Friday, April 29, 2011

'ಬಯೋಪಾಟ್' ಮಾಹಿತಿ-ಸಂವಾದ

ಬೆಂಗಳೂರಿನ ಕ್ರಾಪ್ಕೇರ್ ಸಂಸ್ಥೆಯು ಅಡಿಕೆಯ ಕೊಳೆರೋಗಕ್ಕೆ ಪರಿಣಾಮಕಾರಿ 'ಬಯೋಪಾಟ್' ಎಂಬ ಸಿಂಪಡಣೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದರ ಕುರಿತು ಅಡಿಕೆ ಕೃಷಿಕರಿಗೆ ಮಾಹಿತಿಯನ್ನು ತಿಳಿಸುವ ಸಮಾರಂಭವು ಪುತ್ತೂರಿನ ಜಿ.ಎಲ್.ರೋಟರಿ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಫಾರ್ಮರ್ ಫಸ್ಟ್ ಟ್ರಸ್ಟ್ನ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ವಹಿಸಿ ಮಾತನಾಡುತ್ತಾ, 'ಅಡಿಕೆ ಕೃಷಿಕ ಇಂದು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿದ್ದಾನೆ. ಅಡಿಕೆ ಕೃಷಿಯನ್ನು ಉಳಿಸುವುದೇ ಒಂದು ಸವಾಲಿನ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರೈತಪರ ಕಂಪೆನಿಗಳ ಸ್ಪಂದನ ಕೃಷಿ ರಂಗಕ್ಕೆ ಬೇಕಾಗಿದೆ' ಎಂದರು.

ಕ್ರಾಪ್ಕೇರ್ ಸಂಸ್ಥೆಯ ವಿಜ್ಞಾನಿಗಳಾದ ಡಾ.ಚಂದ್ರಶೇಖರ್ ಮತ್ತು ಪ್ರಕಾಶ್ ತಮ್ಮ ಬಯೋಪಾಟ್ ಉತ್ಪನ್ನದ ಕುರಿತು ವೈಜ್ಙಾನಿಕ ಮಾಹಿತಿ ನೀಡಿದರು. ಉತ್ಪನ್ನದ ಗುಣಮಟ್ಟ, ಪ್ರಯೋಗ, ಫಲಿತಾಂಶ ಕುರಿತು ಆಸಕ್ತ ಕೃಷಿಕರ ಸಂಶಯಗಳನ್ನು ಪರಿಹರಿಸಿದರು. ಕೃಷಿಕರಾದ ಪವನ ವೆಂಕಟ್ರಮಣ ಭಟ್, ಕೃಷ್ಣರಾಜ್ ಗಿಳಿಯಾಳ್, ಶ್ರೀ ಪಡ್ರೆ, ಪಡಾರು ರಾಮಕೃಷ್ಣ ಶಾಸ್ತ್ರಿ, ಡಾ.ಸುರೇಶ್ಕುಮಾರ್ ಕೂಡೂರು, ಸೇಡಿಯಾಪು ತ್ರಿವಿಕ್ರಮ ಭಟ್, ದರ್ಭೆ ವಿಜಯಕೃಷ್ಣ, ಬನಾರಿ ಈಶ್ವರ ಪ್ರಸಾದ್, ಎ.ಪಿ.ಸುಬ್ರಹ್ಮಣ್ಯಂ, ಎಡಂಬಳೆ ಸತ್ಯನಾರಾಯಣ, ಪೆಲತ್ತಡ್ಕ ಶಿವಸುಬ್ರಹ್ಮಣ್ಯ.. ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.

ಸಮಾರಂಭದ ಸ್ಥಳದಲ್ಲಿ ರಿಯಾಯಿತಿ ದರದಲ್ಲಿ 'ಬಯೋಪಾಟ್' ಮಾರಾಟ ವ್ಯವಸ್ಥೆಯನ್ನು ಸಾಕಷ್ಟು ಕೃಷಿಕರು ಸದುಪಯೋಗಪಡಿಸಿಕೊಂಡರು. ಸಮೃದ್ಧಿಯ ನೇತೃತ್ವದಲ್ಲಿ ಜರುಗಿದ ಮಾರಾಟ ಪ್ರಕ್ರಿಯೆಯಲ್ಲಿ ಏನಿಲ್ಲವೆಂದರೂ ಮೂರು ಲಕ್ಷ ರೂಪಾಯಿಯ ಬಯೋಪಾಟ್ ಮಾರಾಟವಾಯಿತು. ಸರತಿಯ ಸಾಲಿನಲ್ಲಿ ನಿಂತು ಬಯೋಪಾಟ್ ಖರೀದಿಸುವ ದೃಶ್ಯ ಕೃಷಿರಂಗದ ನಿಜ ಸಮಸ್ಯೆಗೆ ಕನ್ನಡಿ.

ಈಗಾಗಲೇ ಮಾರುಕಟ್ಟೆಯಲ್ಲಿರುವ ಬಯೋಫೈಟ್, ಫೈಲೋಫಾಸ್, ಬಯೋಪಾಟ್.. ಉತ್ಪನ್ನಗಳನ್ನು ಸಿ.ಪಿ.ಸಿ.ಆರ್.ಐ ಮತ್ತು ವಾರಣಾಶಿ ಸಂಶೋಧನಾ ಕೇಂದ್ರದಲ್ಲಿ ಸಮೃದ್ಧಿ ವತಿಯಿಂದ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸುವುದೆಂದು ನಿರ್ಣಯಿಸಲಾಯಿತು. `ಇದರಿಂದಾಗಿ ಉತ್ಪನ್ನದ ಗುಣಮಟ್ಟ ಮತ್ತು ಒಳಸುರಿಗಳ ಸ್ಪಷ್ಟ ಚಿತ್ರಣ ಚಿಕ್ಕಿ ಗೊಂದಲಗಳು ಪರಿಹಾರವಾಗಲಿವೆ' ಎಂದು ಸಮೃದ್ಧಿಯ ಕಾರ್ಯದರ್ಶಿ ರಾಂ ಕಿಶೋರ್ ಹೇಳಿದರು.

ಪುತ್ತೂರಿನ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಮತ್ತು ಗಿಡಗೆಳತನ ಸಂಘ 'ಸಮೃದ್ಧಿ'ಯು ಸಮಾರಂಭವನ್ನು ಸಂಘಟಿಸಿತ್ತು. ಹಿರಿಯ ಕೃಷಿಕ ವಿ.ಮ.ಭಟ್ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭವನ್ನು ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಸಮೃದ್ಧಿಯ ಕಾರ್ಯದರ್ಶಿ ಮಂಚಿ ರಾಂ ಕಿಶೋರ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಮೃದ್ಧಿಯ ಅಧ್ಯಕ್ಷ ಪೆರುವಾಜೆ ಈಶ್ವರ ಭಟ್ ವಂದಿಸಿದರು.

ಮುಂದಿನ ತಿಂಗಳು ಉಪ್ಪಿನಂಗಡಿಯಲ್ಲಿ ಕೃಷಿಕ ಪೆಲಪ್ಪಾರು ವೆಂಕಟ್ರಮಣ ಭಟ್ ಇವರ ಸಾರಥ್ಯದಲ್ಲಿ ಬಯೋಪಾಟ್ ಮಾಹಿತಿ-ಸಂವಾದ ಸಮಾರಂಭ ನಡೆಯಲಿದೆ.

Thursday, April 28, 2011

ಎಲ್ಲಿಯ ಕೇರಳ? ಎಲ್ಲಿಯ ಕರ್ನಾಟಕ?

ಲೇಖನ : ಶ್ರೀ ಪಡ್ರೆ

ಕೇರಳ ರಾಜ್ಯ ರಾಜಕೀಯ ಮರೆತು ಎಂಡೋಸಲ್ಫಾನ್ ನಿಷೇಧಿಸಲು ಒಟ್ಟಾಗಿ ದನಿಯೆತ್ತಿದೆ. ಸಮಾಜದ ಎಲ್ಲ ವರ್ಗ, ವೃತ್ತಿಗಳ ಜನ ನಿಕಟಭೂತಕಾಲದಲ್ಲೆಂದೂ ಹೀಗೆ ಒಂದೇ ಉದ್ದೇಶಕ್ಕಾಗಿ ಏಕಸ್ವರದಲ್ಲಿ ಆಗ್ರಹಿಸಿಲ್ಲ.

ಅದೆಷ್ಟು ಬೀದಿ ನಾಟಕಗಳು, ಪ್ರತಿಷೇಧ ಜಾಥಾ, ಸಹಿ ಸಂಗ್ರಹ ಅಭಿಯಾನಗಳು. ಕಳೆದ ಹತ್ತು ವರ್ಷಗಳಲ್ಲಿ ಒಂದೂವರೆ ಡಜನಿಗೂ ಹೆಚ್ಚು ಸಾಕ್ಷ್ಯ ಚಿತ್ರಗಳು. ಮಾಧ್ಯಮಗಳು ವಹಿಸಿದ ಪಾತ್ರ ನಿಜಕ್ಕೂ ಮೆಚ್ಚುವಂಥದ್ದು. ಮಾತೃಭೂಮಿ ವಾರಪತ್ರಿಕೆ ಹಲವು ವಿಶೇಷ ಸಂಚಿಕೆ ತಂದದ್ದಲ್ಲದೆ ಈ ಸಂಸ್ಥೆ ಸಾರ್ವಜನಿಕ ಆಸಕ್ತಿಯ ಟೀವಿ ಜಾಹೀರಾತನ್ನೂ ಬಿಡುಗಡೆ ಮಾಡಿದೆ. ಇಂಡಿಯಾವಿಶನ್ ನಡೆಸಿದ ಅಭಿಯಾನ ಈ ಚಳವಳಿಗೆ ಕೊಟ್ಟ ಪ್ರತ್ಯಕ್ಷ ಬೆಂಬಲವೂ ಉಲ್ಲೇಖನೀಯ.

ಇದೇ ಕಾರಣ ಮುಂದಿಟ್ಟು 87 ವರ್ಷದ ಕೇರಳ ಮುಖ್ಯಮಂತ್ರಿ ಮೊನ್ನೆ 25ಕ್ಕೆ ಉಪವಾಸ ಕುಳಿತರು. ಸುರೇಶ್ ಗೋಪಿ, ಮುಖೇಶರಂತಹ ಮಲೆಯಾಳದ ಖ್ಯಾತ ನಾಯಕರು ಜತೆಜತೆಗೆ. ಚಿತ್ರೋದ್ಯಮ ಸ್ವಲ್ಪಕಾಲ ಶೂಟಿಂಗ್ ನಿಲ್ಲಿಸಿ ತನ್ನ ಬೆಂಬಲ ಸೂಚಿಸಿತು. ಜನಪ್ರಿಯ ನಟರು 'ಬ್ಯಾನ್ ಎಂಡೋಸಲ್ಫಾನ್' ಕರೆ ಕೊಡುವ ಜಾಹೀರಾತುಗಳನ್ನು ಟೀವಿಗಳಲ್ಲಿ ಪ್ರಕಟಿಸಿತು.

ನನಗೆ ಕತ್ತು ಎಡಕ್ಕೆ ತಿರುಗಿಸಿದರೆ ಕೇರಳ, ಬಲಕ್ಕೆ ಹೊರಳಿಸಿದರೆ ಕರ್ನಾಟಕ.

ಕರ್ನಾಟಕದಲ್ಲಿ ಎರಡು ಗ್ರಾಮಗಳಲ್ಲಲ್ಲ, ಈಚೆಗೆ ತಿಳಿದುಬಂದಂತೆ 96 ಗ್ರಾಮಗಳಲ್ಲಿ ಎಂಡೋಸಲ್ಫಾನ್ ಮಳೆಗರೆದಿದ್ದಾರೆ. ಇಲ್ಲಿ ಈ ವರೆಗೆ ಆರೋಗ್ಯ ಸಮೀಕ್ಷೆ ನಡೆಯದಿದ್ದರೂ, ಸರಕಾರಿ ಇಲಾಖೆಯ ಮೂಲಗಳ ಪ್ರಕಾರವೇ ಇಲ್ಲಿ 6,000ಕ್ಕೂ ಹೆಚ್ಚು ಕಾಯಿಲೆಗ್ರಸ್ತರಿದ್ದಾರಂತೆ. ಇವರಲ್ಲಿ ಹೆಚ್ಚಿನವರ ಕಾಯಿಲೆಗೂ ಇದೇ ಕೀಟನಾಶಕ ಕಾರಣವಾಗಿರುವ ಸಾಧ್ಯತೆ ಹೆಚ್ಚು.

ಇಷ್ಟೊಂದು ಗ್ರಾಮಗಳಲ್ಲಿ ವಿಷಮಳೆಯಾಗಿರುವುದರ ಮಾಹಿತಿ ಹೊರತೆಗೆದ ಹೋರಾಟಗಾರ ದಿನಗೂಲಿಯಲ್ಲಿ ಬದುಕುವ ಪುತ್ತೂರಿನ ಶ್ರೀ ಸಂಜೀವ. ಸಂಜೀವ ಮರಳಿ ಯತ್ನ ಮಾಡಿ ಸಂಪಾದಿಸಿದ ಮಾಹಿತಿ ಪ್ರಕಾರ ಕುಂದಾಪುರ, ಉಡುಪಿ ತಾಲೂಕುಗಳ ಅಂದಾಜು 50 ಗ್ರಾಮಗಳಲ್ಲೂ ಎಂಡೋಸಲ್ಫಾನ್ ವಿಷಮಳೆ ನಡೆದಿದೆ!

ಒಬ್ಬ ಗರೀಬ ಯುವಕ ತನ್ನ ಮನುಷ್ಯಸ್ನೇಹದಿಂದ ಈ ಸ್ಫೋಟಕ ಮಾಹಿತಿ ಹೊರಗೆಳೆದರೂ ಅದು ಕರ್ನಾಟಕದ ಮಾಧ್ಯಮಗಳಿಗೆ ಗ್ರಾಸವಾಗುತ್ತಿಲ್ಲ. ಇಂಧನ ಸಚಿವೆಯನ್ನು ಹೊರತುಪಡಿಸಿದರೆ ಕರ್ನಾಟಕದ ಆರೋಗ್ಯ, ಕೃಷಿ ಅಥವಾ ಪರಿಸರ ಸಚಿವರು ಈ ಬಗ್ಗೆ ದನಿಯೆತ್ತಿದ್ದನ್ನು ಕೇಳಿಲ್ಲ!

ಎಲ್ಲಿಯ ಕೇರಳ, ಎಲ್ಲಿಯ ಕರ್ನಾಟಕ?

ಮೇಲ್ನೋಟದ ಸೂಚನೆ ಪ್ರಕಾರ ಕಾಸರಗೋಡಿಗಿಂತಲೂ ಹೆಚ್ಚಿನ ಎಂಡೋಸಲ್ಫಾನ್ ಸಂತ್ರಸ್ತರು ದಕ್ಷಿಣ ಕನ್ನಡದಲ್ಲಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ಸರಕಾರ, ಮಾಧ್ಯಮಗಳು ಹೋಗಲಿ - ಪ್ರಜ್ನಾವಂತ ಜನ, ಬುದ್ಧಿಜೀವಿಗಳು - ಯಾರೂ ಸೊಲ್ಲೆತ್ತಿದಂತೆ ಕಾಣುತ್ತಿಲ್ಲ. ಕರ್ನಾಟಕಕ್ಕೆ ಏನಾಗಿದೆ? ಈ ಸ್ಪಂದನರಹಿತ ಗುಣ ಎಂದಿಗಾದರೂ ಬದಲಾಗಬಹುದೇ?

ಕೇರಳದ ಮಂದಿ ಕಾಸರಗೋಡಿನ ದುರಂತವನ್ನು 'ರಂಡಾಂ ಭೋಪಾಲ್' (ಎರಡನೆಯ ಭೋಪಾಲ್) ಎಂದೇ ಕರೆಯುತ್ತಾರೆ. ಕನ್ನಾಡ ನನ್ನ ಜನ ಈ ದುರಂತವನ್ನು ಕಂಡೂ ಕಾಣದೆ, ಕೇಳಿದರೂ ಮರೆತೇ ಬಿಟ್ಟ ರೀತಿ ನೋಡಿದರೆ ಬಲಗಡೆಗೆ ಕತ್ತು ಹೊರಳಿಸಬೇಡ ಅನಿಸುತ್ತಿದೆ.

ಇನ್ನಾದರೂ ಎನ್ಜೀವೋಗಳು, ಧಾರ್ಮಿಕ ಸಂಸ್ಥೆಗಳು, ಮನುಷ್ಯಸ್ನೇಹಿಗಳು ಈ ಹಳ್ಳಿಗಳಲ್ಲಿ ತಮ್ಮದೇನೂ ತಪ್ಪಿಲ್ಲದೆಯೂ ಜೀವನಪೂರ್ತಿ ನರಕ ಅನುಭವಿಸುವ ಬಡಪಾಯಿಗಳ ಪರ ದನಿಯೆತ್ತಿ ಅವರಿಗೆ ನ್ಯಾಯ ಒದಗಿಸುವ, ಸಾಂತ್ವನ ಹೇಳುವ ಕೆಲಸ ಆರಂಭಿಸಬೇಕಿದೆ.

(ಚಿತ್ರ: ಕಾಸರಗೋಡಿನ ವಿದ್ಯಾರ್ಥಿ ಅರ್ಜುನ್ )

Wednesday, April 27, 2011

ಕಲ್ಲಂಗಡಿ ಪ್ರಸಾದ!

ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಶಿಕ ಜಾತ್ರೆ ಎಪ್ರಿಲ್ ಮಧ್ಯ ಭಾಗದಲ್ಲಿ ಮುಗಿಯಿತು. ಜಾತ್ರೆ ಮುಗಿಯುತ್ತಿದ್ದಂತೆ ಕಲ್ಲಂಗಡಿ ಕೃಷಿಗೂ ವಿದಾಯ!

ಜಾತ್ರೆಗೂ ಕಲ್ಲಂಗಡಿಗೂ ಏನಿದು ನಂಟು? ಶ್ರೀದೇವಿ ಚಂಡಮುಂಡರನ್ನು ವಧಿಸಿದಳು ಎಂಬುದು ಪುರಾಣ ಕಥೆ. ಚಂಡಮುಂಡರ ಶಿರಗಳನ್ನು ಕಲ್ಲಂಗಡಿಗೆ ಹೋಲಿಸುವುದು ವಾಡಿಕೆ. ಕಲ್ಲಂಗಡಿ ಇಲ್ಲಿ ಪ್ರಸಾದ. ಇದು 'ಸತ್ಯದ ಬೆಳೆ'. ಜಾತ್ರೆಗೆ ಬಂದವರು 'ಪುರಲ್ದ ಬಚ್ಚಂಗಾಯಿ' (ಪೊಳಲಿಯ ಕಲ್ಲಂಗಡಿ) ಎಂದು ಒಯ್ಯುತ್ತಾರೆ.

ಪೊಳಲಿಯ ಜಾತ್ರಾ ಸಂತೆಯಲ್ಲಿ ಕಲ್ಲಂಗಡಿಯದ್ದೇ ಕಾರುಬಾರು. ಇಪ್ಪತ್ತೈದಕ್ಕೂ ಮಿಕ್ಕಿ ಮಳಿಗೆಗಳು. ಕೃಷಿಕರೇ ವ್ಯಾಪಾರಿಗಳು. ಮಧ್ಯವರ್ತಿಗಳಿಲ್ಲ. ಐದಾರು ಕಿಲೋದ ಕಲ್ಲಂಗಡಿ ಹಣ್ಣಿಗೆ ನೂರರಿಂದ ನೂರ ಇಪ್ಪತ್ತು ರೂಪಾಯಿ ತನಕ ದರ. ಏನಿಲ್ಲವೆಂದರೂ ಜಾತ್ರಾ ಸಮಯದಲ್ಲಿ ಐದಾರು ಲಕ್ಷ ರೂಪಾಯಿ ಕಲ್ಲಂಗಡಿ ನಗದಾಗುತ್ತದೆ.

ಕಲ್ಲಂಗಡಿ ಹಣ್ಣನ್ನು ತೂಗಿ ಮಾರುವುದು ಕಡಿಮೆ. ಅಂದಾಜು ದರ. ಗಾತ್ರ ನೋಡಿ ದರ ನಿಗದಿ. ಪೊಳಲಿ, ಕರಿಯಂಗಳ, ಮಣೇಲುಗಳಲ್ಲಿ ನೂರಕ್ಕೂ ಮಿಕ್ಕಿ ಬೆಳೆಗಾರರಿದ್ದಾರೆ. 'ಜಾತ್ರೆಯಲ್ಲಿ ಹೊರವೂರಿನಿಂದ ಕಲ್ಲಂಗಡಿ ಹಣ್ಣನ್ನು ತಂದು ಮಾರುವಂತಿಲ್ಲ. ಒಂದು ವೇಳೆ ತಂದರೂ ಭಕ್ತರು ಆ ಮಳಿಗೆಯತ್ತ ಹೋಗುವುದೇ ಇಲ್ಲ' ಎನ್ನುತ್ತಾರೆ ಸ್ಥಳಿಯ ಕೃಷಿಕ ಪದ್ಮನಾಭ ಭಟ್.

ಒಂದು ಕಾಲಘಟ್ಟದಲ್ಲಿ ಪೊಳಲಿಯದ್ದೇ ಆದ ನಾಟಿ ತಳಿ ಬಹು ಪ್ರಸಿದ್ಧ. ಹೆಬ್ರಿಡ್ ತಳಿಗಳು ನಾಟಿ ತಳಿಯನ್ನು 'ಹೈಡ್' ಮಾಡಿ ಕಾಲು ಶತಮಾನ ಸಂದವು. ಈಗ ಪಟ್ನಾಗರ್ ತಳಿಗೆ ಮೊದಲ ಮಣೆ. ಜತೆಗೆ ಮಧು, ಶುಗರ್ಬೇಬಿ. 'ಇದು ಮೂಲ ಕಲ್ಲಂಗಡಿ'ಯ ತಳಿಯನ್ನು ಹೋಲುತ್ತದಂತೆ.

ಕಲ್ಲಂಗಡಿ 60-70 ದಿವಸದ ಬೆಳೆ. ಜಾತ್ರೆ ಯಾವ ದಿನಾಂಕದಂದು ಆಚರಿಸಲ್ಪಡುತ್ತದೆ ಎಂಬ ಲೆಕ್ಕಾಚಾರದಂತೆ, ಜನವರಿ 10-20ನೇ ದಿನಾಂಕದೊಳಗೆ ಬೀಜಪ್ರದಾನ. ರಾಸಾಯನಿಕ ಗೊಬ್ಬರದ್ದೇ ಭರಾಟೆ!

ಹಿಂದೆಲ್ಲಾ ಸಾರಿಗೆ ವಿರಳ. ಕಾಲ್ನಡಿಗೆಯಲ್ಲೇ ಪ್ರಯಾಣ. ಜಾತ್ರೆಗೆ ಬಂದವರಿಗೆ ಕಲ್ಲಂಗಡಿ ಭಕ್ಷ್ಯವಾಗಿತ್ತು. ತೃಷೆ ನೀಗಿಸಲು ಬೇರೆ ವ್ಯವಸ್ಥೆಗಳಿರಲಿಲ್ಲ. ಮನೆಗೆ ಬಂದ ಅತಿಥಿಗಳಿಗೆ ಹಣ್ಣು ನೀಡುವುದೂ ಗೌರವದ ಪ್ರತೀಕ! ಈಗೆಲ್ಲಾ ಆ ಸ್ಥಾನವನ್ನು 'ಸಿದ್ಧಪಾನೀಯ, ಐಸ್ಕ್ರೀಂಗಳು ಆವರಿಸಿವೆ'!

'ಪೊಳಲಿ ಜಾತ್ರೆಯಲ್ಲಿ ಕಲ್ಲಂಗಡಿ ವ್ಯಾಪಾರದಿಂದ ಸಿಕ್ಕ ಉತ್ಪತ್ತಿ ಮಳೆಗಾಲದ ವೆಚ್ಚವನ್ನು ಭರಿಸುತ್ತದೆ' ಎಂದು ನಂಬಿದ್ದ ಕಾಲವಿತ್ತು. ಈಗ ಹಾಗೇನಿಲ್ಲ. ದೊಡ್ಡ ಪ್ರಮಾಣದಲ್ಲಿ ಬೆಳೆದವರು ಸ್ವಲ್ಪ ಮಟ್ಟಿನ ಲಾಭ ಗಳಿಸುತ್ತಾರೆ. ಬೆರಳೆಣಿಕೆಯ ಕೃಷಿಕರನ್ನು ಬಿಟ್ಟರೆ ಮಿಕ್ಕವರಿಗೆ ಕಲ್ಲಂಗಡಿ ಕೃಷಿ ಹವ್ಯಾಸ.

ಕೃಷಿಗೂ, ಧಾರ್ಮಿಕ ನಂಬುಗೆಗೂ ನಂಟು. ನಂಬುಗೆಯ ಕವಚದೊಳಗೆ ಕಲ್ಲಂಗಡಿ ಕೃಷಿ ಈಗಲೂ ಜೀವಂತ. ಆದರೆ ಕಳೆದು ಹೋದ ನಾಟಿ ತಳಿಯ ಹುಡುಕಾಟವಾಗಬೇಕು, ಅಭಿವೃದ್ಧಿಯಾಗಬೇಕು. ಒಂದಷ್ಟು ಕೃಷಿಕರು ಈ ಕುರಿತು ಯೋಚನೆಯಲ್ಲಿದ್ದಾರೆ.

(ಕಾಲಂ : ಕಪ್ರ/ಅನ್ನದ ಬಟ್ಟಲು/೨೫-೪-೨೦೧೧)

Thursday, April 21, 2011

ಅನನ್ಯ ಅನುಭವದ ಪುತ್ತೂರು ಜಾತ್ರೆ

ಮೊನ್ನೆ ಶನಿವಾರ (ಎ.೧೦)ಶಾಲಾ ಫಲಿತಾಂಶ ಪ್ರಕಟವಾಗುವ ದಿನ. ಐದಾರು ವಿದ್ಯಾರ್ಥಿಗಳು ಮಾರ್ಗವನ್ನಾಕ್ರಮಿಸಿ ತಮ್ಮಷ್ಟಕ್ಕೇ ಸಾಗುತ್ತಿದ್ದರು. ವಯೋಸಹಜವಾದ ಲವಲವಿಕೆ ಕಾಣಲಿಲ್ಲ.

'ಎಂತಾಗುತ್ತೋ ಮಾರಾಯ, ಪಾಸಾಗಬಹುದು. ತೊಂಭತ್ತೈದು ಪರ್ಸೆಂಟ್ ಸಿಗೊತ್ತೊ ಇಲ್ವೋ' ಎಂದು ಒಬ್ಬ ಆತಂಕದಲ್ಲಿದ್ದರೆ, 'ನಿನ್ನದು ಎಂತ ಪರ್ಸೆಂಟ್ ಮಾರಾಯ, ನಾನು ಪಾಸಾಗ್ತೇನೋ ಇಲ್ವಾ. ಪಾಸಾದರೆ ಮಹಾಲಿಂಗೇಶ್ವರನಿಗೆ ಐದು ರೂಪಾಯಿ ಕಾಣಿಕೆ ಹಾಕ್ತೇನೆ' ಎಂದ. 'ಜಾತ್ರೆ ಖರ್ಚಿಗೆ ಅಂತ ಅಜ್ಜಿ ಕೊಟ್ಟ ಹತ್ತು ರೂಪಾಯಿ ಇದೆ. ಅದರಲ್ಲಿ ಐದು ರೂಪಾಯಿ ಕಾಣಿಕೆ. ಮಿಕ್ಕ ಐದು ರೂಪಾಯಿಯಲ್ಲಿ ನಾವು ಐಸ್ಕ್ಯಾಂಡಿ ತಿನ್ನೋಣ' ಅಂತ ಸಂತೋಷವನ್ನು ಭರಿಸಿಕೊಂಡ.

ವಾರದ ಹಿಂದೆ ಪೇಟೆ ಮಧ್ಯ ಇಬ್ಬರಲ್ಲಿ ಜಟಾಪಟಿ. ಬಹುಶಃ ವ್ಯವಹಾರದ ವಿಚಾರವಿರಬಹುದೇನೋ? ಒಂದಷ್ಟು ಮಂದಿ ಗುಂಪು ಸೇರಿದ್ದರು. ಯಾರೂ ಜಗಳವನ್ನು ಶಮನ ಮಾಡುವತ್ತ ಪ್ರಯತ್ನಿಸಿರಲಿಲ್ಲ. ಅಪಘಾತವಾದಾಗಲೂ ಹೀಗೆನೇ. ಸುತ್ತಲೂ ಗುಂಪು ಸೇರಿ ಗುಸುಗುಸು ಮಾತಾಡ್ತಾರೆ ವಿನಾ ಗಾಯಾಳುವಿನ ಆರೈಕೆ ಬಿಡಿ, ಅನುಕಂಪದ ಮಾತೂ ಇರುವುದಿಲ್ಲ! ಸರಿ, ಕೊನೆಗೆ ಆರಕ್ಷಕರು ಬಂದರು. ಜಗಳ ಬಿಡಿಸಿದರು. 'ಮಹಾಲಿಂಗೇಶ್ವರ ನೋಡಿದ ಹಾಗಿರಲಿ' ಎಂಬಲ್ಲಿಗೆ ಜಗಳಕ್ಕೆ ಕೊನೆ. 'ಭೀಭತ್ಸ ಮೋರೆ’ಯಿಂದ ಇಬ್ಬರೂ ನಿರ್ಗಮಿಸುತ್ತಿದ್ದಂತೆ ಜನ ಚದುರಿದರು.
ಕೆಲವೊಂದು ಸಂದರ್ಭದಲ್ಲಿ ದೇವರ ಬಗ್ಗೆ ಇರುವ ನಂಬುಗೆಯ ಕೆಲವು ಮಾದರಿಗಳು ಅಷ್ಟೇ. ಮೇಲಿನ ಘಟನೆಯಲ್ಲಿ ದೇವರಂತಿರುವ ಮಕ್ಕಳ ಮನಸ್ಸು ಎಷ್ಟು ಮೃದುವಾಗಿದೆ. ಅಲ್ಲಿ ಕಾಪಠ್ಯವಿಲ್ಲ. ಆದರೆ ದುಗುಡವಿದೆ. ಒತ್ತಡವಿದೆ. ಒತ್ತಡದ ಶಮನಕ್ಕೆ ಮಹಾಲಿಂಗೇಶ್ವರನಿಗೆ ಐದು ರೂಪಾಯಿ ಕಾಣಿಕೆ. ಎರಡನೇ ಘಟನೆಯಲ್ಲಿ ಅಹಂಕಾರವಿದೆ. ಮಾತ್ಸರ್ಯವಿದೆ. ದುರುದ್ದೇಶವಿದೆ. ಮಹಾಲಿಂಗೇಶ್ವರನಿಗೆ ಇಬ್ಬರೂ ಪ್ರಿಯ ಭಕ್ತರೇ. ಸುಧನ್ವ ಕಾಳಗದಲ್ಲಿ ಕೃಷ್ಣನಿಗೆ ಉಂಟಾದ ಸಂಕಟದ ಹಾಗೆ.

ಸುಪ್ತಾವಸ್ಥೆಯಲ್ಲಿದ್ದ 'ಭಕ್ತಿ' ಸಾಕಾರವಾಗುವ ಬಗೆ ಹಲವು. ಶ್ರೀ ಮಹಾಲಿಂಗೇಶ್ವರನ ಜಾತ್ರೆಯಲ್ಲಿ ಇಂತಹ ಹಲವು ಭಕ್ತಿ ಪ್ರಕಟೀಕರಣವಾಗುತ್ತದೆ. ಪುತ್ತೂರು ನಗರದ ಮುಖ್ಯ ರಸ್ತೆಗಳಲ್ಲಿ ದೇವರ ಸವಾರಿ ಜಾತ್ರೆಯ ವಿಶೇಷ. ಹತ್ತನೇ ತಾರೀಕಿನಿಂದ ಹದಿನೈದರ ತನಕ. ಕೊನೆಯ ಅವಭೃತದಂದು ದೀರ್ಘ ಸವಾರಿ. ವೀರಮಂಗಲದ ತನಕ.

ವರ್ಷವಿಡೀ 'ಬ್ಯುಸಿ'ಯಾಗಿರುವವರು ಜಾತ್ರೆ ಸಮಯದಲ್ಲಿ ನಿರುಮ್ಮಳವಾಗುತ್ತಾರೆ. ಸಂಜೆ ದೇವರ ಉತ್ಸವ ಆರಂಭವಾಗುವಾಗ ದೇವಳದಲ್ಲಿರುತ್ತಾರೆ. ಪೇಟೆ ಸವಾರಿ ಮುಗಿದು, ರಾತ್ರಿಯ ಪೂಜೆಯಾಗಿ ಪ್ರಸಾದ ಸ್ವೀಕರಿಸಿದ ಬಳಿಕವೇ ಮನೆಗೆ ತೆರಳುತ್ತಾರೆ. ಇದು ಒಂದು ದಿನದ ಪ್ರಕ್ರಿಯೆಯಲ್ಲ. ಧ್ವಜಾರೋಹಣದಿಂದ ಧ್ವಜಾವರೋಹಣದ ತನಕ ನಿರಂತರ.

ಸವಾರಿಯ ಹೊತ್ತಿಗೆ ಬರಿಗಾಲಲ್ಲಿರುತ್ತಾರೆ. ಪ್ಯಾಂಟ್ ಧರಿಸುವುದಿಲ್ಲ. ಶುಭ್ರ ಪಂಚೆ, ಹೆಗಲಲ್ಲಿ ಶಾಲು. ಶುದ್ಧ ಸಾಂಪ್ರದಾಯಿಕ ಉಡುಪು. ದೇವರು ಹೋಗುವ ಮಾರ್ಗದ ಉದ್ದಕ್ಕೂ ಬೇರೆ ಬೇರೆ ಸ್ವರೂಪದಲ್ಲಿ ಇವರ ಸೇವೆ ಸಲ್ಲುತ್ತಾ ಇರುತ್ತದೆ. ಇದರಲ್ಲಿ ಯಾರದ್ದೇ ಒತ್ತಡವಿಲ್ಲ. ಕೋರಿಕೆಯಿಲ್ಲ. ಈ ರೀತಿಯ ಸೇವೆಯ ಹಿಂದಿದೆ, ಶರಣಾಗತಿಯ ಸಂದೇಶ. 'ದೇವರ ಮುಂದೆ ಶರಣಾಗದಿದ್ದರೆ ಆತ ನಮ್ಮನ್ನು ಭಕ್ತ ಎಂದು ಹೇಗೆ ಒಪ್ಪಿಕೊಂಡಾನು?' ಹಾಗಾಗಿ ಇಲ್ಲಿ ಶರಣಾಗತಿ ಹೆಚ್ಚು ಮಹತ್ ಪಡೆಯುತ್ತದೆ.
ಇನ್ನೂ ಒಂದಷ್ಟು ಮಂದಿ ದೇವರ ಉತ್ಸವದಲ್ಲಿರುತ್ತಾರೆ. ಮನಸ್ಸಿನಲ್ಲಿ ಭಗವಂತನ ಸ್ಮರಣೆ ಮಾಡುತ್ತಾ ಇರುತ್ತಾರೆ. ಯಾವುದೇ ತಮಾಶೆಗಳಿಲ್ಲ, ಮಾತುಕತೆಯಿಲ್ಲ. ಮೊಬೈಲಂತೂ ದೂರದ ಮಾತು. ತಮ್ಮಷ್ಟಕ್ಕೆ ಸವಾರಿಯುದ್ದಕ್ಕೂ ಸಂಚರಿಸುತ್ತಾರೆ. 'ನಾಳೆ ನಾನು ಬರುವುದು ಕಷ್ಟ. ನಾಡಿದ್ದು ಡ್ಯೂಟಿಗೆ ಹೋಗ್ಬೇಕಲ್ಲಾ' ಅಂತ ಕಷ್ಟ ತೋಡಿಕೊಳ್ಳುತ್ತಾರೆ. ಆದರೆ ನಾಳೆ ಉತ್ಸವ ಶುರುವಾಗುಷ್ಟರಲ್ಲಿ ಅವರು ಹಾಜರ್!

ಅವಭೃತದ ದಿವಸ. ಸಂಜೆ ದೇವಳದಲ್ಲಿ ದೇವರ ಉತ್ಸವ ಹೊರಟರೆ, ವೀರಮಂಗಲದಲ್ಲಿ ಅವಭೃತವಾಗಿ ಮರಳಿ ದೇವಳ ಸೇರುವಾಗ ಮರುದಿನ ಒಂಭತ್ತು ಗಂಟೆ ಮೀರುತ್ತದೆ. ಹೀಗೆ ದೇವರ ಉತ್ಸವದೊಂದಿಗೆ ವೀರಮಂಗಲಕ್ಕೆ 'ಹೋಗಿ-ಬರುವ' ಭಕ್ತರು ಸಾಕಷ್ಟು ಮಂದಿ ಇದ್ದಾರೆ. ಹೋಗುವಾಗ ಅಲ್ಲಲ್ಲಿ ವೈಭವದ ಕಟ್ಟೆಪೂಜೆಗಳು, ಪಾನೀಯಗಳು, ಯಕ್ಷಗಾನಗಳು.. ಹೀಗೆ ಸಾಕಷ್ಟು ಸಂಭ್ರಮ.

'ದೇವಳದಿಂದ ಹೋಗಿ ಬರಲು ಏನಿಲ್ಲವೆಂದರೂ 25-30 ಕಿಲೋಮೀಟರ್ ದೂರವಿದೆ. ಇಷ್ಟು ದೂರ ಸಾಗಿದರೂ ಯಾವುದೇ ಆಯಾಸ ಗೊತ್ತಾಗುವುದೇ ಇಲ್ಲ. ಖಂಡಿತಾ ಇದು ದೇವರ ಮಹಿಮೆಯಲ್ಲದೆ ಇನ್ನೇನು. ಇದು ನನ್ನ ಇಪ್ಪತ್ತೆಂಟು ವರುಷಗಳ ಅನುಭವ' ಎನ್ನುತ್ತಾರೆ ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್.

ವೀರಮಂಗಲದಿಂದ ದೇವರು ಪುನಃ ದೇಗುಲಕ್ಕೆ ಬರುವಾಗಲೂ ಭಕ್ತ ಸಂದೋಹ. ಭಗವನ್ನಾಮ ಸಂಕೀರ್ತನೆಯೊಂದಿಗೆ ಬೀಸುಹೆಜ್ಜೆಯಲ್ಲಿ ಬರುವ ಸಂಭ್ರಮವನ್ನು ಎಣಿಸಿದರೆ ರೋಮಾಂಚನವಾಗುತ್ತದೆ. ದೇವರು ದೇವಳ ಪ್ರವೇಶಿಸಿ, ಧ್ವಜಾವರೋಹಣವಾಗಿ ಪ್ರಸಾದ ಸ್ವೀಕರಿಸಿ ಮರಳುವಾಗ 'ಇಷ್ಟು ಬೇಗ ಜಾತ್ರೆ ಮುಗಿಯಿತಾ' ಅಂತ ಮನಸ್ಸು ಭಾರವಾಗುತ್ತದೆ.

ಬದುಕಿನಲ್ಲಿ ಒಮ್ಮೆ ವೈಭವ. ಮತ್ತೊಮ್ಮೆ ವಿಷಾದ. ಮಹಾಲಿಂಗೇಶ್ವರನ ಅವಭೃತದಲ್ಲೂ ಇದು ಗೋಚರ. ಸಂಜೆ ದೇವರು ಸಂಚರಿಸುವ ಉದ್ದಕ್ಕೂ ಝಗಮಗಿಸುವ ಲೈಟ್ಗಳು, ಜನರ ಉಲ್ಲಾಸಗಳು, ಕಲಾ ಸಂಬಂಧಿ ಚಟುವಟಿಕೆಗಳು, ಪೂಜೆ-ಭಜನೆಗಳು. ಮರುದಿನ ಮರಳುವಾಗ ಹಿಂದಿನ ರಾತ್ರಿಯ ವೈಭವ ನೆನಪಾಗಿ ಉಳಿಯುತ್ತದಷ್ಟೇ. ಅದೇ ದಾರಿ, ಅದೇ ಪರಿಸರ. ಅದೇ ಜನ. ರಾತ್ರಿ ಕಳೆದು ಹಗಲಾಗಿದೆ ಅಷ್ಟೇ. 'ಗುರುತು ಸಿಗದ ಬದಲಾವಣೆ'! ಮಹಾಲಿಂಗೇಶ್ವರನು ನಾವು ಅಥರ್ೈಸುವ 'ಬದಲಾವಣೆ'ಯನ್ನು ಸ್ವೀಕರಿಸಲಾರ. ಆತ ಸ್ಥಿತಪ್ರಜ್ಞ. ತ್ರಿಕಾಲ ಜ್ಞಾನಿ. ಭಕ್ತರ ಮನಸ್ಸನ್ನು ಆವರಿಸುವ ದೇವ. ಹಾಗಾಗಿ 'ಬದಲಾವಣೆ' ಎಂದು ಸ್ವೀಕರಿಸುವ ಸ್ಥಿತಿ ಇದೆಯಲ್ಲಾ, ಅದಕ್ಕೆ ಮಾನದಂಡ ಅನುಭವ.

'ಅನುಭವ' ಎಂಬುದು ಅನುಭವಕ್ಕೆ ಬಾರದೆ ಇದ್ದರೆ ಅರ್ಥಶೂನ್ಯ. ದೇವರ ಅಸ್ತಿತ್ವವನ್ನು 'ಒಪ್ಪದೆ' ಇಂತಹ ಅನುಭವ ಸಿಗದು. ಅನುಭವಿಸುವ ಮನಸ್ಸಿದ್ದವನಿಗೆ, ಬದುಕಿನಲ್ಲೂ 'ಸುಭಗತನ'ವಿದೆ ಎಂದು ಒಪ್ಪಿಕೊಳ್ಳವ ಜಾಯಮಾನ ನಮ್ಮದಾಗಿದ್ದರೆ ಮಹಾಲಿಂಗೇಶ್ವರನ ಉತ್ಸವ ಆಪ್ತವಾಗುತ್ತದೆ, ಪ್ರಿಯವಾಗುತ್ತದೆ. ಮನಸ್ಸನ್ನು ಪುನಃ ಪುನಃ ಕಾಡುತ್ತದೆ.

ಒಟ್ಟಿನಲ್ಲಿ 'ಒಪ್ಪಬೇಕು'! 'ಒಪ್ಪುವಿಕೆ ಎಂಬುದು ಬದುಕಿನ ಯಶಸ್ಸಿನ ಸೂತ್ರ' ಎಂಬ ಹಿರಿಯರ ಮಾತು ಪುಸ್ತಕದಲ್ಲೇ ಉಳಿದಿರುವುದು ಕಾಲದ ದುರಂತ. ಇಂತಹ 'ಅನುಭವ'ಗಳನ್ನು ಆಧುನಿಕ ಭರಾಟೆಯ 'ಅಭಿವೃದ್ಧಿ ಎಂಬ ಸರಕುಗಳಾದ ಕಂಪ್ಯೂಟರ್ಗಳು, ಜಾಲತಾಣಗಳು, ಮೊಬೈಲ್ಗಳು, ವಾಹಿನಿಗಳು ಕಸಿದುಕೊಂಡಿವೆ.

'ಬಿಟ್ಟಿ ಮಕ್ಕಳ ಸಮಾರಾಧನೆ'

ಸುಳ್ಯ ಸನಿಹದ ಪೆರಾಜೆಯಲ್ಲಿ ಜಾತ್ರೆಯ (ಮಾ ೨೬-ಏ ೧೦) ಸಡಗರ. ಹದಿನೈದು ದಿವಸಗಳ ಜಾತ್ರೆಯಲ್ಲಿ ಮಾತನಾಡದ ದೇವರಿಗೆ ಒಂದು ರಾತ್ರಿ ಮತ್ತು ಒಂದು ಹಗಲಿನಲ್ಲಿ ಉತ್ಸವದ ಭಾಗ್ಯ. ಹದಿನಾಲ್ಕು ದಿವಸ ಮಾತನಾಡುವ ದೈವಗಳಿಗೆ ಮಹೋತ್ಸವ. ಮಲೆಯಾಳ ಭಾಷೆಯ ದೈವಗಳದ್ದೇ ಸಿಂಹಪಾಲು. ಮಧ್ಯೆ ಒಂದೆರಡು ತುಳು ಭಾಷಿಗರು. ಊರಿಗೆ ಊರೇ ಒಂದಾಗುವ ಕ್ಷಣ. ಬದುಕಿನ ಸಂಕಷ್ಟಗಳನ್ನು ದೈವಗಳ ಮುಂದೆ ನಿವೇದಿಸಿಕೊಂಡಾಗ 'ಅಭಯ ಪ್ರದಾನ'ವಾಗುತ್ತದೆ. ಮುದುಡಿದ ಮುಖ ಅರಳುತ್ತದೆ. ಆನಂದಭಾಷ್ಪ ಸುರಿಯುತ್ತದೆ.

ವರುಷವಿಡೀ ದೇವಸ್ಥಾನಕ್ಕೆ ಬಾರದವರು ಕೂಡಾ ಜಾತ್ರೆಯ ಒಂದು ದಿನವಾದರೂ ಬಾರದೆ ಇರರು. ಮದುವೆಯಾಗಿ ಪರವೂರು ಸೇರಿದ ಹೆಣ್ಮಕ್ಕಳು ಜಾತ್ರೆಗೆ ಬಂದೇ ಬರುತ್ತಾರೆ. ಉದ್ಯೋಗಸ್ಥರು ಏನಿಲ್ಲವೆಂದರೂ ಐದಾರು ದಿನ ರಜೆ ಹಾಕುತ್ತಾರೆ. ಜಾತ್ರೆಯ ದಿವಸಗಳನ್ನು ತಪ್ಪಿಸಿಯೇ ಶಾಲೆಗಳಲ್ಲಿ ಕಾಲಾವಧಿ ಪರೀಕ್ಷೆ ನಡೆಯುತ್ತದೆ.

ಪೆರಾಜೆ ಪಂಚಾಯತ್ ಆರು ಗ್ರಾಮಗಳನ್ನು ಒಳಗೊಂಡಿದೆ. ಒಂದೊಂದು ಗ್ರಾಮಕ್ಕೆ ಒಬ್ಬೊಬ್ಬ ಹಿರಿಯರು. ಅವರನ್ನು 'ತಕ್ಕರು' ಎಂದು ಕರೆಯುತ್ತಾರೆ. ಆರು ತಕ್ಕರಿಗೆ ಒಬ್ಬ ಹಿರಿ ತಕ್ಕ. ಸಮಸ್ಯೆ, ದೂರು ದುಮ್ಮಾನಗಳು ಎದುರಾದರೆ ಹಿರಿ ತಕ್ಕರು ನಿಭಾಯಿಸುತ್ತಾರೆ. ಜಾತ್ರಾ ಸಮಯದಲ್ಲಿ ಇವರೆಲ್ಲಾ ಹಾಜರಿರಲೇ ಬೇಕು ಎಂಬ ಅಲಿಖಿತ ಶಾಸನವಿದೆ. ಎಷ್ಟು ಮಂದಿ ಶಾಸನವನ್ನು ಪಾಲಿಸುತ್ತಾರೆ ಎಂಬುದು ಬೇರೆ ಮಾತು. ಅದು ಅವರವರ ನಂಬುಗೆ ಮತ್ತು ಬದ್ಧತೆ.

ಮಾಚ್ 10ರಂದು ಗೊನೆ ಮುಹೂರ್ತ. ನಂತರ ಜಾತ್ರಾ ಸಿದ್ಧತೆಗೆ ಗ್ರಾಮವೇ ಸಜ್ಜಾಗುತ್ತದೆ. ಚಪ್ಪರ ಹಾಕಲು ಆರು ಗ್ರಾಮಗಳಿಂದ ಅಡಕೆ ಮರದ ಕಂಬಗಳು, ಸಲಕೆಗಳು, ತೆಂಗಿನ ಗರಿಗಳು ದೇವಳದ ಪ್ರಾಂಗಣದಲ್ಲಿ ರಾಶಿ ಬೀಳುತ್ತವೆ. ದೇವಸ್ಥಾನದ ಒಳಾಂಗಣ, ಹೊರಾಂಗಣಗಳಲ್ಲಿ ಬೆಳೆದ ಕಳೆಗಳನ್ನು ನುಣುಪಾಗಿ ಕೆತ್ತುವ ಕೆಲಸ ಆರು ಗ್ರಾಮಗಳಿಗೂ ಹಂಚಿ ಹೋಗುತ್ತದೆ. ಇದು ಹಿಂದಿನಿಂದಲೇ ನಡೆದು ಬಂದ ಪರಂಪರೆ.

ಒಂದೊಂದು ಗ್ರಾಮದ ಯುವ ಪಡೆಯಿಂದ ತಕ್ಕರ ನಿರ್ದೇಶನದಲ್ಲಿ ಅಂಗಣದ ಕಳೆ ತೆಗೆಯುವ ಕೆಲಸ. 'ತಮ್ಮ ಪಾಲಿನ ಕೆಲಸ ಚೆನ್ನಾಗಿರಬೇಕು' ಎಂಬ ಕಾಳಜಿ. 'ನಮ್ಮದು ಬೇಗ ಮುಗಿಯಬೇಕು' ಎನ್ನುವ ಹಪಹಪಿಕೆ. ಜಾತ್ರೆ ಶುರುವಾಗುವಂದು ಚಪ್ಪರದಿಂದ ತೋರಣದ ವರೆಗಿನ ಎಲ್ಲಾ ಕೆಲಸ ಮುಗಿದಿರುತ್ತದೆ.

ಮಾರ್ಚ್ 26 ಜಾತ್ರೆ ಶುರು. ಅಂದು ಸಂಜೆ ಸಾರ್ವಜನಿಕ ಭೋಜನಕ್ಕೆ ವ್ಯವಸ್ಥೆ. ಈ ಭೋಜನಕ್ಕೆ 'ಬಿಟ್ಟಿ ಮಕ್ಕಳ ಸಮಾರಾಧನೆ' ಎಂದು ಹೆಸರು. ಸುಮಾರು ಶತಮಾನದಿಂದಲೇ ಪಾರಂಪರಿಕವಾಗಿ ಸಮಾರಾಧನೆ ನಡೆಯುತ್ತಿದೆ. ಮೃಷ್ಟಾನ್ನ ಬೋಜನವೇನಲ್ಲ. ಕುಚ್ಚಲು ಅಕ್ಕಿಯ ಅನ್ನ, ಸಾರು, ಸಾಂಬಾರು, ಪಲ್ಯ. ಬಳಿಕ ಪಾಯಸ ಸೇರ್ಪಡೆಗೊಂಡಿದೆ. ಒಮ್ಮೆ ಉಂಡವರು ಮತ್ತೊಮ್ಮೆ ಉಣ್ಣುವುದೂ ಇದೆ! ರಾತ್ರಿ ಹತ್ತರ ಸುಮಾರಿಗೆ ದೇವರ ಬಲಿ ಹೊರಡುವ ಸೂಚನೆ ಸಿಕ್ಕಿದಾಕ್ಷಣ 'ಬಿಟ್ಟಿ ಮಕ್ಕಳ ಸಮಾರಾಧನೆ'ಗೆ ವಿದಾಯ.

ಬಹುಶಃ ಜಾತ್ರೆಗಾಗಿ ದೇವಳವನ್ನು ಅಂದಗೊಳಿಸಿದುದಕ್ಕಾಗಿ ಭೋಜನದ ಮೂಲಕ ಕೃತಜ್ಞತೆ ಹೇಳುವುದು ಇದರ ಹಿಂದಿನ ಉದ್ದೇಶ. 'ಬಿಟ್ಟಿ ಮಕ್ಕಳು' ಅಂದರೆ ಪ್ರತಿಫಲಾಪೇಕ್ಷೆಯಿಲ್ಲದೆ ಸೇವಾಭಾವದಿಂದ ದುಡಿವ ಮಂದಿ ಎಂಬರ್ಥ.

ಈ ಭೋಜನವನ್ನು ಯಾರೂ ಮಿಸ್ ಮಾಡಿಕೊಳ್ಳುವುದಿಲ್ಲ. ಜಾತ್ರಾ ಪೂರ್ವದಲ್ಲಿ ಯಾರೆಲ್ಲಾ ಕೆಲಸ ಮಾಡಿದ್ದಾರೋ ಅವರು ಉಣ್ಣಲೇಬೇಕು. ಒಂದು ವೇಳೆ ತನಗೆ ಬರಲಾಗದಿದ್ದರೆ ತನ್ನ ಕುಟುಂಬದವರನ್ನು ಬದಲಿಗೆ ಕಳುಹಿಸುವುದೂ ಇದೆ.

ಜತೆ ಸೇರಿ, ತಮಾಷೆ ಮಾಡಿಕೊಂಡು ಉಣ್ಣುವ ದಿನಗಳಲ್ಲಿ 'ಸ್ವ-ಸಹಾಯ' ಕಲ್ಪನೆ ಕಾಣುತ್ತಿತ್ತು. ಪರಸ್ಪರ ಸಹಕಾರದಿಂದ ಕೂಡಿ ಬಾಳುವ ಸಂದೇಶ ಈ ಬಿಟ್ಟಿ ಮಕ್ಕಳ ಭೋಜನ ಮತ್ತು ಅದರ ಹಿಂದಿನ ಸ್ವ-ಸಹಾಯ ದುಡಿಮೆಯಲ್ಲಿ ಕಾಣುವುದಕ್ಕೆ ಸಾಧ್ಯವಿತ್ತು. ಈ ಭೋಜನಕ್ಕೆ ಇತರರೂ ಸೇರಿಕೊಳ್ಳುತ್ತಾರೆ.

ದೇವಸ್ಥಾನದ ಖರ್ಚುವೆಚ್ಚಗಳಿಗೆ ಪ್ರತೀ ಮನೆಯಿಂದ ಯಥಾಶಕ್ತಿ ವಸ್ತುಗಳನ್ನು ತರುವುದು ಕಡ್ಡಾಯ. ಇದು ಸ್ವ-ರೂಢನೆ. ತರಕಾರಿಯಿಂದ ಅಕ್ಕಿ ತನಕ ವಿವಿಧ ವೈವಿಧ್ಯಗಳು ರಾಶಿ ಬೀಳುತ್ತಿತ್ತು. ಒಂದು ಕಾಲಘಟ್ಟದಲ್ಲಿ ಈ ವಸ್ತುಗಳೇ ಜಾತ್ರಾ ಖರ್ಚು-ವೆಚ್ಚಗಳನ್ನು ಭರಿಸುತ್ತಿತ್ತು.

ಕಾಲ ಸರಿಯಿತು. ಹಿರಿಯರು ಮನೆಸೇರಿದರು. ಯುವಕರು ನಗರಾಭಿಮುಖರಾದರು. 'ಸೇವೆ' ಎಂಬ ಅರ್ಥಕ್ಕೆ ಮಸುಕು ಹಿಡಿಯಿತು. ಈ ಮಧ್ಯೆ ಮನೆಗಿಂತಿಷ್ಟು ಎಂಬ ಲೆಕ್ಕಾಚಾರದ ಕಡ್ಡಾಯ ದೇಣಿಗೆ. ಸಹಜವಾರಿ 'ಬಿಟ್ಟಿ ಮಕ್ಕಳು' ಅಜ್ಞಾತರಾದರು. ಈಗ ದೇವಳದ ಆಡಳಿತವೇ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದೆ. ಆದರೆ 'ಬಿಟ್ಟಿ ಮಕ್ಕಳ ಊಟ' ಮಾತ್ರ ಮಾರ್ಚ್ 26ರಂದು ಈಗಲೂ ನಡೆಯುತ್ತಿದೆ. ಇಲ್ಲಿ ಉಣ್ಣುವುದು ಒಂದು ಕ್ರಿಯೆಯಾದರೂ ಅದರ ಹಿಂದಿದೆ, ಉದಾತ್ತ ಭಾವನೆ.

ಸ್ವ-ಸಹಾಯದ ಕಲ್ಪನೆಯನ್ನು ನಮ್ಮ ಹಿರಿಯರು ಬೇರೆ ಬೇರೆ ಹೆಸರಿನಿಂದ ಬಹಳಷ್ಟು ವರುಷದ ಹಿಂದೆಯೇ ಅನುಷ್ಠಾನಕ್ಕೆ ತಂದಿದ್ದರು. 'ಇದರಿಂದಾಗಿ ಸಾರ್ವಜನಿಕ ಕೆಲಸಗಳನ್ನು ನಿರಾಯಾಸಯಾಗಿ ಮಾಡುತ್ತಿದ್ದೆವು. ಸಮಸ್ಯೆ ಎಂದೂ ಬಂದುದಿಲ್ಲ. ಅವರವರ ಪಾಲಿನ ಕೆಲಸಗಳನ್ನು ಕರ್ತವ್ಯ ನೆಲೆಯಲ್ಲಿ ಮಾಡುತ್ತಿದ್ದರು. ಗೊಣಗಾಟವಿಲ್ಲ, ಕಿರಿಕಿರಿಯಿಲ್ಲ..' ಹಳೆಯ ನೆನಪುಗಳನ್ನು ಜ್ಞಾಪಿಸಿಕೊಳ್ಳುತ್ತಾರೆ ಊರಿನ ಹಿರಿಯರು.

ಬದಲಾದ ಕಾಲಘಟ್ಟದಲ್ಲಿ ಹಳೆಯ ವ್ಯವಸ್ಥೆಗಳನ್ನು ಊರ್ಜಿತದಲ್ಲಿಟ್ಟುಕೊಳ್ಳುವುದು ಕಷ್ಟ. ಆದರೆ ವ್ಯವಸ್ಥೆಗಳು ಹೊಸದಾದರೂ, ಕಲ್ಪನೆ ಹಳೆಯದು ತಾನೆ. ಆ ಕಲ್ಪನೆಯ ನೆನಪಿಗಾಗಿ ಈಗಲೂ ನಡೆಯುತ್ತಿದೆ 'ಬಿಟ್ಟಿ ಮಕ್ಕಳ ಸಮಾರಾಧನೆ'. ಯುವ ಜನತೆ ಉದ್ದೇಶ ಮರೆತರೂ, ಅರುವತ್ತರ ಹಿರಿಯರಿಗೆ ಈಗಲೂ ನೆನಪಿದೆ.

Thursday, April 14, 2011

ಮುಳಿಯದಲ್ಲಿ 'ಹಹಹ'






ಬಂಟ್ವಾಳ ತಾಲೂಕಿನ ಅಳಿಕೆ ಸನಿಹದ ಮುಳಿಯದ ವೆಂಕಟಕೃಷ್ಣ ಶರ್ಮ ಅವರ ಮನೆಯಲ್ಲ್ಲೊಂದು ಹಲಸಿನ ಹಣ್ಣಿನ ಹಬ್ಬ (ಹಹಹ). ಸುಮಾರು ಹದಿನೈದು ಕಿಲೋಮೀಟರ್ ವ್ಯಾಪ್ತಿಯ ಆಯ್ದ ಮೂವತ್ತು ಹಲಸಿನ ಬಕ್ಕೆ ತಳಿಗಳು 'ಉತ್ತಮ ತಳಿ' ಆಯ್ಕೆಗಾಗಿ ಮಗುಮ್ಮನೆ ಕುಳಿತಿದ್ದುವು.

ಮಧ್ಯಾಹ್ನದ ಹೊತ್ತಿಗೆ ಪ್ರತಿಯೊಂದು ಹಲಸಿನ ಹಣ್ಣಿನ ಅರ್ಧಭಾಗವನ್ನು ತುಂಡರಿಸಿ, ಸೊಳೆ ತೆಗೆದು ಪ್ರದರ್ಶನಕ್ಕಿಡಲಾಗಿತ್ತು. ಆಸಕ್ತ ಸ್ನೇಹಿತರು ಸೊಳೆ ತೆಗೆವ ಕೆಲಸ ನಿರ್ವಹಿಸಿದ್ದರು. ಕೆಲವು ಕಿತ್ತಳೆ ವರ್ಣ, ಕೆಲವು ಹಳದಿ, ಕೆಲವು ಬಿಳಿ.. ಹೀಗೆ ವಿವಿಧ ವೈವಿಧ್ಯ ಬಣ್ಣಗಳು, ಜತೆಗೆ ಪರಿಮಳ.. ಸೇರಿದ್ದ ಹಲಸು ಪ್ರಿಯರ ಬಾಯಿ ನೀರೂರಿತ್ತು!

'ಮೌಲ್ಯಮಾಪನ ಶುರುವಾಗದೆ ಯಾರೂ ಹಣ್ಣು ತಿನ್ನಬಾರದು' ಎಂದು ಶರ್ಮರಿಂದ ಕಟ್ಟಾಜ್ಞೆ. ಹಣ್ಣಿನ ಪರಮಳವನ್ನು ಆಘ್ರಾಣಿಸಿ ತಿನ್ನಲೇ ಬೇಕು ಎಂದಿರುವ ಹಲಸುಪ್ರಿಯರಿಗೆ ಪ್ರತ್ಯೇಕವಾಗಿ ಸೊಳೆ ತೆಗೆದು ಸಿದ್ಧಮಾಡಿಟ್ಟಿದ್ದರು.

ಆರಂಭದಲ್ಲಿ ವೆಂಕಟಕೃಷ್ಣ ಅವರಿಂದ 'ಹಹಹ'ದ ಕುರಿತು ಪ್ರಸ್ತಾವನೆ, ಸ್ವಾಗತದ ಮೂಲಕ ಚಾಲನೆ. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆ, ಕಸಿತಜ್ಞ ಕೃಷ್ಣ ಕೆದಿಲಾಯ ಮತ್ತು ಶೈಲಜಾ ಪಡ್ರೆಯವರಿಂದ ಮೌಲ್ಯಮಾಪನ.
ಈಗಾಗಲೇ ಹಣ್ಣಾಗಿ ಮುಗಿಯುವ ಹಂತದಲ್ಲಿರುವ, ಈಗ ಹಣ್ಣಾಗುತ್ತಲಿರುವ ಮತ್ತು ಮೇ ಕೊನೆಗೆ ಹಣ್ಣಾಗಲಿರುವ - ಹೀಗೆ ಮೂರು ವಿಭಾಗಗಳ ಮೌಲ್ಯಮಾಪನ. ಮೂವತ್ತು ತಳಿಗಳಲ್ಲಿ ಆರು ತಳಿಯ ಆಯ್ಕೆ.

'ಆಯ್ಕೆಯಾದ ತಳಿಗಳನ್ನು ಅಭಿವೃದ್ಧಿ ಪಡಿಸಿ ಉತ್ತಮ ಹಣ್ಣನ್ನು ಪಡೆಯುವ ಯೋಚನೆಯಿಂದ ಹಹಹವನ್ನು ಆಯೋಜಿಸಿದ್ದೇನೆ' ಎಂಬ ಆಶಯ ಮುಂದಿಟ್ಟರು ಶರ್ಮರು. ಮೌಲ್ಯಮಾಪನ ಸಾಗುತ್ತಿದ್ದಂತೆ, ಹಲಸು ಪ್ರಿಯರೂ ರುಚಿ ನೋಡಲು ಆರಂಭಿಸಿದರು. ಒಂದು ಗಂಟೆಯಲ್ಲಿ ಬಹುತೇಕ ಎಲ್ಲಾ ಹಣ್ಣುಗಳೂ ಉದರ ಸೇರಿತು.

ಶರ್ಮರ ಪುತ್ರ ರಾಧಾಕೃಷ್ಣ ವಿದ್ಯಾರ್ಥಿ. ಕೃಷಿಯಲ್ಲಿ ಆಸಕ್ತ. ಸೊಳೆಯನ್ನು ಕರೆಕರೆದು ತಿನ್ನಿಸುತ್ತಿದ್ದ! ತನ್ನೂರಿನ ಸುತ್ತಮುತ್ತಲಿನ ಬಹುತೇಕ ಎಲ್ಲಾ ಹಲಸು ಮರಗಳನ್ನು ಸುತ್ತಾಡಿ ಅನುಭವವಿದ್ದ ಶರ್ಮರು, ಹಹಹಕ್ಕಾಗಿಯೇ ಹದಿನೈದು ದಿನಗಳಿಂದ ನಿದ್ದೆಯೂ ಮಾಡಿಲ್ಲ! 'ಹಹಹದಂದು ಎಲ್ಲಾ ಹಣ್ಣಾಗಬೇಕಲ್ವಾ. ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಹಣ್ಣಾಗಿದೆಯೋ ಅಂತ ತಟ್ಟಿ ನೋಡುತ್ತಿದ್ದರು' ಎಂದು ಗಂಡನನ್ನು ತಮಾಶೆ ಮಡುತ್ತಾರೆ ವಾಣಿ.

ಕಳೆದ ಹತ್ತು ದಿವಸದಿಂದ ಮಾತೆತ್ತಿದರೆ ಸಾಕು, 'ಇಂದು ಎರಡು ವೆರೈಟಿ ಹಲಸು ಪತ್ತೆಯಾಯಿತು' ಎಂಬ ಮಾಹಿತಿ ನೀಡುತ್ತಿದ್ದರು ಶರ್ಮಾ. ವಾಣಿಯವರು ಅಪರಾಹ್ನ ಎರಡು ಗಂಟೆಯ ಹೊತ್ತಿಗೆ ಅತಿಥಿಗಳು ಆಗಮಿಸಿದಾಗ ಹಲಸಿನ ಹಣ್ಣಿನ 'ಚಂಗುಳಿ' (ಸೊಳೆಯನ್ನು ಸಣ್ಣಕೆ ಹೆಚ್ಚಿದ ಪಾಯಸದಂತಹ ಸಿಹಿಖಾದ್ಯ) ಸಿದ್ಧ ಮಾಡಿಟ್ಟಿದ್ದರು.

'ಮನೆಯಂಗಳದಲ್ಲಿ ಜರುಗಿದ ಚಿಕ್ಕ ಪ್ರಯತ್ನ ದೊಡ್ಡದಾಗಲಿ. ಪ್ರತೀ ಗ್ರಾಮದಲ್ಲಿ ಉತ್ತಮ ತಳಿಯನ್ನು ಗುರುತಿಸಿ, ಅಭಿವೃದ್ಧಿಪಡಿಸುವ ಕೆಲಸ ನಡೆಯಬೇಕು. ಆಗಲೇ ನಿರ್ಲಕ್ಷಿತ ಹಣ್ಣಿಗೆ ಮಾನ ಬಂದೀತು' ಎಂದು ಶರ್ಮಾರನ್ನು ಅಭಿನಂದಿಸಿದರು ಶ್ರೀ ಪಡ್ರೆ.

( ವೆಂಕಟಕೃಷ್ಣ ಶರ್ಮ ೯೪೮೦೨೦೦೮೩೨)

ಹಳ್ಳಿ ಮನೆಯಿಂದ ಖರ್ಜೂರ ಮೌಲ್ಯವರ್ಧನೆ

ಟಿವಿಯಲ್ಲಿ ಜಾಹೀರಾತು ಬಂದರೆ ಮಾತ್ರ ಅಂತಹ ವಸ್ತುವಿಗೆ ಗುಣಮಟ್ಟದ ಖಾತ್ರಿ! ರಂಗುರಂಗುನ ಪ್ಯಾಕೇಟನ್ನು ಹರಿದು, ಚಿತ್ರತಾರೆಯರು 'ಆಹಾ' ಎನ್ನುತ್ತಾ ಜಗಿದಾಗ ಚಾಕೊಲೇಟ್ಗೆ ಸ್ವಾದ. ಗುಣಮಟ್ಟ ವೃದ್ಧಿ! ಇದನ್ನು ವೀಕ್ಷಿಸಿದ ಪುಟಾಣಿಗಳಿಂದ ಹೆತ್ತವರಲ್ಲಿ ರಂಪಾಟ. ಹರಸಾಹಸದ ಹುಡುಕಾಟ. ಅದನ್ನು ಬಾಯಿಗೆ ಹಾಕಿ ಜಗಿಯುತ್ತಿದ್ದಾಗ ಮಕ್ಕಳ ಮುಖವೆಷ್ಟು ಅರಳುತ್ತದಲ್ವಾ. ಕಾರಣ ಟಿವಿ ಪ್ರಭಾವ.

ನಮ್ಮ ಬಹುತೇಕ ಮೌಲ್ಯವರ್ಧಿತ ವಸ್ತುಗಳು ಗುಣಮಟ್ಟದಲ್ಲಿ ಉತ್ತಮವಾಗಿದ್ದರೂ ಮಾರುಕಟ್ಟೆ ರೂಪಿತವಾಗುವುದಿಲ್ಲ. ಕಾರಣ 'ಅದು ಟಿವಿಯಲ್ಲಿ ಬರುವುದಿಲ್ಲ'! ಟಿವಿಯಲ್ಲಿ ಬಿತ್ತರವಾದರೆ ಮಾತ್ರ ಅದು ಶ್ರೇಷ್ಠ ಎನ್ನುವ ಕೆಟ್ಟ ಅರಿವನ್ನು ಎಲ್ಲಾ ವಾಹಿನಿಗಳು ಬಿಂಬಿಸುತ್ತವೆ. ಇರಲಿ, ಇಲ್ಲೋಡಿ ಕರಾವಳಿ ಮೂಲೆಯ ಹಳ್ಳಿಯೊಂದರ ಮನೆಯಿಂದ ಖರ್ಜೂರ ಪರಿಮಳ ಬರುತ್ತಿದೆಯಲ್ಲಾ.

ದಕ್ಷಿಣ ಕನ್ನಡ ಜಿಲ್ಲೆಯ ಕೋಡಪದವಿನ ಕೃಷಿಕ ಕಿನಿಲ ಅಶೋಕ್ ಖರ್ಜೂರದಿಂದ ಚಾಕೊಲೇಟ್ ತಯಾರಿಸಿದ್ದಾರೆ. ಕಂಪೆನಿ ಜಾಹೀರಾತಿನ ಚಾಕೊಲೇಟ್ ಭರಾಟೆ ಮಧ್ಯೆ ಈ ಹಳ್ಳಿ ಉತ್ಪನ್ನವನ್ನು ಹುಡುಕಿ ತಿನ್ನುವ ಗ್ರಾಹಕರು ರೂಪಿತವಾಗಿರುವುದು ಇದರ ಗುಣಮಟ್ಟಕ್ಕೆ ಸಾಕ್ಷಿ.

ಈ ಚಾಕೊಲೇಟ್ಗೆ ಉತ್ತಮ ಗುಣಮಟ್ಟದ ಕಪ್ಪು ಖರ್ಜೂರವನ್ನು ಬಳಸಿದ್ದಾರೆ. ಬೀಜ ತೆಗೆದು, ಶುಚಿ ಗೊಳಿಸಿ, ಅದರಲ್ಲಿರುವ ನೀರಿನಾಂಶವನ್ನು 'ಮೈಕ್ರೋ ಓ ಹೀಟಿಂಗ್' ಮೂಲಕ ತೆಗೆದು, ಅದರೊಳಗೆ ಚಾಕೊಲೇಟ್ ತುಂಬಿಸಿ ಪ್ಯಾಕಿಂಗ್! ಇಷ್ಟೆನಾ..! ಅಂತ ಗೋಣು ಅಲ್ಲಾಡಿಸಬೇಡಿ. ಇಷ್ಟನ್ನು ಮಾಡಿ, ಗುಣಮಟ್ಟ ತರಲು ಅವರ ಕಿಸೆಯಿಂದ ಕೆಲವು ಸಾವಿರ ಜಾರಿದೆ!

ಕೈಗಾರಿಕಾ ಉದ್ದೇಶಕ್ಕೆ ಮಾಡುವಂತಹ ಕೋಕೋ ಚಿಪ್ಸ್ ಇದರ ಮೂಲ ಹೂರಣ. ಎರಡು ಚಾಕೊಲೇಟ್ಗೆ ಆರು ರೂಪಾಯಿ. ಹತ್ತು ಚಾಕೊಲೇಟ್ನ ಕರಂಡಕ. ಆಕರ್ಷಕ ನೋಟ. 'ಕಚ್ಚಾವಸ್ತುಗಳಿಗೆ ದರ ಹೆಚ್ಚಿರುವುದರಿಂದ ಇದಕ್ಕಿಂತ ಕಡಿಮೆ ದರ ನಿಗದಿ ಮಾಡುವುದು ಕಷ್ಟ' ಎನ್ನುತ್ತಾರೆ ಅಶೋಕ್. ಆರಂಭದಲ್ಲಿ ಒಂದಷ್ಟು ಮಂದಿ ಸ್ನೇಹಿತರಿಗೆ ಪ್ರಾಯೋಗಿಕ ಚಾಕೊಲೇಟನ್ನು ಹಂಚಿ, ರುಚಿ ಹಿಡಿತವನ್ನು ಸಾಧಿಸಿದ್ದಾರೆ. ಆದ್ದರಿಂದ ಹಳ್ಳಿ ಉತ್ಪನ್ನವನ್ನು ಪ್ರೀತಿಸುವ, ದೇಸಿ ಪ್ರೀತಿಯ ಒಂದಷ್ಟು ಮಂದಿ ತಮ್ಮ ಮನೆ ಸಮಾರಂಭಗಳಿಗೆ ಅಶೋಕರನ್ನು ಸಂಪರ್ಕಿಸುತ್ತಲೇ ಇದ್ದಾರೆ.

ಇವರ ಆರಂಭದ ಉತ್ಪನ್ನ 'ಸುಪಾರಿ.' ಹಣ್ಣಡಿಕೆ ಮತ್ತು ಗೋಟಡಿಕೆ ಹೂರಣ. ಅದರ ಅನುಭವದ ಪರಿಣಾಮವಾಗಿ `ಖರ್ಜೂರ ತಾಂಬೂಲ' ಅಭಿವೃದ್ಧಿ. ಖರ್ಜೂರದ ಒಳಗೆ ಸುಪಾರಿ ಸಹಿತ ವಿವಿಧ ಸಾಂಬಾರಗಳ ಹೂರಣ. ಖರ್ಜೂರದ ಹೊರಮೈಗೆ ಸುತ್ತಿದ ಬೆಳ್ಳಿಕಾಗದವನ್ನು ತೆಗೆದು ಬಾಯೊಳಗಿಟ್ಟು ಜಗಿದರೆ, ಷಡ್ರಸದ ಅನುಭವ. ಕೃತಕ ಪರಿಮಳವಿಲ್ಲ. ರಾಸಾಯನಿಕಗಳಿಲ್ಲ. ತಂಬಾಕು ಯಾ ಮಾದಕ ವಸ್ತುಗಳಿಲ್ಲ. ಸಂಪೂರ್ಣವಾಗಿ ನೈಸರ್ಗಿಕ.

ಮುಖ್ಯ ಕಚ್ಚಾವಸ್ತು ಅಡಿಕೆ. `ಒಂದು ಗುಟ್ಕಾದ ಸ್ಯಾಚೆಟ್ನಲ್ಲಿ ಇರುವಷ್ಟು ಅಡಿಕೆ ಇದರಲ್ಲಿದೆ. ನಾವು ವೀಳ್ಯ ಹಾಕುವಾಗ ಎಷ್ಟು ಪ್ರಮಾಣದಲ್ಲಿ ಅಡಿಕೆ ಜಗಿಯುತ್ತೇವೆಯೋ ಅಷ್ಟೇ ಅಡಿಕೆ, ಕಾಳುಮೆಣಸು, ಲವಂಗ, ಶುಂಠಿ, ದಾಲ್ಚಿನ್ನಿ, ಜಾಯಿಕಾಯಿ, ಚೆಂಡುಹುಳಿ, ಪುದಿನಾ, ಸೋಂಪು, ಮೆಂಥಾಲ್, ಪಚ್ಚೆಕರ್ಪೂರ, ಉಪ್ಪು, ತುಪ್ಪ, ಏಲಕ್ಕಿ - ಇವುಗಳ ಮಿಶ್ರಣ.

ಇದೊಂದು `ಮಿನಿ ಉದ್ಯಮ'. ಮದುವೆ, ಉಪನಯನ ಅಲ್ಲದೆ, ಇತರ ಸಮಾರಂಭಗಳಲ್ಲಿ ಈ ತಾಂಬೂಲ ಬಳಸಲು ಅನುಕೂಲ. ಮಕ್ಕಳಿಗಂತೂ ಬಹಳ ಇಷ್ಟ. ಇದನ್ನು `ಪ್ರಿಯಾ ಹೋಂ ಪ್ರಾಡಕ್ಟ್' ಹೆಸರಿನಡಿ ಅಶೋಕರು ಪರಿಚಯಿಸುತ್ತಾರೆ. ಈಗ ಖರ್ಜೂರದ ಇನ್ನೊಂದು ಅವತಾರ - ಚಾಕೊಲೇಟ್.

ಆರಂಭದಲ್ಲಿ ಮನೆ ಉಪಯೋಗಕ್ಕಾಗಿ ಹಣ್ಣಡಿಕೆಯಿಂದ ಮತ್ತು ಗೋಟಡಿಕೆಯಿಂದ ಎರಡೆರಡು ಬಗೆಯ ಸುಪಾರಿಯನ್ನು ತಯಾರಿಸಿದ್ದರು. ಚಿಪ್ಸ್ಗಾತ್ರ, ಜಗಿಯಲು ಸಿಗುವಂತಹ ಗಾತ್ರ, ಅಡಕೆ ಹುಡಿ, ಮತ್ತು ಸಿಹಿ ರಹಿತವಾದ ನಾಲ್ಕು ತರಹದ ಸುಪಾರಿ. 'ಕೃಷಿ ಕೆಲಸದೊಂದಿಗೆ ನಾನೊಬ್ಬನೇ ನಿಗಾ ವಹಿಸಬೇಕಾದುದರಿಂದ ಕೆಲಸ ಹೊರೆ ಹೆಚ್ಚಾಗುತ್ತದೆ. ಹಾಗಾಗಿ ಖರ್ಜೂರದ ಬಳಕೆ ಶುರುಮಾಡಿದ್ದರಿಂದಾಗಿ ಈ ಎಲ್ಲಾ ಸುಪಾರಿ ತಯಾರಿಯನ್ನು ಕೈಬಿಟ್ಟಿದ್ದೇನೆ' ಎನ್ನುತ್ತಾರೆ ಅಶೋಕ್.

ಮನೆ ಸುಪಾರಿ ಮೆಲ್ಲುವ ಹವ್ಯಾಸ ಅಭ್ಯಾಸವಾಗಿ ಬೆಳೆದರೆ, ಕಂಪೆನಿ ಸ್ಯಾಚೆಟ್ಗೆ ವಿದಾಯ ಹೇಳಬಹುದು. ಒಂದಷ್ಟು ಹೆಚ್ಚು ದಿವಸ ಆರೋಗ್ಯವನ್ನು ಕಾಪಾಡಬಹುದು. ಇದರಲ್ಲಿ ಉಗುಳುವಂತಹುದು ಇಲ್ಲ, ಎಲ್ಲವೂ ನುಂಗಬಹುದಾದ ಕಚ್ಚಾವಸ್ತುಗಳು. ಮಾದಕತೆ ನೀಡುವ ರಾಸಾಯನಿಕ ಮಿಶ್ರಿತ ಸುಪಾರಿಯಂತೆ ಈ ಮನೆತಯಾರಿ ಸುಪಾರಿಯಲ್ಲಿ ರಾಸಾಯನಿಕ ಇಲ್ಲದಿದ್ದರೂ, ಅಡಕೆಯೇ ಆ ಕೆಲಸ ಮಾಡುತ್ತದೆ..... ಹೀಗೆ ತಮ್ಮ ಅನುಭವವನ್ನು ಅಶೋಕರು ಮುಂದಿಡುತ್ತಾರೆ.

ಈ ಎಲ್ಲಾ ಉತ್ಪನ್ನಗಳಿಗೆ ಇವರ ಮನೆಯೇ ಪ್ಯಾಕ್ಟರಿ. ಮನೆ ಸದಸ್ಯರೇ ಕಾರ್ಮಿಕರು. ಬೇಡಿಕೆಯಷ್ಟೇ ತಯಾರಿ. ಹಾಗೆಂತ ಹೆಚ್ಚು ಬೇಡಿಕೆ ಬಂದರೂ ಪೂರೈಸಲು ತ್ರಾಸ. ಅಶೋಕರು ತಮ್ಮ ಮಿತಿಯಲ್ಲಿ ಈ ಉತ್ಪನ್ನಗಳನ್ನು ಪೂರೈಸುತ್ತಾರೆ. (ಸಂಚಾರಿವಾಣಿ: 9448859053, 9900349035)