Thursday, April 21, 2011

'ಬಿಟ್ಟಿ ಮಕ್ಕಳ ಸಮಾರಾಧನೆ'

ಸುಳ್ಯ ಸನಿಹದ ಪೆರಾಜೆಯಲ್ಲಿ ಜಾತ್ರೆಯ (ಮಾ ೨೬-ಏ ೧೦) ಸಡಗರ. ಹದಿನೈದು ದಿವಸಗಳ ಜಾತ್ರೆಯಲ್ಲಿ ಮಾತನಾಡದ ದೇವರಿಗೆ ಒಂದು ರಾತ್ರಿ ಮತ್ತು ಒಂದು ಹಗಲಿನಲ್ಲಿ ಉತ್ಸವದ ಭಾಗ್ಯ. ಹದಿನಾಲ್ಕು ದಿವಸ ಮಾತನಾಡುವ ದೈವಗಳಿಗೆ ಮಹೋತ್ಸವ. ಮಲೆಯಾಳ ಭಾಷೆಯ ದೈವಗಳದ್ದೇ ಸಿಂಹಪಾಲು. ಮಧ್ಯೆ ಒಂದೆರಡು ತುಳು ಭಾಷಿಗರು. ಊರಿಗೆ ಊರೇ ಒಂದಾಗುವ ಕ್ಷಣ. ಬದುಕಿನ ಸಂಕಷ್ಟಗಳನ್ನು ದೈವಗಳ ಮುಂದೆ ನಿವೇದಿಸಿಕೊಂಡಾಗ 'ಅಭಯ ಪ್ರದಾನ'ವಾಗುತ್ತದೆ. ಮುದುಡಿದ ಮುಖ ಅರಳುತ್ತದೆ. ಆನಂದಭಾಷ್ಪ ಸುರಿಯುತ್ತದೆ.

ವರುಷವಿಡೀ ದೇವಸ್ಥಾನಕ್ಕೆ ಬಾರದವರು ಕೂಡಾ ಜಾತ್ರೆಯ ಒಂದು ದಿನವಾದರೂ ಬಾರದೆ ಇರರು. ಮದುವೆಯಾಗಿ ಪರವೂರು ಸೇರಿದ ಹೆಣ್ಮಕ್ಕಳು ಜಾತ್ರೆಗೆ ಬಂದೇ ಬರುತ್ತಾರೆ. ಉದ್ಯೋಗಸ್ಥರು ಏನಿಲ್ಲವೆಂದರೂ ಐದಾರು ದಿನ ರಜೆ ಹಾಕುತ್ತಾರೆ. ಜಾತ್ರೆಯ ದಿವಸಗಳನ್ನು ತಪ್ಪಿಸಿಯೇ ಶಾಲೆಗಳಲ್ಲಿ ಕಾಲಾವಧಿ ಪರೀಕ್ಷೆ ನಡೆಯುತ್ತದೆ.

ಪೆರಾಜೆ ಪಂಚಾಯತ್ ಆರು ಗ್ರಾಮಗಳನ್ನು ಒಳಗೊಂಡಿದೆ. ಒಂದೊಂದು ಗ್ರಾಮಕ್ಕೆ ಒಬ್ಬೊಬ್ಬ ಹಿರಿಯರು. ಅವರನ್ನು 'ತಕ್ಕರು' ಎಂದು ಕರೆಯುತ್ತಾರೆ. ಆರು ತಕ್ಕರಿಗೆ ಒಬ್ಬ ಹಿರಿ ತಕ್ಕ. ಸಮಸ್ಯೆ, ದೂರು ದುಮ್ಮಾನಗಳು ಎದುರಾದರೆ ಹಿರಿ ತಕ್ಕರು ನಿಭಾಯಿಸುತ್ತಾರೆ. ಜಾತ್ರಾ ಸಮಯದಲ್ಲಿ ಇವರೆಲ್ಲಾ ಹಾಜರಿರಲೇ ಬೇಕು ಎಂಬ ಅಲಿಖಿತ ಶಾಸನವಿದೆ. ಎಷ್ಟು ಮಂದಿ ಶಾಸನವನ್ನು ಪಾಲಿಸುತ್ತಾರೆ ಎಂಬುದು ಬೇರೆ ಮಾತು. ಅದು ಅವರವರ ನಂಬುಗೆ ಮತ್ತು ಬದ್ಧತೆ.

ಮಾಚ್ 10ರಂದು ಗೊನೆ ಮುಹೂರ್ತ. ನಂತರ ಜಾತ್ರಾ ಸಿದ್ಧತೆಗೆ ಗ್ರಾಮವೇ ಸಜ್ಜಾಗುತ್ತದೆ. ಚಪ್ಪರ ಹಾಕಲು ಆರು ಗ್ರಾಮಗಳಿಂದ ಅಡಕೆ ಮರದ ಕಂಬಗಳು, ಸಲಕೆಗಳು, ತೆಂಗಿನ ಗರಿಗಳು ದೇವಳದ ಪ್ರಾಂಗಣದಲ್ಲಿ ರಾಶಿ ಬೀಳುತ್ತವೆ. ದೇವಸ್ಥಾನದ ಒಳಾಂಗಣ, ಹೊರಾಂಗಣಗಳಲ್ಲಿ ಬೆಳೆದ ಕಳೆಗಳನ್ನು ನುಣುಪಾಗಿ ಕೆತ್ತುವ ಕೆಲಸ ಆರು ಗ್ರಾಮಗಳಿಗೂ ಹಂಚಿ ಹೋಗುತ್ತದೆ. ಇದು ಹಿಂದಿನಿಂದಲೇ ನಡೆದು ಬಂದ ಪರಂಪರೆ.

ಒಂದೊಂದು ಗ್ರಾಮದ ಯುವ ಪಡೆಯಿಂದ ತಕ್ಕರ ನಿರ್ದೇಶನದಲ್ಲಿ ಅಂಗಣದ ಕಳೆ ತೆಗೆಯುವ ಕೆಲಸ. 'ತಮ್ಮ ಪಾಲಿನ ಕೆಲಸ ಚೆನ್ನಾಗಿರಬೇಕು' ಎಂಬ ಕಾಳಜಿ. 'ನಮ್ಮದು ಬೇಗ ಮುಗಿಯಬೇಕು' ಎನ್ನುವ ಹಪಹಪಿಕೆ. ಜಾತ್ರೆ ಶುರುವಾಗುವಂದು ಚಪ್ಪರದಿಂದ ತೋರಣದ ವರೆಗಿನ ಎಲ್ಲಾ ಕೆಲಸ ಮುಗಿದಿರುತ್ತದೆ.

ಮಾರ್ಚ್ 26 ಜಾತ್ರೆ ಶುರು. ಅಂದು ಸಂಜೆ ಸಾರ್ವಜನಿಕ ಭೋಜನಕ್ಕೆ ವ್ಯವಸ್ಥೆ. ಈ ಭೋಜನಕ್ಕೆ 'ಬಿಟ್ಟಿ ಮಕ್ಕಳ ಸಮಾರಾಧನೆ' ಎಂದು ಹೆಸರು. ಸುಮಾರು ಶತಮಾನದಿಂದಲೇ ಪಾರಂಪರಿಕವಾಗಿ ಸಮಾರಾಧನೆ ನಡೆಯುತ್ತಿದೆ. ಮೃಷ್ಟಾನ್ನ ಬೋಜನವೇನಲ್ಲ. ಕುಚ್ಚಲು ಅಕ್ಕಿಯ ಅನ್ನ, ಸಾರು, ಸಾಂಬಾರು, ಪಲ್ಯ. ಬಳಿಕ ಪಾಯಸ ಸೇರ್ಪಡೆಗೊಂಡಿದೆ. ಒಮ್ಮೆ ಉಂಡವರು ಮತ್ತೊಮ್ಮೆ ಉಣ್ಣುವುದೂ ಇದೆ! ರಾತ್ರಿ ಹತ್ತರ ಸುಮಾರಿಗೆ ದೇವರ ಬಲಿ ಹೊರಡುವ ಸೂಚನೆ ಸಿಕ್ಕಿದಾಕ್ಷಣ 'ಬಿಟ್ಟಿ ಮಕ್ಕಳ ಸಮಾರಾಧನೆ'ಗೆ ವಿದಾಯ.

ಬಹುಶಃ ಜಾತ್ರೆಗಾಗಿ ದೇವಳವನ್ನು ಅಂದಗೊಳಿಸಿದುದಕ್ಕಾಗಿ ಭೋಜನದ ಮೂಲಕ ಕೃತಜ್ಞತೆ ಹೇಳುವುದು ಇದರ ಹಿಂದಿನ ಉದ್ದೇಶ. 'ಬಿಟ್ಟಿ ಮಕ್ಕಳು' ಅಂದರೆ ಪ್ರತಿಫಲಾಪೇಕ್ಷೆಯಿಲ್ಲದೆ ಸೇವಾಭಾವದಿಂದ ದುಡಿವ ಮಂದಿ ಎಂಬರ್ಥ.

ಈ ಭೋಜನವನ್ನು ಯಾರೂ ಮಿಸ್ ಮಾಡಿಕೊಳ್ಳುವುದಿಲ್ಲ. ಜಾತ್ರಾ ಪೂರ್ವದಲ್ಲಿ ಯಾರೆಲ್ಲಾ ಕೆಲಸ ಮಾಡಿದ್ದಾರೋ ಅವರು ಉಣ್ಣಲೇಬೇಕು. ಒಂದು ವೇಳೆ ತನಗೆ ಬರಲಾಗದಿದ್ದರೆ ತನ್ನ ಕುಟುಂಬದವರನ್ನು ಬದಲಿಗೆ ಕಳುಹಿಸುವುದೂ ಇದೆ.

ಜತೆ ಸೇರಿ, ತಮಾಷೆ ಮಾಡಿಕೊಂಡು ಉಣ್ಣುವ ದಿನಗಳಲ್ಲಿ 'ಸ್ವ-ಸಹಾಯ' ಕಲ್ಪನೆ ಕಾಣುತ್ತಿತ್ತು. ಪರಸ್ಪರ ಸಹಕಾರದಿಂದ ಕೂಡಿ ಬಾಳುವ ಸಂದೇಶ ಈ ಬಿಟ್ಟಿ ಮಕ್ಕಳ ಭೋಜನ ಮತ್ತು ಅದರ ಹಿಂದಿನ ಸ್ವ-ಸಹಾಯ ದುಡಿಮೆಯಲ್ಲಿ ಕಾಣುವುದಕ್ಕೆ ಸಾಧ್ಯವಿತ್ತು. ಈ ಭೋಜನಕ್ಕೆ ಇತರರೂ ಸೇರಿಕೊಳ್ಳುತ್ತಾರೆ.

ದೇವಸ್ಥಾನದ ಖರ್ಚುವೆಚ್ಚಗಳಿಗೆ ಪ್ರತೀ ಮನೆಯಿಂದ ಯಥಾಶಕ್ತಿ ವಸ್ತುಗಳನ್ನು ತರುವುದು ಕಡ್ಡಾಯ. ಇದು ಸ್ವ-ರೂಢನೆ. ತರಕಾರಿಯಿಂದ ಅಕ್ಕಿ ತನಕ ವಿವಿಧ ವೈವಿಧ್ಯಗಳು ರಾಶಿ ಬೀಳುತ್ತಿತ್ತು. ಒಂದು ಕಾಲಘಟ್ಟದಲ್ಲಿ ಈ ವಸ್ತುಗಳೇ ಜಾತ್ರಾ ಖರ್ಚು-ವೆಚ್ಚಗಳನ್ನು ಭರಿಸುತ್ತಿತ್ತು.

ಕಾಲ ಸರಿಯಿತು. ಹಿರಿಯರು ಮನೆಸೇರಿದರು. ಯುವಕರು ನಗರಾಭಿಮುಖರಾದರು. 'ಸೇವೆ' ಎಂಬ ಅರ್ಥಕ್ಕೆ ಮಸುಕು ಹಿಡಿಯಿತು. ಈ ಮಧ್ಯೆ ಮನೆಗಿಂತಿಷ್ಟು ಎಂಬ ಲೆಕ್ಕಾಚಾರದ ಕಡ್ಡಾಯ ದೇಣಿಗೆ. ಸಹಜವಾರಿ 'ಬಿಟ್ಟಿ ಮಕ್ಕಳು' ಅಜ್ಞಾತರಾದರು. ಈಗ ದೇವಳದ ಆಡಳಿತವೇ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದೆ. ಆದರೆ 'ಬಿಟ್ಟಿ ಮಕ್ಕಳ ಊಟ' ಮಾತ್ರ ಮಾರ್ಚ್ 26ರಂದು ಈಗಲೂ ನಡೆಯುತ್ತಿದೆ. ಇಲ್ಲಿ ಉಣ್ಣುವುದು ಒಂದು ಕ್ರಿಯೆಯಾದರೂ ಅದರ ಹಿಂದಿದೆ, ಉದಾತ್ತ ಭಾವನೆ.

ಸ್ವ-ಸಹಾಯದ ಕಲ್ಪನೆಯನ್ನು ನಮ್ಮ ಹಿರಿಯರು ಬೇರೆ ಬೇರೆ ಹೆಸರಿನಿಂದ ಬಹಳಷ್ಟು ವರುಷದ ಹಿಂದೆಯೇ ಅನುಷ್ಠಾನಕ್ಕೆ ತಂದಿದ್ದರು. 'ಇದರಿಂದಾಗಿ ಸಾರ್ವಜನಿಕ ಕೆಲಸಗಳನ್ನು ನಿರಾಯಾಸಯಾಗಿ ಮಾಡುತ್ತಿದ್ದೆವು. ಸಮಸ್ಯೆ ಎಂದೂ ಬಂದುದಿಲ್ಲ. ಅವರವರ ಪಾಲಿನ ಕೆಲಸಗಳನ್ನು ಕರ್ತವ್ಯ ನೆಲೆಯಲ್ಲಿ ಮಾಡುತ್ತಿದ್ದರು. ಗೊಣಗಾಟವಿಲ್ಲ, ಕಿರಿಕಿರಿಯಿಲ್ಲ..' ಹಳೆಯ ನೆನಪುಗಳನ್ನು ಜ್ಞಾಪಿಸಿಕೊಳ್ಳುತ್ತಾರೆ ಊರಿನ ಹಿರಿಯರು.

ಬದಲಾದ ಕಾಲಘಟ್ಟದಲ್ಲಿ ಹಳೆಯ ವ್ಯವಸ್ಥೆಗಳನ್ನು ಊರ್ಜಿತದಲ್ಲಿಟ್ಟುಕೊಳ್ಳುವುದು ಕಷ್ಟ. ಆದರೆ ವ್ಯವಸ್ಥೆಗಳು ಹೊಸದಾದರೂ, ಕಲ್ಪನೆ ಹಳೆಯದು ತಾನೆ. ಆ ಕಲ್ಪನೆಯ ನೆನಪಿಗಾಗಿ ಈಗಲೂ ನಡೆಯುತ್ತಿದೆ 'ಬಿಟ್ಟಿ ಮಕ್ಕಳ ಸಮಾರಾಧನೆ'. ಯುವ ಜನತೆ ಉದ್ದೇಶ ಮರೆತರೂ, ಅರುವತ್ತರ ಹಿರಿಯರಿಗೆ ಈಗಲೂ ನೆನಪಿದೆ.

0 comments:

Post a Comment