ಕಳೆದ ವರುಷ ಈ ಸಮಯದಲ್ಲಿ 'ಗುನ್ಯಾ ದರ್ಶನ'! ಬದುಕನ್ನು ನುಂಗಿ ನೊಣೆಯುತ್ತಿತ್ತು. ಪತ್ರಿಕೆಗಳಲ್ಲಿ ರಂಗುರಂಗಿನ ಪುಟಗಳು. ಕೆಲವರ ಕಾಲು ಸೊಟ್ಟಗಂತೆ, ಮುಷ್ಠಿ ಬಿಗಿಹಿಡಿದರೆ ಬಿಡಿಸಲಾಗುತ್ತಿಲ್ಲವಂತೆ, ಕುಳಿದರೆ ಏಳಲಾಗದು, ಶೌಚಕ್ಕೆ ಕುಳಿತರೆ ಅಲ್ಲೇ ಗಂಟೆಗಟ್ಟಲೆ..... ಐವರು ಸತ್ತರಂತೆ.
ಅದೇ ಹೊತ್ತಿಗೆ ನಮ್ಮ ನಾಡಿನ ಆರೋಗ್ಯ ದೊರೆಗಳ ಒಡ್ಡೋಲಗವಾಗಿತ್ತು. ಆರೋಗ್ಯಾಧಿಕಾರಿಗಳಿಂದ 'ಗುನ್ಯಾದಿಂದ ಜೀವಕ್ಕೆ ಅಪಾಯವಿಲ್ಲ' ಎಂಬ ಸಾಂತ್ವನ. ಅಲ್ಲಲ್ಲಿ ಉಚಿತ ಔಷಧಿ ಎಂಬ ಗುಳಿಗೆ (!) ನೀಡಿಕೆ. ಕೆಲವಡೆ ಅಕ್ಕಿ ವಿತರಣೆ. ಹತ್ತು ಕಿಲೋ ಅಕ್ಕಿ ಕೊಟ್ಟು, ನೂರು ಕಿಲೋ ಕೊಟ್ಟವರಂತೆ ಫೋಸ್ ಕೊಡುವ ಇಲಾಖೆ. 'ಮಳೆಬಂದರೆ ಗುನ್ಯಾ ಕೊಚ್ಚಿಕೊಂಡು ಹೋಗುತ್ತದೆ'. ಹೀಗೆ ಗುನ್ಯಾ ಕಥನ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿದ್ದಂತೆ ನನಗೂ ಅಂಟಿತ್ತು!
ಚಿಕೂನ್ಗುನ್ಯಾದಿಂದಾಗಿ ಕೃಷಿ ಎಷ್ಟು ಹಿಂದೆ ಬಂದಿದೆ, ಕೃಷಿಕರ ಸ್ಥಿತಿ-ಗತಿಗಳನ್ನು ಬಿಂಬಿಸುವ ಲೇಖನವೊಂದು 'ಸುಧಾ'ಕ್ಕೆ ಬರೆಯಬೇಕಾಗಿತ್ತು. ಅದಕ್ಕಾಗಿ ಗುನ್ಯಾ 'ಫಲಾನುಭವಿ'ಗಳ ಗ್ರಾಮಕ್ಕೆ ಭೇಟಿ. ಓಡಾಟ. ಮಾಹಿತಿ ಸಂಗ್ರಹ. ಎಲ್ಲಾ ಮುಗಿದು ಮನೆ ತಲಪುವಾಗ ರಾತ್ರಿ ಹನ್ನೊಂದು ಮೀರಿತ್ತು. ಹಗಲಿಡೀ ಓಡಾಟದಿಂದಾಗಿ ರಾತ್ರಿ ಗಾಢನಿದ್ರೆ! ಬೆಳಿಗ್ಗೆ ಎಂದಿಗಿಂತ ಸ್ವಲ್ಪ ತಡವಾಗಿಯೇ ಎಚ್ಚರವಾಗಿತ್ತು. ಗಡಿಬಿಡಿಯಿಂದ ಏಳಲು ಹೋದಾಗ ಗಂಟು ನೋವು, ಸೊಂಟನೋವು. ಹಾಸಿಗೆಯಿಂದ ಮೇಲೇಳಲಾಗದ ಸ್ಥಿತಿ. ಗುನ್ಯಾ ನನ್ನನ್ನು ಅಂಟಿತ್ತು.
ತೆಕ್ಕೊಳ್ಳಿ. ಆಸ್ಪತ್ರೆಗಳ ಓಡಾಟ. ಮಾತ್ರೆಗಳನ್ನು ನುಂಗುವ ಕಾರ್ಯಕ್ರಮ! ಅಂತೂ ಇಂತೂ ಜ್ವರ ಇಳಿದಿತ್ತು. ಕಾಲಿನ ಪಾದದ ಭಾಗ, ಗಂಟು ನೋವು ಶುರುವಾಗಿತ್ತು. ನೋವು ನಿವಾರಕ ಗುಳಿಗೆಗಳನ್ನು ನುಂಗುವುದೇ ಇದಕ್ಕಿರುವ ದಾರಿ. ಬದುಕಿನ ರಥ ಸಾಗಬೇಕಲ್ಲಾ, ಮಾತ್ರೆಗಳನ್ನು ನುಂಗಿದ್ದೇ ನುಂಗಿದ್ದು. ಐದಾರು ತಿಂಗಳು ಇದೇ ಸ್ಥಿತಿ. 'ಶತ್ರುವಿಗೂ ಬೇಡ' ಗುನ್ಯಾ ಸಹವಾಸ!
ಲೇಖನ ಮೂರು ತಿಂಗಳ ಬಳಿಕ ಬರೆದೆ. 'ಅನುಭವಿಸಿ ಬರೆಯಬೇಕು' ಹಿರಿಯರ ಪಾಠ. ಹಾಗಾಗಿ ಗುನ್ಯಾವನ್ನು 'ಅನುಭವಿಸಿ' ಬರೆದ ಸುಖ! ವರುಷ ಕಳೆಯಿತು. ಗುನ್ಯಾ ಶೇಷ - ಇನ್ನೂ ಬಿಟ್ಟಿಲ್ಲ. ಒಂದು ಕಿಲೋಮೀಟರ್ ನಡೆದರೆ ಸಾಕು, ಕಳೆದ ವರುಷ ಯಾವ ನೋವನ್ನು ಅನುಭವಿಸಿದ್ದೇನೋ ಅದೇ ಗುನ್ಯಾ ನೋವು-ಸಂಕಟ. ಭಾರ ಎತ್ತುವಂತಿಲ್ಲ. ವೇಗವಾಗಿ ನಡೆಯುವಂತಿಲ್ಲ. ಒಂದೇ ಕಡೆ ಎರಡ್ಮೂರು ಗಂಟೆ ಕುಳಿತುಕೊಳ್ಳುವಂತಿಲ್ಲ. ನೋವು ಅಟ್ಟಿಸಿಕೊಂಡು ಬರುತ್ತಿದೆ. ಯಾವುದೇ ಮಾತ್ರೆ-ಕಷಾಯಗಳಿಲ್ಲ. ಅನುಭವಿಸುವುದೊಂದೇ ದಾರಿ.
ಪುಸ್ತಕ ಸ್ನೇಹಿತ ಪ್ರಕಾಶ ಒಂದು ಸುದ್ದಿ ತಂದಿದ್ದರು. ಯಾರಿಗೋ ಪಕ್ಷವಾತ ಅಂಟಿ ಮಾತನಾಡಲೂ ಆಗದ ಸ್ಥಿತಿಯಿತ್ತು. ಯಾವುದೋ ಸ್ವಾಮಿಗಳಲ್ಲಿ ಹೋದಾಗ 'ಅದೆಲ್ಲಾ ಪೂರ್ವ ಜನ್ಮದ ಕರ್ಮಫಲ' ಅಂದರಂತೆ. ಬಹುಶಃ ಈ ಗುನ್ಯಾ ಪೀಡನೆ ಕರ್ಮಫಲವೇ ಇರಬೇಕು! ಬದುಕನ್ನು ಅನುಭವಿಸಬೇಕು - ಉಪನ್ಯಾಸದಲ್ಲೊಬ್ಬ ಮಹಾನುಭಾವರು ಹೇಳಿದ ಮಾತು. ಅದನ್ನು ಸತ್ಯಮಾಡಲು ಗುನ್ಯಾ ನೆರವಾಗುತ್ತಿದೆ! ಭಳಿರೇ, ಗುನ್ಯಾ!
Home › Unlabelled › 'ಗುನ್ಯಾ ಗುಮ್ಮ'
0 comments:
Post a Comment