Saturday, January 16, 2010

ಹಳ್ಳಿಯಲ್ಲೂ 'ಹಳ್ಳಿಹಬ್ಬ'!



'ಐದು ಸಾವಿರ ರೂಪಾಯಿಗೆ ನಾಯಿ ಖರೀದಿ ಮಾಡ್ತೀರಾ. ಎರಡು ಸಾವಿರ ಕೊಟ್ಟು ದನ ಸಾಕ್ಬಾರ್ದಾ' - ಗವ್ಯ ಉತ್ಪನ್ನಗಳ ಮಳಿಗೆಯಿಂದ ಡಾ.ಕೃಷ್ಣರಾಜ್ ಅವರ ಮಾತು ಹಲವರಿಗೆ ಇರಿಸು-ಮುರಿಸು ಉಂಟುಮಾಡುತ್ತಿತ್ತು! ಮೂಡಿಗೆರೆ ಸನಿಹದ ದೇವವೃಂದದಲ್ಲಿ ಜರುಗಿದ (ದಶಂಬರ 27) 'ಹಳ್ಳಿ ಹಬ್ಬ'ದ ಮಳಿಗೆಗಳಲ್ಲಿ ಎದ್ದು ಕಂಡ ಮಳಿಗೆಯಿದು. ಗಂಜಲ, ಸೆಗಣಿಗಳಿಂದ ತಯಾರಿಸಲಾದ ವಿವಿಧ ಉತ್ಪನ್ನಗಳ ಪ್ರಾತ್ಯಕ್ಷಿಕೆ-ಮಾಹಿತಿ.

'ಸೊಳ್ಳೆ ಬರುತ್ತೇಂತ ವಿಷದ ಕಾಯಿಲ್ ಉರಿಸಿ ಆರೋಗ್ಯ ಹಾಳ್ಮಾಡಿಕೊಳ್ತೀರಾ. ಇಲ್ಲಿದೆ ನೋಡಿ - ಸೆಗಣಿ ಮತ್ತು ಸೊಪ್ಪುಗಳಿಂದ ತಯಾರಿಸಿದ ನೈಸರ್ಗಿಕ ಕಾಯ್ಲ್' ಎನ್ನುತ್ತಾ ಬೆರಣಿಯನ್ನು ಎತ್ತಿ ತೋರಿಸಿದರು. ಜೀವಾಮೃತ, ಉಣ್ಣೆ ನಿಯಂತ್ರಣ, ದೇಸೀ ಯೂರಿಯಾ ಗೊಬ್ಬರ, ಗೋಮಯ ಹುಡಿ, ಅಮೃತಜಲ, ಮಡಕೆ ಗೊಬ್ಬರ, ಪಂಚಗವ್ಯ.. ಹೀಗೆ ಸುಲಭ ಲಭ್ಯ- ಸುಲಭ ಗ್ರಾಹ್ಯ ಮಾಹಿತಿ. ಬರೆದು ಕೊಳ್ಳಲು ಅನುಕೂಲವಾಗುವಂತೆ ಪ್ಲೆಕ್ಸಿಗಳು. ಕೃಷ್ಣಮೂರ್ತಿಯವರ 'ಮನದ ಮಾತು' ಅನಾವರಣಗೊಳ್ಳುತ್ತಿತ್ತು.
'ಈ ಪ್ರದೇಶಕ್ಕೆ ಹಳ್ಳಿ ಹಬ್ಬ ಎಂಬುದೇ ಹೊಸದು. ಕಾಫಿ ಕೃಷಿಕರು ಕೃಷಿಮೇಳ, ಸಭೆ ಅಂತ ಹೋಗುವುದೇ ಕಡಿಮೆ. ಬಂದವರಲ್ಲಿ ಕೃಷಿ ಸಮಸ್ಯೆಗಳಿಗೆ ಎಲ್ಲೋ ಉತ್ರ ಸಿಗುತ್ತೆ ಅಂತ ನಿರೀಕ್ಷೆಯಿತ್ತು. ಇದು ಹಳ್ಳಿಯಲ್ಲೇ ಹಳ್ಳಿಹಬ್ಬ ಮಾಡುವ ಉದ್ದೇಶ. ನಗರಗಳ ಕೃಷಿಮೇಳಗಳು ಹಳ್ಳಿಗರನ್ನು ತಲಪುವುದೇ ಇಲ್ವಲ್ಲ' ಹಬ್ಬದ ರೂವಾರಿಯಲ್ಲೊಬ್ಬರಾದ ಜಯರಾಮ ದೇವವೃಂದ ಹಬ್ಬದಲ್ಲಿ ಮಾತಿಗೆಳೆದರು.

ಸರಕಾರಿ ಪ್ರಾಯೋಜಿತ ಕೃಷಿಮೇಳಗಳಿಗೂ, ಈ ಹಳ್ಳಿ ಹಬ್ಬಕ್ಕೂ ಏನು ವ್ಯತ್ಯಾಸ? 'ಅಲ್ಲಿ ಕಾಳಜಿ ಕಡಿಮೆ ಇರುತ್ತೆ. ಇಲ್ಲೀ ಪ್ರತೀ ನಿಮಿಷಕ್ಕೂ ಬೆಲೆ ಇರುತ್ತೆ' ಒಟ್ಟೂ ನೋಟವನ್ನು ಕಟ್ಟಿಕೊಟ್ಟರು ಪತ್ರಕರ್ತ ಅಚ್ಚನಹಳ್ಳಿ ಸುಚೇತನ.

ಕೃಷಿಯಲ್ಲಿಂದು ಸಮಸ್ಯೆಗಳೆಷ್ಟಿಲ್ಲ? ಸಭೆ, ಮದುವೆಗಳಲ್ಲಿ ತಲ್ಲಣಗಳದ್ದೇ ಮಾತುಕತೆ. 'ಇವಕ್ಕೆ ಪರಿಹಾರ ಕಂಡುಹಿಡಿವ ಪ್ರಯತ್ನ ಹಳ್ಳಿಹಬ್ಬದಲ್ಲಾಗಬೇಕು' ಎಂಬ ನಿರೀಕ್ಷೆ ಎನ್ನುತ್ತಾರೆ ದಿನೇಶ್ ದೇವವೃಂದ. ಕಳೆಕೊಚ್ಚುವ, ಹಾಲು ಕರೆಯುವ, ನೇಜಿ ನೆಡುವ, ಕಾಫಿ ಪಲ್ಪರ್ ಯಂತ್ರಗಳು ಹೆಚ್ಚು ಕೃಷಿಕರನ್ನು ಸೆಳೆದಿತ್ತು.

ಹಳ್ಳಿತಿಂಡಿಗಳು - ಹಬ್ಬದ ಹೈಲೈಟ್ಸ್. ಮರೆಯಾದ, ಮರೆಯಾಗುತ್ತಿರುವ ಆರುವತ್ತು ವಿಧದ ತಿಂಡಿಗಳು ಹೊಟ್ಟೆ ತಂಪುಮಾಡಿದ್ದುವು. ಕೆಂಜಿಗೆ ಕುಡಿ ಚಟ್ನಿ, ಕುಂಬಳಕಾಯಿ ಚಟ್ನಿ, ನುಗ್ಗೆಸೊಪ್ಪಿನ ಚಟ್ನಿ, ಸುರುಳಿ ಸೊಪ್ಪಿನ ಚಟ್ನಿ, ಸಿಹಿ ಸೋರೆಕಾಯಿ ಹಲ್ವ, ಅಂಟುಸೊಪ್ಪು ಹಲ್ವ. ಹೀಗೆ.

'ನೋಡಿ.. ಜ್ವರ-ಶೀತ ಬಂದಾಗ ಸೇವಿಸುವ ಹುಡಿ. ಇದರಲ್ಲಿ ಬೇವಿನಸೊಪ್ಪು, ಹಸಿಶುಂಠಿ, ಬೆಲ್ಲ, ಚಕ್ಕೆ, ಲವಂಗ, ಜೀರಿಗೆ, ನಾಟಿ ತುಪ್ಪ, ಜೇನು, ಬೆಳ್ಳುಳ್ಳಿ ಇವೆ. ನೀವೇ ಮನೆಯಲ್ಲಿ ಮಾಡಿಕೊಳ್ಳಬಹುದು' ಎನ್ನುತ್ತಾ ಕೆ.ಎಂ.ಅರುಣಾಕ್ಷಿಯವರು ಒಂಚೂರು ಹುಡಿಯನ್ನು ಅಂಗೈಗೆ ಹಾಕಿದರು. 'ಸಕ್ಕರೆ ಖಾಯಿಲೆ ಇದ್ದವರು ಕರಿಕೆಸುವಿನ ದಂಟು ತಿನ್ನಿ' ಎಂಬ ಬರೆಹವನ್ನು ಕೆಲವರು ನೋಟ್ಸ್ ಮಾಡಿಕೊಳ್ಳುತ್ತಿದ್ದರು.

ಹಂತೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನೆರವಿನೊಂದಿಗೆ ಬಣಕಲ್ ವಿಮುಕ್ತ ಗ್ರಾಮಾಭಿವೃದ್ಧಿ ಸಂಘವು ಹಳ್ಳಿ ರುಚಿಯನ್ನು ಪಾಕಕ್ಕಿಳಿಸಿದೆ. 'ಮೆನು ನಾವೇ ಒದಗಿಸಿದೆವು. ಹೊಸದಾದ ರುಚಿಯನ್ನು ಕೈಬಿಡುವಂತೆ ಸೂಚಿಸಿದ್ದೆವು. ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ' ಎನ್ನುತ್ತಾರೆ ಬ್ಯಾಂಕಿನ ಅಧ್ಯಕ್ಷ ದಿನೇಶ್. ಮಧ್ಯಾಹ್ನದ ಹೊತ್ತಿಗೆ ರುಚಿಗಳೆಲ್ಲಾ ಹೊಟ್ಟೆ ಸೇರಿದ್ದುವು!

ಇನ್ನೂರು ವಿಧದ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಿದ 'ತೈಲ' ಹಬ್ಬದ ಕೊಡುಗೆ. ಆಯುರ್ವೇದ ವೈದ್ಯ ಡಾ. ಸುಬ್ರಹ್ಮಣ್ಯ ಭಟ್ ಅವರ ಸಂಶೋಧನೆ. 'ಸಾಕಷ್ಟು ಮಂದಿ ತೈಲದತ್ತ ಆಕರ್ಷಿತರಾಗಿದ್ದಾರೆ. ಮೈ-ಕೈ ನೋವು ಶೀಘ್ರ ಶಮನವಾಗುತ್ತದೆ. ನಾನೇ ಸ್ವತಃ ಬಳಸಿದ್ದೇನೆ' ಎನ್ನುತ್ತಾರೆ ದಿನೇಶ್. ಮುಂದಿನ ದಿನಗಳಲ್ಲಿ ಮಾರುಕಟ್ಟೆ ಮಾಡುವ ಯೋಜನೆ.

ಐವತ್ತಕ್ಕೂ ಮಿಕ್ಕಿ ಮಳಿಗೆಗಳು. ಬಾಳೆಹೊನ್ನೂರು ಸನಿಹದ ಭಾಗ್ಯದೇವ್ ಅವರ ರೆಡಿಮೇಡ್ ಮನೆಗಳ ಮಾದರಿಯನ್ನು ನೋಡಿದಷ್ಟೂ ಸಾಲದು. ಫಾರ್ಮ್ ಹೌಸ್, ಕಾರ್ಮಿಕರ ಕೊಠಡಿ, ಅತಿಥಿ ಗೃಹ, ತಾರಸಿ ಮೇಲೆ ರೂಪಿಸಿದ ಮಹಡಿ.. ಹೀಗೆ ಪೋರ್ಟೇಬಲ್ ತಯಾರಿಗಳು ಅವರ ಕೈಯಲ್ಲಿತ್ತು.

'ಕೃಷಿಕ' ಪತ್ರಿಕೆಯು ಆಯೋಜಿಸಿದ ಹಬ್ಬದಲ್ಲಿ ವಿವಿಧ ವಿಷಯಗಳ ಕುರಿತು ತಜ್ಞರಿಂದ ಮಾಹಿತಿ ಮತ್ತು ಇಬ್ಬರು ಕಾಫಿ ಕೃಷಿಕರಿಗೆ ಪ್ರಶಸ್ತಿ ಪ್ರದಾನ. ಸಕಲೇಶಪುರದ ಹಂಜುಗೊಂಡನಹಳ್ಳಿಯ ನರೇಶ್ ಅವರದು ಸಮಗ್ರ ಕೃಷಿ. ರೊಬಸ್ಟಾ ಚೆರಿ ಕಾಫಿಯಲ್ಲಿ ಹೆಚ್ಚು ಇಳುವರಿ ಪಡೆದವರು. ಇನ್ನೊಬ್ಬರು ಪಂಡರಹಳ್ಳಿಯ ಚೆಂಗಪ್ಪ. ಒಂದೆಕ್ರೆಯಲ್ಲಿ ಹತ್ತು ಕ್ವಿಂಟಾಲ್ ಅರೆಬಿಕಾ ಕಾಫಿ ಇಳುವರಿ ಪಡೆದ ಕೃಷಿಕರು.

'ಹಳ್ಳಿಯಲ್ಲಿ ಈ ತರಹದ ಹಬ್ಬ ಹೊಸತು. ಎರಡೂವರೆ ಸಾವಿರ ಮಂದಿಗೆ ವ್ಯವಸ್ಥೆ ಮಾಡಿದ್ವಿ. ಜನರ ಪ್ರೋತ್ಸಾಹ ಇಷ್ಟೊಂದು ರೀತಿಯಲ್ಲಿ ಬರುತ್ತೆ ಅಂತ ಊಹಿಸಿರಲಿಲ್ಲ' ಸಂತಸ ಹಂಚಿಕೊಳ್ಳುತ್ತಾರೆ ಜಯರಾಮ್. ಈ ಹಬ್ಬಕ್ಕಾಗಿ ಆರು ತಿಂಗಳ ಮೊದಲೇ ಹಳ್ಳಿಗಳ ಬೇಟಿ, ಪ್ರಾಯೋಜಕರ ಸಂಪರ್ಕ, ಆರ್ಥಿಕ ವ್ಯವಸ್ಥೆಯ ಹೊಂದಾಣಿಕೆ.

ಎಲ್ಲಾ ವ್ಯವಸ್ಥೆ ಪೂರ್ಣಗೊಂಡು ಹಿಂದಿನ ದಿವಸ ರಾತ್ರಿ ಸುಖವಾಗಿ ನಿದ್ರಿಸಿದ ಸಂಘಟಕರಿಗೆ ಬೆಳ್ಳಂಬೆಳಿಗ್ಗೆ ಶಾಕ್! ನಾಲ್ಕು ಗಂಟೆ ಹೊತ್ತಿಗೆ ಅಬ್ಬರಿಸಿದ ಮಳೆರಾಯ! ವ್ಯವಸ್ಥೆಯೆಲ್ಲಾ ಅವ್ಯವಸ್ಥೆ. ಬರೋಬ್ಬರಿ ಜನಸಾಗರ. 'ಮಳೆಯಲ್ಲಿ ಒದ್ದೆಯಾಗಿ, ಕೈಕಾಲೆಲ್ಲ ಕೆಸರಾಗಿ ಭಾಗವಹಿಸುವುದೇ ನಿಜವಾದ ಹಳ್ಳಿಹಬ್ಬ' ಹಲವು ಕೃಷಿಕರ ಉದ್ಘಾರ. ನಮ್ಮ ವಿವಿಗಳು ಮಾಡುವ ಕೃಷಿಮೇಳಗಳಿಗೆ ಸರಿಸಾಟಿಯಾಗಿ ಹಳ್ಳಿಮೂಲೆಯಲ್ಲಿ ನಡೆದ ಹಳ್ಳಿಹಬ್ಬದ ಸಂಘಟಕರನ್ನು ಬೆನ್ನುತಟ್ಟೋಣ.
'ಹಬ್ಬದಲ್ಲಿ ಭಾಗವಹಿಸಿದ ಕೊಡಗಿನ ಕೃಷಿಕರು ಮುಂದಿನ ಬಾರಿ ಕೊಡಗಿನಲ್ಲೂ ಹಳ್ಳಿಹಬ್ಬ ಮಾಡುವ ಉಮೇದು ತೋರಿದ್ದಾರೆ' ಜಯರಾಮ್ ಅವರಿಂದ ಗುಟ್ಟು ರಟ್ಟು!

2 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಹಬ್ಬದ ಕಾರ್ಯಕ್ರಮ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದೀರಾ.ಚೆನ್ನಾಗಿದೆ.ಭಾವಚಿತ್ರಗಳು ಇನ್ನೂ ಸ್ವಲ್ಪ ಹೆಚ್ಚು ಹಾಕಿದ್ದರೆ,ಒಳ್ಳೆಯದಿತ್ತೋ ಅಂತ ನನ್ನ ಅನಿಸಿಕೆ.ಭಾಗವಹಿಸದ ನಮ್ಮಂತಹವರಿಗೆ ಪ್ರಯೋಜನ ಆಗ್ತಿತ್ತು.ವಿವರಣೆಯಲ್ಲೇ ಆ ಕೊರತೆಯನ್ನು ನೀಗಿದ್ದೀರಿ.
ಭೇಷ್..

ಸಾಗರದಾಚೆಯ ಇಂಚರ said...

ವಿವರಣೆ ಕಣ್ಣಿಗೆ ಕಟ್ಟುವಂತೆ ಇದೆ
ಒಳ್ಳೆಯ ಬರಹ

Post a Comment