Thursday, April 14, 2011

ಮುಳಿಯದಲ್ಲಿ 'ಹಹಹ'


ಬಂಟ್ವಾಳ ತಾಲೂಕಿನ ಅಳಿಕೆ ಸನಿಹದ ಮುಳಿಯದ ವೆಂಕಟಕೃಷ್ಣ ಶರ್ಮ ಅವರ ಮನೆಯಲ್ಲ್ಲೊಂದು ಹಲಸಿನ ಹಣ್ಣಿನ ಹಬ್ಬ (ಹಹಹ). ಸುಮಾರು ಹದಿನೈದು ಕಿಲೋಮೀಟರ್ ವ್ಯಾಪ್ತಿಯ ಆಯ್ದ ಮೂವತ್ತು ಹಲಸಿನ ಬಕ್ಕೆ ತಳಿಗಳು 'ಉತ್ತಮ ತಳಿ' ಆಯ್ಕೆಗಾಗಿ ಮಗುಮ್ಮನೆ ಕುಳಿತಿದ್ದುವು.

ಮಧ್ಯಾಹ್ನದ ಹೊತ್ತಿಗೆ ಪ್ರತಿಯೊಂದು ಹಲಸಿನ ಹಣ್ಣಿನ ಅರ್ಧಭಾಗವನ್ನು ತುಂಡರಿಸಿ, ಸೊಳೆ ತೆಗೆದು ಪ್ರದರ್ಶನಕ್ಕಿಡಲಾಗಿತ್ತು. ಆಸಕ್ತ ಸ್ನೇಹಿತರು ಸೊಳೆ ತೆಗೆವ ಕೆಲಸ ನಿರ್ವಹಿಸಿದ್ದರು. ಕೆಲವು ಕಿತ್ತಳೆ ವರ್ಣ, ಕೆಲವು ಹಳದಿ, ಕೆಲವು ಬಿಳಿ.. ಹೀಗೆ ವಿವಿಧ ವೈವಿಧ್ಯ ಬಣ್ಣಗಳು, ಜತೆಗೆ ಪರಿಮಳ.. ಸೇರಿದ್ದ ಹಲಸು ಪ್ರಿಯರ ಬಾಯಿ ನೀರೂರಿತ್ತು!

'ಮೌಲ್ಯಮಾಪನ ಶುರುವಾಗದೆ ಯಾರೂ ಹಣ್ಣು ತಿನ್ನಬಾರದು' ಎಂದು ಶರ್ಮರಿಂದ ಕಟ್ಟಾಜ್ಞೆ. ಹಣ್ಣಿನ ಪರಮಳವನ್ನು ಆಘ್ರಾಣಿಸಿ ತಿನ್ನಲೇ ಬೇಕು ಎಂದಿರುವ ಹಲಸುಪ್ರಿಯರಿಗೆ ಪ್ರತ್ಯೇಕವಾಗಿ ಸೊಳೆ ತೆಗೆದು ಸಿದ್ಧಮಾಡಿಟ್ಟಿದ್ದರು.

ಆರಂಭದಲ್ಲಿ ವೆಂಕಟಕೃಷ್ಣ ಅವರಿಂದ 'ಹಹಹ'ದ ಕುರಿತು ಪ್ರಸ್ತಾವನೆ, ಸ್ವಾಗತದ ಮೂಲಕ ಚಾಲನೆ. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆ, ಕಸಿತಜ್ಞ ಕೃಷ್ಣ ಕೆದಿಲಾಯ ಮತ್ತು ಶೈಲಜಾ ಪಡ್ರೆಯವರಿಂದ ಮೌಲ್ಯಮಾಪನ.
ಈಗಾಗಲೇ ಹಣ್ಣಾಗಿ ಮುಗಿಯುವ ಹಂತದಲ್ಲಿರುವ, ಈಗ ಹಣ್ಣಾಗುತ್ತಲಿರುವ ಮತ್ತು ಮೇ ಕೊನೆಗೆ ಹಣ್ಣಾಗಲಿರುವ - ಹೀಗೆ ಮೂರು ವಿಭಾಗಗಳ ಮೌಲ್ಯಮಾಪನ. ಮೂವತ್ತು ತಳಿಗಳಲ್ಲಿ ಆರು ತಳಿಯ ಆಯ್ಕೆ.

'ಆಯ್ಕೆಯಾದ ತಳಿಗಳನ್ನು ಅಭಿವೃದ್ಧಿ ಪಡಿಸಿ ಉತ್ತಮ ಹಣ್ಣನ್ನು ಪಡೆಯುವ ಯೋಚನೆಯಿಂದ ಹಹಹವನ್ನು ಆಯೋಜಿಸಿದ್ದೇನೆ' ಎಂಬ ಆಶಯ ಮುಂದಿಟ್ಟರು ಶರ್ಮರು. ಮೌಲ್ಯಮಾಪನ ಸಾಗುತ್ತಿದ್ದಂತೆ, ಹಲಸು ಪ್ರಿಯರೂ ರುಚಿ ನೋಡಲು ಆರಂಭಿಸಿದರು. ಒಂದು ಗಂಟೆಯಲ್ಲಿ ಬಹುತೇಕ ಎಲ್ಲಾ ಹಣ್ಣುಗಳೂ ಉದರ ಸೇರಿತು.

ಶರ್ಮರ ಪುತ್ರ ರಾಧಾಕೃಷ್ಣ ವಿದ್ಯಾರ್ಥಿ. ಕೃಷಿಯಲ್ಲಿ ಆಸಕ್ತ. ಸೊಳೆಯನ್ನು ಕರೆಕರೆದು ತಿನ್ನಿಸುತ್ತಿದ್ದ! ತನ್ನೂರಿನ ಸುತ್ತಮುತ್ತಲಿನ ಬಹುತೇಕ ಎಲ್ಲಾ ಹಲಸು ಮರಗಳನ್ನು ಸುತ್ತಾಡಿ ಅನುಭವವಿದ್ದ ಶರ್ಮರು, ಹಹಹಕ್ಕಾಗಿಯೇ ಹದಿನೈದು ದಿನಗಳಿಂದ ನಿದ್ದೆಯೂ ಮಾಡಿಲ್ಲ! 'ಹಹಹದಂದು ಎಲ್ಲಾ ಹಣ್ಣಾಗಬೇಕಲ್ವಾ. ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಹಣ್ಣಾಗಿದೆಯೋ ಅಂತ ತಟ್ಟಿ ನೋಡುತ್ತಿದ್ದರು' ಎಂದು ಗಂಡನನ್ನು ತಮಾಶೆ ಮಡುತ್ತಾರೆ ವಾಣಿ.

ಕಳೆದ ಹತ್ತು ದಿವಸದಿಂದ ಮಾತೆತ್ತಿದರೆ ಸಾಕು, 'ಇಂದು ಎರಡು ವೆರೈಟಿ ಹಲಸು ಪತ್ತೆಯಾಯಿತು' ಎಂಬ ಮಾಹಿತಿ ನೀಡುತ್ತಿದ್ದರು ಶರ್ಮಾ. ವಾಣಿಯವರು ಅಪರಾಹ್ನ ಎರಡು ಗಂಟೆಯ ಹೊತ್ತಿಗೆ ಅತಿಥಿಗಳು ಆಗಮಿಸಿದಾಗ ಹಲಸಿನ ಹಣ್ಣಿನ 'ಚಂಗುಳಿ' (ಸೊಳೆಯನ್ನು ಸಣ್ಣಕೆ ಹೆಚ್ಚಿದ ಪಾಯಸದಂತಹ ಸಿಹಿಖಾದ್ಯ) ಸಿದ್ಧ ಮಾಡಿಟ್ಟಿದ್ದರು.

'ಮನೆಯಂಗಳದಲ್ಲಿ ಜರುಗಿದ ಚಿಕ್ಕ ಪ್ರಯತ್ನ ದೊಡ್ಡದಾಗಲಿ. ಪ್ರತೀ ಗ್ರಾಮದಲ್ಲಿ ಉತ್ತಮ ತಳಿಯನ್ನು ಗುರುತಿಸಿ, ಅಭಿವೃದ್ಧಿಪಡಿಸುವ ಕೆಲಸ ನಡೆಯಬೇಕು. ಆಗಲೇ ನಿರ್ಲಕ್ಷಿತ ಹಣ್ಣಿಗೆ ಮಾನ ಬಂದೀತು' ಎಂದು ಶರ್ಮಾರನ್ನು ಅಭಿನಂದಿಸಿದರು ಶ್ರೀ ಪಡ್ರೆ.

( ವೆಂಕಟಕೃಷ್ಣ ಶರ್ಮ ೯೪೮೦೨೦೦೮೩೨)

1 comments:

NilGiri said...

ಹಲಸಿನ ಹಣ್ಣು ತಿಂದು ಯಾವ ಕಾಲವಾಯ್ತೋ?:( ಚಿತ್ರ ನೋಡಿ ಬಾಯಲ್ಲಿ ನೀರು!
ಶರ್ಮರಿಗೆ ನಮ್ಮ ಕಡೆಯಿಂದಲೂ ಅಭಿನಂದನೆಗಳು.

Post a Comment