ಲೇಖನ : ಶ್ರೀ ಪಡ್ರೆ
ಕೇರಳ ರಾಜ್ಯ ರಾಜಕೀಯ ಮರೆತು ಎಂಡೋಸಲ್ಫಾನ್ ನಿಷೇಧಿಸಲು ಒಟ್ಟಾಗಿ ದನಿಯೆತ್ತಿದೆ. ಸಮಾಜದ ಎಲ್ಲ ವರ್ಗ, ವೃತ್ತಿಗಳ ಜನ ನಿಕಟಭೂತಕಾಲದಲ್ಲೆಂದೂ ಹೀಗೆ ಒಂದೇ ಉದ್ದೇಶಕ್ಕಾಗಿ ಏಕಸ್ವರದಲ್ಲಿ ಆಗ್ರಹಿಸಿಲ್ಲ.
ಅದೆಷ್ಟು ಬೀದಿ ನಾಟಕಗಳು, ಪ್ರತಿಷೇಧ ಜಾಥಾ, ಸಹಿ ಸಂಗ್ರಹ ಅಭಿಯಾನಗಳು. ಕಳೆದ ಹತ್ತು ವರ್ಷಗಳಲ್ಲಿ ಒಂದೂವರೆ ಡಜನಿಗೂ ಹೆಚ್ಚು ಸಾಕ್ಷ್ಯ ಚಿತ್ರಗಳು. ಮಾಧ್ಯಮಗಳು ವಹಿಸಿದ ಪಾತ್ರ ನಿಜಕ್ಕೂ ಮೆಚ್ಚುವಂಥದ್ದು. ಮಾತೃಭೂಮಿ ವಾರಪತ್ರಿಕೆ ಹಲವು ವಿಶೇಷ ಸಂಚಿಕೆ ತಂದದ್ದಲ್ಲದೆ ಈ ಸಂಸ್ಥೆ ಸಾರ್ವಜನಿಕ ಆಸಕ್ತಿಯ ಟೀವಿ ಜಾಹೀರಾತನ್ನೂ ಬಿಡುಗಡೆ ಮಾಡಿದೆ. ಇಂಡಿಯಾವಿಶನ್ ನಡೆಸಿದ ಅಭಿಯಾನ ಈ ಚಳವಳಿಗೆ ಕೊಟ್ಟ ಪ್ರತ್ಯಕ್ಷ ಬೆಂಬಲವೂ ಉಲ್ಲೇಖನೀಯ.
ಇದೇ ಕಾರಣ ಮುಂದಿಟ್ಟು 87 ವರ್ಷದ ಕೇರಳ ಮುಖ್ಯಮಂತ್ರಿ ಮೊನ್ನೆ 25ಕ್ಕೆ ಉಪವಾಸ ಕುಳಿತರು. ಸುರೇಶ್ ಗೋಪಿ, ಮುಖೇಶರಂತಹ ಮಲೆಯಾಳದ ಖ್ಯಾತ ನಾಯಕರು ಜತೆಜತೆಗೆ. ಚಿತ್ರೋದ್ಯಮ ಸ್ವಲ್ಪಕಾಲ ಶೂಟಿಂಗ್ ನಿಲ್ಲಿಸಿ ತನ್ನ ಬೆಂಬಲ ಸೂಚಿಸಿತು. ಜನಪ್ರಿಯ ನಟರು 'ಬ್ಯಾನ್ ಎಂಡೋಸಲ್ಫಾನ್' ಕರೆ ಕೊಡುವ ಜಾಹೀರಾತುಗಳನ್ನು ಟೀವಿಗಳಲ್ಲಿ ಪ್ರಕಟಿಸಿತು.
ನನಗೆ ಕತ್ತು ಎಡಕ್ಕೆ ತಿರುಗಿಸಿದರೆ ಕೇರಳ, ಬಲಕ್ಕೆ ಹೊರಳಿಸಿದರೆ ಕರ್ನಾಟಕ.
ಕರ್ನಾಟಕದಲ್ಲಿ ಎರಡು ಗ್ರಾಮಗಳಲ್ಲಲ್ಲ, ಈಚೆಗೆ ತಿಳಿದುಬಂದಂತೆ 96 ಗ್ರಾಮಗಳಲ್ಲಿ ಎಂಡೋಸಲ್ಫಾನ್ ಮಳೆಗರೆದಿದ್ದಾರೆ. ಇಲ್ಲಿ ಈ ವರೆಗೆ ಆರೋಗ್ಯ ಸಮೀಕ್ಷೆ ನಡೆಯದಿದ್ದರೂ, ಸರಕಾರಿ ಇಲಾಖೆಯ ಮೂಲಗಳ ಪ್ರಕಾರವೇ ಇಲ್ಲಿ 6,000ಕ್ಕೂ ಹೆಚ್ಚು ಕಾಯಿಲೆಗ್ರಸ್ತರಿದ್ದಾರಂತೆ. ಇವರಲ್ಲಿ ಹೆಚ್ಚಿನವರ ಕಾಯಿಲೆಗೂ ಇದೇ ಕೀಟನಾಶಕ ಕಾರಣವಾಗಿರುವ ಸಾಧ್ಯತೆ ಹೆಚ್ಚು.
ಇಷ್ಟೊಂದು ಗ್ರಾಮಗಳಲ್ಲಿ ವಿಷಮಳೆಯಾಗಿರುವುದರ ಮಾಹಿತಿ ಹೊರತೆಗೆದ ಹೋರಾಟಗಾರ ದಿನಗೂಲಿಯಲ್ಲಿ ಬದುಕುವ ಪುತ್ತೂರಿನ ಶ್ರೀ ಸಂಜೀವ. ಸಂಜೀವ ಮರಳಿ ಯತ್ನ ಮಾಡಿ ಸಂಪಾದಿಸಿದ ಮಾಹಿತಿ ಪ್ರಕಾರ ಕುಂದಾಪುರ, ಉಡುಪಿ ತಾಲೂಕುಗಳ ಅಂದಾಜು 50 ಗ್ರಾಮಗಳಲ್ಲೂ ಎಂಡೋಸಲ್ಫಾನ್ ವಿಷಮಳೆ ನಡೆದಿದೆ!
ಒಬ್ಬ ಗರೀಬ ಯುವಕ ತನ್ನ ಮನುಷ್ಯಸ್ನೇಹದಿಂದ ಈ ಸ್ಫೋಟಕ ಮಾಹಿತಿ ಹೊರಗೆಳೆದರೂ ಅದು ಕರ್ನಾಟಕದ ಮಾಧ್ಯಮಗಳಿಗೆ ಗ್ರಾಸವಾಗುತ್ತಿಲ್ಲ. ಇಂಧನ ಸಚಿವೆಯನ್ನು ಹೊರತುಪಡಿಸಿದರೆ ಕರ್ನಾಟಕದ ಆರೋಗ್ಯ, ಕೃಷಿ ಅಥವಾ ಪರಿಸರ ಸಚಿವರು ಈ ಬಗ್ಗೆ ದನಿಯೆತ್ತಿದ್ದನ್ನು ಕೇಳಿಲ್ಲ!
ಎಲ್ಲಿಯ ಕೇರಳ, ಎಲ್ಲಿಯ ಕರ್ನಾಟಕ?
ಮೇಲ್ನೋಟದ ಸೂಚನೆ ಪ್ರಕಾರ ಕಾಸರಗೋಡಿಗಿಂತಲೂ ಹೆಚ್ಚಿನ ಎಂಡೋಸಲ್ಫಾನ್ ಸಂತ್ರಸ್ತರು ದಕ್ಷಿಣ ಕನ್ನಡದಲ್ಲಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ಸರಕಾರ, ಮಾಧ್ಯಮಗಳು ಹೋಗಲಿ - ಪ್ರಜ್ನಾವಂತ ಜನ, ಬುದ್ಧಿಜೀವಿಗಳು - ಯಾರೂ ಸೊಲ್ಲೆತ್ತಿದಂತೆ ಕಾಣುತ್ತಿಲ್ಲ. ಕರ್ನಾಟಕಕ್ಕೆ ಏನಾಗಿದೆ? ಈ ಸ್ಪಂದನರಹಿತ ಗುಣ ಎಂದಿಗಾದರೂ ಬದಲಾಗಬಹುದೇ?
ಕೇರಳದ ಮಂದಿ ಕಾಸರಗೋಡಿನ ದುರಂತವನ್ನು 'ರಂಡಾಂ ಭೋಪಾಲ್' (ಎರಡನೆಯ ಭೋಪಾಲ್) ಎಂದೇ ಕರೆಯುತ್ತಾರೆ. ಕನ್ನಾಡ ನನ್ನ ಜನ ಈ ದುರಂತವನ್ನು ಕಂಡೂ ಕಾಣದೆ, ಕೇಳಿದರೂ ಮರೆತೇ ಬಿಟ್ಟ ರೀತಿ ನೋಡಿದರೆ ಬಲಗಡೆಗೆ ಕತ್ತು ಹೊರಳಿಸಬೇಡ ಅನಿಸುತ್ತಿದೆ.
ಇನ್ನಾದರೂ ಎನ್ಜೀವೋಗಳು, ಧಾರ್ಮಿಕ ಸಂಸ್ಥೆಗಳು, ಮನುಷ್ಯಸ್ನೇಹಿಗಳು ಈ ಹಳ್ಳಿಗಳಲ್ಲಿ ತಮ್ಮದೇನೂ ತಪ್ಪಿಲ್ಲದೆಯೂ ಜೀವನಪೂರ್ತಿ ನರಕ ಅನುಭವಿಸುವ ಬಡಪಾಯಿಗಳ ಪರ ದನಿಯೆತ್ತಿ ಅವರಿಗೆ ನ್ಯಾಯ ಒದಗಿಸುವ, ಸಾಂತ್ವನ ಹೇಳುವ ಕೆಲಸ ಆರಂಭಿಸಬೇಕಿದೆ.
(ಚಿತ್ರ: ಕಾಸರಗೋಡಿನ ವಿದ್ಯಾರ್ಥಿ ಅರ್ಜುನ್ )
0 comments:
Post a Comment