Friday, October 12, 2012

'ಸಮೃದ್ಧಿ' ಆಚರಿಸಿದ ಇಪ್ಪತ್ತರ ಸಂತಸ




ಪುತ್ತೂರಿನ ಗಿಡಗೆಳತನ ಸಂಘ 'ಸಮೃದ್ಧಿ' (Samruddi) ಇಪ್ಪತ್ತನೇ ವರುಷಕ್ಕೆ ಕಾಲಿಟ್ಟಿದೆ. ಸವಣೂರು ಅಶ್ವಿನಿ ಪಾರ್ಮಿನಲ್ಲಿ ಇಂದು (12-10-2012) ವಿಂಶತಿಯನ್ನು ಉದ್ಘಾಟಿಸಿದವರು ಹಿರಿಯ ಕೃಷಿಕ ಕರಿಯಾಲ ಶಿವರಾಮ ಭಟ್. ದೀಪವನ್ನು ಜ್ವಲಿಸುವುದಲ್ಲದೆ, ಕುಂಡದಲ್ಲಿ ಭತ್ತದ ಸಸಿಯನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಉದ್ಘಾಟಿಸಿ, 'ಅಳಿವಿನಂಚಿನಲ್ಲಿರುವ ಬೀಜ-ಸಸ್ಯಗಳನ್ನು ಉಳಿಸಿ, ಬೆಳೆಸಿದ ಕೀರ್ತಿ ಸಮೃದ್ಧಿಯದು' ಎಂದರು.

ಸಭಾಧ್ಯಕ್ಷತೆಯನ್ನು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್ ವಹಿಸಿ, 'ಬೀಜ, ಗಿಡಗಳ ಆಸಕ್ತಿಯನ್ನು ಹೆಚ್ಚಿಸುವುದರೊಂದಿಗೆ ಕೃಷಿಯಲ್ಲೂ ಆಸಕ್ತಿ ಉಳಿಸುವ ನಿಟ್ಟಿನಲ್ಲಿ ಸಮೃದ್ಧಿಯ ಕಾರ್ಯ ಶ್ಲಾಘನೀಯ' ಎಂದು ಮೆಚ್ಚಿಕೊಂಡರು.

ಸಮೃದ್ಧಿಯನ್ನು ಉದ್ಘಾಟಿಸಿ, ಅದರ ಹತ್ತರ ಸಮಾರಂಭದಲ್ಲೂ ಭಾಗವಹಿಸಿ, ಈಗ ಇಪ್ಪತ್ತರ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸಿದವರು, ಮೂಡುಬಿದಿರೆಯ ಡಾ. ಎಲ್.ಸಿ.ಸೋನ್ಸ್. ಕೃಷಿಕ ತಂತ್ರಜ್ಞ ನಿಟಿಲೆ ಮಹಾಬಲೇಶ್ವರ ಭಟ್ಟರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಮೃದ್ಧಿಯ ಸ್ಥಾಪಕ ಅಧ್ಯಕ್ಷ ಸೇಡಿಯಾಪು ಜನಾರ್ದನ ಭಟ್ ಮತ್ತು ಕಾರ್ಯದರ್ಶಿ ಪೆಲಪ್ಪಾರು ವೆಂಕಟ್ರಮಣ ಭಟ್ ವೇದಿಕೆಯಲ್ಲಿ ಉಪಸ್ಥಿತಿ.

ಮೂಲಿಕಾ ತಜ್ಞ ವೆಂಕಟ್ರಾಮ ದೈತೋಟ ಪಾಣಾಜೆ ಮತ್ತು ಜಯಲಕ್ಷ್ಮೀ ವಿ. ದೈತೋಟ ಅವರಿಂದ 'ಆಹಾರವೇ ಔಷಧ' ಮಾಹಿತಿ. ಸಮೃದ್ಧಿಯನ್ನು ಮುನ್ನಡೆಸಿದ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಿಗೆ ಗೌರವಾರ್ಪಣೆ. 'ಸಮೃದ್ಧಿಯಿಂದ ಗಿಡಗೆಳೆತನ' ಅನುಭವ ಕಥನ - ನಡೆದ ವಿವಿಧ ಕಲಾಪಗಳು.

ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರಿಂದ ಸಮಾರೋಪ ಸಂದೇಶ. ಸಾವಯವ ಭೋಜನದ ಬಳಿಕ ಮೋಹನ ಪ್ರಭುಗಳ ಸುಪರ್ದಿಯ ಅಶ್ವಿನಿ ಪಾರ್ಮ್ ವೀಕ್ಷಣೆ.

ಶಿವಸುಬ್ರಹ್ಮಣ್ಯ ಪೆಲತ್ತಡ್ಕ ನಿರ್ವಹಣೆ. ಸಮೃದ್ಧಿ ಅಧ್ಯಕ್ಷ ಸಿ.ವಿ.ಶಂಕರ್ ಸ್ವಾಗತ. ಕಾರ್ಯದರ್ಶಿ ಪಿ.ಆರ್.ಯಶೋಚಂದ್ರ ಪ್ರಸ್ತಾವನೆ. ಕೃಷಿಕ ಎ.ಪಿ.ಸದಾಶಿವ ವಂದನಾರ್ಪಣೆ. ಡಾ.ಎನ್.ವಿ.ಕರುಣಾಕರ ಅವರಿಂದ ದೈತೋಟರ ಪರಿಚಯ. ಸಮೃದ್ಧಿ ಸಂತಸದ ಸಂಚಾಲಕ ಎಡಂಬಳೆ ಸತ್ಯನಾರಾಯಣ ಉಸ್ತುವಾರಿಕೆ. ಸುಮಾರು ಇನ್ನೂರು ಮಂದಿ ಸಮೃದ್ಧಿ ಪ್ರಿಯರ ಉಪಸ್ಥಿತಿ.

ಚಿತ್ರಗಳು: ಹರ್ಷಿತ್ ಪುಚ್ಚಪ್ಪಾಡಿ

0 comments:

Post a Comment