Monday, June 8, 2009

ಚೆನ್ನಾಗಿ ಬದುಕಬೇಕು - ಬದುಕಿ ಸಾಧಿಸಬೇಕು


ಹೆಸರು : ಡಾ. ಚಂದ್ರಶೇಖರ ಚೌಟ (ಡಿ.ಸಿ.ಚೌಟ) * ಹುಟ್ಟಿದ ದಿನಾಂಕ : 8-12-1944 * ತಂದೆ : ನಾರಾಯಣ ಚೌಟ * ತಾಯಿ : ಮೋಹಿನಿ * ಜನನ ಸ್ಥಳ : ಮೀಯಪದವು * ಮಡದಿ : ಸ್ವರೂಪರಾಣಿ * ಮಕ್ಕಳು : ಸ್ವರಾಜ್, ದಿವ್ಯಾ

ತಂದೆಯವರು ಊರ ಪಟೇಲರು. ಅವರಿಗೆ 'ದೆಯ್ಯು' ಎಂಬ ಹಿರಿಯ 'ಆಲ್ರೌಂಡರ್' ಸಾಥಿ. ಕೃಷಿ ಚಟುವಟಿಕೆಗಳ ಮೇಲುಸ್ತುವಾರಿಕೆ ಈ ಸಾಥಿಯದೇ. ಬಾಲ್ಯದಿಂದಲೇ ನಮಗೆಲ್ಲಾ ಕೃಷಿ ಅಂಟಿಕೊಂಡಿತ್ತು. 'ದೆಯ್ಯು' ನಮಗಂತೂ 'ಕೃಷಿ ಪ್ರಿನ್ಸಿಪಾಲ್'!

ಆಗ ಏತದಿಂದ ನೀರಾವರಿ. ನೀರು ಹಾಯಿಸುವುದು, ಅಡಿಕೆ ಹೆಕ್ಕುವುದು ನಮಗೆ ಬಾಲ್ಯಕಾಲದ ಡ್ಯೂಟಿಗಳು. ಪ್ರಿನ್ಸಿಪಾಲರ ಕಣ್ಣು ತಪ್ಪಿಸಿ ಉಳುಮೆ ಮಾಡಿ ಬೈಸಿಕೊಂಡ ದಿನಗಳಿನ್ನೂ ಹಸಿರು. ಎಕರೆಗಟ್ಟಲೆ ತರಕಾರಿ, ಮೆಣಸು, ಭತ್ತದ ಬೇಸಾಯದ ನೆನಪು. ತರಕಾರಿ ಆಪ್ತೇಷ್ಟರಿಗೆ. ಗೆಣಸು ಹಪ್ಪಳವಾಗಿ ಮೌಲ್ಯವರ್ಧನೆ. ಮೂಟೆಗಟ್ಟಲೆ ಮೆಣಸು ಮಾರುಕಟ್ಟೆಗೆ.

ತಂದೆ ಪಟೇಲರಾದುದರಿಂದ ಸಂದರ್ಶಕರು ಹೆಚ್ಚು. ಅವರ ಪರಿಚಯ ಮಾಡಿಕೊಂಡು ಹರಟುವ ಹವ್ಯಾಸ ನನ್ನದು. ತಾಯಿ ತಂದೆಗೆ ಹೆಗಲೆಣೆಯಾಗಿ ನಿಂತು ಮನೆ ವಾರ್ತೆ . ನನ್ನ ಹೈಸ್ಕೂಲ್ ವಿದ್ಯಾಭ್ಯಾಸದೊಂದಿಗೆ ಕೃಷಿಯ ಪ್ರಾಯೋಗಿಕ ಕಲಿಕೆಯೂ ಸೇರಿತ್ತು. ನನ್ನ ಉತ್ಸಾಹ ನೋಡಿ 'ಇವನನ್ನು ಡಾಕ್ಟರಾಗಿಸಬೇಕು' ಎನ್ನುತ್ತಿದ್ದರು ತಂದೆಯವರು.
ಮಂಗಳೂರು ಅಲೋಶಿಯಸ್ನಲ್ಲಿ ಕಾಲೇಜು. ಮುಂಬಯಿಯಲ್ಲಿ ಎಂಎಸ್ಸಿ. ಸಸ್ಯಶಾಸ್ತ್ರದಲ್ಲಿ ಪಿಎಚ್ಡಿ. ಆರು ವರುಷ ಮುಂಬಯಿ ವಾಸ. ಸ್ನೇಹಿತರೊಂದಿಗೆ ಸೇರಿ ಖಂಡಾಲಾ ಘಾಟ್ನಲ್ಲಿ ಗುಲಾಬಿ ತೋಟ ಎಬ್ಬಿಸುವ ಬಯಕೆ ಆರಂಭದಲ್ಲೇ ಮುರುಟಿತು! ಎಂಎಸ್ಸಿಯಲ್ಲಿ ಮೊದಲ ರ್ಯಾಂಕ್. ಪಿಎಚ್ಡಿಗೆ ಅರ್ಜಿ ಹಾಕಿಯಾಗಿತ್ತಷ್ಟೇ. ಬ್ಯಾಂಕ್ ಆಫ್ ಇಂಡಿಯಾದ 'ಕ್ಯಾಂಪಸ್' ಆಯ್ಕೆಯಲ್ಲಿ ಪಾಸಾದೆ. 'ಉದ್ಯೋಗ ಬಿಡಬೇಡ ಹೋಗು' ಅಂತ ಗೈಡ್ ಒತ್ತಾಯಿಸಿದರೂ ತಿರಸ್ಕರಿಸಿದೆ. ಪಿಎಚ್ಡಿ ಮಾಡುವ ಛಲ.
ಮುಂಬಯಿಯ 'ರಂಗುರಂಗಿನ ಬೀಚ್'ಗಳಿಗೆ ಹೋಗಲೇ ಇಲ್ಲ! ನಾವು ಐದಾರು ಮಂದಿ ಹಳ್ಳಿಪ್ರದೇಶದಲ್ಲಿ ರಜಾ ಕಳೆಯುತ್ತಿದ್ದೆವು. ಕಾಂಡ್ಲಾ ತೋಟಗಳ ವೀಕ್ಷಣೆ, ಸಮುದ್ರಪಾಚಿ ಸಂಗ್ರಹ, ಸಿಹಿನೀರಿನ ಪಾಚಿ ಸಂಗ್ರಹ, ಹೀಗೆ ಪರಿಸ್ನೇಹಿ ಆಸಕ್ತಿಗಳು. ರವಿವಾರ ಹತ್ತಿರವಾಗುತ್ತಿದ್ದಂತೆ, 'ರಜಾ ಪ್ಲಾನೂ' ರೆಡಿ.

'ಏನೋ ಸಾಧಿಸಬೇಕು' ಎಂಬ ಕನಸಿತ್ತು, ಸ್ಪಷ್ಟತೆಯಿರಲಿಲ್ಲ. ಹೆಸರಿನೊಂದಿಗೆ 'ಡಾ' ವಿಶೇಷಣ ಹೊಸೆದರೂ, ವಿದೇಶಕ್ಕೆ ಹಾರುವ ನಿರ್ಧಾರದಿಂದ ಕೆಲಸಕ್ಕೆ ಬೇರೆಲ್ಲೂ ಅರ್ಜಿ ಹಾಕಲಿಲ್ಲ! ಹಾಕಿದ್ದರೆ, ಈಗ ಬಿಳಿ ಕಾಲರ್ ಹುದ್ದೆಯಲ್ಲಿ ಇರುತ್ತಿದ್ದೆನೇನೋ!
ಅಣ್ಣ ಕೃಷ್ಣಾನಂದ ಚೌಟ ಆಫ್ರಿಕನ್ ಘಾನಾದಲ್ಲಿ ಪ್ರಭಾವಿ ಹುದ್ದೆಯಲ್ಲಿದ್ದರು. ಅಲ್ಲಿಗೆ ಹಾರುವ ಕನಸಿಗೆ ಆ ದೇಶದ ರಾಯಭಾರಿ ಗರಿ ಕಟ್ಟಿದ್ದ. ಗ್ರಹಚಾರ ನೋಡಿ, ಅದೇ ಕಾಲಕ್ಕೆ ಅಲ್ಲಿ ಗಲಭೆ ಶುರು. ಕನಸೂ ಮುರಿದುಬಿತ್ತು.

ಮರಳಿ ಮಣ್ಣಿಗೆ. ಆರು ವರುಷ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ. ಒಂದಷ್ಟು ಸಂಶೋಧನೆ. ಮಣ್ಣಿನ ಮಿಡಿತ ಪುನಃ ತೋಟಕ್ಕೆ ಸೆಳೆಯಿತು. ತಮ್ಮ ಮನೋಹರನೊಂದಿಗೆ ಬೆಂಗಳೂರು ಮಾಗಡಿ ರಸ್ತೆಯ ಗೊಲ್ಲರಹಟ್ಟಿಯಲ್ಲಿ ಕೃಷಿ ಶುರು (1978). ದ್ರಾಕ್ಷಿ, ತರಕಾರಿ, ಸಿಹಿನೀರಿನ ಮೀನುಗಾರಿಕೆ, ಅಣಬೆ. ಆಗ ರಾಜ್ಯದಲ್ಲೇ ನಮ್ಮದು ಪ್ರಪ್ರಥಮ ಮೀನು ಕೃಷಿ. ನಮ್ಮ ಯಶೋಗಾಥೆಯು ಕೇಳಿ, ತೋಟಕ್ಕೆ ಆಸಕ್ತರ ತಂಡಗಳೇ ಬಂದುವು. ನಮ್ಮ ಜ್ಞಾನವೂ ಹೆಚ್ಚಿತು. ಉತ್ಪನ್ನಗಳಿಗೆ ಬೆಂಗಳೂರಿನ ಪ್ರತಿಷ್ಠಿತ ಮಳಿಗೆಗಳಲ್ಲಿ ಮಾರುಕಟ್ಟೆ ಸಿಕ್ಕಿತು. ವರುಷ ಸರಿದಂತೆ ಗೊಲ್ಲರಹಟ್ಟಿಗೆ ಸಿಟಿ ನುಗ್ಗಿತು! ಕೃಷಿ ಅಸಾಧ್ಯವಾದಾಗ ಅದನ್ನು 'ರೆಸಾರ್ಟ್' ಮಾಡಿದೆವು.
ಮಂಗಳೂರಿನಲ್ಲಿ 'ಮುಂಗಾರು' ದಿನಪತ್ರಿಕೆಯ ಸಾರಥ್ಯ. ಆಡಳಿತ ನಿರ್ದೇಶಕನ ಜವಾಬ್ದಾರಿ. ಎರಡು ವರುಷ ಪತ್ರಿಕೋದ್ಯಮದ ಸೂಕ್ಷ್ಮಗಳನ್ನು ತಿಳಿಯುವ ಅವಕಾಶ. ಇದೇ ಹೊತ್ತಿಗೆ ಘಾನಾದಿಂದ ಅಣ್ಣನೂ ಊರಿಗೆ ಬಂದ.
ಬೆಂಗಳೂರಿನ ಕೃಷಿ ಅನುಭವ ಬದುಕಿಗೊಂದು ತಿರುವು. ಕೊನೆಯ ತಮ್ಮ ಪ್ರಭಾಕರನೂ ಸೇರಿ, ಕೃಷಿ ವಿಸ್ತರಣೆಯ ಒಕ್ಕೊರಲ ನಿಲುಮೆ. ನಮ್ಮದು ಕಣಿವೆಯಾಕಾರದ ಭೂಪ್ರದೇಶ. ಸಮತಟ್ಟು ಮಾಡದೆ, ತೋಟ ಎಬ್ಬಿಸಲು ನಿರ್ಧಾರ. ಅಡಿಕೆ, ಭತ್ತಕ್ಕೆ ಸೀಮಿತವಾಗಿದ್ದ ಕೃಷಿಭೂಮಿಯಲ್ಲಿ ಅಂಗಾಂಶ ಬಾಳೆ, ತೆಂಗು, ಕೊಕ್ಕೋ, ವೆನಿಲ್ಲಾಗಳು ತಲೆ ಎತ್ತಿದುವು. ಸೀಯಾಳದ ಬಗ್ಗೆ ನಮಗೆಲ್ಲಾ ಮೊದಲಿನಿಂದಲೇ ಮೋಹ. ಅದು ಪ್ರಕೃತಿದತ್ತ ಅಮೃತ ತಾನೆ. ನಮ್ಮ ತೋಟವೀಗ ತೆಂಗಿನ ಗುರುತಿನ 'ಚೌಟರ ತೋಟ'.
ಪಿಎಚ್ಡಿ ಶಿಕ್ಷಣ ಕೃಷಿಗೆ ಪೂರಕವಾಯಿತು. 'ಸಂಶೋಧನಾ ದೃಷ್ಟಿ'ಯಿಂದ ನೋಡುವುದಕ್ಕೆ ಸಹಕಾರಿ. ಬೇರೆ ಬೇರೆ ಇಲಾಖೆಗಳ, ವಿಶ್ವವಿದ್ಯಾಲಯಗಳ ಒಡನಾಟ. ಬೇರೆ ಬೇರೆ ಸಂಸ್ಥೆಗಳಲ್ಲಿ ಹುದ್ದೆಗಳು. ಕಾರ್ಯಗಾರ, ಸಮ್ಮೇಳನಗಳ ಆಯೋಜನೆ. ಅವುಗಳಲ್ಲಿ ಮುಖ್ಯ - ಮೀಯಪದವು ಕೃಷಿಮೇಳ, ತೋಟದಲ್ಲೇ ನಡೆಸಿದ ತೆಂಗಿನ ಬಗೆಗಿನ ಮಾಧ್ಯಮ ಕಾರ್ಯಗಾರ. ವೆನಿಲ್ಲಾ ಬೆಳೆಗಾರರ ಸಂಘದ 'ವೆನಿಲ್ಲಾ ಸಮ್ಮೇಳನ'. ಬದುಕಿನಲ್ಲಿ ಹಲವು ತಿರುವು ಸಿಕ್ಕರೂ, ಕೃಷಿ ಕೈಹಿಡಿಯಿತು. 'ಚೆನ್ನಾಗಿ ಬದುಕಬೇಕು' ಎಂಬ ಆಸೆಯನ್ನು ಕೃಷಿ ಪೂರೈಸಿತು.

'ಸಾರ್ವಜನಿಕ ಸೇವೆ ಸಾಕು, ಇನ್ನು ಏನಿದ್ದರೂ ನನ್ನ ಮನೆ- ನನ್ನ ತೋಟ' ಅಂದುಕೊಂಡಿದ್ದೇನೆ.

- ನಿರೂಪಣೆ : ನಾ. ಕಾರಂತ ಪೆರಾಜೆ


0 comments:

Post a Comment