Friday, October 26, 2012

ಪಶುವೈದ್ಯ ಎಂ.ಎಸ್.ಭಟ್ ಸೇವೆಯಿಂದ ನಿವೃತ್ತಿ               ಅಕ್ಟೋಬರ್ 26, 2012. ಪುತ್ತೂರಿನ ಮನಿಷಾ ಸಭಾಂಗಣ. ಪೂರ್ವಾಹ್ನ ಗಂಟೆ 10-30. ನಗರದ ಪ್ರತಿಷ್ಠಿತ ಗಣ್ಯರ ಉಪಸ್ಥಿತಿ. ಪುತ್ತೂರು ಏಳ್ಮುಡಿ ಹೈನು ವ್ಯವಸಾಯಗಾರರ ಸಂಘದ ಆಯೋಜಿತ ಸಮಾರಂಭ. ಸಂಘದ ಹುಟ್ಟಿಗೆ ಕಾರಣರಾದ, ಸಂಘದ ಜೀವನಾಡಿಯಾದ ಪಶುವೈದ್ಯ ಡಾ.ಮುದ್ಲಜೆ ಸದಾಶಿವ ಭಟ್ (ಡಾ.ಎಂ.ಎಸ್.ಭಟ್) ಅವರ ಸಂಮಾನ ಸಮಾರಂಭ.

               ಡಾ.ಎಂ.ಎಸ್.ಭಟ್ಟರು ನಲವತ್ತೆರಡು ವರುಷಗಳ ಸುದೀರ್ಘ ಸೇವೆಯಿಂದ ನಿವೃತ್ತ. ಹೈನು ವ್ಯವಸಾಯಗಾರರ ಕಣ್ಮಣಿ. ಪುತ್ತೂರಿನಲ್ಲಿ ಹೈನುಗಾರಿಕೆ ಜೀವಂತವಾಗಿದ್ದರೆ ಅದರ ಹಿಂದೆ ಇವರ ಕೊಡುಗೆ ದೊಡ್ಡದು. ಕರೆದಾಗ ಧಾವಿಸುವ, ದನಗಳ ಆರೋಗ್ಯದತ್ತ ನಿಗಾ ನೀಡುವ, ಮೂಕ ಪ್ರಾಣಿಗಳ ರೋದನಕ್ಕೆ ಸ್ಪಂದಿಸುವ ಅಪರೂಪದ ವೈದ್ಯ. ಹಾಲು ಹಾಕುವ ಹೈನುಗಾರರಿಗೆ ಗರಿಷ್ಠ ದರ ಸಿಗಬೇಕೆನ್ನುವ ಹಪಹಪಿಕೆ ಇವರದು. ಪುತ್ತೂರು ನಗರದ ಮನೆಗಳಗೆ ತಾಜಾ ಹಾಲು ಸರಬರಾಜು ಮಾಡುವ ವ್ಯವಸ್ಥೆಯ ಹಿಂದೆ ಎಂ.ಎಸ್.ಭಟ್ಟರ ಕಠಿಣ ದುಡಿಮೆಯಿದೆ. ಹಾಗಾಗಿ ನಗರದ ಮಂದಿ ಹೈನು ಸಂಘ ಮತ್ತು ಎಂ.ಎಸ್.ಭಟ್ಟರನ್ನು ಮರೆಯಲು ಸಾಧ್ಯವೇ ಇಲ್ಲ.

               ಹೈನು ಸಂಘದ ಪ್ರಾರಂಭದ ಕಾಲದಲ್ಲಿ ಭಟ್ಟರ ಜತೆಗಿದ್ದ ಕರಿಯಾಲ ಶಿವರಾಮ ಭಟ್ಟರ ಉಪಸ್ಥಿತಿ. ಅವರಿಂದಲೇ ಗೌರವ ಸ್ವೀಕಾರ. "ಹಾಲಿನ ಉತ್ಪಾದನಾ ವೆಚ್ಚವನ್ನು ಲೆಕ್ಕಹಾಕಿ, ಅದಕ್ಕೆ ಶೇ.5ರಷ್ಟು ಹೈನುಗಾರರಿಗೆ ಲಾಭಾಂಶವನ್ನು ಸೇರಿಸಿದರೆ ಒಂದು ಲೀಟರಿಗೆ ಕನಿಷ್ಟ 38-40 ರೂಪಾಯಿಗಳಾಗುತ್ತದೆ. ಅದಕ್ಕಿಂತ ಕಡಿಮೆ ಮೊತ್ತದಲ್ಲಿ ಹಾಲನ್ನು ಸರಬರಾಜು ಮಾಡಿದರೆ ಹೈನುಗಾರರಿಗೆ ಕಷ್ಟ. ಹಾಗಾಗಿ ಇಂದು ಹೈನುಗಾರಿಕೆ ಇಳಿಮುಖವಾಗುತ್ತದೆ," ಸಂಮಾನದ ಮಧ್ಯೆಯೂ ಕೃಷಿಕಪರ ಕಾಳಜಿ, ಕಳಕಳಿ.

               'ಗುಣಮಟ್ಟದ ಹಾಲು ಉತ್ಪಾದನೆಗೆ ಹೈನು ವ್ಯವಸಾಯಗಾರರ ಸಂಘದ ಕೊಡುಗೆ ದೊಡ್ಡದು. ಅತ್ಯುತ್ತಮ ದರ ನೀಡಿ ಹೈನುಗಾರರನ್ನು ಪ್ರೋತ್ಸಾಹಿಸಿದ ಕೀರ್ತಿ ಸಂಘದ್ದು' ಎಂಬ ಶ್ಲಾಘನೆ. ಹೈನು ವ್ಯವಸಾಯಗಾರರ ಸಂಘದ ಅಧ್ಯಕ್ಷ ಎ.ಪಿ.ಸದಾಶಿವ ಮರಿಕೆ ಸಮಾರಂಭದ ಸಾರಥ್ಯ.

                ಎಂ.ಎಸ್.ಭಟ್ಟರ ಸಾಧನೆಗೆ ಕನ್ನಡಿ ಹಿಡಿದವರು - ಡಾ.ಎ.ಪಿ.ರಾಧಾಕೃಷ್ಣ, ಸಂಪ್ಯ ಶಿವಶಂಕರ ಭಟ್, ರಾಮಕೃಷ್ಣ ರೈ ಸರ್ವೆ, ಡಾ. ರಾಮ್ ಪ್ರಕಾಶ್, ಮೋಹನ ನೆಲ್ಲಿತ್ತಾಯ. ಈ ಸಂದರ್ಭದಲ್ಲಿ ಹೈನುಗಾರರನ್ನು, ಸಿಬ್ಬಂದಿಗಳನ್ನು ಮತ್ತು ಡಾ.ಎಂ.ಎಸ್.ಭಟ್ಟರ ಪಶು ಚಿಕಿತ್ಸಾ ಕ್ಲಿನಿಕ್ಕನ್ನು ಮುಂದುವರಿಸುವ ಡಾ.ಪಿ.ರಾಮಚಂದ್ರ ಪುಳುಮನೆ ಇವರಿಗೆ ಗೌರವಾರ್ಪಣೆ.
 
            ಕು.ಅನ್ವಿತಾ, ಕು.ಅಮೃತಾ ಇವರಿಂದ ಪ್ರಾರ್ಥನೆ. ಡಾ.ಶ್ರೀಪ್ರಕಾಶ್ ಬಂಗಾರಡ್ಕ ನಿರ್ವಹಣೆ. ಕರಿಯಾಲ ರಾಮಪ್ರಸಾದ್ ಸ್ವಾಗತ. ಕೃಷ್ಣಮೋಹನ್ ವಂದನಾರ್ಪಣೆ. ಈ ಸಂದರ್ಭದಲ್ಲಿ ಎಲ್ಲಾ ಹೈನುಗಾರ ಬಂಧುಗಳಿಗೆ ಹಾಲು ಕರೆಯಲು ಉಪಯೋಗವಾಗಬಲ್ಲ ಸ್ಟೀಲ್ ಬಕೆಟ್ ವಿತರಣೆ.

             ಅಭಿನಂದನಾ ಸಮಾರಂಭಕ್ಕೆ ನೂರಕ್ಕೂ ಮಿಕ್ಕಿದ ಗಣ್ಯರ ಉಪಸ್ಥಿತಿ. ನಿತ್ಯ ತಾವು ಸೇವಿಸುತ್ತಿರುವ ಹಾಲಿನ ಹಿಂದೆ - ಹೈನು ಸಂಘ, ಡಾ.ಎಂ.ಎಸ್.ಭಟ್ ಮತ್ತು ಹಾಲು ಒದಗಿಸುತ್ತಿರುವ ಕೃಷಿಕರ ದುಡಿಮೆ - ಇದೆ ಎನ್ನುವ ಗೌರವದ ಪ್ರಸ್ತುತಿ.

(ಚಿತ್ರ : ಚೇತನ ಸ್ಟುಡಿಯೋ, ಪುತ್ತೂರು)


Sunday, October 21, 2012

ಹಾಲಿಗೆ ಮಾನ, ವಿಶ್ವ ಸಂಮಾನ

           ನೆಂಟರು ದಿಢೀರ್ ಬಂದಾಗ ಚಹಾ ಮಾಡಲು ಮನೆಯೊಳಗೆ ಹಾಲಿಲ್ಲ. ಕರೆಯಲು ಹಟ್ಟಿಯಲ್ಲಿ ದನಗಳಿಲ್ಲ.  ಹಾಲಿನ ಹುಡಿಗೆ ಅಂಗಡಿಗೆ ಓಟ. ನೂರು ಗ್ರಾಮ್ ಹುಡಿಯನ್ನು ಚಿನ್ನ ತೂಗುವಂತೆ ತೂಗಿಕೊಡುವ ಅಂಗಡಿಯಾತನ ಕರಾಮತ್ತು ಎಂಭತ್ತು ಗ್ರಾಮಿಗೆ ಸೀಮಿತ! ಹಾಲಿನ ಹುಡಿಗೆ ಬಿಸಿನೀರು ಸೇರಿಸಿ ಕಲಕಿದಾಗ ದಪ್ಪದ ಹಾಲು ರೆಡಿ. ಅಮ್ಮನಿಗೆ ಗೊತ್ತಾಗದಂತೆ ಒಂದೆರಡು ಚಮಚ ಬಾಯಿಗೆ ಸುರಿದುಕೊಂಡಾಗ ಆಹಾ.. ಸ್ವಾದ..! ಒಂದೈದು ನಿಮಿಷದಲ್ಲಿ ಬಿಸಿಬಿಸಿ ಚಹಾ ಹೀರಲು ಸಿದ್ಧ.  

             ಬಿಳಿ ಡಬ್ಬ. ಅದರಲ್ಲಿ 'ಮಿಲ್ಕ್ ಬೇಬಿ' ಚಿತ್ರ. ಹಾಲು ಕುಡಿಯುವಾಗ ಮಗುವಾಗಬೇಕೆನ್ನುವ ಸಂದೇಶ. ಡಬ್ಬದೊಳಗೆ ಉರುಟಾದ ದೊಡ್ಡ ಚಮಚ. ತಿಂಡಿ ಡಬ್ಬ ಖಾಲಿಯಾದಾಗ ಹಾಲಿನ ಡಬ್ಬ ಹುಡುಕಿ, ಹುಡಿಯನ್ನು ಬಾಯೊಳಗೆ ಇಳಿಸಿಕೊಂಡ ದಿನಗಳು ಮರೆಯದು. ಮೋರೆಗಂಟಿದ ಶೇಷ ಕಳ್ಳತನಕ್ಕೆ ಸಾಕ್ಷಿ. ಅಂಟಂಟಾಗಿ ಬಾಯೊಳಗೆ ರಸ ಬಿಟ್ಟುಕೊಟ್ಟಾಗ ಉಂಟಾದ ಸ್ವಾದವು ಇನ್ನೊಂದು ಚಮಚ ಹುಡಿಗಾಗಿ ಹಪಹಪಿಸುತ್ತಿದ್ದುವು. ಬಡವರ ಪಾಲಿಗೆ 'ಹಾಲಿನ ಹುಡಿ'ಯು ಪಂಚಾಮೃತವಾದ ದಿನಮಾನಗಳಿವು. ಈ ಹಾಲಿನ ಹುಡಿಯ ಹಿಂದೆ  'ಅಮುಲ್ ಜನಕ ಡಾ. ವರ್ಗೀಸ್ ಕುರಿಯನ್' ಇದ್ದಾರೆಂಬುದು ಆಗ ಗೊತ್ತಿರಲಿಲ್ಲ. 

            ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ, ಆನಂದ್ - ಇವರ ಹಾಲು ಉತ್ಪನ್ನಗಳ ಬ್ರಾಂಡ್ 'ಅಮುಲ್'. 'ಅಮುಲ್' ಅಂದರೆ ಸಾಕು, ಹಾಲಿನ ಉತ್ಪನ್ನಗಳು ಸಾಲು ಸಾಲು ಕಣ್ಮುಂದೆ ಬಂದುಬಿಡುತ್ತದೆ. ಒಕ್ಕೂಟದ ಪರಿಚಯ ಪ್ರತ್ಯೇಕ ಹೇಳಬೇಕಾಗಿಲ್ಲ. ಈ ಯಶದ ಹಿಂದಿರುವುದು ಕುರಿಯನ್ ಅವರ ದೂರದೃಷ್ಟಿ. ಹಾಗಾಗಿಯೇ ಅಮುಲ್ ಬ್ರಾಂಡಿನ ಹಾಲಿನ ಉತ್ಪನ್ನಗಳನ್ನು ಭಾರತ ಮಾತ್ರವಲ್ಲ, ಕಡಲಾಚೆಯ ದೇಶಗಳೂ ಸ್ವಾಗತಿಸುತ್ತಿವೆ.

              ಗುಜರಾತಿನ ಕೈರಾ ಜಿಲ್ಲೆಯ ಆನಂದ್ ಚಿಕ್ಕ ಪಟ್ಟಣ. ಹೈನುಗಾರಿಕೆಯಿದೆ, ಹಾಲು ಮಾರಾಟಕ್ಕೆ ಸರಿಯಾದ ವ್ಯವಸ್ಥೆಯಿರಲಿಲ್ಲ. ಆನಂದ್ನ ಹೊರವಲಯದಲ್ಲಿ ಡೈರಿಯೊಂದಿತ್ತು.  ಇದರ ಏಜೆಂಟರು, ವ್ಯಾಪಾರಿಗಳು ಹಾಲು ಉತ್ಪಾದಕರಿಗೆ ಸರಿಯಾದ ಬೆಲೆ ಕೊಡದೆ ಸತಾಯಿಸುತ್ತಿದ್ದರು. ಹೆಚ್ಚು ಹಾಲು ಬಂದರೆ ಬಾಯಿಗೆ ಬಂದ ದರ. ಅನಿವಾರ್ಯವಾಗಿ ಉತ್ಪಾದಕರು ಸಿಕ್ಕಿದ ದರಕ್ಕೆ ಹಾಲು ಪೂರೈಸುತ್ತಿದ್ದರು.  ಉತ್ಪಾದಕರೇ ನೇರವಾಗಿ ಡೈರಿಗೆ ಹಾಲು ಒದಗಿಸೋಣವೆಂದರೆ ಸಾರಿಗೆ ಸಮಸ್ಯೆ. ಹೆಚ್ಚಿನ ದಿವಸಗಳಲ್ಲಿ ಹಾಲು ಹಾಳಾಗುತ್ತಿದ್ದುದೇ ಹೆಚ್ಚು.

               ಆಗ ಕೇಂದ್ರದಲ್ಲಿ ಉಪಪ್ರಧಾನ ಮಂತ್ರಿಗಳೂ, ಗೃಹ ಸಚಿವರಾಗಿ ಸರ್ದಾರ್ ವಲ್ಲಭಭಾಯಿ ಪಟೇಲರಿದ್ದರು. ಹಾಲು ಉತ್ಪಾದಕರಿಗೆ ಆಗುತ್ತಿರುವ ಅನ್ಯಾಯವನ್ನು ಮನದಟ್ಟು ಮಾಡಲು ರೈತರಿಂದ ನಿಯೋಗ ಭೇಟಿ. ಮಾತುಕತೆ. ಸಾಂತ್ವನದ ಪರಿಹಾರ! ಬೇಡಿಕೆಯನ್ನು ಮನದಟ್ಟು ಮಾಡಲು ರೈತರ ಮುಷ್ಕರ. ಹೀಗೆ ಹಾಲು ಉತ್ಪಾದಕರಿಗೆ ನ್ಯಾಯ ಒದಗಿಸುವ ಪ್ರಕ್ರಿಯೆಗಳು. ಪರಿಣಾಮ, 1946ರಲ್ಲಿ ಕೈರಾ ಜಿಲ್ಲೆಯಲ್ಲಿ ಸಹಕಾರಿ ಹಾಲು ಸಂಘದ ಸ್ಥಾಪನೆ.

             ಪ್ರತಿದಿನ ಎರಡರಿಂದ ಐದು ಲೀಟರ್ ಹಾಲು ಹೊಂದಿರುವ ಸಣ್ಣ ಉತ್ಪಾದಕರು. ಇವರನ್ನು ಒಂದೇ ಸೂರಿನಡಿ ತರಲು ಗ್ರಾಮ ಮಟ್ಟದ ಸಹಕಾರಿ ಸಂಘಗಳ ರೂಪೀಕರಣ. ಅದೇ ಹೊತ್ತಿಗೆ ಡಾ. ಕುರಿಯನ್ ಎಂಟ್ರಿ. ಅನಂದ್ನಲ್ಲಿ ಆಧುನಿಕ ಡೈರಿ ಸ್ಥಾಪನೆ. ದೇಶೀಯ ತಂತ್ರಜ್ಞಾನ ಅಭಿವೃದ್ಧಿಯ ಅನುಷ್ಠಾನ. ಎಮ್ಮೆಯ ಹಾಲಿನಿಂದ ಕೆನೆತೆಗೆದ ಹಾಲಿನ ಪುಡಿಯ ಯಶಸ್ವಿ ಉತ್ಪಾದನೆ. 'ಅಮುಲ್' ಬ್ರಾಂಡಿನಲ್ಲಿ ಮಾರಾಟ.

             'ಅಮುಲ್' ಅಂದರೆ 'ಬೆಲೆ ಕಟ್ಟಲಾಗದ್ದು' ಎಂದರ್ಥ. 'ಅಮೂಲ್ಯ' ಅಂದರೆ ಬೆಲೆಬಾಳುವಂತಾದ್ದು. ಈ ಪದಗಳ ಅರ್ಥವ್ಯಾಪ್ತಿಯಲ್ಲಿ ಉತ್ಪನ್ನಗಳಿಗೆ 'ಅಮುಲ್' ಹೆಸರಿನ ಬ್ರಾಂಡ್. ಗುಜರಾತಿನಲ್ಲಿ ಡೈರಿ ಸಹಕಾರ ಆಂದೋಳನಕ್ಕೆ ವೇಗದ ಚಾಲನೆ ದೊರಕಿತು. ನಾಲ್ಕೈದು ಜಿಲ್ಲೆಗಳಲ್ಲಿ ಸಂಘಗಳ ಸ್ಥಾಪನೆ. ಹಾಲು ಉತ್ಪಾದಕರನ್ನು ಒಗ್ಗೂಡಿಸಿ, ಮಾರುಕಟ್ಟೆ ವಿಸ್ತರಿಸುವ ದೃಷ್ಟಿಯಿಂದ 'ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ' ರೂಪೀಕರಣ.

               ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದಲ್ಲಿ ಸುಮಾರು ಮೂರು ದಶಲಕ್ಷ ಹಾಲು ಉತ್ಪಾದಕ ಸದಸ್ಯ ಕುಟುಂಬವಿದೆ. ಹದಿನಾಲ್ಕು ಸಾವಿರಕ್ಕೂ ಅಧಿಕ ಗ್ರಾಮ ಸೊಸೈಟಿಗಳು. ಹದಿಮೂರು ಜಿಲ್ಲಾ ಸಂಘಗಳು. ಪ್ರತಿದಿನ ಸುಮಾರು ಒಂಭತ್ತು ದಶಲಕ್ಷ ಲೀಟರ್ ಹಾಲು ಖರೀದಿ. ಏಷ್ಯಾದಲ್ಲೇ ಅತೀ ದೊಡ್ಡ ಹಾಲನ್ನು ನಿರ್ವಹಿಸುವ ಸಾಮಥ್ರ್ಯ, ಅತಿ ದೊಡ್ಡ ಶೀತಲ ಸರಪಳಿ ಜಾಲ. ಸುಮಾರು ಐವತ್ತು ಮಾರಾಟ ಕಚೇರಿಗಳು, ಮೂರು ಸಾವಿರಕ್ಕೂ ಮಿಕ್ಕಿ ಸಗಟು ವ್ಯಾಪಾರಿಗಳು.  ಮೂವತ್ತೇಳಕ್ಕೂ ಅಧಿಕ ರಾಷ್ಟ್ರಗಳಿಗೆ ಉತ್ಪನ್ನಗಳ ರಫ್ತು.. ಹೀಗೆ ಒಕ್ಕೂಟದ ಸಾಧನೆಗಳು ಹಲವು. ಈ ಎಲ್ಲಾ ಸಾಧನೆಗಳ ಹಿಂದೆ ಕುರಿಯನ್ ಅವರ ಅವಿರತ ದುಡಿಮೆಯು 'ಜೇನುನೊಣ'ದಂತೆ.

            ಗುಜರಾತಿನ ಹಾಲು ವ್ಯವಸ್ಥೆಗಳು ರಾಷ್ಟ್ರ ಮಟ್ಟದಲ್ಲಿ ಮಾದರಿಯಾದುವು. ಕರ್ನಾಟಕದ 'ಕೆ.ಎಂ.ಎಫ್', ಪಂಜಾಬಿನ 'ವರ್ಕಾ', ಆಂಧ್ರದ 'ವಿಜಯ', ಕೇರಳದ 'ಮಿಲ್ಮಾ', ತಮಿಳುನಾಡಿನ 'ಅವಿನ್', ಬಿಹಾರದ 'ಸುಧಾ', ಒರಿಸ್ಸಾದ 'ಓಮ್ಫೆಡ್', ರಾಜಸ್ತಾನದ 'ಸರಸ್', ಉತ್ತರಪ್ರದೇಶದ 'ಪರಗ್', ಉತ್ತರಖಂಡದ 'ಅಂಚಲ್', ಹರಿಯಾಣದ 'ವೀಟಾ'..ಗಳು ಅಮುಲ್ ಮಾದರಿಯಲ್ಲಿ ಹುಟ್ಟಿಕೊಂಡವು.

             ಹಾಲಿನ ಪುಡಿ, ಬೆಣ್ಣೆ, ಹಾಲು, ತುಪ್ಪ, ಗಿಣ್ಣು, ಮೊಸರು, ಮಜ್ಜಿಗೆ, ಚಾಕೊಲೇಟ್, ಐಸ್ಕ್ರೀಂ, ಶ್ರೀಖಂಡ್, ಪನೀರ್, ಗುಲಾಬ್ ಜಾಮೂನು, ಸುವಾಸನೆ ಹಾಲು.. ಹೀಗೆ ಉತ್ಪನ್ನಗಳ ಪಟ್ಟಿ ದೀರ್ಘ. ಕೆನೆ ತೆಗೆಯದ ಮತ್ತು ಕೆನೆ ತೆಗೆದ ಹಾಲಿನ ಪುಡಿ, ಖೋವಾ, ತುಪ್ಪ, ದೇಸೀಯ ತಿಂಡಿಗಳು ರಫ್ತಾಗುತ್ತವೆ. ಅಮೇರಿಕ, ವೆಸ್ಟ್ಇಂಡೀಸ್, ಆಫ್ರಿಕ, ಕೊಲ್ಲಿ, ಸಿಂಗಾಪುರ, ಫಿಲಿಪೈನ್ಸ್, ಥಾಯ್ಲೆಂಡ್, ಜಪಾನ್, ಚೀನಾ ದೇಶಗಳ ಗ್ರಾಹಕರಿಗೆ ಅಮುಲ್ ಪರಿಚಿತ.

               ಅಮುಲ್ ಸ್ಥಾಪನೆಯು ಭಾರತದಲ್ಲಿ 'ಶ್ವೇತ ಕ್ರಾಂತಿ'ಯೆಂದೇ ಖ್ಯಾತಿ ಪಡೆಯಿತು. ಕುರಿಯನ್ ಅವರ ಬೆವರಿನ ಕಥೆಯು ಚಿತ್ರನಿರ್ಮಾಪಕ ಶ್ಯಾಂ ಬೆನಗಲ್ ಅವರಿಗೆ ಸ್ಫೂರ್ತಿ ನೀಡಿತಂತೆ. ಸ್ಮಿತಾ ಪಾಟೀಲ್, ಗಿರೀಶ್ ಕಾರ್ನಾ, ನಾಸಿರುದ್ದೀನ್ ಷಾ, ಅಮರೀಶ್ ಪುರಿ.. ಕಲಾವಿದರ ನಟನೆಯಿಂದ 'ಮಂಥನ್' ಚಿತ್ರ ತಯಾರಿ. ಸುಮಾರು ಐದು ಲಕ್ಷಕ್ಕೂ ಮಿಕ್ಕಿ ಗುಜರಾತಿನ ಗ್ರಾಮೀಣ ರೈತರು ಆರ್ಥಿಕ ನೆರವು ನೀಡಿದ್ದಾರಂತೆ. ಈ ಚಿತ್ರಕ್ಕೆ 1977ರಲ್ಲಿ ಅತ್ಯುತ್ತಮ ಹಿಂದಿ ಚಲನಚಿತ್ರ ಪ್ರಶಸ್ತಿ.  ಚಿತ್ರದ ತಾರಾಗಣದಲ್ಲಿ ವೃತ್ತಿಪರ ಕಲಾವಿದರಿದ್ದರೆ, ನೇಪಥ್ಯದಲ್ಲಿ ಗುಜರಾತಿಯ ಅಸಂಖ್ಯಾತ ಹಾಲು ಉತ್ಪಾದಕರೂ ಇದ್ದಾರೆಂಬುದು ಮರೆಯುವಂತಿಲ್ಲ.

           ಡಾ.ಕುರಿಯನ್ ಅವರ ಹಳ್ಳಿ ಮಿಡಿತ, ಹಾಲು ಉತ್ಪಾದಕರ ಕುರಿತಾದ ಕಳಕಳಿಯಿಂದಾಗಿ ಭಾರತದ ಹಾಲಿಗೆ ವಿಶ್ವಮಟ್ಟದ ಸ್ಥಾನಮಾನ ಪ್ರಾಪ್ತವಾಯಿತು. 'ಭಾರತದ ಹಾಲಿನ ಮನುಷ್ಯ' ಎಂದು ವಿದೇಶಿ ಮಾಧ್ಯಮಗಳು ಹೊಗಳಿದುವು. ಗುಜರಾತಿನ ಅಮುಲಿನ ಯಶಸ್ಸಿನಿಂದ ಪ್ರೇರಿತರಾದ ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು 'ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ' ಸ್ಥಾಪನೆಗೆ ಹಸಿರು ನಿಶಾನೆ ನೀಡಿದ್ದರು. ಅದಕ್ಕೆ ಡಾ.ಕುರಿಯನ್ ಅಧ್ಯಕ್ಷರಾಗಿ ನಿಯುಕ್ತಿ ಹೊಂದಿದರು. ಸುಮಾರು ಮೂವತ್ತ ಮೂರು ವರುಷಗಳ ಅವಿರತ ಸೇವೆಯ ಫಲವಾಗಿ 'ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಹಾಲು ಉತ್ಪಾದಕ ರಾಷ್ಟ್ರ' ಎಂಬ ಗೌರವವನ್ನು ತಂದುಕೊಟ್ಟರು.

             ಪದ್ಮಭೂಷಣ, ಮ್ಯಾಗ್ಸೆಸೆ, ವಿಶ್ವಶಾಂತಿ ಪ್ರಶಸ್ತಿ ಗೌರವಗಳು ಡಾ. ಕುರಿಯನ್ ಅವರಿಗೆ ಪ್ರಾಪ್ತವಾಗಿದೆ. ಮೂರು ದಶಕಕ್ಕೂ ಹೆಚ್ಚು ಕಾಲ ಬೆವರಿನಿಂದ ಮೇಲೆಬ್ಬಿಸಿದ ಅಮುಲ್ ಸಂಸ್ಥೆಯ ವ್ಯವಸ್ಥೆಗಳು ತನ್ನ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದಾಗ ಆ ತ್ಯಾಗಿಗೆ ಎಷ್ಟೊಂದು ನೋವಾಗಿರಬೇಡ!

             ಮಂಗಳೂರಿನ ಕ್ಯಾಂಪ್ಕೋ ಸಂಸ್ಥೆಗೊಮ್ಮೆ ಡಾ. ಕುರಿಯನ್ ಆಗಮಿಸಿದ್ದರು. ತಮ್ಮ ಅನುಭವಗಳನ್ನು ಪ್ರಸ್ತುತಪಡಿಸುತ್ತಾ ಕುರಿಯನ್ ಹೇಳಿದ್ದರು - 'ವಾಟ್ ಇಸ್ ಅರೆಕಾ, ವಾಟ್ ಫಾರ್ ಅರೆಕಾ' ಎಂದಿದ್ದರು. ಅಂದರೆ ಅಡಿಕೆ ತಿನ್ನುವ ವಸ್ತು. ಅಮುಲಿನಂತೆ ಅದಕ್ಕೂ 'ಬ್ರಾಂಡ್ ನೇಮ್' ಮಾಡಿ. ಹಾಲಿಗೆ ಮಾನ ತಂದುಕೊಟ್ಟ 90ರ ಡಾ. ಕುರಿಯನ್ ಸೆಪ್ಟೆಂಬರ್ 9ರಂದು ದೂರವಾದರು. ಅಮುಲ್ ಉತ್ಪನ್ನಗಳಲ್ಲಿ ನಿತ್ಯ ನಗುತ್ತಿದ್ದ 'ಅಮುಲ್ ಬೇಬಿ' ಅಂದು ಅತ್ತುಬಿಟ್ಟಳು! 

ಬಡತನ ಮರೆತ ದ್ಯಾಮಮ್ಮ


           ಹುಬ್ಬಳ್ಳಿ ಸನಿಹದ ನೂಲ್ವಿ ಚಿಕ್ಕ ಪಟ್ಟಣ. ಸುತ್ತೆಲ್ಲಾ ಕೃಷಿ ಹೊಲಗಳು. ಒಂದೆಕ್ರೆಯಿಂದ ಹತ್ತಿಪ್ಪತ್ತು ಎಕ್ರೆ ತನಕ. ಇವರ ಮಧ್ಯೆ ಹೊಲವಿಲ್ಲದವರ ಸಂಖ್ಯೆಯೇನೂ ಕಡಿಮೆಯಲ್ಲ.

          ದ್ಯಾಮಮ್ಮರಿಗೆ 55ರ ಹರೆಯ. ಮನೆಯಲ್ಲಿ ಒಪ್ಪತ್ತಿಗೂ ತ್ರಾಸ. ಕೂಲಿಯಿಂದ ಜೀವನ. ದಿವಸಕ್ಕೆ ಐವತ್ತೋ ಅರುವತ್ತೋ ರೂಪಾಯಿ ಸಿಕ್ಕರೆ ಅದೇ ಪರಮಾನ್ನ. ಇಂದು ಒಂದು ಹೊಲವಾದರೆ, ನಾಳೆ ಮತ್ತೊಂದು. ಅನಿಶ್ಚಿತ ಬದುಕು. ಕೂಲಿಯಿಲ್ಲದ ದಿವಸ ಹೊಟ್ಟೆಗೆ ಒದ್ದೆ ಬಟ್ಟೆ!

          ಬಡತನದಿಂದ ಬಾಗಿದ್ದ ದ್ಯಾಮಮ್ಮರೀಗ ತಲೆ ಎತ್ತಿ ನಡೆಯುತ್ತಾರೆ! ಮೊದಲಿದ್ದ ಜೀವನ ಬದಲಾಗಿದೆ. ಏನಿಲ್ಲವೆಂದರೂ ವಾರಕ್ಕೆ ಒಂದೂವರೆ ಎರಡು ಸಾವಿರ ಸಂಪಾದಿಸುತ್ತಾರೆ. ಈ ಬದಲಾವಣೆ ಹೇಗಾಯಿತು?

          ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ' ಹಳ್ಳಿಯಲ್ಲಿ ಅನುಷ್ಠಾನವಾಗುತ್ತಿತ್ತು. ಕಾರ್ಯಕರ್ತೆ ಪಾರ್ವತಿಯವರಿಗೆ ನೂಲ್ವಿಯಲ್ಲಿ ಮನೆ-ಮನವನ್ನು ಬೌದ್ಧಿಕವಾಗಿ, ಆರ್ಥಿಕವಾಗಿ ಸಂಪನ್ನಗೊಳಿಸುವ ಕೆಲಸ. ಇವರಿಗೆ ದ್ಯಾಮಮ್ಮರ ಪರಿಚಯ. ನಿತ್ಯ ಸಂಪರ್ಕ. ಕಷ್ಟದ ಕತೆಗೆ ಸ್ಪಂದನ. 'ನೀನ್ಯಾಕೆ ವ್ಯಾಪಾರ ಮಾಡಬಾರದು' ಎಂಬ ಸಲಹೆ. ಆಸಕ್ತರಾದ ದ್ಯಾಮಮ್ಮರಿಗೆ ಗ್ರಾಮಾಭಿವೃದ್ಧಿ ಯೋಜನೆಯ 'ಪ್ರಗತಿ ನಿಧಿ'ಯಿಂದ ಹತ್ತು ಸಾವಿರ ರೂಪಾಯಿ ಸಾಲದ ವ್ಯವಸ್ಥೆ.

          ಯಾವಾಗ ಕೈಗೆ ಹಣ ಸಿಕ್ತೋ, ಕೂಲಿ ಕೆಲಸಕ್ಕೆ ವಿದಾಯ. ವಯೋಸಹಜವಾಗಿ ತ್ರಾಸದ ಕೆಲಸ ತಾಳಿಕೊಳ್ಳರು. ಸ್ವಾವಲಂಬಿಯಾಗಲು ನಿರ್ಧಾರ. ತರಕಾರಿ ವ್ಯಾಪಾರ ಮಾಡುವ ಸಂಕಲ್ಪ. ಹತ್ತು ಕಿಲೋಮೀಟರ್ ದೂರದ ಹುಬ್ಬಳ್ಳಿಯಿಂದ ರಖಂ ದರದಲ್ಲಿ ತರಕಾರಿ ಖರೀದಿ. ನೂಲ್ವಿಯ ರವಿವಾರದ ಸಂತೆಯಲ್ಲಿ ವ್ಯಾಪಾರ.

          ಮೊದಮೊದಲು ವ್ಯಾಪಾರ ತಂತ್ರವರಿಯದೆ ಸೋತುದೂ ಇದೆ. ಸೋಲಿಸುವವರು ಹೇಗೂ ಇದ್ದಾರಲ್ಲಾ! ಪಾರ್ವತಿಯವರಿಂದ ವ್ಯಾಪಾರ ಕೌಶಲದ ಪಾಠ. ಜನರೊಂದಿಗೆ ಬೆರೆಯುವ, ವ್ಯವಹಾರ ಮಾಡುವ ಮಾಹಿತಿ. ಕಳೆದೊಂದು ವರುಷದಿಂದ ಸಂತೆಯ ಸಹವಾಸದಿಂದ ದ್ಯಾಮಮ್ಮ ಈಗ ಕಟ್ಟಾ ತರಕಾರಿ ವ್ಯಾಪಾರಸ್ಥೆ. ಅನಗತ್ಯ ಮಾತಿಗಿಂತ ಕೆಲಸದಲ್ಲಿ ಮಗ್ನೆ. ತರಕಾರಿಯೊಂದಿಗೆ ಈಗ ಸೇವಂತಿಗೆ ಹೂ ಸೇರ್ಪಡೆಗೊಂಡಿದೆ.

          ಐದಾರು ಗಿರಾಕಿಗಳು ಖರೀದಿಗೆ ಏಕಕಾಲಕ್ಕೆ ಬಂದರೂ ಎದೆಗುಂದದೆ ನಿಭಾಯಿಸುತ್ತಾರೆ. ತರಕಾರಿಗಳ ಗುಣಮಟ್ಟವನ್ನು ಹೇಳುತ್ತಾರೆ. ಹಣವನ್ನು ಎಣಿಸುವುದರಲ್ಲಿ ಗೊಂದಲವಿಲ್ಲ. ತರಕಾರಿ ಮುಗಿದಾಗ ತಕ್ಷಣ ನಗರದಿಂದ ತರಿಸುವ ವ್ಯವಸ್ಥೆ. ಆರಂಭಕ್ಕೆ ಸಾಲ ಪಡೆದಿದ್ದರಲ್ಲಾ, ಅವೆಲ್ಲಾ ಚುಕ್ತವಾಗಿದೆ.

          ರವಿವಾರ ನೂಲ್ವಿಯಲ್ಲಿ ಸಂತೆಯಾದರೆ ವಾರದ ಮಿಕ್ಕ ಒಂದೆರಡು ದಿವಸ ಸುತ್ತಲಿನ ಗ್ರಾಮಗಳ  ಸಂತೆಗೆ ತರಕಾರಿ ಸರಕಿನೊಂದಿಗೆ ಹೋಗುತ್ತಾರೆ. ತರಕಾರಿ ಮಾರಾಟವಾಗದೆ ಉಳಿದರೆ? ಬುಟ್ಟಿಯಲ್ಲಿ ತರಕಾರಿ ಪೇರಿಸಿ ನೂಲ್ವಿಯಲ್ಲಿ ಮನೆಮನೆ ಮಾರಾಟ. ಮನೆಬಾಗಿಲಿಗೆ ಹೆಣ್ಮಗಳು ಬಂದಾಗ ವಾಪಾಸು ಕಳುಹಿಸುವವರು ಕಡಿಮೆ. ಸಂಜೆ ಹೊತ್ತಿಗೆ ಬುಟ್ಟಿ ಖಾಲಿ. ಇದುವರೆಗೆ ಮಾರಾಟವಾಗದೆ ಹಾಳಾದುದಿಲ್ಲ.

          ನೂಲ್ವಿ ಸಂತೆಯಲ್ಲಿ ಕೆಲವೊಮ್ಮೆ ಐದು ಸಾವಿರ ರೂಪಾಯಿ ಸಂಪಾದನೆ ಮಿಕ್ಕಿದ್ದೂ ಇದೆ. ಹುಬ್ಬಳ್ಳಿ ಮಾರುಕಟ್ಟೆಯ ತರಕಾರಿ ದರಕ್ಕಿಂತ ದ್ಯಾಮಮ್ಮರಲ್ಲಿ ಒಂದೆರಡು ರೂಪಾಯಿ ಕಡಿಮೆ. ತಾಜಾ ತರಕಾರಿಯಾದುದರಿಂದ ನಿಶ್ಚಿತ ಗಿರಾಕಿಗಳು. ಎಲ್ಲಾ ಖರ್ಚು ಕಳೆದು ಒಂದು ಸಾವಿರ ಲಾಭ ಖಚಿತ. ವಾರದ ಕೊನೆಗೆ ಇವರ ಅನ್ನದ ಬಟ್ಟಲು ತುಂಬಿರುತ್ತದೆ. ಸ್ವಂತದ್ದಾದ ಶೌಚಾಲಯ ಕಟ್ಟಿಸಿಕೊಂಡು ಬಯಲು ಶೌಚಕ್ಕೆ ಬೈ ಹೇಳಿದ್ದಾರೆ.

          ಮನೆಯ ಸುತ್ತ ಕೈತೋಟವಿದೆ. ತರಕಾರಿ ಬೆಳೆಯುತ್ತಿದ್ದಾರೆ. ಮಾಲ್ವಿಯ ಕಾಲೇಜು ಆವರಣದಲ್ಲಿ ಸಂತೆ ನಡೆಯುತ್ತಿದೆ. ಪೇಟೆ ವಿಸ್ತರಣೆಯಾಗುತ್ತಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ತರಕಾರಿಗೆ ಸಂತೆಯ ಅವಲಂಬನೆ ಅನಿವಾರ್ಯ. ಹೀಗಾಗಿ ಸಂತೆಯೂ ವಿಸ್ತರಣೆಯಾಗುತ್ತಿದೆ. ದ್ಯಾಮಮ್ಮರ ಹಿರಿಮಗ ಬೇರೆಯೇ ವಾಸವಾಗಿದ್ದಾರೆ. ಕಿರಿ ಮಗ ತಾಯಿಯೊಂದಿಗೆ ವ್ಯಾಪಾರಕ್ಕೆ ಸಹಕರಿಸುತ್ತಿದ್ದಾರೆ.

          ದ್ಯಾಮಮ್ಮರಂತೆ ಪಾರವ್ವ ಗಿರಿಯಣ್ಣವರ್, ನಾಗಮ್ಮ ಕುಂಬಾರ್, ಅನುಸೂಯ ರೋಗಣ್ಣನವರ್, ದಾಕ್ಷಾಯಿಣಿ ಪೂಜಾರ್.. ಇಂತಹ ಇಪ್ಪತ್ತೈದಕ್ಕೂ ಮಿಕ್ಕಿ ಅಮ್ಮಂದಿರು ಬಡತನವನ್ನು ಗೆದ್ದಿದ್ದಾರೆ. ಸ್ವಾವಲಂಬಿಯಾಗಿದ್ದಾರೆ. ಜ್ಞಾನ ವಿಕಾಸವು ಅವರಿಗೆಲ್ಲಾ ಹೆಗಲೆಣೆಯಾಗಿದೆ. ಬದುಕುವ ದಾರಿಯನ್ನು ತೋರಿದೆ. ಇವರೆಲ್ಲಾ ಸಂತೆಯಲ್ಲಿ ಪಳಗಿದ ತರಕಾರಿ ವ್ಯಾಪಾರಿಗಳು! ಕೆಲವರು ಮನೆಯಲ್ಲೇ ಬೆಳೆದು ಸಂತೆಯಲ್ಲಿ ಮಾರುವವರೂ ರೂಪಿತರಾಗಿದ್ದಾರೆ.

          'ಎಷ್ಟೋ ಮಂದಿಗೆ ಭೂಮಿಯಿದೆ. ಬಳಕೆ ಗೊತ್ತಿಲ್ಲ. ಪೇರಳೆ, ಚಿಕ್ಕು ಬೆಳೆದರೆ ಡಿಮ್ಯಾಂಡಿದೆ. ಯಾರೂ ಮನ ಮಾಡುತ್ತಿಲ್ಲ' ಎಂದು ವಿಷಾದಿಸುತ್ತಾರೆ ಪಾರ್ವತಿ. ಜ್ಞಾನ ವಿಕಾಸ ಎಂಟ್ರಿ ಕೊಡುವ ಮುನ್ನ ಇಲ್ಲಿನ ಬಡವರಿಗೆ ದುಪ್ಪಟ್ಟು ಬಡ್ಡಿಯಲ್ಲಿ ಸಾಲ ಕೊಡುವ ಖಾಸಗಿ ಲೇವಾದೇವಿದಾರರಿದ್ದರು. ದುಡಿದ ಪಗಾರವೆಲ್ಲಾ ಬಡ್ಡಿಗೆ ಸರಿಸಮವಾಗುತ್ತಿತ್ತು. ಈಗ ಹಾಗಲ್ಲ. ದುಡಿಯುವ ಮನಸ್ಸಿದ್ದವರಿಗೆ, ಜ್ಞಾನವಿಕಾಸ ಸಹಕಾರಿಯಾಗುತ್ತಿರುವುದು ನಿಜಾರ್ಥದಲ್ಲಿ ಗ್ರಾಮಾಭಿವೃದ್ಧಿ.

Wednesday, October 17, 2012

ಎರಡನೇ ಕೃಷಿ ಯಂತ್ರ ಮೇಳ

              ಸಹಕಾರಿ ಸಂಸ್ಥೆ ಕ್ಯಾಂಪ್ಕೋ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ರಿ.) ಮತ್ತು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ಸಹಭಾಗಿತ್ವದಲ್ಲಿ ಪುತ್ತೂರು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ 02.11.2012 ರಿಂದ 04.11.2012 ತನಕ  ಕೃಷಿ ಯಂತ್ರ ಮೇಳ - 2 - 2012 ನಡೆಯಲಿದೆ. ಒಂದು ಲಕ್ಷಕ್ಕೂ ಮಿಕ್ಕಿ ರೈತರು ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ.

              ಮೇಳದ ವೈಶಿಷ್ಟ್ಯ: * ಆಧುನಿಕ ಮತ್ತು ಅತ್ಯವಶ್ಯಕ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಮತ್ತು ಮಾರಾಟ * ಚೀನಾ, ಇಸ್ರೇಲ್ ದೇಶಗಳ ಕೃಷಿ ಯಂತ್ರಗಳು, * ನೂತನವಾಗಿ ಆವಿಷ್ಕಾರಗೊಂಡ ಕೃಷಿ/ ತೋಟಗಾರಿಕಾ / ಗೃಹೋಪಯೋಗಿ / ಹೈನುಗಾರಿಕ ಯಂತ್ರಗಳು. * ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಆವಿಷ್ಕಾರಗೊಂಡ ಯಂತ್ರೋಪಕರಣಗಳು * ಕೃಷಿಕರು ತಯಾರಿಸಿದ ಆವಿಷ್ಕಾರಗಳು * ವೈವಿಧ್ಯಮಯ ಕೃಷಿ ವಿಚಾರ ಸಂಕಿರಣ * ಕೃಷಿಗೆ ಸಂಬಂಧಿಸಿದಂತೆ ಬ್ಯಾಂಕ್ಗಳ ಆರ್ಥಿಕ ಸೌಲಭ್ಯಗಳ ಮಾಹಿತಿ * ಕೃಷಿಕರಿಂದ ಪ್ರಶಂಸಿಸಲ್ಪಟ್ಟ ಯಂತ್ರೋಪಕರಣಗಳ ಉತ್ಪಾದನೆಗೆ ಆರ್ಥಿಕ ಸವಲತ್ತು - ಬ್ಯಾಂಕ್ಗಳ ಮೂಲಕ ನೀಡಲು ಶಿಫಾರಸು * ವಾಣಿಜ್ಯ ಮಳಿಗೆಗಳು, ಸಂಶೋಧಕರ ಮಳಿಗೆಗಳು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮಳಿಗೆಗಳನ್ನೊಳಗೊಂಡ 100 ಕ್ಕೂ ಮಿಕ್ಕಿದ ಮಳಿಗೆಗಳು. 
      
                * 02.11.2012 - ಪದ್ಮಭೂಷಣ ರಾಜಷರ್ಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ - ಇವರಿಂದ ಉದ್ಘಾಟನೆ. ಅಧ್ಯಕ್ಷತೆ : ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ. * ದಿನಾಂಕ 04.11.2012, ಅಪರಾಹ್ನ ಘಂಟೆ 2.30 - ಸಮಾರೋಪ ಸಮಾರಂಭ.

* ವಿಚಾರ ಸಂಕಿರಣ: (2-11-2012)
 1) ವಿಷಯ : ಕೃಷಿ ಯಾಂತ್ರೀಕರಣದ ಅನುಭವಗಳು. ಪ್ರಸ್ತುತಿ : ಶ್ರೀ ಈಶ್ವರ ಪ್ರಸಾದ್ ಬನಾರಿ, ಶ್ರೀ ಕೂಳೂರು ಸತ್ಯನಾರಾಯಣ
2) ವಿಷಯ : ಪಶುಪಾಲನೆ - ಯಾಂತ್ರೀಕರಣದ ಸಾಧ್ಯತೆ ಮತ್ತು ಸವಾಲುಗಳು. ಪ್ರಸ್ತುತಿ : ಕುಮಾರ್ ಹಾಸನ, ಸೀತಾರಾಮ ಹೆಗಡೆ, ನೀರ್ನಳ್ಳಿ, ಶಿರಸಿ.

* ವಿಚಾರ ಸಂಕಿರಣ: (3-11-2012)
ಬಯಲು ಪ್ರಾತ್ಯಕ್ಷಿಕೆ, ಪವರ್ ಸ್ಪ್ರೇಯರ್ಗಳು, ಸ್ಪ್ರೇಯ್ ಗನ್
ವಿಚಾರ ಪ್ರಸ್ತುತಿ : ಶ್ರೀ ಅನ್ನಪೂರ್ಣ ಏಜೆನ್ಸೀಸ್ ಚಿಕ್ಕಮಗಳೂರು, ಗೋವಿಂದ ಪ್ರಕಾಶ ಸಾಯ ಎಂಟರ್ಪ್ರೈಸಸ್ ಪುತ್ತೂರು,  ಉರಿಮಜಲು ಮೋಹನ, ವಿಟ್ಲ
* ಮಿಸ್ಟ್ ಬ್ಲೋವರ್ಗಳು
 ಶ್ರೀ ಚೀಮುಳ್ಳು ಸೀತಾರಾಮ * ರೋಪ್ ವೇ : ರಾಮ್ ಕಿಶೋರ್, ಮಂಚಿ * ತೆಂಗು ಕೊಯ್ಲು - ಶ್ರೀಮತಿ ಕೃಷ್ಣವೇಣಿ, ಕಾಸರಗೋಡು                                                                          
* ವಿಚಾರ ಸಂಕಿರಣ :
 ಕೃಷಿ ಯಾಂತ್ರೀಕರಣದಲ್ಲಿ ಹೊಸತು - ಅಳವಡಿಸುವ ಸಾಧ್ಯತೆಗಳು.
ಪ್ರಸ್ತುತಿ : ವಿಶ್ವನಾಥ ಕುಂಟುವಳ್ಳಿ, ವಿನಾಯಕ ಹೆಗಡೆ ಸಾಗರ, ಸುರೇಶ್ ಭಂಡಾರಿ ಎಂ, ಬಾಲಚಂದ್ರ ಹೆಗಡೆ ಸಾಯಿಮನೆ, ಶಿರಸಿ.
* ಜಾಬ್ ವರ್ಕರ್  ಮೂಲಕ ಯಂತ್ರ ಬಳಕೆ
ವಿಷಯ : ಹಸಿ ಅಡಿಕೆ ಸುಲಿತ -
ಪ್ರಸ್ತುತಿ : ಅಮರನಾಥ ಪಡಿಯಾರ್, ತೀರ್ಥಹಳ್ಳಿ. ಆರ್. ಎಂ. ಭಟ್, ಕಾರ್ಯದರ್ಶಿ, ಹುಳಗೋಳ ಸೊಸೈಟಿ

ವಿಷಯ : ನೀರಿನಿಂದ ವಿದ್ಯುತ್ ಉತ್ಪಾದನೆ.
ಪ್ರಸ್ತುತಿ - ಡಾ. ಅನಿಲ್ ಪ್ರಕಾಶ ಜೋಷಿ, ಡೆಹರಡೂನ್, ಉತ್ತರಾಖಂಡ, ರತ್ನಾಕರ್ ಜಯಪುರ

* ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದನೆ -
ಪ್ರಸ್ತುತಿ : ಡಾ. ಅಶೋಕ ಕುಂದಾಪುರ, ಉಡುಪಿ.
* ಕೇಂದ್ರೀಕೃತ ಅಡಿಕೆ, ಕಾಳುಮೆಣಸು, ವೆನಿಲ್ಲಾ ಮುಂತಾದ ಬೆಳೆಗಳ ಸಂಸ್ಕರಣೆ/ ಮೌಲ್ಯ ವರ್ಧನೆ -
ಕನ್ನಂಗಿ ಶೇಷಾದ್ರಿ, ತೀರ್ಥಹಳ್ಳಿ,

ವಿಚಾರ ಸಂಕಿರಣ (04-11-2012)   
                                      
ತೋಟಗಳಲ್ಲಿ ಅಂತರ್ ಸಾಗಾಟ
* ರಿಕ್ಷಾದಿಂದ ತೋಟಗಳಲ್ಲಿ ಸರಕು ಸಾಗಾಟ - 
ಶ್ರೀ ಸೀತಾರಾಮ ಭಟ್ ವಿಟ್ಲ, ಕೋಡಿಬೈಲ್ ಸತ್ಯನಾರಾಯಣ, ಪುತ್ತೂರು, ಶ್ರೀ ಗೋಪಾಲಕೃಷ್ಣ ಭಟ್ -
                                                                  
* ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕೃಷಿ ಉಪಯೋಗಿ ಆವಿಷ್ಕಾರಗಳು                                                       
                                                     
ಹನಿ ನೀರಾವರಿ ಪ್ರಾಮುಖ್ಯತೆ ಮತ್ತು ರಸಗೊಬ್ಬರಗಳನ್ನು ನೀರಿನ ಮೂಲಕ ಪೂರೈಕೆ ಮಾಡುವುದು : 
ಶ್ರೀ ಶ್ರೀನಿವಾಸ್ ನಾಯ್ಕ, ವಿಜ್ಞಾನಿಗಳು, ಜೈನ್ ಇರಿಗೇಶನ್

ಆಧುನಿಕ ಸಸ್ಯ ಸಂರಕ್ಷಣಾ ಉಪಕರಣಗಳು
ಎಸ್.ವಿ.ರಂಗಸ್ವಾಮಿ ಮತ್ತು ಕಂಪನಿಯ ಪ್ರತಿನಿಧಿಗಳು (ಆಸ್ಪೀ ಉಪಕರಣಗಳ ಬಗ್ಗೆ)
(0824) 2441584

'ಯಂತ್ರ ಮೇಳ' ಚಪ್ಪರ ಮುಹೂರ್ತ

             ಕ್ಯಾಂಪ್ಕೋ ಮತ್ತು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ನವೆಂಬರ್ 2 ರಿಂದ 4ರ ತನಕ ಪುತ್ತೂರಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ 'ಯಂತ್ರ ಮೇಳ 2-2012' (Yanthra Mela - 2 - 2012) ) ನಡೆಯಲಿದೆ. ಪುತ್ತೂರಿನ ವಿವೇಕಾನಂದ ತಾಂತ್ರಿಕ ಕಾಲೇಜು ಸಹಯೋಗ.

          13 ಶನಿವಾರ 2012ರಂದು ಮೇಳಕ್ಕೆ ವೇಗದ ಚಾಲನೆ ಮತ್ತು ವ್ಯವಸ್ಥೆಯ ಬೀಸುಹೆಜ್ಜೆಗೆ ಸಹಕಾರಿಯಾಗಲು 'ಚಪ್ಪರ ಮುಹೂರ್ತ' ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಡಾ.ಪ್ರಭಾಕರ ಭಟ್ ಕಲ್ಲಡ್ಕ ದೀಪಜ್ವಲನದ ಮೂಲಕ ಉದ್ಘಾಟಿಸಿ, 'ಹಳ್ಳಿ ಮತ್ತು ಕೃಷಿಗೆ ವಿಶೇಷ ಮಹತ್ತನ್ನು ನೀಡುವ ಮೂಲಕ ಹಿರಿಯ ಕಲ್ಪನೆಯನ್ನು ಸಾಕಾಗೊಳಿಸುವಲ್ಲಿ ಯಂತ್ರ ಮೇಳವೊಂದು ಮಹತ್ವದ ಮೈಲುಗಲ್ಲು' ಎಂದರು.

          ಕ್ಯಾಂಪ್ಕೋ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ; ನಿರ್ದೇಶಕರಾದ ಸಂಜೀವ ಮಠಂದೂರು, ಡಿ.ಬಿ.ಬಾಲಕೃಷ್ಣ, ಚನಿಲ ತಿಮ್ಮಪ್ಪ ಶೆಟ್ಟಿ, ವಿದ್ಯಾವರ್ಧಕ ಸಂಘದ ಶಿವಪ್ರಸಾದ್, ಪ್ರಾಂಶುಪಾಲ ಅಶೋಕ್ ಕುಮಾರ್ ಉಪಸ್ಥಿತಿ.

          ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಸ್ವಾಗತಿಸಿದರು. ವಿ.ತಾ.ಮ.ವಿದ್ಯಾಲಯದ ಅಧ್ಯಕ್ಷ ಜಿ.ಎಲ್.ಬಲರಾಮ ಆಚಾರ್ಯ ವಂದಿಸಿದರು.

Saturday, October 13, 2012

'ಪೇಸ್ಬುಕ್ನ ಎಗ್ರಿಕಲ್ವರಿಸ್ಟ್' - ಸದಸ್ಯರ ಮುಖಾಮುಖಿ


                 ಮಿತ್ರ ಮಹೇಶ್ 'ಪೇಸ್ಬುಕ್ನ ಎಗ್ರಿಕಲ್ವರಿಸ್ಟ್' ವಿಚಾರಗಳನ್ನು ಆಗಾಗ್ಗೆ ಹೇಳುತ್ತಲೇ ಇದ್ದರು. ಪೇಸ್ ಬುಕ್ ನಿರಕ್ಷರಿಯಾಗಿದ್ದ ನನಗದು ಯಾಕೋ ಮನದೊಳಗೆ ಹೊಕ್ಕಿರಲಿಲ್ಲ. ಅಲ್ಲಿ ನಡೆವ ಚರ್ಚೆ, ವಿಚಾರಗಳನ್ನು ವಿವರಿಸುತ್ತಿದ್ದರು. ಸ್ನೇಹಿತ ಕಲಾವಿದ ಎಸ್ಸಾರ್ ಪುತ್ತೂರು ಇವರ ಒತ್ತಾಸೆಯಂತೆ ಫೇಸ್ ಬುಕ್ಕಿನಲ್ಲಿ ನನ್ನ ವಿಳಾಸವೂ ಹೊಕ್ಕಿತು. ಅಪರೂಪಕ್ಕೊಮ್ಮೆ 'ಒಳಗೆ ಹೋಗಿ ಹೊರಗೆ ಬರುವುದು' ಬಿಟ್ಟರೆ ಅನುಸರಿಸಿದವನಲ್ಲ. ಅಷ್ಟು ಪುರುಸೊತ್ತು ಇಲ್ಲವೆನ್ನಿ!

                 ಅಕ್ಟೋಬರ್ 12, ಅಪರಾಹ್ನ 3-30ಕ್ಕೆ ಪುತ್ತೂರಿನ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಚೇರಿಯಲ್ಲಿ ಜರುಗಿದ 'ಎಗ್ರಿಕಲ್ವರಿಸ್ಟ್' ಗುಂಪಿನ ಸದಸ್ಯರ ಮುಖಾಮುಖಿ ನಡೆಯಿತು. ಅಪರಿಚಿತ ಮುಖಗಳ ಉಪಸ್ಥಿತಿ. ಎಲ್ಲರಲ್ಲೂ ಸಶಕ್ತ ಮಾಧ್ಯಮವೊಂದರ ಸದಸ್ಯರೆನ್ನುವ ಖುಷಿಯಿತ್ತು. ಮಾತುಕತೆಯೂ ಕೂಡಾ. ಕೃಷಿಯ ಈಗಿನ ಸಂಕಟದ ಕಾಲದಲ್ಲಿ ಅದಕ್ಕೆ ಪರಿಹಾರವನ್ನು ಸಂವಹನದ ಮೂಲಕ ಕಂಡುಕೊಳ್ಳುವ ಆಶಯವೂ ಎದ್ದು ಕಾಣುತ್ತಿತ್ತು.

                 ಎಲ್ಲರೂ ತಂತಮ್ಮ ಕಂಪ್ಯೂ ಜ್ಞಾನದ ಮಿತಿಯಲ್ಲಿ ಸಂವಹನ ಮಾಡಿದ್ದಾರೆ. ಇದಕ್ಕಾಗಿಯೇ ಕಂಪ್ಯೂ ಕಲಿತವರೂ ಇದ್ದಾರೆ. ತಮ್ಮಲ್ಲಿರುವ ಜ್ಞಾನವನ್ನು ಒಂದಷ್ಟು ಮಂದಿಗೆ ಹರಡಿಸುವ ಹಪಹಪಿಕೆಯೂ ಇತ್ತು. ಉತ್ತಮ ಬೆಳವಣಿಗೆ. ಗುಂಪಿಗೆ ಒಂದು ವರುಷವಾದ ಖುಷಿಯಲ್ಲಿ ಅದರ ನಿರ್ವಹಣೆ ಮಾಡುವ ಮಹೇಶ್ ಪುಚ್ಚಪ್ಪಾಡಿ ಸಭೆಯನ್ನು ಆಯೋಜಿಸಿದ್ದರು. ಸಭೆಯ ಕಲಾಪವನ್ನು ಕುತೂಹಲ ಕಣ್ಣಿನಿಂದ ನೋಡಿ, ಕೊನೆಗೆ 'ನಾನೂ ಕೂಡಾ ಗುಂಪಿನ ಸದಸ್ಯನಾಗಬೇಕು' ಎನ್ನುವ ನಿರ್ದಾರಕ್ಕೆ ಬಂದೆ!
                   ಮಹೇಶ್ ಕಾರ್ಯನಿರತ ಪತ್ರಕರ್ತ. ವಿಜಯವಾಣಿಯ ಹಿರಿಯ ವರದಿಗಾರರು. 'ಕಾರ್ಯನಿರತ ಪತ್ರಕರ್ತನೊಬ್ಬ ಋಣಾತ್ಮಕ ಮನಸ್ಸಿನಿಂದ ಹೊರ ಬಂದು ಸಮಾಜಮುಖಿಯಾಗಿಯೂ ಕೆಲಸ ಮಾಡಬಹುದು' ಎಂಬುದನ್ನು ಮಹೇಶ್ ಪುಚ್ಚಪ್ಪಾಡಿ ಕೃತಿಯ ಮೂಲಕ ತೋರಿಸಿದ್ದಾರೆ. ಇದೊಂದು ಮಾದರಿ ಗುಣ. ಎಲ್ಲರಿಗೂ ಇದು ಬರುವಂತಹುದಲ್ಲ.
ಮಹೇಶ್ ಮತ್ತು ನಾನು ಪುತ್ತೂರಿನ 'ಭಟ್ ಬಿಲ್ಡಿಂಗ್'ನಲ್ಲಿರುವವರು. ದಿವಸಕ್ಕೆ ಮೂರ್ನಾಲ್ಕು ಬಾರಿಯಾದರೂ ಮುಖದರ್ಶನ ಆಗಿಯೇ ಆಗುತ್ತದೆ. ನಿತ್ಯ ಮುಖಾಮುಖಿಯಾಗುತ್ತಾ ಇರುವವರು ಹೊಗಳುವುದೇನನ್ನು? ಹೊಗಳಿದರೂ ಮುಜುಗರ! 'ಇದರಲ್ಲಿ ಏನೋ ಕರಾಮತ್ತು ಇರಬೇಕು' ಎಂದು ಅನ್ನಿಸದೆ ಇರಲಾರದು. ಹಾಗಾಗಿ ಅವರ ಬಗ್ಗೆ ಬ್ಲಾಗಿನಲ್ಲಿ ನಾಲ್ಕು ಮಾತು ಹೇಳೋಣ ಅನ್ನಿಸಿತು. ಏನಂತೀರಿ?

ಅತಿಥಿಗಳ ಹಿತೋಕ್ತಿ
                   "ಕೃಷಿಕರ ಬಳಿ ಅನೇಕ ಮಾಹಿತಿಗಳು ಇವೆ. ಇಂದಿನ ಆಧುನಿಕ ಯುಗದಲ್ಲಿ ಇಂತಹ ಅಪರೂಪದ ಕೃಷಿ ಮಾಹಿತಿಗಳ ವಿನಿಮಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೃಷಿಪರ ಮಾಧ್ಯಮಗಳ ಅನಿವಾರ್ಯತೆ ಇದೆ" ಎಂದು ಪತ್ರಕರ್ತ 'ಶ್ರೀ' ಪಡ್ರೆ ಹೇಳಿದರು. ಅವರು 'ಪೇಸ್ಬುಕ್ನ ಎಗ್ರಿಕಲ್ವರಿಸ್ಟ್' ಗುಂಪಿನ ಮೊದಲ ಸಭೆಯಲ್ಲಿ ಅತಿಥಿಯಾಗಿ ಮಾತನಾಡಿದರು. ಕೃಷಿಯ ಕಡೆಗೆ ಎಷ್ಟು ಜನ ಆಕರ್ಷಿತರಾಗುತ್ತಾರೋ ಎಂಬುದು ಎಷ್ಟು ಮುಖ್ಯವಾಗುತ್ತದೋ ಅಷ್ಟೇ ಮುಖ್ಯವಾಗಿ ಮಾಹಿತಿಗಳ ವಿನಿಯಮವೂ ಅಗತ್ಯವಾಗುತ್ತದೆ. ಮೌಲಿಕವಾದ ಮಾಹಿತಿಗಳು ಕೃಷಿಕರಿಗೆ ವಿವಿಧ ಮೂಲಗಳ ಮೂಲಕ ಸಿಕ್ಕಾಗ ಅನುಭವಗಳ ಮೂಟೆ ದೊಡ್ಡದಾಗುತ್ತದೆ. ಎಲ್ಲಾ ಮಾಧ್ಯಮಗಳಲ್ಲೂ ಜಳ್ಳು ಇರುತ್ತದೆ, ಅದೇ ರೀತಿ ಪೇಸ್ಬುಕ್ನ ಗುಂಪಿನಲ್ಲೂ ಇರಬಹುದು, ಅದಕ್ಕೆ ಹೆಚ್ಚು ಮಹತ್ವ ನೀಡದೆ ಪ್ರಯೋಜನಕರವಾದ ಮಾಹಿತಿಗಳನ್ನು ಪಡೆಯಬಹುದು" ಎನ್ನುತ್ತಾ, "ಅನೇಕ ಗುಂಪುಗಳು ಸಮಾಜದಲ್ಲಿ ಗುಂಪುಗಾರಿಕೆ ಮಾಡುತ್ತಲೇ ಇವೆ! ಆದರೆ ಪೇಸ್ಬುಕ್ನ ಈ ಗುಂಪುಗಾರಿಕೆ ನಿಜಕ್ಕೂ ಉತ್ತಮ ಬೆಳವಣಿಗೆ" ಎಂದರು.

                    ಸಭೆಯ ಅಧ್ಯಕ್ಷತೆಯನ್ನು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ವಹಿಸಿ, 'ಕೃಷಿಕರಿಗೆ ವಿವಿಧ ರೀತಿಯ ಸಂವಹನಗಳು ತೀರಾ ಅಗತ್ಯ ಇದೆ.ಕೃಷಿಕರು ಕೃಷಿಯ ಜೊತೆಗೆ ಮಾತನಾಡುವುದು ಮತ್ತು ಬರೆಯಲು ಕೂಡಾ ಕಲಿಯಬೇಕು. ಇದಕ್ಕೆ ಹಿಂಜರಿಕೆ ಇರಬಾರದು, ಹೀಗಾದಾಗ ಮಾತ್ರ ಮಾಹಿತಿ ಸಿಗಲು ಸಾಧ್ಯ' ಎಂದರು.
                     ಸಭೆಯಲ್ಲಿ ಗುಂಪಿನ ಅನೇಕ ಸದಸ್ಯರು ಭಾಗವಹಿಸಿದ್ದರು. ಎಗ್ರಿಕಲ್ಚರಿಸ್ಟ್ ಗುಂಪಿನಿಂದಾಗ ಪ್ರಯೋಜನ ಹಾಗೂ ಬೆಳವಣಿಗೆಯ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಸ್ವಾಗತಿಸಿ, ವಂದಿಸಿದರು.

(link : http://www.facebook.com/groups/Agriculturist/

Friday, October 12, 2012

'ಸಮೃದ್ಧಿ' ಆಚರಿಸಿದ ಇಪ್ಪತ್ತರ ಸಂತಸ
ಪುತ್ತೂರಿನ ಗಿಡಗೆಳತನ ಸಂಘ 'ಸಮೃದ್ಧಿ' (Samruddi) ಇಪ್ಪತ್ತನೇ ವರುಷಕ್ಕೆ ಕಾಲಿಟ್ಟಿದೆ. ಸವಣೂರು ಅಶ್ವಿನಿ ಪಾರ್ಮಿನಲ್ಲಿ ಇಂದು (12-10-2012) ವಿಂಶತಿಯನ್ನು ಉದ್ಘಾಟಿಸಿದವರು ಹಿರಿಯ ಕೃಷಿಕ ಕರಿಯಾಲ ಶಿವರಾಮ ಭಟ್. ದೀಪವನ್ನು ಜ್ವಲಿಸುವುದಲ್ಲದೆ, ಕುಂಡದಲ್ಲಿ ಭತ್ತದ ಸಸಿಯನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಉದ್ಘಾಟಿಸಿ, 'ಅಳಿವಿನಂಚಿನಲ್ಲಿರುವ ಬೀಜ-ಸಸ್ಯಗಳನ್ನು ಉಳಿಸಿ, ಬೆಳೆಸಿದ ಕೀರ್ತಿ ಸಮೃದ್ಧಿಯದು' ಎಂದರು.

ಸಭಾಧ್ಯಕ್ಷತೆಯನ್ನು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್ ವಹಿಸಿ, 'ಬೀಜ, ಗಿಡಗಳ ಆಸಕ್ತಿಯನ್ನು ಹೆಚ್ಚಿಸುವುದರೊಂದಿಗೆ ಕೃಷಿಯಲ್ಲೂ ಆಸಕ್ತಿ ಉಳಿಸುವ ನಿಟ್ಟಿನಲ್ಲಿ ಸಮೃದ್ಧಿಯ ಕಾರ್ಯ ಶ್ಲಾಘನೀಯ' ಎಂದು ಮೆಚ್ಚಿಕೊಂಡರು.

ಸಮೃದ್ಧಿಯನ್ನು ಉದ್ಘಾಟಿಸಿ, ಅದರ ಹತ್ತರ ಸಮಾರಂಭದಲ್ಲೂ ಭಾಗವಹಿಸಿ, ಈಗ ಇಪ್ಪತ್ತರ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸಿದವರು, ಮೂಡುಬಿದಿರೆಯ ಡಾ. ಎಲ್.ಸಿ.ಸೋನ್ಸ್. ಕೃಷಿಕ ತಂತ್ರಜ್ಞ ನಿಟಿಲೆ ಮಹಾಬಲೇಶ್ವರ ಭಟ್ಟರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಮೃದ್ಧಿಯ ಸ್ಥಾಪಕ ಅಧ್ಯಕ್ಷ ಸೇಡಿಯಾಪು ಜನಾರ್ದನ ಭಟ್ ಮತ್ತು ಕಾರ್ಯದರ್ಶಿ ಪೆಲಪ್ಪಾರು ವೆಂಕಟ್ರಮಣ ಭಟ್ ವೇದಿಕೆಯಲ್ಲಿ ಉಪಸ್ಥಿತಿ.

ಮೂಲಿಕಾ ತಜ್ಞ ವೆಂಕಟ್ರಾಮ ದೈತೋಟ ಪಾಣಾಜೆ ಮತ್ತು ಜಯಲಕ್ಷ್ಮೀ ವಿ. ದೈತೋಟ ಅವರಿಂದ 'ಆಹಾರವೇ ಔಷಧ' ಮಾಹಿತಿ. ಸಮೃದ್ಧಿಯನ್ನು ಮುನ್ನಡೆಸಿದ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಿಗೆ ಗೌರವಾರ್ಪಣೆ. 'ಸಮೃದ್ಧಿಯಿಂದ ಗಿಡಗೆಳೆತನ' ಅನುಭವ ಕಥನ - ನಡೆದ ವಿವಿಧ ಕಲಾಪಗಳು.

ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರಿಂದ ಸಮಾರೋಪ ಸಂದೇಶ. ಸಾವಯವ ಭೋಜನದ ಬಳಿಕ ಮೋಹನ ಪ್ರಭುಗಳ ಸುಪರ್ದಿಯ ಅಶ್ವಿನಿ ಪಾರ್ಮ್ ವೀಕ್ಷಣೆ.

ಶಿವಸುಬ್ರಹ್ಮಣ್ಯ ಪೆಲತ್ತಡ್ಕ ನಿರ್ವಹಣೆ. ಸಮೃದ್ಧಿ ಅಧ್ಯಕ್ಷ ಸಿ.ವಿ.ಶಂಕರ್ ಸ್ವಾಗತ. ಕಾರ್ಯದರ್ಶಿ ಪಿ.ಆರ್.ಯಶೋಚಂದ್ರ ಪ್ರಸ್ತಾವನೆ. ಕೃಷಿಕ ಎ.ಪಿ.ಸದಾಶಿವ ವಂದನಾರ್ಪಣೆ. ಡಾ.ಎನ್.ವಿ.ಕರುಣಾಕರ ಅವರಿಂದ ದೈತೋಟರ ಪರಿಚಯ. ಸಮೃದ್ಧಿ ಸಂತಸದ ಸಂಚಾಲಕ ಎಡಂಬಳೆ ಸತ್ಯನಾರಾಯಣ ಉಸ್ತುವಾರಿಕೆ. ಸುಮಾರು ಇನ್ನೂರು ಮಂದಿ ಸಮೃದ್ಧಿ ಪ್ರಿಯರ ಉಪಸ್ಥಿತಿ.

ಚಿತ್ರಗಳು: ಹರ್ಷಿತ್ ಪುಚ್ಚಪ್ಪಾಡಿ

Thursday, October 11, 2012

On a green day, veg had the edge

 
* Ronald Anil Fernandes (DH)
 
For the 300-odd people who flocked to Mallya Shankarnarayan Bhat’s home in this small village 50 km from Mangalore on Saturday, the visit was worth its while.
                
An overwhelming number of them were farmers, and they learnt during the visit things about their vocation they did not even know! They came to know, for instance, that vegetable growing is not seasonal as believed, that veggies can be grown 365 days in a year.

                They also learnt that the range of vegetables was wider than generally believed to be. That the range is such that a grower can shift from one vegetable to another in order to avoid loss in times of glut in market, or to beat the pests and diseases. Bhat had organised the get-together to convey to his fellow farmers that vegetable growing was a profitable, round-the-year business, and that it need not be chemical-dependent.

                    A stunning range of over 200 varieties of vegetables and fruits, with shapes and shades no painter could reproduce, was displayed at Bhat’s house, to impress upon the gathering about the diversity of the greens that are so critical to health. There were a number of members from the gourd family (ridge, bottle, snake, ash, ivy and ‘kaadu peere’- a variety of bitter gourd that is anything but bitter), cowpea, spinach, pumpkin, regular beans, sword beans, bread fruit, passion fruit, jack fruit, star fruit, durian, banana stem, banana shoot, ginger mango, pomelo, elephant yam, ladies finger, gherkins, cucumber, tapioca, wild mosumbi, wild oranges, ‘kanchu huli,’ radish, anjoor, cherry tomatoes, a number of green leafy vegetables.

                    Some of them are so indigenous that the English names are not available, such as ‘Aane Mungu,’ ‘Maha Phala,’ etc, and many are not even sold in the market any longer. The programme was aptly titled “Varshavidi Tharakaari” (vegetables round the year), was jointly organised by Hopcoms (Dakshina Kannada and Udupi), Horticulture department (DK ZP), Varanasi Jackfruit Growers’ Association (Adyanadka) and Halasu Snehi Koota (Jackfruit Friends’ Forum).

                  Such was the excitement that the programme generated, that farmers came for as far away as Moodbidri, Madikeri and even Mysore. Many shared their knowledge on growing vegetables round the year, dispelling the widely-held notion that they can’t be grown during monsoon and growing them through organic farming is not profitable.

From door-to-door

                  Farmer A P Chandrashekar stressed the need to use more and more locally available vegetables like Colocasia (Kesu used in Pathrode), Amaranthus (Harive) and Lancy Crasta. A farmer from Taccode near Moodbidri, explained how he supplies vegetables from door-to-door. C R Shivakumar, a consulting engineer now into farming in Periyapatna, spoke of how he takes vegetables grown in his 18-acre land in Periyapatna to Madikeri every Saturday, but manages to sell it even before he reaches Madikeri!

                   The programme was inaugurated by cutting a cucumber and plucking ladies finger from a plant. While guests were given a sapling of colocasia, all the visitors were given seeds of a number of vegetables free of cost.
And veggie snacks too!

               An added attraction in the day’s programme was the menu for breakfast, lunch and evening tea. Almost everyone was all praise for the host, Mallya Shankarnarayan Bhat. In fact, many had a rare opportunity to taste unique dishes made of unique vegetables.

                While Colocasia was served as breakfast with tea/coffee, the lunch had a number of dishes. While the soup was made of ‘Maha Phala’ leaves, the pickle was prepared using ‘Aane Mungu’ and Avil was prepared with bittergourd, cowpea, elephant yam, cucumber, brinjal, ridgegourd. There were three varieties of salads. While the first one was prepared with papaya, pomelo, corn and green gram, the second salad comprised colocasia, ginger and coriander leaves and the third salad had cucumber, banana shoot and ginger. The palav had cowpea, elephant yam, gherkins and beans. The payasam was made of bottle gourd, cucumber and pumpkin and the ‘halva’ had tapioca and cashew nut. The ‘tapioca jamoon’ was a new invention added in the last minute.
                For the evening tea, the host served ‘jackfruit bonda’ and fried ‘tapioca podi.’ Not ­surprisingly, most of the guests ate only vegetables and did not even touch rice!
 
(Deccan Herald/7-10-2012/page 8) 
LINKS
http://www.deccanherald.com/content/283523/on-green-day-veg-had.html

‘Try consuming little known veg / fruits grown in rural areas’


*   Ronald Anil Fernandes, (DH)

            There are at least 10,000 species of edible food (fruits / vegetables) available, but human beings are depending on only wellknown fruits and vegetables, opined A P Chandrashekar, a progressive farmer and author of many books on agriculture from Mysore.

             He was addressing a gathering at a unique programme “Varshavidi Tharakaari” (Vegetables round the year), a day long interaction with farmers and villagers to create an awareness about vegetable cultivation (preferably in an organic way) round the year, jointly organised by Hopcoms (Dakshina Kannada and Udupi), Horticulture department (DK ZP), Varanashi Jackfruit Growers’ Association (Adyanadka) and Halasu Snehi Koota (Jackfruit Friends’ Forum), at progressive farmer Shankarnarayan Bhat’s home in Punacha village, about 17 kms from Vittal and 50 kms from Mangalore.

              Stressing the need to explore the possibility of consuming lesser known fruits (especially wild) and vegetables in the day-to-day menu at home, he said the lesser known, little known or unknown food would be popular in a few years once people start using them.
              “There is a huge demand for apples, even though it is priced at Rs 150 per kg, just because people go for it,” he said and added that if people prefer jackfruit, mangoes and guava or any other locally grown fruits, then the demand for apple would reduce and the demand for locally available fruits would automatically go up.

                Similarly, if anytime available vegetables like banana shoot, banana stem, spinach, brahmi leaves, kokum rasam is used in day-to-day menu at home, the consumers can not only manage the needs with low budget (at a time when vegetable prices are skyroketing), but can also get the required quantity of nutrition.

                 To a query, he said the insects destroy food, because the human beings have destroyed the food of insects!

‘One man market’
              One of the speakers, Lancy Crasta, a farmer from Taccode near Moodbidri opined that it is very difficult to practice organic farming, if he/she does not rear a cow at home.

                Stating that everybody at his home including his 72-year-old father, mother, wife and children work in their farm, Crasta said that they spend a good two hours in their farm and they never find need for other labourers.

                Quite interestingly, Crasta sells vegetables to about 60 houses door-to-door in Taccode and finds it difficult to meet the demand of the people. The produce grown by him including ladies finger, gherkin, ivy gourd, bottle gourd, cowpea, spinach and amaranthus among other vegetables have a very high demand, he said.

                Progressive farmer Padaru Ramakrishna Shashtry who moderated a session on “Pesticide-free vegetables,” said that one need to market vegetables intelligently. “If you sell vegetables / fruits during festival season, you will get good price. On the other hand, the price will be drop during non-festival seasons,” he said.

                   C R Shivkumar, a civil engineer by profession said that he along with his partner A R Kishore, a lawyer by profession, have been cultivating a number of varieties of fruits including mango, papaya, banana, chikoo and vegetables like beans, brinjals, tomatoes, tapioca in his 18-acre land in Periyapatna and 6.5 acre land in Madikeri. He carries about 200 kg of papaya and 200 kg of vegetables from Periyapatna to Madikeri in his jeep to sell on every Saturdays. “Sometimes, I end up selling the entire produce even before I reach Madikeri,” he said.

                   Shivkumar, who is interested in identification and conservation of wild fruits and wild vegetables, said that he is trying his hand in cultivating aerobic rice in dry land by maintaining wetness.

                   The day-long sessions also comprised a session on “Wild vegetables” by Shivakumar and Horticulture Department Assistant Director Sanjeev Naik. In another session, farmers Shirankallu Narayana Bhat, Varmudi Shivaprasad, Suresh Gowda Punacha, Girish Baincrod and Koosappa Poojary shared their experiences on growing vegetables round the year.

                   While Punacha GP President Pavithra presided over the inauguration, rainwater harvesting expert Shree Padre presided over the valedictory. Dr Varanasi Krishnamurthy of Varanasi Research Foundation delivered the valedictory address.

                   A newsletter of Halasu Snehi Koota compiled by Na Karantha Peraje was released on the occasion.

                  Earlier in the day, Muliya Venkatakrishna Sharma in his welcome address explained the aim and objective of the unique programme and the efforts of Shankarnarayan Bhat, in whose house the programme was held.

                  Many prominent farmers in the region including All India Areca Growers’ Association President Manchi Srinivasa Achar, D K Chowta, Campco former directors Rangamurthy and Ashok Kumar among others were present.
 
(Deccan Herald/7-10-2012/page 2/mangalore)

ತರಕಾರಿ ಹಬ್ಬ - ಮಧ್ನಾಹ್ನ ಭೋಜನ ಐಟಂಗಳು

'ಆನೆಮುಂಗು'ವಿನ ಉಪ್ಪಿನಕಾಯಿ; ಹಾಗಲಕಾಯಿ, ಬೆಂಡೆಕಾಯಿ, ದಾರಳೆ (ದಾರಪೀರೆ) ಸೇರಿದ ಪಲ್ಯ; ಹಾಗಲ, ಅಲಸಂಡೆ, ದಾರಳೆ, ಅಂಬಟೆ, ಸೌತೆ, ಬದನೆ, ಹಸಿಮೆಣಸು, ಕೇನೆ, ಪಡುವಲ, ಗುಜ್ಜೆ ಇವೆಲ್ಲವೂ ಒಟ್ಟಾದ 'ಅವಿಲು'; ಪಪ್ಪಾಯಿ, ಚಕ್ಕೋತ, ಎಳೆ ಜೋಳ, ಮೊಳಕೆ ಬರಿಸಿದ ಹೆಸರಿನ 'ಹಸಿ ಸಲಾದ್(ಡ್)-1', ಕೆಸುವಿನ ದಂಟು, ಕೆಸುವಿನ ಎಲೆ, ಶುಂಠಿ, ಮಜ್ಜಿಗೆ, ಕೊತ್ತಂಬರಿ ಸೊಪ್ಪು - 'ಸಲಾಡ್-2'; ಮುಳ್ಳುಸೌತೆ, ಬಾಳೆದಿಂಡು, ಶುಂಠಿ ಸೇರಿಸಿದ 'ಸಲಾಡ್-3'.

ಮಹಾಫಲ (ಮಾಫಲ) ಹುಳಿಯ ಎಲೆಯ 'ಸೂಪ್'; ಕೆಸುವಿನ ದಂಟು, ಅಂಬಟೆ ಸೇರಿಸಿದ 'ಬೋಳುಹುಳಿ'; ಅಲಸಂಡೆ, ಪಡುವಲ, ಕೇನೆ, ಎಳೆಸೌತೆ, ಬೀನ್ಸ್..ಗಳ ಕಾಂಬಿನೇಶನಿನ 'ಪಲಾವ್'; ಸೊರೆ, ಮುಳ್ಳುಸೌತೆ, ಚೀನಿಕಾಯಿ ಹಾಕಿದ 'ಪಾಯಸ'; ನೀಗರ್ುಜ್ಜೆಯ ಪದಾರ್ಥ, ಸಿಹಿಗೆಣಸಿನ 'ಹಲ್ವ'.. ಬೆಳಿಗ್ಗೆ ಕೆಸುವಿನ ಎಲೆಯ ಪತ್ರೊಡೆ, ಸೌತೆಯ ಜ್ಯೂಸ್, ಸೊರೆಕಾಯಿಯ ಪಕೋಡ, ಸಂಜೆ ಹಲಸಿನ ಎಳೆ ಗುಜ್ಜೆಯ 'ಪೋಡಿ', ಮಧ್ಯೆ ಮಧ್ಯೆ ಮುಳ್ಳುಸೌತೆಗಳ ತುಂಡುಗಳ ಸೇವನೆ..

ಮನೆಯಂಗಳದಲ್ಲಿ ತರಕಾರಿ ಹಬ್ಬ


            ಪುಣಚ (ಬಂಟ್ವಾಳ ತಾಲೂಕು) ಮಲ್ಯದ ಶಂಕರನಾರಾಯಣ ಭಟ್ಟರ ಮನೆಯಂಗಳ. ಹಲಸು ಸ್ನೇಹಿ ಕೂಟದ ಸಾರಥ್ಯದಲ್ಲಿ 'ತರಕಾರಿ ಹಬ್ಬ'. ಅಂಗಳದಲ್ಲಿ ಹಸುರು ವೇದಿಕೆ. ಕೂವೆ ಗಿಡಗಳು, ಹೂವಿನ ಗಿಡಗಳು, ತರಕಾರಿಗಳಲ್ಲಿ ಅಲಂಕೃತ. ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪವಿತ್ರಾ ಅವರಿಂದ ದೀಪಜ್ವಲನದ ಮೂಲಕ ಹಬ್ಬಕ್ಕೆ ಶುಭಚಾಲನೆ. ಮುಳ್ಳುಸೌತೆಯನ್ನು ತುಂಡರಿಸುವ ಮೂಲಕ ಮತ್ತು ಗಿಡದಲ್ಲಿದ್ದ ಬೆಂಡೆಕಾಯಿಯನ್ನು ಕೊಯ್ಯುವ ಮೂಲಕ ಹಬ್ಬಕ್ಕೆ ಅಧಿಕೃತ ಚಾಲನೆ. ಇದೇ ಸಮಯಕ್ಕೆ ಸಭಾಸದರಿಗೆ ಮುಳ್ಳುಸೌತೆ ತುಂಡುಗಳ ವಿತರಣೆ. ಮಲ್ಯ ಮನೆಯ ತರಕಾರಿ ಬೀಜಗಳ ಪ್ಯಾಕೆಟ್ ಉಡುಗೊರೆ.

             ಜಿಲ್ಲೆಯ ಎಲ್ಲಾ ದೇವಸ್ಥಾನಗಳು, ಹಾಪ್ಕಾಮ್ಸ್ ಮೂಲಕ ತರಕಾರಿ ಖರೀದಿ ಮಾಡಿದಾಗ ತರಕಾರಿಗೆ ಉತ್ತಮ ಮಾರುಕಟ್ಟೆ ಸೃಷ್ಟಿಯಗುತ್ತದೆ. ತರಕಾರಿ ಬೆಳೆಯಲು ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಈ ನೆಲೆಯಲ್ಲಿ ಕಾರ್ಯಯೋಜನೆಗೆ ರೂಪಿಸಬೇಕು' ಎಂದವರು ದ.ಕ. ಮತ್ತು ಉಡುಪಿ ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪರು. ಹಬ್ಬದಲ್ಲಿ ಹಾಪ್ ಕಾಮ್ಸಿನಿಂದಲೂ ಬೀಜದ ಇನಾಮು ನೀಡಿಕೆ.

               ಹಲಸು ಸ್ನೇಹಿ ಕೂಟದ ಮುಖವಾಣಿಯಾದ ವಾರ್ತಾಪತ್ರವನ್ನು ಮಂಗಳೂರಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಬಿಡುಗಡೆಗೊಳಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ವಾರ್ತಾಪತ್ರವನ್ನು ನಿರ್ವಹಿಸಿದ್ದರು. ಸಮಾರಂಭದಲ್ಲಿ ಮಾಣಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ ಕೋಟ್ಯಾನ್, ಪುಣಚ ತಾಲೂಕು ಪಂಚಾಯತ್ ಸದಸ್ಯ ಎಂ.ಹರಿಕೃಷ್ಣ ಶೆಟಿ, ಬಂಟ್ವಾಳ ತಾಲೂಕು ತೋಟಗಾರಿಕಾ ಸಹಾಯಕ ನಿರ್ದೇಶಕ ಸಂಜೀವ ನಾಯಕ್ ಉಪಸ್ಥಿತಿ.

               ಉದ್ಘಾಟನಾ ಸಮಾರಂಭವನ್ನು ಪ್ರಾಧಾಪಕ ಅಜಕ್ಕಳ ಗಿರೀಶ್ ಭಟ್ ನಿರ್ವಹಿಸಿದ್ದರು. ನಯನಾ ಅಶೋಕ್ ಭಟ್ ಪ್ರಾರ್ಥನೆ. ರಂಜನ್ ಭಟ್ ಸ್ವಾಗತ. ಹಲಸು ಸ್ನೇಹಿ ಕೂಟದ ವೆಂಕಟಕೃಷ್ಣ ಶರ್ಮ ಪ್ರಸ್ತಾವನೆ. ಸುಮಾ ಶಂಕರ ಭಟ್ ವಂದನಾರ್ಪಣೆ. 

ಸಮಾರೋಪ
               "ನಿರ್ವಿಷ ತರಕಾರಿಯ ಕುರಿತು ಬಹುಶಃ ಪೂರ್ತಿ ಕಲಾಪ ನಡೆದುದು ಇದೇ ಮೊದಲು. ತರಕಾರಿಯ ಕೃಷಿ ಜಾಣ್ಮೆಗಳು, ಕಾಲಕ್ಕೆ ಸರಿಯಾದ ಬೀಜೋಪಚಾರ, ಆರೈಕೆಯಲ್ಲಿ ತಮ್ಮದೇ ಉಪಾಯಗಳು, ಕೀಟನಿಯಂತ್ರಣದಲ್ಲಿ ಹೊಸ ಪ್ರಯೋಗಳು ಕೃಷಿಕರ ಅನುಭವದಲ್ಲಿ ದಾಖಲಾಗಿದೆ. ಆದರೆ ಮುಂದಿನ ಪೀಳಿಗೆಗೆ ದಾಟಿಸುವ ದೃಷ್ಟಿಯಿಂದ ದಾಖಲೀಕರಣ ಅಗತ್ಯ" ಎಂದು ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆ ಹೇಳಿದರು. 

               ಅವರು ಶನಿವಾರ ಬಂಟ್ವಾಳ ತಾಲೂಕು ಪುಣಚ ಮಲ್ಯ ಶಂಕರನಾರಾಯಣ ಭಟ್ಟರ ಮನೆಯಂಗಳದಲ್ಲಿ, 'ಹಲಸು ಸ್ನೇಹಿ ಕೂಟ' ಆಯೋಜಿಸಿದ 'ವರ್ಷವಿಡೀ ತರಕಾರಿ' ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪ್ರತೀಯೊಂದು ಪಂಚಾಯತ್ನಲ್ಲೂ ತರಕಾರಿ ಕೃಷಿಯ ಅನುಭವವನ್ನು ಹಂಚಿಕೊಳ್ಳುವ ಸಂವಾದಗಳು ನಡೆಯಬೇಕು. ಕೃಷಿಕರನ್ನು ಕೃಷಿಯಲ್ಲಿ ಉಳಿಯುವಂತೆ ಮಾಡುವ, ಆಹಾರ ಸುರಕ್ಷೆಗೆ ಒತ್ತು ನೀಡಲು ದಾರಿ ತೋರುವ ಹೊಸ ಕಲ್ಪನೆಯ ಸಮಾರಂಭ ಕಾಲದ ಆವಶ್ಯಕತೆ' ಎಂದು ಹೇಳಿದರು.

               ಸಮಾರೋಪದ ಅಧ್ಯಕ್ಷತೆಯನ್ನು ವಾರಣಾಶಿ ಸಂಶೋಧನಾ ಪ್ರತಿಷ್ಠಾನದ ಮುಖ್ಯಸ್ಥ ಡಾ. ವಾರಣಾಶಿ ಕೃಷ್ಣಮೂರ್ತಿ ವಹಿಸಿ, ಈಚೆಗೆ ಐಸ್ಕ್ರೀಮ್ ಘಟಕವೊಂದಕ್ಕೆ ಇಪ್ಪತ್ತೇಳು ಟನ್ ಹಲಸು ಮಾರುಕಟ್ಟೆ ಮಾಡಿದ ಹಿನ್ನೆಲೆಯ ಕೆಲಸಗಳ ಪೂರ್ತಿ ಚಿತ್ರಣವನ್ನು ಪ್ರಸ್ತುತಪಡಿಸುತ್ತಾ, 'ಇಲ್ಲಿ ಪ್ರಸ್ತುತವಾಗಿರುವ ಮಾಹಿತಿಗಳಲ್ಲದೆ ಇನ್ನಿತರ ಅನುಭವಗಳೂ ಸೇರಿಕೊಂಡು, ತರಕಾರಿ ಕೃಷಿಯ ಕೃಷಿಕರ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಯೋಜನೆಯಿದೆ' ಎಂದರು.

               ಸಮಾರೋಪದ ಕಲಾಪದಲ್ಲಿ 'ತರಕಾರಿ ಹಬ್ಬ'ವನ್ನು ಮನೆಯಂಗಳಲ್ಲಿ ಆಯೋಜಿಸಿದ ಮಲ್ಯ ಶಂಕರನಾರಾಯಣ ಭಟ್ಟರ ಕುಟುಂಬವನ್ನು ಗೌರವಿಸಲಾಯಿತು. ಹಲಸು ಸ್ನೇಹಿ ಕೂಟದ ಉಬರು ರಾಜಗೋಪಾಲ ಭಟ್, ಮುಳಿಯ ವೆಂಕಟಕೃಷ್ಣ ಶರ್ಮ, ಕೃಷಿಕ ವಿ.ಮ.ಭಟ್ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. 

                   ಪತ್ರಕರ್ತ ನಾ. ಕಾರಂತ ಪೆರಾಜೆ ಸಂವಾದವನ್ನು ನಿರೂಪಿಸಿದ್ದರು. ಬೈಂಕ್ರೋಡು ವೆಂಕಟಕೃಷ್ಣ, ಅಶೋಕ ಅಜಕ್ಕಳ ಸ್ವಾಗತಿಸಿ, ವಂದಿಸಿದರು. ಯು.ಎಸ್.ಚಂದ್ರಶೇಖರ ಭಟ್ ನಿರ್ವಹಿಸಿದರು.

ತರಕಾರಿ ಸಂವಾದ
               'ನಿರ್ವಿಷ ತರಕಾರಿ' - ಈ ವಿಚಾರ ಸುತ್ತ ಹಮ್ಮಿಕೊಂಡ ಮಾತುಕತೆಯ ಸಾರಥ್ಯ ವಹಿಸಿದವರು ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ. ವರ್ಮುಡಿ ಶಿವಪ್ರಸಾದ್ ಪೆರ್ಲ, ಡಾ.ಕೆ.ಎಸ್.ಕಾಮತ್ ಕರಿಂಗಾಣ, ಎ.ಪಿ.ಸದಾಶಿವ ಮರಿಕೆ, ಡಾ.ರಘುರಾಮ ಹಾಸನಡ್ಕ, ಲ್ಯಾನ್ಸಿ ಕ್ರಾಸ್ತಾ ತಾಕೊಡೆ ಮತ್ತು ಮೈಸೂರಿನ ಎ.ಪಿ.ಚಂದ್ರಶೇಖರ - ಇವರಿಂದ ವಿಷರಹಿತವಾಗಿ ತರಕಾರಿ ಬೆಳೆಯುವ ಅನುಭವಗಳ ಪ್ರಸ್ತುತಿ. ತರಕಾರಿ ಪ್ರಿಯರ ಆರೋಗ್ಯಕರ ಸಂವಾದ-ಮಾಹಿತಿ ವಿನಿಮಯ.

                  ಮಡಿಕೇರಿಯ ಇಂಜಿನಿಯರ್, ಕೃಷಿಕ ಶಿವಕುಮಾರ್ ಅವರು 'ಗೆಡ್ಡೆ ಮತ್ತು ಕಾಡು ತರಕಾರಿ'ಗಳ ವೈವಿಧ್ಯ ಮತ್ತು ಅಡುಗೆಯಲ್ಲಿ ಅವುಗಳ ಬಳಕೆ ಕುರಿತು ಮಾಹಿತಿ ನೀಡಿದ್ದರು. ಕೃಷಿಕ ಶಿರಂಕಲ್ಲು ನಾರಾಯಣ ಭಟ್ ಗೆಡ್ಡೆಗಳ ಪಾಕವೈವಿಧ್ಯವನ್ನು ನಿರೂಪಿಸಿದರು.

                    ವರುಷಪೂರ್ತಿ ತರಕಾರಿಯನ್ನು ಹೇಗೆ ಪಡೆಯಬಹುದು ಎಂಬ ವಿಚಾರದ ಕುರಿತು ಕೃಷಿಕರಾದ ಸುರೇಶ ಗೌಡ ಪುಣಚ, ಪೆರ್ಲ ವರ್ಮು ಶಿವಪ್ರಸಾದ್, ಬೈಂಕ್ರೋಡು ಗಿರೀಶ ಮತ್ತು ಕೂಸಪ್ಪ ಪೂಜಾರಿ ಮೂಡಂಬೈಲು ತಮ್ಮ ಅನುಭವಗಳನ್ನು ತೆರೆದಿಟ್ಟರು. ಋತುಮಾನಕ್ಕನುಗುಣವಾಗಿ ಯಾವ್ಯಾವ ತರಕಾರಿ ಬೆಳೆಯಬಹುದೆನ್ನುವ ವಿಚಾರಗಳು ಸಂವಾದದಲ್ಲಿ ಪ್ರಸ್ತುತವಾದುವು. ಅಂಗಳದ ಹೀರೆಕಾಯಿ ಚಪ್ಪರದ ನೆರಳಿನಡಿಯಲ್ಲಿ ತರಕಾರಿ ಪ್ರದರ್ಶನ. ಮುನ್ನೂರಕ್ಕೂ ಅಧಿಕ ಮಂದಿ ಹಬ್ಬಕ್ಕೆ ಆಗಮಿಸಿದ್ದರು.

Saturday, October 6, 2012

'ಸಮೃದ್ಧಿ'ಗೆ ವಿಂಶತಿಯ ಹೊಳಪು

              ಮೂಡುಬಿದಿರೆಯ ಡಾ.ಸೋನ್ಸರ ತೋಟದ ಹಲಸಿನ ಮರವೊಂದರಲ್ಲಿ ಆಗಸ್ಟ್ ಅಂತ್ಯಕ್ಕೆ ಬುಡದಿಂದ ತುದಿಯವರೆಗೆ ಗೊಂಚಲು ಕಾಯಿಗಳು. ಹಣ್ಣಿನ ಸೊಳೆಗಳು ಸಿಹಿ, ಸ್ವಾದ. 'ಸಮೃದ್ಧಿಗೆ ಇಪ್ಪತ್ತರ ಪ್ರಾಯವಲ್ವಾ. ಇದಕ್ಕೂ ವಿಂಶತಿಯ ಸಡಗರ' ಎಂದರು. 'ಸಮೃದ್ಧಿ'ಯ ಉದ್ಘಾಟನೆಯನ್ನು ಮಾಡಿದ್ದ ಸೋನ್ಸರಿಗಂದು ಹಲಸಿನ ಗಿಡವೊಂದನ್ನು ನೆನಪಿಗಾಗಿ ನೀಡಲಾಗಿತ್ತು. ಅದನ್ನವರು ಜೋಪಾನವಾಗಿ ಹಿತ್ತಿಲಲ್ಲಿ ಸಲಹಿದ್ದರು. ಈಗದು ಫಲ ನೀಡುತ್ತಿದೆ.
               ಗಿಡಗೆಳೆತನ ಹವ್ಯಾಸವಿರುವ ಸಮಾನಾಸಕ್ತರ ಸಂಘಟನೆ - 'ಸಮೃದ್ಧಿ'. ಇದರ ಕಾರ್ಯಕ್ಷೇತ್ರ ಪುತ್ತೂರಾದರೂ ಹತ್ತೂರ ವ್ಯಾಪ್ತಿ. ಗಿಡ, ಬೀಜಗಳನ್ನು ಪರಸ್ಪರ ಹಂಚಿಕೊಳ್ಳುವುದು, ಅವುಗಳ ಸಂರಕ್ಷಣೆ ಅನುಭವಗಳ ವಿನಿಮಯ, ಸಮೃದ್ಧಿಯ ಹೂರಣ. ಫಲವಾಗಿ ಬಹುತೇಕ ತೋಟಗಳಲ್ಲಿ ಹೊಸ ನೆಂಟರು ನೆಲೆಯೂರಿದ್ದಾರೆ.
                   ಬೆಳ್ಳಿ ಬೆಳಕಿನ ಸಡಗರದಲ್ಲಿರುವ 'ಅಡಿಕೆ ಪತ್ರಿಕೆ'ಯ ಆರಂಭದ ಕಾಲ. ಹಣ್ಣುಗಳ, ತರಕಾರಿಗಳ ಮಾಹಿತಿಗಳು ಪ್ರಕಟ. 'ಅದು ನಮ್ಮಲ್ಲೂ ಇರಬೇಕು' ಎನ್ನುವ ಆಸಕ್ತ ಮಂದಿ. ಕೃಷಿ ಗುಂಗಿನ ಮಾತುಕತೆ, ಚರ್ಚೆ, ಸಮಾಲೋಚನೆ. ಹೊಸ ಸಂಘಟನೆಯನ್ನು ಹುಟ್ಟು ಹಾಕುವ ಯೋಜನೆ, ಯೋಚನೆ. ಫಲವಾಗಿ 'ಸಮೃದ್ಧಿ'ಯ ಜನ್ಮ. ಔಪಚಾರಿಕ ಕಲಾಪಗಳಿಗೆ ಆರಂಭದಲ್ಲೇ ಕೊಕ್. ಏನಿದ್ದರೂ ಗಿಡ, ಗೆಳೆತನದ ಸುತ್ತ ಕಾರ್ಯಸೂಚಿ.
                    ತಿಂಗಳಿಗೊಂದು ಸಭೆ. ಕಿರು ಮೊತ್ತವನ್ನು ಪಾವತಿಸಿದ ಸದಸ್ಯರು. ಸಭೆಗೆ ಬರುವಾಗ ಗಿಡ, ಬೀಜವನ್ನು ತರಬೇಕೆನ್ನುವುದು ಅಲಿಖಿತ ಶಿಸ್ತು. ಜತೆಗೆ ಮಾಹಿತಿಯೂ ಕೂಡ. 'ತಂತಮ್ಮ ಐಟಂನ್ನು ತೋರಿಸುವಲ್ಲಿ, ಹಂಚುವಲ್ಲಿ ಪೈಪೋಟಿ. ಯಾರು ಯಾವ ಗಿಡ ತಂದರು ಎನ್ನುವುದರಲ್ಲಿ ಆಸಕ್ತಿ, ಕುತೂಹಲ. ಒಂದು ಸಭೆ ಮುಗಿದರೆ ಸಾಕು, ಮುಂದಿನ ಸಭೆಗಾಗಿ ಕಾಯುವಂತಹ ವಾತಾವರಣವಿತ್ತು,' ಎಂದು ನೆನಪಿಸುತ್ತಾರೆ, ಆರಂಭದಿಂದಲೇ ಸಮೃದ್ಧಿಯೊಂದಿಗಿದ್ದ ಎಡಂಬಳೆ ಸತ್ಯನಾರಾಯಣ.
                    ಮಾವು, ಹಲಸಿಗೆ ಕಸಿ ಕಟ್ಟುವ ದಿನಗಳವು. ಒಂದು ಮಾವಿನ ಮರದಲ್ಲಿ ಹತ್ತಾರು ತಳಿಗಳ ಫಲಗಳು. ಒಂದು ಹಲಸಿನ ಮರದಲ್ಲಿ ಮೂರ್ನಾಲ್ಕು ತಳಿಯ ಹಣ್ಣುಗಳು. ಈ ಸುದ್ದಿ ಕೇಳುವಲ್ಲಿ, ಹೇಳುವಲ್ಲಿ ಧಾವಂತ. ಕಸಿ ಕಟ್ಟುವ ತರಬೇತಿಯ ಆಯೋಜನೆ. ಗೇರು ಸಂಶೋಧನಾ ಕೇಂದ್ರದ ವಿಜ್ಞಾನಿಗಳಿಂದ ವೈಜ್ಞಾನಿಕ ಮಾಹಿತಿ. ಬೋಧನೆ. ತಂತಮ್ಮ ತೋಟದ ಮರವೇರಿ 'ಟಾಪ್ವರ್ಕಿಂಗ್' ಕಸಿ ವಿಧಾನದ ಪ್ರಯೋಗಕ್ಕೆ ಮುಂದು. ಕುಂಬಾಡಿ ವೆಂಕಟ್ರಮಣ ಭಟ್, ಮಾಪಲತೋಟ ಸುಬ್ರಾಯ ಭಟ್, ಶ್ಯಾಮಸುಂದರ ಗೇರುಕಟ್ಟೆ.. ಮೊದಲಾದ ಅನುಭವಿಗಳ ಕಸಿ ಸಾಥ್.
                   ಸಮೃದ್ಧಿ ಹುಟ್ಟುವಾಗಲೇ ಜತೆಗಿದ್ದ ಕೀರ್ತಿಶೇಷ ಕಾಂತಿಲ ವೆಂಕಟ್ರಮಣ ಜೋಶಿಯವರ ಜೋಳಿಗೆಯಲ್ಲಂದು ತರಕಾರಿ ಬೀಜಗಳ ಖಜಾನೆ. ಸಭೆಗಳಿಗೆ ಬರುವಾಗಲೆಲ್ಲಾ ಹೊಸ ತರಕಾರಿ ಸುದ್ದಿಗಳು. ಯಥೇಷ್ಟ ತರಕಾರಿ ಬೀಜಗಳು. ಜತೆಗೆ ಬೆಳೆಯುವ ಮಾಹಿತಿ, ಅನುಸರಿಸಬೇಕಾದ ತಂತ್ರಗಳ ನೀಡಿಕೆ. ಮಾಡಬಹುದಾದ ಖಾದ್ಯಗಳ ರಸರುಚಿಗಳು. ಸಮೃದ್ಧಿ ಸದಸ್ಯರ ತೋಟವನ್ನೊಮ್ಮೆ ಸುತ್ತಿ ಬನ್ನಿ. 'ಇದು ಬನಾರಸ್ ನೆಲ್ಲಿ, ಇದು ಹುಣಸೆ, ಇದು ಕಾಂಚಿಕೇಳ ಬಾಳೆ, ಇದು ಪಾಲೂರು - ವನ್ ಹಲಸು' ಎಂಬ ಪರಿಚಯದ ಹಿಂದೆ ಸಮೃದ್ಧಿಯ ಸ್ಮರಣೆಯಿದೆ.
                     ಬನಾರಸ್ ನೆಲ್ಲಿ ಆಗಷ್ಟೇ ಸುದ್ದಿ ಮಾಡಿತ್ತು. ದೊಡ್ಡ ಗಾತ್ರದ ನೆಲ್ಲಿಕಾಯಿ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿತ್ತು. ಮಾತುಕತೆಗೆ ಸಿಕ್ಕಾಗಲೆಲ್ಲಾ ನೆಲ್ಲಿಯ ಗಾತ್ರ, ರುಚಿಯ ಸುತ್ತ ಗಿರಕಿ. ಆಗ ಸಮೃದ್ಧಿಯ ಕಾರ್ಯದರ್ಶಿ ಕೈಂತಜೆ ಶ್ರೀಧರ ಭಟ್. ಅವರು ಪ್ರವಾಸ ಹೋಗಿದ್ದಾಗ ಉತ್ತರಪ್ರದೇಶದ ಫೈಜಾಬಾದಿನಿಂದ ಎರಡು ಬನಾರಸ್ ನೆಲ್ಲಿ ಗಿಡಗಳನ್ನು ತಮಗಾಗಿ ತಂದಿದ್ದರು.
                      ಹಲವರಲ್ಲಿ ಆಸಕ್ತಿ ಚಿಗುರಿತು. ಬೇಡಿಕೆಯ ಪಟ್ಟಿ ಉದ್ದವಾಯಿತು. ಕೈಂತಜೆಯವರು ಪುನಃ ರೈಲೇರಿದರು. ಗಿಡಗಳು ಬಂದುವು. ವಿನಿಮಯವಾದುವು. ಗುಡ್ಡದಲ್ಲಿ ಆರೈಕೆ. ಸಮೃದ್ಧಿಯು ಅಂದು ಪ್ರಯತ್ನ ಮಾಡದೇ ಇರುತ್ತಿದ್ದರೆ ಬನಾರಸ್ ನೆಲ್ಲಿ ಜಿಲ್ಲೆಗೆ ಬರಲು ತಡವಾಗುತ್ತಿತ್ತು. ಅಂದು ಬನಾರಸ್ ನೆಲ್ಲಿಯಾದರೆ, ಮೊನ್ನೆಮೊನ್ನೆಯಷ್ಟೇ 'ಸಿಹಿ ನೇರಳೆ' ಗಿಡಗಳೂ ಬಂದುವು. ಅಂದು ರೈಲೇರಿದ ಕೈಂತಜೆಯವರು ಈ ಸಲವೂ ಆರೋಗ್ಯವನ್ನು ಮುಷ್ಠಿಯಲ್ಲಿ ಹಿಡಿದು ಗಿಡಗಳನ್ನು ತಂದಿರುವುದು ಶ್ಲಾಘ್ಯ.
                      ಮಂತುಹುಳಿ, ಅಮ್ಚಿಕಾಯಿ, ಹನುಮಫಲ, ಭೀಮಫಲ, ಮುಳ್ಳು ಸೀತಾಫಲ, ಹಾವು ಬದನೆ, ಬಂಟಕೇಪುಳು, ರುದ್ರಾಕ್ಷಿ, ಮೊಟ್ಟೆಮುಳ್ಳು ಸೌತೆ, ಕರಿಯಾಲ ಹರಿವೆ, ಸಿಹಿದಾರೆಹುಳಿ.. ಹೀಗೆ ಸಮೃದ್ಧಿಯ ಕಡತದ ಪಟ್ಟಿ ಉದ್ದುದ್ದ. ಬಾಂಗ್ಲಾ ಬಸಳೆ, ಸೆಲೋಶಿಯಾ ಅರ್ಜೆಂಟಿಯಾ ಎಲೆ ತರಕಾರಿ ಗಿಡ, ಸನ್ಸೆಟ್ ಸೋಲೋ ಪಪ್ಪಾಯಿಗಳು ಕಡಲನ್ನು ಹಾರಿ ಬಂದಿವೆ. 'ಹೀಗೆ ಬಂದವುಗಳಲ್ಲಿ ಶೇ. 50ರಷ್ಟು ಉಳಿದಿರಬಹುದಷ್ಟೇ' ಎನ್ನುತ್ತಾರೆ ಹಿರಿಯ ಸದಸ್ಯ ಡಾ.ಕೆ.ಎಸ್.ಕಾಮತ್.
                     ಸಸ್ಯ ವಿನಿಮಯದ ಜತೆಜತೆಗೆ ಪ್ರವಾಸ. ರೋಗ ಹತೋಟಿ, ಶ್ರಮ ಉಳಿಸಲು ಮಾಡಿದ ಜಾಣ್ಮೆಗಳು, ಸೋಲು ಗೆಲುವುಗಳ ಕಥನ, ನೋಡಿದ- ಕೇಳಿದ ಕೃಷಿ ವಿಚಾರಗಳ ವಿನಿಮಯ. ಹೊಸ ಕೃಷಿಕರ ಪರಿಚಯ. ಯಂತ್ರೋಪಕರಣಗಳ ಮಾಹಿತಿಗಳು. ಎರಡು ವರುಷದ ಹಿಂದೆ ಹವಾಯಿಯ ಹಣ್ಣು ಕೃಷಿಕ, ಪತ್ರಕರ್ತ ಕೆನ್ ಲವ್ ಕರಾವಳಿಗೆ ಬಂದಿದ್ದಾಗ ಅವರ ಅನುಭವ ಪ್ರಸ್ತುತಿಗೆ ವಿಶೇಷ ಸಂವಾದ ಕಾರ್ಯಕ್ರಮ. ಕನ್ನಾಡನ್ನು ಹವಾಯಿಗೆ ಬೆಸೆದ ಅಪರೂಪದ ಕ್ಷಣ.
                       ನಶಿಸಿಹೋಗುತ್ತಿರುವ ಸ್ಥಳೀಯ ಬೀಜಗಳನ್ನು, ಸಸ್ಯಸಂಪನ್ಮೂಲಗಳನ್ನು ಹುಡುಕಿ, ಸಂಗ್ರಹಿಸಿ ಬೆಳೆಸಿ, ಹಂಚಿ ಅಭಿವೃದ್ಧಿಪಡಿಸಲೋಸುಗ ಹುಟ್ಟಿಕೊಂಡ ಸಮೃದ್ಧಿಯ ಸಹಸಂಸ್ಥೆ 'ಸುಭಿಕ್ಷಾ ಬೀಜ ನಿಧಿ'. ಇದಕ್ಕೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ, ಅಡಿಕೆ ಪತ್ರಿಕೆಯ ಬೆಂಬಲ. ನೆಕ್ಕಿಲ ರಾಮಚಂದ್ರರಿಂದ ನಿರ್ವಹಣೆ.
                       ಹಣ ತರುವ ಬೆಳೆಗಳ ಬಗ್ಗೆ ಸಮೃದ್ಧಿ ಗಮನ ಹರಿಸುವುದಿಲ್ಲ. ಜಿಲ್ಲೆಯ ಹೊರಗಿನ ಗಿಡ, ಬೀಜಗಳನ್ನು ತಂದು ಬೆಳೆಸುವ ಆಸಕ್ತಿ ಹಲವರಲ್ಲಿ ಮೂಡಿದೆ. ಐವತ್ತಕ್ಕೂ ಮಿಕ್ಕಿದ ಸದಸ್ಯರು ಸಮೃದ್ಧಿಯ ಆಸ್ತಿ. ವೆನಿಲ್ಲಾಗೆ ಏರುದರವಿದ್ದಾಗ ನೂರು ಸದಸ್ಯರಾದುದೂ ಇದೆ! ಈಚೆಗೆ ಬೇರೆ ಜಿಲ್ಲೆಗಳ ಕೃಷಿಕರಲ್ಲಿಗೆ ಸಂವಹನ ಬೆಳೆದುಕೊಂಡಿದೆ. ಪ್ರವಾಸ ಹೋದಲ್ಲಿ ಅತಿಥೇಯರಿಗೆ ಹೊರೆಯಾಗದ ವ್ಯವಹಾರ. ಸಭೆಗಳಲ್ಲಿ ಅತಿಥಿಗಳಿಗೆ ಬೀಜ-ಸಸ್ಯಗಳ ಉಡುಗೊರೆ. ಕೆಲವೊಮ್ಮೆ ಸಮೃದ್ಧಿಯ ಗೌರವ ಸದಸ್ಯತನ ನೀಡಿಕೆ. ವರುಷಕ್ಕೊಮ್ಮೆ ದಶಂಬರ-ಜನವರಿಯಲ್ಲಿ ಮಹಾಸಭೆ. ಪ್ರತೀವರುಷವೂ ಪದಾಧಿಕಾರಿಗಳು ಬದಲಾಗುತ್ತಾರೆ. ಹೊಸಬರಿಗೆ ಅವಕಾಶ.
                        'ಬಹುಕಾಲದಿಂದ ಹುಡುಕುತ್ತಿದ್ದ ನೀರ್ಗುಜ್ಜೆ, ಕೆಂಪು ಅಲಸಂಡೆ ಸಮೃದ್ಧಿಯಿಂದ ಸಿಕ್ಕಿತು. ಹವಾಯಿಯ ಕೆನ್ ಲವ್ ನೀಡಿದ ಹಣ್ಣುಗಳ ಸೈನ್ ಬೋರ್ಡ್ ಜೋಪಾನವಾಗಿಟ್ಟಿದ್ದೇನೆ' ಎಂದು ಕೃಷಿಕ ಎಡ್ವರ್ಡ್ ರೆಬೆಲ್ಲೋ ತಾಕೊಡೆ ನೆನಪಿಸಿಕೊಂಡರೆ; 'ಕೃಷಿ ಕ್ಷೇತ್ರದ ಜ್ಞಾನ ಸಿಕ್ಕಿದೆ. ಕಾನುಕಲ್ಲಟೆ, ಗಾರ್ಸೀನಿಯಾ ಕೋವಾ, ಎಣ್ಣೆತಾಳೆಯಂತಹ ಅಪರೂಪದ ಗಿಡಗಳು ನನ್ನ ಸಂಗ್ರಹ ಸೇರಿವೆ' ಎಂದು ಖುಷಿ ಪಡುತ್ತಾರೆ ಅರುಣ್ ಕುಮಾರ್ ರೈ ಆನಾಜೆ. ಒಬ್ಬೊಬ್ಬ ಸದಸ್ಯನಲ್ಲೂ ಇಂತಹ ಅನುಭವದ ಬುತ್ತಿಯ ಹಿಂದೆ ಸಮೃದ್ಧಿಯ ಬೀಸುಹೆಜ್ಜೆಯಿದೆ.
                      ಸಮೃದ್ಧಿ ಹುಟ್ಟಿದಾಕ್ಷಣ ಸಾರಥ್ಯ ನೀಡಿದವರು ಸೇಡಿಯಾಪು ಜನಾರ್ದನ ಭಟ್ ಮತ್ತು ಪೆಲಪ್ಪಾರು ವೆಂಕಟ್ರಮಣ ಭಟ್. ಈಗಿನ ಅಧ್ಯಕ್ಷ ಸಿ.ವಿ.ಶಂಕರ್, ಕಾರ್ಯದರ್ಶಿ ಪಿ.ಆರ್.ಯಶೋಚಂದ್ರ. ಇಪ್ಪತ್ತು ವರುಷಗಳ ಕಾಲ ಸದ್ದಿಲ್ಲದೆ ಕೃಷಿ ಮತ್ತು ಕೃಷಿಕನ ಮಧ್ಯೆ ಕೊಂಡಿಯಾಗಿದ್ದ ಸಮೃದ್ಧಿಗೆ ಈಗ ವಿಂಶತಿಯ ಹೊಳಪು.
                        ಅಕ್ಟೋಬರ್ 12ರಂದು 'ವಿಂಶತಿ ಸಂತಸ'ವನ್ನು ಹಂಚಿಕೊಳ್ಳುವ ದಿವಸ. ಪುತ್ತೂರು ಸನಿಹದ ಸವಣೂರು ಆಶ್ವಿನಿ ಫಾರ್ಮಿನಲ್ಲಿ ಅರ್ಧ ದಿವಸದ ಖುಷಿಯ ಹೊತ್ತು. ಸಮೃದ್ಧಿಯನ್ನು ಉದ್ಘಾಟಿಸಿದ, ಹತ್ತರ ಸಂಭ್ರಮದಲ್ಲೂ ಬೆನ್ನುತಟ್ಟಿದ, ಇಪ್ಪತ್ತರ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಾರೆ, ಡಾ.ಎಲ್.ಸಿ.ಸೋನ್ಸ್.
                        ಅಂದು ಸ್ಮರಣಿಕೆಯಾಗಿ ನೀಡಿದ ಹಲಸಿನ ಮರವು ಫಲ ನೀಡುವಂತೆ, ಎಷ್ಟೋ ಕೃಷಿಕರ ತೋಟದಲ್ಲಿ ಸಮೃದ್ಧಿಯ ಬೀಜವು ಮೊಳಕೆಯೊಡೆದಿದೆ. ಅದರಲ್ಲಿ ಕೆಲವು ಫಲ ನೀಡುತ್ತಿವೆ. ಮತ್ತೆ ಕೆಲವು ಮಾಯವಾಗಿದೆ. ಅದನ್ನು ಮರಳಿ ತೋಟಕ್ಕೆ ಸೇರಿಸುವುದು ವಿಂಶತಿಯ ಕಾಣ್ಕೆಯಾದರೆ ಒಳ್ಳೆಯದಲ್ವಾ.
                          ಪ್ರತೀ ಊರಿನಲ್ಲೂ 'ಸಮೃದ್ಧಿ'ಯಂತಹ ಸಂಘಟನೆ ಬೇಕು. ಸಮಾನಾಸಕ್ತರ ದಂಡು ರೂಪುಗೊಳ್ಳಬೇಕು. ಆಗ ಅಲ್ಲಿನ ಸಂಪನ್ಮೂಲಗಳನ್ನು ಉಳಿಸಿ ಬೆಳೆಸಬಹುದು. ಇದಕ್ಕೆ ಸರಕಾರವನ್ನು ನೆಚ್ಚಿಕೊಳ್ಳಬೇಕಾಗಿಲ್ಲ. ನೆರೆಮನೆಯತ್ತ ನೋಡಬೇಕಾಗಿಲ್ಲ. ಬೇಕಾಗಿರುವುದು ಆಸಕ್ತಿ ಮತ್ತು ಒಳ್ಳೆಯ ಮನಸ್ಸು.

(ph: 82774 06558, 90081 22321)

Monday, October 1, 2012

ಗಣೇಶನೊಂದಿಗೆ ಇಲಿಗೂ ಮಾನ! 

                   ಗಣೇಶ ಚತುರ್ಥಿ ಕಳೆದು ಮೂರ್ನಾಲ್ಕು ದಿವಸದಲ್ಲಿ ಹುಬ್ಬಳ್ಳಿ-ಧಾರವಾಡದ ಅವಳಿ ನಗರದಲ್ಲಿದ್ದೆ. ಗಣೇಶ ಹಬ್ಬದ ಗೌಜಿ. ಮನೆಮನೆಗಳಲ್ಲಿ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ನೆಂಟರಿಷ್ಟರನ್ನು ಬರಹೇಳುವುದು, ಸಿಹಿ ಹಂಚುವುದು ಸಂಭ್ರಮ.

                    'ಬನ್ರಿ, ಚಲೋ ಅಯ್ತು. ಗಣೇಶನ್ನ ಕಳ್ಸೋ ದಿವ್ಸ. ಬಾಯಿ ಸಿಹಿ ಮಾಡ್ರಿ' ಎನ್ನುತ್ತಾ ಹುಬ್ಬಳ್ಳಿಯ ಸನಿಹದ ಹಳ್ಳಿಯ ಚನ್ನಮಲ್ಲಯ್ಯ ಪಾಟೀಲರು ಸ್ವಾಗತಿಸಿದರು. ತಟ್ಟೆ ತುಂಬಾ ಬಣ್ಣ ಬಣ್ಣದ ಬೇಕರಿ ಸಿಹಿ ಐಟಂಗಳು. ಮನೆಯಲ್ಲೇ ಮಾಡಿದ ಗೋಧಿ ಹುಗ್ಗಿ. 'ತಿನ್ರಿ..ಎಲ್ಲಾ ತಿನ್ಬೇಕ್ರಿ' ಎಂಬ ತಾಕೀತು. ಬೇಕರಿ ತಿಂಡಿಯ ನೇಪಥ್ಯದ ಕಹಿಸತ್ಯಗಳ ಪರಿಚಯವಿದ್ದುರಿಂದ ಸಿಹಿಯಂದು ಸಿಹಿಯಾಗಲಿಲ್ಲ!

                  ಗಣೇಶನ ಅಲಂಕೃತ ಕಿರು ಮೂರ್ತಿ. ಬಣ್ಣ ಬಣ್ಣದ ಕೃತಕ ಹೂಗಳ ಅಲಂಕಾರ. ಜತೆಗೆ 'ಚಿಗುಬುಗ್' ಲೈಟ್! ಗಣೇಶನ ಎದುರು ಐದಾರು ಪ್ಲೇಟ್ಗಳಲ್ಲಿ ಬೇಕರಿ ತಿಂಡಿಗಳು. ಬಾಳೆಹಣ್ಣು-ಲಡ್ಡುಗಳು. 'ಇಪ್ಪತ್ತ ವರ್ಸದಿಂದ ಗಣೇಶನ್ನ ಕೂರಿಸ್ತೀರಿ. ನಮ್ಮ ತಾತ್ನ ಕಾಲದಿಂದ ಐತ್ರಿ' ಎಂದರು. ಇಲ್ಲಿನ ಬಹುತೇಕ ಮನೆಗಳಲ್ಲಿ ಗಣೇಶನ ಪೂಜೆ ಪಾರಂಪರಿಕ. ಕೂಡುಕುಟುಂಬ ವ್ಯವಸ್ಥೆಯಿಂದ ಹೊರಗೆ ಹೋದ ಕುಟುಂಬಗಳೂ ಈ ವ್ಯವಸ್ಥೆಯನ್ನು ಮುಂದುವರಿಸುತ್ತವೆ.

                'ಕೆಲವು ಮನೇಲಿ ಇಲಿ ಪೂಜೆ ಐತ್ರಿ,' ಹೊಸ ಸುದ್ದಿಯನ್ನು ಹೇಳಿ ನಕ್ಕರು, ಜತೆಗಿದ್ದ ಮಲ್ಲಪ್ಪ ಸುಣ್ಣದಪುಡಿ. ಏನಿದು ಇಲಿ ಪೂಜೆ? ಗಣೇಶ ಸಸ್ಯಾಹಾರಿ. ಆತನ ವಾಹನ ಶುದ್ಧ ಮಾಂಸಾಹಾರಿ! ಗಣೇಶ ಚತುರ್ಥಿಯ ಮರುದಿವಸ ಆತನಿಗೆ ಮಾಂಸದ ನೈವೇದ್ಯ. ಗಣೇಶದ ಎದುರು ಮಾಂಸದಡುಗೆಯನ್ನು ಇರಿಸಿ ಗಣೇಶನ ಪೂಜೆ. ಮೂಷಕ ಸಂತೃಪ್ತ. ಬಳಿಕ ಮನೆಮಂದಿಗೆ ನೈವೇದ್ಯದ ಸಂತರ್ಪಣೆ. ಹೀಗಾಗಿ ಗಣೇಶ ಹಬ್ಬಕ್ಕಿಂತಲೂ ಇಲಿ ಹಬ್ಬಕ್ಕೆ ಆದ್ಯತೆ ಮತ್ತು ಆಸಕ್ತಿ. ಮನೆಯಲ್ಲಿ ಮಾಂಸದಡುಗೆ ಇದ್ದಂದು 'ಇಲಿ ಪೂಜೆ ಐತ್ರಿ' ಎನ್ನುವ ಗುಪ್ತ ಸಂದೇಶ ಈ ಆಚರಣೆಯ ಹಿಂದಿನಿಂದ ಚಲಾವಣೆಗೆ ಬಂದಿರಬೇಕು.

                  ಮೂರು, ಐದು, ಏಳು ದಿವಸಗಳ ಆರಾಧನೆಯ ನಂತರ ಗಣೇಶನ ವಿಸರ್ಜನೆ. ಮನೆ ಮಂದಿ ಮಾತ್ರ 'ಗಣೇಶ ಬಪ್ಪ ಮೋರ್ಯ' ಎನ್ನುತ್ತಾ ಮೆರವಣಿಗೆಗೆ ಸಾಥ್ ನೀಡುತ್ತಾರೆ. ಯಜಮಾನನ ಹೆಗಲಿನಲ್ಲಿ ಗಣೇಶನ ಮೂರ್ತಿ. ಜತೆಗೆ ಗಂಟಾನಾದ. ಮಕ್ಕಳು, ಹಿರಿಯರು ಹಿಂದಿನಿಂದ ಘೋಷಣೆ ಕೂಗುತ್ತಿರುತ್ತಾರೆ. ಹದಿನೈದು ನಿಮಿಷದಲ್ಲಿ ವಿಸರ್ಜನೆ ಮುಗಿದುಹೋಗುತ್ತದೆ.

                   ಗಣೇಶನ ಮುಂಭಾಗದಲ್ಲಿ ಪಟಾಕಿಗಳ ಸಿಡಿತ. ನೈವೇದ್ಯ ಇಲ್ಲದಿದ್ದರೂ ನಡೆಯುತ್ತದೆ, ಪಟಾಕಿ ಇಲ್ಲದೆ ಗಣೇಶೋತ್ಸವ ನಡೆಯದು! ಎಷ್ಟೇ ಬಡವರಾದರೂ ಕನಿಷ್ಠ ಐನೂರು ರೂಪಾಯಿಗಳನ್ನು ಪಟಾಕಿಯಲ್ಲಿ ಸುಡುತ್ತಾರೆ! ಪಟಾಕಿ ಇಲ್ಲದ ಹಬ್ಬ ನಿರ್ಜೀವ! ಕೆಲವು ಮನೆಗಳಲ್ಲಿ ಸದಸ್ಯರ ಸಂಖ್ಯೆ ತೀರಾ ವಿರಳವಿರುತ್ತದೆ. ಅಂತಹ ಮನೆಗಳಲ್ಲಿ ಗಣೇಶನನ್ನು ಪೂಜಿಸುತ್ತಾರೆ. ಕೊನೆಗೆ ಮನೆಯ ಸದಸ್ಯರೋರ್ವರೇ ಗಣೇಶನನ್ನು ಹೆಗಲಲ್ಲಿ ಕೂರಿಸಿ 'ಒಬ್ಬರೇ' ಮೆರವಣಿಗೆ ಮಾಡಿ ವಿಸರ್ಜನೆ ಮಾಡುತ್ತಾರೆ.

                     ವಿಸರ್ಜನಾ ಮೆರವಣಿಗೆಯಲ್ಲಿ ಕಟ್ಟುಪಾಡುಗಳಿಲ್ಲ. ಪ್ಯಾಂಟ್, ಅಂಗಿ, ಮುಂಡಾಸು ಧರಿಸಿದ ವ್ಯಕ್ತಿಯ ಹೆಗಲಲ್ಲಿ ಗಣಪ ರಾರಾಜಿಸುತ್ತಾನೆ! ಕೆಲವರ ಪಾದದಲ್ಲಿ ಪಾದುಕೆಗಳೂ ಇದ್ದುವು! ಪಾಪ, ಕಾಲಿನಲ್ಲಿ ಆಣಿ ಇದ್ದರೆ ಏನು ಮಾಡೋದು ಅಲ್ವಾ! ಗಣಪ ಸುಧಾರಿಸಿಕೊಳ್ಳುತ್ತಾನೆ, ಬಿಡಿ.

                      ಉಳ್ಳವರ ಮನೆಯ ಗಣಪನಿಗೆ 'ಹೆಗಲ ಭಾಗ್ಯ'ವಿಲ್ಲ. ಕಾರಿನೊಳಗೆ 'ಎಸಿ' ಸೌಭಾಗ್ಯ. ಕಾರಿಗೆ ಬರೋಬ್ಬರಿ ಅಲಂಕಾರ. ಗಣೇಶ ಮಾತ್ರ ತನ್ನ ಕೊರಳನ್ನು ಆಗಾಗ್ಗೆ ತಟ್ಟಿ, ಮುಟ್ಟಿ ನೋಡುವಂತಹ ಪರಿಸ್ಥಿತಿ. ಎರಡು ದಿವಸದ ಮೊದಲು ಹಾಕಿದ್ದ ಹಾರ ಬಾಡಿತ್ತು. ಜತೆಗೆ ಗಣೇಶನ ಮೋರೆಯೂ!

                     ಅಲಂಕೃತ ಕಾರಿನ ಹಿಂದೆ ಶ್ರೀಮಂತಿಕೆಗೆ ತಕ್ಕಂತೆ ಹತ್ತಿಪ್ಪತ್ತು ಮಂದಿಗಳು. ಒಬ್ಬರ ಕೈಯಲ್ಲಿ ಚಿಕ್ಕ ಘಂಟಾಮಣಿ! ಜತೆಗೆ ಧ್ವನಿವರ್ಧಕ. ಹಾಡಿಗೆ ತಾಳ ಹಾಕಿ ಮೈಮರೆವ ಯುವ ಮಂದಿ. ಲೋಕಾಭಿರಾಮ ಮಾತನಾಡುತ್ತಾ ಹೆಜ್ಜೆಹಾಕುವ ಅಮ್ಮಂದಿರು. ಕಾರಿನ ಮುಂದೆ ಪಟಾಕಿಗಳ ಭೋರ್ಗರೆತ. ಬಣ್ಣ ಬಣ್ಣದ ಬೆಳಕಿನ, ಕಿವಿಗಡಚಿಕ್ಕುವ, ಬಡಿದೆಬ್ಬಿಸುವ ಸದ್ದಿನ ಪಟಾಕಿಗಳು. ಇವೆಲ್ಲಾ ನಡೆಯುವುದು ಯಾವಾಗ ಹೇಳಿ, ರಾತ್ರಿ ಹನ್ನೆರಡರ ಬಳಿಕ!

                      ವಿಸರ್ಜನೆಯ ಒಂದೆರಡು ದಿವಸಗಳಲ್ಲಿ ಇಡೀ ಪರಿಸರವು ಪಟಾಕಿಯ ಹೊಗೆಯಿಂದ ಮಂಜಿನ ಮಳೆಯಂತೆ ಭಾಸವಾಗುತ್ತಿತ್ತು. ರಸ್ತೆಯಿಡೀ ಕಾಗದದ ಚೂರುಗಳು. ವಿಸರ್ಜನೆ ಮಾಡಿದ ಕೆರೆಗಳ ಅವಸ್ಥೆ ಹೇಳಬೇಕಾಗಿಲ್ಲ. 'ನೀರಿನಲ್ಲಿ ಗಣೇಶನ ಮೂರ್ತಿಗಳು ಕರಗಿಲ್ಲ' ಎನ್ನುವ ವರದಿಯೂ ನಿನ್ನೆ ಬಂತು. ಮಳೆಯೇ ಬಾರದಿದ್ದರೆ ಕೆರೆಯಲ್ಲಿ ನೀರೆಲ್ಲಿಂದ ಬರಬೇಕು?

                        ಬಡಿಗೇರ ಎನ್ನುವ ಕಲಾವಿದರೊಬ್ಬರ ಮನೆಗೆ ಭೇಟಿ ನೀಡುವ ಸಂದರ್ಭ ಬಂತು. ಗಣೇಶನನ್ನು ಪ್ರತಿಷ್ಠಾಪಿಸಿದ್ದರು. ಜತೆಯಲ್ಲಿ ಮುಂಭಾಗದಲ್ಲಿ ಇನ್ನೊಂದು ಗಣಪತಿಯ ವಿಗ್ರಹವೂ ಅಲಂಕೃತವಾಗಿತ್ತು. ಅದು ಕಳೆದ ವರುಷ ಪ್ರತಿಷ್ಠಾಪಿಸಲ್ಪಟ್ಟ ಗಣಪ. ಅವನಿಗೆ ಈ ವರುಷ ವಿಸರ್ಜನೆಯ ಯೋಗ. ಈ ವರುಷದ ಗಣಪನಿಗೆ ಮುಂದಿನ ವರುಷ. ಇದೊಂದು ಹೊಸ ಸಂಪ್ರದಾಯ. ಬಹಳ ಚೆನ್ನಾಗಿ ಉತ್ಸವವನ್ನು ಆಚರಿಸುತ್ತಾರೆ.

                      ವರುಷದಿಂದ ವರುಷಕ್ಕೆ ಪಟಾಕಿಗಳ ಅಬ್ಬರದಲ್ಲಿ ಮೇಲಾಟ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವಕ್ಕಾಗಿ ತಾತ್ಕಾಲಿಕ ಟೆಂಟ್ಗಳು ಎದ್ದಿದ್ದುವು. ಹಗಲು ಹೊತ್ತಲ್ಲಿ ಪಾಪ, ಗಣೇಶ ಅನಾಥ! ಕೆಲವೆಡೆ ಗಣೇಶನಿಗೆ 'ಬೋರ್' ಆಗಬಾರದಲ್ವಾ, ಯುವಕರೆಲ್ಲಾ ಸೇರಿ ಆತನ ಮುಂದೆ 'ಇಸ್ಪೀಟ್' ಆಡುತ್ತಿದ್ದರು!

                        'ಇಲ್ಲಾ ಸಾರ್, ಇಲ್ಲಿ ಮಾಮೂಲಿ. ಹದಿನೈದು ವರುಷದಿಂದ ನೋಡುತ್ತಿದ್ದೇನೆ. ರಾತ್ರಿ ಆರ್ಕೆಸ್ಟ್ರಾವೋ, ಡ್ಯಾನ್ಸ್ ಇರುತ್ತೆ. ಹಗಲು ಈ ರೀತಿ ಗಣೇಶನನ್ನು ಕಾಯುತ್ತಿದ್ದಾರೆ' ಕರಾವಳಿ ಮೂಲದ ಪತ್ರಕರ್ತ ವೆಂಕಟೇಶ್ ಹೇಳುತ್ತಾರೆ. ಸರಿ ಇಸ್ಪೀಟ್ ಆಡಲಿ, ಆದರೆ ಗಣೇಶನ ಎದುರು ಒಂದು ದೀಪವಾದ್ರೂ ಇಡಬಾರದೇ? ಚಂದವಾಗಿ ಅಲಂಕಾರವಾದ್ರೂ ಮಾಡಬಾರದೇ?

                       ಇದನ್ನೆಲ್ಲಾ ಪ್ರಶ್ನಿಸುವಂತಿಲ್ಲ. ಯಾಕೆಂದರೆ 'ಅವರವರ ಭಾವಕ್ಕೆ, ಅವರವರ ಭಕುತಿಗೆ..'! ಇಂತಹ ಸಾರ್ವಜನಿಕ ಉತ್ಸವಗಳ ಆಶಯವೇ ಜನರನ್ನು ಒಂದು ಮಾಡುವಂತಾದ್ದು. ಜನರಲ್ಲಿ ಧಾರ್ಮಿಕವಾದ ವಿಚಾರಗಳನ್ನು, ಸನಾತನೀಯವಾದ ವಿಷಯವನ್ನು, ರಾಷ್ಟ್ರೀಯ ಸಿದ್ಧಾಂತಗಳ ಅರಿವು ಮೂಡಿಸುವುದು ಲೋಕಮಾನ್ಯ ತಿಲಕರ ಆಶಯ. ಕೆಲವಡೆ ಆಶಯದ ಹತ್ತಿರಕ್ಕೆ ಉತ್ಸಗಳು ಬರುತ್ತವೆ.

                     ಭಕ್ತಿ, ಶೃದ್ಧೆ, ನಂಬುಗೆಗಳು ಪರಸ್ಪರ ಒಂದೇ ಸರಳರೇಖೆಯಲ್ಲಿ ಬರುವಂತಹುಗಳು. ಇವೆಲ್ಲಾ ಮೇಳೈಸಿದ್ದರೆ ಮಾತ್ರ ಉತ್ಸವ ಅರ್ಥಪೂರ್ಣ. ಸಮಯವನ್ನು ಕೊಲ್ಲಲು, ಗೌಜಿ ಅನುಭವಿಸಲು, ಮಜಾ ಮಾಡಲು ಇಂತಹ ಉತ್ಸವಗಳು ಉಪಾಧಿಯಾದರೆ ಉದ್ದೇಶಕ್ಕೆ ಮಸುಕು. ಸಾವಿರಾರು ರೂಪಾಯಿಗಳ ಪಟಾಕಿ ಸಿಡಿಸದಿದ್ದರೆ ಗಣೇಶ ಮುನಿಯಲಾರ. ಶಾಪ ಕೊಡಲಾರ. ಆರಾಧನೆಯಲ್ಲಿ ಶಿಸ್ತಿನ ಸೋಂಕಿಲ್ಲದಿದ್ದರೆ ದೇವರನ್ನು ಕಾಣುವುದಾದರೂ ಹೇಗೆ? ಇದರರ್ಥ ಎಲ್ಲರಿಗೂ ಕಾಣುತ್ತಾನೆ ಎಂದಲ್ಲ.

                        ನಮ್ಮದು ಪ್ರಜಾಪ್ರಭುತ್ವ ದೇಶ. ಎಲ್ಲರಿಗೂ ಸ್ವಾತಂತ್ರ್ಯ. ಏನೂ ಮಾಡಬಹುದು, ಏನಕ್ಕೇನೂ ಮಾಡಬಹುದು! ಪ್ರಶ್ನಿಸುವಂತಿಲ್ಲ. ಗಣಪತಿಯನ್ನು ಹೆಗಲಿನಲ್ಲಿಟ್ಟು ಮೆರವಣಿಗೆ ಹೋಗುವಾಗ ಪ್ಯಾಂಟ್, ಅಂಗಿ ಇದ್ದರೆ ಏನು? ಎಂದು ಪ್ರಶ್ನಿಸಿದರೆ ಉತ್ತರ ಇಲ್ಲ. ಆದರೆ ಬದುಕಿನ ಸುಭಗತೆಗೆ 'ಸ್ವಯಂ ಶಿಸ್ತು' ಅನಿವಾರ್ಯ. ಇವಿಲ್ಲದಿದ್ದಲ್ಲಿ ಸಂಬಂಧಗಳು, ಬದುಕಿನ ಸತ್ಯಗಳು, ಸನಾತನೀಯವಾದ ವಿಚಾರಗಳು, ಕೊನೆಗೆ ಬದುಕೇ ಢಾಳುಢಾಳು.