Sunday, January 31, 2010

ಊಟದ ಬಟ್ಟಲಿಗೆ ಉತ್ಸವದ ಥಳಕು

ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಬರಗು - ಕಿರು ಧಾನ್ಯಗಳು. ಇವುಗಳ ಕಾಳುಗಳು ಕಿರಿದಾಗಿರುವುದರಿಂದ 'ಕಿರುಧಾನ್ಯ'. ನಿಜಕ್ಕೂ ಇವು 'ಸಿರಿಧಾನ್ಯ'ಗಳು.

ದೊಡ್ಡ ಕಿರುಧಾನ್ಯ ಮತ್ತು ಚಿಕ್ಕ ಕಿರುಧಾನ್ಯಗಳೆಂಬ ಎರಡು ವಿಧಗಳಿವೆ. ಜೋಳ ಮತ್ತು ಸಜ್ಜೆ ಕಿರುಧಾನ್ಯಗಳಲ್ಲೇ 'ದೊಡ್ಡಣ್ಣ'! ಉಳಿದವು ಚಿಕ್ಕವು. ಬರಗಾಲ ಪ್ರದೇಶದಲ್ಲಿ ರೈತರ ಜೀವವುಳಿಸಿದ ಅಮೃತ! 'ಬರಗಾಲದ ಮಿತ್ರ' ಎಂಬ ಬಿರುದೂ ಇದೆ.
ಕಿರುಧಾನ್ಯಗಳು ಒಣಭೂಮಿ ಪ್ರದೇಶಗಳ ಮುಖ್ಯ ಆಹಾರ.. ಇಲ್ಲಿನ ಬದುಕಿನಲ್ಲಿ ಸಾಂಪ್ರದಾಯಿಕವಾಗಿ ಬಂದ ಆಹಾರ ತಯಾರಿಯಲ್ಲಿ ವೈಶಿಷ್ಟ್ಯ ಮತ್ತು ವಿಶಿಷ್ಟತೆಯಿದೆ. ರಾಗಿಯಿಂದ ರಾಗಿಮುದ್ದೆ, ರಾಗಿ ಅಂಬಲಿಯಿಲ್ಲದೆ ಊಟವಿಲ್ಲ. ಪಶ್ಚಿಮ ಭಾರತದಲ್ಲಿ ಜೋಳವನ್ನು ಹಿಟ್ಟು ಮಾಡಿ ಅದರಿಂದ ತೆಳುವಾದ ರೊಟ್ಟಿಗಳನ್ನು ತಯಾರಿಸುತ್ತಾರೆ. ಇದು ಮುಖ್ಯಾಹಾರ..

ಅರುವತ್ತರ ದಶಕದೀಚೆಗೆ ಹಸಿರು ಕ್ರಾಂತಿ ಕಾಲಿಟ್ಟಾಗ, ಅಧಿಕ ಉತ್ಪಾದನೆ ಬರುವ ಬೆಳೆಗಳತ್ತ ಒತ್ತು ಕೊಡಲಾಯಿತು. ಆಗ ಬಡವರ ಪಾಲಿನ ಈ ಕಿರುಧಾನ್ಯಗಳಿಗೆ ಇಳಿಲೆಕ್ಕ! ಸಿರಿಧಾನ್ಯಗಳಲ್ಲಿರುವಷ್ಟು ಪೋಷಕಾಂಶ, ಪೌಷ್ಠಿಕತೆ ಬೇರ್ಯಾವ ಆಹಾರದಲ್ಲಿ ಸಿಗದು. 'ನ್ಯಾಯಬೆಲೆ ಅಂಗಡಿಗಳಲ್ಲಿ ಮೂರು ರೂಪಾಯಿಗೆ ಅಕ್ಕಿ ಸಿಕ್ತದೆ ಅಂತಾದ್ರೆ ಧಾನ್ಯ ಬೆಳೆಸೋ ಉಸಾಬರಿ ಯಾಕ್ರಿ' ರೈತರ ಪ್ರಶ್ನೆ. ಹೆಚ್ಚು ಶ್ರಮ ಬೇಡುವ ಧಾನ್ಯಗಳ ಕೃಷಿ ಸರಕಾರದ ಮೂರು ರೂಪಾಯಿಯ ಅಕ್ಕಿ ಯೋಜನೆ ನುಂಗಿನೊಣೆದಿದೆ! ಎಲ್ಲೋ ರುಚಿಗೊತ್ತಿದ್ದ ಹಿರಿಯರು ಧಾನ್ಯಕ್ಕಂಟಿಕೊಂಡಿದ್ದಾರೆ.

ಹಾಗಿದ್ದರೆ ಉಳಿಸುವ ದಾರಿ? ಕಿರುಧಾನ್ಯ ಬೆಳೆಯನ್ನು ಹೆಚ್ಚು ಜನಪ್ರಿಯಗೊಳಿಸುವುದು, ಕಿರುಧಾನ್ಯಗಳ ಸಂಸ್ಕೃತಿ, ಪ್ರಾಮುಖ್ಯತೆ ಮತ್ತು ಆಹಾರಗಳಲ್ಲಿರುವ ಪೌಷ್ಠಿಕ ಅಂಶಗಳ ಬಗ್ಗೆ ಅಗತ್ಯವಾದ ಮಾಹಿತಿಯನ್ನು ರೈತರಿಗೆ ಮೂಡಿಸುವುದು ಮೊದಲಾವಶ್ಯಕತೆ. ಹೈದರಾಬಾದಿನ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಯು (ಡಿಡಿಎಸ್) ಸಿರಿಧಾನ್ಯಗಳನ್ನು 'ಮತ್ತೊಮ್ಮೆ ವೈಭವದತ್ತ' ಒಯ್ಯಲು ಶ್ರಮಿಸುತ್ತಿದೆ.

ಮಹಿಳೆಯರು ಕೃಷಿಯ ಕೊಂಡಿ. ಈಗಿನ ಕೃಷಿ ವ್ಯವಸ್ಥೆಯಲ್ಲಿ ಪುರುಷನೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾನೆ. ಇದರಿಂದಾಗಿ ಮಹಿಳೆಯರಲ್ಲಿದ್ದ ಕೃಷಿ ಜಾಣ್ಮೆಗಳು ಮಸುಕಾಗಿವೆ. ಬೀಜದ ಆಯ್ಕೆಯಿಂದ ಬೆಳೆ ವರೆಗಿನ ಲೆಕ್ಕ ಅವರ ಬೆರಳ ತುದಿಯಲ್ಲಿರುತ್ತಿತ್ತು. ಮಸುಕು ಹಿಡಿದ ಜಾಣ್ಮೆಗೆ ಮರು ಜೀವ ಕೊಡುವಂತಹ ಕೆಲಸವಾದಾಗಲೇ ಕಿರುಧಾನ್ಯಗಳ ಶಾಪಕ್ಕೆ ಮೋಕ್ಷ ಸಿಗಬಹುದು - ಈ ಹಿನ್ನೆಲೆಯಿಂದ ಡಿಡಿಎಸ್ ಆಶ್ರಯದಲ್ಲಿ ರೂಪುಗೊಂಡಿದೆ - ಮಿಲ್ಲೆಟ್ ನೆಟ್ವವರ್ಕ ಆಫ್ ಇಂಡಿಯಾ. ಇದು ರಾಷ್ಟ್ರಮಟ್ಟದಲ್ಲಿ ಕಾರ್ಯವೆಸಗುವ ಒಕ್ಕೂಟ.

ಡಿಡಿಎಸ್ ಕಾರ್ಯಕ್ಷೇತ್ರ ಆಂಧ್ರಪ್ರದೇಶದ ಮೇದಕ್ ಜಿಲ್ಲೆಯ ಜಹೀರಾಬಾದ ತಾಲೂಕು. (ಬೀದರಿಗೆ ಸಮೀಪ) ಎಪ್ಪತ್ತೈದು ಹಳ್ಳಿಗಳ ವ್ಯಾಪ್ತಿ. ಇಲ್ಲಿನ ಮಹಿಳೆಯರಿಗೆ 'ಸ್ವಾಯತ್ತತೆ' ನೀಡುವುದು ಮೊದಲಾದ್ಯತೆ. ಆಹಾರ ಉತ್ಪಾದನೆ, ಬೀಜ, ನೈಸರ್ಗಿಕ ಸಂಪನ್ಮೂಲ, ಮಾರುಕಟ್ಟೆ ಮತ್ತು ಮಾಧ್ಯಮ - ಇಷ್ಟೂ ಕ್ಷೇತ್ರಗಳಲ್ಲಿ ಅವಳು ಸ್ವಾವಲಂಬಿಯಾಗುವ ದೃಷ್ಟಿಯ ಕಾರ್ಯಹೂರಣ.

ಹಡಿಲು ಬಿಟ್ಟ ಹತ್ತು ಸಾವಿರ ಎಕ್ರೆ ಜಮೀನನ್ನು 'ಕೃಷಿ ಯೋಗ್ಯ'ವನ್ನಾಗಿ ಮಾಡುವಲ್ಲಿ ಡಿಡಿಎಸ್ ಸಫಲವಾಗಿದೆ. ಬಂಜರುನೆಲ, ನೀರಿಗೆ ತತ್ವಾರ, ಮಿತವಾದ ಮಳೆ.. ಇಂತಹ ಸ್ಥಿತಿಯಲ್ಲೂ ಜನರ ಮನವನ್ನು ಪರಿವರ್ತನೆ ಮಾಡಿ, ಕೃಷಿಗೆ ಇಳಿಸುವುದು ಸಣ್ಣ ಮಾತಲ್ಲ. ಡಿಡಿಎಸ್ ನಿರ್ದೇಶಕ ಸತೀಶ್ ಹೇಳುತ್ತಾರೆ - 'ಕಳೆದೆರಡು ದಶಕಗಳಿಂದ ಈಚೆಗೆ ಇಲ್ಲಿ ಒಂದು ದಶಲಕ್ಷ ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿಯಾಗಿದೆ. ಐದು ಲಕ್ಷ ಕಿಲೋ ಧಾನ್ಯ ಬೆಳೆಯುವ ಇಲ್ಲಿ ಅದರ ಆರು ಬೆಳೆಸಲಾಗುತ್ತದೆ' ಎಂಬ ಅಚ್ಚರಿಯ ಸುದ್ದಿಯನ್ನು ಹೇಳುತ್ತಾರೆ.

ಇಪ್ಪತ್ತು ವರುಷಗಳ ಫಲಶೃತಿಯನ್ನು ಹೇಳುವುದಾದರೆ ಪ್ರತೀಯೊಬ್ಬ - ಮಹಿಳೆಯೂ ತಮ್ಮ ಪುಟ್ಟ ಜಮೀನಿನಲ್ಲಿ ಕನಿಷ್ಠ ಐದಾರು ವಿಧದ ಬೆಳೆ ಬೆಳೆಯುತ್ತಾರೆ. ಹಳ್ಳಿಯಲ್ಲೇ ಬೀಜ ಬ್ಯಾಂಕ್ ಸ್ಥಾಪಿಸಿಕೊಂಡಿದ್ದಾರೆ. ಬೀಜಗಳು ಸ್ಥಳದಲ್ಲೇ ಸಿಗುತ್ತವೆ. ಕಂಪೆನಿಗಳ ಹಂಗಿಲ್ಲ.

ಮಾರುಕಟ್ಟೆಗಾಗಿ 'ಜಹೀರಾಬಾದ ಗ್ರಾಹಕ ಕ್ರಿಯಾ ಸಂಘಟನೆ' ಅಸ್ತಿತ್ವಕ್ಕೆ. ಇದರ ಮೂಲಕ ಉತ್ಪನ್ನಗಳ ಮಾರಾಟ. ನೈಸಗರ್ಿಕ ಸಂಪನ್ಮೂಲಗಳನ್ನು ಉಳಿಸುವತ್ತಲೂ ಪ್ರಯತ್ನ. ಸಾವಿರ ಎಕ್ರೆ ಜಾಗದಲ್ಲಿ ಹತ್ತು ಲಕ್ಷ ಸಸಿಗಳನ್ನು ಮಹಿಳೆಯರೇ ನೆಟ್ಟಿದ್ದಾರೆ. ಜತೆಗೆ ಔಷಧೀಯ ಸಸ್ಯಗಳು ಕೂಡಾ.

ಹಳ್ಳಿಯಲ್ಲೇ ಕಳೆದೈದು ವರುಷದಿಂದ ನಲವತ್ತು ಟನ್ ಸಾಮಥ್ರ್ಯದ 'ಬೀಜಗೋದಾಮು' ಆರಂಭವಾಗಿದೆ. ಧಾನ್ಯ ಸಂಸ್ಕರಣೆ ಮಾಡಲು ಯಂತ್ರಗಳು. ಮೌಲ್ಯವರ್ಧನೆಗೂ ಒತ್ತು. 'ಕೆಫೆ ಎಥ್ನಿಕ್'ನಲ್ಲಿ ಧಾನ್ಯಗಳ ವಿವಿಧ ತಿಂಗಳು ಹೊಟ್ಟೆಗಿಳಿಯುತ್ತವೆ.
ಡಿಡಿಎಸ್ ನೇತೃತ್ವದಲ್ಲಿ ಸಮುದಾಯ ರೇಡಿಯೋ (ಸಂಘಂ ರೇಡಿಯೋ) ನಡೆಯುತ್ತಿದೆ. ನೆಲಜಲ, ಕೃಷಿಯ ಭವಿಷ್ಯ, ಜಾಗತಿಕ ವಿಚಾರಗಳು, ಮಳೆಯಾಧಾರಿತ ಕೃಷಿ, ಕಾಡಿನ ಬಳಕೆ, ಆಹಾರ ವಿಚಾರಗಳ ಬಗ್ಗೆ ಮಾಹಿತಿ. ಜತೆಜತೆಗೆ ಸ್ಥಳೀಯ ಕಲೆಗಳ ಪ್ರಸಾರ. ದೇಶದ ವಿದ್ಯಮಾನವನ್ನು ಅನಕ್ಷರಸ್ಥರಾದ ಇವರು ತಿಳಿದುಕೊಂಡಿದ್ದಾರೆ! ವೀಡಿಯೋ ದಾಖಲಾತಿಯಲ್ಲೂ ಮಹಿಳೆಯರದ್ದೇ ಪ್ರಾಬಲ್ಯ. ವೃತ್ತಿಪರರನ್ನು ನಾಚಿಸುವಷ್ಟು ವೀಡಿಯೋ ದಾಖಲಾತಿ ಮಾಡಬಲ್ಲರು. 'ಮಹಿಳಗೆ ಸ್ವಾಯತ್ತತೆ ಕೊಟ್ಟ ಪರಿಣಾಮ' ಎನ್ನುತ್ತಾರೆ ಸತೀಶ್.

ಕಳೆದೊಂದು ದಶಕದಿಂದ ಡಿಡಿಎಸ್ ಇಲ್ಲಿ 'ಸಂಚಾರಿ ಜೀವ ವೈವಧ್ಯ ಮೇಳ'ವನ್ನು ನಡೆಸುತ್ತಿದೆ. ಮಕರ ಸಂಕ್ರಾಂತಿಯಿಂದ ಶುರುವಾಗಿ ತಿಂಗಳ ಕಾಲ ಹಳ್ಳಿಯಿಡೀ ಉತ್ಸವ ನಡೆಯುತ್ತದೆ. ಎತ್ತಿನ ಗಾಡಿಗಳಲ್ಲಿ ಆಹಾರ ಧಾನ್ಯಗಳನ್ನಿಟ್ಟು ಮೆರವಣಿಗೆ. ಎತ್ತಿನ ಗಾಡಿಗಳಿಗೆ ದೇಸಿ ಅಲಂಕಾರ., ಬಣ್ಣಬಣ್ಣದ ಹೂಗಳ ಹಾರ. ಹಳ್ಳಿಯಿಂದ ಹಳ್ಳಿಗೆ ರಥೋತ್ಸವದಂತೆ ಗಾಡಿ ಉತ್ಸವ! ಜತೆಗೆ ಕಿರುಧಾನ್ಯಗಳ ಮಹತ್ವನ್ನು ತಿಳಿಸುವ ವಿವಿಧ ಉಪಾಧಿಗಳು.

ಒಂದು ಹಳ್ಳಿಯಿಂದ ಹೊರಟು ಇನ್ನೊಂದು ಹಳ್ಳಿಗೆ ಹೋಗುತ್ತಿರುವಾಗಲೇ ಗಾಡಿಗಳ ಸಂಖ್ಯೆ ಹೆಚ್ಚಾಗುತ್ತದೆ. ಸ್ಥಳೀಯ ಕಲೆಗಳು, ಆಟಗಳು, ಹಾಡುಗಳಲ್ಲಿ ಮಹಿಳೆಯರು, ಪುರುಷರು ಒಟ್ಟಾಗಿ ಪಾಲ್ಗೊಳ್ಳುತ್ತಾರೆ. ಪಾರಂಪರಿಕ ತಿಂಡಿಗಳ ಪ್ರದರ್ಶನ. ಸಮಾರೋಪಕ್ಕೆ ದೇಶ-ವಿದೇಶಗಳಿಂದ ರೈತರು ಹಲವಾರು ಮಂದಿ ಪಾಲ್ಗೊಳ್ಳುತ್ತಾರೆ. ಉಣ್ಣುವ ಆಹಾರದ ಹಿಂದೆ ಇಷ್ಟು ದೀರ್ಘವಾಗಿ ನಡೆಯುವ ಹಬ್ಬ ಬಹುಶಃ ದೇಶದಲ್ಲೇ ಅಪರೂಪ!. ಈ ಸಾರಿಯ ಹಬ್ಬದ ಸಮಾರೋಪ ಫೆಬ್ರವರಿ 13ರಂದು ಪಸ್ತಾಪೂರ್ನಲ್ಲಿ ಜರುಗಲಿದೆ.

Monday, January 25, 2010

ಬದನೆ ಬಚಾವ್!


ಮಾಧ್ಯಮಗಳಲ್ಲಿ, ಮಿಂಚಂಚೆಗಳಲ್ಲಿ ಕಳೆದೊಂದು ತಿಂಗಳುಗಳಿಂದ 'ಬಿಟಿ ಬದನೆ'ಯದ್ದೇ ಸುದ್ದಿ. 'ಬಿಟಿ ಬೇಡ, ನಾಟಿ ಬೇಕು' ಎಂಬ ಘೋಷಣೆ-ಹೋರಾಟ. ಆರೇಳು ರಾಜ್ಯಗಳು ಬಿಟಿ ಯಾ ಕುಲಾಂತರಿ ಬದನೆ ಬಗ್ಗೆ ಈಗಾಗಲೇ ಸ್ವರ ಎಬ್ಬಿಸಿವೆ. ರಾಜ್ಯ ಸರಕಾರ ಈಗಷ್ಟೇ ಮಾತನಾಡಲು ಶುರುಮಾಡಿದೆ!

ಕೆಲವು ಸ್ವಯಂ ಸೇವಾ ಸಂಸ್ಥೆಗಳು, ರೈತರು, ರೈತ ಪರ ಸಂಸ್ಥೆಗಳು ಕುಲಾಂತರಿ ಬದನೆ ವಿರುದ್ಧ ನೇರ ಹೋರಾಟಕ್ಕಿಳಿದಿದೆ. ಕುಲಾಂತರಿ ಬದನೆ ಕೃಷಿ, ಅದರ ಸೇವನೆಯಿಂದ ಬದುಕಿಗಾಗುವ ದುಷ್ಪರಿಣಾಮಗಳ ಬಗ್ಗೆ ಆಧಾರ ಸಹಿತ ದಾಖಲೆಗಳನ್ನು ಜನರ ಮುಂದಿಡುತ್ತಿದೆ.

ಕೇಂದ್ರ ಸರಕಾರವು ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಣೆ ಹಾಕುತ್ತಿರುವುದು ಇದೇನೂ ಹೊಸತಲ್ಲ. ಭಾಸ್ಮತಿಯಂತಹ ಭಾರತದ್ದೇ ತಳಿಗಳನ್ನು ತಮ್ಮದೆಂದು ಹೇಳಿ ಪೇಟೆಂಟ್ ಪಡಕೊಂಡರೂ ನಮ್ಮದು ದಿವ್ಯ ಮೌನ! ಕುಲಾಂತರಿ ಬದನೆಯ ವಿಚಾರದಲ್ಲೂ ಅಷ್ಟೇ.

ಏನಿದು ಕುಲಾಂತರಿ? ಆಂಗ್ಲಭಾಷೆಯಲ್ಲಿ 'ಜಿ.ಎಂ.ಓ - ಜೆನೆಟಿಕಲಿ ಮಾಡಿಫೈಡ್ ಆರ್ಗಾನಿಸಮ್ಸ್'. ಬೇರೆ ಸಸ್ಯ, ಪ್ರಾಣಿ ಅಥವಾ ಸೂಕ್ಷ್ಮಣುವೊಂದರ ವಂಶವಾಹಿಗಳನ್ನು ಕೃತಕವಾಗಿ ಒಳಸೇರಿಸಿ ರೂಪಾಂತರಿಸಿದ ಬೆಳೆ ತಳಿಗಳು. ಈ ಹಿಂದೆ ಬಿಟಿ ಹತ್ತಿ ಎಂಬ ಕುಲಾಂತರಿ ತಳಿಯನ್ನು ಚಿನ್ನದ ತಟ್ಟೆಯಲ್ಲಿಟ್ಟು ರೈತರ ಕೈಗೆ ಕೊಟ್ಟ ದೃಷ್ಟಾಂತ ಕಣ್ಣಮುಂದಿದೆ. ಕಾಂಡ ಕೊರಕ ಮತ್ತು ಹಣ್ಣುಕೊರಕ ಕೀಟಗಳನ್ನು ಈ ತಳಿ ಸ್ವಯಂ ಆಗಿ ನಿಯಂತ್ರಿಸುತ್ತದೆ ಎಂದು ರೈತರನ್ನು ನಂಬಿಸಲಾಗಿತ್ತು. ಈಗ ಬದನೆ ಸರದಿ. 'ಉತ್ಕೃಷ್ಟ ಗುಣಮಟ್ಟ, ಕೀಟಬಾಧೆಯಿಂದ ಮುಕ್ತ, ಅಧಿಕ ಇಳುವರಿ' - ಎಂಬ ಸ್ಲೋಗನ್.

ಸಹಜ ಸಮೃದ್ಧದ ಜಿ. ಕೃಷ್ಣಪ್ರಸಾದ್ ಹೇಳುತ್ತಾರೆ - 'ಭಾರತ ಸರಕಾರವು ಅತ್ಯಂತ ಅವೈಜ್ಞಾನಿಕವಾಗಿ ಬಿಟಿ ಬದನೆಯ ತಳಿಯನ್ನು ಬೆಳೆಯಲು 2009 ಅಕ್ಟೋಬರ್ ನಲ್ಲಿ ಅನುಮತಿ ನೀಡಿದೆ. ಇದನ್ನು ಮಾರಕಟ್ಟೆಗೆ ತರಲು ಮಹಿಕೋ ಸಂಸ್ಥೆಗೆ ಅಧಿಕಾರ ನೀಡಲಾಗಿದೆ. ಈ ಅನುಮತಿ ನೀಡುವ ಸಭೆಯ ಅಧ್ಯಕ್ಷತೆ ವಹಿಸಿದ್ದವರು ಮಹಿಕೋ ಸಂಸ್ಥೆಯ ಪ್ರತಿನಿಧಿ!'

ಸ್ವದೇಶಿ ಜಾಗರಣದ ಕುಮಾರಸ್ವಾಮಿಯವರು ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿದ ಮಾತು ಗಮನಿಸಿ - 'ಮೆಕ್ಕೆಜೋಳದ ತವರೂರು ಮೆಕ್ಸಿಕೋ. ಜೋಳವನ್ನು ಕುಲಾಂತರಿ ಮಾಡಲು ಅಲ್ಲಿನ ಸರಕಾರ ಒಪ್ಪಿಗೆ ನೀಡಿಲ್ಲ. ಕಾರಣ, ಎಲ್ಲಿ ಮೂಲ ತಳಿಗಳಿವೆಯೋ ಅಲ್ಲಿ ಕುಲಾಂತರಿ ತಂತ್ರಜ್ಞಾನವನ್ನು ಅಳವಡಿಸಕೂಡದು ಎಂಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ವಸಮ್ಮತವಾದ ವಿಚಾರ'.

ಆದರೆ ಭಾರತದಲ್ಲಿ? ಬದನೆಯು ಭಾರತದ ದೇಸೀ ತಳಿ. ಎರಡು ಸಾವಿರಕ್ಕೂ ಅಧಿಕ ತಳಿಗಳಿವೆ. ಕರ್ನಾಟಕದಲ್ಲೇ ನೋಡಿ - ಬಿಳಿಗುಂಡು ಬದನೆ, ಚೋಳ ಬದನೆ, ಕೊತ್ತಿತಲೆ ಬದನೆ, ಹೊಳೆಚಿಪ್ಲಿ, ನೆಲ್ಲೆ ಬದನೆ, ಪುಟ್ಟ ಬದನೆ, ಮಟ್ಟಿಗುಳ್ಳ - ಎಷ್ಟೊಂದು ವೈವಿಧ್ಯಗಳು! ಕುಲಾಂತರಿ ತಳಿಗಳು ಹೊಲಕ್ಕೆ ನುಗ್ಗಿದರೆ ನಮ್ಮ ದೇಸೀ ತಳಿಗಳಿಗೆ ಅವಸಾನ ಖಂಡಿತ. 'ಅಧಿಕ ಇಳುವರಿ, ರೋಗರಹಿತ' ಎಂದು ರೈತರನ್ನು ನಂಬಿಸಿ' ಮಣ್ಣನ್ನು, ಮನುಷ್ಯನ ಆರೋಗ್ಯವನ್ನೂ ಕುಲಾಂತರಿ ತಳಿಗಳು ನಾಶಪಡಿಸುತ್ತದೆ.
'ಕುಲಾಂತರಿ ಬದನೆಯ ಸೇವನೆ ಆರೋಗ್ಯಕ್ಕೆ ಮಾರಕ. ಅಲರ್ಜಿ, ಶ್ವಾಸಕೋಸದ ಕಾಯಿಲೆ, ಸಂತಾನಹರಣ, ರೋಗನಿರೋಧಕ ಶಕ್ತಿಯ ನಾಶ, ನೋವು, ವಿಕೃತ ಕೋಶ.. ಹೀಗೆ ಬದುಕಿಗೆ ಮಾರಕ' ಎನ್ನುವುದು ಕೃಷ್ಣಪ್ರಸಾದ್ ಅಧ್ಯಯನದಿಂದ ಕಂಡು ಕೊಂಡ ವಿಚಾರ.

ಕರ್ನಾಟಕದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯವು ಬಿಟಿ ಬದನೆಯ ಸಂಶೋಧನೆ ಕೈಗೊಂಡಿದೆಯಂತೆ. 'ಮೊನ್ನೆಮೊನ್ನೆಯವರೆಗೆ ನೈಸರ್ಗಿಕ / ಸಾವಯವ ಕೃಷಿಗೆ ಒತ್ತು ಕೊಡುತ್ತಿದ್ದ ವಿವಿಯು ದಿಢೀರನೇ ಕುಲಾಂತರಿ ಬದನೆಯತ್ತ ಒತ್ತು ಕೊಟ್ಟಿರುವುದು ಯಾಕೆ? ಬಹುಶಃ ಫಂಡಿಂಗ್ ಹೆಚ್ಚು ಬರುತ್ತದೆಂಬ ಕಾರಣಕ್ಕಾಗಿ ನೈಸರ್ಗಿಕ ಕೃಷಿಯನ್ನು ಕೈಬಿಟ್ಟು, ಬಿಟಿ ಹಿಂದೆ ಬಿದ್ದಿದ್ದಾರೆ' ಎಂದು ಕುಮಾರಸ್ವಾಮಿಯವರು ಛೇಡಿಸುತ್ತಾರೆ.

ಬೀಜಸಂರಕ್ಷಣೆಯ ವಿಧಿವಿಧಾನಗಳು ನಮ್ಮಲ್ಲಿ ಪಾರಂಪರಿಕ. ಕುಲಾಂತರಿ ಹೊಲಕ್ಕೆ ನುಗ್ಗಿತೆಂದಾದರೆ, ಕಂಪೆನಿಗಳು ನೀಡುವ ಲ್ಯಾಬ್ ತಯಾರಿಯ ದುಬಾರಿ ವೆಚ್ಚದ ಬೀಜಕ್ಕೆ ಕೈಯೊಡ್ಡಬೇಕು. ಬೀಜವನ್ನು ಸಂರಕ್ಷಿಸುವಂತಿಲ್ಲ. ಸಂರಕ್ಷಿಸಿದರೂ ಅವು ಮೊಳಕೆಯೊಡೆವ ಸಾಮಥ್ರ್ಯ ಹೊಂದಿರುವುದಿಲ್ಲ! ಒಂದು ವೇಳೆ ಬೀಜಗಳನ್ನು ಸಂರಕ್ಷಿಸಿದರೂ ಅವು ಕಾನೂನು ಬಾಹಿರ. ಕೈಕೋಳ ತೊಡಿಸಿ ಕತ್ತಲಕೋಣೆಯ ಶಿಕ್ಷೆ ಕಾದಿದೆ!

ಸ್ಥಳೀಯ ತಳಿಗಳ ರಕ್ಷಣೆಗಾಗಿ ಈಗಾಗಲೇ 'ಬದನೆ ಮೇಳ'ಗಳು ನಡೆದಿವೆ. ರೈತರಿಗೆ ಅರಿವನ್ನು ಮೂಡಿಸುವ ಕೆಲಸವಾಗಿದೆ. ಮಧ್ಯಪ್ರದೇಶ, ಉತ್ತರಾಂಚಲ, ಕೇರಳ, ತಮಿಳುನಾಡು, ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳ, ಚತ್ತೀಸ್ಗಡ ರಾಜ್ಯಗಳು ಬಿಟಿಯನ್ನು ವಿರೋಧಿಸಿವೆ. ಕನರ್ಾಟಕ ಮಾತ್ರ ಚಾದರ ಸರಿಸಿ ಆಕಳಿಸುತ್ತಾ ಎದ್ದಿದೆಯಷ್ಟೇ!

'ಬಿಟಿ ಬದನೆಯನ್ನು ವಾಣಿಜ್ಯಿಕ ಉದ್ದೇಶಕ್ಕೆ ಅನುಮತಿ ನೀಡಿದರೆ, ಹೀಗೆ ಕುಲಾಂತರಗೊಂಡ ಟೊಮ್ಯಾಟೋ, ಮೆಕ್ಕೆಜೋಳ, ಬೆಂಡೆಕಾಯಿ, ಪಪಾಯ ಮುಂತಾದ ಐವತ್ತಾರು ಪ್ರಯೋಗನಿರತ ತಳಿಗಳು ಭಾರತದ ಹೊಲಗಳಿಗೆ ನುಗ್ಗಲಿವೆ' ಎನ್ನುವ ಕೃಷ್ಣಪ್ರಸಾದ್, 'ಭಾರತದಲ್ಲಿ ಆಹಾರ ಬೆಳೆಗಳನ್ನು ತಮ್ಮ ಸ್ವಾಮ್ಯಕ್ಕೆ ಕಸಿದುಕೊಳ್ಳುವ ವ್ಯವಸ್ಥಿತ ಹುನ್ನಾರ' ಎಂದು ಎಚ್ಚರಿಸುತ್ತಾರೆ.
ಕೇಂದ್ರ ಸರಕಾರವು ಬಿಟಿ ವಿರುದ್ಧ ಎದ್ದಿರುವ ವಿರೋಧವನ್ನು ವಿಮರ್ಶೆ ಮಾಡಲು ದೇಶದ ಏಳು ಕಡೆಗಳಲ್ಲಿ 'ಅಹವಾಲು ಆಲಿಕೆ'ಯನ್ನು ಹಮ್ಮಿಕೊಂಡಿದೆ. ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಗುಡ್ ಶೆಫಡರ್ ಆಡಿಟೋರಿಯಂನಲ್ಲಿ ಇದೇ ಫೆ.೧ ರಂದು ಅಹವಾಲು ಆಲಿಕೆ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಜೈರಾಂ ರಮೇಶ್ ಖುದ್ದಾಗಿ ಭಾಗವಹಿಸುತ್ತಾರೆ.

'ರೈತರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದರಂತೆ ನಮ್ಮ ಸರಕಾರ ನಡೆಯುತ್ತದೆ' ರಾಜ್ಯ ತೋಟಗಾರಿಕಾ ಸಚಿವ ಉಮೇಶ್ ಕತ್ತಿಯವರ ಆಶ್ವಾಸನೆಯೇನೋ ಸಿಕ್ಕಿದೆ. ನಮ್ಮ ಸಿಎಂ ಕೂಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ಕೊಟ್ಟಿದ್ದಾರೆ!
'ಬಿಟಿ ಬದನೆ ತಂತ್ರಜ್ಞಾನವನ್ನು ರೈತರು ಕೇಳಿಲ್ಲ. ಕಂಪೆನಿಗಳಿಗೆ ನೆಲೆಯೂರಲು ಜಾಗಕೊಟ್ಟು ರೈತರ ಜೀವನದೊಂದಿಗೆ ಚೆಲ್ಲಾಟವಾಡುವ ಯಾವುದೇ ತಂತ್ರಜ್ಞಾನ ನಮಗೆ ಬೇಕಿಲ್ಲ. ಭಾರತ ಬಿಟಿಮುಕ್ತ ದೇಶವಾಗಬೇಕು' ಎನ್ನುವ ಆಶಯ ಕೋಡಿಹಳ್ಳಿ ಚಂದ್ರಶೇಖರ್ ಅವರದು. ನೋಡೋಣ. ಇದು ರೈತರ ದನಿ. ಇದಕ್ಕೆ ಭಿನ್ನವಾಗಿ ಸಂಶೋಧಕರು-ವಿಜ್ಞಾನಿಗಳ ಸಿದ್ಧ ಉತ್ತರಗಳು ಇದ್ದೇ ಇರುತ್ತವಲ್ಲಾ!

(ಚಿತ್ರ ಕೊಡುಗೆ : ಜಿ ಕೃಷ್ಣಪ್ರಸಾದ್)

Saturday, January 16, 2010

ಹಳ್ಳಿಯಲ್ಲೂ 'ಹಳ್ಳಿಹಬ್ಬ'!



'ಐದು ಸಾವಿರ ರೂಪಾಯಿಗೆ ನಾಯಿ ಖರೀದಿ ಮಾಡ್ತೀರಾ. ಎರಡು ಸಾವಿರ ಕೊಟ್ಟು ದನ ಸಾಕ್ಬಾರ್ದಾ' - ಗವ್ಯ ಉತ್ಪನ್ನಗಳ ಮಳಿಗೆಯಿಂದ ಡಾ.ಕೃಷ್ಣರಾಜ್ ಅವರ ಮಾತು ಹಲವರಿಗೆ ಇರಿಸು-ಮುರಿಸು ಉಂಟುಮಾಡುತ್ತಿತ್ತು! ಮೂಡಿಗೆರೆ ಸನಿಹದ ದೇವವೃಂದದಲ್ಲಿ ಜರುಗಿದ (ದಶಂಬರ 27) 'ಹಳ್ಳಿ ಹಬ್ಬ'ದ ಮಳಿಗೆಗಳಲ್ಲಿ ಎದ್ದು ಕಂಡ ಮಳಿಗೆಯಿದು. ಗಂಜಲ, ಸೆಗಣಿಗಳಿಂದ ತಯಾರಿಸಲಾದ ವಿವಿಧ ಉತ್ಪನ್ನಗಳ ಪ್ರಾತ್ಯಕ್ಷಿಕೆ-ಮಾಹಿತಿ.

'ಸೊಳ್ಳೆ ಬರುತ್ತೇಂತ ವಿಷದ ಕಾಯಿಲ್ ಉರಿಸಿ ಆರೋಗ್ಯ ಹಾಳ್ಮಾಡಿಕೊಳ್ತೀರಾ. ಇಲ್ಲಿದೆ ನೋಡಿ - ಸೆಗಣಿ ಮತ್ತು ಸೊಪ್ಪುಗಳಿಂದ ತಯಾರಿಸಿದ ನೈಸರ್ಗಿಕ ಕಾಯ್ಲ್' ಎನ್ನುತ್ತಾ ಬೆರಣಿಯನ್ನು ಎತ್ತಿ ತೋರಿಸಿದರು. ಜೀವಾಮೃತ, ಉಣ್ಣೆ ನಿಯಂತ್ರಣ, ದೇಸೀ ಯೂರಿಯಾ ಗೊಬ್ಬರ, ಗೋಮಯ ಹುಡಿ, ಅಮೃತಜಲ, ಮಡಕೆ ಗೊಬ್ಬರ, ಪಂಚಗವ್ಯ.. ಹೀಗೆ ಸುಲಭ ಲಭ್ಯ- ಸುಲಭ ಗ್ರಾಹ್ಯ ಮಾಹಿತಿ. ಬರೆದು ಕೊಳ್ಳಲು ಅನುಕೂಲವಾಗುವಂತೆ ಪ್ಲೆಕ್ಸಿಗಳು. ಕೃಷ್ಣಮೂರ್ತಿಯವರ 'ಮನದ ಮಾತು' ಅನಾವರಣಗೊಳ್ಳುತ್ತಿತ್ತು.
'ಈ ಪ್ರದೇಶಕ್ಕೆ ಹಳ್ಳಿ ಹಬ್ಬ ಎಂಬುದೇ ಹೊಸದು. ಕಾಫಿ ಕೃಷಿಕರು ಕೃಷಿಮೇಳ, ಸಭೆ ಅಂತ ಹೋಗುವುದೇ ಕಡಿಮೆ. ಬಂದವರಲ್ಲಿ ಕೃಷಿ ಸಮಸ್ಯೆಗಳಿಗೆ ಎಲ್ಲೋ ಉತ್ರ ಸಿಗುತ್ತೆ ಅಂತ ನಿರೀಕ್ಷೆಯಿತ್ತು. ಇದು ಹಳ್ಳಿಯಲ್ಲೇ ಹಳ್ಳಿಹಬ್ಬ ಮಾಡುವ ಉದ್ದೇಶ. ನಗರಗಳ ಕೃಷಿಮೇಳಗಳು ಹಳ್ಳಿಗರನ್ನು ತಲಪುವುದೇ ಇಲ್ವಲ್ಲ' ಹಬ್ಬದ ರೂವಾರಿಯಲ್ಲೊಬ್ಬರಾದ ಜಯರಾಮ ದೇವವೃಂದ ಹಬ್ಬದಲ್ಲಿ ಮಾತಿಗೆಳೆದರು.

ಸರಕಾರಿ ಪ್ರಾಯೋಜಿತ ಕೃಷಿಮೇಳಗಳಿಗೂ, ಈ ಹಳ್ಳಿ ಹಬ್ಬಕ್ಕೂ ಏನು ವ್ಯತ್ಯಾಸ? 'ಅಲ್ಲಿ ಕಾಳಜಿ ಕಡಿಮೆ ಇರುತ್ತೆ. ಇಲ್ಲೀ ಪ್ರತೀ ನಿಮಿಷಕ್ಕೂ ಬೆಲೆ ಇರುತ್ತೆ' ಒಟ್ಟೂ ನೋಟವನ್ನು ಕಟ್ಟಿಕೊಟ್ಟರು ಪತ್ರಕರ್ತ ಅಚ್ಚನಹಳ್ಳಿ ಸುಚೇತನ.

ಕೃಷಿಯಲ್ಲಿಂದು ಸಮಸ್ಯೆಗಳೆಷ್ಟಿಲ್ಲ? ಸಭೆ, ಮದುವೆಗಳಲ್ಲಿ ತಲ್ಲಣಗಳದ್ದೇ ಮಾತುಕತೆ. 'ಇವಕ್ಕೆ ಪರಿಹಾರ ಕಂಡುಹಿಡಿವ ಪ್ರಯತ್ನ ಹಳ್ಳಿಹಬ್ಬದಲ್ಲಾಗಬೇಕು' ಎಂಬ ನಿರೀಕ್ಷೆ ಎನ್ನುತ್ತಾರೆ ದಿನೇಶ್ ದೇವವೃಂದ. ಕಳೆಕೊಚ್ಚುವ, ಹಾಲು ಕರೆಯುವ, ನೇಜಿ ನೆಡುವ, ಕಾಫಿ ಪಲ್ಪರ್ ಯಂತ್ರಗಳು ಹೆಚ್ಚು ಕೃಷಿಕರನ್ನು ಸೆಳೆದಿತ್ತು.

ಹಳ್ಳಿತಿಂಡಿಗಳು - ಹಬ್ಬದ ಹೈಲೈಟ್ಸ್. ಮರೆಯಾದ, ಮರೆಯಾಗುತ್ತಿರುವ ಆರುವತ್ತು ವಿಧದ ತಿಂಡಿಗಳು ಹೊಟ್ಟೆ ತಂಪುಮಾಡಿದ್ದುವು. ಕೆಂಜಿಗೆ ಕುಡಿ ಚಟ್ನಿ, ಕುಂಬಳಕಾಯಿ ಚಟ್ನಿ, ನುಗ್ಗೆಸೊಪ್ಪಿನ ಚಟ್ನಿ, ಸುರುಳಿ ಸೊಪ್ಪಿನ ಚಟ್ನಿ, ಸಿಹಿ ಸೋರೆಕಾಯಿ ಹಲ್ವ, ಅಂಟುಸೊಪ್ಪು ಹಲ್ವ. ಹೀಗೆ.

'ನೋಡಿ.. ಜ್ವರ-ಶೀತ ಬಂದಾಗ ಸೇವಿಸುವ ಹುಡಿ. ಇದರಲ್ಲಿ ಬೇವಿನಸೊಪ್ಪು, ಹಸಿಶುಂಠಿ, ಬೆಲ್ಲ, ಚಕ್ಕೆ, ಲವಂಗ, ಜೀರಿಗೆ, ನಾಟಿ ತುಪ್ಪ, ಜೇನು, ಬೆಳ್ಳುಳ್ಳಿ ಇವೆ. ನೀವೇ ಮನೆಯಲ್ಲಿ ಮಾಡಿಕೊಳ್ಳಬಹುದು' ಎನ್ನುತ್ತಾ ಕೆ.ಎಂ.ಅರುಣಾಕ್ಷಿಯವರು ಒಂಚೂರು ಹುಡಿಯನ್ನು ಅಂಗೈಗೆ ಹಾಕಿದರು. 'ಸಕ್ಕರೆ ಖಾಯಿಲೆ ಇದ್ದವರು ಕರಿಕೆಸುವಿನ ದಂಟು ತಿನ್ನಿ' ಎಂಬ ಬರೆಹವನ್ನು ಕೆಲವರು ನೋಟ್ಸ್ ಮಾಡಿಕೊಳ್ಳುತ್ತಿದ್ದರು.

ಹಂತೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನೆರವಿನೊಂದಿಗೆ ಬಣಕಲ್ ವಿಮುಕ್ತ ಗ್ರಾಮಾಭಿವೃದ್ಧಿ ಸಂಘವು ಹಳ್ಳಿ ರುಚಿಯನ್ನು ಪಾಕಕ್ಕಿಳಿಸಿದೆ. 'ಮೆನು ನಾವೇ ಒದಗಿಸಿದೆವು. ಹೊಸದಾದ ರುಚಿಯನ್ನು ಕೈಬಿಡುವಂತೆ ಸೂಚಿಸಿದ್ದೆವು. ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ' ಎನ್ನುತ್ತಾರೆ ಬ್ಯಾಂಕಿನ ಅಧ್ಯಕ್ಷ ದಿನೇಶ್. ಮಧ್ಯಾಹ್ನದ ಹೊತ್ತಿಗೆ ರುಚಿಗಳೆಲ್ಲಾ ಹೊಟ್ಟೆ ಸೇರಿದ್ದುವು!

ಇನ್ನೂರು ವಿಧದ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಿದ 'ತೈಲ' ಹಬ್ಬದ ಕೊಡುಗೆ. ಆಯುರ್ವೇದ ವೈದ್ಯ ಡಾ. ಸುಬ್ರಹ್ಮಣ್ಯ ಭಟ್ ಅವರ ಸಂಶೋಧನೆ. 'ಸಾಕಷ್ಟು ಮಂದಿ ತೈಲದತ್ತ ಆಕರ್ಷಿತರಾಗಿದ್ದಾರೆ. ಮೈ-ಕೈ ನೋವು ಶೀಘ್ರ ಶಮನವಾಗುತ್ತದೆ. ನಾನೇ ಸ್ವತಃ ಬಳಸಿದ್ದೇನೆ' ಎನ್ನುತ್ತಾರೆ ದಿನೇಶ್. ಮುಂದಿನ ದಿನಗಳಲ್ಲಿ ಮಾರುಕಟ್ಟೆ ಮಾಡುವ ಯೋಜನೆ.

ಐವತ್ತಕ್ಕೂ ಮಿಕ್ಕಿ ಮಳಿಗೆಗಳು. ಬಾಳೆಹೊನ್ನೂರು ಸನಿಹದ ಭಾಗ್ಯದೇವ್ ಅವರ ರೆಡಿಮೇಡ್ ಮನೆಗಳ ಮಾದರಿಯನ್ನು ನೋಡಿದಷ್ಟೂ ಸಾಲದು. ಫಾರ್ಮ್ ಹೌಸ್, ಕಾರ್ಮಿಕರ ಕೊಠಡಿ, ಅತಿಥಿ ಗೃಹ, ತಾರಸಿ ಮೇಲೆ ರೂಪಿಸಿದ ಮಹಡಿ.. ಹೀಗೆ ಪೋರ್ಟೇಬಲ್ ತಯಾರಿಗಳು ಅವರ ಕೈಯಲ್ಲಿತ್ತು.

'ಕೃಷಿಕ' ಪತ್ರಿಕೆಯು ಆಯೋಜಿಸಿದ ಹಬ್ಬದಲ್ಲಿ ವಿವಿಧ ವಿಷಯಗಳ ಕುರಿತು ತಜ್ಞರಿಂದ ಮಾಹಿತಿ ಮತ್ತು ಇಬ್ಬರು ಕಾಫಿ ಕೃಷಿಕರಿಗೆ ಪ್ರಶಸ್ತಿ ಪ್ರದಾನ. ಸಕಲೇಶಪುರದ ಹಂಜುಗೊಂಡನಹಳ್ಳಿಯ ನರೇಶ್ ಅವರದು ಸಮಗ್ರ ಕೃಷಿ. ರೊಬಸ್ಟಾ ಚೆರಿ ಕಾಫಿಯಲ್ಲಿ ಹೆಚ್ಚು ಇಳುವರಿ ಪಡೆದವರು. ಇನ್ನೊಬ್ಬರು ಪಂಡರಹಳ್ಳಿಯ ಚೆಂಗಪ್ಪ. ಒಂದೆಕ್ರೆಯಲ್ಲಿ ಹತ್ತು ಕ್ವಿಂಟಾಲ್ ಅರೆಬಿಕಾ ಕಾಫಿ ಇಳುವರಿ ಪಡೆದ ಕೃಷಿಕರು.

'ಹಳ್ಳಿಯಲ್ಲಿ ಈ ತರಹದ ಹಬ್ಬ ಹೊಸತು. ಎರಡೂವರೆ ಸಾವಿರ ಮಂದಿಗೆ ವ್ಯವಸ್ಥೆ ಮಾಡಿದ್ವಿ. ಜನರ ಪ್ರೋತ್ಸಾಹ ಇಷ್ಟೊಂದು ರೀತಿಯಲ್ಲಿ ಬರುತ್ತೆ ಅಂತ ಊಹಿಸಿರಲಿಲ್ಲ' ಸಂತಸ ಹಂಚಿಕೊಳ್ಳುತ್ತಾರೆ ಜಯರಾಮ್. ಈ ಹಬ್ಬಕ್ಕಾಗಿ ಆರು ತಿಂಗಳ ಮೊದಲೇ ಹಳ್ಳಿಗಳ ಬೇಟಿ, ಪ್ರಾಯೋಜಕರ ಸಂಪರ್ಕ, ಆರ್ಥಿಕ ವ್ಯವಸ್ಥೆಯ ಹೊಂದಾಣಿಕೆ.

ಎಲ್ಲಾ ವ್ಯವಸ್ಥೆ ಪೂರ್ಣಗೊಂಡು ಹಿಂದಿನ ದಿವಸ ರಾತ್ರಿ ಸುಖವಾಗಿ ನಿದ್ರಿಸಿದ ಸಂಘಟಕರಿಗೆ ಬೆಳ್ಳಂಬೆಳಿಗ್ಗೆ ಶಾಕ್! ನಾಲ್ಕು ಗಂಟೆ ಹೊತ್ತಿಗೆ ಅಬ್ಬರಿಸಿದ ಮಳೆರಾಯ! ವ್ಯವಸ್ಥೆಯೆಲ್ಲಾ ಅವ್ಯವಸ್ಥೆ. ಬರೋಬ್ಬರಿ ಜನಸಾಗರ. 'ಮಳೆಯಲ್ಲಿ ಒದ್ದೆಯಾಗಿ, ಕೈಕಾಲೆಲ್ಲ ಕೆಸರಾಗಿ ಭಾಗವಹಿಸುವುದೇ ನಿಜವಾದ ಹಳ್ಳಿಹಬ್ಬ' ಹಲವು ಕೃಷಿಕರ ಉದ್ಘಾರ. ನಮ್ಮ ವಿವಿಗಳು ಮಾಡುವ ಕೃಷಿಮೇಳಗಳಿಗೆ ಸರಿಸಾಟಿಯಾಗಿ ಹಳ್ಳಿಮೂಲೆಯಲ್ಲಿ ನಡೆದ ಹಳ್ಳಿಹಬ್ಬದ ಸಂಘಟಕರನ್ನು ಬೆನ್ನುತಟ್ಟೋಣ.
'ಹಬ್ಬದಲ್ಲಿ ಭಾಗವಹಿಸಿದ ಕೊಡಗಿನ ಕೃಷಿಕರು ಮುಂದಿನ ಬಾರಿ ಕೊಡಗಿನಲ್ಲೂ ಹಳ್ಳಿಹಬ್ಬ ಮಾಡುವ ಉಮೇದು ತೋರಿದ್ದಾರೆ' ಜಯರಾಮ್ ಅವರಿಂದ ಗುಟ್ಟು ರಟ್ಟು!

Friday, January 15, 2010

ಕರ್ಣಕುಕ್ಷಿಯ ಅಪರಾವತಾರ!

ಮಂಗಳೂರಿನಿಂದ ರಾಜಧಾನಿಗೆ ರಾತ್ರಿ ಒಂಭತ್ತೂವರೆಗೆ ಬಿಡುವ ವೋಲ್ವೋ ಬಸ್. ಪುತ್ತೂರು ಟಿಕೇಟ್ ತೆಗೆದು ಕುಳಿತಿದ್ದೆ. ಹೊರಗಾಳಿ, ಸದ್ದು ಒಳಪ್ರವೇಶವಿಲ್ಲವಲ್ಲಾ - ಭಾಗಶಃ ನಿಶ್ಶಬ್ಧ! ಮನಸ್ಸೂ ಕೂಡಾ! ಎಂಭತ್ತಮೂರು ರೂಪಾಯಿಯ ಟಿಕೇಟ್ ಕೈಯಲ್ಲಿ ಭದ್ರವಾಗಿತ್ತು!

ಒಂದು ಕ್ಷಣ. 'ಚಲನವಾಣಿ'ಗಳ (ಮೊಬೈಲು, ಕರ್ಣಕುಕ್ಷಿ, ಮಾತಿನ ಯಂತ್ರ) ಅವತಾರ ಶುರು. ಮೂವತ್ತು ಮಂದಿಯಿದ್ದಿರಬೇಕು. ಎಲ್ಲರ ಕೈಯಲ್ಲೂ ಮಾತಿನ ಯಂತ್ರ. ಎಲ್ಲರ ಹೆಬ್ಬರಳುಗಳು ಬ್ಯುಸಿ! ಬಸ್ಸಿನ ಲೈಟ್ ಆರಿಸಿದರೂ, ಬಸ್ಸೊಳಗೆ ಬಣ್ಣ ಬಣ್ಣದ ಬೆಳಕು!
ಇನ್ನು ರಿಂಗ್ಟೋನ್ಗಳು. ಸಾತ್ವಿಕದಿಂದ ತಾಮಸದವರೆಗೆ! ಕರ್ಣಹಿತದಿಂದ ಕರ್ಣಕಠೋರದ ತನಕ! ಮೊಬೈಲಿನಲ್ಲಿ ಎಷ್ಟು ರಿಂಗ್ಟೋನ್ಗಳಿವೆ ಎಂಬ ಪರೀಕ್ಷೆಯೂ ನಡೆಯುತ್ತಿತ್ತು. ಅಬ್ಬಾ.. ಕೆಲವು ನಾಯಿ ಬೊಗಳಿದಂತೆ, ಬೆಕ್ಕ್ಕು ಕೂಗಿದಂತೆ, ನೀರು ಧರೆಗಿಳಿದಂತೆ. ಇವುಗಳನ್ನಾದರೂ ಸಹಿಸಿಕೊಳ್ಳಬಹುದು. ನನ್ನ ಪಕ್ಕದಲ್ಲೊಬ್ಬ ಕುಳಿತಿದ್ದ. ಆತನ ರಿಂಗ್ಟೋನ್ ಆಲಿಸುವುದೆಂದರೆ 'ಶತ್ರುವಿಗೂ ಬೇಡ'! ಚತುಶ್ಚಕ್ರಗಳ 'ಹಾರ್ನ್ ನಂತೆ.

ಈ ಮಧ್ಯೆ ಕೆಲವರಿಗೆ ಲಹರಿ ಹೆಚ್ಚಾಗಿ 'ಎಂಪಿತ್ರೀ' ಹಾಡುಗಳ ಭರಾಟೆ. ಮುಂಗಾರಿನಿಂದ ಜಾಕ್ಸ್ನ ತನಕ. ಕಿವಿಗಂಟಿಸುವ ಫೋನ್ ಇದ್ದಾಗಲೂ ನಾಲ್ಕು ಜನರಿಗೆ ಕೇಳಲಿ ಎಂಬ ತುಡಿತ. 'ಇವತ್ತು ಏನಾಗಿದೆ ಎಲ್ರಿಗೂ' ಕಂಡಕ್ಟರ್ ಗುಣುಗುಣಿಸುತ್ತಿದ್ದರು! ಟಿಕೆಟ್ ನೀಡಲು ಕಂಡಕ್ಟರ್ ಮಹಾಶಯ ಒಬ್ಬೊಬ್ಬರ ಮುಂದೆ ನಿಂತು ಅಂಗಲಾಚುವಂತೆ ಕಾಣುತ್ತಿತ್ತು.

ಹೀಗಿದ್ದಾಗ - ಓರ್ವ ಎಂಟೆದೆಯ ತರುಣನ ಕಿವಿಯಲ್ಲಿ ಮೊಬೈಲ್ ಅಂಟಿತ್ತು. ಮಾತನಾಡಿಕೊಂಡೇ ಟಿಕೇಟ್ ತೆಗೆದಿರಬೇಕು. ಕಂಡಕ್ಟರ್ ಚಿಲ್ಲರೆಯನ್ನು ಕೊಟ್ಟು ಲೆಕ್ಕ ಚುಕ್ತಾ ಮಾಡಿದರು. ಒಂದರ್ಧ ಗಂಟೆ ಮೊಬೈಲ್ ವಿಶ್ರಾಂತಿಯಾಯಿತು. 'ಓ ನಾನು ಟಿಕೇಟೇ ಪಡೆದಿಲ್ಲ' ಎನ್ನುತ್ತಾ ಕಂಡಕ್ಟರ್ಗೆ ಐನೂರರ ನೋಟು ನೀಡಿ 'ಬೆಂಗಳೂರು' ಅಂದ! 'ನಿಮ್ಗೆ ಆಗ್ಲೇ ಟಿಕೇಟ್ ಕೊಟ್ಟೆನಲ್ಲಾ' ಎಂದಾಗ ಆತನ ಮೋರೆ ನೋಡಬೇಕಿತ್ತು!

ಸ್ವಲ್ಪ ಹೊತ್ತು ಕಳೆಯಿತಷ್ಟೇ. ಮುಂಬದಿಯ ಸೀಟಿನಲ್ಲಿದ್ದವರು ಕಂಡಕ್ಟರ್ ಹತ್ರ ಕಾಲ್ಕೆರೆಯುತ್ತಿದ್ದರು. 'ಒಂದು ಸಾವಿರ ರೂಪಾಯಿಯ ನೋಟು ಕೊಟ್ಟಿದ್ದೇನೆ. ಚಿಲ್ರೆನೇ ಕೊಟ್ಟಿಲ್ಲ'! 'ನೋಡಿ ಸ್ವಾಮಿ, ನೀವು ಮೊಬೈಲಿನಲ್ಲೇ ಮಾತನಾಡುತ್ತಿದ್ರಿ. ಟಿಕೇಟ್, ಚಿಲ್ರೆ ಕೊಟ್ಟಿದ್ದೀನಿ. ಸ್ವಲ್ಪ ನೋಡಿ. ಯಾಕೆ ರೇಗ್ತೀರಿ' - ಕಂಡಕ್ಟರರ ಸಾತ್ವಿಕ ಮಾತು ನಿಜಕ್ಕೂ 'ಅಯ್ಯೋ' ಅನಿಸಿತು. ಬಿಪಿ ಏರದ್ದು ವಿಶೇಷ! ಮತ್ತೆ ನೋಡಿದಾಗ ಮಾತನಾಡುವ ಭರದಲ್ಲಿ ಟಿಕೇಟ್, ಚಿಲ್ರೆಯನ್ನು ಪ್ಯಾಂಟ್ ಕಿಸೆಯ ಬದಲಿಗೆ ಬ್ಯಾಗ್ಗೆ ತುರುಕಿಸಿದ್ದ. ಆತನ ಏರಿದ ಬೀಪಿ ಅಷ್ಟೇ ವೇಗವಾಗಿ ಇಳಿದಿತ್ತು.

ಇನ್ನು ಮಾತುಕತೆ. ನನ್ನ ಪಕ್ಕ ಕುಳಿತಿದ್ದನಲ್ಲಾ.. ಮಂಗಳೂರಿನ ಜ್ಯೋತಿಯಲ್ಲಿ ಸೀಟು ಹಿಡಿಯುವಾಗ ಆತನ ಕಿವಿಕಚ್ಚಿದ 'ಬ್ರಹ್ಮಕಪಾಲ'ಕ್ಕೆ ಮೋಕ್ಷವಾದುದು ಭರ್ತಿ ಅರ್ಧ ಗಂಟೆ ಬಳಿಕ! ಗುಣುಗುಣು ಮಾತು. ವರ್ತನೆಯಲ್ಲಿ ದಶಾವತಾರ - ವಿವಿಧ ರಸಗಳ ಪ್ರದರ್ಶನ.

ಸರಿ, ಅಲ್ಲಿಗೆ ಜೊಂಪು ಹತ್ತಿತು ಅಂದಾಗ - ಎದೆ ಮೆಟ್ಟಿದ ಅನುಭವ! ಹಿಂದಿನ ಸೀಟಿನ ಪುಣ್ಯಾತ್ಮನೊಬ್ಬ ಯಾರಿಗೋ ಮಾತನಾಡುತ್ತಿದ್ದ. ಅವನು ಮಾತನಾಡುತ್ತಿದ್ದನೋ, ಒದರುತ್ತಿದ್ದನೋ.. ಶಿವನೇ ಬಲ್ಲ! ಅಲ್ಲ, ಬಸ್ಸಲ್ಲಿ ಇಷ್ಟು ಜನ ಇದ್ದಾರೆ, ಆತನ ವೈಯಕ್ತಿಕ, ಕುಟುಂಬದ ವಿಚಾರವನ್ನೆಲ್ಲಾ ಕಾರುತ್ತಿದ್ದ. ಜತೆಗೆ ಬೈಗಳುಗಳ ಮಾಲೆಪಟಾಕಿ! 'ನಾಳೆ ಬಂದು ನಿನ್ನ ಏನ್ ಮಾಡ್ತೀನಿ ನೋಡ್' ಎಂಬಲ್ಲಿಗೆ ಸಂಭಾಷಣೆ ಮುಕ್ತಾಯ. ಬಸ್ ಪ್ರಯಾಣದಲ್ಲಿ ಈ ರೀತಿಯ ಕಂಠತ್ರಾಣವಿದ್ದವರು ಹಲವು ಬಾರಿ ಕಾಣಸಿಗುತ್ತಾರೆ.

ಮಂಗಳೂರಿನ ಸಿಟಿ ಬಸ್ಸಲ್ಲಿ ಪ್ರಯಾಣಿಸುತ್ತಿದ್ದೆ. ಸ್ವಲ್ಪ ಹಳೆಯ ಕಾಲದ ಬಸ್. ಓಡುವುದು ನಿಧಾನ. ಹಿಂದಿನ ಸೀಟಿನಿಂದ ಒಬ್ಬ - 'ಎಂಚಿನ ಸಾವುದ ಮಾರಾಯ. ಬಸ್ ಬಲಿಪುಜ್ಜಿ, ಗುಜರಿ ಬಸ್. ಇಂದೆನ್ ಬೇಲಿಗ್ ದೀಯರ ಆಪುಜ್ಜಾ' ಬೊಬ್ಬಿಡುತ್ತಿದ್ದ! ಈತ ಬಸ್ಸಿನ ಯಜಮಾನರಿಗೆ ಹೇಳುತ್ತಿದ್ದರೆ ಆಗುತ್ತಿತ್ತೇನೋ? ಹಿಂದಿನ ಆಸನದಲ್ಲಿ ಕುಳಿತು -ಮುಂಬದಿಯ ಸೀಟಿನವನ ಹತ್ರ ಮಾತನಾಡುವವರಿಗೆ ಪ್ರಾಯಶ್ಚಿತ್ತ ಏನಿದೆ?

ಮೊಬೈಲು ಇರುವುದೇ ಮಾತನಾಡಲು. ಆದರದು 'ಕಿರಿಕಿರಿ'ಯಾಗಬಾರದು. ಗಂಟೆಗಟ್ಟಲೆ ಮಾತನಾಡಬೇಕಿದ್ದರೆ ಬಸ್ಸಿಳಿದು ಒಂದು ಸುರಕ್ಷಿತ ಜಾಗದಲ್ಲಿ ನಿಂತು ಮಾತನಾಡಲಿ. ರೇಂಜ್ ಇಲ್ಲದಲ್ಲಿ 'ಹಲೋ..ಹಲೋ..ಕೇಣುಜಿ ಮಾರಾಯ' ಎಂದು ಬಸ್ಸಿನ ಟಾಪ್ ಹರಿದುಹೋಗುವಂತೆ ಕಿರುಚಿದರೆ ಏನು ಪ್ರಯೋಜನ? ಎಷ್ಟೋ ಮಂದಿ ತನ್ನ ವ್ಯವಹಾರ, ತನ್ನ ಶಿಸ್ತು - ಸ್ಟೇಟಸ್ ಒಂದಷ್ಟು ಜನರಿಗೆ ಗೊತ್ತಾಗಲಿ ಎಂಬುದಕ್ಕಾಗಿಯೋ ಏನೋ - ಕಂಠಕ್ಕೆ ತ್ರಾಸ ಕೊಡುತ್ತಾರೆ!

ಒಮ್ಮೆ ಹೋಟೆಲೊಂದರಲ್ಲಿ ಊಟ ಮಾಡಲು ಹೋದಾಗ - ಆಗಲೇ ಪ್ಲೇಟ್ ಮುಂದೆ ಕುಳಿತು ಒಬ್ಬ ಉಣ್ಣುತ್ತಿದ್ದ. ಕಿವಿಗೆ ಕರ್ಣಕುಕ್ಷಿಯಂಟಿತ್ತು! ಅವನೆದುರು ನಿಧಾನಕ್ಕೆ ಊಟ ಮುಗಿಸಿ, ಕೈತೊಳೆದು, ಒಂದ್ಹತ್ತು ನಿಮಿಷ ಚಹಾ ಕುಡಿಯಲೆಂದು ಕುಳಿತೆ. ಊಹೂಂ. ಅವನ ಊಟವೂ ಆಗಿಲ್ಲ, ಮಾತು ಮುಗಿದಿಲ್ಲ. ಆಗಲೇ ಭರ್ತಿ ನಲವತ್ತು ನಿಮಿಷ! 'ನನಗೆ ಮರ್ಲ್'!

ಸಮಾರಂಭಗಳನ್ನೊಮ್ಮೆ ಜ್ಞಾಪಿಸಿಕೊಳ್ಳಿ. ಕಲಾಪ ನಡೆಯುತ್ತಿರುವಾಗಲೇ 'ಮೈಮೇಲೆ ವಶ'ವಾದವರಂತೆ ಎರಡೂ ಕೈಗಳನ್ನು ಬಾಯಿಗದುಮಿ 'ಹೊರ ಓಡುವ' ಚಿತ್ರಣ. ವೇದಿಕೆಯಲ್ಲೂ ಅಷ್ಟೇ. ಭಾಷಣ ಮಾಡುತ್ತಿರುವಾಗಲೇ, 'ಒಂದ್ನಿಮಿಷ' ಅನ್ನುತ್ತಾ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ಮೊಬೈಲನ್ನು ಕಿವಿಗಂಟಿಸುತ್ತಾರೆ - ತನ್ನೆದುರಿಗೆ ಸಭಾಸದರು ಇದ್ದಾರೆ ಎಂಬುದನ್ನು ಮರೆತು! ಸಭಾ ಪ್ರೇಕ್ಷಕರಿಗೆ ಇದಕ್ಕಿಂತ ದೊಡ್ಡ ಅವಮಾನ ಬೇರಿಲ್ಲ!

ಇಂತಹ ಮೊಬೈಲ್ ಅನುಭವ ಎಲ್ಲರಿಗೂ ಆಗಿರುತ್ತದೆ. ಕೆಲವೊಮ್ಮೆ ವರ್ತನೆಗಳನ್ನು ಆಕ್ಷೇಪಿಸಿದಾಗ, 'ಮೊಬೈಲ್ ನಂದಲ್ಲವಾ' ಅಂತ ಪೆದಂಬು ಉತ್ತರ!

ಮೊಬೈಲ್ ನಮ್ಮನ್ನು ನಿಯಂತ್ರಿಸುತ್ತದೆ. ಬುದ್ದಿಯನ್ನು ಒತ್ತೆಯಿಟ್ಟಿದ್ದೇವೆ. ಒಂದು ಕ್ಷಣ ಮರೆತರೂ ಚಡಪಡಿಸುತ್ತೇವೆ. ನಾವದರ ದಾಸಾನುದಾಸರು. ಇಹ-ಪರವನ್ನು ಮರೆಸುತ್ತಿದೆ. ಕೊನೆಗೆ ಪರವೇ ಗತಿ!

Monday, January 11, 2010

ಮನೆಗಲ್ಲ, ಅಂತಕನಲ್ಲಿಗೆ!

ಇನ್ನೇನು ರೈಲು ಬರುವ ಹೊತ್ತು. ಗೇಟ್ಮ್ಯಾನ್ ರಂಗಪ್ಪ ಗೇಟ್ ಹಾಕಿ ಐದಾರು ನಿಮಿಷ ಆಯಿತು. ಎರಡೂ ಬದಿಯ ವಾಹನಗಳಿಗೆ ತಡೆ. 'ರೈಲಿನ ಕೂಗು ಕೇಳುತ್ತಿಲ್ಲ. ಇಷ್ಟು ಬೇಗ್ ಗೇಟ್ ಹಾಕಿ ಬಿಟ್ಟವ್ನೆ' ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದರು.

ರೈಲೇನೋ ಬಂತು - ಆದರದು ಕಣ್ಣಿಗೆ ಕಾಣಿಸುವಷ್ಟು ದೂರದಲ್ಲಿ ಝಂಡಾ ಊರಿತ್ತು. ಜತೆಗಿದ್ದ ಸತೀಶ್ ಹೇಳಿದರು - 'ಮಾಮ.. ರೈಲು ನಿಂತ್ಬುಟ್ಟಿದೆ. ಸ್ವಲ್ಪ ಗೇಟ್ ಮೇಲೆತ್ತು. ನಾವು ಹೋಗ್ಬಿಡ್ತೀವಿ' ಎಂದರು. 'ಅದಾಗೊಲ್ಲ. ಏನ್ರಿ.. ನನಗೋ ವಿದ್ಯೆಯಿಲ್ಲ. ವಿದ್ಯೆ ಇದ್ದ ನೀವೇ ಹೀಗ್ಮಾಡಿದ್ರೆ ಏನ್ಕತೆ. ಏನಾದ್ರೂ ಹೆಚ್ಚೂ-ಕಮ್ಮಿ ಆಗ್ಬುಟ್ರೆ! ನನ್ನ ಅನ್ನ ತೆಗೆಯೋ ಆಸೆ ನಿಮಗಿದ್ಯಾ' ಎಂದರು.

ರಂಗಪ್ಪ ಅವರ ವೃತ್ತಿ ನಿಷ್ಠೆ ಮುಂದೆ ಎಲ್ಲವೂ ಕುಬ್ಜವಾಗಿ ಕಂಡವು! ಸರಿ, ಸ್ವಲ್ಪ ಹೊತ್ತಲ್ಲಿ ರೈಲು ಹಾದು ಹೋಯಿತು. ಗೇಟಿನ ಆಚೀಚೆ ನಿಂತ ವಾಹನಗಳೆಲ್ಲಾ ಚಾಲೂ ಆಗಿ, ಎಕ್ಸಲೇಟರ್ನ 'ಧಾರಣಾ ಶಕ್ತಿ'ಯನ್ನು ಪರೀಕ್ಷೆ ಮಾಡುತ್ತಿದ್ದುವು!. ಇನ್ನೂ ಕೆಲವರು ತಂತಮ್ಮ ವಾಹನಗಳ 'ಹಾರ್ನಗೆ ಎಷ್ಟು ಕರ್ಕಶತೆ ಇದೆ ಅಂತ ಪ್ರಯತ್ನಿಸುತ್ತಿದ್ದರು. ಇಷ್ಟಾದಾಗಲೂ ಗೇಟ್ ತೆರೆಯುವ ಲಕ್ಷಣ ಕಾಣಿಸುತ್ತಿಲ್ಲ.

ಇದ್ಯಾವುದೂ ರಂಗಪ್ಪರಿಗೆ ಕೇಳಿಸುತ್ತಿರಲಿಲ್ಲ. ಯಾಕೆಂದರೆ ಅವರಿಗೆ ಗೊತ್ತಿರೋದು ರೈಲಿನ ಚುಕುಪುಕು ಶಬ್ದ ಮತ್ತು ಅದರ ಕೂಗು! ಇವೇ ಅವರಿಗೆ ಬದುಕು. ಆಗಲೇ ಭರ್ತಿ ಇಪ್ಪತ್ತು ನಿಮಿಷ ರಸ್ತೆ ಬ್ಲಾಕ್ ಆಗಿತ್ತು!

ಪಾಪ, ಸಹಸ್ರನಾಮಗಳ ಸುರಿಮಳೆ. ತಂತಮ್ಮ ಶಬ್ದ ಭಂಡಾರಗಳ ಸ್ವ-ಪರೀಕ್ಷೆ! ಯಾಕೆ ಇಷ್ಟು ತಡವಾಗುತ್ತಿದೆ - ಸತೀಶ್ ಜತೆ ಗೇಟ್ನ ಬಳಿ ಹೋಗಿ ನೋಡಿದಾಗ 59ರ ರಂಗಪ್ಪ ಗೇಟ್ ತೆರೆಯುವ-ಮುಚ್ಚುವ ತಿರುಗಣೆ ಸಾಧನದ ಹಿಡಿಯನ್ನು ತಿರುಗಿಸಲಾಗದೆ ಒದ್ದಾಡುತ್ತಾ ಬೆವರೊರೆಸಿಕೊಳ್ಳುತ್ತಿದ್ದರು. ಒಂದು - ವಯಸ್ಸಿನ ತೊಂದರೆ, ಮತ್ತೊಂದು ಸಾಧನದ ಯಾವುದೋ ಒಂದು ಭಾಗ ಕೆಟ್ಟಿತ್ತು. ಅಂತೂ ಕಷ್ಟದಲ್ಲಿ ಗೇಟ್ ತೆರೆಯಲ್ಪಟ್ಟಿತೆನ್ನಿ.

ಆಗ ನೋಡ್ಬೇಕು. ಎರಡೂ ಕಡೆಯ ವಾಹನಗಳು ಹೋಗುವ ರಭಸ. ರಂಗಪ್ಪರನ್ನು ಕೆಕ್ಕರಿಸಿ ನೋಡುವ ಕಣ್ಣುಗಳು. '.. ಮಗನೆ.. ನಿಂಗಾಕೋ ಈ ಕೆಲ್ಸ. ಬಿಟ್ಟು ಹೋಗ್ಬಾರದಾ' ಎಂದೊದರುವ ಬಿಸಿರಕ್ತದ ಹೊಂತಕಾರಿಗಳು. ಇದೆಲ್ಲವನ್ನೂ ಕೇಳಿಯೂ ಕೇಳದಂತಿರಲು ಅವರಿಗೆ ಬದುಕು ಹೇಳಿಕೊಟ್ಟಿದೆ.

ರಂಗಪ್ಪ ಕಡೂರಿನವರು. ಸಕಲೇಶಪುರ ಸನಿಹದ ಯಡೆಹಳ್ಳಿಗೆ ರೈಲ್ವೇ ಸೇವೆಗೆ ಬಂದು ಹದಿನೈದು ವರುಷವಾಯಿತು. ರೈಲು ಆಚೇಚೆ ಸಂಚರಿಸುವಾಗ ಗೇಟ್ ಹಾಕುವುದು, ಹಸಿರು ನಿಶಾನೆ ತೋರುವುದು, ರೈಲು ಹೋದ ಬಳಿಕ ಹಳಿಗೆ ಅಡ್ಡವಾಗಿ ಕೆಂಪು ವಸ್ತ್ರದ ಪರದೆಯನ್ನು ಹಾಕಿಬಿಟ್ಟರೆ ಆಯಿತು. ರೈಲು ಎಷ್ಟು ಹೊತ್ತಿಗೆ ಬರುತ್ತೆ, ಹೋಗುತ್ತೆ ಎಂಬುದು ಆಯಾಯ ಕ್ಷಣದ ಸೂಚನೆಯನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ಇವರಿಗೆ ರಾತ್ರಿಯೂ ಒಂದೇ. ಹಗಲೂ ಒಂದೆ. ಪಾಳಿ ಪ್ರಕಾರ ಡ್ಯೂಟಿ.

'ಸಾಕಾಗಿ ಹೋಯ್ತು ಬದುಕು. ರೈಲು ಸಹವಾಸನೇ ಬೇಡ. ಇನ್ನಾರು ತಿಂಗಳಲ್ಲಿ ನನ್ನ ನಿವೃತ್ತಿ. ಹಾಯಾಗಿ ಊರಲ್ಲಿರ್ತೇನೆ' ಎನ್ನುತ್ತಾರೆ ರಂಗಪ್ಪ. ಗೇಟ್ ಮುಚ್ಚುವ-ತೆರೆಯುವ ಸಾಧನದ ತಿರುಗಣೆ ಹಾಳಾದ ಬಳಿಕ ಇವರ ಕಷ್ಟಕ್ಕೆ ಸ್ಪಂದಿಸುವವರೇ ಇಲ್ಲದಂತಾಗಿದೆ.

'ವರುಷದ ಹಿಂದೆ ರೈಲ್ವೇ ಗೇಟ್ ಇದೇ ರೀತಿ ಹಾಕಿತ್ತು. ಎರಡೂ ಬದಿಗಳಲ್ಲಿ ಬ್ಲಾಕ್. ರೈಲು ಹೋದ ಬಳಿಕ ತಿರುಗಣೆಯನ್ನು ತಿರುಗಿಸಿದಾಗ ಜಾಮ್ ಆಯಿತು. ಏನೇನೂ ಮಾಡಿದರೂ ಜಪ್ಪೆನ್ನಲಿಲ್ಲ. ಒಂದು ಗಂಟೆ ಬ್ಲಾಕ್ ಆಗಿತ್ತು. ನನ್ನ ಅವಸ್ಥೆಯನ್ನು ನೋಡಿ ಊರಿನ ಕೆಲವು ಯುವಕರು ಬಂದು ಸರಿ ಮಾಡಿಕೊಟ್ಟರು. ಅಂದಿನ ಮಟ್ಟಿಗೆ ಗೇಟ್ ತೆರೆದು ನಿರಾಳವಾಯಿತು. ಆದರೆ ಮೊದಲಿನ ಸಲೀಸುತನ ಮತ್ತೆ ಬರಲಿಲ್ಲ. ಅದರ ಒಂದು ಪಾರ್ಟ್ ತುಂಡಾಗಿರಬೇಕು. ನೋಡಿ.. ಈಗ ಒದ್ದಾಟ' ಎನ್ನುವ ರಂಗಪ್ಪ, 'ಎಲ್ಲರ ಬೈಗಳು ಕೇಳುತ್ತೆ. ಅಂತವರಾರೂ ಸಹಾಯಕ್ಕೆ ಬರುತ್ತಿಲ್ಲ.' ಎಂದು ವಿಷಾದಿಸುತ್ತಾ ಕಿರುನಗೆ ಬೀರುತ್ತಾರೆ.

'ರಿಪೇರಿಗೆ ಮನವಿ ಸಲ್ಲಿಸಿ ವರುಷವಾಯಿತು. ಬಂದಾರು' ಎನ್ನುತ್ತಾರೆ. ರಂಗಪ್ಪರಿಗೆ ಕಡೂರಿನಲ್ಲಿ ಜಮೀನಿದೆ, ಕುಟುಂಬವಿದೆ. ಒಂದಿವಸ ರಜಾ ಸಿಕ್ಕಿದರೆ ಸಾಕು, ಬಸ್ಸಲ್ಲಿ ಹಾರಿ ಹೋಗಿಬಿಡುತ್ತಾರೆ! ಹಳಿಗೆ ತಾಗಿಕೊಂಡೇ ಚಿಕ್ಕ ಕೊಠಡಿ. ಅಲ್ಲೊಂದು ಬೆಂಚ್, ಬಿಂದಿಗೆ, ಲೋಟ. ಅನತಿ ದೂರದಲ್ಲಿ ಇಲಾಖೆಯದೇ ವಸತಿಗೃಹ.

ರಂಗಪ್ಪರನ್ನು 'ಮಾಮ' ಅಂತ ಪ್ರೀತಿಯಿಂದ ಸಂಬೋಧಿಸುತ್ತಿದ್ದ ಸತೀಶ್ ಹೇಳುತ್ತಾರೆ - 'ಹದಿನೈದು ವರುಷದಿಂದ ನೋಡುತ್ತಿದ್ದೇನೆ. ಒಂದಿನವೂ ರೇಗಿದವರಲ್ಲ, ಕೋಪ ಬಂದು ಹಳಿದವರಲ್ಲ. ಮಾಮ ಅಂದ್ರೆ ಸಾಕು, ಕೋಪ ಇಳಿದೋಗುತ್ತಿತ್ತು'.

ರಂಗಪ್ಪರ ಪಾಡು ಬಹುತೇಕ ಗೇಟ್ಮ್ಯಾನ್ಗಳ ಪಾಡು. ಹಳಿ ದಾಟಿ ಆಚೀಚೆ ಹೋಗುವ ಪ್ರಯಾಣಿಕರಿಗೆ ಇವರ ಬದುಕಿನ ಹಳಿಯನ್ನು ನೋಡಲು ಪುರುಸೊತ್ತೆಲ್ಲಿದೆ. ಗೇಟ್ ತೆಗೆಯಲು ಒಂದು ಸೆಕೆಂಡ್ ತಡವಾದಾಗ ರಕ್ತದೊತ್ತಡ ಏರುತ್ತದೆ! ಒಂದು ವೇಳೆ ನಮ್ಮ ಒತ್ತಡ ನೋಡಿ ಗೇಟ್ ತೆಗೆದ ಅಂತಿಟ್ಟುಕೊಳ್ಳೋಣ - ಆಗ ನಮ್ಮ ಪ್ರಯಾಣ ಮನೆಗಲ್ಲ, ಅಂತಕನಲ್ಲಿಗೆ!

Saturday, January 9, 2010

'ಕಣ್ಣಿಗೆ ಕಂಡರೂ ಕೈಗೆ ಸಿಗುತ್ತಿಲ್ಲ್ಲ'

ಚಿಕ್ಕಮಗಳೂರು-ಹಾಸನ ಜಿಲ್ಲೆಗಳ ಸಂಧಿ ಹಳ್ಳಿ ಅಚ್ಚನಹಳ್ಳಿ. ಪತ್ರಕರ್ತ ಮಿತ್ರ ಸುಚೇತನರ ಮನೆಗೆ ತಲಪುವಾಗ ತಡರಾತ್ರಿ. ಕಾಫಿ ಬೆಳೆ ಚೆನ್ನಾಗಿದೆ, ಬೆಲೆಯೂ ತೃಪ್ತಿದಾಯಕ, ಫಸಲು ಕೈಗೆ ಬರುವುದೊಂದೇ ಬಾಕಿ - ಮಾತಿನ ಮಧ್ಯೆ ನುಸುಳಿಹೋದ ವಿಚಾರಗಳು.

ದಶಂಬರ 27 - ಬೆಳ್ಳಂಬೆಳಿಗ್ಗೆ ದಿಢೀರಾಗಿ ಗುಡುಗು-ಮಿಂಚು. ಧಾರಾಕಾರ ಮಳೆ. ಮಲೆನಾಡಲ್ವಾ. ಥಂಡಿಯೋ.. ಥಂಡಿ! ಸುಚೇತನರ ಅಣ್ಣ ಸ್ವರೂಪ್ ಟೆನ್ಶನ್ನಲ್ಲಿ ಶತಪಥ ಹಾಕುತ್ತಾ, 'ಕಾಫಿ ಕೃಷಿಕರ ಬದುಕು ಮುಗಿದೋಯ್ತು. ಈ ರೀತಿಯ ಅಕಾಲ ಮಳೆ ಬಂದರೆ ದೇವರೇ ಗತಿ. ಕೈಗೆ ಬಂದ ತುತ್ತು ಬಾಯಿಗಿಲ್ಲ' ಎಂದರು.

ಅಂದು ಶುರುವಾದ ಮಳೆಯ ಅಬ್ಬರ ಮರುಕಳಿಸುತ್ತಿದೆ. ಕಾಫಿಯನ್ನೇ ನಂಬಿದ ಕೃಷಿಕರಿಗೀಗ ನಿದ್ದೆಯಿಲ್ಲದ ರಾತ್ರಿಗಳು. ಗಿಡದಲ್ಲಿ ಕಾಫಿ ಹಣ್ಣಾಗಿದೆ, ಕೊಯ್ಯಲು ಬಾಕಿ. ಗದ್ದೆಯಲ್ಲಿ ಭತ್ತ ಕಟಾವ್ ಆಗಿದೆ, ಅಂಗಳಕ್ಕೆ ಇನ್ನೇನು ಒಂದೆರಡು ದಿನಗಳಲ್ಲಿ ತರಬೇಕು - ಈ ಎಲ್ಲಾ ಸಿದ್ಧತೆಯಲ್ಲಿದ್ದಾಗಲೇ ಮಳೆ ವಕ್ಕರಿಸಿತು.

ಪರಿಣಾಮ, ಹಣ್ಣಾದ ಕಾಫಿ ಬೀಜಗಳು ನೆಲಕಚ್ಚಿವೆ. ಗಿಡದಲ್ಲೇ ಕೆಲವು ಬಿರಿಯುತ್ತಿದೆ. ರೊಬಸ್ಟಾ ಕಾಫಿ ಗಿಡದಲ್ಲಿ ಅಕಾಲಿಕವಾಗಿ ಹೂ ಬರಲು ಸುರುವಾಗಿದೆ. ಅರೆಬಿಕಾ ಕೊಯ್ಲು ಸಮಯ ನವೆಂಬರ್ ಆದರೂ, ಕಾರ್ಮಿಕರ ಅಭಾವದಿಂದ ಅಪೂರ್ಣಗೊಂಡು ಕೊಯ್ಲಿಗೆ ಬಾಕಿಯಿತ್ತು. ಕಣ ಸೇರಿದ ಭತ್ತ ಒದ್ದೆಯಾಗಿದೆ. ಗದ್ದೆಯಿಂದ ತರಲು ಬಾಕಿಯಾದ ತೆನೆಗಳು ನೆನೆದಿವೆ. ಎಲ್ಲಾ ಆರ್ಥಿಕ ಲೆಕ್ಕಾಚಾರಗಳು ಹೊಸಪುಟ ತೆರೆದಿವೆ.

'ಕಾಫಿ ಎಲ್ಲಾ ಕಡೆ ಚೆನ್ನಾಗಿ ಬಂದಿದೆ. ಉತ್ತಮ ದರದ ನಿರೀಕ್ಷೆಯಿತ್ತು. ಆದರೆ ಬೆಳೆಕೊಯ್ಲಿನ ಸಮಯದಲ್ಲೇ ಹೀಗಾಗಬೇಕೇ. ಅಕಾಲವಾಗಿ ಮಳೆ ಬಂದಿರುವುದರಿಂದ ಗುಣಮಟ್ಟದ ಕಾಫಿಯನ್ನು ಕೊಡುವಂತಿಲ್ಲ. ಶೇ.60ರಷ್ಟು ಬೆಳೆ ಕಣ್ಣೆದುರೇ ಹಾಳಾಗುತ್ತಿದೆಯಲ್ಲಾ' - ಸಕಲೇಶಪುರ ಸನಿಹದ ಯಡೆಹಳ್ಳಿಯ ಕೃಷಿಕ ವೈ.ಸಿ ರುದ್ರಪ್ಪ ಕೊರಗು.

ಕಾಫಿ ಕೊಯ್ಯಲು ನೂರ ಇಪ್ಪತ್ತೈದು ರೂಪಾಯಿ ಸಂಬಳ ಪಡೆಯುವ ಕಾರ್ಮಿಕರು, ನೆಲಕ್ಕೆ ಉದುರಿದ ಕಾಫಿ ಆರಿಸಲು ಇನ್ನೂರು ರೂಪಾಯಿ ಕೇಳುತ್ತಿದ್ದಾರಂತೆ. 'ಒಂದು ಕಿಲೋ ಕಾಫಿ ಕೊಯ್ಯಲು ಎರಡೂವರೆ ರೂಪಾಯಿ ನೀಡಿದರೆ ಸಾಕಾಗುತ್ತಿತ್ತು. ಈಗ ನಾಲ್ಕೂವರೆಯಿಂದ ಏಳು ರೂಪಾಯಿಗೆ ಏರಿದೆ. ಆದರೂ ಜನ ಸಿಗುತ್ತಿಲ್ಲ' ದೇವವೃಂದದ ದಿನೇಶ್ ವಾಸ್ತವದತ್ತ ಬೊಟ್ಟುಮಾಡುತ್ತಾರೆ.

ಈಗ ಹೂಬಿಟ್ಟು ಕಾಯಿ ಕಚ್ಚಿದರೆ ಮುಂದಿನ ಆಗಸ್ಟ್-ಸೆಪ್ಟೆಂಬರ್ ತಿಂಗಳಿಗೆ ಹಣ್ಣಾಗುತ್ತದೆ. ಈ ಹೊತ್ತಲ್ಲಿ ಬೆರಿಬೋರರ್ ಬಂದುಬಿಡುತ್ತದೆ. ಇದನ್ನು ತಪ್ಪಿಸಲು ಜನವರಿ-ಫೆಬ್ರವರಿಯಲ್ಲಿ ಗಿಡಗಳಿಗೆ ಸ್ಟ್ರೆಸ್ ಮಾಡಲಾಗುತ್ತದೆ. ಇದರಿಂದಾಗಿ ದಶಂಬರ-ಜನವರಿಯಲ್ಲಿ ಫಸಲು ತೆಗೆಯಬಹುದು. ಅವೆಲ್ಲವೂ ಉಲ್ಟಾಪಲ್ಟಾ!

ಜಿಲ್ಲಾ ಕೇಂದ್ರ ಬ್ಯಾಂಕ್ 2008-09ರಲ್ಲಿ ಕಾಫಿ ಕ್ಷೇತ್ರಕ್ಕೆ 23ಕೋಟಿ ರೂಪಾಯಿ ಸಾಲ ನೀಡಿತ್ತು. ಮುಂದಿನ ಹಣಕಾಸು ವರ್ಷಕ್ಕೆ ಮೂವತ್ತೈದುವರೆ ಕೋಟಿ ರೂಪಾಯಿ ನೀಡುವ ಗುರಿ ಹಾಕಿಕೊಂಡಿತ್ತು. ಕಾಫಿಯ ಇಳುವರಿ ಸಮೃದ್ಧತೆಯನ್ನು ಕಂಡ ಸಾಕಷ್ಟು ರೈತರು ಬ್ಯಾಂಕಿನ ಸೌಲಭ್ಯವನ್ನು ಪಡೆಯಲು ಮಾನಸಿಕವಾಗಿ ತಯಾರಾಗಿದ್ದರು.

'ತೆಗೆದ ಸಾಲವನ್ನು ಪೂರ್ತಿ ಮರುಪಾವತಿ ಮಾಡುವ ಸಂತಸದಲ್ಲಿದ್ದೆ. ಈಗಿನ ಪರಿಸ್ಥಿತಿ ನೋಡಿದರೆ ಅಸಲು ಬಿಡಿ, ಬಡ್ಡಿ ಕಟ್ಟಲೂ ಗಿಟ್ಟುತ್ತಾ ಇಲ್ವೋ' ಎನ್ನುತ್ತಾರೆ ಕೃಷಿಕ ವಸಂತ. ಕಾಫಿ ಬೋರ್ಡ್ಗೆ ಈ ಸಲ ತೊಂಭತ್ತಾರು ಟನ್ ಕಾಫಿ ಬರಬಹುದೆಂಬ ಲೆಕ್ಕಾಚಾರ. ಆದರೆ ಪ್ರಾಕೃತಿಕ ವಿಕೋಪದಿಂದಾಗಿ ಶೇ.30ರಷ್ಟು ಕಾಫಿ ಕಳೆದುಕೊಳ್ಳಬೇಕಾಗಬಹುದು. ಬೋರ್ಡ್ ಏನೋ ಸುಧಾರಿಸಿಕೊಳ್ಳಬಹುದು. ಆದರೆ ಕೃಷಿಕರು?

ಅಡಿಕೆ ಕತೆನೇ ಬೇರೆ. ಬಿಸಿಲಿಗೆ ಒಣಹಾಕಿದ್ದ ಅಡಿಕೆಯನ್ನು ಒಳಗೆ ಪೇರಿಸುವಷ್ಟೂ ಮಳೆ ಅವಕಾಶ ಕೊಟ್ಟಿಲ್ಲ. ಹಣ್ಣಡಿಕೆ ಒಣಗದೆ ಬಣ್ಣ ಕಳೆದುಕೊಂಡು ಬೂಸ್ಟ್ ಬಂದಿವೆ.

ಹಾಸನ ಕಡೆ ಗದ್ದೆಯಲ್ಲಿ ಇಪ್ಪತ್ನಾಲ್ಕು ಗಂಟೆ ಕಟಾವ್ ಆದ ತೆನೆಗಳು ಸ್ನಾನ ಮುಗಿಸಿವೆ. ಕೆಲವು ಕಟಾವಿಗೆ ಸಿದ್ಧವಾಗಿವೆ. 'ತೆನೆ ಕಟಾವಿಗೆ ಯಂತ್ರವನ್ನೇನೋ ಬಳಸಬಹುದು. ಆದರೆ ಯಂತ್ರವನ್ನು ಗದ್ದೆಗೆ ಇಳಿಸುವುದಾದರೂ ಹೇಗೆ' ಪ್ರಶ್ನಿಸುತ್ತಾರೆ ದಿನೇಶ್.

'ಸಾರ್, ಇಂತಹ ಹೊಡೆತಗಳನ್ನು ದೊಡ್ಡ ಕೃಷಿಕರು ತಾಳಿಕೊಳ್ಳಬಹುದು. ಆದರೆ ಒಂದೆರಡು ಎಕ್ರೆ ಕೃಷಿ ಇರುವಂತಹ ನಮ್ಮಂತಹವರಿಗೆ ಶಾಶ್ವತ ಹೊಡೆತ' ಮೂಡಿಗೆರೆ ಫಲ್ಗುಣಿಯ ಕೇಶವ ಅಳಲು. 'ಐದಾರು ದಿವಸದಲ್ಲಿ ನಾಲ್ಕಿಂಚು ಮಳೆಯಾಗಿದೆ. ಕಳೆದೆಂಟು ವರುಷದಿಂದ ಇಂತಹ ಸ್ಥಿತಿ ಬಂದಿರಲಿಲ್ಲ. ದರದಲ್ಲಿ ಏರಿಳಿತವಿತ್ತಷ್ಟೇ. ಅದನ್ನೇನೋ ಹೊಂದಾಣಿಸಿಕೊಳ್ಳಬಹುದು' ಎನ್ನುತ್ತಾರೆ ಸ್ವರೂಪ್ ಅಚ್ಚನಹಳ್ಳಿ.

ಕಾಫಿ, ಭತ್ತದೊಂದಿಗೆ ಮೆಕ್ಕೆಜೋಳ, ರಾಗಿ, ಕಿತ್ತಳೆ, ಕರಿಮೆಣಸುಗಳ ಗತಿನೂ ಇದೇ! ಐದಾರು ಜಿಲ್ಲೆಗಳ ಕೃಷಿಕರ ಬದುಕು ತಲ್ಲಣಗೊಂಡಿದೆ. 'ಎಲ್ಲ ಇದ್ದೂ ಏನೂ ಮಾಡಲಾಗದ ಸ್ಥಿತಿ'. ಪರಿಹಾರ, ಪ್ರೋತ್ಸಾಹ, ಬೆಂಬಲ ಬೆಲೆಗಳ ಮಾತು ನಂತರ. ಮೊದಲಾಗಬೇಕಾದುದು - ಉದುರಿ ಬಿದ್ದ ಕಾಫಿ ಹಣ್ಣಿಗೆ ಸಂಸ್ಕರಣೆ, ಇದರಿಂದ ಗುಣಮಟ್ಟದ ಕಾಫಿ ತೆಗೆವ ಕ್ರಮ - ನಮ್ಮಲ್ಲಿ ಅಂತ ವ್ಯವಸ್ಥೆ ಇದೆಯೇ?

ಸರಕಾರಿ ಇಲಾಖೆಗಳು ಆಕಳಿಸಿಕೊಂಡು ಎದ್ದು ಬರುವಾಗ ವರುಷ ದಾಟಿರುತ್ತದೆ. ನಾಡಿನ ದೊರೆಗಳಿಗೆ ವಿಚಾರ ತಲಪುವಾಗ ಮತ್ತೊಂದು ಚುನಾವಣೆ ಬಂದಿರುತ್ತದೆ!

Tuesday, January 5, 2010

ಕಾಳುಮೆಣಸು ಬಿಡಿಸುವ ಯಂತ್ರ

ಕಾಳುಮೆಣಸಿನ ಗೊಂಚಲನ್ನು ಕಾಲಲ್ಲಿ ತುಳಿದು ಕಾಳನ್ನು ಬೇರ್ಪಡಿಸುವುದು ಪಾರಂಪರಿಕ ವಿಧಾನ. ಆದರೆ ಇದು ತುಂಬಾ ಶ್ರಮ ಬೇಡುವ ಕೆಲಸ. ನಿಟಿಲೆ ಮಹಾಬಲೇಶ್ವರ ಭಟ್ಟರು ಆವಿಷ್ಕರಿಸಿದ ಕಾಳುಮೆಣಸು ಬಿಡಿಸುವ ಯಂತ್ರ' ಈ ಕೆಲಸವನ್ನು ಹಗುರ ಮಾಡಿದೆ. ಗಂಟೆಗೆ ಇನ್ನೂರೈವತ್ತು ಕಿಲೋ ಕಾಳುಮೆಣಸನ್ನು ಆಯುವ ಸಾಮರ್ಥ್ಯ.

ಮನೆವಾರ್ತೆ ನಿಭಾಯಿಸಿಕೊಂಡು ಬಿಡುವಾದಾಗ ಆಯಬಹುದಾದಷ್ಟು ಸರಳತೆ ಯಂತ್ರದ ವಿಶೇಷ. ಅರ್ಧ ಅಶ್ವಶಕ್ತಿಯ ಮೋಟಾರು. ಎರಡು ಗಂಟೆಗೆ ಒಂದು ಯೂನಿಟ್ ವಿದ್ಯುತ್ ವೆಚ್ಚ. ಯಂತ್ರದ ತೂಕ ನಲವತ್ತೈದು ಕಿಲೋ.

ಯಂತ್ರದ ಮೇಲ್ಭಾಗದ ಹಾಪರಿನೊಳಗೆ ಕಾಳುಮೆಣಸಿನ ಗುಚ್ಛ ಹಾಕುವ ವ್ಯವಸ್ಥೆ. ಕಸ ಹೊರಬರಲು ಕಿಂಡಿ. ಯಂತ್ರದ ಪ್ರಧಾನ ಭಾಗ ರೋಲರ್. ಅತ್ತಿತ್ತ ಒಯ್ಯಲು ಚಕ್ರದ ಅಳವಡಿಕೆ.

ಕರಾವಳಿಯಲ್ಲಿ ಜನವರಿ ಕಾಳುಮೆಣಸು ಋತು. ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಾರ್ಚ್ ತನಕ. ಉಳಿದ ತಿಂಗಳುಗಳ ಬಳಕೆಗಾಗಿ ಯಂತ್ರದಲ್ಲಿ ಸಣ್ಣ ಮಾರ್ಪಾಟು ಮಾಡಿಕೊಂಡರೆ; ಕಾಯಿ ತುರಿಯಲು, ಮೆಣಸು-ಸಾಸಿವೆ ಪುಡಿ ಮಾಡುವ ಗಿರಣಿಯಾಗಿ ಬಳಸಬಹುದು. ಸಾಕಷ್ಟು ಮಂದಿ ಈ ರೀತಿಯ ವ್ಯವಸ್ಥೆ ಇಷ್ಟಪಡುತ್ತಾರೆ.

ಯಂತ್ರದ ಬೆಲೆ ಒಂಭತ್ತು ಸಾವಿರ ರೂಪಾಯಿ. ಕಳೆದೇಳು ವರುಷಗಳಲ್ಲಿ ಮೂನ್ನೂರೈವತ್ತು ಯಂತ್ರಗಳನ್ನು ಕೃಷಿಕರ ಕೈಗಿತ್ತಿದ್ದಾರೆ. ಆದೇಶ ಕೊಟ್ಟು ಒಂದು ವಾರದಲ್ಲಿ ನೀಡಿಕೆ.

'ಆವಿಷ್ಕಾರ ಮಾಡಿದ ಮೊದಲ ವರುಷವೇ ಯಂತ್ರವನ್ನು ನಕಲು ಮಾಡಿದ್ದಾರೆ. ಪೇಟೆಂಟ್ ಮಾತ್ರ ಈ ವರುಷ ಸಿಕ್ತು. ಆ ಹೊತ್ತಿಗೆ ಬೇಕಾದಷ್ಟು ನಕಲಾಗಿದೆ. ಇನ್ನು ಪೇಟೆಂಟ್ ಸಿಕ್ಕಿದರೆ ಏನು ಪ್ರಯೋಜನ' ಎಂದು ಕೇಳುತ್ತಾರೆ. 'ಬಹುತೇಕ ಸಂಶೋಧಕರ ಪಾಡಿದು. ಆವಿಷ್ಕಾರ ಪೂರ್ತಿಯಾದ ಬಳಿಕ ಎರಡೇ ತಿಂಗಳಲ್ಲಿ ಪೇಟೆಂಟ್ ಸಿಗುವ ವ್ಯವಸ್ಥೆಯಾಗಬೇಕು' ಎನ್ನುವುದು ನಿಟಿಲೆಯವರ ಆಗ್ರಹ.

ಯಂತ್ರವನ್ನು ಮೂರ್ನಾಲ್ಕು ಮಂದಿ ಕೃಷಿಕರು ಒಟ್ಟಾಗಿ ಖರೀದಿಸಿದರೆ ಕಿಸೆಗೆ ಹಗುರ. ಒಂದಿಬ್ಬರು 'ಜಾಬ್ವರ್ಕ್' ಮಾಡುತ್ತಾರಂತೆ. ಸೋಗೆ, ಹಾಳೆ, ಸೊಪ್ಪು, ಹುಲ್ಲು ಕೊಚ್ಚುವ ಯಂತ್ರ, ತೆಂಗಿನ ಕಾಯಿ ತುರಿ ಯಂತ್ರ, ಬಾಲ್ವಾಲ್ವ್ ತಿರುಗಿಸುವ ಸಾಧನ, ಗೋಣಿಚೀಲ ಹಿಡಿಯುವ ಸಾಧನ.. ಇವೇ ಮುಂತಾದುವುಗಳು ನಿಟಿಲೆಯವರ ಇತರ ಆವಿಷ್ಕಾರಗಳು. ತನ್ನೆಲ್ಲಾ ಆವಿಷ್ಕಾರಗಳ ಬ್ರಾಂಡ್ ನೇಮ್ - 'ನಿರ್ಗುಣ’.

' ರೈತ ಸಂಶೋಧಕ' ಮಹಾಬಲೇಶ್ವರ ಭಟ್ಟರ ಸಾಧನೆಗೆ ಕರ್ನಾಟಕ ಸರಕಾರವು 2006-07ರಲ್ಲಿ 'ಕೃಷಿ ಪಂಡಿತ' ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.

(ಮಹಾಬಲೇಶ್ವರ ಭಟ್ - 9448330404, 08255-267 475)

Saturday, January 2, 2010

ಮನೆಯಂಗಳದಲ್ಲಿ ಕೃಷಿ ಮಾತುಕತೆ

ಕೃಷಿಮೇಳಗಳಾಗುತ್ತವೆ, ಕಾರ್ಯಾಗಾರಗಳಾಗುತ್ತವೆ, ವಿಚಾರಗೋಷ್ಠಿಗಳಾಗುತ್ತವೆ. ಆದರೆ ರೈತನ ಮನೆಯಂಗಳದಲ್ಲಿ ಕೃಷಿಯ ಕುರಿತು, ಕೃಷಿ ಬದುಕಿನ ಪೂರ್ವಾಪರಗಳ ಕುರಿತು ಮಾತುಕತೆಗಳಾಗುವುದನ್ನು ಕೇಳಿದ್ದೀರಾ? ಅದೂ ಮಾಧ್ಯಮಗಳ ಮುಂದೆ!

ಮಾಧ್ಯಮ ಎಂದಾಕ್ಷಣ ಮುಖ್ಯವಾಹಿನಿ ಪತ್ರಿಕೆಗಳು, ವಾಹಿನಿಗಳು ಕಣ್ಣಮುಂದೆ ಬರುತ್ತದೆ. ಆದರೆ ಇಲ್ಲಿ ಪ್ರಸ್ತಾಪಿಸಿದ 'ಮಾಧ್ಯಮ'ವು ಬರವಣಿಗೆಯ ತುಡಿತವಿದ್ದ - ಈಗಷ್ಟೇ ಪತ್ರಿಕಾ ಕ್ಷೇತ್ರಕ್ಕೆ ಕಾಲಿಡುತ್ತಿರುವ ಒಂದಷ್ಟು ಮಂದಿ. ಊರಿನ ಸಮಸ್ಯೆಗಳು, ಕೃಷಿ ತಲ್ಲಣಗಳ ಕುರಿತು ಪರಸ್ಪರ ಮಾತುಕತೆಗೊಂದು ವೇದಿಕೆ.

ಶಿರಸಿ ಸನಿಹದ ಬೆಂಗಳಿ ಹಳ್ಳಿಯಲ್ಲಿ ಧಾರವಾಡ ಕೃಷಿ ಮಾಧ್ಯಮ ಕೇಂದ್ರದ ಪತ್ರಿಕೋದ್ಯಮ ತರಬೇತಿ ನಡೆಯಿತು. ಸುಮಾರು ಇಪ್ಪತ್ತೈದಕ್ಕೂ ಮಿಕ್ಕಿ ವಿದ್ಯಾರ್ಥಿಗಳು. ತೋಟದಲ್ಲಿ ಕೆಲಸ ಮಾಡುವ ರೈತರಿಂದ ತೊಡಗಿ, ಕೃಷಿ ಅಧಿಕಾರಿಗಳ ತನಕದ ವಿವಿಧ ವಯೋಮಾನ-ಉದ್ಯೋಗ ಹೊಂದಿದವರಿಲ್ಲಿ ವಿದ್ಯಾರ್ಥಿಗಳು.

ಅಂದು ಸಂಜೆ - ಊರಿನ ಆಯ್ದ ರೈತರೊಂದಿಗೆ ನೇರ ಮಾತುಕತೆ. ಬಹ್ವಂಶ ಸಾವಯವ ಕೃಷಿಕರು. ವಿಷ (ಔಷಧಿ) ಬೇಡುವಂತಹ ಶುಂಠಿಯಂತಹ ಬೆಳೆಗಳನ್ನು ಸಾವಯವದಲ್ಲಿ ಯಾಕೆ ಬೆಳೆಯಬಾರದು? ಎಂಬ ಪ್ರಶ್ನೆಗೆ ಊರವರಿಂದ ಉತ್ತರ - 'ನೀವೆಲ್ಲಾ ಮುಂದೆ ಹಳ್ಳಿ ಕಾಳಜಿಯ ಪತ್ರಕರ್ತರಾಗುವವರು. ಒಂದು ಕಾಲಘಟ್ಟದಲ್ಲಿ ಅಧಿಕ ಇಳುವರಿಗಾಗಿ ಹೈಬ್ರಿಡ್ ಬೀಜಗಳ ಪ್ರಚಾರ ನಡೆಯಿತು. ಅದನ್ನು ಉಳಿಸಿ-ಬೆಳೆಸಲು ವಿಷ ಸಿಂಪಡನೆ ಮಾಡಿ ಎಂದು ಮಾಧ್ಯಮವೂ ಹೇಳಿತು - ಅಧಿಕಾರಿಗಳೂ ಹೇಳಿದರು. ಈಗ ಹೇಳ್ತೀರಿ. ವಿಷ ಬೇಡ, ಸಾವಯವದಲ್ಲಿ ಕೃಷಿ ಮಾಡಿ ಅಂತ.'

ಬೆಂಗಳಿ, ಓಣಿಕೇರಿ ಸುತ್ತಲಿನ ಬಹುತೇಕ ರೈತರು ಸಾವಯವ ಕೃಷಿ ಮಾಡುತ್ತಾರೆ. 'ಯಾವಾಗ ಅನಾನಸು, ಶುಂಠಿ ಕೃಷಿ ಪ್ರವೇಶವಾಯಿತೋ ಅಲ್ಲಿಂದ ವಿಷದ ಸಹವಾಸ. ವಿಷ ಕುಡಿದೇ ಬೆಳೆದ ಗಿಡಕ್ಕೆ ಒಮ್ಮಿಂದೊಮ್ಮೆಲೇ ನಿಲ್ಲಿಸಿಬಿಡಲು ಆಗುತ್ತಾ? ನಿಧಾನಕ್ಕೆ ಸರಿಹೋಗುತ್ತದೆ. ಒಂದು ಗುಂಟೆಗೆ ಹದಿಮೂರು ಕ್ವಿಂಟಾಲ್ ಶುಂಠಿ ತೆಗೆದವರಿದ್ದಾರೆ. ಈ ಹೊತ್ತಲ್ಲಿ ರಾಸಾಯನಿಕ ಸಿಂಪಡಿಸಬೇಡಿ ಅಂದರೆ ಇಳುವರಿಯನ್ನು ಕೃಷಿಕ ಕಳೆದುಕೊಳ್ಳಲು ಅತನೇನು ದಡ್ಡನೇ? ಈ ನಷ್ಟವನ್ನು ತಾಳಿಕೊಳ್ಳಲು ಸ್ವಲ್ಪ ಸಮಯ ಬೆಕು. ದಿಢೀರ್ ಆಗಿ ಸಾವಯವಕ್ಕೆ ಮರಳಲು ಕಷ್ಟ'- ಕೃಷಿ ಕಷ್ಟಗಳನ್ನು ವಿವರಿಸುತ್ತಾರೆ.

ಕೃಷಿಯಲ್ಲಾಗುತ್ತಿರುವ ಬದಲಾವಣೆ, ಶೋಷಣೆಗಳ ಸಂಪೂರ್ಣ ಅರಿವಿದ್ದ ರೈತರು ಭಾವೀ ಪತ್ರಕರ್ತರಿಗೆ ಎಸೆದ ಸವಾಲು ಏನು ಗೊತ್ತೇ? ಇಂದು ಆತ್ಮಹತ್ಯೆಗಳು ನಡೆಯುತ್ತಿವೆ. ಅದನ್ನು 'ರೈತ ಆತ್ಮಹತ್ಯೆ' ಅಂತ ಬಿಂಬಿಸುತ್ತೀರಿ. ನಿಜಕ್ಕೂ ಸರೀನಾ? ಅತ್ಮಹತ್ಯೆ ಮಾಡಿಕೊಂಡವರಲ್ಲಿ ನಿಜವಾದ ರೈತರು ಯಾರು? ಯವ್ಯಾವುದೋ ಕಾರಣದಿಂದ ಸಾವಿಗೆ ಶರಣಾದರೆ ಅದನ್ನು 'ಕೃಷಿಯಲ್ಲಿ ಸೋಲಾಗಿ ಆತ್ಮಹತ್ಯೆಗೆ ಶರಣಾದ' ಅಂತ ಯಾಕೆ ಬರೆಯುತ್ತೀರಿ?' ಈ ಪ್ರಶ್ನೆಯಿಂದ ಒಂದೈದು ನಿಮಿಷ ಗಪ್ಚಿಪ್!

ಚಿಂತನೆ ಮಾಡಬೇಕಾದ ವಿಷಯ. 'ಈ ದೇಶದ ರೈತ ಕೃಷಿಯಲ್ಲಿ ಸೋಲೋದಿಲ್ಲ. ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲಾರ. ಆದರೆ ರೈತನಿಗೆ ಸಿಗುವ ಸಂಪನ್ಮೂಲಗಳನ್ನು ಸಮಯಕ್ಕೆ ಸರಿಯಾಗಿ ಕೊಡಿ. ಯಾರ್ಯಾರೋ ಮಧ್ಯಪ್ರವೇಶಿಸಿ ಆತನ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ' ಸಾವಯವ ಪ್ರತಿಪಾದಕ ನಾರಾಯಣ ರೆಡ್ಡಿಯವರು ಸಮಾರಂಭವೊಂದರಲ್ಲಿ ಹೇಳಿದ್ದರು. ಬೆಂಗಳಿಯಂಗಳದಲ್ಲಿ ಮೂಡಿ ಬಂದ ವಿಚಾರಕ್ಕೂ, ರೆಡ್ಡಿಯವರ ವಿಚಾರವನ್ನು ತಾಳೆ ಹಾಕಿದಾಗ ಎಲ್ಲೋ ನಮ್ಮ ವ್ಯವಸ್ಥೆಗಳು ಎಡವುತ್ತಿವೆ ಅನ್ನಿಸುತ್ತದೆ.

'ಭಾರತ ಬಡ ರಾಷ್ಟ್ರ, ರೈತನೇ ದೇಶದ ಬೆನ್ನೆಲುಬು. ಆತ ಅನ್ನದಾತ' ಎಂದು ಹಾಡಿ ಹೊಗಳುವುದು ಚಾಳಿ. ಉಳುವ ರೈತನ ಅಳು ಮುಖ ನಗುವುದಾದರೂ ಎಂದು? ಬೆಂಗಳಿಯ ಕೃಷಿಕ ವೆಂಕಟೇಶ್ ಹೇಳುತ್ತಾರೆ - 'ಹಳ್ಳಿಗಳಿಂದು ಸಮಸ್ಯೆಯೊಂದಿಗೆ ಬದುಕುತ್ತವೆ. ರೈತ ಮುಗ್ಧ. ಆತನಿಗೆ ಹೈಟೆಕ್ ಗೊತ್ತಿಲ್ಲ. ಆದರೆ ತನ್ನದೇ ಮಿತಿಯಲ್ಲಿ ಹೈಟೆಕ್ ಜ್ಞಾನ ಗೊತ್ತು. ಹಾಗೆಂತ ಆತ ಹಳ್ಳಿಯವ, ಅನಕ್ಷರಸ್ಥ್ಥ್ತ ಎನ್ನುತ್ತಾ ಶೋಷಣೆ ಮಾಡಬೇಡಿ'. ಆಡಳಿತ ಯಂತ್ರಕ್ಕೆ ಬೆಂಗಳಿಯ ಹಳ್ಳಿಗರ ಸಲಹೆ.

ಬೆಂಗಳಿಯಲ್ಲಿ ಬದುಕಲು ಬೇಕಾದ ಸಂಪನ್ಮೂಲ ಇದೆ. ಒಗ್ಗಟ್ಟಿದೆ. ಕೂಡಿ ಬಾಳುವ ಗುಣವಿದೆ. ಇಷ್ಟೆಲ್ಲಾ ಉತ್ತಮ ಸರಕುಗಳಿದ್ದರೂ ನಿಮ್ಮೂರಿನ ಯುವ ಜನ ನಗರ ಸೇರುತ್ತಾರಲ್ಲಾ? 'ಕೃಷಿಯಲ್ಲಿ ಗೌರವವಿಲ್ಲ ಅಂತ ನಮ್ಮ ಯುವಕರಿಗೆ ಯಾವಾಗ ಅರಿವಾಯಿತೋ, ಆಗ ಹಳ್ಳಿಯಲ್ಲಿ ಸಿಗದೇ ಇದ್ದ ಗೌರವವನ್ನು ಹುಡುಕಿ ನಗರಕ್ಕೆ ಹೋಗಿದ್ದಾರೆ ವಿನಾ ಹಳ್ಳಿಯ, ಕೃಷಿಯ ಮೇಲಿನ ಅಸಡ್ಡೆಯಿಂದಲ್ಲ'! ಹಿರಿಯರಾದ ಸುಧಾಕರ ಹೇಮಾದ್ರಿಯವರಿಂದ ವಾಸ್ತವದತ್ತ ಬೆಳಕು. 'ಹೀಗಾಗಿ ಕೃಷಿಗೆ ಗೌರವ ತರುವಂತಹ ವ್ಯವಸ್ಥೆಯಾಗಬೇಕು. ಅದಕ್ಕೆ ಮಾಧ್ಯಮವೂ ಸಹಕರಿಸಬೇಕು' ಎನ್ನಲು ಮರೆಯಲಿಲ್ಲ.

ಬೆಂಗಳಿಗೆ ರಾಜಕಾರಣ ಬಂದಿಲ್ಲ! ಹಾಗೆಂತ ವಿಭಿನ್ನ ಪಕ್ಷದವರು ಇದ್ದಾರೆ. ಅದು ಮತ ಹಾಕಲು ಮಾತ್ರ! 'ಇಲ್ಲಿ ಓಟಿಗಾಗಿ ರಾಜಕಾರಣ ನಡೆದಿಲ್ಲ' ಎನ್ನುತ್ತಾರೆ ಪ್ರಸನ್ನ ಹೆಗಡೆ. ಆಂತರಿಕ ಸಂವಹನ ಎಲ್ಲಾ ಕಡೆ ಇಂದು ಅಜ್ಞಾತವಾಗುತ್ತಿದೆ. ಅಂತಹುದಲ್ಲಿ ಬೆಂಗಳಿಯಲ್ಲಿ ಅದು ಜೀವಂತವಾಗಿದೆ.

ಕೃಷಿ ಮಾಧ್ಯಮ ಕೇಂದ್ರವು ಆಯೋಜಿಸಿದ ಈ 'ರೈತ ಮಾತುಕತೆ'ಯು ಹಳ್ಳಿ ಚಿತ್ರವನ್ನು ಅನಾವರಣಗೊಳಿಸಿತು. ಜವಾಬ್ದಾರಿ ಪತ್ರಿಕೋದ್ಯಮದ ಅಗತ್ಯವನ್ನು ಸಾರಿತು.

ಕೃಷಿ ಪಂಡಿತರ 'ಜಾಣ್ಮೆ ಕೃಷಿ'

(ಚಿತ್ರ : ಹಿರಿಯರಾದ ಪೈಲೂರು ಶ್ರೀನಿವಾಸ ರಾಯರು ಸಮಾರಂಭವೊಂದರಲ್ಲಿ ಕುರಿಯಾಜೆ ತಿರುಮಲೇಶ್ವರ ಭಟ್ಟರಿಗೆ ಪ್ರಶಸ್ತಿ ಪ್ರಧಾನ)

ಕುರಿಯಾಜೆ ತಿರುಮಲೇಶ್ವರ ಭಟ್ಟರಿಗೆ 'ಕೃಷಿ ಪಂಡಿತ' ಪ್ರಶಸ್ತಿ ಬಂತು. ಯಾವುದೇ 'ಢಾಂಢೂಂ' ಸದ್ದಾಗಲಿಲ್ಲ, ಸದ್ದು ಮಾಡಲೂ ಇಲ್ಲ. ರಾಜಧಾನಿಯಲ್ಲಿ ನೀಡುವ ಪ್ರಶಸ್ತಿ ತಾಲೂಕಿನ ಚಿಕ್ಕ ಕಾರ್ಯಕ್ರಮವೊಂದರಲ್ಲಿ ನೀಡಲಾಗಿತ್ತು. ಆಗಲೂ ನಿರ್ಲಿಪ್ತ ಭಾವ. 'ಪ್ರಶಸ್ತಿ ಬಂತೆಂದು ಉಬ್ಬಿದರೆ ಎರಡು ಕೋಡು ಜಾಸ್ತಿ ಬರುತ್ತದೆ! ತೋಟದ ಕೆಲಸ ಮಾಡುವವರಾರು' ಪ್ರಶ್ನಿಸುತ್ತಾರೆ.

ಸಮಗ್ರ ಕೃಷಿ ಪದ್ದತಿಯ ಅಳವಡಿಕೆಗೆ ಈ ಪ್ರಶಸ್ತಿ. ಭಟ್ಟರ ತೋಟದಲ್ಲಿ ಏಕ ಕೃಷಿಯಿಲ್ಲ. ಐದೆಕ್ರೆ ತುಂಬಾ ಹಲವು ವಿಧದ ಕೃಷಿಗಳು. ತನ್ನದೇ ಆದ ವಿಧಾನಗಳು. 'ಒಂದೇ ಕೃಷಿಯನ್ನು ನೆಚ್ಚಿಕೊಂಡರೆ ಬದುಕು ತಲ್ಲಣ. ಒಂದು ಕೈಕೊಟ್ಟರೆ ಇನ್ನೊಂದು ಆಧರಿಸಬೇಕು' - ಎನ್ನುವ ಕುರಿಯಾಜೆಯವರ ತೋಟ ಒಮ್ಮೆ ಸುತ್ತಾಡಿ ಬನ್ನಿ - ಯಾವುದುಂಟು, ಯಾವುದಿಲ್ಲ! ಪ್ರತೀಯೊಂದರಲ್ಲಿ ತನ್ನದೇ ಆದ ಜಾಣ್ಮೆ.

ಕೃಷಿಯ ಮಾತು ಹಾಗಾಯಿತು, ಕೃಷಿ ಅನುಭವಕ್ಕೆ ಅವರನ್ನೊಮ್ಮೆ ಮಾತನಾಡಿಸಿ. ಪ್ರತೀಯೊಂದು ಕೃಷಿಗೂ ಒಂದೊಂದು ಸಾಪ್ಟ್ವೇರ್! ಇವೆಲ್ಲಾ 'ಕೃಷಿ ತಿರುಗಾಟದಿಂದ ಬಂದ ಅನುಭವ' ಎನ್ನುತ್ತಾರೆ.

ಸಾಮಾನ್ಯವಾಗಿ - 'ಕೃಷಿಕನಿಗೆ ತಿರುಗಾಟ ಹೇಳಿಸಿದ್ದಲ್ಲ' ಅನ್ನುತ್ತೇವೆ. ಕುರಿಯಾಜೆಯವರು ಭಿನ್ನ. ಕೃಷಿ ಮೇಳವಿರಲಿ, ಕಾರ್ಯಾಗಾರವಿರಲಿ, ಕೃಷಿ ಪ್ರವಾಸವಿರಲಿ ಹಾಜರ್. ಹೀಗೆ ಹೋದಾಗ 'ಆಕಳಿಸುತ್ತಾ' ಕೂರುವ ಜಾಯಮಾನದವರಲ್ಲ! ಟೈಂಪಾಸೂ ಅಲ್ಲ!

ಸಮಾರಂಭಗಳಲ್ಲಿ ಭಾಗವಹಿಸಿದಾಗ ಸಿಕ್ಕ ಮಾಹಿತಿ, ಲಭ್ಯ ಗಿಡ-ಬೀಜಗಳತ್ತ ಆಸಕ್ತ. ಅಂತವುಗಳು ತನ್ನ ತೋಟಕ್ಕೆ ಸೂಕ್ತವೇ ಎಂಬ ಚಿಂತನೆ. ಸೂಕ್ತವೆಂದಾದರೆ ಮಾಹಿತಿಯ ಬೆನ್ನೇರುತ್ತಾರೆ. ಎಷ್ಟೇ ಶ್ರಮವಾದರೂ ತೋಟದಲ್ಲಿ ಅನುಷ್ಠಾನವಾದಾಗಲೇ ವಿಶ್ರಾಂತಿ.

'ಕೃಷಿ ತಿರುಗಾಟ ತೋರಿಕೆಗೆ ನಷ್ಟವೆಂದು ಕಂಡರೂ ಎಮ್ಮೆಗೆ ಹಾಕಿದ ಹಿಂಡಿಯಂತೆ. ಕೃಷಿಕ ಒಂದಷ್ಟು ಊರು ಸುತ್ತಬೇಕು. ಅನುಭವಗಳಿಸಿಕೊಳ್ಳಬೇಕು. ಇನ್ನೊಬ್ಬ ಕೃಷಿಕನನ್ನು ಒಪ್ಪುವ ಮನಸ್ಸನ್ನು ರೂಢಿಸಿಕೊಳ್ಳಬೇಕು' ಎನ್ನುವುದು ಅನುಭವದಿಂದ ಕಂಡ ಸತ್ಯ.

ಅವರ ಮನೆಯಾವರಣ ಹೊಕ್ಕಾಗಲೇ 'ತಿರುಗಾಟದ ಫಲ' ಗೋಚರವಾಗುತ್ತದೆ. ಅಂಗಳ ಹೊಕ್ಕಾಗ 'ರೆಸಾರ್' ಅನುಭವ. ಅಲಂಕಾರಿಕ ಗಿಡಗಳು, ವಿವಿಧ ಹೂವಿನ ಗೀಡಗಳು, ಕ್ಯಾಕ್ಟಸ್ಗಳು, ನೀರಿನ ಝರಿಗಳು, ಚಿತ್ತಾಕರ್ಷಕ ಕಲ್ಲುಗಳ ಜೋಡಣೆ' ಮನೆಯ ಅಂದವನ್ನು ಹೆಚ್ಚಿಸಿದೆ. ಎಲ್ಲವೂ ಒಪ್ಪ-ಓರಣ. ಒಂದೊಂದು ಗಿಡದ ಹಿಂದೆ ತಿರುಗಾಟದ ಕಥೆಯಿದೆ.

'ದಿವಸದಲ್ಲಿ ಒಂದು ಗಂಟೆ ಆರೈಕೆಗೆ ಮೀಸಲು. ಇಷ್ಟನ್ನು ಕೊಡಲು ಸಾಧ್ಯವಿಲ್ಲವೇ. ಮನಸ್ಸು ಬೇಕಷ್ಟೇ' ಎನ್ನುತ್ತಾರೆ. 350ಕ್ಕೂ ಮಿಕ್ಕಿದ ಕ್ಯಾಕ್ಟಸ್ ಸಂಸಾರ. ಈ ಹವ್ಯಾಸ ದುಬಾರಿ ವೆಚ್ಚದ್ದಾದರೂ, ವಿನಿಮಯ ರೂಪದ್ದೇ ಸಿಂಹಪಾಲು. ಕೆಲವು ರೊಕ್ಕದವು. ಕರಾವಳಿಯಲ್ಲಿ ಯಾಕೋ ಇದನ್ನು ಉದ್ಯಮವನ್ನಾಗಿ ಮಾಡುತ್ತಿಲ್ಲ! ನಗರದಲ್ಲಿ ಬೇಡಿಕೆಯಿದೆ.

ಹೈನುಗಾರಿಕೆ ಅಂದಾಗೆ 'ಎಷ್ಟು ಹಸುಗಳಿವೆ, ಜರ್ಸಿಯೋ-ನಾಟಿಯೋ, ಹೊತ್ತಿಗೆ ಹಾಲೆಷ್ಟು' ಎಂದು ಸಾಮಾನ್ಯವಾಗಿ ಪ್ರಶ್ನಿಸುತ್ತಾರೆ. ಭಟ್ಟರಲ್ಲಿರುವುದು ನಾಲ್ಕು ಎಮ್ಮೆಗಳು. 'ಎಮ್ಮೆಯಲ್ಲಿ ದನಗಳಿಗಿಂತ ಸೆಗಣಿ ಜಾಸ್ತಿ. ಸ್ಲರಿ ದಪ್ಪ. ಸತ್ವ ಹೆಚ್ಚು. ಅನಿಲದ ಉತ್ಪಾದನಾ ಪ್ರಮಾಣವೂ ಅಧಿಕ' ಎನ್ನುತ್ತಾರೆ.

ಸಂಕರ ತಳಿಯ ದನಗಳಿಗೆ ಹೈಟೆಕ್ ಹಟ್ಟಿ ಬೇಕು. ಶ್ರೀಮಂತ ಸಾಕಣೆ ಬೇಕು. ಎಮ್ಮೆಗಳು ಸರಳ ಹಟ್ಟಿಗೆ ಒಗ್ಗಿಕೊಳ್ಳುತ್ತವೆ. 'ಎಮ್ಮೆಯ ಹಾಲನ್ನು ಕರೆಯಲು ಕಷ್ಟ' ಎಂಬ ಭಾವನೆಯಿದೆ. ಕುರಿಯಾಜೆ ಹೇಳುತ್ತಾರೆ - ಎಮ್ಮೆಗೆ ಮೊದಲು ಆಹಾರ ನೀಡಿ. ಅವುಗಳ ಹೊಟ್ಟೆ ತುಂಬಲಿ. ನಂತರ ಹಾಲು ಕರೆಯಿರಿ'.

ಭಟ್ಟರ ಕುಟುಂಬಕ್ಕೆ ಇಪ್ಪತ್ತೆಕ್ರೆ ಸ್ಥಳ. ಕೌಟುಂಬಿಕ ವ್ಯವಸ್ಥೆಯ ಅನುಕೂಲಕ್ಕಾಗಿ ಬಾಯ್ದೆರೆಯಾಗಿ ಅಣ್ಣ-ತಮ್ಮಂದಿರು ವಿಭಾಗಿಸಿಕೊಂಡಿದ್ದಾರೆ. ತನ್ನ ಪಾಲಿಗೆ ಬಂದ ಐದೆಕ್ರೆ ಜಾಗದಲ್ಲಿನ ಕೃಷಿ ಜಾಣ್ಮೆಗಳನ್ನು ಕುಟುಂಬದವರೆಲ್ಲಾ ಪ್ರೋತ್ಸಾಹಿಸುತ್ತಿರುವುದು ಕೃಷಿಯ ಯಶಸ್ಸಿನ ಗುಟ್ಟು. ಇದರಲ್ಲಿ ಎರಡು ಎಕರೆ ಅಡಿಕೆ ತೋಟ, ಮೂರು ಎಕರೆಯಲ್ಲಿ ರಬ್ಬರ್, ಹಣ್ಣು, ತರಕಾರಿ, ತೆಂಗು. ಹುಲ್ಲು.

ತೋಟಕ್ಕೆ 'ಸ್ಲರಿ' ಮೂಲ ಗೊಬ್ಬರ. 'ಹಟ್ಟಿಗೊಬ್ಬರ' ಅಂತ ಪ್ರತ್ಯೇಕವಿಲ್ಲ! ಸ್ಲರಿಯನ್ನು ಸೋಸಿ ಅಡಿಕೆ ಮರಗಳ ಬುಡಕ್ಕೆ ಸ್ಲರಿ ಹಿಡಿಯುತ್ತಾರೆ. ವರುಷಕ್ಕೊಮ್ಮೆ ಕೋಳಿಗೊಬ್ಬರ. ರಾಸಾಯನಿಕ ಗೊಬ್ಬರಕ್ಕೆ ಕಳೆದೆರಡು ವರುಷಗಳಿಂದ ವಿದಾಯ.
ಒಂದು ಕಾಲಘಟ್ಟದಲ್ಲಿ ವೆನಿಲ್ಲಾದ ಕಾಂಚಾಣ ಝಣಝಣವಾದ ದಿವಸಗಳಿದ್ದುವು. 'ಒಂದು ಮೀಟರ್ ಬಳ್ಳಿಗೆ ಇಂತಿಷ್ಟು' ಲೆಕ್ಕಾಚಾರ. ಮಾಧ್ಯಮಗಳಲ್ಲಿ ರಂಗುರಂಗಿನ ವರದಿ. ಸಮಾರಂಭಗಳಿಗೆ ಹೋದಾಗಲೂ ವೆನಿಲ್ಲಾದ್ದೇ ಮಾತುಕತೆ. ಇಂತಹ ಹೊತ್ತಲ್ಲೂ ಕುರಿಯಾಜೆಯವರನ್ನು ವೆನಿಲ್ಲಾ ಬಳ್ಳಿ ಸುತ್ತಿಲ್ಲ!


'ನಮ್ಮ ಕೃಷಿಕರ ಅವಸ್ಥೆಯೇ ಹೀಗೆ - ರಬ್ಬರ್ಗೆ ದರವಿದೆ ಅಂದಾಗ ಅಡಿಕೆಯನ್ನು ಬದಿಗಿಟ್ಟರು. ರಬ್ಬರಿನ ಹಿಂದೆ ಹೋದರು. ಹಸಿರು ಗುಡ್ಡಗಳೆಲ್ಲಾ ನೆಲಸಮವಾದುವು' ಬೊಟ್ಟು ಮಾಡುತ್ತಾರೆ. ದಶಕಕ್ಕಿಂತಲೂ ಮೊದಲೇ ಭಟ್ಟರು ರಬ್ಬರ್ ಗಿಡ ಹಾಕಿದ್ದರು. ಈಗಿನಂತೆ ರಬ್ಬರ್ ಮಾಹಿತಿಗಳು ಬೆರಳ ತುದಿಯಲ್ಲಿಲ್ಲದ ಸಮಯ. 'ರಬ್ಬರ್ ಅನುಭವ ನನಗಂದು ಕೃಷಿ ತಿರುಗಾಟದಿಂದ ಬಂತು' ಎನ್ನುತ್ತಾರೆ.

'ಹೊಸದು ಯಾವುದು ಗೋಚರವಾದರೂ ಅದು ತನ್ನ ಸ್ಥಳದಲ್ಲಿರಬೇಕೆಂಬ ಹಂಬಲ'. ಭಟ್ಟರ ಎಲ್ಲಾ ಆಸಕ್ತಿಯ ಹಿಂದೆ ಪತ್ನಿ ಪಾವನಾ ಅವರ ಬೆಂಬಲ.