Friday, January 15, 2010

ಕರ್ಣಕುಕ್ಷಿಯ ಅಪರಾವತಾರ!

ಮಂಗಳೂರಿನಿಂದ ರಾಜಧಾನಿಗೆ ರಾತ್ರಿ ಒಂಭತ್ತೂವರೆಗೆ ಬಿಡುವ ವೋಲ್ವೋ ಬಸ್. ಪುತ್ತೂರು ಟಿಕೇಟ್ ತೆಗೆದು ಕುಳಿತಿದ್ದೆ. ಹೊರಗಾಳಿ, ಸದ್ದು ಒಳಪ್ರವೇಶವಿಲ್ಲವಲ್ಲಾ - ಭಾಗಶಃ ನಿಶ್ಶಬ್ಧ! ಮನಸ್ಸೂ ಕೂಡಾ! ಎಂಭತ್ತಮೂರು ರೂಪಾಯಿಯ ಟಿಕೇಟ್ ಕೈಯಲ್ಲಿ ಭದ್ರವಾಗಿತ್ತು!

ಒಂದು ಕ್ಷಣ. 'ಚಲನವಾಣಿ'ಗಳ (ಮೊಬೈಲು, ಕರ್ಣಕುಕ್ಷಿ, ಮಾತಿನ ಯಂತ್ರ) ಅವತಾರ ಶುರು. ಮೂವತ್ತು ಮಂದಿಯಿದ್ದಿರಬೇಕು. ಎಲ್ಲರ ಕೈಯಲ್ಲೂ ಮಾತಿನ ಯಂತ್ರ. ಎಲ್ಲರ ಹೆಬ್ಬರಳುಗಳು ಬ್ಯುಸಿ! ಬಸ್ಸಿನ ಲೈಟ್ ಆರಿಸಿದರೂ, ಬಸ್ಸೊಳಗೆ ಬಣ್ಣ ಬಣ್ಣದ ಬೆಳಕು!
ಇನ್ನು ರಿಂಗ್ಟೋನ್ಗಳು. ಸಾತ್ವಿಕದಿಂದ ತಾಮಸದವರೆಗೆ! ಕರ್ಣಹಿತದಿಂದ ಕರ್ಣಕಠೋರದ ತನಕ! ಮೊಬೈಲಿನಲ್ಲಿ ಎಷ್ಟು ರಿಂಗ್ಟೋನ್ಗಳಿವೆ ಎಂಬ ಪರೀಕ್ಷೆಯೂ ನಡೆಯುತ್ತಿತ್ತು. ಅಬ್ಬಾ.. ಕೆಲವು ನಾಯಿ ಬೊಗಳಿದಂತೆ, ಬೆಕ್ಕ್ಕು ಕೂಗಿದಂತೆ, ನೀರು ಧರೆಗಿಳಿದಂತೆ. ಇವುಗಳನ್ನಾದರೂ ಸಹಿಸಿಕೊಳ್ಳಬಹುದು. ನನ್ನ ಪಕ್ಕದಲ್ಲೊಬ್ಬ ಕುಳಿತಿದ್ದ. ಆತನ ರಿಂಗ್ಟೋನ್ ಆಲಿಸುವುದೆಂದರೆ 'ಶತ್ರುವಿಗೂ ಬೇಡ'! ಚತುಶ್ಚಕ್ರಗಳ 'ಹಾರ್ನ್ ನಂತೆ.

ಈ ಮಧ್ಯೆ ಕೆಲವರಿಗೆ ಲಹರಿ ಹೆಚ್ಚಾಗಿ 'ಎಂಪಿತ್ರೀ' ಹಾಡುಗಳ ಭರಾಟೆ. ಮುಂಗಾರಿನಿಂದ ಜಾಕ್ಸ್ನ ತನಕ. ಕಿವಿಗಂಟಿಸುವ ಫೋನ್ ಇದ್ದಾಗಲೂ ನಾಲ್ಕು ಜನರಿಗೆ ಕೇಳಲಿ ಎಂಬ ತುಡಿತ. 'ಇವತ್ತು ಏನಾಗಿದೆ ಎಲ್ರಿಗೂ' ಕಂಡಕ್ಟರ್ ಗುಣುಗುಣಿಸುತ್ತಿದ್ದರು! ಟಿಕೆಟ್ ನೀಡಲು ಕಂಡಕ್ಟರ್ ಮಹಾಶಯ ಒಬ್ಬೊಬ್ಬರ ಮುಂದೆ ನಿಂತು ಅಂಗಲಾಚುವಂತೆ ಕಾಣುತ್ತಿತ್ತು.

ಹೀಗಿದ್ದಾಗ - ಓರ್ವ ಎಂಟೆದೆಯ ತರುಣನ ಕಿವಿಯಲ್ಲಿ ಮೊಬೈಲ್ ಅಂಟಿತ್ತು. ಮಾತನಾಡಿಕೊಂಡೇ ಟಿಕೇಟ್ ತೆಗೆದಿರಬೇಕು. ಕಂಡಕ್ಟರ್ ಚಿಲ್ಲರೆಯನ್ನು ಕೊಟ್ಟು ಲೆಕ್ಕ ಚುಕ್ತಾ ಮಾಡಿದರು. ಒಂದರ್ಧ ಗಂಟೆ ಮೊಬೈಲ್ ವಿಶ್ರಾಂತಿಯಾಯಿತು. 'ಓ ನಾನು ಟಿಕೇಟೇ ಪಡೆದಿಲ್ಲ' ಎನ್ನುತ್ತಾ ಕಂಡಕ್ಟರ್ಗೆ ಐನೂರರ ನೋಟು ನೀಡಿ 'ಬೆಂಗಳೂರು' ಅಂದ! 'ನಿಮ್ಗೆ ಆಗ್ಲೇ ಟಿಕೇಟ್ ಕೊಟ್ಟೆನಲ್ಲಾ' ಎಂದಾಗ ಆತನ ಮೋರೆ ನೋಡಬೇಕಿತ್ತು!

ಸ್ವಲ್ಪ ಹೊತ್ತು ಕಳೆಯಿತಷ್ಟೇ. ಮುಂಬದಿಯ ಸೀಟಿನಲ್ಲಿದ್ದವರು ಕಂಡಕ್ಟರ್ ಹತ್ರ ಕಾಲ್ಕೆರೆಯುತ್ತಿದ್ದರು. 'ಒಂದು ಸಾವಿರ ರೂಪಾಯಿಯ ನೋಟು ಕೊಟ್ಟಿದ್ದೇನೆ. ಚಿಲ್ರೆನೇ ಕೊಟ್ಟಿಲ್ಲ'! 'ನೋಡಿ ಸ್ವಾಮಿ, ನೀವು ಮೊಬೈಲಿನಲ್ಲೇ ಮಾತನಾಡುತ್ತಿದ್ರಿ. ಟಿಕೇಟ್, ಚಿಲ್ರೆ ಕೊಟ್ಟಿದ್ದೀನಿ. ಸ್ವಲ್ಪ ನೋಡಿ. ಯಾಕೆ ರೇಗ್ತೀರಿ' - ಕಂಡಕ್ಟರರ ಸಾತ್ವಿಕ ಮಾತು ನಿಜಕ್ಕೂ 'ಅಯ್ಯೋ' ಅನಿಸಿತು. ಬಿಪಿ ಏರದ್ದು ವಿಶೇಷ! ಮತ್ತೆ ನೋಡಿದಾಗ ಮಾತನಾಡುವ ಭರದಲ್ಲಿ ಟಿಕೇಟ್, ಚಿಲ್ರೆಯನ್ನು ಪ್ಯಾಂಟ್ ಕಿಸೆಯ ಬದಲಿಗೆ ಬ್ಯಾಗ್ಗೆ ತುರುಕಿಸಿದ್ದ. ಆತನ ಏರಿದ ಬೀಪಿ ಅಷ್ಟೇ ವೇಗವಾಗಿ ಇಳಿದಿತ್ತು.

ಇನ್ನು ಮಾತುಕತೆ. ನನ್ನ ಪಕ್ಕ ಕುಳಿತಿದ್ದನಲ್ಲಾ.. ಮಂಗಳೂರಿನ ಜ್ಯೋತಿಯಲ್ಲಿ ಸೀಟು ಹಿಡಿಯುವಾಗ ಆತನ ಕಿವಿಕಚ್ಚಿದ 'ಬ್ರಹ್ಮಕಪಾಲ'ಕ್ಕೆ ಮೋಕ್ಷವಾದುದು ಭರ್ತಿ ಅರ್ಧ ಗಂಟೆ ಬಳಿಕ! ಗುಣುಗುಣು ಮಾತು. ವರ್ತನೆಯಲ್ಲಿ ದಶಾವತಾರ - ವಿವಿಧ ರಸಗಳ ಪ್ರದರ್ಶನ.

ಸರಿ, ಅಲ್ಲಿಗೆ ಜೊಂಪು ಹತ್ತಿತು ಅಂದಾಗ - ಎದೆ ಮೆಟ್ಟಿದ ಅನುಭವ! ಹಿಂದಿನ ಸೀಟಿನ ಪುಣ್ಯಾತ್ಮನೊಬ್ಬ ಯಾರಿಗೋ ಮಾತನಾಡುತ್ತಿದ್ದ. ಅವನು ಮಾತನಾಡುತ್ತಿದ್ದನೋ, ಒದರುತ್ತಿದ್ದನೋ.. ಶಿವನೇ ಬಲ್ಲ! ಅಲ್ಲ, ಬಸ್ಸಲ್ಲಿ ಇಷ್ಟು ಜನ ಇದ್ದಾರೆ, ಆತನ ವೈಯಕ್ತಿಕ, ಕುಟುಂಬದ ವಿಚಾರವನ್ನೆಲ್ಲಾ ಕಾರುತ್ತಿದ್ದ. ಜತೆಗೆ ಬೈಗಳುಗಳ ಮಾಲೆಪಟಾಕಿ! 'ನಾಳೆ ಬಂದು ನಿನ್ನ ಏನ್ ಮಾಡ್ತೀನಿ ನೋಡ್' ಎಂಬಲ್ಲಿಗೆ ಸಂಭಾಷಣೆ ಮುಕ್ತಾಯ. ಬಸ್ ಪ್ರಯಾಣದಲ್ಲಿ ಈ ರೀತಿಯ ಕಂಠತ್ರಾಣವಿದ್ದವರು ಹಲವು ಬಾರಿ ಕಾಣಸಿಗುತ್ತಾರೆ.

ಮಂಗಳೂರಿನ ಸಿಟಿ ಬಸ್ಸಲ್ಲಿ ಪ್ರಯಾಣಿಸುತ್ತಿದ್ದೆ. ಸ್ವಲ್ಪ ಹಳೆಯ ಕಾಲದ ಬಸ್. ಓಡುವುದು ನಿಧಾನ. ಹಿಂದಿನ ಸೀಟಿನಿಂದ ಒಬ್ಬ - 'ಎಂಚಿನ ಸಾವುದ ಮಾರಾಯ. ಬಸ್ ಬಲಿಪುಜ್ಜಿ, ಗುಜರಿ ಬಸ್. ಇಂದೆನ್ ಬೇಲಿಗ್ ದೀಯರ ಆಪುಜ್ಜಾ' ಬೊಬ್ಬಿಡುತ್ತಿದ್ದ! ಈತ ಬಸ್ಸಿನ ಯಜಮಾನರಿಗೆ ಹೇಳುತ್ತಿದ್ದರೆ ಆಗುತ್ತಿತ್ತೇನೋ? ಹಿಂದಿನ ಆಸನದಲ್ಲಿ ಕುಳಿತು -ಮುಂಬದಿಯ ಸೀಟಿನವನ ಹತ್ರ ಮಾತನಾಡುವವರಿಗೆ ಪ್ರಾಯಶ್ಚಿತ್ತ ಏನಿದೆ?

ಮೊಬೈಲು ಇರುವುದೇ ಮಾತನಾಡಲು. ಆದರದು 'ಕಿರಿಕಿರಿ'ಯಾಗಬಾರದು. ಗಂಟೆಗಟ್ಟಲೆ ಮಾತನಾಡಬೇಕಿದ್ದರೆ ಬಸ್ಸಿಳಿದು ಒಂದು ಸುರಕ್ಷಿತ ಜಾಗದಲ್ಲಿ ನಿಂತು ಮಾತನಾಡಲಿ. ರೇಂಜ್ ಇಲ್ಲದಲ್ಲಿ 'ಹಲೋ..ಹಲೋ..ಕೇಣುಜಿ ಮಾರಾಯ' ಎಂದು ಬಸ್ಸಿನ ಟಾಪ್ ಹರಿದುಹೋಗುವಂತೆ ಕಿರುಚಿದರೆ ಏನು ಪ್ರಯೋಜನ? ಎಷ್ಟೋ ಮಂದಿ ತನ್ನ ವ್ಯವಹಾರ, ತನ್ನ ಶಿಸ್ತು - ಸ್ಟೇಟಸ್ ಒಂದಷ್ಟು ಜನರಿಗೆ ಗೊತ್ತಾಗಲಿ ಎಂಬುದಕ್ಕಾಗಿಯೋ ಏನೋ - ಕಂಠಕ್ಕೆ ತ್ರಾಸ ಕೊಡುತ್ತಾರೆ!

ಒಮ್ಮೆ ಹೋಟೆಲೊಂದರಲ್ಲಿ ಊಟ ಮಾಡಲು ಹೋದಾಗ - ಆಗಲೇ ಪ್ಲೇಟ್ ಮುಂದೆ ಕುಳಿತು ಒಬ್ಬ ಉಣ್ಣುತ್ತಿದ್ದ. ಕಿವಿಗೆ ಕರ್ಣಕುಕ್ಷಿಯಂಟಿತ್ತು! ಅವನೆದುರು ನಿಧಾನಕ್ಕೆ ಊಟ ಮುಗಿಸಿ, ಕೈತೊಳೆದು, ಒಂದ್ಹತ್ತು ನಿಮಿಷ ಚಹಾ ಕುಡಿಯಲೆಂದು ಕುಳಿತೆ. ಊಹೂಂ. ಅವನ ಊಟವೂ ಆಗಿಲ್ಲ, ಮಾತು ಮುಗಿದಿಲ್ಲ. ಆಗಲೇ ಭರ್ತಿ ನಲವತ್ತು ನಿಮಿಷ! 'ನನಗೆ ಮರ್ಲ್'!

ಸಮಾರಂಭಗಳನ್ನೊಮ್ಮೆ ಜ್ಞಾಪಿಸಿಕೊಳ್ಳಿ. ಕಲಾಪ ನಡೆಯುತ್ತಿರುವಾಗಲೇ 'ಮೈಮೇಲೆ ವಶ'ವಾದವರಂತೆ ಎರಡೂ ಕೈಗಳನ್ನು ಬಾಯಿಗದುಮಿ 'ಹೊರ ಓಡುವ' ಚಿತ್ರಣ. ವೇದಿಕೆಯಲ್ಲೂ ಅಷ್ಟೇ. ಭಾಷಣ ಮಾಡುತ್ತಿರುವಾಗಲೇ, 'ಒಂದ್ನಿಮಿಷ' ಅನ್ನುತ್ತಾ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ಮೊಬೈಲನ್ನು ಕಿವಿಗಂಟಿಸುತ್ತಾರೆ - ತನ್ನೆದುರಿಗೆ ಸಭಾಸದರು ಇದ್ದಾರೆ ಎಂಬುದನ್ನು ಮರೆತು! ಸಭಾ ಪ್ರೇಕ್ಷಕರಿಗೆ ಇದಕ್ಕಿಂತ ದೊಡ್ಡ ಅವಮಾನ ಬೇರಿಲ್ಲ!

ಇಂತಹ ಮೊಬೈಲ್ ಅನುಭವ ಎಲ್ಲರಿಗೂ ಆಗಿರುತ್ತದೆ. ಕೆಲವೊಮ್ಮೆ ವರ್ತನೆಗಳನ್ನು ಆಕ್ಷೇಪಿಸಿದಾಗ, 'ಮೊಬೈಲ್ ನಂದಲ್ಲವಾ' ಅಂತ ಪೆದಂಬು ಉತ್ತರ!

ಮೊಬೈಲ್ ನಮ್ಮನ್ನು ನಿಯಂತ್ರಿಸುತ್ತದೆ. ಬುದ್ದಿಯನ್ನು ಒತ್ತೆಯಿಟ್ಟಿದ್ದೇವೆ. ಒಂದು ಕ್ಷಣ ಮರೆತರೂ ಚಡಪಡಿಸುತ್ತೇವೆ. ನಾವದರ ದಾಸಾನುದಾಸರು. ಇಹ-ಪರವನ್ನು ಮರೆಸುತ್ತಿದೆ. ಕೊನೆಗೆ ಪರವೇ ಗತಿ!

3 comments:

ಕೇಶವ ಪ್ರಸಾದ್.ಬಿ.ಕಿದೂರು said...

belige diyara apujjiya..haasya bharitavagide. adare vishaya ellaru yochisatakkadde.

ಸಾಗರದಾಚೆಯ ಇಂಚರ said...

ನಿಜ ಸರ್
ಆದರೆ ಮೊಬೈಲ ಗಳು ಮಾಡಿದ ಒಳ್ಳೆಯ ಕೆಲಸವನ್ನು ಒಪ್ಪತಕ್ಕದ್ದೇ ಅಲ್ಲವೇ
ಕ್ಷಣ ಮಾತ್ರದಲ್ಲಿ ದೂರದ ಸ್ನೇಹಿತನೊಂದಿಗೆ ಸಂಕಲ್ಪ ಒದಗಿಸುತ್ತವೆ
ಎಷ್ಟೋ ಕೆಲಸಗಳನ್ನು ಕುಳಿತಲ್ಲಿಯೇ ಒಂದು ಮೊಬೈಲ್ ಹಿಡಿದು ಮುಗಿಸಬಹುದು
ಆದರೆ ಇಂದು ಅದರ ದುರ್ಬಳಕೆಯೇ ಹೆಚ್ಚಾಗುತ್ತಿದೆ

Venkatakrishna.K.K. said...

ಯಾವುದೇ ಉಪಕರಣ,ಯಾರು, ಹೇಗೆ, ಯಾವಾಗ, ಯಾಕಾಗಿ, ಎಷ್ಟು ಹೊತ್ತಿಗೆ,ಎಲ್ಲಿ, ಎಷ್ಟು, ಉಪಯೋಗಿಸುತ್ತಾರೆ ಎನ್ನುವುದು,ಅವರವರ ತಿಳುವಳಿಕೆ,ಯೋಗ್ಯತೆ,ಸಭ್ಯತೆಯನ್ನು ಅವಲಂಬಿಸಿದೆ ಅಲ್ವೇ???

Post a Comment