Sunday, October 21, 2012

ಬಡತನ ಮರೆತ ದ್ಯಾಮಮ್ಮ


           ಹುಬ್ಬಳ್ಳಿ ಸನಿಹದ ನೂಲ್ವಿ ಚಿಕ್ಕ ಪಟ್ಟಣ. ಸುತ್ತೆಲ್ಲಾ ಕೃಷಿ ಹೊಲಗಳು. ಒಂದೆಕ್ರೆಯಿಂದ ಹತ್ತಿಪ್ಪತ್ತು ಎಕ್ರೆ ತನಕ. ಇವರ ಮಧ್ಯೆ ಹೊಲವಿಲ್ಲದವರ ಸಂಖ್ಯೆಯೇನೂ ಕಡಿಮೆಯಲ್ಲ.

          ದ್ಯಾಮಮ್ಮರಿಗೆ 55ರ ಹರೆಯ. ಮನೆಯಲ್ಲಿ ಒಪ್ಪತ್ತಿಗೂ ತ್ರಾಸ. ಕೂಲಿಯಿಂದ ಜೀವನ. ದಿವಸಕ್ಕೆ ಐವತ್ತೋ ಅರುವತ್ತೋ ರೂಪಾಯಿ ಸಿಕ್ಕರೆ ಅದೇ ಪರಮಾನ್ನ. ಇಂದು ಒಂದು ಹೊಲವಾದರೆ, ನಾಳೆ ಮತ್ತೊಂದು. ಅನಿಶ್ಚಿತ ಬದುಕು. ಕೂಲಿಯಿಲ್ಲದ ದಿವಸ ಹೊಟ್ಟೆಗೆ ಒದ್ದೆ ಬಟ್ಟೆ!

          ಬಡತನದಿಂದ ಬಾಗಿದ್ದ ದ್ಯಾಮಮ್ಮರೀಗ ತಲೆ ಎತ್ತಿ ನಡೆಯುತ್ತಾರೆ! ಮೊದಲಿದ್ದ ಜೀವನ ಬದಲಾಗಿದೆ. ಏನಿಲ್ಲವೆಂದರೂ ವಾರಕ್ಕೆ ಒಂದೂವರೆ ಎರಡು ಸಾವಿರ ಸಂಪಾದಿಸುತ್ತಾರೆ. ಈ ಬದಲಾವಣೆ ಹೇಗಾಯಿತು?

          ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ' ಹಳ್ಳಿಯಲ್ಲಿ ಅನುಷ್ಠಾನವಾಗುತ್ತಿತ್ತು. ಕಾರ್ಯಕರ್ತೆ ಪಾರ್ವತಿಯವರಿಗೆ ನೂಲ್ವಿಯಲ್ಲಿ ಮನೆ-ಮನವನ್ನು ಬೌದ್ಧಿಕವಾಗಿ, ಆರ್ಥಿಕವಾಗಿ ಸಂಪನ್ನಗೊಳಿಸುವ ಕೆಲಸ. ಇವರಿಗೆ ದ್ಯಾಮಮ್ಮರ ಪರಿಚಯ. ನಿತ್ಯ ಸಂಪರ್ಕ. ಕಷ್ಟದ ಕತೆಗೆ ಸ್ಪಂದನ. 'ನೀನ್ಯಾಕೆ ವ್ಯಾಪಾರ ಮಾಡಬಾರದು' ಎಂಬ ಸಲಹೆ. ಆಸಕ್ತರಾದ ದ್ಯಾಮಮ್ಮರಿಗೆ ಗ್ರಾಮಾಭಿವೃದ್ಧಿ ಯೋಜನೆಯ 'ಪ್ರಗತಿ ನಿಧಿ'ಯಿಂದ ಹತ್ತು ಸಾವಿರ ರೂಪಾಯಿ ಸಾಲದ ವ್ಯವಸ್ಥೆ.

          ಯಾವಾಗ ಕೈಗೆ ಹಣ ಸಿಕ್ತೋ, ಕೂಲಿ ಕೆಲಸಕ್ಕೆ ವಿದಾಯ. ವಯೋಸಹಜವಾಗಿ ತ್ರಾಸದ ಕೆಲಸ ತಾಳಿಕೊಳ್ಳರು. ಸ್ವಾವಲಂಬಿಯಾಗಲು ನಿರ್ಧಾರ. ತರಕಾರಿ ವ್ಯಾಪಾರ ಮಾಡುವ ಸಂಕಲ್ಪ. ಹತ್ತು ಕಿಲೋಮೀಟರ್ ದೂರದ ಹುಬ್ಬಳ್ಳಿಯಿಂದ ರಖಂ ದರದಲ್ಲಿ ತರಕಾರಿ ಖರೀದಿ. ನೂಲ್ವಿಯ ರವಿವಾರದ ಸಂತೆಯಲ್ಲಿ ವ್ಯಾಪಾರ.

          ಮೊದಮೊದಲು ವ್ಯಾಪಾರ ತಂತ್ರವರಿಯದೆ ಸೋತುದೂ ಇದೆ. ಸೋಲಿಸುವವರು ಹೇಗೂ ಇದ್ದಾರಲ್ಲಾ! ಪಾರ್ವತಿಯವರಿಂದ ವ್ಯಾಪಾರ ಕೌಶಲದ ಪಾಠ. ಜನರೊಂದಿಗೆ ಬೆರೆಯುವ, ವ್ಯವಹಾರ ಮಾಡುವ ಮಾಹಿತಿ. ಕಳೆದೊಂದು ವರುಷದಿಂದ ಸಂತೆಯ ಸಹವಾಸದಿಂದ ದ್ಯಾಮಮ್ಮ ಈಗ ಕಟ್ಟಾ ತರಕಾರಿ ವ್ಯಾಪಾರಸ್ಥೆ. ಅನಗತ್ಯ ಮಾತಿಗಿಂತ ಕೆಲಸದಲ್ಲಿ ಮಗ್ನೆ. ತರಕಾರಿಯೊಂದಿಗೆ ಈಗ ಸೇವಂತಿಗೆ ಹೂ ಸೇರ್ಪಡೆಗೊಂಡಿದೆ.

          ಐದಾರು ಗಿರಾಕಿಗಳು ಖರೀದಿಗೆ ಏಕಕಾಲಕ್ಕೆ ಬಂದರೂ ಎದೆಗುಂದದೆ ನಿಭಾಯಿಸುತ್ತಾರೆ. ತರಕಾರಿಗಳ ಗುಣಮಟ್ಟವನ್ನು ಹೇಳುತ್ತಾರೆ. ಹಣವನ್ನು ಎಣಿಸುವುದರಲ್ಲಿ ಗೊಂದಲವಿಲ್ಲ. ತರಕಾರಿ ಮುಗಿದಾಗ ತಕ್ಷಣ ನಗರದಿಂದ ತರಿಸುವ ವ್ಯವಸ್ಥೆ. ಆರಂಭಕ್ಕೆ ಸಾಲ ಪಡೆದಿದ್ದರಲ್ಲಾ, ಅವೆಲ್ಲಾ ಚುಕ್ತವಾಗಿದೆ.

          ರವಿವಾರ ನೂಲ್ವಿಯಲ್ಲಿ ಸಂತೆಯಾದರೆ ವಾರದ ಮಿಕ್ಕ ಒಂದೆರಡು ದಿವಸ ಸುತ್ತಲಿನ ಗ್ರಾಮಗಳ  ಸಂತೆಗೆ ತರಕಾರಿ ಸರಕಿನೊಂದಿಗೆ ಹೋಗುತ್ತಾರೆ. ತರಕಾರಿ ಮಾರಾಟವಾಗದೆ ಉಳಿದರೆ? ಬುಟ್ಟಿಯಲ್ಲಿ ತರಕಾರಿ ಪೇರಿಸಿ ನೂಲ್ವಿಯಲ್ಲಿ ಮನೆಮನೆ ಮಾರಾಟ. ಮನೆಬಾಗಿಲಿಗೆ ಹೆಣ್ಮಗಳು ಬಂದಾಗ ವಾಪಾಸು ಕಳುಹಿಸುವವರು ಕಡಿಮೆ. ಸಂಜೆ ಹೊತ್ತಿಗೆ ಬುಟ್ಟಿ ಖಾಲಿ. ಇದುವರೆಗೆ ಮಾರಾಟವಾಗದೆ ಹಾಳಾದುದಿಲ್ಲ.

          ನೂಲ್ವಿ ಸಂತೆಯಲ್ಲಿ ಕೆಲವೊಮ್ಮೆ ಐದು ಸಾವಿರ ರೂಪಾಯಿ ಸಂಪಾದನೆ ಮಿಕ್ಕಿದ್ದೂ ಇದೆ. ಹುಬ್ಬಳ್ಳಿ ಮಾರುಕಟ್ಟೆಯ ತರಕಾರಿ ದರಕ್ಕಿಂತ ದ್ಯಾಮಮ್ಮರಲ್ಲಿ ಒಂದೆರಡು ರೂಪಾಯಿ ಕಡಿಮೆ. ತಾಜಾ ತರಕಾರಿಯಾದುದರಿಂದ ನಿಶ್ಚಿತ ಗಿರಾಕಿಗಳು. ಎಲ್ಲಾ ಖರ್ಚು ಕಳೆದು ಒಂದು ಸಾವಿರ ಲಾಭ ಖಚಿತ. ವಾರದ ಕೊನೆಗೆ ಇವರ ಅನ್ನದ ಬಟ್ಟಲು ತುಂಬಿರುತ್ತದೆ. ಸ್ವಂತದ್ದಾದ ಶೌಚಾಲಯ ಕಟ್ಟಿಸಿಕೊಂಡು ಬಯಲು ಶೌಚಕ್ಕೆ ಬೈ ಹೇಳಿದ್ದಾರೆ.

          ಮನೆಯ ಸುತ್ತ ಕೈತೋಟವಿದೆ. ತರಕಾರಿ ಬೆಳೆಯುತ್ತಿದ್ದಾರೆ. ಮಾಲ್ವಿಯ ಕಾಲೇಜು ಆವರಣದಲ್ಲಿ ಸಂತೆ ನಡೆಯುತ್ತಿದೆ. ಪೇಟೆ ವಿಸ್ತರಣೆಯಾಗುತ್ತಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ತರಕಾರಿಗೆ ಸಂತೆಯ ಅವಲಂಬನೆ ಅನಿವಾರ್ಯ. ಹೀಗಾಗಿ ಸಂತೆಯೂ ವಿಸ್ತರಣೆಯಾಗುತ್ತಿದೆ. ದ್ಯಾಮಮ್ಮರ ಹಿರಿಮಗ ಬೇರೆಯೇ ವಾಸವಾಗಿದ್ದಾರೆ. ಕಿರಿ ಮಗ ತಾಯಿಯೊಂದಿಗೆ ವ್ಯಾಪಾರಕ್ಕೆ ಸಹಕರಿಸುತ್ತಿದ್ದಾರೆ.

          ದ್ಯಾಮಮ್ಮರಂತೆ ಪಾರವ್ವ ಗಿರಿಯಣ್ಣವರ್, ನಾಗಮ್ಮ ಕುಂಬಾರ್, ಅನುಸೂಯ ರೋಗಣ್ಣನವರ್, ದಾಕ್ಷಾಯಿಣಿ ಪೂಜಾರ್.. ಇಂತಹ ಇಪ್ಪತ್ತೈದಕ್ಕೂ ಮಿಕ್ಕಿ ಅಮ್ಮಂದಿರು ಬಡತನವನ್ನು ಗೆದ್ದಿದ್ದಾರೆ. ಸ್ವಾವಲಂಬಿಯಾಗಿದ್ದಾರೆ. ಜ್ಞಾನ ವಿಕಾಸವು ಅವರಿಗೆಲ್ಲಾ ಹೆಗಲೆಣೆಯಾಗಿದೆ. ಬದುಕುವ ದಾರಿಯನ್ನು ತೋರಿದೆ. ಇವರೆಲ್ಲಾ ಸಂತೆಯಲ್ಲಿ ಪಳಗಿದ ತರಕಾರಿ ವ್ಯಾಪಾರಿಗಳು! ಕೆಲವರು ಮನೆಯಲ್ಲೇ ಬೆಳೆದು ಸಂತೆಯಲ್ಲಿ ಮಾರುವವರೂ ರೂಪಿತರಾಗಿದ್ದಾರೆ.

          'ಎಷ್ಟೋ ಮಂದಿಗೆ ಭೂಮಿಯಿದೆ. ಬಳಕೆ ಗೊತ್ತಿಲ್ಲ. ಪೇರಳೆ, ಚಿಕ್ಕು ಬೆಳೆದರೆ ಡಿಮ್ಯಾಂಡಿದೆ. ಯಾರೂ ಮನ ಮಾಡುತ್ತಿಲ್ಲ' ಎಂದು ವಿಷಾದಿಸುತ್ತಾರೆ ಪಾರ್ವತಿ. ಜ್ಞಾನ ವಿಕಾಸ ಎಂಟ್ರಿ ಕೊಡುವ ಮುನ್ನ ಇಲ್ಲಿನ ಬಡವರಿಗೆ ದುಪ್ಪಟ್ಟು ಬಡ್ಡಿಯಲ್ಲಿ ಸಾಲ ಕೊಡುವ ಖಾಸಗಿ ಲೇವಾದೇವಿದಾರರಿದ್ದರು. ದುಡಿದ ಪಗಾರವೆಲ್ಲಾ ಬಡ್ಡಿಗೆ ಸರಿಸಮವಾಗುತ್ತಿತ್ತು. ಈಗ ಹಾಗಲ್ಲ. ದುಡಿಯುವ ಮನಸ್ಸಿದ್ದವರಿಗೆ, ಜ್ಞಾನವಿಕಾಸ ಸಹಕಾರಿಯಾಗುತ್ತಿರುವುದು ನಿಜಾರ್ಥದಲ್ಲಿ ಗ್ರಾಮಾಭಿವೃದ್ಧಿ.

0 comments:

Post a Comment