತೋಟವೀಗ ತೆಂಗಿನ ಗುರುತಿನ 'ಚೌಟರ ತೋಟ'.
ಪಿಎಚ್ಡಿ ಶಿಕ್ಷಣ ಕೃಷಿಗೆ ಪೂರಕವಾಯಿತು. 'ಸಂಶೋಧನಾ ದೃಷ್ಟಿ'ಯಿಂದ ನೋಡುವುದಕ್ಕೆ ಸಹಕಾರಿ. ಬೇರೆ ಬೇರೆ ಇಲಾಖೆಗಳ, ವಿಶ್ವವಿದ್ಯಾಲಯಗಳ ಒಡನಾಟ. ಬೇರೆ ಬೇರೆ ಸಂಸ್ಥೆಗಳಲ್ಲಿ ಹುದ್ದೆಗಳು. ಕಾರ್ಯಗಾರ, ಸಮ್ಮೇಳನಗಳ ಆಯೋಜನೆ. ಅವುಗಳಲ್ಲಿ ಮುಖ್ಯ - ಮೀಯಪದವು ಕೃಷಿಮೇಳ, ತೋಟದಲ್ಲೇ ನಡೆಸಿದ ತೆಂಗಿನ ಬಗೆಗಿನ ಮಾಧ್ಯಮ ಕಾರ್ಯಗಾರ. ವೆನಿಲ್ಲಾ ಬೆಳೆಗಾರರ ಸಂಘದ 'ವೆನಿಲ್ಲಾ ಸಮ್ಮೇಳನ'. ಬದುಕಿನಲ್ಲಿ ಹಲವು ತಿರುವು ಸಿಕ್ಕರೂ, ಕೃಷಿ ಕೈಹಿಡಿಯಿತು. 'ಚೆನ್ನಾಗಿ ಬದುಕಬೇಕು' ಎಂಬ ಆಸೆಯನ್ನು ಕೃಷಿ ಪೂರೈಸಿತು.

'ಸಾರ್ವಜನಿಕ ಸೇವೆ ಸಾಕು, ಇನ್ನು ಏನಿದ್ದರೂ ನನ್ನ ಮನೆ- ನನ್ನ ತೋಟ' ಅಂದುಕೊಂಡಿದ್ದೇನೆ.

- ನಿರೂಪಣೆ : ನಾ. ಕಾರಂತ ಪೆರಾಜೆ


Wednesday, June 3, 2009

ಸೋನ್ಸ್ ಫಾರಂನಲ್ಲಿ 'ಕೆನ್'


ಕೆನ್ ಲವ್ - ಹವಾಯಿಯ ಹಣ್ಣು ಕೃಷಿಕ. ಮೂಡಬಿದಿರೆಯ ಸೋನ್ಸ್ ಫಾರಂನ ಡಾ.ಎಲ್.ಸಿ.ಸೋನ್ಸ್ ಕನ್ನಾಡಿನ ಹಣ್ಣು ಕೃಷಿಕ. ಇಂದು ಇಬ್ಬರೂ ಜತೆಯಾಗಿ ಹಣ್ಣುಗಳೊಂದಿಗೆ ಮಾತನಾಡಿದರು.

ಸೋನ್ಸ್ ಫಾರಂ - ಭಾರತದ ಹಣ್ಣುಗಳಲ್ಲದೆ, ಕಡಲಾಚೆಯ ಹಣ್ಣುಗಳನ್ನು, ಗಿಡಗಳನ್ನು ಆಸಕ್ತರಿಗೆ ವಿತರಿಸಿದ ಅಪರೂಪದ ತೋಟ. ರಂಬುಟಾನ್, ಡ್ಯೂರಿಯನ್, ಮ್ಯಾಂಗೋಸ್ಟಿನ್..ಮೊದಲಾದ ಹಣ್ಣುಗಳ ಜತೆ ಸೋನ್ಸ್ರನ್ನು ನೆನಪಿಸಿಕೊಳ್ಳದಿದ್ದರೆ ತಪ್ಪಾದೀತು!

ಕೃಷಿಕನೇ ಹಣ್ಣುಗಳನ್ನು ಬೆಳೆದು ಮಾರಬೇಕು - ಕೆನ್ ಉವಾಚ. ಸೋನ್ಸ್ ಅವರು ತನ್ನ ತೋಟದ ಹಣ್ಣುಗಳನ್ನು ಮಾರುವುದು ಮಾತ್ರವಲ್ಲದೆ, ಅದನ್ನು ಮೌಲ್ಯವರ್ಧನೆ ಮಾಡುವತ್ತ ಒಂದು ಹೆಜ್ಜೆ ಮುಂದೆ. ಅನಾನಸ್ ತಾಜಾ ಜ್ಯೂಸ್, ಗೇರು ಹಣ್ಣಿನ ಜ್ಯೂಸ್.. ಲಭ್ಯ. ಜತೆಗೆ ಖರೀದಿಗೆ ಹಣ್ಣುಗಳು.

ನಾವಿಂದು ಭೇಟಿ ಕೊಟ್ಟಾಗ ಹಲಸನ್ನು ಒಯ್ಯಲು ಲಾರಿಯೊಂದು ಬಂದಿತ್ತು. 'ಮೇ-ಜೂನ್ ತಿಂಗಳಲ್ಲಿ ಸುತ್ತುಮುತ್ತಲಿನ ಹಲಸೆಲ್ಲಾ ಮಹಾರಾಷ್ಟ್ರ ಸೇರುತ್ತದೆ' ಸೋನ್ಸ್ ಮಾತಿಗೆಳೆದರು. ಒಂದು ಹಲಸಿಗೆ ಒಂದು-ಒಂದೂವರೆ ರೂಪಾಯಿಯಂತೆ ಮಾರಾಟ. ಮಹಾರಾಷ್ಟ್ರ ತಲಪುವಾಗ? ಹಲಸು ಲಾರಿಯೇರುವಾಗ ಕೆನ್ ಅವರಿಗೆ ಖುಷಿಯೋ ಖುಷಿ. ಶ್ರೀ ಪಡ್ರೆಯವರು ಮೇಣವನ್ನೂ ಲೆಕ್ಕಿಸದೆ ಲಾರಿಯೇರಿ ಫೋಟೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು!

ಸೋನ್ಸ್ರಿಂದ ಫಾರಂನಲ್ಲಿರುವ ಮ್ಯೂಸಿಯಂ, ಕೃಷಿಕ್ರಮಗಳು, ವಿವಿಧ ಹಣ್ಣುಗಳ ಪರಿಚಯ. ಚತುಶ್ಚಕ್ರ ವಾಹನದಲ್ಲಿ ತೋಟದಲ್ಲೆಲ್ಲಾ ಓಡಾಟ. ಇಡೀ ದಿವಸ ಹಣ್ಣುಗಳ ವಿಚಾರವಲ್ಲದೆ ಬೇರೇನೂ ಮಾತುಕತೆ ಇರಲಿಲ್ಲ!

ಉತ್ತಮ ಆತಿಥ್ಯ. ಹಣ್ಣುಗಳ ಸಮಾರಾಧನೆ. ಉತ್ಪನ್ನಗಳ ಪರಿಚಯ. ಕೆನ್ ಆಗಮನ ಡಾ.ಸೋನ್ಸ್ರ ಸಹೋದರ ಐ.ವಿ.ಸೋನ್ಸ್, ಪುತ್ರ ವಿನೋದ್ ಮತ್ತು ಮನೆ ಮಂದಿ ಎಲ್ಲರ 'ಬ್ಯುಸಿ'ಯನ್ನು ಮರೆಸಿತ್ತು!

ನಾಳೆ ಕೆನ್ ಲವ್ ಅವರು ಶ್ರೀ ಪಡ್ರೆಯವರೊಂದಿಗೆ ಕೇರಳದ ವಯನಾಡಿನ ಉರವಿನಲ್ಲಿ ನಡೆಯುವ ಹಲಸು ಉತ್ಸವದಲ್ಲಿ ಭಾಗಿ. ಕೆನ್ ಅವರಿಂದಲೇ ಮೇಳದ ಉದ್ಘಾಟನೆ! ಕಂಗ್ರಾಟ್ಸ್!

Tuesday, June 2, 2009

ಪುತ್ತೂರಿನಲ್ಲಿ 'ಕೆನ್ ಲವ್'


ಹವಾಯ್ನಿಂದ ಹಾರಿಬಂದ ಹಣ್ಣುಕೃಷಿಕ ಕೆನ್ ಲವ್ ಅವರಿಂದ ಹಣ್ಣುಪ್ರಿಯರೊಂದಿಗೆ ಇಂದು ಸಂವಾದ. ಕೃಷಿಕರನ್ನು ಕೃಷಿಯಲ್ಲಿ ಉಳಿಸಲು ರೂಪಿಸಿದ ತಂತ್ರಗಳ ವಿನಿಮಯ. ಮೌಲ್ಯವರ್ಧನೆಯ ಮಾತುಕತೆ. ಬೆಳೆಯುವಲ್ಲಿಂದ ಮಾರುಕಟ್ಟೆ ತನಕದ ವಿವಿಧ ಜಾಣ್ಮೆಯ ಕೆಲಸಗಳ ನಿರೂಪಣೆ. 'ಬೆಳೆಯುವವನೇ ಮಾರಬೇಕು' ಎಂಬುದು ಕೆನ್ ಅವರ ಯಶಮಂತ್ರ.

ಪುತ್ತೂರಿನ ಗಿಡಗೆಳೆತನ ಸಂಘ 'ಸಮೃದ್ಧಿ' ಮತ್ತು ಅಡಿಕೆ ಪತ್ರಿಕೆ ಜಂಟಿಯಾಗಿ ಸಮಾರಂಭವನ್ನು ಸಂಯೋಜಿಸಿತ್ತು. ದೂರದ ಗದಗಿನಿಂದ ಆರ್.ಎಸ್.ಪಾಟೀಲ್, ಶಿರಸಿಯಿಂದ ಬಾಲಚಂದ್ರ ಹೆಗಡೆ ಸಾಯಿಮನೆಯವರನ್ನು ಕೆನ್ ಆಕರ್ಶಿದ್ದರು.
ಕೇರಳದ ಪತ್ತನಾಂತಿಟ್ಟದಲ್ಲಿ ಕಳೆದ ವಾರ ಜರುಗಿದ ಹಲಸು ಮೇಳದಿಂದ ಶ್ರೀ ಪಡ್ರೆಯವರು ತಂದ ಹಲಸಿನ ವಿವಿಧ ಮೌಲ್ಯವವರ್ಧಿತ ಉತ್ಪನ್ನಗಳ ಪ್ರದರ್ಶನ. ಕಿನಿಲ ಅಶೋಕರಿಂದ ಕೆನ್ ಅವರಿಗೆ 'ಖರ್ಜೂರ ತಾಂಬೂಲ' ಉಡುಗೊರೆ.

ಹಿರಿಯ ಕೃಷಿಕ ಸಮೃದ್ಧಿಯ ಮಾಜಿ ಅಧ್ಯಕ್ಷ ಡಾ.ಕೆ.ಎಸ್.ಕಾಮತ್ರ ಹಿರಿತನದಲ್ಲಿ ಸಭಾಕಲಾಪ. ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್ರಿಂದ ಶುಭಾಶಂಸನೆ. ಅಡಿಕೆ ಪತ್ರಿಕೆಯ ಕಾ. ಸಂಪಾದಕ ಶ್ರೀ ಪಡ್ರೆಯವರಿಂದ ಇಡೀ ಕಾರ್ಯಕ್ರಮದ ಸಾರಥ್ಯ. ಸಮೃದ್ಧಿ ಅಧ್ಯಕ್ಷ ಮೋಹನ ಪ್ರಭು ವೇದಿಕೆಯಲ್ಲಿ ಉಪಸ್ಥಿತಿ. ಎ.ಪಿ.ಸದಾಶಿವ ಮರಿಕೆಯವರಿಂದ ವಂದನೆ. ಶಿವಸುಬ್ರಹ್ಮಣ್ಯರಿಂದ ನಿರ್ವಹಣೆ.

ಅಪರಾಹ್ನ ಕೃಷಿಕ ಸೇಡಿಯಾಪು ಜನಾರ್ದನ ಭಟ್ಟರ ತೋಟಕ್ಕೆ ಕೆನ್ ಭೇಟಿ. ಶ್ರೀ ಪಡ್ರೆ, ಮಂಚಿ ಶ್ರೀನಿವಾಸ ಆಚಾರ್, ಆರ್.ಎಸ್.ಪಾಟೀಲ, ಬಾಲು ಹೆಗಡೆ.. ಹೆಗಲೆಣೆ. ವಿಶ್ವಪ್ರಸಾದ್ ಸೇಡಿಯಾಪು ಮತ್ತು ಕುಟುಂಬದ ಸದಸ್ಯರೆಲ್ಲರ ಆತ್ಮೀಯ ಆತಿಥ್ಯ.
ನಾಳೆ ಕೆನ್ ಲವ್ ಮೂಡಬಿದಿರಿಯ ಡಾ.ಎಲ್.ಸಿ.ಸೋನ್ಸ್ ಹಣ್ಣಿನ ತೋಟಕ್ಕೆ!



Monday, June 1, 2009

ಬಿಳಿಗೆರೆ 'ಎಳನೀರು ಮೇಳ'


ಹಲಸು ಮೇಳ, ಮಿಡಿಮಾವು ಮೇಳ, ಕೃಷಿ ಮೇಳ... ಈಗ ಎಳನೀರಿನ ಸರದಿ. ತಿಪಟೂರು ಸನಿಹದ ಬೆಳಿಗೆರೆಯಲ್ಲಿ ಮೇ ತಿಂಗಳಾಂತ್ಯಕ್ಕೆ ಎರಡು ದಿವಸದ ಎಳನೀರು ಮೇಳ ನಡೆದಿತ್ತು. ಬಿಳಿಗೆರೆ ಕೃಷ್ಣಮೂರ್ತಿ ಮತ್ತು ಬಳಗದ ಸಾರಥ್ಯ. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆ ಮತ್ತು ಮೀಯಪದವಿನ ಡಾ.ಚಂದ್ರಶೇಖರ ಚೌಟ ಎರಡೂ ದಿವಸಗಳಲ್ಲಿ ತಿಳಿಸಿದ ವಿಚಾರಗಳು ಒಂದೇ, ಎರಡೇ! ಎಳನೀರಿನ ಸಾಧ್ಯತೆಗಳನ್ನು ಪಡ್ರೆ ತೆರೆದಿಟ್ಟರೆ, ಚೌಟರು ಎಳನೀರು ಮಾರಾಟದ ಸುತ್ತ ಮಾತನಾಡಿದರು. ಪ್ರಶ್ನೆಗಳ ಮೊನಚಿಗೆ ಇಬ್ಬರಲ್ಲೂ ಹರಿತ ಉತ್ತರವಿತ್ತು. ಕೃಷ್ಣಮೂರ್ತಿಯವರಿಂದ ಆಗಾಗ್ಗೆ ಇಂಜಕ್ಷನ್! ಪ್ರಚಾರದಷ್ಟು ಜನ ಸೇರಿಲ್ಲವಾದರೂ, ಬಂದಷ್ಟು ಜನ ಎಳನೀರು ಪ್ರಿಯರೇ. 'ಎಳನೀರು ಕೊಯ್ದು ಕುಡಿಯುವುದೋ, ಮಾರುವುದೋ ಇಲ್ಲಿಯವರಿಗೆ ಗೊತ್ತೇ ಇಲ್ಲ. ಏನಿದ್ದರೂ ಕೊಬ್ಬರಿ..ಕೊಬ್ಬರಿ. ಎಳನೀರು ಮಾರಾಟಕ್ಕೆ ಯಾವ ಸಮಸ್ಯೆಯೂ ಇಲ್ಲ. ಆದರೆ ಮನಸ್ಸಿಗೆ ಚಿಕಿತ್ಸೆಯಾಗಬೇಕು' ತಮ್ಮೂರಿನ ಸ್ಥಿತಿಯನ್ನು ಕೃಷ್ಣಮೂರ್ತಿಯವರು ಖಾರವಾಗಿ ಹೇಳುತ್ತಾರೆ. 'ಮೇಳದಲ್ಲಿ ಎಳನೀರು ಕುಡಿಯುವವರು ಇದ್ದಾರೆ, ಮಾರುವವರು ಯಾಕಿಲ್ಲ' ಎಂಬ ಚೋದ್ಯಕ್ಕೆ ಮೇಳಾಂತ್ಯಕ್ಕೆ ಉತ್ತರ ಸಿಕ್ಕಿತ್ತು!