ಅಕ್ಟೋಬರ್ 26, 2012. ಪುತ್ತೂರಿನ ಮನಿಷಾ ಸಭಾಂಗಣ. ಪೂರ್ವಾಹ್ನ ಗಂಟೆ 10-30. ನಗರದ ಪ್ರತಿಷ್ಠಿತ ಗಣ್ಯರ ಉಪಸ್ಥಿತಿ. ಪುತ್ತೂರು ಏಳ್ಮುಡಿ ಹೈನು ವ್ಯವಸಾಯಗಾರರ ಸಂಘದ ಆಯೋಜಿತ ಸಮಾರಂಭ. ಸಂಘದ ಹುಟ್ಟಿಗೆ ಕಾರಣರಾದ, ಸಂಘದ ಜೀವನಾಡಿಯಾದ ಪಶುವೈದ್ಯ ಡಾ.ಮುದ್ಲಜೆ ಸದಾಶಿವ ಭಟ್ (ಡಾ.ಎಂ.ಎಸ್.ಭಟ್) ಅವರ ಸಂಮಾನ ಸಮಾರಂಭ.
ಡಾ.ಎಂ.ಎಸ್.ಭಟ್ಟರು ನಲವತ್ತೆರಡು ವರುಷಗಳ ಸುದೀರ್ಘ ಸೇವೆಯಿಂದ ನಿವೃತ್ತ. ಹೈನು ವ್ಯವಸಾಯಗಾರರ ಕಣ್ಮಣಿ. ಪುತ್ತೂರಿನಲ್ಲಿ ಹೈನುಗಾರಿಕೆ ಜೀವಂತವಾಗಿದ್ದರೆ ಅದರ ಹಿಂದೆ ಇವರ ಕೊಡುಗೆ ದೊಡ್ಡದು. ಕರೆದಾಗ ಧಾವಿಸುವ, ದನಗಳ ಆರೋಗ್ಯದತ್ತ ನಿಗಾ ನೀಡುವ, ಮೂಕ ಪ್ರಾಣಿಗಳ ರೋದನಕ್ಕೆ ಸ್ಪಂದಿಸುವ ಅಪರೂಪದ ವೈದ್ಯ. ಹಾಲು ಹಾಕುವ ಹೈನುಗಾರರಿಗೆ ಗರಿಷ್ಠ ದರ ಸಿಗಬೇಕೆನ್ನುವ ಹಪಹಪಿಕೆ ಇವರದು. ಪುತ್ತೂರು ನಗರದ ಮನೆಗಳಗೆ ತಾಜಾ ಹಾಲು ಸರಬರಾಜು ಮಾಡುವ ವ್ಯವಸ್ಥೆಯ ಹಿಂದೆ ಎಂ.ಎಸ್.ಭಟ್ಟರ ಕಠಿಣ ದುಡಿಮೆಯಿದೆ. ಹಾಗಾಗಿ ನಗರದ ಮಂದಿ ಹೈನು ಸಂಘ ಮತ್ತು ಎಂ.ಎಸ್.ಭಟ್ಟರನ್ನು ಮರೆಯಲು ಸಾಧ್ಯವೇ ಇಲ್ಲ.
ಹೈನು ಸಂಘದ ಪ್ರಾರಂಭದ ಕಾಲದಲ್ಲಿ ಭಟ್ಟರ ಜತೆಗಿದ್ದ ಕರಿಯಾಲ ಶಿವರಾಮ ಭಟ್ಟರ ಉಪಸ್ಥಿತಿ. ಅವರಿಂದಲೇ ಗೌರವ ಸ್ವೀಕಾರ. "ಹಾಲಿನ ಉತ್ಪಾದನಾ ವೆಚ್ಚವನ್ನು ಲೆಕ್ಕಹಾಕಿ, ಅದಕ್ಕೆ ಶೇ.5ರಷ್ಟು ಹೈನುಗಾರರಿಗೆ ಲಾಭಾಂಶವನ್ನು ಸೇರಿಸಿದರೆ ಒಂದು ಲೀಟರಿಗೆ ಕನಿಷ್ಟ 38-40 ರೂಪಾಯಿಗಳಾಗುತ್ತದೆ. ಅದಕ್ಕಿಂತ ಕಡಿಮೆ ಮೊತ್ತದಲ್ಲಿ ಹಾಲನ್ನು ಸರಬರಾಜು ಮಾಡಿದರೆ ಹೈನುಗಾರರಿಗೆ ಕಷ್ಟ. ಹಾಗಾಗಿ ಇಂದು ಹೈನುಗಾರಿಕೆ ಇಳಿಮುಖವಾಗುತ್ತದೆ," ಸಂಮಾನದ ಮಧ್ಯೆಯೂ ಕೃಷಿಕಪರ ಕಾಳಜಿ, ಕಳಕಳಿ.
'ಗುಣಮಟ್ಟದ ಹಾಲು ಉತ್ಪಾದನೆಗೆ ಹೈನು ವ್ಯವಸಾಯಗಾರರ ಸಂಘದ ಕೊಡುಗೆ ದೊಡ್ಡದು. ಅತ್ಯುತ್ತಮ ದರ ನೀಡಿ ಹೈನುಗಾರರನ್ನು ಪ್ರೋತ್ಸಾಹಿಸಿದ ಕೀರ್ತಿ ಸಂಘದ್ದು' ಎಂಬ ಶ್ಲಾಘನೆ. ಹೈನು ವ್ಯವಸಾಯಗಾರರ ಸಂಘದ ಅಧ್ಯಕ್ಷ ಎ.ಪಿ.ಸದಾಶಿವ ಮರಿಕೆ ಸಮಾರಂಭದ ಸಾರಥ್ಯ.
ಎಂ.ಎಸ್.ಭಟ್ಟರ ಸಾಧನೆಗೆ ಕನ್ನಡಿ ಹಿಡಿದವರು - ಡಾ.ಎ.ಪಿ.ರಾಧಾಕೃಷ್ಣ, ಸಂಪ್ಯ ಶಿವಶಂಕರ ಭಟ್, ರಾಮಕೃಷ್ಣ ರೈ ಸರ್ವೆ, ಡಾ. ರಾಮ್ ಪ್ರಕಾಶ್, ಮೋಹನ ನೆಲ್ಲಿತ್ತಾಯ. ಈ ಸಂದರ್ಭದಲ್ಲಿ ಹೈನುಗಾರರನ್ನು, ಸಿಬ್ಬಂದಿಗಳನ್ನು ಮತ್ತು ಡಾ.ಎಂ.ಎಸ್.ಭಟ್ಟರ ಪಶು ಚಿಕಿತ್ಸಾ ಕ್ಲಿನಿಕ್ಕನ್ನು ಮುಂದುವರಿಸುವ ಡಾ.ಪಿ.ರಾಮಚಂದ್ರ ಪುಳುಮನೆ ಇವರಿಗೆ ಗೌರವಾರ್ಪಣೆ.
ಕು.ಅನ್ವಿತಾ, ಕು.ಅಮೃತಾ ಇವರಿಂದ ಪ್ರಾರ್ಥನೆ. ಡಾ.ಶ್ರೀಪ್ರಕಾಶ್ ಬಂಗಾರಡ್ಕ ನಿರ್ವಹಣೆ. ಕರಿಯಾಲ ರಾಮಪ್ರಸಾದ್ ಸ್ವಾಗತ. ಕೃಷ್ಣಮೋಹನ್ ವಂದನಾರ್ಪಣೆ. ಈ ಸಂದರ್ಭದಲ್ಲಿ ಎಲ್ಲಾ ಹೈನುಗಾರ ಬಂಧುಗಳಿಗೆ ಹಾಲು ಕರೆಯಲು ಉಪಯೋಗವಾಗಬಲ್ಲ ಸ್ಟೀಲ್ ಬಕೆಟ್ ವಿತರಣೆ.
ಅಭಿನಂದನಾ ಸಮಾರಂಭಕ್ಕೆ ನೂರಕ್ಕೂ ಮಿಕ್ಕಿದ ಗಣ್ಯರ ಉಪಸ್ಥಿತಿ. ನಿತ್ಯ ತಾವು ಸೇವಿಸುತ್ತಿರುವ ಹಾಲಿನ ಹಿಂದೆ - ಹೈನು ಸಂಘ, ಡಾ.ಎಂ.ಎಸ್.ಭಟ್ ಮತ್ತು ಹಾಲು ಒದಗಿಸುತ್ತಿರುವ ಕೃಷಿಕರ ದುಡಿಮೆ - ಇದೆ ಎನ್ನುವ ಗೌರವದ ಪ್ರಸ್ತುತಿ.
(ಚಿತ್ರ : ಚೇತನ ಸ್ಟುಡಿಯೋ, ಪುತ್ತೂರು)
0 comments:
Post a Comment