Friday, July 31, 2009

'ಕಿಂಗ್ ಮೇಕರ್ 'ಹಲಸಿಗೆ ಮೇಳಗಳ ಕಿರೀಟ


'ಬೇರೆಬೇರೆ ದೇಶಗಳಲ್ಲಿ ಮಾವು, ಮ್ಯಾಗೋಸ್ಟೀನ್, ಡೂರಿಯಾನ್ ಮೊದಲಾದ ಹಣ್ಣುಗಳನ್ನು ಹಣ್ಣುಗಳ ರಾಜನೆಂದು ಕರೆಯುತ್ತಾರೆ. ಇವುಗಳನ್ನೆಲ್ಲಾ ತಿಂದುನೋಡಿದ ನನಗನಿಸುತ್ತದೆ, ಇವುಗಳು ಹಣ್ಣುಗಳ ರಾಜರಾದರೆ, ಹಲಸು ಕಿಂಗ್ಮೇಕರ್'. ಜೂನ್ ಮೊದಲ ವಾರದಲ್ಲಿ ಹವಾಯ್ಯಿಂದ ಕನ್ನಾಡಿಗೆ ಹಾರಿಬಂದ ಹಣ್ಣುಕೃಷಿಕ ಕೆನ್ ಲವ್ ಕೇರಳದ ವಯನಾಡ್ ಉರವಿನ ಹಲಸು ಮೇಳಕ್ಕೆ ಚಾಲನೆ ಕೊಟ್ಟಾಗ ಉದ್ಗರಿಸಿದ ಮಾತಿದು.
ಹಣ್ಣುಗಳ ರಾಜ 'ಮಾವು' ಎಂಬುದು ಸಾರ್ವತ್ರಿಕ. ಗಾತ್ರ, ವಿನ್ಯಾಸ, ಮರ, ರುಚಿ, ಅಡುಗೆ..ಹೀಗೆ ಒಂದಲ್ಲ ಒಂದು ಬಳಕೆಗೆ ಸಿಗುವ ಹಲಸೀಗ 'ರಾಜ'! ಕನ್ನಾಡು-ಕೇರಳಗಳಲ್ಲಿ ಹನ್ನೊಂದು ಮೇಳಗಳನ್ನು ಕಂಡ ಭಾಗ್ಯ!`ಲಕೋಟೆ ಹಣ್ಣಿನ ಸಾವಿರ ಉತ್ಪನ್ನ ಜಪಾನಿನ ಬೀವಾ ಕ್ಲಬ್ಬ್ಬಿನಲ್ಲಿ ಲಭ್ಯ. ನೀವು ಮನಸ್ಸು ಮಾಡಿದರೆ ಹಲಸಿನಿಂದ ಇನ್ನೆಷ್ಟೋ ಸಾವಿರ ಮಾಡಿ ಮಾರಬಹುದು'' - ಕೆನ್ ತಾನು ಬಣ್ಣಿಸಿದ 'ಕಿಂಗ್ಮೇಕರ್' ಬಣ್ಣನೆಯನ್ನು ಸಮರ್ಥಿಸಿದ್ದು ಹೀಗೆ.
ತುತ್ತಿಗೂ ತತ್ವಾರವಾದ ಕಾಲಘಟ್ಟದಲ್ಲಿ ಹಲಸು ಬಡವರ ಕಲ್ಪವೃಕ್ಷ. ಹಲಸನ್ನು ಪಲ್ಯದಂತೆ (ಚಂಗುಳಿ) ಮಾಡಿದಾಗ ಅದು ಬೆಳಗ್ಗಿನ ಉಪಾಹಾರಕ್ಕಾಗುತ್ತದೆ, ಮಧ್ಯಾಹ್ನದ ಭೋಜನಕ್ಕೂ ಸೈ. ಇದನ್ನೇ ತಿಂದು ಹೊಟ್ಟೆ ಗಟ್ಟಿ ಮಾಡಿಕೊಂಡು ದುಡಿದ ಜೀವಗಳು ಈಗಲೂ ನಮ್ಮ ಮಧ್ಯೆ ಇದ್ದಾರೆ.ಹಲಸು ನಿರ್ಲಕ್ಷಿತ ಹಣ್ಣು. ಅದನ್ನು 'ನಾಯಿಯೂ ಮೂಸುವುದಿಲ್ಲ' ಅಂತ ಪಟ್ಟ ಕಟ್ಟಿಬಿಟ್ಟಿದ್ದೇವೆ. ಹಿತ್ತಿಲಲ್ಲಿ ಕೊಳೆತು ನಾರಿ ಮಣ್ಣಾಗಿ ಹೋದೀತೇ ವಿನಾ, ಅದು ಅಂಗಳಕ್ಕೆ ಬರುವುದಿಲ್ಲ!
ಅದರಲ್ಲೂ ತುಳುವ (ಅಂಬಲಿ) ಹಲಸಿನ ಹಣ್ಣು ಮರದಲ್ಲಿ 'ಪಿಶಾಚಿ'ಯಂತೆ ತೂಗುತ್ತಿರುವಾಗಲೂ ಕೊಯ್ಯುವುದು ಬಿಡಿ, ಅದರತ್ತ ನೋಡಲೂ ನಮಗೆ ಹೇಸಿಗೆ! ಹಪ್ಪಳ, ಚಿಪ್ಸ್, ಬೆರಟ್ಟಿ ಅಂತ ಪಾರಂಪರಿಕ ತಿಂಡಿಗಳ ರುಚಿಯಿದ್ದ ಹಿರಿಯರು ಹಲಸಿನ ಋತುವಿನಲ್ಲಿ ಬ್ಯುಸಿಯಾಗ್ತಾರೆ ವಿನಾ, ಉಳಿದಂತೆ 'ರೆಡಿ' ಇದ್ದರೆ ಖರೀದಿಸುವವರೇ ಅಧಿಕ. ಬಹುಶಃ ಹಣ್ಣಿನ ಸಂಸ್ಕರಣೆಯ ಕಷ್ಟ. ಅದನ್ನು ಬಿಡಿಸಿ, ಮೇಣದೊಂದಿಗೆ ಹೋರಾಡಿ, ತೊಳೆ ತೆಗೆಯುವಷ್ಟರಲ್ಲಿ 'ಇನ್ನು ಬೇಡ' ಎಂಬ ಭಾವನೆ! ಉಳಿದ ಹಣ್ಣುಗಳಿಗೆ ಈ ತೊಂದರೆ ಇಲ್ಲವಲ್ಲಾ. ಮಾವಾದರೆ ತೊಳೆದು, ಸಿಪ್ಪೆಕೆತ್ತಿ ಬಾಯಿಗಿಟ್ಟರೆ ಹೊಟ್ಟೆ ಸೇರುತ್ತದೆ!
ಮೇಳದ ಭಾಗ್ಯ
ಹಲಸು ಮೇಳ ಮೊದಲು ಮಾಡಿದ್ದು 'ಉರವು - 2007ರಲ್ಲಿ. ಕರ್ನಾಟಕದಲ್ಲಿ ಬೈಫ್ ಮತ್ತು ಕದಂಬ ಹಿಂದಿನ ವರ್ಷ ಮಾಡಿದ ಹಲಸು ಮೇಳಗಳು ಭಾರೀ ಜನಪ್ರಿಯ ಆದುವು. ಈ ವರುಷ ಶಿರಸಿ, ತೀರ್ಥಹಳ್ಳಿ, ನಿಟ್ಟೂರು, ಲಾಲ್ಭಾಗ್, ಬೆಂಗಳೂರು, ಮಂಗಳೂರು ಸೇರಿದಂತೆ ಕೇರಳದ ಐದು ಹಲಸು ಮೇಳಗಳು ಹೊಸೆದುಕೊಂಡಿತು. ನಿದ್ದೆಯಲ್ಲಿದ್ದವನನ್ನು ಬಡಿದೆಬ್ಬಿಸಿದಂತೆ ಮೇಳವು ಹಲಸಿನ ಸುತ್ತ ಗಿರಕಿ ಹೊಡೆಯುವಂತೆ ಮಾಡಿದುದಂತೂ ಸತ್ಯ.
ಹಲಸು ಕಣ್ಣ ಮುಂದೆಯೇ ಹಾಳಾಗುವುದನ್ನು ಬಹುತೇಕರು ಇಷ್ಟಪಡುವುದಿಲ್ಲ. ಆದರೆ ದಾರಿಯಿಲ್ಲ! ಮೇಳಗಳು 'ಕೈಮರ'ದಂತೆ ಒಂದಷ್ಟು ಕೆಲಸ ಮಾಡಿರುವುದರಿಂದ ಹಲಸಿನ ಸಾಧ್ಯತೆಗಳ ಹರವಿಂದು ವಿಸ್ತಾರವಾಗಿದೆ. 'ನಮ್ಮ ಹಿತ್ತಿಲಲ್ಲೂ ಮರವಿದೆ. ಅದರ ರುಚಿ ಫಸ್ಟ್ಕ್ಲಾಸ್ ಮಾರಾಯ್ರೆ' ಅಂತ ಬಸ್ಸಿನಲ್ಲೂ, ಹೋಟೆಲಿನಲ್ಲೂ ಜನ ಕುಳಿತು ಒಂದೊಂದು ಮರದ ವೈಶಿಷ್ಟ್ಯವನ್ನು ಹೇಳುವಷ್ಟರ ಮಟ್ಟಿಗೆ ಮೇಳಗಳು ಸಾಫಲ್ಯವಾದುವು.
ಮೌಲ್ಯವರ್ಧನೆಹಪ್ಪಳ, ಚಿಪ್ಸ್, ಬೆರಟ್ಟಿ, ಉಂಡ್ಲುಕ, ಬೀಜದ ಸಾಂತಾಣಿ (ಬೇಯಿಸಿ, ಬಿಸಿಲಿನಲ್ಲಿ ಒಣಗಿಸಿದ)..ಇವುಗಳ ಜತೆಯಲ್ಲಿ ಹಲಸು ವಿವಿಧ ಅವತಾರಗಳನ್ನು ತಾಳಿದೆ. ಜ್ಯಾಂ, ಹಂಬಳ, ಜ್ಯೂಸ್, ಮುಳುಕ, ರೊಟ್ಟಿ, ವಡೆ, ಹೋಳಿಗೆ, ಸುಕ್ರುಂಡೆ, ಚಕ್ಕುಲಿ..ಇನ್ನೂ ಅನೇಕ. ಈ ವರುಷದ ಹಲಸಿನ ಋತುವಿನಲ್ಲಿ ನಮ್ಮ ಅಡುಗೆಮನೆ ನಿಜಕ್ಕೂ 'ಸಂಶೋಧನಾಲಯ'ವಾಗಿದೆ, ಗೃಹಿಣಿಯರು 'ವಿಜ್ಞಾನಿ'ಗಳಾಗಿದ್ದಾರೆ. ಸಾಗರದ ಗೀತಕ್ಕ, ಶಿರಸಿಯ ಮಮತಾ, ಪಾತನಡ್ಕದ ಸುಶೀಲಕ್ಕ..ಹೀಗೆ ಅನೇಕ 'ಪಾಕ ವಿಜ್ಞಾನಿ'ಗಳ ಮೌನ ಮಾತಾಗಿದೆ!
ತೀರ್ಥಹಳ್ಳಿ, ಬೆಂಗಳೂರು, ಶಿರಸಿಯ ಹಲಸು ಮೇಳಗಳಲ್ಲಿ ಅನ್ನ ಮತ್ತು ಮಜ್ಜಿಗೆ ಬಿಟ್ಟರೆ, ಮತ್ತೆಲ್ಲಾ ಹಲಸುಮಯ. ಉಪ್ಪಿನಕಾಯಿಯಿಂದ ಹುಳಿ ತನಕ. ಬಹುಶಃ ಹಲಸಿನಿಂದ ಅನ್ನ ಮಾಡಲು ಸಾಧ್ಯವಾಗುತ್ತಿದ್ದರೆ ಮಾಡುತ್ತಿದ್ದರೇನೋ! 'ಗೋಬಿ ಮಂಚೂರಿಯನ್' ಬದಲಿಗೆ 'ಜ್ಯಾಕ್ ಮಂಚೂರಿಯನ್', 'ಜ್ಯಾಕ್ ಕಬಾಬ್' ತೀರ್ಥಹಳ್ಳಿ ಮೇಳದ ಸ್ಪೆಷಲ್. ಬರೇ ಡೆಮೋ ಮಾತ್ರವಲ್ಲ, ಭೋಜನಕ್ಕೂ ಕೂಡ. ವಿಷದಲ್ಲಿ ಮಿಂದೆದ್ದು ಅಡುಗೆ ಮನೆ ಸೇರುವ ಹೂಕೋಸಿನ ಸ್ಥಾನವನ್ನು ನಮ್ಮ ಎಳೆ ಹಲಸು (ಗುಜ್ಜೆ) ಆಕ್ರಮಿಸುವ ದಿವಸ ದೂರವಿಲ್ಲ.
'ಹಲಸು ಮೇಳಕ್ಕೆ ಪಟ್ಟಣಿಗರು ಇಷ್ಟೊಂದು ರೀತಿಯಲ್ಲಿ ರೆಸ್ಪಾನ್ಸ್ ಮಾಡ್ತಾರೆಂತ ಕಲ್ಪನೆ ಇರಲಿಲ್ಲ. ಹಲಸಿನ ಖಾದ್ಯಗಳು ಸಂಜೆ ವರೆಗೂ ದೊರಕುತ್ತಿದ್ದುದರಿಂದ ಬಹಳಷ್ಟು ಜನ ಇಷ್ಟಪಟ್ಟರು' ಬೆಂಗಳೂರಿನ ಹಲಸು ಮೇಳದ ಸಾರಥ್ಯ ವಹಿಸಿದ ಗೋವಿಂದ ಕಬಾಡಿ ಹೇಳುತ್ತಾರೆ. 'ಹಳ್ಳಿಗಳಲ್ಲಿ ಹುಟ್ಟಿ ಬೆಳೆದು, ನಗರ ಸೇರಿದ ಬಹಳಷ್ಟು ಜನರಿಗೆ ಹಲಸಿನ ರುಚಿ ಗೊತ್ತು. ಅಂತಹವರನ್ನು ಮೇಳಗಳು ಆಕರ್ಷಿಸುತ್ತವೆ.' ಎನ್ನಲು ಮರೆಯಲಿಲ್ಲ.
ಕರ್ನಾಟಕಕ್ಕೆ ಹೋಲಿಸಿದರೆ ವ್ಯವಸ್ಥೆಯ ದೃಷ್ಟಿಯಿಂದ ಕೇರಳದ್ದೇ ಮೇಲುಗೈ. ಮೇಳಕ್ಕೆ 'ಉತ್ಸವ'ದ ಟಚ್! 'ಇದು ನಮ್ಮದು' ಅಂತ ಜನರ ಪಾಲ್ಗೊಳ್ಳುವಿಕೆ. ವಯನಾಡಿನ ಮೇಳದಲ್ಲಿ ಹಲಸನ್ನು ವಾದ್ಯವಾದನದೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ತಂದು, ಅದನ್ನು ತುಂಡರಿಸುವುದರ ಮೂಲಕ ಚಾಲನೆ. ಹಲಸಿನ ಎಲೆಗಳನ್ನು ಕಿರೀಟದಂತೆ ಮಾಡಿ ಧರಿಸುವಿಕೆ.ತಿಂಗಳ ಮೊದಲೇ ನೂರು ಹೆಣ್ಮ್ಮಕ್ಕಳಿಗೆ ತರಬೇತಿ ಕೊಟ್ಟು ವೈವಿಧ್ಯಮಯ ಮೌಲ್ಯವರ್ಧಿತ ಉತ್ಪ್ಪನ್ನ ತಯಾರಿ, ಮಾರಾಟ. ಇದೆಲ್ಲಾ ವಾತಾವರಣ ಸೃಷ್ಟಿಗೆ ಪೂರಕ.
ಸಾಧ್ಯತೆಗಳು
ಕೇವಲ ಹಪ್ಪಳ, ಚಿಪ್ಸ್ಗೆ ಸೀಮಿತವಾಗದೆ, ಹಲಸು ಮೌಲ್ಯವರ್ಧನೆಯಾಗುವುದರೊಂದಿಗೆ ತನ್ನ ಮಾನವರ್ಧನೆಯನ್ನೂ ಮಾಡಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಮೇದಿನಿಂದ ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಹಲಸು ಬೆಳೆಗಾರರ ಸಂಘ ಅಸ್ತಿತ್ವಕ್ಕೆ ಬಂದಿದೆ. 'ಬೆಳೆಗಾರರು ಸಂಘಟಿತರಾಗಿದ್ದಾರೆ. ಉತ್ತಮ ಬೆಲೆ ಸಿಗುತ್ತಿದೆ' ಎನ್ನುತ್ತಾರೆ ಸಂಘದ ಕಾರ್ಯದರ್ಶಿ ರವಿಕುಮಾರ್.
ಕೇರಳದ ಸ್ವದೇಶಿ ಸಂಸ್ಥೆಯು ಸಿರಪ್, ವೈನ್, ಸ್ಕ್ವಾಷ್, ಜೆಲ್ಲಿ, ಹಲ್ವ, ಟಾಫಿ, ಫ್ರುಟ್ ಬಾರ್, ಕ್ಯಾಂಡಿ, ಉಪ್ಪಿನಕಾಯಿಯನ್ನು ತಯಾರಿಸಿದರೆ; ಹಲಸಿನ ಬೇಳೆಯಿಂದ ವರುಷಪೂರ್ತಿ ಶೇಖರಿಸಿಡಬಹುದಾದ ತೋರನ್, ಮಸಾಲಾ ಡ್ರೈ, ಪುಟ್ಟು ಪೊಡಿ, ಸುಗಿಯಾನ್, ಪಕ್ಕವಡ, ಅವಲೋಸ್ ಪುಡಿ..ಹೀಗೆ ಇನ್ನೇನೋ! ತರಬೇತಿಯನ್ನೂ ನೀಡುತ್ತಿದೆ.ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಹಲಸಿನ ಹಣ್ಣಿನಿಂದ ಹಲವಾರು ಉತ್ಪನ್ನಗಳನ್ನು ಸಿದ್ಧಪಡಿಸುತ್ತಿದೆ. ಮಹಾರಾಷ್ಟ್ರೀಯರಿಗೆ ಪ್ರಿಯವಾದ ಕುಲ್ಫಿ, ಗುಜರಾತಿಗರ ಶ್ರೀಖಂಡ ಇವರ ಮಾಸ್ಟರ್ಪೀಸ್. ಜತೆಗೆ ಜ್ಯೂಸ್, ಬಾರ್, ಬೀಜದ ಪುಡಿಯಿಂದ ಬಿಸ್ಕತ್, ಕಪ್ಕೇಕ್.
ಕಡಲಾಚೆಯ ಕ್ಯಾಲಿಫೋರ್ನಿಯಾದಲ್ಲಿ ಹಲಸಿನ ಹಣ್ಣಿನ ಐಸ್ಕ್ರೀಂ ಚಪ್ಪರಿಸುವ ವರ್ಗವೇ ಇದೆಯಂತೆ. ನಂಬ್ತೀರಾ? ಸ್ಮಿತಾ ವಸಂತ್ ಭಾರತೀಯ ಮೂಲದವರು. ತಮ್ಮ 'ರೆಸ್ಟಾರೆಂಟಿನಲ್ಲಿ ಮಾಡಿಟ್ಟ ಐಸ್ಕ್ರೀಂ ಸಂಜೆಯೊಳಗೆ ಖಾಲಿ'ಯಂತೆ! ಸಮಾರಂಭಗಳಿಗೂ ವಿತರಿಸುತ್ತಾರೆ. ತುಮಕೂರಿನ ಪಾವನ್ ಸ್ಟೋರಿನ ಸೀತಾರಾಂ ತಯಾರಿಸಿದ ಹಲಸಿನ ಒಣ ಹಣ್ಣುಗಳ ಬರ್ಫಿಗೆ 'ಕೇಳಿ ಪಡೆಯುವ' ಗ್ರಾಹಕ ವರ್ಗ ಸೃಷ್ಟಿಯಾಗಿದೆ! ಅಮಾಸೆಬೈಲಿನ ಕೊಡ್ಗಿ ಸಹೋದರರ ಹಲಸಿನ ಹಣ್ಣಿನ ಒಣಚಿಪ್ಸ್ ವಿದೇಶಕ್ಕೂ ಹಾರಿದೆ. ನಮ್ಮ ಮಕ್ಕಳು ಚೀಪುವ ಲಾಲಿಪಪ್ ಇದೆಯಲ್ಲಾ, ಅಂತಹುದೇ ಹಲಸಿನ ಹಣ್ಣಿನಿಂದ ತಯಾರಿಸಿದ ಸಿಪ್-ಅಪ್ ಕೇರಳದಲ್ಲಿ ಮಕ್ಕಳು ಮಾತ್ರವಲ್ಲ, ದೊಡ್ಡವರೂ ಚೀಪುತ್ತಾರೆ.ನೆರೆಯ ಶಿರಸಿಯ ರೇಖಾ ಹೆಗಡೆ, ಅನ್ನಪೂರ್ಣ ಹೆಗಡೆಯವರ ಮನೆಗೆ ವರ್ಷದ ಯಾವ ಸಮಯದಲ್ಲಾದರೂ ಹೋಗಿ, ಹಲಸಿನ ಹಪ್ಪಳ-ಚಿಪ್ಸ್ ರೆಡಿಯಾಗಿರುತ್ತದೆ.
ವರ್ಷವಿಡೀ ಕಾಪಿಡುವ ಅವರ ಹಳ್ಳಿಜ್ಞಾನ ನಮ್ಮ ಸರಕಾರಿ ಮೆಟ್ಟಿಲನ್ನು ಹತ್ತಬೇಕು. ನಮ್ಮ ಹಿತ್ತಿಲಲ್ಲಿ ಎಷ್ಟು ಹಲಸಿನ ಮರವಿದ್ದೀತು. ಹಚ್ಚ್ಚೆಂದರೆ ಹತ್ತು! ಓಕೆ. ಹಲಸಿನ ಕೃಷಿಯನ್ನು ಮಾಡುವವರನ್ನು ಕೇಳಿದ್ದೀರಾ? ಊಹೂಂ. ವಿಯೆಟ್ನಾಮಿನ 'ವಿನಾಮಿಟ್' ಸಂಸ್ಥೆಯು ಸಾವಿರಗಟ್ಟಲೆ ಹೆಕ್ಟಾರ್ನಲ್ಲಿ ಹಲಸಿನ ತೋಟವನ್ನೇ ಎಬ್ಬಿಸಿದೆ! ಅವರ ಸಂಸ್ಕರಣಾ ಘಟದ ಸಾಮಥ್ರ್ಯ ಎಷ್ಟು ಗೊತ್ತೇ? ದಿನಕ್ಕೆ ಐದು ಲಾರಿ ಲೋಡು ಹಲಸಿನ ಹಣ್ಣು ಬೇಕು!ಸಾಧ್ಯತೆಗಳ ಬೆನ್ನೇರಿಸಾಧ್ಯತೆಗಳನ್ನು ಮೀರಿ ಬೆಳೆವ ಸಾಮಥ್ರ್ಯ ಹಲಸಿಗಿದೆ.
ಒಂದೆಡೆ ಹಲಸೆಂದರೆ ಹೊಲಸೆನ್ನುವ ವರ್ಗ, ಮತ್ತೊಂದೆಡೆ ಅದರ ತೊಟ್ಟನ್ನು ಮಾತ್ರ ಬಿಟ್ಟು ಉಳಿದೆಲ್ಲಾ ಭಾಗಗಳನ್ನು ಮೌಲ್ಯವರ್ಥಿಸುವ ಹಲಸು ಪ್ರಿಯರು. ಮಂಗಳೂರಿನ ಏಸ್ ಫುಡ್ಡಿನ ಅಣ್ಣಪ್ಪ ಪೈಗಳು ಹೇಳುತ್ತಾರೆ 'ಚಿಪ್ಸ್ ತಯಾರಿಗೆ ಎಷ್ಟು ಹಲಸಿನ ಸೊಳೆ ಇದ್ದರೂ ಬೇಕು'! ಒಂದೆಡೆ ಅಗಾಧ ಬೇಡಿಕೆ. ಇನ್ನೊಂದೆಡೆ ಪೂರೈಕೆಗಿರುವ ತೊಂದರೆಗಳು. ಇವುಗಳ ಸಮತೋಲನವಾಗಬೇಕಾದುದು ಅಗತ್ಯ.ಮೇಳದ ರುಚಿಯುಂಡ ಮನೆಗಳಲ್ಲಿ ಅತ್ತೆಯಿಂದ ಕೇಳಿಯೋ, ಅಮ್ಮನಿಂದ ಆಲಿಸಿಯೋ ಹಲಸಿನ ಹೊಸ ಹೊಸ 'ರೆಸಿಪಿ'ಗಳು ತಯಾರಾಗುತ್ತಿವೆ. 'ಮರದಲ್ಲಿ ನೇತಾಡುವ ಪಿಶಾಚಿ ಕಿಟಕಿಯೊಳಗೆ ತೂರಿಬರಬೇಕು' ಎನ್ನುತ್ತಾರೆ ಕೃಷಿಕ ಡಾ.ಡಿ.ಸಿ.ಚೌಟ.ಹಲಸಿನ ಸುತ್ತಮುತ್ತ ಸಮಸ್ಯೆಗಳಿವೆ. ಅವುಗಳನ್ನು ನಿತ್ಯಜಪವೇ ಅವಕ್ಕೆ ಪರಿಹಾರವಲ್ಲ. ಜರುಗಿದ ಮೇಳಗಳ ವರಿಷ್ಠರ ಮಧ್ಯೆ ಪರಸ್ಪರ ಕೊಂಡಿ ಏರ್ಪಟ್ಟರೆ ಮುಂದಿನ ದಿನಗಳಲ್ಲಿ 'ಹಲಸಿನ ಕೃಷಿ'ಯೂ ಪಟ್ಟಿಯಲ್ಲಿ ಯಾಕೆ ಸೇರಬಾರದು?


Wednesday, July 29, 2009

'ಮಾರಿ' ಮೆಣಸು

ನಮ್ಮ ಭಾರತದ್ದೇ ಆದ 'ಭೂತ್ ಜೊಲೋಕಿಯಾ' ಎಂಬ ಖಾರದ 'ಗಾಂಧಾರಿ ಮೆಣಸು' ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದ ಪ್ರಕಾರ ಜಗತ್ತಿನ ಅತಿ ಖಾರದ ಮೆಣಸು. ತೀರ್ಥಹಳ್ಳಿ ಸಮೀಪದ ಸುಳುಗೋಡು-ಮಜ್ಜಿಗೆಸರದಲ್ಲಿ ಇಂತಹುದೇ ಖಾರದ ಮೆಣಸಿದೆ. ಅದರ ಖಾರವೇ ಮಾನವಾಗಿ ಅದು 'ಮಾರಿ ಮೆಣಸು'.

ಒಮ್ಮೆ ಪರೀಕ್ಷೆಗೆಂದು ಸುಬ್ರಹ್ಮಣ್ಯರು ಈ ಮೆಣಸನ್ನು ಸಾಂಬಾರಿಗೆ ಬಳಸಿದ್ದರು. ಎಷ್ಟು ಖಾರವೆಂದರೆ ಅಂದು ಯಾರೂ ಒಂದು ತುತ್ತನ್ನೂ ತಿಂದಿಲ್ಲವಂತೆ! ಗಿಡದಲ್ಲಿ ಮೆಣಸು ಮಾಗಿದಾಗ ಹಕ್ಕಿಗಳು ಸಹಜವಾಗಿ ಆಕರ್ಷಿತವಾಗುತ್ತವೆ. ಆದರೆ ಮಾರಿಯ ಹತ್ತಿರ ಊಹೂಂ!

'ಮೆಣಸನ್ನು ಜಜ್ಜಿ ನೀರಿನಲ್ಲಿ ಬೆರೆಸಿ, ಅಲಸಂಡೆ ಗಿಡಕ್ಕೆ ಸಿಂಪಡಿಸಿದೆವು. ಅದಕ್ಕೆ ಬರುವ ಹೇನುಗಳೆಲ್ಲಾ ಸತ್ತುಹೋದುವು' ಸುಬ್ರಹ್ಮಣ್ಯ ಮೆಣಸಿನ ಖಾರವನ್ನು ನಿರೂಪಿಸಿದ್ದು ಹೀಗೆ. ಬೀಜ ಬನವಾಸಿ ಸಮೀಪದ ಅಜ್ಜನ ಮನೆಯಿಂದ ತಂದಿದ್ದರು.

ಎಳೆ ಕಾಯಿಯಲ್ಲಿ ಖಾರವಿಲ್ಲ. ಉತ್ತಮ ಪರಿಮಳ. ಬೋಂಡಾ, ಸಾಸಿವೆ ತಯಾರಿಸುತ್ತಾರೆ. ಕಾಯಿ ಬಲಿಯುತ್ತಾ ಹೋದಂತೆ ಗಡಸಾಗಿ, ಹೊಳಪು ಬರುತ್ತದೆ. ಹಣ್ಣಾದಾಗ ಕಡು ಹಳದಿ ಬಣ್ಣ. ಜೀರಿಗೆ ಮೆಣಸಿನ ಗಿಡಕ್ಕಿಂತ ತುಸು ಎತ್ತರವಷ್ಟೇ. ಗಿಡದ ಆಯಷ್ಯ ಐದಾರು ವರುಷ. ಗಿಡದ ಬುಡದಲ್ಲಿ ಕಳೆ ಇರಬಾರದು. ನೀರು ನಿಲ್ಲಬಾರದು. ಮಳೆಗಾಲ ಕಡಿಮೆಯಾಗುತ್ತಾ, ಛಳಿಗಾಲ ಶುರುವಾಗುವ ಈ ಮಧ್ಯಂತರದಲ್ಲಿ ಇಳುವರಿ ಜಾಸ್ತಿ.

'ನಾವು ಅದನ್ನು ಹಣ್ಣಾಗಲು ಬಿಡುವುದೇ ಇಲ್ಲ. ಎಳೆಯದರಲ್ಲೇ ಕೊಯ್ಯುತ್ತೇವೆ' ಮನೆಯಜಮಾನ ನಾಗಭೂಷಣಯ್ಯ ದನಿಗೂಡಿಸುತ್ತಾರೆ. ಹಣ್ಣಾದ ಬಳಿಕ ಮೆಣಸನ್ನು ಸೀಳುವುದಿದ್ದರೆ ಕೈಗೆ ಪ್ಲಾಸ್ಟಿಕ್ನ್ನು ಗ್ಲೌಸಿನಂತೆ ಬಳಸಿ ಎನ್ನಲು ಮರೆಯಲಿಲ್ಲ. 'ಈ ಮೆಣಸು ನಮ್ಮಲ್ಲೂ ಇತ್ತು. ಆದರೆ ಅದರ ಖಾರ ಅಷ್ಟು ಉಂಟೆಂದು ಗೊತ್ತಿಲ್ಲ' ಎನ್ನುತ್ತಾರೆ ಪುತ್ತೂರಿನ ಮರಿಕೆಯ ಎ.ಪಿ. ಸದಾಶಿವ. ಈ ಮೆಣಸೂ ಗಿನ್ನೆಸ್ ಸೇರಲು ಅರ್ಹತೆ ಇದೆಯೇನೋ? ಪರೀಕ್ಷಿಸಬಹುದು.
* ಸುಬ್ರಹ್ಮಣ್ಯ ಎಂ.ಎನ್. ಮಜ್ಜಿಗೆಸರ, ಅಂಚೆ ಮೇಳಿಗೆ, ತೀರ್ಥಹಳ್ಳಿ ತಾಲೂಕು - 577 415,
08181-290 080

Thursday, July 23, 2009

ಮುಂದಿರುವುದು ಎರಡೇ ಆಯ್ಕೆ!

ಹೊಸ ಸರಕಾರವೀಗ ವರುಷದ ಕೂಸು. ಹುಟ್ಟಿದಾಕ್ಷಣ ಅದಕ್ಕೆ ರಸಗೊಬ್ಬರದ 'ಶಾಕ್' ಸಿಕ್ಕಿರುವುದು ಇನ್ನೂ ಹಸಿರಾಗಿಯೇ ಇದೆ. ರಸಗೊಬ್ಬರ ಕಂಪೆನಿಗಳು ಮತ್ತು ಸರಕಾರದ ನಡುವೆ ಪರಸ್ಪರ ಕೆಸರೆರೆಚಾಟ, ಅಕ್ರಮ ದಾಸ್ತಾನುಗಾರರು ಬಯಲಾಗುತ್ತಿದ್ದನ್ತೇ ಕೆಲವು ಜೀವ ಹೊರಟು ಹೋಗಿತ್ತು. ಆಡಳಿತ ಯಂತ್ರ ಚಾಲೂ ಆಗಿ ರಸಗೊಬ್ಬರ ಹರಿದುಬರುತ್ತಿರುವಾಗ ಇನ್ನೊಂದಿಷ್ಟು ಆತ್ಮಹತ್ಯೆಗಳು. 'ಈ ವರುಷ ಹಾಗಾಗದು. ಗೊಬ್ಬರ ದಾಸ್ತಾನು ಇದೆ' ಮುಖ್ಯಮಂತ್ರಿಗಳಿಂದ ಆಶ್ವಾಸನೆ ಸಿಕ್ಕಿದೆ!

ನಿಜಕ್ಕೂ ಆದದ್ದೇನು? ಒಂದು ಚಿಕ್ಕ ಪೋಸ್ಟ್ ಮಾರ್ಟಂ ಮಾಡೋಣ - ಮುಂಗಾರು ಆರಂಭವಾದಾಗುವಾಗ 'ರಸಗೊಬ್ಬರ ಮತ್ತು ಬಿತ್ತನೆ ಬೀಜ ಇಲ್ಲ' ಎಂಬ ವದಂತಿಗಳಿಂದ ರೈತನ ಸಮಚಿತ್ತ ಅಸ್ಥಿರವಾಯಿತು. ಆಕ್ರೋಶ ತಾರಕಕ್ಕೆ ಏರಿತು. ರಸಗೊಬ್ಬರ ಅಂಗಡಿಗಳು ಷಟರ್ ಎಳೆದುವು. ನಿಜಕ್ಕೂ ರಸಗೊಬ್ಬರ ಅಭಾವವಾಯಿತು! ಇಷ್ಟು ವರುಷಗಳಲ್ಲಿ ಇಂತಹ ಘಟನೆ ರಾಜ್ಯದಲ್ಲಿ ನಡೆದಿಲ್ಲ. ಅಂದಿನ 'ರಾಜ್ಯಪಾಲರ ಆಡಳಿತ'ದ ಅವಧಿಯ ಅಧಿಕಾರಿಗಳ 'ನಿದ್ದೆಯೂ' ಕಾರಣ ಎಂಬ ದನಿ ಕೇಳಿಬಂದಿತ್ತು. 'ಇನ್ನೇನು ನಾವು ಹೊಸದಾಗಿ ಬಂದವರು' ಎನ್ನುತ್ತ್ತಾ ಕಣ್ಣುಜ್ಜಿ ಎದ್ದು ಅಖಾಡಕ್ಕೆ ಇಳಿಯುತ್ತಿದ್ದಂತೆ ಪರಿಸ್ಥಿತಿ ಕೈಮೀರಿತ್ತು.

ತನ್ನ ಬದುಕಿನ ರಕ್ಷಣೆಗಾಗಿ ರೈತ ಬೀದಿಗಿಳಿದ. ಪ್ರತಿಭಟನೆ ಮಾಡಿದ. ಮುಷ್ಕರ ಹೂಡಿದ. ಯಾಕಾಗಿ? ಮಳೆ ಬಿದ್ದಿದೆ, ಭೂಮಿ ಹಸನಾಗಿದೆ, ಬಿತ್ತನೆಬೀಜ-ರಸಗೊಬ್ಬರವೇ ಇಲ್ಲಾಂದ್ರೆ ಹೇಗೆ? ರೈತನ ಆತಂಕ ಸಹಜ. ಆದರೆ ಈ ಪ್ರತಿಭಟನೆಯ ಹಿಂದಿರುವ ರಾಜಕೀಯ ಶಕ್ತಿಗಳ ಚಕ್ರವ್ಯೂಹ ಆತನಿಗೆಲ್ಲಿ ಕಾಣಬೇಕು? ಇದು ಹಿಂದಿನ ವರುಷದ ಕತೆ-ವ್ಯಥೆ. ಬೇರೆ ಬೇರೆ ಸ್ವರೂಪದಲ್ಲಿ ರೈತನನ್ನು ತುಳಿಯುವ ವಿವಿಧ ಹುನ್ನಾರಗಳು ಪುನರಾವರ್ತನೆ ಆಗುತ್ತಲೇ ಇವೆ. ಇದರಿಂದ ರೈತನನ್ನು ಪಾರುಮಾಡುವ ಶಾಶ್ವತ ವ್ಯವಸ್ಥೆ ಯಾವುದು - ಮುಂದಿರುವ ಪ್ರಶ್ನೆ.

ಇದೇ ಪ್ರಶ್ನೆಯನ್ನು ಸರಕಾರಕ್ಕೆ ಕೇಳೋಣ. 'ರಸಗೊಬ್ಬರ ದರವನ್ನು ಇಳಿಸುತ್ತೇವೆ, ಬಿತ್ತನೆ ಬೀಜವನ್ನು ಉಚಿತವಾಗಿ ನೀಡುತ್ತೇವೆ' ಎನ್ನಬಹುದು. ಇದು ಪರಿಹಾರವಲ್ಲ. ಹಾಗಾದರೆ ಏನು? ನಮ್ಮ 'ಕೃಷಿ ಪದ್ದತಿ'ಯ ಬದಲಾವಣೆ. ರಸಗೊಬ್ಬರ ಸುರಿದು ಸುರಿದು ಭೂಒಡಲು ಬಿರಿದಿದೆ. ಗೊಬ್ಬರ ಕಂಪೆನಿಗಳು, 'ನಮ್ಮ ಗೊಬ್ಬರದಿಂದ ಮಾತ್ರ ಅತ್ಯಧಿಕ ಇಳುವರಿ' ಎನ್ನುತ್ತಾ ರೈತನ ಮನೆಯ ಬಾಗಿಲು ತಟ್ಟಿದರೆ, ಬೀಜ ಕಂಪೆನಿಗಳು ಬಣ್ಣಬಣ್ಣದ ಚಿತ್ರಗಳನ್ನು ತೋರಿಸಿ, 'ನಿಮ್ಮ ಬದುಕು ಹಸನಾಗುತ್ತದೆ' ಎನ್ನುತ್ತಾ ಮನೆಯೊಳಗೆ ಪ್ರವೇಶಿಸಿವೆ. 'ನಿಮಗೆ ಬೇಕಾದಷ್ಟು ಸಾಲ ಕೊಡ್ತೇವೆ, ಬನ್ನಿ ತೆಗೊಳ್ಳಿ' ಎನ್ನುತ್ತಾ ಖಾಸಗಿ ಹಣಕಾಸು ಸಂಸ್ಥೆಗಳು ಕಿಟಕಿ ಹಾರಿ ಪಿಶಾಚಿಯಂತೆ ಬರುತ್ತವೆ!

ಇವರೆಲ್ಲರಿಂದಲೂ ರೈತನನ್ನು ಪಾರುಮಾಡಲು ಇರುವ ಒಂದೇ ದಾರಿ-'ದೇಸೀ ಕೃಷಿ ಪದ್ದತಿ'ಯ ಅನುಷ್ಠಾನ. ಹೊಲಕ್ಕೆ ವಿಷ, ರಸಗೊಬ್ಬರ ಬರುವುದಕ್ಕಿಂತ ಮುಂಚೆ ಕೃಷಿ ಇತ್ತಲ್ಲಾ, ಅದು. 'ಮನೆಗೊಂದು ಹಸು ಇರಲಿ' ಹಿರಿಯರು ಹೇಳುತ್ತಿದ್ದರು. ಇದರರ್ಥ - ದನ ಹಾಲು ನೀಡಿದ ಹಾಗಾಯಿತು, ಗೊಬ್ಬರ ಕೊಟ್ಟಂಗಾಯಿತು. ಇದನ್ನೀಗ ಮರೆತಿದ್ದೇವೆ. ಗೊಬ್ಬರ ಅಂದರೆ ಅದು ಸರಕಾರಿ ಗೊಬ್ಬರ! ಚೀಲ ಗೊಬ್ಬರ! ಇದನ್ನು ಸುರುವಿದರೆ ಭೂತಾಯಿ ನಗ್ತಾಳೆ! ಹಸಿರು ಕ್ರಾಂತಿಯ ಫಲ.

ಹೈನುಗಾರಿಕೆ ಮತ್ತು ಕೃಷಿ - ಜತೆಜತೆಯಲ್ಲಿ ಸಾಗುವಂತಹುದು. ಒಂದನ್ನು ಬಿಟ್ಟು ಒಂದಿಲ್ಲ. ಅದೀಗ ಕಳಚಿದೆ. ಇದನ್ನು ಮತ್ತೆ ಬೆಸೆಯುವ ಕೆಲಸವಾಗಬೇಕು. ಹೈನುಗಾರಿಕೆ ಮನೆಮನೆಯಲ್ಲಿ ಬರಬೇಕು. ಆಗ ಮನೆಯಲ್ಲೇ ಗೊಬ್ಬರ ತಯಾರಾಗಬೇಕು. ಹೊಲಕ್ಕೆ ಬೀಳಬೇಕು. ಈ ರೀತಿ ಕೃಷಿ ಮಾಡುವ ರೈತರು ನಗುನಗುತ್ತಾ ನಮ್ಮ ನಡುವೆ ಇರುವಾಗ, ಗೊಬ್ಬರ-ಬೀಜ ಎನ್ನುತ್ತಾ ಬೀದಿಯಲ್ಲಿರುವುದು ಎಂತಹ ದುಃಸ್ಥಿತಿ ಅಲ್ವಾ. 'ಭಾರತ ಕೃಷಿ ಪ್ರಧಾನ ದೇಶ. ರೈತನೇ ಇಲ್ಲಿನ ಬೆನ್ನೆಲುಬು' ಇದು ಆಡಳಿತ ಯಂತ್ರದ ನಿತ್ಯಪಾಠ. ಆದರೆ ವಿಪರ್ಯಾಸ ನೋಡಿ - ಬೇರೆ ಬೇರೆ ಕಾನೂನು-ನೀತಿ ಎನ್ನುತ್ತಾ ರೈತನ ಬೆನ್ನೆಲುಬನ್ನೇ ತುಂಡರಿಸುತ್ತಿದ್ದಾರೆ.

ಅದಕ್ಕಾಗಿ ನಮ್ಮ ಕೃಷಿ ಪದ್ದತಿ ಬದಲಾಗಬೇಕು. ಎಲ್ಲಿದೆ ಅದು? ನಮ್ಮ ಕಾಲ ಬುಡದಲ್ಲಿಯೇ ಇದೆ. ನೋಡುವ ಕಣ್ಣು ಬೇಕು. ಮನಸ್ಸು ಸಜ್ಜಾಗಬೇಕು. ಸಾವಯವ ಕೃಷಿ ನೀತಿಯನ್ನು ಮೊದಲು ಜ್ಯಾರಿಗೊಳಿಸಿದ ರಾಜ್ಯವೆಂಬ ಹೆಗ್ಗಳಿಕೆ ನಮಗಿದೆ. ಸಾವಯವ, ಶೂನ್ಯ, ನೈಸರ್ಗಿಕ, ಪ್ರಾಕೃತಿಕ (!) ...ಯಾವುದಾದರೂ ಓಕೆ. ವಿಷರಹಿತವಾಗಿದ್ದರೆ ಆಯಿತಷ್ಟೇ. ಆಗೊಂದು ಪ್ರಶ್ನೆ ಉದ್ಭವಿಸುತ್ತದೆ - ದಿಢೀರ್ ಆಗಿ ಸಾವಯವಕ್ಕೆ ಬದಲಾದರೆ ಇಳುವರಿ ನಷ್ಟವಾಗಿ ಕೈಸುಟ್ಟರೆ! ಈ ನಷ್ಟ ಗೊಬ್ಬರ-ಬೀಜ ಕಂಪೆನಿಗಳು ಮಾಡುವಷ್ಟು ಅಲ್ಲವಲ್ಲಾ! ನಿಧಾನಕ್ಕೆ ಅಭ್ಯಾಸವಾಗುತ್ತದೆ. ರೈತರೆದುರಿಗೆ ಆಯ್ಕೆ ಎರಡು. ಒಂದೋ ರಸಗೊಬ್ಬರ-ಬೀಜ ಎನ್ನುತ್ತಾ ಕಂಪೆನಿಗಳನ್ನು ನೆಚ್ಚಿಕೊಂಡು ಬದುಕಿಡೀ ನರಳುವುದು. ಮತ್ತೊಂದು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿ ಜೀವನದಲ್ಲಿ ನಗುನಗುತ್ತಾ ಇರುವುದು.

Sunday, July 19, 2009

'ಸಿರಿಮನೆ'ಯ ಸಿರಿ!

ಸಭೆಯೊಂದರಲ್ಲಿ ಭಾಗವಹಿಸಿಲು ಪುತ್ತೂರಿನ ಸ್ನೇಹಿತರೊಂದಿಗೆ ಇಂದು ಶೃಂಗೇರಿಗೆ ಹೋಗಿದ್ದೆ. ಪುತ್ತೂರು ಬಿಡುವಾಗ ಮಳೆಯ ಸುಳಿವಿಲ್ಲ. ಗುರುವಾಯನಕೆರೆ ದಾಟುತ್ತಿದ್ದಂತೆ ಪಿರಿಪಿರಿ ಶುರು. ಮಧ್ಯದಲ್ಲಿ ಮಾರ್ಗ ಕುಸಿತು, ಸುತ್ತುಬಳಸಿ ಕಾರ್ಕಳ ತಲುಪುವಾಗ ಮಳೆ ಶುರು. ಬಜಗೋಳಿ, ಕೆರೆಕಟ್ಟೆ ಪ್ರವೇಶಿಸುತ್ತಿದ್ದಂತೆ 'ಮಲೆನಾಡಿನ ಅನುಭವ'. ಹಿಮಾಚ್ಛಾದಿತ ಪ್ರಕೃತಿ.

ಶೃಂಗೇರಿಯಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದ ಕಿಗ್ಗ ಜಲಪಾತವೆಂದೇ ಪ್ರಸಿದ್ಧವಾದ 'ಸಿರಿಮನೆ ಜಲಪಾದ' ದರ್ಶನ. ಬೆಳಿಗ್ಗೆ ಶುರುವಾದ ಮಳೆ ಸಂಜೆಯವರೆಗೂ ಬರೋಬ್ಬರಿ! ತುಂಬಿ ಧುಮ್ಮಿಕ್ಕುವ ಸಿರಿಮನೆಯ ಸಿರಿ ಶಬ್ಧಗಳಲ್ಲಿ ಹಿಡಿದಿಡಲು ಅಸಾಧ್ಯ. ನೋಡಿಯೇ ಅನುಭವಿಸಬೇಕು. ಗಾಳಿ ಬೀಸಿದಾಗ, ಮೋಡ ದಟ್ಟೈಸಿದಾಗ ಉಂಟಾಗುವ ರೋಚಕ ಕ್ಷಣಗಳು, ಜಲಧಾರೆ ಕೆಳಕ್ಕೆ ಅಪ್ಪಳಿಸಿ, ಮೇಲಕ್ಕೆ ಜಿಗಿಯುವ ವೈಭವ! 'ಒಂದೆಡೆ ಮಳೆ, ಮತ್ತೊಂದೆಡೆ ಥಂಡಿ.. ಸಿರಿಯ ಮುಂದೆ ಇವೆಲ್ಲವೂ ಗೌಣ.

ಜಲಪಾತದ ತೀರಾ ತಪ್ಪಲಲ್ಲಿ ನಾಲ್ಕೈದು ಮಂದಿ ಯುವಕರು ನೀರಿನೊಂದಿಗೆ ಆಟವಾಡುತ್ತಿದ್ದರು! ನನನಗನ್ನಿಸಿತು, ಇವರು ನೀರಿನೊಂದಿಗೆ ಆಟವಾಡುವುದಲ್ಲ, ವಿಧಿಯೊಂದಿಗೆ ಆಟವಾಡುವುದು! ಇಂತಹ ಆಟ ಸಲ್ಲ. ಯಾಕೋ, ಅಲ್ಲಿನ ರಕ್ಷಣಾ ಮಂದಿಯ ಗಮನಕ್ಕೆ ಯಾಕೆ ಬಂದಿಲ್ಲ?

ಇರಲಿ, ಜಲಪಾತ ನೋಡಿ ಮೇಲಕ್ಕೆ ಬರುತ್ತಿದ್ದಂತೆ 'ಚಕೋತ' ಹಣ್ಣು ಮಾರುವ ಒಂದಿಬ್ಬರು ಸಿಕ್ಕರು. ಅವರೇ ಬೆಳೆದ ಹಣ್ಣುಗಳಂತೆ. ಒಂದು ಹಣ್ಣಿಗೆ ಐದು ರೂಪಾಯಿ. 'ಯಾಕೆ ಇಷ್ಟು ಕಡಿಮೆ ಕ್ರಯಕ್ಕೆ ಮಾರುತ್ತೀರಾ' ಅಂದಾಗ, 'ಇದು ನಾವೇ ಬೆಳೆದುದು. ನಮಗೆ ಸಾಕು' ಎನ್ನಬೇಕೇ. ಇದೇ ಹಣ್ಣಿಗೆ ನಗರದಲ್ಲಾಗುತ್ತಿದ್ದರೆ ಮೂವತ್ತೋ-ನಲವತ್ತೋ ಖಂಡಿತ. ಜತೆಯಿಲ್ಲಿದ್ದವರೆಲ್ಲಾ ಹಣ್ಣನ್ನು ಖರೀದಿಸಿದಾಗ ಅವನ ಮುಖ ಅರಳಿತ್ತು. ಇದು ಕೃಷಿ ಜೀವನ-ಕೃಷಿಕನ ಜೀವನ.

Friday, July 17, 2009

ಬದುಕು ಹಸನಾಗಿಸಿದ ಹಪ್ಪಳ ಉದ್ದಿಮೆ

ಶಂಕರರಾಯರ ಜೀನಸು ಅಂಗಡಿ ಸೀಗೋಡು ಪರಿಸರದಲ್ಲಿ ಹೆಸರು ಮಾಡಿತ್ತು. ಒಳ್ಳೆಯ ವ್ಯಾಪಾರ. ಗಿರಾಕಿಗಳಲ್ಲಿ ಹೆಚ್ಚಿನವರೂ ಕೂಲಿಕಾರ್ಮಿಕರು. ಹಳ್ಳಿ ಅಂಗಡಿಯಲ್ಲಿ ಸಾಲ ಇಲ್ಲದಿದ್ದರೆ ಹೇಗೆ? ಈ ಸಾಲವೇ ರಾಯರನ್ನು ಸೋಲಿಸಿತು.

ಹದಿನೆಂಟು ವರುಷದ ನಂತರ ವ್ಯಾಪಾರ ವಿದಾಯ ಅನಿವಾರ್ಯವಾಯಿತು.ಬದುಕಿಗೊಂದು ವೃತ್ತಿ ಬೇಕಿತ್ತು. ಇಳಿ ವಯಸ್ಸಿನಲ್ಲಿ ಏನು ಮಾಡೋಣ? ಬಾಲ್ಯದ ಹಪ್ಪಳ ತಯಾರಿ ನೆನಪಿಗೆ ಬಂತು. ಅಪ್ಪನ ಯೋಚನೆಗೆ ಮಗ ರಾಘವೇಂದ್ರರ ಸಮ್ಮತಿ. ಮನೆಯ ಒಂದು ಭಾಗದಲ್ಲೇ ಸುರುವಾಯಿತು ಹಪ್ಪಳ ಉದ್ದಿಮೆ. ಉತ್ಪಾದನೆ ಶಂಕರರಾಯರದು; ಮಗನಿಗೆ ಮಾರುಕಟ್ಟೆ. 'ಗುಣಮಟ್ಟ ಚೆನ್ನಾಗಿರಬೇಕು' ಎಂಬುದು ಮೂಲಮಂತ್ರ.

ಮೊದಲಿಗೆ ರಾಗಿ, ಗೋಧಿ ಹಪ್ಪಳ ಮಾಡಿದ್ದರು. 'ಅದನ್ನು ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲ. ಮಾಡಿದಷ್ಟು ಉಚಿತ ಕೊಟ್ಟದ್ದೇ ಬಂತು.' ನಂತರ ಹಲಸು, ಕೋಲುಗೆಣಸಿನ ಹಪ್ಪಳ ಸುರು.'ಜೀನಸು ಅಂಗಡಿಯಿದ್ದಾಗ ಜನಸಂಪರ್ಕವಿತ್ತು. ಮೊದಮೊದಲು ರುಚಿ ಹಿಡಿಸಲು ಉಚಿತವಾಗಿ ಕೊಟ್ಟರು. ಹಲವರಿಗೆ ಹಿಡಿಸಿತು. 'ನಮ್ಮಲ್ಲಿ ನಂಬಿಕೆ ಇತ್ತು. ತೆಕ್ಕೊಂಡ್ರು.'ಹಲಸಿನ ಹಪ್ಪಳಕ್ಕೆ ಮೊದಲ ಆದ್ಯತೆ. ಉಳಿದ ಋತುವಿನಲ್ಲಿ ಕೋಲುಗೆಣಸಿನದು.

ಹಲಸಿನ ಕಾಯಿಯ ಸೊಳೆ ದಪ್ಪ ಬೇಕು, ಸಿಹಿಯಾಗಿರಬೇಕು. ಇಂಥ ಗುಣದವನ್ನು ಮೊದಲೇ ಗೊತ್ತುಮಾಡಿಟ್ಟು ಕೊಳ್ಳುತ್ತಾರೆ. ತಾವೇ ಹೋಗಿ ಕೊಯಿದು ತರುತ್ತಾರೆ. ಒಂದು ಹಲಸಿಗೆ 3 - 3.50 ರೂಪಾಯಿ ಪಾವತಿ. ಮನೆ ತಲಪುವಾಗ ಐದು ರೂಪಾಯಿ ಆಗುತ್ತದೆ. ಬೇಯಿಸಿ ಗ್ರೈಂಡರ್ನಲ್ಲಿ ಅರೆದು, ಉಂಡೆ ಮಾಡಿ, ಚಪಾತಿ ಮಣೆಯಲ್ಲಿಟ್ಟು ಒತ್ತಿ ಹಪ್ಪಳ ತಯಾರಿ. ಎರಡು ಬಿಸಿಲು ಒಣಗಬೇಕು. ಮಳೆಗಾಲದಲ್ಲಿ ಡ್ರೈಯರ್ ಬಳಕೆ. ಒಂದು ದಿನ ಸಾಕು. ಒಂದು ಹಲಸಿನಕಾಯಿಯಿಂದ 150 ಹಪ್ಪಳ.ಹಲಸಿಗೆ ಜೂನ್, ಜುಲಾಯಿ, ಆಗಸ್ಟ್ ಋತು.

ಉಳಿದ ಸಮಯದಲ್ಲಿ ಸನಿಹದ ಎನ್.ಆರ್.ಪುರದಿಂದ ತರುವ ಕೋಲುಗೆಣಸಿನದು (ಮಲೆಯಾಳದಲ್ಲಿ 'ಕಪ್ಪ'). 'ಕಪ್ಪ'ಕ್ಕೆ ಕಿಲೋಗೆ 7 ರೂಪಾಯಿಯಂತೆ ಖರೀದಿ. ಒಂದು ಕಿಲೋ ಗೆಣಸಿನಿಂದ 25-30 ಹಪ್ಪಳ ತಯಾರಿ. 3 - 4ದಿವಸಗಳಿಗೆ 50 ಕಿಲೋ ಬೇಕು. 'ಹಲಸಿನಲ್ಲಿ ಗೆಣಸಿಗಿಂತ ಕೆಲಸ ಜಾಸ್ತಿ. ಗೆಣಸಿನ ಸಿಪ್ಪೆ ತೆಗೆದು ಬೇಯಿಸಿ ಪುನಃ ಅದರಲ್ಲಿದ್ದ ದೊಡ್ಡ ನಾರನ್ನು ತೆಗೆಯಬೇಕು. ಮತ್ತೆಲ್ಲಾ ಹಲಸಿನ ಹಪ್ಪಳದಂತೆಯೇ ತಯಾರಿ.ಇಪ್ಪತ್ತೈದು ಹಪ್ಪಳಗಳ ಪ್ಯಾಕೆಟ್. ಬೆಲೆ ಇಪ್ಪತ್ತು ರೂಪಾಯಿ. ' 'ಸುರು ಮಾಡಿದ ಕಾಲದಿಂದ ಐದು ವರ್ಷಗಳಲ್ಲಿ ದರ ವ್ಯತ್ಯಾಸ ಮಾಡಿಲ್ಲ.' ಎನ್ನುತ್ತಾ, 'ಮಾರುಕಟ್ಟೆಯಲ್ಲಿ ಸಿಗುವ ಹಪ್ಪಳಗಳಿಂತ ನಮ್ಮದರ ದರ ಜಾಸ್ತಿ.ಆದರೆ ಶುಚಿರುಚಿಗಳಿಂದಾಗಿ ಬೇಡಿಕೆ ಹೆಚ್ಚು.' ಎನ್ನುತ್ತಾರೆ.

'ಮಾರುಕಟ್ಟೆಯಲ್ಲಿ ಗೆಣಸಿನ ಹುಡಿಯ ಹಪ್ಪಳ ಸಿಗ್ತದೆ. ಅದು ಹುರಿದಾಗ ಬೇಗನೆ ಮೆದು ಆಗುತ್ತದೆ. ನಮ್ಮ ಹಪ್ಪಳ ಎಣ್ಣೆ ಕುಡಿಯುವುದಿಲ್ಲ. ಕಾರಣ, ಹುಡಿಯ ಹಪ್ಪಳದಲ್ಲಿ ನಾರಿರುವುದಿಲ್ಲ. ಗೆಣಸಿನಿಂದಲೇ ಮಾಡುವುದರಲ್ಲಿ ನಾರಿನಂಶ ಹೆಚ್ಚು.'ಅಪ್ಪ-ಮಗ ಸೇರಿ ದಿನಕ್ಕೆ 500-700 ಹಪ್ಪಳ ತಯಾರಿ. 'ಮದುವೆ ಸಮಾರಂಭಗಳಿಗೆ ವಿಶೇಷವಾಗಿ ಆರ್ಡರ್ ಬರುತ್ತದೆ. ಮದುವೆ ಊಟಕ್ಕೆ ಚಿಕ್ಕ ಹಪ್ಪಳ ಬೇಕು. ತಯಾರಿಗೆ ಹೆಚ್ಚು ಸಮಯ ಹಿಡಿಯುತ್ತದೆ. 'ಕಳೆದ ಮದುವೆ ಋತುವಿನಲ್ಲಿ ಪೂರೈಸಲು ಸಾಧ್ಯವಾಗದೆ ಐವತ್ತು ಸಾವಿರ ರೂಪಾಯಿಯ ಆರ್ಡರ್ ಬಿಟ್ಟಿದ್ದೇವೆ!' ಎನ್ನುತ್ತಾರೆ.

ಮದುವೆ ಹಪ್ಪಳದ ವ್ಯಾಸ ನಾಲ್ಕಿಂಚಾದರೆ ಮಾಮೂಲಿಯದಕ್ಕೆ ಆರಿಂಚು. ಹಲಸಿನ ಹಪ್ಪಳಕ್ಕೆ ಬೇಡಿಕೆ ಹೆಚ್ಚು. ಪ್ರವಾಸಿ ತಾಣಗಳಲ್ಲಿ ಹಲಸಿನ ರುಚಿ ಗೊತ್ತಿರುವ ದೂರದವರು ಒಯ್ಯುತ್ತಾರೆ. ಮಾರುಕಟ್ಟೆಗೆ ತಮ್ಮದೇ ಆದ ಬ್ರಾಂಡ್ ಹೆಸರಲ್ಲಿ ಸ್ಟಿಕ್ಕರ್ ಹಾಕಿ ಕೊಡುತ್ತಾರೆ. ಕೆಲವು ಅಂಗಡಿಯವರು ಇವರ ಸ್ಟಿಕರ್ ತೆಗೆದು ತಮ್ಮದನ್ನು ಅಂಟಿಸಿ ಹೆಚ್ಚು ದರಕ್ಕೆ ಮಾರುವುದೂ ಇದೆಯಂತೆ. ಮನೆಯಿಂದಲೇ ಒಯ್ಯುವವರೂ ಇದ್ದಾರೆ.

'ಈಗ ಹಣಕ್ಕೆ ಅಡಚಣೆಯಾದರೆ, ಐದಾರು ಪ್ಯಾಕೆಟ್ ಹಪ್ಪಳವನ್ನು ಪೇಟೆಗೆ ಒಯ್ದರೆ ಆಯಿತು' ಎನ್ನುವಷ್ಟು ಬೇಡಿಕೆ ಇವರ ಹಪ್ಪಳಕ್ಕೆ. ಕಳೆದ ಐದು ವರುಷಗಳಲ್ಲಿ ಕಚ್ಚಾವಸ್ತು ಸಿಕ್ಕದೆ ಅಪರೂಪಕ್ಕೊಮ್ಮೆ ಹಪ್ಪಳ ಕೆಲಸ ರಜಾ ಪಡೆದುದೂ ಇದೆ.'ಮನೆಬಾಡಿಗೆ, ಕೂಲಿ, ಕಚ್ಚಾವಸ್ತುಗಳ ವಿಪರೀತ ಏರಿಕೆಯಿಂದಾಗಿ ಹಪ್ಪಳ ಪ್ಯಾಕೆಟಿನ ದರ ಭವಿಷ್ಯದಲ್ಲಿ ಏರಿಸದೆ ನಿರ್ವಾಹವಿಲ್ಲ' ಜತೆಗಿದ್ದ ವಸಂತಕುಮಾರ್ ಹರ್ಡೀಕರ್ ಕಿವಿಯಲ್ಲಿ ರಾಘವೇಂದ್ರ ಉಸುರಿದರು!.
(ವಿ.ಎಂ.ಶಂಕರ ರಾವ್, ಸೀಗೋಡು, ಅಂಚೆ : ದೇವಗೋಡು, ಕೊಪ್ಪ ತಾಲೂಕು - 577 112, ದೂರವಾಣಿ: 08266-251937, ಮೊ: ೯೪೪೮೫೨೪೬೩೭)

Monday, July 13, 2009

ಬೆಳೆಸಿ ತಿನ್ನುವ 'ರುಚಿ'

'ಪೇಟೆಯಿಂದ ತರುವ ಹಣ್ಣು ಯಾವಾಗಲೂ ರುಚಿ! ಯಾಕೆಂದರೆ ರೊಕ್ಕ ಕೊಟ್ಟಿರುತ್ತೇವೆಲ್ಲಾ! ಆದರೆ ನಾವೇ ಬೆಳೆದ ಹಣ್ಣನ್ನು ತಿಂದಾಗ ಅದರ ರುಚಿ ಯಾವುದಕ್ಕೂ ಸಾಟಿಯಿಲ್ಲ. ಅದನ್ನು ತಿನ್ನುವುದು ಅಭಿಮಾನ-ಸ್ವಾಭಿಮಾನ' ಎನ್ನುತ್ತಾ ತಟ್ಟೆ ತುಂಬಾ ಚಿಕ್ಕು ಹಣ್ಣನ್ನು ತಂದಿಟ್ಟರು ಹಂಜ್ಹಾ . ಜೊತೆಗೆ 'ಇದನ್ನು ಕುಡಿಯಿರಿ. ನಿಂಬೆ ನಾವೇ ಬೆಳೆದದ್ದು' ಹಂಜ್ಹಾ ಅವರ ಮಡದಿ ಆಯಿಶಾ ದೊಡ್ಡ ಗ್ಲಾಸಲ್ಲಿ ಶರಬತ್ತು ತಂದಿಟ್ಟಾಗ-ದಂಪತಿಗಳ ಸಸ್ಯ, ಹಣ್ಣಿನ ಪ್ರೀತಿಗೆ ಮಾರು ಹೋದೆ.

ಹಂಜ್ಹಾರದು ಐದು ಸೆಂಟ್ಸಿನ ಜಾಗ. ಮೊದಲು ಬೋಳು ಗುಡ್ಡ. ನೀರಿಗೆ ತತ್ವಾರ. ಪುರಸಭೆಯ ಪೈಪುನೀರು ಅವರಿಗೆ ಕುಡಿನೀರು. ಐದು ಸೆಂಟ್ಸಲ್ಲಿ ಮೂರೂವರೆ ಸೆಂಟ್ಸ್ ಮನೆಯಿದೆ. ಉಳಿದ ಜಾಗ ಪೂರ್ತಿ ಹಣ್ಣಿನ ಗಿಡಗಳು. ಏನಿಲ್ಲವೆಂದರೂ ಮೂವತ್ತಕ್ಕೂ ಮಿಕ್ಕಿ ವಿವಿಧ ಜಾತಿಯ ಹಣ್ಣುಗಳಿರಬಹುದು. ಇನ್ನು ಒಂದೆರಡು ವರುಷದಲ್ಲಿ ಫಲನೀಡುತ್ತವೆ.

ಹಂಜ್ಹಾ ಅವರ ಒಂದೂವರೆ ಸೆಂಟ್ಸ್ನಲ್ಲಿ ಏನೂ ವಿಶೇಷವಿಲ್ಲದಿರಬಹುದು. ಆದರೆ 'ನಾವೇ ಬೆಳೆದ ಹಣ್ಣನ್ನು ತಿನ್ನುವುದು ಅಭಿಮಾನ' ಎನ್ನುವ ಅವರ ನಿಲುವು ಇದೆಯಲ್ಲಾ, ಇದನ್ನು ಗೌರವಿಸಬೇಕು. ಒಂದು ಕಿಲೋ ಚಿಕ್ಕು ಹಣ್ಣಿಗೆ ಮೂವತ್ತೋ ನಲವತ್ತೋ ತೆತ್ತು, ಅದನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿ ತುಂಬಿ ತೂಗಿಸಿಕೊಂಡು ಬರುವುದರಲ್ಲೇ ಅಭಿಮಾನ ಪಡುವ ನಾವು, ನಮ್ಮನ್ನೊಮ್ಮೆ ಹಂಜ್ಹಾರೊಂದಿಗೆ ಹೋಲಿಸೋಣ! 'ಹೆಚ್ಚು ಹಣ ಇದ್ದವರು ಕೃಷಿ ಮಾಡುವುದು ದೊಡ್ಡದಲ್ಲ' ಜತೆಗಿದ್ದ ಬಾಬು ಶೆಟ್ರು ಪಿಸುಗುಟ್ಟಿದರು.

ಹೌದು. ಹೇಳುವಂತಹ ಕೃಷಿ ಅನುಭವ ಇಲ್ಲದ, ದೊಡ್ಡ ಆರ್ಥಿಕ ಸಂಪನ್ಮೂಲ ಇಲ್ಲದೆ ಹಂಜ್ಹಾ, ಇದ್ದ ಮಣ್ಣಿನಲ್ಲಿ ಒಂಚೂರು ಹಾಳು ಮಾಡದೆ, ಅಲ್ಲೆಲ್ಲಾ ಹೂವಿನ-ಹಣ್ಣಿನ ಗಿಡಗಳನ್ನು ಬೆಳೆಸಿರುವುದು ಗ್ರೇಟ್ ಅಲ್ವಾ. ಮನೆಯೆದುರಿನ ಚಿಕ್ಕು, ಮನೆ ಹಿಂಬದಿಯಲ್ಲಿರುವ ನಿಂಬೆಯೀಗ ಅತಿಥಿ ಸತ್ಕಾರಕ್ಕೆ ಮೀಸಲು!

ಒಮ್ಮೆ ಅತೀ ಹೆಚ್ಚು ಮಾವು ಬೆಳೆವ ಕೃಷಿಕರಲ್ಲಿಗೆ ಹೋಗಿದ್ದೆ. ಗಿಡ ತುಂಬಾ ತೂಗಿ-ತೊನೆವ ಫಲಗಳು. ನೋಟದಲ್ಲೇ ಮುಕ್ಕಿ ಬಿಡುವಾ ಎನ್ನುವಷ್ಟು ಅವುಗಳ ಬಿಂಕ-ಬಿನ್ನಾಣ! ಸರಿ, ತೋಟ ಸುತ್ತಿಯಾಯಿತು. ಇನ್ನೇನು ಹೊರಡುವ ಕ್ಷಣ ಬಂತು. ಕಾಫಿ-ಬೇಕರಿ ಚಿಪ್ಸ್ ಸೇವೆ. ಜತೆಗೆ ಮಾವಿನ ಹಣ್ಣು ಬರುತ್ತದೋ ಅಂತ ಕಾದದ್ದೇ ಬಂತು. ಆಸೆ ನಿರಾಸೆ. ಗಿಡಗಳಲ್ಲಿ ಲೋಡ್ಗಟ್ಟಲೆ ಫಲವಿದ್ದರೂ, 'ಕೊಟ್ಟು ಸಂತೋಷ ಪಡುವ' ಮನಸ್ಸಿಲ್ಲದಿದ್ದರೆ ಹೇಗೆ?

ಹಂಜ್ಹಾ ಅವರ ಆತಿಥ್ಯಕ್ಕೆ ಈ ಘಟನೆ ನೆನಪಾಯಿತಷ್ಟೇ. ಮನೆಗೆ ತಾಗಿ ಅವರ ಅತ್ತೆ ಮನೆ. ಅಲ್ಲೂ ಗಿಡಗಳು. ಮೊದಲು ಅಂಗಳವೇ ಇಲ್ಲವಂತೆ. ಪತ್ನಿಯ ಒತ್ತಾಯಕ್ಕೆ ಮಣಿದು, ಅಂಗಳಕ್ಕೆ ಕಾಂಕ್ರಿಟ್ ಹಾಕಿದ್ದಾರೆ. 'ಅವಳಿಗೆ ಹಾವಿನ ಭಯ' ಆಯಿಶಾರನ್ನು ಛೇಡಿಸುತ್ತಾರೆ. ತಾನು ಎಲ್ಲೇ ಹೋಗಲಿ, ಬರುವಾಗ ಯಾವುದಾದರೊಂದು ಹಣ್ಣಿನ ಗಿಡ ಅವರ ಬತ್ತಳಿಕೆಯಲ್ಲಿರುತ್ತದೆ. ಇಷ್ಟು ಹೇಳುವಾಗ ಆರೈಕೆ ಬಗ್ಗೆ ಹೇಳದಿದ್ದರೆ ಅಪೂರ್ಣ. ಯಾವುದೇ ಸರಕಾರಿ ಗೊಬ್ಬರ ಇವರ ಕಂಪೌಂಡ್ ಪ್ರವೇಶಿಸಿಲ್ಲ. ಕಂಪೆನಿ ಗೊಬ್ಬರ ಉಹೂಂ.

ಮನೆಯೆದುರೇ ಸಾಗುವ ಮಾರ್ಗದುದ್ದಕ್ಕೂ ಹಂಜ್ಹಾ ಬೆಳಿಗ್ಗೆ ವಾಕಿಂಗ್ ಹೋಗ್ತಾರೆ. ಹೋಗುವಾಗ ಪ್ಲಾಸ್ಟಿಕ್ ಚೀಲ ಜತೆಗಿರುತ್ತದೆ. ಬರುವಾಗ ಸೆಗಣಿಯಿಂದ ಅದು ತುಂಬಿರುತ್ತದೆ! 'ದಾರಿಯುದ್ದಕ್ಕೂ ಬಿದ್ದಿರುವ ಸೆಗಣಿಯನ್ನು ಆಯುವುದು ಕಷ್ಟದ ಕೆಲಸವಲ್ಲ. ಇದು ನನಗೆ ಅವಮಾನವೂ ಅಲ್ಲ' ಎನ್ನುತ್ತಾರೆ ಹಂಜ್ಹಾ. ಪರಿಚಿತರಲ್ಲಿಂದ ಆಡಿನ ಹಿಕ್ಕೆಯನ್ನೂ ತರುತ್ತಾರೆ. ಲಭ್ಯ ನೀರುಣಿಕೆ. ಇವಿಷ್ಟು ಬಿಟ್ಟರೆ ಬೇರ್ಯಾವ ಆರೈಕೆಯೂ ಇಲ್ಲ. ಫಲ ಬಿಡುವ ಚಿಕ್ಕು, ನಿಂಬೆ ಸ್ನೇಹಿತರಿಗೆ, ಬಂಧುಗಳಿಗೆ ಹಂಚುತ್ತಾರೆ. 'ಇಷ್ಟು ಸಾಲದು' ಎಂಬ ಅತೃಪ್ತಿ. ಅದಕ್ಕಾಗಿ ಸನಿಹದಲ್ಲೇ ನಲವತ್ತು ಸೆಂಟ್ಸ್ ಜಾಗ ಖರೀದಿಸಿದ್ದಾರೆ. '

ಎಲ್ಲವೂ ಸಾಲದ ಹಣದಿಂದ ನಿಭಾಯಿಸಿದ್ದೆ. ಅದನ್ನು ತೀರಿಸುವುದು ಹೇಗೆ? ದುಡಿದು ಸಂಪಾದಿಸಲು ಕಡಲಾಚೆ ಹಾರಲು ಸಿದ್ಧರಾಗಿದ್ದಾರೆ ಹಂಜ್ಹಾ. 'ಐದು ವರುಷ ಕಳೆದು ಬನ್ನಿ. ಎಂತೆಂತಾ ಹಣ್ಣು ನಿಮಗೆ ಕೊಡುತ್ತೇನೆ ನೋಡಿ' - ಅವರ ಆತ್ಮವಿಶ್ವಾಸಕ್ಕೆ ಜೈ. ಬೆಳೆಸಿ ತಿನ್ನುವ ರುಚಿಯನ್ನು ಸವಿಯಲು, ಆ ಸವಿಯನ್ನು ಉಳಿದವರಿಗೆ ಹಂಚುವ ಹಂಜ್ಹಾ ನೆನಪಾದಾಗಲೆಲ್ಲಾ ಕಾಡುತ್ತಿರುತ್ತಾರೆ! ಬೊಗಸೆಯಗಲದ ಜಾಗದಲ್ಲಿ ಇವಿಷ್ಟಲ್ಲದೆ- ಚಿಕ್ಕ ತಾವರೆ ಕೊಳ, ಅದರಲ್ಲೊಂದಿಷ್ಟು ಮೀನುಗಳು, ಗೂಡಿನೊಳಗೆ ಲೊಚಗುಟ್ಟುವ ಐದಾರು ಬಣ್ಣಬಣ್ಣದ ಪಕ್ಷಿಗಳು, ಅಂಗಳ ತುಂಬಿಕೊಂಡ ನೈಸರ್ಗಿಕ ನೆರಳು.

Sunday, July 12, 2009

ಬಾಲ್ಯ 'ಸಂಸ್ಕಾರ' : ಬದುಕಿನ ಅಡಿಗಟ್ಟು


ಮಕ್ಕಳಿಗೆ ರಜಾದ ಮಜಾ! 'ಬೇಸಿಗೆ ಶಿಬಿರ'ಗಳ ಭರಾಟೆ! ನಿಜವಾದ ಆಸಕ್ತಿಯಿಂದ ಭಾಗವಹಿಸುವ ಮಕ್ಕಳು ಒಂದೆಡೆ. 'ಅಯ್ಯೋ, ರಜೆಯಲ್ಲಿ ಉಪದ್ರ ತಡೆಯಲಾಗುತ್ತಿಲ್ಲವಲ್ಲಾ' ಎನ್ನುತ್ತಾ ಮಕ್ಕಳನ್ನು ಅಟ್ಟುವುದು(!) ಮತ್ತೊಂದೆಡೆ. ಒಟ್ಟಿನಲ್ಲಿ ರಜಾವೂ ಮುಗಿಯುತ್ತದೆ, ಶಿಬಿರವೂ ಮುಗಿಯುತ್ತದೆ!
ಇಲ್ನೋಡಿ. ಇಲ್ಲೊಂದು ಶಿಬಿರ. ಪ್ರಕೃತಿಮಧ್ಯೆ ಮಕ್ಕಳು ಶುಚಿರ್ಭೂತರಾಗಿ ಗುರುಗಳಿಗೆ ಅಭಿಮುಖವಾಗಿ ಭಕ್ತಿಯಿಂದ ಕುಳಿತಿದ್ದಾರೆ. ಇಲ್ಲಿ ಜಾತಿಯ ಸೋಂಕಿಲ್ಲ. ಅಂತಸ್ತಿನ ಛಾಯೆಯಿಲ್ಲ. ಹಣೆಯಲ್ಲಿ ತಿಲಕ. ಕೈಯಲ್ಲಿ ಮಂತ್ರ ಪುಸ್ತಕಗಳು. ಶ್ಲೋಕಗಳನ್ನು ಹೇಳುತ್ತಿದ್ದಾರೆ. ಶ್ಲೋಕಗಳ ಆರ್ಥಗಳನ್ನು ಮನನಿಸುತ್ತಿದ್ದಾರೆ...ಇದರಲ್ಲೇನು ಹೊಸತು? ಮಾಮೂಲಿ 'ಬೇಸಿಗೆ ಶಿಬಿರ'ಕ್ಕಿಂತ ಭಿನ್ನ. ಅಷ್ಟೇ ಕ್ಲಿಷ್ಟ. ಇದು 'ಸಂಸ್ಕಾರ ವಾಹಿನಿ'.
ಬದುಕಿನಲ್ಲಿ ಮರೆತು ಹೋದ ಸಂಗತಿಗಳನ್ನು ಮಕ್ಕಳಿಗೆ ತಿಳಿಸುವುದು, ಕಲಿಸುವುದು ಉದ್ದೇಶ. 'ಮೌಢ್ಯದ ಮಡಿವಂತಿಕೆಯನ್ನು ದೂರವಿಟ್ಟ ಶಿಬಿರ' ಎನ್ನುತ್ತಾರೆ ಸಾರಥ್ಯ ವಹಿಸಿದ ಸುಳ್ಯ ಹಳೆಗೇಟಿನ 'ಶ್ರೀ ಕೇಶವ ಕೃಪಾ'ದ ಪುರೋಹಿತ ನಾಗರಾಜ ಭಟ್. ಎಂಟು ದಿವಸದ ಶಿಬಿರ. ಬೆಳಿಗ್ಗೆ ಯೋಗಾಭ್ಯಾಸದಿಂದ ಆರಂಭ. ನಂತರ ಗುರುವಂದನೆ. ದೇವರ ಸಹಸ್ರನಾಮಾವಳಿ, ಮಂತ್ರಗಳ ಅಭ್ಯಾಸ. ಮುಖ್ಯವಾಗಿ ಲಲಿತಾಸಹಸ್ರನಾಮ, ಭೋಜನ ಮಂತ್ರ, ಶಾಂತಿಮಂತ್ರ, ಸುಭಾಷಿತಗಳು; ತುಳಸಿಗೆ, ದೇವರಿಗೆ, ಗುರುಹಿರಿಯರಿಗೆ, ಶಾಲೆಗೆ ಹೋಗುವಾಗ, ರಾತ್ರಿ ಮಲಗುವಾಗ..ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಹೇಳುವ ಮಂತ್ರಗಳ ಕಲಿಕೆ. 'ಹೇಳಿಕೊಟ್ಟಷ್ಟನ್ನು ಮಕ್ಕಳು ಬಹುಬೇಗ ಕಲಿತುಕೊಂಡರು' ಎನ್ನುತ್ತಾರೆ ನಾಗರಾಜ ಭಟ್.
ಮಂತ್ರಗಳೊಂದಿಗೆ 'ಭೋಜನ'ಕ್ಕೂ ಮಹತ್ವ. ಇಂದಿನ 'ಫಾಸ್ಟ್ ಫುಡ್' ಕಾಲದಲ್ಲಿ ನಾವು ಉಣ್ಣುವುದಲ್ಲ, ಮುಕ್ಕುವುದು! ಅದರಲ್ಲೂ 'ಎಲೆಯೂಟ' ಎಲ್ಲಿದೆ? ಅಲ್ಲೋ ಇಲ್ಲೋ ಮದುವೆ, ಉಪನಯನ ಹೊರತುಪಡಿಸಿ, ಮಿಕ್ಕಂತೆ ಬಫೆಯ ಓಟ! ಅನಿವಾರ್ಯವೆಂಬ ಹಣೆಪಟ್ಟಿ! 'ಇಲ್ಲಿ ಬಾಳೆಲೆ ಊಟ ಲಭ್ಯ' ಅಂತ ಫಲಕ ತೂಗಾಡಿಸಿದ ಹೋಟೇಲುಗಳಲ್ಲಂತೂ ಬಾಳೆಲೆ ಊಟ ಖಚಿತ! ಇದು ಸ್ಥಿತಿ.ಬಾಳೆಎಲೆ ಮುಂದೆ ಹೇಗೆ ಕುಳಿತುಕೊಳ್ಳಬೇಕು, ಎಲೆಯನ್ನು ಹೇಗೆ ತೊಳೆಯಬೇಕು. ಯಾವ್ಯಾವ ಖಾದ್ಯ ಎಲ್ಲೆಲ್ಲಿ? ಉಪ್ಪು, ಉಪ್ಪಿನಕಾಯಿ, ಕೋಸಂಬರಿಗಳ ಸ್ಥಾನ ಎಲ್ಲಿ? ಮೊದಲು ಯಾವುದನ್ನು ಉಣ್ಣಬೇಕು ಎಂಬ ಪ್ರತ್ಯಕ್ಷ ಪಾಠ.
ಮೊದಲಿಗೆ ಅನ್ನಕ್ಕೆ ತುಪ್ಪ-ಅನ್ನನಾಳದ ಶುದ್ಧಿಗೆ. ನಂತರ 'ಕಡೆಬಾಳೆ'ಯಲ್ಲಿನ ಪಾಯಸದ ಸವಿ. ನಂತರ 'ಸಾರು'. ಮತ್ತೆ ಸಾಂಬಾರು, ಹುಳಿಇತ್ಯಾದಿ. ಕೊನೆಗೆ ಮಜ್ಜಿಗೆ. ಇದು ಜೀರ್ಣಶಕ್ತಿಗೆ. ಒಂದೊಂದು ಖಾದ್ಯಕ್ಕೂ ವೈಜ್ಞಾನಿಕ ವಿವರಣೆ.ಬುದ್ಧಿಶಕ್ತಿ ವೃದ್ಧಿಗೆ ನಿತ್ಯ 'ತಂಬುಳಿ' ಕಡ್ಡಾಯ. ಭೋಜನ ಕಲಿಕೆಗಾಗಿ ಐಟಂಗಳ ಸಂಖ್ಯೆ ದಿನೇದಿನೇ ವೃದ್ಧಿಸುತ್ತಿತ್ತು. ಮಕ್ಕಳಿಗಿದು 'ಬೋನಸ್'! ನಾಗರಾಜ ಭಟ್ ಹೇಳುತ್ತಾರೆ - 'ಅನುಭವಿಗಳೆಂದು ಕರೆಸಿಕೊಳ್ಳುವ ನಮ್ಮಿಂದಲೂ ಚೆನ್ನಾಗಿ ಊಟ ಮಾಡಿದರು. ಪರಸ್ಪರ ಎಲೆ ತಾಗದಂತೆ, ಅನ್ನದ ಒಂದಗುಳೂ ನೆಲಕ್ಕೆ ಬೀಳದ ಜಾಗೃತಿ ಮಕ್ಕಳಲ್ಲಿ ಮೂಡಿಸಿದೆ'.
ನಿತ್ಯ ಒಂದವಧಿ ಪುರಾಣದ ಕಥೆ, ಐತಿಹಾಸಿಕ ಘಟನೆಗಳು, ಆದರ್ಶ ಪುರುಷರ ಕಥೆಗಳಿಗೆ ಸೀಮಿತ. ಎಷ್ಟಾದರೂ ಮಕ್ಕಳ ಮನಸ್ಸು ತಾನೆ. ಆಟದತ್ತ ಹೊರಳುತ್ತದೆ. ಅದಕ್ಕಾಗಿ ಕೊನೆಗೆ ರಂಗಪಾಠಗಳು, ಜಾದೂ, ಮಿಮಿಕ್ರಿ, ಪೇಪರ್ ಕ್ರಾಪ್ಟ್. ಕೊನೆ ದಿವಸ 'ಲಲಿತಾಸಹಸ್ರನಾಮ ಹವನ'. ಉಚ್ಚಕಂಠದಿಂದ ಸಹಸ್ರನಾಮ ಪಠಣ. ಎಲ್ಲರಿಗೂ ಸಾಂಪ್ರದಾಯಿಕ ಉಡುಗೆ. 'ಮಕ್ಕಳಲ್ಲಿನ ಉತ್ಸಾಹ, ಕಲಿವ ದಾಹ ಕಂಡು ಬೆರಗಾದೆ' ಎನ್ನುತ್ತಾರೆ ಶ್ರೀಕೃಷ್ಣ ಉಪಾಧ್ಯಾಯ. ಮಕ್ಕಳಿಗಾಗಿ ಶಿಬಿರ ನಡೆದುದಾದರೂ, ಅದು ಹಿರಿಯರಲ್ಲಿ ಪರಿಣಾಮ ಬೀರಿತು ಎಂಬುದಕ್ಕೆ ಒಂದು ಉದಾಹರಣೆ. ಬಾಳೆಹಣ್ಣು ತಿನ್ನುವುದು ಹೇಗೆ? ಹಣ್ಣನ್ನು ಸುಲಿದು, ಕಚ್ಚಿಕಚ್ಚಿ ತಿನ್ನುವುದು, ಕೆಲವರಂತೂ ಇಡೀ ಹಣ್ಣನ್ನೇ 'ಗುಳುಂ'!. - ಹಾಗಲ್ಲ, ಸಿಪ್ಪೆಸುಲಿದು, ಅದನ್ನು ಕೈಯಿಂದ ಮುರಿದು ತಿನ್ನಬೇಕು. ಮಕ್ಕಳಿಗೆ ಈ ಪಾಠ ಹೇಳುತ್ತಿದ್ದಂತೆ ಅಲ್ಲೇ ಇದ್ದ ಹಿರಿಯರು 'ಹೌದಲ್ಲಾ' ಅಂತ ಉದ್ಘರಿಸಿದ್ದರಂತೆ. 'ನಾವೂ ಮಾಂಸಾಹಾರವನ್ನು ಬಿಡಬಹುದಲ್ವಾ ಅಂತ ಎಳೆಯ ಮಕ್ಕಳಿಬ್ಬರು ಕೇಳಿದಾಗ ನನಗೆ ಮಾತೇ ಬರಲಿಲ್ಲ' ನಾಗರಾಜ ಭಟ್ ಭಾವುಕರಾಗುತ್ತಾರೆ.
ಶಿಬಿರದ ಪರಿಣಾಮ ಇಷ್ಟು ಸಾಕಲ್ವಾ. ಎಂಟು ದಿವಸ ಜರುಗಿದ ಶಿಬಿರ 'ಪೂರ್ತಿ ಉಚಿತ.' ಹರೀಶ ಭಟ್, ನಟರಾಜ ಶರ್ಮ, ಕುಮಾರ ಭಟ್, ಆಶ್ವಿನಿಕುಮಾರ್.. ವಿದ್ವಾಂಸರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಶ್ರೀದೇವಿ ನಾಗರಾಜ ಭಟ್ ಶಿಬಿರಾಥರ್ಿಗಳಿಗೆ 'ತಾಯಿ'. ಮಕ್ಕಳ ಆರೋಗ್ಯದ ಹೊಣೆ ಇವರದು. ತನ್ನ ಮಕ್ಕಳಂತೆ - ಅಲ್ಲ - ಅದಕ್ಕಿಂತ ಹೆಚ್ಚು ಪ್ರೀತಿಸುವ ಇವರು ನಿಜಕ್ಕೂ 'ಅಮ್ಮ'. 'ಈ ರೀತಿಯ ಶಿಬಿರ ಕೆಲವು ವರುಷದ ಕನಸು. ರೂಪುರೇಷೆಯಲ್ಲೇ ಒಂದಷ್ಟು ವರುಷಗಳು ಸಾಗಿತ್ತು. ಎಷ್ಟಾದರೂ ಪ್ರವಾಹದ ವಿರುದ್ಧ ಈಜು ತಾನೆ' - ಶಿಬಿರ ಹಿಂದಿನ ತ್ರಾಸಗಳನ್ನು ಭಟ್ ಸೂಚ್ಯವಾಗಿ ಹೇಳುತ್ತಾರೆ.
ಇನ್ನೂರಕ್ಕೂ ಮಿಕ್ಕಿ ಅರ್ಜಿಗಳು ಬಂದಿತ್ತು. ನೂರು ಮಂದಿಗೆ ಮಾತ್ರ ಅವಕಾಶ. 'ನಮ್ಮ ಮಕ್ಕಳು ಸಂಸ್ಕಾರದಿಂದ ವಂಚಿತರಾಗುತ್ತಾರೆ' ಎಂಬ ಹಿರಿಯರ ಕಾಳಜಿ ಇದೆಯಲ್ಲಾ, ಅದು ಶಿಬಿರ ಯಶಸ್ಸಿನ ಗುಟ್ಟು.ಎಂಟು ದಿವಸದಲ್ಲಿ ಇಷ್ಟೆಲ್ಲಾ ಸಾಧ್ಯವಾ? 'ಪ್ರಶ್ನೆ ಸಹಜ. ನಿತ್ಯ ಬದುಕಿನಲ್ಲಿ ಸಿಗದ ವಿಚಾರಗಳಿವು. ಬೆರಗುಕಂಗಳ ಮಕ್ಕಳಿಗೆ ತೋರಿಸಿಕೊಟ್ಟರೆ ಸಾಕು, ತಕ್ಷಣ ಗ್ರಹಿಸಿಕೊಳ್ಳುತ್ತಾರೆ. ಒಮ್ಮೆ ಮನದೊಳಗೆ ಹೊಕ್ಕರೆ ಸಾಕು, ಮತ್ತೆ ಅಭ್ಯಾಸದಿಂದ ಕರಗತವಾಗುತ್ತದೆ. ನಿತ್ಯಾಭ್ಯಾಸದಿಂದ ಕಂಠಸ್ತವಾಗುತ್ತದೆ. ಈ ಹೇಳುವ ಪ್ರಕ್ರಿಯೆ ಇದೆಯಲ್ಲಾ ಕಾಲದ ಆವಶ್ಯಕತೆ' - ನಾಗರಾಜ ಭಟ್ ಹೇಳುತ್ತಾರೆ.
ಬದುಕಿಗೆ ಸಂಸ್ಕಾರವನ್ನು ನೀಡುವ ಇಂತಹ ಶಿಬಿರವೊಂದಕ್ಕೆ ನಾಗರಾಜ ಭಟ್ಟರು ನಾಂದಿ ಹಾಡಿದ್ದಾರೆ. ನಿಜಾರ್ಥದಲ್ಲಿ 'ಸಂಸ್ಕಾರ ಶಿಬಿರ' ಮಕ್ಕಳ ಮನಸ್ಸನ್ನು ಅರಳಿಸಿದೆ. 'ಇನ್ನೂ ಸ್ವಲ್ಪ ಹೆಚ್ಚು ದಿವಸ ಬೇಕಿತ್ತು' ಹಲವು ಹೆತ್ತವರ ಒತ್ತಾಯ. ಬದುಕಿನಲ್ಲಿ ಕಳೆದು ಹೋಗುವ ಮೌಲ್ಯ, ಸಂಸ್ಕಾರಗಳನ್ನು ಪುನಃ ಹಳಿಗೆ ತರುವ ಪ್ರಯತ್ನವನ್ನು ನಾಗರಾಜ ಭಟ್ ಸಂಗಡಿಗರು 'ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ'ದ ಮೂಲಕ ಮಾಡುತ್ತಿದ್ದಾರೆ.

Saturday, July 4, 2009

ಮೌನ ಸಾಧನೆಯ ಕ್ಯಾಪ್ಸೂಲುಗಳು

ಮಾಧ್ಯಮಗಳು ರೈತ ಆತ್ಮಹತ್ಯೆಗೆ ಪ್ರಾಮುಖ್ಯತೆ ಕೊಡುವ ಬದಲು ಅವನ್ನು ತಡೆಗಟ್ಟುವ ಮಾರ್ಗಗಳಿಗೆ ಒತ್ತು ಕೊಡಬೇಕು. ರೈತರಲ್ಲಿ ಆತ್ಮವಿಶ್ವಾಸ ಬೆಳೆಸಿ, ಧೈರ್ಯ ತುಂಬುವ ಕೆಲಸವಾಗಬೇಕು. ಸಮಸ್ಯೆಯ ಭಾಗವಾಗುವ ಬದಲು ಪರಿಹಾರದ ಭಾಗವಾದರೆ ರೈತಸಮುದಾಯಕ್ಕೆ ಹಿತ. ಹತಾಶ ಸನ್ನಿವೇಶದಲ್ಲೂ ರೈತರಲ್ಲಿ ಭರವಸೆ ಮೂಡಿಸಬಲ್ಲ ಯಶೋಗಾಥೆಗಳು ಅಲ್ಲಲ್ಲಿ ಇವೆ. ಇವುಗಳ ಮೇಲೆ ಸೂಕ್ತರೀತಿಯಲ್ಲಿ ಬೆಳಕು ಚೆಲ್ಲಿದರೆ ವ್ಯವಸಾಯ ರಂಗದಲ್ಲಿ ಹೊಸ ಅಧ್ಯಾಯ ಆರಂಭವಾದೀತು ಎನ್ನುವುದು ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಆಶಯ.

ಈ ಹಿನ್ನೆಲೆಯಲ್ಲಿ ಕೇಂದ್ರ 'ಪುಸ್ತಕ ಸರಣಿ' ಆರಂಭಿಸಿದೆ. ರಾಜ್ಯದ ವಿವಿಧೆಡೆಗಳಲ್ಲಿ ವಿಷಮುಕ್ತ ಒಕ್ಕಲುತನ ಮಾಡುತ್ತ ಹೊಸಹೊಸ ಪ್ರಯೋಗಗಳಲ್ಲಿ ತೊಡಗಿ, ನೆಮ್ಮದಿಯ ಬದುಕು ಸಾಕಾರಗೊಳಿಸಿಕೊಂಡವರ ಅನುಭವ-ಚಿಂತನೆಯ ಮೇಲೆ ಬೆಳಕು ಚೆಲ್ಲುವುದು ಉದ್ದೇಶ. ಮಳೆಯಾಶ್ರಿತ ಪ್ರದೇಶದ ಯಶೋಗಾಥೆಗಳಿಗೆ ಆದ್ಯತೆ. ನಾಟಿ ತಳಿಗಳ ಸಂರಕ್ಷಣೆಗೆ ಶ್ರಮಿಸುತ್ತಿರುವವರು, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಕಂಡುಕೊಂಡವರು, ಉಪಕಸುಬುಗಳ ಮೂಲಕ ಅರ್ಥಿಕ ಭದ್ರತೆ ಕಲ್ಪಿಸಿಕೊಂಡವರು. ಇಂತಹ ರೈತರ ಬಗ್ಗೆ ಪುಸ್ತಕ ಹೊರತಂದರೆ ಅವು ಇನ್ನಷ್ಟು ರೈತರಿಗೆ ಸ್ಫೂರ್ತಿ ನೀಡಬಹುದು ಎಂದು ನಂಬುಗೆ.

ಈ ಸದಾಶಯದ ಎರಡು ಪುಸ್ತಕಗಳನ್ನು ಕೇಂದ್ರವು ಪ್ರಕಟಿಸಿದೆ. ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಬೆನ್ನೆಲುಬಾಗಿ ನಿಂತಿದೆ.`ಕಲ್ಲು ಹಾಸಿನ ಮೇಲೆ ಹಸಿರು ಹೊದಿಕೆ' - ಪುಸ್ತಕದಲ್ಲಿ ಲೇಖಕ ಆನಂದತೀರ್ಥ ಪ್ಯಾಟಿ ಕೊಪ್ಪಳ ಜಿಲ್ಲೆ ಕಲ್ಲತಾವರಗೆರೆ ಗ್ರಾಮದ ಶೇಖಮ್ಮ ಮತ್ತು ಹುಚ್ಚಪ್ಪ ವಾಣಿ ದಂಪತಿಯ ಸಾಧನೆಯನ್ನು ದಾಖಲಿಸಿದ್ದಾರೆ. ಕಾಯಕವೇ ಕೈಲಾಸ ಎಂಬ ಮಾತು ಈ ದಂಪತಿಯ ಪಾಲಿಗೆ ನೂರಕ್ಕೆ ನೂರರಷ್ಟು ಸತ್ಯ. ಕಲ್ಲಿನಲ್ಲೂ ಹಸಿರು ಉಕ್ಕಿಸಿದ ಇವರ ದುಡಿಮೆ ಬೆರಗು ಮೂಡಿಸುತ್ತದೆ. ಇಂದು ಫಲವತ್ತಾದ ನೆಲ ಇದ್ದೂ ಬೇಸಾಯಕ್ಕೆ ವಿದಾಯ ಹೇಳುವ ಬೆಳವಣಿಗೆ ಒಂದೆಡೆಯಾದರೆ, ಎಂತ ಹುದೇ ಮಣ್ಣಿನಲ್ಲಾದರೂ ಸಮೃದ್ಧ ಬೆಳೆ ಬೆಳೆಯುವ ಛಲ ಇನ್ನೊಂದೆಡೆ. ಈ ಯಶೋಗಾಥೆ ಕೃಷಿರಂಗದಲ್ಲಿ ಭರವಸೆಯ ಚಿಲುಮೆ ಇದ್ದಂತೆ. ಪುಟ 28, ಬೆಲೆ 15 ರೂ.

ಹಿರಿಯ ಪತ್ರಕರ್ತ 'ಶ್ರೀ' ಪಡ್ರೆ ಬರೆದಿರುವ ಗುಡ್ಡದ ಮೇಲಿನ ಏಕವ್ಯಕ್ತಿ ಸೈನ್ಯ!' ದಕ್ಷಿಣ ಕನ್ನಡ ಜಿಲ್ಲೆ ಅಡ್ಯನಡ್ಕ ಬಳಿಯ ಮಹಾಲಿಂಗ ನಾಯ್ಕ ಅವರ ಸಾಧನೆಯ ಮೇಲಿನ ಬೆಳಕು. ಬೋಳು ಗುಡ್ಡದ ಮೇಲೆ ಒಂದರ ಮೇಲೊಂದು ಸುರಂಗ ತೋಡುತ್ತ ಕೊನೆಗೂ ಜಲಸಿರಿಯನ್ನು ಸಿದ್ಧಿಸಿಕೊಂಡು ಹಸಿರು ತೋಟ ಸೃಷ್ಟಿಸಿದ ನಾಯ್ಕರ ಪರಿಶ್ರಮದ ಚಿತ್ರಣ ಇಲ್ಲಿದೆ. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಅವರ ಕಟ್ಟುನಿಟ್ಟಾದ ಧೋರಣೆ ಮಾತ್ರವಲ್ಲ, ನೆಮ್ಮದಿಯ ಬದುಕಿನ ಮುಖ್ಯ ಸೂತ್ರಗಳಲ್ಲೊಂದು. ಅವರ ಅನುಭವದ ಮಾತು ಈಗಿನ ಸಂದರ್ಭಕ್ಕೆ ದೊಡ್ಡ ಸಂದೇಶ. ಪುಟ 28, ಬೆಲೆ ರೂ.15.

ಆಕರ್ಷಕ ವರ್ಣ ಮುಖಪುಟ. 'ಸ್ವಲ್ಪ ವಿಶೇಷ'ವೇ ಅನ್ನಿಸಿದ ಪುಸ್ತಕದ ಆಕಾರ, ತಪ್ಪಿಲ್ಲದ ಮುದ್ರಣ, ಆಕರ್ಷಕ ವಿನ್ಯಾಸ. ವಿಳಾಸ: ಕೃಷಿ ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ - 580 008, 0836-2444 736 agriculturalmedia@gmail.com

Thursday, July 2, 2009

ಎಸ್.ಬಿ.ಐ. - ಮಳೆಕೊಯ್ಲು

ಮಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಕಚೇರಿಯ ಸೂರಿನ ನೀರನ್ನು ಹಿಡಿದಿಡಲು 'ಮಳೆನೀರಿನ ಕೊಯ್ಲು' ಘಟಕ ಸ್ಥಾಪಿಸಿದೆ. ಜುಲಾಯಿ 1ರಂದು 'ಸ್ಟೇಟ್ ಬ್ಯಾಂಕ್ ಡೇ'ಯಂದು ಫಾರ್ಮರ್ ಫಸ್ಟ್ ಟ್ರಸ್ಟಿನ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಘಟಕಕ್ಕೆ ನೀರನ್ನು ಎರೆಯುವುದರ ಮೂಲಕ ಶುಭಾರಂಭಗೊಳಿಸಿದರು. 'ಗ್ರೀನ್ ಬ್ಯಾಂಕಿಂಗ್ ಪ್ರಾಕ್ಟೀಸ್'ನಡಿ ಈ ಘಟಕ ಆರಂಭಗೊಂಡಿದೆ. ಬ್ಯಾಂಕಿನ ವರಿಷ್ಠ ಗಣೇಶ ಭಟ್ ಶುಭಾಶಂಸನೆ ಮಾಡಿದರು. ಬ್ಯಾಂಕಿನ ಬಹುತೇಕ ಆಸಕ್ತ ಸಿಬ್ಬಂದಿಗಳ ಉಪಸ್ಥಿತಿ. 'ನೀರನ್ನು ತುಪ್ಪದ ಹಾಗೆ ಬಳಸಿ. ಬ್ಯಾಂಕ್ ಬಳಕೆಗಾಗಿ ವಾರಕ್ಕೆ ಕನಿಷ್ಠವೆಂದರೂ 2-3 ಟ್ಯಾಂಕರ್ ನೀರನ್ನು ಖರೀದಿಸುತ್ತಿತ್ತು. ಮಳೆನೀರಿನ ಕೊಯ್ಲಿನಿಂದಾಗಿ ಮುಂಬರುವ ದಿವಸಗಳಲ್ಲಿ ಈ ಹೊರೆ ಮತ್ತು ತಲೆನೋವು ಇನ್ನಷ್ಟು ಕಡಿಮೆಯಾಗಲಿದೆ.' - ಎಂದು ಬ್ಯಾಂಕಿನ ಅಸಿಸ್ಟಾಂಟ್ ಜನರಲ್ ಮ್ಯಾನೇಜರ್ ಸಿ.ಎಂ.ತಲ್ಲೂರು ಹೇಳಿದರು. ಮಳೆಕೊಯ್ಲಿನ ಈ ಘಟಕ ತಲ್ಲೂರು ಅವರ ಮಿದುಳ ಮರಿ.